Previous ವೀರಶೈವ ಮತ್ತು ಅಂಗಾಯತ ಮುರಘಾ ಮಠ ಚಿತ್ರದುರ್ಗ Next

ಹುರುಳಿಲ್ಲದ ವಿಷಯಗಳು

*

- ಡಾ. ಶಿವಾನಂದ ಜಾಮ್ದಾರ್ (ನಿವೃತ್ತ ಐಎಎಸ್ ಅಧಿಕಾರಿಗಳು)

ಹುರುಳಿಲ್ಲದ ವಿಷಯಗಳು ಇಟ್ಟುಕೊಂಡು ತಿರುಗಬೇಡಿ... ಪ್ರಾಜ್ಞರಾದ ಜನ ಛೀಮಾರಿ ಹಾಕುತ್ತಾರೆ.

ಮತಾಂತಲಿಂಗ ಶಿವಾಚಾರ್ಯರೆ ನೀವು ಮಾನ್ಯ ಮುಖ್ಯಮಂತ್ರಿಗಳಗೆ ಬರೆದ ಪತ್ರದ "ನಿಜವೀರಶೈವ ಬಸವೇಶ್ವರ " ಎಂಬ ಶೀರ್ಷಿಕೆಯಲ್ಲಿ ಬರೆದ ಅಂಶಗಳನ್ನು ಕುರಿತು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವಿರಾ?

1) ಹನ್ನೆರಡನೆ ಶತಮಾನದ ಯಾವುದೆ ಗ್ರಂಥ, ವಚನ, ಅಥವಾ ಐತಿಹಾಸಿಕ ದಾಖಲೆಯಲ್ಲಿ ಕೂಡಲಸಂಗಮದಲ್ಲಿ "ಸಾರಂಗಮಠ" ಎಂಬ ಮಠ ಇರಲೇ ಇಲ್ಲ. ಇಲ್ಲದ ಮಠವನ್ನು ಎಲ್ಲಿಂದ ಸ್ರಷ್ಟಿಸಿದಿರಿ?

2) ನಾನು 1997ರಿಂದ2012ರ ವರೆಗೆ ಕೂಡಲಸಂಗಮದ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದ ಕಾಲದಲ್ಲಿ ಶ್ರೀಶೈಲ ಪೀಠದ ವಾಗೀಶ ಪಂಡಿತಾರಾಧ್ಯರು ನನಗೊಂದು ಪತ್ರ ಬರೆದು ಸಂಗಮದ ಸಾರಂಗಮಠ ತಮ್ಮ ಪೀಠದ್ದೆಂದೂ ಅದನ್ನು ತಮಗೆ ನೀಡಬೇಕೆಂದು ಕೇಳಿಕೊಂಡಿದ್ದರು. ಆ ಪತ್ರ ನಮ್ಮಲ್ಲಿದೆ. ಈಗ ನೀವು ಸಾರಂಗಮಠ ಉಜ್ಜನಿಪೀಠದ್ದೆಂದು ಹೇಳಿದ್ದೀರಿ. ಎರಡರಲ್ಲಿ ಯಾವುದು ಸತ್ಯ?

ಎರಡೂ ಸುಳ್ಳು ಎನ್ನುವುದಕ್ಕೆ ಆಧಾರವಿದೆ.

ಸಂಗಮನಾಥನ ದೇವಾಲಯ ಸಂಕೀರ್ಣದಲ್ಲಿ ಅಂಜನೆಯ ಗುಡಿ, ವಿಷ್ಣುವಿನ ಗುಡಿ, ಬ್ರಂದಾವನ, ಸಿದ್ದೇಶ್ವರ ಗುಡಿ, ಇನ್ನೊಂದು ಹೆಸರಿಲ್ಲದ ಗುಡಿ ಇದ್ದವು. ಅವುಗಳನ್ನು ಭದ್ರಪಡಿಸಿ ಸಂರಕ್ಷಿಸಲಾಗಿದೆ. ಮೊದಲ ಮೂರೂ ಗುಡಿಗಳನ್ನು ಬಿಜಾಪುರ ಜಿಲ್ಲಾ ಬ್ರಾಹ್ಮಣ ಸಂಘದವರು ನಡೆಸುತ್ತಿದ್ದಾರೆ.

