ಜಾತಿತಾರತಮ್ಯ ಮಾಡಲಾಗದು
ಭಾರತದಲ್ಲಿ ಬಹಳ ಹಿಂದೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳ ಜನರನ್ನು ಆನುವಂಶಿಕ ರೀತಿಯಲ್ಲಿ ನಿರ್ಧರಿಸದೆ, ವ್ಯಕ್ತಿಗಳ ಸ್ವಭಾವದ ಮೇಲೆ ನಿರ್ಧರಿಸಲಾಗುತ್ತಿತ್ತು. ಅಧ್ಯಯನ, ಅಧ್ಯಾಪನ, ಯಜನ ಮುಂತಾದ ಕೆಲಸಗಳನ್ನು ಆರಿಸಿಕೊಂಡವರು ಬ್ರಾಹ್ಮಣರೆನಿಸಿಕೊಳ್ಳುತ್ತಿದ್ದರು; ಯುದ್ಧ ಮಾಡುವ, ರಾಜ್ಯಭಾರ ಮಾಡುವ ಪ್ರವೃತ್ತಿಯುಳ್ಳವರು ಕ್ಷತ್ರಿಯರೆನಿಸಿಕೊಳ್ಳುತ್ತಿದ್ದರು; ಇತ್ಯಾದಿ. ಇವತ್ತು ಬ್ರಾಹ್ಮಣನಾಗಿದ್ದವನು ನಾಳೆ ಕ್ಷತ್ರಿಯ ಆಗಬಹುದಿತ್ತು; ಇಂದು ಕ್ಷತ್ರಿಯನಾಗಿದ್ದವನು ನಾಳೆ ಬ್ರಾಹ್ಮಣ ಅಥವಾ ವೈಶ್ಯನಾಗಬಹುದಿತ್ತು. ಒಬ್ಬ ತಂದೆಯ ಮಕ್ಕಳಲ್ಲಿ ಕೆಲವರು ಬ್ರಾಹ್ಮಣರು, ಮತ್ತೆ ಕೆಲವರು ಕ್ಷತ್ರಿಯರಾಗುತ್ತಿದ್ದರು.
ಈ ಪದ್ಧತಿ ನಿಧಾನವಾಗಿ ಬದಲಾಗಿ, ಬ್ರಾಹ್ಮಣನ ಮಗ ಮಾತ್ರ ಅಧ್ಯಯನ, ಅಧ್ಯಾಪನ, ಯಜನ ಮುಂತಾದ ಕೆಲಸಗಳನ್ನು ಮಾಡಬೇಕು; ರಾಜನ ಮಗ ಮಾತ್ರ ರಾಜನಾಗಬೇಕು; ಮಡಕೆಕುಡಿಕೆ ಮಾಡುವುದು ಕುಂಬಾರ ಜಾತಿಯಲ್ಲಿ ಹುಟ್ಟಿದವನ ಕಸುಬು; (ಇತ್ಯಾದಿ) ಎಂಬ ಪದ್ಧತಿ ಜಾರಿಗೆ ಬಂದಿತು. ಈ ಮನುಪ್ರಣೀತ ಸಿದ್ಧಾಂತವನ್ನು ಅನಂತರ ಯಾರೂ ಪ್ರಶ್ನಿಸಲಿಲ್ಲ. ಆದರೆ ಈ ಪದ್ಧತಿಯಲ್ಲಿ ಶರಣರು ಎರಡು ಅನಿಷ್ಟಗಳನ್ನು ಕಂಡರು.
