Previous ಪರಮಾತ್ಮ ವಿಶ್ವವ್ಯಾಪಿ ದೇವನಿಗೂ ಸೃಷ್ಟಿಗೂ ಇರುವ ಸಂಬಂಧ Next

ಜೀವಾತ್ಮ - ನಾನು ಯಾರು?

*

'ನಾನು ಯಾರು?'

'ನಾನು ಯಾರು?' ಎಂಬುದು ಮುಖ್ಯ ದಾರ್ಶನಿಕ ಪ್ರಶ್ನೆಗಳಲ್ಲೊಂದು. ದುಃಖಪೀಡಿತನಾದವನು ಭವಬಂಧನದಿಂದ ಬಿಡಿಸಿಕೊಳ್ಳಲು ಗುರುವಿನ ಬಳಿ ಹೋದಾಗ, ಗುರು ಮೊದಲು ಈ ಪ್ರಶ್ನೆಗೆ ಉತ್ತರ ಹೇಳುತ್ತಾನೆ. ನಾನು ಎಂದರೆ, ದೇಹವಲ್ಲ, ಇಂದ್ರಿಯಗಳೂ ಅಲ್ಲ, ಮನಸಾದಿ ಅಂತಃಕರಣಗಳೂ ಅಲ್ಲ, ಎಂಬುದನ್ನು ಸ್ಪಷ್ಟಪಡಿಸುತ್ತಾನೆ. ಏಕೆಂದರೆ ಇವೆಲ್ಲವೂ ಶಕ್ತಿ ಅಥವಾ ಪ್ರಕೃತಿಯ ವಿಕಾರಗಳು. ಇವು ಸತತವಾಗಿ ಬದಲಾಗುತ್ತವೆ. ಆತ್ಮವೆಂದರೆ ಪ್ರಕೃತಿಗಿಂತ (ಭೌತ ಅಥವಾ ಜಡವಸ್ತುವಿಗಿಂತ) ಭಿನ್ನವಾದ ಚಿದ್ವಸ್ತು. ಸಾಧಕನು ನಿತ್ಯವಾದುದು ಯಾವುದು, ಅನಿತ್ಯವಾದುದು ಯಾವುದು ಎಂಬುದನ್ನು ತಿಳಿದುಕೊಂಡು, ನಿತ್ಯವಾದ ಆತ್ಮೋನ್ನತಿಗೆ ಗಮನ ಕೊಡಬೇಕು. ದೇಹಕ್ಕೂ ಆತ್ಮಕ್ಕೂ ಇರುವ ವ್ಯತ್ಯಾಸವನ್ನು ತಿಳಿಯದಿದ್ದರೆ ಆಧ್ಯಾತ್ಮಿಕ ಜೀವನ ವ್ಯರ್ಥ.

ನಿತ್ಯಾನಿತ್ಯವಿಚಾರವಿಡಿದು ನೋಡಿದಡೆ,
ಭೂಮಿ ಜಲ ಅನಲ ಮರುತ ಆಕಾಶವೆಂಬ ಭೌತಿಕಂಗಳು
ತಾನಲ್ಲವೆಂದರಿದು,
ಕರಣೇಂದ್ರಿಯ ವಿಷಯಂಗಳ ಹೊತ್ತಾಡುವ ಜಡದೇಹ
ಮೃತ್ತಿಕೆಯ ಪುತ್ಥಳಿಯಂತೆ ಇಹ ಕಾರಣ
ಆ ದೇಹ ತಾನಲ್ಲವೆಂದರಿದು,
ಭವಭೀತಿ ಆಮಯ ಅರಿಗಳಾರ ಕೂಡಿಹ ಜೀವನು
ತಾನಲ್ಲವೆಂದರಿದು, ಇಹಪರವೆಂಬ ಇದ್ದೆಸೆಯ ಹೊದ್ದದೆ,
ತನುಗುಣವಳಿದು ಮನೋವಿಕಾರ ಮಾಣ್ದು,
ಮಾಯೋಪಾಧಿಕನಲ್ಲದ ನಿತ್ಯ ಸದ್ಬೋದಿತ
ಚಿದ್ಘನ ಪರಿಪೂರ್ಣ ಬೋಧಪ್ರಭು ಜಗದಾದಿಮೂರ್ತಿ,
ವಾಙ್ಮನಕ್ಕಭೇದ್ಯ ಶಿವಾಂಶಿಕ ಪರಮಾತ್ಮ ತಾನೆಂದರಿದು,
ಆ ಮಹಾಘನ ಶಿವಲಿಂಗದೊಳವಿರಳವಾಗಿ
ಶಿವಜ್ಞಾನಾನುಭಾವದಿಂದ ಶಿವನೊಳಗೆ
ಅನನ್ಯನುಭಾವಿಯಾಗಿಹಾತನೆ ಮುಕ್ತನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ. (೧೧: ೯೬೯)

