ಜಾತಿಗಣತಿಯ ಕುರಿತು ಸ್ಪಷ್ಟೀಕರಣ.

*

- ಎಂ.ಆರ್.ಪಂಪನಗೌಡ, ಬಿ.ಈ.ಎಂ.ಐ.ಈ

ಶ್ರೀಯುತ/ಘ.ಲಿಂ.ಚ. ಕೇದಾರಪೀಠದ ಶ್ರೀಗಳಾದ ಭೀಮಾಶಂಕರ ಶಿವಾಚಾರ್ಯರು ಹಾಗೂ ಡಾ|| ಚಿದಾನಂದಮೂರ್ತಿ, ಸಾಹಿತಿಗಳು ಹಾಗೂ ವಿಮರ್ಶಕರು-ಇವರಿಗೆ.

ಉಲ್ಲೇಖ : ಕೇದಾರಪೀಠದ ಶ್ರೀಗಳ (ವಿಜಯವಾಣಿ ಪುಟ ಸಂ-6 ದಿನಾಂಕ 19.01.2015) ಹಾಗೂ ಡಾ|| ಚಿದಾನಂದ ಮೂರ್ತಿಗಳ (ಸಂಯುಕ್ತ ಕರ್ನಾಟಕದ ದಿನಾಂಕ: ಜನೇವರಿ 23, ಪುಟ ಸಂಖ್ಯೆ-09) ‘ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕನಲ್ಲ’ ಎಂಬ ಪತ್ರಿಕಾ ಹೇಳಿಕೆಗಳ ಬಗ್ಗೆ ಸ್ಪಷ್ಟೀಕರಣ.

ಇತ್ತೀಚೆಗೆ ಕೇದಾರ ಶ್ರೀಗಳು ವಿಶ್ವಗುರು ಬಸವಣ್ಣನವರು ಗುರುವಲ್ಲವೆಂದೂ, ಜಾತಿ ಗಣತಿಯಲ್ಲಿ ವೀರಶೈವ ಧರ್ಮ-ಲಿಂಗಾಯತ ಜಾತಿ ಎಂದು ಬರೆಸಿರಿ ಎಂಬ ಹೇಳಿಕ ಕೊಟ್ಟಿದ್ದಾರೆ. ಪ್ರಸ್ತುತ ಶ್ರೀಗಳ ಹೇಳಿಕೆ ಹೇಗೆ ತಪ್ಪು ಎಂಬುದನ್ನು ವಿಶ್ಲೇಷಿಸುವಾ. ಈ ಜನಗಣತಿ ಮೀಸಲಾತಿಯ ಸೌಲಭ್ಯಕ್ಕಾಗಿ ನಡೆಯುತ್ತಿದ್ದು “ಲಿಂಗಾಯತ” ಎಂಬ ಪದಕ್ಕೆ ಕೇಂದ್ರದಲ್ಲಿ ಮೀಸಲಾತಿ ಇಲ್ಲ ಹಾಗೂ ಅದರ ಉಪಜಾತಿಗಳಿಗೆ ಮಾತ್ರ ಮೀಸಲಾತಿ ಇದೆ. ಇದು ಬಡ “ಲಿಂಗಾಯತ” ಜಾತಿಗಳಿಗೆ ಮೋಸ ಮಾಡುವ ಹುನ್ನಾರ ಮಾತ್ರ. ಇವರೀರ್ವರ ಬಲೆಗೆ ಬೀಳದಿರುವಂತೆ ನನ್ನ ‘ಲಿಂಗಾಯತ’ ಸಮಾಜಕ್ಕೆ ನಮ್ರ ವಿನಂತಿ.

ಜಗತ್ತಿನಲ್ಲಿ ಅನೇಕ ಬಗೆಯ ವಿದ್ಯುತ್ ಬಲ್ಬುಗಳು ಚಾಲ್ತಿಯಲ್ಲಿದ್ದು, ವಿದ್ಯುತ್ ಬಲ್ಬ್ ನಿರ್ಮಾತೃವಿನ ಹೆಸರು ಥಾಮಸ್ ಅಲ್ವಾ ಎಡಿಸನ್ ಎಂಬುದು ಸತ್ಯ. ಬಲ್ಬ್ ತಯಾರಿಕೆಯ ಕಂಪನಿಗೆ ಈ ಶ್ರೇಯಸ್ಸು ಹೋಗದು. ಅದರಂತೆಯೇ ವಿಶ್ವಗುರು ಬಸವಣ್ಣನವರೇ ಇಷ್ಟಲಿಂಗದ ರೂವಾರಿ ಎಂಬುದನ್ನು ಅವರ ಸಮಕಾಲೀನ 770 ಅಮರಗಣಂಗಳು ಸ್ಥೀರೀಕರಿಸಿದ್ದಾರೆ. ಪಂಚಪೀಠಗಳು ಸ್ಥಾವರ ಲಿಂಗದ ಪ್ರತಿಪಾದಕರು ಹಾಗೂ ಆರಾಧಕರು. ಇಷ್ಟಲಿಂಗವನ್ನು ಇತರರಂತೆ ಅವರೂ ಧರಿಸಿದ್ದಾರೆ.

