Previous ಪ್ರವಚನ ಎಂದರೇನು ? ಧರ್ಮ ಎಂದರೇನು ? Next

ವೈಜ್ಞಾನಿಕ ಯುಗದಲ್ಲಿ ಧರ್ಮದ ಅವಶ್ಯಕತೆ

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ವೈಜ್ಞಾನಿಕ ಯುಗದಲ್ಲಿ ಧರ್ಮದ ಅವಶ್ಯಕತೆ

'ಮನುಷ್ಯನಿಗೆ ಹೊಟ್ಟೆ-ಬಟ್ಟೆಗಳ ತೃಪ್ತಿಯ ಚಿಂತೆಯೇ ಸಾಕಷ್ಟು ತುಂಬಿ ಹೋಗಿರುವಾಗ ಇನ್ನು ದೇವರು-ಧರ್ಮಗಳ ಅವಶ್ಯಕತೆ ಏನು?' ಎಂದು ಕೆಲವರ ಕೊಂಕು ನುಡಿ, ನಿಜ, ಮನುಷ್ಯನಿಗೆ ಹೊಟ್ಟೆಯಿದೆ, ಹಸಿಯಲು (ಮತ್ತು ಹುಸಿಯಲು); ಮೈ ಇದೆ ಉಡಲು. ಇಷ್ಟೇ ಅಂಗಗಳಿಲ್ಲ, ಜೊತೆಗೆ ಚಿಂತಿಸುವ ಮನಸ್ಸು (mind) ಇದೆ; ವಿಚಾರಶೀಲ ಬುದ್ಧಿ (Intellect) ಇದೆ, ಸಾಕ್ಷೀಭೂತವಾಗಿ ಎಲ್ಲವನ್ನೂ ನೋಡುವ ಆತ್ಮವಿದೆ. ಸುಖದಿಂದ ದೇಹ ತೃಪ್ತಿಗೊಂಡರೂ, ಮಾನಸಿಕ ಸಂತೋಷ (Happiness) ಕೇವಲ ಭೋಗಗಳಿಂದ, (pleasures) ದೊರೆಯದು. ಅದು ಕೇವಲ ನೈತಿಕ ಮೌಲ್ಯಗಳಿಂದ, ಆದರ್ಶಯುಕ್ತ ಬಾಳಿನಿಂದ ದೊರೆಯುವುದು ಇವೆಲ್ಲವನ್ನೂ ಮೀರಿದ ಆನಂದ (Bliss) ದೊರೆಯಬೇಕಾದರೆ ಕೇವಲ ಆಧ್ಯಾತ್ಮಿಕ ಮೌಲ್ಯಗಳಿಂದ ಸಾಧ್ಯ. ಅನ್ನ ಉಂಡರೆ ವಿಚಾರಶಕ್ತಿ ತೃಪ್ತಿಯಾಗದು; ಕೇವಲ ಜ್ಞಾನವನ್ನು ಸಂಪಾದಿಸಿದರೆ ಹೊಟ್ಟೆಯ ಹಸಿವೆ ತಣಿಯದು. ವಿವಿಧ ಬಗೆಯ ಹಸಿವೆಗೆ ವಿವಿಧ ಬಗೆಯ ಆಹಾರ ಬೇಕು: ನೆತ್ತಿಯ ಹಸಿವೆಗೆ ಜ್ಞಾನ. ಆತ್ಮದ ಹಸಿವೆಗೆ ಧ್ಯಾನ ಆಹಾರವಾಗಿ ಬೇಕು.

ಕೇವಲ ವ್ಯಕ್ತಿಗತ ದೃಷ್ಟಿಯಿದ ಮಾತ್ರವಲ್ಲ ಮಾನವ ಜನಾಂಗದ ದೃಷ್ಟಿಯಿಂದಲೂ ಧರ್ಮ, ಧಾರ್ಮಿಕತೆ ಬೇಕು. ಆದಿಗುರು ಶಿವನು ವಿಷವನ್ನು ಕುಡಿದು ನೀಲಕಂಠನಾದ ವಿಷಯ ಹಿಂದೂ ಪುರಾಣಗಳಲ್ಲಿ ಸುಪ್ರಸಿದ್ದವಷ್ಟೆ. ದೇವತೆಗಳು ಮತ್ತು ಅಸುರರು ಸಮುದ್ರ ಮಥನವನ್ನು ಮಾಡಿದಾಗ ಕಾಮಧೇನು, ಕಲ್ಪವೃಕ್ಷ, ಐರಾವತ, ಇತ್ಯಾದಿ ಅಷ್ಟೈಶ್ವರಗಳು ಬಂದವು. ಆಗ ಎಲ್ಲಾ ದೇವತೆಗಳು, ಅಸುರರು ನನಗೆ ತನಗೆ ಎಂದು ಹೋರಾಟಕ್ಕಿಳಿದು ವಸ್ತುಗಳನ್ನು ಹಂಚಿಕೊಂಡರು. ಲೋಕವನ್ನು ನಡುಗಿಸುವ ಭಯಂಕರ ಹಾಲಾಹಲ ಉದಿಸಿದಾಗ ಯಾರೂ ಅದನ್ನು ಸಂಹರಿಸುವ, ಅಥವಾ ಪರಿಹರಿಸುವ ಗೋಜಿಗೆ ಬರಲಿಲ್ಲ. ಆಗ ಯೋಗಿರಾಜನಾದ ಶಿವನು ಆ ವಿಷವನ್ನು ಕುಡಿದು ಲೋಕವನ್ನು ಬದುಕಿಸಿದನಂತೆ, ಈ ಪೌರಾಣಿಕ ಕಥೆಯನ್ನು ಆಧುನಿಕ ವೈಜ್ಞಾನಿಕತೆಗೆ ಹೋಲಿಸಿದರೆ ಒಂದು ವಿಚಾರ ಸ್ಪುಟವಾಗುತ್ತದೆ.

ನಿಸರ್ಗವೇ ಒಂದು ಸಮುದ್ರ; ವೈಜ್ಞಾನಿಕತೆಯ ಕಡೆಗೋಲಿನಿಂದ ವಿಜ್ಞಾನಿಗಳು, ತಂತ್ರಜ್ಞಾನಿಗಳು ಎಂಬುವವರು ಇದನ್ನು ಮಥನಿಸುತ್ತಿದ್ದಾರೆ. ವಿದ್ಯುತ್, ಟೆಲಿಗ್ರಾಫ್, ಟೆಲಿಫೋನ್, ವಿಮಾನ, ಟೆಲಿವಿಷನ್, ರೇಡಿಯೋ, ಕಂಪ್ಯೂಟರ್ ಮುಂತಾದ ಅಶ್ವರ್ಯ- ಗಳು ವಿಜ್ಞಾನದ ಕೊಡುಗೆಯಾಗಿ ನಮಗೆ ಸಿಕ್ಕಿವೆ. ಇದೇ ವೈಜ್ಞಾನಿಕತೆಯ ಫಲವಾಗಿ ಅಣ್ವಸ್ತ್ರಗಳು, ಟ್ಯಾಂಕರ್, ಸಿಡಿತಲೆಗಳು, ಖಂಡಾಂತರ ಕ್ಷಿಪಣಿಗಳು ಮುಂತಾದ ಮಾರಕಾಸ್ತ್ರಗಳು ರೂಪುಗೊಂಡು ಯುದ್ಧ, ಹೋರಾಟ, ದ್ವೇಷಗಳ ಅಗ್ನಿಕುಂಡವನ್ನಾಗಿ ಈ ಜಗತ್ತನ್ನು ಮಾಡಿದಾಗ ಆಗ ವಿಜ್ಞಾನ ಈ ಅನಾಹುತವನ್ನು ತಡೆಗಟ್ಟಲಾರದು. ಯೋಗಿರಾಜನಾದ ಶಿವನು ವಿಷವನ್ನೀಂಟಿ ಲೋಕವನ್ನು ವಿನಾಶದಿಂದ ಸಂರಕ್ಷಿಸಿದಂತೆ, ಕೇವಲ ಅಧ್ಯಾತ್ಮ ಪ್ರಜ್ಞೆ ದೈವಿಪ್ರಜ್ಞೆಗಳು ಮಾತ್ರ ಅಮಾನುಷ ಕಾರ್ಯಾಚರಣೆಗಳಿಂದ ಜಗತ್ತನ್ನು ತಡೆಗಟ್ಟಿ, ಉತ್ತಮ ದಿಗ್ದರ್ಶನವನ್ನು ಮಾನವ ಕುಲಕ್ಕೆ ಮಾಡಬಲ್ಲವು. ಈ ಮಾನವೀಯ ಪ್ರಜ್ಞೆಯನ್ನು ಬೆಳೆಸದಿದ್ದರೆ ಜಗತ್ತಿಗಿಂದು ಉಳಿಗಾಲವಿಲ್ಲ. ಅದಕ್ಕೇ ಪ್ರೋ|| ಆಡ್ರಿಯಾನ್ ಹೇಳುತ್ತಾರೆ. "The control achieved over the forces of nature is so complete that we might soon be able to destroy 2/3rds of the world by pressing a button.". ಆದರೆ ವಿಜ್ಞಾನವು ಹೊರ ಜಗತ್ತನ್ನು ನಿಯಂತ್ರಿಸಿದರೆ ಧರ್ಮವು ಅಂತರಂಗಿಕ ಜಗತ್ತನ್ನು ನಿಯಂತ್ರಿಸುವುದು.

ಮಾನವನ ದೇಹವೊಂದು ವಾಹನವಿದ್ದಂತೆ. ಒಂದು ಕಾರಿಗೆ ಮುಂಭಾಗದಲ್ಲಿ ಎರಡು ಹೆಡ್ ಲೈಟ್‌ ಗಳಿರುತ್ತವೆ. ಆ ಲೈಟ್‌ಗಳು ರಸ್ತೆಯನ್ನು, ಅದರ ಲೋಪದೋಷಗಳನ್ನು, ಏರು-ತಗ್ಗುಗಳನ್ನು ತೋರಿಸಬಲ್ಲವು. ಆದರೆ ಬಾನೆಟ್ ಕೆಳಗಿರುವ ಯಂತ್ರ ಸಮೂಹದಲ್ಲಿ ಏನಾದರೂ ದೋಷ ಬಂದಲ್ಲಿ ಹೆಡ್‌ ಲೈಟು ಉಪಯೋಗವಾಗವು. ಆಗ ವಿಶೇಷವಾದ ಬಾನೆಟ್‌ ಲೈಟನ್ನೇ ಹಚ್ಚಿಕೊಂಡು ಕಾರ್ಯ ಮಾಡಬೇಕಾಗುತ್ತದೆ. ಇಲ್ಲವೇ ಟಾರ್ಚನ್ನು ಹಚ್ಚಿಕೊಂಡು ರಿಪೇರಿ ಮಾಡಬೇಕಾಗುತ್ತದೆ. ಅದೇ ರೀತಿಯಾಗಿ ಮಾನವ ದೇಹಕ್ಕಿರುವ ಎರಡು ಚರ್ಮಚಕ್ಷುಗಳು, ಹೊರಜಗತ್ತನ್ನೆಲ್ಲಾ ತೋರಿಸಲು ಬಲ್ಲವು. ತನ್ನ ಅಂತರಂಗ ಜಗತ್ತಿನ ಹುರುಳು- ತಿರುಳನ್ನು ತೋರಿಸಲಾರವು. ತನ್ನೊಳಗಣ ಜಗತ್ತನ್ನು ಅರಿಯಬೇಕಾದರೆ ನಮಗೆ ವಿಶೇಷ ನೇತ್ರಗಳು ಬೇಕು ಅವೇ ಜ್ಞಾನ ಚಕ್ಷುಗಳು. ಅಂಥ ಕಣ್ಣನ್ನು ತೆರೆಸುವ ವಿಶೇಷ ವಿದ್ಯೆಯೇ ಆಧ್ಯಾತ್ಮಜ್ಞಾನ. ಅಂಥ ಜ್ಞಾನವು ಸಮಸ್ತ ಮಾನವ ಕೋಟಿಗೆ ಬೇಕೆಂಬುದನ್ನು ನಾವು ಇಂದು ಮನಗಾಣಬೇಕು.

ಮಾವಟಿಗ-ಅಂಕುಶ ಆನೆ

ವ್ಯಕ್ತಿಯು ಸಮಾಜದ ಒಂದು ಅವಿಭಾಜ್ಯ ಘಟಕ, ಹಲವು ವ್ಯಕ್ತಿಗಳ ಒಕ್ಕೂಟವೇ ಸಮುದಾಯ ಸಮುದಾಯವನ್ನು ನಾವು ಸಮಾಜ ಎನ್ನಲಿಕ್ಕಾಗುವುದಿಲ್ಲ. ದನಗಳ ಹಿಂಡಿನಂತೆ ಸಮುದಾಯವೂ ಒಂದು 'ಜನ' ಗಳ ಹಿಂಡು. ಸಮುದಾಯವು ಸಮಾಜ ಎನ್ನಿಸಿಕೊಳ್ಳಬೇಕಾದರೆ ಅದರಲ್ಲಿ ಕೆಲವು ಲಕ್ಷಣಗಳಿರಬೇಕು. ಒಂದು ನಿವೇಶನದ ಬಳಿ ಕಲ್ಲುಗಳ ರಾಶಿ, ಇಟ್ಟಿಗೆಗಳ ಗುಂಪು, ಮರಳಿನ ಗುಡ್ಡೆ, ಸಿಮೆಂಟಿನ ಮೂಟೆಗಳು ಇದ್ದ ಮಾತ್ರಕ್ಕೆ ಈ ಗುಂಪನ್ನು ಮನೆಯೆನ್ನಲು ಬರದು. ಅದೇ ರೀತಿ ಹಲವಾರು ಜನ ಒಂದು ನೆಲದಲ್ಲಿ ಬಾಳುವರೆಂದ ಮಾತ್ರಕ್ಕೆ ಅದನ್ನೊಂದು ಸಮಾಜ ಎನ್ನಲು ಬರದು. ನೀರು ಎಲ್ಲ ವಸ್ತುಗಳಲ್ಲಿ ಸಮರಸಗೊಂಡು ಎಲ್ಲ ವಸ್ತುಗಳನ್ನು ಒಂದು ಭವನದ ಆಕಾರಕ್ಕೆ ತಂದಾಗ ಮಾತ್ರ ಅದೊಂದು ಮನೆ ಎನಿಸಿಕೊಳ್ಳುವುದು. ಹಾಗೆಯೇ ಭಾವೈಕ್ಯತೆ, ಸೌಹಾರ್ದತೆ ಇತ್ಯಾದಿ ಸಮಾಜದಲ್ಲಿ ಹಾಸು ಹೊಕ್ಕಾಗಿ ಪ್ರೇಮಮಯ ವಾತಾವರಣವಿದ್ದಾಗ ಮಾತ್ರ ಅದು ಒಂದು ಒಕ್ಕೂಟವಾಗಿ, ಸಮಾಜವಾಗಿ ಕಾಣಬರುವುದು. ಇಂಥದೊಂದು ಬೆಸುಗೆ ಹಾಕಬಲ್ಲ ತತ್ವವೇ ಧರ್ಮ.

