Previous ಲಿಂಗಯೋಗ (ಶಿವಯೋಗ/ಲಿಂಗಾಂಗಯೋಗ) 866666 ಎಂದರೇನು? Next

ಲಿಂಗಾಯತವು ಒಂದು ವಿಶ್ವಧರ್ಮ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಲಿಂಗಾಯತವು ಒಂದು ವಿಶ್ವಧರ್ಮ

ಇಷ್ಟಲಿಂಗದ ಕಲ್ಪನೆ, ಲಿಂಗಾಯತ ಧರ್ಮ ಪ್ರತಿಪಾದಿಸುವ ಜೀವನಜಗತ್ತು ಕುರಿತು ತಳೆದ ದೃಷ್ಟಿಕೋನ- ಇವು ಲಿಂಗಾಯತ ಧರ್ಮಕ್ಕೆ ವಿಶ್ವಧರ್ಮದ (Universal Religion) ವ್ಯಾಪ್ತಿಯನ್ನು ಕೊಡುತ್ತವೆ. ಯಾವುದಾದರೊಂದು ಧರ್ಮವು ವಿಶ್ವಧರ್ಮ ಎನ್ನಿಸಿಕೊಳ್ಳುವುದು ಸಂಖ್ಯಾ ಬಾಹುಳ್ಯ ಅಥವಾ ವ್ಯಾಪಕತೆಯಿಂದ ಎನ್ನುವುದಕ್ಕಿಂತ ತಾತ್ವಿಕ ಮೌಲ್ಯ ಮತ್ತು ಸತ್ವದಿಂದ ಎಂದರೆ ಹೆಚ್ಚು ಸಮಂಜಸ. ಏಕೆಂದರೆ, ಸಿಗರೇಟು ಸೇದುವವರ ಸಂಖ್ಯೆ ಸೇದದವರ ಸಂಖ್ಯೆಗಿಂತ ಹೆಚ್ಚಾಗಿದೆ. ಕುಡಿತದ ಚಟದವರ ಸಂಖ್ಯೆ ಕುಡಿಯದವರ ಸಂಖ್ಯೆಯನ್ನು ಮೀರಿಸುತ್ತದೆ. ಹಾಗೆಂದ ಮಾತ್ರಕ್ಕೆ ಧೂಮಪಾನ, ಕುಡಿತ ಒಳ್ಳಿತು, ಶ್ರೇಷ್ಠ ಎಂದಲ್ಲ. ಹಾಗೆಯೇ ಇಷ್ಟಲಿಂಗ ಧಾರಣಿ, ಅದರ ಮೂಲಕ ಯೋಗಾಭ್ಯಾಸ ಬಹಳ ಜನರಿಗೆ ಶಿವಯೋಗ ಮತ್ತು ಅನುಭಾವ ತಿಳಿದಿಲ್ಲ; ಹೀಗಾಗಿ ವ್ಯಾಪಕ ಪ್ರಚಾರವಿಲ್ಲ. ಅಂದ ಮಾತ್ರಕ್ಕೆ ಅದರ ಮೌಲಿಕತೆಗೆ ಚ್ಯುತಿ ಬರದು. ಬಸವಣ್ಣನವರು ಕೊಟ್ಟ ಅಮೂಲ್ಯ ಕೊಡುಗೆಯಾದ ಇಷ್ಟಲಿಂಗ ಹೇಗೆ ಲಿಂಗಾಯತ ಧರ್ಮವನ್ನು ವಿಶ್ವಧರ್ಮವನ್ನಾಗಿ ಮಾಡುವುದು ಎಂಬುದನ್ನೀಗ ಸಂಕ್ಷಿಪ್ತವಾಗಿ ಹೇಳುವೆವು.

