ಜಾತಿತಾರತಮ್ಯ ಮಾಡಲಾಗದು | ವಚನ ಮತ್ತು ವಚನಕಾರರು |
ಆರ್ಥಿಕ ಚಿಂತನೆ |
ಕಾಯಕವೆಂದರೆ ವ್ಯಕ್ತಿಯು ತಾನು ಜೀವಿಸಲು, ತನ್ನ ಕುಟುಂಬದವರನ್ನು ಸಾಕಲು, ಸಂಪತ್ತನ್ನು ಗಳಿಸಲು, ಮುಂದಿನ ಪೀಳಿಗೆಗೆ ಅದನ್ನು ಕಾಯ್ದಿಡಲು, ಮಾಡುವ ಉದ್ಯೋಗ ಎಂಬುದು ಸಾಮಾನ್ಯರ ತಿಳುವಳಿಕೆ. ಆದರೆ, ಶರಣರ ಕಾಯಕ ಪರಿಕಲ್ಪನೆ ಇದಕ್ಕಿಂತ ಭಿನ್ನವಾಗಿತ್ತು. ಕಾಯಕ ಉದ್ಯೋಗವಾದರೂ, ಅದನ್ನು ಮಾಡುವುದು ನನ್ನ ಮತ್ತು ನನ್ನ ಕುಟುಂಬದ ಜೀವಿತಕ್ಕಾಗಿ ಮತ್ತು ದಾಸೋಹಕ್ಕಾಗಿ, ದಾಸೋಹವೆಂದರೆ ನಾವು ದುಡಿದುದನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು. 'ದಾಸೋಹ' ಎಂಬ ಪದವು 'ದಾಸೋಹಂ' ಎಂಬ ಸಂಸ್ಕೃತ ಪದದ ತದ್ಭವವಾಗಿದ್ದು, ಅದರ ಅರ್ಥ 'ನಾನು' (ಅಹಂ) 'ದಾಸ' (ದಾಸ), ಎಂದು, ಕಾಯಕ ಮಾಡುವವನು ಲಿಂಗದ, ಜಂಗಮದ (ಸಮಾಜದ) ದಾಸ. ಅಂದರೆ, ದಾಸನು ದುಡಿಯುವುದು ಸ್ವಾಮಿಗಾಗಿ. ಇಲ್ಲಿ ಲಿಂಗ ಅಥವಾ ಜಂಗಮವೇ ಸ್ವಾಮಿ. ಅಂದರೆ, ಕಾಯಕವು ದಾಸೋಹಕ್ಕಾಗಿ.
ಕಾಯಕವನ್ನು ಹೇಗೆ ಮಾಡಿದರೆ ಸಾಲದು. ಅದನ್ನು ನೈತಿಕವಾಗಿ (ಬೇರೆಯವರಿಗೆ ಹಿಂಸೆಯಾಗದಂತೆ, ಅತಿ ಆಸೆಯಿಲ್ಲದೆ) ಮತ್ತು ಧಾರ್ಮಿಕವಾಗಿ (ನಾನು ಮಾಡುತ್ತಿರುವುದು ಲಿಂಗಕ್ಕಾಗಿ ಎಂಬ ಭಾವನೆಯಿಂದ) ಮಾಡಬೇಕು. ಹೀಗೆ, ಕಾಯಕವಿಲ್ಲದೆ ದಾಸೋಹವಿಲ್ಲ, ದಾಸೋಹವಿಲ್ಲದೆ ಕಾಯಕವಿಲ್ಲ.
ಸಾಂಪ್ರದಾಯಿಕ ಹಿಂದೂ ಧರ್ಮದಲ್ಲಿ ಬ್ರಾಹ್ಮಣರು ಮಾಡುವ ಯಜ್ಞ ಯಜನ, ಅಧ್ಯಯನ, ಅಧ್ಯಾಪನ ಅತಿ ಶ್ರೇಷ್ಠ ಕಾಯಕಗಳೆಂದೂ, ಶೂದ್ರರೂ ಶ್ವಪಚರೂ ಮಾಡುತ್ತಿದ್ದ ಕಾಯಕಗಳು ಅತಿ ಕನಿಷ್ಠ ಕಾಯಕಗಳೆಂದೂ ಪರಿಗಣಿಸಲಾಗುತ್ತಿತ್ತು. ಶರಣರು ಲಿಂಗಧಾರಿಗಳಲ್ಲಿ ಜಾತಿತಾರತಮ್ಯವಿಲ್ಲವೆಂದು ಹೇಳಿ, ಕಾಯಕಗಳಲ್ಲೂ ತಾರತಮ್ಯವಿಲ್ಲ ಎಂದು ಹೇಳಿದರು.
ದೇವಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ! ನಿಮ್ಮ ಪುರಾತರಾಣೆ!
ತಲೆದಂಡ! ತಲೆದಂಡ!
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ
ನಿಮ್ಮ ರಾಣಿವಾಸದಾಣೆ. (೧; ೪೫೩)
ಆವಾವ ಕಾಯಕದಲ್ಲಿ ಬಂದಡೂ ಭಾವಶುದ್ಧವಾಗಿ
ಗುರು-ಲಿಂಗ-ಜಂಗಮಕ್ಕೆ ಮಾಡುವುದೇ ಶಿವಪೂಜೆ.
