Previous ವೀರಶೈವ ಲಿಂಗವಂತ/ಲಿಂಗಾಯತ ಎರಡೂ ಬೇರೆ ಬೇರೆ ವೇದ,ಶಾಸ್ತ್ರ, ಶ್ರುತಿ, ಆಗಮ ಇತ್ಯಾದಿಗಳ ಬಗ್ಗೆ Next

ವೀರಶೈವ ಎಂಬುದು ಒಂದು ವ್ರತ, ಮಾರ್ಗ(way), ಅಚಾರ, ಹಂತ (Stage) ಅಥವಾ ಒಂದು ಪುರಾತನ ಮತ

*

ವೀರಶೈವ ಎಂಬುದು ಗುರು ಬಸವಣ್ಣನವರು ಕೊಟ್ಟ ಧರ್ಮದ ಹೆಸರಲ್ಲ,

ವೀರಶೈವ ಎಂಬುದು ಗುರು ಬಸವಣ್ಣನವರು ಕೊಟ್ಟ ಧರ್ಮದ ಹೆಸರಲ್ಲ, ವೀರಶೈವ ಎಂಬುದು ಒಂದು ವ್ರತ, ಮಾರ್ಗ (way), ಅಚಾರ ಅಥವಾ ಹಂತ (Stage). ಕೆಲವೊಂದು ಕಡೆ ಇದನ್ನು ಮತವೆಂದು ಬಳಸಲಾಗಿದೆ, ಅಂದರೆ ಶೈವ, ಶುದ್ಢಶೈವ, ವೀರಶೈವ ಮುಂತಾದ ಮತದವರು ಇಷ್ಟಲಿಂಗ ದೀಕ್ಷೆ ಹೊಂದಿ ಲಿಂಗವಂತರಾದುದು ಇದರಿಂದ ತಿಳಿದು ಬರುತ್ತದೆ. ಈ ಶೈವ ಪ್ರಭೇಧಗಳು ಬಸವಣ್ಣನವರಿಗಿಂತ ಪೂರ್ವದವಾಗಿವೆ. ಆದರೆ ಲಿಂಗವಂತ ಧರ್ಮವು ಬಸವಣ್ಣನವರ ಕೊಟ್ಟ ಧರ್ಮವಾಗಿದೆ. ಆದ್ದರಿಂದ ಇಷ್ಟಲಿಂಗ ಪೂಜಕರು ಲಿಂಗಾವಂತ/ಲಿಂಗಾಯತ ಎಂದು ಮಾತ್ರ ಕರೆಯಬೇಕು.

ವೀರಶೈವ ಎಂಬುದು ಆಚಾರ

ಪರುಷವ ತಂದು ಕಬ್ಬುನಕ್ಕೆ ಮುಟ್ಟಿಸಲು
ಚಿನ್ನವಪ್ಪುದಲ್ಲದೆ ಪರುಷವಾಗಬಲ್ಲುದೆ ?
ಈ ಲೋಕದ ಮನುಜರು ಶಿವಲಿಂಗವ ಕಟ್ಟಿದರೇನು,
ಲಿಂಗವಂತರಲ್ಲದೆ ಪ್ರಾಣಲಿಂಗಸಂಬಂದಿಗಳಾಗಬಲ್ಲರೆ ?
ಶರಣ ಆವ ಕುಲದಲ್ಲಿ ಹುಟ್ಟಿದರೇನು ಆತನು,
ಆಚಾರ ವೀರಶೈವ ಸಂಪನ್ನಸಿದ್ಧಾಂತ
ಕ್ರಿಯಾ ಜ್ಞಾನ ಅನುಭಾವಯುಕ್ತವಾದ ಪ್ರಾಣಲಿಂಗಸಂಪನ್ನ.
ಆದಿ ಅನಾದಿಯಿಲ್ಲದಂದಿನ ನಿಃಕಲ ನಿಶ್ಶೂನ್ಯ ನಿರ್ಭೆದ್ಯ
ನಿರಾಳ ನಿರಂಜನ ಪರಾತ್ಪರತರನು ತಾನೆ ನೋಡಾ.
ಅಂತಪ್ಪ ಮಹಾತ್ಮನ ಕುಲಜನಕುಲಜನೆಂದು ಸಂದೇಹ ಸಂಕಲ್ಪದಿಂದ ದೂಷಿಸಿ
ಜರೆವ ದುರಾಚಾರಿ[ಗಳ] ಬಾಯಲ್ಲಿ
ಬಾಲಹುಳ ಸುರಿಯದೆ ಮಾಣ್ಬುದೆ ಗುಹೇಶ್ವರಾ. -೨/೧೩೪೭ [1]

ಅಯ್ಯ ! ನಿರಾಳ ನಿಃಶೂನ್ಯ ಪರಮ ಭಕ್ತ-ಜಂಗಮ ತಾನಾಗಲರಿಯದೆ
ಬರಿದೆ ಅಹಂಕರಿಸಿ ಮುಂದುಗೊಂಡು ಮೂರು ಮಲಗಳ ಸ್ವೀಕರಿಸಿ,
ನಾವೆ ಭಕ್ತ-ಜಂಗಮವೆಂದು ನುಡಿವ ಕರ್ಮಕಾಂಡಿಗಳು
ಕಾಶಿ, ಕೇತಾ[ದಾ]ರ, ಶ್ರೀಶೈಲ, ಗಯಾ, ಪ್ರಯಾಗ, ಶಿವಗಂಗೆ, ಕಂಚಿ,
ಕಾಳಹಸ್ತಿ, ಪಂಪಾಕ್ಷೇತ್ರ,
ವೀರಣ್ಣ, ಬಸವಣ್ಣ, ಕಲ್ಲಣ್ಣ, ಮಲ್ಲಣ್ಣ,
ಕಂಥೆ, ಕಮಂಡಲ, ಗದ್ದಿಗೆ, ಪಾವುಗೆ, ಭಸ್ಮ, ಘಂಟಿಕೆ, ಪುರಾಣ, ದಂಡಾಗ್ರ, ಗಿಳಿಲು, ಶಂಖು,
ತಿಥಿ, ವಾರ, ನಕ್ಷತ್ರ, ಹುಣ್ಣಿವೆ, ಅಮಾವಾಸ್ಯೆ, ಸೂರ್ಯ, ಚಂದ್ರಾಗ್ನಿ, ದೀಪಾರತಿ
ಗಂಗೆ, ಗೌರಿ, ವಿಘ್ನೇಶ್ವರ ಮೊದಲಾದವು ಇವು ದೈವಂಗಳೆಂದು
ಕಲ್ಲು, ಮಣ್ಣು, ಮರದಿಂದ ರಚಿಸಿ, ಸಂದಿ-ಗೊಂದಿ-ಮಾಡು- ಜಗುಲಿಯ ಮಾಡಿಟ್ಟು,
ಅದರ ತೊಳೆದ ನೀರು, ಎಂಜಲವ ತಿಂಬವರ ದೇವ-ಭಕ್ತರೆನಬಹುದೆ ?
ಇಂತಪ್ಪ ಅನಾಚಾರಿ ಶ್ವಪಚರ, ಭಕ್ತ-ಜಂಗಮ-ದೇವರೆಂದು ಪೂಜಿಸಲಾಗದು.
ನಿರಾಭಾರಿ ವೀರಶೈವಾಚಾರ ಕ್ರಿಯಾಜ್ಞಾನ ವೈರಾಗ್ಯ ಸದ್ಭಕ್ತಿಯುಳ್ಳ
ಸದ್ಭಕ್ತ ಶಿವಶರಣನ ಪೂಜಿಸಿ ಪಾದೋದಕ-ಪ್ರಸಾದವ ಕೊಂಡಡೆ
ಭವಪಾಶಕರ್ಮಂಗಳು ಮಾಣ್ಬವು ಕಾಣಾ ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣ. -೨/೭೯೭ [1]

ಎನ್ನ ಬಂದ ಭವಂಗಳನು ಪರಿಹರಿಸಿ, ಎನಗೆ ಭಕ್ತಿಘನವೆತ್ತಿ ತೋರಿ,
ಎನ್ನ ಹೊಂದಿದ ಶೈವಮಾರ್ಗಂಗಳನತಿಗಳೆದು,
ನಿಜವೀರಶೈವಾಚಾರವನರುಹಿ ತೋರಿ,
ಎನ್ನ ಕರಸ್ಥಲದ ಸಂಗಮನಾಥನಲ್ಲಿ ಮಾಡುವ
ಜಪ ಧ್ಯಾನ ಅರ್ಚನೆ ಉಪಚರಿಯ ಅರ್ಪಿತ ಪ್ರಸಾದಭೋಗಂಗಳಲ್ಲಿಸಂದಿಸಿದ
ಶೈವಕರ್ಮವ ಕಳೆದು,
ಭವಮಾಲೆಯ ಹರಿದು, ಭಕ್ತಿಮಾಲೆಯನಿತ್ತು,
ಭವಜ್ಞಾನವ ಕೆಡೆಮೆಟ್ಟಿ, ಭಕ್ತಿಜ್ಞಾನವ ಗಟ್ಟಿಗೊಳಿಸಿ,
ಭವಮಾಟಕೂಟವ ಬಿಡಿಸಿ, ಭಕ್ತಿಮಾಟಕೂಟವ ಹಿಡಿಸಿ,
ಭವಶೇಷವನುತ್ತರಿಸಿ, ಭಕ್ತಿಶೇಷವನಿತ್ತು,
ಎನಗೆ, ಎನ್ನ ಬಳಿವಿಡಿದು ಬಂದ ಶರಣಗಣಂಗಳೆಲ್ಲರಿಗೆ
ಶಿವಸದಾಚಾರದ ಘನವನರುಹಿ ತೋರಿ,
ಮರ್ತ್ಯಲೋಕದಲ್ಲಿ ಸತ್ಯಸದಾಚಾರವನು ಹರಿಸಿ,
ಶಿವಭಕ್ತಿಯನುದ್ಧರಿಸಿ, ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣ
ಎನ್ನನಾಗುಮಾಡಿ ಉಳುಹಿದನಾಗಿ ಇನ್ನೆನಗೆ ಭವವಿಲ್ಲದೆ, ಬಂಧನವಿಲ್ಲದೆ,
ಭಕ್ತಿ ಮಾಟಕೂಟದ ಗೊತ್ತಿನಲ್ಲಿರ್ದು
ನಾನು ಚೆನ್ನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕುವೆನು. -೧/೧೦೯೩ [1]

