ಲಿಂಗಾಯತ ಧರ್ಮದ ಸಾರ
ಮೊದಲು ಲಿಂಗ ಬಯಲು ಅಥವಾ ಶೂನ್ಯದ ರೂಪದಲ್ಲಿ ತಾನೊಂದೆ ಇತ್ತು. ಆಮೇಲೆ ಅದಕ್ಕೆ ಸೃಷ್ಟಿ ಮಾಡಬೇಕೆಂಬ ಇಚ್ಛೆ ಉಂಟಾಯಿತು. ಆಗ ಅದು ತನ್ನಲ್ಲೇ ಇದ್ದ ಶಕ್ತಿಯೊಡಗೂಡಿ ನಿಷ್ಕಲಲಿಂಗವಾಗುತ್ತದೆ. ಪರಿಣಾಮವಾಗಿ, ಅದು ಅಂಗಸ್ಥಲ ಮತ್ತು ಲಿಂಗಸ್ಥಲ ಎಂದು ಇಬ್ಬಾಗವಾಗುತ್ತದೆ. ಅಂಗಸ್ಥಲವೆಂದರೆ ಅಂಗ(ಆತ್ಮ)ಗಳ ಸಮೂಹ, ಆದರೆ ಅವಕ್ಕೆ ದೇಹ, ಇಂದ್ರಿಯ ಇತ್ಯಾದಿಗಳಿಲ್ಲ; ಅಂದರೆ ಅವು ಪರಸ್ಪರ ಪ್ರತ್ಯೇಕವಾಗಿಲ್ಲ. ಲಿಂಗಸ್ಥಲವೆಂದರೆ ಸೃಷ್ಟಿ, ಸ್ಥಿತಿ, ಲಯ, ಅನುಗ್ರಹ ಮತ್ತು ತಿರೋಧಾನ ಮಾಡುವ ಲಿಂಗ (ಪರಶಿವ). ಅದು ಪೂಜ್ಯ, ಅಂಗ ಪೂಜಕ, ನಿಷ್ಕಲಲಿಂಗದಲ್ಲಿದ್ದ ಶಕ್ತಿಯೂ ಇಬ್ಬಾಗವಾಗಿ ಈ ಎರಡು ಸ್ಥಲಗಳಲ್ಲಿ ನೆಲೆಸುತ್ತದೆ. ಅಂಗದಲ್ಲಿ ನೆಲೆಸುವ ಶಕ್ತಿಗೆ ಭಕ್ತಿ ಅಥವಾ ಭಕ್ತಿಶಕ್ತಿ ಎಂದೂ, ಲಿಂಗದಲ್ಲಿ ನೆಲೆಸುವ ಶಕ್ತಿಗೆ ಕಲಾಶಕ್ತಿ ಎಂದೂ ಹೆಸರು. ಕಲಾಶಕ್ತಿಯಿಂದ ಪರಶಿವನು ಜಗತ್ತಿನ ವಸ್ತುಗಳನ್ನೂ ಮಾನವ ಮತ್ತು ಪ್ರಾಣಿಗಳ ದೇಹೇಂದ್ರಿಯಾದಿಗಳನ್ನೂ ಸೃಷ್ಟಿಸಿ, ಅವುಗಳ ಒಳಗೇ ನೆಲೆಸುತ್ತಾನೆ. ಸೃಷ್ಟಿಯೆಂದರೆ ಪರಶಿವನೇ ಅಥವಾ ಪರಶಿವನ ಶಕ್ತಿಯೇ (ಸಸಿ ನಿಧಾನವಾಗಿ ಮರವಾದಂತೆ) ವಿಕಾಸವಾಗುವುದೇ ಹೊರತು, ಕುಂಬಾರ ಮಣ್ಣಿನಿಂದ ಮಡಕೆ ಮಾಡಿದಂತೆ ಅಲ್ಲ. ಬಾಹ್ಯ ಜಗತ್ತು ಲಿಂಗದ ಶರೀರ, ಲಿಂಗ ಅದರ ಆತ್ಮ. ಮತ್ತೆ ಲಿಂಗದ ಇಚ್ಛೆಗನುಗುಣವಾಗಿ ಶಕ್ತಿ ಸಂಕುಚಿತವಾದಾಗ ಪ್ರಳಯವಾಗುತ್ತದೆ. ಇಂಥ ಸೃಷ್ಟಿಲಯಗಳು ಈ ಹಿಂದೆ ಎಷ್ಟೋ ಆಗಿವೆ. ಯಾವೊಂದು ಸೃಷ್ಟಿಯೂ ಮೊದಲನೆಯದಲ್ಲ, ಯಾವೊಂದು ಲಯವೂ ಕೊನೆಯದಲ್ಲ.