1. ಲಿಂಗಾಯತ ಧರ್ಮವು ವಿಶ್ವದಾಕಾರದಲ್ಲಿ ವಿಶ್ವಾತ್ಮನನ್ನು ಪೂಜಿಸುವ ಕಾರಣ ಅದು ವಿಶ್ವವನ್ನು, ಮಾನವ ಜೀವನವನ್ನು, ದೇಹವನ್ನು ತುಚ್ಛವಾಗಿ, ಹೇಯವಾಗಿ ಕಾಣದೆ ಅವುಗಳ ಸತ್ಯತೆ, ವಾಸ್ತವತೆಗಳನ್ನು ಎತ್ತಿಹಿಡಿಯುವುದೇ ಅಲ್ಲದೆ ಅವುಗಳನ್ನು ಮಾರಕವೆಂದು, ಹೇಯವೆಂದು ಭಾವಿಸದೆ ಪೂರಕವೆಂದು ಭಾವಿಸಬೇಕೆಂದು, ದೇವನನ್ನೊಲಿಸಿಕೊಳ್ಳಲು ಸಾಧನವಾಗಿ ಮಾಡಿಕೊಳ್ಳಬೇಕೆಂದು ಬೋಧಿಸುವುದು. "ವಿಶ್ವಾತ್ಮ ಬೇಕು, ವಿಶ್ವ, ಬೇಡ ಎಂದರೆ ಹೇಗೆ ? ದೇಹಿ ಬೇಕು ದೇಹ ಬೇಡ ಎಂದರೆ ಆದೀತೆ ? ಹೂವು ಬೇಡ, ವಾಸನೆ ಬೇಕು ಎನ್ನುವುದು ಹೇಗೆ ಸರಿಯಾದೀತು ? ಹೂವಿನ ಆಶ್ರಯದಲ್ಲೇ ವಾಸನೆ ಇರಲು ಸಾಧ್ಯ; ದೇಹದ ಆಶ್ರಯದಲ್ಲೇ ದೇಹಿ ಇರಲು ಸಾಧ್ಯ. ವಿಶ್ವದ ಮೂಲಕವೇ ವಿಶ್ವಾತ್ಮನ ಅಭಿವ್ಯಕ್ತಿ ಸಾಧ್ಯ. ಇವೆಲ್ಲವುಗಳ ವಿಕಾಸವನ್ನು ಮಾಡಿಕೊಳ್ಳುತ್ತ ಅಂತಿಮ ಸತ್ಯವನ್ನು ಸಾಕ್ಷಾತ್ಕರಿಸಿ ಕೊಳ್ಳಬೇಕು.” ಎಂಬ ಈ ವಿಚಾರ ಸರಣಿಯಿಂದಾಗಿ ವಿಜ್ಞಾನ, ಕಲೆ, ಸಾಹಿತ್ಯ, ಎಲ್ಲವೂ ಮೌಲಿಕತೆಯನ್ನು, ಸೂಕ್ತ ಸ್ಥಾನವನ್ನು ಪಡೆದುಕೊಳ್ಳುವವು. ಇದನ್ನರಿತೇ ಓರ್ವ ವಿದ್ವಾಂಸರು ಲಿಂಗಾಯತ ಧರ್ಮ ಕುರಿತು ಹೀಗೆ ಉದ್ಧರಿಸುತ್ತಾರೆ.

"The Lingayat community is a society of practical philosophers, a community of transcendental mystics, a university of spiritial fellowship and above all, a commonwealth of free souls and with God as Lord Protector."

"ಲಿಂಗಾಯತ ಸಮಾಜವು ಕಾಠ್ಯಗತ ಸಾಧಿಸಿ ತೋರುವ ಸಮನ್ವಯ ದೃಷ್ಟಿಯ ತತ್ವಜ್ಞಾನಿಗಳ ಸಂಗಮ; ಅದೊಂದು ಅತೀತವಾದ ಆತ್ಮ ಸಾಕ್ಷಾತ್ಕಾರದ ಅನುಭಾವಿಗಳ ಕೂಟ; ಅಧ್ಯಾತ್ಮಿಕ ಸಹಯೋಗವನ್ನು ಸಾಧಿಸುವ ವಿಶ್ವವಿದ್ಯಾಸಂಸ್ಥೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದೇವನನ್ನೇ ರಕ್ಷಕನನ್ನಾಗಿ ನಂಬಿರುವ ಸ್ವತಂತ್ರ ಧೀರಾತ್ಮರನ್ನುಳ್ಳ ಪ್ರಜಾಸಂರಕ್ಷಕ ಮಹಾ ಸಂಸ್ಥೆ."