ನಿರಾಳ ನಿಶ್ಶೂನ್ಯ ಪರಮಜಂಗಮದರಿವು ತಾನಾಗದೆ,
ಬರಿದೆ ಅಹಂಕಾರದಿಂದ ಮೂರು ಮಲಂಗಳ ಸ್ವೀಕರಿಸುತ್ತ
ನಾವೆ ಜಂಗಮವೆಂದು ನುಡಿವ ಕರ್ಮ ಪಾಷಂಡಿಗಳು-
ಕಾಶಿ ಕೇದಾರ ಶ್ರೀಶೈಲ ವಿರೂಪಾಕ್ಷನೆಂದು,
ಮತ್ತೆ ಈರಣ್ಣ ಮಲ್ಲಣ್ಣ ಬಸವಣ್ಣ ಇವರೇ ದೇವರೆಂದು
ಆ ಕಲ್ಲುಗಳ ತಮ್ಮ ಮನೆಯೊಳಗೊಂದು ಮೂಲೆ
ಸಂದಿ ಗೊಂದಿ ಗೊತ್ತಿನೊಳಗಿಟ್ಟು
ಅದರ ಬಳಿದ [ತೊಳೆದ] ನೀರು, ಅವರೆಂಜಲ ತಿಂಬುವ ಪಶುಗಳಿಗೆ
ದೇವಭಕ್ತರೆನಬಹುದೇನಯ್ಯಾ ? ಎನಲಾಗದು.
ಇಂತಪ್ಪ ಅನಾಚಾರಿ ಅಪಸ್ಮಾರಿ ಶ್ವಪಚರ
ಜಂಗಮವೆಂದು ಪೂಜಿಸಲಾಗದು ಕಾಣಿರೊ.
ವೀರಶೈವ ಆಚಾರವುಳ್ಳ ಭಕ್ತನು ಇದ ಮೀರಿ ಪೂಜಿಸಿದಡೆ
ಅವರಿಬ್ಬರಿಗೆಯೂ ಭವಕರ್ಮಂಗಳು ತಪ್ಪವು ಕಾಣಾ ಗುಹೇಶ್ವರಾ -೨/೧೩೦೮ [1]

ವೀರಶೈವ ಎಂಬುದು ವ್ರತ ಅಥವಾ ನಿಯಮ

ಸರ್ವಾಗಮ ಶ್ರುತಿ ಸ್ಮೃತಿ ಪುರಾಣ ಪಾಠಕನಾದಡೇನು ?
ಸರ್ವಮಂತ್ರತಂತ್ರಸಿದ್ಭಿ ಮರ್ಮವರಿತಡೇನು ?
ನಿತ್ಯಶಿವಾರ್ಚನೆ ತ್ರಿಕಾಲವಿಲ್ಲದ
ನಿತ್ಯಪಾದೋದಕ ಪ್ರಸಾದ ಸೇವನೆಯಿಲ್ಲ.
ಇದೇತರ ವೀರಶೈವ ವ್ರತ, ಇದೇತರ ಜನ್ಮಸಾಫಲ್ಯ
ಅಮುಗೇಶ್ವರಲಿಂಗವೆ ? - ಆಮುಗೆ ರಾಯಮ್ಮ -೫/೬೯೬ [1]

ಭೃತ್ಯಾಚಾರಿಗಲ್ಲದೆ ಭಕ್ತ್ಯಾಚಾರವಳವಡದು.
ವೇದಶಾಸ್ತ್ರ ಪುರಾಣಾಗಮಂಗಳನರಿದ ಸಂಬಂದಿಗಲ್ಲದೆ
ವೀರಶೈವ ಅಳವಡದು, ಅದೇನು ಕಾರಣ?
ಅರಿದು ಭವಿಪಾಕವೆಂದು ಕಳೆದ ಬಳಿಕ
ಜಂಗಮಕ್ಕೆ ನೀಡಿದರೆ ಅದಿಕ ಪಾತಕ.
ಅದೆಂತೆಂದರೆ:ತನ್ನ ಲಿಂಗಕ್ಕೆ ಸಲ್ಲದಾಗಿ, ಆ ಜಂಗಮಕ್ಕೆ ಸಲ್ಲದು.
ಆ ಜಂಗಮಕ್ಕೆ ಸಲ್ಲದಾಗಿ, ತನ್ನ ಲಿಂಗಕ್ಕೆ ಸಲ್ಲದು.
ಲಿಂಗಭೋಗೋಪಭೋಗೀ ಯೋ ಭೋಗೇ ಜಂಗಮವರ್ಜಿತಃ
ಲಿಂಗಹೀನಸ್ಸ ಭೋಕ್ತಾ ತು ಶ್ವಾನಗರ್ಭೆಷು ಜಾಯತೇ
ಇದು ಕಾರಣ ಕೂಡಲಚೆನ್ನಸಂಗಮದೇವಾ
ಇಂತಪ್ಪ ದುರಾಚಾರಿಗಳ ಮುಖವ ನೋಡಲಾಗದು. -೩/೨೩೮ [1]

ವೀರಶೈವ ಎಂಬುದು ಒಂದು ಬಿರುದು ("ವಿಶೇಷಣ ವಾಚಕ"ವಾಗಿ, ಗೌರವವಾಚಕ)

ಅಯ್ಯ, ವರವೀರಶೈವ ಷಟ್ಸ್ಥಲಾಚಾರ್ಯ,
ಘನಲಿಂಗಚಕ್ರವರ್ತಿಯಪ್ಪ ಶ್ರೀ ಗುರುಲಿಂಗದೇವನು
ತನ್ನ ತೊಡೆಯಮೇಲೆ ಮೂರ್ತಿಗೊಂಡಿರುವ
ಕುಮಾರ ಇಷ್ಟಲಿಂಗದೇವಂಗೆ ಪ್ರಾಣಲಿಂಗ-ಭಾವಲಿಂಗಸ್ವರೂಪವಾದ
ಶರಣನ ಚಿದಂಗವೆ ನಿನಗೆ ನಿಜಮೋಕ್ಷಮಂದಿರವೆಂದು
ಅರುಹಿದ ಮೇಲೆ ನಿಮಿಷಾರ್ಧವಗಲಿರದೆ
ನಮ್ಮ ಪ್ರಮಥಗಣಾಚಾರಕ್ಕೆ ಹೊರಗುಮಾಡಿ,
ಭವಕ್ಕೆ ನೂಂಕೇವೆಂದು ಪ್ರತಿಜ್ಞೆಯನಿಟ್ಟು,
ಆ ಶರಣನ ಕರಸ್ಥಲಕ್ಕೆ ಪ್ರಾಣಕಳಾಚೈತನ್ಯಮೂರ್ತಿಲಿಂಗದೇವನ
ಮುಹೂರ್ತವ ಮಾಡಿಸಿ,
ಆ ಲಿಂಗದೇವಂಗೆ ಪ್ರಮಥಗಣಾರಾಧ್ಯ
ಭಕ್ತಮಹೇಶ್ವರರರೆಲ್ಲ ಅಭಯಹಸ್ತವಿತ್ತು,
ಆಮೇಲೆ ಚಿದಂಗಸ್ವರೂಪವಾದ ಶರಣಂಗೆ
ಈ ಲಿಂಗದೇವನ ನಿಮಿಷಾರ್ಧವಗಲಿರದೆ
ನಿನಗೂ ಅದೇ ಪ್ರತಿಜ್ಞೆ ಬಂದೀತೆಂದು ಆಜ್ಞಾಪನವ ಮಾಡಿ,
ಹೃದಯಕಮಲಮಧ್ಯದಲ್ಲಾಡುವ
ಸಹಸ್ರಹೆಡೆಯ ಕುಂಡಲೀಸರ್ಪಂಗೆ ಮುಸುಕಿರುವ
ಅಜ್ಞಾನ ಮಾಯಾಮರವೆಯನ್ನು
ಅನಾಹತದ್ವಾರದಿಂದ ಅನಾದಿಮೂಲಮಂತ್ರವನ್ನು ಉಸುರಿ
ಕುಂಡಲೀಸರ್ಪನ ಹೆಡೆಯ ಎತ್ತಿಸಿ,
ಚಿದಗ್ನಿಯ ಪುಟವ ಮಾಡುವಂಥಾದೆ ಲಿಂಗಾಯತದೀಕ್ಷೆ.
ಇಂತುಟೆಂದು ಶ್ರೀ ಗುರುನಿಷ್ಕಳಂಕ ಚನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ
ಸಂಗನಬಸವೇಶ್ವರ. /೭೧೫ [1]

ಓಂಕಾರವೆಂಬಾಕಾರದಲ್ಲಿ ನಾಲ್ಕು ವೇದ,
ನಾಲ್ಕು ವೇದದಲ್ಲಿ ಇಪ್ಪತ್ತೆಂಟಾಗಮ,
ಇಪ್ಪತ್ತೆಂಟಾಗಮದಲ್ಲಿ ಹದಿನೆಂಟು ಪುರಾಣ,
ಹದಿನೆಂಟು ಪುರಾಣದಲ್ಲಿ ಹದಿನಾರು ಶಾಸ್ತ್ರವಡಗಿದವು.
ಆ ಶಾಸ್ತ್ರದ ಕೊನೆಯ ಮೊನೆಯ ಮೇಲಿಪ್ಪ
ಷಡ್ದರ್ಶನದ ಕಹಿಯ ಬೇರ ಹಿಡಿದು,
ವೀರಶೈವ ನೆಂಬ ಸಿದ್ಧನು ಕೀಳುವಾಗ,
ಕಾಯಯ್ಯ ಎಂದು ಬಾಯ ಬಿಟ್ಟವು. ಅವಕ್ಕೆ ಕರುಣಿಸಿ ಬಿಟ್ಟಾತನಂಬಿಗ ಚೌಡಯ್ಯ. -೬/೮೫ [1]

