ಕಾಯಕ-ದಾಸೋಹ | ಕಾಯಕ ಸಿದ್ಧಾಂತ |
ತ್ರಿವಿಧ ದಾಸೋಹ |
✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ
*
ಆಡಿದಡೇನು, ಹಾಡಿದಡೇನು ಓದಿದಡೇನು,
ತ್ರಿವಿಧ ದಾಸೋಹವಿಲ್ಲದನ್ನಕ್ಕ ?
ಆಡದೆ ನವಿಲು, ಹಾಡದೆ ತಂತಿ, ಓದದೇ ಗಿಳಿ ?
ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ
-ಬ.ವ.
ವಚನಗಳನ್ನು, ಧರ್ಮಶಾಸ್ತ್ರಗಳನ್ನು ಅಭಿನಯ ರೂಪದಲ್ಲಿ ತೋರಿಸಿ ಮೆಚ್ಚುಗೆ ಪಡೆಯಬಹುದು, ಸ್ವರಬದ್ಧವಾಗಿ ಹಾಡಿ ಎಲ್ಲರಿಗೂ ಕರ್ಣಾನಂದ ಉಂಟು ಮಾಡಬಹುದು, ಚೆನ್ನಾಗಿ ಓದಬಹುದು, ಬರೆಯಬಹುದು. ಇವೆಲ್ಲ ಇದ್ದು ಏನು ಪ್ರಯೋಜನ, ತ್ರಿವಿಧ ದಾಸೋಹವಿಲ್ಲದಿದ್ದರೆ, ನವಿಲೂ ಚೆನ್ನಾಗಿ ನರ್ತಿಸಿ, ಅಭಿನಯ ನೀಡುವುದು, ವೀಣೆ ತಂಬೂರಿಗಳಲ್ಲಿರುವ ತಂತಿಗಳೂ ಚೆನ್ನಾಗಿ ಹಾಡುತ್ತವೆ. ಗಿಳಿಯೂ ಧರ್ಮ ಶಾಸ್ತ್ರವನ್ನು ಓದುತ್ತದೆ, ಏನು ಪ್ರಯೋಜನ ? ಇವಾವೂ ತಾವು ಮಾಡುವ ಕ್ರಿಯೆಯ ಮರ್ಮವನ್ನು ತಿಳಿದಿರುವುದಿಲ್ಲ. ಅವುಗಳಲ್ಲಿ ಭಕ್ತಿಯು ಇರುವುದಿಲ್ಲ.
ಸರ್ವಭೂತಾತ್ಮನೆಂಬ ಮಾತಿನ ಮಾತಿನಲ್ಲಿ ಹೋಗದು
ತನು-ಮನ- ಧನವ ಸವೆಸಲೇಬೇಕು.
ನಮ್ಮ ಕೂಡಲಸಂಗಮದೇವನ ಶರಣರಿಗೆ ಅಂಜಲೇ ಬೇಕು.
- ಬ.ವ.
'ಪರಮಾತ್ಮನು ಎಲ್ಲರಲ್ಲಿಯೂ ಚೈತನ್ಯ ಸ್ವರೂಪನಾಗಿ ನೆಲೆಸಿದ್ದಾನೆ.'' ಎಂದು ಬರೀ ಮಾತನಾಡಿದರೆ ಸಾಲದು; ಆ ಪರಮಾತ್ಮನ ಅಂಶಕ್ಕೆ ಎಷ್ಟಾದರೂ ಒಳ್ಳೆಯದು, ಉಪಕಾರ ಮಾಡಲೇಬೇಕು.''
ತನು-ಮನ-ಧನವ ಹಿಂದಿಕ್ಕಿಕೊಂಡು
ಮಾತಿನ ಬಣಬೆಯ, ಒಳಟೆಯ ನುಡಿವರು,
ನೀವೆಲ್ಲ ಕೇಳಿರಿ ತಲೆಹಿಲ್ಲದ ಕೋಲು ಹೊಳ್ಳು ಹಾರುವುದಲ್ಲದೆ
ಗುರಿಯ ತಾಗಬಲ್ಲದೆ ?
