- ✍ ಡಾ. ಎನ್.ಜಿ ಮಹಾದೇವಪ್ಪ
October 2, 2018.
ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕು
ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕು ಎಂಬ ಚಳುವಳಿಯು ಮೊದಲು ಕೇವಲ ಗಾಳಿಯಾಗಿದ್ದು ಇತ್ತೀಚೆಗೆ ಬಿರುಗಾಳಿಯ ಸ್ವರೂಪ ಪಡೆದಿರುವುದು ಕೆಲವು ಸನಾತನಿಗಳಿಗೆ ಹೇಗೋ ಹಾಗೆ ಕೆಲವು ವೀರಶೈವರಿಗೂ ಸಹಿಸಲಸಾಧ್ಯವಾಗಿದೆ. ಲಿಂಗಾಯತ ಚಳುವಳಿಗೆ ಪ್ರಬಲವಾದ ತಾರ್ಕಿಕ ಸಮರ್ಥನೆಯಿದೆ, ಸತ್ಯವಾದ ಆಧಾರಗಳಿವೆ. ಆದರೆ ಚಳುವಳಿಯನ್ನು ಸಹಿಸಲಾಗದವರ ಬಳಿ ತರ್ಕವೂ ಇಲ್ಲ, ಸರಿಯಾದ ಆಧಾರಗಳೂ ಇಲ್ಲ. ಅಂಥ ಕೆಲವರಿಗೆ ತಮ್ಮ ದೌರ್ಬಲ್ಯದ ಅರಿವಾಗಿ, ಹತಾಶರಾಗಿದ್ದಾರೆ. ಅವರು ಕೆಲವು ವಿಚಿತ್ರ ರೀತಿಯ ವಾದಗಳನ್ನು ಮಂಡಿಸುವ ಮೂಲಕ ಜನಸಾಮಾನ್ಯರನ್ನು ಮರುಳು ಮಾಡಲು ಯತ್ನಿಸುತ್ತಿದ್ದಾರೆ. ಅಂಥ ವಾದಗಳಲ್ಲಿ ಮುಖ್ಯವಾದ ಮೂರನ್ನು ಪರಿಶೀಲಿಸೋಣ.
ಮಗಳು ಗಂಡನ ಮನೆಗೆ ಹೋಗಿ ಆಮೇಲೆ ತವರು ಮನೆಯನ್ನೇ ದ್ವೇಷಿಸಿದಂತೆ,
ಲಿಂಗಾಯತರು ಹಿಂದೂಧರ್ಮದಿಂದ ಹೊರಗೆ ಹೋಗಿ ಹಿಂದೂಧರ್ಮದ ವಿರೋಧಿಗಳಾಗಿದ್ದಾರೆ.
ಈ ವಾದದ ಮೊದಲನೆಯ ಭಾಗ ಸತ್ಯ. ಬೌದ್ಧಧರ್ಮ ಹಿಂದೂ (ವೈದಿಕ) ಧರ್ಮದಿಂದ ಪ್ರತ್ಯೇಕವಾದಂತೆ ಲಿಂಗಾಯತಧರ್ಮವೂ ಪ್ರತ್ಯೇಕವಾಯಿತು. ಆದರೆ ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಮೊದಲು ಮಗಳು ತವರು ಮನೆಯಲ್ಲಿದ್ದುದು ಸತ್ಯ. ಆದರೆ ಮೊದಲು ಲಿಂಗಾಯತ ಧರ್ಮ ಹಿಂದೂ ಧರ್ಮದಲ್ಲಿತ್ತು ಎಂಬುದು ಅಸತ್ಯ. ಯಾವತ್ತು ಬಸವಾದಿ ಶರಣರು ವೈದಿಕ ಸಿದ್ಧಾಂತಗಳನ್ನು ಮತ್ತು ಆಚರಣೆಗಳನ್ನು ತಿರಸ್ಕರಿಸಿ ತಮ್ಮವೇ ಆದ ಸಿದ್ಧಾಂತ ಮತ್ತು ಆಚರಣೆಗಳನ್ನು ರೂಪಿಸಿಕೊಂಡರೋ ಅಂದೇ ಅವರು ಲಿಂಗಾಯತರಾದರು ಮತ್ತು ಹಿಂದೂ(ವೈದಿಕ)ಧರ್ಮದಿಂದ ಹೊರಬಿದ್ದರು. ಅವರು ಲಿಂಗಾಯತರೂ ಆಗಿದ್ದರು, ವೈದಿಕಧರ್ಮದಲ್ಲೇ ಇದ್ದರು ಎಂಬುದು ಪಕ್ಕಾ ಸುಳ್ಳು. ಆದುದರಿಂದ ಮಗಳು ತವರು ಮನೆಯಿಂದ ಹೊರಬಿದ್ದಂತೆ ಲಿಂಗಾಯತರು ವೈದಿಕಧರ್ಮದಿಂದ ಹೊರಬಿದ್ದು ಅದರ ವಿರುದ್ಧ ಹೋರಾಡುತ್ತಿದ್ದಾರೆ ಎಂಬುದು ಮುಗ್ಧರ ಭಾವನೆಗಳನ್ನು ಕೆರಳಿಸುವ ಸುಳ್ಳೇ ಹೊರತು, ಸತ್ಯವಲ್ಲ. ಕೆಲ ಲಿಂಗಾಯತರು ಹಳೆಯ ವೈದಿಕ ಪದ್ಧತಿಗಳನ್ನು ಒಪ್ಪಿಕೊಂಡು ವೀರಶೈವರಾದುದು ನಿಜ. ಆ ವೀರಶೈವರು ಇಂದಿಗೂ ವೇದಪ್ರಿಯರು.ಲಿಂಗಾಯತಧರ್ಮವು ಹುಟ್ಟಿನಿಂದಲೇ ಅವೈದಿಕವಾಗಿದ್ದರೂ ಅದು ಹಿಂದೂಗಳನ್ನು ದ್ವೇಷಿಸಿಲ್ಲ. ಕೈ ಮತ್ತು ಕಾಲು ಬೇರೆ ಬೇರೆ ಎಂದಾಕ್ಷಣ ಹೇಗೆ ಅವುಗಳಲ್ಲಿ ದ್ವೇಷವಿದೆ, ವೈರತ್ವವಿದೆ ಎಂದಾಗುವುದಿಲ್ಲವೋ ಹಾಗೆ ಲಿಂಗಾಯತರು ಹಿಂದೂ(ವೈದಿಕ)ಗಳÀಲ್ಲ ಎಂದರೆ, ಲಿಂಗಾಯತರು ಹಿಂದೂಗಳನ್ನು ದ್ವೇಷಿಸುತ್ತಾರೆ ಎಂದರ್ಥವಾಗುವುದಿಲ್ಲ. ಕೆಲವು ಹಿಂದೂಗಳು ಮತ್ತು ಕೆಲವು ಲಿಂಗಾಯತರ ಮಧ್ಯೆ ದ್ವೇಷವಿರಬಹುದು, ಆದರೆÀ ಅದರ ಕಾರಣ ಬೇರೆ. ಕಾಲಿನ ಮೇಲೆ ಸೊಳ್ಳೆ ಕುಳಿತಾಗ, ಕೈ ನಾನು ಕಾಲಲ್ಲ, ನಾನೇಕೆ ಅದನ್ನು ಓಡಿಸಲಿ ಎನ್ನದೆ, ಅದನ್ನು ಓಡಿಸುತ್ತದೆ. ಅದೇ ರೀತಿ ಭಾರತದ ಮೇಲೆ, ಭಾರತೀಯ ಸಂಸ್ಕೃತಿಯ ಮೇಲೆ ಅನ್ಯರ ದಾಳಿ ನಡೆದಾಗ, ಎಲ್ಲರಂತೆ ಲಿಂಗಾಯತರೂ ಹೋರಾಡಿದ್ದಾರೆ.ಆದರೆ ಇದೇ ಮಾತನ್ನು ‘ವೀರ’ಶೈವರ ಬಗ್ಗೆ ಹೇಳುವುದು ಕಷ್ಟ. ಬಸವಪುರಾಣ ಮತ್ತು ಹರಿಹರನ ರಗಳೆಗಳನ್ನು ಓದಿದವರಿಗೆ ವೀರಶೈವರು ಹೇಗೆ ವೈಷ್ಣವರನ್ನೂ ಜೈನರನ್ನೂ ದ್ವೇಷಿಸುತ್ತಿದ್ದರು, ಅವರೊಡನೆ ಹೇಗೆ ಪದೇ ಪದೇ ಕಾಳಗ ಮಾಡುತ್ತಿದ್ದರು ಎಂಬುದು ಗೊತ್ತಾಗುತ್ತದೆ. ಅದೇ ರೀತಿ ಹಿಂದೂಗಳು ಲಿಂಗಾಯತರನ್ನು ದ್ವೇಷಿಸುತ್ತಿದ್ದುದರಿಂದಲೇ ಕಲ್ಯಾಣಕ್ರಾಂತಿಯ ನಂತರ ಶರಣರು ದಿಕ್ಕಪಾಲಾಗಿ ಓಡಿದರು. ಆದರೆ ಹೀಗೆ ಲಿಂಗಾಯತರಿಗೆ ಅನ್ಯಾಯವಾದರೂ, ಅವರು ಹಿಂದೂಗಳಿಗೆ ಅನ್ಯಾಯ ಮಾಡಿದ ಉದಾಹರಣೆಗಳಿಲ್ಲ.
ಲಿಂಗಾಯತರು ಹಿಂದೂಗಳಲ್ಲ
ಎಂದು ವಾದಿಸತೊಡಗಿದರೆ ಮತ್ತು ಅವರು ತಮ್ಮ ವಾದದಲ್ಲಿ ಗೆದ್ದರೆ ಇತರರೂ (ಉದಾ: ಕುರುಬರು, ದೇವಾಂಗದವರು) ತಾವೂ ಹಿಂದೂಗಳಲ್ಲ ಎಂದು ವಾದಿಸಬಹುದು. ಹೀಗೆ ಪ್ರತಿಯೊಂದು ಜಾತಿಯವರೂ ಹಿಂದೂಧರ್ಮದಿಂದ ಪ್ರತ್ಯೇಕವಾದರೆ ಹಿಂದೂ ಧರ್ಮವೇ ಉಳಿಯುವುದಿಲ್ಲ. ಇದರ ಪರಿಣಾಮ ಭೀಕರ. ಮತ್ತೆ ಹಿಂದೂಗಳಲ್ಲದವರು ಭಾರತವನ್ನು ಆಳಬಹುದು. ಆದ್ದರಿಂದ ಅಹಿಂದೂಗಳು ಭಾರತವನ್ನು ಆಳಬಾರದು ಎನ್ನುವವರು ಲಿಂಗಾಯತರು ಹಿಂದೂಗಳಲ್ಲ ಎನ್ನಬಾರದು.
ಈ ವಿಚಿತ್ರ ವಾದಕ್ಕೆ ನಾವು ಎರಡು ರೀತಿಯ ಉತ್ತರ ಕೊಡಬಹುದು.
1. ಹಿಂದೆ ರಾಮಕೃಷ್ಣ ಮಠದವರು ಮತ್ತು ಸ್ವಾಮಿ ನಾರಾಯಣ ಪಂಥದವರು ತಾವು ಹಿಂದೂಗಳಲ್ಲ ಎಂದು ಸುಪ್ರೀಂ ಕೋರ್ಟಿನಲ್ಲಿ ವಾದಿಸಿದರು. ಬಾಲಗಂಗಾಧರ ತಿಲಕರು ಇವರ ವಿರುದ್ಧ ವಾದ ಮಾಡಿದರು. ಅವರ ವಾದದ ಆಧಾರದ ಮೇಲೆ ಆಗಿನ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದ ಶ್ರೀ ಗಜೇಂದ್ರಗಡ್ಕರ್ ಅವರು ವೇದ ಪ್ರಣೀತ ಬಹುದೇವತಾರಾಧನೆಯನ್ನೂ ಯಜ್ಞಯಾಗಾದಿಗಳನ್ನೂ ದೈವವನ್ನು ತಲುಪಲು ಹಲವಾರು ವಿಧಾನಗಳಿವೆ ಎಂಬ ವೈದಿಕ ಸಿದ್ಧಾಂತವನ್ನೂ ಒಪ್ಪಿಕೊಳ್ಳುವ ರಾಮಕೃಷ್ಣ ಮಠದವರೂ ಸ್ವಾಮಿನಾರಾಯಣ ಪಂಥದವರೂ ಹಿಂದೂಗಳೇ ಎಂದು ತೀರ್ಪಿತ್ತರು. ಈ ವಾದವನ್ನು ಒಪ್ಪಿಕೊಂಡರೆ ಕುರುಬರೂ, ಬ್ರಾಹ್ಮಣರೂ ದೇವಾಂಗದವರೂ ತಾವು ಹಿಂದೂಗಳಲ್ಲ ಎಂದು ವಾದಿಸುವುದು ತಪ್ಪಾಗುತ್ತದೆ.
