Previous ಇಷ್ಟಲಿಂಗದ ಸ್ಥಾನ ಇತಿಹಾಸದಲ್ಲಿ ಲಿಂಗದ ಕಲ್ಪನೆ Next

ಇಷ್ಟಲಿಂಗದ ಉಗಮ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಕ್ರಾಂತಿಕಾರಿ ಇಷ್ಟಲಿಂಗದ ಉಗಮ.

ಹನ್ನೆರಡನೆಯ ಶತಮಾನದಲ್ಲಿ "ಲಿಂಗ" ಲಾಂಛನವು ಹೊಸ ಅರ್ಥ ವ್ಯಾಪ್ತಿ, ಕರ್ತವ್ಯ, ಹೊಣೆಗಾರಿಕೆ ಹೊಂದಿತು, ಕಾಂತಿಪುರುಷ ಬಸವಣ್ಣನವರಿಂದಾಗಿ, ಸ್ಥಾವರಲಿಂಗ (ಚರಲಿಂಗ) ಮತ್ತು ಇಷ್ಟಲಿಂಗಗಳ ವ್ಯತ್ಯಾಸ ಕುರಿತು ವಿವರವಾಗಿ... ಮುಂದೆ ಬರೆಯಲಿರುವೆವು. ಸ್ಥಾವರ ಲಿಂಗಗಳ ಪೂಜೆಯಲ್ಲಿ ಜಾತಿ, ವರ್ಣ ನಿರ್ಬಂಧವಿಲ್ಲ. ಜ್ಯೋತಿರ್ಲಿಂಗಗಳನ್ನು ಎಂದಿನಿಂದಲೂ ಎಲ್ಲರೂ ಪೂಜಿಸುವುದನ್ನು ನಾವು-ನೀವು ಕಾಣುತ್ತೇವೆ. ಅದೇ ರೀತಿ ಚರಲಿಂಗಗಳನ್ನೂ ಸಹ ಯಾರು ಬೇಕಾದರೂ ಪೂಜಿಸಬಹುದಿತ್ತು. ಆದರೆ ಇವು ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯ, ಸಮಾನತೆ ಕೊಡಲಾರವಾಗಿದ್ದವು.

(1) ದೇವಾಲಯಗಳಿಂದಾಗಿ ಪೂಜಾರಿ, ಆ ಪೂಜಾರಿಯ ಮಧ್ಯಸ್ಥಿಕೆಯಿಂದ ಪುನಃ ಜಾತೀಯ ಅಡ್ಡಗೋಡೆ, ಶುಲ್ಕ ಕೊಡುವಿಕೆ, ಸಮಯ ನಿರ್ಬಂಧ, ಅಭಿಷೇಕ, ವಿಶೇಷ ಪೂಜೆಗಳಿಂದಾಗಿ ಅಪಾರ ಹಣ ವ್ಯಯ ಆಗುತ್ತಿದ್ದವು.

(2) ಸ್ಥಾವರಲಿಂಗವಾಗಲೀ ಚರಲಿಂಗವಾಗಲೀ ಕೇವಲ ಭಕ್ತಿಯ ತೃಪ್ತಿ ಮಾಡುವ ಶ್ರದ್ಧಾಕೇಂದ್ರಗಳಾಗಿದ್ದವೇ ವಿನಾ, ಯೋಗಾಭ್ಯಾಸಕ್ಕೆ ಸಹಕಾರಿಯಾಗಿರಲಿಲ್ಲ.

(3) ಸ್ಥಾವರಲಿಂಗ, ಚರಲಿಂಗಗಳು ಅವುಗಳ ಪೂಜಕರನ್ನು ಬೆಸೆದು, ಸಮಾಜವನ್ನು ಕಟ್ಟುವ ಸೂತ್ರಗಳಾಗಿರಲಿಲ್ಲ : ಪೂಜಕರುಗಳಲ್ಲಿ ಪರಸ್ಪರ ಊಟ, ಮದುವೆ ಮುಂತಾದ ಸಾಮಾಜಿಕ ಸಂಬಂಧಗಳು ನಡೆಯುತ್ತಿರಲಿಲ್ಲ.

(4) ಸ್ಥಾವರ ಮತ್ತು ಚರಲಿಂಗ ಪೂಜಕರಲ್ಲಿ ದೀಕ್ಷಾನಂತರವೂ ಪೂರ್ವಾಶ್ರಯ ನಿರಸನವಾಗುತ್ತಿರಲಿಲ್ಲ: ವರ್ಣಭೇದ, ಜಾತಿಭೇದ ಅಳಿಯುತ್ತಿರಲಿಲ್ಲ.

