Previous ಬಂಧ ಮತ್ತು ಮೋಕ್ಷ ಕೌಟುಂಬಿಕ ಹಿತಕ್ಕೆ ಬೇಕಾದ ನೀತಿಗಳು Next

ಮೋಕ್ಷವೆಂದರೇನು

*

ಮೋಕ್ಷ ಮತ್ತು ಮುಕ್ತನ ಲಕ್ಷಣಗಳು

ಮೋಕ್ಷವೆಂದರೇನು? ಅದನ್ನು ಏಕೆ ಪಡೆಯಬೇಕು? ಎಂಬುದು ಮುಂದಿನ ಪ್ರಶ್ನೆ, ಬಂಧನವು ಅನಾದಿ, ಯಾವಾಗ ನಾವು ಬಂಧನಕ್ಕೊಳಗಾದೆವು, ಏಕಾದೆವು, ಎಂಬುದು ಯಾರಿಗೂ ಗೊತ್ತಿಲ್ಲ. ಅದನ್ನು ಕೊನೆಗಾಣಿಸಬಹುದು. ಅದನ್ನು ಕೊನೆಗಾಣಿಸಲು ನಾವು ಪ್ರಯತ್ನಿಸದಿದ್ದರೆ, ಅದು ಅನಂತ ಕಾಲದವರೆಗೆ ನಮ್ಮನ್ನು ಕಾಡುತ್ತದೆ. ಆದರೆ, ಅನಂತ ಕಾಲದವರೆಗೆ ಭವಬಂಧನದ ದುಃಖಗಳಿಗೆ ಒಳಗಾಗಿರಲು ಯಾರಿಗೆ ಇಷ್ಟವಾಗುತ್ತದೆ? ಆದುದರಿಂದ, ಭವಬಂಧನದ ಸ್ವರೂಪವನ್ನು ಅರಿತವರು ಆದಷ್ಟು ಬೇಗ ಅದರಿಂದ ಬಿಡಿಸಿಕೊಳ್ಳಲು ಇಚ್ಛಿಸುತ್ತಾರೆ. ಅದರಿಂದ ಸಂಪೂರ್ಣವಾಗಿ ಬಿಡಿಸಿಕೊಳ್ಳುವುದನ್ನೇ ಮೋಕ್ಷ ಅಥವಾ ಮುಕ್ತಿ (ಬಿಡುಗಡೆ) ಎಂದು ಕರೆಯಲಾಗಿದೆ (ಮೋಕ್ಷವನ್ನು ಲಿಂಗಾಂಗಸಾಮರಸ್ಯ ಅಥವಾ ಲಿಂಗೈಕ್ಯ ಎಂದೂ ಕರೆಯಲಾಗಿದೆ).

ಬಂಧನದಿಂದ ಬಿಡಿಸಿಕೊಳ್ಳುವುದು ಎಂದರೇನು? ಸಂಕ್ಷಿಪ್ತವಾಗಿ ಹೇಳಬೇಕೆಂದರೆ: ಬಂಧನಕ್ಕೆ ಯಾವುವು ಕಾರಣಗಳೊ ಅವುಗಳಿಂದ ಬಿಡಿಸಿಕೊಳ್ಳುವುದು. ಈ ಕಾರಣಗಳು ಅನೇಕ. ಇವುಗಳನ್ನು ಹಂತಹಂತವಾಗಿ ನಿರ್ಮೂಲನೆ ಮಾಡಬೇಕು. ಮುಕ್ತನೆಂದರೆ ಕ್ಷುಲ್ಲಕ ಆಸೆಗಳನ್ನೆಲ್ಲ ಐಕ್ಯಸ್ಥಲವನ್ನು ಮುಟ್ಟುವ ಮುನ್ನವೇ ಅಳಿಸಿಹಾಕಿರುತ್ತಾನೆ.

ಹಸಿವರತಲ್ಲದೆ ಪ್ರಸಾದವೇದಿಯಲ್ಲ,
ತೃಷೆಯರತಲ್ಲದೆ ಪಾದೋದಕವೇದಿಯಲ್ಲ,
ನಿದ್ರೆಯರತಲ್ಲದೆ ಭವವಿರಹಿತನಲ್ಲ.
ಅನಲ ಪವನ (ಗುಣವರತಲ್ಲದೆ) ಜನನ ಮರಣ ರಹಿತನಲ್ಲಯ್ಯ
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ
ಲಿಂಗೈಕ್ಯವೆಲ್ಲರಿಗೆಲ್ಲಿಯದು? (೩: ೬೯೭)

