Previous ಬಾಯಿ ಮುಚ್ಚಿ ನಾಸಿಕದಲ್ಲಿ ಉಣಬಹುದೆ ? ಲಿಂಗಾಯತರಲ್ಲಿ ಗ್ರಹಣದ ಬಗ್ಗೆ Next

ಸಪ್ತಶೀಲಗಳು

*

ಗುರು ಬಸವಣ್ಣನವರ ಸಪ್ತಶೀಲಗಳು

ಭಾರತೀಯರಿಗೆ ದೇವರು, ಧರ್ಮದಲ್ಲಿ ಅಪಾರ ನಂಬಿಕೆ, ವಿಶ್ವಾಸ. ಅದು ತಪ್ಪಲ್ಲ. ಆದರೆ ದೇವರನ್ನು ಒಲಿಸಿಕೊಳ್ಳಲು ವಿವಿಧ ಕರ್ಮಾಚರಣೆಗಳನ್ನು ಮಾಡುವ ಅಗತ್ಯ ಇಲ್ಲ. ಅದಕ್ಕೆ ಬೇಕಾದುದು 'ಅಂತರಂಗಶುದ್ಧಿ, ಬಹಿರಂಗ ಶುದ್ಧಿ' ಎನ್ನುತ್ತಾರೆ ಗುರು ಬಸವಣ್ಣ. ಅಂತರಂಗ, ಬಹಿರಂಗ ಶುದ್ಧಿಗೆ ಅವರು ಈ ಕೆಳಗಿನಂತೆ ಹೇಳಿದ್ದಾರೆ.

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ


ಎನ್ನುವ ಸಪ್ತಶೀಲಗಳನ್ನು ಜಾರಿಯಲ್ಲಿ ತಂದರು. ಬಸವಭಕ್ತರು ಈ ಸಪ್ತಶೀಲಗಳನ್ನು ಬಾಯಲ್ಲಿ ಹೇಳುತ್ತ ಆಚರಣೆಯಿಂದ ಬಹುದೂರ ಸರಿದಿರುವುದು ಹಗಲಿನಷ್ಟೇ ಸತ್ಯ. ಶರಣರು ಯಾವುದನ್ನು ಬೇಡವೆಂದು ಹೇಳಿದ್ದರೋ ಅದನ್ನೇ ಬಲವಾಗಿ ಅಪ್ಪಿಕೊಳ್ಳುವ ಗುಣ ಹೆಚ್ಚಾಗುತ್ತಿದೆ. ಇವತ್ತು ಅಂತರಂಗ ಬಹಿರಂಗ ಶುದ್ಧಿಗೆ ಬದಲಾಗಿ ಲಿಂಗಪ್ರತಿಷ್ಠಾಪನೆ ಮಾಡುವ, ಗುಡಿಗಳಿಗೆ ಹೋಗುವ, ತೀರ್ಥ ಕ್ಷೇತ್ರಗಳನ್ನು ಸುತ್ತುವ, ಹೋಮ, ಹವನ, ರುದ್ರಾಭಿಷೇಕ, ಮಹಾಮಸ್ತಕಾಭಿಷೇಕ ಮಾಡುವ ಜನರು ಹೆಚ್ಚಾಗುತ್ತಿದ್ದಾರೆ. ಯಾವ ಶರಣರೂ ಇಂಥವುಗಳನ್ನು ಮಾಡಲು ಹೇಳಿಲ್ಲ. ಎಲ್ಲ ಶರಣರೂ ಸ್ಥಾವರಪೂಜೆಯನ್ನು ನಿರಾಕರಿಸಿದ್ದಾರೆ.

ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
ಸ್ಥಾವರದೈವಕ್ಕೆರಗಲಾಗದು.
ತನ್ನ ಪುರುಷನ ಬಿಟ್ಟು ಅನ್ಯಪುರುಷನ ಸಂಗ ಸಲ್ಲುವುದೇ
ಕರಸ್ಥಲದ ದೇವನಿದ್ದಂತೆ
ಧರೆಯ ಮೇಲಣ ಪ್ರತಿಷ್ಠೆಗೆರಗಿದಡೆ
ನರಕದಲ್ಲಿಕ್ಕುವ ಕೂಡಲಸಂಗಮದೇವ.


