ರುದ್ರಾಕ್ಷಿ | ಪಾದೋದಕ |
ಮಂತ್ರ |
ಓಂ ಲಿಂಗಾಯ ನಮ:
ಓಂಕಾರ ಸ್ವರೂಪಿಯಾದ, ಸೃಷ್ಟಿ, ಸ್ಥಿತಿ, ಲಯಗಳ ಕಾರಣ ಕರ್ತೃ ವಾದ ಪ್ರಾಣವ ಸ್ವರೂಪಿಯಾದ ಪರಮತ್ಮನಾದ ಲಿಂಗದೇವ
ಓಂ ಶ್ರೀ ಗುರುಬಸವ ಲಿಂಗಾಯ ನಮಃ : ಓಂ ಶ್ರೀ ಗುರುಬಸವ ಲಿಂಗಾಯ ನಮಃ ಮಂತ್ರದ ಅರ್ಥ
ಲಿಂಗದೀಕ್ಷೆ ಪಡೆದವನು “ನಮಃಶಿವಾಯ” ಎಂಬ ಪಂಚಾಕ್ಷರಿಯನ್ನಲ್ಲದೆ (ಅಥವಾ “ಓಂ ಲಿಂಗಾಯನಮಃ” ಎಂಬ ಷಡಕ್ಷರಿಯನ್ನಲ್ಲದೆ) ಮತ್ತಾವ ಮಂತ್ರವನ್ನೂ ಜಪಿಸಬಾರದು. ಸದಾ ಪರವಸ್ತುವನ್ನು ಕುರಿತು ಮನನ ಮಾಡುವುದೇ ಮಂತ್ರ, ವೈದಿಕರು ಋಗ್ವೇದದ (ಮತ್ತು ಇತರ ವೇದಗಳ) ಮಂತ್ರಗಳ ಉಚ್ಚಾರಣೆಯಿಂದ ಐಹಿಕ ಲಾಭಗಳನ್ನು ಪಡೆಯುತ್ತಿದ್ದರು. ಶರಣರು ಮಂತ್ರವನ್ನು ಐಹಿಕ ಲಾಭಕ್ಕಾಗಿ ಉಪಯೋಗಿಸಬಾರದು ಎಂದು ಕಟ್ಟಪ್ಪಣೆ ಮಾಡಿದ್ದಾರೆ. ಮಂತ್ರವು ಲಿಂಗಾಂಗಸಾಮರಸ್ಯಕ್ಕೆ ಪೂರಕವಾಗಿರಬೇಕು, ಎಂಬುದು ಅವರ ಅಭಿಮತ. ಆದುದರಿಂದ, ಲಿಂಗಪೂಜೆ, ಪ್ರಸಾದ ಸೇವನೆಗಿರುವಷ್ಟೇ ಪ್ರಾಮುಖ್ಯ ಮಂತ್ರೋಚ್ಚಾರಕ್ಕೂ ಇದೆ.
ಕರಿಯಂಜುವುದು ಅಂಕುಶಕ್ಕಯ್ಯ ;
ಗಿರಿಯಂಜುವುದು ಕುಲಿಶಕ್ಕಯ್ಯ ;
ತಮಂಧವಂಜುವುದು ಜ್ಯೋತಿಗಯ್ಯ ;
ಕಾನನವಂಜವುದು ಬೇಗೆಗಯ್ಯಾ
ಪಂಚಮಹಾಪಾತಕವಂಜುವುದು
ಕೂಡಲ ಸಂಗನ ನಾಮಕ್ಕಯ್ಯಾ.