ಈ ಆತ್ಮವು ಸದ್ಯಕ್ಕೆ ಬಂಧನಕ್ಕೊಳಗಾಗಿದೆ. ಅಂದರೆ, ಅದರ ಜೊತೆಯಲ್ಲಿ ಪಂಚಭೂತಗಳಿಂದಾದ ದೇಹ, ಅದರಲ್ಲಿರುವ ಕರ್ಮೇಂದ್ರಿಯ, ಜ್ಞಾನೇಂದ್ರಿಯ, ಅಂತಃಕರಣಗಳು ಇವೆ. ಆದರೆ ಅವು ಒಂದನ್ನು ಬಿಟ್ಟು ಇನ್ನೊಂದಿರಲು ಸಾಧ್ಯವಿಲ್ಲ. ಆತ್ಮವು ಚಿದ್ವಸ್ತುವಾದುದರಿಂದ ಅದಕ್ಕೆ ಸ್ವಂತವಾದ ಕೈಕಾಲು ಮುಂತಾದ ಜಡ ಅಂಗಗಳಿಲ್ಲ. ಆದುದರಿಂದ, ಅದು ಎಲ್ಲಿಯೂ ಚಲಿಸಲಾರದು, ಏನನ್ನೂ ನೋಡಲಾಗದು, ಏನನ್ನೂ ಚಿಂತಿಸಲಾಗದು. ಅದೇ ರೀತಿ, ಕೈಕಾಲುಗಳಿಗೆ ಚಲಿಸಲಾಗಲಿ, ಇಂದ್ರಿಯಗಳಿಗೆ ಕೇಳುವುದು, ನೋಡುವುದಾಗಲಿ, ಅಂತಃಕರಣಗಳಿಗೆ ಜಗತ್ತನ್ನು ಅರಿಯುವುದಾಗಲಿ ಸಾಧ್ಯವಾಗುವುದು ಅವು ಚೇತನ ವಸ್ತುವಾದ ಆತ್ಮವನ್ನು ಅವಲಂಬಿಸಿರುವುದರಿಂದ. ಆದರೆ ಅವೆಲ್ಲವೂ ಕೂಡಿ, ಅವುಗಳಲ್ಲಿ ಸಹಕಾರ ಏರ್ಪಟ್ಟರೆ, ಆಗ ಚಲಿಸುವುದು, ಮಾತಾಡುವುದು, ಮುಂತಾದ ದೈಹಿಕ ಕ್ರಿಯೆಗಳೂ, ಚಿಂತಿಸುವುದು, ನೋಡುವುದು, ಸುಖದುಃಖಗಳನ್ನು ಅನುಭವಿಸುವುದು ಮುಂತಾದ ಬೌದ್ಧಿಕ ಚಟುವಟಿಕೆಗಳೂ ಸಾಧ್ಯವಾಗುತ್ತವೆ.

