Previous ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ ವಿದ್ಯೆಯ ಬಗ್ಗೆ ಶರಣರ ವಚನಗಳು. Next

ಆವ ವಿದ್ಯೆಯ ಕಲಿತಡೇನು? ಪಾಠಕನಲ್ಲದೆ ಜ್ಞಾನಿಯಲ್ಲ!

*

ವಚಿಸಿ ಅನುಭವಿಯಾಗದವ ಪಿಶಾಚಿಯಯ್ಯಾ!

1615
ವಚಿಸಿ ಅನುಭವಿಯಾಗದವ ಪಿಶಾಚಿಯಯ್ಯಾ;
ವಚಿಸಿ ಅನುಭವಿಯಾದವ ಪಂಡಿತನಯ್ಯಾ.
ವಿದ್ಯೆಯೆಂಬುದು ಅಭ್ಯಾಸಿಕನ ಕೈವಶ.
ಅವಿದ್ಯೆಯೆಂಬುದು ಸರ್ವರಲ್ಲಿ ವಶ.
ವಿದ್ಯಾವಿದ್ಯೆಯನರಿತು ಜಗದ್ವೇದ್ಯನಾಗಬಲ್ಲಡೆ,
ಮಹಾಪಂಡಿತ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.

1629
ವಿದ್ಯೆಯನರಿಯದವ ಗುದ್ದಾಟಕ್ಕೊಳಗಾದ.
ಆ ವಿದ್ಯೆಯನರಿಯದವ ಪ್ರಪಂಚವ ಒದ್ದುಬಿಟ್ಟ
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.

1978
ಪರತರವ ಸಾಧಿಸುವಡೆ ಪ್ರಪಂಚದ ವಿಷಯ ಅಳಿದಿರಬೇಕು.
ರಾಜ್ಯವ ಸಾಧಿಸುವಡೆ ಪ್ರಾಣದಾಸೆಯ ಮರೆದಿರಬೇಕು.
ವಿದ್ಯೆಯ ಸಾಧಿಸುವಡೆ ಅನ್ಯ ಆಸೆಯ ಮರೆದಿರಬೇಕು.
ಕಪಿಲಸಿದ್ಧಮಲ್ಲಿಕಾರ್ಜುನನ ಕೂಡುವಡೆ
ಸಂಶಯವಳಿದು ನಿಶ್ಚಿಂತನಾಗಬೇಕು.

ಪರತ್ರ = ಪರಲೋಕ
ಪರ = ಮೋಕ್ಷ, ಕೈಲಾಸ, ಸ್ವರ್ಗ, ಕೈವಲ್ಯ, ಶ್ರೇಷ್ಠ, ಬ್ರಹ್ಮ

66
ಆವ ವಿದ್ಯೆಯ ಕಲಿತಡೇನು
ಸಾವ ವಿದ್ಯೆ ಬೆನ್ನಬಿಡದು.
ಅಶನವ ತೊರೆದಡೇನು, ವ್ಯಸನವ ಮರೆದಡೇನು
ಉಸುರ ಹಿಡಿದಡೇನು, ಬಸುರ ಕಟ್ಟಿದಡೇನು
ಚೆನ್ನಮಲ್ಲಿಕಾರ್ಜುನದೇವಯ್ಯಾ,
ನೆಲ ತಳವಾರನಾದಡೆ ಕಳ್ಳನೆಲ್ಲಿಗೆ ಹೋಹನು

ಸಾವ = ಸಾವು (death); ಸಾವ ವಿದ್ಯೆ ಬೆನ್ನಬಿಡದು. = ಸಾವು ಎನ್ನುವುದು ಯಾರನ್ನು ಬಿಡುವುದಿಲ್ಲ.
ಅಶನ = ಅನ್ನ, ಆಹಾರ, ಊಟ, (food)
ವ್ಯಸನ = ಚಟಗಳು, ಕೆಟ್ಟ ಅಭ್ಯಾಸಗಳು. (bad habits)
ಉಸುರ = ಉಸಿರು, ಶ್ವಾಸ, (breath )
ಬಸುರ = ಗರ್ಭಿಣಿ, (pregnant)
ತಳವಾರ = ಕಳ್ಳರನ್ನು ಹಿಡಿಯುವವನು, ಸಿಪಾಯಿ, ರಕ್ಷಕ ಭಟ, ಪೊಲಿಸ್, (Police)

