Previous ಕಾಯಕವೇ ಕೈಲಾಸ ಕಾಯಕ-ದಾಸೋಹ Next

ಕಾಯಕದ ಆರ್ಥಿಕ ಮತ್ತು ಸಾಮಾಜಿಕ ಮುಖ

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ಕಾಯಕದ ಆರ್ಥಿಕ ಮತ್ತು ಸಾಮಾಜಿಕ ಮುಖ

ಕಾಯಕವು ಪ್ರಧಾನವಾಗಿ ಆರ್ಥಿಕ ಸ್ಥಿತಿಯ ಸುಧಾರಣೆಗೆ, ಉಪಜೀವನಕ್ಕೆ ಕೈಗೊಳ್ಳುವ ಉದ್ಯೋಗವಾದ್ದರಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸವಲ್ಲ, ನಿಷ್ಕಾಮ ಕರ್ಮ ಶರಣ ತತ್ತ್ವದ ಜೀವಾಳವಲ್ಲ ; ಸತ್ಕಾಮ ಕರ್ಮವೇ ಇದರ ಜೀವಾಳ,

೧. “ಕೂಡಲ ಸಂಗಮದೇವಾ, ನಿಮ್ಮ ಪೂಜಿಸಿದ ಫಲ ಕೈಯ ಮೇಲೆ'' ಎಂಬ ಮಾತು ನಾವು ನಿಷ್ಠೆಯಿಂದ ಕಾರ್ಯ ಮಾಡಿ, ಅದರ ಫಲ ಬಯಸಿದರೆ ತಪ್ಪಲ್ಲ ಎಂಬುದನ್ನು ಪ್ರತಿಪಾದಿಸುತ್ತದೆ.

೨. ಕಾಯಕ ಜೀವಿ ತಾನು ಕಾರ್ಯಮಾಡಿದ ಬಳಿಕ ಅದರ ಮೌಲ್ಯಕ್ಕಿಂತಲೂ ಹೆಚ್ಚಿನ ಫಲ ಪಡೆಯಬಾರದು.

ಸತ್ಯ ಶುದ್ಧ ಕಾಯಕದಲ್ಲಿ ಚಿತ್ತ ವಿಚ್ಛಂದವಾಗಿರಬೇಕು
ನೇಮದ ಕೂಲಿಯಂದಿನ ನಿತ್ಯ ಕಾಯಕದಲ್ಲಿ ಸಂದಿರಬೇಕು
ನೇಮದ ಕೂಲಿಯ ಬಿಟ್ಟು, ಹೇಮದಾಸೆಗೆ ಕಾಮಿಸಿ,
ದ್ರವ್ಯವ ಹಿಡಿದರೆ ತಾ ಮಾಡುವ ಸೇವೆ ನಷ್ಟವಯ್ಯ,


ಎಂಬುದು ನುಲಿಯ ಚಂದಯ್ಯನ ವಾಣಿಯಲ್ಲಿ ವ್ಯಕ್ತವಾಗಿರುವ ಸಂದೇಶ.

೩. ಹಾಗೆಂದು ತನ್ನ ಕಾಯಕಕ್ಕೆ ಪ್ರತಿಫಲ ಪಡೆಯದೆ ಕಷ್ಟದಲ್ಲಿ ಬಳಲಬೇಕೆ ?

“ಒಂದು ಕಾಣಿಯ ಗೆಲ್ಲ, ಅರ್ಧ ಕಾಣಿಯ ಸೋಲ" ಎಂದು ದೇವರನ್ನು ಬಣ್ಣಿಸಿದಂತೆ, ಶರಣನೂ ತಾನು ಮಾಡುವ ಕಾಯಕಕ್ಕೆ ತಕ್ಕ ಪ್ರತಿಫಲ ಪಡೆಯುವನು.

ಕಾಯಕ ಮತ್ತು ಸಾಮಾಜಿಕ ಸಮಾನತೆ

ದೇವ ಸಹಿತ ಭಕ್ತ ಮನೆಗೆ ಬಂದರೆ
ಕಾಯಕವಾವುದೆಂದು ಬೆಸಗೊಂಡೆನಾದರೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ.