ಅಂಗನಿಗೆ ಯಾವುದಾದರೊಂದು ಗಳಿಗೆಯಲ್ಲಿ ಈ ಭವಿತನ ಸಾಕು ಎನಿಸಿದಾಗ ಅವನು ಅದನ್ನು ಕೊನೆಗಾಣಿಸುವ, ಮೋಕ್ಷಕ್ಕೆ ಮಾರ್ಗದರ್ಶನ ನೀಡಬಲ್ಲ ಸಮರ್ಥ ಗುರುವನ್ನು ಹುಡುಕಿಕೊಳ್ಳುತ್ತಾನೆ. ಗುರುವು ಅವನನ್ನು ಮೊದಲು ಅಷ್ಟಾವರಣಕ್ಕೊಳಪಡಿಸುತ್ತಾನೆ. ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ ಮತ್ತು ಮಂತ್ರ - ಇವೇ ಅಷ್ಟ (ಎಂಟು) ಆವರಣಗಳು, ಒಬ್ಬ ವಿದ್ಯಾರ್ಥಿ ಉದ್ಯೋಗ ಪಡೆಯಬೇಕೆಂದರೆ ಮೊದಲು ಅವನು ಸೂಕ್ತ ವ್ಯಾಸಂಗ ಮಾಡಬೇಕು. ಅದಕ್ಕಾಗಿ ಅವನು ಒಂದು ಶಾಲೆಗೆ ಸೇರಿಕೊಳ್ಳಬೇಕು; ಪುಸ್ತಕ, ಪೆನ್ನು, ಪೆನ್ಸಿಲ್, ನೋಟ್ ಬುಕ್, ಸಮವಸ್ತ್ರ, ಮುಂತಾದುವನ್ನು ಪಡೆಯಬೇಕು. ಹಾಗೆಯೇ ಮೋಕ್ಷ ಪಡೆಯಬೇಕೆನ್ನುವವನು ಮೊದಲು ಅಷ್ಟಾವರಣಕ್ಕೆ ಒಳಪಡಬೇಕು.
ವಿದ್ಯಾರ್ಥಿ ಪುಸ್ತಕ, ಪೆನ್ನು ಇತ್ಯಾದಿಗಳನ್ನು ಪಡೆದ ಕೂಡಲೆ ಅವನಿಗೆ ಜ್ಞಾನ ಬರುವುದಿಲ್ಲ. ಶಿಕ್ಷಕರ ಬೋಧನೆಯನ್ನು ಶ್ರದ್ಧೆಯಿಂದ ಕೇಳಿ, ಮನೆಯಲ್ಲಿ ಅದನ್ನು ಓದಿ, ಮನನ ಮಾಡಿಕೊಂಡರಷ್ಟೇ ಅವನಿಗೆ ಜ್ಞಾನ ಲಭಿಸುತ್ತದೆ. ಅದೇ ರೀತಿ ಲಿಂಗವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಪೂಜಿಸಿ, ಗುರು ಜಂಗಮರನ್ನು ಸೇವಿಸಿ ಮತ್ತು ಅವರ ಬೋಧನೆಯನ್ನು ಪಾಲಿಸಿ, ವಿಭೂತಿ-ರುದ್ರಾಕ್ಷಿಗಳನ್ನು ಧರಿಸಿ, ಪಾದೋದಕ ಪ್ರಸಾದಗಳನ್ನು ಸ್ವೀಕರಿಸಿ, ಸದಾ ಮಂತ್ರವನ್ನು ಪಠಿಸಿದವರಿಗಷ್ಟೇ ಮೋಕ್ಷ ಸಿಕ್ಕಲು ಸಾಧ್ಯ ಭಕ್ತನು ಲಿಂಗವನ್ನು ಯಾವ ಭಾವದಿಂದ ಪೂಜಿಸಬೇಕು, ಸಮಾಜದಲ್ಲಿ ಹೇಗೆ ನೈತಿಕವಾಗಿ ನಡೆದುಕೊಳ್ಳಬೇಕು, ಎಂಬ ನಿಯಮಗಳನ್ನೂ ಅವನು ಪಾಲಿಸಬೇಕು.
