Previous ಮೈಸೂರು ಆಂದೋಲನದ ದುಷ್ಪರಿಣಾಮಗಳು ಉದಿಸಿ ಬಂದ ಲಿಂಗಾಯತ ಧರ್ಮ Next

ಇಕ್ಷುದಂಡಕ್ಕೆ ಕೀಳು ಮೇಲಲ್ಲದೆ ಸಕ್ಕರೆಯ ದಂಡಕ್ಕೆ ಕೀಳು ಮೇಲುಂಟೆ?

*

- ✍ ಶ್ರೀಮತಿ ರುದ್ರಮ್ಮ ಅಮರೇಶ
ಹಾಸಿನಾಳ ಗಂಗಾವತಿ.

ಅಲ್ಲಮಪ್ರಭು ವಚನ

|| ಓ೦ ಶ್ರೀಗುರು ಬಸವಲಿಂಗಾಯ ನಮಃ ||

ಇಕ್ಷುದಂಡಕ್ಕೆ ಕೀಳು ಮೇಲಲ್ಲದೆ ಸಕ್ಕರೆಯ ದಂಡಕ್ಕೆ ಕೀಳು ಮೇಲುಂಟೆ?
ಪರುಷಪಾಷಣಕ್ಕೆ ಕೀಳು ಮೇಲಲ್ಲದೆ ಕಡೆಯಾಣಿಗುಂಟೆ ಒರೆಗಲ್ಲು?
'ಉಂಟು', 'ಇಲ್ಲ' ಎಂಬ ಸಂದೇಹ ನಿಂದಲ್ಲಿ
ಗುಹೇಶ್ವರಲಿಂಗವು ತಾನೆ ಸಿದ್ಧರಾಮಯ್ಯಾ. -- ವಚನಸಂಪುಟ ೨, ವಚನಸಂಖ್ಯೆ ೯೨೭.


ಭಾವಾರ್ಥ: ಅಲ್ಲಮಪ್ರಭುಗಳು ತಮ್ಮ ಈವೊಂದು ವಚನದಲ್ಲಿ ಒಬ್ಬ ಶರಣನು ತನ್ನ ಪೂರ್ವಾಶ್ರಯವನ್ನೆಲ್ಲ ಕಳೆದುಕೊಂಡು ತದನಂತರ ಆ ಶರಣನ ಮನಸ್ಥಿತಿ ಯಾವ ಮಟ್ಟಕ್ಕೆ ತಲುಪಿ ನಿಂತಿರುತ್ತದೆ ಎಂಬುದನ್ನ ಇಲ್ಲಿ ಸಿದ್ಧರಾಮೇಶ್ವರರಿಗೆ ಉದಾಹರಿಸಿ ಹೇಳಿದ್ದಾರೆ.

ಇಕ್ಷುದಂಡಕ್ಕೆ ಕೀಳು ಮೇಲಲ್ಲದೆ ಸಕ್ಕರೆಯ ದಂಡಕ್ಕೆ ಕೀಳು ಮೇಲುಂಟೆ?

