ಓಂ ಶ್ರೀ ಗುರುಬಸವ ಲಿಂಗಾಯ ನಮಃ | ಲಿಂಗ |
ಗುರು |
ಕೆಲವರಿಗೆ ತಾವು ಭವಚಕ್ರಕ್ಕೆ (ಸಂಸಾರಬಂಧನಕ್ಕೆ) ಸಿಕ್ಕಿಕೊಂಡಿರುವುದರ ಅರಿವಾಗುತ್ತದೆ. ಅದರಿಂದ ಬಿಡಿಸಿಕೊಳ್ಳುವುದು ಹೇಗೆ ಎಂಬುದೇ ಅವರಿಗೆ ಒಂದು ಘೋರ ಸಮಸ್ಯೆಯಾಗುತ್ತದೆ.
ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ,
ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯಾ.
ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು,
ಇನ್ನೆಂದಿಂಗೆ ಮೋಕ್ಷವಹುದೊ ಕೂಡಲಸಂಗಮದೇವಾ? (೧: ೯)
ಪುಣ್ಯಪಾಪಂಗಳನರಿಯದ ಮುನ್ನ,
ಅನೇಕ ಭವಂಗಳ ಬಂದೆನಯ್ಯಾ!
ಬಂದು ಬಂದು ನೊಂದು ಬೆಂದೆನಯ್ಯಾ!
ಬಂದು ನಿಮ್ಮ ನಂಬಿ ಶರಣುವೊಕ್ಕೆನಯ್ಯಾ!
ನಿಮ್ಮನೆಂದೂ ಅಗಲದಂತೆ ಮಾಡಿ ನಡೆಸಯ್ಯಾ
ನಿಮ್ಮ ಧರ್ಮ ನಿಮ್ಮ ಧರ್ಮ.
ನಿಮ್ಮಲೊಂದು ಬೇಡುವೆನು,
ಎನ್ನ ಬಂಧನ ಬಿಡುವಂತೆ ಮಾಡಯ್ಯಾ
ಚೆನ್ನಮಲ್ಲಿಕಾರ್ಜುನಾ. (೫: ೨೮೦)
ಈ ಸಮಸ್ಯೆಯ ತೀವ್ರತೆಯ ಅರಿವಾದವರು ಮಾರ್ಗದರ್ಶನಕ್ಕಾಗಿ ಗುರುವಿನ ಬಳಿ ಬರುತ್ತಾರೆ. ಗುರು ತಾನಾಗಲೇ ಸಂಸಾರಬಂಧನದಿಂದ ಬಿಡುಗಡೆ ಪಡೆದಿರುವುದರಿಂದ ಅವನೇ ಮಾರ್ಗದರ್ಶನಕ್ಕೆ ಸೂಕ್ತ ವ್ಯಕ್ತಿ. ಅವನೇ ಕರುಣೆಯಿಂದ ಮುಮುಕ್ಷುವಿನ ಕೈಹಿಡಿದು ನಡೆಸಬೇಕು. ಆಧ್ಯಾತ್ಮಿಕ ಪಥವು ಬಹಳ ಶ್ರಮದಾಯಕವೂ ಸಂಕೀರ್ಣವೂ ದೀರ್ಘವೂ ಆದುದರಿಂದ, ಮುಮುಕ್ಷುವು ಗುರುವಿನ ಸತತ ಮಾರ್ಗದರ್ಶನವಿಲ್ಲದೆ ತನ್ನ ಗುರಿ ಸಾಧಿಸಲಾರ. ಅವನ ಆಧ್ಯಾತ್ಮಿಕ ಜೀವನ ಪ್ರಾರಂಭವಾಗುವುದು ಮತ್ತು ಮುಂದುವರಿಯುವುದು ಗುರುವಿನಿಂದಲೇ ಆದುದರಿಂದ, ಗುರುವಿಗೆ ವಿಶೇಷ ಪ್ರಾಮುಖ್ಯ.
ಮಡಕೆಯ ಮಾಡುವಡೆ ಮಣ್ಣೆ ಮೊದಲು,
ತೊಡಿಗೆಯ ಮಾಡುವಡೆ ಹೊನ್ನೆ ಮೊದಲು,
ಶಿವಪಥವನರಿವಡೆ ಗುರುಪಥವೆ ಮೊದಲು,
ಕೂಡಲಸಂಗಮದೇವರನರಿವಡೆ
ಶರಣರ ಸಂಗವೆ ಮೊದಲು. (೧: ೭೦)
ಎನ್ನ ಸದ್ಗುರುಸ್ವಾಮಿ ಎನಗೆ ಕರುಣಿಸಿದ ಕಾರುಣ್ಯವ
ನಾನೇನೆಂದುಪಮಿಸುವೆನಯ್ಯಾ ?
