ಮಾಡಿದ ಕಾರ್ಯದಿಂದ ಜ್ಞಾನ ಸಾಧನೆಯಾಗಬೇಕು | ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು |
ಲಿಂಗಸೀಮೇ ಸೀಮೋಲಂಘನವಾದಲ್ಲಿ |
✍ ಶ್ರೀಮತಿ ರುದ್ರಮ್ಮ ಅಮರೇಶ
ಹಾಸಿನಾಳ ಗಂಗಾವತಿ, ವಿಶ್ವಲಿಂಗಾಯತ ಸಮಿತಿ.
|| ಓ೦ ಶ್ರೀಗುರು ಬಸವಲಿಂಗಾಯ ನಮಃ ||
ಲಿಂಗಸೀಮೇ ಸೀಮೋಲಂಘನವಾದಲ್ಲಿ,
ಸೀಮೆಯ ಮೀರಿದಲ್ಲಿ ಪ್ರಾಣಯೋಗವಾಗಬೇಕು.
ಆ ಗುಣ ತೋರುವುದಕ್ಕೆ ಮುನ್ನವೆ ಸಾವಧಾನಿಯಾಗಿರಬೇಕು.
ಲೌಕಿಕ ಮೆಚ್ಚಬೇಕೆಂಬುದಕ್ಕೆ, ಭಕ್ತರೊಪ್ಪಬೇಕೆಂಬುದಕ್ಕೆ,
ಉಪಾಧಿಕೆಯ ಮಾಡುವಲ್ಲಿ ವ್ರತ ಉಳಿಯಿತ್ತು, ಆಚಾರ ಸಿಕ್ಕಿತ್ತು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಆತನ ದೃಕ್ಕಿಂಗೆ ಹೊರಗಾದ. - ಅಕ್ಕಮ್ಮ
ಭಾವಾರ್ಥ:ಶರಣೆ ಅಕ್ಕಮ್ಮನವರು ತಮ್ಮ ಈ ವಚನದಲ್ಲಿ ಪ್ರಮುಖವಾಗಿ ಹೇಳಿರುವುದೇನೆಂದರೆ ಲಿಂಗವನ್ನು ಕೇವಲ ಇಷ್ಟಲಿಂಗಕ್ಕೆ ಸಿಮಿತಗೊಳಿಸದೆ ಅದನ್ನು ಹಂತ ಹಂತವಾಗಿ ಪೂಜಿಸುತ್ತ ಅಂದರೆ ಆಚರಿಸುತ್ತ ಸೀಮಾತಿತಗೊಳಿಸಬೇಕೆಂದಿದ್ದಾರೆ ಈ ಶರಣೆಯವರು. ಇದರ ಜೊತೆ ಜೊತೆಗೆ ವ್ಯಷ್ಠಿಗಿಂತ ಸಮಷ್ಠಿ ಮುಖ್ಯ ಅಂದರೆ ಸಮಾಜ ಮುಖ್ಯ ಎಂಬುದನ್ನು ಸಹ ನಾವು ಅಕ್ಕಮ್ಮನವರ ನುಡಿಗಳಲ್ಲಿ ಸೂಕ್ಷ್ಮವಾಗಿ ಗಮನಿಸಬಹುದಾಗಿದೆ.
ಲಿಂಗಸೀಮೆ ಸೀಮೋಲಂಘನವಾದಲ್ಲಿ, ಸೀಮೆಯ ಮೀರಿದಲ್ಲಿ ಪ್ರಾಣಯೋಗವಾಗಬೇಕು.
