Previous ಪಂಚಾಚಾರ್ಯರು ಶಿಲಾಲಿಂಗೋದ್ಭವರೆ? ಬ್ರಾಹ್ಮಣ್ಯದ ಬಗೆಗೆ ಪಂಚಾಚಾರ್ಯರ ಪ್ರೇಮ Next

ಪಂಚಾಚಾರ್ಯರು ಲಿಂಗಾಯತ / ವೀರಶೈವ ಧರ್ಮವನ್ನು ಸ್ಥಾಪಿಸಿದರೆ?

*

✍ ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ಪಂಚಾಚಾರ್ಯರು ಲಿಂಗಾಯತ / ವೀರಶೈವ ಧರ್ಮವನ್ನು ಸ್ಥಾಪಿಸಿದರೆ?

ವೀರಶೈವ ಧರ್ಮವನ್ನು ಸೃಷ್ಟಿಸಿದವರು ತಾವೇ ಎಂದು ಪಂಚಾಚಾರ್ಯರು ಮತ್ತೆ ಮತ್ತೆ ಹೇಳುತ್ತಲೇ ಇದ್ದಾರೆ. ಅವರು ಕೊಡುವ ಇನ್ನೊಂದು ಹೇಳಿಕೆಯೆಂದರೆ, ಬಸವಣ್ಣ ೧೨ನೆಯ ಶತಮಾನದಲ್ಲಿ ಒಬ್ಬ ಸಮಾಜ ಸುಧಾರಕನಾಗಿದ್ದ ಅಷ್ಟೆ ಎನ್ನುವುದು. ಅವರ ಈ ಹೇಳಿಕೆಗಳನ್ನು ಪರಿಶೀಲಿಸಬೇಕಾಗುತ್ತದೆ.

ಸೋಜಿಗವೆಂದರೆ, ಶತಶತಮಾನಗಳ ಕಥೆ ಹೇಳಿಕೊಳ್ಳುವ ಈ ಪಂಚಪೀಠಗಳಿಗೆ ಕೆಲವು ದಶಕಗಳ ಹಿಂದಿನವರೆಗೂ ಅಧಿಕೃತ ಚರಿತ್ರೆ ಇರಲಿಲ್ಲ ಎನ್ನುವುದು (ಈಗಿರುವ ಚರಿತ್ರೆಗಳೂ ವಸ್ತುನಿಷ್ಠವೇನಲ್ಲ). ಈ ಮೊದಲು ತಿಳಿಸಿದಂತೆ ೧೯೨೮ರಷ್ಟು ಮುಂಚೆ ನಾಡಿನ ಪ್ರಸಿದ್ದ ವಿದ್ವಾಂಸರಾದ ಡಾ. ಎಸ್.ಸಿ. ನಂದೀಮಠ ಅವರು 'ವೀರಶೈವಧರ್ಮ ಕೈಪಿಡಿ' ಎಂಬ ಕಿರುಪುಸ್ತಿಕೆಯೊಂದನ್ನು ರಚಿಸಿದ್ದಾರೆ. (ಅದು ಲಂಡನ್ನಿನ ವಿಶ್ವವಿದ್ಯಾಲಯಕ್ಕೆ ಅವರು ಸಲ್ಲಿಸಿದ ಮಹಾ ಪ್ರಬಂಧದ ಒಂದು ಭಾಗ) ಅದರಲ್ಲಿ ಪಂಚಾಚಾರ್ಯರಿಗೆ ಪುರಾಣಗಳಿವೆಯೇ ವಿನಃ ಚರಿತ್ರೆಯಿಲ್ಲ ಎಂದು ಹೇಳಲಾಗಿದೆ. ಈ ಪೀಠಗಳ ಬಗೆಗೆ ಅಧಿಕೃತ ಚರಿತ್ರೆಯನ್ನು ಬರೆಯುವವರೆಗೆ ಇವುಗಳ ಮೂಲ ಮತ್ತು ಬೆಳವಣಿಗೆ ಕುರಿತು ಏನನ್ನೂ ಹೇಳಲಾಗುವುದಿಲ್ಲ ಎನ್ನಲಾಗಿದೆ.

ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರು ತಮ್ಮ 'ಶರಣ ಸಾಹಿತ್ಯ-ಸಂಸ್ಕೃತಿ ಅಧ್ಯಯನ’ ಗ್ರಂಥದಲ್ಲಿ “ರೇಣುಕರೂ ಸೇರಿದಂತೆ ಪಂಚಾಚಾರ್ಯರು ಪ್ರತಿಯೊಂದು ಯುಗದಲ್ಲೂ ತಮ್ಮ ಧರ್ಮವನ್ನು ಸ್ಥಾಪಿಸಿದರು ಎನ್ನುವುದು ಕೇವಲ ಒಂದು ಸಾಂಕೇತಿಕ ಹೇಳಿಕೆಯಾಗಬಹುದೇ ಹೊರತು ಇತಿಹಾಸಕಾರರು ಅದನ್ನು ಚಾರಿತ್ರಿಕ ಸತ್ಯವೆಂದು ಪರಿಗಣಿಸಲಾಗದು” ಎಂದಿದ್ದಾರೆ. (ಪು. ೩೫೪-೩೫೫) ಪ್ರೊ. ಎಂ.ಆರ್. ಸಾಕ್ರೆ ಅವರಂತೂ ತಮ್ಮ “ಲಿಂಗಾಯತ ಧರ್ಮದ ಇತಿಹಾಸ ಮತ್ತು ತತ್ವಜ್ಞಾನ” ಗ್ರಂಥದಲ್ಲಿ “ಪಂಚಾಚಾರ್ಯರು ಲಿಂಗಾಯತ /ವೀರಶೈವ ಧರ್ಮದ ಸ್ಥಾಪಕರೆಂಬ ಎಲ್ಲ ವಾದಗಳನ್ನು ಇಡಿಯಾಗಿ ನಿರಾಕರಿಸಿದ್ದಾರೆ”.

