ವೀರಶೈವ : ಮತವಲ್ಲ, ವ್ರತ | ಆಂಧ್ರದ ಆರಾಧ್ಯ ಜಂಗಮರ ಸವಾರಿ |
ವೀರಶೈವರೇ ಲಿಂಗಾಯತ ಸಮಾಜವನ್ನು ನುಂಗಬೇಡಿರಿ |
✍ ಡಾ. ಎಂ. ಎಂ. ಕಲಬುರ್ಗಿ.
ಇತ್ತೀಚೆಗೆ ಬೆಂಗಳೂರು ಪ್ರದೇಶದ ವಿದ್ವಾಂಸರು ವೀರಶೈವ ಲಿಂಗಾಯತಗಳು ಒಂದೇ ಎಂದು ಪುಸ್ತಕಗಳ ಮೂಲಕ ಪತ್ರಿಕೆಗಳ ಮೂಲಕ ವಾದಿಸುತ್ತಲಿದ್ದಾರೆ. ಲಿಂಗಾಯತವನ್ನು ವೀರಶೈವರ ತೆಕ್ಕೆಗೆ ತೆಗೆದುಕೊಂಡು ಪುರೋಹಿತರು ಈವರೆಗೆ ಮಾಡಿದ ಶೋಷಣೆ ಸಾಲದೆಂಬಂತೆ ಅವರು ಬರವಣಿಗೆ ಮುಂದುವರಿಸಿದ್ದಾರೆ. ೧೨ನೆಯ ಶತಮಾನದ ಲಿಂಗಾಯತ ಚಳುವಳಿಯಲ್ಲಿ ಸೇರಿಕೊಂಡ ಶೈವರು, ೧೪ನೆಯ ಶತಮಾನದಲ್ಲಿ 'ವೀರಶೈವ' ಹೆಸರಿನಿಂದ ತಲೆಎತ್ತಿ ನಿಂತರು. ಯಾವ ವೈದಿಕದಿಂದ ಬಸವಣ್ಣ ಹೊರಬಂದನೋ ಆ ವೈದಿಕವನ್ನು ಅವನ ಲಿಂಗಾಯತ ಸಿದ್ಧಾಂತದಲ್ಲಿ ಮಿಶ್ರಗೊಳಿಸುತ್ತ, ಇವೆರಡೂ ಒಂದೇ ಎಂಬ ಭ್ರಮೆ ಹುಟ್ಟಿಸುತ್ತ ಬಂದರು. ವಿಜಯನಗರ ಸಾಮ್ರಾಜ್ಯ ಸಂದರ್ಭ ಎನ್ನುವುದು ಲಿಂಗಾಯತದ ವೀರಶೈವೀಕರಣ ಕಾಲವಾಗಿ ಪರಿಣಮಿಸಿತು. ತರುವಾಯದ ಕೆಳದಿ ನಾಯಕರ ಸಂದರ್ಭ ವೀರಶೈವಮಯವಾಗಿ ನಿಂತಿತು. ಈ ಕೆಳದಿ ಸಂದರ್ಭದಲ್ಲಿ ಸೃಷ್ಟಿಯಾದ ಸಂಸ್ಕೃತ ಗ್ರಂಥಗಳನ್ನು ತಮ್ಮ ಸಾಹಿತ್ಯವೆಂದು ಲಿಂಗಾಯತರು ನಂಬುವಂತೆ ಮಾಡಿದರು. ಇದನ್ನು ಇನ್ನಷ್ಟು ಗಟ್ಟಿಗೊಳಿಸಿದುದು ೧೯-೨೦ ನೆಯ ಶತಮಾನಗಳ ಮಧ್ಯಕಾಲೀನ ಸಂಚಾರ ಸುಗಮತೆ ಮತ್ತು ಮುದ್ರಣ ಸೌಕರ್ಯ, ಮೇಲೆ ಹೇಳಿದ ಕೆಳದಿ ಸಂದರ್ಭದ ಸಾಹಿತ್ಯವನ್ನು-ರೈಲು ಮುಂತಾದ ಸಂಚಾರ ಸುಗಮತೆ ಕಾರಣವಾಗಿ ಕಾಶಿಗೆ ಹೋಗಿ ಅಭ್ಯಾಸ ಮಾಡುವವರ ಸಂಖ್ಯೆ ಬೆಳೆಯಿತು. ಮೈಸೂರು ಪ್ರದೇಶದ ಮುದ್ರಣ ಸೌಕರ್ಯ ಬೆಳೆಸಿಕೊಂಡ ಈ ಸಾಹಿತ್ಯ ದೊಡ್ಡ ಪ್ರಮಾಣದಲ್ಲಿ ಪ್ರಕಟವಾಗಿ ದಕ್ಷಿಣ-ಉತ್ತರ ಕರ್ನಾಟಕದಲ್ಲಿ ಹರಡಿತು. ಕಾಶಿಯಿಂದ ಮರಳಿ ಬಂದವರಲ್ಲಿ ಕೆಲವರು ಮಠಾಧಿಕಾರಿಗಳಾಗಿ, ಈ ಸವಲತ್ತು ಸಿಗದವರು ಸಂಸ್ಕೃತ ಪಾಠಶಾಲೆಗಳ ಶಾಸ್ತ್ರಿಗಳಾಗಿ ಕೆಳದಿ ವೀರಶೈವ ಸಾಹಿತ್ಯವನ್ನು ಬಲವಾಗಿ ಪ್ರಚಾರ ಮಾಡಿದರು. ಹೀಗೆ ಲಿಂಗಾಯತರು ದಾರಿ ತಪ್ಪುತ್ತಲಿದ್ದ ಸಂದರ್ಭದಲ್ಲಿ ಡಾ. ಹಳಕಟ್ಟಿಯವರು ವಚನ ಸಾಹಿತ್ಯ ಬೆಳಕಿಗೆ ತರುವ ಮೂಲಕ ನಾವು ಕಳೆದುಕೊಂಡ ದಾರಿಯನ್ನು ಹುಡುಕಿಕೊಟ್ಟರು. ಅಂದಿನಿಂದ ಲಿಂಗಾಯತರು ಎಚ್ಚೆತ್ತು 'ವೀರಶೈವ' ವನ್ನು ಪ್ರಶ್ನಿಸುತ್ತ ಬಂದಿದ್ದಾರೆ. ಇಂಥ ಸನ್ನಿವೇಶದಲ್ಲಿ ೨೧ನೆಯ ಶತಮಾನದ ಆರ್. ಎಸ್. ಎಸ್. ಪ್ರಭಾವಕ್ಕೆ ಒಳಗಾದ ವಿದ್ವಾಂಸರು ಲಿಂಗಾಯತದ ಮೇಲೆ ವೀರಶೈವವನ್ನು ಇವೆರಡರ ಮೇಲೆ ವೈದಿಕವನ್ನು ಹೇರುತ್ತಲಿರುವುದು ವಿಷಾದದ ಸಂಗತಿಯಾಗಿದೆ. ಸುಳ್ಳನ್ನು ಹಲವು ಸಲ ನುಡಿದು ಅದನ್ನು ಸತ್ಯ ಮಾಡಲು ಹೊರಟಿರುವಂತೆ ಒಂದಲ್ಲ ಎರಡು ಪುಸ್ತಕ ಬರೆದರು. ಒಂದು ಸಲವಲ್ಲ ಹಲವು ಸಲ ಪತ್ರಿಕೆಗಳ ಮೂಲಕ ಹಾಡಿದ್ದನ್ನೇ ಹಾಡಿದರು.
ಇಂಥವರ ಸಲುವಾಗಿ ನಾನು “ವೀರಶೈವ: ಇತಿಹಾಸ ಮತ್ತು ಭೂಗೋಲ ಹೆಸರಿನ ಪುಸ್ತಕ ಬರೆದಿದ್ದೇನೆ.