ಇಕ್ಷುದಂಡವೆಂದರೆ ಇಲ್ಲಿ ಕಬ್ಬು ಎಂಬ ಅರ್ಥ ಬರುತ್ತದೆ. ಈ ಕಬ್ಬು ಅಂಕು ಡೊಂಕಾಗಿ, ತೆಳ್ಳಗೆ ದಪ್ಪವಾಗಿ, ಉದ್ದಕ್ಕೆ ಗಿಡ್ಡವಾಗಿ ಒಟ್ಟಿನಲ್ಲಿ ಅದು ತನ್ನ ಬೆಳವಣಿಗೆಯ ಅನುಗುಣವಾಗಿ ಬೆಳೆದಿರುತ್ತದೆ. ಅದರಲ್ಲೂ ಸಹ ನಾವು ಮೇಲು ಕೀಳೆಂಬೆ ಭೇದ ಹುಡುಕಿ ಅವುಗಳ ಬೆಲೆಯನ್ನು ನಿರ್ಧರಿಸುತ್ತೇವೆ. ಅದೆ ನಾವು ಎಲ್ಲಾ ಕಬ್ಬುಗಳನ್ನು ಒಟ್ಟಿಗೆ ಸೇರಿಸಿ ಗಾಣದಲ್ಲಿ ಹಾಕಿದಾಗ ಅದರಿಂದ ರಸ ತೆಗೆದು ಆ ರಸವನ್ನು ಅಗ್ನಿಯಲ್ಲಿ ಬೇಯಿಸಿದಾಗ ಅದು ಸಕ್ಕರೆಯಾಗಿ ಮಾರ್ಪಾಡುಗೊಂಡು ನಮ್ಮ ಕಣ್ಣಿಗೆ ಮೇಲು ಕೀಳೆಂಬ ಭೇದವಿಲ್ಲದೆ ಒಂದೆ ಸಮನಾಗಿ ಕಾಣತೊಡಗುತ್ತದೆ. ಹಾಗಾಗಿ ಇಲ್ಲಿ ಅಲ್ಲಮಪ್ರಭುಗಳು ಕಬ್ಬಿನಲ್ಲಿ ನೀವು ಮೇಲು ಕೀಳೆಂದು ನಿರ್ಧರಿಸಬಹುದು ಆದರೆ ಅದು ಸಕ್ಕರೆಯಾಗಿ ಸಂಸ್ಕಾರ ಪಡೆದಾಗ ಆ ಸಕ್ಕರೆಗೆ ಮೇಲು ಕೀಳೆಂದು ನಿರ್ಧರಿಸಬಹುದೆ? ಎಂದು ವೈಜ್ಞಾನಿಕವಾಗಿಯೂ ಅಷ್ಟೆ ವೈಚಾರಿಕವಾಗಿಯೂ ಪ್ರಶ್ನೆ ಮಾಡಿದ್ದಾರೆ ಇವರಿಲ್ಲಿ. ಅಂದರೆ ಲಿಂಗಸಾಧಕನು ತಾನು ಈ ಮೊದಲು ನರಜನ್ಮದಲ್ಲಿ ಇದ್ದು ಮೇಲು ಕೀಳು ಎಂಬ ಭಾವನೆ ಹೊಂದಿ ತದನಂತರ ಹರಜನ್ಮಕ್ಕೆ ಬಂದಾಗ ಆತನಲ್ಲಿ ಮೇಲು ಕೀಳು ಎಂಬ ಉಬಯ ಭೇದಗಳನ್ನ ಕಾಣಬಾರದು ಏಕೆಂದರೆ ಆ ಲಿಂಗಸಾಧಕನು ಈ ಮೊದಲು ಆತ ಯಾರ ಮಗನೆ ಆಗಿರಬಹುದು. ಆತನು ಸ್ವತಹ ಲಿಂಗಧೀಕ್ಷೆ ಪಡೆದ ನಂತರ ಶಿವಪುತ್ರನಾಗಿ ಪರಿವರ್ತನೆ ಆಗಿರುತ್ತಾನೆ ಎಂಬ ಸ್ವಾನುಭಾವದ ಮಾತು ಇವರಾದಾಗಿದೆ ಇಲ್ಲಿ.

ಪರುಷಪಾಷಣಕ್ಕೆ ಕೀಳು ಮೇಲಲ್ಲದೆ ಕಡೆಯಾಣಿಗುಂಟೆ ಒರೆಗಲ್ಲು?