ಭಾರತದ ಸಂವಿಧಾನದನ್ವಯ ಹಿಂದೂ-ಕಾನೂನು (Hindu Law) ಯಾರಿಗೆ ಅನ್ವಯಿಸುತ್ತದೆ ಎಂದು ವ್ಯಾಖ್ಯಾನಿಸುವ ಸಂದರ್ಭದಲ್ಲಿ ಇದು ಬೌದ್ಧ, ಜೈನ, ಸಿಖ್, ಆರ್ಯ ಸಮಾಜಗಳಿಗೆ ಹಾಗೂ ವೀರಶೈವ/ಲಿಂಗಾಯತರಿಗೆ ಸಹ ಅನ್ವಯಿಸುತ್ತದೆ ಎಂದು ಹೇಳುವಲ್ಲಿ ವೀರಶೈವ/ಲಿಂಗಾಯತ ಬೇರೆ ಬೇರೆ ಎಂದು ಜ್ಞಾತವಾಗುತ್ತದೆ.

ವೀರಶೈವದ ಪ್ರತಿಪಾದಕ ಅಧ್ವರ್ಯು ಪೌರಾಣಿಕರ ಶ್ರೀ ವೀರಭದ್ರ ದೇವರು ಈತನು ಶಿವನ ಕಟ್ಟಾ ಅನುಯಾಯಿ. ಶಿವನ ಅನುಯಾಯಿಗಳ ಹಾಗೂ ಪಾರ್ವತಿಯ ಅವಜ್ಞೆ ಹಾಗೂ ಪಾರ್ವತಿಯ ಅಗ್ನಿ ಪ್ರದೇಶದ ಸೇಡು ತೀರಿಸಿಕೊಳ್ಳಲು ದಕ್ಷನ ತಲೆ ತೆಗೆದು ಸೇಡು ತೀರಿಸಿಕೊಂಡ ಒಬ್ಬ ಅದ್ಭುತ ಶಿವಭಕ್ತ. ಹಾಗೆಯೇ ಚರಿತ್ರೆ/ಶಾಸನಗಳಲ್ಲಿ ಅನೇಕ ರಾಜಗುರುಗಳು ತಮ್ಮನ್ನು ನಾಗವಂಶೋದ್ಭವರು, ಶಿವನ ವಂಶದವರು ಎಂದು ಹೇಳಿಕೊಂಡಿದ್ದಾರೆ. ಇದರಲ್ಲಿ ಯಾವ ಅತಿಶಯೋಕ್ತಿಯಿಲ್ಲ.

ವಿಶ್ವದ ಮೂಲನಾಗರೀಕತೆಗಳಲ್ಲಿ ಒಂದಾದ ಸಿಂಧೂ ನಾಗರಿಕತೆಯ ಮೂಲಿಗ ಸಂ.ಭೂ.ಶೇಖರ ಅರ್ಥಾತ್ ಶಿವ. ಈತನು ಅದ್ಭುತ ಪರಂಪರೆಯ ರೂವಾರಿ. ಸಿಂಧೂ ರಹಸ್ಯ ಲಿಪಿಯನ್ನು ಗೊಂಡಿ ಭಾಷೆಯ ಮೂಲಕ ಮಹಾರಾಷ್ಟ್ರದ ನಾಗಪುರದ ನಿವಾಸಿ ಮೋ-ಛ-ಕಂಗಾಲಿಯವರು ಯಶಸ್ವಿಯಾಗಿ ಓದಿ ರಚಿಸಿದ ಪುಸ್ತಕವನ್ನು ಈಗಾಗಲೇ ಕನ್ನಡದಲ್ಲಿ ಡಾ|| ಕೆ.ಬಿ.ಬ್ಯಾಳಿಯವರು ಅನುವಾದಿಸಿದ್ದಾರೆ. ಇದು ಮೂಲ ಹಿಂದಿಯಲ್ಲಿದ್ದು ಈಗಾಗಲೇ 10 ಮುದ್ರಣಗಳನ್ನು ಕಂಡಿದೆ. ಡಾ|| ಮೋ.ಛ.ಕಂಗಾಲಿಯವರು ಶಿವನ ಪರಂಪರೆಯಲ್ಲಿ 88 ಸಂ.ಭೂ ಶೇಖರರನ್ನು ಗುರುತಿಸಿದ್ದಾರೆ.