ಎಂಬ ಬಸವ ವಚನಾಮೃತವು ಕಾಯಕ ಜೀವಿಗಳಲ್ಲಿ ಸಮಾನತೆಯನ್ನು ಪ್ರತಿಪಾದಿಸುತ್ತದೆ. ಅನುಭವ ಮಂಟಪಕ್ಕೆ ಬರುವ ಶರಣನ ಉದ್ಯೋಗ ಯಾವುದೇ ಇರಲಿ, ಅವನ ಕಾಯಕ ಕುರಿತು ಕೇಳಕೂಡದು. ಸಂಸ್ಕಾರ ಸಹಿತನೋ ಸಂಸ್ಕಾರ ರಹಿತನೋ ಎಂಬುದೊಂದೇ ಅಲ್ಲಿ ಗಣಿಸಲ್ಪಡುವ ಸಂಗತಿ, ಅದನ್ನು ಸಾರಿ ಹೇಳಲು ಅಂಗದ ಮೇಲೆ ದೇವನ ಲಾಂಛನ ಇದ್ದೇ ಇದೆಯಲ್ಲ ! ಅಂಗದ ಮೇಲೆ ದೇವಲಾಂಛನ ಧರಿಸಿಕೊಂಡು ಬಂದವನು ಶರಣ. ಅವನು ಮಾಡುತ್ತಿರುವುದು ಕಸಗುಡಿಸುವ ಕಾಯಕವೇ ಇರಲಿ, ಬಟ್ಟೆ ತೊಳೆಯುವ ಕಾಯಕವೇ ಇರಲಿ, ಮೆಟ್ಟುಮಾಡುವ ಉದ್ಯೋಗವೇ ಇರಲಿ, ಯಾವ ಉದ್ಯೋಗವಿಲ್ಲದೆ ಸಮಾಜವು ಸುಸ್ಥಿತಿಯಲ್ಲಿರಲು ಸಾಧ್ಯ ? ಕಸಗುಡಿಸುವವ ಗುಡಿಸೆನು ಎಂದರೆ ಆಗ ಉತ್ತಮನೇ ಗುಡಿಸಿಕೊಳ್ಳಬೇಕಾಗುವುದಲ್ಲವೆ ? ಕ್ಷೌರಿಕ ಕಾಯಕದವನು ಕೀಳು ತಾನೆ ? ಅವನು ಕ್ಷೌರ ಮಾಡೆನು ಎಂದರೆ ಆಗ ಉತ್ತಮ ವರ್ಣಿಯನೇ ಮಾಡಿಕೊಳ್ಳಬೇಕಾಗುವುದಲ್ಲವೆ ? ಆಗ ಇವನೇ ಕ್ಷೌರಿಕನಾಗಿ, ಕೀಳಾಗನೆ ? ಇನ್ನೊಬ್ಬರನ್ನು ಶೋಷಿಸದ, ಶರೀರವನ್ನು ದಣಿಸುವ ಅತ್ಯಂತ ಮುಗ್ಧರಾದ ಜನರ ವೃತ್ತಿಗಳನ್ನೆಲ್ಲ ಕೀಳೆಂದು ಕರೆಯುವ ಮನೋಭಾವದಿಂದ ಬಸವಣ್ಣನವರು ಬಹುತಪ್ತರಾಗುವರು.

ಕೆಲವು ಟೀಕಾಕಾರರು ಹೇಳುವುದುಂಟು, 'ಬಸವಣ್ಣನವರು ಲಿಂಗಧಾರಣೆ' ಯನ್ನು ಸಮಾನತೆಯ ಸೂತ್ರವನ್ನಾಗಿಟ್ಟರು. ದೇವ ಲಾಂಛನವಿದ್ದವನಲ್ಲಿ ಮಾತ್ರ ಜಾತಿಯನ್ನು ಎಣಿಸುವುದಿಲ್ಲ. ವೃತ್ತಿಯನ್ನು ಹುಡುಕುವುದಿಲ್ಲ ಎಂದರು ಇದೂ ಸಂಕುಚಿತವಲ್ಲವೆ ?''

ಯಾವಾಗಲೂ ಒಂದು ವ್ಯಕ್ತಿ ಕೈಗೊಳ್ಳುವ ಸುಧಾರಣೆ, ಹಾಕಿಕೊಳ್ಳುವ ಯೋಜನೆಯನ್ನು ಅವನ ಕಾಲ, ಸಮಾಜದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೋಡಬೇಕು, ಕೆಲವರು ಅತೀ ಆದರ್ಶದ ಘೋಷಣೆ ಮಾಡುವರು, ಆದರೆ ಅವು ಬರೀ ಪುಸ್ತಕದಲ್ಲಿ ಉಳಿದು ಬಿಡುವದೇ ವಿನಾ ಕ್ರಿಯಾರೂಪಕ್ಕೆ ಬರವು. ಆಚರಣೆಗೆ ಅಸಾಧ್ಯವಾದ ಮಾತುಗಳಲ್ಲಿ ಕಾಲ ಕಳೆಯುವುದಕ್ಕಿಂತಲೂ ಏನಾದರೂ ಪ್ರಾಯೋಗಿಕವಾದ ಸುಧಾರಣೆಗಳಲ್ಲಿ ತೊಡಗುವುದು ಒಳ್ಳೆಯದು. ಶ್ರೀ ಅರವಿಂದರ ವಿಶ್ವಮಾನವತ್ವ ಕಲ್ಪನೆಯ ಆರಾಧಕರು ಶ್ರೀ ವಿ.ಕೆ.ಗೋಕಾಕರು, ಶ್ರೀ ಸಿಂಪಿ ಲಿಂಗಣ್ಣನವರು, ಶ್ರೀ ಕೋ ಚನ್ನಬಸಪ್ಪನವರು ಮುಂತಾದವರು. ಆದರೆ ಅವರು ವಿವಾಹ ಕಾರ್ಯಾದಿಗಳನ್ನು ನೆರವೇರಿಸುವಾಗ ಪುನಃ ತಮ್ಮ ತಮ್ಮ ಸಮಾಜದಲ್ಲಿ ಹೆಣ್ಣು-ಗಂಡುಗಳನ್ನು ಕೊಡುವರು ತೆಗೆದುಕೊಳ್ಳುವರು. ಹುಟ್ಟಿನಿಂದ ಬ್ರಾಹ್ಮಣರಾದ ಶ್ರೀ ಗೋಕಾಕರು, ಲಿಂಗವಂತರಾದ ಕೋ. ಚನ್ನಬಸಪ್ಪನವರು ಅರವಿಂದರ ತತ್ತ್ವದ ಸೂತ್ತ ಹಿಡಿದು, ವಿವಾಹ ನಂಟಸ್ತಿಕೆ ಬೆಳೆಸಬಹುದಿತ್ತಲ್ಲ !!