ಒಂದು ಸಮಾಜ ಬಾಳಲು, ಅಭಿವೃದ್ಧಿ ಹೊಂದಲು ಬೇಕಾದವು ಎರಡು ಶಕ್ತಿಗಳು. ಒಂದು ರಾಜಕೀಯ ಶಕ್ತಿ, ಇನ್ನೊಂದು ಧರ್ಮಶಕ್ತಿ. ಧರ್ಮವಿಲ್ಲದ ರಾಜಕೀಯ ಕೇವಲ ಹೊಲಸು, ರಾಜಕೀಯ ಶಕ್ತಿಯಿಲ್ಲದ ಧರ್ಮ ನಿಶ್ಯಕ್ತ; ಪ್ಲಗ್ಗಿನಲ್ಲಿರುವ ವಿದ್ಯುತ್ತಿನಂತೆ ನಿಷ್ಕ್ರಿಯ ಸ್ಥಿತಿಯಲ್ಲಿರುತ್ತದೆ. ಅಂತೆಯೇ ಗಾಂಧೀಜಿ ಹೇಳಿದರು; "We must spiritualise the politics" ಎಂದು. ರಾಜಕೀಯವನ್ನು ಅಧ್ಯಾತ್ಮೀಕರಣಗೊಳಿಸಬೇಕೆಂದರು; ಒಂದು ವೇಳೆ ಹಾಗೆ ಮಾಡದಿದ್ದರೆ ಧರ್ಮವಿಲ್ಲದ ರಾಜಕಾರಣ ಶುದ್ಧ ಪಾಪ (Politics without spirituality is sin) ಎಂದು ಎಚ್ಚರಿಸಿದರು. ಏಕೆಂದರೆ ರಾಜಕಾರಣವೊಂದು ಆನೆ ಇದ್ದಂತೆ. ಧರ್ಮವೆಂಬ ಅಂಕುಶವನ್ನು ಹಿಡಿದು ಸಮಾಜವೆಂಬ ಮಾವಟಿಗ ರಾಜಕಾರಣವೆಂಬ ಆನೆಯನ್ನು ನಿಗ್ರಹಿಸಿದರೇನೆ ಇಂದು ಉಳಿಗಾಲ, ಇಲ್ಲವಾದರೆ ರಾಜಕೀಯವು ಮದೋನ್ಮತ್ತ ಆನೆಯಂತೆ ವಿನಾಶಕಾರಿಯಾಗದಿರದು.

ಗಾಂಧೀಜಿಯವರ ಬಳಿ ಚೈನಾ ಸಂಸ್ಕೃತಿಯ ಮೂರು ಗೊಂಬೆಗಳಿದ್ದವಂತೆ. ಒಂದು ಕಣ್ಣು ಮುಚ್ಚಿತ್ತು, ಇನ್ನೊಂದು ಕಿವಿಯನ್ನು, ಮತ್ತೊಂದು ಬಾಯನ್ನು, ಇದಕ್ಕೆ ಅವರು ಮತ್ತು ಇನ್ನಿತರರು ಕೊಡುವ ವ್ಯಾಖ್ಯಾನ: ಕೆಟ್ಟದ್ದನ್ನು ನೋಡಬೇಡ, ಕೇಳಬೇಡ ಮತ್ತು ಆಡಬೇಡ ಎಂಬುದು. ಆದರೆ ಗಾಂಧೀಜಿಯವರೇ ಆ ಗೊಂಬೆಗಳ ಸ್ಥಾನದಲ್ಲಿ ಇಂದು ಇದ್ದಿದ್ದರೆ ಅವರು ಹೇಳುತ್ತಿದ್ದರು. “ಇಂದಿನ ರಾಜಕೀಯದ ಬಗ್ಗೆ ನೋಡಲಾರೆ. ಕೇಳಲಾರೆ, ಆಡಲಾರೆ, ಕೇಳಿದರೆ ಕಿವಿ ಹೊಲಸು, ನೋಡಿದರೆ ಕಣ್ಣು ಹೊಲಸು, ಆಡಿದರೆ ನಾಲಿಗೆ ಹೊಲಸು.” ಅಧಿಕಾರ ದಾಹ, ಸ್ವಾರ್ಥಕ್ಕಾಗಿ ಏನೆಲ್ಲ ಮಾಡಬಲ್ಲ ದಾರ್ಷ್ಟ, ಈಗಿನ ಪ್ರಮುಖ ಲಕ್ಷಣಗಳಾಗಿವೆ.

ಮಹಾಭಾರತದ, ಶ್ರೀಕೃಷ್ಣ ಅರ್ಜುನರಾಗಲೀ, ಚಾಣಕ್ಯ-ಚಂದ್ರಗುಪ್ತರಾಗಲೀ, ಬಸವೇಶ್ವರರು-ಬಿಜ್ಜಳರಾಗಲೀ ಇವರು ಸಂಕೇತಿಸುವುದು ಧಾರ್ಮಿಕ-ರಾಜಕೀಯ ಶಕ್ತಿಗಳ ಹೊಂದಾಣಿಕೆ ಮತ್ತು ಸಮತೋಲನವನ್ನು, ಧರ್ಮ ಬೀರುತ್ವದ ಅಂಕುಶವಿಲ್ಲದ ರಾಜಶಕ್ತಿ ಪಾಶವಿಕ ಪ್ರವೃತ್ತಿಯನ್ನು ತೋರಿದರೆ ರಾಜಶಕ್ತಿಯ ಬೆಂಬಲವಿಲ್ಲದ ಧರ್ಮವು ಅತ್ಯಂತ ನಿಸ್ಸಹಾಯಕವಾಗಿ ತೋರುವುದು. ಒಂದು ರೀತಿಯ ವೃತ್ತಿ ವಿಭಜನೆಯನ್ನು (Division of labour) ಈ ಶಕ್ತಿಗಳಲ್ಲಿ ಕಾಣಬಹುದು. ರಾಜಶಕ್ತಿಗೆ ಮಾರ್ಗದರ್ಶನ ಮಾಡುವ ಗುರು ಧರ್ಮಶಕ್ತಿ, ಧರ್ಮವು ವಿಧಿಸುವ ಶಾಸನವನ್ನು ಜಾರಿಗೆ ತರುವ ಶಿಷ್ಯ ರಾಜಶಕ್ತಿ, ಈ ಹೊಂದಾಣಿಕೆ ಚೆನ್ನಾಗಿದ್ದರೆ ಲೋಕದ ಉದ್ದಾರ.

ಹೊರಗಿನ ಮತ್ತು ಒಳಗಿನ ನಿಯಂತ್ರಣ.

ವಿಜ್ಞಾನದ ಬಲದಿಂದ ಕಾಲ ಮತ್ತು ದೇಶಗಳನ್ನು ಮನುಷ್ಯ ಭೌತಿಕವಾಗಿ ಗೆದ್ದಿರಬಹುದು. ತನ್ನನ್ನು ತಾನು ಗೆಲ್ಲಲಾರದಷ್ಟು ದುರ್ಬಲನು ಆಗುತ್ತಿರುವನು. ಇಂದವನು ಸೂಕ್ಷ್ಮಾತಿಸೂಕ್ಷ್ಮ ಪರಮಾಣು ವಿಭಜನೆಯ ರಹಸ್ಯ ಬಲ್ಲನು. ಅತ್ಯಂತ ದೂರವಾದ ಗ್ರಹ-ನಕ್ಷತ್ರಗಳ ರಹಸ್ಯ ಭೇದಿಸಬಲ್ಲನು. ಅಂತರಿಕ್ಷದಲ್ಲಿಯೇ ನಗರವನ್ನು ನಿರ್ಮಿಸಬಲ್ಲನು, ಸಮುದ್ರದ ಅಂತರಾಳದಲ್ಲಿ ಇಳಿಯಬಲ್ಲನು. ಆದರೆ ತನ್ನನ್ನು ತಾನು ಅರಿಯಲಾರನು. ನಿಗ್ರಹಿಸಿಕೊಳ್ಳಲಾರನು. ತನ್ನ ಮನಸ್ಸಿನ ವೈಪರೀತ್ಯಗಳನ್ನು ಹತ್ತಿಕ್ಕಿಕೊಳ್ಳಲಾರನು. ಜೀವನವನ್ನು ಹೇಗೆ ಎದುರಿಸಬೇಕು, ತನ್ನನ್ನು ತಾನು ಹೇಗೆ ನಿಗ್ರಹಿಸಿಕೊಂಡು ಉತ್ಥಾನಗೊಳ್ಳಬೇಕು ಎಂಬುದನ್ನು ಕಲಿಸುವ ವಿದ್ಯೆಯೇ ಧರ್ಮಜ್ಞಾನ.

ಧರ್ಮ-ದಿಕ್ಸೂಚಿ:

ಅತ್ಯಂತ ಎತ್ತರಮಟ್ಟದಲ್ಲಿ ಹಾರಾಡುವ ವಿಮಾನಕ್ಕೆ ವಿಸ್ತಾರವಾದ ದಿಕ್ಕುಗಳ ತಿಳಿವನ್ನೇ ಮರೆಸುವ, ಶರಧಿಯಲ್ಲಿ ಸಾಗುವ ಹಡಗಿಗೆ ಅತ್ಯಂತ ಮುಖ್ಯವಾದ ಸಾಧನ ದಿಕ್ಸೂಚಿ (Mariner's Campas) ಎಲ್ಲೆಡೆಯಲ್ಲೂ ಸಮುದ್ರವೇ ಸುತ್ತುವರಿದಾಗ ನಿರ್ವಿಕಾರವಾದ ನೀರಭ ನೀಲಾಗಸ ವಿಮಾನಕ್ಕೆ ಎದುರಾದಾಗ ದಿಕ್ಕೂಚಿಯೇ ಅತ್ಯವಶ್ಯಕ ಸಾಧನ. ಅದೇ ರೀತಿ ಪಾಪ-ಪುಣ್ಯಗಳ ಹೆದ್ದೆರೆಯ ಈ ಲೋಕಶರಧಿಯಲ್ಲಿ ನಮ್ಮ ಜೀವನದ ಭೈತ್ರ ತೇಲುವಾಗ ನಾವು ಸುರಕ್ಷಿತವಾಗಿ ಸಾಗಿ ಮುಕ್ತಿಯ ನಿಲ್ದಾಣವನ್ನು ಮುಟ್ಟಿ ಆನಂದ ಹೊಂದಲು ಸಹಾಯಕವಾಗುವ ದಿಕ್ಕೂಚಿಯ ಧರ್ಮಜ್ಞಾನ.

ಸದ್ಗುಣೋದ್ದೀಪಕ ಶಕ್ತಿ :

ನಿಜವಾದ ಧರ್ಮಜ್ಞಾನ ಅಳವಟ್ಟವನು ಎಂದೂ ಯಾರನ್ನೂ ವಂಚಿಸಲು ಇಷ್ಟಪಡನು. ದೈವಿ ಸಾಕ್ಷಿಯಾಗಿ ಬಾಳುವವನಿಗೆ ಸಮಾಜ ರಾಷ್ಟ್ರಗಳ ಪ್ರಜ್ಞೆ ಅಸೀಮವಾಗಿರುವುದು. ಲೋಕ ಸಾಕ್ಷಿಯಾಗಿ ಮಾತ್ರವೇ ಒಳ್ಳೆಯವನಾಗಿರಲು ಇಚ್ಚಿಸದೆ ದೇವನ ಒಳ್ಳೆಯವನಾಗಿರಲು ಇಚ್ಚಿಸುವನು. ಇದಕ್ಕೊಂದು ಮಾರ್ಮಿಕ ದೃಷ್ಟಾಂತವಿದೆ.