ಮಾಯಾಪಾಶ ಹಿಂಗಿ, ಮನದ ಗಂಟು ಬಿಡದನ್ನಕ್ಕ
ಕೂಡಲಸಂಗಮದೇವನೆಂತೊಲಿವನಯ್ಯ ?
- ಬ.ವ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಗಾದೆ ಇದೆ. ನನಗೂ-ನಿನಗೂ ಎಷ್ಟೇ ವಿಶ್ವಾಸ ಇರಲಿ ಮೀನಿನ ಬುಟ್ಟಿಗೆ ಮಾತ್ರ ಕೈ ಹಾಕಬೇಡ”. ಎಂದು. ಹಾಗೆ, ತನು-ಮನ-ಧನ ಸ್ವಲ್ಪವೂ ಸವೆಯದೆ, ಬರಿ ತತ್ತ್ವಶಾಸ್ತ್ರ ಆತ್ಮಜ್ಞಾನ, ದಯೆ, ಮಾನವೀಯತೆ ಕುರಿತು ಮಾತಿನ ಬಣವೆಯ ಏರಿಸುವ ಜನರು ಇರುತ್ತಾರೆ. ಇವರುಗಳ ಮಾತು-ಬರಹ ತಲೆಹಿಲ್ಲದ ಕೋಲಿನಂತೆ, ಕೋಲು, ಬಾಣ ಯಾವುದೇ ಇರಲಿ, ಅದಕ್ಕೆ ತಲೆ ಇರಬೇಕು. ಇಲ್ಲವಾದರೆ ಗುರಿಯ ಕಡೆಗೆ ಎಸೆಯಲು ಸಾಧ್ಯವಿಲ್ಲ, ಬರೀ ನಾನು, ನನ್ನದು, ನನಗೆ ಎಂಬ ಮಮಕಾರ ಹಿಂಗಿ, ಮನಸ್ಸಿನ ಸ್ವಾರ್ಥದ ಗಂಟು ಬಿಡದ ಹೊರತು ದೇವರು ಒಲಿಯನು.
ಇದಕ್ಕೆ ಉತ್ತಮ ಉದಾಹರಣೆ ಕೆಲವು ಬುದ್ದಿ ಜೀವಿಗಳು ಎಂದು ಭಾವಿಸಿಕೊಂಡವರು. ಅವರು ಧರ್ಮ-ಸಮಾಜಗಳಿಗಾಗಿ ತನುವಿನಿಂದಲೂ ದುಡಿಯರು, ಮನದಿಂದಲೂ ದುಡಿಯರು, ಧನವನ್ನಂತೂ ಎಂದು ವ್ಯಯಿಸರು. ಸಾಮಾನ್ಯವಾಗಿ ಕೆಲವು ಜನರಂತೂ ಸಾಹಿತ್ಯವನ್ನು ಕೊಂಡು ಓದಬೇಕು. ಸಾಹಿತಿ ಬದುಕಬೇಕು'' ಎಂದು ನಿರರ್ಗಳವಾಗಿ ಮಾತನಾಡುತ್ತಾರೆ. ತಾವು ಎಂದೂ ಪುಸ್ತಕ ಕೊಂಡು ಓದುವುದಿಲ್ಲ; ಯಾರಾದರೂ ಉಚಿತ ಪ್ರತಿ ಕೊಟ್ಟರೇನೇ ಓದುವುದು. ಇದಕ್ಕೊಂದು ಅತ್ಯುತ್ತಮ ಉದಾಹರಣೆ ಕೊಡುತ್ತೇನೆ. ಮೈಸೂರಿನಿಂದ ಪ್ರಕಟವಾಗುವ ಶುದ್ಧ ಸಾಹಿತ್ಯ-ಗ್ರಂಥಲೋಕ' ಎನುವ ಪತ್ರಿಕೆ ಆರ್ಥಿಕ ದುಃಸ್ಥಿತಿ ಎದುರಿಸುವ ಬಗ್ಗೆ, ಆದ್ದರಿಂದ ಅದನ್ನು ನಿಲ್ಲಿಸಬೇಕು ಎಂಬ ದುಃಖಪೂರ್ಣ ಅಭಿಪ್ರಾಯದೊಡನೆ ಅನೇಕ ಪತ್ರಗಳು ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾದವು. ಓದಿ ನನಗಂತೂ ಸಖೇದಾಶ್ಚರ್ಯವಾಯಿತು. ಏಕೆಂದರೆ ಇಂದು ಕನ್ನಡಕ್ಕಾಗಿ ಪ್ರಾಣಕೊಡುವ ಭಾಷಣಕಾರರು `ಎಷ್ಟೊಂದು ಜನ ಹುಟ್ಟಿದ್ದಾರೆ. ಅವರ ಪ್ರಾಣ ಅಮೂಲ್ಯ ; ಅವರ ದೇಹದಲ್ಲಿಯೇ ಅದಿರಲಿ, ಜೇಬಿನಿಂದ ತೆಗೆದು ಚಂದಾ ಕೊಟ್ಟು ಪತ್ರಿಕೆಯನ್ನು ಉಳಿಸಿಕೊಳ್ಳಬಹುದಲ್ಲವೆ ? ವಿಶ್ವವಿದ್ಯಾಲಯದಿಂದ ಹೊರಬಂದು ಉಪನ್ಯಾಸಕರು ಪ್ರಾಧ್ಯಾಪಕರು ಆಗಿರುವವರು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷಾಪ್ರವೀಣರಾಗಿರುವವರೆಲ್ಲ ಚಂದಾ ತುಂಬಿದರೆ, ಆ ಪತ್ರಿಕೆ ಉಳಿಯದೆ ? ಶುದ್ಧ ಸಾಹಿತ್ಯಕ್ಕೆ ಪತ್ರಿಕೆ ಜನಸಾಮಾನ್ಯರಿಗೆ, ಅದೇ ವರ್ಗದಲ್ಲಿ ಬರುವ ಕನ್ನಡ ಅಧ್ಯಾಪಕರುಗಳ ಪತ್ನಿಯರಿಗೆ (ಅವರಿಗೆ ಏನಿದ್ದರೂ ಕಥೆಗಳಿಂದ ತುಂಬಿ ತುಳುಕುವ ಪತ್ರಿಕೆಗಳು, ಕಾದಂಬರಿಗಳೂ ಬೇಕು) ಉಪಯುಕ್ತವೆನಿಸದು. ಆದ್ದರಿಂದ ಅವರು ಕೊಳ್ಳರು. ಕನ್ನಡದ ಉಪನ್ಯಾಸಕರಾಗಿ ಅದರಿಂದಲೇ ಉಪಜೀವನ ಮಾಡುವವರಿಗೆ, ಅಂಥದೊಂದು ಪತ್ರಿಕೆ ಉಳಿಸಿಕೊಳ್ಳಲು ಆಗದೆ ? ಅನೇಕರು ಸಮತೆ ಮಾನವೀಯತೆ ಬಗ್ಗೆ ದೊಡ್ಡ ಗ್ರಂಥಗಳನ್ನು ಬರೆಯುತ್ತಾರೆ. ಅನುವಾದಿಸುತ್ತಾರೆ. ಅವರ ಜೀವನದಲ್ಲಿ ಒಂದಾದರೂ ಮಾನವೀಯ ಕೆಲಸಗಳನ್ನು ಮಾಡಿದ ದಾಖಲೆ ಇರದು. ಅಂಥ ಕೆಲಸಗಳನ್ನು ಮಾಡುವವರೆಲ್ಲ ಸಾಮಾನ್ಯವಾಗಿ, ಜಗತ್ತಿನ ದುಃಖ ಕಂಡು ಮರುಗುವ ಭಾವುಕ ಜನರು.