ಆದರೆ, ಇಷ್ಟಲಿಂಗ ಮಾತ್ರ ಅಂದು ಹುಟ್ಟಿನಿಂದ ಬ್ರಾಹ್ಮಣನಾದ ಮಧುವರಸನನ್ನು ಸಮಗಾರನಾದ ಹರಳಯ್ಯನನ್ನು ಅವರವರ ಪೂರ್ವಾಶ್ರಯಗಳನ್ನು ತೊರೆಸಿ, ಸಮಾನಗೊಳಿಸಿ, ನಂಟಸ್ತಿಕೆ ಬೆಳೆಸಲು ಕಾರಣೀಭೂತವಾಯಿತು.

ಸಂಪ್ರದಾಯ ಬದ್ಧ, ಮತಾಂಧ ಜಾತಿವಾದಿಗಳು ಇದನ್ನು ಒಪ್ಪಿಕೊಂಡರೋ ಬಿಟ್ಟರೋ ಅದು ನಮಗೆ ಗೌಣ. ಇಷ್ಟಲಿಂಗಧಾರಿಗಳಾದ, ಸಮಾನತೆಯ ಸೂತ್ರಕ್ಕೆ ಬದ್ಧರಾದ ಶರಣರು ಮಾತ್ರ ಒಮ್ಮತದಿಂದ ಇದನ್ನು ಅನುಮೋದಿಸಿದರು ಎಂಬುದು ಗಮನಾರ್ಹ.

ದೇವ ದೇವಾ ಬಿನ್ನಪವನವಧಾರು
ವಿಪ್ರ ಮೊದಲಾಗಿ ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನ್ನೆಲ್ಲ ಒಂದೇ ಎಂಬೆ
ಹಾರುವ ಮೊದಲು ಅಂತ್ಯಜ ಕಡೆಯಾಗಿ
ಭವಿಯಾದವರನೊಂದೇ ಎಂಬೆ !
ಹೀಗೆಂದು ನಂಬುವುದೆನ್ನ ಮನವು.


ಇದು ಬಸವಣ್ಣನವರ ಸಿದ್ಧಾಂತ, ಇದರ ಪ್ರಯೋಜನವನ್ನು, ಪ್ರಯೋಗ- ಶೀಲತೆಯನ್ನು ನೋಡೋಣ.

ಸಾಂಪ್ರದಾಯಿಕ ಸಮಾಜ ವ್ಯವಸ್ಥೆಯಲ್ಲಿ ಇರುವ ವರ್ಗಿಕರಣವೆಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಐದನೆಯ ವರ್ಣದವನು ಅಸ್ಪೃಶ್ಯ. ಈ ಐದು ಪ್ರಮುಖ ವಿಭಜನೆಗಳಲ್ಲದೆ ಮೊದಲ ೩ ವರ್ಣಗಳಲ್ಲೇ ಅನೇಕ ಉಪಜಾತಿ, ಶೂದ್ರ ವರ್ಗದಲ್ಲಂತೂ ಕಾಸಿಗೊಂಡು ಕೊಸರಿಗೆರಡು ಎಂಬಷ್ಟು ಜಾತಿ, ಉಪಜಾತಿಗಳು. ಈ ಎಲ್ಲ ಗುಂಪುಗಳನ್ನೊಡೆದು ಭಕ್ತ-ಭವಿ ಎಂಬ ಎರಡೇ ಬಣಗಳನ್ನಾಗಿ ಧೃವೀಕರಿಸುವುದೂ ದೊಡ್ಡ ಸಾಧನೆಯಲ್ಲವೆ ? ಇಷ್ಟೊಂದು ಬೃಹತ್ ಜನಾಂಗವನ್ನು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಒಂದು ಛಾವಣಿಯಡಿ ತರಲು ಯತ್ನಿಸಿದುದೇ ಒಂದು ಅಭಿನಂದನಾರ್ಹ ಸಾಹಸವಲ್ಲವೆ? ಮತ್ತು ಇನ್ನೊಂದು ಗಮನಾರ್ಹ ಮಾತೆಂದರೆ ಭವಿಗೆ ಭಕ್ತಿ ಮಾರ್ಗದ ಬಾಗಿಲು ತೆಗೆದೇ ಇರುತ್ತದೆ. ಚತುರ್ವಣಿ್ರಯರಲ್ಲಿ ಬ್ರಾಹ್ಮಣತ್ವ, ಕ್ಷತ್ರಿಯ, ವೈಶ್ಯತ್ವ, ಶೂದ್ರತ್ವ ಹುಟ್ಟಿನಿಂದಲೇ ನಿರ್ಧಾರವಾಗುವಂತೆ, ಅವನ್ನು ಎಂದೆಂದೂ ದಾಟಲು ಬರದಂತೆ ಇಲ್ಲಿ ಇಲ್ಲ. ಭವಿತ್ವವನ್ನು ಯಾವುದೇ ಕ್ಷಣದಲ್ಲಿ ನಿವಾರಿಸಿಕೊಂಡು ಭಕ್ತನಾಗಲು ಅವಕಾಶವಿದೆ.

ಸಂಸ್ಕಾರ, ಪರಿವರ್ತನೆ ಏನೂ ಇಲ್ಲದ ಸಮಾನತೆಯನ್ನು ಬಸವಣ್ಣನವರು ಘೋಷಿಸಿದ್ದರೆ ಆ ಪ್ರಯತ್ನ ಬಹಳ ಅರ್ಥರಹಿತವಾಗುತ್ತಿತ್ತು. ಪರೀಕ್ಷೆ ಇಟ್ಟು, ಪಾಸು-ನಪಾಸು ಇಟ್ಟಾಗ ವಿದ್ಯಾರ್ಥಿಯ ಪ್ರಯತ್ನಕ್ಕೆ ಬೆಲೆ ಇರುವಂತೆ ದೀಕ್ಷಾ ಸಂಸ್ಕಾರವನ್ನಿಟ್ಟು ಭಕ್ತತ್ವ- ಭವಿತ್ವವನ್ನು ನಿರ್ಧರಿಸಿದ್ದೇ ಬಸವಣ್ಣನವರ ದೂರಗಾಮಿತ್ವಕ್ಕೆ ನಿದರ್ಶನ.

