Previous ಮುರಘಾ ಮಠ ಚಿತ್ರದುರ್ಗ ಲಿಂಗಾಯತರು ವೀರಶೈವರಲ್ಲ Next

ಕಲ್ಯಾಣ ಅಂದು ಹೇಗೆ ಇತ್ತು?

*

ಕಲ್ಯಾಣ ಅಂದು ಹೇಗೆ ಇತ್ತು ?

- ✍ ಷಟಸ್ಥಲ ದಾರ್ಶನಿಕ ಶ್ರೀ ಗುರು ಚನ್ನಬಸವಣ್ಣನವರು

ಷಟಸ್ಥಲ ದಾರ್ಶನಿಕ ಚನ್ನಬಸವಣ್ಣನವರು ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವವನ್ನು ಅವರು ಕಾರಣಿಕರಾಗಿ ಬಂದ ಬರುವಿನ ಪರಿಯನ್ನು ಅತ್ಯಂತ ಮಾರ್ಮಿಕವಾಗಿ ಹೀಗೆ ವಿವರಿಸುವರು.
ಕೈಲಾಸದ ಪ್ರತಿರೂಪ ಕಲ್ಯಾಣಪುರ !

ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀ ಮತ್ ಕಲ್ಯಾಣಪುರದ ಮಹಾತ್ಮೆ ಎಂತೆಂದಡೆ ವಿಸ್ತರಿಸಿ ಹೇಳುವೆನು. ಎಲ್ಲಾ ಶಿವಗಣಂಗಳು ಕೇಳಿ ಕೃತಾರ್ಥರಾಗಿರಯ್ಯಾ.

ಹದಿನಾಲ್ಕು ಭುವನಕ್ಕೆ ಕಳಸವೆಂದೆನಿಸುವ ರುದ್ರಲೋಕವೆ ಮರ್ತ್ಯಕ್ಕಿಳಿತಂದು ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಯ್ಯ.
ಅಲ್ಲಿ ಸತ್ಯರು ಸಾತ್ವಿಕರು ನಿತ್ಯರು ನಿಜೈಕ್ಯರು ಮಹಾಜ್ಞಾನಿಗಳು ಪರಮಶಿವಯೋಗಿಗಳು ಶಿವಾನುಭವ ಸಂಪನ್ನರು ಶಿವಲಿಂಗ ಪ್ರಾಣಿಗಳು ಶಿವಪ್ರಸಾದ ಪಾದೋದಕ ಸಂಬಂಧಿಗಳು. ಶಿವಾಚಾರ ವೈದ್ಯರು ಶಿವಾಗಮಸಾಧ್ಯರು ಶಿವಸಮಯ ಪಕ್ಷರುಗಳಲ್ಲದೆ ಮತ್ತಾರು ಅಲ್ಲಿಲ್ಲ ನೋಡರಯ್ಯಾ.