ಮಾಡುವ ಮಾಟವಿಲ್ಲದೆ ಮಾತಿಂಗೆ ಮಾತಾಡುವುದು ಅದೇತರ ಪೂಜೆ ?
ಅದು ಚಂದೇಶ್ವರಲಿಂಗಕ್ಕೆ ಒಪ್ಪವಲ್ಲ, ಮಡಿವಾಳಯ್ಯಾ (೭: ೧೨೮೪)
'ಕಾಯಕ'ವೆಂದರೆ 'ಉದ್ಯೋಗ' ಎಂಬ ಸಾಮಾನ್ಯ ಅರ್ಥ ಇರುವುದಾದರೂ, ಶರಣರ ಪ್ರಕಾರ, ಕಾಯಕವು ಕೇವಲ ಸ್ವಾರ್ಥಕ್ಕಾಗಿ ಮಾಡುವ ಉದ್ಯೋಗವಲ್ಲ. ನಾವು ಪರಾವಲಂಬಿಗಳಾಗಿರಬಾರದು, ನಮ್ಮ ಅನ್ನವನ್ನು ನಾವೇ ದುಡಿಯಬೇಕು; ಆದರೆ ನಮಗಾಗಿ, ನಮ್ಮ ಕುಟುಂಬದವರಿಗಾಗಿಯೂ ಅಲ್ಲದೆ ನಾವು ದುಡಿದುದನ್ನು ಇತರರೊಡನೆ ಹಂಚಿಕೊಳ್ಳುವುದಕ್ಕಾಗಿಯೂ, ದುಡಿಯಬೇಕು.
ನಾನು ಆರಂಬವ ಮಾಡುವೆನಯ್ಯಾ, ಗುರುಪೂಜೆಗೆಂದು,
ನಾನು ಬೆವಹಾರವ ಮಾಡುವೆನಯ್ಯಾ, ಲಿಂಗಾರ್ಚನೆಗೆಂದು,
ನಾನು ಪರಸೇವೆಯ ಮಾಡುವೆನಯ್ಯಾ, ಜಂಗಮದಾಸೋಹಕ್ಕೆಂದು,
ನಾನಾವಾವ ಕರ್ಮಂಗಳ ಮಾಡಿದಡೆಯು
ಆ ಕರ್ಮಫಲಭೋಗವ ನೀ ಕೊಡುವೆ ಎಂಬುದ ನಾನು ಬಲ್ಲೆನು.
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನು,
ನಿಮ್ಮ ಸೊಮ್ಮಿಂಗೆ ಸಲಿಸುವೆನು.
ನಿಮ್ಮಾಣೆ ಕೂಡಲಸಂಗಮದೇವಾ. (೧: ೭೦೯)
ಹೊತ್ತಾರೆ ಎದ್ದು ಕಣ್ಣ ಹೊಸೆಯುತ್ತ,
ಎನ್ನ ಒಡಲಿಂಗೆ, ಎನ್ನ ಒಡವೆಗೆಂದು ಎನ್ನ ಮಡದಿ-ಮಕ್ಕಳಿಗೆಂದು,
ಕುದಿದೆನಾದಡೆ ಎನ್ನ ಮನಕ್ಕೆ ಮನವೆ ಸಾಕ್ಷಿ.
ಭವಿ ಬಿಜ್ಜಳನ ಗದ್ದುಗೆಯ ಕೆಳಗೆ ಕುಳ್ಳಿರ್ದು
ಓಲೈಸಿಹನೆಂದು ನುಡಿವರಯ್ಯಾ ಪ್ರಮಥರು.
ಕೊಡುವೆನೆ ಉತ್ತರವನವರಿಗೆ ? ಕೊಡಲಮ್ಮೆ.
ಹೊಲೆಹೊಲೆಯರ ಮನೆಯ ಹೊಕ್ಕಾದಡೆಯೂ
ಸಲೆ ಕೈಕೂಲಿಯ ಮಾಡಿಯಾದಡೆಯೂ,
ನಿಮ್ಮ ನಿಲವಿಂಗೆ ಕುದಿವೆನಲ್ಲದೆ, ಎನ್ನ ಒಡಲವಸರಕ್ಕೆ ಕುದಿದೆನಾದಡೆ
ತಲೆದಂಡ ಕೂಡಲಸಂಗಮದೇವಾ! (೧: ೭೧೦)
ನಾವು ದುಡಿಯುವುದು ನಮಗೇ ಸಾಕಾಗದಿದ್ದರೆ, ಬೇರೆಯವರೊಡನೆ ಹಂಚಿಕೊಳ್ಳಲು ನಾವು ಅನೈತಿಕವಾಗಿ ದುಡಿಯಬೇಕೆ? ಶರಣರು, ಕೂಡದು ಎನ್ನುತ್ತಾರೆ. ಒಬ್ಬರಿಗೆ ಮೋಸ ಮಾಡಿ ಇನ್ನೊಬ್ಬರಿಗೆ ದಾನ ಮಾಡುವುದು ವೃಥಾ ಸಲ್ಲ. ಅಂಥದನ್ನು ಮಾಡದಿರುವುದೇ ಒಳಿತು.
ಭಕ್ತರು ಕಾಯಕವೆಂದು ದಾಯಗಾರಿಕೆಯಲ್ಲಿ ತಂದು
ದಾಸೋಹವ ಮಾಡಬಹುದೆ?