2. ಇಷ್ಟಲಿಂಗವನ್ನೇ ಕೇಂದ್ರವನ್ನಾಗಿಟ್ಟು ಕೊಂಡು ಬಸವಣ್ಣನವರು ಪ್ರತಿಪಾದಿಸಿದ ಲಿಂಗಾಯತ ಧರ್ಮವು ಸುಧಾರಣ ಧರ್ಮ (Reformative religion), ಮೂಢನಂಬಿಕೆಗಳನ್ನು ವಿರೋಧಿಸಿದ ಪ್ರಗತಿಪರ ಧರ್ಮ (progressive religion) ಮತ್ತು ವೈಚಾರಿಕತೆಯನ್ನು ನೆಲೆಗಟ್ಟಾಗಿ ಇಟ್ಟುಕೊಂಡ ವೈಚಾರಿಕ ಧರ್ಮ (rational religion). ಭಾರತದಲ್ಲಿ ಪ್ರಚಲಿತವಿದ್ದ ವರ್ಣಾಶ್ರಮದ ಶ್ರೇಣೀಕೃತ (Ladder type of society). ವ್ಯವಸ್ಥೆಯನ್ನು ಖಂಡಿಸಿ ಸಮಪಾತಳಿಯ (Horizontal type of society) ಜಾತ್ಯತೀತ ಸಮಾಜ ವ್ಯವಸ್ಥೆಯನ್ನು ಪ್ರತಿಪಾದಿಸಿದ ಕ್ರಾಂತಿಕಾರಿ ಧರ್ಮ. ಇಷ್ಟಲಿಂಗ ಧಾರಣೆಯ ಮೂಲಕವೇ ಬಸವಣ್ಣನವರು ವರ್ಣಭೇದ, ಜಾತಿಭೇದ, ವೃತ್ತಿಭೇದ, ಲಿಂಗಭೇದಗಳನ್ನು ನಿವಾರಿಸಿ 'ದೇವಭಕ್ತರ ಸಮಾಜವನ್ನು ನಿರ್ಮಾಣ ಮಾಡಿದುದು. ಹೀಗಾಗಿಯೇ ಮಹಾತ್ಮಾ ಗಾಂಧೀಜಿಯವರು 1924 ರ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ಸಿನ 39 ನೇ ಅಧಿವೇಶನದಲ್ಲಿ ಹೀಗೆ ಅಂದುದರಲ್ಲಿ ಉತ್ತೇ ಕ್ಷೆ ಏನಿದೆ ?

"ಹಿಂದಿನ ಕಾಲದಲ್ಲಿ ಎಂಟುನೂರು ವರ್ಷಗಳ ಆಚೆ ಬಸವೇಶ್ವರರು ಯಾವ ತತ್ವ ಆಚರಿಸಿ ಉಪದೇಶ ಮಾಡಿದರೋ ಅಷ್ಟೆಲ್ಲಾ ತತ್ವ ನನಗೆ ಆಚರಿಸಲಿಕ್ಕೆ ಆಗುವುದಿಲ್ಲ. ಅದರಲ್ಲಿ ಕೆಲವು ತತ್ವಗಳನ್ನು ನಾನು ಆಚರಿಸುತ್ತಲಿದ್ದೇನೆ. ಸಾಧಕ ಸ್ಥಿತಿಯಲ್ಲಿದ್ದೇನೆ; ಸಿದ್ದನಲ್ಲ. ಆದರೆ ಬಸವಣ್ಣನವರು ಹೇಳಿದ ತತ್ವಗಳನ್ನೆಲ್ಲಾ ಆಚರಣೆಯಲ್ಲಿ ತಂದಿದ್ದರು. ಅದರಲ್ಲಿ ಅಸ್ಪೃಶ್ಯತಾ ನಿವಾರಣೆ, ಕಾಯಕ ತತ್ವ ಬಹು ಮುಖ್ಯವಾದುವು. ಯಾವುದೇ ಪ್ರಕಾರದ ಜಾತಿಭೇದ ಅವರಲ್ಲಿ ಕಂಡು ಬರುವುದಿಲ್ಲ. ಈ ಕಾಲದಲ್ಲಿ ಅವರು ಇರುತ್ತಿದ್ದರೆ ಜಗತ್ತಿಗೇ ಪಾಜ್ಯ ವ್ಯಕ್ತಿಯೋಗಿ ಪರಿಣಮಿಸುತ್ತಿದ್ದರು. ಆ ಧರ್ಮಾನುಯಾಯಿಗಳಾದ ನೀವು ಅವರು ಉಪದೇಶಿಸಿದ ತತ್ವಗಳನ್ನು ಆಚರಣೆಯಲ್ಲಿ ತಂದರೆ ಭಾರತ ಭೂಮಿಯನ್ನಷ್ಟೇ ಏಕೆ ಜಗತ್ತನ್ನೇ ಉದ್ದಾರ ಮಾಡಬಲ್ಲಿರಿ.” ನೋಡಿದಿರಾ ! ಇಂಥ ಮಹಾತ್ಮರೇ ಬಸವಣ್ಣನವರ ತತ್ವದ ಮಹತಿಯನ್ನು ಅರಿತುಕೊಂಡು ಅವರು ಕೊಟ್ಟ ತತ್ವಗಳ ಬಗ್ಗೆ ತಮ್ಮ ಸದಭಿಪ್ರಾಯವನ್ನು ವ್ಯಕ್ತಮಾಡಿದ್ದಾರೆ.

3. ವಿಶ್ವವನ್ನು ನಿರ್ಮಾಣ ಮಾಡಿದ ಕರ್ತ ಒಬ್ಬನೇ. ಆ ಒಬ್ಬ ಕರ್ತನನ್ನೇ ನಂಬಿ ಪೂಜಿಸಲು ಹೇಳುವ ಕಾರಣ, ಲಿಂಗಾಯತ ಧರ್ಮವು ವಿಶ್ವ ಧರ್ಮ.