ಕೇವಲ ಪೂಜೆ, ಮಂತ್ರಪಠನೆ, ಮುಂತಾದ ಬಾಹ್ಯ ಆಚರಣೆಗಳಿಗೆ ಧರ್ಮದಲ್ಲಿ ಬೆಲೆಯಿಲ್ಲ. ಭಕ್ತನು ಕೇವಲ ಆಹಾರಪಾನೀಯಗಳನ್ನಷ್ಟೇ ಅಲ್ಲ, ಎಲ್ಲವನ್ನೂ ಲಿಂಗದ ಪ್ರಸಾದ ಎಂದು ತಿಳಿಯುವುದನ್ನು ಭಕ್ತನಾದ ದಿನದಿಂದಲೆ ಕಲಿಯಬೇಕು. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ನೋಡುವ ನೋಟ, ಕೇಳುವ ಶಬ್ದ, ರುಚಿ, ಎಲ್ಲವೂ ಪ್ರಸಾದವೆ; ನಮ್ಮ ಕೈಕಾಲುಗಳು, ಕಣ್ಣುಕಿವಿ ಮೊದಲಾದುವುಗಳೂ ಪ್ರಸಾದವೆ; ನಮ್ಮ ಬುದ್ಧಿ, ಮನಸ್ಸು, ಪ್ರಸಾದವೆ; ಹೀಗೆ ಎಲ್ಲವನ್ನೂ ಲಿಂಗದ ಪ್ರಸಾದ ಎಂದು ತಿಳಿದವನಿಗೆ ಈ ದೇಹ ನನ್ನದು, ಈ ಮನೆ ನನ್ನದು, ಮುಂತಾದ ಅಂಗಭಾವ ಅಳಿದು, ಇದೆಲ್ಲವೂ ಲಿಂಗಪ್ರಸಾದ ಎಂಬ ಭಾವ ಬರುತ್ತದೆ. ಅಂಥ ಲಿಂಗಭಾವ ಪಡೆದವನೇ ನಿಜವಾದ ಪ್ರಸಾದಿ.
ಭಕ್ತನಾದ ದಿನದಿಂದಲೆ ಅವನು ಗುರುವಿನಿಂದ ಲಿಂಗಧ್ಯಾನ ಮಾಡುವುದನ್ನು ಕಲಿಯಬೇಕು. ಅದರಿಂದ ಅವನಿಗೆ ಧ್ಯಾನದಲ್ಲಿ ತಾನೇ ಲಿಂಗ ಎಂಬ ಭಾವವುಂಟಾಗುತ್ತದೆ. ಅವನು ಪ್ರಾಣಲಿಂಗಿಯೆನಿಸಿಕೊಳ್ಳುತ್ತಾನೆ.
ಧ್ಯಾನದಲ್ಲಿ ಆನಂದವೂ ಉಂಟಾಗುತ್ತದೆ. ಇದಕ್ಕೆ ಲಿಂಗಾನಂದ, ಶಿವಾನಂದ, ಸಮರಸಾನಂದ ಎಂಬ ಹೆಸರುಗಳೂ ಇವೆ. ಈ ಆನಂದವು ಯಾವುದೇ ವಸ್ತುಗಳನ್ನು ಅನುಭವಿಸುವುದರಿಂದ ಬರುವುದಿಲ್ಲ. ಎಲ್ಲವನ್ನು ಶಿವನಿಗೆ ಅರ್ಪಿಸಿ, ಯಾವ ಸ್ವಾರ್ಥ ಆಸೆಗಳು ಇಲ್ಲದೆ ಇದ್ದಾಗ, ಅಂಗದ ಈ ಸ್ವಾಭಾವಿಕ ಗುಣವು ತಂತಾನೆ ವ್ಯಕ್ತವಾಗುತ್ತದೆ. ಅದಕ್ಕೆ ಸಮನಾದ ಮತ್ತೊಂದು ಆನಂದವೇ ಇಲ್ಲ. ಸಾಧಕನ ಈ ಶರಣಾಗತಿ ಭಾವವನ್ನು ಕೆಲವು ವೇಳೆ 'ಶರಣಸತಿ-ಲಿಂಗಪತಿ' ಎಂದು ಕರೆಯಲಾಗುತ್ತದೆ. ಇಲ್ಲಿ ಲಿಂಗ ಅಥವಾ ಪರಶಿವ ಒಬ್ಬನೇ ಪತಿ ಎಲ್ಲ ಭಕ್ತರೂ ಅವನ ಸತಿಯರು. ಸತಿ ತನ್ನ ಎಲ್ಲವನ್ನೂ ತನ್ನ ಗಂಡನಿಗೆ ಅರ್ಪಿಸಿ ಸುಖಿಸುವಂತೆ ಶರಣನು ತನ್ನ ಎಲ್ಲವನ್ನೂ ಲಿಂಗಕ್ಕೆ ಅರ್ಪಿಸಿ ಆನಂದಿಸುತ್ತಾನೆ.