ಲಿಂಗಾಯತ ಧರ್ಮ
ಬೇರೆ ಎಂದರೆ ಧರ್ಮವನ್ನು ಒಡೆಯುವುದು, ಸಮಾಜವನ್ನು ಒಡೆಯುವುದು. ಅದು ಪಾಪದ ಕೆಲಸ.
ಧರ್ಮವನ್ನು ಒಡೆಯುವುದು ಎಂದರೇನೆಂಬುದನ್ನು ಯಾರೂ ಸ್ಪಷ್ಟವಾಗಿ ಹೇಳುವುದಿಲ್ಲ. ಅಖಂಡವಾಗಿದ್ದ ಭಾರತವನ್ನು ಒಡೆದು ಒಂದು ಭಾಗವನ್ನು ಪಾಕಿಸ್ತಾನಕ್ಕೆ ಕೊಡಲಾಯಿತು. ಹಾಗೆಯೇ ಧರ್ಮವನ್ನು ಒಡೆಯಲು ಸಾಧ್ಯವೆ? ಹಿಂದೂಧರ್ಮದಿಂದ ಹೊರಬಂದ ಶರಣರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದುದು ಸತ್ಯ. ಆದರೆ ಲಿಂಗಾಯತರು ಪ್ರತ್ಯೇಕ ದೇಶವನ್ನು ಕೇಳಿಲ್ಲ. ಅವರು ಸಮಾಜವನ್ನು ಒಡೆದಿದ್ದಾರೆಯೇ? ಅದೂ ಇಲ್ಲ. ಸಮಾಜವನ್ನು ಒಡೆಯುವುದು ಎಂದರೆ ದ್ವೇಷವನ್ನು ಬಿತ್ತುವುದು ಎಂದರ್ಥವಾದರೆ ಲಿಂಗಾಯತರು ಕೋಮುವಾದಿ ದ್ವೇಷವನ್ನೂ ಬಿತ್ತಿಲ್ಲ. ಹಾಗಾದರೆ, ಸಮಾಜವನ್ನು ಒಡೆದರು ಎಂಬ ಆರೋಪಕ್ಕೆ ಅರ್ಥ ಇದೆಯೇ? ಊಹುಂ, ಇಲ್ಲ.
ವಿಪರ್ಯಾಸವೆಂದರೆ, ಲಿಂಗಾಯತರು ಸಮಾಜವನ್ನು ಒಡೆದರು ಎಂದು ಯಾರು ಪ್ರಲಾಪಿಸುತ್ತಿದ್ದಾರೋ ಅವರೇ ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆದಿರುವವರು. ಭಾರತದಲ್ಲಿ ಧಾರ್ಮಿಕ ಏಕತೆ, ಐಕಮತ್ಯ ಯಾವಾಗ ಇತ್ತು? ಈಗ 99 ಜಾತಿಗಳಿರುವ ಲಿಂಗಾಯತರಲ್ಲಿ ಬಸವೋತ್ತರ ಕಾಲದಲ್ಲಿ ಯಾವಾಗ ಏಕತೆಯಿತ್ತು? ಸಮಾಜದ ಏಕತೆಯ ಬಗ್ಗೆ (ಹುಸಿ) ಕಳಕಳಿ ತೋರಿಸುತ್ತಿರುವ ಇವರು ಲಿಂಗಾಯತ ಸಮಾಜವನ್ನು ಒಂದುಗೂಡಿಸುವ ಬಗ್ಗೆ ಯಾವ ಪ್ರಯತ್ನ ಮಾಡಿದ್ದಾರೆ? ಬಸವಕಾಲದಿಂದ ಹಿಡಿದು ಸುಮಾರು 19ನೆಯ ಶತಮಾನದ ಅಂತ್ಯದವರೆಗೆ ಲಿಂಗಾಯತರೆಲ್ಲರೂ ಅವಿದ್ಯಾವಂತರೇ ಆಗಿದ್ದರು. ವಿದ್ಯಾವಂತರಾದ ಗುರುಗಳು ಹೇಳಿದುದನ್ನು ಮಾತ್ರ ನಂಬುವ ಮುಗ್ಧರಾಗಿದ್ದರು. ಗುರುಗಳು ‘ಲಿಂಗಾಯತರೇ, ಜಾತಿ ಭೇದ ಮಾಡಬೇಡಿ, ಸಮಾಜವನ್ನು ಒಡೆಯಬೇಡಿ’ ಎಂದೇಕೆ ಬೋಧಿಸಲಿಲ್ಲ? ಲಿಂಗಾಯತರು ಧರ್ಮವನ್ನೂ ಸಮಾಜವನ್ನೂ ಒಡೆಯುತ್ತಿದ್ದಾರೆ ಎಂದು ಗೋಳಾಡುವ ಪಂಚಪೀಠದವರು ವಿರಕ್ತ ಪೀಠ ಮತ್ತು ಗೃಹಸ್ಥ ಪೀಠದವರೊಂದಿಗೆ ಏಕೆ ಒಂದಾಗಿಲ್ಲ? ಪಂಚಪೀಠದವರು ವಿರಕ್ತ ಪೀಠದವರಿಗಿಂತ ಹೇಗೆ ಮೇಲು? ತಾವೇ ಇತರರೊಂದಿಗೆ ಒಂದಾಗದ ಅವರು ಇತರರನ್ನು ಒಂದುಗೂಡಿಸಲು ಹೇಗೆ ಸಾಧ್ಯ? ಪ್ರಯತ್ನ ಮಾಡಿ ಸೋತಿದ್ದರೆ ಚಿಂತೆಯಿಲ್ಲ. ಆದರೆ ಅವರು ಪ್ರಯತ್ನವನ್ನೇ ಮಾಡಿಲ್ಲ. ಆದುದರಿಂದ ಈಗ ಕೆಲವು ಮಠಾಧೀಶರು ಮತು ಕೆಲವು ಚಿಂತಕರು ಬಸವಾದಿ ಶರಣರ ಸಿದ್ಧಾಂತಗಳ ಅಡಿಯಲ್ಲಿ ಲಿಂಗಾಯತರನ್ನು ಒಗ್ಗೂಡಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂಬುದನ್ನು ಅವರು ಶ್ಲಾಘಿಸಬೇಕೇ ಹೊರತು, ಸಮಾಜವನ್ನು ಒಡೆಯುತ್ತಿದ್ದಾರೆ ಎಂದು ಹುಸಿ ದೂಷಣೆ ಮಾಡಬಾರದು. ಜಾತಿತಾರತಮ್ಯವಿಲ್ಲದ, ಬಹುದೇವತಾರಾಧನೆಯಿಲ್ಲದ, ಯಜ್ಞಯಾಗಾದಿಗಳಿಲ್ಲದ ಹೊಸ ಸಮಾಜವನ್ನು ಹೊಸ ಧರ್ಮದ ಆಧಾರದ ಮೇಲೆ ಕಟ್ಟಬೇಕೆಂಬ ಬಸವೇಶ್ವರರ ಪ್ರಯತ್ನಕ್ಕೆ ಸನಾತನ ಹಿಂದೂಗಳು ಅಂದು ಅಡ್ಡಿ ಮಾಡಿದರು. ಈಗಲಾದರೂ ಆ ಪ್ರಯತ್ನವನ್ನು ಮುಂದುವರಿಸೋಣವೆಂದರೆ ವೀರಶೈವರು ಮತ್ತು ಕೆಲ ವಿರಕ್ತ ಸ್ವಾಮಿಗಳು ಸೇರಿಕೊಂಡು ಲಿಂಗಾಯತರು ಒಂದಾಗದಂತೆ ನೋಡಿಕೊಳ್ಳುತ್ತಿದ್ದಾರೆ. ವಿಪರ್ಯಾಸವೆಂದರೆ, ತಾನು ಲಿಂಗಾಯತನೋ ವೀರಶೈವನೋ ಎಂಬುದೇ ನನಗೆ ಗೊತ್ತಿಲ್ಲ ಎನ್ನುವ ಒಬ್ಬ ವೀರಶೈವ-ಲಿಂಗಾಯತ ಮುಖಂಡರು ಲಿಂಗಾಯತರೂ ವೀರಶೈವರೂ ಒಂದಾಗಬೇಕು ಎಂದು ಭಾಷಣ ಮಾಡುತ್ತಿದ್ದಾರೆ.