ಶ್ರೀ ಬಿ.ಎಸ್, ಜೀರಗೆ ಅವರು ತಮ್ಮ 'ವೀರಶೈವ ಧರ್ಮ ಸ್ಥಾಪಕರು ಯಾರು?' (೧೯೩೭) ಗ್ರಂಥದಲ್ಲಿ “ರೇವಣಸಿದ್ಧ, ಪಂಡಿತಾರಾಧ್ಯ, ಏಕೋರಾಮ ಮತ್ತು ಮರುಳಸಿದ್ದ. ಇವರೆಲ್ಲ ಬಸವಣ್ಣನವರ ಅನುಭವ ಮಂಟಪಕ್ಕೆ ಬಂದು ಅಲ್ಲಮಪ್ರಭುವಿನ ಸಮ್ಮುಖದಲ್ಲಿ ಜಂಗಮಸ್ಥಲ ದೀಕ್ಷೆಯನ್ನು ಪಡೆದರು ಎಂಬುದನ್ನು ಕ್ರಿ.ಶ. ೧೬೦೦ರ ಸಂಗನ ಬಸವೇಶ್ವರರ ಒಂದು ವಚನದಲ್ಲಿ ಗಮನಿಸಬಹುದು. ಆ ವಚನದಲ್ಲಿ “ಬಸವಣ್ಣ ಮತ್ತು ಇತರ ಶರಣರು, ಕಲ್ಯಾಣದ ಅನುಭವ ಮಂಟಪದಲ್ಲಿ ತಾವು ಸಾಧಿಸಬೇಕಾದ ಸಮಾಧಿಯ (ದೈವದೊಡನೆ ಐಕ್ಯವಾಗುವುದು) ಮಾರ್ಗಗಳ ಬಗೆಗೆ ತಿಳಿಸಬೇಕೆಂದು ಅಲ್ಲಮನಲ್ಲಿ ಬಿನ್ನವಿಸಿಕೊಳ್ಳುತ್ತಾರೆ. ಅದಕ್ಕೆ ಅಲ್ಲಮನು ನಿರ್ಲಜ್ಜ ಶಾಂತಯ್ಯನ ಮೂಲಕ ಐಕ್ಯ ಸಾಧನೆಯ ಎಂಟು ಪಥಗಳನ್ನು ವಿವರಿಸುತ್ತಾನೆ. ಅನುಭವ ಮಂಟಪದಲ್ಲಿ ಗಾಢ ತತ್ತ್ವಚಿಂತನೆಯ ಎಂಟು ತಂಡಗಳಿದ್ದವು. ರೇವಣಸಿದ್ಧ, ಮರುಳಸಿದ್ದ, ಏಕೋರಾಮ, ಪಂಡಿತಾರಾಧ್ಯ ಮತ್ತಿತರರು ಐದನೆಯ ತಂಡದಲ್ಲಿದ್ದರು. ಅಲ್ಲಿ 'ಬಯಲು ಸಮಾಧಿ'ಯ ಐದನೆಯ ಪಥವನ್ನು ಅರ್ಥಮಾಡಿಕೊಳ್ಳಲಾಗುತ್ತದೆ” ಎಂಬ ಸಂಗತಿ ತಿಳಿದುಬರುತ್ತದೆ. ಆದ್ದರಿಂದ ಇಲ್ಲಿ ಪ್ರಸ್ತಾಪಿತರಾಗಿರುವ ನಾಲ್ಕು ಜನರೂ ಧರ್ಮಸ್ಥಾಪಕರಲ್ಲ (ಪು. ೪-೫).

ಪ್ರೊ ಶಿ.ಶಿ. ಬಸವನಾಳ ಅವರು “ವೀರಶೈವದ ಹುಟ್ಟು ಮತ್ತು ಬೆಳವಣಿಗೆ” ಎಂಬ ತಮ್ಮ ಗ್ರಂಥದಲ್ಲಿ ಲಿಂಗಾಯತ ಧರ್ಮವು ಬಸವಣ್ಣನವರಿಂದಲೇ ಸ್ಥಾಪಿತವಾದದ್ದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಶ್ರೀ ಬಿಜ್ಜರಗಿ ಅವರು ೨೦೦೯ರಲ್ಲಿ ವಿಸ್ತ್ರತ ಕ್ಷೇತ್ರಕಾರ್ಯ ನಡೆಸಿ, 'ಪ್ರಸ್ತುತ ಪಂಚಪೀಠಗಳ ಮುಖ್ಯಸ್ಥರು, ಅದರಲ್ಲೂ ಕಾಶೀಪೀಠದ ಸ್ವಾಮಿಗಳು ಕಟ್ಟುಕಥೆಗಳ ಚರಿತ್ರೆ ಸೃಷ್ಟಿಸುವಲ್ಲಿ ಬಿಡುವಿಲ್ಲದೆ ತೊಡಗಿದ್ದಾರೆ' ಎಂದು ತಿಳಿಸಿದ್ದಾರೆ (ಪು. ೨೮೯-೩೮೮).

