Previous ದೇವನಿಗೂ ಸೃಷ್ಟಿಗೂ ಇರುವ ಸಂಬಂಧ ಮೋಕ್ಷವೆಂದರೇನು Next

ಬಂಧ ಮತ್ತು ಮೋಕ್ಷ

*

ಬಂಧನ (ಭವದು:ಖ)

ಪ್ರತಿಯೊಬ್ಬ ಮನುಷ್ಯನೂ ಒಂದಿಲ್ಲೊಂದು ರೀತಿಯ ಕಷ್ಟ(ದುಃಖ)ವನ್ನು ಅನುಭವಿಸುತ್ತಲೇ ಇರುತ್ತಾನೆ. ಈ ದುಃಖವನ್ನು ನಿವಾರಿಸಲು ಅಥವಾ ಈಗಿರುವ ಸುಖವನ್ನು ಹೆಚ್ಚಿಸಿಕೊಳ್ಳಲು ಅಥವಾ ಮತ್ತೆ ದೊರಕಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನಗಳನ್ನು (ಕರ್ಮಗಳನ್ನು ಮಾಡುತ್ತಾನೆ. ಮತ್ತೆ ಹುಟ್ಟಿದಾಗ ಈ ಕರ್ಮಗಳ ಫಲಗಳಾದ ದುಃಖಗಳು ಉಂಟಾದಾಗ ಅವುಗಳನ್ನು ನಿವಾರಿಸಲು ಕರ್ಮಗಳನ್ನು ಮಾಡಿ, ಮತ್ತೆ ಪುನರ್ಜನ್ಮ ಪಡೆಯುತ್ತಾನೆ. ಹೀಗೆ ಅನಾದಿ ಕಾಲದಿಂದಲೂ ಅವನು ಪುನರ್ಜನ್ಮ ಪಡೆಯುತ್ತಲೇ ಇದ್ದಾನೆ, ದುಃಖಗಳನ್ನು ಅನುಭವಿಸುತ್ತಲೇ ಇದ್ದಾನೆ. ಇಂಥ ಪುನರ್ಜನ್ಮ-ಪುನರ್ಮರಣಗಳ ಮಾಲೆಯನ್ನು ಶರಣರು ಬಂಧನ, ಸಂಸಾರಬಂಧನ, ಭವಚಕ್ರ, ಭವಬಂಧನ, ಸಂಸಾರ ಮುಂತಾಗಿ ಕರೆಯುತ್ತಾರೆ.

ಇತರ ಭಾರತೀಯ ದಾರ್ಶನಿಕರಂತೆ ಶರಣರೂ ಭವಬಂಧನಕ್ಕೆ ಅಜ್ಞಾನ ಅಥವಾ ಮರವೆಯೇ ಕಾರಣ ಎನ್ನುತ್ತಾರೆ. ಅಜ್ಞಾನ ಅಥವಾ ಮರವೆ (ಮರೆವು) ಎಂದರೆ, ನಾನು ಶಿವನ ಅಂಗವಲ್ಲ, ನಾನೊಬ್ಬ ಪ್ರತ್ಯೇಕ ಅಥವಾ ಸ್ವತಂತ್ರ ವ್ಯಕ್ತಿ, ನಾನೆಂದರೆ ಆತ್ಮವಲ್ಲ, ದೇಹೇಂದ್ರಿಯಾದಿಗಳು, ವಿಷಯ ಸುಖ ನನ್ನ ಪರಮಧೇಯವೇ ಹೊರತು ಲಿಂಗಾಂಗ ಸಾಮರಸ್ಯ (ಮೋಕ್ಷ)ವಲ್ಲ ಎಂಬ ತಪ್ಪು ತಿಳುವಳಿಕೆ. ಈ ತಪ್ಪು ಗ್ರಹಿಕೆಗೆ ಮಾಯೆ ಎಂಬ ಹೆಸರೂ ಉಂಟು. ಈ ತಪ್ಪು ಗ್ರಹಿಕೆ ವಿಷಯ ಸುಖದ ಹುಡುಕಾಟಕ್ಕೆ ನಾಂದಿ, ಮಾಯೆಗೆ ಒಳಗಾಗದವರು ಯಾರೂ ಇಲ್ಲ.