(೧) ಬ್ರಾಹ್ಮಣ ಜಾತಿ ಶ್ರೇಷ್ಠ; ಅನಂತರ ಕ್ಷತ್ರಿಯರೂ, ವೈಶ್ಯರೂ ಶ್ರೇಷ್ಠರು; ಶೂದ್ರರದು ನೀಚಕುಲ; ಪಂಚಮರು ಅಸ್ಪಶ್ಯರು, ಎಂಬ ನಂಬಿಕೆಯಿಂದಾಗಿ ಸಾಮಾಜಿಕ ಅನ್ಯಾಯಗಳೂ ಆಗುತ್ತಿದ್ದವು. ತ್ರೈವರ್ಣಿಕರು ವಿದ್ಯೆ ವಿತ್ತಗಳಿಗೆ ಅರ್ಹರು; ಶೂದ್ರರೂ ಅಂತ್ಯಜರೂ ಅನರ್ಹರು; ಶೂದ್ರರೂ ಅಂತ್ಯಜರೂ ಗೌರವಯುತ ವೃತ್ತಿ (ಉದಾ: ಬೋಧನೆ) ಮಾಡಕೂಡದು, ಅವರದು ಯಾವಾಗಲೂ ತ್ರಿವರ್ಣಿಕರ ಸೇವೆ ಮಾತ್ರ ಆಗಿರಬೇಕು.
(೨) ವರ್ಣಿಕರಿಗೆ ಮಾತ್ರ ಮೋಕ್ಷದ ಅವಕಾಶವಿದೆ; ಏಕೆಂದರೆ ಅವರಿಗೆ ಮಾತ್ರ ವೇದವಿದ್ಯೆ ಪಡೆಯುವ ಅರ್ಹತೆ ಇದೆ; ವೇದವಿದ್ಯೆ ಮತ್ತು ಉಪನಯನ ಸಂಸ್ಕಾರವಿಲ್ಲದ ಶೂದ್ರರೂ ಅಂತ್ಯಜರೂ ಸ್ತ್ರೀಯರೂ ಮೋಕ್ಷವಂಚಿತರಾಗಿದ್ದರು.
ಬಸವಾದಿ ಶರಣರು ಶೂದ್ರರಿಗೂ ಅಂತ್ಯಜರಿಗೂ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಿದರು. ವೇದಾನುಸಾರವಾದ ಜಾತಿತಾರತಮ್ಯವನ್ನು ಧಿಕ್ಕರಿಸಿ ಎಲ್ಲರೂ ಸಮಾನರು ಎಂದು ತೋರಿಸಿಕೊಡುವುದು ಇದಕ್ಕೆ ಅಗತ್ಯವಾಗಿತ್ತು.
ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ,
ಮಂಡೋದರಿ ಕಪ್ಪೆಯ ಮಗಳು.
ಕುಲವನರಸದಿರಿಂ ಭೋ! ಕುಲದಿಂದ ಮುನ್ನೇನಾದಿರಿಂ ಭೋ!
ಸಾಕ್ಷಾತ್ ಅಗಸ್ಯ ಕಬ್ಬಿಲ, ದುರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ,
ಕೌಂಡಿನ್ಯನೆಂಬ ಋಷಿ ಮೂರು ಭುವನರಿಯದ ನಾವಿದ ಕಾಣಿ ಭೋ!
ನಮ್ಮ ಕೂಡಲಸಂಗನ ವಚನವಿಂತೆಂದುದು:
ಶ್ವಪಚೋಪಿಯಾದಡೇನು, ಶಿವಭಕ್ತನೆ ಕುಲಜಂ ಭೋ! (೧: ೫೮೯)
ಜಾತಿವಿಡಿದು ಸೂತಕವನರಸುವೆ
ಜ್ಯೋತಿವಿಡಿದು ಕತ್ತಲೆಯನರಸುವೆ!
ಇದೇಕೊ ಮರುಳುಮಾನವಾ? ಜಾತಿಯಲ್ಲಿ ಅಧಿಕನೆಂಬೆ?
ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನೊ?
'ಭಕ್ತನೆ ಶಿಖಾಮಣಿ' ಎಂದುದು ವಚನ.