ಹಾಳಾಗಿ ಬಿದ್ದು ಹೋದ ಒಂದು ಸಣ್ಣ ಮನೆಯ ಗುರುತುಗಳಿದ್ದವು. ಒಂದು ಸಣ್ಭ ಬೇವಿನ ಮರ ಇತ್ತು. ಅದನ್ನು ಕೆಲವರು ಸಾರಂಗಮಠ ಎಂದು ಹೇಳಿದ್ದರು. ಅದನ್ನು ಬಿಟ್ಟು ಯಾವುದೇ ಸಾರಂಗಮಠ ಅಲ್ಲಿ ಇರಲಿಲ್ಲ. ಹಾಳಾಗಿಬಿದ್ದ ಆ ಮನೆಯನ್ನು ಇತರ ಸುಮಾರು ಇಪ್ಪತ್ತು ಅಚ೯ಕರ ಮನೆಗಳನ್ನು ನೆಲಸಮಗೊಳಿಸಿ ಅಲ್ಲಿ ಹೊಸದಾಗಿ ಪೌಳಿಗಳನ್ನು ನಿರ್ಮಿಸಲಾಗಿದೆ. ಮನೆಗಳ ಮಾಲಿಕರು ಪರಿಹಾರ ಪಡೆದಿದ್ದಾರೆ. ಆ ಮನೆಯೇ ಸಾರಂಗಮಠ ಎನ್ನುವುದಾದರೆ ಅದರಲ್ಲಿ ಯಾವ ಸ್ವಾಮಿಯೂ ಇರಲಿಲ್ಲ. ಆ ಕಟ್ಟಡ ಇತ್ತೀಚೆಗೆ ಕಟ್ಟಲ್ಪಟ್ಟ ಒಂದು ಸಣ್ಣ ಸಾಮಾನ್ಯ ಬಡ ಕುಟುಂಬದ ಮನೆಯಾಗಿತ್ತು.

ಹದಿನೈದು ವಷ೯ಗಳ ಹಿಂದೆ "ಅಭಿನವ ಜಾತವೇದ ಸ್ವಾಮಿ" ಎಂಬ ಹೆಸರಿನ ಸ್ವಾಮಿ ಹಾಗೂ ಒಂದು ಮಠವನ್ನು ಒಂದು ಕಿಲೊಮೀಟರ ದೂರದ ಅಚ೯ಕರ ಕಾಲೊನಿಯಲ್ಲಿ ಸ್ಥಾಪಿಸಲಾಗಿದೆ. ಅವುಗಳಿಗೆ ಯಾವುದೆ ಐತಿಹಾಸಿಕ ಆಧಾರವಿದ್ದಂತೆ ಕಾಣುವುದಿಲ್ಲ.

ಐತಿಹಾಸಿಕವಾಗಿ ಎರಡೂ ಸುಳ್ಳು ಎಂಬುದನ್ನು ನಾನು ಸಿದ್ಧ ಮಾಡಬಲ್ಲೆ.

3) ವಾಗೀಶರ ಪತ್ರಕ್ಕೆ ಬರೆದ ಉತ್ತರದಲ್ಲಿ ನಾನು ಹತ್ತು ಪ್ರಶ್ನೆಗಳನ್ನು ಕೇಳಿ ಬರೆದ ಪತ್ರಕ್ಕೆ ಅವರು ಉತ್ತರಿಸಲೇ ಇಲ್ಲ.

4) ಕನ್ನಡ, ತೆಲುಗು, ಸಂಸ್ಕೃತ ಭಾಷೆಯಲ್ಲಿ 10ಕ್ಕೂ ಹೆಚ್ಚು ಬಸವ ಚರಿತ್ರೆ/ ಪುರಾಣಗಳಿವೆ. ನಾನು ಆರನ್ನು ಓದಿರುವೆ. ಅವುಗಳಲ್ಲಿ "ಜಾತವೇದ ಮುನಿ" ಮತ್ತು "ಈಶಾನ್ಯಗುರು" ಎಂದೇ ಬರೆಯಲಾಗಿದೆ. 'ಮುನಿ' ಎಂಬ ಶಬ್ದ ಜೈನ ಮತ್ತು ಬ್ರಾಹ್ಮಣ ಸಾಹಿತ್ಯದಲ್ಲಿ ಬಳಸಲ್ಪಡುತ್ತದೆ. ಅದಕ್ಕೆ ಬದಲಾಗಿ ನೀವು "ಜಾತವೇದ ಶಿವಾಚಾರ್ಯ" ಎಂದು ಹೇಳಿದ್ದೀರಿ. ನೀವೆ ಅವರಿಗೆ ಪುನರ್ ನಾಮಕರಣ ಮಾಡಿದ್ದೀರಾ? ಯಾವ ಆಧಾರದ ಮೇಲೆ? ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರುತ್ತದೆ. ನೀವು ಆ ಮಿತಿಯನ್ನು ದಾಟಿದ್ದೀರಿ.