ಪಾಪಿಗಳು ಕೋಪಿಗಳು ಅಸತ್ಯರು ಅನಾಚಾರಿಗಳು ಹೋಗಬಾರದು ಕಲ್ಯಾಣವ. ಮೀರಿ ಹೊಕ್ಕೆವೆಂಬರಿಗೆ ಬಾಳ ಬಾಯಿಧಾರೆ ನೋಡಿರಯ್ಯಾ.
ಆ ಕಲ್ಯಾಣ ಅಗಮ್ಯ ಅಗೋಚರ ನೋಡಿರಯ್ಯಾ .
ಆ ಮಹಾಕಲ್ಯಾಣದ ವಿಸ್ತೀರ್ಣ ತಾನೆಂತೆಂದಡೆ ;
ಹನ್ನೇರಡು ಯೋಜನ ಪರಿಪ್ರಮಾಣದ ವಿಸ್ತೀರ್ಣ ಪಟ್ಟಣಕ್ಕೆ ಮೂನ್ನೂರರವತ್ತು ಬಾಗಿಲವಾಡ.
ಆ ಬಾಗಿಲಿಗೆ ನೂರಐವತ್ತ್ಯೆದು ವಜ್ರದಹಾರೆಯ ಕದಂಗಳು .
ಇನ್ನೂರು ಇಪ್ಪತೈದು ಕಲುಗೆಲಸದ ದ್ವಾರವಟ್ಟಕ್ಕೆ ನಾನೂರ ಐವತ್ತು ಸುವರ್ಣದ ಕೆಲಸದ ಕದಂಗಳು.
ಅಲ್ಲಿ ನೂರ ಹದಿನೈದು ಚೋರಗುಂಡಿ ಅದಕ್ಕೆ ನೂರಾಹದಿನೈದು ಮೊಳೆಯ ಕದಂಗಳು.
ಇಪ್ಪತ್ತು ಬಾಗಿಲು ಆಳ್ವರಿಯೊಳಗಿಪ್ಪವಾಗಿ ಅದಕ್ಕೆ ಕದಂಗಳಿಲ್ಲ .
ಆ ಪಟ್ಟಣಕ್ಕೆ ಬಳಸಿಬಂದ ಕೋಟೆ ನಾಲ್ವತ್ತೆಂಟು ಯೋಜನ ಪರಿಪ್ರಮಾಣ .
ಬಾಹತ್ತರ (ನಿಯೋಗಿಗಳ ) ಮನೆ ಲಕ್ಷ ರಾಯರಾವುತರ ಮನೆಯೊಳಡಗಿದ ಮನೆಗಳಿಗೆ ಲೆಕ್ಕವಿಲ್ಲ.
ದ್ವಾದಶ ಯೋಜನ ವಿಸ್ತೀರ್ಣದ ಸೂರ್ಯವೀಥಿ ನೂರಿಪ್ಪತ್ತು .
ದ್ವಾದಶ ಯೋಜನದ ಸೋಮವಿಥಿ ನೂರಿಪ್ಪತ್ತು .
ಅದರಿಂದ ಮಿಗಿಲಾದ ಒಳಕೇರಿ ಹೋರಕೇರಿಗೆ ಲೆಕ್ಕವಿಲ್ಲ.
ಆ ಪಟ್ಟಣದೊಳಗೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶಿವಾಲಯ.
ಆ ಶಿವಾಲಯ ಗಳಿಗೆ ಮುಖ್ಯವಾದ ತ್ರಿಪುರಾಂತಕದೇವರ ಶಿವಾಲಯ.
ಮೂನ್ನುರರವತ್ತು ಪದ್ಮ ಪತ್ರ ತೀವಿದ ಸರೋವರಗಳು.
ಎರಡು ಲಕ್ಷದ ಎಂಬತೈದ ಸಾವಿರದ ಏಳುನೂರೆಪ್ಪತ್ತು ದಾಸೋಹದ ಮಠಂಗಳು.
ಆ ದಾಸೋಹದ ಮಠಂಗಳಿಗೆ ಮುಖ್ಯವಾದ ಬಸವರಾಜ ದೇವರ ಮಠದ ವಿಸ್ತೀರ್ಣವೆಂತೆಂದಡೆ :
ಯೋಜನವರೆಯ ಬಿನ್ನಾಣದ ಕಲುಗೆಲಸದ ಪೌಳಿ.
ಅತಿಸೂಕ್ಷದ ಕುಸುರಿಗೆಲಸದ ದ್ವಾರವಟ್ಟವೈದು ಅದಕ್ಕೆ ಪಂಚಾಕ್ಷರಿಯ ಶಾಸನ
ಮಿಸುನಿಯ ಕಂಭದ ತೋರಣಂಗಳಲಿ ರುದ್ರಾಕ್ಷಿಯ ಸೂಸಕ.
ಆ ಬಾಗಿಲುವಾಡದಲ್ಲಿ ಒಪ್ಪುತಿರ್ಪಯ್ಯಾ.
ಆ ಮಧ್ಯದಲ್ಲಿ ಬಸವರಾಜ ದೇವರ ಶೂನ್ಯಪೀಠದ ವಿಸ್ತೀರ್ಣದ ಪ್ರಮಾಣ.
ಸಹಸ್ರ ಕಂಭದ ಸುವರ್ಣದುಪ್ಪರಿಗೆ
ಆ ಮನೆಗೆತ್ತಿದ ಹೊನ್ನ ಕಳಸ ಸಾವಿರ. "
ಗುರು ಲಿಂಗ ಜಂಗಮಕ್ಕೆ ಪಾದಾರ್ಚನೆಯ ಮಾಡುವ ಹೊಕ್ಕರಣೆ ನಾಲ್ಕು ಪುರುಷ ಪ್ರಮಾಣದ ಘಾತ .
ಅಲ್ಲಿ ತುಂಬಿದ ಪಾದೋದಕ ತುಂಬನುಚ್ಚಲು ಬೆಳೆವ ರಾಜಶಾಲಿಯ ಗದ್ದೆ ಹನ್ನೇರಡು ಕಂಡುಗ .
ಆ ಯೋಜನವರಿಯ ಬಿನ್ನಾಣದ ಅರಮನೆಯ ವಿಸ್ತೀರ್ಣದೊಳಗೆ ಲಿಂಗಾರ್ಚನೆ ಮಾಡುವ ಮಠದ ಕಟ್ಟಳೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ.
ಇನ್ನು ಬಸವರಾಜ ದೇವರ ಅಸಂಖ್ಯಾತ ಮಠಂಗಳು.
ಆ ಕಲ್ಯಾಣದೊಳಗೆ ಎಷ್ಟು ಎಂದಡೆ.
ಹನ್ನೆರಡು ಸಾವಿರ ಕಟ್ಟಳೆಯ ನೇಮದ ಭಕ್ತರ ಮಠಂಗಳು.
ಇಪ್ಪತ್ತೆಂಟು ಸಾವಿರ ಮಹಾಮನೆಗಳು.
ಹತ್ತು ಸಾವಿರ ನಿತ್ಯ ನೇಮಿಗಳ ಮಠಂಗಳು.
ಹದಿನೈದು ಸಾವಿರ ಚಿಲುಮೆಯಗ್ಗವಣಿಯ ವ್ರತಸ್ಥರ ಮಠಂಗಳು.
ಐದು ಸಾವಿರ ವೀರ ವ್ರತನೇಮಿಗಳ ಕಟ್ಟಳೆಯ ಮಠಂಗಳು.
ಹನ್ನೆರಡು ಸಾವಿರ ಅಚ್ಚಪ್ರಸಾದಿಗಳ ಮಠಂಗಳು.
ಒಂದು ಸಾವಿರದ ಅರವತ್ತು ನಾಲ್ಕು ಶೀಲ ಸಂಪನ್ನರ ಮಠಂಗಳು.
ನಿತ್ಯ ಸಾವಿರ ಜಂಗಮಕ್ಕೆ ಆರೋಗಣೆಯ ಮಾಡಿಸುವ ದಾಸೋಹಿಗಳ ಮಠಂಗಳು ಮೂವತ್ತೇರಡು ಸಾವಿರ.
ನಿತ್ಯ ಐನೂರು ಜಂಗಮಕ್ಕೆ ಒಲಿದು ದಾಸೋಹವ ಮಾಡುವ ಸತ್ಯ ಸದಾಚಾರಿಗಳ ಮಠಂಗಳು ಐವತ್ತೆಂಟು ಸಾವಿರ.
ನಿತ್ಯ ಸಾವಿರದ ಐನೂರು ಜಂಗಮಕ್ಕೆ ಒಲಿದು ದಾಸೋಹವ ಮಾಡುವ ದಾಸೋಹಿಗಳ ಮಠಂಗಳು ಹನ್ನೊಂದು ಸಾವಿರ.
ನಿತ್ಯ ಆವಾರಿಯಿಂದ ಮಾಡುವ ಮಾಟಕೂಟದ ಸದ್ಭಕ್ತರ ಮಠಂಗಳು ಒಂದು ಲಕ್ಷ.
ಜಂಗಮಸಹಿತ ಸಮಯಾಚಾರದಿಂದ ಲಿಂಗಾರ್ಚನೆ ಮಾಡುವ ಜಂಗಮ ಭಕ್ತರ ಮಠಂಗಳು ಎರಡಸಾವಿರದೇಳನೂರೆಪ್ಪತ್ತು.
ಇಂತಪ್ಪ ಅಸಂಖ್ಯಾತರಿಗೆ ಮುಖ್ಯವಾಗಿ ರುದ್ರಲೋಕದಿಂದ ಇಳಿತಂದ ಪ್ರಮಥಗಣಂಗಳ ಮಠಂಗಳು ಏಳನೂರೆಪ್ಪತ್ತು.
ಇಂತಿ ಮಹಾಪ್ರಮಥರಿಗೆ ಪುರಾತರಿಗೆ ಅಸಂಖ್ಯಾತ ಮಹಾ ಗಣಂಗಳಿಗೆ ಪ್ರಮಥನಾಯಕನಾಗಿ .
ಏಕಮುಖ ದಶಮುಖ ಶತಮುಖ ಸಹಸ್ರಮುಖ ಲಕ್ಷಮುಖ ಕೋಟಿಮುಖ ಅನಂತ ಕೋಟಿ ಮುಖವಾಗಿ ಭಕ್ತರಿಗೆ ಒಡನಾಡಿಯಾಗಿಪ್ಪನು ಸಂಗನಬಸವಣ್ಣ.