4. ಮಾನವರಾಗಿ ಹುಟ್ಟಿದ ಎಲ್ಲರಿಗೂ ಸಮಾನ ಹಕ್ಕು ಬಾಧ್ಯತೆಗಳನ್ನು ನೀಡಿ, ಧರ್ಮ ಸಂಸ್ಕಾರವನ್ನು ಹೊಂದಲು, ದೇವರನ್ನು - ಮೋಕ್ಷವನ್ನು ಪಡೆಯಲು ಎಲ್ಲರಿಗೂ ಹಕ್ಕು ಉಂಟೆಂದು ಹೇಳುವ ಕಾರಣ ಲಿಂಗಾಯತವು ವಿಶ್ವಧರ್ಮ, ಮಾನವ ಸಮಾಜವನ್ನು ಜಾತಿ, ವರ್ಗ, ವೃತ್ತಿ, ಲಿಂಗ ಭೇದಗಳನ್ನು ಮುಂದುಮಾಡಿ ಒಡೆಯದೆ ಸಂಸ್ಕಾರ ರಹಿತ-ಸಂಸ್ಕಾರ ಸಹಿತ, ಮಾನವ-ಶರಣ, ಅಜ್ಞಾನಿ-ಸುಜ್ಞಾನಿ ಎಂದು ಮಾತ್ರ ಗುಣವಾಚಕವಾಗಿ ವಿಭಜಿಸಿ, ಸಂಸ್ಕಾರ ರಹಿತ ಮಾನವ, ಸಂಸ್ಕಾರ ಸಹಿತ ಶರಣನಾಗಲು ಬರುವುದು ಎಂದು ಘೋಷಿಸಿ, ಸೂಕ್ತ ಅವಕಾಶ ಕೊಡುವ ಕಾರಣ ಲಿಂಗಾಯತವು ವಿಶ್ವಧರ್ಮ, ದೇವನ ಪಿತೃತ್ವ, ಮಾನವರ ಸಹೋದರತ್ವವನ್ನು ಸಾರುವ ಕಾರಣ ಬಸವ ಧರ್ಮವು ವಿಶ್ವಧರ್ಮ,

ಕುಡುಗೋಲು - ಸುತ್ತಿಗೆಯ ಲಾಂಛನವನ್ನು ಮಾರ್ಕ್ಸನ ಸಿದ್ದಾಂತವನ್ನೊಪ್ಪಿಕೊಂಡು ಸಾಮ್ಯವಾದಿ ಸಮಾಜದ ರಚನೆಯನ್ನು ಮಾಡಬೇಕೆಂಬ ವಿಚಾರವಾದಿಗಳು ಒಂದು ಮಾತನ್ನು ಗಮನದಲ್ಲಿಡಬೇಕು. ಕೇವಲ ಭೌತಿಕ ಮೌಲಗಳನ್ನು ಮುಖ್ಯವಾಗಿರಿಸಿಕೊಂಡ ಸಮೃದ್ಧ ಸಮಾಜವನ್ನಷ್ಟೇ ಅಲ್ಲದೆ ನೈತಿಕ ಮೌಲ್ಯಗಳನ್ನುಳ್ಳ ಸಂತೃಪ್ತ ಸಮಾಜವನ್ನು, ಅಧ್ಯಾತ್ಮಿಕ ಮೌಲ್ಯಗಳನ್ನುಳ್ಳ ಪರಮ ತೃಪ್ತಿಯ ಸಮಾಜವನ್ನು ಕಟ್ಟಬೇಕೆಂದಿದ್ದರೆ ವಚನ ಸಾಹಿತ್ಯ ಸಂವಿಧಾನವನ್ನು ಆಧಾರವಾಗಿಟ್ಟುಕೊಂಡು, ಬಸವಣ್ಣನವರು ಕಟ್ಟಿ ತೋರಿದ ಸಮತಾವಾದಿ ಸಮಾಜದ ರೂಪು ರೇಷೆಗಳನ್ನು ಗುರುತಿಸಿ ಅನುಷ್ಠಾನಕ್ಕೆ ತರಬೇಕು. ಆಗ ಇಷ್ಟಲಿಂಗವು ಜಾತ್ಯತೀತ ಸಮಾಜ ರಚನೆಗೆ ಮಾತ್ರವೇಕೆ ಅಖಂಡ ವಿಶ್ವಮಾನವ ಸಮಾಜವನ್ನು ಒಗ್ಗೂಡಿಸುವ ಸಮರ್ಥ ಕುರುಹಾಗಬಲ್ಲದು.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಲಿಂಗಯೋಗ (ಶಿವಯೋಗ/ಲಿಂಗಾಂಗಯೋಗ) 866666 ಎಂದರೇನು? Next