ಬಸವಣ್ಣನವರು ತಮ್ಮ ಬಾಲ್ಯದಿಂದಲೂ ಒಂದು ಆಳವಾದ ಚಿಂತನೆಯಲ್ಲಿ ನಿರತರಾಗಿದ್ದರು. ತಾತ್ವಿಕ ಹಿನ್ನೆಲೆಯಿಂದ ಕೂಡಿದ ಒಂದು ಲಾಂಛನವನ್ನು ಕುರುಹನ್ನು ಕಂಡು ಹಿಡಿದು ಅದರ ಮೂಲಕ ಸಾಮಾಜಿಕ ಸಮಾನತೆ ಸಾಧಿಸಿ, ಧಾರ್ಮಿಕ ಸ್ವಾತಂತ್ರ್ಯ ಸಾರುವುದೇ ಅಲ್ಲದೆ, ವಿಶೇಷವಾದ ಅನುಭೂತಿಗೆ ಸಾಧನವಾಗಬಲ್ಲ, ಯಾಗಾಭ್ಯಾಸಕ್ಕೆ ಸಹಕಾರಿಯಾಗಬಲ್ಲ ಭಕ್ತಿ ಪಥವನ್ನು ರೂಪಿಸಬೇಕೆಂದು ಯಾಚಿಸಿದ್ದರು. ಈ ದೃಷ್ಟಿಯಿಂದ ಅವರೊಬ್ಬ ಸಮಾಜ-ಅಧ್ಯಾತ್ಮ ವಿಜ್ಞಾನಿ (Socio-Spiritual Scientist) ಯಾಗಿ ಸಂಶೋಧನೆ ನಡೆಸಿದ್ದರೆನ್ನ ಬಹುದು.

ಒಂದು ದಿನ ಅವರ ಕನಸು ನನಸಾಯಿತು. ನಿರಾಕಾರನಾದ ದೇವರನ್ನು ಮನುಷ್ಯರ, ಪ್ರಾಣಿಗಳ ಆಕಾರದಲ್ಲಿ ಕಲ್ಪಿಸದೆ ವಿಶ್ವದಾಕಾರದಲ್ಲಿ ಅಂದರೆ ಗೋಳಾಕಾರದಲ್ಲಿ ಕಲ್ಪಿಸಿದರೆ, ಅಥವಾ ರೂಪುಗೊಳಿಸಿದರೆ ಅತ್ಯಂತ ಸೂಕ್ತವೆಂಬ ವಿಚಾರ ಸ್ಪುರಿಸಿತು. ಅಂಥ ಗೋಳಾಕಾರದ ರೂಪಿಗೆ ಹೊಳಪುಳ್ಳ ಕಪ್ಪು ಹೊದಿಕೆಯನ್ನು ಕೊಟ್ಟು ಬಿಟ್ಟರೆ ಅದು ದೃಷ್ಟಿ ಯಾಗ, ಅಥವಾ ತಾಟಕ ಯಾಗಕ್ಕೆ ಸೂಕ್ತ ಸಾಧನವಾಗಬಹುದೆಂಬ ವಿಚಾರವೂ ಸ್ಸುರಿಸಿತು. ಅಲ್ಲದೆ ಪರಮಾತ್ಮನಷ್ಟೇ ಮಹತ್ವಪೂರ್ಣವಾದ ವಸ್ತು ಜೀವಾತ್ಮ ಸಹ. ಮತ್ತು ಶಿವಯಾಗದ ಗುರಿಯೇ ಲಿಂಗ-ಅಂಗ ಸಮರಸ. ಆದ್ದರಿಂದ ಐತಿಹಾಸಿಕ ಪುರುಷ ಗುರು ಶಿವನ ಪ್ರತೀಕವಾಗಿದ್ದ ಸ್ಥಾವರ ಲಿಂಗವನ್ನು , ದೇಹದಾಕಾರದಲ್ಲಿ ಜೀವಾತ್ಮನ ಕುರುಹಾಗಿ ಪರಿವರ್ತಿಸಿ ವಿಶ್ವಾತ್ಮ-ಜೀವಾತ್ಮರ, ಲಿಂಗ-ಅಂಗರ ಬೆಸುಗೆಯನ್ನು ಸಂಕೇತಿಸುವಂತೆ ಕಪ್ಪು ಕಂಥೆಯಲ್ಲಿ ಪಂಚಸೂತ್ರ ಲಿಂಗವನ್ನಿಟ್ಟು ರೂಪಿಸಿದರು. ಈ ಕಲ್ಪನೆ ಕೃತಿಗಿಳಿದು ಸಾಕಾರಗೊಂಡಾಗ, ಅಂದರೆ ಬಸವಣ್ಣನವರ ಸಂಶೋಧನೆ ಯಶಸ್ವಿಯಾದಾಗ ಅವರ ಆನಂದ ಹೇಳತೀರದಷ್ಟು.