ಶ್ರೀ ಸಿದ್ದರಾಮ ಪೂಜಾರಿ ಅವರು “ಪಂಚಪೀಠಗಳ ಆರಂಭದಿಂದ ಇದ್ದವರೆಂದು ಹೇಳಲಾಗುವ ಪೀಠಮುಖ್ಯರ ಸುಳ್ಳು ಮತ್ತು ಕಲ್ಪನೆಯ ಕಾಲಾನುಕ್ರಮವನ್ನು ಸೃಷ್ಟಿಸಲಾಗಿದೆ. ಅವರು ಸೃಷ್ಟಿಸಿರುವ ಐದು ಪಟ್ಟಿಗಳ ಪ್ರಕಾರ, ರಂಭಾಪುರಿ ಪೀಠದಲ್ಲಿ ಅದರ ಆರಂಭದಿಂದ (ವರ್ಷ ತಿಳಿಯದು) ಇದುವರೆಗೆ ೧೨೧ ಜನ ಪೀಠಾಧಿಕಾರಿಗಳೂ, ಉಜ್ಜಿನಿ ಪೀಠದಲ್ಲಿ ೧೦೯ ಜನರೂ, ಕೇದಾರ ಪೀಠದಲ್ಲಿ ೩೨೩ ಜನರೂ, ಶ್ರೀಶೈಲ ಪೀಠದಲ್ಲಿ ೨೭ ಜನರೂ, ಕಾಶಿಪೀಠದಲ್ಲಿ ೮೭ ಜನರೂ ಪೀಠಾಧೀಶರಾಗಿದ್ದಾರೆಂದು ತಿಳಿದುಬರುತ್ತದೆ. ಅದರಲ್ಲಿ ಆಚಾರ್ಯ ಮತ್ತು ಆರಾಧ್ಯ ಶಬ್ದಗಳನ್ನು ಒಟ್ಟಾರೆಯಾಗಿ ಒಂದೇ ಅರ್ಥದಲ್ಲಿ ಬಳಸಲಾಗಿದೆ” ಎಂದಿದ್ದಾರೆ. ಈ ಕಲ್ಪಿತ ಆಧಾರದ ಪ್ರತಿಯೊಂದು ಅಂಶವನ್ನು ಪರಿಶೀಲಿಸಿರುವ ಶ್ರೀ ಸಿದ್ದರಾಮ ಪೂಜಾರಿ ಅವರು “ಕೇದಾರ ಪೀಠದ ಬಳಿ ಇರುವ ಓಖಿ ಮಠದ ದಾಖಲೆಗಳನ್ನು ಕೇದಾರಮಠದ ಅಸ್ತಿತ್ವಕ್ಕೆ ಸಾಕ್ಷಾಧಾರಗಳಾಗಿ ಬಳಸಿಕೊಳ್ಳಲಾಗಿದೆ. ಅದೇ ರೀತಿ, ಕಾಶಿಯಲ್ಲಿರುವ ಗೋಸಾಯಿ ಮಲ್ಲಿಕಾರ್ಜುನ ಮಠದ ಭೂಮಿ ಮಂಜೂರಾತಿ ಕರಾರುಪತ್ರವು ಕಾಶಿವಿಶ್ವಾರಾಧ್ಯ ಪೀಠದ್ದು ಎಂದು ತೋರಿಸಲಾಗಿದೆ. ಗೋಸಾಯಿ ಮಠವು ಪ್ರಾಚೀನ ಬ್ರಾಹ್ಮಣ ಮಠವಾಗಿದ್ದು, ವಿಶ್ವಾರಾಧ್ಯ ಪೀಠ ಎನ್ನುವುದು ಈಚಿನದು. ಅದು ೧೯ನೆಯ ಶತಮಾನದ ಆರಂಭದಲ್ಲಿ ಸಂಸ್ಕೃತಾಭ್ಯಾಸಕ್ಕೆ ಕರ್ನಾಟಕದಿಂದ ಕಾಶಿಗೆ ಬರುವ ವಿದ್ಯಾರ್ಥಿಗಳಿಗೆಂದು ಸ್ಥಾಪಿಸಿದ್ದ ವಿದ್ಯಾರ್ಥಿನಿಲಯ” ಎಂದು ದಾಖಲಿಸಿದ್ದಾರೆ.

'ಸಿದ್ಧಾಂತ ಶಿಖಾಮಣಿ'ಯು ರೇವಣಸಿದ್ಧನು ಮಾತ್ರ ವೀರಶೈವ ಧರ್ಮವನ್ನು ಬೋಧಿಸಿದ ಎಂದು ಸ್ಪಷ್ಟವಾಗಿ ಹೇಳುತ್ತದೆ. ಅದರಲ್ಲಿ ವೀರಶೈವ ಧರ್ಮ ಸ್ಥಾಪನೆ ಅಥವಾ ಬೋಧನೆಯಲ್ಲಿ ಉಳಿದ ನಾಲ್ಕೂ ಆಚಾರ್ಯರ ಪಾತ್ರವೇ ಇಲ್ಲ. ಇಂತಹ ಗ್ರಂಥಗಳು ಸಾಕಷ್ಟು ನಂತರದ ಅವಧಿಯಲ್ಲಿ ಆದ ಸೃಷ್ಟಿಗಳೆನ್ನುವುದು ಸ್ಪಷ್ಟವಾಗಿದೆ. ಈ ಆಚಾರ್ಯರುಗಳಲ್ಲಿ ಯಾರೊಬ್ಬರ ಜೀವನ ಚರಿತ್ರೆಯಲ್ಲೂ, ಅವರು ಯಾವುದೇ ಧರ್ಮಸ್ಥಾಪಕರೆಂದು ದಾಖಲಿಸಿಲ್ಲ.

ಜೊತೆಗೆ ರೇವಣಸಿದ್ದ, ಏಕೋರಾಮ, ಪಂಡಿತಾರಾಧ್ಯ ಮತ್ತು ಮರುಳಸಿದ್ದರು ಬಸವಣ್ಣನವರ ಸಮಕಾಲೀನರಾಗಿದ್ದಾರೆಂಬುದು ಮತ್ತು ೧೨ನೆಯ ಶತಮಾನದ ಅನೇಕ ಶರಣರಿಗೆ ಅವರು ಪರಿಚಿತರಾಗಿದ್ದರೆಂಬುದು ವಚನ ಸಾಹಿತ್ಯದಿಂದಲೇ ತಿಳಿದು ಬರುತ್ತದೆ. ವಿಶ್ವಾರಾಧ್ಯನ ಹೊರತಾಗಿ ಉಳಿದ ಮೂವರು ವಚನಗಳನ್ನು ರಚಿಸಿದ್ದು, ಅವು ಕರ್ನಾಟಕ ಸರ್ಕಾರವು ಮೂರು ಆವೃತ್ತಿಗಳಲ್ಲಿ ಪ್ರಕಟಿಸಿರುವ (೧೯೯೩, ೨೦೦೩ ಮತ್ತು ೨೦೧೬) ಸಮಗ್ರ ವಚನ ಸಂಪುಟಗಳಲ್ಲಿ ಅಚ್ಚಾಗಿವೆ. ಅವರು ಧರ್ಮಸ್ಥಾಪಕರು ಎನ್ನುವುದು ವಚನ ಸಾಹಿತ್ಯದಲ್ಲೂ ಎಲ್ಲೂ ಕಂಡುಬಂದಿಲ್ಲ.