ಗುರುಲಿಂಗವು ಸಾಕ್ಷಾತ್ ಪರಶಿವನಿಂದ ವಿಶೇಷವು !
ಜ್ಯೋತಿಯಲೊದಗಿದ ಜ್ಯೋತಿಯಂತಾಯಿತ್ತು,
ದರ್ಪಣದೊಳಗಣ ಪ್ರತಿಬಿಂಬದಂತಾಯಿತ್ತು,
ಪದಕದೊಳಗಣ ರತ್ನದಂತಾಯಿತ್ತು;
ರೂಪದ ನೆಳಲಿನ ಅಂತರಂಗದಂತಾಯಿತ್ತು,
ಕೂಡಲಚೆನ್ನಸಂಗಯ್ಯಾ,
ದರ್ಪಣಕ್ಕೆ ದರ್ಪಣವ ತೋರಿದಂತಾಯಿತ್ತು,
ಎನ್ನ ಸದ್ಗರುವಿನುಪದೇಶವೆನಗಯ್ಯಾ. (೩: ೧೦೫೩)
ಪ್ರತಿಯೊಬ್ಬರಲ್ಲಿಯೂ ಲಿಂಗ ಅಥವಾ ಶಿವ ಅವ್ಯಕ್ತವಾಗಿ ಅಡಗಿದ್ದಾನೆ. ಶಿವಯೋಗದ ಮೂಲಕ ಅವನನ್ನು ಸಾಕ್ಷಾತ್ಕರಿಸಿಕೊಳ್ಳುವವರೆಗೂ ನಮ್ಮಲ್ಲೇ ಇರುವ ಶಿವ ನಮಗೆ ವ್ಯಕ್ತವಾಗುವುದೇ ಇಲ್ಲ. ಸಂಸಾರದಿಂದ ಬಿಡುಗಡೆ ಪಡೆಯಬೇಕೆಂದರೆ ಸಾಧಕನು ಶಿವನನ್ನು ಸಾಕ್ಷಾತ್ಕರಿಸಿಕೊಳ್ಳಲೇಬೇಕು ಎಂದು ಗುರು ಉಪದೇಶಿಸುತ್ತಾನೆ.
ಕಾಯಕ್ಕೆ ಕಾಯವಾಗಿ, ತನುವಿಂಗೆ ತನುವಾಗಿ
ಮನಕ್ಕೆ ಮನವಾಗಿ ಜೀವಕ್ಕೆ ಜೀವವಾಗಿ ಇದ್ದುದನಾರುಬಲ್ಲರೊ?
ಅದು ದೂರವೆಂದು, ಅದು ಸಮೀಪವೆಂದು
ಮಹಂತ ಗುಹೇಶ್ವರನೊಳಗೆಂದು, ಹೊರಗೆಂದು
ಬರುಸೂರೆಹೋದರೆಲ್ಲರೂ. (೨: ೧೦೮೨)
ಹೃದಯಕಮಲದಲ್ಲಿ ವಾಸವಾಗಿರುವಾತನೊಬ್ಬನು.
ಮನದ ಕೊನೆಯಲ್ಲಿ ಇರುವಾತನೊಬ್ಬನು.
ಚಿದಾಕಾಶದಲ್ಲಿರುವಾತನೊಬ್ಬನು.