ನಮ್ಮ ಕೂಡಲಸಂಗನ ಶರಣರ ಪಾದಪರುಷವ ನಂಬು,
ಕೆಡಬೇಡ ಮಾನವಾ. (೧: ೫೯೫)
ಶರಣರು ಎಲ್ಲರೂ ಹುಟ್ಟಿನಿಂದ ಸಮಾನರು ಎಂದು ಹೇಳಲು ಎರಡು ಕಾರಣಗಳನ್ನು ಕೊಡುತ್ತಾರೆ. ಮೊದಲನೆಯದಾಗಿ, ಆತ್ಮಕ್ಕೆ ಜಾತಿಯಿಲ್ಲ. ಎಲ್ಲರ ಆತ್ಮಗಳೂ ಶಿವನ ಅಂಶಗಳೇ ಆದುದರಿಂದ, ಯಾವೊಬ್ಬನೂ ಶ್ರೇಷ್ಠನಲ್ಲ, ಯಾವೊಬ್ಬನೂ ಕನಿಷ್ಠನಲ್ಲ. ಆತ್ಮಗಳಲ್ಲಿ ಯಾವ ವಿಶಿಷ್ಟ ಗುಣಗಳೂ ಇಲ್ಲವಾದುದರಿಂದ ಅವು ಗಂಡು ಹೆಣ್ಣು ಎಂದು ಸಹಾ ಭೇದ ಮಾಡಲು ಬರುವುದಿಲ್ಲ.
ಮೊಲೆ, ಮುಡಿ ಬಂದಡೆ ಹೆಣ್ಣೆಂಬರು.
ಗಡ್ಡ ಮೀಸೆ ಬಂದಡೆ ಗಂಡೆಂಬರು.
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮನಾಥ. (೭: ೮೪೫)
ಎರಡನೆಯದಾಗಿ, ಆತ್ಮದಲ್ಲಿ ಎಲ್ಲರೂ ಸಮಾನರಾಗಿರುವಂತೆ, ರಕ್ತಮಾಂಸಾದಿಗಳಲ್ಲೂ ಸಮಾನರಾಗಿದ್ದಾರೆ.
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ
ಜಲ-ಬಿಂದುವಿನ ವ್ಯವಹಾರ ಒಂದೇ,
ಆಶೆಯಾಮಿಷರೋಷಹರುಷ ವಿಷಯಾದಿಗಳೆಲ್ಲಾ ಒಂದೇ.
ಏನನೋದಿ, ಏನ ಕೇಳಿ, ಏನು ಫಲ?
ಸಾಮಾಜಿಕ ಮತ್ತು ಆರ್ಥಿಕ ಚಿಂತನೆಗಳು
ಕುಲಜನೆಂಬುದಕ್ಕೆ ಆವುದು ದೃಷ್ಟ?
ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ
ಆತ್ಮಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ
ಎಂದುದಾಗಿ, ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ?
ಇದು ಕಾರಣ ಕೂಡಲಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು. (೧: ೫೯೦)
ಹೀಗೆ ಎಲ್ಲರೂ ಶಿವ ಮತ್ತು ಶಕ್ತಿಯ ಅಂಶಗಳನ್ನೇ ಉಳ್ಳವರಾದುದರಿಂದ, ಅವರಲ್ಲಿ ಜಾತಿತಾರತಮ್ಯ ಮಾಡುವುದು ತರವಲ್ಲ. ಲಿಂಗದೀಕ್ಷೆ ಪಡೆದವರಂತೂ, ಕುಲಾಭಿಮಾನ ಬಿಡಬೇಕು.
ಸೆಟ್ಟಿಯೆಂಬೆನೆ ಸಿರಿಯಾಳನ?
ಮಡಿವಾಳನೆಂಬೆನೆ ಮಾಚಯ್ಯನ?
ಡೋಹರನೆಂಬೆನೆ ಕಕ್ಕಯ್ಯನ?
ಮಾದಾರನೆಂಬೆನೆ ಚೆನ್ನಯ್ಯನ?
ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ. (೧: ೩೪೫)
ಕುಲವೆಂದು ಹೋರಾಡುವ ಅಣ್ಣಗಳಿರಾ, ಕೇಳಿರೊ
ಕುಲವೇ ಡೋಹರನ? ಕುಲವೇ ಮಾದಾರನ?
ಕುಲವೇ ದೂರ್ವಾಸನ? ಕುಲವೇ ವ್ಯಾಸನ?
ಕುಲವೇ ವಾಲ್ಮೀಕನ? ಕುಲವೇ ಕೌಂಡಿಲ್ಯನ?
