Previous ಇಷ್ಟಲಿಂಗ ಕುರಿತಾಗಿ ಸಮಸ್ಯೆ ? ಸಮಾಧಾನ ! ವೈಜ್ಞಾನಿಕ ಯುಗದಲ್ಲಿ ಧರ್ಮದ ಅವಶ್ಯಕತೆ Next

ಪ್ರವಚನ ಎಂದರೇನು ?

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ಪ್ರವಚನ ಎಂದರೇನು ?

ಬಸವಂ ಪ್ರಣವಾಕಾರಂ
ಬಸವಂ ಶರಣಾಗತ ರಕ್ಷಕ ವರಲೋಲಂ
ಬಸವಂ ಜನ್ಮಕುಠಾರಂ
ಬಸವಂ ನಮಾಮಿ ಶ್ರೀ ಗುರು ಬಸವೇಶ||


ಪ್ರವಚನ ಎಂದರೆ ಪ್ರಸಾದವಿದ್ದಂತೆ; ಅಂದರೆ ಊಟವಿದ್ದಂತೆ. ಇಲ್ಲೇನೂ ಪಾತ್ರೆ, ಸಾಮಾನು ಸರಂಜಾಮು, ಒಲೆ-ಎಲೆ ಏನೂ ಇಲ್ಲ. ಹೇಗೆ ಮಾಡುವರು ಹೇಗೆ ಬಡಿಸುವರು ಎಂದು ಆಶ್ಚದ್ಯವೆ? ಮೊದಲೇ ಕರಪತ್ರದಲ್ಲಿ ಊಟ ಎಂದು ಪ್ರಚುರಪಡಿಸಿದ್ದರೆ ತಟ್ಟೆ, ಲೋಟ ಇನ್ನೂ ಹೆಚ್ಚು ಸಿಕ್ಕರೆ ತುಂಬಿಕೊಂಡು ಹೋಗಲು ಪಾತ್ರೆ ಸಹ ತರುತ್ತಲಿದ್ದೆವು ಎಂದು ಆತಂಕವೆ?

ಇಲ್ಲಿ ನಾನು ಕೊಡುತ್ತಿರುವುದು ಹೊಟ್ಟೆಯ ಬೋನವನ್ನಲ್ಲ: ನೆತ್ತಿಯ ಬೋನವಾದ ಜ್ಞಾನವನ್ನು ಅನ್ನವು ಒಲೆಯಲ್ಲಿ ಅಟ್ಟುಂಬ ಆಹಾರವಾದರೆ ಜ್ಞಾನವು ತಲೆಯಲ್ಲಿ ಅಟ್ಟುಂಬ ಆಹಾರ. ಹೊಟ್ಟೆಯ ಬೋನ ಶಾರೀರಿಕ ಶಕ್ತಿಯನ್ನು ನೀಡಿದರೆ, ನೆತ್ತಿಯ ಜ್ಞಾನ ಆತ್ಮಿಕ ಹಕ್ಕಿಯನ್ನು ನೀಡುವುದು. ಮನುಷ್ಯನು ಅನ್ನ-ಜ್ಞಾನ ಎರಡನ್ನೂ ಪಡೆಯುವ ದಿಶೆಯಲ್ಲಿ ತ್ನಿಸಬೇಕು. ಏಕೆಂದರೆ ಅವನು ಕೇವಲ ಅನ್ನವನ್ನು ತಿಂದು ಬದುಕುವ ಪ್ರಾಣಿಯಲ್ಲ. ಜ್ಞಾನಕ್ಕಾಗಿ ಹಾತೊರೆಯುವವನು. ಉಳಿದ ಹಲವಾರು ಪ್ರಾಣಿಗಳನ್ನು ನೋಡಿರಿ ಹಸು, ಎಮ್ಮೆ, ತ್ತು, ಕತ್ತೆ ಎಲ್ಲವುಗಳಲ್ಲಿ ಹೊಟ್ಟೆ ಮತ್ತು ತಲೆ ಸಮಾನಾಂತರದಲ್ಲಿದೆ. ಆದರೆ ಮಾನವನಲ್ಲಿ ಗಲ್ಲ ಹೊಟ್ಟೆ ಕೆಳಗಿದೆ ತಲೆಯು ಮೇಲಿದೆ. ಇದರರ್ಥ ನಿಸರ್ಗವು ಸಹ ಮನುಷ್ಯನು ತಿನ್ನುವುದಕ್ಕಿಂತ ಹೆಚ್ಚು ವಿಚಾರ ಮಾಡಬೇಕು ಎಂಬುದನ್ನು ಸ್ಥಿರೀಕರಿಸುತ್ತದೆ.
ಮಾನವನು ಮೂರು ಘಟಕಗಳಿಂದ ಆಗಿದ್ದಾನೆ ತನು, ಮನ, ಆತ್ಮಗಳೇ ಆ ಮೂರು ಘಟಕಗಳು. ನಾನು ಧ್ವನಿವರ್ಧಕಯಂತ್ರದ ಮುಖಾಂತರ ನಿಮ್ಮೊಡನೆ ಮಾತನಾಡುತ್ತಿದ್ದೇನಷ್ಟೆ.

ಇಲ್ಲಿ ಒಂದು ಮೈಕ್ ಇದೆ, ಆಂಪ್ಲಿಫೈಯರ್ ಇದೆ. ಹಲವಾರು ಲೌಡ್ ಸ್ಪೀಕರ್ ಗಳಿವೆ. ಈ ಸಮಸ್ತ ಧ್ವನಿ ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡಲು ಒಂದು ಶಕ್ತಿ ಬೇಕು. ಅದುವೇ ವಿದ್ಯುತ್‌ ಅದೇ ರೀತಿ ಮಾನವ ದೇಹವೇ ಒಂದು ಮೈಕ್ ಸ್ಟಾಂಡ್ ಮನಸ್ಸೇ ಆಂಪ್ಲಿಫಯರ್, ಮೆದುಳಿನಲ್ಲಿರುವ ದೃಕ್ ಕೇಂದ್ರ (Occipital lobe) ಶ್ರವಣ ಕೇಂದ್ರ (Auditory lobe) ಮುಂತಾದುವೇ ಲೌಡ್ ಸ್ಪೀಕರ್‌ (Sound boxes). ಈ ಎಲ್ಲವುಗಳಲ್ಲಿ ಹರಿಯುವ ವಿದ್ಯುತ್ತಿನಂತೆ ಆತ್ಮ ಶಕ್ತಿ. ಹೀಗಿರುವಾಗ ಮಾನವ ದೇಹಕ್ಕೆ ಬೇಕಾದ ಅನ್ನವನ್ನು ದಿನನಿತ್ಯ ನೀವು ಒದಗಿಸುವುದಿಲ್ಲವೆ ? ಹಾಗೆಯೇ ನೆತ್ತಿಗೆ ಬೇಕಾದ ಜ್ಞಾನವನ್ನು, ಆತ್ಮನಿಗೆ ಬೇಕಾದ ಧ್ಯಾನವನ್ನೂ ಒದಗಿಸಬೇಕು. ಹೀಗೆ ದೇಹಕ್ಕೆ ಅನ್ನ, ಬುದ್ಧಿಗೆ ಜ್ಞಾನ, ಆತ್ಮಂಗೆ ಧ್ಯಾನ ಒದಗಿಸುತ್ತ ಹೋದರೆ ಮಾನವನ ವ್ಯಕ್ತಿತ್ವವೂ ಸಮಗ್ರವೂ, ಸಂಪೂರ್ಣವೂ ಆಗುವುದು.