5) 12ನೆಯ ಶತಮಾನದ ಹರಿಹರನ "ಬಸವರಾಜ ದೇವರ ರಗಳೆ" ಪಾಲ್ಕುರಿಕೆ ಸೋಮನಾಥನ ತೆಲಗು "ಬಸವ ಪುರಾಣಮು" ದಲ್ಲಿ ಎಲ್ಲಿಯೂ ಜಾತವೇದ ಮುನಿಯನ್ನು "ಶಿವಾಚಾರ್ಯ" ಎಂದು ಕರೆದಿಲ್ಲ. ಇತರ ಹತ್ತಾರು ಬಸವ ಪುರಾಣಗಳಲ್ಲೂ "ಮುನಿ" ಗೆ "ಶಿವಾಚಾರ್ಯ " ಪದ ಬಳಕೆಯಾಗಿಲ್ಲ. ಇದು ನೀವು ಮತ್ತು ಪಂಚಾಚಾಯ೯ರು ಸ್ರಷ್ಟಿಸಿದ ಸುಳ್ಳಿನ ಕಂತೆಯಲ್ಲಿನ ಒಂದು ಉದಾಹರಣೆ.

ಅಲ್ಲದೆ ಜಾತವೇದ ಮುನಿ ಎಂದು ಕೆಲವು ಪುರಾಣಗಳು ಹೇಳಿದರೆ ಈಶಾನ್ಯ ಗುರು ಎಂದು ಕೆಲವು ಪುರಾಣಗಳು ಹೇಳಿವೆ. ಅವರನ್ನೂ ನೀವು "ಈಶಾನ್ಯ ಗುರು ಶಿವಾಚಾರ್ಯ" ಎನ್ನುತ್ತೀರಾ?


ಇವರಿಬ್ಬರನ್ನೂ "ದೀಕ್ಷಾ ಗುರು" ಎಂದು ಯಾವ ಪುರಾಣವೂ ಹೇಳಿಲ್ಲ. ನೀವು ಮತ್ತು ಪಂಚಾಚಾಯ೯ರ ಪಟಾಲಂ ಮಾತ್ರ ಇತ್ತೀಚಿಗೆ ಹೇಳಲು ಚಾಲೂ ಮಾಡಿದ್ದೀರಿ.

6) ಬಸವಣ್ಣನವರಿಗೆ ದೀಕ್ಷೆ ನೀಡಿದ ಗುರುವಿನ ಹೆಸರನ್ನು ನೀವು ಆಧಾರ ಸಹಿತ ಸಿದ್ಧ ಮಾಡದಿದ್ದರೆ ನೀವೊಬ್ಬ ಢೋಂಗಿ ಸ್ವಾಮಿ ಎನ್ನಬೇಕಾದೀತು. ಏಕೆಂದರೆ ಅವರು ಯಾರಿಂದಲೂ ದೀಕ್ಷೆ ಪಡೆದಿಲ್ಲ!!

7) ಲಿಂಗಾಯತವನ್ನು ವೀರಶೈವದೊಂದಿಗೆ "ಸಮೀಕರಣ" ಮಾಡಲು ನೀವು ಕೇಳಿಕೊಂಡಿದ್ದೀರಿ. ಹಾಗಾದರೆ, ಈ ಕೆಳಗಿನ ಅಂಶಗಳ ಹಿನ್ನಲೆಯಲ್ಲಿ "ಸಮೀಕರಣ" ಸಾಧ್ಯವೆ?

(ಅ) ವೀರಶೈವದ ಸ್ಥಾಪಕರು ರೇಣುಕಾಚಾರ್ಯರು. ಲಿಂಗಾಯತ ದ ಸ್ಥಾಪಕರು ಬಸವಣ್ಣನವರು.

(ಆ) ವೀರಶೈವರ ಧಮ೯ ಗ್ರಂಥ ಸಂಸ್ಕೃತ ಭಾಷೆಯಲ್ಲಿರುವ ಸಿದ್ಧಾಂತ ಶಿಖಾಮನಣಿ. ಲಿಂಗಾಯತರ ಧಮ೯ ಗ್ರಂಥ ಶುದ್ಧ ಕನ್ನಡದಲ್ಲಿರುವ ವಚನ ಸಾಹಿತ್ಯ.

(ಇ) ವೀರಶೈವರು ಸ್ಥಾವರ ಮತ್ತು ಇಷ್ಟಲಿಂಗ ಪೂಜಕರು. ಲಿಂಗಾಯತರು ಕೇವಲ ಇಷ್ಟಲಿಂಗವನ್ನು ಪೂಜಿಸುತ್ತಾರೆ. ಸ್ಥಾವರ ಲಿಂಗ ಪೂಜೆಯಿಂದ ದೇವಾಲಯ, ಅಚ೯ಕರು, ಕಾಣಿಕೆ, ದೇವಾಲಯ ಪ್ರವೇಶ ನಿರ್ಬಂಧ ಹುಟ್ಟುತ್ತವೆ. ಅವು ನಿಮ್ಮ ಹೊಟ್ಟೆಪಾಡಿಗಾಗಿ ಮಾಡಿಕೊಂಡ ಅಗತ್ಯಗಳು! ಲಿಂಗಾಯತರಿಗೆ ದೇಹವೇ ದೇವಾಲಯ. ಅಚ೯ಕರ ಅಗತ್ಯವಿಲ್ಲ. ಗುಡಿಗಳಿಗೆ ಹೋಗಬೇಕಿಲ್ಲ.

