Previous ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಮಾದಾರ ಚೆನ್ನಯ್ಯ Next

ಗೋರಕ್ಷ - ಗೋರಖನಾಥ ವಚನಗಳು

391
ಅರಗಿನ ತೇಜಿಯ ಮೇಲೆ
ಉರಿಯ ಹಿರಿಯರಸು ಮೂರ್ತಿಗೊಂಡಿರಲು
ಮಂಜಿನ ಪರಿವಾರ ಸಂದಣಿಸಿ ಸಂತೈಸಿ
ಅವರಂಗಕ್ಕೆ ಬಿಸಿಲಿನ ಜೋಡ ತೊಡಿಸಿ
ತಾ ತುರಂಗದ ಮೇಲೆ ಪಶುತಮವೆಂಬ ಖಂಡೆಯವ ಪಿಡಿದು
ಚಂಜಿಕಾಕಿರಣದ ಮೇಲೆ ಅಂಗೈಸಿ ಏರಲಾಗಿ ಫೌಜು ಬೆರಸಿತ್ತು.
ಉರಿಯರಸು ಎತ್ತಿದ ಖಂಡೆಯ ವರುಣನ ಕಿರಣದೊಳಗೆಬಯಲಾಯಿತ್ತು.
ಮಂಜಿನ ಪರಿವಾರ ಆ ರಂಜನೆಯೊಳಡಗಿತ್ತು.
ಉರಿಯರಸು ವಾಯುವಿನ ಸಿರಿಯೊಳಗಾದ.
ಅರಗಿನ ಅಶ್ವ ಅರಸಿನ ತೊಡೆಯೊಳಗೆ ಹರಿಯಿತ್ತು.
ಇಂತೀ ದೊರೆಗೆ ಅರಿ ಇದಿರಿಲ್ಲಾ ಎಂದು
ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥಲಿಂಗಕ್ಕೆ
ಇದಿರಿಲ್ಲಾ ಎನುತಿರ್ದೆ.

392
ಅರಿವನಕ್ಕು ಭೃತ್ಯಾಚಾರಿ
ಮೀರಿ ಮಿಕ್ಕು ಶರಣಪಥವ ಸೋಂಕು ತಾನಾಗಿದ್ದ ಸುಖವು
ಕೆಡುವನ್ನಕ್ಕ ಪ್ರಾಣಲಿಂಗಿ;
ಕೊಡಲಿಲ್ಲ ಕೊಡಲಿಲ್ಲ ಲಿಂಗಪ್ರಾಣಿಯಾದವಂಗೆ;
ಸಿದ್ಧಸೋಮನಾಥಲಿಂಗದಲ್ಲಿ ಅರುಹಿನವಗ್ರಹ ಕಾಣಾ!

393
ಅವಧಿಜ್ಞಾನ ಅಂತರಿಕ್ಷಜ್ಞಾನ ಪವನಜ್ಞಾನ
ಪರಸ್ವರೂಪಜ್ಞಾನ ಪರಬ್ರಹ್ಮಜ್ಞಾನ ಪರತತ್ವಜ್ಞಾನ
ಸ್ವಯಜ್ಞಾನ ಸ್ವಾನುಭಾವಜ್ಞಾನ ಸರ್ವಪರಿಪೂರ್ಣಜ್ಞಾನ
ದಿವ್ಯಜ್ಯಾನವೆಂದು ಸಂಕಲ್ಪಿಸುವಾಗ
ಆ ಆತ್ಮಕ್ಕೆ ಅದು ನಿಜವೊ, ಅದರ ಪರಿಭ್ರಮಣವೊ?
ಸಕಲ ಶಸ್ತ್ರಂಗಳಿಂದ ಕಡಿವಡಿದಂಗ ಆತ್ಮಬಿಡುವಲ್ಲಿ
ಹಲವು ಶಸ್ತ್ರದ ಭೇದವೊ?
ಅಂಗದ ಆಯಧ ಗಾಯದ ಭೇದವೊ?
ಎಂಬುದ ತಿಳಿದು ಪದಪದಾರ್ಥಂಗಳ ಲಕ್ಷಿಸಿ ನಿರೀಕ್ಷಿಸಿಆರೋಪಿಸಬೇಕು.
ಒಂದು ವಿಶ್ವವಾದಲ್ಲಿ, ವಿಶ್ವ ಒಂದಾದಲ್ಲಿ
ಉಭಯದಲ್ಲಿ ನಿಂದು ತಿಳಿದಲ್ಲಿ
ಗೋರಕ್ಷಪಾಲಕ ಮಹಾಪ್ರಭು ಸಿದ್ಧ ಸೋಮನಾಥಲಿಂಗವುಒಂದೆನಬೇಕು.