449
ಅಕ್ಷರ, ಗಣಿತ, ಗಾಂಧರ್ವ, ಜ್ಯೋತಿಷ್ಯ, ಆತ್ಮವಿದ್ಯೆ,
ತರ್ಕ, ವ್ಯಾಕರಣ, ಅಮರ, ಸಿಂಹ, ಛಂದಸ್ಸು,
ನಿಘಂಟು, ಶಾಲಿಹೋತ್ರ, ಗ್ರಹವಾದ, ಗಾರುಡ, ದ್ಯೂತ,
ವೈದಿಕಶಾಸ್ತ್ರ, ಸಾಮುದ್ರಿಕಶಾಸ್ತ್ರ, ಲಕ್ಷಣಶಾಸ್ತ್ರ, ಅಶ್ವಶಿಕ್ಷೆ, ಗಜಶಿಕ್ಷೆ,
ಗೋಕರ್ಣ, ದಾಡಾಬಂಧ, ಮೂಲಿಕಾಸಿದ್ಧಿ, ಭೂಚರತ್ವ, ಖೇಚರತ್ವ,
ಅತೀತ, ಅನಾಗತ, ವರ್ತಮಾನ, ಸ್ಥೂಲ, ಸೂಕ್ಷ್ಮ,
ಇಂದ್ರಜಾಲ, ಮಹೇಂದ್ರಜಾಲ, ವಡ್ಯಾನಚೇಷ್ಟೆ, ಪರಕಾಯಪ್ರವೇಶ, ದೂರದೃಷ್ಟಿ,
ದೂರಶ್ರವಣ, ಋಗ್ಯಜುಃಸಾಮಾಥರ್ವಣ, ಶ್ರುತಿ, ಸ್ಮೃತಿ, ಆಯುರ್ವೇದ,
ನಷ್ಟಿಕಾಮುಷ್ಟಿ, ಚಿಂತನೆ, ಚೋರವಿದ್ಯೆ, ಅಮೃತೋದಯ, ಭಾಷಾಪರೀಕ್ಷೆ,
ವೀಣಾವಿದ್ಯೆ, ಭೃಂಗಿವಿದ್ಯೆ, ಮಲ್ಲವಿದ್ಯೆ, ಶಸ್ತ್ರವಿದ್ಯೆ, ಧನುರ್ವಿದ್ಯೆ,
ಅಗ್ನಿಸ್ತಂಭ, ಜಲಸ್ತಂಭ, ವಾಯುಸ್ತಂಭ, ವಾದವಶ್ಯ, ಅಂಜನಾಸಿದ್ಧಿ,
ಫುಟಿಕಾಸಿದ್ಧಿ, ಮಂತ್ರತಂತ್ರಸಿದ್ಧಿ
ಇವೆಲ್ಲವ ಕಲಿತಡೇನು ಅರುವತ್ನಾಲ್ಕು ವಿದ್ಯಾಪ್ರವೀಣನೆನಿಸಿಕೊಂಬನಲ್ಲದೆ
ಲಿಂಗವಂತನೆನಿಸಿಕೊಂಬುದಿಲ್ಲ. ಲಿಂಗವುಳ್ಳ ಶಿವಭಕ್ತಂಗೆ
ಇವರೆಲ್ಲರೂ ಕೂಡಿ ಸರಿಬಾರದೆಂದ ನಮ್ಮ ಕಲಿದೇವರದೇವ.