ಮೇಲೆ ಪ್ರಸ್ತಾಪಿಸಿದ ಸಂಗತಿಗಳ ಆಧಾರದ ಮೇಲೆ ವಿದ್ವಾಂಸರು ಕೆಳಗೆ ಕಂಡ ವಸ್ತುನಿಷ್ಠ ನಿರ್ಧಾರಕ್ಕೆ ಬಂದಿದ್ದಾರೆ:

* ಸುಪ್ರಭೇದಾಗಮ ಮತ್ತು ಸ್ವಯಂಭು ಆಗಮಗಳು ಪ್ರಾಚೀನ ಗ್ರಂಥಗಳಲ್ಲ. ಅವು ೧೮ನೆಯ ಶತಮಾನ ಅಥವಾ ನಂತರದಲ್ಲಿ ರಚನೆಯಾಗಿವೆ.
* 'ಚತುರಾಚಾರ್ಯರು' ಎನ್ನುವುದು ಹದಿನೈದು ಮತ್ತು ಹದಿನಾರನೆಯ ಶತಮಾನಗಳಲ್ಲಿ ಆಗಿರುವ ಸೃಷ್ಟಿ, ಅದಕ್ಕಾಗಿ ರೇವಣಸಿದ್ಧ, ಮರುಳಸಿದ್ದ, ಏಕಾಂತದ ರಾಮಯ್ಯ ಮತ್ತು ಪಂಡಿತಾರಾಧ್ಯರ ಹೆಸರುಗಳನ್ನು ಅನುಕೂಲಕ್ಕೆ ತಕ್ಕಂತೆ ತಿರುಚಲಾಗಿದೆ.
* ಸ್ವಯಂ ಶಿವನೇ ತನ್ನ ಪತ್ನಿ ಪಾರ್ವತಿ ಮತ್ತು ಮಗ ಸ್ಕಂದನಿಗೆ ಮೊದಲು ವೀರಶೈವ ಧರ್ಮವನ್ನು ಬೋಧಿಸಿದ ಎಂದು ಸಿದ್ಧಾಂತ ಶಿಖಾಮಣಿ'ಯೇ ಹೇಳಿರುವುದರಿ೦ದ ರೇಣುಕ ನಾಗಲೀ ಇತರ ನಾಲ್ವರು ಆಚಾರ್ಯರುಗಳಾಗಲೀ ವೀರಶೈವ ಧರ್ಮದ ಸ್ಥಾಪಕರಲ್ಲ.
* ಪಂಚಾಚಾರ್ಯ ರೇಣುಕನು ಅಗಸ್ಯನಂತಹ ಋಷಿಗೆ ಧರ್ಮವನ್ನು ಬೋಧಿಸುವಷ್ಟು ಪ್ರಸಿದ್ಧನಾಗಿದ್ದಿದ್ದರೆ, ರಾಮಾಯಣ, ಮಹಾಭಾರತ, ಗೀತೆಯಂತಹ ಯಾವುದಾದರೂ ಸಮಕಾಲೀನ ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಅದರ ಪ್ರಸ್ತಾಪ ಇರುತ್ತಿತ್ತು.

ಪ್ರೊ ಸಾಕ್ರೆ ಅವರ ಪ್ರಕಾರ, ೧೨ನೆಯ ಶತಮಾನದ ಅಥವಾ ಮುಂಚಿನ ಕೆಳಗೆಕಂಡ ಯಾವುದೇ ಗ್ರಂಥಗಳಲ್ಲಿ ಪಂಚಾಚಾರ್ಯರ ಮತ್ತು 'ಸಿದ್ದಾಂತ ಶಿಖಾಮಣಿ'ಯ ಪ್ರಸ್ತಾಪವಿಲ್ಲ:

೧. ಹರಿಹರನ 'ಬಸವರಾಜದೇವರ ರಗಳೆ' (೧೨ನೆಯ ಶತಮಾನದ ಅಂತ್ಯ)
೨. ಪಾಲ್ಕುರಿಕೆ ಸೋಮನಾಥನ 'ಬಸವಪುರಾಣಮು' (ತೆಲುಗು ಹರಿಹರನ ರಗಳೆಯ ನಂತರ)
೩. ರಾಘವಾಂಕನ 'ಸಿದ್ದರಾಮ ಚರಿತ್ರೆ' (೧೩ನೆಯ ಶತಮಾನ)
೪. ಕೆರೆಯ ಪದ್ಮರಸನ 'ದೀಕ್ಷಾಬೋಧೆ' (೧೩ನೆಯ ಶತಮಾನ)
೫. ಕುಮಾರ ಪದ್ಮರಸನ 'ಸಾನಂದ ಚರಿತೆ' ಮತ್ತು 'ಶಿವಾದ್ವೈತ ಸಾಕಾರ ಸಿದ್ದಾಂತ' (೧೩ನೆಯ ಶತಮಾನ)
೬. ಮಲ್ಲಿಕಾರ್ಜುನ ಪಂಡಿತಾರಾಧ್ಯನ 'ಶಿವತತ್ವಸಾರ' (೧೨-೧೩ನೆಯ ಶತಮಾನ)
೭ ಭೀಮಕವಿಯ 'ಬಸವ ಪುರಾಣ' (ಕನ್ನಡ, ೧೩೬೮)

ಇನ್ನು ಬಸವಣ್ಣ, ಚನ್ನಬಸವಣ್ಣ ಮತ್ತು ಅಲ್ಲಮಪ್ರಭುಗಳ ಷಟ್‌ಸ್ಥಲ ವಚನಗಳಲ್ಲಿ ಎಲ್ಲೂ 'ವೀರಶೈವ' ಅಥವಾ 'ಪಂಚಾಚಾರ್ಯ' ಶಬ್ದ ಬಳಕೆಯಾಗಿಲ್ಲ. ಹೆಚ್ಚಿನ ವಚನಗಳಲ್ಲಿ ಎಲ್ಲೋ ಕೆಲವು ಕಡೆ 'ವೀರಶೈವ' ಶಬ್ದ ಕಾಣಿಸುತ್ತದೆ. (ಅವು ಪ್ರಕ್ಷಿಪ್ತ ವಚನಗಳೆಂದು ಕೆಲವು ವಿದ್ವಾಂಸರು ಸ್ಪಷ್ಟವಾಗಿ ಹೇಳಿದ್ದಾರೆ.)

