Previous ಇಷ್ಟಲಿಂಗ ಪೂಜಾ ವಿಧಾನ ಪ್ರವಚನ ಎಂದರೇನು ? Next

ಇಷ್ಟಲಿಂಗ ಕುರಿತಾಗಿ ಸಮಸ್ಯೆ? ಸಮಾಧಾನ!

✍ ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಇಷ್ಟಲಿಂಗ ಪ್ರಶ್ಲೋತ್ತರ ವಿಭಾಗ

ಪ್ರಶ್ನೆ ೧) 'ಲಿಂಗ' ಪದವು ಜನನೇಂದ್ರಿಯ ವಾಚಕವಾಗಿದೆ. ವಿಚಾರವಾದಿಗಳಾದ ಬಸವಣ್ಣನವರು ಕುರುಹಾದ ಇಷ್ಟಲಿಂಗಕ್ಕೆ ಮತ್ತು ದೇವನಾದ ಪರ ಶಿವಲಿಂಗಕ್ಕೂ ಬೇರೆ ಏನಾದರೂ ಉತ್ತಮ ಪದವನ್ನು ಬಳಸಬಹುದಿತ್ತು; 'ಲಿಂಗ' ಪದವನ್ನು ಏಕೆ ಬಳಸಿಕೊಂಡರು ?

ಉತ್ತರ:
ಬಸವಣ್ಣನವರು ವಿವಿಧ ರಂಗಗಳಲ್ಲಿದ್ದ ಸ್ಪಶ್ಯಾಸ್ಪೃಶ್ಯತೆಯನ್ನು ತೊಡೆದರಷ್ಟೆ. ಮಾನವನ ಅಂಗಾಂಗಗಳಲ್ಲಿ ಮೇಲು ಕೀಳಿನ ಭಾವವಿತ್ತು. ಜಲ ಜಲದಲ್ಲಿ, ನೆಲನೆಲದಲ್ಲಿ ಈ ಅಸ್ಪೃಶ್ಯತೆ ಹಾಸು ಹೊಕ್ಕಾಗಿತ್ತು. ಅದೇ ರೀತಿ ಭಾಷೆಯಲ್ಲಿ, ಪದಗಳಲ್ಲಿ, ಉದಾಹರಣಿಗೆ ಅಪ್ಪ, ಅವ್ವ, ಅಮ್ಮ ಇವು ಕಾನ್ವೆಂಟ್ ಸಂಸ್ಕೃತಿಯಲ್ಲಿ ಬೆಳೆದವರಿಗೆ ಅಸ್ಪೃಶ್ಯ ಪದಗಳು: ಡ್ಯಾಡಿ, ಡ್ಯಾಡ್, ಮಮ್ಮಿ ಸ್ಪೃಶ್ಯ ಪದಗಳು. ಮಣ್ಣಿನ ಸಂಸ್ಕೃತಿಯ ಅಭಿಮಾನಿಗಳು ಹಠತೊಟ್ಟು ಮಕ್ಕಳ ಬಾಯಿಯಲ್ಲಿ ಅವ್ವ, ಅಮ್ಮ, ಅಪ್ಪ, ಎನ್ನಿಸುತ್ತಾರೆ. ಅದೇ ರೀತಿಯಲ್ಲಿ "ಲಿಂಗ" ಪದವು ವಿಪರೀತಾರ್ಥಕ್ಕೊಳಗಾದ್ದರಿಂದ ಬಸವಣ್ಣನವರು ಅರ್ಥಗರ್ಭಿತವಾದ ಆ ಪದವನ್ನು ಹಠತೊಟ್ಟು ಬಳಸಿದ್ದಾರೆ; ಪದದ ಹಿಂದಿರುವ ಮಾರ್ಮಿಕ ಅರ್ಥವನ್ನು ಮನಗಾಣಿಸಿಕೊಡಲು ಯತ್ನಿಸಿದ್ದಾರೆ.

ಪ್ರಶ್ನೆ ೨) 'ಇಷ್ಟಲಿಂಗವು ಉತ್ಕೃಷ್ಟ ಯೋಗಸಾಧನ' ಎಂದು ನೀವು ಹೇಳುವಿರಿ ? ಹಾಗಾದರೆ ಬೇರೆ ಯೋಗಗಳ ಮೂಲಕ ಸಾಧನೆ, ಸಿದ್ದಿ ಸಾಧ್ಯವಿಲ್ಲವೆ ?

ಉತ್ತರ:
ಸಾಧ್ಯವಿಲ್ಲವೆಂದವರು ಯಾರು ? ಆಯಾ ಯೋಗಗಳು ಹೊಂದಿರುವ ಗುರಿ ಆಯಾ ಯೋಗಗಳ ಅಭ್ಯಾಸ ಮಾಡಿದಾಗ ಖಂಡಿತಾ ಸಾಧ್ಯ. ಸಾಂಖ್ಯಯೋಗವಾದ ಅಷ್ಟಾಂಗಯೋಗದಿಂದ ಪ್ರಕೃತಿಯಿಂದ ಪುರುಷನ ಬಿಡುಗಡೆ ಮತ್ತು ಆತ್ಮದರ್ಶನ ಸಾಧ್ಯ, ಪರಮಾತ್ಮ ಸಾಕ್ಷಾತ್ಕಾರ ಸಾಧ್ಯವಿಲ್ಲ. ಹಠಯೋಗದಿಂದ ದೇಹದ ಸಿದ್ದಿಗಳು ಸಾಧ್ಯ. ಆತ್ಮಪರಮಾತ್ಮ ಸಾಕ್ಷಾತ್ಕಾರ ಸಾಧ್ಯವಿಲ್ಲ. ಶಿವಯೋಗದಿಂದ ಆತ್ಮ - ಪರಮಾತ್ಮ ಸಾಕ್ಷಾತ್ಕಾರ ಸಾಧ್ಯವು, ಬೇರೆ ಯೋಗಗಳು ಉದಾಹರಣೆಗೆ ಭಕ್ತಿಯೋಗ, ಜ್ಞಾನಯೋಗ ಮುಂತಾದವು ಪರಮಾತ್ಮನ ದಿವ್ಯಾನುಭವಕ್ಕೆ ಸಾಧನೆಗಳೇ ಆದರೂ ಶಿವಯೋಗವು ಅರ್ಥಾತ್ ಇಷ್ಟಲಿಂಗದ ಮೂಲಕ ಮಾಡುವ ಸಾಧನೆಯು ತ್ವರಿತವಾಗಿ ಫಲ ಕೊಡುವುದು. ಬೇರೆ ಯೋಗಗಳ ಸಾಧನೆ ಬಸ್, ಟ್ರೇನಿನಲ್ಲಿ ಹೋದಂತೆ;
ಇಷ್ಟಲಿಂಗದ ಮೂಲಕ ಮಾಡುವ ಸಾಧನೆ ವಿಮಾನದಲ್ಲಿ ಹೋದಂತೆ !

ಪ್ರಶ್ನೆ ೩) ಇಷ್ಟಲಿಂಗವು 'ದೇವರ ಕುರುಹು ಎಂಬುದನ್ನು ನೀವೇ ಪ್ರತಿಪಾದಿಸುತ್ತೀರಿ. ಇದಕ್ಕೆ ಶರಣರ ಮಾತಿನ ಆಧಾರವಿಲ್ಲ, ಎಂದು ಕೆಲವರ ಟೀಕೆ ?

ಉತ್ತರ:
'ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ' (ಬ.ಷ.ವ. ೭೪೩), 'ದೇವ ಪೂಜೆಯ ಮಾಟ ದುರಿತ ಬಂಧನದೋಟ' (ಬ.ಷ.ವ. ೧೭೭) ಎಂಬ ಬಸವಣ್ಣನವರ ವಚನ ಅವರಿಗೆ ತೋರಿಸಿರಿ. ಷಣ್ಮುಖ ಶಿವಯೋಗಿಗಳ ವಚನವನ್ನು ಆ ಟೀಕಾಕಾರರ ಕಣ್ಣ ಮುಂದೆ ಹಿಡಿಯಿರಿ.

'ಎನ್ನ ಕರಸ್ಥಲದ ಮಧ್ಯದಲ್ಲಿ ಪರಮ ನಿರಂಜನದ
ಕುರುಹ ತೋರಿದ. ಕುರುಹಿನ ಮಧ್ಯದಲ್ಲಿ ಅರುಹಿನ ಕಳೆಯ ತೋರಿದ'

ಪ್ರಶ್ನೆ ೪) ಜನಿವಾರವು ಒಂದು ಬಂಧನ; ಋಣಭಾವವನ್ನು ಸಂಕೇತಿಸುತ್ತದೆ: ಅಸಮಾನತೆಯನ್ನು ಸೂಚಿಸುತ್ತದೆ ಎಂದು 3 ಎಳೆಯ ಜನಿವಾರವನ್ನು ನಿರಾಕರಿಸಿ ಕ್ರಾಂತಿ ಮಾಡಿದ ಬಸವಣ್ಣನವರು 63 ಎಳೆಯ ಶಿವದಾರದ ಬಂಧನವನ್ನು ಬಿಗಿದರಲ್ಲ. ಇದು ಸರಿಯೆ ?