ಇದನ್ನು ಇಲ್ಲಿ ಉಲ್ಲೇಖಿಸುವ ಮೂಲ ಉದ್ದೇಶ ಏನೆಂದರೆ ಈ ಕೇದಾರ ಪೀಠದಲಿರುವುದು ಶ್ರೀ ನಾಳಗೊಂಡೇಶ್ವರನ/ಲಾಳಗೊಂಡೇಶ್ವರನ ಯೋಗ ಸಮಾಧಿ. ಈತನು ಕಲಿಯುಗದ ಆರಂಭದಲ್ಲಿ ಅಂದರೆ ಸುಮಾರು 5117 ವರ್ಷಕ್ಕೂ ಮೊದಲು ಇದ್ದು ಶ್ರೋಣಿತುಪುರದ ಬಾಣಾಸುರನ ಮಗಳಾದ ಉಷಾದೇವಿಯು ಈತನಿಗೆ ಹಿಮವತ್ಕೇದಾರದಲ್ಲಿ ಸಮಾಧಿ (ಓಖಿಮಠ) ನಿರ್ಮಿಸಿದ್ದಾಳೆ. ಈಕೆಯು ಶ್ರೀಕೃಷ್ಣನ ಮೊಮ್ಮಗನಾದ ಅನಿರುದ್ಧನ ಮಡದಿ. ವಿಶ್ವದ ಐದೂ ಖಂಡಗಳ ಭೂಮಿಯನ್ನು ಒಳಗೊಂಡ ಭೂಭಾಗವೇ ‘ಗೊಂಡ್ವಾನ ಲ್ಯಾಂಡ್’ ಎಂದು ಕರೆಯಿಸಿಕೊಳ್ಳುತ್ತದೆಯಲ್ಲದೆ, ಈ ಬುಡಕಟ್ಟಿನ ಜನರು ಪ್ರಸ್ತುತ ಭಾರತದ 10/12 ರಾಜ್ಯಗಳಲ್ಲಿ ಬುಡಕಟ್ಟು ಜಾತಿಯಲ್ಲಿ ಹಂಚಿ ಹೋಗಿದ್ದಾರೆ. ಇವರ ಭಾಷೆಯಿಂದಲೇ ಬಹುತೇಕ ವಿಶ್ವದ ಪ್ರಮುಖ ಭಾಷೆಗಳು ಜನಿಸಿವೆ. ಇತ್ತೀಚೆಗೆ ಹಂಪಿಯ ತಳವಾರ ಘಟ್ಟದಲ್ಲಿ ಕ್ರಿ.ಪೂ. 2500-2750ರ ಸುಮಾರಿನ ಗೊಂಡಿ ಚಿತ್ರಲಿಪಿ ಶಾಸನ ಸಿಕ್ಕಿದ್ದು, ಅದನ್ನು ಐದು ರಾಜ್ಯಗಳ ಗೊಂಡಿಭಾಷಾ ವಿದ್ವಾಂಸರು ಓದಿ ಅರ್ಥೈಸಿ ಪ್ರಮಾಣೀಕರಿಸಿದ ವಿಷಯ ಎಲ್ಲಾ ಪ್ರಮುಖ ದಿನ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಭಾಷೆಯು ಈಗಾಗಲೇ ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸಗಡ, ಮಧ್ಯಪ್ರದೇಶ ಹಾಗೂ ಝಾರ್ಖಂಡ್ ರಾಜ್ಯಗಳಿಂದ ಭಾರತದ ಸಂವಿಧಾನದ ಷೆಡ್ಯೂಲ್ 8 ಕ್ಕೆ ಸೇರ್ಪಡೆಗೊಳ್ಳಲು ಶಿಫಾರಸ್ಸು ಬಂದಿದೆ. ಅದರಲ್ಲಿ ಶೇ 80 ರಷ್ಟು ಪದಗಳು ದ್ರಾವಿಡ ಮೂಲವಾಗಿವೆ ಎಂಬ ವಾದವನ್ನು ಗೊಂಡ್ವಾನ ಸಂಸ್ಕೃತಿಯ ಅಧ್ಯಯನಕಾರರು ಒಪ್ಪಿದ್ದಾರೆ.