ಒಂದು ಊರಿನಲ್ಲಿ ಓರ್ವ ಗೃಹಸ್ಥ ಸಂತನಿರುತ್ತಾನೆ. ಅವನು ಹೊಲಿಗೆಯ ಕಾಯಕವನ್ನು ಅವಲಂಬಿಸಿ ಬದುಕುತ್ತಿರುತ್ತಾನೆ. ಅವನ ಕೈಕೆಳಗೆ ಸಣ್ಣಪುಟ್ಟ ನೌಕರರು ಇರುತ್ತಾರೆ. ಆ ಊರಿನ ಒಬ್ಬ ಮೋಸಗಾರ ತರುಣನು ಇವನ ಬಳಿಯೇ ಬಟ್ಟೆಗಳನ್ನು ಕೊಡುತ್ತಿರುತ್ತಾನೆ. ಅವನ್ನು ಹೊಲಿಸಿಕೊಂಡು ವಾಪಸು ಒಯ್ಯುವಾಗ ಚಲಾವಣೆಗೆ ಯೋಗ್ಯವಲ್ಲದ ಸವಕಲು ನಾಣ್ಯಗಳನ್ನು ದರ್ಜಿಗೆ ಕೊಟ್ಟು ಹೋಗುತ್ತಿರುತ್ತಾನೆ. ಹೀಗೆಯೇ ಹತ್ತಾರು ಬಾರಿ ನಡೆದಿರುತ್ತದೆ. ಒಂದು ದಿನ ದರ್ಜಿಯು ಕಾರ್ಯಾರ್ಥವಾಗಿ ಬೇರೆ ಊರಿಗೆ ಹೋಗಿರುವಾಗ ಬಟ್ಟೆಯನ್ನು ಪಡೆದುಕೊಳ್ಳಲು ಬಂದ ಠಕ್ಕ ತರುಣನು ಅಂಗಡಿಯಲ್ಲಿದ್ದ ಕೆಲಸಗಾರನಿಂದ ಬಟ್ಟೆಗಳನ್ನು ಪಡೆದು, ಸವಕಲು ನಾಣ್ಯವನ್ನು ಕೊಡುತ್ತಾನೆ. ಅವನು ಅದನ್ನು ಗುರುತಿಸಿ, ಇದನ್ನು ನಾನು ಸ್ವೀಕರಿಸುವುದಿಲ್ಲ ಇದು ಅಯೋಗ್ಯ ನಾಣ್ಯ'' ಎಂದು ನಿರಾಕರಿಸುತ್ತಾನೆ. ಮೋಸಗಾರ ತರುಣನು ತುಂಬಾ ಆಶ್ಚರ್ಯಪಟ್ಟು. ಒಡೆಯನಿಗಿಂತಲೂ ಭೃತ್ಯನೇ (ಕೈಯಾಳು) ಬುದ್ಧಿವಂತನಿದ್ದಾನೆ ಎಂದು ಸರಿಯಾದ ಹಣವನ್ನು ಕೊಟ್ಟು ಹೋಗುತ್ತಾನೆ. ದರ್ಜಿಯು ಹಿಂತಿರುಗಿ ಬಂದ ನಂತರ ಸೇವಕನು ಹೇಳುತ್ತಾನೆ. “ಒಡೆಯರೇ, ಅವನು ಹಲವಾರು ಬಾರಿ ಮೋಸ ಮಾಡಿದ್ದಾನೇನೋ! ಸವಕಲು ನಾಣ್ಯ ಕೊಟ್ಟು ಮೋಸಗೊಳಿಸಲೆತ್ನಿಸಿದನು.'' ಎಂದನು. ಆಗ ದರ್ಜಿಯು ಆತಂಕಗೊಂಡು ಆ ನಾಣ್ಯವನ್ನು ವಾಪಸ್ಸು ಕೊಟ್ಟು ಬಿಟ್ಟೆಯಾ? ಎಂಥಾ ಪ್ರಮಾದವಾಯಿತು!'' ಎಂದನು. ಇವನಿಗೆ ಇನ್ನೂ ಹೆಚ್ಚಿನ ಆಶ್ಚರ್ಯ. "ಏಕೆ ಕೊಡಬಾರದಿತ್ತೆ?'' ಎಂದ. ಆಗ ದರ್ಜಿ ಹೇಳಿದ, 'ತಮ್ಮಾ ಅವನು ಈ ವರೆಗೆ ಇಪ್ಪತ್ತಾರು ನಾಣ್ಯಗಳನ್ನು ಕೊಟ್ಟಿದ್ದಾನೆ. ನಾನು ಮೊದಲ ಬಾರಿಯೆ ಗುರುತಿಸಿದೆ. ಆದರೆ ಈ ನಾಣ್ಯಗಳು ಚಲಾವಣೆಯಲ್ಲಿ ಉಳಿದುದೇ ಆದರೆ ಮತ್ತಾರಾರಿಗೆ ಮೋಸವಾದೀತೋ ಎಂದು ಭಯಪಟ್ಟು ಅವನ್ನು ಪಡೆದುಕೊಂಡು ನೆಲದಲ್ಲಿ ಹುಗಿದುಬಿಟ್ಟಿದ್ದೇನೆ. ನಮಗೆ ಕೊಟ್ಟು ಮೋಸ ಮಾಡುವುದರ ಬದಲಿಗೆ ನಿರ್ಗತಿಕರಾದ ಬಡಪಾಯಿ ಚಿಲ್ಲರೆ ವ್ಯಾಪಾರಿಗೆ ಕೊಟ್ಟರೆ ಗತಿ ಏನು? ವಂಚನೆಯ ಹೇತುಗಳಾದ ಈ ನಾಣ್ಯಗಳು ಚಲಾವಣೆಯಲ್ಲಿರಬಾರದೆಂದು ನಾನು ಈ ರೀತಿ ಮಾಡಿದ್ದೇನೆ.' ಎಂದಾಗ ಸೇವಕನು ದಂಗಾದ.

ಇಲ್ಲಿ ಆ ಸಂತನ ಸದ್ಗುಣವನ್ನು, ರಾಷ್ಟ್ರ ಪ್ರಜ್ಞೆಯನ್ನು ಕಾಣುತ್ತೇವೆ. ಸಮಷ್ಟಿಗೆ ಅರ್ಥಾತ್ ಪರಮಾತ್ಮನ ಮತ್ತೊಂದು ರೂಪಕ್ಕೆ ಧಕ್ಕೆ ತರುವ ಯಾವುದೇ ಕಾರ್ಯಾಚರಣೆ ಮಾಡಲು ದೇವಭಕ್ತನು ಇಚ್ಚಿಸುವುದಿಲ್ಲ. ಪ್ರಾಣಿ ಸಂಗ್ರಹಾಲಯದಲ್ಲೇ ಹುಟ್ಟಿ ಬೆಳೆದ ಹುಲಿ ಸಿಂಹಗಳಂತಹ ಕ್ರೂರ ಮೃಗಗಳಿಗೆ ವನ್ಯ ಮೃಗಗಳನ್ನು ಬೇಟೆಯಾಡಲು ಬರದಂತೆ, ಕತ್ತರಿಸಿ ಹಾಕಿದ ಮಾಂಸವನ್ನಷ್ಟೇ ತಿನ್ನುವ ಆ ಪ್ರಾಣಿಗಳು ನೈಸರ್ಗಿಕ ಬೇಟೆಯಾಡಲು ಅರಿಯವು. ಅದೇ ರೀತಿ ದೈವಿಶ್ರದ್ಧೆ, ನೀತಿ ಪ್ರಜ್ಞೆಗಳ ವಲಯದಲ್ಲೇ ಬೆಳೆದ ಮನಸ್ಸು, ತಾನು ಶುದ್ಧ ಕಾಯಕದಿಂದ ಬಂದುದನ್ನು ಸ್ವೀಕರಿಸಿತೇ ವಿನಾ, ಮೋಸ- ಭ್ರಷ್ಟಾಚಾರಗಳ ಫಲವನ್ನಲ್ಲ.

ಪಶು-ಮಾನವ-ಶರಣ-ದೇವ

"Man has learnt to swim like a fish in water. he has learnt to fly like a bird in air, but he has not learnt to live like a man." ಇದು ಪ್ರಖ್ಯಾತ ವಿದ್ವಾಂಸರಾದ ಡಾ|| ರಾಧಾಕೃಷ್ಣನ್‌ ರವರ ಪ್ರಸಿದ್ಧ ಉಕ್ತಿ. ನಿಜ. ಇಂದು ಮಾನವ ಹಕ್ಕಿಯಂತೆ ಆಗಸದಲ್ಲೆಲ್ಲ ಹಾರಾಡಬಲ್ಲ, ಮೀನಿನಂತೆ ನೀರಿನಲ್ಲಿ ಈಜಬಲ್ಲ. ಆದರೆ ಮನುಷ್ಯ ಮನುಷ್ಯನಂತೆ ಬಾಳಲಿಕ್ಕೆ ಕಲಿತಿಲ್ಲ. ವಿಜ್ಞಾನದ ದೈತ್ಯಶಕ್ತಿ ಅವನನ್ನು ಬಹು ಎತ್ತರಕ್ಕೆ, ದೂರಕ್ಕೆ, ಆಳಕ್ಕೆ ಕೊಂಡೊಯ್ದಿದೆ; ಆಂತರ‍್ಯಕ್ಕೆ ಕೊಂಡೊಯ್ಯಲಸಮರ್ಥವಾಗಿದೆ. ಇಲ್ಲೊಂದು ಮಾರ್ಮಿಕ ದೃಷ್ಟಾಂತವನ್ನು ಹೇಳಬಹುದು.

ನಗರ ಸಂಚಾರ ಕೈಗೊಂಡ ಹುಲಿರಾಜ

ಒಂದು ಬೃಹತ್ತಾದ ಕಾಡು, ಆ ಕಾಡಿನಲ್ಲಿ ಹಲವಾರು ಕ್ರೂರ ಮೃಗಗಳಿದ್ದವು. ಅವುಗಳಲ್ಲಿದ್ದ ಒಂದು ಹುಲಿಗೆ ತುಂಬಾ ದಿನ ಕಾಡಿನಲ್ಲಿದ್ದೂ ಇದ್ದು ಬೇಸರ ಬಂದು, ಅದು ವಾರಾಂತ್ಯದ ಒಂದು ಪ್ರವಾಸವನ್ನು ಕೈಗೊಳ್ಳಬೇಕೆಂದು ಇಚ್ಚಿಸಿತು. ಹಾಗೆ ಬಯಸಿ ಅದು ಮನುಷ್ಯನು ವಾಸಮಾಡುವ ನಗರವೆಂಬ ಕಾಡಿಗೆ ಬಂದಿತು. ಈ ಬಾರಿ ಅದು ಬೆಂಗಳೂರಿನಂತಹ ಪಟ್ಟಣವನ್ನು ಆರಿಸಿಕೊಂಡಿತು. ನಗರಕ್ಕೆ ಮಧ್ಯಭಾಗಕ್ಕೆ ಬಂದು ಮೆಜೆಸ್ಟಿಕ್, ಕೆಂಪೇಗೌಡ ಸರ್ಕಲ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಎಲ್ಲವನ್ನು ನೋಡಿಕೊಂಡು ನಿರಾತಂಕವಾಗಿ ಪ್ರವಾಸವನ್ನು ಮುಗಿಸಿ ತನ್ನ ಕಾಡಿಗೆ ಹೋಯಿತು. ಆಯುಧಧಾರಿಗಳು, ಭಯಾನಕ ಗುಣಗಳುಳ್ಳವರೂ ಆದ ಮನುಷ್ಯರ ಕಾಡಿಗೆ ಹೋಗಿ ಯಶಸ್ವಿಯಾಗಿ ಹುಲಿರಾಯನು ಹಿಂತಿರುಗಿದುದನ್ನು ಕಂಡು ಉಳಿದ ಮೃಗಗಳೆಲ್ಲವೂ ಆನಂದ ತುಂದಿಲವಾದವು. ಒಂದು ಸ್ವಾಗತ ಮತ್ತು ಸತ್ಕಾರ ಸಮಾರಂಭವನ್ನು ಏರ್ಪಡಿಸಿದವು. ವಿಶೇಷ ಭೋಜನಾನಂತರ ಸ್ವಾಗತ, ಪರಿಚಯ ಭಾಷಣದ ಕಾರ್ಯಕ್ರಮ ಮುಗಿದು, ಹುಲಿಯ ವಿಶೇಷ ಭಾಷಣವಾಯಿತು. ನಂತರ ಪ್ರಶೋತ್ತರ ವೇಳೆಯಲ್ಲಿ ಹುಲಿಯನ್ನು ಸ್ನೇಹಿತರು ಪ್ರಶ್ನಿಸಿ, ಕೇಳಿದರು: ''ವ್ಯಾಘ್ರರಾಜ ಪ್ರಾಣಿಗಳಾದ ನಮ್ಮಲ್ಲಿ ಕಾಣಬರದ, ಮನುಷ್ಯರಲ್ಲಿ ವಿಶೇಷವಾಗಿ ಕಾಣುವ ಗುಣ ಮತ್ತು ಸಾಧನೆಗಳೇನು?'' ಹುಲಿಯು ಹೇಳಿತು, "ಅಂಥದೇನೂ ವೈಶಿಷ್ಟ್ಯವಿಲ್ಲ ಮಾನವರೂ ನಮ್ಮಂತೆಯೇ ಉಣ್ಣುತ್ತಾರೆ. ತಿನ್ನುತ್ತಾರೆ. ನಮ್ಮಂತೆಯೇ ನಿದ್ರೆಗೈಯುತ್ತಾರೆ. ಪ್ರಾಣಿಗಳಂತೆ ಮಕ್ಕಳನ್ನೂ ಪಡೆಯುತ್ತಾರೆ. ವಿಶೇಷವೇನಿಲ್ಲ. ಆದರೆ ಒಂದು ವಿಷಯದಲ್ಲಿ ಸ್ವಲ್ಪ ವ್ಯತ್ಯಾಸವಿದೆ.....''

ಸಹ ಮೃಗಗಳ ಕುತೂಹಲ ಕೆರಳಿತು. ಏನು ಏನು? ಎಂದು ಒಕ್ಕೊರಲಿನಿಂದ ಕೇಳಿದವು. ಆಗ ಹುಲಿಯು ಹೇಳಿತು. ನೋಡಿ, ನಮ್ಮನ್ನು ಕ್ರೂರ ಮೃಗಗಳೆಂದು ಹೆಸರಿಟ್ಟು ಕರೆದು ಅಗೌರವಿಸುತ್ತಾರೆ. ಒಂದು ಹುಲಿ ಎಷ್ಟೇ ಹಸಿವೆಯಾಗಿದ್ದರೂ ಇನ್ನೊಂದು ಹುಲಿಯನ್ನು ತನ್ನ ಆಹಾರಕ್ಕಾಗಿ ಕೊಂದು ತಿನ್ನುವುದಿಲ್ಲ. ಒಂದು ಸಿಂಹ ತನ್ನ ಹಸಿವೆಯ ತೃಪ್ತಿಗಾಗಿ ಇನ್ನೊಂದು ಸಿಂಹವನ್ನು ಸಾಯಿಸುವುದಿಲ್ಲ. ಮನುಷ್ಯ ಹಾಗಲ್ಲ: ತನ್ನ ಹೊಟ್ಟೆಪಾಡಿಗಾಗಿ, ತನ್ನ ಹೆಂಡತಿ ಮಕ್ಕಳ ರಕ್ಷಣೆಗಾಗಿ, ತನ್ನ ಸ್ವಜಾತಿಯವನೇ ಆದ ಇನ್ನೊಬ್ಬ ಮನುಷ್ಯನನ್ನು ಶೋಷಿಸುತ್ತಾನೆ. ಲಂಚಗುಳಿತನ, ಭ್ರಷ್ಟಾಚಾರ, ಜಾತೀಯತೆಗಳಿಂದ ಜೀವಂತವಾಗಿ ರಕ್ತಹೀರುತ್ತಾನೆ. ಮನುಷ್ಯ ಅವಿವೇಕಿಯಾಗಿ ಎಂತೆಂತಹ ದುಶ್ಚಟ, ದುರ್ಗುಣಗಳಿಗೆ ಬಲಿಯಾಗುತ್ತಾನೆ. ಬೀಡಿ ಸಿಗರೇಟು ಮದ್ಯ-ಅಫೀಮು ಮುಂತಾದ ಹಲವಾರು ದುರ್ವ್ಯಸನಗಳ ದಾಸನಾಗುತ್ತಾನೆ. ನಾವೇನಾದರೂ ಹಾಗೆ ಮಾಡುತ್ತೇವೋ? ಮನುಷ್ಯರು ವಾಸಿಸುವ ನಗರಗಳಲ್ಲಿ ಹೆಂಡದಂಗಡಿಗಳೆಷ್ಟು ; ನಮ್ಮ ಕಾಡಿನಲ್ಲಿ ಅವೆಲ್ಲ ಉಂಟೊ? ಇಂಥ ದುರ್ವ್ಯಸನಗಳ ದೃಷ್ಟಿಯಲ್ಲಷ್ಟೇ ಮನುಷ್ಯ ಮುಂದೆ...'' ಪ್ರವಾಸಿಗ ಹುಲಿಯ ಮಾತನ್ನು ಕೇಳಿ ಉಳಿದ ಪ್ರಾಣಿಗಳೆಲ್ಲ ತಾವೇ ಶ್ರೇಷ್ಠ
ಎಂದುಕೊಂಡವಂತೆ.