ಉತ್ತರ:
ಜನಿವಾರವೇ ಆಗಲೀ, ಶಿವದಾರವೇ ಆಗಲೀ, ಕಾಸ್ ಆಗಲೀ, ಮುದ್ರೆಯೋಗಲೀ ಯಾವುವೂ ತಮ್ಮಿಂದ ತಾವೇ ಅಸಮಾನತೆಯ ಕುರುಹುಗಳಲ್ಲ. ಜನಿವಾರವನ್ನು ಬ್ರಾಹ್ಮಣ-ಅಸ್ಪೃಶ್ಯ ಎಂಬ ವರ್ಣ-ಜಾತಿ ಭೇದವಿಲ್ಲದೆ, ಪಾಜಾರಿ - ಸಮಗಾರ ಎಂಬ ವೃತ್ತಿ ಭೇದವಿಲ್ಲದೆ, ಸ್ತ್ರೀಪುರುಷ ಎಂಬ ಲಿಂಗಭೇದವಿಲ್ಲದೆ, ಸನ್ಯಾಸಿ-ಸಂಸಾರಿ ಎಂಬ ಆಶ್ರಮ ಭೇದವಿಲ್ಲದೆ ಕೊಟ್ಟರೆ ಆಗ ಅದೂ ಅಸಮಾನತೆಯ ಕುರುಹಾಗದು. ಈಗ ಜನಿವಾರವನ್ನು ಕೊಡುವುದರಲ್ಲಿ ಈ ಎಲ್ಲ ಭೇದಗಳುಂಟು. ಇಷ್ಟಲಿಂಗವನ್ನು ಕೊಡುವುದರಲ್ಲಿ ಅಂದರೆ ಶಿವದಾರದಲ್ಲಿ ಈ ಯಾವ ಭೇದಗಳೂ ಇಲ್ಲ. ಜನಿವಾರದಲ್ಲಿ ಅದೇ ಪ್ರಮುಖ ಲಾಂಛನ; ಶಿವದಾರದ ವಿಷಯದಲ್ಲಿ ಹಾಗಲ್ಲ; ಇಷ್ಟಲಿಂಗ ಕಟ್ಟಿಕೊಳ್ಳಲು ಶಿವದಾರವು ಕೇವಲ ಸಾಧನ. ವಿರಕ್ತರು, ಕೆಲವು ಶರಣರು ಬೆಳ್ಳಿಕರಡಿ - ಶಿವದಾರ ಬಳಸದೇ ಬಟ್ಟೆಯಲ್ಲೇ ಕಟ್ಟುವರು. ಇಷ್ಟಲಿಂಗ, ಶಿವದಾರಗಳು ಅಸಮಾನತೆಯ ಲಾಂಛನಗಳಲ್ಲ, ಅಸಮಾನತೆ ತೊಡೆಯುವ ಲಾಂಛನಗಳು; ಜನಿವಾರದ ಲೋಪ-ದೋಷ ಕಳೆಯಲೆಂದೇ ಬಸವಣ್ಣನವರು ಶಿವದಾರವನ್ನು ಕೊಟ್ಟಿದ್ದಾರೆ.

ಪ್ರಶ್ನೆ ೫) ಇಷ್ಟಲಿಂಗ ಧಾರಣಿಗೆ ಕರಡಿಗೆ ಒಳ್ಳೆಯದೋ ಬಟ್ಟೆ ಒಳ್ಳೆಯದೋ ?

ಉತ್ತರ:
(ಶ್ರೀಮಂತ ಮಾವ ಸಿಗುತ್ತಿದ್ದರೆ ಕರಡಿಗೆ ಒಳ್ಳೆಯದು; ಮದುವೆ ಕಾಲದಲ್ಲಿ ಬೆಳ್ಳಿಯ ಕರಡಿಗೆಗೆ ಬದಲಾಗಿ ಚಿನ್ನದ್ದು ಕೊಡಿಸುವನು. ಕ್ಷಮಿಸಿ, ತಮಾಷೆಗಾಗಿ ಈ ಉತ್ತರ)
ಕೆಲವರು ಇನ್ನೊಬ್ಬರಿಗೆ ತೋರಗೊಡಬಾರದೆಂಬ ಉದ್ದೇಶಕ್ಕಾಗಿ ದಾರದಲ್ಲಿ ಧರಿಸುವರು. ಆ ಸಂಕೋಚವಿಲ್ಲದವರಿಗೆ ಬಟ್ಟೆಯಲ್ಲಿ ಕಟ್ಟುವುದು ಎಲ್ಲ ದೃಷ್ಟಿಯಿಂದಲೂ ಒಳ್ಳೆಯದು.