"ಇನ್ನು ನಾನು ಬದುಕಿದೆನು, ಬದುಕಿದೆನು:
ನಾ ಬಯಸುವ ಬಯಕೆ ಕೈಸಾರಿತಿಂದು"
- ಬ.ಷ.ಹೆ.ವ. ೧೦೨೧

ಎಂದು ಹರ್ಷೋದ್ವಿಗ್ನರಾಗಿ ಉದ್ಧರಿಸುವರು. ವಿಶ್ವ ಕುಟುಂಬವನ್ನು ಸಾರುವ, ಸಾಧಿಸುವ ಇಷ್ಟಲಿಂಗವು ರೂಪುಗೊಂಡ ಆ ದಿನ ಬಸವಣ್ಣನವರ ಜೀವನದಲ್ಲಿ ಮಾತ್ರವಲ್ಲ ಜಗತ್ತಿನ ಇತಿಹಾಸದಲ್ಲೇ ಚಿರಸ್ಮರಣೀಯ ಸುದಿನ. ಇಷ್ಟಲಿಂಗವನ್ನು ಸೂತ್ರವಾಗಿ, ಸಾಧನವಾಗಿ ಇಟ್ಟುಕೊಂಡು ಜಾತಿ ವರ್ಣ ವರ್ಗರಹಿತ ಸಮಾಜವೊಂದನ್ನು ಕಟ್ಟುವ ಸಂಕಲ್ಪ ಬಸವಣ್ಣನವರ ಹೃದಯದಲ್ಲಿ ರೂಪುಗೊಂಡ ಶುಭ ದಿನ - ಬಸವಕಾಂತಿ ದಿನ ಅದು.

ಗಾಂಧಿ ಎನ್ನುವ ಅಡ್ಡ ಹೆಸರು ಮಹಾತ್ಮಾಗಾಂಧಿ, ಇಂದಿರಾಗಾಂಧಿ, ಸಂಜಯಗಾಂಧಿ ಎಲ್ಲರ ಹೆಸರುಗಳಲ್ಲಿದ್ದರೂ, ಇವರೆಲ್ಲರ ವ್ಯಕ್ತಿತ್ವ-ಸಂದೇಶ, ಒಲವು-ನಿಲುವು ಬೇರೆ ಬೇರೆ. ಇದರಂತೆ ಲಿಂಗ ಎನ್ನುವ ಪದ ಸ್ಥಾವರಲಿಂಗ, ಚರಲಿಂಗ ಮತ್ತು ಇಷ್ಟಲಿಂಗಗಳಲ್ಲಿದ್ದರೂ, ಈ ಧರ್ಮ ಲಾಂಛನಗಳ ಅರ್ಥ ವ್ಯಾಪ್ತಿ ಬೇರೆಬೇರೆಯೇ ಇದೆ ಎಂಬುದನ್ನು ಮರೆಯಬಾರದು. ಮತ್ತು "ಬಯಲಿಗೊಂದು ರೂಪವ ಕೊಟ್ಟ" (ನೀಲಾಂಬಿಕೆ), "ಕಾಯದಲ್ಲಿಯೇ ಗುರುಲಿಂಗ-ಜಂಗಮದ ಆಯತವನ್ನು ಮಾಡಿಕೊಳ್ಳಲಿಕ್ಕೆ ಕರಸ್ಥಲಕ್ಕೆ ಕುರುಹನ್ನು ಕೊಟ್ಟ" (ಚಾಮರಸ), ವಿಶ್ವಗುರು ಬಸವಣ್ಣನವರ ಶ್ರೇಷ್ಠ ಕೊಡುಗೆ ಇಷ್ಟಲಿಂಗ ಎಂಬುದನ್ನು ನೆನಪಿಡಬೇಕು.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಇಷ್ಟಲಿಂಗದ ಸ್ಥಾನ ಇತಿಹಾಸದಲ್ಲಿ ಲಿಂಗದ ಕಲ್ಪನೆ Next