ಒಮ್ಮನವ ತಂದು ಒಮ್ಮನದಲ್ಲಿಯೆ ಮಾಡಿ
ಇಮ್ಮನವಾಗದ ಮುನ್ನವೆ
ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ
ಸಲ್ಲಬೇಕು ಮಾರಯ್ಯಾ (೫: ೭೨೪)
ಅಸಿಯಾಗಲಿ ಕೃಷಿಯಾಗಲಿ,
ವಾಚಕ ವಾಣಿಜ್ಯ ಮಸಿಯಾಗಲಿ,
ಮಾಡುವಲ್ಲಿ ಹುಸಿಯಿಲ್ಲದಿರಬೇಕು.
ಅದು ಅಸಮಾಕ್ಷನ ಬರವು, ಪಶುಪತಿಯ ಇರವು,
ಐಘಟದೂರ ರಾಮೇಶ್ವರಲಿಂಗ ತಾನೆ. (೮: ೧೨೯೮)
ದುಡಿಯಲಾಗದ ಕೆಲವರು, ಇತರರನ್ನು ಕಾಡಿ ಬೇಡಿ ದಾಸೋಹ ಮಾಡುತ್ತಾರೆ. ಬೇಡುವುದು ಕಳ್ಳತನ ಅಥವಾ ಸುಲಿಗೆಗಿಂತ ಬೇರೆ ಅಲ್ಲ. ಕಳ್ಳತನ ಎಂದರೆ ಇತರರ ವಸ್ತುಗಳನ್ನು ಅವುಗಳ ಒಡೆಯರಿಗೆ ಗೊತ್ತಿಲ್ಲದಂತೆ ತೆಗೆದುಕೊಳ್ಳುವುದು. ಸುಲಿಗೆ ಎಂದರೆ ಇತರರ ವಸ್ತುಗಳನ್ನು ಬಲವಂತದಿಂದ ತೆಗೆದುಕೊಳ್ಳುವುದು. ಎರಡೂ ಇತರರಿಗೆ ಹಿಂಸೆಯನ್ನುಂಟು ಮಾಡುತ್ತವೆ. ಕಾಡುವುದು ಅಥವಾ ಬೇಡುವುದು ಎಂದರೆ ಇತರರ ವಸ್ತುಗಳನ್ನು ಅವುಗಳ ಒಡೆಯರಿಗೆ ಇಷ್ಟವಿಲ್ಲದಿದ್ದರೂ ನಯವಾಗಿ ತೆಗೆದುಕೊಳ್ಳುವುದು. ಇದೂ ಹಿಂಸೆಯೇ.
ಆದುದರಿಂದ, ಶರಣರು ಕಾಡಿಬೇಡಿ ಜೀವನ ಮಾಡಬೇಡಿರೆಂದು ನುಡಿದರು.
ತನುಮನ ಬಳಲದೆ ಉದ್ದಂಡವೃತ್ತಿಯಲ್ಲಿ ಧನವ ಗಳಿಸಿ ತಂದು
ಗುರುಲಿಂಗಜಂಗಮಕ್ಕೆ ವೆಚ್ಚಿಸಿ, ದಾಸೋಹವ ಮಾಡಿ,
ಭಕ್ತರಾದೆವೆಂಬವರನೆನಗೆ ತೋರದಿರಯ್ಯಾ
ಅದೇಕೆಂದರೆ: ಅವ ಪರಧನ ಚೋರಕ, ಅವ ಪಾಪಿ,
ಅವಗೆ ವಿಚಾರಿಸದೆ ಉಪದೇಶವ ಕೊಟ್ಟ ಗುರುವಿಂಗೆ ರೌರವ ನರಕ.
ಅವನ ಕಾಯಕವ ವಿಚಾರಿಸದೆ ಅವರ ಮನೆಯಲ್ಲಿ ಹೊಕ್ಕು
ಲಿಂಗಾರ್ಚನೆಯ ಮಾಡುವ ಜಂಗಮಕ್ಕೆ ಏಳನೆಯ ಪಾತಕ.
ಇಂತಹರ ಬದುಕು, ಹುಲಿ ಕಪಿಲೆಯ ತಿಂದು
ಮಿಕ್ಕುದ ನರಿ ಬಂದು ತಿಂಬಂತೆ ಕಾಣಾ.
ಕೂಡಲಚೆನ್ನಸಂಗಮದೇವಾ. (೩: ೧೨೫೭)
ನೇಮವ ಮಾಡಿಕೊಂಡು ಭಕ್ತರ ಭವನಂಗಳ ಹೊಕ್ಕು,
ಕಾಯಕ ಸತ್ತು, ಹಣ ಹೊನ್ನ ಬೇಡಿಹೆನೆಂಬುದು ಕಷ್ಟವಲ್ಲವೆ ಸದ್ಭಕ್ತಂಗೆ?
ಆ ಗುಣ ಅಮರೇಶ್ವರಲಿಂಗಕ್ಕೆ ದೂರ. (೬: ೧೧೮೧)
ಕಾಯಕವೆಂದು ಕಾಯವ ಬಳಲಿಸದೆ, ತನು ಕರಗದೆ, ಮನ ನೋಯದೆ,
ಕಾಡಿ ಬೇಡಿ ಮಾಡುವುದು ದಾಸೋಹವೆ?