ಕ್ಷುತ್ತು, ಪಿಪಾಸೆ, ಶೋಕ, ಮೋಹ, ಜರಾ, ಮರಣವೆಂಬ
ಷಡೂರ್ಮೆಗಳಿಲ್ಲದೆಯಿಪ್ಪನು.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ
ಷಡುವರ್ಗಂಗಳಿಲ್ಲದೆಯಿರುತಿರ್ಪನು.
ನಾಹಂ ಕೋಹಂ ಸೋಹಂ ಎಂಬ ಭಾವರಹಿತನಾಗಿಪ್ಪನು.
ಅಷ್ಟವಿಧಾರ್ಚನೆ, ಷೋಡಶೋಪಚಾರರಹಿತನಾಗಿಪ್ಪನು.
ಕರ್ಪುರ ಅಗ್ನಿಸಂಯೋಗವಾಗಿ ಕರ್ಪುರದ ಗುಣವಳಿದು ಅಗ್ನಿಯಾದಂತೆ
ಲಿಂಗವ ನೆನನೆನದು ಲಿಂಗವೇ ತಾನಾಗಿಪ್ಪುದೀಗ
ನಿಜಲಿಂಗೈಕ್ಯಸ್ಥಲವಿದೆಂಬೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರಪ್ರಭುವೇ! (೧೧: ೫೭೭)

ಅನಾದಿಕಾಲದಿಂದ ಬಂದ ಅವಿದ್ಯೆ ಅಥವಾ ಮರೆವಿನಿಂದಾಗಿ (ಮಾಯೆಯಿಂದಾಗಿ) ನಾನು ಶಿವನ ಅಂಗವಲ್ಲ, ಪ್ರತ್ಯೇಕ ವ್ಯಕ್ತಿ ಎಂಬ ಹುಸಿ ಸಿದ್ಧಾಂತವನ್ನು ನಾವು ರೂಪಿಸಿಕೊಂಡಿರುತ್ತೇವೆ. ಈ ಪ್ರತ್ಯೇಕತಾ ಭಾವವೇ ನಮ್ಮ ಎಲ್ಲ ದುಃಖಕ್ಕೆ ಮೂಲ. ಲಿಂಗೈಕ್ಯನಾದವನಿಗೆ ಈ ಅವಿದ್ಯೆ ಹೋಗಿ, ತಾನು ಲಿಂಗದ ಅಂಗ ಎಂಬ ಜ್ಞಾನ ಉದಯವಾಗುತ್ತದೆ.

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ,
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ,
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ,
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ,
ಕೂಡಲಸಂಗನ ಶರಣರ ಅನುಭಾವದ ಬಲದಿಂದ
ಎನ್ನ ಭವದ ಕೇಡು ನೋಡಯ್ಯಾ. (೧: ೮೪೨)

ಭವಕ್ಕೆ ಹುಟ್ಟುವನಲ್ಲ, ಸಂದೇಹ ಸೂತಕಿಯಲ್ಲ,
ಆಕಾರ ನಿರಾಕಾರನಲ್ಲ ನೋಡಯ್ಯಾ.
ಕಾಯವಂಚಕನಲ್ಲ, ಜೀವವಂಚಕನಲ್ಲ,
ಶಂಕೆಯಿಲ್ಲದ ಮಹಾಮಹಿಮ ನೋಡಯ್ಯಾ.
ಕೂಡಲಸಂಗನ ಶರಣನುಪಮಾತೀತ, ನೋಡಯ್ಯಾ. (೧: ೮೭೫)

ಮೋಕ್ಷವೆಂದರೆ ಸ್ವಾನುಭಾವ ಪಡೆಯುವುದು ಅಥವಾ ತನ್ನ ತಾನರಿಯುವುದು. ತನ್ನ ತಾನರಿಯುವುದೆಂದರೆ ನಾನು ಇಂಥವರ ಮಗ, ಇತ್ಯಾದಿ ಲೌಕಿಕ ಜ್ಞಾನ ಪಡೆಯುವುದಲ್ಲ; ತನ್ನ ನಿಜ ಸ್ವರೂಪವನ್ನು ಅರಿಯುವುದು. ಅಥವಾ, ನಾನು ಪ್ರತ್ಯೇಕ ವ್ಯಕ್ತಿಯಲ್ಲ, ನಾನು ಲಿಂಗದ ಅಂಗ, ಅಥವಾ ನನಗೂ ಲಿಂಗಕ್ಕೂ ತೆರಹಿಲ್ಲ ಎಂದರಿಯುವುದೇ ಸ್ವಾನುಭಾವ.

ಎಲ್ಲ ಎಲ್ಲವನರಿದು ಫಲವೇನಯ್ಯಾ, ತನ್ನ ತಾನರಿಯಬೇಕಲ್ಲದೆ?
ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರ ಕೇಳಲುಂಟೆ?
ಚೆನ್ನಮಲ್ಲಿಕಾರ್ಜುನಾ,
ನೀನರಿವಾಗಿ ಮುಂದುದೊರಿದ ಕಾರಣ
ನಿಮ್ಮಿಂದ ನಿಮ್ಮನರಿದೆನಯ್ಯಾ ಪ್ರಭುವೆ. (೫: ೧೧೬)

ಘಟವನೊಡೆದು ಬಯಲ ನೋಡಲದೇಕೆ?
ಘಟದೊಳಗಿಪ್ಪುದೆ ಬಯಲೆಂದರಿದಡೆ ಸಾಲದೆ?
ಪಟವ ಹರಿದು ತಂತುವ ನೋಡಲದೇಕೆ?
ಆ ಪಟವೆ ತಂತುವೆಂದರಿದಡೆ ಸಾಲದೆ?
ಕಟಕವ ಮುರಿದು ಕಾಂಚನವ ನೋಡಲದೇಕೆ?
ಆ ಕಟಕವೆ ಕಾಂಚನವೆಂದರಿದಡೆ ಸಾಲದೆ?
ತನ್ನನಳಿದು ಘನವ ನೋಡಲದೇಕೆ?
ತಾನೆ ಘನವೆಂದರಿದಡೆ ಸಾಲದೆ? ಹೇಳಾ! ರಾಮನಾಥ, (೭: ೭೯೧)

ಹೀಗೆಂದು ಅರಿತಾಗ ನಾನು ಮತ್ತು ಶಿವ ಎಂಬ ದ್ವೈತ ಭಾವ ಹೋಗಿ ನಾನು ಶಿವ ಬೇರೆ ಬೇರೆ ಅಲ್ಲ ಎಂಬ ಅದ್ವೈತಭಾವ ಬರುತ್ತದೆ. ಈ ಭಾವವನ್ನೆ ಶರಣರು ಅನೇಕ ಉಪಮೆಗಳ ಮೂಲಕ ಸ್ಪಷ್ಟಪಡಿಸಿದ್ದಾರೆ.

ಆಲಿಕಲ್ಲ ಕಡಿದು ಪುತ್ಥಳಿಯ ಕಂಡರಿಸುವಂತೆ,
ಉಪ್ಪಿನ ಪೊಟ್ಟಣವನುದಕದಲದ್ದುವಂತೆ,
ಕರ್ಪುರದ ಪ್ರಣತೆಯಲ್ಲಿ ಜ್ಯೋತಿಯ ಬೆಳಗುವಂತೆ
ಸಿದ್ಧಸೋಮನಾಥಲಿಂಗ ಗ್ರಾಹಿ ಅಗ್ರಾಹಿ ತಾ. (೬: ೩೨೦)

ಅಂಗ ಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು.
ಮನ ಲಿಂಗವ ವೇಧಿಸಿ, ಮನ ಲಿಂಗದೊಳಗಾಯಿತ್ತು.
ಭಾವ ಲಿಂಗವ ವೇಧಿಸಿ, ಭಾವ ಲಿಂಗದೊಳಗಾಯಿತ್ತು.
ಚೆನ್ನಮಲ್ಲಿಕಾರ್ಜುನಾ
ನಿಮ್ಮ ಒಲುಮೆಯ ಸಂಗದಲ್ಲಿರ್ದು ಸ್ವಯಂಲಿಂಗವಾಯಿತ್ತು. (೫: ೫)

ಹೀಗೆ ಲಿಂಗೈಕ್ಯನಾಗಿ ಪ್ರತ್ಯೇಕತಾ ಭಾವವನ್ನು ಕಳೆದುಕೊಂಡ ಮುಕ್ತನಿಗೆ ಯಾವ ಚಿಂತೆಗಳೂ ಇಲ್ಲ. ಅಲ್ಲದೆ, ಅವನಿಗೆ ಲಿಂಗಸಂಗದಿಂದಾಗಿ ಅನುಪಮ ಸುಖ, ಶಾಂತಿ, ಸಮಾಧಾನ, ದೊರೆತಿವೆ. ಜೀವನದ ಅತ್ಯುತ್ಕೃಷ್ಟ ಗುರಿಯನ್ನು ಮುಟ್ಟಿದೆನೆಂಬ ಸಾರ್ಥಕತಾಭಾವ ಅವನಲ್ಲಿ ನೆಲೆಸಿದೆ.