ಶಿವನಿಂದಲುದಯಿಸಿತ್ತು ವಿಶ್ವ
ವಿಶ್ವದಿಂದಲುದಯಿಸಿತ್ತು ಸಂಸಾರ,
ಸಂಸಾರದಿಂದಲುದಯಿಸಿತ್ತಜ್ಞಾನ
ಅಜ್ಞಾನದಿಂದಲುದಯಿಸಿತ್ತು ಮರವೆ,
ಮರವೆಯಿಂದಲುದಯಿಸಿತ್ತು ಆಸೆ
ಆಸೆಯಿಂದಲುದಯಿಸಿತ್ತು ರೋಷ,
ರೋಷದಿಂದಲುದಯಿಸಿತ್ತು ದುಃಖ,
ದುಃಖದಿಂದ ಮೂರೂ ಲೋಕವೆಲ್ಲವು ಮೂರ್ಛಯಾಗಿ
ಭವಬಂಧನಕ್ಕೊಳಗಾದರು,
ಅಲ್ಲಿ ನಮ್ಮ ಸದಾಶಿವಮೂರ್ತಿಲಿಂಗವನರಿಯದ ಕಾರಣ. (೬:೬೫೩)

ಹೀಗೆ ಎಲ್ಲರೂ ಮಾಯೆಗೊಳಗಾಗಿರುವುದು ಸರ್ವವಿದಿತ. ಅದರೆ ಈ ಮಾಯೆ ಯಾವಾವ ರೀತಿಯಲ್ಲಿ ವ್ಯಕ್ತವಾಗುತ್ತದೆ? ನಾವು ಇಂದ್ರಿಯ ವಿಷಯಗಳನ್ನು ಪಡೆದರೆ ಸುಖವಾಗಿರುತ್ತೇವೆ ಎಂಬ ಭ್ರಮೆಯಿಂದ ಇಂದ್ರಿಯ ವಿಷಯಗಳನ್ನು ಪಡೆಯಲು ಪ್ರಯತ್ನಿಸುತ್ತೇವೆ. ಅದರೆ ಅವುಗಳಿಂದಾಗುವ ಕೇಡಿನ ಮುನ್ನರಿವು ನಮಗಿಲ್ಲ.

ಕಾಂಚನವೆಂಬ ನಾಯ ನಚ್ಚಿ ನಿಮ್ಮ ನಾನು ಮರೆದೆನಯ್ಯಾ,
ಕಾಂಚನಕ್ಕೆ ವೇಳೆಯಲ್ಲದೆ ಲಿಂಗಕ್ಕೆ ವೇಳೆಯಲ್ಲ.
ಹಡಿಕೆಗೆ ಮಚ್ಚಿದ ಸೊಣಗ
ಅಮೃತದ ರುಚಿಯ ಬಲ್ಲುದೆ ಕೂಡಲಸಂಗಮದೇವಾ? (೧: ೩೧೪)

ಆವಾಗಳೂ ಎನ್ನ ಮನ ಉದರಕ್ಕೆ ಹರಿವುದು.
ಕಾಣಲಾರೆನಯ್ಯಾ ನಿಮ್ಮುವನು, ಭೇದಿಸಲರಿಯೆ.
ಮಾಯದ ಸಂಸಾರದಲ್ಲಿ ಸಿಲುಕಿದೆನು.
ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಹೊದ್ದುವಂತೆ ಮಾಡಾ, ನಿಮ್ಮ ಧರ್ಮ. (೫: ೬೭)