ಐವರು ಆಚಾರ್ಯರುಗಳಲ್ಲಿ ಯಾರೂ ಧರ್ಮ ಸ್ಥಾಪಕರಲ್ಲ ಎನ್ನುವುದಕ್ಕೆ ಅದೇ ಪ್ರೊ ಸಾಖ್ರೆ ಅವರು ಅನೇಕ ಅಂಶಗಳನ್ನು ಪಟ್ಟಿ ಮಾಡಿದ್ದಾರೆ: ಅವುಗಳನ್ನು ಕೆಳಗೆ ಕೊಡಲಾಗಿದೆ:

೧. ವೀರಶೈವ ಧರ್ಮವು ಬಸವಣ್ಣನವರಿಗಿಂತ ಮುಂಚೆ ಇದ್ದಿದ್ದರೆ, ಬಸವಣ್ಣನವರು ವರ್ಣಾಶ್ರಮ ವ್ಯವಸ್ಥೆಯ ವಿರುದ್ದ ಪ್ರತಿಭಟಿಸುವ ಅಗತ್ಯವೇ ಇರುತ್ತಿರಲಿಲ್ಲ. ಅವರೇ ವೀರಶೈವ ಧರ್ಮಕ್ಕೆ ಮತಾಂತರಗೊಂಡು ಆ ವ್ಯವಸ್ಥೆಯಲ್ಲೇ ತೃಪ್ತರಾಗಿರುವುದು ಸಾಕಾಗಿತ್ತು. ಆದರೆ ಅವರು ಹಾಗೆ ಪ್ರತಿಭಟನೆ ಮಾಡಿದ್ದೇ ವೀರಶೈವ ಧರ್ಮವು ಹುಟ್ಟಿಕೊಳ್ಳಲು ದಾರಿಯಾಯಿತು (ಪು. ೪೨೮)

೨. ಬಸವಣ್ಣನವರು ಯಾರಿಂದಲಾದರೂ ದೀಕ್ಷೆ ಪಡೆದರು ಎನ್ನುವ ಬಗೆಗೂ ಎಲ್ಲೂ ಪ್ರಸ್ತಾಪವಾಗಿಲ್ಲ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅವರೇ ಲಿಂಗದೀಕ್ಷೆ ಅಥವಾ ಇಷ್ಟಲಿಂಗ ಸಂಸ್ಕೃತಿಯನ್ನು ಆರಂಭಿಸಿದರು. ಸ್ಥಾವರಲಿಂಗದ ವಿಚಾರ ಹೊಸತಲ್ಲದಿದ್ದರೂ ಇಷ್ಟಲಿಂಗದ ವಿಷಯ ಹೊಸದಾಗಿತ್ತು. ಈ ವಿಷಯ ಅವರಿಗೆ ಹೊಳೆದದ್ದು ಸಂಗಮದಲ್ಲಿ. (ಪು. ೪೨೯)

೩. ವೀರಶೈವ ಧರ್ಮವು ಬಸವಣ್ಣನವರಿಗಿಂತ ಮುಂಚೆಯೇ ಇದ್ದಿದ್ದರೆ ಇತಿಹಾಸವು ಏಕೆ ಮೌನವಾಗಿರುತ್ತಿತ್ತು? ಜೈನಧರ್ಮ, ವೈಷ್ಣವ ಧರ್ಮ, ಕಾಪಾಲಿಕ, ಕಾಳಾಮುಖ, ಲಕುಲೀಶ ಇತ್ಯಾದಿ ನಾನಾ ಪಂಥಗಳೊಂದಿಗೆ ಶೈವಧರ್ಮ - ಇವನ್ನೆಲ್ಲ ಪ್ರಸ್ತಾಪ ಮಾಡುವ ಚರಿತ್ರೆಯು ೧೨ನೆಯ ಶತಮಾನಕ್ಕೆ ಮುಂಚೆ ಎಲ್ಲಿಯೂ ಎಳ್ಳಷ್ಟೂ ಪ್ರಸ್ತಾಪ ಮಾಡಿಲ್ಲವೇಕೆ? ಇದು ೧೨ನೆಯ ಶತಮಾನದ ಮುಂಚಿನ ವೀರಶೈವ ಸಾಹಿತ್ಯಕ್ಕೂ ಅನ್ವಯವಾಗುತ್ತದೆ. ಬಸವಣ್ಣನವರ ಕಾಲಕ್ಕೆ ಮತ್ತು ಅವರ ನಂತರ ವೀರಶೈವ ಸಾಹಿತ್ಯದ ಒಂದು ಪ್ರವಾಹವೇ ಉಕ್ಕಲು ಕಾರಣವೇನು? (ಪು. ೪೧೭)

೪. ಬಸವಣ್ಣನವರು ಮತ್ತು ಅವರ ಸಹಶರಣರು ತಮ್ಮ ವಚನಸಾಹಿತ್ಯದಲ್ಲಿ ೬೩ ಪುರಾತನರ (ಅವರು ಕೇವಲ ಶೈವರಾಗಿದ್ದರೂ) ಹೆಸರುಗಳನ್ನು ಅತ್ಯಂತ ಭಕ್ತಿಭಾವದಿಂದ ನೆನೆದಿದ್ದಾರೆ. ವಾಸ್ತವವಾಗಿ ಅವರಗಿಂತ ಮುಂಚೆ ವೀರಶೈವ ಧರ್ಮವಿದ್ದಿದ್ದಲ್ಲಿ ಅದರ ಸ್ಥಾಪಕರನ್ನು ಅಷ್ಟೇ ಪ್ರೀತಿ-ಗೌರವಗಳಿಂದ ನೆನೆಯುತ್ತಿದ್ದರು. ಆದರೆ ಅಷ್ಟು ಬೃಹತ್ರಮಾಣದ ವಚನ ಸಾಹಿತ್ಯದಲ್ಲಿ ಆಚಾರ್ಯರ ಸುಳಿವೇ ಇಲ್ಲದಿರುವುದು ಸ್ಪಷ್ಟವಾಗಿದೆ.