ಮೊದಲಿನಿಂದಲೂ ಮನೆಯಲ್ಲಿ ಬೆಳೆದು ಬಂದ ವಾತಾವರಣದಂತೆ ನಾನು ಭಯಸಹಿತ ಭಕ್ತಿಯಿಂದಲೇ ಇಷ್ಟಲಿಂಗಪೂಜೆ ಮಾಡುತ್ತಿದ್ದೇನಾದರೂ, 'ಇದು ಒಂದು ಜಾತಿ, ಒಂದು ಸಮುಯದಾಯದ ಕುರುಹು' ಎಂಬ ಭಾವ ವಿದ್ಯಾರ್ಥಿ ಜೀವನ ಕಾಲದಲ್ಲಿತ್ತು. ಈಗ ನನ್ನ ಭಾವನೆ, ತಿಳುವಳಿಕೆ ವಿಸ್ತಾರಗೊಂಡಿದೆ. ಈಗ ನನ್ನ ದೃಷ್ಟಿಯಲ್ಲಿ ಇಷ್ಟಲಿಂಗವು ವಿಶ್ವಮಾನವತ್ವದ ಸಂಕೇತ, ವಿಶ್ವಪ್ರಜೆಯ (Univeral citizen) ಸಂಕೇತ. ಸರಿಯಾದ ಆಳಕ್ಕಿಳಿದು ನೋಡಿದರೆ ದೇಶ ಭಾಷೆ ಕಾಲ ಜಾತಿ ಜನಾಂಗಗಳ ವಲಯ ಮೀರಿ ನಿಲ್ಲುವ ಒಂದು ತತ್ತ ಇಷ್ಟಲಿಂಗ, ಅನೀಕೇತನನಾಗುವ ಸಾಹಸ ಈ ದೇವಭಕ್ತನ ಉದ್ದೇಶ. ವ್ಯಕ್ತಿಗೆ ಚೇತನ ನೀಡುವ ಗ್ಲೋಕೋಸ್ ಬಾಟಲದ ಮೇಲೆ ವಿಷ ಎಂದು ಬರೆದು ಧೂರ್ತರು ಚೀಟಿ ಅಂಟಿಸಿದಂತೆ ಗುರು ಬಸವಣ್ಣನವರು ಕೊಟ್ಟ ಇಷ್ಟಲಿಂಗಕ್ಕೆ ಜಾತಿ ಕುರುಹು ಎಂದು ಚೀಟಿ ಅಂಟಿಸಿದ್ದಾರೆ, ಅಂಟಿಸಿಕೊಂಡಿದ್ದಾರೆ - ಲಿಂಗಾಯತೇತರರು ಮತ್ತು ಲಿಂಗಾಯತರು ! ಒಳಗಿನ ಸತ್ವವನ್ನು ಕಳೆದು ಬರೀ ಕುರುಹಿನಲ್ಲಿ ಉಳಿದು, ಕುರುಹನ್ನು ಕಟ್ಟಿಕೊಂಡವರ ಮಧ್ಯೆ ಜಾತಿ ಸಂಘಟನೆಯನ್ನು ಮಾಡುತ್ತಿರುವ ಹಲವರ ಪ್ರವೃತ್ತಿಯಿಂದ ಈ ಭಾವನೆ, ಬಸವಣ್ಣನವರ ಭಾಷೆಯಲ್ಲಿ ಹೇಳಬೇಕಾದರೆ 'ಭಾವನಿಂದೆ ಉಂಟಾಗಿದೆ.

ಧಾರ್ಮಿಕ ಸಂಸ್ಕಾರ, ಸಹೋದರತ್ವ, ಸಮಾನತೆಗೆ ಅಡಿಪಾಯ. ಒಬ್ಬ ನಿಮ್ನ ವರ್ಗದ ವ್ಯಕ್ತಿ ಇರುತ್ತಾನೆ ಎಂದುಕೊಳ್ಳಿ. ಆತ ವಿದ್ಯೆಯಲ್ಲಿ, ಬುದ್ಧಿಯಲ್ಲಿ, ಹಣದಲ್ಲಿ ಮುಂದಿದ್ದಾನೆ. ತನಗಿಂತಲೂ ದೊಡ್ಡ ಹುದ್ದೆಯಲ್ಲಿದ್ದಾನೆ ಎಂದುಕೊಂಡು ಕಛೇರಿಯಲ್ಲಿ ಒಬ್ಬ ತಗ್ಗಿ ನಡೆದರೂ, ವೈಯಕ್ತಿಕ ಸಂಬಂಧ, ವೈವಾಹಿಕ ಸಂಬಂಧ ಮಾಡಲು ಮುಜುಗರ ಪಡುವನು. ಅದೇ ತನ್ನ ಧರ್ಮಿಯ ಸಾಮಾನ್ಯ ಅಂತಸ್ತಿನವನಾಗಿದ್ದರೂ ಸರಳವಾಗಿ ಬೆರೆಯುವನು. ಈ ಮುಜುಗರ ನಿವಾರಿಸಿ, ಉಭಯತರನ್ನು ಹತ್ತಿರ ತರುವುದು ಧಾರ್ಮಿಕ ಸಂಸ್ಕಾರವೆ. ಇದನ್ನು ಕೊಡದೆ ಬಾಕಿ ಏನೆಲ್ಲ ಶೈಕ್ಷಣಿಕ, ಸಾಮಾಜಿಕ ಸುಧಾರಣೆ ಮಾಡಿದರೂ ಪ್ರಯೋಜನವಾಗದು ಎಂದು ಬಸವಣ್ಣನವರು ಅರಿತಿದ್ದರು. ಇದನ್ನರಿತೇ 'ದೇವ'ನ ಕುರುಹನ್ನು ಅಂಗದ ಮೇಲೆ ಧರಿಸುವ ಸೌಲಭ್ಯ ಎಲ್ಲರಿಗೂ ನೀಡಿದರು.

ಬಸವಣ್ಣನವರು ಜನ್ನಿವಾರ ವಿರೋಧಿಸಿ ಅದಕ್ಕಿಂತಲೂ ಭಾರವಾದ (ಇಷ್ಟಲಿಂಗ ಸಹಿತ) ಶಿವದಾರ ಕಟ್ಟಿದರು ಎಂದು ತಮಗೆ ತಾವೇ ವಿಚಾರವಾದಿಗಳು, ಬುದ್ಧಿ ಜೀವಿಗಳು ಎಂದು ತಿಳಿದ ಕೆಲವು ಜನರು ಟೀಕಿಸುವುದುಂಟು. ಶಿವದಾರವೇ ಇರಲಿ, ಜನ್ನಿವಾರವೇ ಇರಲಿ ಅವು ತಮ್ಮಷ್ಟಕ್ಕೆ ತಾವೇ ಜಾತಿ ಲಾಂಛನಗಳಲ್ಲ. ಕೇವಲ ದಾರಗಳು ಮಾತ್ರ, ಅವನ್ನು ವಿಂಗಡನೆಯ ಸೂತ್ರವಾಗಿಟ್ಟಾಗ ಅವು ಜಾತಿಯ ಸಂಕೇತವಾಗುತ್ತವೆ. ಜನ್ನಿವಾರವನ್ನೇ ಯಾವುದೇ ಭೇದಮಾಡದೆ ಎಲ್ಲರಿಗೂ ಕೊಟ್ಟಿದ್ದರೆ ಅದು ಜಾತಿ ಸಂಕೇತವಾಗುತ್ತಿರಲಿಲ್ಲ.

ಈ ದೃಷ್ಟಿಯಲ್ಲಿ ಶಿವದಾರ ಎಲ್ಲರಿಗೂ ಕೊಡಲ್ಪಟ್ಟಿತು. ಗಮನಿಸಬೇಕಾದ ಇನ್ನೊಂದು ಅಂಶವಿದೆ. ಜನ್ನಿವಾರ- ಅದೇ ಪ್ರಮುಖ ಲಾಂಛನ ; ಶಿವದಾರ ಕೇವಲ ಸಾಧನ ಮಾತ್ರ: ಅದು ಗೌಣ. ಇಲ್ಲಿ ಮುಖ್ಯವಾದುದು ಶಿವದಾರವು ಧರಿಸಿಕೊಂಡಿರುವ ಲಿಂಗದ ಕರಡಿಗೆಯೊಳಗಿರುವ ಇಷ್ಟಲಿಂಗ, ನಾವುಗಳೆಲ್ಲ ಲೋಹದ ಕರಡಿಗೆಯಲ್ಲಿ ಕಟ್ಟದೆ ವಸ್ತ್ರದಲ್ಲೇ ಇಷ್ಟಲಿಂಗ ಕಟ್ಟುತ್ತೇವೆ.

ಸಾಮಾನ್ಯವಾಗಿ ಕೊರಳನ್ನು ನೋಡಿದಾಗ ದಾರವೊಂದು ಕಂಡಾಗ ಈತ ದ್ವಿಜವರ್ಣಿಯ ಎಂಬುದು ವ್ಯವಹರಿಸುವವರಿಗೇ ತಿಳಿದು ಬಿಡುತ್ತಿತ್ತು. ಅವನು ಬ್ರಾಹ್ಮಣ ಇಲ್ಲವೇ ಕ್ಷತ್ರಿಯ, ಇಲ್ಲವೇ ವೈಶ್ಯ ಎಂಬುದು ಲಾಂಛನದಿಂದಲೇ ತಿಳಿದುಬಿಡುತ್ತಿತ್ತು. ಬಸವಣ್ಣನವರು ಈ ದಾರವನ್ನು ಎಲ್ಲರಿಗೂ ಕೊಟ್ಟು ಬಿಟ್ಟರು. ಅಂದರೆ ಕೊರಳನ್ನು ನೋಡಿದಾಗ ಈ ದಾರ ಕಣ್ಣಿಗೆ ಬಿದ್ದರೆ ಅವರೊಡನೆ ಉತ್ತಮ ಜಾತಿಯವನು ಸರಿಯಾಗಿ ವ್ಯವಹರಿಸುತ್ತಾನೆ ಎಂಬುದೇ ಇದರ ಹಿಂದಿನ ಉದ್ದೇಶ. ಬಸವಣ್ಣನವರ ಚಾಣಾಕ್ಷತನಕ್ಕೆ ನಮಗೆ ಆಶ್ಚರ್ಯವೇ ಎನಿಸುತ್ತದೆ.