ಪ್ರವಚನ ಪ್ರಸಾದ ಪ್ರವಚನಕಾರ ಬಾಣಸಿಗ

ನಾನು ಊಟವನ್ನಿಲ್ಲಿ ನೀಡುತ್ತಿದ್ದೇನೆ ಎಂದು ಹೇಳಿದೆ. ಇಲ್ಲಿ ದವಸಧಾನ್ಯಗಳಾವುವು ? ಒಲೆಯಲ್ಲಿ? ನೀಡಿಸಿಕೊಳ್ಳುವ ತಟ್ಟೆ ಎಲ್ಲಿ? ಹಿಂದಿನ ಅನೇಕ ಸಂತ ಮಹಾಂತ ಶರಣರು ಧಾರ್ಮಿಕ ಕ್ಷೇತ್ರದಲ್ಲಿ ಬೆಳೆದು ನೀಡಿದ ಸಂದೇಶಗಳೆಂಬ ಧಾನ್ಯಗಳನ್ನು ತೆಗೆದುಕೊಂಡು, ಸ್ವತಂತ್ರ ವಿಮರ್ಶಾಶಕ್ತಿಯಲ್ಲಿ ಹಸನಿಸಿ, ಆಧ್ಯಾತ್ಮಿಕತೆಯ ಜಲದಲ್ಲಿ ತೋಯಿಸಿ, ಸ್ವತಂತ್ರ ವಿಚಾರದುರಿಯಲ್ಲಿ ಬೇಯಿಸಿ, ದೃಷ್ಟಾಂತಗಳು ಕಥೆಗಳು ಎಂಬ ಒಗ್ಗರಣೆಯನ್ನು ನೀಡಿ, ಈ ಅರಿವಿನ ಅಮೃತದೂಟವನ್ನು ನಿಮ್ಮ ಹೃದಯದ ತಳಿಗೆಗೆ ಪ್ರವಚನವೆಂಬ ಸೌಟಿನ ಮೂಲಕ ಎಡೆ ಮಾಡುವೆನು.

ಮಾಲೆಗಾರ : ಪ್ರವಚನಕಾರರನ್ನು ಮಾಲೆಗಾರನಿಗೆ ಹೋಲಿಸಬಹುದಾಗಿದೆ. ವಿವಿಧ ತತ್ತ್ವಗಳೆಂಬ ಹೂವುಗಳನ್ನು, ಕಥೆಯೆಂಬ ದಾರದ ಮುಖಾಂತರ ಪೋಣಿಸಿ ಪ್ರವಚನದ ಹಾರ- ವನ್ನು ಮುಮುಕ್ಷುಗಳಿಗೆ ನೀಡುವನು.

ಸ್ವರ್ಣಕಾರ : ಹೇಗೆ ಮೋಡವು ತನ್ನಲ್ಲಿ ತುಂಬಿರುವ ನೀರಿನ ಸಂಗ್ರಹವನ್ನು ಭೂಮಿಯ ಮೇಲೆ ಧಾರೈಸಿ, ಭೂಮಿಯು ಹಸಿರಾಗಿ ಬೆಳೆಯನ್ನೀಯುವಂತೆ ಮಾಡುವುದೋ ಅದೇ ರೀತಿ ಪ್ರವಚನಕಾರನು, ಜ್ಞಾನಧಾರೆಯನ್ನು ಸುರಿಸಿ, ಮುಮುಕ್ಷುಗಳ ಹೃದಯ ಕ್ಷೇತ್ರದಲ್ಲಿ ಸದ್ಗುಣ, ಸದ್ಭಾವ, ಸದಾಚಾರಗಳ ಬೆಳೆಯನ್ನು ತೆಗೆಯುವನು.

ಪ್ರವಚನ ವಿಧಾನದ ವೈಶಿಷ್ಟ್ಯ

ವಾಗ್‌ ವಿಧಾನಗಳಲ್ಲಿ ಹಲವಾರು ಬಗೆ ಕಾಣಬಹುದು. ಪುರಾಣ, ಕೀರ್ತನ, ಭಾಷಣ ಮತ್ತು ಪ್ರವಚನ ಎಂಬುದಾಗಿ ವಿಭಜಿಸಬಹುದು. ಪುರಾಣ ಪದ್ಧತಿಯ ನಿರೂಪಣೆಯಲ್ಲಿ ಹರಿಕಥೆ, ಶಿವಕಥೆ ಮುಂತಾದ ಬಗೆಗಳು ಕಾಣಬಹುದಾಗಿದ್ದು ಈ ನಿರೂಪಣಾ ವಿಧಾನದಲ್ಲಿ ಕಥೆಗೇ ಮುಖ್ಯಸ್ಥಾನ, ತತ್ತ್ವಜ್ಞಾನ ಇಲ್ಲಿ ತೀರಾ ಗೌಣ. ನಮ್ಮ ವಿಚಾರ ವಿಮರ್ಶೆಗೆ ನಿಲುಕದ, ವೈಚಾರಿಕತೆಯ ಒರೆಗಲ್ಲಿಗೆ ಸಮರ್ಪಕವೆನಿಸದ ಕಥೆಗಳ, ಪವಾಡಗಳ ನಿರೂಪಣೆ ಇರುವುದು.

ಪ್ರವಚನ ಎಂದರೇನು ?