ಆವ ಕಾಯಕವು ಪ್ರಾಣವೆ ಕಡೆಯಾಗಿ, ದ್ರವ್ಯ ಮೊದಲಾಗಿ,
ಚಿತ್ತಶುದ್ಧದಲ್ಲಿ ಗುರುಚರಕ್ಕೆ ಮುಯ್ಯಾಂತು ಬಂದುದಕ್ಕೆ ಸರಿಗಂಡು,
ಲಿಂಗದೇಹಿಗಳಿಗೆಲ್ಲಾ ಒಂದೇ ಪ್ರಮಾಣದಲ್ಲಿ ಸಂದುದು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ತೃಪ್ತಿ. (೯: ೨೬೬)
ಕೆಲವರು ಲಿಂಗಪೂಜೆ, ಗುರುಪೂಜೆಗಳಿಗೆ ಪ್ರಾಧಾನ್ಯ ಕೊಟ್ಟು, ಕಾಯಕವನ್ನು ಕಡೆಗಣಿಸುತ್ತಾರೆ. ಲಿಂಗಾಯತರಲ್ಲಿ ರೈತರೇ ಹೆಚ್ಚಾಗಿರುವುದರಿಂದ ಕಾಯಕವನ್ನು ಕಡೆಗಣಿಸಿ, ಲಿಂಗಪೂಜೆಯಲ್ಲಿ ನಿರತರಾಗುವುದು ಪೂಜೆಯನ್ನು ಅಪಾರ್ಥ ಮಾಡಿಕೊಂಡಂತೆ; ಹಾಗೂ ಈ ಅಪವ್ಯಾಖ್ಯಾನದ ಮೂಲಕ ಸೋಮಾರಿಗಳಾಗುವ ಸಾಧ್ಯತೆಯಿದೆ. ಅದನ್ನು ತಪ್ಪಿಸಲು ಶರಣರು ಯಾವುದೇ ಕಾರಣಕ್ಕೂ ಕಾಯಕವನ್ನು ಕಡೆಗಣಿಸಬಾರದು ಎಂದರು.
ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳನೆ.
ಭಾವಶುದ್ಧವಾಗಿ ಮಹಾಶರಣರ ತಿಪ್ಪೆಯ ತಪ್ಪಲ ಅಕ್ಕಿಯ ತಂದು
ನಿಶ್ಚೈಸಿ ಮಾಡಬೇಕು ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ,
ಬೇಗ ಹೋಗು ಮಾರಯ್ಯಾ. (೫: ೭೧೩)
ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು,
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.
ಕಾಯಕವೆ ಕೈಲಾಸವಾದ ಕಾರಣ.
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು. (೬: ೧೧೭೦)
ಕಾಯಕ ಮಾಡುವುದು ದಾಸೋಹಕ್ಕೇ ಆದರೂ ನಾಳೆಗಿರಲಿ ಎಂಬ ಉದ್ದೇಶದಿಂದ ಅಥವಾ ಅತಿ ಆಸೆಯಿಂದ ಕಾಯಕ ಮಾಡಬಾರದು.
ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮಲೇಶ್ವರಲಿಂಗದ ಸೇವೆಯುಳ್ಳನ್ನಕ್ಕರ. (೫: ೨೫)
ಕಾಯಕವೂ ಒಂದು ರೀತಿಯ ಲಿಂಗಪೂಜೆ ಎಂದು ತಿಳಿದು ಕಾಯಕ ಮಾಡಬೇಕು. ಇದರಿಂದ ಎರಡು ಲಾಭಗಳು ಏಕಕಾಲದಲ್ಲುಂಟಾಗುತ್ತವೆ. ಮೊದಲನೆಯದು ನಮ್ಮ ಕಾಯಕವನ್ನು ಬಿಟ್ಟಂತಾಗಲಿಲ್ಲ. ಎರಡನೆಯದು, ಧರ್ಮವನ್ನು ಕಾಯಕಕ್ಕೂ ವಿಸ್ತರಿಸಿದಂತಾಯ್ತು. ಉದಾಹರಣೆಗೆ, ತುರುಗಾಹಿ ರಾಮಣ್ಣನೂ ನುಲಿಯ ಚಂದಯ್ಯನೂ ತಮ್ಮ ಕಾಯಕದಲ್ಲೇ ಧರ್ಮವನ್ನು ಕಾಣುತ್ತಾರೆ.
ಉದಯದಲ್ಲಿ ಬ್ರಹ್ಮನ ಕಾವೆ
ಮಧ್ಯಾಹ್ನಕ್ಕೆ ವಿಷ್ಣುವ ಕಾವೆ
ಅಸ್ತಮಯದಲ್ಲಿ ರುದ್ರನ ಕಾವೆ.
ಕತ್ತಲೆಯಾದ ಮತ್ತೆ ತಮ್ಮ ತಮ್ಮ ಮಂದೆಗೆ ಹೊಡೆದು
ಈ ಕಾವ ಕಟ್ಟಿಗೆಯ ಇನ್ನೆಂದಿಗೆ ಬಿಡುವೆ?