1) ಅದು ಬೆಳ್ಳಿ-ಬಂಗಾರದ ಕರಡಿಗೆಗಳಂತೆ ಬಡಿಯದು, ಶಬ್ದ ಮಾಡದು.
2) ಸರಳವಾಗಿ, ಸಾತ್ವಿಕವಾಗಿ ಕಾಣುವುದು.
3) ಬೆಳ್ಳಿ-ಬಂಗಾರದ ಕರಡಿಗೆಗಳ ಮೇಲೆ ಕಳ್ಳರ ಕಣ್ಣು ಬಿದ್ದಾಗ ಕರಡಿಗೆಯ ಜೊತೆಗೆ ಇಷ್ಟಲಿಂಗವೂ ಹೋಗುವ ಸಾಧ್ಯತೆಯುಂಟು, ಬಂಗಾರದ ಕರಡಿಗೆ ಪ್ರಯಾಣ ಕಾಲದಲ್ಲಿ ಜೀವಹರಣಕ್ಕೂ ಕಾರಣವಾಗಬಹುದು.
4) ಯೋಗಾಸನ ಮಾಡುವಾಗ, ಈಜು ಆಡುವಾಗ ಬಟ್ಟೆಯಲ್ಲಿ ಇಷ್ಟ ಲಿಂಗವಿದ್ದರೆ ಕುತ್ತಿಗೆಗೆ ಸಮೀಪದಲ್ಲಿ ಕಟ್ಟಿಕೊಂಡು ಬೀಳುವ, ಬಡಿಯುವ, ಕಳೆದುಹೋಗುವ ಭಯವಿಲ್ಲದೆ ತಮ್ಮ ಕ್ರಿಯೆ ಮುಂದುವರಿಸಬಹುದು.

ಪ್ರಶ್ನೆ ೬) ಶಿವಯೋಗದ ಪ್ರಕಾರ ಜೀವನವೇ ಒಂದು ಪೂಜೆಯೋಗಬೇಕು ಎನ್ನುವರಲ್ಲ ಅದು ಹೇಗೆ ?

ಉತ್ತರ:


ಲಿಂಗವೇ ಪಾಣ, ಪಾಣವೇ ಲಿಂಗ,
ಅಮೃತ ಪಂಚಾಕ್ಷರಂಗಳ ಪಂಚಾಮೃತದಿಂ ಮಜ್ಜನಕ್ಕೆರೆವುದು.
ಆ ಲಿಂಗಕ್ಕೆ ಮನವೇ ಪುಷ್ಟ, ಬುದ್ದಿಯೇ ಗಂಧ,
ಚಿತ್ತವೇ ನೈವೇದ್ಯ, ಅಹಂಕಾರದಿಂದ ಆರೋಗಣಿಯ ಮಾಡಿಸಿ,
ಪರಿಣಾಮದ ವೀಳೆಯವನಿತ್ತು, ಸ್ನೇಹದಿಂ ವಂದನೆಯಂ ಮಾಡಿ,
ಪ್ರಾಣಲಿಂಗಕ್ಕೆ ಬಹಿರಂಗದ ಪೂಜೆಯಲ್ಲಿ ಅಂತರಂಗಪೂಜೆಯ
ಬಹಿರಂಗದ ವಸ್ತುವಿನಲ್ಲಿ ಕೂಡಿ, ಲಿಂಗಾರ್ಚನೆಯ ಮಾಡಲು,
ಅಂತರಂಗ ಬಹಿರಂಗಭರಿತವಾಗಿಪ್ಪನು ಉರಿಲಿಂಗ ಪೆದ್ದಿ ಪ್ರಿಯ ವಿಶ್ವೇಶ್ವರಾ.

ಇಲ್ಲಿ ಉರಿಲಿಂಗ ಪೆದ್ದಿಗಳು ಪ್ರಾಣಲಿಂಗದ ಪೂಜೆ ಮಾಡಿ, ಜೀವನದ ಮೂಲಕವೇ ಪೂಜೆ ಮಾಡುವ ಮರ್ಮವನ್ನು ವಿವರಿಸಿದ್ದಾರೆ.

ಪ್ರಶ್ನೆ ೭) ನೀವು ಅಸಂಖ್ಯಾತರಿಗೆ ದೀಕ್ಷೆ ಕೊಟ್ಟಿದ್ದೀರಿ. ಇಷ್ಟಲಿಂಗವನ್ನು ಅನುಗ್ರಹಿಸಿದ್ದೀರಿ. ಆದರೆ, ಕೆಲವರು ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ: ಇನ್ನು ಕೆಲವರು ಅಷ್ಟಕ್ಕಷ್ಟೇ-ಅಂದರೆ ನೀವು ಅನುಗ್ರಹಿಸುವಾಗ ಪಕ್ಷಪಾತ ಮಾಡುತ್ತೀರಾ ?