ಇವರೆಲ್ಲರಲ್ಲಿ ಇರುವಾತನೊಬ್ಬನು,
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನು. (೪: ೧೧೭೮)
ಆದುದರಿಂದ ಶಿವನನ್ನರಿಯುವುದೆಂದರೆ ತನ್ನನ್ನು ತಾನರಿಯುವುದು ಎಂದರ್ಥ. ಅದು ಬಿಟ್ಟು ಶಿವ ಹೊರಗೆಲ್ಲೂ ಇದ್ದಾನೆಂದು ತಿಳಿಯುವುದು ಮೂರ್ಖತನವಾಗುತ್ತದೆ. ಶಿವಸಾಕ್ಷಾತ್ಕಾರಕ್ಕೆ ಲಿಂಗದೀಕ್ಷೆ ಆವಶ್ಯಕ. ಶಿವನು ನಮ್ಮಲ್ಲಿಯೇ ಅವ್ಯಕ್ತವಾಗಿದ್ದರೂ ದೀಕ್ಷಾ ಸಮಯದಲ್ಲಿ ಗುರುವು ಹಸ್ತಮಸ್ತಕ ಸಂಯೋಗದ ಮೂಲಕ ಶಿವನನ್ನು ಇಷ್ಟಲಿಂಗದಲ್ಲಿ ಪ್ರತಿಷ್ಠಾಪಿಸುತ್ತಾನೆ.
ಕಾಣಬಾರದ ಗುರು ಕಣ್ಗೆ ಗೋಚರವಾದಡೆ;
ಹೇಳಲಿಲ್ಲದ ಬಿನ್ನಪ, ಮುಟ್ಟಲಿಲ್ಲದ ಹಸ್ತಮಸ್ತಕಸಂಯೋಗ.
ಹೂಸಲಿಲ್ಲದ ವಿಭೂತಿಯ ಪಟ್ಟ, ಕೇಳಲಿಲ್ಲದ ಕರ್ಣಮಂತ್ರ
ತುಂಬಿ ತುಳುಕದ ಕಲಶಾಭಿಷೇಕ ಆಗಮವಿಲ್ಲದ ದೀಕ್ಷೆ,
ಪೂಜೆಗೆ ಬಾರದ ಲಿಂಗ, ಸಂಗವಿಲ್ಲದ ಸಂಬಂಧ.
ಸ್ವಯವಪ್ಪ ಅನುಗ್ರಹ,
ಅನುಗೊಂಬಂತೆ ಮಾಡಾ ಗುಹೇಶ್ವರಾ. (೨: ೧೦೭೪)
ಹೀಗೆ ಗುರುವಿನಿಂದ ದೀಕ್ಷೆ ಪಡೆದ ಸಾಧಕನು ಗುರುವಿನಂತಾಗಲು ಪ್ರಯತ್ನಿಸಬೇಕು. ಗುರುವಿನ ಜೊತೆಯಲ್ಲಿ ಇದ್ದು, ಎಲ್ಲ ವಿಷಯಗಳಲ್ಲಿಯೂ ಅವನಿಂದಲೇ ಮಾರ್ಗದರ್ಶನ ಪಡೆಯುವ ಶಿಷ್ಯನಿಗೆ ಇದು ಹೊಸ ಜನ್ಮ ಅವನು ಗುರುಪುತ್ರ ಅಥವಾ ಗುರುಕರಸಂಜಾತ. ಅಂದರೆ ಅವನು ಮತ್ತೆ ಮೊದಲಿನಂತೆ ಸಂಸಾರಮುಖಿಯಾಗಬಾರದು.
ಜ್ಯೋತಿಯೊಳಗಣ ಕರ್ಪುರಕ್ಕೆ ಅಪ್ಪುವಿನ ಕೈಯಲಿಪ್ಪ ಉಪ್ಪಿಂಗೆ,
ಶ್ರೀ ಗುರುವಿನ ಹಸ್ತದೊಳಗಿಪ್ಪ ಶಿಷ್ಯಂಗೆ - ಈ ಮೂರಕ್ಕೆಯೂ
ಬೇರೆ ಕ್ರಿಯಾವರ್ತನೆಯುಂಟೆ ಗುಹೇಶ್ವರಾ? (೨: ೬೨)
ಬೀಜದಿಂದ ಹುಟ್ಟಿದ ವೃಕ್ಷವು ಬೀಜವ ಹೋಲುವಂತೆ,
ತಾಯಿಯಿಂದ ಹುಟ್ಟಿದ ಮಕ್ಕಳು ತಾಯಿಯ ಹೋಲುವಂತೆ,
ಧಾನ್ಯಗಳಿಂದ ಬೆಳೆದ ಬೆಳಸು ಧಾನ್ಯಂಗಳ ಹೋಲುವಂತೆ,
ಗುರುವಿನಿಂದ ಹುಟ್ಟಿದ ಶಿಷ್ಯನು ಗುರುರೂಪವಲ್ಲದೆ
ಬೇರೊಂದು ರೂಪವಲ್ಲವಯ್ಯಾ ಅಖಂಡೇಶ್ವರಾ. (೧೪: ೨೮೯)
ಆದರೆ, ಗುರುವಾದವನು ಕೇವಲ ದೀಕ್ಷಾವಿಧಿಗಳನ್ನು ತಿಳಿದಿದ್ದರೆ ಸಾಲದು; ಅವನು ನಿಜವಾಗಿಯೂ ಜ್ಞಾನಿಯಾಗಿರಬೇಕು ಮತ್ತು ಮುಕ್ತನಾಗಿರಬೇಕು.