ಅಂಗದ ಮೇಲೆ ಶ್ರೀಗುರು ಲಿಂಗ ಸಂಬಂಧವ ಮಾಡಿ
ಅಂಗಾಶ್ರಯವನಳಿದು ಲಿಂಗಾಶ್ರಯವ ಮಾಡಿದ ಬಳಿಕ
ಅಂಗಭೋಗಂಗಳ ಬಿಟ್ಟು, ಲಿಂಗ ಕ್ರಿಯೆಗಳನುಳ್ಳವರಾಗಿ
ಅಂಗಾರ್ಚನೆಯನತಿಗಳೆದು ಲಿಂಗಾರ್ಚನೆಯ ಮಾಡುತ್ತ,
ಅಂಗ ಮುಂತಲ್ಲವೆಂದು ಲಿಂಗ ಮುಂತಾಗಿಯೆ
ಎಲ್ಲ ಕ್ರೀಗಳನು ಗಮಿಸಿ ಸದ್ವ್ರತವನಾಚರಿಸುತ್ತ,
ನಿಜವೀರಶೈವ ಸಂಪನ್ನರಪ್ಪ ಭಕ್ತಜಂಗಮಾರಾಧ್ಯ
ಸ್ಥಳಂಗಳನುಳ್ಳವರಾಗಿರ್ದು
ಮತ್ತೆ ಮರಳಿ, ಅಂಗವನೆ ಆಶ್ರಯಿಸಿ,
ಅಂಗಭೋಗಂಗಳನು, ಅಂಗಾರ್ಪಿತ ಭುಂಜನೆಗಳನು
ಭಕ್ತ ಜಂಗಮಾರಾಧ್ಯ ಸ್ಥಳಂಗಳನ್ನುಳ್ಳವರಾಗಿರ್ದು
ಮತ್ತೆ, ಮರಳಿ, ಅಂಗವನೆ ಆಶ್ರಯಿಸಿ
ಅಂಗಭೋಗಂಗಳನು, ಅಂಗಕ್ರೀಗಳನು, ಅಂಗದರ್ಚನೆಗಳನು,
ಅಂಗ ಮುಂತಾದ ಗಮನಂಗಳನು, ಅಂಗಾರ್ಪಿತ ಭುಂಜನೆಗಳನು,
ಭಕ್ತ ಜಂಗಮಾರಾಧ್ಯರುಗಳು ಲಿಂಗವಿರಹಿತರಾಗಿ ಮಾಡಿದಡೆ
ಲಿಂಗವಿಲ್ಲ, ಲಿಂಗಾರ್ಚನೆಯಿಲ್ಲ, ಲಿಂಗಪ್ರಸಾದವಿಲ್ಲ.
ಲಿಂಗ ಮುಂತಾದ ಮುಕ್ತಿಗಮನ, ಇಹಪರದಲ್ಲಿಯೂ ಇಲ್ಲ.
ಇದನರಿದು, ಲಿಂಗಭೋಗವೇ ಭೋಗ,
ಲಿಂಗಾರ್ಚನೆಯೇ ಪೂಜೆ, ಲಿಂಗಾರ್ಪಿತವಾದುದೇ ಪ್ರಸಾದ,
ಲಿಂಗಮುಂತಾಗಿಯೇ ಎಲ್ಲ ಕ್ರೀಗಳನು ಮಾಡುವುದಯ್ಯಾ,
ಸಿಮ್ಮಲಿಗೆಯ ಚಿನ್ನರಾಮಾ. -ಚಂದಿಮರಸ /೫೫೦ [1]

ಅಂಗ ಲಿಂಗ ಸಂಬಂಧವನ್ನುಳ್ಳ
ನಿಜವೀರಶೈವ ಭಕ್ತಾರಾಧ್ಯ ಜಂಗಮದ
ಭಕ್ತಿ ವಿವಾಹದ ಕ್ರಮವೆಂತೆಂದಡೆ:
ಪಾಣಿಗ್ರಹಣ, ವಿಭೂತಿಪಟ್ಟ, ಏಕಪ್ರಸಾದ,
ಭಕ್ತಗಣ, ಸಾಕ್ಷಿಯಾಗಿ ಭಕ್ತಿವಿವಾಹವಾಗಿ,
ಭಕ್ತ ಜಂಗಮವನಾರಾದಿಸಿ, ಭಕ್ತಿಪದಾರ್ಥ ಮತ್ತು ಭಕ್ತಿಪ್ರಸಾದವ ಕೊಂಡು
ನಿಜಮುಕ್ತಿಯನೈದುವದೆ ವೀರಶೈವ ಭಕ್ತಾರಾಧ್ಯರುಗಳ ಭಕ್ತಿಕಲ್ಯಾಣ ನೋಡ.
ಇಂತಪ್ಪ ಭಕ್ತಿಕಲ್ಯಾಣವನರಿಯದೆ
ಸತ್ಯಸದಾಚಾರ ಭಕ್ತಿಯುಕ್ತವಾದ ಗುರುಲಿಂಗ ಜಂಗಮದ
ಪಾದೋದಕ ಪ್ರಸಾದವೆಂಬ ಪಂಚಾಚಾರಕ್ಕೆ ಹೊರಗಾದ
ಭವಿ ಶೈವ ಕೃತಕಶಾಸ್ತ್ರವಿಡಿದು ಮಾಡುವ
ಪಂಚಸೂತಕ ಸಂಕಲ್ಪ ಪಾತಕವನುಳ್ಳ
ಶಕುನ ಸ್ವಪ್ನ ಸಾಮುದ್ರಿಕಲಕ್ಷಣ ಸ್ತ್ರೀ ಪುರುಷ ಜಾತಕ ಚರಿತ್ರೆ
ಕಾಮಶಾಸ್ತ್ರ ಕಲಾಭೇದ ರಾಶಿಫಲ, ನಕ್ಷತ್ರ ಯೋಗ ಕರಣ ದಿನ ತಿಥಿಗಳಿಗೆ
ಲಗ್ನಮುಹೂರ್ತ ಭವಿಶಬ್ದ ಪಾರ್ವ ಧಾರಾಪೂರಿತವಾದಿಯಾದ
ಜಗದ್ವ್ಯವಹಾರವನು,
ಪಂಚಾಂಗ ಕರ್ಮಸೂತಕ ವಿವಾಹವೆನಿಪ್ಪ
ಭವಿಮಾಟಕೂಟ ಭವಿ ದುಷ್ಕ್ರೀಯನ್ನು
ಭವಿಶೈವರಹಿತ ಭವಹರವಾದ ನಿಜವೀರಶೈವಾರಾಧ್ಯ, ಭಕ್ತಜಂಗಮದ
ಭಕ್ತಿವಿವಾಹಕ್ಕೆ ಆ ಭವಿದುಷ್ಕ್ರೀಯವ ಮಾಡಿದವಂಗೆ
ಗುರುವಿಲ್ಲ ಜಂಗಮವಿಲ್ಲ
ಪಾದೋದಕವಿಲ್ಲ ಪ್ರಸಾದವಿಲ್ಲ.
ಇಂತಪ್ಪ ಅನಾಚಾರಿಗಳು ಭಕ್ತಾರಾಧ್ಯಸ್ಥಲಕ್ಕೆ ಸಲ್ಲರಾಗಿ
ಅವರಿರ್ವರನ್ನು ಕೂಡಲಚೆನ್ನಸಂಗಯ್ಯ
ಅಘೋರ ನರಕದಲ್ಲಿಕ್ಕುವನು. -೩/೮೬೬ [1]

ಸ್ಥಾವರವಾಗಿ ಭೂಮಿಯಲ್ಲಿ ಪೂಜಿಸಿಕೊಂಬುದು ಶೈವಲಿಂಗ.
ಚರವಾಗಿ ಭೂಮಿಯಲ್ಲಿ ಪೂಜಿಸಿಕೊಂಬುದು ಇಷ್ಟಲಿಂಗ.
ಅರಿವಿನ ಮನದ ಕೊನೆಯಲ್ಲಿ ನಿತ್ಯನಿವಾಸವಾಗಿ
ಪೂಜಿಸಿಕೊಂಬುದು ವೀರಶೈವ ಲಿಂಗ
ಇಂತೀ ಲಿಂಗತ್ರಯದ ಆದಿ ಆಧಾರವನರಿಯದೆ
ಹೋದರಲ್ಲಾ ಹೊಲಬುದಪ್ಪಿ
ಇನ್ನಾರಿಗೆ ಹೇಳುವೆ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ /೫೩೭ [1]

ವೀರಶೈವ ಎಂಬುದು ಲಿಂಗವಂತನಾಗುವುದಕ್ಕಿಂತ ಮುಂಚಿನ ಒಂದು ಹಂತ (Stage). ಅಥವಾ ಗೌರವ ಸೂಚಕ ಬಿರುದು

ಅಂಗಲಿಂಗಸಂಗಸುಖಸಾರಾಯದನುಭಾವ
ಲಿಂಗವಂತಂಗಲ್ಲದೆ ಸಾಧ್ಯವಾಗದು ನೋಡಾ.
ಏಕಲಿಂಗಪರಿಗ್ರಾಹಕನಾದ ಬಳಿಕ,
ಆ ಲಿಂಗನಿಷ್ಠೆ ಗಟ್ಟಿಗೊಂಡು,
ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ,
ವೀರಶೈವ ಸಂಪನ್ನನೆನಿಸಿ ಲಿಂಗವಂತನಾದ ಬಳಿಕ
ತನ್ನಂಗಲಿಂಗಸಂಬಂಧಕ್ಕನ್ಯವಾದ ಜಡಭೌತಿಕ ಪ್ರತಿಷ್ಠೆಯನುಳ್ಳ
ಭವಿಶೈವದೈವಕ್ಷೇತ್ರತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ
ಮನದಲ್ಲಿ ನೆನೆ[ಯ]ಲಿಲ್ಲ, ಮಾಡಲೆಂತೂ ಬಾರದು.
ಇಷ್ಟೂ ಗುಣವಳವಟ್ಟಿತ್ತಾದಡೆ
ಆತನೀಗ ಏಕಲಿಂಗನಿಷ್ಠಾಚಾರಯುಕ್ತನಾದ
ವೀರಮಾಹೇಶ್ವರನು.
ಇವರೊಳಗೆ ಅನುಸರಿಸಿಕೊಂಡು ನಡೆದನಾದಡೆ
ಗುರುಲಿಂಗಜಂಗಮಪಾದೋದಕಪ್ರಸಾದ ಸದ್ಭಕ್ತಿಯುಕ್ತವಾದ
ವೀರಶೈವ ಷಡುಸ್ಥಲಕ್ಕೆ ಹೊರಗಾಗಿ ನರಕಕ್ಕಿಳಿವನು ಕಾಣಾ,
ಕೂಡಲಸಂಗಮದೇವಾ. -೧/೯೬೬ [1]

ವೀರಶೈವ ಎಂಬುದು ಲಿಂಗವಂತನಾಗುವುದಕ್ಕಿಂತ ಮುಂಚಿನ ಒಂದು ಹಂತ (Stage) ಅಂದರೆ ವೀರಶೈವ ಮತ್ತು ಲಿಂಗಾಯತ ಬೇರೆ ಎಂದು ಸ್ಪಷ್ಟವಾಗಿ ಅರ್ಥವಾಗುತ್ತದೆ.