ಅಂಗಕ್ಕೊಂದು ಸುಗುಣ ದುರ್ಗುಣ ಸೋಂಕುವಲ್ಲಿ
ಸೋಂಕಿದ ಕಲೆ ಅಂಗಕ್ಕೋ ಆತ್ಮಂಗೋ?
ಅಂಗಕ್ಕೆಂದಡೆ ಚೇತನವಿಲ್ಲದೆ ಒಂದನೂ ಮುಟ್ಟದಾಗಿ,
ಆತ್ಮಂಗೆಂದಡೆ ಒಂದು ಲಕ್ಷ್ಯದ ಮರೆಯಲಲ್ಲದೆ ಲಕ್ಷಿಸಿಕೊಳ್ಳದು.
ಇಂತೀ ಕಾಯವೂ ಆತ್ಮನೂ ಒಡಗೂಡಿ ಅರಿವಲ್ಲಿ
ಆ ಅರಿವು ಲಿಂಗವನೊಡಗೂಡಿಯಲ್ಲದೆ ಬೇರೆ ಒಡಲುವಿಡಿಯದು.
ಇಂತೀ ಅಂಗ ಆತ್ಮ ಲಿಂಗಮೂರ್ತಿ ತ್ರಿವಿಧ ಸಂಗವಾದಲ್ಲದೆ
ಮುಂದಣ ಅರಿವಿನ ಕುರುಹು ನಿರಿಗೆಯಾಗದು.
ಆ ನಿರಿಗೆಯ ಅಂಗ ಸುಸಂಗವಾದಲ್ಲಿ
ಭೋಗಬಂಕೇಶ್ವರಲಿಂಗವು ಅಂಗಸೋಂಕಿನಲ್ಲಿ ಅಡಗಿದ ತೆರ. (೬: ೧)

ಕಾಯವಳಿಯಲಾಗಿ ಜೀವನ ಚೇತನಕ್ಕೆ ಸ್ಥಾಪ್ಯವಿಲ್ಲ.
ಜೀವ ಹಿಂಗೆ ಘಟವೊಂದು ದಿನಕ್ಕೆ ಆಶ್ರಯಿಸಿ ನಿಲಲರಿಯದು.
ಒಂದ ಬಿಟ್ಟೋಂದ ಹಿಡಿವುದಕ್ಕೆ ಎಡೆತೆರಪಿಲ್ಲ.
ಇದು ಕಾರಣದಲ್ಲಿ, ಇಷ್ಟಕ್ಕೂ ಪ್ರಾಣಕ್ಕೂ ಬೆಚ್ಚಂತಿರಬೇಕು.
ನಿಂದ ಇರವಿನಲ್ಲಿ ಸಂದು, ಮತ್ತೊಂದು ವಿಚಾರಿಸಿಹೆನೆಂಬ ಸಂದೇಹವಳಿದಲ್ಲಿ
ತೋರುತ್ತದೆ ಬೆಳಗು ಸದಾಶಿವಮೂರ್ತಿಲಿಂಗದಲ್ಲಿ (೬: ೩೭೭)

ಆತ್ಮವು ಇಂದ್ರಿಯ ಅಂತಃಕರಣಗಳ ಸಹಾಯವಿಲ್ಲದೆ ಏನನ್ನೂ ಅರಿಯಲಾರದು. ಆದರೆ ಇದರರ್ಥ ಇಂದ್ರಿಯ, ಅಂತಃಕರಣಗಳು ಅರಿಯುತ್ತವೆ, ಎಂದಲ್ಲ. ಅದು ಚಿತ್ರ, ಮುಂತಾದ ಕರಣಗಳು ಹಾಗೂ ಇಂದ್ರಿಯಗಳ ಮೂಲಕ ಅರಿಯುತ್ತದೆ. ಅಂಗದ ಆಪ್ಯಾಯನವ ಆತ್ಮನರಿವಂತೆ, ಆತ್ಮನ ಸುಖದುಃಖವ ಅಂಗ ತಾಳುವಂತೆ,

ಅಂಗಕ್ಕೂ ಆತ್ಮಕ್ಕೂ ಅನ್ಯಭಿನ್ನವಿಲ್ಲ.
ಪೂಜಿಸುವ ಭಕ್ತ, ಪೂಜಿಸಿಕೊಂಬ ವಸ್ತು ಉಭಯವು
ಸದಾಶಿವಮೂರ್ತಿಲಿಂಗವು ತಾನೆ. (೬: ೬೪೫)

