ಲಿಂಗಾಯತವು ಪೂರ್ಣಧರ್ಮ | ಕನ್ನಡಿಗರು ಸೃಷ್ಟಿಸಿದ ಧರ್ಮ |
ಲಿಂಗಾಯತ : ಒಂದು ಸ್ವತಂತ್ರ ಧರ್ಮ |
✍ ಡಾ. ಎಂ. ಎಂ. ಕಲಬುರ್ಗಿ.
ಭಾರತದ ಇತಿಹಾಸದಲ್ಲಿ ಬಹಳ ಹಿಂದಿನ ಕಾಲದಿಂದಲೂ ವೈದಿಕ ಮತ್ತು ಅವೈದಿಕ ಎಂಬ ಎರಡು ಸಮಾನಾಂತರ ಪ್ರವಾಹಗಳು ಹರಿದು ಬರುತ್ತಿರುವುದು ಕಂಡುಬರುತ್ತದೆ. ವೇದಪೂರ್ವ ಜೈನಧರ್ಮವೂ, ಕ್ರಿ.ಪೂ. ಆರನೆಯ ಶತಮಾನದಲ್ಲಿ ಹುಟ್ಟಿದ ಬೌದ್ಧ ಧರ್ಮವೂ ಹನ್ನೆರಡನೆಯ ಶತಮಾನದಲ್ಲಿ ಹುಟ್ಟಿದ ಲಿಂಗಾಯತ ಧರ್ಮವೂ ಹದಿನಾರನೆಯ ಶತಮಾನದಲ್ಲಿ ಜನ್ಮತಳೆದ ಸಿಖ್‌ಧರ್ಮವೂ ಮುಖ್ಯವಾದ ಅವೈದಿಕ ಧರ್ಮಗಳು.
ಅನೇಕ ಶತಮಾನಗಳಿಂದಲೂ ಲಿಂಗಾಯತರು ಶೂದ್ರರು ಎಂಬ ತಪ್ಪು ಕಲ್ಪನೆ ಪ್ರಚಲಿತವಿದೆ. ಆದರೆ ಇಪ್ಪತ್ತನೆಯ ಶತಮಾನದಿಂದ ಈಚೆಗೆ ಕೆಲವರು ಲಿಂಗೀಬ್ರಾಹ್ಮಣರೆಂದು ಹೇಳಿಕೊಳ್ಳುತ್ತ ಬಂದಿದ್ದಾರೆ. ಆದರೆ ಲಿಂಗಾಯತಧರ್ಮದ ವಚನಸಾಹಿತ್ಯವನ್ನೂ ಇತರ ಪ್ರಕಾರಗಳನ್ನೂ ಪರಿಶೀಲಿಸಿದರೆ ಲಿಂಗಾಯತರು ಶೂದ್ರರೂ ಅಲ್ಲ, ಬ್ರಾಹ್ಮಣರೂ ಅಲ್ಲ-ಅಷ್ಟೇ ಏಕೆ, ಹಿಂದೂಗಳೇ ಅಲ್ಲ~ ಎಂಬುದು ವೇದ್ಯವಾಗುತ್ತದೆ.