ಮನ ಮಗ್ನವಾಗಿ, ಅರಿವನು ಘನಪ್ರಾಣಲಿಂಗದಲ್ಲಿ ಸವೆದು,
ತನುವನು ಕ್ರಿಯಾಚಾರವಿಡಿದು, ಇಷ್ಟಲಿಂಗದಲ್ಲಿ ಸವೆದು,
ಮಹಾನುಭಾವವನರಿತಂತಹ ವೀರಶೈವ ಸಂಪನ್ನರಾದ
ಶಿವಶರಣರಿಗೆ ಸಂಸಾರಿಗಳೆನ್ನಬಹುದೆ ಅಯ್ಯ?
ಹೊನ್ನು-ಹೆಣ್ಣು-ಮಣ್ಣೆಂಬ ತ್ರಿವಿಧಪದಾರ್ಥಂಗಳ ವಿವರಿಸಿ,
ಇಷ್ಟ-ಪ್ರಾಣ-ಭಾವವೆಂಬ ಮೂರು ಲಿಂಗದ ಮುಖವನರಿದರ್ಪಿಸಿ,
ಆರು ಲಿಂಗದನುವಿನಲ್ಲಿ ಕೈಕೊಂಡು,
ಬಂದ ಬಂದ ಸಕಲಪದಾರ್ಥವನು ಅದರ ಪೂರ್ವಾಶ್ರಯವಳಿದು,
ಶಿವಪ್ರಸಾದವೆಂದು ಅನುಭವಿಸುತಿರ್ಪರು.
ಅಂತಪ್ಪ ನಿರುಪಮ, ನಿರ್ಭೇದ್ಯ,
ನಿರಾಳ, ನಿಃಶೂನ್ಯ ಪರಮಪ್ರಸಾದಿಗಳಿಗೆ
ಸಂಸಾರಿಗಳೆಂದು ನುಡಿವ ಅಜ್ಞಾನಿಸಂದೇಹಿಗಳು
ಅಘೋರನರಕದಲ್ಲಿ ಮುಳುಗುವರೆಂದಾತನಂಬಿಗರ ಚೌಡಯ್ಯ. -೬/೨೨೩ [1]

ಅಂಗದ ಮೇಲೆ ಲಿಂಗಸಾಹಿತ್ಯವನುಳ್ಳ ನಿಜವೀರಶೈವ ಸಂಪನ್ನರು
ತಮ್ಮ ಸ್ವಯಾಂಗಲಿಂಗವನರ್ಚಿಸುವಲ್ಲಿ ಭವಿಶೈವ ಬಿನ್ನ ಕರ್ಮಿಗಳಂತೆ
ಅಂಗನ್ಯಾಸ ಪಂಚಮಶುದ್ಧಿ ಮೊದಲಾದ
ಅಶುದ್ಧಭಾವವಪ್ಪ ಕ್ಷುದ್ರ ಕರ್ಮಂಗಳ ಹೊದ್ದಲಾಗದು.
ಅದೆಂತೆಂದೊಡೆ:``ನಕಾರಮಾತ್ಮಶುದ್ಧಿಶ್ಚ ಮಕಾರಂ ಸ್ನಾನಶೋಧನಂ
ಶಿಕಾರಂ ಲಿಂಗಶುದ್ಧಿಶ್ಚ ವಾಕಾರಂ ದ್ರವ್ಯಶೋಧನಂ
ಯಕಾರಂ ಮಂತ್ರಶುದ್ಧಿಶ್ಚ ಪಂಚಶುದ್ಧಿಃ ಪ್ರಕೀರ್ತಿತಾಃ
ಕಾಯಶುದ್ಧಿಶ್ಚಾತ್ಮಶುದ್ಧಿಶ್ಚಾಂಗನ್ಯಾಸಕರಸ್ಯ ಚ
ಸರ್ವಶುದ್ಧಿರ್ಭವೇ ನಿತ್ಯಂ ಲಿಂಗಧಾರಣಮೇವ ಚ'- ಇಂತೆಂದುದಾಗಿ.
ಅವಲ್ಲದೆ ಅಘ್ರ್ಯ ಪಾದ್ಯ ಆಚಮನಂಗಳು ಮೊದಲಾದ ಉಪಪಾತ್ರಗ?ಲ್ಲಿ
ಅಗಣಿತಂಗೆ ಅಳತೆಯ ನೀರನೆರೆದು
ಸುಖಮುಖಾರ್ಪಿತಕ್ಕೆ ಸಲುವ ಸುರಸದ್ರವ್ಯಂಗಳಪ್ಪ ಪಂಚಾಮೃತಂಗಳ
ನಿರ್ಮಲನಪ್ಪ ನಿಜಲಿಂಗದ ಮಸ್ತಕಕ್ಕೆರೆದು ಜಿಡ್ಡು ಮಾಡಿ ತೊಳೆವ
ಅಜ್ಞಾನಿ ನರಕಜೀವಿಗಳ ಮುಖವ ನೋಡಲಾಗದು.
ಅದೇನುಕಾರಣವೆಂದಡೆ:
'ಅಘ್ರ್ಯಂ ಪಾದ್ಯಂ ತಥಾಚಮ್ಯಂ ಸ್ನಾನಂ ಪಂಚಾಮೃತಂ ಯದಿ
ಲಿಂಗದೇಹೀ ಸ್ವಲಿಂಗೇಷು ಕೃತ್ವಾಚ್ರ್ಯಂತೇ ಬಹಿರ್ನರಾಃ
ತೇ ಪಾಷಂಡಾಃ ಕೃತಾಸ್ತೇನ ಕೃತಂಕರ್ಮನರಂ ನಾರಕಂ' ಇಂತೆಂದುದಾಗಿ.
ಇದು ಕಾರಣ ಸ್ವಯಾಂಗಲಿಂಗದೇಹಿಗಳು ತಮ್ಮ ಲಿಂಗಮಂತ್ರವಿಡಿದು ಬಂದು
ಲಿಂಗೋದಕ ಪಾದೋದಕಂಗಳಲ್ಲಿ
ತಮ್ಮ ಕರ ಮುಖ ಪದ ಪ್ರಕ್ಷಾಲನವ ಮಾಡಿಕೊಂಬುದೆ ?
ಅಂಗಲಿಂಗಿಗಳಿಗೆ ಸ್ವರ್ಯಾಘ್ರ್ಯ ಪಾದ್ಯಾಚಮನವೆಂಬುದನರಿಯದೆ
ಕೃತಕರ್ಮ ಭವಿಜೀವಿ ಶೈವಪಾಷಂಡರಂತೆ ಬಿನ್ನವಿಟ್ಟು ಮಾಡಿ
ಫಲಪದಂಗಳನೈದಿಹೆನೆಂಬ ನರಕಜೀವಿಗಳನು ಕೂಡಲಚೆನ್ನಸಂಗಯ್ಯ
ರವಿ ಸೋಮರುಳ್ಳನ್ನಕ್ಕ ನಾಯಕ ನರಕದಲ್ಲಿಕ್ಕುವ. -೩/೮೫೧ [1]

ಅಯ್ಯಾ, ತನ್ನಾದಿ ಮಧ್ಯಾವಸಾನವ ತಿಳಿದು,
ಭವಿ ಭಕ್ತ, ಆಚಾರ ಅನಾಚಾರ, ಯೋಗ್ಯ ಅಯೋಗ್ಯ,
ಅರ್ಪಿತ ಅನರ್ಪಿತ, ಸುಸಂಗ ದುಸ್ಸಂಗ,
ಸುಚಿತ್ತ ಕುಚಿತ್ತ, ಸುಬುದ್ಧಿ ಕುಬುದ್ಧಿ,
ಅಹಂಕಾರ ನಿರಹಂಕಾರ, ಸುಮನ ಕುಮನ,
ಸುಜ್ಞಾನ ಅಜ್ಞಾನ, ಸದ್ಭಾವ ದುಭರ್ಾವ, ಪಾಪ ಪುಣ್ಯ,
ಧರ್ಮ ಕರ್ಮ, ಸ್ವರ್ಗ ನರಕ, ಇಹಪರವೆಂಬ
ಭೇದಾಭೇದವ ತಿಳಿದು, ಶೈವಮಾರ್ಗದಷ್ಟಾಂಗಯೋಗವನುಳಿದು,
ವೀರಶೈವ ಶಿವಯೋಗಸಂಪನ್ನನಾಗಿ
ಭಕ್ತಿ ಜ್ಞಾನ ವೈರಾಗ್ಯದಲ್ಲಾಚರಿಸಿ, ಬಕಧ್ಯಾನವನುಳಿದು,
ರಾಜಹಂಸನ ಹಾಗೆ ಅಸತ್ಯವನುಳಿದು,
ಸುಸತ್ಯದಲ್ಲಾಚರಿಸುವ ಭಕ್ತ ಜಂಗಮವೇ ದ್ವಿತೀಯ ಶಂಭುವೆಂದು
ಅವರಂಗಣವ ಕಾಯ್ದು, ಅವರುಟ್ಟುದ ತೊಳೆದು,
ಅವರೊಕ್ಕುದ ಕೈಕೊಂಡು, ಅವರುಗಳ ಹಾರೈಸಿ,
ಅವರ ಕಡೆಬಾಗಿಲ ಕಾಯ್ದು, ಅವರ ತೊತ್ತಿನ ತೊತ್ತಾಗಿ
ಬದುಕಿದೆ ಕಾಣಾ, ಕಲಿದೇವರದೇವ. /೪೬೩ [1]

ದ್ವೈತಾದ್ವೈತವೆಂಬ ಉಭಯಕರ್ಮವನತಿಗಳೆದ
ಅಂಗಲಿಂಗಸಂಬಂಧವನುಳ್ಳ ನಿಜವೀರಶೈವ ಸಂಪನ್ನರು,
ನಮ್ಮ ಸ್ವಯಾಂಗಲಿಂಗವನರ್ಚಿಸುವಲ್ಲಿ
ಭವಿಶೈವ ಬಿನ್ನಕರ್ಮಿಗಳಂತೆ ಬೇರಿಟ್ಟು,
ಅಘ್ರ್ಯಪಾದ್ಯ ಆಚಮನವಾದಿಯಾದ ಉಪಪಾತ್ರೆಗಳಲ್ಲಿ ನೀರನೆರೆದು,
ಪಂಚಮಶುದ್ಧಿ ಪಂಚಾಮೃತಾಬಿಷೇಕವ ಮಾಡಿ,
ತನ್ನ ಲಿಂಗವನರ್ಚಿಸಿ, ಪ್ರಸಾದವ ಕೊಂಡೆನೆಂಬ ಜಡಶೈವ
ಬಿನ್ನಕರ್ಮವನುಳ್ಳ ಕುನ್ನಿಗಳು
ಎನ್ನ ಲೋಕಕ್ಕೆ ಹೊರಗೆಂದ, ಕಲಿದೇವಯ್ಯ. /೬೩೪ [1]