ಆದ್ದರಿಂದಲೇ ಬಸವಣ್ಣನವರು ತ್ರಿವಿಧ ದಾಸೋಹದ ಬಗ್ಗೆ ಒತ್ತಿ ಒತ್ತಿ ಹೇಳುವುದು. "ತನು-ಮನ-ಧನ ಮೂರು ದಾಸೋಹಗಳಲ್ಲಿ ನಿರತವಾಗಬೇಕು.” ಎಂದು. “ಕಾಯಕ (ದಾಸೋಹ)ದ ಬಗ್ಗೆ ಮಾತನಾಡಿದರೆ ಕಾಯಕ ಮಾಡಿದಂತಾಗದು ನಡೆಯಿರಿ.'' ಎಂದು ಪತಿಯನ್ನು ಎಚ್ಚರಿಸಿ ಕಳಿಸುವ ಲಕ್ಕಮ್ಮನ ವಾಣಿಯಲ್ಲಿ ಈ ಸಂದೇಶವಿದೆ. ಸಿಖ್ಖರಲ್ಲಿ ಒಂದು ಆಚರಣೆ ಇದೆ. ಗುರುದ್ವಾರ ದರ್ಶನಕ್ಕೆ ಆ ಜನರು ಬರುತ್ತಾರೆ. ದರ್ಶನಾನಂತರ ಅವರು ಎಷ್ಟೇ ದೊಡ್ಡವರಿರಲಿ ಕೆಲವು ಸೇವೆ ಮಾಡುತ್ತಾರೆ. ಗುರುದ್ವಾರದೊಳಗೆ ಹೋಗುವಾಗ ಸಂದರ್ಶಕರು ಬಿಟ್ಟು ಹೋದ ಚಪ್ಪಲಿ, ಬೂಟುಗಳನ್ನು ಶುಭ್ರಗೊಳಿಸುವುದು ; ಕಟ್ಟಡದ ಕೆಲಸ ನಡೆಯುತ್ತಿದ್ದರೆ, ಇಟ್ಟಿಗೆ ಹೊರುವುದು ; ಸಿಮೆಂಟ್ ಕಲೆಸುವುದು, ಹೆಣ್ಣುಮಕ್ಕಳು ಅಡಿಗೆ ಮನೆಗೆ ಹೋಗಿ ಚಪಾತಿ ಮಾಡುವುದು, ಗುರುದ್ವಾರವನ್ನು ಒರೆಸುವುದು. ತೊಳೆಯುವುದು, ಕಾಳು ಹಸನು ಮಾಡುವುದು ಮುಂತಾಗಿ ಮಾಡುತ್ತಾರೆ. ನೋಡಿ ನಮಗೆ ಆಶ್ಚರ್ಯವಾಯಿತು. ಇದು ತನು ದಾಸೋಹ.
ಧರ್ಮಬೋಧೆ, ಸಾಹಿತ್ಯ ಬರೆಯುವುದು, ಉಪನ್ಯಾಸ ಇವೆಲ್ಲ ಮನ ದಾಸೋಹ. ಹಣವನ್ನು ನೀಡಿ ಉತ್ತಮ ಕಾರ್ಯಗಳಿಗೆ ಪ್ರೇರಣೆ ನೀಡುವುದು ಧನ ದಾಸೋಹ. ಬಹಳ ಜನ ಶ್ರೀಮಂತರು ಧನ ದಾಸೋಹ ಮಾಡಿ ತೃಪ್ತಿ ಪಟ್ಟುಕೊಳ್ಳುವರೇ ವಿನಾ ತಾವು ಆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತನು ಕಾಯಕ-ದಾಸೋಹ-ಮಾನವೀಯತೆ ಮುಂತಾಗಿ ಸಾಹಿತ್ಯ ಬರೆಯುವ ಅನೇಕರು ಅಷ್ಟೇ ಸಮಾಜದ ಮಧ್ಯೆ ಬೆರೆತು ಎಂದೂ ತನು ದಾಸೋಹ ಮಾಡರು, ಇನ್ನು ಧನ ದಾಸೋಹದ ವಿಷಯ ಅವರ ಬಳಿ ಎತ್ತಬಾರದು. ಇಡೀ ಜೀವಮಾನ ಪರ‍್ಯಂತರ ತಗೊಂಡು ಗೊತ್ತೇ ವಿನಾ ಕೊಟ್ಟುಗೊತ್ತಿರದು.