ಜಗದಾರಾಧ್ಯ ಬಸವಣ್ಣ
ಪ್ರಥಮ ಗುರು ಬಸವಣ್ಣ
ಶರಣ ಸನ್ನಿಹಿತ ಬಸವಣ್ಣ
ಸತ್ಯ ಸಾತ್ವಿಕ ಬಸವಣ್ಣ
ನಿತ್ಯ ನಿಜೈಕ್ಯ ಬಸವಣ್ಣ
ಷಡಸ್ಥಲ ಸಂಪನ್ನ ಬಸವಣ್ಣ
ಸರ್ವಚಾರ ಸಂಪನ್ನ ಬಸವಣ್ಣ
ಸರ್ವಾಂಗ ಲಿಂಗಿ ಬಸವಣ್ಣ
ಸುಜ್ಞಾನ ಭರಿತ ಬಸವಣ್ಣ
ನಿತ್ಯ ಪ್ರಸಾದಿ ಬಸವಣ್ಣ
ಸಚ್ಚಿದಾನಂದಮೂರ್ತಿ ಬಸವಣ್ಣ
ಸದ್ಯೊನ್ಮುಕ್ತಿರೂಪ ಬಸವಣ್ಣ
ಅಖಂಡ ಪರಿಪೂರ್ಣ ಬಸವಣ್ಣ
ಆಕಾರಚಾರಿತ್ರ ಬಸವಣ್ಣ
ಅಸಾಧ್ಯ ಸಾಧಕ ಬಸವಣ್ಣ
ಅಭೇಧ್ಯ ಭೇಧಕ ಬಸವಣ್ಣ
ಅನಾಮಯ ಮೂರ್ತಿ ಬಸವಣ್ಣ
ಮಹಾಮನೆಯ ಮಾಡಿದಾತ ಬಸವಣ್ಣ.
ರುದ್ರಲೋಕವ ಮರ್ತ್ಯಲೋಕಕ್ಕೆ ತಂದಾತ ಬಸವಣ್ಣ