ಈ ಶ್ರೀಗಳು ವೀರಶೈವರ ಧಾರ್ಮಿಕ ಗ್ರಂಥವೆಂದು ವಾದಿಸುವ ಸಿದ್ಧಾಂತ ಶಿಖಾಮಣಿ ಗ್ರಂಥವು 16-17ನೇ ಶತಮಾನದಲ್ಲಿ ಶಿವಯೋಗೀಶ್ವರನೆಂಬಾತನಿಂದ ರಚಿತವಾಗಿದ್ದು ಅವರು ಲಿಂಗಾಯತ ಧರ್ಮದ ಷಟ್‍ಗಣಾಧೀಶರಲ್ಲೊಬ್ಬರಾದ ಶಿವಯೋಗಿ ಸಿದ್ಧರಾಮೇಶ್ವರರ ವಂಶಜನೆಂಬ ಸತ್ಯವನ್ನು ಶ್ರೀಯುತ ಎಂ.ವಿ.ಹೋರಿ ಎನ್ನುವವರು ತಮ್ಮ ಪುಸ್ತಕ “ಕುಡಿಒಕ್ಕಲಿಗರು, ಲಾಳಗೊಂಡರು ನೋಳಂಬರಾ ಒಂದೇ ಮೂಲದವರು” ಎನ್ನುವ ಪುಸ್ತಕದ ಪುಟ 30-31ರಲ್ಲಿ ಹೇಳಿದ್ದಾರೆ ಹಾಗೂ ಕವಿ ರಾಘವಾಂಕನು ಶ್ರೀ ಶಿವಯೋಗಿಸಿದ್ಧರಾಮೇಶ್ವರನನ್ನು ‘ಕುಡಿಯರ ಕುಲ ತಿಲಕ’ ಎಂದೇ ಕರೆದಿದ್ದಾರೆ. ಡಾ|| ಚಿದಾನಂದಮೂರ್ತಿಯವರು ಈ ಪುಸ್ತಕವು ಬಸವಯುಗದ ನಂತರದ್ದು ಎಂದು ಹೇಳಿದ್ದಾರೆ.

ಸಿಂಧೂ ನಾಗರಿಕತೆಯನ್ನು ಹತ್ತಾರು ವರ್ಷಗಳಿಂದ ಓದಿ ಹಲವಾರು ಪುಸ್ತಕಗಳನ್ನು ರಚಿಸಿದ ಹಲವಾರು ವಿದ್ವಾಂಸರ ಜೊತೆ ನನಗೆ ವೈಯಕ್ತಿಕ ಸಂಪರ್ಕವಿದ್ದು ಅವರಲ್ಲಿ ಯಾರೂ ಇಷ್ಟ ಲಿಂಗಧಾರಿಗಳಿಲ್ಲ ಹಾಗೂ ಅಂತಹ ಯಾವುದೇ ಇಷ್ಟಲಿಂಗದ ವ್ಯವಸ್ಥೆ ಆಗಿನ ಕಾಲದಲ್ಲಿದ್ದಿಲ್ಲ. ಅಲ್ಲಿ ಕೇವಲ ಸ್ಥಾವರ ಲಿಂಗದ ಉಲ್ಲೇಖವಿದೆ ಹಾಗೂ ಪರಿಕಲ್ಪನೆಯಿದೆ. ಇದನ್ನು ನಮ್ಮ ಸ್ವಾಮೀಜಿಗಳು ಹಾಗೂ ಡಾ|| ಚಿದಾನಂದ ಮೂರ್ತಿಗಳು ತಿಳಿದುಕೊಂಡರೆ ಎಲ್ಲರಿಗೂ ಕ್ಷೇಮ.