ಉತ್ತರ:
ನಮ್ಮ ಸಂಸ್ಥೆಯಲ್ಲಿ ಎರಡು ಕಾರುಗಳಿವೆ. ಎರಡರ ಬ್ಯಾಟರಿಯನ್ನೂ ಒಟ್ಟಿಗೆ ಛಾರ್ಜು ಮಾಡಿಸಿ ತಂದೆವು. ಆದರೆ ಹಸಿರು ಕಾರಿನ ಬ್ಯಾಟರಿ ಚೆನ್ನಾಗಿದೆ. ಇನ್ನೊಂದು ಅಷ್ಟಕ್ಕಷ್ಟೆ. ಕಾರಣವೆಂದರೆ ಹಸಿರು ಕಾರಿಗೆ ಕೆಲಸವಿದ್ದು ಚೆನ್ನಾಗಿ ಓಡುತ್ತಿದೆ. ಅದರ ಬ್ಯಾಟರಿ ಉತ್ತಮ ಸ್ಥಿತಿಯಲ್ಲಿದೆ. ಇನ್ನೊಂದು ಕಾರಿಗೆ ಹೆಚ್ಚಿನ ಕೆಲಸವಿಲ್ಲದೆ ನಿಂತಲ್ಲೇ ನಿಂತಿದೆ. ಆದ್ದರಿಂದ ಅದರ ಬ್ಯಾಟರಿ ಡೌನ್ ಆಗಿದೆ. ಇಲ್ಲಿ ತಪ್ಪು ಬ್ಯಾಟರಿ ಛಾರ್ಜು ಮಾಡಿಕೊಟ್ಟವರದಲ್ಲ, ಕಾರು ಓಡಿಸದೆ ಇರುವುದು. ಹಾಗೆ, ಕೆಲವರು ದೀಕ್ಷಾವಂತರು ತಮ್ಮ ಇಷ್ಟಲಿಂಗವನ್ನು ನಾವು ಚಿತ್ಕಳೆ ತುಂಬಿ ಕೊಟ್ಟನಂತರ ದಿನ ನಿತ್ಯವೂ ಪೂಜೆ ಧ್ಯಾನ ಜಪತಪದಿಂದ ತೇಜಸ್ವಿಯನ್ನಾಗಿ ಮಾಡಿಕೊಳ್ಳುತ್ತಾರೆ; ಇನ್ನು ಕೆಲವರು ಅಷ್ಟಕಷ್ಟೆ !

ಪ್ರಶ್ನೆ ೮) ಗಡಿಯಾರವು ಕಟ್ಟಿಕೊಂಡವರಿಗೆಲ್ಲ ಟೈಮು ತೋರಿಸುತ್ತೆ ಹಾಗೆ ಇಷ್ಟಲಿಂಗವು ಕಟ್ಟಿಕೊಂಡವರಿಗೆಲ್ಲ ಏಕೆ ದೇವರನ್ನು ತೋರಿಸಿಲ್ಲ; ಅಥವಾ ತೋರಿಸುವುದಿಲ್ಲ ?

ಉತ್ತರ:
ಗಡಿಯಾರವು ಸರಿಯೋಗಿ ಸಮಯ ತೋರಿಸಬೇಕಾದರೆ, ಅದನ್ನು ಸರಿಯೋಗಿ ಕಾಪಾಡಿಕೊಳ್ಳಬೇಕಾಗುತ್ತದೆ. ಒಂದನೆಯದಾಗಿ ಅದು ಸ್ಯಾಂಡರ್ಡ್ ಕಂಪೆನಿಯದಿರಬೇಕು; ಎರಡನೆಯದಾಗಿ ಅದಕ್ಕೆ ಸರಿಯೋಗಿ ಕೀಲಿ ಕೊಡುತ್ತ ಆಗಾಗ ಓವರ್ ಆಯಲಿಂಗ್ ಮಾಡುತ್ತ ಇರಬೇಕು. ಆಟೋಮ್ಯಾಟಿಕ್ ಸೋಲಾರ್ ವಾಚ್ ಅಂದರೂ ಅದು ಮೈಮೇಲೆ ಧರಿಸಲ್ಪಟ್ಟಿರಬೇಕು, ಕೈಯನ್ನು ಆಡಿಸುತ್ತಿರಬೇಕು. ಹಾಗೆ ಇಷ್ಟಲಿಂಗವನ್ನು ಸದ್ಗುರುಗಳಿಂದ ಪಡೆದುಕೊಳ್ಳಬೇಕು: ಅದರ ಕಂಥೆ, ಗಾತ್ರ ಎಲ್ಲ ಸರಿಯಿರಬೇಕು. ದಿನ ನಿತ್ಯ ಪೂಜಿಸಬೇಕು. ಜಪ - ತಪ ಧ್ಯಾನ, ಅಂಗದ ಮೇಲೆ ಧಾರಣಿ ಇವೆಲ್ಲವೂ ಅತ್ಯವಶ್ಯಕ. ಅಂದಾಗ ಮಾತ್ರ ಅದುವು ದಿವ್ಯಜ್ಞಾನದ ಪರಮಸಾಧನ.