೫. ಹಾಗಾದರೆ ಲಿಂಗಾಯತ/ವೀರಶೈವ ಧರ್ಮದ ಸ್ಥಾಪಕರು ಯಾರು? ಬಸವಣ್ಣನವರೇ? ಇದಕ್ಕೆ ನಾವು ಒತ್ತುಕೊಟ್ಟು ಹೇಳುವ ಉತ್ತರ; ಹೌದು ಬಸವಣ್ಣನವರೇ. ನಾವು ಹೀಗೆ ಹೇಳುವುದಕ್ಕೆ ಕೆಳಗೆ ಕಂಡ ಆಧಾರಗಳಿವೆ ಮತ್ತು ಅವು ಸತ್ಯವನ್ನು ಹೊರಗೆಡವುತ್ತವೆ.

(ಅ) ಪಾಲ್ಕುರಿಕೆ ಸೋಮನಾಥನು (ಕ್ರಿ.ಶ. ೧೧೯೫) ತನ್ನ 'ಗಣಸಹಸ್ರನಾಮ' ಗ್ರಂಥದಲ್ಲಿ “ಬಸವಣ್ಣನವರು ಶಿವಧರ್ಮದ ಚೇತನವಾಗಿದ್ದರು. ಅದಕ್ಕೆ ಅವರೇ ಮೊದಲ ಆಚಾರ್ಯರು” ಎಂದಿದ್ದಾರೆ. (ಶಿವತತ್ವ ಸರ್ವಚೈತನ್ಯಂ ಈಶಗುರು ಬಸವಲಿಂಗ ಪ್ರಮಥಾಚಾರ್ಯೇಂದು ವಂದಿಸಿ ಸ್ತುತಿಸುವೆನು)

(ಆ) ಚಾಮರಸನು (ಕ್ರಿ.ಶ. ೧೪೩೦) ತನ್ನ 'ಪ್ರಭುಲಿಂಗಲೀಲೆ'ಯಲ್ಲಿ ಬಸವಣ್ಣನವರನ್ನು ಧರ್ಮದ 'ಆದ್ಯ ಪ್ರವರ್ತಕ' ಎಂದು ಸ್ತುತಿಸಿದ್ದಾನೆ. (ರಾಯ ಪೂರ್ವಾಚಾರಿ ಸಂಗನ ಬಸವ ಶರಣಾರ್ಥಿ)

(ಇ) ಸಿದ್ಧನಂಜೇಶನು (೧೪ನೆಯ ಶತಮಾನ) 'ಗುರುರಾಜ ಚರಿತ್ರೆಯಲ್ಲಿ 'ಭೂಮಿಯ ಮೇಲೆ ವೀರಶೈವ ಧರ್ಮವನ್ನು ಶಾಶ್ವತವಾಗಿ ಬೇರಾರು ಸ್ಥಾಪಿಸಬಲ್ಲರು? ಅದು ಬಸವಣ್ಣನಿಂದ ಮಾತ್ರ ಸಾಧ್ಯ' ಎಂದು
ಪಂಡಿತಾರಾಧ್ಯನಿಂದ ಹೇಳಿಸಿದ್ದಾನೆ.

(ಈ) ನೀಲಕಂಠ ಶಿವಾಚಾರ್ಯನು (ಕ್ರಿ.ಶ. ೧೮೪೫) ತನ್ನ 'ಆರಾಧ್ಯ ಚರಿತ್ರೆಯಲ್ಲಿ ಬಸವಣ್ಣನವರು ಲಿಂಗೈಕ್ಯರಾದುದನ್ನು ಕೇಳಿ ಪಂಡಿತಾರಾಧ್ಯನು 'ವೀರಶೈವ ಧರ್ಮವನ್ನು ಸ್ಥಾಪಿಸಿ, ಪೋಷಿಸಲು ಬಸವಣ್ಣನಲ್ಲದೆ ಬೇರೆ ಯಾರಿದ್ದಾರೆ' ಎಂದು ಹೇಳುವುದನ್ನು ಉಲ್ಲೇಖಿಸಿದ್ದಾನೆ.

(ಉ) ಮೊಗ್ಗೆಯ ಮಾಯಿದೇವರು (ಕ್ರಿ.ಶ. ೧೪೭೮) ತನ್ನ 'ಶತಕತ್ರಯ'ದಲ್ಲಿ “ಬಸವಣ್ಣ ವೀರಶೈವ ಧರ್ಮದ ಅವತಾರ ಮತ್ತು ಅದರ ಆದ್ಯ ಪ್ರವರ್ತಕ” ಎಂದಿದ್ದಾನೆ. (ವೀರಶೈವ ನಿರ್ಣಯ ಪರಮಾವತಾರ...
ಆದಿ ದೇಶಿಕ)

(ಊ) ಮರಿತೋಂಟದಾರ್ಯನು (ಕ್ರಿ.ಶ. ೧೫೦೦) ತನ್ನ 'ಸಿದ್ದೇಶ್ವರ 'ಪುರಾಣ'ದಲ್ಲಿ ಬಸವಣ್ಣನವರನ್ನು ಸ್ತುತಿಸಿ, ಅವರನ್ನು 'ವೀರಶೈವ ಧರ್ಮಸ್ಥಾಪಕ' ಎನ್ನುತ್ತಾನೆ.