--ಬಸವಣ್ಣನವರು
ಆನೆಯು ಬೃಹತ್ ಗಾತ್ರದ ಪ್ರಾಣಿ ಇರಬಹುದು ಅದು ಅಂಕುಶಕ್ಕೆ ಅಂಜುವುದು. ಬೆಟ್ಟವು ಬಲವಾಗಿರಬಹುದು. ಆದರೂ ಅದು ಉಳಿ-ಸುತ್ತಿಗೆಗೆ ಅಂಜುವುದು. ಕತ್ತಲೆ ಬಹಳವಿರಬಹುದು ಆದರೂ ಅದು ಜ್ಯೋತಿಗೆ ಹೆದರುವುದು. ಕಾಡು ಬಹಳ ವಿಸ್ತಾರವಾಗಿರಬಹುದು ಆದರೂ ಅದು ಕಿಚ್ಚಿಗೆ ಮಣಿಯುವುದು. ಪಾಪ-ಪಾತಕಗಳು ಎಷ್ಟೇ ಇರಬಹುದು ಅವು ಕೂಡಲ ಸಂಗಮದೇವರ ಪವಿತ್ರ ನಾಮಕ್ಕೆ ಹೆದರಿ ಓಡುತ್ತವೆ.
ವಶ್ಯವ ಬಲ್ಲೆವೆಂದೆಬಿರಯ್ಯಾ-
ಬುದ್ದಿಯನರಿಯದ ಮನುಜರು ಕೇಳಿರಯ್ಯಾ ವಶ್ಯವಾವುದೆಂದರಿಯದೆ,
ಮರಳುಗೊಂಬಿರೆಲೆ ಗಾವಿಲ ಮನುಜರಿರಾ !
"ಓಂ ನಮಃ ಶಿವಾಯ" ಎಂಬ ಮಂತ್ರ ಸರ್ವಜನವಶ್ಯ ಕೂಡಲ ಸಂಗಮದೇವಾ.
-- ಬಸವಣ್ಣನವರು
ವಶೀಕರಣ ವಶೀಕರಣ ಎಂದು ಬಡಬಡಿಸುವ ಜನರೇ ಕೇಳಿರಿ ಇನ್ನೂಬ್ಬರನ್ನು ವಶಮಾಡಿಕೊಳ್ಳಲು ಯಾರು ಯಾರ ಬಳಗೋ ಹೋಗಿ ಮಂತ್ರ ಹಾಕಲು ಕೇಳುವಿರಿ. ಮೂಢ ಜನರು ನೀವು. "ಓಂ ನಮಃ ಶಿವಾಯ"/ಓಂ ಲಿಂಗಾಯ ನಮಃ ಜಪಿಸುತ್ತ ಹೋಗಿರಿ. ಈ ಮಂತ್ರವು ಎಲ್ಲರಿಗೂ ಅವಶ್ಯಕವಾಗಿ ಬೇಕಾಗಿದೆ. ಆದರೆ ಮನಸ್ಸಿನಲ್ಲಿ ದೇವನ ಭಕ್ತಿಯಲ್ಲದೆ ಸುಮ್ಮನೆ ಪಠನೆ ಮಾಡಿದರೆ ಮಂತ್ರದ ಫಲ ಸಿಗುವುದಿಲ್ಲ.
ಮಂತ್ರವ ಜಪಿಸಿ ಫಲವೇನಯ್ಯಾ ಮಂತ್ರ ಮೂರ್ತಿ ಕಾಣದನ್ನಕ್ಕ?
ಯಂತ್ರವ ಧರಿಸಿ ಫಲವೇನಯ್ಯಾ ಅಂತರ ರೋಗ ಪರಿಹಾರವಾಗದನ್ನಕ್ಕ?
ತಂತ್ರವನೋ ಫಲವೇನಯ್ಯಾ, ಅದರಂತರ ಮೈಗೂಡದನ್ನಕ್ಕ?
ಶರಣನಾಗಿ ಫಲವೇನಯ್ಯಾ,
ಲಿಂಗ ಜಂಗಮವ ಪೂಜಿಸಿ ಮೋಕ್ಷವಡೆಯದನ್ನಕ್ಕ?
ಎಲೆ ಕಪಿಲಸಿದ್ಧಮಲ್ಲಿಕಾರ್ಜುನ.