ಪ್ರಶ್ನೆ ೯) ಇಷ್ಟಲಿಂಗವು ಪ್ರಾರಂಭದ ಹಂತದಲ್ಲಿರುವವರಿಗೆ ಬೇಕು. ಹೆಚ್ಚಿನ ಜ್ಞಾನ ಸಂಪಾದಿಸಿದವರಿಗೆ ಬೇಕಾಗಿಲ್ಲ. ಆತ್ಮಜ್ಞಾನ ಪ್ರಾಪ್ತಿಯ ನಂತರ ಅದನ್ನು ಬಿಡಬಹುದು ಎಂದು ಕೆಲವರ ವಾದ.

ಉತ್ತರ:
ತಾತ್ವಿಕ ಉತ್ತರ ಕೊಡುವುದಕ್ಕೂ ಮೊದಲು ಭಾವನಾತ್ಮಕ ಒಂದು ಉತ್ತರ ಕೊಡುವೆ. ಲೌಕಿಕ ಜೀವನದಲ್ಲಿ ಸತಿ-ಪತಿಯರು ತಾರುಣ್ಯದ ಹೊಸ್ತಿಲಲ್ಲಿ ವಿವಾಹದ ಮೂಲಕ ಒಂದಾಗುವರು. ಜೀವನದುದ್ದಕ್ಕೂ ಜೊತಗೂಡಿ ಬಾಳುವರು. ನಿಜವಾದ ಪ್ರೀತಿಯುಳ್ಳವರ ದಾಂಪತ್ಯ ಕಡೆಕಡೆಗೆ ಎಷ್ಟು ಮಾಗುತ್ತದೆ ಎಂದರೆ, ಕಾಮವಾಸನೆಯಳಿದು ಕೇವಲ ಪ್ರೇಮ ಸಂಬಂಧ ಉಳಿದಾಗ ಅವರ ಸಂಬಂಧ ಮಾನಸಿಕವಾಗಿ ಇನ್ನೂ ಉತ್ಕಟವಾಗುತ್ತದೆ. ವೃದ್ಧಾಪ್ಯದಲ್ಲಂತೂ ಇನ್ನೂ ನಿಕಟವಾಗಿ ಒಬ್ಬರಿಗೊಬ್ಬರು ಪಾಣವಾಗುವರು. ಆ ಪರಸ್ಪರ ಬಾಂಧವ್ಯವಿಲ್ಲದೆ. “ಅಯ್ತಾ.... ಹೋಗಲಿ ಅಂಥ ಗಂಡಸರು ಎಷ್ಟು ಜನರೋ;' ಎಂದು ಹೆಂಡತಿಯೋಗಲಿ, 'ಅಂಥ ಹೆಂಗಸರು ಎಷ್ಟು ಜನರೋ' ಎಂದು ಗಂಡನಾಗಲೀ, ಸಂಗಾತಿಯನ್ನು ಕಳೆದುಕೊಂಡಾಗ ಅಂದರೆ, ಅವರದು ಕೃತಕ ದಾಂಪತ್ಯವೆನ್ನಿಸದೆ ?

ಅದೇ ರೀತಿ ಇಷ್ಟಲಿಂಗ ಮತ್ತು ಭಕ್ತನ ಸಂಬಂಧ, ಭಕ್ತನು ಪೂಜಿಸುತ್ತಾ ಹೋದಂತೆ ಉಭಯತರ ಸಂಬಂಧ ಗಾಢವಾಗಿ, ಕಡೆಗೆ ಪೂಜಕನು 'ಲಿಂಗಪಾಣಿ'ಯೋಗುತ್ತಾನೆ. ಆ ಪ್ರೀತಿ, ಭಕ್ತಿಯ ಉತ್ಕಟತೆ ಇಲ್ಲದ ವ್ಯಕ್ತಿಯದೂ ಕೃತಕ ಭಕ್ತಿಯೇ ಆಗಿರುತ್ತದೆ. ಅವನಿಗೆ ಲಿಂಗದೇವನ ಮೇಲೆ ಭಕ್ತಿಯಲ್ಲ; ಆ ದೇವನ ಕರುಣೆಯೂ ಇವನ ಮೇಲಿರದು.

ಇಷ್ಟಲಿಂಗದ ಉಪಯೋಗ ರೇಡಿಯಾ, ಟಿ.ವಿ. ಉಪಯೋಗವಿದ್ದಂತೆ. ಒಂದು ದಿವಸ ರೇಡಿಯಾ ಕೇಳಿದ ಮಾತ್ರಕ್ಕೆ ಟಿ.ವಿ. ನೋಡಿದ ಮಾತ್ರಕ್ಕೆ ಅವುಗಳನ್ನು ನೀವು ಎಸೆದು ಬಿಡುವುದಿಲ್ಲ. ಮತ್ತೆ ಕೇಳಬೇಕಾದಾಗಲೆಲ್ಲ; ನೋಡಬೇಕಾದಾಗಲೆಲ್ಲ ಹಚ್ಚಿ ಕೊಳ್ಳುವಿರಷ್ಟೆ ? ಅದೇ ರೀತಿ ನಿಮಗೆ ದಿವ್ಯಾನುಭವ ಬೇಕಾದಾಗಲೆಲ್ಲ ಇಷ್ಟಲಿಂಗಾನುಸಂಧಾನ ಬೇಕೇ ಬೇಕು. ನಿಜ ಜ್ಞಾನಿ ಬಿಡುವುದಿಲ್ಲ ಮಾತ್ರವಲ್ಲ ಅವನ ಭಾವನಾತ್ಮಕ ಪ್ರಾಕೃತಿಕ ಸಂಬಂಧ ಇನ್ನಷ್ಟು ಹೆಚ್ಚಾಗುತ್ತದೆ.