ಇಂದ್ರಿಯಗಳು ಐದಿದ್ದು, ಅವು ವರದಿ ಮಾಡುವ ವಿಷಯಗಳನ್ನು ಏಕೀಕರಿಸಿ, ವಿಶ್ಲೇಷಿಸಿ, ಸಂಬಂಧಿಸಿ, ಹೋಲಿಕೆ-ವ್ಯತ್ಯಾಸ ಮಾಡಲು ಒಂದು ಆತ್ಮ ಬೇಕಾಗುತ್ತದೆ. ನೋಡಿದ ಬಣ್ಣ, ಮೂಸಿದ ವಾಸನೆ, ರುಚಿಸಿದ ರುಚಿ, ಮೂರೂ ಒಂದೇ ವಸ್ತುವಿನ ಗುಣಗಳು ಎಂದು ಹೇಳಲು, ಬಣ್ಣ, ವಾಸನೆ, ಶಬ್ದ ಮುಂತಾದುವುಗಳನ್ನು ಗ್ರಹಿಸುವ ಆತ್ಮ ಬರೀ ಚೈತನ್ಯವಾಗಿದ್ದರೆ ಸಾಲದು, ಅದು ಒಂದೇ ಆಗಿರಬೇಕು; ಅದು ನಿನ್ನೆ ನೋಡಿದ ವಾಸನೆಗೂ ಈಗ ನೋಡುತ್ತಿರುವ ವಾಸನೆಗೂ ಯಾವ ವ್ಯತ್ಯಾಸ-ಹೋಲಿಕೆಗಳಿವೆ ಎಂದು ಪರಾಮರ್ಶಿಸಬೇಕು; ಆ ವಸ್ತುವನ್ನು ಸ್ವೀಕರಿಸಬೇಕೋ ಬೇಡವೋ ಎಂದು ನಿರ್ಧರಿಸಬೇಕು. ಹೀಗೆ ಅದಕ್ಕಿರುವ ಇಂದ್ರಿಯಗಳು ಐದಾದರೂ, ಅದರ ಕರಣಗಳು ನಾಲ್ಕಾದರೂ, ಅವುಗಳಲ್ಲಿ ಒಗ್ಗಟ್ಟನ್ನು ಮೂಡಿಸಬೇಕಾದರೆ ಆತ್ಮ ಎಂಬ ಒಂದು ವಸ್ತು ಬೇಕೇ ಬೇಕು. ಆತ್ಮನೇ ಜ್ಞಾತೃ, ಕರ್ತೃ ಮತ್ತು ಭೋಕ್ತೃ

ಆತ್ಮ ಘಟಮಧ್ಯದಲ್ಲಿ ನಿಂದು,
ಕೈಯ್ಯಲ್ಲಿ ಮುಟ್ಟಿ, ಕಿವಿಯಲ್ಲಿ ಕೇಳಿ, ನಾಸಿಕದಲ್ಲಿ ವಾಸಿಸಿ,
ಕಣ್ಣಿನಲ್ಲಿ ನೋಡಿ, ಬಾಯಲ್ಲಿ ಉಂಬಂತೆ,
ಪಂಚೇಂದ್ರಿಯಕ್ಕೆ ತತ್ತಾಗಿ ಹಂಚಿಕೊಂಡಿಹುದು ಒಂದೆ ಆತ್ಮ.
ಅವರವರ ಮುಖಂಗಳಿಂದ ಗುಣವನರಿವನ್ನಕ್ಕ,
ಇಷ್ಟದ ಮರೆಯಲ್ಲಿ ಚಿತ್ತ ನಿಂದು, ವಸ್ತುನಾಮವಾಗಬೇಕು.
ಸದಾಶಿವಮೂರ್ತಿಲಿಂಗವನರಿವುದಕ್ಕೆ. (೬: ೪೯೪)

ಮನಸ್ಸು ಮುಂತಾದವುಗಳೆಲ್ಲ ತೋರಿ ಅಡಗುತ್ತವೆ. ಎಲ್ಲ ದೈಹಿಕ ಮತ್ತು ಮಾನಸಿಕ ವ್ಯಾಪಾರಗಳೂ ಆತ್ಮನಿದ್ದರೆ ನಡೆಯುತ್ತವೆ; ಆತ್ಮ ದೇಹವನ್ನು ಬಿಟ್ಟ ಕೂಡಲೆ (ದೇಹದ ಸಾವಿನ ನಂತರ) ದೇಹದಲ್ಲಿ ಯಾವುದೇ ಚಟುವಟಿಕೆ ಇರುವದಿಲ್ಲ.

