Previous ಮಾರಿ, ಮಸಣಿ ಮುಂತಾದ ಕ್ಷುದ್ರ ದೈವಗಳಿಲ್ಲ ಸ್ತ್ರೀ ಪುರುಷ ಸಮಾನತೆ (Male Female Equality) Next

ಸ್ವರ್ಗ-ನರಕ-ಕೈಲಾಸಕ್ಕೆ ಸಂಬಂಧಿಸಿದ ನಂಬಿಕೆಗಳು

*

ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿರಾ, ಕೇಳಿರಯ್ಯಾ.

ಜನರು ಭೂಲೋಕಕ್ಕಿಂತ ಭಿನ್ನವಾದ, ಕೈಲಾಸವೆಂಬ ಲೋಕವಿದೆಯೆಂದೂ, ಶಿವ ಅಲ್ಲೇ ತನ್ನ ಸತಿ ಸುತ ಪ್ರಮಥರಾದಿಯಾಗಿ ವಾಸಿಸುತ್ತಾನೆಂದೂ, ಸತ್ತನಂತರ ಶಿವಸಾಯುಜ್ಯ ಪಡೆಯಲು ಕೈಲಾಸಕ್ಕೇ ಹೋಗುವುದೇ ಮನುಷ್ಯನ ಅಧ್ಯಾತ್ಮಿಕ ಜೀವನದ ಗುರಿಯೆಂದೂ ಅಲ್ಲಿಗೆ ಹೋದರೆ ಯಾವ ಕೆಲಸವನ್ನೂ ಮಾಡಬೇಕಾಗಿಲ್ಲವೆಂದೂ, ನಂಬಿದ್ದಾರೆ. ಬಸವಾದಿ ಶರಣರು ಅಂಥ ನಂಬಿಕೆಗೆ ಆಧಾರವಿಲ್ಲವೆಂದೂ, ಲಿಂಗೈಕ್ಯ ಗಳಿಸುವುದೇ ಅತಿ ಹೆಚ್ಚಿನ ಧ್ಯೇಯವೆಂದೂ ಉಪದೇಶಿಸಿದರು.

ಕೈಲಾಸವೆಂಬುದೊಂದು ಬೆಳ್ಳಿಯ ಬೆಟ್ಟ,
ಅಲ್ಲಿದ್ದಾತ ರುದ್ರನೊಬ್ಬ.
ಆ ಬೆಟ್ಟಕ್ಕೂ ಆ ರುದ್ರಂಗೆಯೂ
ಪ್ರಳಯವುಂಟೆಂಬುದ
ಗುಹೇಶ್ವರಾ ನಿಮ್ಮ ಶರಣ ಬಲ್ಲನು -೨/೧೧೪೩[1]

ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿರಾ, ಕೇಳಿರಯ್ಯಾ.
ಕೈಲಾಸವೆಂಬುದೊಂದು ಭೂಮಿಯೊಳಿರುವ ಹಾಳುಬೆಟ್ಟ.
ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರು.
ಅಲ್ಲಿರ್ದ ಚಂದ್ರಶೇಖರನು ಬಹು ಎಡ್ಡ.
ಇದರಾಡಂಬರವೇಕಯ್ಯಾ?
ಎಮ್ಮ ಪುರಾತರಿಗೆ ಸದಾಚಾರದಿಂದ ವರ್ತಿಸಿ,
ಲಿಂಗಾಂಗಸಾವರಸ್ಯವ ತಿಳಿದು,
ನಿಮ್ಮ ಪಾದಪದ್ಮದೊಳು ಬಯಲಾದ ಪದವೆ ಕೈಲಾಸವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ - ೪/೧೪೯೨[1]

ಮಾಡಿದ ಭಕ್ತಿಗೆ ಕೈಲಾಸಕ್ಕೆ ಹೋದೆಹೆನೆಂಬುದು ಕೈಕೂಲಿ.
ಭಾಷೆಗೆ ತಪ್ಪಿ ಓಸರಿಸಿದ ಮತ್ತೆ ಅನಿಹಿತವ ಹೇಳಿದಲ್ಲಿ
ಮತ್ತೆ ಘಾತಕತನದಿಂದ ಎಯ್ದಿಹೆನೆಂಬುದು ಭಕ್ತಿಗೆ ವಿಹಿತವಿಲ್ಲ.
ದೃಷ್ಟದಲ್ಲಿ ಕೊಟ್ಟುದ ಲಕ್ಷಿಸಲರಿಯದೆ,
ಅಲಕ್ಷ್ಯವ ಲಕ್ಷಿಸಿ ಕಾಂಬುದಕ್ಕೆ ಲಕ್ಷ್ಯವೇನು?
ಅದು ನಿರೀಕ್ಷಣೆಯ ಲಕ್ಷ್ಯದಿಂದಲ್ಲದೆ, ಆತ್ಮಂಗೆ ಲಕ್ಷ್ಯವಿಲ್ಲ.
ಇಂತೀ ಉಭಯದಲ್ಲಿ ಲಕ್ಷಿತವಾದವಂಗೆ ಮರ್ತ್ಯ ಕೈಲಾಸವೆಂಬುದು;
ತನ್ನರಿವು ನಿಶ್ಚಯವಾದಲ್ಲಿ ಅದೆ ಲಕ್ಷ್ಯ.
ಎನ್ನಯ್ಯ ಪ್ರಿಯ ಇಮ್ಮಡಿ ನಿ:ಕಳಂಕಮಲ್ಲಿಕಾರ್ಜುನ
ಅಲ್ಲಿ ಇಲ್ಲಿ ಎಲ್ಲಿಯೂ ತಾನೆ - ೫/೧೧೯೦ [1]