ಕೀರ್ತನಗಳಲ್ಲಿ ಸಂಗೀತ, ತಾಳ-ಮೇಳ, ಆಲಾಪ ನಾಟಕೀಯತೆಗೆ ಪ್ರಮುಖಸ್ಥಾನ; ತತ್ತ್ವಜ್ಞಾನ ಇಲ್ಲಿಯೂ ಗೌಣ. ಪೌರಾಣಿಕ ಕಥೆಗಳಿಗೇ ಅಗ್ರಪೀಠ, ವೈಚಾರಿಕ ನಿರೂಪಣೆಗೆ ಮಾನ್ಯತೆ ಕಡಿಮೆ. ಭಾಷಣಗಳಲ್ಲಿ ಅರ್ಥಾತ್ ಉಪನ್ಯಾಸಗಳಲ್ಲಿ ನೇರವಾಗಿ ವಿಷಯದ ಪ್ರತಿಪಾದನೆ, ವಿವಿಧ ವಿಷಯಗಳ ಬಗ್ಗೆ ಪಾಂಡಿತ್ಯಪೂರ್ಣ ಶೈಲಿಯಲ್ಲಿ ನೇರ ನಿರೂಪಣೆ, ನಾಟಕೀಯತೆಗೆ, ಕಥೆಗೆ ಸ್ಥಾನವೇ ಇಲ್ಲ. ಇದು ಸ್ವಲ್ಪ ಪ್ರೌಢಮತಿಗಳಿಗೆ ಹಿಡಿಸುವ ಶೈಲಿಯೇ ವಿನಾ ಶ್ರೀ ಸಾಮಾನ್ಯರಿಗಲ್ಲ; ವೈಚಾರಿಕರ ಮೆಚ್ಚುಗೆ ಗಳಿಸುವಂತಹುದೇ ವಿನಾ, ಭಾವಜೀವಿಗಳದಲ್ಲ. ಪ್ರವಚನ ಒಂದು ಬಗೆಯ ಸಮನ್ವಯ ಪದ್ಧತಿ. ಇಲ್ಲಿ ಕಥೆಯೂ ಉಂಟು, ತತ್ತ್ವಜ್ಞಾನವೂ ಉಂಟು. ವಿವಿಧ ಬಗೆಯ ಹೂವುಗಳನ್ನು ಪೋಣಿಸಲು ದಾರ ಇರುವಂತೆ, ಇಲ್ಲಿ ಆತ್ಮ-ಪರಮಾತ್ಮ, ಮುಕ್ತಿ-ಭವ, ದೇವರ ಅಸ್ತಿತ್ವ-ದೇವರ ಸ್ವರೂಪ ಮುಂತಾದ ತಾತ್ವಿಕ ವಿಷಯ ಗಳನ್ನು ಪೋಣಿಸುವ ಕಥೆಯ ಸೂತ್ರವು ಇರುತ್ತದೆ. ಹೂಮಾಲೆಯಲ್ಲಿ ದಾರವು ಗೌಣವಾಗಿರುವಂತೆ, ಹೂವುಗಳ ಮಾತ್ರ ಕಾಣುವಂತೆ ಪ್ರವಚನದಲ್ಲಿ ಕಥೆಯು ನಿಮಿತ್ತ ಮಾತ್ರ, ತತ್ತ್ವವು ಪ್ರಧಾನ, ಹೀಗಾಗಿ ಇದು ಬುದ್ಧಿ ಜೀವಿಗಳ ವೈಚಾರಿಕತೆಯ ಬೆಂಕಿಯನ್ನೂ ಉದ್ದೀ- ಪಿಸುವುದಲ್ಲದೆ, ಭಾವ ಜೀವಿಗಳ ಹೃದಯ ಭೂಮಿಯನ್ನೂ ತಣ್ಣಾಗಿಸುವುದು. ಜೀವನವೆಂದರೆ ಕೇವಲ ವೈಚಾರಿಕತೆಯ ರವಿಕಿರಣದಿಂದ ಮಾತ್ರ ಪೋಷಿಸಲ್ಪಡುವಂತಹುದಲ್ಲ; ಬಾಳವೃಕ್ಷ ಸುಳಿದೆಗೆದು ಬೆಳೆಯಬೇಕಾದರೆ ಅದಕ್ಕೆ ಸದ್ಭಾವನೆಯ ಸುಜಲ, ಸುಜ್ಞಾನದ ರವಿಕಿರಣ, ಸದಾಚಾರದ ಗೊಬ್ಬರ-ಈ ಮೂರೂ ಬೇಕು. ಆದ್ದರಿಂದಲೇ ಈ ಎಲ್ಲ ಮಾನಸಿಕ, ನೈತಿಕ ಪೋಷಕಾಂಶಗಳನ್ನು ಪ್ರವಚನದ ಮುಖಾಂತರ ನೀಡಲಾಗುವುದು.

ಅವ್ಯಾಹತವಾಗಿ ನಡೆಯುವ ಈ ಪ್ರವಚನ ಕಾರ್ಯಕ್ರಮ ಒಂದು ಬಗೆಯ ನೇತ್ರದಾನ ಶಿಬಿರ (Eye camp) ಎಂದು ಹೇಳಬಹುದು. ಕೆಲವೊಂದು ಸಂಚಾರಿ ಘಟಕಗಳು ದೃಷ್ಟಿದೋಷ ಸರಿಪಡಿಸಲೋಸುಗ ಅಲ್ಲಲ್ಲೇ ಶಿಬಿರಗಳಲ್ಲಿ ನಡೆಸಿ, ದೃಷ್ಟಿ ಮಾಂಧ್ಯತೆ, ನರದೌರ್ಬಲ್ಯ, ಪೊರೆ ಕವಿದಿರುವುದು, ಮುಂತಾದ ದೋಷಗಳಿಗೆ ಚಿಕಿತ್ಸೆ ನೀಡುವಂತೆ ಈ ನಮ್ಮ ಆಧ್ಯಾತ್ಮಿಕ ನೇತ್ರದಾನ ಶಿಬಿರದಲ್ಲೂ ಪಾರಮಾರ್ಥಿಕ ಚಿಕಿತ್ಸೆ ನೀಡುವುದುಂಟು. ಆತ್ಮಬಲಹೀನತೆಯ ನರದೌರ್ಬಲ್ಯ, ಅಜ್ಞಾನದ ದೃಷ್ಟಿದೋಷಗಳಿಗೆ ಪ್ರವಚನ ವೇದಿಕೆಯೆಂಬ ಆಷರೇಷನ್ ಥಿಯೇಟರಿನಲ್ಲಿ ಚಿಕಿತ್ಸೆಯುಂಟು. ಜ್ಞಾನವೆಂಬ ಶಸ್ತ್ರದಿಂದ ಕತ್ತರಿಸಿ, ಸದ್ಭಕ್ತಿಯ ಮುಲಾಮು ಹಚ್ಚಿ, ಸತ್ಸಂಗದ ಬ್ಯಾಂಡೇಜ್ ಹಾಕಿಬಿಟ್ಟರೆ ಎಂಥ ಭವ ರೋಗವಾದರೂ ಮಾಯವಾಗುವುದು.

ಪ್ರವಚನದ ಅವಶ್ಯಕತೆ ಏನು?