ಅಂಗಲಿಂಗ ನಿಜಸಂಬಂಧವನ್ನುಳ್ಳ ನಿಜವೀರಶೈವ ಸಂಪನ್ನರಾದ
ಭಕ್ತಜಂಗಮಕೆ ಗುರುವೊಂದು ಲಿಂಗವೊಂದು
ಜಂಗಮವೊಂದು, ಪಾದೋದಕವೊಂದು,
ಪ್ರಸಾದವೊಂದು
ಸತ್ಯ ಸದಾಚಾರ ಸತ್ಕ್ರೀಸಮ್ಯಜ್ಞಾನಯುಕ್ತವಾದ
ಸದ್ಭಕ್ತಿ ಒಂದಲ್ಲದೇ ಬಿನ್ನವುಂಟೆ ? ಇಲ್ಲವಾಗಿ.
ಇದು ಕಾರಣ ಭಕ್ತ ಜಂಗಮಕ್ಕೆ ಸತ್ಯ ಸರ್ವಜ್ಞಾನಯುಕ್ತವಾದ
ಗುರುಭಕ್ತಿ ಒಂದಲ್ಲದೇ ಬಿನ್ನವುಂಟೆ ? ಇಲ್ಲವಾಗಿ.
ಇದು ಕಾರಣ ಭಕ್ತ ಜಂಗಮಕ್ಕೆ ಸತ್ಯ ಸರ್ವಜ್ಞಾನಯುಕ್ತವಾದ
ಗುರುಭಕ್ತಿ ಲಿಂಗನಿಷ್ಠಾವಧಾನ ಜಂಗಮವಿಶ್ವಾಸ ಪ್ರಸಾದಪರಿಣತೆ
ಭಕ್ತಾಚಾರವರ್ತನೆಯಿಂ ನಿಜಮುಕ್ತಿಯನೈದಲರಿಯದೆ
ಅಜ್ಞಾನದಿಂದ ಅಹಂಕರಿಸಿ ಮುನ್ನ ತನ್ನ ಅನ್ವಯವಿಡಿದು ಬಂದ
ನಿಜಗುರುವನನ್ಯವ ಮಾಡಿ ಬಿನ್ನವಿಟ್ಟು ಕರೆವ ಕುನ್ನಿಗಳು ನೀವು ಕೇಳಿರೋ
ಗುರು ಬಿನ್ನವಾದಲ್ಲಿ ದೀಕ್ಷೆ ಬಿನ್ನ, ದೀಕ್ಷೆ ಬಿನ್ನವಾದಲ್ಲಿ ಲಿಂಗ ಬಿನ್ನ
ಲಿಂಗ ಬಿನ್ನವಾದಲ್ಲಿ ಪೂಜೆ ಬಿನ್ನ,
ಪೂಜೆ ಬಿನ್ನವಾದಲ್ಲಿ ಅರ್ಪಿತ ಪ್ರಸಾದ ಬಿನ್ನ
ಅರ್ಪಿತ ಪ್ರಸಾದ ಬಿನ್ನವಾದಲ್ಲಿ ಅಂಗಲಿಂಗ ಸಂಬಧವನ್ನುಳ್ಳ ನಿಜವೀರಶೈವ
ಷಡುಸ್ಥಲ ಆಚಾರಕ್ಕೆ ಹೊರಗಾಗಿ ನರಕಕ್ಕೆ ಇಳಿವ.
ಗುರುವಾಕ್ಯವ ಮೀರಿ ಗುರುವನನ್ಯವ ಮಾಡಿ
ಲಿಂಗವ ಬಿನ್ನವಿಟ್ಟು ಕಂಡು ಜಂಗಮದ ಜಾತಿವಿಡಿದು ನೇತಿಮಾಡಿ
ಪ್ರಸಾದವ ಎಂಜಲೆಂದು ಅತಿಗಳೆದು ಗುರುಮಾರ್ಗವ ತಪ್ಪಿನಡೆದು
ಗುರುಭಕ್ತಿ ಪರಾಙ್ಮುಖರಾದವರ ಭಕ್ತ ಜಂಗಮವೆಂದಾರಾದಿಸಿ
ಪ್ರಸಾದವ ಕೊಳಲಾಗದು ಸಲ್ಲದು ಕಾಣಾ ಕೂಡಲಚೆನ್ನಸಂಗಮದೇವ. ೩/೮೬೭ [1]

ಅರಮನೆಯ ಕೂಳನಾದಡೆಯು ತಮ್ಮುದರದ ಕುದಿಹಕ್ಕೆ ಲಿಂಗಾರ್ಪಿತವೆಂದೆಡೆ
ಅದು ಲಿಂಗಾರ್ಪಿತವಲ್ಲ ಆನರ್ಪಿತ. ಅದೆಂತೆಂದೆಡೆ :
ಅರ್ಪಿತಂಚ ಗುರೋರ್ವಾಕ್ಯಂ ಕಿಲ್ಬಿಷಸ್ಯ ಮನೋರ್ಪಿತಂ
ಅನರ್ಪಿತಸ್ಯ ಭುಂಜಿಯಾನ್ ರೌರವಂ ನರಕಂ ವ್ರಜೇತ್ ಎಂದುದಾಗಿ
ತನ್ನ ಒಡಲಕಕ್ಕುಲತೆಗೆ ಆಚಾರವನನುಸರಿಸಿ
ಭವಿಶೈವ ದೈವ ತಿಥಿವಾರಂಗಳ ಹೆಸರಿನಲ್ಲಿ ಅಟ್ಟಿ
ಕೂಳತಂದು ತಮ್ಮ ಇಷ್ಟಲಿಂಗಕ್ಕೆ ಕೊಟ್ಟು
ಹೊಟ್ಟೆಯ ಹೊರೆವ ಆಚಾರಭ್ರಷ್ಟ ಪಂಚಮಹಾಪಾತಕರಿಗೆ
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ
ಪಾದೋದಕವಿಲ್ಲ ಪ್ರಸಾದವಿಲ್ಲ, ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ.
ಮುಂದೆ ಅಘೋರ ನರಕವನುಂಬರು.
ಇದನರಿದು ನಮ್ಮ ಬಸವಣ್ಣನು ತನುವಿನಲ್ಲಿ ಆಚಾರಸ್ವಾಯತವಾಗಿ.
ಮನದಲ್ಲಿ ಅರಿವು ಸಾಹಿತ್ಯವಾಗಿ
ಪ್ರಾಣದಲ್ಲಿ ಪ್ರಸಾದ ಸಾಹಿತ್ಯವಾಗಿ
ಇಂತೀ ತನು-ಮನ-ಪ್ರಾಣಂಗಳಲ್ಲಿ ಸತ್ಯ ಸದಾಚಾರವಲ್ಲದೆ
ಮತ್ತೊಂದನರಿಯದ ಭಕ್ತನು
ಭವಿಶೈವ ದೈವ ತಿಥಿ ಮಾಟ ಕೂಟಂಗಳ ಮನದಲ್ಲಿ ನೆನೆಯ.
ತನುವಿನಲ್ಲಿ ಬೆರಸ ಭಾವದಲ್ಲಿ ಬಗೆಗೊಳ್ಳ ಏಕಲಿಂಗ ನಿಷ್ಠಾಪರನು
ಪಂಚಾಚಾರಯುಕ್ತನು ವೀರಶೈವ ಸಂಪನ್ನ
ಸರ್ವಾಂಗಲಿಂಗಿ ಸಂಗನಬಸವಣ್ಣನು
ಈ ಅನುವ ಎನಗೆ ಅರುಹಿಸಿ ತೋರಿದ ಕಾರಣ
ನಾನು ಬದುಕಿದೆನು ಕಾಣಾ ಕೂಡಲಚೆನ್ನಸಂಗಮದೇವಾ. -೩/೯೩೮ [1]

ಗುರುಕಾರುಣ್ಯವಿಡಿದು ಅಂಗದ ಮೇಲೆ ಲಿಂಗವನುಳ್ಳ
ನಿಜವೀರಶೈವ ಸಂಪನ್ನರಾದ ಗುರುಚರ ಭಕ್ತಿವಿವಾಹದ ಪರಿಯೆಂತೆಂದಡೆ:
ದಾಸಿ, ವೇಸಿ, ವಿಧವೆ, ಪರಸ್ತ್ರೀ, ಬಿಡಸ್ತ್ರೀ ಮೊದಲಾದ
ಹಲವು ಪ್ರಕಾರದ ರಾಸಿಕೂಟದ ಸ್ತ್ರೀಯರ ಬಿಟ್ಟು
ಸತ್ಯಸದಾಚಾರವನುಳ್ಳ ಭಕ್ತಸ್ತ್ರೀಯರ, ಮುತ್ತೈದೆಯ ಮಗಳಪ್ಪ ಶುದ್ಧ ಕನ್ನಿಕೆಯ,
ವಿವಾಹವಾಗುವ ಕಾಲದಲ್ಲಿ,
ಭಕ್ತಗೃಹವಂ ಶೃಂಗರಿಸಿ ಭಕ್ತಿಪದಾರ್ಥಂಗ? ಕೂಡಿಸಿ
ಭಕ್ತಿ ಸಂಭ್ರಮದಿಂದ ಗುಡಿಕಟ್ಟಿ
ವಿವಾಹೋತ್ಸವಕ್ಕೆ ನೆರೆದ ಭಕ್ತಜಂಗಮಕ್ಕೆ ನಮಸ್ಕರಿಸಿ ಮೂರ್ತಿಗೊಳಿಸುತ್ತ
ವಿಭೂತಿ ವಿಳಯವಂ ತಂದಿರಿಸಿ ಬಿನ್ನೈಸಿ ಅವರಾಜ್ಞೆಯಂ ಕೈಕೊಂಡು
ಶೋಭನವೇಳುತ್ತ, ಮಂಗಳ ಮಜ್ಜನವಂ ಮಾಡಿ
ಅಂಗವಸ್ತ್ರ ಲಿಂಗವಸ್ತ್ರಂಗಳಿಂ ಶೃಂಗರಿಸಿ
ವಿಭೂತಿಯಂ ಧರಿಸಿ, ರುದ್ರಾಕ್ಷೆಯಂ ತೊಟ್ಟು
ದಿವ್ಯಾಭರಣವನ್ನಿಟ್ಟು ಆಸನವಿತ್ತು ಕು?್ಳರಿಸಿ
ಭಕ್ತಾಂಗನೆಯರೆಲ್ಲ ನೆರೆದು ಶೋಭನವಂ ಪಾಡುತ್ತ
ಭವಿಶೈವಕೃತಕಶಾಸ್ತ್ರವಿಡಿದು ಮಾಡುವ
ಪಂಚಸೂತಕ ಪಾತಕಯುಕ್ತವಾದ ಪಂಚಾಂಗ ಕರ್ಮ ಸಂಕಲ್ಪಗಳಂ ಅತಿಗಳೆದು
ಅಂಗಲಿಂಗಸಂಬಂಧವನುಳ್ಳ ಪಂಚಾಚಾರಯುಕ್ತರಾದ
ನಿಜವೀರಶೈವ ಸಂಪನ್ನರಾದ ಭಕ್ತಿವಿವಾಹಕ್ಕೆ ಮೊದಲಾದ ಗುರುವಾಜ್ಞೆವಿಡಿದು
ಉಭಯವಂ ಕೈಗೂಡಿ ಸತಿಪತಿ ಭಾವವನುಳ್ಳ ಸತ್ಯವ್ರತವ ತಪ್ಪದಿರಿ ಎಂದು.
ಭಕ್ತಾಜ್ಞೆಯಲ್ಲಿ ಭಸಿತವನಿಡಿಸಿ
ಗುರುಲಿಂಗ ಜಂಗಮವೆಂಬ ಏಕ ಪ್ರಸಾದವನೂಡಿ
ಇಂತು ಗುರುಚರ ಪರ ಮೊದಲಾದ ಭಕ್ತಗಣ ಸಾಕ್ಷಿಯಾಗಿ
ಭಕ್ತಿವಿವಾಹದ ಭಕ್ತಾರಾಧ್ಯರುಗಳ ನಿಷೇಧವಮಾಡಿ
ನಿಂದಿಸಿದವಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ
ಪಾದೋದಕವಿಲ್ಲ, ಪ್ರಸಾದವಿಲ್ಲ; ಅವ ಭಕ್ತಾಚಾರಕ್ಕೆ ಸಲ್ಲನು.
ಇಂತಪ್ಪ ಭಕ್ತಿ ಕಲ್ಯಾಣಯುಕ್ತವಾದ ಭಕ್ತರಾಧ್ಯರ ನಿಷೇಧವಮಾಡಿ
ನಿಂದಿಸಿದವಂಗೆ ಇಪ್ಪತ್ತೆಂಟು ಕೋಟಿ ನರಕ ತಪ್ಪದು ಕಾಣಾ
ಕೂಡಲಚೆನ್ನಸಂಗಯ್ಯ. -೩/೧೧೫೫