ಗೋಪತಿನಾಥ ವಿಶ್ವೇಶ್ವರಲಿಂಗವು ನಷ್ಟವಹನ್ನಕ್ಕ
ಎನ್ನ ಕೈಯ ಕಟ್ಟಿಗೆ ಬಿಡದು. (೭: ೧೦೦೪)
ಕಾಯದಿಂದ ಕಾಬುದು ಕುರುಹಿನ ಮೂರ್ತಿಯ.
ಆತ್ಮದಿಂದ ಕಾಬುದು ಅರಿವಿನ ಮೂರ್ತಿಯ.
ಅರಿವ ಕುರುಹ ಮರೆದಲ್ಲಿ
ಪರಮ ದಾಸೋಹದಿಂದ ಪರಶಿವಮೂರ್ತಿಯ ಕಾಣಬಂದಿತ್ತು.
ಚನ್ನಬಸವಣ್ಣಪ್ರಿಯ ಚಂದೇಶ್ವರ ನೀನೆ ಬಲ್ಲೆ. (೭ ೧೨೯೨)
ನಾವೆಲ್ಲರೂ ಪರಮಾತ್ಮನ ಮಕ್ಕಳು, ಇರುವುದೆಲ್ಲವೂ ಶಿವನ ಪ್ರಸಾದ, ಎಂಬ ನಂಬಿಕೆಯೇ ದಾಸೋಹ ತತ್ವದ ತಳಹದಿ. ಆದುದರಿಂದ ಯಾರು ಹೀಗೆಂದು ನಂಬಿದ್ದಾರೋ ಅವರು ದಾಸೋಹದಲ್ಲಿ ನಿರತರಾಗಬೇಕು. ಬಹಳಷ್ಟು ಜನರು ಅತಿಯಾಗಿ ಗಳಿಸಿ, ತಾವು ಬಳಸಿ ಉಳಿದುದನ್ನು ನಾಳೆಗೆಂದು ಅಥವಾ ಮಕ್ಕಳು ಮೊಮ್ಮಕ್ಕಳಿಗೆಂದು ಕೂಡಿಡುತ್ತಾರೆ. ಸಂಪತ್ತನ್ನು ಬೇರೆಯವರಿಗೆ ಕಾಣದಂತೆ ಬಚ್ಚಿಡುವುದು ಈ ಉದ್ದೇಶಕ್ಕಾಗಿಯೇ. ಹಿಂದಿನ ಕಾಲದಲ್ಲಿ ಸಂಪತ್ತನ್ನು ಬಾವಿಯೊಳಗೋ ಭೂಮಿಯೊಳಗೋ ಬಚ್ಚಿಡುತ್ತಿದ್ದರು, ಮತ್ತು ಅದನ್ನು ಯಾರಿಗೂ ಹೇಳುತ್ತಿರಲಿಲ್ಲ. ಹೀಗೆ ಕೂಡಿಡುವುದರಿಂದ ಬೇರೆಯವರಿಗೆ ಸಿಕ್ಕಬೇಕಾದ ಫಲಗಳನ್ನು ಅವರೇ ದೋಚಿಕೊಂಡಂತಾಗುತ್ತದೆ. ಶರಣರು ಹೀಗೆ ಸಂಪತ್ತನ್ನು ಇತರರೊಡನೆ ಹಂಚಿಕೊಳ್ಳದೆ ಅತಿಯಾಸೆಯಿಂದ ಬಚ್ಚಿಡುವುದನ್ನು ಖಂಡಿಸಿದ್ದಾರೆ.
ಆಯುಷ್ಯವುಂಟು ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ;
ಆಯುಷ್ಯ ತೀರಿ ಪ್ರಳಯ ಬಂದಡೆ ಆ ಅರ್ಥವನುಂಬುವರಿಲ್ಲ.
ನೆಲನನಗೆದು ಮಡುಗದಿರಾ, ನೆಲ ನುಂಗಿದಡುಗುಳುವುದೆ?
ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ, ಉಣ್ಣದೆ ಹೋಗದಿರಾ !
ನಿನ್ನ ಮಡದಿಗಿರಲೆಂದಡೆ, ಆ ಮಡದಿಯ ಕೃತಕ ಬೇರೆ;
ನಿನ್ನ ಒಡಲು ಕಡೆಯಲು ಮತ್ತೊಬ್ಬನಲ್ಲಿಗೆ ಅಡಕದೆ ಮಾಬಳೆ?
ಹೆರರಿಗಿಕ್ಕಿ ಹೆಗ್ಗುರಿಯಾಗಿ ಕೆಡಬೇಡ,
ಕೂಡಲಸಂಗನ ಶರಣರಿಗೆ ಒಡನೆ ಸವೆಸುವುದು. (೧: ೨೦೧)
ಮುನ್ನ ಗಳಿಸಿದವರೊಡವೆಯ ಈಗ ಕಂಡು ಮತ್ತೆ ಇನ್ನಾರಿಗೆ ಇರಿಸಿದೆ?
ಅಂದಂದಿಗೆ ಮಳೆ ಬೆಳೆ ತಾನಿದ್ದಂದಿಗೂ ತಪ್ಪದು.
ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ
ಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ. (೭: ೨೭೯)
ಅರ್ಥದಲ್ಲೇನೂ ಸುಖವಿಲ್ಲ, ಅರ್ಥವಗಳಿಸಿ ಆತ್ಮಪುತ್ರರ್ಗಿರಿಸಬೇಡ,
ಆರಿಗಾರೂ ಇಲ್ಲ.