ಬಸವಣ್ಣನವರ, ಬಸವ ಧರ್ಮದ ಕ್ರಾಂತಿಕಾರಿ ವಿಚಾರ ಸರಣಿಯನ್ನು ಸಹಿಸಿಕೊಳ್ಳದ ಕೆಲವು ಬರಹಗಾರರು, ಆದರೆ ತಾವೂ ವಿಚಾರವಾದಿಗಳು ಎಂದು ಬಿರುದು ತೆಗೆದುಕೊಳ್ಳಬಯಸುವವರು ಹೀಗೆ ಬರೆಯುವುದುಂಟು. "ಬಸವಣ್ಣನವರಿಗೆ ಪ್ರಾಮಾಣಿಕವಾಗಿ ಜಾತಿಗಳು ಹೋಗಬೇಕು ಎಂದಿರಲಿಲ್ಲ. ಅದಕ್ಕೇ ಶರಣರ ಹೆಸರಿನ ಹಿಂದೆ ಅವರ ವೃತ್ತಿಗಳನ್ನು ಹಾಗೇ ಇಟ್ಟರು" ಎಂಬುದಾಗಿ, ಬಸವಣ್ಣನವರು ಜಾತಿ ಮತ್ತು ವೃತ್ತಿ ಸೂಚಕ ಪದಗಳನ್ನು ಉದ್ದೇಶ ಪೂರ್ವಕವಾಗಿ ಇಟ್ಟಿದ್ದಾರೆ. ಮಾಚಯ್ಯನವರು, ಹರಳಯ್ಯ-ಚೌಡಯ್ಯ ಮುಂತಾದವರು ಇವತ್ತು ಗೌರವಾನ್ವಿತ ಶರಣರು. ಶರಣರ ಸ್ತೋತ್ರ ಮಾಲಿಕೆಗಳಲ್ಲಿ ಅವರಿಗೆ ಗಣ್ಯಸ್ಥಾನವಿದೆ. ಅವರ ಜಾತಿ-ವೃತ್ತಿಗಳನ್ನು ಹಾಗೆಯೇ ಇಟ್ಟುಕೊಂಡು ಬರದಿದ್ದರೆ ಇಂದು ಸಂಪೂರ್ಣವಾಗಿ ವೈದಿಕೀಕರಣಗೊಂಡಿರುವ ನಮ್ಮ ಹಲವಾರು ಮಠಾಧೀಶರು ಪ್ರಭುದೇವ, ಮಾಚಿದೇವ, ಹರಳಯ್ಯ-ಚೌಡಯ್ಯ ಮುಂತಾದವರನ್ನೆಲ್ಲ ಹೊಸ ಹೊಸ ಪುರಾಣಗಳನ್ನು ಬರೆಸಿ ಲಿಂಗೀ ಬ್ರಾಹ್ಮಣರ ಹೊಟ್ಟೆಯಲ್ಲಿ ಹುಟ್ಟಿಸುತ್ತಿದ್ದರು. ಮಡಿವಾಳ ಮಾಚಿದೇವರು ಅಯ್ಯನವರ ಹೊಟ್ಟೆಯಲ್ಲಿ ಹುಟ್ಟಿದಂತೆ ಹೇಳುವ ಪುರಾಣ ಆಗಲೇ ಸಿದ್ಧವಾಗಿದೆ. ಕುಡುವಕ್ಕಲಿಗ ಮನೆತನದಲ್ಲಿ ಮುದ್ದೇಗೌಡ-ಸುಗ್ಗವ್ವಯರ ಮಗನಾಗಿ, ಧೂಳಿಮಾಕಾಳ ಎಂಬ ಹೆಸರಿನಿಂದ ಹುಟ್ಟಿದ ಶಿವಯೋಗಿ ಸಿದ್ಧರಾಮ ಈಗಾಗಲೇ ನಮ್ಮ ಮಠಾಧೀಶರ ಕೈಚಳಕದಿಂದ ಹಿರೇಮಠದ ಮುದ್ದದೇವ ಶಿವಾಚಾರರ ಹೊಟ್ಟೆಯಲ್ಲಿ ಜನಿಸಿದ್ದಾನೆ. ಬಹಳ ಅರ್ಥಗರ್ಭಿತವಾದ, ದೂರಾಲೋಚನೆ ಇದ್ದ ಮುತ್ಸದ್ದಿ ಬಸವಣ್ಣನವರು ಮುಂದೆ ಪುರೋಹಿತಶಾಹಿ ಜನ ಮಾಡಬಹುದಾದ ಕೈಚಳಕಗಳನ್ನೆಲ್ಲ ಗುರುತಿಸಿ ಜಾತಿ- ವೃತ್ತಿಸೂಚಕ ಪದಗಳನ್ನು ಹೆಸರುಗಳೊಡನೆ ಇಟ್ಟೇ ವ್ಯವಹರಿಸಿದ್ದಾರೆ. ಅಂತಂಥಾ ಜಾತಿ-ವೃತ್ತಿಗಳಲ್ಲಿ ಹುಟ್ಟಿದವರೂ ಶರಣ ಶ್ರೇಷ್ಟರಾಗಬಹುದು ಎಂಬುದನ್ನು ಈ ರೀತಿ ಉಳಿಸಿದ್ದಾರೆ.