ವೀರಶೈವ ಸಂಪನ್ನರಾದ ಸದ್ಭಕ್ತ ಶರಣಗಣಂಗಳಾದಡೆಯೂ
ವೀರಮಾಹೇಶ್ವರರಾದಡೆಯೂ ಕ್ರಿಯಾಪಾದೋದಕ ಮಾಡಬೇಕಾದಡೆ,
ತನ್ನ ಎರಡು ಅಂಗುಲಗಳಿಂದ, ಆ ಮಾಹೇಶ್ವರರ ಅಂಗುಷ್ಠ ಎಂಟು ಅಂಗುಲಗಳಲ್ಲಿ
ತರ್ಜನಿ ಬೆರಳಿನಿಂದ ಬಲದ ಪಾದಾಂಗುಷ್ಠದ ಮೇಲೆ
ಮೂರು ವೇಳೆ ಸ್ಪರ್ಶನವ ಮಾಡಿ,
ನಾಲ್ಕನೆಯ ವೇಳೆಗೆ ಅದೇ ಬಲಪಾದದ ನಾಲ್ಕು ಬೆರಳುಗಳನ್ನು
ಒಂದು ವೇಳೆ ಸ್ಪರ್ಶನ ಮಾಡಿದಡೆ ಗುರುಪಾದೋದಕವೆನಿಸುವುದು.
ಇದೇ ರೀತಿಯಲ್ಲಿ ಎಡದ ಪಾದವ ಮಾಡಿದಡೆ ಲಿಂಗೋದಕವೆನಿಸುವುದು.
ಈ ಎರಡರ ಕೂಟವೆ ಜಂಗಮಪಾದೋದಕವೆನಿಸುವುದು.
ತನ್ನ ಹಸ್ತದಿಂದ ಪಾದವ ಮುಟ್ಟಿ ಮಾಡಿದಂತಹದೆ ಸ್ಪರ್ಶನೋದಕವೆನಿಸುವುದು.
ಆ ಪಾದದ ಮೇಲಣ ದ್ರವವ ತೆಗೆದಂತಹದೆ ಅವಧಾನೋದಕವೆನಿಸುವುದು.
ಅದರ ಮೇಲಣ ಅಪೇಕ್ಷೆ ಮುಂದುಗೊಂಡು ತಾನು ಮಾಡಿಕೊಂಡಂತಹದೆ
ಅಪ್ಯಾಯನೋದಕವೆನಿಸುವುದು.
ಹಸ್ತದಿಂದ ಮುಟ್ಟಿ ಮಾಡಿದಂತಹದೆ ಹಸ್ತೋದಕವೆನಿಸುವುದು.
ಆ ಭಾಜನವ ತನ್ನ ಕೈಯಲ್ಲಿ ತೆಗೆದುಕೊಂಡು
ಆ ಜಂಗಮಕ್ಕೆ ನಮಸ್ಕರಿಸುವಂತಹದೆ ನಿರ್ಣಾಮೋದಕವೆನಿಸುವುದು.
ಆ ಜಂಗಮಕ್ಕೆ ನಮಸ್ಕರಿಸಿ ಆ ಭಾಜನವನ್ನು
ತನ್ನ ಕ್ರಿಯೆಗೆ ಇಟ್ಟುಕೊಂಡಂತಹುದೆ ಸತ್ಯೋದಕವೆನಿಸುವುದು-
ಈ ಪ್ರಕಾರದಲ್ಲಿ ಹತ್ತು ಪಾದೋದಕವು, ಶಿಕ್ಷಾಪಾದೋದಕದಲ್ಲಿ ಆಗುವುದೆಂದು
ಅರಿದು ಆಚರಿಸುವುದು.
ಆಚರಿಸಲಾಗದೆಂಬ ಹಚ್ಚಮಾನವರನೇನೆಂಬೆನಯ್ಯಾ
ಕೂಡಲಚೆನ್ನಸಂಗಮದೇವಾ. -೩/೧೫೬೪ [1]

ವೀರಶೈವ ಎಂಬುದು ಒಂದು ಮಾರ್ಗ (Way)ವಾಗಿ ಬಳಸಿರುವುದನ್ನು ಈ ಕೆಳಗಿನ ವಚನಗಳಲ್ಲಿ ನೋಡಬಹುದು.

ಅಯ್ಯಾ, ಸದಾಚಾರ ಸದ್ಭಕ್ತಿ ಸತ್ಕ್ರಿಯಾ ಸಮ್ಯಕ್ಜ್ಞಾನ ಸದ್ವರ್ತನೆ
ಸಗುಣ ನಿರ್ಗುಣ ನಿಜಗುಣ ಸಚ್ಚರಿತ್ರ ಸದ್ಭಾವ
ಅಕ್ರೋಧ ಸತ್ಯವಚನ ಶಮೆದಮೆ ಭವಿಭಕ್ತಭೇದ
ಸತ್ಪಾತ್ರದ್ರವ್ಯಾರ್ಪಣ ಗೌರವಬುದ್ಧಿ ಲಿಂಗಲೀಯ ಜಂಗಮಾನುಭಾವ
ದಶವಿಧಪಾದೋದಕ ಏಕಾದಶಪ್ರಸಾದ ಷೋಡಶಭಕ್ತಿನಿರ್ವಾಹ,
ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಚನೆ,
ತ್ರಿವಿಧ ಷಡ್ವಿಧ ನವವಿಧ ಜಪ,
ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಪಣ.
ಚಿದ್ವಿಭೂತಿ ಸ್ನಾನ ಧೂಳನ ಧಾರಣ, ಸರ್ವಾಂಗದಲ್ಲಿ ಚಿದ್ರುದ್ರಾಕ್ಷಿಧಾರಣ,
ತಾ ಮಾಡುವ ಸತ್ಯಕಾಯಕ,
ತಾ ಬೇಡುವ ಸದ್ಭಕ್ತಿಭಿಕ್ಷ, ತಾ ಕೊಟ್ಟು ಕೊಂಬ ಭೇದ,
ತಾನಾಚರಿಸುವ ಸತ್ಯ ನಡೆನುಡಿ, ತಾ ನಿಂದ ನಿರ್ವಾಣಪದ.
ಇಂತೀ ಬತ್ತೀಸ ನೆಲೆಕಲೆಗಳ ಸದ್ಗುರುಮುಖದಿಂದರಿದ
ಬಸವ ಮೊದಲಾದ ಸಮಸ್ತ ಗಣಂಗಳೆಲ್ಲಾ ಪ್ರಮಥ
ನಿರಾಭಾರಿ ವೀರಶೈವ ಸನ್ಮಾರ್ಗವಿಡಿದಾಚರಿಸಿದರು ನೋಡಾ.
ಇಂತು ಪ್ರಮಥಗಣವಾಚರಿಸಿದ
ಸತ್ಯ ಸನ್ಮಾರ್ಗವರಿಯದ ಮೂಢ ಅಧಮರನೆಂತು
ಶಿವಶಕ್ತಿ ಶಿವಭಕ್ತ ಶಿವಜಂಗಮವೆಂಬೆನಯ್ಯಾ ಚೆನ್ನಮಲ್ಲಿಕಾರ್ಜುನಾ ? -೫/೩೭[1]

ಶಿವ ಶಿವಾ, ಆದಿ ಅನಾದಿಗಳೆಂಬೆರಡಿಲ್ಲದ ನಿರವಯ ಶಿವ,
ನಿಮ್ಮ ನಿಜವನಾರಯ್ಯಾ ಬಲ್ಲವರು
ವೇದಂಗಳಿಗಭೇದ್ಯನು ಶಾಸ್ತ್ರಂಗಳಿಗಸಾಧ್ಯನು
ಪುರಾಣಕ್ಕೆ ಆಗಮ್ಯನು ಆಗಮಕ್ಕೆ ಅಗೋಚರನು ;
ತರ್ಕಕ್ಕೆ ಅತರ್ಕ್ಯನು
ವಾಙ್ಮನಾತೀತವಾಗಿಪ್ಪ ಪರಶಿವಲಿಂಗವನು
ಕೆಲಂಬರು ಸಕಲನೆಂಬರು ; ಕೆಲಂಬರು ನಿಃಕಲನೆಂಬರು
ಕೆಲಂಬರು ಸೂಕ್ಷ್ಮನೆಂಬರು ; ಕೆಲಂಬರು ಸ್ಥೂಲನೆಂಬರು
ಈ ಬಗೆಯ ಭಾವದಿಂದ, ಹರಿ, ಬ್ರಹ್ಮ, ಇಂದ್ರ, ಚಂದ್ರ, ರವಿ,
ಕಾಲ, ಕಾಮ, ದಕ್ಷ, ದೇವ, ದಾನವ, ಮಾನವರೆಲ್ಲರೂ
ಕಾಣಲರಿಯದೆ ಅಜ್ಞಾನದಿಂದ ಭವಭಾರಿಗಳಾದರು.
ಈ ಪರಿಯಲ್ಲಿ ಬಯಲಾಗಿ ಹೋಗಬಾರದೆಂದು ನಮ್ಮ ಬಸವಣ್ಣನು
ಜಗದ್ಧಿತಾರ್ಥವಾಗಿ ಮರ್ತ್ಯಕ್ಕೆ ಅವತರಿಸಿ
ವೀರಶೈವ ಮಾರ್ಗವನರುಪುವುದಕ್ಕೆ
ಬಾವನ್ನ ವಿವರವನೊಳಕೊಂಡು ಚರಿಸಿದನದೆಂತೆಂದಡೆ
ಗುರುಕಾರುಣ್ಯವೇದ್ಯನು, ವಿಭೂತಿ ರುದ್ರಾಕ್ಷಿಧಾರಕನು,
ಪಂಚಾಕ್ಷರೀ ಭಾಷಾಸಮೇತನು, ಲಿಂಗಾಂಗ ಸಂಬಂಧಿ,
ನಿತ್ಯ ಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ,
ಪಾದೋದಕಪ್ರಸಾದಗ್ರಾಹಕನು, ಗುರುಭಕ್ತಿಸಂಪನ್ನನು,
ಏಕಲಿಂಗನಿಷ್ಠಾಪರನು, ಚರಲಿಂಗಲೋಲುಪ್ತನು,
ಶರಣಸಂಗಮೈಶ್ವರ್ಯನು, ತ್ರಿವಿಧಕ್ಕಾಯತನು,
ತ್ರಿಕರಣ ಶುದ್ಧನು, ತ್ರಿವಿಧ ಲಿಂಗಾಂಗಸಂಬಂಧಿ,
ಅನ್ಯದೈವ ಸ್ಮರಣೆಯ ಹೊದ್ದ, ಭವಿಸಂಗವ ಮಾಡ,
ಭವಿಪಾಕವ ಕೊಳ್ಳ, ಪರಸತಿಯ ಬೆರಸ,
ಪರಧನವನೊಲ್ಲ, ಪರನಿಂದೆಯನಾಡ, ಅನೃತವ ನುಡಿಯ,
ಹಿಂಸೆಯ ಮಾಡ, ತಾಮಸಭಕ್ತಸಂಗವ ಮಾಡ,
ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನ
ಮುಂತಾದವೆಲ್ಲವ ಸಮರ್ಪಿಸಿ,
ಪ್ರಸಾದ ಮುಂತಾಗಿ ಭೋಗಿಸುವ, ಜಂಗಮನಿಂದೆಯ ಸೈರಿಸ,
ಪ್ರಸಾದನಿಂದೆಯ ಕೇಳ, ಅನ್ಯರನಾಸೆಗೆಯ್ಯ,
ಪಾತ್ರಪಾತ್ರವನರಿದೀವ, ಚತುರ್ವಿಧಪದವಿಯ ಹಾರ,
ಅರಿಷಡ್ವರ್ಗಕ್ಕೆ ಅಳುಕ, ಕುಲಾದಿಮದಂಗಳ ಬಗೆಗೊಳ್ಳ,
ದ್ವೈತಾದ್ವೈತವ ನುಡಿವನಲ್ಲ, ಸಂಕಲ್ಪವಿಕಲ್ಪವ ಮಾಡುವನಲ್ಲ,
ಕಾಲೋಚಿತವ ಬಲ್ಲ, ಕ್ರಮಯುಕ್ತನಾಗಿ ಷಟ್ಸ್ಥಲಭರಿತ,
ಸರ್ವಾಂಗಲಿಂಗಿ, ದಾಸೋಹಸಂಪನ್ನ.
ಇಂತೀ ಐವತ್ತೆರಡು ವಿಧದಲ್ಲಿ ನಿಪುಣನಾಗಿ
ಮೆರೆದ ನಮ್ಮ ಬಸವಣ್ಣನು.
ಆ ಬಸವಣ್ಣನ ಶ್ರೀಪಾದಕ್ಕೆ ನಾನು ಅಹೋರಾತ್ರಿಯಲ್ಲಿ
ನಮೋ ನಮೋ ಎಂದು ಬದುಕಿದೆನು ಕಾಣಾ, ಚೆನ್ನಮಲ್ಲಿಕಾರ್ಜುನಾ -೫/೩೭೮[1]