ಇಲ್ಲಿ ಪರುಷಪಾಷಣವೆಂದರೆ ಕಬ್ಬಿಣವನ್ನು ಮುಟ್ಟಿ ಚಿನ್ನವನ್ನಾಗಿ ಪರಿವರ್ತಿಸುವ ಒಂದು ಸಾಧನವಾಗಿದೆ. ಈ ಪರುಷಮಣಿಯು ವಿಷದಕಲ್ಲು ಎಂದು ಸಹ ಈವೊಂದು ವಚನದ ಸಾಲಿನಲ್ಲಿ ಪುಷ್ಠಿಕರಿಸುತ್ತದೆ. ಈ ದೆಸೆಯಿಂದಾಗಿ ನಾವು ಸಹಜವಾಗಿ ಅದರಲ್ಲಿ ಮೇಲು ಕೀಳೆಂಬ ಭೇದವನ್ನು ನೋಡುತ್ತೇವೆ. ಆದರೆ ಇದೆ ಪರುಷಮಣಿಯು ಕಬ್ಬಿಣವನ್ನು ಸೋಕಿದಾಗ ಇಡೀ ಕಬ್ಬಿಣವೆಲ್ಲ ಚೊಕ್ಕಚಿನ್ನವಾಗಿ ಮಾರ್ಪಾಡುಗೊಳಿಸುವ ತಾಕತ್ತು ಇದಕ್ಕೆ ಮಾತ್ರ ಇದೆ. ಆ ರೀತಿ ಮಾರ್ಪಾಡುಗೊಂಡ ಚೊಕ್ಕಚಿನ್ನವನ್ನು ನಾವು ಎಷ್ಟೇ ಒರೆಗಲ್ಲಿಗೆ ಹಚ್ಚಿ ನೋಡಿದರು ಸಹ ಅಲ್ಲಿ ಮೇಲು ಕೀಳೆಂಬ ಭೇದವನ್ನು ಹುಡುಕಲು ಸಾಧ್ಯವಿಲ್ಲ. ಹಾಗಾಗಿ ಇಲ್ಲಿ ಅಲ್ಲಮಪ್ರಭುಗಳು ಪರುಷವೆಂಬ ಕಲ್ಲಿನಲ್ಲಿ ಮೇಲು ಕೀಳು ಎಂಬ ವ್ಯತ್ಯಾಸವನ್ನು ನಿರ್ದರಿಸಬಹುದು ಆದರೆ ಅದೆ ಪರುಷಮಣಿಯು ಕಬ್ಬಿಣವನ್ನು ಮುಟ್ಟಿ ಚೊಕ್ಕಚಿನ್ನವಾಗಿ ಪರಿವರ್ತಿಸಿದಾಗ ಮರಳಿ ಚಿನ್ನದಲ್ಲಿ ಅದೆ ರೀತಿ ಭೇದವನ್ನು ಎಣಿಸಬಹುದೆ? ಎಂದು ಪ್ರಶ್ನಿಸಿದ್ದಾರೆ ಇಲ್ಲಿ ಇವರು. ಅಂದರೆ ಲಿಂಗಸಾಧಕನು ತಾನು ಈ ಮೊದಲು ವಿಷಯಾದಿಗಳ ಬಂಧನಗಳಲ್ಲಿದ್ದು ಆತನು ಯಾವಾಗ ಇಷ್ಟಲಿಂಗವೆಂಬ ಪರುಷಮಣಿ ಸೋಕಿಸಿಕೊಂಡಾಗ ಆತನ ವಿಷಯ ವಾಸನೆಗಳೆಲ್ಲ ತಮ್ಮಷ್ಟಕ್ಕೆ ತಾವೆ ದೂರ ಸರಿದು ಆತನ ನಡೆಪರುಷ ನುಡಿಪರುಷವಾಗಿ ಆತನ ಬದುಕು ಚೊಕ್ಕಚಿನ್ನವಾಗಿ ಅರ್ಥಾತ್ ಕಳಂಕರಹಿತವಾಗಿ ಇರುತ್ತದೆ. ಅಂಥ ಮನಸ್ಥಿತಿಯನ್ನು ನಿರ್ಮಿಸಿಕೊಂಡ ಶರಣನನ್ನು ಯಾರೆ ಎಷ್ಟೆ ಪರೀಕ್ಷೆ ಮಾಡಿದರು ಆತನ ನಿಲುವುಗಳು ಬದಲಾಗುವುದಿಲ್ಲ ಏಕೆಂದರೆ ಆತನಿಗೆ ಈ ತಾಕತ್ತು ಬಂದಿರುವುದು ಕೇವಲ ಗುರುಬಸವಣ್ಣನವರು ಕರುಣಿಸಿದ ಇಷ್ಟಲಿಂಗದಿಂದ ಮಾತ್ರ ಸಾಧ್ಯವಾಗಿದೆ ಎಂಬ ಅರ್ಥದಲ್ಲಿ ಹೇಳಿದ್ದಾರೆ ಇಲ್ಲಿ ಅಲ್ಲಮಪ್ರಭುಗಳು.