394
ಆವ ಬಗೆ ಭಾವ ಬಲ್ಲತನ ಅಳವಟ್ಟಲ್ಲಿ ರಾಗವಿರಾಗವೆಂಬುದಿಲ್ಲ.
ಸುಖ ಸುಮ್ಮಾನ ರುಜೆ ರೋಗ ತಾಗು ನಿರೋಧ ಬಂದಲ್ಲಿ
ಶೋಕ ಮೋಹಾದಿಗಳು ವರ್ತಿಸಿದಲ್ಲಿ
ಜ್ಯೋತಿಯ ಬುಡದಂತೆ;
ರಜ್ಜು ತೈಲ ಅಗ್ನಿ ಉಳ್ಳನ್ನಕ್ಕ
ಉರಿದು ಆ ಬುಡ ಹೊದ್ದದಂತೆ.
ಈ ಸಂಸಾರದ ಬುಡದಲ್ಲಿ
ನಾನಾ ವಿಕಾರತ್ರಯದ ಗುಣದಲ್ಲಿ
ನೀರಿನೊಳಗಿರ್ದು ಈಸುವನಂತೆ
ಬಂಧ ಮೋಕ್ಷ ಕರ್ಮಂಗಳಲ್ಲಿ ದ್ವಂದ್ವಿತನಲ್ಲದೆ,
ನಿಂದ ನಿಜೈಕ್ಯಂಗೆ ಹಿಂದು ಮುಂದೆಂಬ ಬಂಧವಿಲ್ಲ.
ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ-ಲಿಂಗವಾದವಂಗೆ.

395
ಕುಂಡಲಿಯೆಂಬ ಆಧಾರದಲ್ಲಿ
ಜಲ ತೇಜ ವಾಯುವೆಂಬ ತ್ರಿವಿಧ ಕೂಡಿ
ಕಮಂಡಲ ಹುಟ್ಟಿತ್ತು.
ಅದಕ್ಕೆ ಬಾಯಿ ಮೂರು ಹೆಡೆಯಾರು.
ಜೂಳಿಯೊಂದರಲ್ಲಿ ಉದಕವ ಕೊಳುತಿರಲಾಗಿ
ಆ ಹಸುವಿನ ತೃಷೆಯಡಗಿ ಬಯಕೆ ಸಲೆ ಬತ್ತಿದಲ್ಲಿ
ಮಹಾಗಣನಾಥನ ಐವತ್ತೆರಡು ಸರ ಹರಿದವು.
ಮೂವತ್ತಾರು ಮಣಿ ಕೆಟ್ಟವು;
ಇಪ್ಪತ್ತೈದು ಮಣಿ ಪುಂಜವಾಯಿತ್ತು.
ಆರು ನಾಯಕರತ್ನ ಎಲ್ಲಿ ಅಡಗಿತ್ತೆಂದರಿಯೆ.
ಮೂರು ರತ್ನವ ಕಂಡೆ: ಒಂದು ಉಲಿವುದು, ಒಂದು ಉರಿವುದು,
ಒಂದು ಬೆಳಗು ನಂದಿಹುದು.
ಇಂತೀ ತ್ರಿವಿಧಂಗವ ಕಂಡು
ಈ ಅಂಗದ ಮಣಿಯ ಒಂದೊಂದ ಪೋಣಿಸಲಾರದೆ
ಈ ದಿನಮಣಿಯ ವಿರಳವ ತೋರಿಸಾ
ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥಲಿಂಗವೆ.

396
ನಾ ನಿನ್ನ ಕೇಳಿಹೆನೆಂದಡೆ
ನಾನಂಗಿ ನೀ ನಿರಂಗಿ.
ನಾ ನಿನಗೆ ಹೇಳಿಹೆನೆಂದಡೆ
ನಾ ಸಂಗಿ ನೀ ನಿಸ್ಸಂಗಿ.
ನಿನ್ನಂಗ ಎನ್ನಂಗದಲ್ಲಿ ಪ್ರೇರಿಸಿ
ನಿನ್ನಂಗ ಎನ್ನಂಗದಲ್ಲಿ ಪ್ರೇರಿಸಿ
ನಿನ್ನರಿವು ಎನ್ನ ಆತ್ಮದಲ್ಲಿ ನಿಂದು ಅರಿವಹನ್ನಕ್ಕ
ನನಗೂ ನಿನಗೂ ತತ್ತುಗೊತ್ತು.
ಗೋರಕ್ಷಪಾಲಕ ಮಹಾಪ್ರಭು
ಸಿದ್ಧಸೋಮನಾಥ ಲಿಂಗವು ಸರಿ ಹುದುಗು.

397
ಬ್ರಹ್ಮಾಂಡದಲ್ಲಿ ಒಂದು ಪಿಂಡ ಹುಟ್ಟಿ
ಕರ್ಮಾಂಡದಿಂದ ಬೆಳೆವುತ್ತಿದೆ ನೋಡಾ!
ವಸುದಳವೆಂಬ ತೆರಲಿವಿಡಿದು ನಡೆವುತ್ತಿರಲಾಗಿ,
ಮಹೀತಳನ ಜಡೆ ಸೀದು ಮರೀಚಿಕನ ಶಿರ ಬೆಂದು
ರುದ್ರನ ತ್ರಿವಿಧ ಕಣ್ಣು ಮುಚ್ಚಿತ್ತು.
ಇಂತಿವು ನಿರ್ಧರವಾದಲ್ಲಿ ಅರಿಗೊಡಲಿಲ್ಲ.
ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ ಲಿಂಗಕ್ಕೆ
ಇದಿರಿಲ್ಲಾ ಎನುತಿರ್ದೆ.

398
ಬಿಸಿಲ ಕಹರು ಮಂಜಿನ ಮುಂಡಿಗೆಯ ನೆಟ್ಟು
ಮನೆ ಒಲೆಯದಂತೆ ಅನಲನ ತೊಲೆಯ ಹಾಕಿ
ಮಳೆಯ ಗಳು ಬೀಸಿ, ಕೆಂಡದ ಹಂಜರಗಟ್ಟು ಕಟ್ಟಿ,
ಹಿಂಡುಗಟ್ಟಿಗೆ ಗಳುವಿನ ಸಂದಿಯಲ್ಲಿ ಅಡಗಿತ್ತು.
ಅನಿಲನ ಹುಲ್ಲು ಹೊದಿಸಿ ಮನೆ ಹೊಲಬಾಯಿತ್ತು.
ನೆಲಗಟ್ಟು ಶುದ್ಧವಿಲ್ಲಾಯೆಂದು
ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ ಲಿಂಗವು
ಆ ಮನೆಗೆ ಒಕ್ಕಲು ಬಾರ.