ಎಂದು ಗುರು ಬಸವಣ್ಣನವರು ನಿಷ್ಠುರವಾಗಿ ಹೇಳಿದ್ದಾರೆ.

ಪ್ರಭುದೇವರಂತೂ

'ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದರೆ ದೇವರೆತ್ತ ಹೋದರೋ
ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ ಗುಹೇಶ್ವರ'


ಎಂದು ಕಟುವಾಗಿ ನುಡಿದಿದ್ದಾರೆ.

ನಿಜಕ್ಕೂ ಶರಣರ ವಿಚಾರಗಳನ್ನು ಮೆಚ್ಚುವವರು, ಅವುಗಳನ್ನು ಬೋಧಿಸುವವರು ಆ ತತ್ವಗಳಂತೆ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ.

ಉಳ್ಳವರು ಶಿವಾಲಯ ಮಾಡಿಹರು,
ನಾನೇನ ಮಾಡುವೆ ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಲಶವಯ್ಯಾ.
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.


ಎನ್ನುವ ಗುರು ಬಸವಣ್ಣನವರು ದೇವಾಲಯ ಕಟ್ಟಿಸುವ ಶ್ರೀಮಂತರನ್ನು ನಯವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ಹೇಳುವುದು 'ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ' ಎಂದು.

ಮತ್ತೊಂದೆಡೆ

ಅನುದಿನದಲ್ಲಿ ಮಜ್ಜನಕ್ಕೆರೆದು ನೆನೆದು ಲಿಂಗ ಕರಿಗಟ್ಟಿತ್ತು.
ನೀರನೊಲ್ಲದು, ಬೋನವ ಬೇಡದು, ಕರೆದಡೆ ಓ ಎನ್ನದು.
ಸ್ಥಾವರ ಪೂಜೆ, ಜಂಗಮದ ಉದಾಸೀನ-
ಕೂಡಲಸಂಗಯ್ಯನೊಲ್ಲ ನೋಡಾ.' ಎಂದಿದ್ದಾರೆ.

ಎರೆದಡೆ ನನೆಯದು, ಮರೆದಡೆ ಬಾಡದು,
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ;
ಕೂಡಲಸಂಗಮದೇವಾ, ಜಂಗಮಕ್ಕೆರೆದಡೆ ಸ್ಥಾವರ ನನೆಯಿತ್ತು' ಎನ್ನುವುದು ಗುರು ಬಸವಣ್ಣನವರ ಸಿದ್ಧಾಂತ.

ಇಲ್ಲಿ ಜಂಗಮ ಎಂದರೆ ಚಲನೆಯುಳ್ಳದ್ದು, ಜೀವಪರವಾದುದು, ಅರಿವುಳ್ಳದ್ದು. ಒಂದರ್ಥದಲ್ಲಿ ಜನತೆಯೇ ಜಂಗಮ. ಜನರ ನೋವು ನಲಿವುಗಳಿಗೆ ಸ್ಪಂದಿಸಿದರೆ, ಅದು ಪೂಜೆಗಿಂತ ಶ್ರೇಷ್ಠ. ನಿಜವಾದ ಬಸವಭಕ್ತರು ಎಂದೆಂದಿಗೂ ಬಾಹ್ಯ ಗುಡಿಗುಂಡಾರಗಳಿಗೆ ಹೋಗುವಂತಿಲ್ಲ. ಅವರು ಅಂಗದ ಮೇಲೆ ಲಿಂಗ ಧರಿಸಿ ಅದನ್ನೇ ಶ್ರದ್ಧೆ, ನಿಷ್ಠೆಯಿಂದ ಪೂಜಿಸಬೇಕು. ಅದೇ ಅವರಿಗೆ ಕಾಮಧೇನು, ಕಲ್ಪವೃಕ್ಷ. ಆದರೂ ಬಾಹ್ಯಪೂಜೆ, ಲಿಂಗಪ್ರತಿಷ್ಠೆಯ ಚಟುವಟಿಕೆಗಳು ಬಸವಭಕ್ತರಿಂದಲೇ ಹೆಚ್ಚು ಹೆಚ್ಚು ನಡೆಯುತ್ತಿದೆ.