ಬಸವೇಶ್ವರರು ಸ್ಥಾಪಿಸಿದ ಅವೈದಿಕ ಧರ್ಮವನ್ನು (ಲಿಂಗಾಯತವನ್ನು) ಅನಂತರದ ಲಿಂಗಾಯತರು ತಮ್ಮದು ಅವೈದಿಕ (ಅಹಿಂದೂ) ಧರ್ಮ ಎಂಬ ಸಂಗತಿಯನ್ನು ಮರೆತರು. ಯೂರೋಪಿಯನ್ ಅಧಿಕಾರಿಗಳು ಆ ಸಂಗತಿಯನ್ನು ತಿಳಿಸಿಕೊಟ್ಟರೂ ಅದು ಸತ್ಯ ಸಂಗತಿ ಎಂಬುದನ್ನು ಅರಿತುಕೊಳ್ಳುವ ಬುದ್ಧಿಮತ್ತೆಯೂ ಅವರಿಗೆ ಇರಲಿಲ್ಲ. ಸಾಲದ್ದಕ್ಕೆ ತಾವು ಲಿಂಗೀ ಬ್ರಾಹ್ಮಣರು, ತಾವು ಮೇಲು ಎಂದು ಕರೆದುಕೊಳ್ಳುತ್ತಿದ್ದ ಕೆಲವರು ಉಳಿದವರು ಲಿಂಗಾಯತರು, ಕೀಳು ಎಂದು ಭೇದ ಮಾಡುತ್ತಾ ಬಂದರು. ಆದರೆ ಇಂದು ಲಿಂಗಾಯತರಿಗೆ ತಾವು ಬ್ರಾಹ್ಮಣರೂ ಅಲ್ಲ, ಶೂದ್ರರೂ ಅಲ್ಲ, ಹಿಂದೂಗಳೇ ಅಲ್ಲ, ಎಲ್ಲರೂ ಸಮಾನರು ಎಂಬ ಸತ್ಯದ ಅರಿವಾಗಿದೆ.
ಈಗಿನ ಯಾರೂ ಲಿಂಗಾಯತಕ್ಕೆ ಹೊಸದಾಗಿ ಅವೈದಿಕತೆಯನ್ನಾಗಲಿ ಪ್ರತ್ಯೇಕತೆಯನ್ನಾಗಲಿ ತುಂಬುತ್ತಿಲ್ಲ ಎಂಬುದನ್ನು ನೆನಪಿಡಬೇಕು. ಅದರಲ್ಲಿ ಮೊದಲೇ ಇದ್ದ ಅವೈದಿಕತೆಯನ್ನು ನಾವು ಕೇವಲ ಬಹಿರಂಗಗೊಳಿಸುತ್ತಿದ್ದೇವೆ. ಇದನ್ನು ಒಂದು ಸೂಕ್ತ ಉಪಮೆಯ ಮೂಲಕ ವಿವರಿಸೋಣ. ಒಬ್ಬ ಕುರುಬನಿಗೆ ಒಂದು ಸಿಂಹದ ಮರಿ ಸಿಕ್ಕಿತು. ಕುರಿಗಳ ಜೊತೆಗೇ ಬೆಳೆದ ಅದು ಕುರಿಯಂತೇ ವರ್ತಿಸತೊಡಗಿತು ಒಂದು ದಿನ ನೀರು ಕುಡಿಯಲು ಹೋದಾಗ ಒಂದು ದೊಡ್ಡ ಸಿಂಹವೂ ಬಂತು. ಆ ಸಿಂಹ ಘರ್ಜಿಸಿದಾಗ ಮರಿಸಿಂಹ ನೀರಿನಲ್ಲಿ ಕಂಡ ತನ್ನ ಪ್ರತಿಬಿಂಬವು ದೊಡ್ಡ ಸಿಂಹದಂತೆಯೇ ಇರುವುದನ್ನು ಗಮನಿಸಿ, ತಾನೂ ಘರ್ಜಿಸಿತು. ಆಗ ಅದಕ್ಕೆ ತಾನು