ಶಿವನಲ್ಲದೆ ಹಿತವರಿಲ್ಲವೆಂದರಿದು
ಶಿವನೊಡವೆಯ ಶಿವನವರಿಗೆ ಕೊಡು ಮರುಳೆ.
ಅರ್ಥದಲ್ಲೇನೂ ಸುಖವಿಲ್ಲ.
ಅರ್ಥವನರ್ಜಿಸುವಲ್ಲಿ ದುಃಖ, ಅರ್ಜಿಸಿದ ಧನವ ರಕ್ಷಿಸುವಲ್ಲಿ ದುಃಖ,
ನಾಶವಾದಡೆ ದುಃಖ, ವೆಚ್ಚವಾದಡೆ ದುಃಖ.
ಈ ಪರಿಯಲ್ಲಿ ಅರ್ಥದಿಂದ ಸದಾ ದುಃಖವಡೆವವರಿಗೆ ಸುಖವಿಲ್ಲೆಂದರಿಯದೆ
ಧನದರ್ಥದ ಮರವೆಯಲ್ಲಿ ಬಳಲುತ್ತಿಹ ಮನುಜರಿಗಿನ್ನಾವ ಗತಿಯು ಇಲ್ಲವಯ್ಯಾ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, (೧೧: ೮೦೭)
ನಾವು ಹೂತಿಟ್ಟುದುದು ನಮಗೆ ಅಥವಾ ನಮ್ಮ ಮಕ್ಕಳು ಮೊಮ್ಮಕ್ಕಳಿಗೆ ಸಿಕ್ಕದಿರುವ ಸಾಧ್ಯತೆ ಇರುವಂತೆ, ಅದು ಅವರಿಗೆ ಸಿಕ್ಕಿದ್ದರೂ ಅದು ಸದುಪಯೋಗವಾಗದಿರುವ ಸಾಧ್ಯತೆಯೂ ಇದೆ. ಆದುದರಿಂದ, ನಾವು ಗಳಿಸಿದುದನ್ನು ಈ ಜನ್ಮದಲ್ಲೇ ಇತರರೊಡನೆ ಹಂಚಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿ.
ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು?
ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ?
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಯಿಂದ
ಕರಕಷ್ಟ ಕೂಡಲಸಂಗಮದೇವಾ. (೧: ೪೩೮)
ಭಕ್ತರು ದ್ರವ್ಯವ ಗಳಿಸಿದಲ್ಲಿ
ತಮ್ಮ ತನುವಿದ್ದಲ್ಲಿಯೆ ಗುರು ಲಿಂಗ ಜಂಗಮಕ್ಕರ್ಪಿಸುವುದು.
ಇದೇ ಸದ್ಭಕ್ತಿಯ ಹೊಲಬು.
ತಾನಳಿದು ಮತ್ತೆ ಮನೆಮಕ್ಕಳಿಗೆಂದಡೆ
ಅದೆ ಆಚಾರಕ್ಕೆ ಭಂಗ.
ಆತ ಸ್ವಾಮಿಗೆ ಸ್ವಾಮಿದ್ರೋಹಿ.
ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ
ಗಾವುದಿ ಮಾಚಯ್ಯ ಹೇಳಿದುದ ಕೇಳಿ ಎಲ್ಲರೂ ಸತ್ಯವೆನ್ನಿರಣ್ಣಾ. (೭: ೨೭೭)
ದಾಸೋಹ ಮಾಡುವವರು ಎರಡು ವಿಷಯಗಳನ್ನು ಗಮನಿಸಬೇಕು. ಮೊದಲನೆಯದಾಗಿ, ತಾವು ಪಡೆದಿರುವುದೆಲ್ಲವೂ ದೇವನ ಪ್ರಸಾದ, ತಮ್ಮದೆನ್ನುವುದು ಏನೂ ಇಲ್ಲ, ಆದುದರಿಂದ ದಾಸೋಹದಲ್ಲಿ ವಿನಿಯೋಗವಾಗುವುದು ಪರಶಿವನ ಪ್ರಸಾದ ಎಂಬುದು ಅವರಿಗೆ ಗೊತ್ತಿರಬೇಕು.
ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ.
ಸುಳಿದು ಬೀಸುವ ವಾಯು ನಿಮ್ಮ ದಾನ.
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ, ರಾಮನಾಥ. (೭: ೭೩೪)
ಎರಡನೆಯದಾಗಿ, ನಾನು ದುಡಿದುದನ್ನು ಇತರರೊಡನೆ ಹಂಚಿ ಕೊಳ್ಳುತ್ತಿದ್ದೇನೆ, ಆದುದರಿಂದ ಕೊಡುವ ನಾನು ಮೇಲು, ನನ್ನಿಂದ ಪಡೆಯುತ್ತಿರುವವರು ಕೀಳು, ಎಂಬ ಅಹಂಕಾರ ದಾಸೋಹ ಮಾಡುವವರಿಗೆ ಇರಬಾರದು. ದಾಸೋಹಿಗಳಿಗೆ ನಾನು ಕೇವಲ ಲಿಂಗದ (ಅಥವಾ ಸಮಾಜದ) ದಾಸ ಎಂಬ ಕೈಂಕರ್ಯ ಭಾವ ಇರಬೇಕು.