ಶರಣರ ವಿಚಾರಗಳನ್ನು ಪ್ರತಿಪಾದಿಸುವ ಎಷ್ಟೋ ಗುರು-ಜಗದ್ಗುರುಗಳೇ ಲಿಂಗ ಪ್ರತಿಷ್ಠೆಗೆ ಒತ್ತು ಕೊಡುತ್ತಾರೆ. ಹೊಸ ಹೊಸ ದೇವಾಲಯಗಳನ್ನು ಕಟ್ಟಿಸುತ್ತಾರೆ. ದೇವಾಲಯದ ಭೂಮಿ ಪೂಜೆ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ, ರುದ್ರಾಭಿಷೇಕ, ಯಜ್ಞ-ಯಾಗ ಎಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇಂಥ ಆಚರಣೆಗಳು ನಿಜಕ್ಕೂ ಶರಣರ ತತ್ವಾದರ್ಶಗಳಿಗೆ ಒಪ್ಪುವಂಥವಲ್ಲ ಎನ್ನುವುದು ಅವರಿಗೆ ಗೊತ್ತಿಲ್ಲವೆಂದಲ್ಲ.

ಆದರೆ ಪರಂಪರಾನುಗತವಾಗಿ ಬಂದಿರುವ ವೈದಿಕ ಆಚರಣೆಗಳಿಂದ ಹೊರ ಬರಲು ಅವರಿಂದ ಆಗುತ್ತಿಲ್ಲ. ಹಾಗಾಗಿಯೇ ಈಗಲೂ ಎಷ್ಟೋ ಮಠಗಳಲ್ಲಿ ಅಂಥ ಆಚರಣೆಗಳು ಅವ್ಯಾಹತವಾಗಿ ನಡೆಯುತ್ತಿವೆ.

'ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ' ಎಂದ ಅವರ ತತ್ವಗಳಿಗೆ ಅಪಚಾರ ಮಾಡುವುದು ಸರಿಯೇ ಎಂದು ಎಲ್ಲರೂ ಯೋಚಿಸಬೇಕು. ಇವತ್ತು ಆಗಬೇಕಾಗಿರುವುದು ಕೋಟಿಲಿಂಗ ಅಥವಾ ದೇವಾಲಯ ಪ್ರತಿಷ್ಠಾಪನೆಗಿಂತ ಅವರ ತತ್ವಗಳ ಅನುಷ್ಠಾನ.

ಸರ್ಕಾರ ದೇವಾಲಯ ಪ್ರತಿಷ್ಠಾಪನೆ, ಹೋಮ ಹವನಗಳಿಗೆ ಬೊಕ್ಕಸದ ಹಣವನ್ನು ಅಪವ್ಯಯ ಮಾಡುವ ಹುಂಬತನಕ್ಕೆ ಮುಂದಾಗಬಾರದು. ಸರ್ಕಾರದ ಹಣ ಸಾರ್ವಜನಿಕರ ಬದುಕನ್ನು ಎತ್ತರಿಸಲು ಬಳಕೆ ಆಗಬೇಕು. ಅಂದರೆ ಆರೋಗ್ಯ, ಶಿಕ್ಷಣ, ನೀರಾವರಿ, ವಿದ್ಯುತ್, ರಸ್ತೆ, ಚರಂಡಿ, ಸಾರ್ವಜನಿಕ ಶೌಚಾಲಯ, ಬಡವರಿಗೆ ಮನೆ, ರಂಗಮಂದಿರ ಇತ್ಯಾದಿಗಳಿಗೆ ಸರ್ಕಾರದ ಹಣ ಬಳಕೆ ಆಗಬೇಕು.

*
ಪರಿವಿಡಿ (index)
Previous ಬಾಯಿ ಮುಚ್ಚಿ ನಾಸಿಕದಲ್ಲಿ ಉಣಬಹುದೆ ? ಲಿಂಗಾಯತರಲ್ಲಿ ಗ್ರಹಣದ ಬಗ್ಗೆ Next
cheap jordans|wholesale air max|wholesale jordans|wholesale jewelry|wholesale jerseys