ಪ್ರಶ್ನೆ ೧೦) ಲಿಂಗಾಯತ ಧರ್ಮಕ್ಕೆ ಎಷ್ಟೆಲ್ಲ ಹೆಸರುಗಳು ಬಳಕೆಯಲ್ಲಿ ಬಂದಿವೆ. ಹೀಗೆ ಬಂದ ಕಾರಣವೇನು ?

ಉತ್ತರ:
ಹನ್ನೆರಡನೆಯ ಶತಮಾನದಲ್ಲಿ ಹುಟ್ಟಿದ ಈ ಧರ್ಮದ ಜನಕ ಬಸವಣ್ಣ; ಅದಕ್ಕಾಗಿ ತಂದೆಯ ಹೆಸರು ಧರ್ಮದ ಹೆಸರಿನೊಡನೆ ಸೇರಿ 'ಬಸವ ಧರ್ಮ' ಎಂದಾಯಿತು. ಇದರ ತಾಯಿ ವಚನ ಸಾಹಿತ್ಯ; ಅದಕ್ಕೇ ತಾಯಿಯ ಹೆಸರು ಸೇರುವೆಗೊಂಡು 'ವಚನಧರ್ಮ' ಎಂದಾಯಿತು. ಅನುಭವ ಮಂಟಪದ ತೊಟ್ಟಿಲಲ್ಲಿ ಆಡಿಸಿ, ಅನೇಕ ಶರಣರು ಇದಕ್ಕೆ ಲಾಲನೆಪಾಲನೆ ಮಾಡಿದ ಕಾರಣ ಅದು 'ಶರಣಧರ್ಮ' ಎಂಬ ಹೆಸರು ಪಡೆಯಿತು. ಇದರ ತಂದೆ ಬಸವಣ್ಣ, ತಾಯಿ ವಚನ ವಾಜ್ಞಯಿ; ಇಟ್ಟ ಹೆಸರು ಲಿಂಗಾಯತ ಧರ್ಮ- ಲಿಂಗವಂತಧರ್ಮ, ಇನ್ನು ಕೆಲವು ಶೈವ ಪಂಥೀಯರು ಈ ಧರ್ಮ- ಸಮಾಜಗಳಲ್ಲಿ ಸೇರುವೆಗೊಂಡರು.

ನಿಜ ತಂದೆ-ತಾಯಿಗಳು ಇಟ್ಟ ಹೆಸರು "ಲಿಂಗಾಯತ ಧರ್ಮ" ಹೆಚ್ಚು ಅರ್ಥಗರ್ಭಿತ. ಮಗುವು ಜನಿಸಿದ್ದು ಮಾತ್ರ ಹನ್ನೆರಡನೆಯ ಶತಮಾನದಲ್ಲಿ.

ಪ್ರಶ್ನೆ ೧೧) ಗೋಲಾಕಾರದ ಕಂಥೆ ಧರಿಸಿದ ಇಷ್ಟಲಿಂಗದ ಪೂಜೆ, ಧಾರಣಿ ಎಂದಿನಿಂದ ಬಂದಿತು?

ಉತ್ತರ:
ಅದು ಬಸವಣ್ಣನವರಿಂದ ಬಂದಿತು. ಬಸವಣ್ಣನವರೇ ಪ್ರಪ್ರಥಮ ಲಿಂಗವಂತ. ಇದಕ್ಕೆ ಜೀವಂತ ಸಾಕ್ಷಿ ಎಂದರೆ ಇಷ್ಟಲಿಂಗಧಾರಿಗಳ ಸಮಾಜ, ಲಿಂಗವಂತ ಸಮಾಜವು ಬಸವಣ್ಣನವರು ಹುಟ್ಟಿದ, ಬೆಳೆದ, ಕಾರ್ಯಕ್ಷೇತ್ರವನ್ನಾಗಿ ಆರಿಸಿಕೊಂಡ, ಐಕ್ಯವಾದ ಜಿಲ್ಲೆಗಳಲ್ಲಿ ದಟ್ಟವಾಗಿದ್ದು ಹಾಗೇ ಸುತ್ತಲೂ ಹಬ್ಬಿರುವುದನ್ನು ಕಾಣುತ್ತೇವೆ. ಬಸವಣ್ಣನವರಿಗಿಂತಲೂ ಪೂರ್ವದಲ್ಲಿ ಯಾವಾವುದೋ ಯುಗಗಳಲ್ಲಿ ಯಾಲ್ಯಾರಿಂದಲೋ ಸ್ಥಾಪಿಸಲ್ಪಟ್ಟು ಪ್ರಚಾರದಲ್ಲಿದ್ದಿದ್ದರೆ, ಅಲ್ಲೆಲ್ಲ ಏಕೆ ಇಂದಿಗೂ ಗೋಲಾಕಾರದ ಕಂಥೆಗಳುಳ್ಳ ಇಷ್ಟಲಿಂಗದ ಆರಾಧಕರು ಇಲ್ಲ ?