ಶಿವಾಚಾರ್ಯ ಘನವ ಮೇರೆದಾತ ಬಸವಣ್ಣ.
ಇಂತಪ್ಪ ಬಸವಣ್ಣನ ಭಕ್ತಿಯನು ಒರೆದೊರೆದು ನೋಡುವ ಪ್ರಜ್ವಲಿತ ಮಾಡುವ ಅಶ್ವಪತಿ ಗಜಪತಿ ನರಪತಿರಾಯ ರಾಜಾಧಿರಾಜ ಬಿಜ್ಜಳರಾಯನೂ ಆ ಬಸವಣ್ಣನೂ ಆ ಕಲ್ಯಾಣಪಟ್ಟಣದೊಳಗೆ ಸುಖಸಂಕಥಾವಿನೋದದಿಂದ ರಾಜ್ಯಂಗೈಯುತ್ತಿರಲು
ಆ ಕಲ್ಯಾಣದ ನಾಮವಿಡಿದು ವಿವಾಹಕ್ಕೆ ಕಲ್ಯಾಣವೆಂಬ ನಾಮವಾಯಿತ್ತು.
ಲೋಕದೊಳಗೆ ಕಲ್ಯಾಣವೆ ಕೈಲಾಸವೆನಿಸಿತು.
ಇಂತಪ್ಪ ಕಲ್ಯಾಣವ ದರುಶನ ಮಾಡಿದಡೆ ಭವಂ ನಾಸ್ತಿ.
ಇಂತಪ್ಪ ಕಲ್ಯಾಣವ ನೆನೆದಡೆ ಪಾಪಕ್ಷಯ
ಇಂತಪ್ಪ ಕಲ್ಯಾಣವ ಮಹಾತ್ಮೇಯ ಕೇಳಿದಡೆ ಕರ್ಮಕ್ಷಯವಹುದು.
ಮೋಕ್ಷ ಸಾಧ್ಯವಹುದು
ಇದು ಕಾರಣ ಕೂಡಲಚನ್ನಸಂಗಮದೇವಾ
ನಿಮ್ಮ ಭಕ್ತ ಬಸವಣ್ಣನಿದ್ದ ಠಾವೆ ಮಹಾಕಲ್ಯಾಣವೆಂದರಿದು ದಿವ್ಯ ಶಾಸನ ಬರೆದು ಪಠಿಸಿದ ಕಾರಣ ಎನ್ನ ಭವಂ ನಾಸ್ತಿಯಾಯಿತಯ್ಯಾ .

ಪರಿವಿಡಿ (index)
Previous ಮುರಘಾ ಮಠ ಚಿತ್ರದುರ್ಗ ಲಿಂಗಾಯತರು ವೀರಶೈವರಲ್ಲ Next