ಕೆಲವೊಮ್ಮೆ ಮನುಷ್ಯನಿಗಿಂತಲೂ ಮಿಗಿಲಾದ ಸದ್ಗುಣಗಳನ್ನು ಪ್ರಾಣಿಗಳಲ್ಲಿ ಕಾಣಬಹುದು. ನಾಯಿಯಲ್ಲಿ ಕೃತಜ್ಞತೆ, ಕುದುರೆಯಲ್ಲಿ ಸ್ವಾಮಿನಿಷ್ಠೆ, ಮುಂತಾದವು ಅಗಾಧವಾಗಿವೆ. ಆಂಗ್ಲ ಕವಿ ಲಾರ್ಡ್ ಬೈರನ್ನನು ತನ್ನ ಪ್ರೀತಿಪಾತ್ರ ನಾಯಿ ಬೋಟ್ಸ್‌ ವೇನನ್ನು ಕಳೆದುಕೊಂಡಾಗ ಅದನ್ನು ಸಮಾಧಿ ಮಾಡಿಸಿ ಅದರ ಮೇಲೆ ಹೀಗೆ ಕೆತ್ತಿಸಿದನಂತೆ: ಇಲ್ಲಿ ಒಂದು ಚೇತನದ ಉಳಿಕೆಗಳಿವೆ. ಆ ಜೀವ ಹೇಗಿತ್ತೆಂದರೆ ಅಲ್ಲಿ ಸೌಂದರವಿತ್ತು ಅಹಂಕಾರವಿರಲಿಲ್ಲ. ಧೈರ್ಯವಿತ್ತು ಕ್ರೌರ್ಯವಿರಲಿಲ್ಲ. ಮನುಷ್ಯರಲ್ಲಿರಬಹುದಾದ ಎಲ್ಲ ಸದ್ಗುಣಗಳಿದ್ದವು. ಆದರೆ ಅವರ ಯಾವುದೇ ಕೆಟ್ಟಗುಣಗಳಿರಲಿಲ್ಲ.''

ಧರ್ಮದ ಕರ್ತವ್ಯ ಸಂಸ್ಕರಣ:

ಸ್ವಭಾವತಃ ಮನುಷ್ಯನೂ ಹುಟ್ಟುಗುಣಗಳಿಂದ ಪ್ರಚೋದಿತವಾಗಿ ಬಾಳುವ ಪಶುವಿನಂತೆ. ಅವನ ನೈಸರ್ಗಿಕ ರೂಪವೇ ಅದು, ಆದರೆ ಅವನನ್ನು ತಿದ್ದಲು, ತೀಡಲು, ಸಂಸ್ಕರಿಸಲು ಸಾಮಾಜಿಕ, ನೈತಿಕ, ಧಾರ್ಮಿಕ ಮುಂತಾದ ಹಲವಾರು ಸಂಸ್ಕಾರಗಳು ರೂಪುಗೊಂಡವು. ಅವೇ ಶಿಕ್ಷಣ, ಸಂಸ್ಕೃತಿ, ಧರ್ಮ- ಅಧ್ಯಾತ್ಮಗಳು ಊರಿನ ಹೊರಗಡೆ ಒಂದು ಬೃಹತ್ತಾದ ಬಂಡೆ ಇದೆ ಎಂದುಕೊಳ್ಳೋಣ. ಅದು ಎಷ್ಟೋ ವರ್ಷಗಳಿಂದ ನಿಷ್ಟ್ರಯೋಜಕವಾಗಿ ಬಿದ್ದಿದೆ. ಅಂಥವನ್ನು ಒಂದಾನೊಂದು ದಿನ ಕಲ್ಲೊಡೆಯುವ ಒಬ್ಬ ವಡ್ಡನು ಗಮನಿಸಿ ಸೈಜ್ ಕಲ್ಲುಗಳನ್ನಾಗಿ, ಹಾಸುಗಲ್ಲುಗಳನ್ನಾಗಿ ಪರಿವರ್ತಿಸುತ್ತಾನೆ. ಕಲ್ಲುಗಳನ್ನು ತಂದು ಕೊಟ್ಟಾಗ ಕಟ್ಟಡ ಕಟ್ಟಲು ಬಳಸಿಕೊಂಡು ಅಂತೂ ಅದನ್ನೊಂದು ಉಪಯುಕ್ತ ವಸ್ತುವನ್ನಾಗಿ ಮಾಡಲಾಯಿತು. ಅದೇ ಕಲ್ಲನ್ನು ಒಬ್ಬ ಶಿಲ್ಪಿ ಗುರುತಿಸಿ ಸುಂದರ ಕಲಾಕೃತಿಗಳನ್ನು ಕಟೆಯುತ್ತಾನೆ. ಕಟೆದು ಅವನ್ನು ವಸ್ತು ಪ್ರದರ್ಶನ ಶಾಲೆಯಲ್ಲಿ ಪ್ರದರ್ಶನಕ್ಕಿಡುತ್ತಾನೆ. ಆಗ ಸಂದರ್ಶಕರು ಹೋಗಿ ನೋಡಿ, ಅವನ್ನು ಮೆಚ್ಚುತ್ತಾರೆ. ಅದೇ ಕಲ್ಲನ್ನು ಬಳಸಿ ಇನ್ನೊರ್ವ ಶಿಲ್ಪಿ ಮಹಾತ್ಮರ ಒಂದು ವಿಗ್ರಹವನ್ನು ಕಟೆದು ಒಂದು ಜಾಗದಲ್ಲಿ ಪ್ರತಿಷ್ಠಾಪಿಸುತ್ತಾನೆ. ಆಗ ಜನ ಅಲ್ಲಿಗೆ ಹೋಗಿ ಗೌರವ ಸಲ್ಲಿಸಿ, ಪೂಜಿಸುತ್ತಾರೆ. ಒಂದೇ ಕಲ್ಲು ನಿಷ್ಟ್ರಯೋಜಕವಾಗಿದ್ದಾಗ ಅಗೌರವಿಸ್ಪಟ್ಟಿತು, ಚೌಕಾಕಾರವಾದಾಗ ಉಪಯೋಗಿಸಲ್ಪಟ್ಟಿತು. ಪಾಶವಿಕ ಮಾನವ ಹೆಬ್ಬಂಡೆಯಂತೆ, ನಾಗರಿಕ ಮಾನವ ಹಾಸುಗಲ್ಲಿನಂತೆ, ಸುಸಂಸ್ಕೃತನು ಕಲಾಕೃತಿಯಂತೆ, ಮಹಾತ್ಮನು ದಿವ್ಯ ವಿಗ್ರಹದಂತೆ, ಸಂಸ್ಕಾರಕ್ಕನುಗುಣವಾಗದ ಗೌರವವನ್ನು ಮಾನವನು ಪಡೆಯುವನು.

ಮನುಷ್ಯನನ್ನು ಸ್ವಭಾವ ಗುಣಗಳ ಮುದ್ದೆಯಾಗಿ ಪಶುವಿನ ಮಟ್ಟದಲ್ಲೇ ಬಿಟ್ಟರೆ ಏನೂ ಪ್ರಯೋಜನವಾಗದು, ಅವನಿಗೆ ಶಿಕ್ಷಣ ಸಂಸ್ಕಾರ ನೀಡಿ ನಾಗರಿಕತ್ವಕ್ಕೆ ತರಬೇಕು. ನಾಗರಿಕತೆ ಮನುಷ್ಯನಿಗೆ ಹೊರಗಿನ ಸಂಸ್ಕಾರ ಮಾತ್ರ ಕೊಡುತ್ತದೆ.

ಗಿಲೀಟಿನ ಆಭರಣಕ್ಕೆ ಬಂಗಾರದ ಲೇಪಕೊಟ್ಟಂತೆ, ಒಳಗಿನ ಸಂಸ್ಕಾರದ ಪ್ರಮುಖ ಸಾಧನ ಸಂಸ್ಕೃತಿ, ಸಂಸ್ಕೃತಿ ಹೃದಯದ ಸಂಪತ್ತು. ಕೇವಲ ಹೊರಗಣ ಅಲಂಕಾರದ ನಾಗರಿಕ ಮನುಷ್ಯರ ತಂಡವನ್ನು ನಿರ್ಮಾಣ ಮಾಡುವುದರಲ್ಲಿ ಹೆಚ್ಚಿನ ಸಾಧನೆ ಏನಿಲ್ಲ. ಬುದ್ದಿವಂತರು, ವಿದ್ಯಾವಂತರಿಗಿಂತಲೂ ಹೃದಯವಂತರನ್ನು ತಯಾರು ಮಾಡುವುದು ಮಹತ್ತರವಾದ ಹೊಣೆ. ಎಮಲ್ಸನ್ ಮಹಾಶಯ ತನ್ನ "Society and salitude "ಕೃತಿಯಲ್ಲಿ ಹೇಳುತ್ತಾನೆ.

"The truest test of civilization is, not the census nor the size of cities, nor the crops, no, but the kind of men the country turns out.'

“ನಾಗರಿಕತೆಯ ನಿಜವಾದ ಲಕ್ಷಣ ವೃದ್ಧಿಸುವ ಜನಸಂಖ್ಯೆಯ ಬಲದ ಮೇಲಿಲ್ಲ: ವಿಸ್ತರಣೆಹೊಳ್ಳುತ್ತಿರುವ ನಗರಗಳ ಮೇಲಲ್ಲ, ಪ್ರಗತಿಗೊಳ್ಳುವ ರಾಷ್ಟ್ರೀಯ ಉತ್ಪಾದನೆಯ ಮೇಲಿಲ್ಲ; ಎಂತಹ ಜನಾಂಗವನ್ನು ಎಂದು ನಾಡು ತಯಾರು ಮಾಡುತ್ತದೆ ಎಂಬುದರ ಮೇಲಿದೆ ಹೃದಯವಂತಿಕೆಯನ್ನು ಜೀವಾಳವಾಗಿ ಪಡೆದಿರುವ ಸಂಸ್ಕೃತಿ ಎಂದರೇನು? ಒಂದು ರಸ್ತೆಯಲ್ಲಿ ಅ, ಆ ಮತ್ತು ಇ ಎಂಬ ಮೂವರು ಹೋಗುತ್ತಿದ್ದಾರೆಂದು ಇಟ್ಟುಕೊಳ್ಳೋಣ. 'ಅ' ನು ಒಂದು ಗುಡಿಗೆ ಹೊರಗಿದ್ದಾನೆ. ಮಿಂದು ಒದ್ದೆ ಮಡಿಯುಟ್ಟು ಮಂತ್ರವನ್ನು ಪಠಿಸುತ್ತ ಹೋಗುತ್ತ ಇರುವನು. 'ಆ' ನು ಒಬ್ಬ ಸುಶಿಕ್ಷಿತ ಅಧಿಕಾರಿ. ತೀರಾ ವೈಭವಯುತ ಕಿಮ್ಮತ್ತಿನ ಸ್ವಚ್ಛವಾದ ಬಟ್ಟೆಯುಟ್ಟು ಆಫೀಸಿಗೆ ಹೊರಟಿದ್ದಾನೆ. 'ಇ' ಒಬ್ಬ ಹಳ್ಳಿಗ ಹಾಲು ಮಾರಲು ನಗರಕ್ಕೆ ಬಂದಿದ್ದಾನೆ. ಬಡವ ಮತ್ತು ಅಶಿಕ್ಷಿತ. ಮೂವರೂ ಹೆದ್ದಾರಿಯ ಮೇಲೆ ಹೋಗುತ್ತಿರುವಾಗ ಒಂದು ಮಗು ಜಾರಿ ಬಿದ್ದು ಬಿಡುತ್ತದೆ. ಅದರ ಮೊಳಕಾಲು ತರಚಿ ರಕ್ತ ಹರಿಯಲಾರಂಭಿಸುತ್ತದೆ. ಅದು ಚೀರಿ ಚೀರಿ ಅಳುತ್ತದೆ. ಆಗ ಒದ್ದೆ ಮಡಿಯವನು ಅದನ್ನು ಎತ್ತಿ ನಿಲ್ಲಿಸಿ ಉಪಚರಿಸಿದರೆ ತನ್ನ 'ಮಡಿ' ಎಲ್ಲಿ ಕೆಟ್ಟು ಹೋಗುವುದೋ ಎಂದು ಅಂಜಿ, ಮನಸ್ಸನ್ನು ಗಟ್ಟಿಮಾಡಿಕೊಂಡು ದೂರ ಸಾಗುತ್ತಾನೆ. ಶುಭ್ರ ವಸನಧಾರಿ ತನ್ನ ಬಟ್ಟೆ ಎಲ್ಲಿ ಕೊಳೆಯಾಗುತ್ತವೋ ಎಂದು ಅಸಹ್ಯಪಟ್ಟು ದೂರ ಸರಿಯುತ್ತಾನೆ. ಹಾಲು ಮಾರಲು ಬಂದ ಅವಿದ್ಯಾವಂತ ಹಳ್ಳಿಗ ಮರುಕದಿಂದ ಮಗುವನ್ನು ಮೇಲೆತ್ತಿ ಚಿಕಿತ್ಸೆ ಮಾಡಿಸುತ್ತಾನೆ. ಇದರಲ್ಲಿ ಹೃದಯವಂತನು, ಸುಸಂಸ್ಕೃತನು ಯಾರೆಂದರೆ ಮುಗ್ಧ ಹಳ್ಳಿಗನು!

ನಾಗರಿಕತೆ, ಸಂಸ್ಕೃತಿ ಕ್ರಮವಾಗಿ ಹೊರ, ಒಳಗೆ ಸಂಸ್ಕರಿಸಿದರೆ ಧರ್ಮವು ಆತ್ಮ ಸಂಸ್ಕಾರವನ್ನು, ಪರಿಪೂರ್ಣತೆಯನ್ನು ನೀಡುತ್ತದೆ. ಮನುಷ್ಯನು ಸ್ವಭಾವತಃ ಸುಖದ ಅನ್ವೇಷಕ. ಸುಖ ಬೇಕು ಎಂಬ ಆಕಾಂಕ್ಷೆಯಿಂದ ನಿರಂತರವಾಗಿ ಅದಕ್ಕಾಗಿಯೇ ಅರಸುವವನು. ಹೀಗೆ ದೊರೆಯಬಹುದಾದ ಸುಖಗಳಲ್ಲಿ ಮೂರು ಬಗೆಯವನ್ನು ನಾವು ಗುರುತಿಸಬಹುದು.