ಕೇದಾರಪೀಠದ ಶ್ರೀಗಳಾದ ಶ್ರೀ ಭೀಮಾಶಂಕರಶಿವಾಚಾರ್ಯಶ್ರೀಗಳು ಹಾಗೂ ಡಾ|| ಚಿದಾನಂದಮೂರ್ತಿ, ಸಾಹಿತಿಗಳು ವಿಶ್ವಗುರು ಬಸವಣ್ಣನವರನ್ನು ವಿರೋಧಿಸುವುದೇ ಒಂದು ಪರಮಕಾಯಕವೆಂದು ಸಾಧಿಸುತ್ತಾ ಹೋಗುತ್ತಿರುವುದು ಇಬ್ಬರೂ, ಬೇರೆ ಬೇರೆ ಕಾರಣಗಳಿಂದ ವಿರೋಧಿಸುತ್ತಿದ್ದಾರೆ. ಶ್ರೀ ಭೀಮಾಶಂಕರಶ್ರೀಗಳು “ಬಸವಣ್ಣನವರು” ಬ್ರಾಹ್ಮಣ ಎಂಬ ಕಾರಣಕ್ಕಾಗಿಯೂ ಹಾಗೂ ಡಾ|| ಚಿದಾನಂದಮೂರ್ತಿರವರು ಲಿಂಗಾಯತರಾಗಿದ್ದೂ ಸಹ ಭವಿಯಂತೆ ವರ್ತಿಸುತ್ತಾ ತಮ್ಮ ನಂಬಿಕೆಗಿಂತ ಭಿನ್ನವಾದ ದ್ವನಿಯನ್ನು ಧರ್ಮದ ಅನುಯಾಯಿಯಾಗಿದ್ದು ಅದಕ್ಕೆ ಯಾವುದೇ ಭಿನ್ನವಾದ ಧ್ವನಿಯನ್ನು ತಿರಸ್ಕರಿಸುವುದು ಹಾಗೂ ತುಳಿಯುವುದು ಅವರ ಕಾಯಕವೆಂದೇ ಪ್ರಜ್ಞಾವಂತರ ಭಾವನೆ. ಶ್ರೀಯುತ ಚಿದಾನಂದಮೂರ್ತಿಗಳು ಲಿಂಗಾಯತರಾಗಿದ್ದೂ ಸಹ ಭವಿ ಆಚರಣೆಯಲ್ಲಿದ್ದಾರೆ. ಅಂದರೆ ಅವರು ಇಷ್ಟಲಿಂಗಧಾರಕರಲ್ಲವೆಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಇವರು ಲಿಂಗಾಯತರನ್ನು ದಾರಿತಪ್ಪಿಸುವ ಒಂದಂಶದ ಕಾರ್ಯಕ್ರಮದ ಅನುಷ್ಠಾನಕ್ಕೆ ಹಾಗೂ ಲಿಂಗಾಯತರನ್ನು ದಾರಿ ತಪ್ಪಿಸುವ ಒಂದಂಶದ ಕಾರ್ಯಕ್ರಮಕ್ಕೆ ಶಪಥ ತೊಟ್ಟಂತೆ ವರ್ತಿಸುತ್ತಿದ್ದಾರೆ. ವಿಶ್ವಗುರು ಬಸವಣ್ಣನವರ ಒಟ್ಟು ಸುಮಾರು 1416 ವಚನಗಳಲ್ಲಿ ‘ಲಿಂಗ’ ಎನ್ನುವ ಶಬ್ಧವನ್ನು ‘614’ ಸಲ ಬಳಸಿದ್ದು, ‘ವೀರಶೈವ’ ಎನ್ನುವ ಪದವನ್ನು ಒಮ್ಮೆ ಮಾತ್ರ ನಕಾರಾತ್ಮಕವಾಗಿ ಬಳಸಿದ್ದಾರೆ. ಹಾಗೆ ನೋಡಿದರೆ ಹಿಂದು(ಸಿಂದು)ಗಳೆಲ್ಲರೂ ಶೈವ/ಸಪ್ತಶೈವ/ಹಾಗೂ ಶಾಕ್ತಶೈವದ ಮೂಲವನ್ನೇ ಹೊಂದಿದ್ದರೂ ಅದರಲ್ಲಿರುವ ಕೆಲವು ಆಚರಣೆಗಳನ್ನು ತೆಗೆದು ನೀನು ‘770’ ಅಮರ ಗಣಂಗಳಿಗೆ ಕುಲ ಜಾತಿಗಳಿಗೆ ಒಬ್ಬನೇ ದೇವ ಹಾಗೂ ಪೂಜಾ ವಿಧಾನವನ್ನು ನಿರ್ಧರಿಸಿದ, ನವ ಧರ್ಮದ ದೃಷ್ಟ್ಟಾರ ಎಂದು ವಚನಕಾರರು ಸ್ತುತಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಅ.ಭಾ.ವೀ.ಮಹಾಸಭಾ (ರಿ) ಹಾಗೂ ಶಿವಯೋಗ ಮಂದಿರದ ಇಬ್ಬಂದಿತನದ ನಿಲುವು ಹಲವಾರು ಲಿಂಗಾಯತ ಧರ್ಮದ ಉಪಜಾತಿಗಳು ಪ್ರತ್ಯೇಕ ಪೀಠ ಮಾಡಿಕೊಳ್ಳುವುದಕ್ಕೆ ಕಾರಣ. ಇದು ಕಾಲಜ್ಞಾನದ ವಚನಗಳ ಪ್ರಕಾರ ಕ್ರಿ.ಶ. 2032 ಇಸವಿಯವರೆಗೆ ನಡೆಯುತ್ತಾ ಹೋಗುತ್ತದೆ ಹಾಗೂ ನಂತರ ಎಲ್ಲರಿಗೂ ಜ್ಞಾನೋದಯವಾಗಿ ಜಗತ್ತಿಗೆ ನೀನೇ ಗುರು ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಲಂಡನ್‍ನ ಥೇಮ್ಸ್ ನದೀತಟದ ಮೇಲೆ ವಿರಾಜಮಾನವಾದ ವಿಶ್ವಗುರು ಬಸವ ಇಂತಹ ನಮ್ಮ ‘ಶರಣರಿಗೂ ವಿವೇಕ ತರಲಿ’ ಎಂಬುದೇ ಪ್ರಸ್ತುತ ಲೇಖನದ ಆಶಯ.