ಲಿಂಗಾಯತರು ಹಿಂದೂಗಳು, ಅದರಲ್ಲೂ ಶೈವಪಂಥದವರು ಎಂಬ ನಂಬಿಕೆಯು ಲಿಂಗಾಯತರೂ ಶಿವನ ಆರಾಧಕರು, ಆದರೂ ಹಿಂದೂಧರ್ಮದ ಹಬ್ಬಗಳನ್ನು ಆಚರಿಸುತ್ತಾರೆ ಎಂಬ ವಾದದ ಮೇಲೆ ನಿಂತಿದೆ. ಹಿಂದೂಸಂಸ್ಕೃತಿಯ ಪ್ರಭಾವ ಎಷ್ಟು ಸನಾತನ, ಆಳ ಮತ್ತು ವಿಶಾಲವಾಗಿದೆಯೆಂದರೆ, ಅದು ಹಿಂದೂಧರ್ಮದಿಂದ ಸಿಡಿದು ಹೋದ ಬೌದ್ಧರನ್ನೂ, ಜೈನರನ್ನೂ, ಭಾರತಕ್ಕೆ ಹೊರಗಿನಿಂದ ಬಂದ ಕ್ರಿಶ್ಚಿಯನ್ ಮತ್ತು ಮುಸ್ಲಿಮರನ್ನೂ ಆವರಿಸಿಕೊಂಡಿದೆ. ನಿರೀಶ್ವರವಾದಿಗಳಾದ ಜೈನರು ಹಿಂದೂಗಳಂತೆ ಶಿವಾನಂದ, ಸದಾನಂದ ಮುಂತಾದ ಹೆಸರುಗಳನ್ನಿಟ್ಟುಕೊಳ್ಳುವುದು, ದೀಪಾವಳಿಯಂದು ಲಕ್ಷ್ಮೀ-ಸರಸ್ವತಿಯರನ್ನು ಪೂಜಿಸುವುದು, ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಹೆಂಗಸರು ಕಾಲುಂಗುರ ಮತ್ತು ತಾಳಿ ಧರಿಸುವುದು-ಇವೆಲ್ಲ ಹಿಂದೂ ಸಂಸ್ಕೃತಿಯ ಪ್ರಭಾವವೆಂದೇ ಹೇಳಬೇಕು. ಆದರೆ ಹಾಗೆ ಮಾಡುವ ಜೈನ, ಸಿಖ್, ಕ್ರಿಶ್ಚಿಯನ್, ಮುಸ್ಲಿಮರು ಹಿಂದೂಗಳಲ್ಲ. ಅದೇ ರೀತಿ, ಹಿಂದೂಗಳ ಹಬ್ಬಗಳನ್ನು ಆಚರಿಸುವ, ರಾಮ, ಕೃಷ್ಣ, ಎಂಬ ಹೆಸರುಗಳನ್ನುಳ್ಳ ಲಿಂಗಾಯತರು ಹಿಂದೂಗಳಲ್ಲ. ಇದನ್ನು ಸಮರ್ಥಿಸಲು ನಡೆಸಿದ ಹೋರಾಟದ ಇತಿಹಾಸ ಹೀಗಿದೆ:
ಭಾರತದಲ್ಲಿ ಜನಗಣತಿ ಆರಂಭವಾದುದು ೧೮೭೧ರಲ್ಲಿ, ಅಲ್ಲಿಂದ ಮುಂದಿನ ಎಲ್ಲ ಜನಗಣತಿಗಳಲ್ಲಿ ಲಿಂಗಾಯತ (ವೀರಶೈವರನ್ನು ಶೂದ್ರರೆಂದು ದಾಖಲಿಸುತ್ತ ಬರಲಾಯಿತು. ಆದರೆ ೧೯೦೧ ರಲ್ಲಿ ಎಚ್ಚೆತ್ತ ಲಿಂಗಾಯತರು ತಮ್ಮದು ಬೌದ್ಧ, ಜೈನ ಶಾಖೆಯಂತೆ ಸ್ವತಂತ್ರ ಧರ್ಮವೆಂದು ಸರಕಾರದ ಮುಂದೆ ಮಂಡಿಸದೆ ಬ್ರಾಹ್ಮಣರೊಂದಿಗೆ ಸ್ಪರ್ಧೆಗಿಳಿದು ತಾವೂ ಬ್ರಾಹ್ಮಣರು, ತಮ್ಮದೂ ಸನಾತನ ಧರ್ಮವೆಂದು ಮಂಡಿಸಿ ಇನ್ನೊಂದು ತಪ್ಪು ಮಾಡಿದರು. ಇದರಿಂದಾಗಿ, ಲಿಂಗಾಯತರು ಹಿಂದೂ ಸಂಪ್ರದಾಯದ ಭಾಗವೆಂದು ದಾಖಲಾಗುತ್ತ ತಪ್ಪು ಮಾಡಿದರು. ಇದರಿಂದಾಗಿ, ಲಿಂಗಾಯತರು ಹಿಂದೂ ಸಂಪ್ರದಾಯದ ಭಾಗವೆಂದು ದಾಖಲಾಗುತ್ತ ಬಂದಿತು. ಈ ಬಳಿಕ ಇದನ್ನು ವಿರೋಧಿಸುವ ಪ್ರಯತ್ನಗಳು ಈ ಕೆಳಗಿನಂತೆ ಇವೆ.