ಕಡೆಗೀಲಿಲ್ಲದ ಬಂಡಿ ಹೊಡೆಗೆಡುವುದು ಮಾಣ್ಬುದೇ ?
ಕಡೆಗೀಲು ಬಂಡಿಗಾಧಾರ
ಕಡುದರ್ಪವೇರಿದ ಒಡಲೆಂಬ ಬಂಡಿಗೆ ಶರಣರ
ನುಡಿಗಡಣವೇ ಕಡೆಗೀಲು ಕಾಣಾ ರಾಮನಾಥ ||

ಕೆಲವರು ಕೇಳುತ್ತಾರೆ. “ಇಂದಿನ ಈ ವೈಜ್ಞಾನಿಕ, ಆಧುನಿಕ ಸುಖಭೋಗಗಳ ಸನ್ನಿವೇಶದಲ್ಲಿ ಧರ್ಮ, ಆಧ್ಯಾತ್ಮಗಳ ಕುರಿತ ಪ್ರವಚನಗಳ ಅವಶ್ಯಕತೆ ಏನು?'' ಒಂದು ಎತ್ತಿನ ಬಂಡಿ ಇದೆ. ಅದಕ್ಕೆ ಬಳಸಿರುವ ಕಟ್ಟಿಗೆ ತೀರಾ ಸದೃಢ, ಸುಂದರ ಆ ಬಂಡಿಗೆ ಹೂಡಿರುವ ಎತ್ತುಗಳೂ ವಿಶೇಷ ಜಾತಿಯವು. ಗಾಡಿ ಹೊಡೆಯುವ ಗಾಡಿಗನೂ ಅತ್ಯಂತ ಬಲಶಾಲಿ, ಇಷ್ಟೆಲ್ಲ ಇದ್ದರೂ, ಒಂದೇ ಒಂದು ಪ್ರಮಾದ ಏನಾಗಿದೆಯೆಂದರೆ, ಗಾಡಿಯ ಚಕ್ರಗಳಿಗೆ ಕಡೆಗೀಲು ಹಾಕುವುದನ್ನು ಮರೆತಿದ್ದಾರೆ. ಪರಿಣಾಮವೇನಾದೀತು ? ಕಡೆಗೀಲಿನ ಭದ್ರತೆ ಇಲ್ಲದ ಬಂಡಿ ಅತ್ತಿತ್ತ ಉರುಳಿ ಬೀಳುವುದು ಸ್ವಾಭಾವಿಕವಷ್ಟೆ ? ಅದೇ ರೀತಿ ಈ ಮಾನವ ದೇಹವೂ ಒಂದು ಬಂಡಿ, ಪ್ರಭುದೇವರು ಹೇಳುವಂತೆ;

ಕಾಲುಗಳೆರಡು ಗಾಲಿ ಕಂಡಯ್ಯ
ದೇಹವೆಂಬುದೊಂದು ತುಂಬಿದ ಬಂಡಿ ಕಂಡಯ್ಯ
ಬಂಡಿಯ ಹೊಡೆವವರು ಐವರು ಮಾನಿಸರು
ಒಬ್ಬರಿಗೊಬ್ಬರು ಸಮವಿಲ್ಲವಯ್ಯ
ಇದರಿಚ್ಛೆಯನರಿದು ಹೊಡೆಯದಿದ್ದರೆ
ಅದರ ಅಚ್ಚು ಮುರಿಯಿತ್ತು ಕೇಳಾ ಗುಹೇಶ್ವರಾ

ಮಾನವ ದೇಹದ ಬಂಡಿಗೆ ಕಾಲುಗಳೇ ಗಾಲಿಗಳು; ಈ ದೇಹದ ಬಂಡಿಯಲ್ಲಿ ತುಂಬಿರುವ ಸರಕುಗಳು ಅಪಾರ. ಈ ಗಾಡಿಯನ್ನು ಹೊಡೆಯಲಿಕ್ಕೆ ಕುಳಿತವರು ಐವರು ಗಾಡಿಗರು (ಪಂಚ ಜ್ಞಾನೇಂದ್ರಿಯಗಳು).. ಆದರೆ ಅವರು ಪರಸ್ಪರರಲ್ಲಿ ಹೊಂದಾಣಿಕೆ, ಸಾಮರಸ್ಯ ಇಲ್ಲವೇ ಇಲ್ಲ. ನಿಜವಾದ ರಹಸ್ಯವನ್ನರಿಯದೆ ಬದುಕಿನ ಬಂಡಿಯನ್ನು ಹೊಡೆದರೆ, ಇದು ಹೇಗೆ ಉರುಳುವುದೋ ಹೇಳಲಾಗುವುದಿಲ್ಲ.

ಹೀಗೆ ಓಡುವ ದೇಹದ ಬಂಡಿಗೆ ಕಡೆಗೀಲು ಹಾಕಬೇಕು? ಅವೇ ಮಹಾತ್ಮರ, ಶರಣರ ನುಡಿಗಡಣಗಳು, ಶರಣರ ನುಡಿಗಡಣದ ಕಡೆಗೀಲು ಹಾಕದೆ ಓಡುವ ಹಲವಾರು ಬಂಡಿಗಳು ಎಲ್ಲೆಂದರಲ್ಲೇ ಉರುಳಿ ಬಿದ್ದಿರುವುದನ್ನು ಕಾಣಬಹುದು. ಎಷ್ಟೆಷ್ಟು ವಿದ್ಯೆ, ಎಂತೆಂಥದೋ ಅಧಿಕಾರ, ಧನ-ಕನಕ, ಹೆಂಡತಿ, ಮಕ್ಕಳು, ಕೀರ್ತಿ ವಾರ್ತೆ-ಈ ಎಲ್ಲವು ಇದ್ದರೂ ಕೆಲವು ಜೀವನದ ಬಂಡಿಗಳು ದಾರಿಯ ಬದಿಯಲ್ಲಿ ಪಂಚತಾರಾ ಹೋಟಲುಗಳಲ್ಲಿ, ಕ್ಯಾಬರೆ ನೃತ್ಯದ ಮಂದಿರಗಳಲ್ಲಿ, ವೇಶ್ಯಾವಾಟಿಕೆಗಳಲ್ಲಿ, ಕುಡಿತದ ಕ್ಲಬ್ಬುಗಳಲ್ಲಿ ಜೂಜಿನ ಕಟ್ಟೆಗಳಲ್ಲಿ ಮೈಮರೆದು ಬಿದ್ದಿರುವುದನ್ನು ಕಾಣುತ್ತೇವೆ. ಪ್ರಮುಖ ಕಾರಣವೇನು? ಮಹಾತ್ಮರ ಸನ್ನುಡಿಗಳ ಕಡೆಗೀಲನ್ನು ಬಾಳ ಬಂಡಿಗೆ ಹಾಕದಿರುವುದು.