ಇಲ್ಲಿಯ ಪ್ರಶ್ನೆಗಳಿಗೆ ಉತ್ತರಿಸಿದ ಉತ್ತರಗಳನ್ನು ಪ್ರಶ್ನಿಸದೇ ಪ್ರಸ್ತುತ ಕೃತಕ ಆಕರಗಳನ್ನು ಆಧುನಿಕರ ಅಭಿಪ್ರಾಯಗಳನ್ನು ಅವಲಂಬಿಸುತ್ತ ನಡೆದಿದ್ದಾರೆ. ನನ್ನ ವಾದ ಇಷ್ಟು; ವೀರಶೈವ ಪದ ಯಾವುದೇ ಷಟ್‌ಷ್ಥಲ ವಚನ ಕಟ್ಟುಗಳಲ್ಲಿ ಕಂಡುಬರದೇ ಕೇವಲ ಹೆಚ್ಚಿನ ವಚನಗಳಲ್ಲಿ ಗೋಚರಿಸುತ್ತದೆ. ಬಸವ, ಚೆನ್ನಬಸವ, ಪ್ರಭುದೇವರ ಸಿದ್ಧರಾಮ 'ಷಟ್ಟಲ ವಚನ' ಕಟ್ಟಿನಲ್ಲಿದೆಯಾದರೂ ಈ ಕಟ್ಟು ಕೃತಕವೆಂಬ ವಾದ ೫೦ ವರ್ಷಗಳಿಂದ ಜೀವಂತವಾಗಿದೆ. ಇತ್ತೀಚೆಗೆ ಲಭ್ಯವಾದ ಇದನ್ನು ಈ ಕಾರಣವಾಗಿ ಸರ್ಕಾರದ ವಚನ ಸಂಪುಟಗಳಲ್ಲಿ ಎರಡನೆಯ ಕಾಂಡವಾಗಿ ಪ್ರಕಟಿಸಲಾಗಿದೆ. ಕೊಂಡಗುಳಿ ಕೇಶಿರಾಜನ 'ಶೀಲ ಮಹತ್ವದ ಕಂದದಲ್ಲಿ ವೀರಶೈವ ಲಿಂಗಾಯತ ಪದ ಎರಡು ಮೂರು ಸಲ ಕಾಣಿಸಿಕೊಂಡಿದೆ. ಆದರೆ ಈ ಕೃತಿ ಕೃತಕವೆಂದು ಡಾ. ಜವಳಿ, ಡಾ. ಮಲ್ಲಾಪೂರ ಅನುಮೋದಿಸಿದ್ದು, ಅವರ ಅಭಿಪ್ರಾಯ ಸತ್ಯವೆಂದು ತೋರುತ್ತದೆ. ಮೇಲಾಗಿ ಇಲ್ಲಿಯ ೬೪ ಶೀಲಗಳು ಶರಣ ಸಂಸ್ಕೃತಿಗೆ ಬಾಹ್ಯವೆಂದೇ ಹೇಳಬೇಕು. ಇದಲ್ಲದೆ ಬಸವಣ್ಣನಾಗಲೀ, ಮಿಕ್ಕ ಶರಣರಾಗಲೀ ಕೊಂಡಗುಳಿ ಕೇಶಿರಾಜನನ್ನು ನೆನೆಯದಿರುವುದು ಗಮನಿಸತಕ್ಕ ಅಂಶವಾಗಿದೆ.
ಬಸವಣ್ಣನ ಸಮಕಾಲೀನ ಆಂಧ್ರದ ಪ್ರಸಿದ್ಧ ಶಿವೋಪಾಸಕ ಮಲ್ಲಿಕಾರ್ಜುನ ಪಂಡಿತಾರಾಧ್ಯರು ತಮ್ಮ ಶಿವತತ್ವಸಾರದಲ್ಲಿ ಶಿವಧರ್ಮ, ಶೈವಾಗಮ, ಶಿವಸಮಯ ಪದ ಬಳಸಿರುವರೇ ಹೊರತು ತಪ್ಪಿಯೂ ವೀರಶೈವ ಪದ ಬಳಸಿಲ್ಲ. ವಚನ ಚಳುವಳಿ ತರುವಾಯದ ೧೩ನೆಯ ಶತಮಾನದ ಪ್ರಸಿದ್ಧ ಕವಿಗಳಾದ ಕೆರೆಯ ಪದ್ಮರಸರಲ್ಲಿ ಲಿಂಗಾಯತ, ಹರಿಹರನಲ್ಲಿ ಲಿಂಗಾಯತ ಪದಗಳಿವೆಯೇ ಹೊರತು 'ವೀರಶೈವ' ಪದ ಕಂಡುಬರುವುದಿಲ್ಲ.
ಏಕೆ ಬಳಕೆಯಾಗಿಲ್ಲ? ಇದರ ಅರ್ಥ ೧೨ನೆಯ ಶತಮಾನದ ವಚನಗಳಲ್ಲಿ ವೀರಶೈವವೆಂಬ ಪದವನ್ನೊಳಗೊಂಡ ವಚನಗಳನ್ನು ರಚಿಸಿ ಸೇರಿಸಲಾಗಿದೆ. ಪಾಲ್ಕುರಿಕೆ ಸೋಮನಾಥನ (೧೩ ನೆಯ ಶತಮಾನ) ತೆಲಗು ಬಸವ ಪುರಾಣದಲ್ಲಿ ವೀರಮಾಹೇಶ್ವರ ಶಬ್ದವಿದೆಯೇ ಹೊರತು ವೀರಶೈವ ಶಬ್ದವಿಲ್ಲ. ಆದರೆ ಇದನ್ನು ಕನ್ನಡೀಕರಿಸಿದ ಭೀಮಕವಿ (೧೪ನೆಯ ಶತಮಾನ) ಅಲ್ಲಿಯ ವೀರಮಾಹೇಶ್ವರ ಶಬ್ದದ ಬದಲು ಕೆಲವೊಮ್ಮೆ ವೀರಶೈವ ಪದ ಬಳಸಿದ್ದಾನೆ. ಆದುದರಿಂದ ವೀರಶೈವ ಪದವು ೧೩-೧೪ನೆಯ ಶತಮಾನದ ಸೃಷ್ಟಿಯಾಗಿದೆ. ಒಂದು ವೇಳೆ ವಚನಗಳಲ್ಲಿ ವೀರಶೈವ ನಿಜವಾಗಿಯೂ ಬಳಕೆಗೊಂಡಿದ್ದರೆ ೧೪ನೆಯ ಶತಮಾನದ ವೀರಶೈವ ಪದವನ್ನೊಳಗೊಂಡ ವೀರಶೈವಾಮೃತ ಮಹಾಪುರಾಣ, ವೀರಶೈವಾಚಾರ ಕೌಸ್ತುಭ ಇತ್ಯಾದಿ ಶೀರ್ಷಿಕೆಯ ಗ್ರಂಥಗಳು ೧೫ನೆಯ ಶತಮಾನದ ಬಳಿಕ ಹುಟ್ಟುತ್ತ ಬಂದಿವೆ. ಈ ಹಿಂದೆ ಇಂಥ ಶೀರ್ಷಿಕೆಯ ಗ್ರಂಥ ಬಂದೇ ಇಲ್ಲ.
ಲಿಂಗಾಯತವನ್ನು ದೀಕ್ಷೆಯ ಹೆಸರು ವೀರಶೈವವು ಎಂಬುದು ಮತದ ಹೆಸರು ಎಂದು ಈ ವಿದ್ವಾಂಸರು ವಾದಿಸುತ್ತಾರೆ. ನಿಜಸಂಗತಿಯೆಂದರೆ ವೀರಶೈವವೆಂಬುದೇ ಶೈವರು ಸ್ವೀಕರಿಸುವ ಒಂದು ವ್ರತದ ಹೆಸರೇ ಹೊರತು ಮತದ ಹೆಸರಲ್ಲ. ಈ ವ್ರತದ ಹೆಸರನ್ನೇ ಮತಕ್ಕೆ ಬಳಸುತ್ತ ಬಂದಿದ್ದಾರೆ. ಅಮುಗೆರಾಯಮ್ಮನ ವಚನ, ನಿಜಗುಣಯೋಗಿಯ ವಿವೇಕ ಚಿಂತಮಣಿಯಲ್ಲಿ ವೀರಶೈವ ವ್ರತವೆಂಬ ಶಬ್ದ ಬಳಕೆಗೊಂಡಿದೆ. ಬಹುಶಃ ಇವರು ವೀರಭದ್ರನ ಸನ್ನಿಧಿಯಲ್ಲಿ ಈ ವ್ರತಧಾರಣೆ ಮಾಡುತ್ತಿರಬಹುದು. ಇದು ನಿಜವಿದ್ದರೆ ೧೩ನೆಯ ಶತಮಾನದಿಂದೀಚೆ ವೀರಭದ್ರನ ದೇವಾಲಯ ಕಂಡುಬರುತ್ತಿರುವುದೂ ವೀರಶೈವ ಶಬ್ದವು ೧೨ನೆಯ ಶತಮಾನದ ತರುವಾಯವೆಂಬ ನಮ್ಮ ವಾದವನ್ನು ಬೆಂಬಲಿಸುತ್ತದೆ.