ತೆರಹಿಲ್ಲದ ನಡೆ, ತೆರಹಿಲ್ಲದ ನುಡಿ
ತೆರಹಿಲ್ಲದ ಸಂಭಾಷಣೆ ಸುಖವು.
ತೆರಹಿಲ್ಲದ ನಂಬಿದೆ, ಸ್ವಾನುಭಾವ ಸುಖವು,
ತೆರಹಿಲ್ಲದ ಮಹಿಮೆ, ತೆರಹಿಲ್ಲದ ವಿಚಾರ
ಕೂಡಲಸಂಗಮದೇವಾ, ನಿಮ್ಮ ಶರಣಂಗೆ! (೧: ೯೧೯)

ಕಾಯಗುಣವಳಿದು ಜೀವನ್ಮುಕ್ತನಾದ ಬಳಿಕ
ಸಮ್ಯಕ್‌ಜ್ಞಾನವೆಂಬ ಶಾಂತಿ ದೊರೆಕೊಂಡಿತ್ತು ನೋಡಿರೆ!
ಅಂತರಂಗ ಬಹಿರಂಗವೆಂಬುದನು ಅರಿಯನಾಗಿ
ದ್ವೈತಾದ್ವೈತವ ನೀಕರಿಸಿ, ನಿರ್ವಾಣ ನಿಷ್ಪತಿಯಾಗಿ,
ಗುಹೇಶ್ವರಾ ನಿಮ್ಮ ಶರಣನನುಪಮ ಸುಖಿಯಾಗಿರ್ದನು. (೨: ೧೦೮೫)

ಹೀಗೆ ಅತ್ಯುನ್ನತ ಧೈಯವನ್ನು ಸಾಧಿಸಿ ಪರಮ ಶಾಂತಿಯನ್ನು ಪಡೆದಿರುವ ಲಿಂಗೈಕ್ಯನಿಗೆ ಮತ್ತೆ ಯಾವ ಆಸೆಗಳೂ ಇಲ್ಲ. ವಾಸ್ತವವಾಗಿ, ಅವನಿಗೆ ಪ್ರಪಂಚದ ಉಳಿದೆಲ್ಲ ವಸ್ತುಗಳೂ ಕ್ಷುಲ್ಲಕವಾಗಿ ಕಾಣುತ್ತವೆ. ಅವನ ದೃಷ್ಟಿಯಲ್ಲಿ ಕೈಲಾಸವಾಗಲಿ ಸಾಯುಜ್ಯವಾಗಲಿ ಲಿಂಗೈಕ್ಯ ಸ್ಥಿತಿಗಿಂತ ಕೀಳು. ಏಕೆಂದರೆ ಸಾಯುಜ್ಯದಲ್ಲಿ ನಾನೆಂಬ ಭಾವ ಹೋಗಿರುವುದಿಲ್ಲ.

ಸ್ವಯಲಿಂಗದನುಭಾವ ತನಗೆ ದೊರೆಕೊಂಡ ಬಳಿಕ
ದೇವಲೋಕವೆಂಬುದೇನೋ? ಮರ್ತ್ಯಲೋಕವೆಂಬುದೇನೋ?
ಆವುದರಲ್ಲಿಯೂ ಭೇದವೇನಯ್ಯಾ,
ಕೂಡಲಸಂಗಮದೇವನೊಲಿದ ಬಳಿಕ ಆಲಸ್ಯವುಂಟೆ? (೧: ೯೪೭)

ಸಾಲೋಕ್ಯ ಬೇಕೆಂದು ಪೂಜಿಸಿ ಸಾಲೋಕ್ಯವ ಹಡೆವರು.
ಸಾಮೀಪ್ಯ ಬೇಕೆಂದು ಪೂಜಿಸಿ ಸಾಮೀಪ್ಯವ ಹಡೆವರು.
ಸಾರೂಪ್ಯ ಬೇಕೆಂದು ಪೂಜಿಸಿ ಸಾರೂಪ್ಯವ ಹಡೆವರು.
ಸಾಯುಜ್ಯ ಬೇಕೆಂದು ಪೂಜಿಸಿ ಸಾಯುಜ್ಯವ ಹಡೆವರು.
ಇಂತೀ ನಾಲ್ಕು ಪದವಿಗಳು ಬೇಕೆಂದು ಪೂಜಿಸಿ
ನಾಲ್ಕು ಪದವಿಗಳ ಬೇಡಿ ಇತ್ತಿತ್ತಲಾದರಲ್ಲದೆ,
ಅವರು ನಿಮ್ಮ ವೇದಿಸಲರಿಯರು.
ಅಂಥವರೆಲ್ಲ ಕೊಟ್ಟರೆ ಕೊಂಡಾಡುವ ಕೂಲಿಕಾರರು. ನಿಮ್ಮ ಬಲ್ಲರೆ?
ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನಲ್ಲದೆ. (೩: ೫೭೫)

ಮುಕ್ತನು ಲಿಂಗೈಕ್ಯನಾಗಿ ತಾನೆಂಬ ಪ್ರತ್ಯೇಕತಾಭಾವವನ್ನು ಕಳೆದುಕೊಂಡಿರುವುದರಿಂದ, ಅವನ ಎಲ್ಲ ಕ್ರಿಯೆಗಳೂ ನಿಸ್ವಾರ್ಥಕ್ರಿಯೆಗಳು; ಅವನು ಏನೇ ಮಾಡಿದರೂ ಅದು ತನಗಾಗಿ ಮಾಡಿದವಲ್ಲ, ಅವೆಲ್ಲ ಲಿಂಗಕ್ಕಾಗಿ ಮಾಡಿದ ಕ್ರಿಯೆಗಳು ಅಥವಾ ಲಿಂಗವೇ ಮಾಡಿಸಿದ ಕ್ರಿಯೆಗಳು. ಅಂಥವನು ಪೂಜೆ ಮುಂತಾದ ಯಾವ ವಿಧಿಗಳನ್ನೂ ಆಚರಿಸಬೇಕಿಲ್ಲ.