ಮೋಳಿಗೆ ಮಹಾದೇವಿ ಮತ್ತು ಆಯ್ದಕ್ಕಿ ಲಕ್ಕಮ್ಮ ಇವರಿಬ್ಬರೂ ಶಿವಶರಣೆಯರು ಲೌಕಿಕವಾದಿ ಸಿದ್ಧಾಂತವನ್ನು ಅತ್ಯಂತ ಪ್ರಖರವಾದ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ. ಇವರಿಬ್ಬರೂ ಅವರುಗಳ ಗಂಡಂದಿರು ಈ ಲೋಕದ ಬದುಕು ಸಾಕು, ನಾವು ಕೈಲಾಸ ಸೇರಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸುತ್ತಾರೆ. ತಮ್ಮ ಗಂಡಂದಿರ ಈ ಬಗೆಯ ಪಾರಮಾರ್ಥ ಚಿಂತನೆ ಕುರಿತ ಭ್ರಮೆ ಯನ್ನು ಇಬ್ಬರು ಶಿವಶರಣೆಯರು ಹೋಗಲಾಡಿಸುತ್ತಾರೆ.

‘ಕಾಯವೆರಸಿ ಕೈಲಾಸಕ್ಕೆ ಹೋಹೆನೆಂಬರು
ಇದು ಕ್ರಮವಲ್ಲ’ವೆಂದು ಒಂದು ವಚನದಲ್ಲಿ ಹೇಳುವ ಮಹಾದೇವಿ
ಇನ್ನೊಂದು ವಚನದಲ್ಲಿ
‘ಅದೇತಕ್ಕೆ ಅಯ್ಯ
ಶಿವನೊಳಗೆ ಕೂಟಸ್ಥನಾದೆಹೆನೆಂಬ ಹಲುಬಾಟ ?
ಇದು ನಿತ್ಯ ಸತ್ಯದ ಆಟವಲ್ಲ’ವೆನ್ನುತ್ತಾಳೆ.

ಆಯ್ದಕ್ಕಿ ಲಕ್ಕಮ್ಮನು

‘ಮಾಡಿ ನೀಡಿ ಹೋದೆನೆಂಬಾಗ ಕೈಲಾಸವೇನು ಕೈಕೂಲಿಯೆ ?
ಮುಂದೊಂದ ಕಲ್ಪಿಸಿದೆ ಹಿಂದೊಂದ ಭಾವಿಸಿದೆ ಸತಿ ಸಂದಿದ್ದಾಗವೆ
ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗವಿದ್ದ ಠಾವೇ ಕೈಲಾಸ’ವೆಂದು ಹೇಳಿದ್ದಾಳೆ.

ಇವರಿಬ್ಬರೂ ಶಿವಶರಣೆಯರ ಪ್ರಕಾರ ಮರ್ತ್ಯ-ಕೈಲಾಸವೆಂಬ ಉಭಯತನವಿಲ್ಲ. ಕೈಲಾಸಕ್ಕೆ ಹೋಗುತ್ತೇನೆಂಬುದೆ ಭ್ರಮೆ. ಅದು ನಿತ್ಯ ಸತ್ಯವಲ್ಲ. ಮಹಾದೇವಿ ಒಂದು ವಚನದಲ್ಲಿ ತುಂಬಾ ಸೂಕ್ಷ್ಮವಾದ ಒಂದು ವಿಚಾರವನ್ನು ಹೇಳುತ್ತಾಳೆ.