(ಋ) ಕೆಳದಿರಾಜ ಬಸವಪ್ಪನಾಯಕ (ಕ್ರಿ.ಶ. ೧೭೦೦) ತನ್ನ 'ಶಿವತತ್ತ್ವ ರತ್ನಾಕರ'ದಲ್ಲಿ “ಬಸವಣ್ಣನು ವೀರಶೈವ ಧರ್ಮವನ್ನು ಸ್ಥಾಪಿಸಿ, ಉತ್ತೇಜಿಸಿದರು” ಎಂದು ಹೇಳುತ್ತಾನೆ (ಭಗವಾನ್ ಬಸವೇಶ್ವರಾಃ
ವೀರಶೈವ ಮತ ಸಂಸ್ಥಾಪ್ಯ ಪ್ರಕಾಶಂಕಾರಯತ್)

(ಋ) ಅಲ್ಲಮಪ್ರಭು ತನ್ನ ಅನೇಕ ವಚನಗಳಲ್ಲಿ ಬಸವಣ್ಣನವರು ಲಿಂಗಾಯತ / ವೀರಶೈವ ಧರ್ಮದ ಸ್ಥಾಪಕನೆಂದು ವರ್ಣಿಸುತ್ತಾನೆ. ಹಾಗೆಯೇ ಸಿದ್ದರಾಮ, ಚನ್ನಬಸವಣ್ಣ, ಮಡಿವಾಳ ಮಾಚಿದೇವ, ಆದಯ್ಯ, ಉರಿಲಿಂಗಪೆದ್ದಿ - ಹೀಗೆ ಬಹುತೇಕ ಎಲ್ಲ ಪ್ರಮುಖ ಶರಣರೂ ತಮ್ಮ ಅಸಂಖ್ಯಾತ ವಚನಗಳಲ್ಲಿ 'ಲಿಂಗಾಯತ/ ವೀರಶೈವ ಧರ್ಮಸ್ಥಾಪಕ ಬಸವಣ್ಣನವರಲ್ಲದೆ ಬೇರೆಯಲ್ಲ' ಎಂದು ಹೇಳಿದ್ದಾರೆ.

(ಎ) ಅತ್ಯಂತ ಗಮನಾರ್ಹವಾದುದೆಂದರೆ ೧೬ ಮತ್ತು ೧೭ನೆಯ ಶತಮಾನದ ವೀರಶೈವ ಗ್ರಂಥಕರ್ತರು ಬಸವಣ್ಣನವರನ್ನು 'ಪ್ರಥಮ ಪ್ರಮಥ' ಎಂದು ಹೊಗಳಿರುವುದು.

(ಏ) ಪಂಡಿತಾರಾಧ್ಯ ಚರಿತ್ರೆ, ವೀರಮಾಹೇಶ್ವರ ಸಂಗ್ರಹ (ಶ್ಲೋಕ ೧ ೯-೧೩), ವೀರಶೈವಾಚಾರ ಪ್ರದೀಪಿಕೆ (ಶ್ಲೋಕ ೧-೩-೪), ಅನಾದಿ ವೀರಶೈವ ಸಂಗ್ರಹ (ಶ್ಲೋಕ ೧-೧೪-೧೭) ಮತ್ತು ವೀರಶೈವ ಸುಧಾನಿಧಿ (ಶ್ಲೋಕ ೨-೪)

ಇಷ್ಟೊಂದು ಆಧಾರಗಳನ್ನು ಕೊಡುವ ಪ್ರೊ. ಸಾಕ್ರೆ ಅವರು 'ಬಸವಣ್ಣನವರನ್ನು ವೀರಶೈವರು 'ದ್ವಿತೀಯ ಶಂಭು'ವಾಗಿ ಗೌರವಿಸುತ್ತಾರೆ' ಎಂದಿದ್ದಾರೆ. ಅವರು ಧರ್ಮದ ಸಂಸ್ಥಾಪಕರಲ್ಲದಿದ್ದರೆ ಅವರನ್ನು ಹಾಗೆ ಕರೆಯಲು ಕಾರಣವೇ ಇರುತ್ತಿರಲಿಲ್ಲ.

ಇದುವರೆಗಿನ ಚರ್ಚಿಸಿರುವ, ಉಲ್ಲೇಖಿಸಿರುವ ಎಲ್ಲ ಆಧಾರಗಳಿಂದ ನಾವು ಕೆಳಗೆ ಕಂಡ ನಿರ್ಣಯಗಳಿಗೆ ಬರಬಹುದು:

ಪಂಚಾಚಾರ್ಯರು ಗಮನಕ್ಕೆ ಬರುವುದು ೧೬ನೆಯ ಶತಮಾನದ ಅಂತ್ಯದ ವೇಳೆಗೆ, ಅವರು ವೀರಶೈವ ಧರ್ಮದ ಸ್ಥಾಪಕರೇ ಆಗಿದ್ದಿದ್ದರೆ, ಡಾ. ನಂದೀಮಠ ಅವರು ಹೇಳುವಂತೆ ಅದಕ್ಕೆ ಅಧಿಕೃತವಾದ ದಾಖಲೆಯಿಲ್ಲ. ೧೨ನೆಯ ಶತಮಾನದ ನಂತರ ವೀರಶೈವ ಧರ್ಮವು ಸಾಹಿತ್ಯಪರವಾಯಿತು. ಅಧ್ಯಾಯ ೧ರಲ್ಲಿ ಉಲ್ಲೇಖಿಸಿರುವ ಅನೇಕ ಶಾಸನಗಳು ರೇವಣಸಿದ್ದನು ೧೨ನೆಯ ಶತಮಾನದವನು ಮತ್ತು ಬಸವಣ್ಣನವರ ಸಮಕಾಲೀನ ಎನ್ನುವುದನ್ನು ಮತ್ತಷ್ಟು ದೃಢಪಡಿಸುತ್ತವೆ.

ಪಂಚಾಚಾರ್ಯರು ವಾಸ್ತವವಾಗಿ ಬಸವಣ್ಣನವರ ಸಮಕಾಲೀನರೆಂದು ಡಾ. ಎಂ. ಚಿದಾನಂದಮೂರ್ತಿ ಅವರು ತಮ್ಮ ಅನೇಕ ಬರಹಗಳಲ್ಲಿ ಖಚಿತಪಡಿಸಿದ್ದಾರೆ. ಶರಣರ ಹೆಸರುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪಂಚಪೀಠಗಳು ತಿರುಚಿವೆ ಎಂದೂ ಅವರು ಹೇಳಿದ್ದಾರೆ. ಡಾ. ಎಂ.ಎಂ. ಕಲಬುರ್ಗಿ, ಬಿಜ್ಜರಗಿ, ಸಿದ್ದರಾಮ ಪೂಜಾರಿ, ಕೌಂಟೆ ಮತ್ತು ಇತರ ಅನೇಕ ಗ್ರಂಥಕರ್ತರು (ಹಿಂದೆ ಉಲ್ಲೇಖಿಸಿದೆ) ಬಸವಣ್ಣನವರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು ಮತ್ತು ಪಂಚಾಚಾರ್ಯರು ಅದರ ಉತ್ಕರ್ಷವನ್ನು ಹತ್ತಿಕ್ಕಲು ಪ್ರಯತ್ನಿಸಿದರೆಂದು ಸ್ಪಷ್ಟವಾಗಿ ಹೇಳಿದ್ದಾರೆ.

