ಬಸವಣ್ಣನವರ ಕಾಯಕ ಸಿದ್ಧಾಂತದ ಆಯಾಮಗಳು

ಡಾ|| ಎಂ. ಎಂ. ಕಲಬುರ್ಗಿ.

*

1. ಕಾಯಕ : ಕಡ್ಡಾಯ
2. ಕಾಯಕ : ದೈವಿಕ
3. ಕಾಯಕ : ತಾರತಮ್ಯ ರಹಿತ
4. ಕಾಯಕ : ಐಚ್ಛಿಕ
5. ಕಾಯಕ : ಅಧಿಕ ಫಲ ನಿರಪೇಕ್ಷಿತ
6. ಕಾಯಕ : ದಾಸೋಹ ಸಹಿತ

1. ಕಾಯಕ : ಕಡ್ಡಾಯ

ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಅನ್ನ ಮುಖ್ಯವಾದುದು.
ಇದನ್ನು ಉತ್ಪಾದಿಸುವ ಮಾಧ್ಯಮ ಕಾಯಕ.
ಪ್ರತಿಯೊಬ್ಬನೂ ತನ್ನ ಅನ್ನವನ್ನು ತಾನು ಗಳಿಸಿಕೊಳ್ಳಬೇಕೇ ಹೊರತು, ಇನ್ನೊಬ್ಬರು ಗಳಿಸಿದ ಅನ್ನವನ್ನು ಉಣ್ಣಬಾರದು.
ಕಾಯಕ ಮಾಡಲಾರದವನಿಗೆ ಉಣ್ಣುವ ಹಕ್ಕಿಲ್ಲ.

2. ಕಾಯಕ : ದೈವಿಕ

ಲಿಂಗಾಯತದಲ್ಲಿ ಈ ಕಾಯಕವೆನ್ನುವುದು ಕೇವಲ ಭೌತಿಕ ಕ್ರಿಯೆಯಲ್ಲ.
ಭೌತಿಕ ತೃಪ್ತಿಗಾಗಿ ಅಲ್ಲ.
ಜ್ಞಾನ ಕ್ರಿಯೆಗಳ ಸಹಯೋಗದಲ್ಲಿ ಕಾಯಕ ರೂಪಗೊಳ್ಳಬೇಕೆಂಬುದು ಈ ಧರ್ಮದ ನಂಬಿಕೆ.
ಲಿಂಗವು ಕಾಯಕದಲ್ಲಿಯೂ ( ಅರಿವು-ಆಚಾರ) ಇರುವ ಕಾರಣ ಕಾಯಕವೇ ಕೈಲಾಸವೆಂದು ಶರಣರು ನುಡಿದರು.

3. ಕಾಯಕ : ತಾರತಮ್ಯ ರಹಿತ

ಶರಣರು ಉದಯವಾಗುವ ಹೊತ್ತಿಗೆ ವೃತ್ತಿ ತಾರತಮ್ಯವೇರ್ಪಟ್ಟಿತ್ತು.
ಶ್ರೇಷ್ಠ ವೃತ್ತಿ ಮಾಡುವವರು ಶ್ರೇಷ್ಠ, ಕನಿಷ್ಟ ವೃತ್ತಿ ಮಾಡುವವರು ಕನಿಷ್ಠವೆಂಬ ತೀರ್ಮಾನಕ್ಕೆ ಬರಲಾಗಿದ್ದಿತು.
ಇದರ ಅರ್ಥ ಬೌದ್ಧಿಕ ವೃತ್ತಿ ಶ್ರೇಷ್ಠ, ದೈಹಿಕ ವೃತ್ತಿ ಕನಿಷ್ಠವೆಂದು ನಂಬಲಾಗಿದ್ದಿತು.
ಶರಣರು ಈ ಕೃತಕ ತಾರತಮ್ಯವನ್ನು ಅಲ್ಲಗಳೆದು ವೃತ್ತಿಗಳಲ್ಲಿ ಸಮಾನತೆ ಸಾರಿದರು.