೧. ಬ್ರಿಟಿಷ್ ಸರಕಾರ ಭಾರತದ ಎಲ್ಲ ಸಮಾಜಗಳ ಇಂಥ ಸಮಸ್ಯೆಗಳ ಯೋಜನೆಯನ್ನು (೧೯೦೧)ಎಂಥೋವೆನ್ (ರೆಜಿನಲ್ ಎಡ್ವರ್ಡ್) ಅವರ ನೇತೃತ್ವದಲ್ಲಿ ಕೈಗೆತ್ತಿಗೊಂಡಿತು. ೧೯೦೬ ರಲ್ಲಿ ಇವರು 'ಹಿಂದೂಸ್ತಾನ ಧರ್ಮಕೋಶ ಹೆಸರಿನ ಗ್ರಂಥವನ್ನು ರಚಿಸಿ, ಇದರಲ್ಲಿ ಲಿಂಗಾಯತವು ಎಲ್ಲ ದೃಷ್ಟಿಗಳಿಂದ ವೈದಿಕ (ಹಿಂದೂ)ದಿಂದ ಭಿನ್ನವಾದುದು, ಇದು ಸ್ವತಂತ್ರ ಧರ್ಮವೆಂದು ಬರೆದರು.
೨. ೧೫-೧೨-೧೯೨೮ರಂದು ಮೈಸೂರ್ ಸ್ಟಾರ್ ಪತ್ರಿಕೆಯಲ್ಲಿ ವೀರಶೈವ ವಿದ್ವಾಂಸರಾದ ಬೆಂಗಳೂರಿನ ಜೀರಗೆ ಬಸವಲಿಂಗಪ್ಪನವರು ಲಿಂಗಾಯತವು ಸ್ವತಂತ್ರ ಧರ್ಮವೆಂದು ಆಧಾರ ಸಹಿತ ಪ್ರತಿಪಾದಿಸಿ, ಬರಲಿರುವ ೧೯೩೦ರ ಜನಗಣತಿಯಲ್ಲಿ ಇದನ್ನು ಜೈನ, ಬೌದ್ಧ, ಸಿಖ್, ಫಾರಸಿಗಳಂತೆ ಸ್ವತಂತ್ರ ಧರ್ಮವೆಂದೇ ದಾಖಲಿಸಬೇಕು. ವೀರಶೈವರು ೧೯೩೦ರ ಜನಗಣತಿಯಲ್ಲಿ ತಮ್ಮ ಜಾತಿಯನ್ನು ಹಿಂದೂ ಎಂದು ಬರೆಸದೆ ಜೈನ, ಬೌದ್ಧ, ಸಿಖ್, ಫಾರಸಿಗಳಂತೆ “ವೀರಶೈವ ಎಂದೇ ಬರೆಸಬೇಕು' ಎಂದು ಕೋರಿದರು.
೩. ೩೧-೧೨-೧೯೪೦ರಂದು ದಾವಣೆಗೆರೆಯಲ್ಲಿ ಸಭೆ ಸೇರಿದ್ದ ವೀರಶೈವ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ “ವೀರಶೈವ ಮಹಾಸಭೆಯ ಸ್ಟ್ಯಾಂಡಿಂಗ್ ಕಮಿಟಿಯು ಈ ಸಮಸ್ಯೆಯನ್ನು ಸಮಗ್ರವಾಗಿ ಚರ್ಚಿಸಿ “ಲಿಂಗಾಯತರು ಹಿಂದೂಗಳಲ್ಲ” ಎಂಬ ನಿರ್ಣಯ ಸ್ವೀಕರಿಸಿದರು.