ಎನ್ನ ಮನದಲ್ಲಿ ಮತ್ತೊಂದನರಿಯೆನಯ್ಯಾ,
ಓಂ ನಮಃ ಶಿವಾಯ, ಓಂ ನಮಃ ಶಿವಾಯ
ಎನಗಿದೆ ಮಂತ್ರ ಇದೇ ಜಪ .
ಕೂಡಲಸಂಗಮದೇವಾ ನೀನೆ ಬಲ್ಲೆ, ಎಲೆ ಲಿಂಗವೆ. (೧: ೮೦)
ಓಂ ನಮಃ ಶಿವಾಯಯೆಂಬುದನರಿಯದೆ
ಜಗವೆಲ್ಲವು ನಾಯಾಯಿತ್ತು.
ತಮ್ಮ ತಾವರಿಯದವರಿಗೆ, ಇನ್ನು ಹೇಳಿ ಕೇಳಿದಂತೆ ಆಚರಿಸದಿರ್ದಡೆ
ಆ ನಾಯ ಸಾವು ತಪ್ಪದು.
ಇನ್ನೆತ್ತಣ ಮುಕ್ತಿ? ಅವರಿಗೆ ಬೋಧಿಸಿದ್ದಾಗದು
ಕಾಣಾ ಗುಹೇಶ್ವರಾ. (೨: ೧೦೨೮)
ಮಾನಸ ವಾಚಕ ಉಪಾಂಶಿಕವೆಂದು
ಪ್ರಣವ ಪಂಚಾಕ್ಷರಿಯ ಜಪ ಮೂರು ತೆರನಾಗಿಪ್ಪುದು.
ಮನಸಿನಲ್ಲಿಯೆ ಪ್ರಣವಮಂತ್ರವ ಸ್ಮರಿಸುವುದು ಮಾನಸ
ವಾಕ್ಯದಿಂದ 'ಶಿವಾಯ ಹರಾಯ ಭವಾಯ
ಮೃಡಾಯ ಮೃತ್ಯುಂಜಯಾಯ
ಸೋಮಶೇಖರ ಪ್ರಭುವೇ ವಿಭವೇ
ಶಿವಶಿವಾ ಶರಣು ಶರಣೆಂಬುದೇ ವಾಚಕ.
ಕ್ರಿಯಾಕಾಲದಲ್ಲಿ ಇತರವಾಗಿ ಒಬ್ಬರು ಕೇಳದ ಹಾಗೆ
ತನ್ನ ಕಿವಿ ಕೇಳುವ ಹಾಗೆ
ಶಿವ ಮಂತ್ರದಲ್ಲಿ ಸುಯಿಧಾನಿಯಾಗಿ ಪುನಶ್ಚರಣೆಯಾಗಿ
ತ್ರಿಸಂಧ್ಯಾಕಾಲದಲ್ಲಿ ಬಿಡದೆ ಉಚ್ಚರಿಸುವುದೀಗ ಉಪಾಂಶಿಕ,
ಈ ಮೂರು ಪ್ರಕಾರದಲ್ಲಿ ಶಿವಮಂತ್ರವ ಜಪಿಸಬೇಕು ಕಾಣ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. (೧೧: ೨೧೦)
ಇಷ್ಟಲಿಂಗಪೂಜೆಯಲ್ಲಿ ಮಂತ್ರೋಚ್ಚಾರಣೆ ಇರಬೇಕು. ಆದರೆ ಮಂತ್ರೋಚ್ಚಾರಣೆಯನ್ನು ಬೇರೆ ಸಂದರ್ಭಗಳಲ್ಲೂ ಮಾಡಬಹುದು. ಹೀಗೆ ಮಂತ್ರೋಚ್ಚಾರಣೆಯು ಅಮೂರ್ತ ಪೂಜೆಯೆನಿಸಿಕೊಳ್ಳುತ್ತದೆ.
ರುದ್ರಾಕ್ಷಿ | ಪಾದೋದಕ |