ಕುಲವ ನೋಡೆ ನಡೆಯುವರು ತ್ರಿಲೋಕದಲ್ಲಿಲ್ಲ
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ. (೪: ೧೫೨೬)
ಒಬ್ಬ ವ್ಯಕ್ತಿ ಉತ್ತಮ ಅಥವಾ ಅಧಮ ಎನಿಸಿಕೊಳ್ಳುವುದು ಜಾತಿಯಿಂದಲ್ಲ, ನಡತೆಯಿಂದ ಎಂಬುದು ಶರಣರ ಖಚಿತ ಅಭಿಪ್ರಾಯ. ಅವರ ಪ್ರಕಾರ, ಲಿಂಗವಿದ್ದು ಸನ್ನಡತೆಯಿದ್ದರೆ, ಅವನೇ ಕುಲಜ. ಒಬ್ಬ ವ್ಯಕ್ತಿ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ್ದು, ಅವನಲ್ಲಿ ಲಿಂಗ ಮತ್ತು ಸನ್ನಡತೆ ಇಲ್ಲದಿದ್ದರೆ, ಅವನೇ ಕೀಳುಜಾತಿಯವನು.
ಎಂತಹವನಾದಡೇನು, ಲಿಂಗವ ಮುಟ್ಟದವನೆ ಕೀಳುಜಾತಿ,
ಕುಲವಹುದು ತಪ್ಪುದು ಲಿಂಗ ಮುಟ್ಟಲೊಡನೆ,
ಹೊನ್ನಹುದು ತಪ್ಪದು ಪರುಷ ಮುಟ್ಟಲೊಡನೆ.
ಕೂಡಲಸಂಗಮದೇವನೊಲ್ಲ ಸರ್ವಸಂದೇಹಿಗಳ, (೧: ೧೪೨)
ಗುಣದಿಂದ ಹಾರುವನಲ್ಲದೆ, ಅಗಣಿತ ವಿದ್ಯಾಭ್ಯಾಸದಿಂದಹಾರುವನಲ್ಲ.
ಹಾರಬೇಕು ಮಲತ್ರಯಂಗಳ; ಹಾರಬೇಕು ಸೃಷ್ಟಿಸ್ಥಿತಿಲಯವ
ಹಾರಬೇಕು, ಸರ್ಪಹಾರ ಕಪಿಲಸಿದ್ಧಮಲ್ಲಿಕಾರ್ಜುನನ ಆಹಾರದಲ್ಲಿ. (೪: ೧೯೩೧)
ಆದುದರಿಂದ ವೃಥಾ ಕುಲದ ಹೆಸರಿನಲ್ಲಿ ವ್ಯವಹರಿಸುವುದು ಯೋಗ್ಯವಲ್ಲ. ಎಲ್ಲರಿಗೂ ಇಷ್ಟಲಿಂಗಪ್ರದಾನ ಮಾಡಿದುದೇ ಸರ್ವಸಮಾನತೆಯನ್ನು ಸಾಧಿಸಲೋಸ್ಕರ. ಆದುದರಿಂದ ಭಕ್ತರು ಜಾತಿತಾರತಮ್ಯ ಮಾಡುವುದನ್ನು ಬಿಟ್ಟು ಇಷ್ಟಲಿಂಗಧಾರಿಗಳೆಲ್ಲ ನಮ್ಮವರೇ ಎಂದು ತಿಳಿದು ಪರಸ್ಪರರಲ್ಲಿ ಸಹಪಂಕ್ತಿ ಭೋಜನ ಮಾಡಬೇಕು.
ಏಕಪಂಕ್ತಿಯಲ್ಲಿ ತಾ ಭೋಜನಭೇದ ಮಾಡಬಾರದು.
ಭೋಜನಭೇದ ಮಾಡಿದಡೆಯು ತಾನೆಣಿಸಬಾರದು.
ತಾನೆಣಿಸಿದಲ್ಲಿಯೂ ಅನ್ಯರಿಗೆ ತಿಳಿಯಬಾರದು.
ಅನ್ಯರಿಗೆ ತಿಳಿದಡೆಯು ಮನೆ ಬೇರಾಗಬಾರದು.