ಬಾಳಲಿಕ್ಕೆ ಬೇಕಾದ ನೈತಿಕ ಶಾಸನಗಳು, ಸಂಹಿತೆಗಳು ಸಿಕ್ಕುವುದೇ ಮಹಾತ್ಮರ ನುಡಿಗಳಲ್ಲಿ, ಓರ್ವ ತತ್ತ್ವಜ್ಞಾನಿ ಹೇಳುತ್ತಾನೆ, ("Poets are the unacknowledged legislators of the world'') ಎಂದು. ನೈತಿಕ ರಂಗದಲ್ಲಿ ಕಾಯಿದೆಗಳನ್ನು ಸೃಷ್ಟಿಮಾಡುವವರು, ಜನಮನದಲ್ಲಿ ಮೌಲ್ಯಗಳನ್ನು ರೂಪಿಸುವವರು ಸಾಹಿತಿಗಳು, ಮಹಾತ್ಮರೆಂಬುದನ್ನು ತಿಳಿಯಬೇಕು. ಅವರ ಮಾತುಗಳು, ಸಂದೇಶಗಳು, "Foot prints on the sands of time' ಕಾಲನ ಗರ್ಭದಲ್ಲಿ ಬಿಟ್ಟು ಹೋದ ಹೆಜ್ಜೆಯ ಗುರುತುಗಳು.

ಒಂದು ಸುಭಾಷಿತವು ಹೇಳುತ್ತದೆ :

ಸದ್ದಿಸ್ತು ಲೀಲಯಾ ಪ್ರೋಕ್ತಂ ಶಿಲಾಲಿಖಿತ ಮಕ್ಷರಂ
ಅಸದ್ಧಿಃ ಶಪಥೇನೋಕ್ತಂ ಜಲೇ ಲಿಖಿತ ಮಕ್ಷರಂ ||

ಸಜ್ಜನರು ಸಹಜವಾಗಿ ನುಡಿದುದು ಕಲ್ಲಿನ ಮೇಲೆ ಬರೆದಷ್ಟು ಶಾಶ್ವತವಾಗಿ ಉಳಿಯುತ್ತದೆ. ಆದರೆ ದುರ್ಜನರು (ದೇವರ ಸಾಕ್ಷಿಯಾಗಿ) ಆಣೆ ಮಾಡಿ ಸಾರಿ ಹೇಳಿದರೂ ಕೂಡ ಅವರ ಮಾತು ನೀರಮೇಲಿನ ಬರಹದೋಪಾದಿಯಲ್ಲಿ ಆಗುವುದು. ಮಹಾಂತರ ವಾಣಿಯ ಮಹತ್ವವನ್ನರಿತೇ ಜೇಢರ ದಾಸಿಮಯ್ಯನವರು ಹೇಳುತ್ತಾರೆ:

ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ,
ಹಿರಿದಪ್ಪ ರಾಜ್ಯವನ್ನಿತ್ತಡೆ ಒಲ್ಲೆ
ನಿಮ್ಮ ಶರಣರ ಸೂಳ್ನುಡಿಯ ಒಂದರಗಳಿಗೆ ಇತ್ತರೆ
ನಿಮ್ಮನೇ ಇತ್ತೆ ಕಾಣಾ ರಾಮನಾಥ |

ಆನೆ ಕೊಟ್ಟರೂ ಬೇಡವೆನ್ನುವರು, ಬಹುಶಃ ಸಾಕಲಾರದ ಭಯದಿಂದ; ವೈಭವದ ಬದುಕಿಗೆ ಬೇಕಾದ ಸಿರಿವಂತಿಕೆ ಕೊಡುತ್ತೇನೆಂದರೂ ನಿರಾಕರಿಸುವರು, ಅದು ಬೇಗನೇ ಮನುಷ್ಯನನ್ನು ದುರಾಶಾಪೀಡಿತನನ್ನಾಗಿ ಮಾಡುವದೆಂತಲೋ ಏನೋ! ವಿಶಾಲವಾದ ಒಂದು ರಾಜ್ಯವನ್ನು ಕೊಡುತ್ತೇನೆಂದರೂ ಒಲ್ಲೆನೆನ್ನುತ್ತಾರೆ, ಅದು ಮುಳ್ಳಿನ ಕಿರೀಟವಾಗಿ ಮನಃಶಾಂತಿ ಕೆಡಿಸುವುದೆಂದೋ ಏನೋ! ಆದರೆ ದೇವರು ಪ್ರತ್ಯಕ್ಷನಾಗಿ ನಿಮಗೇನು ಬೇಕೆಂದರೆ, ಅವನನ್ನು ಇತ್ತಾದರೂ ಶರಣರ ಸೂಳ್ನುಡಿಗಳನ್ನು ಅರಗಳಿಗೆಯಷ್ಟು ಪಡೆದುಕೊಳ್ಳಲು ಸಿದ್ಧರಿದ್ದಾರೆ. ಈ ಮಾತು ಶರಣರ ವಾಣಿಗೆ ಅವರು ಕೊಡುವ ಮಹತ್ವವನ್ನು, ಭಾವನಾ ತೀವ್ರತೆಯನ್ನು ಎತ್ತಿ ತೋರುತ್ತದೆ.

ಅಂತೆಯೇ ಸುಭಾಷಿತದ ಮಹತ್ವವನ್ನು ಕುರಿತು ಹಿಂದಣ ಕವಿಗಳು ಹೇಳುತ್ತಾರೆ.

ದ್ರಾಕ್ಷಾ ಮಾನಮುಖೀ ಜಾತಾ ಶರ್ಕರ ಚನ್ದ್ರತಾಂಗತಾ।
ಸುಭಾಷಿತ ರಸಸ್ಯಾಗ್ರೇ ಸುಧಾ ಭೀತಾ ದಿವಂಗತಾ।

ದ್ರಾಕ್ಷಿಯು ಮ್ಲಾನ ಮುಖಿಯಾಯಿತು; ಸಕ್ಕರೆಯು ಸಿಹಿಯನ್ನು ಕಳೆದುಕೊಂಡು ಸಪ್ಪೆಯಾಯಿತು. ನಾಲಿಗೆಯ ತುದಿಯಲ್ಲಿ ಸುಭಾಷಿತವಿರಲು ಅಮೃತವು ಭೀತಿಯಿಂದ ಸ್ವರ್ಗಕ್ಕೆ ಪಲಾಯನ ಮಾಡಿತು.

ಇನ್ನು ಕೆಲವರು ಹೇಳುತ್ತಾರೆ. 'ಧರ್ಮವು ಅನುಭವದ ರಂಗಕ್ಕೆ ಸಂಬಂಧಿಸಿದ್ದು, ಹೇಳಲು ಕೇಳಲು ಇಲ್ಲಿ ಅಸ್ಪದವಿಲ್ಲ. ನಿಜ ಜ್ಞಾನಿಯಾದವನು ಮಾತನಾಡದೆ ಶಬ್ದ ಮುಗ್ಧನಾಗುವನು. ಸ್ವಾನುಭವದಿಂದ ತಿಳಿದುಕೊಳ್ಳಬೇಕೇ ವಿನಾ, ಬೋಧೆಯಿಂದ ತಿಳಿಯಲು ಶಬ್ದ ಮುಗ್ಧತೆಯೇ ಅತ್ಯಂತಿಕ ಸ್ಥಿತಿ ಎಂದು ತಿಳಿದವರ ಅಭಿಪ್ರಾಯವಿದು. ಶಬ್ದಸೂತಕ, ಮೌನ ಬಂಗಾರ ಎಂಬ ನಂಬುಗೆ ಅರ್ಧ ಸತ್ಯ. ಮಾತನಾಡದೆ ಗುರುವು ಶಿಷ್ಯನಿಗೆ ಬೊಧೆ ಮಾಡಲಾರ, ಜ್ಞಾನ ನೀಡಲಾರ. ಅಂತೆಯೇ ಚನ್ನಬಸವಣ್ಣನವರು ಹೇಳುತ್ತಾರೆ.