(ಈ) ವೀರಶೈವರು ಅವರ ಧಮ೯ ಗ್ರಂಥದ ಪ್ರಕಾರ ವೇದ ಆಗಮ ಶಾಸ್ತ್ರ ಪುರಾಣಗಳನ್ನು ಒಪ್ಪುತ್ತಾರೆ ಮತ್ತು ಆಚರಿಸುತ್ತಾರೆ. ಲಿಂಗಾಯತರು ವೇದ ಆಗಮ ಶಾಸ್ತ್ರಗಳನ್ನು ತಿರಸ್ಕರಿಸುತ್ತಾರೆ.

(ಉ) ವೀರಶೈವರು ಸಿದ್ಧಾಂತ ಶಿಖಾಮನಿಯ ನಾಲ್ಕು ಶ್ಲೋಕಗಳ ಪ್ರಕಾರ ಚಾತುವ೯ಣ೯ ಪದ್ಧತಿಯನ್ನು ಒಪ್ಪುತ್ತಾರೆ. ಲಿಂಗಾಯತರು ಚಾತುವ೯ಣ೯ದ ಕಡುವೈರಿಗಳು.

(ಊ) ವೀರಶೈವರು ಸಿದ್ಧಾಂತ ಶಿಖಾಮನಿಯ ಪ್ರಕಾರ ಸ್ವಗ೯, ನರಕ, ಪುನರ್ಜನ್ಮಗಳನ್ನು ಒಪ್ಪುತ್ತಾರೆ. ಲಿಂಗಾಯತರಿಗೆ ಸ್ವಗ೯ವಿಲ್ಲ, ನರಕವಿಲ್ಲ, ಪುನರ್ಜನ್ಮವಿಲ್ಲ. ಇದೇ ಜನ್ಮ ಕಡೆ.

(ಎ) ವೀರಶೈವರು ಕಾಯಕ ಮತ್ತು ದಾಸೋಹಗಳ ಬಗ್ಗೆ ಮಾತನಾಡುವುದೇ ಇಲ್ಲ. ಏಕೆಂದರೆ ಅವರ ಧಮ೯ ಗ್ರಂಥ ಮತ್ತು ಅವರು ನಂಬುವ ಕೆಲವು ಆಗಮ ಮತ್ತು ಶೀಲಗಳಲ್ಲಿ ಅನೇಕ ದೈಹಿಕ ಕಾಯ೯ಗಳನ್ನು ಮಾಡುವಂತಿಲ್ಲ. ಲಿಂಗಾಯತರಿಗೆ ಕಾಯಕ ದಾಸೋಹಗಳೆ ಪ್ರಮುಖ ಅಂಶಗಳು.

ಇಂತಹ ಇನ್ನೂ ಇಪ್ಪತ್ತು ಮೂಲಭೂತ ವೈರುಧ್ಯಗಳಿರುವ ಲಿಂಗಾಯತ ಮತ್ತು ವೀರಶೈವಗಳನ್ನು "ಸಮೀಕರಿಸುವ" ಮಾತು ಪೂರ್ವ ಪಶ್ಚಿಮಗಳನ್ನು ಒಂದುಗೂಡಿಸಿದಂತೆ.

ಬಸವಣ್ಣ ಯಾರಿಂದಲೂ ದೀಕ್ಷೆ ಪಡೆಯಲಿಲ್ಲ.

ಅವರು ವೀರಶೈವದ ಪ್ರಚಾರ ಮಾಡಲಿಲ್ಲ. ಹೊಸ ಲಿಂಗಾಯತ ಧಮ೯ವನ್ನು ಸ್ಥಾಪಿಸಿದರು.

ಪ್ರಕ್ಷುಬ್ದ ಸ್ಥಿತಿಯಲ್ಲಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನವನ್ನು ನಿಲ್ಲಿಸಿ.

ಇದು ರಾಜಕೀಯ ವೋಟ ಬ್ಯಾಂಕ್ ಪಾಲಿಟಿಕ್ಸ ಅಲ್ಲ.

ಎಲ್ಲರನ್ನೂ ಎಲ್ಲ ಕಾಲಕ್ಕೂ ಮೂಖ೯ರನ್ನಾಗಿಸುವುದು ಸಾಧ್ಯವಿಲ್ಲ.

ಪರಿವಿಡಿ (index)
Previous ವೀರಶೈವ ಮತ್ತು ಅಂಗಾಯತ ಮುರಘಾ ಮಠ ಚಿತ್ರದುರ್ಗ Next