೧.ಸುಖ (Pleasure) ಅಥವಾ ಭೋಗ
೨.ಸಂತೋಷ (Happiness) ಮತ್ತು
೩. ಆನಂದ (Bliss)

ಯಥೇಚ್ಚವಾದ ಹಣದಿಂದ, ಅಪಾರ ಸೌಲಭ್ಯಗಳು, ಹಲವಾರು ವೈಭವಪೂರ್ಣ ಸಲಕರಣೆಗಳಿಂದ ಮನುಷ್ಯನಿಗೆ ಸುಖ ಸಿಕ್ಕುವುದು. ಆದರೆ ಈ ಸುಖವೇ ಸಂತೋಷವಲ್ಲ, ಅನೇಕ ಲಕ್ಷಾಧೀಶರಿಗೆ ಈ ಎಲ್ಲ ಇದ್ದರೂ ಮಾನಸಿಕವಾಗಿ ಅವರು ಅಸುಖಿಗಳಾಗಿರುತ್ತಾರೆ. ಮಧ್ಯಮ ವರ್ಗದ ಓರ್ವ ಮನುಷ್ಯ ಕೈ-ಬಾಯಿ ಎರಡೂ ಸಮವಾಗಿದ್ದರೂ ಅತ್ಯಂತ ಪ್ರಶಾಂತವಾದ ಸಂತೃಪ್ತಿಯ ಜೀವನವನ್ನು ನಡೆಸುತ್ತಾನೆ. ಇದು ಸಂತೋಷ ಸಂತೃಪ್ತಿಯಿಂದ ಒಡಗೂಡಿದ ಮಾನಸಿಕ ಸುಖ. ಮೂರನೆಯದಾದ ಆನಂದ ತೀರಾ ಆಂತರಿಕ, ಓರ್ವ ಜ್ಞಾನಿ ಹೊರಗಡೆಯ ಯಾವ ಐಷಾರಾಮಗಳಿಲ್ಲದೆ, ಸುಖ-ಸೌಲಭ್ಯಗಳಿಲ್ಲದೆ ತಾನು-ತನ್ನ ಸಂಸಾರ ಎಂಬ ಸೀಮಿತ ಮೋಹವೂ ಇಲ್ಲದೆ ಅಮೂಲ್ಯವಾದ ಸಂತೃಪ್ತ ಜೀವನ ನಡೆಸುತ್ತಾನೆ. ಅವನ ಆನಂದಕ್ಕೆ ಸಾಧನಗಳು ಅರ್ಚನೆ, ಅಧ್ಯಯನ, ಚಿಂತನೆ, ಆತ್ಮಧ್ಯಾನ. ಈ ಆನಂದದ ಸ್ಥಿತಿಗೆ ಕಾರಣಗಳು ಹೊರಗಿನಿಂದ ಇಲ್ಲ. ಸುಖದುಃಖಗಳ ಲೇಪವಿಲ್ಲದ ಈ ಆನಂದ ಸ್ಥಿತಿ ಅತ್ಯಂತಿಕವಾದ ಸಿದ್ಧಿ.

ಹೀಗೆ ದೊರೆಯಬಹುದಾದ ಸುಖ, ಸಂತೋಷ ಮತ್ತು ಆನಂದಗಳನ್ನು ದೊರಕಿಸಿ ಕೊಡುವ ಸಾಧನಗಳು ಮೂರು. ಅವೇ ಭೌತಿಕ ಮೌಲ್ಯಗಳು ಸುಖದ ಸಲಕರಣೆಗಳನ್ನು ಒದಗಿಸುವವು. ತತ್ತ್ವಜ್ಞಾನ, ಬೌದ್ಧಿಕ ಮೌಲ್ಯಗಳು ಸಂತೋಷ ಸಾಧನೆಗೆ ಬೇಕಾದ ನೈತಿಕ ಮೌಲ್ಯಗಳನ್ನು ಒದಗಿಸಿಕೊಡುವವು. ಆತ್ಮಜ್ಞಾನವು ಆನಂದದ ಗಳಿಕೆಗೆ ಬೇಕಾದ ಅಧ್ಯಾತ್ಮಿಕ ಮೌಲ್ಯಗಳನ್ನು ನೀಡುವುದು. ಈ ಮೂರೂ ವ್ಯಕ್ತಿಗೆ ಸಮಾಜಕ್ಕೆ ಲಭ್ಯವಾಗಬೇಕಾದರೆ ವಿಜ್ಞಾನ-ನೀತಿ-ಧರ್ಮಗಳ ಅವಶ್ಯಕತೆ ಉಂಟೇ ಉಂಟು.

ಧರ್ಮದ ಅವಶ್ಯಕತೆ ಯಾರಿಗೆ?

ಜನರು ಧರ್ಮದ ಬಗ್ಗೆ ಅನೇಕ ತಪ್ಪು ಕಲ್ಪನೆ ಹೊಂದಿದ್ದಾರೆ. ಅದು ಸನ್ಯಾಸಿಗಳಿಗೆ ಮಾತ್ರ ಬೇಕು ಸಂಸಾರಿಗಳಿಗಲ್ಲ ಎಂದು ಕೆಲವರು; ಮುದುಕರಿಗೆ ಬೇಕು ತರುಣ ಪ್ರಾಯದಲ್ಲಿ ಅಲ್ಲ ಎಂದು ಇನ್ನು ಕೆಲವರು. 'ಅಯ್ಯೋ, ಧರ್ಮವು ಪಲಾಯನ ಸೂತ್ರವನ್ನು ಪಠಿಸುತ್ತದೆ. ಜೀವನವನ್ನು ಆಸ್ವಾದಿಸಬೇಕು ಎನ್ನುವವರಿಗೆ ಇದೇತಕ್ಕೆ ಬೇಕು? ಎಂದು ಮೂಗೆಳೆಯುತ್ತಾರೆ ಕೆಲವರು. ಇವೆಲ್ಲವೂ ಭ್ರಾಂತ ಕಲ್ಪನೆಗಳೇ. ಬದುಕಬೇಕು. ಚೆನ್ನಾಗಿ ಬದುಕಬೇಕು ಎನ್ನುವ ಎಲ್ಲರಿಗೆ ಧರ್ಮಜ್ಞಾನ ಬೇಕು. ಧರ್ಮವು ಪಲಾಯನ ಸೂತ್ರವನ್ನು ಪರಿಸದೆ ಬದುಕುವ ಕಲೆಯನ್ನು ಕಲಿಸುವುದು. ಓರ್ವ ತತ್ವಜ್ಞಾನಿಗಳು ಹೇಳುವಂತೆ: "It teaches the art of living in tune with the science of life. It teaches us what is truth, what is right, what is good and what is just. It preaches us the conduct of right living and virtuousness."

ಕ್ರೂರ ಮೃಗಗಳ ಬೇಟೆಗೆ ಹೊರಟ ಓರ್ವ ಉತ್ಸಾಹಿ ವೀರನನ್ನು ಅನುಭವಿಯೊಬ್ಬನು ತಡೆದು, “ಅಯ್ಯಾ, ಆಕ್ರೂರ ಮೃಗಗಳನ್ನು ಜಾಣತನದಿಂದ ಎದುರಿಸು, ಈ ಕವಚವನ್ನು ತೊಡು, ಬಿಲ್ಲು-ಬಾಣವನ್ನು ಹಿಡಿ, ಜಯಶಾಲಿಯಾಗು' ಎಂದು ಸಕಲ ಸನ್ನದ್ಧನನ್ನಾಗಿ ಮಾಡಿ, ಆಶೀರ್ವದಿಸಿ ಕಳಿಸಿದರೆ ಅದು ಹೇಡಿತನವನ್ನು ಕಲಿಸಿದಂತಾಗುವುದೇ? ಬೇಟೆಯಲ್ಲಿ ಜಯಶಾಲಿಯಾಗಲು ಮಾರ್ಗದರ್ಶನ ಮಾಡಿದಂತಾಗುವುದಷ್ಟೆ! ಅದೇ ರೀತಿ ಲೋಕ ಕಾಂತಾರದಲ್ಲಿ ಸಮಸ್ಯೆಗಳ ಬೇಟೆಯನ್ನಾಡಲು ಹೊರಟ ಜೀವಿಯನ್ನು ಧರ್ಮವು ನಿರುತ್ಸಾಹಗೊಳಿಸದೆ, ಅವನನ್ನು ಸಕಲ ಸನ್ನದ್ಧನನ್ನಾಗಿ ಮಾಡಿ, ಎದುರಿಸುವ ಕಲೆ ಕಲಿಸಿ, ಆಶೀರ್ವದಿಸುತ್ತದೆ. ಈ ಆಶೀರ್ವಾದ ಮತ್ತು ತರಬೇತಿ ಮುದುಕ-ಹುಡುಗ, ಸಂಸಾರಿ-ಸನ್ಯಾಸಿ ಎಲ್ಲರಿಗೂ ಬೇಕು.

ಇನ್ನು ಕೆಲವರು ಕೇಳುತ್ತಾರೆ. ಪುಣ್ಯ ಜೀವಿಗಳು, ಪ್ರಾಮಾಣಿಕರು ತಮ್ಮ ಪಾಡಿಗೆ ತಾವು ಸಂಸ್ಕಾರದ, ಅನ್ಯರಿಗೆ ಕೇಡು ಬಗೆಯದ ಜೀವನವನ್ನು ನಡೆಸುತ್ತಾರಲ್ಲ. ಅವರಿಗೆ ಧರ್ಮದ ಅವಶ್ಯಕತೆ ಏನು?'' ಈ ಪ್ರಶ್ನೆಗೆ ಉತ್ತರಿಸಲು ಮೊದಲು ಸೋಕ್ರಟಿಸನ ಜೀವನಕ್ಕೆ ಸಂಬಂಧಿಸಿದ ಒಂದು ಕಥೆಯನ್ನು ಹೇಳಲಿಚ್ಚಿಸುವೆ. ತತ್ತ್ವಜ್ಞಾನದ ಜನಕನೆಂದು ಬಿರುದನ್ನು ತಾಳಿದ ಸೋಕ್ರಟಿಸ್‌ ಜಗತ್ಪಸಿದ್ಧ ಗ್ರೀಕ್ ತತ್ತ್ವಜ್ಞಾನಿ, ಅವನು ಅಸಾಮಾನ್ಯ ಜ್ಞಾನಿಯಾಗಿದ್ದರಿಂದ ನೂರಾರು ಜನ ದೂರ ದೂರದ ದೇಶಗಳಿಂದೆಲ್ಲ ಅವನ ದರ್ಶನಕ್ಕೆ ಆಗಮಿಸುತ್ತಿದ್ದರು. ಒಂದು ದಿನ ಓರ್ವ ತರುಣ ಜಿಜ್ಞಾಸು ಸೋಕ್ರಟಿಸನ ಸಂದರ್ಶನಕ್ಕೆ ಬಂದ. ಸೋಕ್ರಟಿಸನಾಗ ಒಂದು ಕನ್ನಡಿಯ ಮುಂದೆ ಕುಳಿತು ತನ್ನನ್ನು ತಾನು ನೋಡಿಕೊಳ್ಳುತ್ತಿದ್ದ. ಸೋಕ್ರಟಿಸನಿಗೆ ಕನ್ನಡಿಯನ್ನು ಸದಾ ನೋಡಿಕೊಳ್ಳುವ ದುರಭ್ಯಾಸ ಬೆಳೆದಿತ್ತು. ಹೀಗೆ ನೋಡುತ್ತಾ ಕುಳಿತಿದ್ದ ಸೋಕ್ರಟೀಸನನ್ನು ಕಂಡು ಆಗಂತುಕ ತರುಣ ಸ್ವಲ್ಪ ಬೆಪ್ಪಾಗಿ ಹೊರಸರಿದ. ಕನ್ನಡಿಯಲ್ಲಿ ಸುಳಿದ ನೆರಳನ್ನು ಗಮನಿಸಿದ ಆಗಂತುಕನನ್ನು ಕರೆದ. ಅವನು ಬಂದು ಆಸೀನನಾದ. ಸೋಕ್ರಟೀಸ ನಗುತ್ತಾ ಕೇಳಿದ. 'ತಮ್ಮಾ, ನಾನು ಕನ್ನಡಿ ನೋಡುತ್ತಾ ಕುಳಿತುದನ್ನು ಕಂಡು ಅಚ್ಚರಿಪಟ್ಟೆಯಾ?''

“ಹೌದು ಮಹಾಶಯ. ತಾವು ನೋಡಲಿಕ್ಕಾದರೂ ತುಸು ಚೆಂದವಿದ್ದರೆ ನಾನು ಅರ್ಥಮಾಡಿಕೊಳ್ಳುತ್ತಿದ್ದೆ. ಅತ್ಯಂತ ಕುರೂಪಿಗಳಾದ ತಾವು ಹೀಗೆ ನಿಮ್ಮನ್ನು ನೀವೇ ನೋಡುತ್ತಾ ಕುಳಿತುಕೊಳ್ಳುವುದನ್ನು ಕಂಡು ನನಗೆ ನಿಜಕ್ಕೂ ಆಶ್ಚರ್ಯವಾಗಿದೆ.'' ಸೋಕ್ರಟೀಸನು ಅತ್ಯಂತ ಕುರೂಪಿಯಾಗಿದ್ದ. ಮೆಳ್ಳೆಗಣ್ಣು, ದೊಡ್ಡ ಮೂಗಿನ ಹೊರಳೆ, ದಪ್ಪ ದಪ್ಪ ತುಟಿ, ಸೊಟ್ಟ ಸೊಟ್ಟ ಮೊರದಗಲ ಕಿವಿ, ಹೀಗೆ ವಿಕೃತ ದೇಹಿಯಾಗಿದ್ದ. ಆದರೆ ಅವನ ಜ್ಞಾನವು ನಿಸ್ಸಿಮವಾಗಿತ್ತು. ಆಗಂತುಕನ ಮಾತು ಕೇಳಿ ಸೋಕ್ರಟೀಸ ಮನವಾರೆ ನಕ್ಕ.