ಹತ್ತು ಮತ್ತರ ಭೂಮಿ, ಬತ್ತದ ಹಯನು, ನಂದಾದೀವಿಗೆಯ
ನಡೆಸಿಹೆವೆಂಬವರ ಮುಖವ ನೋಡಲಾಗದು,
ಅವರ ನುಡಿಯ ಕೇಳಲಾಗದು.
ಅಂಡಜ, ಸ್ವದಜ, ಉದ್ಭಜ, ಜರಾಯುಜವೆಂಬ ಪ್ರಾಣಿಗಳಿಗೆ
ಭವಿತವ್ಯವ ಕೊಟ್ಟವರಾರೊ?
ಒಡೆಯರಿಗೆ ಉಂಡಲಿಗೆಯ ಮುರಿದಿಕ್ಕಿದಂತೆ
ಎನ್ನಿಂದಲೆ ಆಯಿತ್ತು, ಎನ್ನಿಂದಲೆ ಹೋಯಿತ್ತು ಎಂಬವನ ಬಾಯಲ್ಲಿ
ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ
ಕೂಡಲಸಂಗಮದೇವ? (೧: ೨೨೫)
ಅನವರತ ಮಾಡಿಹೆನೆಂದು ಉಪ್ಪರ ಗುಡಿಯ ಕಟ್ಟಿ ಮಾಡುವ
ಭಕ್ತನ ಮನೆಯದು ಲಂದಣಗಿತ್ತಿಯ ಮನೆ.
ಸರ್ವಜೀವದಯಾಪಾರಿಯೆಂದು ಭೂತದೇಹಕಿಕ್ಕುವನ ಮನೆ
ಸಯಿದಾನದ ಕೇಡು.
ಸೂಳೆಯ ಮಗ ಮಾಳವ ಮಾಡಿದಡೆ
ತಾಯ ಹೆಸರಾಯಿತ್ತು, ತಂದೆಯ ಹೆಸರಿಲ್ಲ
ಕೂಡಲಸಂಗಮದೇವಾ. (೧: ೨೨೬)
ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ,
ಏಡಿಸಿ ಕಾಡಿತ್ತು ಶಿವನ ಡಂಗುರ,
ಮಾಡಿದೆನೆನ್ನದಿರಾ ಲಿಂಗಕ್ಕೆ ಮಾಡಿದೆನೆನ್ನದಿರಾ ಜಂಗಮಕ್ಕೆ,
ಮಾಡಿದೆನೆಂಬುದು ಮನದಲ್ಲಿಲ್ಲದಿದ್ದಡೆ,
ಬೇಡಿತ್ತನೀವನು ಕೂಡಲಸಂಗಮದೇವ. (೧: ೨೩೪)
'ಸೋಹಂ' ಎಂಬುದದು ಅಂತರಂಗದ ಮದ ನೋಡಯ್ಯಾ.
'ಶಿವೋಹಂ' ಎಂಬುದದು ಬಹಿರಂಗದ ಮದ ನೋಡಯ್ಯಾ,
ಈ ದ್ವಂದ್ವವನಳಿದು 'ದಾಸೋಹಂ' ಎಂದೆನಿಸಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನಾ. (೪: ೧೪೮೭)
ದಾಸೋಹವು ಭಕ್ತಿಗೆ ಪೂರಕವಾಗಿರಬೇಕು. ಭಕ್ತಿ ಎಂದರೆ ಪ್ರತ್ಯೇಕತಾ ಭಾವನೆಯನ್ನು ಕಳೆದುಕೊಂಡು ಲಿಂಗದೊಡನೆ ಐಕ್ಯ (ಸಮರಸ) ಭಾವವನ್ನು ಪಡೆಯುವ ಸಾಧನ. ಪ್ರತ್ಯೇಕತಾ ಭಾವನೆಯನ್ನೂ, ನಾನು, ನನ್ನದು, ನನಗಾಗಿ ಮುಂತಾದ ಸ್ವಾರ್ಥ ಭಾವನೆಗಳನ್ನೂ ದಾಸೋಹದ ಮೂಲಕ ನಿಧಾನವಾಗಿ ಕಳೆದುಕೊಳ್ಳಬಹುದು. ಹೀಗೆ ಮಾಡುವುದರಿಂದ ಭಕ್ತಿ ವೃದ್ಧಿಯಾಗುತ್ತದೆ.
ಮನದ ಮತ್ಸರವ ಕಳೆದು, ಮನದ ಮೇಲೆ ಲಿಂಗವ ಕುಳ್ಳಿರಿಸಬೇಕಯ್ಯಾ
ಧನದ ಲೋಭವ ಕಳೆದು, ಧನದ ಮೇಲೆ ಜಂಗಮವ ಕುಳ್ಳಿರಿಸಬೇಕಯ್ಯಾ
ಕಾಯಗುಣಂಗಳ ಕಳೆದು ಕಾಯವ ಪ್ರಸಾದವ ಮಾಡಬೇಕಯ್ಯಾ
ಈ ಎಲ್ಲಾ ಗುಣಂಗಳನತಿಗಳೆದು ತ್ರಿವಿಧದಲ್ಲಿ ದಾಸೋಹಿಯಾಗಿರಬೇಕು,
ಕೂಡಲಚೆನ್ನಸಂಗಯ್ಯಾ (೩: ೩೫೩)
ಪೂಜೆಯುಳ್ಳನ್ನಕ್ಕ ಪುಣ್ಯದ ಗೊತ್ತು ಕಾಣಬಂದಿತ್ತು.