ಪಾತಾಳದ ಅಗ್ನವಣಿಯ ನೇಣಿಲ್ಲದೆ ತೆಗೆಯಬಹುದೆ
ಸೋಪಾನದ ಬಲದಿಂದಲ್ಲದೆ?
ಶಬ್ದ ಸೋಪಾನದ ಬಲದಿಂದ ನಿಶ್ಯಬ್ದ ಸೋಪಾನವ ಕಟ್ಟಿ
ನಡೆಸಿದವರು ನಮ್ಮ ಪುರಾತನರು!
ದೇವಲೋಕಕ್ಕೆ ಬಟ್ಟೆ ಕಾಣಿರೋ!
ಮರ್ತ್ಯರ ಮನದ ಮೈಲಿಗೆಯ ಕಳೆಯಲೆಂದು
ಗೀತಮಾತೆಂಬ ಜ್ಯೋತಿಯ ಬೆಳಗಿಟ್ಟು ಹೋದರು
ಕೂಡಲ ಚನ್ನ ಸಂಗಯ್ಯಾ, ನಮ್ಮ ಶರಣರು.

ಆಳವಾದ ಒಂದು ಭಾವಿಯಲ್ಲಿ ಅಮೃತ ಸಮಾನವಾದ ನೀರಿದೆ ಎಂದುಕೊಳ್ಳೋಣ. ಅದನ್ನು ಹೊರಗೆ ತೆಗೆಯಲು ಇರುವ ಮಾರ್ಗ ಎರಡೇ! ಒಂದು ಸೋಪಾನಗಳನ್ನು ನಿರ್ಮಿಸಿ, ನಡೆದು, ಒಳಗಿಳಿದು ನೀರನ್ನು ತುಂಬಿ ಹೊರಗೆ ತರುವುದು. ಇನ್ನೊಂದು ಹಗ್ಗವನ್ನು ಹಾಕಿ, ಅದರ ತುದಿಗೆ ಕೊಡವನ್ನು ಕಟ್ಟಿ, ನೀರಿಗಿಳಿಸಿ, ನೀರನ್ನು ಸೇದುವುದು. ಒಳಗಿಳಿದು ನೀರನ್ನು ಕುಡಿಯುವ ಸಾಮರ್ಥ್ಯ ಕೆಲವರಿಗುಂಟು, ತಾವೂ ಕುಡಿದು ಮತ್ತಷ್ಟು ಮೇಲೆ ತಂದು, ಅನೇಕರಿಗೆ ಹಂಚುವುದು ಇನ್ನೂ ಸ್ವಲ್ಪ ಜನಕ್ಕೆ ಸಾಧ್ಯ. ಇದಕ್ಕಿಂತ ಸುಲಭೋಪಾಯವೆಂದರೆ ಹಗ್ಗದಿಂದ ಸೇದಿ, ಆಚೆ ನಿಂತವರಿಗೆ ನೀರೆರೆಯುವುದು. ಕಾಲಿದ್ದವರು, ಕಣ್ಣಿದ್ದವರು, ಮೈಯಲ್ಲಿ ಬಲವಿದ್ದವರು ಮಾತ್ರವೇ ಒಳಗಿಳಿದು ನೀರು ಕುಡಿಯಬಲ್ಲರಾದರೆ, ಕಾಲು, ಕಣ್ಣು, ತಾಕತ್ತು ಇಲ್ಲದವರ ಗತಿ ಏನು? ಅವರು ದಾಹದಲ್ಲಿ ಬಸವಳಿದು ಬಳಲಬೇಕೆ?

ಹೃದಯದಾಳದಲ್ಲಿ ಆತ್ಮಾನುಭವ, ದಿವ್ಯಾನುಭೂತಿಯ ಚಿದ್ರಸವಿದೆ. ಅದನ್ನು ಪಡೆದುಕೊಳ್ಳಲು ಸಾಧನೆಯ ಸೋಪಾನಗಳಿವೆ. ಜ್ಞಾನದ ಕಣ್ಣು ಸಂಕಲ್ಪದ ಮೈಬಲ. ಸದಾಚಾರದ ಕಾಲ್ಬಲ ಇದ್ದವರಷ್ಟೇ ಮುಂದುವರಿದು, ದಿವ್ಯಾನುಭವದ ಚಿದ್ರಸವನ್ನೀಂಟಿ ಆನಂದವನ್ನು ಹೊಂದಬಲ್ಲರು. ಇಂಥ ಸಾಮರ್ಥ್ಯ ಎಲ್ಲರಿಗೂ ಇರದು. ಕೆಲವರಿಗೆ ಸದಾಚಾರವಿಲ್ಲದಿರುವ ಕುಂಟುತನ' ವಿರಬಹುದು. ಇಂಥ ಎಲ್ಲ 'ದಾಹಿಗ'' (Thirsty)ರಿಗೆ ಆತ್ಮಾನಂದ ರಸವನ್ನು ಪಾನ ಮಾಡಲು ಸಾಧ್ಯವೆ? ಅದಕ್ಕಾಗಿ ಆನಂದವನ್ನು ಹೊಂದಿರುವ ಅನುಭಾವಿಯು ಶಬ್ದಜಾಲದ ಹಗ್ಗವನ್ನು ಹೃದಯದ ಭಾವಿಯೊಳಕ್ಕಿಳಿಬಿಟ್ಟು, ವಚನಗಳು, ಗೀತೆಗಳು ಎಂಬ ಕೊಡದ ಮುಖಾಂತರ ದಿವ್ಯಾನುಭವದ ಚಿದ್ರಸವನ್ನು ಹೊರಗೆತ್ತಿ, ಸಾಹಿತ್ಯ ರಚನೆ, ಪ್ರವಚನ-ಉಪನ್ಯಾಸಗಳ ಮುಖಾಂತರ ಜನತೆಯ ಮತಿಯ ಪಾತ್ರೆಗಳಿಗೆ ಧಾರೆ ಎರೆದರೆ, ಆಗ ಮಾತ್ರ ಪಂಡಿತ-ಪಾಮರ, ದೀನ-ದುರ್ಬಲರೆಲ್ಲರೂ ಅಧ್ಯಾತ್ಮದಾನಂದವನ್ನು ಹೊಂದಲು ಸಾಧ್ಯ.