ಆತ್ಮನೆಂಬ ಅಂಬುಧಿಯಲ್ಲಿ
ನೊರೆ ತೆರೆ ತುಂತುರು ಸಾರ ಬುದ್ಬುದಂಗಳೆಂಬ
ತನು, ಮನ, ಶಬ್ದ, ಸ್ಪರ್ಶ, ರೂಪ, ರಸ, ಗಂಧ,
ಅಹಂಕಾರ, ಮಮಕಾರಂಗಳಾದವಯ್ಯಾ
ಮನ ನೆನಹಿನಂತೆ ತೋರಿ ಅಡಗುವುದಿಲ್ಲ,
ಅಡಗಿ ತೋರುವದಲ್ಲ ನೋಡಾ.
ಆತ್ಮನು ಶುಕ್ಲಶೋಣಿತದಿಂದ ತನು ಮನವಾದಂದು,
ಆಗಿ ಅವು ಹೋದಂದು ಹೋಹುದಲ್ಲ ನೋಡಾ ಆತ್ಮನು.
ಅಂತಹ ಆತ್ಮನಿಲ್ಲದಿರ್ದಡೆ
ಅನಂತಕೋಟಿ ಬ್ರಹ್ಮಾಂಡ ಪಿಂಡವೆಂಬ ಭಾಂಡಂಗಳಾಗಬಲ್ಲವೆ?
ಅಂತಹ ಆತ್ಮನಿಲ್ಲದಿರ್ದಡೆ ವಿಶ್ವ ಬ್ರಹ್ಮವೆನಿಸುವದೆ?
ಅಂತಹ ಆತ್ಮನಿಲ್ಲದಿರ್ದಡೆ ಮನನೆನಹು ಜನಿಸಬಲ್ಲವೆ?
ಅಂತಹ ಆತ್ಮನಿಲ್ಲದಿರ್ದಡೆ ವಿಷಯವ್ಯಸನಂಗಳು ತೋರಬಲ್ಲವೆ?
ಇದು ಕಾರಣ ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ
ಮನದ ನೆನಹೇ ಆತ್ಮನಲ್ಲವಯ್ಯಾ ಮಲ್ಲಿಕಾರ್ಜುನಾ. (೬: ೭೪೪)

ಅನೇಕ ಜನ್ಮಾಂತರಗಳಲ್ಲಿ ತಿರುಗುವ, ಆತ್ಮಗಳೂ ಸಹ ಬೇರೆ ಬೇರೆಯಲ್ಲ. ವಿವಿಧ ರೀತಿಯ ದೇಹಾದಿಗಳೊಂದಿಗಿರುವ ಜೀವಾತ್ಮಗಳು ವ್ಯಾವಹಾರಿಕ ದೃಷ್ಟಿಯಿಂದ ಬೇರೆಯಾದರೂ, ಅವೆಲ್ಲವೂ ಪರಶಿವನ ಅಂಗಗಳೆ, ಮಠಗಳಲ್ಲಿರುವ ಆಕಾಶ, ಮಡಕೆಗಳಲ್ಲಿರುವ ಆಕಾಶ ಹೇಗೆ ಮಹಾಕಾಶದ ಭಾಗಗಳೋ ಎಲ್ಲ ಪಿಂಡಗಳೂ (ಅಂಗ ಅಥವಾ ಜೀವಾತ್ಮಗಳೂ) ಅಂಗಸ್ಥಲದ ಭಾಗಗಳು (ಅಂಗಸ್ಥಲವು ನಿಷ್ಕಲ ಪರಶಿವನ ಭಾಗ). ಅಥವಾ ಎಲ್ಲ ಆತ್ಮಗಳೂ ಪರಶಿವನ ಅಂಗಗಳೇ ಹೊರತು, ಯಾವೊಂದು ಆತ್ಮವೂ ಅವನಿಂದ ಭಿನ್ನವಲ್ಲ. ಅಷ್ಟೆ ಅಲ್ಲ, ಅಂಗಸ್ಥಲ ಮತ್ತು ಲಿಂಗಸ್ಥಲ ಎರಡೂ ಸ್ವಭಾವದಲ್ಲಿ ಒಂದೇ - ಎರಡೂ ಚಿತ್ ಸ್ವರೂಪ ಉಳ್ಳವು.

