Previous ಯೋಗದ ಬಗ್ಗೆ ಮಾಡಿದ ಕಾರ್ಯದಿಂದ ಜ್ಞಾನ ಸಾಧನೆಯಾಗಬೇಕು Next

ಲಿಂಗಾಯತ ಧರ್ಮ ಶುದ್ಧ ಸಸ್ಯಾಹಾರಿಗಳ ಧರ್ಮ

*

ಲಿಂಗಾಯತ ಧರ್ಮ ಶುದ್ಧ ಸಸ್ಯಾಹಾರಿಗಳ ಧರ್ಮ

ಲಿಂಗಾಯತ ಧರ್ಮ ಶುದ್ಧ ಸಸ್ಯಾಹಾರಿಗಳ ಧರ್ಮ. ಯಾರಾದರೂ ಲಿಂಗಾಯತರೆನಿಸಿಕೊಂಡವರು ಮಾಂಸಹಾರ ಮಾಡುತ್ತಿದ್ದರೆ ಅವರನ್ನು ತಿದ್ದುವ ನೈತಿಕ ಹಕ್ಕು ನಮಗಿದೆ. ಅಂಥವರನ್ನು ಶರಣಬಂಧುಗಳು ತಿದ್ದಬೇಕು. ಮಕ್ಕಳಲ್ಲೂ ಕೂಡ ಈ ಬಗ್ಗೆ ಅರಿವನ್ನು ನೀಡುತ್ತ. ನಮ್ಮ ಧರ್ಮದ ಶ್ರೇಷ್ಠ ಪರೆಂಪರೆಯನ್ನು ಮುಂದು ವರೆಸಿಕೊಂಡು ಹೋಗಬೇಕು. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಕುಲಜರಾಗೋಣ.

ಗುರು ಬಸವಣ್ಣನವರು ಶುದ್ಧ ಸಸ್ಯಾಹಾರಿಯಾದ ಲಿಂಗಾಯತ ಧರ್ಮವನ್ನು ಕೊಟ್ಟರು. ಒಂದು ಧರ್ಮ ಎನಿಸಿಕೊಳ್ಳಬೇಕಾದರೆ ಅದಕ್ಕೆ ದಯೆಯು ಮೂಲ ತಳಹದಿಯಾಗಬೇಕು ಎನ್ನುತ್ತಾರೆ.