ಆತ್ಮನ ನಿಜವನರಿದು ಪರಮಾತ್ಮನ ಲಿಂಗವು
ತಾನೆಂದರಿದ ಶರಣಂಗೆ ಎಂತಿರ್ದಂತೆ ಪೂಜೆ ನೋಡಾ.
ಭೋಗಿಸಿದುದೆಲ್ಲವು ಶಿವಾರ್ಪಿತ
ಶರಣ ರುಚಿಸಿದುದೆಲ್ಲವು ಪ್ರಸಾದ
ಶರಣನರಿದುದೆಲ್ಲವು ಪರಬ್ರಹ್ಮ
ಶರಣ ನುಡಿದುದೆಲ್ಲವು ಪರತತ್ವ
ಶರಣ ತಾನೆ ಕೂಡಲಸಂಗಮದೇವ. (೧: ೧೦೩೬)

ಆರಾದಡೆಯೂ ನಿಮ್ಮ ನೆನೆವರಯ್ಯಾ, ನಾ ನಿಮ್ಮ ನೆನೆವನಲ್ಲ.
ಅದೇನು ಕಾರಣವೆಂದಡೆ; ನೆನೆವ ಎನ್ನ ಮನ ನೀವೆಯಾದಿರಾಗಿ.
ಆರಾದಡೆಯೂ ನಿಮ್ಮ ಪೂಜಿಸುವರಯ್ಯಾ, ನಾ ನಿಮ್ಮ ಪೂಜಿಸುವನಲ್ಲ.
ಅದೇನು ಕಾರಣವೆಂದೆಡೆ; ಎನ್ನ ತನುವಿಂಗೆ ನೀವೆ ಪೂಜೆಯಾದಿರಾಗಿ.
ಆರಾದಡೆಯೂ ನಿಮಗರ್ಪಿಸುವರಯ್ಯಾ, ನಾ ನಿಮಗರ್ಪಿಸುವನಲ್ಲ.
ಅದೇನು ಕಾರಣವೆಂದಡೆ ಎನ್ನ ಸರ್ವಾಂಗವೂ ನಿಮಗರ್ಪಿತವಾಯಿತ್ತಾಗಿ.
ಇದು ಕಾರಣ-ಭಕ್ತದೇಹಿಕದೇವ ದೇವದೇಹಿಕಭಕ್ತನೆಂಬ ಶ್ರುತಿಯನರಿದು,
ನಿಮ್ಮ ಮುಟ್ಟಿ ಅಬಿನ್ನನಾದೆನು, ಕೂಡಲಚೆನ್ನಸಂಗಮದೇವಾ. (೩: ೧೦೦೦)

ನಾವು ಮಾಡುವ ಕ್ರಿಯೆಗಳು ಸ್ವಾರ್ಥಕ್ಕಾದರೆ, ಅವು ನಮ್ಮನ್ನು ಕರ್ಮಕ್ಕೆ ಬಂಧಿಸುತ್ತವೆ. ಆದರೆ ಲಿಂಗೈಕ್ಯನು ಮಾಡುವ ಕ್ರಿಯೆಗಳು ಲಿಂಗಕ್ರಿಯೆಗಳಾದುದರಿಂದ, ಮತ್ತು ಲಿಂಗೈಕ್ಯನಿಗೆ ಸ್ವಾರ್ಥ ಆಸೆಗಳೇ ಇಲ್ಲವಾದುದರಿಂದ, ಅವನ ಕ್ರಿಯೆಗಳು ಕರ್ಮಫಲವನ್ನುಂಟು ಮಾಡುವುದಿಲ್ಲ. ಅವನು ತನ್ನ ಹಳೆಯ ಕರ್ಮಗಳನ್ನೂ ಆಧ್ಯಾತ್ಮಿಕ ಸಾಧನೆಯಿಂದಾಗಿ ಸುಟ್ಟು ಹಾಕಿದ್ದಾನೆ. ಹೀಗೆ ಅವನಿಗೆ ಕರ್ಮತ್ರಯಗಳಿಲ್ಲ. ಅವನಿಗೆ ಮಲತ್ರಯವಿಲ್ಲ. ಆದುದರಿಂದ ಅವನಿಗೆ ಪುನರ್ಜನ್ಮವಿಲ್ಲ; ಉತ್ಪತ್ತಿಸ್ಥಿತಿಲಯಗಳಿಲ್ಲ.