೪. ಇದೇ ವರ್ಷ (೧೯೪೦)ತಮಿಳು ನಾಡಿನ ಕುಂಭಕೋಣಂನಲ್ಲಿ ಸೇರಿದ್ದ ಈ ವೀರಶೈವ ಮಹಾಸಭೆಯ ವಾರ್ಪಿಕ ಸಮ್ಮೇಳನದ ಅಧ್ಯಕ್ಷರಾಗಿದ್ದ ಬ್ಯಾರಿಸ್ಟರ್ ಶ್ರೀ ಎಮ್. ಎಸ್.ಸರ್ದಾರ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ವೀರಶೈವವು ಹಿಂದೂ ಸಂಪ್ರದಾಯದ ಭಾಗವಲ್ಲ, ಸ್ವತಂತ್ರ ಧರ್ಮವಾಗಿದೆ” ಎಂದು ಬಲವಾಗಿ ಪ್ರತಿಪಾದಿಸಿದರು. ಮತ್ತು ಈ ಸಮ್ಮೇಳನದಲ್ಲಿ ಇದು ಸ್ವತಂತ್ರ ಧರ್ಮವೆಂದು ಅಭ್ಯಸಿಸಿ, ಭಾರತ ಸರಕಾರದ ಜನಗಣತಿ ಸಮಿತಿಯೊಂದಿಗೆ ಪತ್ರವ್ಯವಹಾರ ಮಾಡಲು ಒಂದು ಸಮಿತಿ ನೇಮಿಸುವ ನಿರ್ಣಯ ಸ್ವೀಕರಿಸಲಾಯಿತು. ಈ ಸಮಿತಿಯ ಸದಸ್ಯರು:
೧. ಜಸ್ಟಿಸ್ ಶ್ರೀ ವಿ.ಬಿ.ಹಾಲಬಾವಿ (ಅಧ್ಯಕ್ಷರು)
೨. ಬ್ಯಾರಿಸ್ಟರ್ ಶ್ರೀ ಎಮ್.ಎಸ್. ಸರ್ದಾರ್-ಸದಸ್ಯರು
೩. ಸಂಶೋಧಕ ಡಾ.ಎಸ್.ಸಿ. ನಂದಿಮಠ -ಸದಸ್ಯರು
೪. ವಿದ್ವಾಂಸ ಶ್ರೀ ಎಸ್. ಎಸ್. ಬಸವನಾಳ -ಸದಸ್ಯರು
೫. ನ್ಯಾಯವಾದಿ ಶ್ರೀ ವಿ.ವಿ. ಮುಧೋಳರ -ಸದಸ್ಯರು
೬. ಸಾಹಿತಿ ಶ್ರೀ ಬಿ.ಎಸ್. ಪುಟ್ಟಸ್ವಾಮಿ -ಸದಸ್ಯರು
೭. ಸಾಮಾಜಿಕ ನೇತಾರ ಶ್ರೀ ಜಿ. ಶಾಂತವೀರಪ್ಪ -ಸದಸ್ಯರು
ಈ ಸಮಿತಿಯೂ ರಾವ್ ಅವರ ಅಧ್ಯಕ್ಷತೆಯಲ್ಲಿ ಭಾರತ ರಚಿಸಿದ್ದ “ಹಿಂದೂ ಕಾಯದೆ ಮಸೂದೆ ಸಿದ್ಧಪಡಿಸುವ ಸಮಿತಿ” ಯೊಂದಿಗೆ ೧೯೪೫ರ ವರೆಗೂ ಪತ್ರ ವ್ಯವಹಾರ ಮಾಡಿತು.