399
ರಸವಾದಂಗಳ ಕಲಿತಲ್ಲಿ ಲೋಹಸಿದ್ಧಿಯಲ್ಲದೆ
ರಸಸಿದ್ಧಿಯಾದುದಿಲ್ಲ.
ನಾನಾ ಕಲ್ಪಯೋಗ ಅದೃಶ್ಯಕರಣಂಗಳ ಕಲಿತಲ್ಲಿ
ಕಾಯಸಿದ್ಧಿಯಲ್ಲದೆ ಆತ್ಮಸಿದ್ಧಿಯಾದುದುಂಟೆ?
ನಾನಾ ವಾಗ್ವಾದಂಗಳಿಂದ ಹೋರಿ
ಮಾತಿನ ಮಾಲೆಯಾಯಿತಲ್ಲದೆ
ಆತ್ಮನಿಹಿತವಾದುದಿಲ್ಲ.
ನೀ ನಾನೆಂದಲ್ಲಿ ನೀನು ನಾನಾದೆಯಲ್ಲದೆ
ನಾನು ನೀನಾದುದಿಲ್ಲ.
ಗೋರಕ್ಷಪಾಲಕ ಮಹಾಪ್ರಭು
ಸಿದ್ಧಸೋಮನಾಥ ಲಿಂಗವಾದೆಯಲ್ಲದೆ
ಲೀಯವಾಗಿ ಆ ಲಿಂಗನೇ ಆದುದಿಲ್ಲ.

400
ವಿಷಕ್ಕೆ ಅಂಜುವರಲ್ಲದೆ ಸರ್ಪಂಗೆ ಅಂಜುವರುಂಟೆ?
ಕೊಲುವ ವ್ಯಾಘ್ರಂಗೆ ಅಂಜುವರಲ್ಲದೆ
ಸುಲಿದ ಬಣ್ಣಕ್ಕೆ ಅಂಜುವರುಂಟೆ?
ಅರಿವು ಸಂಪನ್ನರಲ್ಲಿ ಇದಿರೆಡೆಯಡಗಬೇಕಲ್ಲದೆ
ಬರುಕಾಯದ ದರುಶನ ಬಿರುಬರಲ್ಲಿ ಉಂಟೆ?
ನೆರೆಯರಿವಿನ ಹೊಲಬು ಕಾಯಕಾಂಡ ಕರ್ಮಕಾಂಡಿಗಳಲ್ಲಿ
ಜ್ಞಾನಹೀನ ಪಾಷಂಡಿಗಳಲ್ಲಿ ಆವ ಭಾವದ ಮಾರ್ಗವನು
ನಿಧಾನಿಸಿ ಉಪೇಕ್ಷಿಸಲಿಲ್ಲ.
ಗೋರಕ್ಷಪಾಲಕ ಮಹಾಪ್ರಭು
ಸಿದ್ಧಸೋಮನಾಥ ಲಿಂಗವನರಿದವರಲ್ಲಿಯಲ್ಲದೆ.

401
ಹಿಟ್ಟಿನ ಲೆಪ್ಪದಲ್ಲಿ ಚಿತ್ರದ ಕರಚರಣಾದಿಗಳ ಮಾಡಿ
ತುಪ್ಪದ ಮಧುರದ ಸಾರವ ಕೂಡಿ
ಸುಟ್ಟು ಮೆದ್ದಲ್ಲಿ ಕಿಚ್ಚಿನಲ್ಲಿ
ಮತ್ತೆ ಕೈಕಾಲಿನ ಚಿತ್ರದ ಬಗೆಯುಂಟೆ?
ಇದು ನಿಶ್ಚಯ ವಸ್ತು ಸ್ವರೂಪು.
ಮತ್ರ್ಯದ ದೃಕ್ಕು ದೃಶ್ಯಕ್ಕೆ ನಿಶ್ಚಯವಾಗಿಹನು.
ಏಕಲಿಂಗ ನಿಷ್ಠೆವಂತರಲ್ಲಿ ಕಟ್ಟಳೆಯಾಗಿಹನು.
ಆತ್ಮಲಕ್ಷ ನಿರ್ಲಕ್ಷ
ಗೋರಕ್ಷಪಾಲಕ ಮಹಾಪ್ರಭು
ಸಿದ್ಧ ಸೋಮನಾಥ ಲಿಂಗವು.

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

ಪರಿವಿಡಿ (index)
*
Previous ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಮಾದಾರ ಚೆನ್ನಯ್ಯ Next