ಇನ್ನು ಕೆಲವರು ಹೇಳುತ್ತಾರೆ. “ನಾನೊಬ್ಬ ವೈದ್ಯ, ನನ್ನ ಕೆಲಸವನ್ನು ನಾನು ನಿಷ್ಠೆಯಿಂದ ಮಾಡುತ್ತೇನೆ, ಅದೇ ನನಗೆ ಪೂಜೆ ಇನ್ನು ಪ್ರತ್ಯೇಕ ಪೂಜೆ ಏಕೆ ? ನಾನು ಪ್ರಾಮಾಣಿಕನಿರುವೆ. ನನಗೆ ದಾನ-ದಾಸೋಹ ಮಾಡುವ ಅಗತ್ಯವಿಲ್ಲ'' ಅಂಥವರಿಗೆ ನಾನು ಹೇಳುವೆ, ''ವೈದ್ಯರಾಗಿ ಹೀಗೆ ಹೇಳುವುದೆ ? ವೈಟಮಿನ್ 'ಎ' ಒಂದೇ ಸಾಕು ಬೇರಿನ್ನೇಕೆ ? ವೈಟಮಿನ್ 'ಡಿ' ಇದ್ದರೆ ಸಾಲದೆ 'ಬಿ' ಏಕೆ ಎನ್ನುವಿರಾ? ಎಲ್ಲ ಅನ್ನಾಂಗಗಳೂ ಶರೀರಕ್ಕೆ ಅತ್ಯಗತ್ಯ ಎಂದು ನೀವು ಹೇಳುವಂತೆ ನಾವು ಹೇಳುತ್ತೇವೆ. ಕಾಯಕ, ಅನುಭಾವ ಅರ್ಚನೆ ಮೂರೂ ಬೇಕು ಎಂದು ; ತನುದಾಸೋಹ, ಮನದಾಸೋಹ, ಧನದಾಸೋಹ ಮೂರೂ ಇರಬೇಕೆಂದು.''
ಗಿಡ-ಪ್ರಾಣಿ ಮುಂತಾದುವುಗಳಲ್ಲಿ ಒಂದು ಚಕ್ರವಿದೆ. ಅವು ತಾವು ಪ್ರಕೃತಿಯಿಂದ ಪಡೆದ ಋಣವನ್ನು ತೀರಿಸದೆ ಹೋಗುವುದಿಲ್ಲ. ಹಾಗೆ ಮನುಷ್ಯನು ಈ ಪ್ರಕೃತಿಯಿಂದ, ಸಮಾಜದಿಂದ ಋಣವನ್ನು ಪಡೆಯುತ್ತಾನೆ, ಅದನ್ನು ತೀರಿಸಲು ಇರುವ ವಿಧಾನಗಳೇ ತನು-ಮನ-ಧನಗಳಿಂದ ಮಾಡುವ ತ್ರಿವಿಧ ದಾಸೋಹ. ಒಬ್ಬ ಆಂಗ್ಲ ವಿದ್ವಾಂಸ ಹೇಳುವನು, “ಒಬ್ಬ ವ್ಯಕ್ತಿಯ ಜೀವನ-ಮಟ್ಟ ಅವನು ಎಷ್ಟು ಗಳಿಸುವನು ಎಂಬುದರ ಮೇಲಿದ್ದರೆ, ಜೀವನದ ಮಟ್ಟ ಎಷ್ಟು ಕೊಡುವನು ಎಂಬುದರ ಮೇಲೆ ಇರುತ್ತದೆ'' ಎಷ್ಟು ಗಳಿಸಿದರೂ ತನ್ನ ವೈಯಕ್ತಿಕ ಸುಖ ಭೋಗಕ್ಕೇ ಕಳೆಯುವವನಿಂದ ಸಮಷ್ಟಿಗೆ ಏನು ಪ್ರಯೋಜನವಿದೆ ?
ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.
ಕಾಯಕ-ದಾಸೋಹ | ಕಾಯಕ ಸಿದ್ಧಾಂತ |