೫. ಪ್ರಸಿದ್ಧ ವೀರಶೈವ ವಿದ್ವಾಂಸರಾಗಿದ್ದ ಶ್ರೀ ಆರ್. ಎಂ. ಸಾಖರೆಯವರು ತಮ್ಮ ಸುಪ್ರಸಿದ್ಧ ಗ್ರಂಥವಾಗಿರುವ “ಲಿಂಗಧಾರಣ ಚಂದ್ರಿಕೆ”ಯಲ್ಲಿ (೧೯೪೨) ಲಿಂಗಾಯತವು ಸ್ವತಂತ್ರ ಧರ್ಮವೆಂದು ಪ್ರತಿಪಾದಿಸಿರುವರು.
ಇವೆಲ್ಲ ಸ್ವಾತಂತ್ರ್ಯಪೂರ್ವ ಚಟುವಟಿಕೆಗಳು. ಸ್ವಾತಂತ್ರ್ಯಾನಂತರದ ಚಟುವಟಿಕೆಗಳು ಹೀಗಿವೆ:
೧. ೧೯೭೩ರಲ್ಲಿ ಬೆಂಗಳೂರಿನಲ್ಲಿ ಸೇರಿದ್ದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ ಜೆ.ಬಿ. ಮಲ್ಲಾರಾಧ್ಯ, ಐ.ಎ.ಎಸ್. ಅವರು “ವೀರಶೈವವು ಸ್ವತಂತ್ರ ಧರ್ಮ” ಎಂದು ಪ್ರತಿಪಾದಿಸಿರುವುದು.
೨. ೧೯೮೧ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಶ್ರೀ ಮಗದುಂ ಅವರು ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗದ ಆಯೋಗಕ್ಕೆ ಪತ್ರ ಬರೆದು “ಲಿಂಗಾಯತರು ಹಿಂದೂಗಳಲ್ಲವಾದುದರಿಂದ, ಇವರನ್ನು ಹಿಂದುಳಿದ ವರ್ಗವೆಂದು ಪರಿಗಣಿಸಬೇಕೆಂದು ಕೋರಿದ್ದಾರೆ.
೩. ಅಖಿಲ ಭಾರತ ವೀರಶೈವ ಮಹಾಸಭೆಯು ೧೧.೨.೨೦೦೦ರಂದು "TheRegistrar General and Census Commissioner "on ವಿವರವಾಗಿ ಪತ್ರ ಬರೆದು “ಲಿಂಗಾಯತವು ಸ್ವತಂತ್ರ ಧರ್ಮವಾಗಿದೆ.' ಕಾರಣ, ೨೦೦೧ರ ಜನಗಣತಿಯಲ್ಲಿ ಅದಕ್ಕೆ ಸ್ವತಂತ್ರ ಕೋಡ್ ನಂಬರ್ ಕೊಡಬೇಕೆಂದು ಕೋರಿದೆ.
೪. ಕರ್ನಾಟಕ ವಿಶ್ವವಿದ್ಯಾಲಯಯದ ನಿವೃತ್ತತತ್ವಶಾಸ್ತ್ರ ಪ್ರಾಧ್ಯಾಪಕರಾದ ಡಾ.ಎನ್. ಜಿ. ಮಹಾದೇವಪ್ಪ ಅವರು 'ಲಿಂಗಾಯತರು ಹಿಂದೂಗಳಲ್ಲ' (೨೦೦೪) Lingayats are not hindus (2010) ಎಂಬ ಕನ್ನಡ ಮತ್ತು ಇಂಗ್ಲಿಷ್ ಕೃತಿಗಳನ್ನು ರಚಿಸಿದ್ದು. ಈ ವಿಷಯವನ್ನು ಕುರಿತು ಸಮಗ್ರವಾಗಿ ಚರ್ಚಿಸುತ್ತಾರೆ.