ಮನೆ ಬೇರಾದಡೆಯು ಮನ ಬೇರಾಗಬಾರದು
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ. (೪: ೧೯೪೦)
ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ,
ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು
ಅಕ್ಕಿ ಕಣಕವ ಕೊಂಡುಹೋಗುವ ಗುರುವಿನ ಕಂಡರೆ,
ಕೆಡವಿ ಹಾಕಿ ಮೂಗನೆ ಕೊಯ್ದು
ಇಟ್ಟಂಗಿಯ ಕಲ್ಲಿಲೆ ತಿಕ್ಕಿ
ಸಾಸಿವೆಯ ಹಿಟ್ಟನೆ ತಳಿದು
ಮೇಲೆ ಲಿಂಬಿಯ ಹುಳಿಯನೆ ಹಿಂಡಿ
ಪಡುವ ಗಾಳಿಗೆ ಹಿಡಿಯೆಂದಾತ ನಮ್ಮ ಅಂಬಿಗರ ಚೌಡಯ್ಯ (೬: ೧೨೦)
ಲಿಂಗಧಾರಿಗಳು ಜಾತಿತಾರತಮ್ಯ ಮಾಡದೆ ಪರಸ್ಪರರಲ್ಲಿ ಲಗ್ನ ಸಂಬಂಧವನ್ನೂ ಮಾಡಬೇಕು.
ಉಂಬಲ್ಲಿ ಊಡುವಲ್ಲಿ ಕೀಯಳಿಯಿತ್ತೆಂಬರು,
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು,
ಎಂತಯ್ಯಾ ಅವರ ಭಕ್ತರೆಂತೆಂಬೆ?
ಎಂತಯ್ಯಾ ಅವರ ಯುಕ್ತರೆಂತೆಂಬೆ?
ಕೂಡಲಸಂಗಮದೇವಾ ಕೇಳಯ್ಯಾ,
ಹೊಲತಿ ಶುದ್ದ ನೀರ ಮಿಂದಂತಾಯಿತ್ತಯ್ಯಾ. (೧: ೬೨೮)
ಆವ ಕುಲವಾದಡೇನು? ಶಿವಲಿಂಗವಿದ್ದವನೆ ಕುಲಜನು,
ಕುಲವನರಸುವರೆ ಶರಣರಲ್ಲಿ, ಜಾತಿಸಂಕರನಾದ ಬಳಿಕ?
ಶಿವಧರ್ಮಕುಲೇಜಾತಃ ಪುನರ್ಜನ್ಮ ವಿವರ್ಜಿತಃ
ಉಮಾ ಮಾತಾ ಪಿತಾ ರುದ್ರ ಐಶ್ವರಂ ಕುಲಮೇವ ಚ ಎಂದುದಾಗಿ,
ಒಕ್ಕುದ ಕೊಂಬೆನವರಲ್ಲಿ, ಕೂಸ ಕೊಡುವೆ.
ಕೂಡಲಸಂಗಮದೇವಾ, ನಂಬುವೆ ನಿಮ್ಮ ಶರಣನು. (೧: ೭೧೮)
ಉಂಬುದು ಉಡುವುದು ಶಿವಾಚಾರ,
ಕೊಂಬುದು ಕೊಡುವುದು ಕುಲಾಚಾರ ಎಂಬ
ಅನಾಚಾರಿಯ ಮಾತ ಕೇಳಲಾಗದು.
ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರ ಒಂದೆ ಎಂದು
ಕೊಟ್ಟು ಕೊಂಬುದು ಸದಾಚಾರ, ಉಳಿದುದೆಲ್ಲ ಅನಾಚಾರ.
ಅದೆಂತೆಂದಡೆ ;
ಸ್ಪಟಿಕದ ಕೊಡದಲ್ಲಿ ಕಾಳಿಕೆಯನರಸುವ ಹಾಗೆ,
ಸಿಹಿಯೊಳಗೆ ಕಹಿಯನರಸುವ ಹಾಗೆ,
ರಜಸ್ಸೂತಕ, ಕುಲಸೂತಕ, ಜನನಸೂತಕ, ಪ್ರೇತಸೂತಕ, ಉಚ್ಛಿಷ್ಟಸೂತಕ, ಎಂದಡೆ,
ಆತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ತೀರ್ಥಪ್ರಸಾದವಿಲ್ಲ.