ಅಮರ (ಬೆ) = ನಿತ್ಯಪವವಿ
ಸಿಂಹ (ಬೆ) = ನಿರಹಂಕಾರ, ಸುಜ್ಞಾನ
ಶಾಲಿ = ವಸ್ತ್ರ, ಅಕ್ಕಿ, ಭತ್ತ

370
ವಿದ್ಯೆಯ ಬಹಳ ಕಲಿತಡೇನು ಭಕ್ತಿಯಲ್ಲಿ ಶುದ್ಧನಲ್ಲದವನು.
ಬುದ್ಧಿಯಲ್ಲಿ ವಿಶೇಷವೆನಿಸಿದಡೇನು ಭಕ್ತಿಯಲ್ಲಿ ಬಡವನಾದನು.
ಅರ್ಥದಲ್ಲಿ ಅಧಿಕನಾದಡೇನು ಕರ್ತೃಶಿವನ ನೆನೆಯದವನು.
ಮದ್ದುಗುಣಿಕೆಯ ತಿಂದ ಮದೋನ್ಮತ್ತರ
ಎನ್ನತ್ತ ತೋರದಿರಯ್ಯ ಅಖಂಡೇಶ್ವರಾ.

1630
ವಿದ್ಯೆ ಎಂದಡೆ ಭಾರತ-ರಾಮಾಯಣವಲ್ಲ.
ಭಾರತವೆಂದಡೆ ಭರತದೇಶದಲ್ಲಿ ಜನಿಸಿ,
ಕಾಮಿನಿಯರ ಸೋಗುಹಾಕಿ, ಆ ದೇಶಕ್ಕಧಿಪತಿಯಾದ ಕಥೆಯೆ ಭಾರತವಯ್ಯಾ.
ರಾಮಾಯಣವೆಂದಡೆ, ಆದಿನಾರಾಯಣನು ಪೃಥ್ವಿಯೊಳು ಹುಟ್ಟಿ,
ರಾಮನೆಂಭಧಾನವ ಧರಿಸಿ, ಸರ್ವರಂತೆ ಪ್ರಪಂಚವ ಮಾಡಿ,
ರಾಕ್ಷಸರ ಗರ್ವವನಳಿದುದೆ ರಾಮಾಯಣ.
ಮಾಡಿ ಉದ್ಧಟವಾದಲ್ಲಿ ಕಾಲಾಂತರದಲ್ಲಾದರೂ
ಕುರುಹಿನೊಳಗಾದವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.

1300
ಮೂರುಲಿಂಗಕ್ಕೆ ಮೂಲಮಂತ್ರವಾದಾತ ಗುರು
ಮೂರು ವಿದ್ಯೆಗೆ ವಿದ್ಯಾರೂಪವಾದಾತ ಗುರು.
ಹೊದ್ದಿದ ಪ್ರಪಂಚನತಿಗಳೆದು ರೂಪಿಯ ರೂಪಾದಾತ ಗುರು.
ಲೋಕತ್ರಯಕ್ಕೆ ಕಪಿಲಸಿದ್ಧಮಲ್ಲಿಕಾರ್ಜುನನೆ ಗುರು

1270
ವೇದದಲ್ಲಿ ನಾಲ್ಕು ನುಡಿಯ ಕಲಿತರೇನು ?
ಶಾಸ್ತ್ರದಲ್ಲಿ ನಾಲ್ಕು ನುಡಿಯ ಕಲಿತರೇನು ?
ಪುರಾಣಗಳಲ್ಲಿ ನಾಲ್ಕು ನುಡಿಯ ಕಲಿತರೇನು ?
ಆಗಮದಲ್ಲಿ ನಾಲ್ಕು ನುಡಿಯ ಕಲಿತರೇನು ?
ಕಲಿತು ಜ್ಯೋತಿಷ್ಯವ ಹೇಳಿದರೇನು ? ಶ್ರುತಿಪಾಠಕನಾದರೇನು?
ಚೌಷಷ್ಠಿ ವಿದ್ಯವ ಕಲಿತರೇನು ?
ತನ್ನ ಅಂತರಂಗದ ಪರಬ್ರಹ್ಮದ ನಿಲವ ತಾನರಿಯದೆ
ನಾ ಬಲ್ಲೆನೆಂದು ಅಹಂಕರಿಸಿಕೊಂಡಿಪ್ಪ ತರಕಿಮೂಳರ
ಎನಗೊಮ್ಮೆ ತೋರದಿರಯ್ಯ ಝೇಂಕಾರ ನಿಜಲಿಂಗಪ್ರಭುವೆ.