೫. ಇತ್ತೇಚೆಗೆ ೨೦೧೧ರಲ್ಲಿ ಸುತ್ತೂರಿನಲ್ಲಿ ಜರುಗಿನ ವೀರಶೈವ ಸಮ್ಮೇಳದಲ್ಲಿ ವೀರಶೈವವು ಸ್ವತಂತ್ರ ಧರ್ಮವೆಂದು ಪರಿಗಣಿಸಲು ಭಾರತ ಸರಕಾರಕ್ಕೆ ಒತ್ತಾಯಿಸಬೇಕು ಎಂದು ನಿರ್ಣಯ ಸ್ವೀಕರಿಸಲಾಗಿದೆ.
ಹೀಗೆ ೧೯೨೮ರಿಂದ ಇಂದಿನವರೆಗೂ ಅಖಿಲ ಭಾರತ ವೀರಶೈವ ಮಹಾಸಭೆ, ವೀರಶೈವ ವಿದ್ವಾಂಸರು, ಭಾರತ ಸರಕಾರವನ್ನು ಈ ಬಗ್ಗೆ ಒತ್ತಾಯಿಸುತ್ತ ಬಂದಿದೆ.
೧.ಪ್ರಮಾಣ ಗ್ರಂಥ: ಕ್ರಿಶ್ಚಿಯನ್ನರಿಗೆ ಬೈಬಲ್, ಮುಸ್ಲಿಮರಿಗೆ ಕುರಾನ್, ಬೌದ್ಧರಿಗೆ ತ್ರಿಪಿಟಕ, ಹಿಂದೂಗಳಿಗೆ ವೇದಗಳಿರುವಂತೆ, ಲಿಂಗಾಯತರಿಗೆ ವಚನಗಳು ಪ್ರಮಾಣಗಳಾಗಿವೆ. ವಚನಗಳಲ್ಲಿ ವೇದಗಳ-ಅದರಲ್ಲೂ ಕರ್ಮಕಾಂಡದ-ಖಂಡನೆ ವ್ಯಾಪಕವಾಗಿದೆ. ಲಿಂಗಾಯತರು ಹಿಂದೂಗಳಾಗಿದ್ದರೆ ತಮ್ಮ ಪ್ರಮಾಣಗ್ರಂಥಗಳಾದ ವೇದಗಳನ್ನು ಖಂಡಿಸುತ್ತಿರಲಿಲ್ಲ ಎಂಬುದನ್ನು ಗಮನಿಸಬೇಕು.
೨. ಬಹುದೇವತಾರಾಧನೆ ಮತ್ತು ಯಜ್ಞಯಾಗಾದಿಗಳು: ವೇದದ ಕರ್ಮಕಾಂಡವು ಬಹುದೇವತಾರಾಧನೆಯನ್ನೂ ಪ್ರಾಣಿಬಲಿಯನ್ನೊಳಗೊಂಡ ಯಜ್ಞಯಾಗಾದಿಗಳನ್ನು ಅನುಮೋದಿಸುತ್ತದೆ.
ಆದರೆ, ಲಿಂಗಾಯತರು ಏಕದೇವೋಪಾಸಕರು, ಅಹಿಂಸಾವಾದಿಗಳಾದ ಅವರು ಯಜ್ಞಯಾಗಾದಿಗಳ ತೀವ್ರ ವಿರೋಧಿಗಳು. ಅವರು ಲಿಂಗವ(ಶಿವನ)ನ್ನಲ್ಲದೆ ಮತ್ತಾರನ್ನೂ ಪೂಜಿಸಬಾರದೆಂಬ ನಿಷೇಧವಿದೆ. ಇಲ್ಲಿ ಶಿವನೆಂದರೆ, ಕೈಲಾಸಪತಿ, ನಂದಿವಾಹನ, ರುಂಡಮಾಲಾಧರ, ಶಿವನಲ್ಲ, ನಿರಾಕಾರ ಶಿವ ಎಂಬುದು ಗಮನಾರ್ಹ. ಅಲ್ಲದೆ, ಲಿಂಗಾಯತರಿಗೆ ಪಾರ್ವತಿ, ಗಣಪತಿ, ಕುಮಾರ, ವೀರಭದ್ರ ಮುಂತಾದವರ ಪೂಜೆಯೂ ನಿಷಿದ್ದ.