4. ಕಾಯಕ : ಐಚ್ಛಿಕ

ಬ್ರಾಹ್ಮಣನ ಮಗ ಜ್ಞಾನಾರ್ಜನೆ ಮಾಡುವುದನ್ನು, ಕ್ಷತ್ರಿಯನ ಮಗ ಆಡಳಿತ ನಡೆಸುವುದನ್ನು, ವೈಶ್ಯನ ಮಗ ವಾಣಿಜ್ಯದಲ್ಲಿ ತೊಡಗುವದನ್ನು, ಶೂದ್ರರ ಮಗ ಸೇವೆ ಮಾಡುವುದನ್ನು ಮುಂದುವರೆಸುವ ವ್ಯವಸ್ಥೆ ಅಂದು ಅಸ್ತಿತ್ವದಲ್ಲಿದ್ದಿತು.
ಇದು ಜಾತಿ ವ್ಯವಸ್ಥೆಯನ್ನು ಶಾಶ್ವತಗೊಳಿಸುವ ಕ್ರಮವಾಗಿದ್ದಿತು.
ಶರಣರು ಜಾತಿ ಮತ್ತು ವೃತ್ತಿಗಳ ಸಂಬಂಧ ಕೊಂಡಿಯನ್ನು ತಪ್ಪಿಸಿದರು.
ಯಾವುದೇ ಜಾತಿಯವ ಯಾವುದೇ ವೃತ್ತಿ ಮಾಡಲು ಅವಕಾಶ ಕಲ್ಪಿಸಿಕೊಟ್ಟರು.
ಮೋಳಿಗೆಯ ಮಾರಯ್ಯ (ಕ್ಷತ್ರಿಯನಾಗಿದ್ದಾತ) ಆಡಳಿತದ ಬದಲು ಕಟ್ಟಿಗೆ ಕಾಯಕ ಕೈಕೊಂಡುದು ಇದಕ್ಕೆ ನಿದರ್ಶನವೆನಿಸಿದೆ.

5. ಕಾಯಕ : ಅಧಿಕ ಫಲ ನಿರಪೇಕ್ಷಿತ

ಶರಣರು ಕಾಯಕದ ಫಲದ ವಿಷಯವಾಗಿ ಹೊಸ ನೀತಿಯನ್ನು ಸಾರಿದರು.
ಕಾಯಕದ ಸ್ವರೂಪ - ಪ್ರತಿಫಲದ ಸ್ವರೂಪಗಳನ್ನು ಹೀಗೆ ಹೇಳುತ್ತಾರೆ.
ಸಣ್ಣ ಮೌಲ್ಯದ 'ಹಾಗ' ದಷ್ಟು ಕಾಯಕ ಮಾಡಿ, ದೊಡ್ಡ ಮೌಲ್ಯದ 'ಹಣ' ದಷ್ಟು ಪ್ರತಿಫಲ ಕೇಳುವುದು ಕಾಯಕವಲ್ಲ.
ಸಾಧ್ಯವಿರುವಷ್ಟು ಕಾಯಕ ಮಾಡಿ, ಅಗತ್ಯವಿರುವಷ್ಟು ಕೂಲಿ ಬೇಡುವುದು ನಿಜವಾದ ಕಾಯಕ.
12 ನೇ ಶತಮಾನದಷ್ಟು ಪೂರ್ವದಲ್ಲಿ ಹೇಳಿದ ಈ ಮಾತು ಜಾಗತಿಕ ಮಹತ್ವದ್ದಾಗಿದೆ.

6. ಕಾಯಕ : ದಾಸೋಹ ಸಹಿತ

ಕಾಯಕದ ಪರಿಕಲ್ಪನೆಯು ಸಾರ್ಥಕತೆ ಪಡೆಯುವುದು ದಾಸೋಹದಲ್ಲಿ.
ಅಂದರೆ ದಾಸೋಹದಲ್ಲಿ ಪರ್ಯವಸನಗೊಳ್ಳದ ಕಾಯಕವು ಕಾಯಕವಲ್ಲ.
ಈ ದಾಸೋಹ ತ್ರಿವಿಧ ನೆಲೆಗಳಲ್ಲಿ ಆಚರಣೆಗೆ ಬರಬೇಕು.
ಅರಿವು, ಆಚಾರ, ಅನುಭಾವ ನೆಲೆಯಲ್ಲಿ ಕ್ರಮವಾಗಿ ತನು, ಮನ, ಧನ ಮಾಧ್ಯಮಗಳಿಂದ ಈ ಕ್ರಿಯೆ ಜರುಗಬೇಕು.
ಆತ್ಮೋದ್ಧಾರದ 'ಸೋಹಂ' ಪ್ರಜ್ಞೆಯು ಸಮಾಜೋದ್ಧಾರದ 'ದಾಸೋಹಂ' ಪ್ರಜ್ಞೆಯಾಗಿ ಬೆಳೆಯಬೇಕು.

*
ಪರಿವಿಡಿ (index)
Previousವಿಶ್ವಕಲ್ಯಾಣ ಮಿಷನ್‌ ಚಾರಿಟಬಲ್‌ (ರಿ) ಟ್ರಸ್ಟ್‌ಜಗದ್ಗುರು ಸಂಪ್ರದಾಯದ ಮೂಲ ಮತ್ತು ಬೆಳವಣಿಗೆNext
*