ವೀರಶೈವರ ಪವಿತ್ರ ಗ್ರಂಥವೆನ್ನುವ ಸಿದ್ಧಾಂತ ಶಿಖಾಮಣಿ'ಯೇ ಪಂಚಾಚಾರ್ಯರನ್ನು 'ಪಾಲಿಕಾಃ' ಮತ್ತು 'ನಿರ್ವಾಹಕಾಃ' ಎಂದಿದೆಯೇ ಹೊರತು 'ಸ್ಥಾಪಕಾಃ' ಎಂದಿಲ್ಲ. ಅದು ಸ್ವತಃ ಶಿವನೇ ವೀರಶೈವ ಧರ್ಮವನ್ನು ಸ್ಥಾಪಿಸಿದ ಎಂದು ಹೇಳುತ್ತದೆ. ನಾವು ಈಗಾಗಲೇ ನೋಡಿರುವಂತೆ ಆ ಹೇಳಿಕೆಯೂ ಒಂದು ಕಲ್ಪನೆಯಾಗಿದೆ.

ಪ್ರಸ್ತಾಪಿತ ಎರಡು ಆಗಮಗಳು ಐದು ಆಚಾರ್ಯರುಗಳ ಉಗಮದ ಬಗೆಗೆ ಅಷ್ಟೇ ಅಲ್ಲ, ಧರ್ಮಸ್ಥಾಪನೆಯಲ್ಲಿ ಅವರ ಪಾತ್ರದ ಬಗೆಗೂ ಪರಸ್ಪರ ಭಿನ್ನ ಅಭಿಪ್ರಾಯಗಳನ್ನು ನೀಡುತ್ತವೆ.

ಪಂಚಪೀಠಗಳ ಚರಿತ್ರೆಯೇ ಅಸ್ಪಷ್ಟ, ಅನಿಶ್ಚಿತವಾಗಿದ್ದು ಹಿಂದಿನ ಅಧ್ಯಾಯಗಳಲ್ಲಿ ನಾವು ಕಂಡಿರುವಂತೆ ಸಾಕಷ್ಟು ವಿವಾದಗಳನ್ನು ಒಳಗೊಂಡಿದೆ. ಅವರ ಚರಿತ್ರೆಗಳು ಪವಾಡ ಮತ್ತು ಪುರಾಣಗಳನ್ನು ಆಧರಿಸಿರುವುದರಿಂದ ಅವು ಅಂಗೀಕಾರ್ಹವಾಗುವುದಿಲ್ಲ.

ಮೇಲೆ ಉಲ್ಲೇಖಿಸಿದ ಅನೇಕ ವೀರಶೈವ ಗ್ರಂಥಗಳು ಮತ್ತು ಪ್ರೊ ಸಾಖೆ ಅವರು ಉಲ್ಲೇಖಿಸಿರುವ ವಿದ್ವಾಂಸರದೆಲ್ಲ “ಬಸವಣ್ಣನವರೇ ನಿಜವಾದ ವೀರಶೈವ ಧರ್ಮಸ್ಥಾಪಕರು' ಎಂಬುದು ಸ್ಪಷ್ಟ ಅಭಿಪ್ರಾಯವಾಗಿದೆ.

ಮುಂದಿನ ಅಧ್ಯಾಯದಲ್ಲಿ ಚರ್ಚಿಸಲಾಗುವ ಕೆಲವು ಜಂಗಮ ವಿದ್ವಾಂಸರ ಅಭಿಪ್ರಾಯಗಳು ಪೂರ್ವಗ್ರಹ ಪೀಡಿತವಾಗಿವೆ. ಅವರ ಅಭಿಪ್ರಾಯಗಳಲ್ಲೇ ತದ್ವಿರುದ್ದ ನಿಲವುಗಳಿವೆ. ಆದಾಗ್ಯೂ ಅವರು ಆಧಾರವಿಲ್ಲದೆಯೇ ಬಸವಣ್ಣನವರ ಧರ್ಮಸ್ಥಾಪಕ ಸ್ಥಾನವನ್ನು ನಿರಾಕರಿಸುವ ದಾರ್ಷ್ಟ್ಯವನ್ನು ತೋರಿರುವುದು ಆಶ್ಚರ್ಯವೆನಿಸುತ್ತದೆ.

ಅಂತಿಮವಾಗಿ, ನಾವು ಬರಬೇಕಾದ ನ್ಯಾಯಸಮ್ಮತ ನಿರ್ಧಾರವೆಂದರೆ, ಲಿಂಗಾಯತ/ವೀರಶೈವ ಧರ್ಮವನ್ನು ಸ್ಥಾಪಿಸಿದವರು ಪಂಚಾಚಾರ್ಯರಲ್ಲ ಎನ್ನುವುದು ಮತ್ತು ಬದಲಾಗಿ ಶರಣಧರ್ಮ ಅಥವಾ ಲಿಂಗಾಯತ ಧರ್ಮವನ್ನು ಸ್ಥಾಪಿಸಿದವರು ಬಸವಣ್ಣನವರು ಮತ್ತು ಅವರ ಸಮಕಾಲೀನ ಶರಣರು ಎನ್ನುವುದು.

ಗ್ರಂಥ ಋಣ:
1) ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ; ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ಪಂಚಾಚಾರ್ಯರು ಶಿಲಾಲಿಂಗೋದ್ಭವರೆ? ಬ್ರಾಹ್ಮಣ್ಯದ ಬಗೆಗೆ ಪಂಚಾಚಾರ್ಯರ ಪ್ರೇಮ Next