“ತಮ್ಮಾ, ಕುರೂಪಿಗಳಿಗೇ ಕಣಯ್ಯ ಕನ್ನಡಿ ನೋಡುವ ಆವಶ್ಯಕತೆ ಇರೋದು''
“ಅದು ಹೇಗೆ?''
“ಹೌದು, ತಮ್ಮ ತಮ್ಮ ಕುರೂಪವನ್ನು ತಿದ್ದಿ ತೀಡಿಕೊಂಡು ಸರಿಪಡಿಸಿಕೊಳ್ಳಲು ಕುರೂಪಿಗಳಿಗೆ ಕನ್ನಡಿ ಬೇಕು.'
ಈ ಮಾತು ಸರಿಯೇ! ಹಾಗಾದರೆ ಸೂರೂಪಿಗಳಿಗೆ, ಚೆಂದವಾಗಿದ್ದವರಿಗೆ ಕನ್ನಡಿ ಬೇಡವೆ ?''
'ಹಾಗೆಲ್ಲಿ ನಾನು ಹೇಳಿದೆ ? ಕೂರೂಪಿಗಳಿಗೆ ಬೇಕು ಎಂದರೆ ಸುರೂಪಿಗಳಿಗೆ ಬೇಡ ಎಂದೇನೂ ಅರ್ಥವಾಗದು. ನನಗೆ ಹಸಿವಾಗಿದೆ ಊಟ ಬೇಕು ಎಂದರೆ ನಿನಗೆ ಬೇಡ ಎಂದರ್ಥವಲ್ಲ, ಸುರೂಪಿಗಳಿಗೆ ಕನ್ನಡಿ ಬೇಕು.''
"ಅದೇಕೆ.....!!
ದೇವರು ಕೊಟ್ಟಿರುವ ತಮ್ಮ ಚೆಲುವನ್ನು, ಸೌಂದರವನ್ನು ಉಳಿಸಿಕೊಳ್ಳಲಿಕ್ಕೆ, ರಕ್ಷಿಸಿಕೊಳ್ಳಲಿಕ್ಕೆ ಅವರಿಗೂ ಕನ್ನಡಿಬೇಕು.' ಆಗಂತುಕ ತರುಣ ಈ ವಾದ ಸರಣಿಯಿಂದ ಸಂಪ್ರೀತನಾದ.

ನೋಡಿ; ಕನ್ನಡಿ ಇಬ್ಬರಿಗೂ ಬೇಕಂತೆ, ಕುರೂಪಿ-ಸುರೂಪಿ ಉಭಯತರಿಗೆ ಕುರೂಪಿಗೆ ತನ್ನ ಕುರೂಪವನ್ನು ತಿದ್ದಿಕೊಳ್ಳಲು, ಸುರೂಪಿಗೆ ತನ್ನ ಸೌಂದರವನ್ನು ಉಳಿಸಿಕೊಳ್ಳಲು, ಹಾಗೆಯೇ ಧರ್ಮವೊಂದು ಕನ್ನಡಿ, ಆತ್ಮದರ್ಶನ ಮಾಡಿಸುವ ಕನ್ನಡಿ. ಅದು ಪಾಪಿಗೂ ಬೇಕು. ಪುಣ್ಯಾತ್ಮನಿಗೂ ಬೇಕು; ಸಜ್ಜನನಿಗೂ ಬೇಕು, ದುರ್ಜನನಿಗೂ ಬೇಕು; ಅಜ್ಞಾನಿಗೂ ಬೇಕು, ಸುಜ್ಞಾನಿಗೂ ಬೇಕು. ಪಾಪಿಗೆ ತನ್ನ ಪಾಪದ ಕಲಂಕ ತೊಡೆದುಕೊಳ್ಳಲು ಬೇಕು; ಸುಜ್ಞಾನಿಗೆ ತನ್ನ ಜ್ಞಾನದ ಚೆಲುವನ್ನು ಉಳಿಸಿಕೊಳ್ಳಲು ಬೇಕು. ಹೀಗೆ ಧರ್ಮವು ಪಾಪಿ-ಪಂಡಿತ ಎಲ್ಲರಿಗೂ ಬೇಕು.

ಧರ್ಮ ಮತ್ತು ವೈಚಾರಿಕತೆ (Religion and rationality)

ಧರ್ಮವು ವಿಚಾರವಂತಿಕೆಯನ್ನು, ವೈಜ್ಞಾನಿಕತೆಯನ್ನು ಅಳವಡಿಸಿಕೊಳ್ಳಬೇಕು. ವೈಚಾರಿಕತೆ (Rationality)ಗೂ ಮತ್ತು ವೈಚಾರೀಕರಣ (rationalising) ಅಥವಾ ಸಮರ್ಥನೆಗೂ ತುಂಬಾ ವ್ಯತ್ಯಾಸವಿದೆ. ಒಬ್ಬನು ಹೇಳುವ ವಿಚಾರದಲ್ಲಿ ಸ್ವಾಭಾವಿಕವಾಗಿ ವೈಚಾರಿಕತೆ ಇರುವುದು ಬೇರೆ; ಕಷ್ಟ ಪಟ್ಟು ಸಮರ್ಥನೆ ಮಾಡಿ ಅಲ್ಲಿ ವೈಚಾರಿಕತೆ ಇದೆ ಎಂದು ಸಮರ್ಥಿಸುವುದು ಬೇರೆ. ಬಹಳಷ್ಟು ಜನ ವೈಚಾರಿಕತೆ ಅಳವಡಿಸಿಕೊಳ್ಳುವುದರ ಬದಲಿಗೆ ತಾವು ನಂಬಿದ್ದನ್ನು ಕಷ್ಟಪಟ್ಟು ಸಮರ್ಥಿಸಿಕೊಳ್ಳತೊಡಗುವರು. ಕೆಟ್ಟು ನಿಂತ ಗಡಿಯಾರವೂ ಸಹ ದಿನಕ್ಕೆರಡು ಬಾರಿ ಸರಿಯಾದ ವೇಳೆ ತೋರಿಸುತ್ತದೆ. ಹಾಗಿದ್ದ ಮಾತ್ರಕ್ಕೆ ಅದು ಸರಿಯಾದ, ಉಪಯುಕ್ತ ಗಡಿಯಾರವೆಂದಲ್ಲ. ಅದೇ ರೀತಿ ಎಂಥ ಮೂಢಾಚರಣೆಯೂ ಏನಾದರೊಂದು ಅರ್ಥವನ್ನು ಹೊಂದಿರಬಹುದು. ಅಂದ ಮಾತ್ರಕ್ಕೆ ಅದು ವೈಚಾರಿಕ ಮತ್ತು ಪ್ರಗತಿಶೀಲ ಕ್ರಿಯೆ ಎನ್ನಲಾಗದು. ಆದ್ದರಿಂದ ಧಾರ್ಮಿಕರು ಕಷ್ಟಪಟ್ಟು Rationalise, ಸಮರ್ಥನೆ ಮಾಡುವುದಕ್ಕಿಂತಲೂ Rational ಆಗಲಿಕ್ಕೆ ಪ್ರಯತ್ನಿಸಬೇಕು.

ವರ್ಣ ಮತ್ತು ಜಾತಿ ವ್ಯವಸ್ಥೆಯನ್ನೇ ತೆಗೆದುಕೊಳ್ಳೋಣ; ಅದು ದೇವ ನಿರ್ಮಿತವಲ್ಲ ಶೋಷಣೆಯ ಸಾಧನ, ಸಮಾಜವನ್ನು ಏಣಿಯೋಪಾದಿಯಲ್ಲಿ ಹಂತ ಹಂತವಾಗಿ ಒಡೆಯುವುದು ಸಲ್ಲದು. ಎಲ್ಲರೂ ಹುಟ್ಟುವುದು ಒಂದೇ ಬಗೆಯಲ್ಲಿ'' ಎಂದು ಹೇಳಿದ ಬುದ್ಧ- ಬಸವರ ವಾಣಿಯಲ್ಲಿ ವೈಚಾರಿಕತೆಯನ್ನು ಕಂಡರೆ, ಇಲ್ಲ, ವರ್ಣ ವ್ಯವಸ್ಥೆ ಕರ್ಮಗಳ ವಿಭಜನೆ, ಗುಣ ಕರ್ಮಗಳ ಆಧಾರದ ಮೇಲೆ ಸಮಾಜವನ್ನು ವಿಂಗಡಿಸಲಾಯಿತು; ಈ ಹೊತ್ತು ವ್ಯವಸ್ಥೆ ಸರಿ ಎನಿಸದಿದ್ದರೂ, ಅದು ಹುಟ್ಟಿದ ಕಾಲದಲ್ಲಿ ಚೆನ್ನಾಗಿತ್ತು. ಕುಲಕಸುಬು ಜಾತಿಯಿಂದ ಬಂದಾಗ ಉದ್ಯೋಗದಲ್ಲಿ ಕೌಶಲ್ಯವಿರುತ್ತದೆ.' ಎಂದೆಲ್ಲ ಸಮರ್ಥಿಸುವ ಗಾಂಧೀಜಿಯಂಥವರ ವಿಚಾರಧಾರೆ ಸಮರ್ಥಿಕರಣ.

ಧರ್ಮವೆಂದರೆ ಮೂಢನಂಬಿಕೆಗಳ ಕಂಥೆಯಲ್ಲ

ಇಂದು ಸಮಾಜದಲ್ಲಿ ಆಚರಿಸಲ್ಪಡುವ ಬಹುಪಾಲು ಧಾರ್ಮಿಕ ಆಚರಣೆಗಳು ಮೂಢನಂಬಿಕೆಗಳಿಂದ ತುಂಬಿ ತುಳುಕುತ್ತಿದೆ. ಹಾಗೆಂದ ಮಾತ್ರಕ್ಕೆ ಧರ್ಮವು ಕೇವಲ ಮೂಢ ನಂಬಿಕೆಗಳ ಕಂಥೆಯೆಂದು ನಾವು ಅರ್ಥ ಮಾಡಬಾರದು ಮತ್ತು ನಿಜವಾದ ಅನುಭಾವಿಗಳ, ಶರಣರ ಉದ್ದೇಶ ಮೂಢ ನಂಬಿಕೆಗಳನ್ನು ಸೃಷ್ಟಿಸುವುದೂ ಅಲ್ಲ. ಉರಿಯುವ ದೀಪವು ಕಾಲಾನಂತರದಲ್ಲಿ ಕುಡಿಗಟ್ಟಲು ತೊಡಗುವುದು. ದೀಪ ಕುಡಿಗಟ್ಟಿತೆಂದು ಅದನ್ನು ಉಪ್ಪೆಂದು ಊದಿ ಆರಿಸಬೇಕಾಗಿಲ್ಲ. ಒಂದುಕಡ್ಡಿಯಿಂದ ತೀಡಿ, ಮತ್ತದಕ್ಕೆ ಉತ್ತಮವಾದ ತೈಲವನ್ನೆರೆದು, ಪ್ರಜ್ವಲಿಸುವಂತೆ ಮಾಡಬೇಕು. ಹಾಗೆಯೇ ಅನೇಕ ಪ್ರವಾದಿಗಳು, ಶರಣರು ಹಚ್ಚಿಕೊಂಡ ದೀವಿಗೆಗಳು ಶತಶತಮಾನಗಳ ಅವಧಿಯಲ್ಲಿ ಉರಿಯುತ್ತ ಉರಿಯುತ್ತ ಕಾಲಾನಂತರದಲ್ಲಿ ತತ್ವ, ಶೈಥಿಲ್ಯ, ಮೂಢ ನಂಬಿಕೆಯ ಕುಡಿ ಕಟ್ಟತೊಡಗುತ್ತದೆ. ಆಗ ನಾವು ಶೋಭೆಯಿಂದಲೋ, ನಿರಾಶೆಯಿಂದಲೋ ಧರ್ಮದ ದೀಪವನ್ನೇ ಆರಿಸಿ, ಕತ್ತಲಲ್ಲಿ ಉಳಿಯುವ ಪ್ರಯತ್ನ ಮಾಡದೆ ವೈಚಾರಿಕ ವಿಮರ್ಶೆಯ ಕಡ್ಡಿಯಿಂದ ಧರ್ಮಶಾಸ್ತ್ರಗಳನ್ನು ತೀಡಿ, ಧಾರ್ಮಿಕ ಆಚರಣೆಗಳಿಗೆ ಸದ್ಭಕ್ತಿಯ ತೈಲವನ್ನೆರೆಯಬೇಕು.

ಧರ್ಮದ ಅಂಗಗಳು ಎರಡು; ವಿಚಾರ ಮತ್ತು ಆಚಾರ, ವಿಚಾರವಿಲ್ಲದ ಆಚಾರವು ಯಾಂತ್ರಿಕವಾದ : ಜಡಕ್ರಿಯೆಯಾಗುವುದು; ಆಚಾರವಿಲ್ಲದ ವಿಚಾರವು ವಾಚಾಳಿತನ- ವಾಗುವುದು. ಅದನ್ನೇ ಅಕ್ಕಮಹಾದೇವಿ ಹೀಗೆ ಹೇಳುತ್ತಾಳೆ;

ಅಕ್ಕಿ ಇಲ್ಲದ ತುಷಕ್ಕೆ ಅಗ್ಗವಣಿಯ ಎರೆದರೆ
ಅದೆಂದಿಗೆ ಬೆಳೆದು ಫಲವಪ್ಪುದಯ್ಯಾ?
ಅರಿವಿಲ್ಲದವರಿಗೆ ಆಚಾರವಿದ್ದಡೆ
ಅರಕೆಗೆಟ್ಟು ಸುಖವೆಂದಪ್ಪುದಯ್ಯಾ?
ಹೊರೆದ ಪರಿಮಳ ಸ್ಥಿರವಾಗಬಲ್ಲುದೆ?
ಎನ್ನ ದೇವ ಚನ್ನಮಲ್ಲಿಕಾರ್ಜುನನರಿಯದವರಿಗೆ
ಆಚಾರವಿಲ್ಲ ಕಾಣಿರಣ್ಣಾ!

ಬತ್ತದ ಕಾಳಿನಲ್ಲಿ ಎರಡು ಭಾಗ, ಒಂದು ತರಗಿನ ಸಿಪ್ಪೆ ಇನ್ನೊಂದು ಒಳಗಿನ ಕಾಳು. ಹೊರಗಿನ ಸಿಪ್ಪೆಯಿಂದ ಕಾಳಿಗೆ ರಕ್ಷಣೆ. ಕಾಳಿನಿಂದ ಸಿಪ್ಪೆಗೆ ಸತ್ವ, ಕಾಳು ಇಲ್ಲದ ಸಿಪ್ಪೆ ಮೊಳೆಯದೆಂತೋ, ಸಿಪ್ಪೆ ಇಲ್ಲದ ಕಾಳೂ ಮೊಳೆಯದು, ಹಾಗೆಯೇ ಧರ್ಮದಲ್ಲಿರುವ ಆಚಾರ ವಿಭಾಗ ಸಿಪ್ಪೆಯಂತೆ, ವಿಚಾರಭಾಗ ಒಳಗಿನ ಕಾಳಿನಂತೆ. ಆಚಾರದ ಸಿಪ್ಪೆ ವಿಚಾರದ ಕಾಳನ್ನು ರಕ್ಷಿಸುತ್ತದೆ. ವಿಚಾರದ ಕಾಳು ಆಚಾರಕ್ಕೆ ಸತ್ವ ನೀಡುತ್ತದೆ.