ಮಾಟವುಳ್ಳನ್ನಕ್ಕೆ ಮಹಾಪ್ರಮಥರ ಭಾಷೆ ಭಾಗ್ಯ ದೊರೆಕೊಂಡಿತ್ತು.
ಮಾಟವಿಲ್ಲದವನ ಭಕ್ತಿ ಹಾಳೂರ ವಂಕಕ್ಕೆ ಕೋಲ ಹಿಡಿದಂತಾಯಿತ್ತು.
ಮಾಡುವಲ್ಲಿ ಉಭಯವಳಿದು ಮಾಡಬಲ್ಲಡೆ,
ಮಾರಯ್ಯಪ್ರಿಯ ಅಮಲೇಶ್ವರಲಿಂಗವ ಕೂಡುವ ಕೂಟ. (೫: ೭೧೭)
ಎನ್ನ ತನು ಎನ್ನ ಧನ ಎನ್ನ ಮನೆ
ಎನ್ನ ಸತಿ ಸುತರೆಂಬ ಮನಕ್ಕೆ
ಈಶ್ವರಭಕ್ತಿ ಭಿನ್ನವಾಯಿತ್ತು ನೋಡಾ!
ತನ್ನಮರೆದು ಇದಿರನರಿದು
ಒಡವೆಯಾತಂಗೆ ಒಡವೆಯ ಒಪ್ಪಿಸಿದೆಯಾದರೆ
ಕೂಡಿಕೊಂಡಿರ್ಪನು ನೋಡಾ ನಮ್ಮ ಅಖಂಡೇಶ್ವರನು. (೧೪: ೩೭೬)
ದಾಸೋಹವು ಎಂಥ ನಿಸ್ವಾರ್ಥ ಮಾಟವಾಗಿರಬೇಕೆಂದರೆ, ಅದನ್ನು ಮಾಡುವವನು ಅದರಿಂದ ಕೀರ್ತಿವಾರ್ತೆಗಳನ್ನಾಗಲಿ ಸ್ವರ್ಗಕೈಲಾಸ ಮೋಕ್ಷಗಳನ್ನಾಗಲಿ ಪ್ರತಿಫಲವೆಂದು ನಿರೀಕ್ಷಿಸಬಾರದು.
ಪ್ರಣತೆಯೂ ಇದೆ ಬತ್ತಿಯೂ ಇದೆ;
ಜ್ಯೋತಿಯ ಬೆಳಗುವಡೆ,
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ?
ಗುರುವಿದೆ ಲಿಂಗವಿದೆ; ಶಿಷ್ಯನ ಸುಜ್ಞಾನ ಅಂಕುರಿಸದನ್ನಕ್ಕರ
ಭಕ್ತಿ ಎಲ್ಲಿಯದೊ?
'ಸೋಹಂ' ಎಂಬುದಕ್ಕೆ ದಾಸೋಹವ ಮಾಡದಿರ್ದಡೆ
ಅತಿಗಳೆವೆ ನೋಡಾ ಗುಹೇಶ್ವರಾ. (೨: ೭೮)
ಲಿಂಗ ಜಂಗಮಕ್ಕೆ ಮಾಡಿದ ಭಕ್ತಿ
ಮನಕೆ ಮನವೇ ಸಾಕ್ಷಿಯಾಗಿರಬೇಕಲ್ಲದೆ,
ಇದಿರಿಟ್ಟು ನುಡಿಯಲಾಗದು.
ಅದೇನು ಕಾರಣವೆಂದರೆ;
ಬಡವಂಗೆ ಭಾಗ್ಯ ದೊರೆಕೊಂಡಂತಿರಬೇಕಲ್ಲದೆ,
ಎನ್ನ ಪದಾರ್ಥವ ನಾನು ಮಾಡಿದೆನು ಅವರು ಕೈಕೊಂಡರೆಂದು
ತನ್ನ ಖ್ಯಾತಿಭಕ್ತಿಯನು
ಮನ ಹಿಗ್ಗಿ ಅನ್ಯರೊಡನೆ ಹೇಳಿಕೊಂಡರೆ
ಶಿವನೊಪ್ಪಿಕೊಳ್ಳನು, ಪುರಾತನರು ಮೆಚ್ಚರು.
ಅಂತಪ್ಪ ಖ್ಯಾತಿಭಕ್ತನ ಡಂಭಕದ ಭಕ್ತಿಯೆಂತಾಯಿತ್ತೆಂದರೆ,
ಹಾವಸಗಲ್ಲ ಮೆಟ್ಟಿ ಜಾರಿ ಬಿದ್ದು
ಕೊಡನೊಡೆದಂತಾಯಿತ್ತು ಕಾಣಾ ಅಖಂಡೇಶ್ವರಾ. (೧೪: ೩೮೨)
[1] ಈ ತರಹದ ಸಂಖ್ಯೆಯ ವಿವರ: ಸವಸ-1/124 :- ಸಮಗ್ರ ವಚನ ಸಂಪುಟ-1, ವಚನ ಸಂಖ್ಯೆ-124 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])
ಜಾತಿತಾರತಮ್ಯ ಮಾಡಲಾಗದು | ವಚನ ಮತ್ತು ವಚನಕಾರರು |