ಕುರಿಯಲ್ಲ, ಸಿಂಹ ಎಂಬ ಮನವರಿಕೆಯಾಯಿತು. ಆದುದರಿಂದ ಈಗಿನ ಲಿಂಗಾಯತರು ತಾವು ಹಿಂದೂ ಧರ್ಮದಲ್ಲಿರುವ ಶೂದ್ರ ಕುರಿಗಳೊ ಅಥವಾ ಅವೈದಿಕ ಸಿಂಹಗಳೋ ಎಂಬುದನ್ನು ನಿರ್ಧರಿಕೊಳ್ಳಬೇಕು. ಒಂದು ಸತ್ಯವಂತೂ ಅನಿವಾರ್ಯವಾಗಿ ಪ್ರಕಟವಾಗುತ್ತದೆ: ಲಿಂಗಾಯತರನ್ನು ಕುರಿಗಳನ್ನಾಗಿ ಮಾಡಿದ್ದವರಿಗೆ ಅವರು ಸಿಂಹ ಎಂಬ ಮಾತು ಖಂಡಿತ ಹಿಡಿಸುವುದಿಲ್ಲ (ತಾವು ಕುರಿಗಳೋ ಸಿಂಹಗಳೋ ಎಂಬ ವ್ಯತ್ಯಾಸವೇ ಗೊತ್ತಿಲ್ಲದವರ ಬಗ್ಗೆ ಕನಿಕರವಿರಲಿ).
ಈಗ ಧರ್ಮವನ್ನು ಒಡೆಯುವ ವಿಚಾರಕ್ಕೆ ಬರೋಣ. ಲಿಂಗಾಯತರು ಹಿಂದೂಧರ್ಮವನ್ನು ಒಡೆದರು ಎಂಬ ಮಾತು ಸತ್ಯ ಎಂದೇ ತಿಳಿಯೋಣ. ಯಾಕೆ ಒಡೆಯಬಾರದು? ಕೆಲವು ಯೆಹೂದಿಗಳು ಏಸುವಿನ ಮುಖಂಡತ್ವದಲ್ಲಿ ಹೊರಬಂದು ಕ್ರಿಶ್ಚಿಯನ್ನರೆನಿಸಿಕೊಂಡರು. ಕೆಲವು ಹಿಂದೂಗಳು ಬುದ್ಧನ ಮುಖಂಡತ್ವದಲ್ಲಿ ಹೊರಬಂದು ಬೌದ್ಧರೆನಿಸಿಕೊಂಡರು. ಗುಲಾಮಗಿರಿಯನ್ನು ಸಹಿಸದ ವ್ಯಕ್ತಿ ಒಂದು ದಿನ ಸ್ವತಂತ್ರನಾಗಿ ತನ್ನದೇ ಆಸ್ತಿಪಾಸ್ತಿ ಮಾಡಿಕೊಂಡು ಸುಖವಾಗಿರುತ್ತಾನೆ. ಗುಲಾಮಗಿರಿ ಎಷ್ಟೇ ಅಮಾನುಷ ಅಥವಾ ಅಸಹನೀಯವಾಗಿದ್ದರೂ ಅದೇ ಸ್ಥಿತಿಯಲ್ಲಿ ಅವನು ಮುಂದುವರಿಯುವುದು ಧರ್ಮವೇ ಹೊರತು ಸ್ವತಂತ್ರನಾಗಿ ಹೊರ ಹೋಗುವುದು ಧರ್ಮವಲ್ಲ ಎಂದು ಕೆಲವರು ವಾದಿಸಬಹುದು. ಅಂಥವರೇ ಗುಲಾಮರಿಗೆ ಸ್ವಾತಂತ್ರ್ಯ ಕೊಡಬಾರದು ಎಂದು ವಾದಿಸುವವರು. ಅದೇ ರೀತಿ ಹೆಂಗಸರಿಗೂ, ಶೂದ್ರರಿಗೂ ಸ್ವಾತಂತ್ರ್ಯವಿಲ್ಲ, ಮೋಕ್ಷವಿಲ್ಲ ಎನ್ನುವವರಷ್ಟೇ ಶೂದ್ರರೂ ಅಸ್ಪೃಶ್ಯರೂ ಶೂದ್ರ ಅಸ್ಪೃಶ್ಯರಾಗಿಯೇ ಮುಂದುವರಿಯಬೇಕು, ಲಿಂಗಾಯತರಾಗಿ ವೈದಿಕ ಧರ್ಮದಿಂದ ಹೊರಗೆ ಹೋಗಬಾರದು ಎಂದು ಆಕ್ಷೇಪಿಸುತ್ತಾರೆ. ಭಾರತದಲ್ಲಿ ಬೌದ್ಧ ಧರ್ಮವನ್ನು ನಾಶಮಾಡಿದ ಅಂಥವರಿಗೆ ಲಿಂಗಾಯತ ಧರ್ಮವನ್ನು ನಾಶ ಮಾಡುವುದು ಸುದೈವದಿಂದ ಸಾಧ್ಯವಾಗಲಿಲ್ಲ. ಅದರ ಬದಲು ಲಿಂಗಾಯತರು ಶೂದ್ರ ಹಿಂದೂಗಳು ಎಂಬ ಭ್ರಮೆಯನ್ನು ಅವರ ತಲೆಗೆ ತಿಕ್ಕುತ್ತಾ ಬಂದರು.
ಹಿಂದೂಧರ್ಮದಿಂದ ಹೊರಬಂದುದರಿಂದ ಲಿಂಗಾಯತರಿಗೆ ಒಳ್ಳೆಯದಾಯಿತು; ಆದರೆ ಹಿಂದೂಗಳಿಗೆ ಯಾವ ನಷ್ಟವೂ ಆಗಿಲ್ಲ. ಆದುದರಿಂದ ಲಿಂಗಾಯತರಿಗೆ ಒಳ್ಳೆಯದಾಯಿತು ಎಂಬ ಕಾರಣಕ್ಕೆ ವೈದಿಕರು (ಹಿಂದೂಗಳು) ಅವರನ್ನು ವೈರಿಗಳಂತೆ ಕಾಣಬಾರದು; ಲಿಂಗಾಯತರಿಗೆ ಸ್ವಾತಂತ್ರ್ಯ ಕೊಡಿಸಿದ ಬಸವೇಶ್ವವರರ ಮಾನವತಾವಾದವನ್ನು ಉದಾರ ಹೃದಯದಿಂದ ಶ್ಲಾಘಿಸಬೇಕೇ ಹೊರತು ಖಂಡಿಸಬಾರದು.
ಆದರೆ ಇದರ ಅರ್ಥ ಮತ್ತು ಪ್ರಯೋಜನ ಏನೂ ಗೊತ್ತಿಲ್ಲದವರು, ತಾವು ವೀರಶೈವರೋ ಲಿಂಗಾಯತರೋ ಎಂಬುದೇ ಗೊತ್ತಿಲ್ಲ ಎಂದು ಘಂಟಾಘೋಷವಾಗಿ ಸಾರುವವರು ‘ಲಿಂಗಾಯತರು ಹಿಂದೂಗಳಲ್ಲ’ ಎನ್ನುವವರನ್ನು ಜಿನ್ನಾನಿಗೆ ಹೋಲಿಸಿ ತಮ್ಮನ್ನು ತಾವೇ ಅಪಹಾಸ್ಯ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಜಿನ್ನಾ ಗೊತ್ತು, ಭಾರತ ವಿಭಜನೆ ಗೊತ್ತು, ಆದರೆ ಲಿಂಗಾಯತವೂ ಗೊತ್ತಿಲ್ಲ, ವೀರಶೈವವೂ ಗೊತ್ತಿಲ್ಲ, ಒಡೆಯುವುದು ಎಂದರೇನು ಎಂಬುದು ಮೊದಲೇ ಗೊತ್ತಿಲ್ಲ.