ನಮ್ಮ ಆಸೆಗಳು ಕೈಗೂಡದಿದ್ದಾಗ ನಮಗೆ ಸಿಟ್ಟು ಬರುತ್ತದೆ; ಬೇರೆಯವರು ನಮಗಿಂತ ಹೆಚ್ಚು ಸುಖವಾಗಿದ್ದರೆ ಅವರ ಮೇಲೆ ನಮಗೆ ಮಾತ್ಸರ್ಯ ಉಂಟಾಗುತ್ತದೆ; ಬೇರೆಯವರಲ್ಲಿಲ್ಲದ ಸೌಕರ್ಯಗಳು ನಮ್ಮಲ್ಲಿದ್ದರೆ ನಮಗೆ ಮದ ಬರುತ್ತದೆ. ಇವೆಲ್ಲವೂ ನಮ್ಮನ್ನು ಮತ್ತಷ್ಟು ಬಂಧನಕ್ಕೊಳಪಡಿಸುತ್ತವೆ.

ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ?
ತನಗಾದ ಆಗೇನು? ಅವರಿಗಾದ ಚೇಗೆಯೇನು?
ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ. (೧: ೨೪೮)

ಈ ಕಾಮಕ್ರೋಧ ಮುಂತಾದ ಅರಿಷಡ್ವರ್ಗಗಳೇಕಿವೆ? ಅವುಗಳಿಂದಾಗಿ ನಾವೇಕೆ ಬಂಧನಕ್ಕೊಳಗಾಗಿದ್ದೇವೆ? ಆ ಬಂಧನದಿಂದ ನಾವೇಕೆ ದುಃಖಗಳಿಗೊಳಗಾಗಿದ್ದೇವೆ? ಎಂದು ವಿಚಾರಿಸಿ ನೋಡಿದರೆ, ನಮ್ಮ ಮನಸ್ಸಿನ ದೌರ್ಬಲ್ಯ ಅಥವಾ ಅಸ್ಥಿರತೆಯೇ ಇದಕ್ಕೆಲ್ಲ ಕಾರಣ ಎಂಬುದು ಗೊತ್ತಾಗುತ್ತದೆ.

ಎನ್ನ ಚಿತ್ತವು ಅತ್ತಿಯ ಹಣ್ಣು, ನೋಡಯ್ಯಾ,
ವಿಚಾರಿಸಿದಡೆ ಏನೂ ಹುರುಳಿಲ್ಲಯ್ಯಾ
ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಪುಮಾಡಿ
ನೀವಿರಿಸಿದಿರಿ, ಕೂಡಲಸಂಗಮದೇವಾ. (೧:೨೯)

ನಾನೆಲ್ಲಿಂದ ಬಂದೆ?
ಎನಗೆ ಈ ದೇಹ ಬಂದ ಪರಿ ಯಾವುದು?
ಇನ್ನು ಮುಂದೆ ಎಯ್ದುವ ಗತಿಯಾವುದು?
ಎಂಬ ನಿತ್ಯಾನಿತ್ಯವಿಚಾರ ಹುಟ್ಟದವರಿಗೆ ಎಂದೆಂದಿಗೂ
ಬಳಲಿಕೆ ಬಿಡದು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ,
ನೀವು ಬರಿಸಿದ ಭವಾಂತರದಲ್ಲಿ ಬರುತಿಹರಾಗಿ,
ನಾನು ಕಂಡು ಮರುಗುತ್ತಿದ್ದೆನು. (೧೧: ೮೯೯)

[1] ಈ ತರಹದ ಸಂಖ್ಯೆಯ ವಿವರ: ಸವಸ-1/241 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-241 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])

ಪರಿವಿಡಿ (index)
*
Previous ದೇವನಿಗೂ ಸೃಷ್ಟಿಗೂ ಇರುವ ಸಂಬಂಧ ಮೋಕ್ಷವೆಂದರೇನು Next