ದಯವಿಲ್ಲದ ಧರ್ಮವದೇವುದಯ್ಯಾ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ

ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯ ನಂತಲ್ಲದೊಲ್ಲನಯ್ಯಾ

ದಯವಿಲ್ಲದುದು ಧರ್ಮವೇ ಅಲ್ಲ, ಧರ್ಮದ ಹೆಸರಿನಲ್ಲಿ ಪ್ರಾಣಿ ಬಲಿಕೊಡುವುದನ್ನು ಶರಣರು ಖಂಡಿಸುತ್ತಾರೆ. ಯಾವುದೇ ಜೀವಿಯ ಪ್ರಾಣ ತೆಗೆಯ ಬಾರದು ಎಂದು ಹೇಳಿದರೆ ಅನೇಕರು ಸಸ್ಯಗಳಿಗೂ ಜೀವವಿದೆ. ಸಸ್ಯಾಹಾರವನ್ನು ಮಾಡಬಾರದು ಎಂದು ವಾದ ಮಾಡುತ್ತಾರೆ. ಸಸ್ಯಗಳಲ್ಲಿ ಜೀವವಿದೆ ಆದರೆ ಆತ್ಮ ಇಲ್ಲ. ಸಸ್ಯಗಳಿಗೆ ಸುಖ-ದುಃಖ, ನೋವು-ನಲಿವುಗಳಿರುವುದಿಲ್ಲ ಅದಕ್ಕಾಗಿ ಸಸ್ಯಹಾರವು ಹಿಂಸೆಯಲ್ಲ. ಸಸ್ಯಗಳಲ್ಲಿ ಕ್ರಿಯೆಗೆ ಪ್ರತಿಕ್ರಿಯೆಯಿಲ್ಲ. ಆದರೆ ಪ್ರಾಣಿಗಳಲ್ಲಿ ಕ್ರಿಯೆಗೆ ಪ್ರತಿಕ್ರಿಯೆಯಿದೆ ಅವು ತಮ್ಮ ಸುಖ-ದುಃಖವನ್ನು ಪ್ರಕಟಿಸಬಲ್ಲವುಗಳಾಗಿವೆ. ಎಲ್ಲಿ ಆತ್ಮ ಇರುತ್ತದೆಯೋ ಅಂಥವನ್ನು ಕೊಂದಾಗ ಮಾತ್ರ ಅದು ಹಿಂಸೆಯಾಗುತ್ತದೆ. ಕೆಲವರು `ಮುಟ್ಟಿದರೆ ಮುನಿ' ಗಿಡವು ಕ್ರಿಯೆಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತದೆ ಎಂದು ವಾದ ಮಾಡುತ್ತಾರೆ. ಮುಟ್ಟಿದರೆ ಮುನಿ ಗಿಡವು ಮುಟ್ಟಿದಾಗ ತನ್ನ ಎಲೆಗಳನ್ನು ಮುಚ್ಚಿಕೊಂಡು ಕ್ರಿಯೆಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದರೂ ಆ ಪ್ರತಿಕ್ರಿಯೆ ವೈಚಾರಿಕವಾಗಿ ಮತ್ತು ವೈ ಜ್ಞಾನಿಕವಾಗಿಲ್ಲ. ಕಸಕಡ್ಡಿ ಏನೇ ಅದರ ಮೇಲೆ ಬಿದ್ದರೂ ಅದು ಮುಚ್ಚಿಕೊಳ್ಳುತ್ತದೆ. ಹೀಗಾಗಿ ಆತ್ಮನ ವಿಕಾಸ, ಅರಿವು ಎನ್ನುವಂಥದ್ದು ಪ್ರಾಣಿಗಳಲ್ಲಿ ವಿಕಾಸಗೊಂಡಿದೆಯೇ ಹೊರತು ಸಸ್ಯಗಳಲ್ಲಿ ಇಲ್ಲ. ಒಂದು ಬೆಳೆಯುತ್ತಿರುವ ಸಸ್ಯವನ್ನು ಚಿವುಟಿ ಹಾಕಿದರೂ ಅದು ಮತ್ತೆ ಬೆಳೆಯುತ್ತದೆ. ಆದರೆ ಯಾವುದೇ ಪ್ರಾಣಿಯ ಒಂದು ಕಾಲನ್ನು ಕತ್ತರಿಸಿದರೂ ಅದು ಮತ್ತೆ ಬೆಳೆಯುವುದಿಲ್ಲ.

ಮತ್ತೆ ಕೆಲವರು ಹಾಲು ಮಾಂಸದಿಂದಲೇ ಬರುತ್ತದೆ ಅದು ಕೂಡ ಮಾಂಸಹಾರವೇ ಎಂದು ವಾದ ಮಾಡುತ್ತಾರೆ. ಹಾಲು ಮಾಂಸಹಾರವಲ್ಲ ಅದು ಶುದ್ಧ ಸಸ್ಯಾಹಾರ. ಹಾಲನ್ನು ಪ್ರಾಣಿ ಹಿಂಸೆ ಮಾಡಿ ತೆಗೆಯುವುದಿಲ್ಲ ಹಸುವಿನ ಅಥವಾ ಎಮ್ಮೆಯ ಕರುವಿಗೆ ಸಾಕಷ್ಟು ಹಾಲನ್ನು ಬಿಟ್ಟು ಬಿಟ್ಟೇ ಹಾಲನ್ನು ಕರೆಯುತ್ತಾರೆ. ಅಲ್ಲದೇ ಹಾಲು ಹಿಂಡಿಕೊಳ್ಳದೇ ಹೋದರೆ ಕರುವನ್ನು ಹೆತ್ತ ಪ್ರಾಣಿಗೆ ತೊಂದರೆಯಾಗುತ್ತದೆ.

ಮೊಟ್ಟೆಯೂ ಕೂಡ ಮಾಂಸಹಾರವೇ. ಈಗೀಗ ಹೈಬ್ರಿಡ್ ಕೋಳಿಗಳಿಂದ ಮೊಟ್ಟೆ ಉತ್ಪಾದನೆ ಮಾಡುತ್ತಿದ್ದಾರೆ. ಅಂಥ ಮೊಟ್ಟೆಗಳಿಂದ ಮರಿ ಹುಟ್ಟಲಾರವು ಅದಕ್ಕೆ ಮೊಟ್ಟೆಯು ಸಸ್ಯಾಹಾರ ಎಂದು ಕೆಲವರ ವಾದ. ಮೊಟ್ಟೆಯಲ್ಲಿ ಮಾಂಸದ ಅಂಶವಿರುತ್ತದೆ. ಕೋಳಿಗೆ ಚುಚ್ಚು ಮದ್ದು ಕೊಟ್ಟು, ಅಂಥ ಮೊಟ್ಟೆಯಿಂದ ಪುನರುತ್ಪತ್ತಿ ಆಗದಂತೆ ಮಾಡಿರುವುದರಿಂದ ಅದರಿಂದ ಮರಿಗಳು ಹುಟ್ಟಲಾರವು. ಆದರೆ ಮೊಟ್ಟೆ ಮೂಲಭೂತವಾಗಿ ಮಾಂಸಹಾರದಲ್ಲಿಯೇ ಬರುತ್ತದೆ. ಕೆಲವರು ಪ್ರಾಣಿಗಳನ್ನು ಅಮಾನುಷವಾಗಿ ಕೊಲ್ಲುವುದನ್ನು ನೋಡಿದಾಗ ಅವರಿಗೆ ಹೃದಯವೇ ಇಲ್ಲವೇನೋ ಎನಿಸುತ್ತದೆ.

ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ
ಹಲವು ಪ್ರಾಣಿಯ ಕೊಂದು, ನಲಿನಲಿದಾಡುವ
ತನ್ನ ಮನೆಯಲೊಂದು ಶಿಶು ಸತ್ತಡೆ
ಅದಕ್ಕೆ ಮರುಗುವಂತೆ ಅವಕ್ಕೇಕೆ ಮರುಗನು?

ಜಾಲಗಾರನ ದುಃಖ ಜಗಕ್ಕೆಲ್ಲ ನಗೆಗೆಡೆ
ಇದು ಕಾರಣ ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು
ಜೀವ ಹಿಂಸೆಯ ಮಾಡುವ ಮಾದಿಗರ ನೇನೆಂಬೆನಯ್ಯಾ

ತನ್ನ ಮನೆಯಲ್ಲಿ ಯಾರಾದರೂ ಸತ್ತರೆ ಗೋಳು ಹೊಯ್ದುಕೊಂಡು ಅಳುವ ವ್ಯಕ್ತಿ, ಪ್ರಾಣಿಗಳನ್ನು ಮೀನುಗಳನ್ನು ಕೊಲ್ಲುವಾಗ ಏಕೆ ಮರುಗುವುದಿಲ್ಲ? ಅಲ್ಲಿ ಅವರ ಹೃದಯ ಕಲ್ಲಾಗಿರುತ್ತದೆ. ಇಂಥ ಹೃದಯದಲ್ಲಿ ದೇವನಿರಲಾರ. ಸರ್ವಜ್ಞ ಕವಿಯೂ ಕೂಡ ಪ್ರಾಣಿ ಹಿಂಸೆ ಮಾಡುವವರು ನರಕಕ್ಕೆ ಹೋಗಬೇಕಾಗುತ್ತದೆ ಎನ್ನುತ್ತಾನೆ.

ಅಡಗು, ಸುರೆ, ಕಟಕ, ಪಾರದ್ವಾರ, ಪರಪಾಕ ಮುಂತಾದ
ಇಂತಿವ ಬೆರೆಸುವರ ನಾ ಬೆರಸೆನೆಂದು, ಅವರ ನಿರೀಕ್ಷಿಸೆನೆಂದು,
ಮತ್ತಿದ ಮರೆದು ಕೊಂಡು ಕೊಟ್ಟೆನೆಂದು ತ್ರಿವಿಧದಾಸೆಯ ಕುರಿತು
ಮತ್ತವರ ಸಂಗವ ಮಾಡಿದೆನಾದಡೆ,
ಲಿಂಗಕ್ಕೆ ಸಲ್ಲ, ಜಂಗಮಕ್ಕೆ ದೂರ, ಪ್ರಸಾದವಿಲ್ಲ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ವ್ರತಭ್ರಷ್ಟನೆಂದು ಬಿಡುವೆ.

ಅಡಗು = ಮಾಂಸ, ಸುರೆ = ಮದ್ಯ, ಕಟಕ = ಮೋಸ, ಕಪಟ, ಪಾರದ್ವಾರ = ಪರಸ್ತ್ರೀಲಂಪಟತ್ವ
ಅಂದರೆ ಲಿಂಗವಂತನಾದವನು ಮಾಂಸ ಮದ್ಯ ಮೋಸ ಪರಸ್ತ್ರೀ ಸಂಗದಲ್ಲಿ ತೊಡಗಿರುವವರ ಜೊತೆಗೆ ನಾನು ಬೆರೆಯಲಾರೆ, ಅಂದರೆ ಅವರ ಸಂಗ ಮಾಡಲಾರೆ ಎಂಬುದನ್ನ ಇಲ್ಲಿ ಹೇಳಿದ್ದಾರೆ.