ಪ್ರಶ್ನೆ ೧೨) ಕಂಥೆಯ ಲಿಂಗಗಳ ಧಾರಣಿ ಬಸವಣ್ಣನವರ ಕಾಲದಿಂದ ಬಂದಿತು ಎಂದು ನೀವು ಪ್ರತಿಪಾದಿಸುವಿರಲ್ಲ. ಕೆಲವು ಪಂಚಾಚಾರ್ಯ ಸ್ವಾಮಿಗಳು ಅನ್ನುತ್ತಾರೆ. ಅದೇನು ಮಹಾ; ಕಂತೆಯ ಅಯ್ಯನವರು ಅದನ್ನು ಇಡುತ್ತಾರೆ ?' ಎಂದು. ಇದಕ್ಕೆ ನಿಮ್ಮ ಉತ್ತರವೇನು ?

ಉತ್ತರ:
ಸಂಶೋಧಿಸಿ ಕೊಟ್ಟಾನಂತರ ಯಾರು ಬೇಕಾದರೂ ಇಡಬಹುದು. ಆದರೆ ಮೂಲ ಸಂಶೋಧನೆ ಬಲು ಮುಖ್ಯ. ಇಂದು ರೇಡಿಯಾ ಜೋಡಣಿ, ರಿಪೇರಿಯನ್ನು ಯಾರು ಬೇಕಾದರೂ ಮಾಡುತ್ತಾರೆ. ಆದರೆ ಮೊದಲ ರೇಡಿಯೇ ಸಿದ್ಧಪಡಿಸಿದ ಮಾರ್ಕೊನಿ ಅದರ ಜನಕ ಎಂದೆನಿಸಿಕೊಳ್ಳುತ್ತಾನೆ; ಹಾಗೆ ಇಂದು ಕಂಥೆಯನ್ನು ಯಾರು ಬೇಕಾದರೂ ಇಡಬಹುದು; ಅದರ ಜನಕ ಬಸವಣ್ಣನಿಗೆ ಸಂಶೋಧನೆಯ ಮೂಲ ಶ್ರೇಯಸ್ಸು ಹೋಗುವುದು.

ಪ್ರಶ್ನೆ ೧೩) ಗುರು ಬಸವಣ್ಣನವರ ಪೂಜೆ ಮಾಡುವುದರಿಂದ 'ನಂಬಿದ ಹೆಂಡತಿಗೆ " ಗಂಡನೊಬ್ಬ ಕಾಣಿರೋ; ನಂಬಬಲ್ಲ ಭಕ್ತನಿಗೆ ದೇವನೊಬ್ಬ ಕಾಣಿರೋ' ಎಂಬ ಏಕ ದೇವೋಪಾಸನೆಗೆ ಚ್ಯುತಿ ಬರದೆ ?
ಉತ್ತರ:
ಪತಿವ್ರತೆಯು ಗಂಡನಿಗೆ ನಿಷ್ಠಳಾಗಿ ಇಟ್ಟುಕೊಂಡೂ, ಜನ್ಮದಾತ ತಂದೆಯನ್ನು ಗೌರವಿಸಿ, ಆದರಿಸಿ ಸೇವೆ ಗೈಯಲು ಬರದೆ ? ಅದೇ ರೀತಿ ಶರಣ ಸತಿಯು ಲಿಂಗಪತಿಯನ್ನು ನಿಷ್ಠೆಯಿಂದ ಆರಾಧಿಸಿಯೂ ಧರ್ಮಪಿತ ಬಸವಣ್ಣನವರನ್ನು ಗೌರವಿಸಿ, ಪೂಜಿಸಲು ಬರುತ್ತದೆ. ಗುರು - ಲಿಂಗ - ಜಂಗಮರ ಆರಾಧನೆ ಗೈದೂ ಸಹ ಏಕದೇವೋಪಾಸನೆ ಪಾಲಿಸಲು ಸಾಧ್ಯ.

ಗ್ರಂಥ ಋಣ: ೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಇಷ್ಟಲಿಂಗ ಪೂಜಾ ವಿಧಾನ ಪ್ರವಚನ ಎಂದರೇನು ? Next