ಅರಿಯದ ಗುರು ಅರಿಯದ ಶಿಷ್ಯಂಗೆ
ಅನುಗ್ರಹವ ಮಾಡಿದಡೇನಪ್ಪುದೆಲವೊ.
ಅಂಧಕನ ಕೈಯನಂಧಕ ಹಿಡಿದಡೆ
ಮುಂದನಾರು ಕಬರು ಹೇಳಲೆ ಮರುಳೆ.
ತೊರೆಯಲದ್ದಿದವನನೀಸಲರಿಯದವ
ತೆಗೆವ ತೆರನಂತೆಂದನಂಬಿಗ ಚೌಡಯ್ಯ. (೬: ೩೯)
ಗುರುಕಾರುಣ್ಯವೇ ಸದಾಚಾರ
ಗುರುಕಾರುಣ್ಯವೇ ಶಿವಾಚಾರ
ಗುರುಕಾರುಣ್ಯವೇಪ್ರಸಾದ ರುಚಿ
ಮುಂದೆಗುರು ಹಿಂದೆ ಲಿಂಗ ಕೂಡಲ ಸಂಗಮದೇವಾ. - ಬಸವಣ್ಣನವರು
ಗುರುಕಾರುಣ್ಯವೇ ಸದಾಚಾರ, ಶಿವಾಚಾರ, ಪ್ರಸಾದ ಸಂತೃಪ್ತಿ, ಗುರು ಇದ್ದರೆ ತಾನೆ ದೀಕ್ಷೆ, ಪರಮಾತನ ಕೃಪೆ, ಸಾಧನೆ ಎಲ್ಲವೂ.
ಗುರುವಚನವಲ್ಲದೆ ಲಿಂಗವೆನಿಸದು
ಗುರುವಚನವಲ್ಲದೆ ನಿತ್ಯವೆಂದೆನಿಸದು
ಗುರುವಚನವಲ್ಲದೆನೇಮವೆಂದೆನಿಸದು
ತಲೆಯಿಲ್ಲದ ಅಟ್ಟಗೆ ಪಟ್ಟವ ಕಟ್ಟುವ ಉಭಯ ಭೃಷ್ಟರ
ಮೆಚ್ಚುವನೆ ನಮ್ಮ ಕೂಡಲ ಸಂಗಮದೇವ ? -ಬಸವಣ್ಣನವರು
ಗುರುವಿನ ಮೂಲಕ ಅನುಗ್ರಹಿತವಾಗಿ ಬರದ ಕುರುಹು ಎಷ್ಟಲಿಂಗವೆಂದೆನಿಸದು. ಲಿಂಗಪೂಜೆಯು ನಿತ್ಯ ಲಿಂಗಾರ್ಚನೆ ಎನ್ನಿಸದು. ಆಚರಣೆ ನೇಮವೆಂದೆನಿಸದು. ತಲೆಯಿಲ್ಲದ ಮುಂಡಕ್ಕೆ ಯಾರಾದರೂ ಪಟ್ಟ ಕಟ್ಟುವರೇ ?
ಗುರು ಪರಬ್ರಹ್ಮಮಗಣಿತಮಗೋಚರಂ.
ಗುರು ಪರಂ ಜ್ಞಾನಮಾನಂದರೂಪಂ.
ಗುರು ಪರಮತೇಜ ಬೀಜಾದಿ ಪಂಚಾಕ್ಷರಂ.
ಗುರು ಪಾದಕೋಟ್ಯಷ್ಟ ತೀರ್ಥಂಗಳಂ.
ಗುರು ವಚನರಚನ ಉಪದೇಶ ಮಂತ್ರಂ.
ಗುರು ಭಕ್ತಿ ಮುಕ್ತಿ ಮೋಕ್ಷ ಕಾರಣ ಇಹಪರಂ.
ಗುರು ಘನತರದ ಮಹಿಮೆಯನು ಗುರುಬಸವನೆ ಬಲ್ಲ - ಗುರುಬಸವೇಶ್ವರ
ಗುರುವಿನ ಕರುಣದಿಂದ ಲಿಂಗವ ಕಂಡೆ, ಜಂಗಮನ ಕಂಡೆ.
ಗುರುವಿನ ಕರುಣದಿಂದ ಪಾದೋದಕವ ಕಂಡೆ, ಪ್ರಸಾದವ ಕಂಡೆ.
ಗುರುವಿನ ಕರುಣದಿಂದ ಸಜ್ಜನ ಸದ್ಭಕ್ತರ ಸದ್ಗೋಷ್ಠಿಯ ಕಂಡೆ.
ಚೆನ್ನಮಲ್ಲಿಕಾರ್ಜುನಯ್ಯಾ,
ನಾ ಹುಟ್ಟಲೊಡನೆ ಶ್ರೀಗುರು ವಿಭೂತಿಯ ಪಟ್ಟವ ಕಟ್ಟಿ
ಲಿಂಗಸ್ವಾಯತವ ಮಾಡಿದನಾಗಿ ಧನ್ಯಳಾದೆನು./೨೦೧
ಸದ್ಗುರು ಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ
ತಚ್ಫಿಷ್ಯನ ಮಸ್ತಕದ ಮೇಲೆ ತನ್ನ ಹಸ್ತವನಿರಿಸಿದಡೆ
ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯಾ.
ಒಪ್ಪುವ ಶ್ರೀ ವಿಭೂತಿಯ ನೊಸಲಿಂಗೆ ಪಟ್ಟವಕಟ್ಟಿದಡೆ
ಮುಕ್ತಿರಾಜ್ಯದ ಒಡೆತನಕ್ಕೆ ಪಟ್ಟವಕಟ್ಟಿದಂತಾಯಿತ್ತಯ್ಯಾ.
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂಬ
ಪಂಚಕಳಶದಭಿಷೇಕವ ಮಾಡಿಸಲು,
ಶಿವನ ಕರುಣಾಮೃತದ ಸೋನೆ ಸುರಿದಂತಾಯಿತ್ತಯ್ಯಾ.
ನೆರೆದ ಶಿವಗಣಂಗಳ ಮಧ್ಯದಲ್ಲಿ
ಮಹಾಲಿಂಗವನು ಕರತಳಾಮಳಕವಾಗಿ ಶಿಷ್ಯನ ಕರಸ್ಥಲಕ್ಕೆ ಇತ್ತು,
ಅಂಗದಲ್ಲಿ ಪ್ರತಿಷ್ಠಿಸಿ, ಪ್ರಣವಪಂಚಾಕ್ಷರಿಯುಪದೇಶವ
ಕರ್ಣದಲ್ಲಿ ಹೇಳಿ, ಕಂಕಣವ ಕಟ್ಟಿದಲ್ಲಿ,
ಕಾಯವೆ ಕೈಲಾಸವಾಯಿತ್ತು ;
ಪ್ರಾಣವೆ ಪಂಚಬ್ರಹ್ಮಮಯಲಿಂಗವಾಯಿತ್ತು.
ಇಂತು ಮುಂದ ತೋರಿ ಹಿಂದ ಬಿಡಿಸಿದ
ಶ್ರೀಗುರುವಿನ ಸಾನ್ನಿಧ್ಯದಿಂದಾನು ಬದುಕಿದೆನಯ್ಯಾ ಚೆನ್ನಮಲ್ಲಿಕಾರ್ಜುನಾ./೩೯೩
ಅರಿದರಿದು ಅರಿವು ಬರುದೊರೆವೋಯಿತ್ತು.
ಕುರುಹ ತೋರಿದೊಡಿಂತು ನಂಬರು.
ತೆರಹಿಲ್ಲದ ಘನವ ನೆನೆದು
ಗುರು ಶರಣು ಶರಣೆಂಬುದಲ್ಲದೆ,
ಮರಹು ಬಂದಿಹುದೆಂದು, ಗುರು ಕುರುಹ ತೋರಿದನಲ್ಲದೆ
ಅರಿಯಬಲ್ಲಡೆ ಗುಹೇಶ್ವರನೆಂಬ ಲಿಂಗವು, ಹೃದಯದಲೈದಾನೆ. /೧೮೫
ಅಯ್ಯ ! ಶ್ವೇತ, ಪೀತ, ಹರಿತ, ಮಾಂಜಿಷ್ಠ, ಕಪೋತ, ಮಾಣಿಕ್ಯ,
ಹಂಡಬಂಡ, ಚಿತ್ರ ವಿಚಿತ್ರ, ಮೊದಲಾದ ಪಶುಗಳ ಮಧ್ಯದಲ್ಲಿ ಕ್ಷೀರ !;
ಕ್ಷೀರ ಮಧ್ಯದಲ್ಲಿ ದದಿ, ತಕ್ರ, ನವನೀತ, ಘೃತ, ರುಚಿ, ಚೇತನವಡಗಿರ್ಪಂತೆ,
ಸಿಂಪಿಯ ಮಧ್ಯದಲ್ಲಿ ಚಿಜ್ಜಲ ಸ್ವಾತಿಮಿಂಚಿನ ಪ್ರಕಾಶಕ್ಕೆ ಘಟ್ಟಿಗೊಂಡು
ಜಲರೂಪವಳಿದು ನಿರಾಕಾರವಾಗಿರ್ಪಂತೆ
ಸಮಸ್ತ ಬೀಜಮಧ್ಯದಲ್ಲಿ ವೃಕ್ಷಂಗಳಡಗಿರ್ಪಂತೆ
ವೃಕ್ಷಂಗಳ ಮಧ್ಯದಲ್ಲಿ ಬೀಜಂಗಳಡಗಿರ್ಪಂತೆ
ಸದ್ಭಕ್ತ ಶಿವಶರಣಗಣಂಗಳ ಮಧ್ಯದಲ್ಲಿ ಗೋಪ್ಯವಾಗಿರ್ದು
ಸಮಸ್ತ ಕುಲ-ಛಲ-ಮತಭ್ರಮಿತಂಗಳಿಂದ ತೊಳಲುವ
ವೇದಾಂತಿ-ಸಿದ್ಧಾಂತಿ-ಬಿನ್ನಯೋಗಿ ಮೊದಲಾದ ಅದ್ವೈತಜಡಾತ್ಮರ ಕಣ್ಣಿಂಗೆ
ಅಗೋಚರವಾಗಿರ್ಪುದು ನೋಡ ! ನಿರವಯಶೂನ್ಯಮೂರ್ತಿ ಗುಹೇಶ್ವರಲಿಂಗವು
ಚೆನ್ನಬಸವಣ್ಣ.
ಇಹವ ತೋರಿದನು ಶ್ರೀಗುರು; ಪರವ ತೋರಿದನು ಶ್ರೀಗುರು.
ಎನ್ನ ತೋರಿದನು ಶ್ರೀಗುರು; ತನ್ನ ತೋರಿದನು ಶ್ರೀಗುರು.
ಗುರು ತೋರಿದಡೆ ಕಂಡೆನು ಸಕಲ ನಿಷ್ಕಲವೆಲ್ಲವ.
ಗುರು ತೋರಿದಡೆ ಕಂಡೆನು ಗುರುಲಿಂಗಜಂಗಮ ಒಂದೆ ಎಂದು.
ತೋರಿ ಕರಸ್ಥಲದಲ್ಲಿದ್ದನು ಗುಹೇಶ್ವರಲಿಂಗನು.
ಗುರುವಿನ ಪರಿ ವಿಪರೀತವಾಯಿತ್ತಯ್ಯಾ,
ಭ್ರಮರ-ಕೀಟ ನ್ಯಾಯದಂತಾಯಿತ್ತು.
ಗುರು ತನ್ನ ನೆನೆವನ್ನಬರ ಎನ್ನನಾ ಗುರುವ ಮಾಡಿದನು.
ಇನ್ನು ಶಿಷ್ಯನಾಗಿ ಶ್ರೀಗುರುವ ಪೂಜಿಸುವರಾರು
ಹೇಳಾ ಗುಹೇಶ್ವರಾ ?
[1] ಈ ತರಹದ ಸಂಖ್ಯೆಯ ವಿವರ: ಸವಸ-1/241 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-241 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])
ಓಂ ಶ್ರೀ ಗುರುಬಸವ ಲಿಂಗಾಯ ನಮಃ | ಲಿಂಗ |