ಈ ಇಷ್ಟಲಿಂಗವೆಂಬುವುದು ಸಮಷ್ಠಿಪ್ರಜ್ಞೆ ಸಮಷ್ಠಿಭಾವವಾಗಿದೆ ಹಾಗಾಗಿ ಈ ಇಷ್ಟಲಿಂಗದ ಸೀಮೆಯ ದಾಟಿ ಅದರಿಂದ ಆಚೆಗೆ ಅಂದರೆ ಅದನ್ನು ಮೀರಿ ಜಂಗಮವೆ ಪ್ರಾಣಲಿಂಗವೆಂದರಿತು ಪ್ರಾಣಲಿಂಗದಲ್ಲಿ ಜಂಗಮವು ಯೋಗವಾಬೇಕು ಅಂದರೆ ಸಮಾಜ ಸೇವೆಗೆ ನಮ್ಮ ಮನವು ಕೂಡಿಕೊಂಡಿರಬೇಕು ಮತ್ತು ಲಿಂಗಸಾಧನೆಗಾಗಿ ಮನವನ್ನು ಉಸಿರಾಟ ಕ್ರೀಯೆಯಲ್ಲಿ ನಿಲ್ಲಿಸುವ ಮುಖಾಂತರ ಇಷ್ಟಲಿಂಗವನ್ನ ನಿರಸನಗೊಳಿಸಬೇಕು ಎನ್ನುತ್ತಾರೆ ಶರಣೆ ಅಕ್ಕಮ್ಮನವರು ಅಂದರೆ ಕರಸ್ಥಲದಲ್ಲಿನ ಇಷ್ಟಲಿಂಗದ ಮೇಲೆಯೆ ನಾವು ಅವಲಂಬಿತರಾಗದೆ ನಮ್ಮ ಅಂಗವು ಸಹ ಇಷ್ಟಲಿಂಗ ಎಂಬುದನ್ನ ನಾವಿಲ್ಲಿ ಅರಿತುಕೊಳ್ಳಬೇಕು. ನಾವು ಕೇವಲ ಕುರುಹನ್ನು ಪೂಜಿಸದೆ ಅದರ ಜೊತೆಗೆ ಅರಿವನ್ನು ಸಹ ಪೂಜಿಸಿ ಅದನ್ನು ಮೀರಿ ಮುಂದೆ ಸಾಗಬೇಕು ಎಂದಿದ್ದಾರೆ ಅಕ್ಕಮ್ಮನವರು.
ಆ ಗುಣ ತೋರುವುದಕ್ಕೆ ಮುನ್ನವೆ ಸಾವಧಾನಿಯಾಗಿರಬೇಕು.
ಲಿಂಗಸಾಧಕನು ತನ್ನ ಇಷ್ಟಲಿಂಗ ಧ್ಯಾನದ ನಂತರ ಪ್ರಾಣಲಿಂಗದಲ್ಲಿ ಧ್ಯಾನಿಸಬೇಕು. ಈ ಪ್ರಾಣಯೋಗವಾಗುವ ಮೊದಲು ನಾವು ಶಾಂತಿ ಸಮದಾನದಿಂದ ವರ್ತಿಸಬೇಕು ಏಕೆಂದರೆ ಪ್ರಾಣಲಿಂಗಯೋಗ ಅಳವಡಬೇಕೆಂದರೆ ಸಾದಕನಿಗೆ ತಾಳ್ಮೆ ಎನ್ನುವುದು ಅತ್ಯಗತ್ಯವಾಗಿದೆ ಎಂಬುದು ಈ ತಾಯಿಯ ಅಂಬೋಣವಾಗಿದೆ.
ಲೌಖಿಕ ಮೆಚ್ಚಬೇಕೆಂಬುದಕ್ಕೆ, ಭಕ್ತರೊಪ್ಪಬೇಕೆಂಬುದಕ್ಕೆ, ಉಪಾಧಿಕೆಯ ಮಾಡುವಲ್ಲಿ ವ್ರತ ಉಳಿಯಿತ್ತು, ಆಚಾರ ಸಿಕ್ಕಿತ್ತು.
ಈ ಲೋಕವನ್ನ ಮೆಚ್ಚಬೇಕೆಂದುಕೊಂಡು, ಭಕ್ತರು ಒಪ್ಪಬೇಕೆಂದು ಉಪಾಧಿತನ ಮಾಡುವಾಗ ಅಂದರೆ ತೋರಿಕೆಗೆ ಬೂಟಾಟಿಕೆಗೆ ಲಿಂಗಪೂಜೆಯ ಮಾಡಿದರೆ ಇದನ್ನೇ ನಿಜವಾದ ನೇಮ ವ್ರತ ಎಂದುಕೊಂಡು ಮುಂದುವರಿಸಿದರೆ ಮತ್ತೆ ಉಪಾಧಿತನದ ಆಚರಣೆಯಲ್ಲಿ ಸಿಕ್ಕಿಕೊಂಡು ಬಂಧಿಸಲ್ಪಡುತ್ತೇವೆ ಹಾಗಾಗಿ ಲಿಂಗದ ಆಚರಣೆಯು ನಿರುಪಾಧಿತವಾಗಿರಬೇಕು ಅಂದರೆ ಯಾವುದೇ ತೊಂದರೆ ಇಲ್ಲದೆ ಚಿಂತಾಮುಕ್ತರಾಗಿ ಬಂಧಮುಕ್ತರಾಗಿ ಪೂಜಿಸಬೇಕು ಎಂದಿದ್ದಾರೆ ಅಕ್ಕಮ್ಮನವರು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಆತನ ದೃಕ್ಕಿಂಗೆ ಹೊರಗಾದ.