ಇಂತೀ ಪಂಚಸೂತಕವ ಕಳೆದಲ್ಲದೆ ಭಕ್ತನಾಗ
ಇಂತಹ ಭಕ್ತರಲ್ಲಿ ಕೊಟ್ಟು ಕೊಂಬುದು ಸದಾಚಾರ
ಕೂಡಲಚೆನ್ನಸಂಗಮದೇವಾ. (೩: ೧೦೧೮)
ಸ್ತ್ರೀ-ಪುರುಷ-ಸಮಾನತೆ
ಸ್ತ್ರೀಯರೂ ಪುರುಷರೂ ಸಮಾನರು. ಅವರ ದೇಹಗಳಲ್ಲಿ ವ್ಯತ್ಯಾಸವಿದೆಯೇ ಹೊರತು, ಶಿವಸ್ವರೂಪವಾದ ಆತ್ಮಗಳಲ್ಲಿ ವ್ಯತ್ಯಾಸವಿಲ್ಲ. ಕೆಲವು ಭಾರತೀಯ ಧರ್ಮಗಳಲ್ಲಿ ಪುರುಷನಿಗಿರುವ ಧಾರ್ಮಿಕ ಹಕ್ಕು ಸ್ತ್ರೀಗಿಲ್ಲ. ಆಕೆ ರಜಸ್ವಲೆ ಯಾಗುವುದರಿಂದ, ಆಕೆ ಯಜ್ಞ ಪೂಜೆ ಮುಂತಾದ ಧಾರ್ಮಿಕ ಕ್ರಿಯೆಗಳನ್ನು ಮಾಡಬಾರದೆಂಬ ನಿಷೇಧವಿದೆ. ಆದರೆ, ಶರಣರ ಪ್ರಕಾರ ಶಿವನ ದೃಷ್ಟಿಯಲ್ಲಿ ಸ್ತ್ರೀ ಪುರುಷನ ಸಮಾನ.
ಉಭಯ ದೃಷ್ಟಿ ಏಕ ದೃಷ್ಟಿಯಲ್ಲಿ ಕಾಂಬಂತೆ
ದಂಪತಿ ಏಕ ಭಾವವಾಗಿ ನಿಂದಲ್ಲಿ
ಗುಹೇಶ್ವರ ಲಿಂಗಕ್ಕೆ ಅರ್ಪಿತವಾಯಿತ್ತು. (೨: )
ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ.
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷ ಬೆರೆಸಿದಂತೆ ಕಾಣಾ ರಾಮನಾಥಾ. (5: )
ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ.
ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ.
ಮಣ್ಣು ಮಾಯೆಯೆಂಬರು, ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಸೆಯೇ ಮಾಯೆ, ಗುಹೇಶ್ವರ.
ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ದವೆ?
ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು,
ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ?
ಇಂದ್ರಿಯಂಗಳ ಬಿಟ್ಟು ಲಿಂಗವನೊಲಿಸಬೇಕೆಂಬರು,
ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು,
ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ?
ಇದು ಕಾರಣ, ಪರಂಜ್ಯೋತಿ ಪರಮಕರುಣಿ ಪರಮಶಾಂತನೆಂಬ ಲಿಂಗವು
ಕೋಪದ ಮುನಿಸನರಿದಡೆ ಕಾಣಬಹುದು, ಮರೆದಡೆ ಕಾಣಬಾರದು.
ಅರಿವಿಂದ ಕಂಡೊದಗಿದ ಸುಖವು ಮಸಣಯ್ಯ ಪ್ರಿಯ ಗಜೇಶ್ವರಾ. (೫. ೭೭೧)
[1] ಈ ತರಹದ ಸಂಖ್ಯೆಯ ವಿವರ: ಸವಸ-1/124 :- ಸಮಗ್ರ ವಚನ ಸಂಪುಟ-1, ವಚನ ಸಂಖ್ಯೆ-124 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])