ಕೆಲವು ವರ್ಷಗಳ ಹಿಂದೆ ಗೂಳೂರಿನಲ್ಲಿ ಕ್ಷೇತ್ರಕಾರ್ಯ ಮಾಡುವಾಗ ಒಬ್ಬ ಲಿಂಗಾಯತ ವೃದ್ಧೆಯನ್ನು, ಅಲ್ಲಿಯ ಜಾತಿಗಳ ಬಗ್ಗೆ ವಿಚಾರಿಸಿದೆ. ನಮ್ಮಲ್ಲಿ ಲಿಂಗಾಯತ, ಕುರುಬ, ಹೊಲೆಯ, ಮಾದಿಗ ಮೊದಲಾದ ಜಾತಿಯವರಿದ್ದಾರೆ ಎಂದು ಅವಳು ಹೇಳಿದಳು. ವೀರಶೈವರಿದ್ದಾರೆಯೇ, ಎಂದು ಕೇಳಿದುದಕ್ಕೆ ಇಲ್ಲ' ಎಂದು ಹೇಳಿದ್ದನ್ನು ನೋಡಿದರೆ ಮೈಸೂರು ಪ್ರದೇಶದ ಗ್ರಾಮೀಣರಿಗೂ ಈ ಶಬ್ದ ಗೊತ್ತಿಲ್ಲವೆಂದು ಸ್ಪಷ್ಟವಾಗುತ್ತದೆ. ಇಷ್ಟೇ ಏಕೆ ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಕೋಗಿಲೂರು ಗ್ರಾಮದವರಾದ ಡಾ. ಚಿದಾನಂದಮೂರ್ತಿಯವರು ತಮ್ಮ ಆತ್ಮ ಚರಿತ್ರೆಯಲ್ಲಿ ತಮ್ಮನ್ನು 'ಲಿಂಗಾಯತ' ಎಂದು ಹೇಳಿರುವುದನ್ನು ನೋಡಿದರೆ ೧೯೩೦ ರ ಸುಮಾರಿಗೆ ಆ ಪ್ರದೇಶದಲ್ಲಿಯೂ ವೀರಶೈವ ಪದ ಗೊತ್ತಿರಲಿಲ್ಲವೆಂದೂ ಸ್ಪಷ್ಟವಾಗುತ್ತದೆ.
ಒಟ್ಟಾರೆ ಆಂಧ್ರಪ್ರದೇಶದಿಂದ ಮೈಸೂರಿಗೆ ವಲಸೆ ಬಂದ 'ಆರಾಧ್ಯರ ಸೃಷ್ಟಿಯಾದ 'ವೀರಶೈವ' ಪದವನ್ನು ಕರ್ನಾಟಕದ ಲಿಂಗಾಯತರ ಮೇಲೆ ಹೇರಿದರು. ದಕ್ಷಿಣ ಕರ್ನಾಟಕದವರೆಂದರೆ ಕರ್ನಾಟಕದವರಿಗೆ ಇಲ್ಲದ ಗೌರವ. ಹೀಗಾಗಿ ಇವರು ಕಣ್ಣುಮುಚ್ಚಿ ಒಪ್ಪಿಕೊಂಡರು. ದಕ್ಷಿಣ ಕರ್ನಾಟಕದ 'ಆರಾಧ್ಯರ ಏಜಂಟರಂತೆ ವರ್ತಿಸುವ ಉತ್ತರಕರ್ನಾಟಕದ ಜಂಗಮರು ಅಂಥ ವೀರಶೈವ ಪದವನ್ನು ಇಲ್ಲಿ ಪ್ರಚಾರ ಮಾಡಿದರು. ಮುಗ್ಧ ಭಕ್ತರು ನಂಬುವಂತೆ ಮಾಡಿದರು.
ಗ್ರಂಥ ಋಣ: ಮಾರ್ಗ-೭, ಸಪ್ನಬುಕ್ ಹೌಸ್, ಬೆಂಗಳೂರು
ವೀರಶೈವ : ಮತವಲ್ಲ, ವ್ರತ | ಆಂಧ್ರದ ಆರಾಧ್ಯ ಜಂಗಮರ ಸವಾರಿ |