ಅಯ್ಯಾ, ಸಾಧಕ ಸಿದ್ಧ ಅವತಾರಿಕರೆಂಬ ಗುರುಗಳು
ಲೋಕದ ಮಾನವರನುದ್ಧರಿಸುವ ಪರಿ ಎಂತೆಂದಡೆ :
ತಾನು ಪರಿಪೂರ್ಣತತ್ವವನರಿವ ಸಾಧನದಲ್ಲಿಹನಾಗಿ
ಭವಿಯ ಭವಿತ್ವವ ಕಳೆದು ಭಕ್ತನ ಮಾಡುವ ಸಾಮಥ್ರ್ಯವು
ಆ ಸಾಧಕ ಗುರುವಿನಿಂದ ಸಾಧ್ಯವಾಗದು ನೋಡಾ.
ಷಟ್ಸ್ಥಲಜ್ಞಾನದಲ್ಲಿ ಸಿದ್ಧನಾದ ಸದ್ಗುರು ತಾನು ನಿತ್ಯನಿರ್ಮಲನಾದಡೆಯೂ
ವೀರಶೈವ ಕ್ರಮಾಚರಣೆಯನಾಚರಿಸುತ್ತ,
ತನ್ನ ಶಿವಭಕ್ತಿಯ ಶಕ್ತಿಯನ್ನು ಬಿತ್ತರಿಸಲು
ಆಕಸ್ಮಾತ್ ತನ್ನ ದಿವ್ಯದೃಷ್ಟಿಯಿಂದ ಪರೀಕ್ಷಿಸಿ
ಭವಿಯ ಭವಿತ್ವವ ಕಳೆದು ಭಕ್ತನ ಮಾಡುತ್ತಿಹನು ನೋಡಾ.
ಶಿವನು ಮತ್ತು ಶಿವನಾಣತಿಯಂ ಪಡೆದ ಪ್ರಮಥರು
ಗುರುರೂಪದಿಂದ ಧರೆಗವತರಿಸಿ ಬಂದು,
ಭವಿ-ಭಕ್ತರೆಂಬ ಭೇದವನೆಣಿಸದೆ
ಕ್ರಮಾಚಾರಮಂ ಮೀರಿದ ದಿವ್ಯಲೀಲೆಯಿಂದ
ತಮ್ಮಡಿಗೆರಗಿದ ನರರೆಲ್ಲರ ಭಕ್ತರ ಮಾಡುತ್ತಿಹರು ನೋಡಾ.
ಇದು ಕಾರಣ, ಕೂಡಲಚೆನ್ನಸಂಗಮದೇವನ ಶರಣರು
ಈ ಕ್ರಮವನರಿದು ಗುರುಸೇವೆಗೈದರು. -೩/೯೩೭[1]

ವೀರಶೈವ ಎಂಬುದು "ವಿಶೇಷಣ ವಾಚಕ"ವಾಗಿ

ಅಯ್ಯ, ಅನುಭಾವವಿಲ್ಲದ ವಿರಕ್ತಿ ಆಯುಧವಿಲ್ಲದ ವೀರನಂತೆ.
ಅನುಭಾವವಿಲ್ಲದ ಷಟ್ಸ್ಥಲವು ಕಣ್ಣಿಲ್ಲದ ಕುರುಡನಂತೆ.
ಅನುಭಾವವಿಲ್ಲದ ಜಂಗಮವು ಕಾಲಿಲ್ಲದ ಹೆಳವನಂತೆ.
ಅನುಭಾವವಿಲ್ಲದ ಶಿವಪೂಜೆಯ ಎಷ್ಟು ಮಾಡಿದಡೆಯು ಪ್ರಯೋಜನಕ್ಕೆಬಾರದು.
ಅನುಭಾವವಿಲ್ಲದವನ ಲಿಂಗಪೂಜೆ ಬರಿಕೈಯಲ್ಲಿ ಹುಡಿಮಣ್ಣ ಹೊಯ್ದುಕೊಂಡಂತೆ.
ಇದು ಕಾರಣ:
ಭಕ್ತಿಗೆ ವಿರಕ್ತಿಗೆ ಮುಕ್ತಿಗೆ ವೀರಶೈವ ಕ್ಕೆ ಜಂಗಮಕ್ಕೆ ಅನುಭಾವವಿರಬೇಕು.
ಅನುಭಾವವಿಲ್ಲದ ವಿರಕ್ತನಲ್ಲಿ ಪಾದೋದಕ-ಪ್ರಸಾದವ ಕೊಳಲಾಗದು.
ಅನುಭಾವವುಳ್ಳ ಆಚಾರಸಂಪನ್ನನಾದ ಸದ್ಭಕ್ತನಲ್ಲಿ
ಅನಾದಿ ಪಾದೋದಕ-ಪ್ರಸಾದವ ಕೊಂಡವರು ಪರಮಮುಕ್ತರಾದರಯ್ಯಾ
ನಿಜಗುರು ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣಾ. -೩/೭೭೨[1]

ವೀರಶೈವ ಗುರುವಾಗಿ ಶುದ್ಧಶೈವಕ್ಕೆ ಹೊರಗಾಗಬೇಕು,
ಶುದ್ಧಶೈವ ಗುರುವಾಗಿ ಮಾರ್ಗಶೈವಕ್ಕೆ ಹೊರಗಾಗಬೇಕು,
ಮಾರ್ಗಶೈವ ಗುರುವಾಗಿ ಪೂರ್ವಶೈವಕ್ಕೆ ಹೊರಗಾಗಬೇಕು.
ಇಂತೀ ಶೈವಂಗಳಲ್ಲಿ ಸನ್ನದ್ಧನಾಗಿ ತಿಳಿದು,
ಅಂಗಲಿಂಗ ಆತ್ಮನಲ್ಲಿ ನಿಂದು ಸಂಯೋಗವ ಮಾಡಬೇಕು.
ಮಾಡಿದಲ್ಲಿ ಕೂಡಿದ ಕಾರಣ ವೀರಶೈವ ವೆಂಬ ಹೆಸರಾಯಿತ್ತು.
ಸದಾಶಿವಮೂರ್ತಿಲಿಂಗವನರಿತಲ್ಲಿ. /೩೮೯ [1]

ಕಳ್ಳನ ಕೈಯಲ್ಲಿ ಒಂದು ಒಳ್ಳಿಹ ರತ್ನವ ಕಂಡಡೆ
ಎಲ್ಲರೂ ಬಂದು ತಲೆವಿಡಿವರಯ್ಯಾ.
ಆ ರತ್ನವ ರತ್ನವ್ಯವಹಾರಿ ಕೊಟ್ಟು ಕೊಂಡಡೆ
ಆರೂ ಬಾಯಲೆತ್ತಲಮ್ಮರು.
ಶೈವ ಗುರುವಿನ ಕೈಯಲ್ಲಿ ಸಾಹಿತ್ಯವಾದ ಲಿಂಗವನು
ವೀರಶೈವ ಗುರುವಿನ ಕೈಯಲ್ಲಿ ಕೊಟ್ಟು ಮರಳಿ ಕೊಂಡಡೆ
ಆತ ಇಹಲೋಕ ಪೂಜ್ಯನು, ಪರಲೋಕ ಪೂಜ್ಯನು.
ನಿಮ್ಮಾಣೆ, ನಿಮ್ಮ ಪ್ರಮಥರಾಣೆ
ತಪ್ಪದು ರೇಕಣ್ಣಪ್ರಿಯ ನಾಗಿನಾಥಾ. -ಬಹುರೂಪಿ ಚೌಡಯ್ಯ /೧೪೬[1]