ವಿಶ್ವಗುರು ಬಸವಣ್ಣನವರು ದೇವರೇ ತಮ್ಮ ಗುರುವೆಂದು ಹೇಳಿದ ವಚನಗಳ ದಾಖಲೆಯೊಂದಿಗೆ ಸಮಾಪ್ತಿಗೊಳಸುತ್ತಿದ್ದೇನೆ.
828.
ಮುನ್ನಿನ ಜನ್ಮದಲಿ ಗುರು ಲಿಂಗ ಜಂಗಮವ ಪೂಜಿಸಲರಿಯದ ಕಾರಣ
ಬಹು ಜನ್ಮಕ್ಕೆ ತಂದಿಕ್ಕಿದೆಯಯ್ಯಾ ಎನ್ನನು.
ಎನಗೆ ಗುರಪಥವ ತೋರಿದವರಾರು?
ಲಿಂಗಪಥವ ತೋರಿದವರಾರು?
ಜಂಗಮ ಪಥವ ತೋರಿದವರಾರು?
ಪಾದೋದಕ ಪ್ರಸಾದವ ತೋರಿದವರಾರು?
ತೋರುವ ಮನವೆ ನೀವೆಂದರಿತೆ.
ಎನಗಿನ್ನಾವ ಭಯವಿಲ್ಲ ಕೂಡಲಸಂಗಮದೇವಾ.

1065.
ಜಂಗಮವೇ ಜ್ಞಾನರೂಪು, ಭಕ್ತನೆ ಆಚಾರರೂಪು ಎಂಬುದು ತಪ್ಪದು ನೋಡಯ್ಯ
ನಾನು ನಿಮ್ಮಲ್ಲಿ ಆಚಾರಿಯಾದಡೇನಯ್ಯ, ಜ್ಞಾನವಿಲ್ಲದನ್ನಕ್ಕರ?
ತಲೆಯಿಲ್ಲದ ಮುಂಡದಂತೆ, ಜ್ಞಾನ ಉದಯವಾಗದ ಮುನ್ನವೇ
ತಲೆದೋರುವ ಆಚಾರವುಂಟೆ ಜಗದೊಳಗೆ?
ಜ್ಞಾನದಿಂದ ಆಚಾರ, ಜ್ಞಾನದಿಂದ ಅನುಭಾವ,
ಜ್ಞಾನದಿಂದ ಪ್ರಸಾದವಲ್ಲದೆ,
ಜ್ಞಾನವನುಳಿದು ತೋರುವ ಘನವ ಕಾಣೆನು,
ಎನ್ನ ಆಚಾರಕ್ಕೆ ನೀನು ಜ್ಞಾನರೂಪವಾದ ಕಾರಣ
ಸಂಗನಬಸವಣ್ಣನೆಂಬ ಹೆಸರುವಡೆದೆನು.
ಅನಾದಿ ಪರಶಿವನು ನೀನೆ ಆಗಿ,
ಘನಚೈತನ್ಯಾತ್ಮಕನೆಂಬ ಮಹಾಜ್ಞಾನವು ನೀನೆ ಆದೆಯಲ್ಲದೆ,
ನಾನೆತ್ತ ಶಿವತತ್ವವೆತ್ತಯ್ಯ?
ಕೂಡಲಸಂಗಮದೇವಾ ನೀ ಸಾಕ್ಷಿಯಾಗಿ,
ಮೂರುಲೋಕವೆಲ್ಲವು ಬಲ್ಲದು ಕಾಣಾ, ಪ್ರಭುವೆ !