ಹುಟ್ಟುವಾತ ನಾನಲ್ಲಯ್ಯಾ, ಹೊಂದುವಾತ ನಾನಲ್ಲಯ್ಯಾ,
ಅದೇನೆಂಬೆನಯ್ಯಾ ಎಂತೆಂಬೆನಯ್ಯಾ?
ನಿಜವನರಿದ ಬಳಿಕ ಮತ್ತೆ ಹುಟ್ಟಲುಂಟೆ ಗುಹೇಶ್ವರಾ? (೨: ೬೨೨)

ಕರ್ತೃತ್ವವಿಲ್ಲಾಗಿ ಕರ್ಮವಿಲ್ಲ, ಕರ್ಮವಿಲ್ಲಾಗಿ ಜನನವಿಲ್ಲ,
ಜನನವಿಲ್ಲಾಗಿ ದೇಹವಿಲ್ಲ, ದೇಹವಿಲ್ಲಾಗಿ ಭೂತಾತ್ಮ ಪವಿತ್ರ
ಕರಣಾದಿ ಗುಣಂಗಳು ಮುನ್ನಿಲ್ಲ, ಹಿಂದಣ ಸ್ಥಿತಿಯಿಲ್ಲ, ಮುಂದಣ ಲಯವಿಲ್ಲ,
ಆದಿ ಮಧ್ಯ ಅವಸಾನವಿಲ್ಲ,
ಬಿಚ್ಚಿ ಬೇರಿಲ್ಲ, ಬೆರಸಿವೊಂದಿಲ್ಲ, ಉಪಮಾತೀತನೆಂಬೆ.
ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣನು ನುಡಿಗಡಣವಿಲ್ಲದ ಮುಗ್ಧನು. (೩: ೬೭೪)

ಶರಣರ ಪ್ರಕಾರ, ಮೋಕ್ಷವನ್ನು ಈ ಜನ್ಮದಲ್ಲೇ ಗಳಿಸಿಕೊಳ್ಳಬಹುದು. ಮತ್ತು ಅದು ಸಾಯುಜ್ಯ ಪದವಿಯಂತೆ ಸತ್ತನಂತರ ಗಳಿಸಿಕೊಳ್ಳಬಹುದಾದ ಸ್ಥಿತಿಯಲ್ಲ.

ದೇವಲೋಕ ಮರ್ತ್ಯಲೋಕವೆಂಬ ಸೀಮೆಯುಳ್ಳನ್ನಕ್ಕ
ಕೇವಲ ಶರಣನಾಗಲರಿಯ.
ಸತ್ತು ಬೆರಸಿಹೆನೆಂದಡೆ ಕಬ್ಬಿನ ತುದಿಯ ಮೆಲಿದಂತೆ
ಕೂಡಲಸಂಗಮದೇವಾ. (೧: ೯೨೪)

ಸತ್ತು ಹುಟ್ಟಿ ಕೆಟ್ಟವರೆಲ್ಲರು,
ದೇವಲೋಕಕ್ಕೆ ಹೋದರೆಂಬ ಬಾಲಭಾಷೆಯ ಕೇಳಲಾಗದು.
ಸಾಯದ ಮುನ್ನ ಸ್ವಯವನರಿದಡೆ
ದೇವನೊಲಿದ ನಮ್ಮ ಗುಹೇಶ್ವರನು. (೨: ೬೦೬)

ಬಯಲಾಗುವುದು.

ಶರಣರು ಅನೇಕ ವೇಳೆ ಮೋಕ್ಷ ಸಂಪಾದನೆಯನ್ನು 'ಬಯಲಾಗುವುದು' ಎನ್ನುತ್ತಾರೆ. ಆದ್ದರಿಂದ 'ಬಯಲಾಗುವುದು' ಎಂದರೇನೆಂಬುದನ್ನು, ಅದು ಹೇಗೆ 'ಮೋಕ್ಷಗಳಿಸುವುದು' ಎಂಬುದಕ್ಕೆ ಸಮಾನಾರ್ಥಕವಾಗಿದೆ ಎಂಬುದನ್ನು ಸ್ಥೂಲವಾಗಿಯಾದರೂ ಹೇಳಬೇಕಾಗುತ್ತದೆ.