ಕೆಲ ತಿಳಿಗೇಡಿಗಳು ನಮ್ಮ ಬಸವಣ್ಣನವರು ಒಂದು ಸಂದರ್ಭದಲ್ಲಿ ಹೇಳಿದ ವಚನವನ್ನು ತಮ್ಮ ಮುಂದಿಟ್ಟುಕೊಂಡು ಸಮಾಜಕ್ಕೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ, ಆವೊಂದು ವಚನವು ಈ ರೀತಿ ಇದೆ.
ಎಡದ ಕೈಯಲ್ಲಿ ಕತ್ತಿ, ಬಲದ ಕೈಯಲ್ಲಿ ಮಾಂಸ,
ಬಾಯಲಿ ಸುರೆಯ ಗಡಿಗೆ,
ಕೊರಳಲಿ ದೇವರಿರಲು ಅವರ ಲಿಂಗನೆಂಬೆ,
ಸಂಗನೆಂಬೆ, ಕೂಡಲಸಂಗಮದೇವಾ,
ಅವರ ಮುಖಲಿಂಗಿಗಳೆಂಬೆನು.

ಎಂದಿದ್ದಾರೆ, ಈ ವಚನದ ಭಾವರ್ಥ ಈ ರೀತಿಯಾಗಿ ಇದೆ.ಅಪ್ಪ ಬಸವಣ್ಣನವರು ಮಾತೃ ಹೃದಯವಂತರಾಗಿದ್ದು, ಅಂದಿನ ಎಲ್ಲ ಶೋಷಿತ ಧಮನಿತ ದಲಿತರನ್ನ ಅಪ್ಪಿಕೊಂಡು, ಅವರ ಮನ ಪರಿವರ್ತನೆ ಮಾಡುವ ಮೂಲಕ ವಚನಚಳುವಳಿಯನ್ನ ಆರಂಭಿಸಿದರು. ಅವರಿಗೆ ಇಷ್ಟಲಿಂಗ ಕರುಣಿಸುವ ಮುಖಾಂತರ ಸರ್ವಸಮಾನತೆಯನ್ನ ಘೋಷಿಸಿದರು. ಅಂದು ಬಸವಣ್ಣನವರು ಸ್ತ್ರೀಪರ, ಕಳ್ಳರಪರ, ವೇಶ್ಯೆಯರಪರ, ಹೀಗೆ ಎಲ್ಲರ ಪರ ಧ್ವನಿಯಾಗಿ ಅವರಿಗೆ ಸಾಮಾಜಿಕ ನ್ಯಾಯವನ್ನ ಕೊಡಿಸಿದರು. ಅವರೆಲ್ಲರು ತಮ್ಮ ಪೂರ್ವಶ್ರಯವನ್ನ ಕಳೆದುಕೊಂಡು ವಚನಕ್ರಾಂತಿಗೆ ಮುಂದಾದರು. ಅವರೆಲ್ಲರಗಳಲ್ಲಿಯೂ ಮಾಂಸಹಾರಿಗಳು, ಮದ್ಯಪಾನ ಮಾಡುವವರು ಸಹ ಇದ್ದರು. ಅವರಿಗೂ ಸಹ ಇಷ್ಟಲಿಂಗವನ್ನ ಧರಿಸಿಕೊಳ್ಳಬೇಕೆಂಬ ಆಸೆ ಇತ್ತು, ಆದರೆ ಅವರು ನಾವು ಮಾಂಸಹಾರಿಗಳು ಮತ್ತು ಮದ್ಯಪಾನ ಮಾಡುವವರು ನಮಗೆ ಈ ಇಷ್ಟಲಿಂಗವನ್ನ ಧರಿಸುವ ನೈತಿಕ ಹಕ್ಕು ಇದೆ ಇಲ್ಲವೊ? ಎಂಬ ಪ್ರಶ್ನೆ ಕಾಡುವ ಸಂದರ್ಭದಲ್ಲಿ ಅವರ ಮುಖದಲ್ಲಿನ ಆಸೆಯನ್ನ ಕಂಡುಕೊಂಡು ಬಸವಣ್ಣನವರು, ಅವರಲ್ಲಿರುವ ಸಂಶಯ ಹಾಗು ಸಂಕುಚಿತ ಮನೋಭಾವವನ್ನು ಹೋಗಲಾಡಿಸಲು ಮೇಲಿನ ವಚನವನ್ನ ಅವರ ಮನ ಪರಿವರ್ತನೆ ಆಗುವ ರೀತಿಯಲ್ಲಿ ಹೇಳುತ್ತಾರೆ. ಎಡಗೈಯಲ್ಲಿ ಕತ್ತಿ, ಬಲಗೈಯಲ್ಲಿ ಮಾಂಸ, ಬಾಯಿಯಲ್ಲಿ ಮದ್ಯದ ಗಡಿಗೆ ಇದ್ದರು ಸಹ, ಆತನ ಕೊರಳಿನಲ್ಲಿ ದೇವರಿರಲು ಅಂದರೆ ಅರಿವಿನ ಕುರುಹು ಇರಲು ಅವರನ್ನು ನಾನು ಲಿಂಗವೆಂದು