‘ಹೊರಗೆ ಕೂಡಿಹೆನೆಂಬುದು ನಿಮ್ಮ ಅರಿವಿಂಗೆ ಹಾನಿ’
ಈ ಸಾಲು ತುಂಬಾ ಮಹತ್ವದ ಸತ್ಯವನ್ನು ಹೇಳುತ್ತಿದೆ. ಅವಳ ಪ್ರಕಾರ ಪ್ರತಿಯೊಬ್ಬರು ತಮಗೆ ತಾವೇ ಶಿವನಾಗಬೇಕು. ಅದು ಬಿಟ್ಟು ಶಿವನನ್ನು ಹೊರಗಿಂದ-ಅಂದರೆ ಕೈಲಾಸದಲ್ಲಿ-ದೇವಾಲಯದಲ್ಲಿ ಕೂಡಬಹುದು ಎನ್ನುವುದು ಜ್ಞಾನ ಹಾನಿ. ಮುಂದುವರಿದು ಅವಳು ಹೇಳುತ್ತಾಳೆ -

ಕೂಟಕ್ಕೆ ಕುರುವಾದುದ ನರಿಯದೆ
ಆತ್ಮಕ್ಕೆ ಅರಿವಾದುದ ನರಿಯದೆ
ಕೈಲಾಸವೆಂಬ ಸೂತ್ರದ ಒಳಗಿಗೆ ಮನಸೋತಿರಲ್ಲಾ!
ಅಂಧಕನ ಕೈಯ ರತ್ನದಂತೆ ಆದಿರಲ್ಲಾ
ಪಂಗುಳದ ಕರದ ಶಸ್ತ್ರದಂತೆ ಆದಿರಲ್ಲಾ!
ಈ ನಿರಂಗವ ತಿಳಿದು ನಿಂದಲ್ಲಿ ಬೇರೆ ಲಿಂಗವಡಗುವುದಕ್ಕೆ
ಉಭಯವುಂಟೆಂಬ ದಂದುಗಬೇಡ
ತಾ ನಿಂದಲ್ಲಿಯೇ ನಿಜಕೂಟ
ತಿಳಿದಲ್ಲಿಯೇ ನಿರಂಗವೆಂಬುದು
ಉಭಯವಿಲ್ಲ ಎನ್ನಯ್ಯ ಪ್ರಿಯ ಇಮ್ಮಡಿ ನಿಕಳಂಕ ಮಲ್ಲಿಕಾರ್ಜುನನಲ್ಲಿ.

ಸ್ವತಃ ನೀನೇ ಶಿವನಾಗಿರುವಾಗ ಶಿವನನ್ನು ಕೂಡಬೇಕೆಂಬ ಹಂಬಲವೇಕೆ ಎಂದು ಗಂಡನ ಬಯಕೆಯನ್ನು ತಳ್ಳಿ ಹಾಕುತ್ತಿದ್ದಾಳೆ. ಮರ್ತ್ಯ-ಕೈಲಾಸಗಳೆಂಬ ಉಭಯವಿಲ್ಲವೆಂಬುದನ್ನು ಎರಡೆರಡು ಬಾರಿ ವಚನದಲ್ಲಿ ಹೇಳಿದ್ದಾಳೆ.

ಕೈಲಾಸ ಮರ್ತ್ಯಲೋಕ ಎಂಬರು.
ಕೈಲಾಸವೆಂದಡೇನೊ, ಮರ್ತ್ಯ ಲೋಕವೆಂದಡೇನೊ ?
ಅಲ್ಲಿಯ ನಡೆಯೂ ಒಂದೆ, ಇಲ್ಲಿಯ ನಡೆಯೂ ಒಂದೆ.
ಅಲ್ಲಿಯ ನುಡಿಯೂ ಒಂದೆ, ಇಲ್ಲಿಯ ನುಡಿಯೂ ಒಂದೆ ಕಾಣಿರಯ್ಯಾ ಎಂಬರು.
ಕೈಲಾಸದವರೆ ದೇವರ್ಕಳೆಂಬುದ
ಸುರಲೋಕದೊಳಗೆ ಸಾಸಿರಕಾಲಕ್ಕಲ್ಲದೆ ಅಳಿದಿಲ್ಲವೆಂಬರು.
ನರಲೋಕದೊಳಗೆ ಸತ್ತು ಸತ್ತು ಹುಟ್ಟುತಿಹರೆಂಬರು.
ಇದ ಕಂಡು ನಮ್ಮ ಶರಣರು
ಸುರಲೋಕವನು ನರಲೋಕವನು ತೃಣವೆಂದು ಭಾವಿಸಿ,
ಭವವ ದಾಂಟಿ ತಮ್ಮ ತಮ್ಮ ಹುಟ್ಟನರಿದು,
ಮಹಾಬೆಳಗನೆ ಕೂಡಿ, ಬೆಳಗಿನಲ್ಲಿ ಬಯಲಾದರಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ./1286 - ಹಡಪದ ಲಿಂಗಮ್ಮ

[1] ಈ ತರಹದ ಸಂಖ್ಯೆಯ ವಿವರ: ಸವಸ-2/1142 :- ಸಮಗ್ರ ವಚನ ಸಂಪುಟ -2, ವಚನ ಸಂಖ್ಯೆ-1142 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಮಾರಿ, ಮಸಣಿ ಮುಂತಾದ ಕ್ಷುದ್ರ ದೈವಗಳಿಲ್ಲ ಸ್ತ್ರೀ ಪುರುಷ ಸಮಾನತೆ (Male Female Equality) Next