Previous ನಿಮ್ಮನ್ನು ನೀವು ತಿದ್ದಿಕೊಳ್ಳಿ ಲಿಂಗಾಯತರ ದೇವರ ಸ್ವರೂಪ Next

ಮದುವೆ, ಕುಟುಂಬ ಸಂಘಟನೆ

*

ದಂಪತಿಗಳು ಏಕ ದೃಷ್ಟಿಯಿಂದ ಪೂಜಿಸಿ/ಸಾಧಿಸಿದರೆ ದೇವನನ್ನು ಒಲಿಸಬಹುದು

ಮೋಕ್ಷ/ಮುಕ್ತಿ ಸನ್ಯಾಸಿ ಅಥವಾ ಸಾಧು (ಋಷಿ) ಗಳಿಗೆ ಮಾತ್ರ ಸಿಗುತ್ತದೆ ಎನ್ನುವ ನಂಬಿಕೆಯನ್ನು ಶರಣರು ಅಲ್ಲಗಳೆದು ದಂಪತಿಗಳು ಏಕ ದೃಷ್ಟಿಯಿಂದ ಪೂಜಿಸಿ/ಸಾಧಿಸಿದರೆ ದೇವನನ್ನು ಒಲಿಸಬಹುದು ಎಂದು ತಿಳಿಸಿ ಆಚರಿಸಿ ತೋರಿದರು.

*

ಶರಣರಿಗೆ ಕುಟುಂಬ ಕಲ್ಯಾಣ, ಕುಟುಂಬ ಸಂಘಟನೆ, ಕ್ಷೇಮಾಭಿವೃದ್ಧಿಗಳೂ ಅಷ್ಟೇ ಮಹತ್ವದ್ದಾಗಿವೆ. ಅವರು ಸಂಸಾರದಲ್ಲಿದ್ದುಕೊಂಡು ಮೌಲ್ಯ, ಆದರ್ಶಗಳನ್ನು ಆಚರಿಸಿ ಸದ್ಗತಿಯನ್ನು ಸಾಧಿಸಬೇಕೆಂದು ಅದನ್ನು ಅನುಷ್ಠಾನಗೊಳಿಸಿ ನೆಮ್ಮದಿ ಜೀವನ ಬದುಕಿದರು. ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವುದು ಒಬ್ಬೊಬ್ಬರೇ ತಪಸ್ಸು ಮಾಡುವುದಕ್ಕಿಂತಲೂ ಹೆಚ್ಚಿನ ತಪಸ್ಸಾಗುತ್ತದೆ. ಸತಿ-ಪತಿಯರ ವಿಚಾರ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯಗಳಿಂದ ತರ್ಕಿಸಿ, ನಿರ್ಣಯಗಳನ್ನು ತೆಗೆದುಕೊಂಡು ಒಬ್ಬರಿಗೊಬ್ಬರು ಪೂರಕ ಪಾತ್ರಗಳನ್ನು ಸಾಧಿಸಿ, ಸಂಘಟನಾ ವಿಧಾನವನ್ನು ಅನುಸರಿಸಿದರು. ಆದರೆ ಈಗ ಸಮನತೆಯ ನೆಪದಲ್ಲಿ ಸತಿ-ಪತಿಗಳು ಸ್ಪರ್ಧೆಗಿಳಿಯುತ್ತಾರೆ (Competitive equality may lead to divorce and family disorganisation. But complimentary equality leads to family welfare) ಅಂದರೆ ಸ್ಪರ್ಧಾತ್ಮಕ ಸಮಾನತೆ ವಿಚ್ಛೇದನಕ್ಕೆ ಕಾರಿ ಮಾಡಿಕೊಡುತ್ತದೆ. ಪೂರಕ ಸಮಾನತೆಯು ಕುಟುಂಬ ಕ್ಷೇಮಕ್ಕೆ ಸಹಾಯವಾಗುತ್ತದೆ. ಕೆಳಗಿನ ವಚನಗಳು ಇದನ್ನು ಪುಷ್ಟೀಕರಿಸುತ್ತವೆ.