ಹೇಳುತ್ತೇನೆ ಮತ್ತು ಸಂಗನೆಂದು ಹೇಳುತ್ತೇನೆ ಎನ್ನುತ್ತಾರೆ ಅಪ್ಪ ಬಸವಣ್ಣನವರು. ಈ ರೀತಿ ಹೇಳಬೇಕಾದರೆ ಬಸವಣ್ಣನವರಲ್ಲಿ ಒಂದು ಕಾರಣವಿದೆ. ಅದೇನೆಂದರೆ, ಬಸವಣ್ಣನವರು ಪ್ರತಿಯೊಬ್ಬರ ಸ್ಥಾನದಲ್ಲಿ ನಿಂತುಕೊಂಡು, ಅವರ ಇರುವಿಕೆಯನ್ನು ಸೂಕ್ಷ್ಮವಾಗಿ ಗ್ರಹಿಸಿ, ತಾವು ಅವರಂತೆ ಆಡಿ, ನಂತರ ತಮ್ಮಡೆಗೆ ಸೆಳೆದುಕೊಂಡು ಮರಳಿ ಅವರು ಮತ್ತೆ ಆ ದುಶ್ಚಟಗಳಿಗೆ ಹೋಗದಂತೆ ಇಷ್ಟಲಿಂಗವನ್ನ ಅವರಿಗೆ ಕರುಣಿಸಿ ಅವರ ಬದುಕಿನ ಧಿಕ್ಕನೆ ಬದಲಾಯಿಸಿದ್ದರು. ಮುಂದೆಂದು ಅವರು ಈ ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ ಮಾಡದ ಹಾಗೆ ಅವರಲ್ಲಿ ಅಷ್ಟೊಂದು ಬದಲಾವಣೆಯನ್ನ ತಂದಿದ್ದರು ಅಪ್ಪ ಬಸವಣ್ಣನವರು. ಈ ರೀತಿಯಾಗಿ ಜನಗಳನ್ನು ಬದಲಾಯಿಸಿ ಪ್ರತಿಯೊಬ್ಬರಲ್ಲಿಯೂ ಕೂಡಲಸಂಗಮನಾಥನನ್ನ ಕಾಣತೊಡಗಿದರು. ಈ ರೀತಿಯಾಗಿ ಲಿಂಗನೆಂಬೆ, ಸಂಗನೆಂಬೆ, ಕೂಡಲಸಂಗಮದೇವಾ ಅವರ ಮುಖಲಿಂಗಿಗಳೆಂಬೆನು. ಎನ್ನುತ್ತಾರೆ ತಮ್ಮ ವಚನದ ಕೊನೆಯ ಸಾಲಿನಲ್ಲಿ, ಅಂದರೆ ನಾನು ಅಂಥವರನ್ನು ಸಾಕ್ಷಾತ್ ಲಿಂಗಸ್ವರೂಪಿಗಳೆಂದು ಭಾವಿಸುತ್ತೇನೆ, ಎಂಬುದಾಗಿ ಬಸವಣ್ಣನವರು ಇಲ್ಲಿ ಹೇಳಿದ್ದಾರೆ. ಈ ರೀತಿಯಾಗಿ ಮಾಂಸಹಾರಿಗಳನ್ನ, ಮದ್ಯಪಾನ ಮಾಡುವವರನ್ನ, ಇನ್ನು ಮುಂತಾದ ದುಶ್ಚಟಗಳಿಗೆ ಬಲಿಯಾದವರನ್ನ ಅವರಿಗೆ ಇಷ್ಟಲಿಂಗ ಕರುಣಿಸುವ ಮುಖಾಂತರ ಅವರನ್ನು ಬದಲಾಯಿಸಲು ಈ ರೀತಿಯಾಗಿ ಬಸವಣ್ಣನವರು ಹೂಡಿದ ತಂತ್ರಗಾರಿಕೆ ಅಷ್ಟೆ, ಬಸವಣ್ಣನವರು ಇಲ್ಲಿ ಮಾಂಸಹಾರವನ್ನ ಸೇವನೆ ಮಾಡುವರನ್ನಾಗಲಿ ಮತ್ತು ಮದ್ಯಪಾನ ಮಾಡುವವರನ್ನಾಗಲಿ ಸಮರ್ಥಿಸಿಕೊಂಡಿಲ್ಲ ಎಂಬುದನ್ನ ನಾವಿಲ್ಲಿ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಪ್ರತಿಯೊಬ್ಬರ ಮನಸ್ಥಿತಿಯನ್ನ ಅರ್ಥ ಮಾಡಿಕೊಂಡು, ಅವರನ್ನು ಬದಲಾಯಿಸುವ ಶಕ್ತಿ ಬಸವಣ್ಣನವರಿಗೆ ಮಾತ್ರ ಇತ್ತು ಎಂಬುದನ್ನ ನಾನಿಲ್ಲಿ ಹೇಳಲು ಇಚ್ಛಿಸುತ್ತೇನೆ