ನಮ್ಮ ಹೊರಗಡೆ ಬಯಲು ಅಥವಾ ಆಕಾಶದಲ್ಲಿ ಅಸಂಖ್ಯ ವಸ್ತುಗಳು, ಪ್ರಾಣಿಗಳು, ಮನುಷ್ಯರು, ಗಿಡಮರಗಳು, ನಕ್ಷತ್ರಗಳು ಇತ್ಯಾದಿ ಇವೆ. ಮನುಷ್ಯ ಬಯಲಿನಲ್ಲಿರುವುದು ತನ್ನಿಚ್ಛೆಯ ಪ್ರಕಾರವೂ ಅಲ್ಲ, ತನ್ನ ಇಚ್ಛೆಯ ವಿರುದ್ಧವೂ ಅಲ್ಲ; ಅವನಿರಬೇಕೆಂದರೆ ಬಯಲಿನಲ್ಲೇ ಇರಬೇಕು ಎಂಬುದು ಪ್ರಾಕೃತಿಕ ನಿಯಮ. ಆದರೆ ಈ ರೀತಿ ಬಯಲಿನಲ್ಲಿರುವುದು ಅಥವಾ ಬಯಲಿನಲ್ಲಿ ಬೆರೆಯುವುದು ಖಂಡಿತ ಶರಣರ ಆದರ್ಶವಲ್ಲ.

ಶರಣರ ಪ್ರಕಾರ, ಬಯಲು ಎಂಬ ಪದಕ್ಕೆ ಮತ್ತೊಂದು ಅರ್ಥವಿದೆ. ಸಕಲ ಚರಾಚರವಸ್ತುಗಳನ್ನು ಒಳಗೊಳ್ಳುವ ಬಯಲನ್ನು ನಾವು ಭೌತಿಕ ಆಕಾಶ ಎಂದು ಕರೆದರೆ, ಭೌತಿಕ ಬಯಲನ್ನೂ ಅದರಲ್ಲಿರುವ ಸಕಲ ಚರಾಚರವಸ್ತುಗಳನ್ನೂ ಒಳಗೊಳ್ಳುವ ಪರಶಿವ ಅಥವಾ ಶೂನ್ಯಲಿಂಗವನ್ನು ಶರಣರು ಚಿದ್ಬಯಲು, ಚಿದಾಕಾಶ, ಚಿದಂಬರ ಎಂದು ಕರೆದಿದ್ದಾರೆ. ಎಲ್ಲವೂ ಭೌತಿಕ ಬಯಲಿನಲ್ಲಿರುವುದು ನಮಗೆ ಗೊತ್ತು. ಆದರೆ ಎಲ್ಲವನ್ನೂ ಚಿದ್ಬಯಲು ಆವರಿಸಿರುವುದು ನಮಗೆ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳಲು ಆಧ್ಯಾತ್ಮಿಕ ಸಾಧನೆ ಮಾಡಬೇಕು. ಚಿದ್ಬಯಲಿನಲ್ಲಿ ಬೆರೆಯಬೇಕೆಂದರೆ ಪ್ರಪಂಚವನ್ನೂ ಅದನ್ನಾವರಸಿಕೊಂಡಿರುವ ಭೌತಿಕ ಬಯಲನ್ನೂ ಇಲ್ಲವಾಗಿಸಬೇಕು, ಎಂದರ್ಥವಲ್ಲ. ನಮ್ಮ ಮನಸ್ಸಿನಲ್ಲಿರುವ ಎಲ್ಲ ಆಸೆ-ಆಕಾಂಕ್ಷೆಗಳನ್ನು, ಎಲ್ಲ ರಾಗ-ದ್ವೇಷಗಳನ್ನು, ಅಷ್ಟಮದಗಳನ್ನು, ಇಲ್ಲವಾಗಿಸುವುದೇ, ಅಂದರೆ ನಮ್ಮ ಆತ್ಮವನ್ನು ಖಾಲಿ ಮಾಡುವುದೇ, 'ಬಯಲಾಗುವುದು' ಎಂಬುದರ ಅರ್ಥ. ಹೀಗೆ ಶುದ್ಧವಾದ (ಬಯಲಾದ) ಆತ್ಮ ಹೊರಗಡೆ ಇರುವ ಚಿದ್ಬಯಲಿನೊಂದಿಗೆ ಬೆರೆಯುತ್ತದೆ (ಅಥವಾ ಒಂದಾಗುತ್ತದೆ). ಕುಡಿಕೆ ಮಡಿಕೆಗಳಲ್ಲಿ ಸಣ್ಣಸಣ್ಣ ಬಯಲುಗಳು ಇರುತ್ತವೆ. ಕುಡಿಕೆ ಮಡಿಕೆಗಳನ್ನು ಒಡೆದರೆ, ಆ ಸಣ್ಣಬಯಲುಗಳು ಮಹಾ ಬಯಲಿನಲ್ಲಿ ಒಂದಾಗುತ್ತವೆ. ಹಾಗೆಯೇ ನಮ್ಮ ಆತ್ಮಕ್ಕೆ ಮಿತಿಯನ್ನುಂಟು ಮಾಡುವ (ಚಿದ್ಬಯಲಿನಲ್ಲಿ ಬೆರೆಯದಂತೆ ಮಾಡುವ) ಸ್ವಾರ್ಥ ಚಿತ್ತವೃತ್ತಿಗಳನ್ನು ನಾಶಮಾಡಿದರೆ, ಶುದ್ಧವಾದ ಆತ್ಮ ಪರಮಾತ್ಮ ಎಂಬ ಬಯಲಿನಲ್ಲಿ ಒಂದಾಗುತ್ತದೆ.