1173.
ಧ್ಯಾನಕ್ಕೆ ನಿಮ್ಮ ಶ್ರೀಮೂರ್ತಿಯೆ ಮುಖ್ಯವಯ್ಯಾ,
ಪೂಜೆಗೆ ನಿಮ್ಮ ಶ್ರೀಪಾದವೆ ಮುಖ್ಯವಯ್ಯಾ,
ಮಂತ್ರಕೆ ನಿಮ್ಮ ನಾಮಾಮೃತವೆ ಮುಖ್ಯವಯ್ಯಾ,
ಮುಕ್ತಿಗೆ ನಿಮ್ಮ ಘನಕೃಪೆಯೆ ಮುಖ್ಯವಯ್ಯಾ,
ನಿಮ್ಮಿಂದಧಿಕರನಾರನೂ ಕಾಣೆನಯ್ಯಾ,
ಕೂಡಲಸಂಗಮದೇವಾ, ನೀವು ಜ್ಞಾನಗುರುವಾದ ಕಾರಣ.

1159.
ಅಂಗಲಿಂಗಸಂಗಸುಖಸಾರಾಯದನುಭಾವ
ಲಿಂಗವಂತಂಗಲ್ಲದೆ ಸಾಧ್ಯವಾಗದು ನೋಡಾ !
ಏಕಲಿಂಗಪರಿಗ್ರಾಹಕನಾದ ಬಳಿಕ,
ಆ ಲಿಂಗನಿಷ್ಠೆಗಟ್ಟಿಗೊಂಡು,
ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ,
ವೀರಶೈವದೈವಕ್ಷೇತ್ರ ತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ
ಮನದಲ್ಲಿ ನೆನೆಯಲಿಲ್ಲ; ಮಾಡಲೆಂತೂ ಬಾರದು
!
ಇಷ್ಟೂ ಗುಣವಳವಟ್ಟಿತ್ತಾದಡೆ
ಆತನೀಗ ಏಕಲಿಂಗನಿಷ್ಠಾಚಾರಯುಕ್ತನಾದ ವೀರಮಾಹೇಶ್ವರನು
ಇವರೊಳಗೆ ಅನುಸರಿಸಿಕೊಂಡು ನಡೆದನಾದಡೆ
ಗುರುಲಿಂಗಜಂಗಮಪಾದೋದಕಪ್ರಸಾದ ಸದ್ಭಕ್ತಿಯುಕ್ತವಾದ
ಷಡುಸ್ಥಲಕ್ಕೆ ಹೊರಗಾಗಿ ನರಕಕ್ಕಿಳಿವನು
ಕಾಣಾ ಕೂಡಲಸಂಗಮದೇವಾ.

1392.
ಎನ್ನ ಗುರು ಪರಮಗುರು ನೀವೆ ಕಂಡಯ್ಯ,
ಎನ್ನ ಗತಿ ಮತಿ ನೀವೇ ಕಂಡಯ್ಯ,
ಎನ್ನ ಅರಿವಿನ ಜ್ಯೋತಿ ನೀವೇ ಕಂಡಯ್ಯ,
ಎನ್ನಂತರಂಗ ಬಹಿರಂಗದ ಮಹವು ನೀವೇ ಕಂಡಯ್ಯ,
ಕೂಡಲಸಂಗಮದೇವಾ ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು
ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು.

ಎಂ.ಆರ್.ಪಂಪನಗೌಡ,
ಬಿ.ಈ.ಎಂ.ಐ.ಈ
ಎಂ.ಎ (ಚರಿತ್ರೆ) ಡಿಪ್ಲೊಮಾ-ಎಪಿಗ್ರಫಿ
ಮನೆ ಸಂ.259, ‘ಪ್ರೌಢದೇವರಾಯ ನಿಲಯ’,
ಶಾಸ್ತ್ರೀನಗರ, 2ನೇ ಅಡ್ಡರಸ್ತೆ,
ಬಸವಭವನ ಹತ್ತಿರ, ಬಳ್ಳಾರಿ-583103.
ಸೆಲ್.ನಂ : 09448142825