ಧ್ಯಾನವು ಇನ್ನೂ ಉತ್ಕಟವಾದಾಗ ಶರಣನಿಗೆ ತಾನೂ ಲಿಂಗವೂ ಬೇರೆ ಬೇರೆ ಅಲ್ಲ, ಒಂದೇ ಎಂಬುದನ್ನು ಅನುಭವಿಸುತ್ತಾನೆ. ಅವನ ಇಂಥ ಸ್ಥಿತಿಗೆ ಸಾಮರಸ್ಯ ಅಥವಾ ಲಿಂಗಾಂಗ-ಸಾಮರಸ್ಯ ಎಂದೂ ಅಂಥ ಶರಣನಿಗೆ ಐಕ್ಯ ಅಥವಾ ಲಿಂಗೈಕ್ಯ ಎಂದೂ ಹೆಸರು. ವಾಸ್ತವವಾಗಿ ಐಕ್ಯನು ಜಾಗೃತ ಸ್ಥಿತಿಗೆ ಹಿಂದಿರುಗಿದಾಗಲೂ ತಾನು ಲಿಂಗದಿಂದ ಪ್ರತ್ಯೇಕ ಎಂಬ ಅಂಗಭಾವವನ್ನು ಕಳೆದುಕೊಂಡು, ಐಕ್ಯಭಾವ ಅಥವಾ ಲಿಂಗಭಾವವನ್ನೇ ಅನುಭವಿಸುತ್ತಾನೆ. ಅವನು ಲಿಂಗಾನುಭವಿ ಅಥವಾ ಶಿವಾನುಭವಿ, ಜಂಗಮ. ಅವನು ಮಾಡುವ ಕ್ರಿಯೆಗಳು ಅಂಗಕ್ರಿಯೆಗಳಲ್ಲ, ಲಿಂಗಕ್ರಿಯೆಗಳು; ಅವನ ಮಾತುಗಳು, ಮಾತುಗಳಲ್ಲ, ವಚನಗಳು, ಅವನು ಅವುಗಳನ್ನು ಕೇವಲ ಪರಹಿತಕ್ಕಾಗಿ ಮಾಡುತ್ತಾನೆ; ಒಂದೇ ಕಡೆ ನಿಲ್ಲದೆ, ಇತರರಿಗೆ ಬೋಧನೆ ಮಾಡುತ್ತಾನೆ. ಅವುಗಳನ್ನು ತಾನು ಮಾಡುತ್ತಿದ್ದೇನೆ ಎಂದು ತಿಳಿಯದೆ ಶಿವನೇ ತನ್ನ ಮೂಲಕ ಮಾಡಿಸುತ್ತಿದ್ದಾನೆ ಎಂದು ತಿಳಿಯುತ್ತಾನೆ. ಹೀಗೆ ಅವನು ಮಾಡುವ ಕೆಲಸಗಳ ಹಿಂದೆ ಯಾವ ಸ್ವಾರ್ಥವೂ ಇಲ್ಲವಾದುದರಿಂದ, ಅವನಿಗೆ ಕರ್ಮಬಂಧನವಿಲ್ಲ; ಅವನು ಜೀವನ್ಮುಕ್ತ
ಹೀಗೆ, ಲಿಂಗದಿಂದ ಬಂದು ಅಂಗನೆನಿಸಿಕೊಂಡು ಮತ್ತೆ ಲಿಂಗವನ್ನೇ ಸೇರಿಕೊಳ್ಳುವುದು ಲಿಂಗಾಯತ ಧರ್ಮದ ಗುರಿ, ಗುರಿ ಮುಟ್ಟಿದವನು ಇತರರ ಸಲುವಾಗಿ ಜಂಗಮನಾಗಬೇಕು.