ಜೀವ ಆತ್ಮನನರಿಯಬೇಕೆಂಬರು,
ಆತ್ಮ ಪರಮಾತ್ಮನನರಿಯಬೇಕೆಂಬರು.
ಇಂತೀ ಆತ್ಮಭೇದವನರಿವುದಕ್ಕೆ ಪದರದ ಹೊರೆಯೆ? ಅಟ್ಟಣೆಯ ಸಂದೆ?
ಅರಿದಲ್ಲಿ ಪರಮ, ಮರೆದಲ್ಲಿ ಜೀವನೆಂಬುದು.
ಆ ಉಭಯವ ಸಂಪಾದಿಸುವುದು ಅರಿವೊ? ಮರವೆಯೊ?
ಬಯಲ ಮರೆಮಾಡಿ ತೆರೆಗಟ್ಟಲಿಕ್ಕೆ ಅವರೊಳಗಾದ ದೃಷ್ಟವ ಕಾಬುದು,
ತೆರೆಯ ತೆಗೆಯಲಿಕ್ಕೆ ಬಯಲ ಕಾಬುದು.
ದೃಕ್ಕಿಂಗೆ ದೃಶ್ಯ ಒಂದೊ ಎರಡೊ ಎಂಬುದ ತಿಳಿದಲ್ಲಿ
ಸದ್ಯೋಜಾತಲಿಂಗದ ಕೂಟ. (೬: ೭೧೫)

ಅಂಗದೊಳಗಿಪ್ಪುದು ಲಿಂಗವಲ್ಲ, ಅಂಗದ ಹೊರಗಿಪ್ಪುದು ಲಿಂಗವಲ್ಲ.
ಎಲ್ಲ ಅಂಗಂಗಳನೊಳಕೊಂಡಿಪ್ಪ ಲಿಂಗ, ಹೋಗುತ್ತ ಬರುತ್ತ ಇಪ್ಪುದಲ್ಲ!
ಚಲನೆಯಿಲ್ಲದ ಅಚಲವಪ್ಪ ಲಿಂಗಕ್ಕೆ,
ಹೋಯಿತ್ತು ಎಂಬ ಸಂದೇಹವಿಲ್ಲವೆಂದನಂಬಿಗ ಚೌಡಯ್ಯ (೬: ೧೩)

ಎಂಬತ್ತುನಾಲ್ಕು ಲಕ್ಷ ಜೀವಜಂತುವಿನೊಳಗಿಪ್ಪ ಆತ್ಮನು
ಏಕಾತ್ಮನೊ, ಹಲವಾತ್ಮನೊ, ಬಲ್ಲಡೆ ನೀವು ಹೇಳಿರೆ?
ಅನಂತಕೋಟಿಬ್ರಹ್ಮಾಂಡದೊಳಗಿಪ್ಪ ಬ್ರಹ್ಮವು
ಏಕಬ್ರಹ್ಮವೊ, ಅನಂತಬ್ರಹ್ಮವೊ, ಬಲ್ಲಡೆ ನೀವು ಹೇಳಿರೆ?
ಬ್ರಹ್ಮಾಂಡವೊಂದು ತತ್ತಿ ಒಡೆದು, ಬಹಿರಾವರಣವಾದಲ್ಲಿ ಆ ಬ್ರಹ್ಮವು ಹೋಗಿ
ಮತ್ತೊಂದು ಬ್ರಹ್ಮಾಂಡದಲ್ಲಿ ಹೊಕ್ಕುದ ಕಂಡಡೆ,
ಕಂಡು ಬಲ್ಲವರು ನೀವು ಹೇಳಿದೆ.
ಗಂಧರ್ವಪಟ್ಟಣದಲ್ಲಿ ಹುಟ್ಟುವ ಬಹು ಬಣ್ಣವ ಬಲ್ಲರೆ ಬಲ್ಲ.
ಆಕಾಶಕ್ಕಡರಿದ ವಿಹಂಗನ ಮಾರ್ಗವ ಬಲ್ಲರೆ ಬಲ್ಲ.
ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜವ ಬಲ್ಲರೆ ಬಲ್ಲ. (೬: ೮೪೧)