'ಈತ ಮಡಿವಾಳ ಮಾಚಯ್ಯ, ಗಾಣದ ಕನ್ನಪ್ಪ, ಆತ ಒಕ್ಕಲಿಗ ಮುದ್ದಣ್ಣ ಅಂಬಿಗರ ಚೌಡಯ್ಯ, ಎಂದು ಹೇಳುವಲ್ಲಿ ಇವರ ಉದ್ಯೋಗಗಳು ಇವು ಎಂದು ಹೇಳುವ ಪ್ರಯತ್ನವಿದೆಯೇ ವಿನಾ ಆ ವೃತ್ತಿಗಳು ಕೀಳು ಎಂಬ ಭಾವವಿಲ್ಲ. ಅನುಭವ ಮಂಟಪದಲ್ಲಿ ಎಲ್ಲರೂ ಸಮಾನರು ಎಂದೇ ವರ್ತಿಸಲಾಗುತ್ತಿತ್ತು ಎಂಬುದು ಗಮನಾರ್ಹ. ಪ್ರಮಥರು ಅತ್ಯಂತ ನಿಶಿತಮತಿಗಳಾಗಿ ಹೆಸರಿನ ಹಿಂದೆ ವೃತ್ತಿ, ಜಾತಿಗಳನ್ನು ಸೇರಿಸಿಟ್ಟರೆಂದೇ ಶಿಥಿಲಗೊಂಡ ಬಸವ ತತ್ತ್ವವನ್ನು ಪುನಃ ಜೀವಂತಗೊಳಿಸುವ ಚಳುವಳಿ ಪ್ರಾರಂಭಿಸಲು ನಮ್ಮಂಥವರಿಗೆ ಸಾಧ್ಯವಾದುದು. ಟ್ರ್ಯಾಕ್ ಬಿಟ್ಟು ಪುನಃ ಜಾತಿವಾದಕ್ಕೆ ಜೋತು ಬಿದ್ದ ಲಿಂಗವಂತ ಧರ್ಮಾನುಯಾಯಿಗಳನ್ನು ಗುಣ ಪ್ರಧಾನ, ಜ್ಞಾನ ಪ್ರಧಾನ ವಿಚಾರಕ್ಕೆ ಕರೆದೊಯ್ಯಲು ಸಾಧ್ಯವಾಗುತ್ತಿರುವುದು.

ಹುಟ್ಟು, ಜಾತಿ ಮತ್ತು ವೃತ್ತಿ

ಕೆಲವು ಆಧುನಿಕ ಬರಹಗಾರರು ಬಸವಣ್ಣನವರ ವಿಚಾರಧಾರೆಯನ್ನು ತಪ್ಪು ತಪ್ಪಾಗಿ ವಿಮರ್ಶಿಸುವುದುಂಟು. ಅವರು ಹೀಗೆ ಹೇಳುತ್ತಾರೆ. “ಬಸವಣ್ಣನವರು 'ವ್ಯಕ್ತಿಯು ಕೈಗೊಳ್ಳುವ ವೃತ್ತಿ ಯಾವುದೇ ಇರಲಿ, ಅದರಲ್ಲಿ 'ಕಾಯಕವೇ ಕೈಲಾಸ' ಎಂಬ ಶ್ರದ್ಧೆ ತಾಳಬೇಕು ಎನ್ನುವರು. ಅಂದಾಗ ಸಾಂಪ್ರದಾಯಿಕ ವರ್ಣಾಶ್ರಮ ವ್ಯವಸ್ಥೆಯು ಪ್ರತಿಪಾದಿಸುವುದೂ ಇದನ್ನೇ. ಹಿಂದಿನ ಕರ್ಮ ಫಲದಿಂದ ಇಂದು ಜಾತಿಯೊಂದರಲ್ಲಿ ಹುಟ್ಟಲಾಗಿದೆ. ಆ ಜಾತಿಗೆ ಒಂದು ವೃತ್ತಿ ಇದೆ. ಇದನ್ನೇ ತನ್ನ ಪಾಲಿಗೆ ಬಂದ ಸ್ವಧರ್ಮ ಎಂದು ನಂಬಿ ನಿಷ್ಠೆಯಿಂದ ಮಾಡಬೇಕು. ಇದರ ಪ್ರತಿಫಲವಾಗಿ ಮುಂದಿನ ಜನ್ಮ ಲಭ್ಯವಾಗುತ್ತೆ, ಆಗ ಒಳ್ಳೆಯ ಜಾತಿಯಲ್ಲಿ ಹುಟ್ಟಿ, ಅದಕ್ಕೆ ತಕ್ಕ ಉದ್ಯೋಗ ಮಾಡಲು ಅವಕಾಶ ದೊರೆಯುತ್ತೆ.'' ಈ ರೀತಿ ವಾದವನ್ನು ನೋಡಿದಾಗ ತೋರಿಕೆಗೆ ಎರಡೂ ವಾದಗಳು ಒಂದೇ ಎನಿಸಿದರೂ ಅಂತರಾರ್ಥದಲ್ಲಿ ಹಾಗಿರದೆ, ಪರಸ್ಪರ ವಿರೋಧಾಭಾಸವಾಗಿವೆ. ಬಸವಣ್ಣನ ಕಾಯಕ ಸಿದ್ಧಾಂತದ ಪ್ರಕಾರ, ಹುಟ್ಟಿಗೂ ಉದ್ಯೋಗಕ್ಕೂ ಸಂಬಂಧವಿಲ್ಲ. ಕಮ್ಮಾರನಾದವನು ಕಾಸಲೇಬೇಕು, ಮಡಿವಾಳನಾದವನು ಬಟ್ಟೆಯನ್ನು ತೊಳೆಯಲೇ ಬೇಕು, ನೇಕಾರ ಜಾತಿಯಲ್ಲಿ ಹುಟ್ಟಿದವನು ಬಟ್ಟೆ ನೇಯಲೇ ಬೇಕು ಎಂಬುದು ತಪ್ಪು, ಕಾಸುವವ ಕಮ್ಮಾರ ; ಬಟ್ಟೆ ತೊಳೆಯುವವ ಮಡಿವಾಳ, ಬಟ್ಟೆ ನೇಯುವವ ನೇಕಾರ, ಶಾಸ್ತ್ರಗಳನ್ನು ತಿಳಿದವನು ಬ್ರಹ್ಮಜ್ಞಾನಿ, ಅವರವರ ಆಸಕ್ತಿ, ಪ್ರತಿಭೆಗೆ ಅನುಗುಣವಾಗಿ ಯಾರು ಯಾವುದೇ ಉದ್ಯೋಗಗಳನ್ನು ಮಾಡಬಹುದು ಮತ್ತು ಹಾಗೆ ಯಾವುದಾದರೊಂದು ಕಾಯಕವನ್ನು ಅವಲಂಬಿಸಿ, ಉದ್ಯೋಗ ಮಾಡುವವನನ್ನು, ಅದು ಕೀಳು ಕಾಯಕ ಮತ್ತು ಅದನ್ನು ಮಾಡುವವನು ಕೀಳು ಎಂದು ಭಾವಿಸುವಂತಿಲ್ಲ. ಈ ಎರಡೂ ಅಂಶಗಳನ್ನು ಪ್ರತಿಪಾದಿಸುವ ವಚನಗಳನ್ನು ಕಾಣಬಹುದು.