ಅಯ್ಯ ಉಭಯ ಬಿನ್ನವರ್ತನಾಗುಣಂಗಳ
ತನ್ನ ಮೂಲ ಚಿತ್ಸ್ವರೂಪವಾದ ಪರಿಪೂರ್ಣ ಮಹಾಜ್ಞಾನ ಪ್ರಕಾಶದ ಬಲದಿಂ
ಜಳ್ಳುಮಾಡಿ ತೂರಿ, ತನ್ನನಾದಿಸನ್ಮಾರ್ಗವ ತಿಳಿದು,
ಆ ಸನ್ಮಾರ್ಗದೊಳಗೆ ನಿರಾಭಾರಿ ವೀರಶೈವ ಅನಾದಿಶರಣಸ್ವರೂಪವ ತಿಳಿದು,
ಆ ಶರಣನ ನಿಜಾಚರಣೆ ಸ್ವಸ್ವರೂಪದ ನಿಲುಕಡೆಯ
ಆ ಪರಿಪೂರ್ಣಜ್ಞಾನಪ್ರಕಾಶದೊಳಗೆ ಮಹದರಿವ
ಸ್ವಾನುಭಾವದೃಕ್ಕಿನಿಂ ಕಂಡು, ಆ ಮಹದರಿವೆ ಗುರುವಾಗಿ,
ಆ ಪರಿಪೂರ್ಣಜ್ಞಾನವೆ ಶಿಷ್ಯನಾಗಿ, ಆ ಸ್ವಾನುಭಾವ ಪ್ರಕಾಶವೆ ಲಿಂಗವಾಗಿ,
ತಮ್ಮ ತಮ್ಮ ನಿಜ ಪ್ರಕಾಶಕ್ಕೆ ಪ್ರಭಾವಿಸುವ
ಪರಾತ್ಪರಂಜ್ಯೋತಿ ನಿರವಯ ಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು
ಸಂಗನ ಬಸವಣ್ಣನ ಅಷ್ಟದಳ, ಚೌದಳ, ಷಡ್ದಳ, ದಶದಳ, ದ್ವಾದಶದಳ,
ಷೋಡಶದಳ, ದ್ವಿದಳ, ಶತದಳ, ಸಹಸ್ರದಳ, ಲಕ್ಷದಳ, ಕೋಟಿದಳಂಗಳಿಂದ
ಸರ್ವಾಂಗದಿ ಶೋಬಿಸುವ ಅನಂತದಂಗಳದಲ್ಲಿ
ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ [ಒಪ್ಪುತ್ತಿರ್ಪುದು]
ನೋಡ ! ಚೆನ್ನಬಸವಣ್ಣ -೨/೭೭೬[1]

ಕೇಳು ನೀನೆಲೊ ಮಾನವಾ,
ಸೋಮವಾರ ಅಮಾವಾಸ್ಯೆ ಹುಣ್ಣಿಮೆ ಎಂಬ
ದೊಡ್ಡ ಹಬ್ಬಗಳು ಬಂದಿಹವೆಂದು
ಮನೆಯ ಸಾರಿಸಿ, ರಂಗವೋಲೆಯನಿಕ್ಕಿ, ಆಸನವ ಬಲಿದು,
ಪತ್ರೆ ಪುಷ್ಪ ಮೊದಲಾದ ಅನಂತ ಸಾರಂಭವ ಸವರಿಸಿ
ವಿರಕ್ತನ ಕರೆತಂದು ಪೂಜೆಯ ಮಾಡುವುದಕ್ಕಿಂತಲೂ
ಹೊರೆಯಲ್ಲಿ ಚರಿಸಾಡುವ ಕಾಳ ಶುನಕನ ತಂದು
ಆ ಗದ್ದುಗೆಯಲ್ಲಿ ಪೂಜೆ ಮಾಡುವುದು ಮಹಾ ಲೇಸಯ್ಯಾ.
ಅದೇನು ಕಾರಣವೆಂದರೆ,
ಆಣವಮಲ ಮಾಯಾಮಲ ಕಾರ್ಮಿಕಮಲಕ್ಕೆ ಹೊರತೆಂದು,
ಅಷ್ಟಮದ ವಿರಹಿತನೆಂದು, ಷಡ್ಗುಣವ ಸಂಹರಿಸಿದವನೆಂದು,
ಶಾಸ್ತ್ರದಲ್ಲಿ ಸಂಪನ್ನನೆಂದು,
ಕ್ರಿಯೆಯಲ್ಲಿ ವೀರಶೈವ ನೆಂದು, ನಿರಾಭಾರಿಯೆಂದು,
ಬಾಯಿಲೆ ಬೊಗಳಿ ಲೌಕಿಕದಲ್ಲಿ ಮಠವ ಮಾಡಿಕೊಂಡು,
ಮಾನ್ಯವ ಸಂಪಾದಿಸಿಕೊಂಡು,
ಅಶನಕ್ಕಾಶ್ರಯನಾಗಿ, ವ್ಯಸನಕ್ಕೆ ಹರಿದಾಡಿ, ವಿಷಯದಲ್ಲಿ ಕೂಡಿ,
ಸರ್ವವು ಎನಗೆ ಬೇಕೆಂದು ತಮೋಗುಣದಿಂದ ದ್ರವ್ಯವ ಕೂಡಿಸಿ
ವಿರತಿಸ್ಥಲವು ಹೆಚ್ಚೆಂದು ಕಾವಿಯ ಹೊದೆದು, ಕಾಪೀನವ ಕಟ್ಟಿ,
ವೇಷ ಡಂಭಕದಿಂದ ತಿರುಗುವ ಭ್ರಷ್ಟರ ಮುಖವ ನೋಡಲಾಗದು.
ಇಂತಪ್ಪ ವಿರತರ ಪೂಜೆಯ ಮಾಡುವುದಕ್ಕಿಂತಲೂ
ಕರೇನಾಯಿಯ ತಂದು ಪೂಜೆಯ ಮಾಡುವುದು
ಮಹ ಲೇಸು ಕಂಡಯ್ಯ.
ಪಂಚಾಮೃತವ ಮುಂದಿಟ್ಟರೆ ಕಣ್ಣು ನೋಡುವುದು,
ದ್ರವ್ಯ ಮುಂದಿಟ್ಟರೆ ಕೈಯು ಮುಟ್ಟುವುದು,
ಎಂದು ಪೇಳುವ ವಿರತರ ನಾಲಗೆಯು
ಆ ನಾಯ ಬಾಲಕ್ಕಿಂತಲು ಕರ ಕಷ್ಟವು.
ಇಂತಹ ವಿರತರ ಪೂಜೆಯ ಮಾಡುವಾತನು, ಆ ಜಂಗಮವು
ಉಭಯತರ ಮೂಗು ಸವರಿ ಕತ್ತೆಯನೇರಿಸಿ
ಪಡಿಹಾರಿಕೆಗಳ ಪಾದುಕೆಯಿಂದ ಪಡಪಡ ಹೊಡಿ ಎಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು. -೬/೧೨೫ [1]

ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ
ಮಿಕ್ಕು ಅವರಿಗೆ ಲೆಕ್ಕಕ್ಕೆ ಕಡೆಯಿಲ್ಲದೆ ಮಾಡಿ,
ಹೊಕ್ಕು ಭಕ್ತಿಯಲ್ಲಿ, ಲೆಕ್ಕ ತಪ್ಪದೆ ಅವತಾರದಲ್ಲಿ ಬಂದು,
ಮತ್ರ್ಯಕ್ಕೆ ಬಸವೇಶ್ವರನೆಂಬ ಗಣನಾಥನಾಮಮಂ ಪಡೆದು,
ಭಕ್ತರಿಗೆ ಮುಖ್ಯವಾಗಿ ಭಕ್ತಿಯಂ ತೋರಿ,
ಸತ್ಯದ ಬಟ್ಟೆಯಂ ಕಾಣದೆ, ಚಿದ್ಘನಲಿಂಗವ ಹೊಗಲರಿಯದೆ,
ಬದ್ಧಕತನವನು ಸುಬದ್ಧವ ಮಾಡದೆ,
ಶುದ್ಧಶೈವ ಕಪ್ಪಡಿಯ ಸಂಗಮನಾಥನಲ್ಲಿ,
ಐಕ್ಯವಾದ ಚಿದ್ರೂಪ ಚಿತ್ಪ್ರಕಾಶಘನಲಿಂಗ,
ಕೈಯಲ್ಲಿದ್ದಂತೆ ಹೊದ್ದಿದನೇಕರುದ್ರಮೂರ್ತಿಯಲ್ಲಿ.
ರಜತಾದ್ರಿಯಲಿರ್ದು ಸುಬದ್ಧವಾಗಿ ಪ್ರಳಯವಾಗಿತ್ತು ರುದ್ರಲೋಕವೆಲ್ಲಾ.
ರುದ್ರಗಣಂಗಳೆಲ್ಲರೂ ಮರ್ದನಂಗೆಯ್ದಲ್ಲಿ,
ಸುದ್ದಿಯ ಹೇಳುವರನಾರನೂ ಕಾಣೆ.
ಇನ್ನಿದ್ದವರಿಗೆ ಬುದ್ಧಿ ಇನ್ನಾವುದೊ ?
ಶುದ್ಧಶೈವವ ಹೊದ್ದದೆ, ಪೂರ್ವಶೈವವನಾಚರಿಸದೆ,
ಮಾರ್ಗಶೈವವ ಮನ್ನಣೆಯ ಮಾಡದೆ, ವೀರಶೈವ ವನಾರಾಧಿಸದೆ,
ಆದಿಶೈವವನನುಕರಿಸದೆ, ಭೇದಿಸಬಾರದ ಲಿಂಗ ಕರದಲ್ಲಿದ್ದು,
ಕಂಗಳಿನಲ್ಲಿ ನಿಂದು, ಮನದಲ್ಲಿ ಸಿಂಹಾಸನಂಗೆಯ್ದು,
ಸಕಲೇಂದ್ರಿಯವ ಮರೆದು,
ಕಾಯಜೀವನ ಹೊಲಿಗೆಯ ಬಿನ್ನಾಣದಿಂ ಬಿಚ್ಚಿ,
ಬೇರೊಂದರಸಲಿಲ್ಲವಾಗಿ ಬಯಕೆಯರತು,
ಭವಹಿಂಗಿ, ತಾನೆನ್ನದೆ ಇದಿರೆನ್ನದೆ, ಏನೂ ಎನ್ನದ ಲಿಂಗೈಕ್ಯಂಗೆ
ಸ್ವಾನುಭಾವದಿಂದ ನಮೋ ನಮೋ [ಎಂಬೆ ]
ನಿಃಕಳಂಕ ಮಲ್ಲಿಕಾರ್ಜುನಾ. - ಮೋಳಿಗೆಯ ಮಾರಯ್ಯ /೨೦೯೬ [1]

[1] ಈ ತರಹದ ಸಂಖ್ಯೆಯ ವಿವರ: ಸವಸ-1/653 :- ಸಮಗ್ರ ವಚನ ಸಂಪುಟ -1, ವಚನ ಸಂಖ್ಯೆ-1653 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ವೀರಶೈವ ಲಿಂಗವಂತ/ಲಿಂಗಾಯತ ಎರಡೂ ಬೇರೆ ಬೇರೆ ವೇದ,ಶಾಸ್ತ್ರ, ಶ್ರುತಿ, ಆಗಮ ಇತ್ಯಾದಿಗಳ ಬಗ್ಗೆ Next