ಹೀಗೆ ಪರಶಿವನಿಗೂ ಜೀವನಿಗೂ ಸ್ವರೂಪದಲ್ಲಿ ಭೇದವಿಲ್ಲದಿದ್ದರೂ, ಜೀವನು ನಾನಾ ಕಾರಣಗಳಿಂದಾಗಿ ಬಂಧನಕ್ಕೊಳಗಾಗಿದ್ದಾನೆ. ಆದರೆ ಈ ಕಾರಣಗಳು ಬಾಹ್ಯವಲ್ಲ, ತನ್ನಿಂದಲೇ ಮಾಡಿಕೊಂಡ ಬಂಧನವಿದು. ಅಜ್ಞಾನದಿಂದ (ಮರವೆ ಅಥವಾ ಮಾಯೆಯಿಂದ) ನಿತ್ಯಾನಿತ್ಯ ವಸ್ತುವಿವೇಕವನ್ನು ಕಳೆದುಕೊಂಡು ಅನೇಕ ರೀತಿಯ ಕರ್ಮಗಳನ್ನು ಮಾಡುತ್ತಾ ಅವುಗಳ ಫಲಗಳಾದ ದುಃಖವನ್ನು ಜನ್ಮಾಂತರದಲ್ಲಿ ಅನುಭವಿಸುವುದು ಅವನಿಗೆ ಬಿಡಿಸಿಕೊಳ್ಳಲಾರದ ಸಂಕೋಲೆಯಾಗಿದೆ.

ಜನಿತಕ್ಕೆ ತಾಯಾಗಿ, ಹೆತ್ತಳು ಮಾಯೆ.
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ.
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ.
ಇದಾವಾವ ಪರಿಯಲ್ಲಿ ಕಾಡಿತ್ತು ಮಾಯೆ.
ಈ ಮಾಯೆಯ ಕಳೆವಡೆ ಎನ್ನಳವಲ್ಲ.
ನೀವೆ ಬಲ್ಲಿರಿ, ಕೂಡಲಸಂಗಮದೇವಾ! (೧: ೧೫)

ಸಂಸಾರ ಭ್ರಮೆಯಿಂದಾಯಿತ್ತು ಅಜ್ಞಾನ,
ಅಜ್ಞಾನದಿಂದಾಯಿತ್ತು ಅಹಂಮಮತೆ,
ಅಹಂಮಮತೆಯಿಂದಾಯಿತ್ತು ಭವಬಂಧನ.
ಈ ಭವಬಂಧನದ ಲಹರಿವಿಡಿದು,
ಹರಿಸುರಬ್ರಹ್ಮಾದಿಗಳು ಜ್ಞಾನರತ್ನವ ನೀಗಿ,
ಪ್ರಳಯಕ್ಕೊಳಗಾದರು, ಕಪಿಲಸಿದ್ಧಮಲ್ಲಿಕಾರ್ಜುನಾ (೪: ೧೦೪೮)

[1] ಈ ತರಹದ ಸಂಖ್ಯೆಯ ವಿವರ: ಸವಸ-1/241 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-241 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])

ಪರಿವಿಡಿ (index)
*
Previous ಪರಮಾತ್ಮ ವಿಶ್ವವ್ಯಾಪಿ ದೇವನಿಗೂ ಸೃಷ್ಟಿಗೂ ಇರುವ ಸಂಬಂಧ Next