೧. ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ

೨. ಶೆಟ್ಟಿ ಎಂಬೆನೆ ಸಿರಿಯಾಳನ ?
ಮಾದಾರನೆಂಬೆನೆ ಚನ್ನಯ್ಯನ ?
ಡೋಹರನೆಂಬೆನೆ ಕಕ್ಕಯ್ಯನ ?
ಮಡಿವಾಳನೆಂಬೆನೆ ಮಾಚಯ್ಯನ ?
ಆನು ಹಾರುವನೆಂದಡೆ ಕೂಡಲಸಂಗಮದೇವ ನಗುವನಯ್ಯ


ಹೀಗೆ ಕಾಯಕ ಜೀವಿಗಳಲ್ಲಿ ಯಾವುದೇ ಭೇದ ಮಾಡಬಾರದು. ಯಾರು ಲಿಂಗಸ್ಥಲವನ್ನು ಅಂದರೆ ದಿವ್ಯಜ್ಞಾನವನ್ನು ಪಡೆಯುವನೋ ಅವನೇ ಕುಲಜನು, ಶ್ರೇಷ್ಟನು.

ಈ ಬಗೆಯ ಸಿದ್ಧಾಂತ, ದೃಷ್ಟಿಕೋನ, ದೊರಣೆ ಬಹಳ ಮಹತ್ವಪೂರ್ಣ. ಹುಟ್ಟಿನಿಂದಲೇ ವಂಶಪಾರಂಪರಿಕವಾಗಿ ಕಾಯಕವು ಬರುವುದು. ಆ ಕಾಯಕವನ್ನು ಪುಷ್ಟಿಗೊಳಿಸುವುದಕ್ಕಿಂತಲೂ ಶಿಥಿಲಗೊಳಿಸುವುದೇ ಹೆಚ್ಚು, ಒಬ್ಬ ಕಲಾವಿದೆ ಇರುವಳು ಎಂದುಕೊಳ್ಳೋಣ. ಆಕೆಯ ಮಗಳಿಗೆ ಆ ಬದುಕು ಇಷ್ಟವಿಲ್ಲ. ವಂಶಪಾರಂಪರಿಕವಾಗಿ ಬಂದ ಉದ್ಯೋಗವನ್ನೇ ಮುಂದುವರಿಸಬೇಕು ಎಂದಾಗ ಆಕೆ ಕಾಟಾಚಾರಕ್ಕೆ ಕಲಾಭ್ಯಾಸ ಮಾಡುವಳು. ಒಬ್ಬ ಪುರೋಹಿತನಿರುವನು. ಅವನ ಪ್ರತಿಭೆ ಅಸಾಮಾನ್ಯವಾಗಿರುವಾಗ ಅವನು ಏನಾದರೂ ವಿಶೇಷವಾದುದ್ದನ್ನು ಸಾಧಿಸಬೇಕು ಎಂಬ ಉತ್ಸಾಹ ಉಳ್ಳವನಾಗಿರುವನು. ವಂಶದ ವೃತ್ತಿಯನ್ನೇ ಮಾಡಬೇಕೆಂಬ ಕಟ್ಟುಪಾಡು ಅವನ ಪ್ರತಿಭೆಯನ್ನು ಕೊಲ್ಲುತ್ತದೆ. ರಾಜನ ಕರ್ತವ್ಯ ರಾಜ್ಯ ರಕ್ಷಣೆ, ಅವನ ಮಗ ವಿಲಾಸಿಯೂ, ನಿರ್ವೀಯ್ರನೂ ಆದರೂ, ಅವನೇ ಗದ್ದುಗೆ ಏರಬೇಕು ; ರಾಷ್ಟ್ರ ರಕ್ಷಣೆ ಮಾಡಬೇಕು ಎಂದರೆ ಹೇಗಾದೀತು. "ಆಸಕ್ತಿ, ಸಾಮರ್ಥ್ಯದ ಮೇಲೆ ಉದ್ಯೋಗವು ಕೊಡಲ್ಪಡಬೇಕೇ ವಿನಾ ವಂಶದ ಮೇಲಲ್ಲ." ಎಂಬ ದೃಷ್ಟಿಕೋನ ಬಹಳ ಪ್ರಗತಿಪರವಾದುದು.

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಕಾಯಕವೇ ಕೈಲಾಸ ಕಾಯಕ-ದಾಸೋಹ Next