Previous ಮೋಕ್ಷವೆಂದರೇನು ಸಾಮಾಜಿಕ ನೆಮ್ಮದಿಗೆ ಅಗತ್ಯವಾದ ನೀತಿಗಳು Next

ಕೌಟುಂಬಿಕ ಹಿತಕ್ಕೆ ಬೇಕಾದ ನೀತಿಗಳು

*

ಕೌಟುಂಬಿಕ ಹಿತಕ್ಕೆ ಬೇಕಾದ ಲಿಂಗಾಯತ ನೀತಿಗಳು

ಕುಟುಂಬದಲ್ಲಿ ನೆಮ್ಮದಿ ಇರಬೇಕಾದರೆ ರೊಟ್ಟಿ ಬಟ್ಟೆ ಸೂರುಗಳಂತೆ ಕುಟುಂಬದ ಸದಸ್ಯರಲ್ಲಿ ನೈತಿಕ ಸಂಬಂಧವೂ ಇರಬೇಕು. ಇದರಲ್ಲಿ ಮುಖ್ಯ ಪಾತ್ರ ಗಂಡಹೆಂಡಿರ ನಡುವಿನ ಸಂಬಂಧ, ಹೆಂಡತಿ ಇದ್ದರೂ ಗಂಡ ಪರಸ್ತ್ರೀ ಸಂಗಮಾಡಿದರೆ ಆಗ ಅವನು
(೧) ತನ್ನ ಹೆಂಡತಿಗೂ ದ್ರೋಹ ಬಗೆಯುತ್ತಾನೆ
(೨) ಪರಸ್ತ್ರೀಯ ಗಂಡನಿಗೂ ನೋವುಂಟು ಮಾಡುತ್ತಾನೆ.
ಇದರಲ್ಲಿನ ಪಾಲುದಾರರೆಲ್ಲರೂ ಸಾಮಾಜಿಕ ನಿಂದೆಗೆ ಒಳಗಾದಂತೆ ಪರಶಿವನ ಶಿಕ್ಷೆಗೂ ಒಳಗಾಗುತ್ತಾರೆ. ವೇಶ್ಯ ಪರಸತಿ ಅಲ್ಲದಿದ್ದರೂ, ಗಂಡಂದಿರು ಅವಳ ಸಂಗ ಸಹ ಮಾಡಬಾರದು. ಏಕೆಂದರೆ, ಅದು ತನ್ನ ಸತಿಗೆ ಬಗೆದ ದ್ರೋಹವಾಗುತ್ತದೆ.

ಹಾದರಕ್ಕೆ ಹೋದಡೆ, ಕಳ್ಳದಮ್ಮವಾಯಿತ್ತು ;
ಹಾಳು ಗೋಡೆಗೆ ಹೋದಡೆ, ಚೇಳೂರಿತ್ತು;
ಅಬ್ಬರವ ಕೇಳಿ ತಳವಾರ ಉಟ್ಟ ಸೀರೆಯ ಸುಲಿದ
ನಾಚಿ ಹೋದಡೆ ಮನೆಯ ಗಂಡ ಬೆನ್ನ ಬಾರನೆತ್ತಿದ,
ಅರಸು ಕೂಡಲಸಂಗಮದೇವ ದಂಡವ ಕೊಂಡ. (೧: ೧೧೧)

ವೇಶಿಯ ಎಂಜಲ ತಿಂದು ಈಶ್ವರ ಪ್ರಸಾದವ ಭುಂಜಿಸಿದಡೆ
ಓಸರಿಸಿತ್ತಯ್ಯ ಲಿಂಗವು ಆ ದ್ರೋಹಿಗೆ
ಭಾಷೆ ತಪ್ಪುವನು! ಭವದಲ್ಲಿ ಬಳಲುವನೆಂದವನ ಕಂಡು
ಹೇಸಿ ಕಡೆಗೆ ತೊಲಗಿದೆನು ಕಾಣಾ ರಾಮನಾಥಾ (೭: ೮೪೭)

ಗಂಡನು ಹೆಂಡತಿಗೆ ಹೇಗೆ ದ್ರೋಹ ಬಗೆಯಬಾರದೋ ಹಾಗೆ ಹೆಂಡತಿಯೂ ಗಂಡನಿಗೆ ದ್ರೋಹ ಬಗೆಯಬಾರದು.

ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ,
ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ,
ಇದ್ದಡೇನೊ ಶಿವ ಶಿವಾ ಹೋದಡೇನೊ?
ಕೂಡಲಸಂಗಮದೇವಯ್ಯಾ
ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ. (೧: ೧೦೯)

ಗಂಡಹೆಂಡತಿ ಇಬ್ಬರೂ ಒಂದೇ ಧರ್ಮಕ್ಕೆ ಸೇರಿದ್ದರೆ, ಅವರಿಬ್ಬರ ನೀತಿಯೂ ಒಂದೇ ರೀತಿಯಾಗಿರಲು ಸಾಧ್ಯವಿದೆ. ಒಂದು ವೇಳೆ ಅವರು ಪೂಜಿಸುವ ದೇವರೇ ಬೇರೆ ಬೇರೆ ಆಗಿದ್ದರೆ, ಅವರ ನೀತಿಯಲ್ಲಿ ಹೊಂದಾಣಿಕೆ ಇರಲಾರದು.

ಗಂಡ ಶಿವಲಿಂಗದೇವರ ಭಕ್ತ,
ಹೆಂಡತಿ ಮಾರಿ ಮಸಣಿಯ ಭಕ್ತಿ,
ಗಂಡ ಕೊಂಬುದು ಪಾದೋದಕ-ಪ್ರಸಾದ,
ಹೆಂಡತಿ ಕೊಂಬುದು ಸುರೆ-ಮಾಂಸ
ಭಾಂಡ- ಭಾಜನ ಶುದ್ಧವಿಲ್ಲದವರ ಭಕ್ತಿ
ಹೆಂಡದ ಮಡಿಕೆಯ ಹೊರಗೆ ತೊಳೆದಂತೆ
ಕೂಡಲಸಂಗಮದೇವಾ. (೧: ೧೦೪)

ಗಂಡಹೆಂಡತಿಯರ ಧರ್ಮ-ನೀತಿ ಒಂದೇ ಆಗಿದ್ದರೆ ಇಬ್ಬರಿಗೂ ಒಳ್ಳೆಯದು. ಇದರಿಂದ ಕೌಟುಂಬಿಕ ನೆಮ್ಮದಿ ಇರುತ್ತದೆ. ಕಣ್ಣು ಎರಡಿದ್ದರೂ ನೋಡುವ ದೃಷ್ಟಿ ಮಾತ್ರ ಹೇಗೆ ಒಂದೇ ಆಗಿರುತ್ತದೆಯೋ ಹಾಗೆ ಸತಿಪತಿಗಳದು ಎರಡು ಜೀವವಾದರೂ ಅವರ ಧರ್ಮ ಮತ್ತು ನೀತಿ ಒಂದೇ ಆಗಿರಬೇಕು.

ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ.
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷ ಬೆರೆದಂತೆ ಕಾಣಾ!
ರಾಮನಾಥ. (೭: ೮೬೧)

ಉಭಯದೃಷ್ಟಿ ಏಕದೃಷ್ಟಿಯಲ್ಲಿ ಕಾಂಬಂತೆ
ದಂಪತಿ ಏಕಭಾವವಾಗಿ ನಿಂದಲ್ಲಿ,
ಗುಹೇಶ್ವರಲಿಂಗಕ್ಕೆ ಅರ್ಪಿತವಾಯಿತ್ತು, ಸಂಗನಬಸವಣ್ಣ. (೨: ೯೬೪)

[1] ಈ ತರಹದ ಸಂಖ್ಯೆಯ ವಿವರ: ಸವಸ-1/124 :- ಸಮಗ್ರ ವಚನ ಸಂಪುಟ-1, ವಚನ ಸಂಖ್ಯೆ-124 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])

ಪರಿವಿಡಿ (index)
Previous ಮೋಕ್ಷವೆಂದರೇನು ಸಾಮಾಜಿಕ ನೆಮ್ಮದಿಗೆ ಅಗತ್ಯವಾದ ನೀತಿಗಳು Next