ಧರ್ಮಶಾಸ್ತ್ರಗಳಿಗೆ ವ್ಯಾಖ್ಯಾನಗಳು:-

ಪ್ರವಚನದ ಅವಶ್ಯಕತೆ ಇನ್ನೊಂದು ದೃಷ್ಟಿಯಿಂದಲೂ ಇದೆ. ಧರ್ಮಶಾಸ್ತ್ರಗಳ ಗೂಡಾರ್ಥಗಳನ್ನು ತಿಳಿಯಲು ತುಂಬಾ ಸುಲಭವಾಗಿ ಸಾಧ್ಯವಾಗದು. ಹಾಸನದಲ್ಲಿ ಪ್ರವಚನ ನಡೆಯುವ ಕಾಲಕ್ಕೆ ಹಳೇಬೀಡು, ಬೇಲೂರುಗಳನ್ನು ನೋಡಲು ನಾವು ಹೋಗಿದ್ದೆವು. ಕಾರನ್ನು ಇಳಿಯುತ್ತಿದ್ದಂತೆಯೇ ಓರ್ವ ಮಾರ್ಗದರ್ಶಿ ಆತುರಾತುರವಾಗಿ ಬಂದು ನಮಸ್ಕರಿಸಿ, ನಮ್ಮ ಪ್ರವಚನವನ್ನು ಎಲ್ಲಿಯೋ ಕೇಳಿರುವುದಾಗಿಯೂ ಅವನು ಎಲ್ಲವನ್ನೂ ವಿವರವಾಗಿ ಆಸಕ್ತಿಯಿಂದ ತೋರಿಸುವುದಾಗಿಯೂ ಭಕ್ತಿಯಿಂದ ಹೇಳಿ ಮುನ್ನಡೆದ. ನಾವಾಗಲೇ ಅರ್ಧದಷ್ಟನ್ನು ಕ್ರಮಿಸಿದ್ದಾಗ ಇನ್ನೊಂದು ಪ್ರವಾಸಿ ತಂಡ ಬಂದಿತು. ಇನ್ನೊಬ್ಬ ಮಾರ್ಗದರ್ಶಿ ತೋರಿಸಲು ಬರುವೆನೆಂದರೂ ನಿರಾಕರಿಸಿ ಅವರು ತಾವೇ ನೋಡುತ್ತಾ ಬಂದು, ನಮ್ಮನ್ನು ದಾಟಿ ಮುಂದೆ ಸಾಗಿದರು. ಬೇಗನೇ ಸುತ್ತಿ, ದೇವಾಲಯದೊಳಕ್ಕೆ ಹೋಗಿ ಮಂಗಳಾರತಿ ಮಾಡಿಸಿ, ಆಚೆ ಬಂದು ಒಂದು ಗಿಡದ ಕೆಳಗೆ ತಿಂಡಿ ತಿನ್ನುತ್ತ ಕುಳಿತರು. ನಾವು ಅತ್ಯಂತ ನಿಧಾನವಾಗಿ ಶುಕಭಾಷಿಣಿ, ಮುಕುರ ಮುಗ್ಧೆ, ನಾಟ್ಯಮಯೂರಿ ಮುಂತಾಗಿ ಎಲ್ಲ ಶಿಲಾಬಾಲಿಕೆಯರನ್ನು ನೋಡಿಕೊಂಡು ಹೊರಬಂದೆವು. ಆ ಮಾರ್ಗದರ್ಶಿಯೂ ತುಂಬಾ ಚೆನ್ನಾಗಿ ವರ್ಣಿಸುತ್ತಿದ್ದ. ಇನ್ನೂ ವಿವರವಾಗಿ ತಿಳಿಯಬೇಕೆಂಬ ಆಸೆ ಇತ್ತು. ಆದರೆ ಸಂಜೆಗೆ ಹಾಸನಕ್ಕೆ ಹಿಂತಿರುಗಬೇಕಿತ್ತು-ಪ್ರವಚನ ಮಾಡಲು, ಕೊಂಚ ಅತೃಪ್ತಿಯಿಂದಲೇ ಹೊರಬಂದೆವು. ಹೊರಗಿದ್ದ ಪ್ರವಾಸಿ ತಂಡದವರು ತಿಂಡಿ ತಿಂದು ಮುಗಿಸಿದ್ದರವರು, ಬಂದು ನಮಸ್ಕರಿಸಿ, ಯಾವುದೋ ಊರಲ್ಲಿ ಪ್ರವಚನ ಕೇಳಿದ್ದುದಾಗಿ ಹೇಳಿದರು. ನಾನು ಕೇಳಿದೆ. ''ನಮಗಿಂತ ತಡವಾಗಿ ಬಂದಿರಿ, ಆದರೆ ಎಷ್ಟು ಬೇಗನೆ ಹೊರಬಂದಿರಿ. ಅಷ್ಟು ಬೇಗನೇ ನೋಡಿ ಮುಗಿಸಿದಿರಾ? ''ಅಷ್ಟು ನಿಧಾನವಾಗಿ ನೋಡಲು ಏನು ಮಹಾ ಇದೆ? ಗೈಡ್ ಬರುತ್ತೇನೆಂದ; ನಾವೇ ಬೇಡವೆಂದು ಹೇಳಿ ನೋಡಿಕೊಂಡು ಬಂದುಬಿಟ್ಟೆವು.” ಆಗ ನಾನು ಮನದಲ್ಲೇ ನಕ್ಕೆ, ಗೈಡ್ ಕರೆದುಕೊಂಡು ಹೋಗುವುದಕ್ಕೂ, ತಾವೇ ಹೋಗುವುದಕ್ಕೂ ಎಷ್ಟೊಂದು ವ್ಯತ್ಯಾಸವಿದೆ ಎಂದುಕೊಂಡೆ. ಗೈಡ್ ಇಲ್ಲದೆ ನೋಡುತ್ತಾ ಹೋದರೆ ಅವು ಕೇವಲ ಕಲ್ಲಿನ ಬೊಂಬೆಗಳು; ಗೈಡ್ ಇದ್ದು, ಅರ್ಥ ವಿವರಣೆ ನೀಡಿದರೆ ಅವೆಲ್ಲ ಜೀವಂತ ಕಲೆಯಿಂದ ತುಂಬಿ ತುಳುಕುವ ರೂಪಕಗಳು. ಒಂದೊಂದು ಶಿಲ್ಪದಲ್ಲೂ ಸೌಂದರ್ಯ, ಕಾವ್ಯ, ಕಲ್ಪನೆ, ಭಾವಸಂಪತ್ತು ತುಂಬಿ ತುಳುಕುತ್ತದೆ.