ಆದ್ದರಿಂದ ಪರಿಷ್ಕರಣ, ಸಂಸ್ಕರಣ ಕಾರ್ಯ ಸದಾ ಆಗಬೇಕು ಈ ಧಾರ್ಮಿಕ ರಂಗದಲ್ಲಿ, ಎಂದೋ ಒಂದು ದಿನ ನಂಬಿಗೆಯಲ್ಲಿ ನೆಲೆಗೊಂಡ ವಿಚಾರಗಳನ್ನು ಹಾಗೆಯೇ ನಂಬಿಕೊಳ್ಳುತ್ತ ಹೋಗುವುದಕ್ಕಿಂತ, ಅವುಗಳನ್ನು ಆಗಾಗ ಶೋಧಿಸ(Filter) ಬೇಕು. ಮೋಡದಿಂದ ಬಿದ್ದ ನೀರು ಮೂಲತಃ ಶುಚಿಯಾಗಿದ್ದರೂ, ಹರಿಯುವ ಪರಿಸರದಿಂದ ಕಲಂಕಿತವಾಗುತ್ತ ಬರುತ್ತದೆ. ಜಲಾಶಯವನ್ನು ಸೇರುತ್ತದೆ. ಮಣ್ಣಿನ ಗುಣ, ಸುತ್ತಲಿನ ಪರಿಸರದ ಗುಣ ನೀರಿನಲ್ಲಿ ಸೇರುತ್ತದೆ. ಅಂಥ ನೀರನ್ನು ಶುದ್ಧಿಕರಿಸಿ ಮತ್ತು ಕ್ರಿಮಿನಾಶಕಗಳಿಂದ ರೋಗಾಣುಗಳನ್ನು ನಿರ್ಮೂಲನ ಮಾಡಿ ಕುಡಿಯಲಿಕ್ಕೆ ನೀರನ್ನು ಬಿಡಬೇಕು. ಅದೇ ರೀತಿ ಮೂಲತಃ ಅನುಭಾವಿಗಳು. ದಾರ್ಶನಿಕರಿಂದ ನೀಡಲ್ಪಟ್ಟ ತತ್ತ್ವಜ್ಞಾನವು ನಂತರದಲ್ಲಿ ಅನೇಕ ಪಟ್ಟಭದ್ರ ಹಿತಾಸಕ್ತ ಪೂಜಾರಿಗಳಿಂದ ಕಲಂಕಿತಗೊಂಡಿರುವ ಸಾಧ್ಯತೆ ಇರುತ್ತದೆ. ಅಂತಹ ವಿಚಾರಗಳನ್ನು ವೈಚಾರಿಕತೆಯ ಮುಖಾಂತರ ಪರಿಶೋಧಿಸಬೇಕು. ಭೂಮಿಯಿಂದ ದೊರೆಯುವ ಕಚ್ಚಾ ತೈಲವನ್ನು (crude oil) ಸಂಸ್ಕರಿಸಿ ಉಪಯೋಗಿಸುವಂತೆ ವೈಜ್ಞಾನಿಕ ವೈಚಾರಿಕತೆಯಿಂದ ಪುರಾತನ ಧಾರ್ಮಿಕ ವಿಚಾರಗಳನ್ನು ಸಂಸ್ಕರಿಸಬೇಕು

ಧರ್ಮವೆಂದರೆ ಜಾತಿಯಲ್ಲ

ಅನೇಕ ಜನರು ಧರ್ಮ ಮತ್ತು ಜಾತಿಗಳ ಬಗ್ಗೆ ತಪ್ಪು ಅರ್ಥಮಾಡಿಕೊಂಡಿದ್ದಾರೆ. ಧರ್ಮವೆಂದರೆ ಜಾತಿ ಎಂದು ಭಾವಿಸಿ ಆಚರಿಸುವವರು ಕೆಲವರಾದರೆ, ಧರ್ಮ ಜಾತಿಯಲ್ಲದೆ ಬೇರಲ್ಲ. ಇದು ಮಾನವ ಸಮಾಜವನ್ನು ಛಿದ್ರೀಕರಣಗೊಳಿಸುವ ವಸ್ತು''. ಎಂದು ಧರ್ಮದ ವಿರುದ್ಧ ಬಂಡೇಳುವವರೂ ಬಹಳಷ್ಟು ಉಂಟು.

ಸರಿಯಾಗಿ ಅರ್ಥೈಸಿ ನೋಡಿದರೆ ಧರ್ಮ- ಜಾತಿ ಬೇರೆ ಬೇರೆ ಮತ್ತು ಇವು ಪರಸ್ಪರ ವಿರೋಧಿ ಮನೋವೃತ್ತಿಗಳು ಧರ್ಮವೆಂದರೆ ಬೆಳಕಿನಂತೆ, ಜಾತಿಯೆಂದರೆ ಕತ್ತಲೆಯಂತೆ, ಕತ್ತಲೆ-ಬೆಳಕು ಹೇಗೆ ಕೂಡಿ ಬಾಳ್ವೆ ಮಾಡಲಾರವೋ ಹಾಗೆ ಧರ್ಮ ಪ್ರಜ್ಞೆ- ಜಾತಿ ಪ್ರಜ್ಞೆಗಳು ಕೂಡಿ ಒಬ್ಬನಲ್ಲಿ ಇರಲಾರವು.

೧ ಜಾತಿ ವ್ಯವಸ್ಥೆಯು ಮಾನವರನ್ನು ಶ್ರೇಷ್ಠ-ಕನಿಷ್ಟರೆಂದು ಹುಟ್ಟಿನಿಂದಲೇ ವಿಭಜಿಸುವುದು. ಧರ್ಮವು ಹುಟ್ಟಿನಿಂದ ಎಲ್ಲರನ್ನು ಸಮಾನವಾಗಿ ಕಂಡು, ವ್ಯಕ್ತಿಯು ಗುಣದಿಂದ ವ್ಯಕ್ತಿತ್ವವನ್ನು ದೊಡ್ಡವನಾಗುವನೆಂದು ಸಾರುವುದು. ಹೀಗೆ ಜಾತಿ ವ್ಯವಸ್ಥೆ ಜನ್ಮ ಪ್ರಧಾನ ವ್ಯವಸ್ಥೆಯಾದರೆ ಧರ್ಮವು ಗುಣಪ್ರಧಾನ ವ್ಯವಸ್ಥೆ.

೨. ಜಾತಿಯು ರಕ್ತ ಸಂಬಂಧದಿಂದ ಬರುವುದು. ಧರ್ಮವು ಭಕ್ತಿ ಸಂಬಂಧದಿಂದ ಬರುವುದು. ಯಾವುದಾದರೊಂದು ಗುಂಪಿನಲ್ಲಿ ಗುಂಪಿನಲ್ಲಿ ಹುಟ್ಟಿದವನು ಒಂದು ವಿಶಿಷ್ಟ ಜಾತಿಯವನೆನ್ನುವ ಕಾರಣ, ಆ ಜಾತಿಯ ಗುಂಪುಗಳಲ್ಲಿ ಹುಟ್ಟುವವರನ್ನು ತನ್ನವರೆನ್ನುವುದು ಜಾತಿ ವ್ಯವಸ್ಥೆ, ಹಾಗಲ್ಲದೆ ಹುಟ್ಟಿದ ಜಾತಿಕುಲ ಯಾವುದಾದರೇನು ಸಾತ್ವಿಕವಾದ ಪಥದಲ್ಲಿ ಶಿವಪಥದಲ್ಲಿ, ದೈವೀ ಮಾರ್ಗದಲ್ಲಿ ನಡೆಯುವವರನ್ನೆಲ್ಲ ಭಕ್ತಿ ಸಂಬಂಧದ ಬಂಧನ. ಇದು ಸಂಕುಚಿತ ದೃಷ್ಟಿಯಾಗಿರದೆ, ವಿಶಾಲವಾದ ದೃಷ್ಟಿಕೋನ ಹೊಂದಿರುವಂತಹುದು.

೩. ಜಾತಿಯು ಹುಟ್ಟಿನಿಂದ ಹೆತ್ತವರಿಂದ ಬಂದರೆ ಧರ್ಮ ಬಂಧನವು ಸಂಸ್ಕಾರದಿಂದ ಮತ್ತು ಗುರು ಮುಖೇನವಾಗಿ ಬರುತ್ತದೆ.

೪. ಜಾತಿಯು ದೇಹಸಂಬಂಧಿಯಾದರೆ ಧರ್ಮವು ಆತ್ಮ ಸಂಬಂಧಿ. ತಾಯಿ ತಂದೆಯರಿಂದ ಜನ್ಮ ತಳೆದು ಬಂದ ಪ್ರಕೃತಿ ಕಾಯವು ಗುರುಕಾರುಣ್ಯದಲ್ಲಿ ಮಿಂದಾಗ ಪುನರ್ಜನ್ಮ ಹೊಂದುವದು. ಆಗ ಅದು ಆತ್ಮದ ಹುಟ್ಟಾಗುವುದು.

೫. ಜಾತಿಯು ಸೀಮಿತವಾದ ದೃಷ್ಟಿಕೋನ ಬೆಳೆಸಿ, 'ಇವರು ನನ್ನವರು, ಅವರು ನನ್ನವರಲ್ಲ' ಎಂದು ಹೊರಹಾಕಲು ಕಲಿಸುವುದು. ಧರ್ಮವು ವಿಶಾಲವಾದ ದೃಷ್ಟಿಕೋನ ಬೆಳೆಸಿ “ಎಲ್ಲರೂ ನನ್ನವರು, ಇವರೆಲ್ಲರೂ ನನ್ನವರು' ಎಂಬ ಹೃದಯ ವೈಶಾಲ್ಯತೆಯಿಂದ ಎಲ್ಲರನ್ನೂ ಇಂಬಿಟ್ಟುಕೊಳ್ಳಲು ಬಯಸುವುದು. ಹೀಗೆ ತನ್ನವರನ್ನು, ಸುತ್ತಲಿನವರನ್ನು ಪ್ರೇಮಿಸಲು ಹೇಳುವುದು ಜಾತಿಪ್ರಜ್ಞೆಯಾದರೆ, ಎಲ್ಲರನ್ನೂ ಎಂಥವರನ್ನೂ ಪ್ರೇಮಿಸಲು ಹೇಳುವುದು ಧರ್ಮಪ್ರಜ್ಞೆ.

೬. ಜಾತಿಯು ದ್ವೇಷದ ತಳಹದಿಯ ಮೇಲೆ ರೂಪುಗೊಂಡುದಾದರೆ, ಧರ್ಮವು ಪ್ರೇಮದ ತಳಹದಿಯ ಮೇಲೆ ವಿಕಸನವಾಗುದು. ಜಾತಿಯೆಂಬ ರಾಕ್ಷಸನಿಗೆ ದ್ವೇಷವೇ ಆಹಾರ. ಧರ್ಮವೆಂಬ ಧೇನುವಿಗೆ ಪ್ರೇಮವೇ ಆಹಾರ.

೭. ಜಾತಿ ಪ್ರಜ್ಞೆಯು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿದರೆ, ಧರ್ಮಪ್ರಜ್ಞೆಯು ಉದಾತ್ತ ಭಾವನೆಯಿಂದ ಒಂದುಗೂಡಿಸುತ್ತದೆ.

೮. ಜಾತಿಯು ಸಮಾಜವನ್ನು ಕ್ಷೀಣಗೊಳಿಸುವ ಒಂದು ರೋಗದಂತಿದ್ದರೆ, ಧರ್ಮವು ಜಾತೀಯತೆಯ ರೋಗಕ್ಕೆ ಉತ್ತಮವಾದ ಔಷಧಿಯಂತಿರುತ್ತದೆ.

ಧರ್ಮ ಬೇಕು- ಜಾತಿ ಬೇಡ

ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಧರ್ಮಬೇಕು, ಜಾತಿ ಬೇಡ. ನಿಜವಾದ ಮಹಾತ್ಮರು ಲೋಕಹಿತಾರ್ಥವಾಗಿ ತತ್ತ್ವ-ಧರ್ಮಗಳನ್ನು ಕೊಡುವಾಗ ನಿಷ್ಕಲ್ಮಷ ಮನಸ್ಸಿನಿಂದ ಕೊಡುವರು. ನಂತರದಲ್ಲಿ ಅನೇಕ ಸ್ವಾರ್ಥಿಗಳ ಕೈವಾಡ ಸೇರಿ ಆ ತತ್ತ್ವ ಸಮುಚ್ಚಯ ವಿಕೃತಗೊಳ್ಳತೊಡಗುತ್ತದೆ. ಈಚಲ ಗಿಡದ ರಸವನ್ನು ಉದಾಹರಣೆಗೆ ತೆಗೆದುಕೊಳ್ಳೋಣ, ಪಾಮೇಸಿ ಜಾತಿಯ ಈ ವೃಕ್ಷಗಳಲ್ಲಿ ಒಂದು ರಸವು ಒಸರುತ್ತಿದ್ದು, ಇದನ್ನು ತೆಗೆದಾಗ 'ನೀರಾ' ಎನಿಸಿಕೊಳ್ಳುವ ಈ ರಸ ಆರೋಗ್ಯಕ್ಕೆ ಒಳ್ಳೆಯದೆಂದು ವೈದ್ಯರು ಶಿಫಾರಸು ಮಾಡುತ್ತಾರೆ. ಈ ರಸವನ್ನೇ ಬಳಸಿಕೊಂಡು ಅದನ್ನು ಹುಳಿಮಾಡಿ ಮತ್ತೇರಿಸುವ ಹೆಂಡವನ್ನಾಗಿ ಮನುಷ್ಯ ಮಾಡುತ್ತಾನೆ. ದೇವನ ಸೃಷ್ಟಿಯಲ್ಲಿ ಹೆಂಡವೇನೂ ನಿರ್ಮಾಣವಾಗಿಲ್ಲ. ಪರಿಶುದ್ಧವಾದ ನೀರಾ ಹೆಂಡವಾದುದು ವ್ಯಾಪಾರಿ ಬುದ್ಧಿಯ ಮನುಷ್ಯ ಕೈವಾಡದಿಂದ. ಇದೇ ರೀತಿ ಮಹಾತ್ಮರುಗಳು ಕೊಡುವ ಧರ್ಮವೆಂಬ ನೀರಾವನ್ನು ಜಾತಿಯೆಂಬ ಹೆಂಡವನ್ನಾಗಿ ವಿಕೃತಗೊಳಿಸುವ ಕಾರ್ಯ ಈ ದೇಶದಲ್ಲಿ ನಡೆಯುತ್ತಾ ಬಂದಿದೆ. ಇದರಿಂದಾಗಿ ಈ ದೇಶದ ಪ್ರಗತಿಯೂ ಸಾಧ್ಯವಾಗದಾಗಿದೆ.