1271
ವೇದ ದೊಡ್ಡದೆಂದು ನುಡಿವ ವಾದಿಯ ಮಾತ
ಹೇಳಲಾಗದು ಕೇಳಲಾಗದು.
ಶಾಸ್ತ್ರ ದೊಡ್ಡದೆಂದು ನುಡಿವ ಪಾತಕನ ಮಾತ
ಹೇಳಲಾಗದು ಕೇಳಲಾಗದು.
ಪುರಾಣ ದೊಡ್ಡದೆಂದು ನುಡಿವ ಪುಂಡರ ಮಾತ
ಹೇಳಲಾಗದು ಕೇಳಲಾಗದು.
ಆಗಮ ದೊಡ್ಡದೆಂದು ನುಡಿವ ಅಹಂಕಾರಿಯ ಮಾತ
ಹೇಳಲಾಗದು ಕೇಳಲಾಗದು.
ಜ್ಯೋತಿಷ್ಯ ದೊಡ್ಡದೆಂದು ನುಡಿವ ಘಾತುಕನ ಮಾತ
ಹೇಳಲಾಗದು, ಕೇಳಲಾಗದು.
ಅದೇನು ಕಾರಣವೆಂದಡೆ,
ತನ್ನ ಅಂತರಂಗದಲ್ಲಿ ಪರಬ್ರಹ್ಮದ ನಿಲವ ಅರಿತ ಮಹಾತ್ಮಂಗೆ
ಇನ್ನೆಲ್ಲಿಯ ವೇದವೋ ? ಇನ್ನೆಲ್ಲಿಯ ಶಾಸ್ತ್ರವೋ ?
ಇನ್ನೆಲ್ಲಿಯ ಪುರಾಣವೋ? ಇನ್ನೆಲ್ಲಿಯ ಆಗಮವೋ ?
ಇನ್ನೆಲ್ಲಿಯ ಜ್ಯೋತಿಷ್ಯವೋ ?
ಇಂತೀ ಇವಕ್ಕೆ ಸಿಲ್ಕದೆ ಅತ್ತತ್ತಲೆಯಾಗಿರ್ದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ.

984
ವೇದವ ಕಲಿತಲ್ಲಿ, ಪಾಠಕನಲ್ಲದೆ ಜ್ಞಾನಿಯಲ್ಲ, ನಿಲ್ಲು.
ಶಾಸ್ತ್ರ ಪುರಾಣವನೋದಿದಲ್ಲಿ, ಪಂಡಿತನಲ್ಲದೆ ಜ್ಞಾನಿಯಲ್ಲ, ನಿಲ್ಲು.
ವ್ರತ ನೇಮ ಕೃತ್ಯ ಪೂಜಕನಾದಡೇನು ? ದಿವ್ಯಜ್ಞಾನದ ಠಾವನರಿಯಬೇಕು.
ಈ ಭೇದಂಗಳ ತಿಳಿದರಿದಲ್ಲಿ, ಮನಸಂದಿತ್ತು ಮಾರೇಶ್ವರಾ.

1610
ಓದಿನಲ್ಲಿ ಕಾಬಡೆ ಅಕ್ಷರಜ್ಞನಲ್ಲ,
ಪಾಠದಲ್ಲಿ ಕಾಬಡೆ ಗಂಧರ್ವನಲ್ಲ.
ಬಯಲಿನಲ್ಲಿ ಕಾಬಡೆ ಭೂಮಿಯಾಕಾಶ ಮಧ್ಯದಲ್ಲಿಪ್ಪವನಲ್ಲ.
ಅರಸಿದಡೆ ಎಲ್ಲಿಯೂ ಇಲ್ಲ, ಅರಸದಿರ್ದಡೆ ಅಲ್ಲಿಯೇ ಇಹೆ.
ನಿನ್ನ ಬಲ್ಲವರಾರೊ, ನಿಃಕಳಂಕ ಮಲ್ಲಿಕಾರ್ಜುನಾ.

೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಪರಿವಿಡಿ (index)
*
Previous ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ ವಿದ್ಯೆಯ ಬಗ್ಗೆ ಶರಣರ ವಚನಗಳು. Next