ಸತಿಪುರುಷರಿಬ್ಬರೂ ಪ್ರತಿದೃಷ್ಟಿಯಾಗಿ ಮಾಡಬಲ್ಲಡೆ
ಅದೆ ಮಾಟ,
ಕೂಡಲಸಂಗಮದೇವರ ಕೂಡುವ ಕೂಟ.-ಸವಸ-೧/೧೩೭೬[1]

ಉಭಯದೃಷ್ಟಿ ಏಕದೃಷ್ಟಿಯಲ್ಲಿ ಕಾಬಂತೆ
ದಂಪತಿ ಏಕಭಾವವಾಗಿ ನಿಂದಲ್ಲಿ,
ಗುಹೇಶ್ವರಲಿಂಗಕ್ಕೆ ಅರ್ಪಿತವಾಯಿತ್ತು, ಸಂಗನಬಸವಣ್ಣ. /೯೬೪[1]

ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ.
ಸತಿಪತಿಗಳೊಂದಾಗದವರ ಭಕ್ತಿ
ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥ.

ಧರ್ಮ ಮತ್ತು ಲೈಂಗಿಕ ಜೀವನ

ಕಾಮವು ಜೀವಿಯ ಅತ್ಯುಕ್ಕಟ ಮೂಲಪ್ರವೃತ್ತಿ (instinct)ಗಳಲೊಂದು. ಅದು ಸ್ವಾಭಾವಿಕವೇ ಆದರೂ ಅದನ್ನು ನೈತಿಕವಾಗೇ (ದಾಂಪತ್ಯದ ಮೂಲಕ ಮಾತ್ರ) ತೃಪ್ತಿಪಡಿಸಿಕೊಳ್ಳಬೇಕು. ಅಷ್ಟೇ ಹೊರತು ಪರಸ್ತ್ರೀ ವ್ಯಾಮೋಹ ಒಳ್ಳೆಯದಲ್ಲ. ಏಕೆಂದರೆ
(ಅ) ಗ೦ಡನು ತನ್ನ ಹೆಂಡತಿಗೆ ದ್ರೋಹ ಬಗೆದಂತಾಗುತ್ತದ;
(ಆ) ಪರಶಿವ ಅದನ್ನು ಮೆಚ್ಚುವುದಿಲ್ಲ ಮತ್ತು
(ಇ) ಕೌಟುಂಬಿಕ ನೆಮ್ಮದಿ ಹಾಳಾಗುತ್ತದೆ.
ಆದರೆ ಕಾಮತೃಪ್ತಿಯನ್ನು ನಾವು ನೈತಿಕವಾಗಿ ಪಡೆದರೂ ಸಹ, ಅದು ನಮ್ಮ ಅದ್ಯಾತ್ಮಿಕ ದ್ಯೇಯವನ್ನು ಮರೆಸುವಷ್ಟು ನಾವು ಅದರಲ್ಲಿ ಆಸಕ್ತರಾಗಿರಬಾರದು.

ಭಕ್ತನ ಮನ ಹೆಣ್ಣಿನೊಳಗಾದಡೆ, ವಿವಾಹವಾಗಿ ಕೊಡುವುದು.
ಭಕ್ತನ ಮನ ಮಣ್ಣಿನೊಳಗಾದಡೆ, ಕೊಂಡು ಆಲಯವ ಮಾಡುವುದು.
ಭಕ್ತನ ಮನ ಹೊನ್ನಿನೊಳಗಾದಡೆ, ಬಳಲಿ ದೊರಕಿಸುವುದು ನೋಡಾ.
ಕಪಿಲಸಿದ್ಧಮಲ್ಲಿಕಾಜುಮಾ, -೪: ೮೩೬[1]

[1] ಈ ತರಹದ ಸಂಖ್ಯೆಯ ವಿವರ: ಸವಸ-1/1376 :- ಸಮಗ್ರ ವಚನ ಸಂಪುಟ-1, ವಚನ ಸಂಖ್ಯೆ-1376 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ನಿಮ್ಮನ್ನು ನೀವು ತಿದ್ದಿಕೊಳ್ಳಿ ಲಿಂಗಾಯತರ ದೇವರ ಸ್ವರೂಪ Next