ಕೊಲ್ಲದಿಪ್ಪ ಧರ್ಮವೆಲ್ಲರಿಗೆ ಸನುಮತವು
ಅಲ್ಲದನು ಮೀರಿ ಮಾಡುವನು| ನರಕಕ್ಕೆ
ನಿಲ್ಲದೆ ಹೋಹ ಸರ್ವಜ್ಞ||

ಗುರು ಬಸವಣ್ಣನವರು, ನಮಗೆ ಸಪ್ತಸೂತ್ರದ ವಚನ ಕೊಟ್ಟಿದ್ದಾರೆ.

ಕಳಬೇಡ,ಕೊಲಬೇಡ, ಹುಸಿಯ ನುಡಿಯಲುಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

ಇಂದಿನ ಕಾನೂನಿನ ಪ್ರಕಾರ ಕೊಲೆ ಮಾಡಿದವನಿಗೆ ಎಷ್ಟು ಶಿಕ್ಷೆ ದೊರಕುತ್ತದೆಯೋ ಕೊಲೆ ಮಾಡಲು ಪ್ರೇರಣೆ, ಪ್ರೋತ್ಸಾಹ ನೀಡಿದವರಿಗೂ ಅಷ್ಟೇ ಶಿಕ್ಷೆ ದೊರಕುತ್ತದೆ. ಅದೇ ರೀತಿ ಮಾಂಸಹಾರ ಸೇವನೆ ಮಾಡುವಂಥವರು ಯಾರೇ ಇರಲಿ ಅವರೂ ಅಪರೋಕ್ಷವಾಗಿ ಕೊಲೆ ಮಾಡಿದಂತೆಯೇ. ಅದಕ್ಕೆ ದೇವರು ಶಿಕ್ಷೆ ಕೊಟ್ಟೇ ಕೊಡುತ್ತಾನೆ. ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಹಸುವಿಗೆ ಅತ್ಯಂತ ಗೌರವದ ಸ್ಥಾನವಿದೆ. `ಕಾಮಧೇನು' ಎಂದು ಭಾರತೀಯ ಹಸುವನ್ನು ಕರೆಯುತ್ತಾರೆ. ಕಾರಣ, ಅದರ ಮೂತ್ರ, ಸಗಣಿ ಎಲ್ಲವೂ ಅತ್ಯಂತ ಉಪಯುಕ್ತವಾದುದು. ಇಂದು ಮಾಂಸಹಾರಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಗೋ-ಸಂತತಿ ಅಳಿಯುತ್ತಿದೆ ಇದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ. ಮಾಂಸಹಾರ ಮಾಡುವುದರಿಂದ ರಕ್ತದೊತ್ತಡ ಮತ್ತು ಹೃದಯಾಘಾತದಂಥ ಭಯಂಕರ ಕಾಯಿಲೆ ಬರುತ್ತವೆ. ದೇಹದಲ್ಲಿ ಕೊಬ್ಬಿನಾಂಶ ಜಾಸ್ತಿಯಾಗುತ್ತದೆ. ಸಾಮನ್ಯವಾಗಿ ಸಸ್ಯಹಾರಿಗಳು ಸಾತ್ವಿಕರಾಗಿರುತ್ತಾರೆ, ಆದರೆ ಮಾಂಸಹಾರಿಗಳಲ್ಲಿ ಕ್ರೂರ ಪ್ರವೃತ್ತಿ ಬೆಳೆದಿರುತ್ತದೆ. 100 ಸಸ್ಯಾಹಾರಿಗಳು ಬದುಕಲಿಕ್ಕೆ, ದವಸ, ಧಾನ್ಯ ಬೆಳೆಯಲು ಒಂದು ಎಕರೆ ಜಾಗ ಸಾಕಾದರೆ, ಅದೇ 100 ಮಾಂಸಹಾರಿಗಳು ಬದುಕಲಿಕ್ಕೆ ಮೂರು ಎಕರೆ ಜಮೀನು ಬೇಕಾಗುತ್ತದೆ. ಕಾರಣ ಅವರು ತಿನ್ನುವ ಪ್ರಾಣಿಗಳನ್ನು ಕೂಡ ಸಾಕಬೇಕಾಗುತ್ತದೆಯಲ್ಲ ಅದಕ್ಕೆ. ``ನಿಸರ್ಗವು ಎಲ್ಲರ ಅವಶ್ಯಕತೆಗಳನ್ನು ಪೂರೈಸುತ್ತದೆಯೇ ಹೊರತು ಲೋಭವನ್ನಲ್ಲ" ಎಂದು ಗಾಂಧೀಜಿ ಹೇಳಿದ್ದಾರೆ.

ಲಿಂಗಾಯತರಾದವರು, ಮಾಂಸಹಾರಿಗಳ ಮನೆಯಲ್ಲಿ ಪ್ರಸಾದವನ್ನು ಕೂಡ ಮಾಡಬಾರದು ಎನ್ನುವ ನಿಯಮವಿದೆ. ಆದರೆ ಇಂದು ಅನೇಕ ಜನ ಲಿಂಗಾಯತರೇ ಮಾಂಸಹಾರ ಮಾಡುತ್ತಿರುವುದರಿಂದ ಇತರ ಧರ್ಮವಂತರೂ ಕೂಡ ತಲೆ ತಗ್ಗಿಸುವಂತಾಗಿದೆ. ನಾನು ಅನೇಕರಿಗೆ ಮಾಂಸಹಾರ ಒಳ್ಳೆಯದಲ್ಲ ಮಾಡಬೇಡಿರಿ ಎಂದು ಹೇಳಿದಾಗ. ``ಅನೇಕ ಜನ ಲಿಂಗಾಯತರೂ ನನಗೆ ಗೆಳೆಯರಿದ್ದಾರೆ ಅವರೆಲ್ಲರೂ ಮಾಂಸಹಾರ ಮಾಡುತ್ತಾರೆ" ಎಂದರು. ಇದು ಕೇಳಿ ನನಗಾದ ನೋವು ಅಷ್ಟಿಷ್ಟಟಲ್ಲ. ಅನೇಕರು ಮಾಂಸಹಾರ ಮಾಡಿದರೆ ಶಕ್ತಿ ಬರುತ್ತದೆ ಎನ್ನುತ್ತಾರೆ ಇದು ಸುಳ್ಳು. ಮಾಂಸಹಾರವನ್ನು ಕೇವಲ ನಾಲಿಗೆಯ ರುಚಿಗಾಗಿ ಮಾಡುತ್ತಾರೆ ಎಂದು ಕೇಳಿದ್ದೇನೆ.

ನಾಲಿಗೆಯ ಕಟ್ಟಿದವ ಕಾಲಂಗೆ ದೂರಹನು
ನಾಲಿಗೆಯ ರುಚಿಯ | ಮೇಲಾಡುತ್ತಿರಲವನ
ಕಾಲ ಹತ್ತಿರವು ಸರ್ವಜ್ಞ ||

ಎಂದು ಸರ್ವಜ್ಞ ಕವಿಯೂ ಹೇಳುತ್ತಾರೆ. ಸಸ್ಯಾಹಾರದಲ್ಲಿ ಇರುವಷ್ಟು ಶಕ್ತಿ ಮಾಂಸಹಾರದಲ್ಲಿಲ್ಲ. ಜಗತ್ತಿನ ಅತ್ಯಂತ ಶಕ್ತಿ ಶಾಲಿಯಾದ ಪ್ರಾಣಿ ಆನೆ, ಅದು ಸಸ್ಯಾಹಾರಿ. ಜಗತ್ತಿನ ಅತ್ಯಂತ ಚುರುಕಾದ ಪ್ರಾಣಿ ಜಿಂಕೆ ಅದು ಸಸ್ಯಾಹಾರಿ, ಓಟಕ್ಕೆ ಪ್ರಸಿದ್ಧವಾದ ಪ್ರಾಣಿ ಕುದುರೆ ಅದು ಸಸ್ಯಾಹಾರಿ ಮರುಭೂಮಿಯ ಹಡಗು (Ship of the Desert) ಎಂದೇ ಪ್ರಸಿದ್ಧವಾದ ಒಂಟೆ, ಅದೂ ಸಸ್ಯಾಹಾರಿಯೇ. ವಿದ್ಯುತ್ ಉಪಕರಗಳ ಸಾಮರ್ಥವನ್ನು ಮತ್ತು ಶಕ್ತಿಯನ್ನು, ಅಶ್ವಶಕ್ತಿ (Horse Power)ಯಲ್ಲಿ ಅಳತೆ ಮಾಡುತ್ತಾರೆ. ನೀರೆತ್ತುವ ಪಂಪಿಗೆ ಜೋಡಿಸಿರುವ ಮೋಟಾರನ್ನು 3 ಅಶ್ವಶಕ್ತಿ 6 ಅಶ್ವಶಕ್ತಿ ಎಂದು ಅಳತೆ ಮಾಡುತ್ತಾರೆಯೇ ಹೊರತು ಹುಲಿಶಕ್ತಿ, ಸಿಂಹ ಶಕ್ತಿ ಎಂದು ಅಳತೆ ಮಾಡುವುದಿಲ್ಲ. ಆದ್ದರಿಂದ ಬಂಧುಗಳೇ ಇನ್ನೂ ಯಾರಾದರೂ ಮಾಂಸಹಾರ ಮಾಡುತ್ತಿದ್ದರೆ ದಯವಿಟ್ಟು ಬಿಟ್ಟು ಬಿಡಿ.

ಇಲ್ಲಿಯವರೆಗೆ ಅನೇಕರು ಮಾಂಸಹಾರ ಮಾಡಿದ್ದೇನೆ. ಇದಕ್ಕೆ ಏನು ಪರಿಹಾರ, ಈಗಾಗಲೇ ನನಗೆ ಪಾಪ ಬಂದಿದೆ ಎಂದು ಯಾರಿಗಾದರೂ ಪಾಪ ಪ್ರಜ್ಞೆ ಕಾಡುತ್ತಿದ್ದರೆ, ಮುಂದೆ ಏನು ಮಾಡಬೇಕು ಎಂದು ಯೋಚನೆಯುಂಟಾಗುತ್ತಿದ್ದರೆ, ಅದಕ್ಕೊಂದು ಸುಲಭವಾದ ದಾರಿಯಿದೆ. ಪ್ರತಿಯೊಬ್ಬರೂ ತಪ್ಪು ಮಾಡುತ್ತಾರೆ. ಅದಕ್ಕೆ ಪಶ್ಚಾತಾಪವೊಂದೇ ಪರಿಹಾರ. ಇಂಥವರನ್ನು ಗುರು ಬಸವಣ್ಣನವರು ಅಭಯಹಸ್ತ ನೀಡಿ ಕರೆಯುತ್ತಿದ್ದಾರೆ.

ಎಲವೂ ಎಲವೋ ಪಾಪಕರ್ಮವ ಮಾಡಿದವನೆ
ಎಲವೋ ಎಲವೋ ಬ್ರಹ್ಮ ಹತ್ಯವ ಮಾಡಿದವನೆ
ಒಮ್ಮೆ ಶರಣೆನ್ನೆಲವೋ
ಸರ್ವಪ್ರಾಯಶ್ಚಿತಕ್ಕೆ ಹೊನ್ನ ಪರ್ವತಂಗಳಾದಡೆಯೂ ಸಾಲವು
ಓರ್ವಂಗೆ ಶರಣೆನ್ನು ನಮ್ಮ ಕೂಡಲಸಂಗಮದೇವಂಗೆ.

ನಾವು ಮಾಡಿರುವ ಪಾಪಗಳಿಗಾಗಿ ಪ್ರಾಯಶ್ಚಿತ ಮಾಡಿಕೊಳ್ಳಲು ಹೋದರೆ, ಹೊನ್ನಿನ ಪರ್ವತಗಳಾದರೂ ಸಾಲವು ಎಷ್ಟೇ ದುಡ್ಡು ಖರ್ಚು ಮಾಡಿ, ಗುಡಿಗುಂಡಾರ ಸುತ್ತಿದರೂ ಪಾಪ ಹೋಗಲಾರದು. ಅದಕ್ಕಾಗಿ ದೇವರಿಗೆ ಗುರುವಿಗೆ ಶರಣೆಂದು ಪಶ್ಚಾತ್ತಾಪದ ಕಣ್ಣೀರಿನನಲ್ಲಿ ಮಿಂದು ಪಾವನರಾಗಬೇಕು.

*
Previous ಯೋಗದ ಬಗ್ಗೆ ಮಾಡಿದ ಕಾರ್ಯದಿಂದ ಜ್ಞಾನ ಸಾಧನೆಯಾಗಬೇಕು Next
cheap jordans|wholesale air max|wholesale jordans|wholesale jewelry|wholesale jerseys