ಸಂದರ್ಭ ಸೂಚಿ, ಆಧಾರ

1. ಗೊಂಡಿ ಭಾಷೆಯಿಂದ ಸಿಂಧು ರಹಸ್ಯ ಲಿಪಿಯ ಶೋಧ ಹಾಗೂ ಓದು. ಮೂಲ(ಹಿಂದಿ)-ಡಾ|| ಎಂ.ಸಿ.ಕಂಗಾಲಿ. ಕನ್ನಡಕ್ಕೆ ಡಾ|| ಕೆ.ವಿ.ಬ್ಯಾಳಿ
2. ‘ಗೊಂಡ್ವಾನ ದರ್ಶನ’ - ಸಂ|| ಎಂ.ಆರ್.ಪಂಪನಗೌಡ ಪ್ರ : ಲಾಳಗೊಂಡೇಶ್ವರ ಎಜ್ಯುಕೇಷನಲ್ ಟ್ರಸ್ಟ್ (ರಿ) ಶಾನವಾಸಪುರ, ಬಳ್ಳಾರಿ ಜಿಲ್ಲೆ-
ಪ್ರ: 2010
3. ಡಾ|| ಎಂ.ಸಿ.ಕಂಗಾಲಿಯವರ ಸಮಗ್ರ ಗೊಂಡಿ ಧರ್ಮಶಾಸ್ತ್ರ ಹಾಗೂ ಸಾಹಿತ್ಯದ ಪುಸ್ತಕಗಳು (ಸುಮಾರು-20) ಗೊಂಡ್ವಾನ ಸಾಹಿತ್ಯ ಪರಿಷತ್- ನಾಗಪುರ ಪ್ರಕಟಣೆ.
4. ಬಸವಣ್ಣನವರ ಸಮಗ್ರ ವಚನಗಳು. ಪ್ರ : ವಿಶ್ವಕಲ್ಯಾಣ ಮಿಸನ್, ಬೆಂಗಳೂರು. ಪ್ರ: 2010
5. ಬಸವ ದರ್ಶನ - ಸಂ|| ಜಗದ್ಗುರು ಮಾತಾಜಿ. ಪ್ರ : ವಿಶ್ವಕಲ್ಯಾಣ ರಾಜಾಜಿನಗರ, ಬೆಂಗಳೂರು. ಪ್ರ: 2010
6. ವೀರಭದ್ರ ಚರಿತ್ರೆ. ಕನ್ನಡಕ್ಕೆ ಅನುವಾದ - ಲೇ|| ಗುತ್ತಿ ಚಂದ್ರಶೇಖರ ರೆಡ್ಡಿ ಪ್ರಕಾಶಕರು - ಶ್ರೀ ವೀರಭದ್ರಸ್ವಾಮಿ ದೇವಸ್ಥಾನ – ರಾಯಚೋಟಿ, ಕಡಪಾ ಜಿಲ್ಲೆ. ಆಂಧ್ರಪ್ರದೇಶ-2010
7. ತುರುಕಾನೆ ಪಂಚಮರ ಇತಿಹಾಸ. ಪ್ರಕಟಣೆ : ಪೂವಲ್ಲಿ ಪಂಚವಣ್ಣೆಗಿ ಬೃಹನ್ಮಠ (1997)
8. ಕುರುಗೋಡು ನೀಲಮ್ಮನವರ ಸಾಂಸ್ಕøತಿಕ ಅಧ್ಯಯನ. ಡಾ|| ಕೆ.ಎಂ.ಮೇತ್ರಿ; ಡಾ|| ಮೃತ್ಯುಂಜಯ ರುಮಾಲೆ ಕನ್ನಡ ಸಾಹಿತ್ಯ ಪರಿಷತ್ - ಬಳ್ಳಾರಿ ಘಟಕ (ಪ್ರಕಟಣೆ-2008)
9. ಶ್ರೀನಾಳಗೊಂಡೇಶ್ವರ ಪುರಾಣ ಕಾವ್ಯ. ಲೇ. ಶ್ರೀಮದ್ ರಾಜಯೋಗಿ ಬ್ರಹ್ಮಶ್ರೀ ಸಿದ್ಧಾಂತ ಸಿದ್ಧರಾಮಶಾಸ್ತ್ರಿಗಳು ಶಿಖರ ಮಠ –
ರಾಯಚೂರು. (ಪ್ರಕಟಣೆ-1963)

ಪರಿವಿಡಿ (index)
Previousವೀರಶೈವವೋ? ಲಿಂಗಾಯತವೋ? ಪಂಚ ಪೀಠ - ಕಟ್ಟು ಕಥೆ ತುಂಬಿದ ಅಸಂಗತ ವಾದ.Next
*