ಒಂದು ವೇಳೆ ಸಾಧಕನು ಉಪಾಧಿತನದಿಂದಲೆ ಲಿಂಗಪೂಜೆ ಮುಂದುವರೆಸಿ ಆಚರಿಸಿದ್ದೆಯಾದಲ್ಲಿ ಆಚಾರಕ್ಕೆ ಪ್ರಾಣವೆಂದೆನಿಸಿದ ನಮ್ಮ ರಾಮೇಶ್ವರ ಲಿಂಗಯ್ಯನು ಆತನ ದೃಷ್ಟಿಗೆ ಹೊರಗಾಗುತ್ತಾನೆ ಅಂದರೆ ಆ ಸಾಧಕನಿಗೆ ತನ್ನ ಅರಿವು ಅವನಿಗೆ ಎಂದಿಗೂ ಪ್ರಾಪ್ತಿಯಾಗುವುದಿಲ್ಲ, ಜ್ಞಾನದ ಕಣ್ಣು ತೆರೆಯುವುದಿಲ್ಲ ಅವನ ಕೊನೆಯವರೆಗು ಹಾಗೆಯೆ ಉಳಿದುಕೊಳ್ಳುತ್ತಾನೆ ಎಂಬ ತಮ್ಮ ಅನುಭವದ ಮಾತನ್ನ ಅಕ್ಕಮ್ಮನವರು ಕೊನೆಯಲ್ಲಿ ಹೇಳಿಕೊಂಡಿದ್ದಾರೆ.ಶರಣೆ ಅಕ್ಕಮ್ಮನವರ ಅನುಭವದ ಈ ನುಡಿಗಳು ಎಲ್ಲರಿಗು ಅನುಭವಕ್ಕೆ ತರುವಂತಿದೆ ಏಕೆಂದರೆ ನಾವೀಗ ಸಮಾಜದಲ್ಲಿ ಅದೆ ರೀತಿಯಾದ ಉಪಾಧಿತನದ ಪೂಜೆ, ಡಾಂಭಿಕ ಭಕ್ತಿ, ಈ ತೋರಿಕೆಯ ಆಚರಣೆಗಳೆ ಪ್ರಧಾನವಾಗಿ ಕಾಣುತ್ತಿವೆ. ನಾವು ಕೇವಲ ಇಷ್ಟಲಿಂಗಪೂಜೆಯಲ್ಲಿ ನಿರತರಾದರೆ ಸಾಲದು ಅದನ್ನು ಮೀರಿದ ಪ್ರಾಣಲಿಂಗಪೂಜೆಗೆ ನಂತರ ಭಾವಲಿಂಗಪೂಜೆಗೆ ಹೋಗಲು ಪ್ರಯತ್ನಿಸಬೇಕು ಅಂದಾಗ ಮಾತ್ರ ನಾವು ಮೋಕ್ಷಕ್ಕೆ ಅರ್ಹರಾಗುತ್ತೇವೆ ಇಲ್ಲವಾದರೆ ಇದೆ ಉಪಾಧಿತನದಲ್ಲಿಯೆ ಉಳಿದು ಬಂಧನಕ್ಕೆ ಒಳಗಾಗುತ್ತೇವೆ ಎಂಬ ಎಚ್ಚರಿಕೆಯ ಗಂಟೆ ಈ ವಚನದ್ದಾಗಿದೆ.
ಮಾಡಿದ ಕಾರ್ಯದಿಂದ ಜ್ಞಾನ ಸಾಧನೆಯಾಗಬೇಕು | ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು |