ಗುರುತ್ವವು ಅರ್ಹತೆಯಿಂದ, ಜಾತಿಯಿಂದಲ್ಲ.

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಗುರುತ್ವವು ಅರ್ಹತೆಯಿಂದ, ಜಾತಿಯಿಂದಲ್ಲ.

ಲಿಂಗದೀಕ್ಷೆ ಪಡೆದುಕೊಂಡು ಅಂಗದ ಮೇಲೆ ಲಿಂಗವ ಧರಿಸಿದವರಲ್ಲಿ ಭೇದ ಮಾಡಬಾರದೆಂದು ಶರಣರು ಸಾರಿ ಹೇಳಿದ್ದಾರೆ. ಒಂದು ವ್ಯಕ್ತಿಯನ್ನು ಅಳೆಯುವುದು ಜಾತಿಯಿಂದಲ್ಲ; ಅವನು ಸಾಧಿಸಿದ ಸದ್ಗುಣಗಳಿಂದ ಗುಣಿಕ ದೃಷ್ಟಿಯಿರಬೇಕೆಂದು ಶರಣರು ಪ್ರತಿಪಾದಿಸಿ, ಲಿಂಗಾಂಗಿಗಳಲ್ಲಿ ಭೇದ ಮಾಡಬಾರದು ಎನ್ನುತ್ತಾರೆ. ಆದರೆ ಲಿಂಗಾಯತ ಧರ್ಮದ ಮೂಲ ಸಂವಿಧಾನದ ಕಟ್ಟುನಿಟ್ಟುಗಳನ್ನು ಸಡಿಲಿಸಿ ಇಂದು ಹಲವಾರು ಒಳಪಂಗಡಗಳನ್ನು ಕಲ್ಪಿಸಿ ಲಿಂಗಾಯತರು ಕಚ್ಚಾಡುತ್ತಿರುವುದು ದುರ್ದೆವದ ಸಂಗತಿಯಾಗಿದೆ.

ಹಾರುವನಿಂದ ಹೊಲೆಯನವರೆಗೆ ಯಾವ ಜಾತಿಯವನಾದರೂ ಲಿಂಗದೀಕ್ಷೆ ಪಡೆದುಕೊಂಡು, ಸ್ವಾಮಿತ್ವದ ಅರ್ಹತೆಗಳನ್ನು ಪಡೆದಿದ್ದರೆ ಅವನು ಗುರುವಾಗಬಲ್ಲ, ಸ್ವಾಮಿಯಾಗಬಲ್ಲ, ವಿರಕ್ತನಾಗಬಲ್ಲ ಎಂಬುದನ್ನು ಬಸವ ಧರ್ಮದ ಸಿದ್ಧಾಂತವು ಒತ್ತಿ ಹೇಳುತ್ತದೆ. ಅಂಗನು ಲಿಂಗವಾಗುವನೆಂದು, ಜೀವನು ಶಿವನಾಗುವನೆಂದು ಸಾರುವ ಷಟ್ಸ್ಥಲ ದರ್ಶನದಲ್ಲಿ ಜೀವನು ಸ್ವಾಮಿಯಾಗುವನೆಂದು ಬೇರೆ ಹೇಳಬೇಕಾಗಿಲ್ಲ. ಸ್ವಾಮಿಯಾಗುವ ಹಕ್ಕು ಪ್ರತಿಯಾಬ್ಬರಿಗೂ ಇದೆ. ಆದರೆ ತ್ಯಾಗ-ವೈರಾಗ್ಯ-ಸಮ್ಯಕ್ ಜ್ಞಾನ-ಶಿವಾನುಭವ ದೃಷ್ಟಿ, ಸಮಾಜದ ಬಗ್ಗೆ ಕಳಕಳಿ, ಬೋಧೆ ಮಾಡುವ ಶಕ್ತಿ ಇತ್ಯಾದಿ ಅರ್ಹತೆಗಳನ್ನು ಪಡೆದುಕೊಂಡ ಯಾವನಾದರೂ ಸ್ವಾಮಿಯಾಗಬಲ್ಲನೆಂದು ನಮ್ಮ ಶರಣರು ಸಾರಿ ವಿಶ್ವಧರ್ಮಕ್ಕೆ ಬುನಾದಿ ಹಾಕಿಕೊಟ್ಟಿದ್ದಾರೆ. ವರ್ಣಾಶ್ರಮ ಧರ್ಮದಲ್ಲಿ ಬ್ರಾಹ್ಮಣ ಮಾತ್ರ ಗುರುವಾಗಬಲ್ಲನು; ಕ್ಷತ್ರಿಯ, ವೈಶ್ಯರು ಕೇವಲ ಭಕ್ತರಾಗಬಲ್ಲರು; ಶೂದ್ರನಿಗೆ ಸ್ವಾಮಿಯಾಗುವ ಹಕ್ಕಿಲ್ಲ. ಭಕ್ತನಾಗುವ ಹಕ್ಕೂ ಇಲ್ಲ. ಬಸವ ಧರ್ಮದಲ್ಲಿ ಹಾಗಲ್ಲ; ಇಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಮತ್ತು ಪಂಚಮ - ಎಲ್ಲರೂ ಸ್ವಾಮಿಯಾಗುವ ಹಕ್ಕು ಹೊಂದಿದ್ದಾರೆ. ಅವರಲ್ಲಿ ಅರ್ಹತೆಯಿದ್ದರೆ ಪ್ರತಿಯಾಬ್ಬರೂ ಭಕ್ತರಾಗಬಲ್ಲರು; ಹೆಚ್ಚಿನ ಅರ್ಹತೆಯಿದ್ದರೆ ಗುರುವಾಗಬಲ್ಲರು; ಅದಕ್ಕಿಂತಲೂ ಹೆಚ್ಚಿನ ಅರ್ಹತೆ ಇದ್ದರೆ. ಜಂಗಮವಾಗಬಲ್ಲರು. ಭಕ್ತ, ಗುರು, ಜಂಗಮ ಇವು ಜಾತಿವಾಚಕ ಪದಗಳಲ್ಲ; ತತ್ವವಾಚಕ ಪದಗಳೆಂಬುದನ್ನು ನೆನಪಿನಲ್ಲಿಟ್ಟರೆ ಸಾಕು. ಇಂಥ ವಿಶಾಲತತ್ವದ ತಳಹದಿಯ ಮೇಲೆ ನಿಂತ, ವಿಶ್ವಧರ್ಮವಾಗುವ ಅರ್ಹತೆಯಿರುವ ಲಿಂಗಾಯತ ಧರ್ಮದಲ್ಲಿ ಜಾತಿಯ ಕೀಳುಮನೋಭಾವನೆ ಒಳನುಗ್ಗಿ ಧರ್ಮಹಾಸವಾಗುತ್ತಿದೆ. ಸ್ವಾಮಿಗಳು ಆಗುವವರು ಇಂಥ ವಿಶಿಷ್ಟ ಜಾತಿಯವರಿರಬೇಕು. ಇಂಥ ವಿಶಿಷ್ಟ ಪಂಗಡದಲ್ಲಿ ಹುಟ್ಟಿದವನೇ ಮಹೇಶ್ವರನು, ಜಂಗಮನು; ಉಳಿದ ಪಂಗಡಗಳಲ್ಲಿ ಹುಟ್ಟಿದವರು ಭಕ್ತರು. ಭಕ್ತರು ಸ್ವಾಮಿಗಳಾಗುವುದು ಸರಿಯಲ್ಲ; ಮಹೇಶ್ವರನೇ ಸ್ವಾಮಿಯಾಗಲು ಅಧಿಕಾರಿ ಎಂಬ ಅಲ್ಲದ ಮತ್ತು ಬಸವ ಧರ್ಮಕ್ಕೆ ಸಲ್ಲದ ಸೊಲ್ಲು ಅಲ್ಲಲ್ಲಿ ಕೇಳಿ ಬರುತ್ತಿದೆ. ಅಷ್ಟೇ ಏಕೆ ? ಈಗ ಮಹೇಶ್ವರ ಎಂದು ಹೇಳಿಕೊಳ್ಳುವ ವಿಶಿಷ್ಟ ಜಾತಿಯವರನ್ನೇ ಮಠಾಧಿಕಾರಿಗಳನ್ನಾಗಿ ಮಾಡುವ ಸ್ವಾರ್ಥ ಸಂಪ್ರದಾಯ ನಮ್ಮ ಸಮಾಜದಲ್ಲಿ ನೆಲೆಸಿದೆ. ಇದು ದುರ್ದೆವದ ಸಂಗತಿ. ಇದರಿಂದ ಸಮಾಜದಲ್ಲಿ ಐಕ್ಯತೆ ಬೆಳೆಯುತ್ತಿಲ್ಲ. ಪ್ರತಿಭಾವಂತರು ಪಟ್ಟವನ್ನು ಅಲಂಕರಿಸುವುದಿಲ್ಲ. ಅಲ್ಲದೆ ಒಡಕು ಹುಟ್ಟಿ ಪ್ರತಿ ಒಳಪಂಗಡಕ್ಕೊಬ್ಬರಂತೆ ಜಗದ್ಗುರುಗಳಾಗುತ್ತಲಿದ್ದಾರೆ. ಈಗಾಗಲೇ ಸಾಕಷ್ಟು ಅನಾಹುತಗಳಾಗಿವೆ. ಮುಂದೆ ಹೀಗಾಗಬಾರದೆಂದಿದ್ದರೆ ಒಳಪಂಗಡಗಳನ್ನು ಮುರಿಯಬೇಕು. ಪ್ರತಿಯಾಬ್ಬ ವ್ಯಕ್ತಿಗೂ ಸ್ವಾಮಿಯಾಗುವ ಸದವಕಾಶ ಕಲ್ಪಿಸಿಕೊಡಬೇಕು. ಗೃಹಸ್ಥರು ಒಳಪಂಗಡಗಳ ಕಟ್ಟು ಮುರಿದು ಪರಸ್ಪರ ರಕ್ತಸಂಬಂಧ ಮಾಡಬೇಕು. ಇಂಥ ಜಾತಿಯವರೇ ಸ್ವಾಮಿಗಳಾಗಬೇಕು ಎಂದು ಯಾವ ಶಾಸ್ತ್ರದಲ್ಲಿಯೂ ಇಲ್ಲ; ಸಂಪ್ರದಾಯದಲ್ಲಿಯೂ ಇಲ್ಲ. ಎಲ್ಲ ಜಾತಿಯವರೂ ಲಿಂಗಾಯತ ಮಠಗಳಿಗೆ ಸ್ವಾಮಿಗಳಾಗುತ್ತಾ ಬಂದಿದ್ದಾರೆ. ೭೭೦ ಅಮರ ಗಣಂಗಳಲ್ಲಿಯಂತೂ ಹಾರುವನಿಂದ ಹೋಲೆಯನವರೆಗೆ ಇರುವ ಎಲ್ಲ ಜಾತಿಯವರಿದ್ದಾರೆಂಬುದು ಲೋಕ ಪ್ರಸಿದ್ದವಾಗಿದೆ. ಹಿಂದೆ ಮತ್ತು ಇಂದೂ ಸಹ ಅನೇಕ ಭಕ್ತರು ಮಠಾಧಿಕಾರಿಗಳಾಗಿ ಸ್ವಾಮಿಗಳಾಗಿರುವುದನ್ನು ನಾವು ತೋರಿಸಬಲ್ಲೆವು. ಸಮಾಜವು ಪುಷ್ಟವಾಗಿ, ಸರ್ವಾಂಗ ಸುಂದರವಾಗಿ ಬೆಳೆಯ ಬೇಕಾದರೆ ಪ್ರತಿಯಾಬ್ಬನಲ್ಲಿಯೂ ಜಾತೀಯ ದೃಷ್ಟಿ ಮಾಯವಾಗಿ ಶಿವಾನುಭವ ದೃಷ್ಟಿ ಕರಿಗೊಳ್ಳಬೇಕು. ಶರಣರು ಸಾರಿದ ಧಾರ್ಮಿಕ ಸಮತೆಯೆಂದರೇನೆಂಬುದನ್ನು ಸರಿಯಾಗಿ ಜನ ತಿಳಿದುಕೊಂಡಾಗ ಈ ಮೇಲು ಕೀಳೆಂಬ ಭಿನ್ನ ದೃಷ್ಟಿ ಮಾಯವಾದೀತೆಂದು ನಾವು ದೃಢವಾಗಿ ನಂಬಿದ್ದೇವೆ.

ಇಷ್ಟಲಿಂಗ ದೀಕ್ಷಾ ಸಂಸ್ಕಾರ ಪಡೆದು ಲಿಂಗವಂತರಾದ ಮೇಲೆ ಆ ವ್ಯಕ್ತಿಗಳ ಪೂರ್ವದ ಜಾತಿ-ವೃತ್ತಿಗಳನ್ನರಸದೆ ಅವರೊಡನೆ 'ರೋಟಿ ಮತ್ತು ಬೇಟಿ' ಅಂದರೆ ಉಂಬ-ಉಡುವ, ಹೆಣ್ಣು ಗಂಡನ್ನು ಕೊಂಬ-ಕೊಡುವ ವ್ಯವಹಾರವನ್ನು ನಿಸ್ಸಂಕೋಚದಿಂದ ಮಾಡಬೇಕು.

ಪಟ್ಟವ ಕಟ್ಟಿದ ಬಳಿಕ ಲಕ್ಷಣವನರಸುವರೆ ?
ಲಿಂಗದೇವನ ಪೂಜಿಸಿ ಕುಲವನರಸುವರೆ ಅಯ್ಯಾ ?
ಕೂಡಲಸಂಗಮದೇವ ಭಕ್ತ ಕಾಯ ಮಮಕಾಯವೆಂದನಾಗಿ !
-ಬ.ಷ.ವ. ೮೩೮

ದೇವದೇವಾ ಬಿನ್ನ ಪವನವಧಾರು,
ವಿಪ್ರ ಮೊದಲು ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲರನೊಂದೇ ಎಂಬೆ,
ಹಾರುವ ಮೊದಲು ಶ್ವಪಚ ಕಡೆಯಾಗಿ
ಭವಿಯಾದವರನೊಂದೇ ಎಂಬೆ. -ಬ.ಷ.ವ. ೭೧೦

ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿತ್ತೆಂಬರು
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು
ಎಂತಯ್ಯಾ, ಅವರ ಭಕ್ತರೆಂಬೆ ?
ಎಂತಯ್ಯಾ, ಅವರ ಯುಕ್ತರೆಂಬೆ ? -ಬ.ಷ.ವ, ೬ ೨೭

ಬಸವಣ್ಣನವರ ಅಭಿಪ್ರಾಯದಂತೆ ದೀಕ್ಷೆ ಪಡೆದಾನಂತರ ಕುಲವನ್ನು ಅರಸಬಾರದು; ವಿಪ್ರನೇ ಇರಲಿ ಅಂತ್ಯಜನೇ ಇರಲಿ ಎಲ್ಲರನ್ನೂ ಸಮಾನವಾಗಿ ತಿಳಿಯಬೇಕು.

ಇದಕ್ಕೂ ಮುಂದಿನ ಜಂಗಮ ದೀಕ್ಷೆ ಪಡೆದು ಜಂಗಮ ಸ್ಥಲವನ್ನು ಪ್ರವೇಶಿಸಿದಾಗ ಸಹ ಅವರಲ್ಲಿ ಪೂರ್ವಾಶ್ರಮ ಹುಡುಕಬಾರದು.

ಆಚಾರವನರಿಯಿರಿ ವಿಚಾರವನರಿಯಿರಿ
ಜಂಗಮಸ್ಥಲ ಲಿಂಗ ಕಾಣಿರಯ್ಯಾ
ಜಾತಿಭೇದವಿಲ್ಲ, ಸೂತಕವಿಲ್ಲ, ಅಜಾತನಾಗಿ ಕುಲವಿಲ್ಲ.
-ಬ.ಷ.ವ, ೪೧೭

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previousಇಷ್ಟಲಿಂಗದೀಕ್ಷೆ ಮತ್ತು ಧಾರ್ಮಿಕ ಸಮಾನತೆಲಿಂಗಾಂಗಯೋಗದ ಪ್ರಮುಖ ಲಕ್ಷಣಗಳುNext
*