'ಉಂಟು' 'ಇಲ್ಲ' ಎಂಬ ಸಂದೇಹ ನಿಂದಲ್ಲಿ ಗುಹೇಶ್ವರಲಿಂಗವು ತಾನೆ ಸಿದ್ಧರಾಮಯ್ಯಾ.

ನಮ್ಮ ಶರಣರು ಈ ಇದೆ ಮತ್ತು ಇಲ್ಲ ಎಂಬ ಈ ಉಬಯ ದ್ವಂದ್ವದಿಂದ ಹೊರ ಬಂದವರು. ಇದರಂತೆ ಲಿಂಗಸಾಧಕನು ತಾನು ಈ ಮೊದಲು ಏನಾಗಿದ್ದೆ ತದನಂತರ ಲಿಂಗಧೀಕ್ಷೆಯ ಪಡೆದ ಬಳಿಕ ಏನೆಲ್ಲಾ ಇಲ್ಲವಾದೆ ಎನ್ನುವ ಈ ಉಬಯ ಅನುಮಾನವನ್ನು ಕಳಚಿ ಪಾರಮಾರ್ಥವೆಂಬ ಸಕ್ಕರೆಯ ಮೆದ್ದು ಚೊಕ್ಕಚಿನ್ನದಂತೆ ಹೊಳಪು ಪಡೆದು ತನ್ನ ಲಿಂಗದರಿವಿನಲ್ಲಿ ತಾನೆ ನಿಂತಾಗ ಸ್ವತಹ ಸಾಕ್ಷಾತ್ ಗುಹೇಶ್ವರಲಿಂಗವೆ ತಾನೇ ಆಗಿರುತ್ತಾನೆ ನೋಡು ಸಿದ್ಧರಾಮಯ್ಯಾ ಎಂದು ತಮ್ಮ ಲಿಂಗಸಾಧನೆಯ ಅನುಭವದಿಂದ ಇಡೀ ಶರಣಸಂಕುಲದ ಶರಣಸಾಧನೆಯನ್ನ ಸಂಪೂರ್ಣವಾಗಿ ಪರಿಚಯಿಸಿದ್ದಾರೆ ಇಲ್ಲಿ ಅಲ್ಲಮಪ್ರಭುಗಳು. ಒಟ್ಟಾರೆ ಈ ವಚನವು ಶರಣರ ಸಾಧನೆಯ ಕುರಿತಾಗಿ ಹೇಳಲಾಗಿದೆ. ಶರಣಸಾಧಕನಾದವನು ತನ್ನ ಪೂರ್ವಾಶ್ರಯವನ್ನೆಲ್ಲ ಕಳೆದುಕೊಂಡು ಲಿಂಗವನ್ನು ಆಶ್ರಯಿಸಿ ಬಂದಾಗ ಆ ಲಿಂಗದರಿವಿನಲ್ಲಿಯೆ ಐಕ್ಯವಾಗಿದ್ದುಕೊಂಡು ಸ್ವಯಂ ಬೆಳಕನ್ನು ಪಡೆದು ಇತರರಿಗೂ ಮಾದರಿಯಾಗಿರುತ್ತಾನೆ ಬೆಳಕಾಗಿರುತ್ತಾನೆ ಎಂದು ತಿಳಿಸಿ ಹೇಳುವುದೆ ಇಲ್ಲಿಯ ಪ್ರಮುಖ ಉದ್ದೇಶವಾಗಿದೆ. .

*
ಪರಿವಿಡಿ (index)
Previous ಮೈಸೂರು ಆಂದೋಲನದ ದುಷ್ಪರಿಣಾಮಗಳು ಉದಿಸಿ ಬಂದ ಲಿಂಗಾಯತ ಧರ್ಮ Next