ಹೀಗೆ ಧರ್ಮಶಾಸ್ತ್ರಗಳು ಎನ್ನುವ ವಾಸ್ತುಶಿಲ್ಪಗಳನ್ನು ನೋಡುತ್ತಾ ಹೊರಟಾಗ ಗುರು, ಬೋಧಕ ಎಂಬ ಗೈಡ್ ಇಲ್ಲದಿದ್ದರೂ ಧರ್ಮದ ಮರ್ಮವನ್ನರಿಯುವುದು ಕಷ್ಟಸಾಧ್ಯ. ಕೆಲವು ಚಿತ್ರಗಳಿರುತ್ತವೆ. ಅವನ್ನು ಲೈಟ್ ಆ್ಯಂಗಲ್ ಮತ್ತು ರೈಟ್ ಆ್ಯಂಗಲ್‌ನಲ್ಲಿ ನೋಡಿದರೆ ಮಾತ್ರ ಅವು ಚೆನ್ನಾಗಿ ಗೋಚರವಾಗುತ್ತವೆ. ತಪ್ಪಾದ ಮತ್ತು ಅವಿಶಿಷ್ಟ ಬೆಳಕಿನ ಕೋನದಲ್ಲಿ ನೋಡಿದರೆ ಅವು ಏನೋ ಕತ್ತಲೆ ನೆರಳುಗಳ ಛಾಯೆಗಳಾಗಿ ಕಾಣುತ್ತವೆ. ಸರಿಯಾದ ಮಾರ್ಗದರ್ಶಿಯೊಬ್ಬನಿದ್ದರೆ ಅವನು ಸಂದರ್ಶಕರನ್ನು ವಿಶಿಷ್ಟ ಸ್ಥಾನದಲ್ಲಿ ನಿಲ್ಲಿಸಿ, ಸರಿಯಾದ ಬೆಳಕನ್ನು ಹಚ್ಚಿ ಚಿತ್ರದ ವಿವರಣೆ ನೀಡುವನು ಮಾರ್ಗದರ್ಶಿ ಇಲ್ಲದೆ ಚಿತ್ರ ವೀಕ್ಷಣೆಗೆ ಹೋಗುವ ಸಂದರ್ಶಕ ಚಿತ್ರಗಳಲ್ಲಿ ಸ್ವಾರಸ್ಯ ಕಾಣದೆ ವಾಪಸ್ಸು ಬರುವ ಸಂಭವವಿರುತ್ತದೆ. ಅದೇ ರೀತಿ ಸದ್ಗುರು ಮುಮುಕ್ಷುವಿನ ಹೃದಯಕ್ಕೆ ತರಬೇತಿ ನೀಡಿ ಅವನನ್ನು ಒಂದು ವಿಶಿಷ್ಟ ಮಟ್ಟದಲ್ಲಿ ನಿಲ್ಲಿಸಿ, ಜ್ಞಾನದ ಬೆಳಕನ್ನು ಧರ್ಮಶಾಸ್ತ್ರಗಳೆಂಬ ಚಿತ್ರಗಳ ಮೇಲೆ ಚೆಲ್ಲುತ್ತ, ಅರ್ಥ ವಿವರಣೆ ನೀಡುತ್ತ ಹೋಗುವನು. ಆಗ ಧರ್ಮಶಾಸ್ತ್ರಗಳ ಗೂಢಾರ್ಥ ಮತಿಗೆ ಅಳವಡುತ್ತದೆ. ಅಚ್ಚ ಕನ್ನಡದ ತಿಳಿಭಾಷೆಯಲ್ಲಿರುವ ಧರ್ಮಪಿತ ಬಸವಣ್ಣನವರ ವಚನ :

ತಂದೆ ನೀನು, ತಾಯಿ ನೀನು;
ಬಂಧು ನೀನು ಬಳಗ ನೀನು;
ನೀನಲ್ಲದೆ ಮತ್ತಾರೂ ಇಲ್ಲ;
ಕೂಡಲಸಂಗಮದೇವಾ, ಹಾಲಲ್ಲದ್ದು ನೀರಲ್ಲದ್ದು.'


ಎಂಬ ವಚನವು ಸಾಮಾನ್ಯವಾಗಿ ಅರ್ಥವಾಗದಿರದು. ಆದರೆ ಇಂಥದೊಂದು ವಚನದಲ್ಲಿ ದೇವರನ್ನು ಕುರಿತು ವ್ಯಕ್ತಿಗತ ಸಂಬಂಧವನ್ನೂ ನಾವು ಕಾಣಬಹುದು. ಪರಮಾತ್ಮನು ಈ ಜಗತ್ತಿನ ತಂದೆ, ಮಹಾಕರ್ತೃ. ಅವನು ಜಗತ್ತಿಗೆ ನಿಮಿತ್ತ ಕಾರಣನಾದ ತಂದೆಯು ಮಾತ್ರವಲ್ಲ, ಅದರ ರಕ್ಷಣೆಯ ಹೊಣೆ ಹೊತ್ತ ತಾಯಿಯೂ ಹೌದು. ಹೀಗೆ ತಂದೆಯಾಗಿ ನಿರ್ಗುಣನೂ ಅವ್ಯಕ್ತನೂ (impersonal) ಆಗಿರುವ ದೇವನು ತಾಯಿಯ ಕರ್ತವ್ಯ ಮಾಡುತ್ತ ಸಗುಣನೂ, ವ್ಯಕ್ತನೂ (personal) ಆಗಿದ್ದಾನೆ. ಇಷ್ಟೇ ಅಲ್ಲ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಬಂಧುವೂ, ಸ್ನೇಹಿತನೂ ಆಗಿದ್ದಾನೆ ಪರಮಾತ್ಮನು; ಹೀಗೆ ತಂದೆ, ತಾಯಿ, ಬಂಧು ಬಳಗ ಎಂಬಲ್ಲಿ ದೊಡ್ಡದೊಂದು ಸಿದ್ಧಾಂತವಿದೆ.

ಲೇಸು ಬಯಸದ ಧರ್ಮ, ಕಿಲುಬು ಕಾಸಿಗೂ ಕಡೆಯಯ್ಯಾ;
ಸಲ್ಲದಯ್ಯಾ ಇಲ್ಲಿ, ಒಲ್ಲನಯ್ಯಾ ಶಿವನು;
ಕೊಲ್ಲುವ ಧರ್ಮ, ಜೀವವ ಮೆಲ್ಲುವ ಧರ್ಮ,
ಅನುಯಾಯಿಯ ಬೆಳೆಯಗೊಡದ ಧರ್ಮ
ಇದ್ದೇನು ಫಲ ಶಿವಶಿವಾ
ನಾಶವಾದರೇನು ಹಾನಿಯಯ್ಯಾ ಸಚ್ಚಿದಾನಂದಾ? -ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿ

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಇಷ್ಟಲಿಂಗ ಕುರಿತಾಗಿ ಸಮಸ್ಯೆ ? ಸಮಾಧಾನ ! ವೈಜ್ಞಾನಿಕ ಯುಗದಲ್ಲಿ ಧರ್ಮದ ಅವಶ್ಯಕತೆ Next