ಈಗ ನಾವು ಸಾಧಾರಣ ಬಯಲಿನಲ್ಲಿರುವುದಕ್ಕೂ ಚಿದ್ಬಯಲಿನಲ್ಲಿರುವುದಕ್ಕೂ, (ಬಯಲಾಗುವುದಕ್ಕೂ ಇರುವ ಆಗಾಧ ವ್ಯತ್ಯಾಸವನ್ನು ಗುರುತಿಸಬಹುದು. ಬಯಲಾಗುವ ಮುನ್ನ ಇದು ನನ್ನ ದೇಹ, ನಾನು ಧಾರವಾಡದಲ್ಲಿದ್ದೇನೆ, ಇಷ್ಟು ಜಾಗ ನನಗೆ ಸೇರಿದ್ದು, ಇವರು ನನ್ನ ಬಂಧುಗಳು- ಮಿತ್ರರು, ನನಗಾಗಿ, ನನ್ನವರಿಗಾಗಿ ನಾನು ದುಡಿಯಬೇಕು, ಮುಂತಾಗಿ ಯೋಚಿಸುತ್ತೇನೆ. ಹೀಗೆ, ಪ್ರತಿಯೊಬ್ಬನೂ ತನ್ನದೇ ಆದ ಸೀಮೆಯೊಂದನ್ನು ನಿರ್ಧರಿಸಿಕೊಳ್ಳುತ್ತಾನೆ. ಆದರೆ, ಬಯಲಾದವನಿಗೆ ನಾನು ಬೇರೆ, ಬಯಲು ಬೇರೆ ಎಂಬ ಭೇದ-ಭಾವ ಹೋಗುತ್ತದೆ. ಇದರೊಂದಿಗೆ ನಾನು-ನನ್ನದು ಎಂಬ ಸ್ವಾರ್ಥ ಭಾವವೂ ಹೋಗುತ್ತದೆ. ಅಂದರೆ, ಅವನು ನಿಸ್ಸಿಮನಾಗುತ್ತಾನೆ. ಅವನು ಪರವಸ್ತುವಿನಂತೆ (ಬಯಲಿನಂತೆ) ಎಲ್ಲೆಲ್ಲಿಯೂ ಇರುತ್ತಾನೆ. ಇದು ಬಯಲಾಗುವುದು ಎಂಬುದರ ಸ್ಥೂಲ ಅರ್ಥ.

ಹೀಗೆ ಬಯಲಾದ ವ್ಯಕ್ತಿಗೆ ದೇಹಾದಿಗಳೆಲ್ಲ ಇರುತ್ತವೆ. ಆದರೆ ಅವನಿಗೆ ಅವುಗಳ ಅವಗುಣಗಳು ಇರುವುದಿಲ್ಲ. ಅಲ್ಲಮಪ್ರಭುವಿಗೆ ವ್ಯೋಮಕಾಯ ಎಂಬ ಹೆಸರಿತ್ತು. ಅವನಿಗೆ ದೇಹವೇ ಇಲ್ಲದಿದ್ದರೆ, ಅವನನ್ನು ಅಲ್ಲಮಪ್ರಭು ಎಂದು ಗುರುತಿಸುವುದಾದರೂ ಹೇಗೆ? ಅವನಿಗೂ ದೇಹವಿತ್ತು. ಆದರೆ ಅವನಿಗೆ ದೇಹಗುಣ ಅಥವಾ ಜೀವಭಾವ ಇರಲಿಲ್ಲ. ಅದನ್ನೇ ಕವಿ ಉತ್ಪ್ರೇಕ್ಷೆ ಮಾಡಿ, ಅವನಿಗೆ ದೇಹವೇ ಇರಲಿಲ್ಲ. ಆದುದರಿಂದಲೇ ಹಠಯೋಗಿಯ ಕತ್ತಿ ಅಲ್ಲಮನ ದೇಹದೊಳಗೆ ಪ್ರವೇಶ ಮಾಡಿದರೂ ಅವನಿಗೇನೂ ಆಗಲಿಲ್ಲ, ಎಂದು ಹೇಳಿದ್ದಾನೆ.

[1] ಈ ತರಹದ ಸಂಖ್ಯೆಯ ವಿವರ: ಸವಸ-1/241 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-241 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])

ಪರಿವಿಡಿ (index)
*
Previous ಬಂಧ ಮತ್ತು ಮೋಕ್ಷ ಕೌಟುಂಬಿಕ ಹಿತಕ್ಕೆ ಬೇಕಾದ ನೀತಿಗಳು Next