ಜಾತೀಯತೆ-ಕ್ಯಾನ್ಸರ್ ರೋಗ

ಸಹಜವಾಗಿ ಕಾರ್ಯವನ್ನು ನಿರ್ವಹಿಸುವ ದೇಹದ ಕೋಶಗಳಲ್ಲಿ ಒಂದು ಸ್ಥಳ ಪಲ್ಲಟವಾಗಿ, ಹಿಡಿತ ತಪ್ಪಿ ಬೆಳೆಯತೊಡಗುವುದು. ಅದು ಎತ್ತೆತ್ತಲೋ ಬೆಳೆದು ಕ್ಯಾನ್ಸರ್ ರೋಗಕ್ಕೆ ದಾರಿ ಮಾಡುವುದು. ಅದೇ ರೀತಿ ಅನೇಕ ಜಾತಿಗಳು ಗುಂಪುಗಳ ಸಾಮರಸ್ಯವನ್ನು ಬೆಳೆಸಿಕೊಳ್ಳದೆ ಎತ್ತೆತ್ತಲೋ ಬೆಳೆಯತೊಡಗಿದಾಗ ಸಮಾಜ ರಾಷ್ಟ್ರಗಳ ವ್ಯವಸ್ಥೆ ಕೆಡುವುದು. ಇಂದು ಸಮಾಜದಲ್ಲಿ ಬೆಳೆಯುತ್ತಿರುವ ಜಾತಿ ಉಪಜಾತಿಗಳ ಪ್ರತ್ಯೇಕತಾ ಪ್ರಜ್ಞೆ ಹಡಗಿಗೆ ತೂತು ಹೊಡೆಯುವ ಕೆಲಸ ಮಾಡುತ್ತಿದೆ.

ಒಂದು ವಿಶಾಲವಾದ ಸಮುದ್ರದಲ್ಲಿ ಒಂದು ಹಡಗು ಹೋಗುತ್ತಿದೆ. ಆ ಹಡಗಿನಲ್ಲಿ ಅನೇಕ ಕೋಣೆಗಳಿವೆ (Cabins) ಎಂದು ಭಾವಿಸಿಕೊಳ್ಳಿ, ಈ ಹಡಗಿಗೆ ಬೇರೆ ಬೇರೆ ಕೋಣೆಗಳಲ್ಲಿ ಲಿಂಗಾಯತರು, ಬ್ರಾಹ್ಮಣರು, ಜೈನರು, ಬೌದ್ಧರು, ಹರಿಜನರು ಒಕ್ಕಲಿಗರು, ಕುರುಬರು ಮುಂತಾದ ಎಲ್ಲ ಒಂದೊಂದು ಕೋಣೆಯಲ್ಲಿದ್ದಾರೆ ಎಂದು ತಿಳಿದುಕೊಳ್ಳಿ. ಆಗ ಒಂದು ಜಾತಿಯ ಗುಂಪಿನವರು ರಾತ್ರಿಯ ವೇಳೆ ಎದ್ದು ಪಕ್ಕದ ಕೊಣೆಯಲ್ಲಿರುವವರ ಮೇಲೆ ಅಸಹನೆ ತಾಳಿ ಅವರಿರುವ ಕೋಣೆಯ ಭಾಗದಲ್ಲಿ ಹಡಗಿಗೆ ತೂತು ಹೊಡೆಯುತ್ತಾರೆಂದು ತಿಳಿಯೋಣ. ಹೀಗೆ ಒಬ್ಬೊಬ್ಬರು ಇದು ನನ್ನ ಕೋಣೆ. ಅದು ಅವರ ಕೋಣೆ; ಆ ಕೊಣೆಯಲ್ಲಿರುವವರು ಮುಳುಗಿ ಸಾಯಲಿ.' ಎಂದು ಇನ್ನೊಬ್ಬರಿಗೆ ತೂತು ಹೊಡೆಯುತ್ತಾ ಹೋದರೆ, ಪರಿಣಾಮವೇನು? ಎಲ್ಲರೂ ಸಾಗುತ್ತಿರುವುದು ಒಂದೇ ಹಡಗಿನಲ್ಲಾದ್ದರಿಂದ ಎಲ್ಲರೂ ಕೂಡಿಯೇ ಮುಳುಗುವರಷ್ಟೆ!

ಈ ದೃಷ್ಟಾಂತವನ್ನು ಹಲವು ಬಗೆಯಿಂದ ವಿಸ್ತರಿಸಬಹುದು. ಸಣ್ಣದರಿಂದ ದೊಡ್ಡದಕ್ಕೆ
ಹೋಗುವಾ.

೧. ಲಿಂಗಾಯತ ಸಮಾಜವೊಂದು ಹಡಗು. ಇದರಲ್ಲಿ ಅನೇಕ ಉಪಜಾತಿಗಳ, ವೃತ್ತಿಗಳ ಜನರಿದ್ದಾರೆ. ಇವರಿಗೆ ಉದಾತ್ತವಾದ ಸಾಮಾಜಿಕ, ತಾತ್ವಿಕ ಪ್ರಜ್ಞೆ ಇಲ್ಲದಿದ್ದರೆ ಪರಸ್ಪರ ಕಚ್ಚಾಡಿ ತೂತು ಹೊಡೆಯುವ ಕೆಲಸ ಮಾಡಿ, ಮುಳುಗದೆ ಇರರೆ?

೨. ಹಿಂದೂ ಸಮಾಜದ ಹಡಗಿನಲ್ಲಿ ಅನೇಕ ಧರ್ಮಗಳು, ಮತ ಪಂಥಗಳು ಇವೆ. ಎಲ್ಲರೂ ಕೂಡಿಯೇ ಸಾಗುತ್ತಿದ್ದಾರೆ. ಆದರೆ ಅಂತರ್ಗತ ಗುಂಪುಗಳವರೆಲ್ಲ ಸಂಕುಚಿತ ಭಾವ ತಾಳಿ, ಒಂದು ಜಾತಿ ಗುಂಪು ಇನ್ನೊಂದು ಜಾತಿಯ ಗುಂಪನ್ನು ತುಳಿದು ಆಳುವ ಪ್ರಯತ್ನ ಮಾಡಿದರೆ ಎಲ್ಲರೂ ಕೂಡಿ ಹಿಂದೂ ಸಂಸ್ಕೃತಿ-ಸಮಾಜಗಳ ಹಡಗನ್ನೇ ಮುಳುಗಿಸುವವರೆಂಬುದನ್ನು ನೆನಪಿಡಬೇಕು.

೩. ಭಾರತ ದೇಶವೊಂದು ಹಡಗಿನಂತಿದೆ. ಈ ಭರತ ಭೂಮಿಯ ಹಡಗಿನಲ್ಲಿ ಕುಳಿತಿದ್ದಾರೆ ಅನೇಕ ವಿಭಿನ್ನ ಧರ್ಮ-ಸಂಸ್ಕೃತಿಗಳವರು, ವಿವಿಧ ಭಾಷೆಗಳನ್ನು ಆಡುವವರು. ಇವರೆಲ್ಲರೂ ಭಾರತೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳದೆ ತಮ್ಮ ವೈಯಕ್ತಿಕ ಧರ್ಮಪ್ರಜ್ಞೆಯನ್ನು ಅಧಿಕಗೊಳಿಸಿ ಇನ್ನಿತರ ಧರ್ಮಗಳವರನ್ನು ದ್ವೇಷಿಸುವುದೂ ಹಡಗಿಗೆ ತೂತು ಹೊಡೆಯುವ ಕೆಲಸವೇ! ಭಾರತ ಭೂಮಿ ಅಪಾರ ಸಹಿಷ್ಣುತೆಯಿಂದ ಅನೇಕ ಮತ ಪಂಥ ಧರ್ಮಗಳವರನ್ನೂ ಇಂಬಿಟ್ಟುಕೊಂಡಾಗ, ಕೃತಜ್ಞತೆ ಇಲ್ಲದ ಆಗಂತುಕ ಧರ್ಮಗಳು ನೆಲದ ಧರ್ಮ ಸಂಸ್ಕೃತಿಗಳನ್ನೇ ಕ್ಷೀಣಿಸುವ ಯತ್ನಗೈದವು. ಹಿಂದೂ ಸಮಾಜದ ಲೋಪದೋಷಗಳಿಂದಾಗಿ ವಿಭಿನ್ನ ಸಂಸ್ಕೃತಿಗಳು ಇಷ್ಟೊಂದು ಹಬ್ಬುತ್ತಿದ್ದಾವೆ. ಎಂದು ವಿಚಾರ ಮಾಡಿ ಸಮಾಧಾನ ಮಾಡಿಕೊಳ್ಳಲೆಳಸಿದರೆ, ಅದೇ ಧರ್ಮ-ಸಂಸ್ಕೃತಿಗಳು ನಾಡಿನ ಏಕತೆಗೂ ಭಂಗ ತರುತ್ತಿದ್ದಾವೆಂದರೆ ಯಾರಿಗೆ ಖೇದವಾಗದು. ಒಂದು ದೇಶವನ್ನೇ ಒಡೆಯಬೇಕೆಂಬ ಧೋರಣೆ ಬೆಳೆಸಿಕೊಂಡು ಆಂದೋಲನೆ ಮಾಡುವುದು ಉತ್ತಮ ಧೋರಣೆಯಲ್ಲ. ಇದು ಹಡಗಿಗೆ ತೂತು ಹೊಡೆಯುವ ಕೆಲಸವಲ್ಲದೆ ಬೇರಲ್ಲ
.
ಹಿಂದೂ ಸಮಾಜ ಮತ್ತು ಜಾತೀಯತೆ :

ಹಿಂದೂ ತತ್ತ್ವಶಾಸ್ತ್ರಗಳನ್ನು ತೆಗೆದುಕೊಂಡರೆ ಇಲ್ಲಿ ಮೂರು ಸ್ತರಗಳನ್ನು ಗುರುತಿಸಬಹುದು. ೧. ಜನಸಾಮಾನ್ಯರ ಮಟ್ಟ (Common sense level) ತಾತ್ವಿಕ ಮಟ್ಟ (Speculative level) ಮತ್ತು ೩, ದಾರ್ಶನಿಕ ಮಟ್ಟ (Mystic level). ಜನಸಾಮಾನ್ಯರ ಆಚರಣೆ ನೋಡಿ, ಮೂಢನಂಬಿಕೆ-ಕಂದಾಚಾರಗಳಿಂದ ಬೇಸತ್ತು ಇದೇ ಹಿಂದೂ ತತ್ತ್ವ ಎಂದು ಜಿಗುಪ್ಪೆ ಪಟ್ಟರೆ ತುಂಬಾ ಅಜ್ಞಾನವಾದೀತು. ತಾತ್ವಿಕ ಜಿಜ್ಞಾಸೆಯಲ್ಲಿ ಹಿಂದುಗಳು ತುಂಬಾ ಮುಂದೆ ಹೋದರು. ಸೂಕ್ಷ್ಮಾತಿಸೂಕ್ಷ್ಮ ವಿಷಯಗಳಲ್ಲಿ ಅಪಾರವಾದ ಅಧ್ಯಯನಗೈದರು. ಕೇವಲ ಶಾಬ್ದಿಕ ರಂಗದಲ್ಲಿ ಮಾತ್ರವಲ್ಲ ದಾರ್ಶನಿಕ ಅನುಭೂತಿಯ ಮಟ್ಟದಲ್ಲಿ ತುಂಬಾ ಮೇಲೇರಿದರು. ಸುಂದರವಾದ ಮುಖದಲ್ಲಿ ಭಯಂಕರ ಕಲೆಗಳನ್ನು ಉಂಟುಮಾಡುವ ಮೊಡವೆಗುಳ್ಳೆಗಳಂತೆ, ಸುಂದರವಾದ ನಗರದ ಮಧ್ಯದಲ್ಲಿ ಒಂದು ಕೊಳಚೆ ಪ್ರದೇಶವಿದ್ದಂತೆ ಅಪಾರವಾದ ದಾರ್ಶನಿಕ ಮತ್ತು ತಾತ್ವಿಕ ವಿಚಾರಗಳ ನಂದನವನದಲ್ಲಿ ಜಾತೀಯತೆ ಕಳಂಕ ತರುವಂತೆ ನೆಲೆಸಿದೆ.

ವೈಚಾರಿಕ ರೀತಿಯಲ್ಲಿ ಧರ್ಮಬೋಧೆಯ ಅವಶ್ಯಕತೆ :

ಮನುಷ್ಯನ ವಿಚಾರದ ದಾಟಿ, ಮೌಲ್ಯಗಳಲ್ಲಿ ನಂಬುಗೆ ತೀರಾ ತ್ವರಿತಗತಿಯಲ್ಲಿ ಬದಲಾವಣೆ ಹೊಂದುತ್ತಿದೆ. ರಾಗಿ ಅಂಬಲಿ ತುಂಬ ಶ್ರೇಷ್ಟವಾದ ಆರೋಗ್ಯಯುಕ್ತವಾದ, ಸರಳವಾದ ಆಹಾರ. ಆದರೆ ಅದನ್ನು ಕುಡಿಯಿರಿ ಎಂದರೆ ಆಧುನಿಕ ಕೆಲ ಜನ ಮೂಗು ಮುರಿಯುವುದುಂಟು. ಆದರೆ ಅದೇ ರಾಗಿಯಿಂದಲೇ ಪುಡಿಯನ್ನು ಸಿದ್ಧಪಡಿಸಿ, ಡಬ್ಬಿಗಳಲ್ಲಿ ತುಂಬಿ ಅಂದವಾದ ಲೇಬಲ್ ಹಚ್ಚಿಟ್ಟರೆ, ಅದರ ರೂಪಕ್ಕೆ ಮರುಳಾಗಿ ಜನರು ಕೊಳ್ಳುವರು. ಹಾಗೆಯೇ ಕೆಲವು ಪುರಾತನ ಮೌಲ್ಯಗಳನ್ನು (ಇಂದಿಗೂ ಉಪಯುಕ್ತವಿರುವಂಥವನ್ನು) ಆಧುನಿಕ, ವೈಜ್ಞಾನಿಕ ಚಿಂತನೆಯ ಚೌಕಟ್ಟಿನಲ್ಲಿಟ್ಟರೆ ಅನೇಕರು ಧರ್ಮದತ್ತ ಆಕರ್ಷಿತರಾಗುವರು.

ಸುಖರಹಿತ ದುಃಖವೇ ನರಕ ಕಂಡ್ಯಾ
ಸುಖದುಃಖ ಸಮ್ಮಿಶ್ರಣವೇ ಮರ್ತ್ಯ ಕಂಡ್ಯಾ
ದುಃಖರಹಿತ ಸುಖವೇ ಸ್ವರ್ಗ ಕಂಡ್ಯಾ .... ಸಚ್ಚಿದಾನಂದಾ -ಮಾತಾಜಿ

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಪ್ರವಚನ ಎಂದರೇನು ? ಧರ್ಮ ಎಂದರೇನು ? Next