ಲಿಂಗಾಯತರು ವೇದಗಳ ಕರ್ಮಕಾಂಡವನ್ನು ಖಂಡಿಸುತ್ತಾರೆ. ಜ್ಞಾನಕಾಂಡವನ್ನು ಒಪ್ಪಿಕೊಳ್ಳುತ್ತಾರೆ ಎಂಬ ಮಾತು ನಿಜ. ಆದರೆ ವೇದಗಳಲ್ಲಿ ಕಂಡುಬರುವ ಆತ್ಮ ಕರ್ಮ, ಮಾಯೆ, ಸಂಸಾರ (ಬಂಧನ), ಮೋಕ್ಷ, ಮುಂತಾದ ಪರಿಕಲ್ಪನೆಗಳು ಸಾರ್ವತ್ರಿಕವಾಗಿದ್ದು, ಜೈನ, ಬೌದ್ಧ, ಲಿಂಗಾಯತ, ಇತ್ಯಾದಿ ಗ್ರಂಥಗಳಲ್ಲಿಯೂ ಕಂಡುಬರುತ್ತವೆ. ಆದುದರಿಂದ ಕರ್ಮಕಾಂಡವನ್ನು ನಿರಾಕರಿಸುವ ಜೈನ ಮತ್ತು ಬೌದ್ಧಧರ್ಮಗಳನ್ನು ಹೇಗೋ ಹಾಗೆ ಲಿಂಗಾಯತ ಧರ್ಮವನ್ನೂ ಸ್ವತಂತ್ರ ಧರ್ಮವೆಂದು ಪರಿಗಣಿಸುವುದು ನ್ಯಾಯ.
೩. ಜಾತಿಪದ್ಧತಿ: ಹಿಂದೂಗಳಲ್ಲಿ ಜಾತಿಪದ್ಧತಿ ಇದೆ. ಅಲ್ಲಿ ಒಬ್ಬ ಹಿಂದುವು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ಜಾತಿಗಳಲ್ಲಿ ಒಂದಕ್ಕೆ ಸೇರಿರಲೇಬೇಕು; ಬ್ರಾಹ್ಮಣ ಶ್ರೇಷ್ಠ ಶೂದ್ರ ಕನಿಷ್ಠ ಎಂಬುದನ್ನೂ ಒಪ್ಪಿಕೊಳ್ಳಲೇಬೇಕು. ಮನುವಿನ ಧರ್ಮಶಾಸ್ತ್ರದಲ್ಲಿ ಶೂದ್ರನ ಕನಿಷ್ಠತೆಯು ಅತಿಯಾಗಿ ವರ್ಣಿತವಾಗಿದೆ. ಬಾದರಾಯಣನ ಬ್ರಹ್ಮಸೂತ್ರದಲ್ಲಿ ಅಪಶೂದ್ರಾಧಿಕರಣ ಎಂಬ ಪ್ರಕರಣವಿದ್ದು, ಅದರಲ್ಲಿ ಶೂದ್ರನಿಗೆ ಉಪನಯನ ಸಂಸ್ಕಾರವಿಲ್ಲ, ಆ ಕಾರಣ ಅವನಿಗೆ ವೇದಾಧ್ಯಯನದ ಅಧಿಕಾರವಿಲ್ಲ, ಬ್ರಹ್ಮವಿದ್ಯೆಯಿಲ್ಲ, ಮೋಕ್ಷವಿಲ್ಲ ಎನ್ನಲಾಗಿದೆ.
(ಅ) ಇದಕ್ಕೆ ವಿರುದ್ಧವೆಂಬಂತೆ,ಲಿಂಗಾಯತರಲ್ಲಿ ಜಾತಿಭೇದವಿಲ್ಲ, ಲಿಂಗಧಾರಿಗಳೆಲ್ಲ ಸಮಾನರು ಯಾರು ಬೇಕಾದರೂ ಲಿಂಗಾಯತ ಆಗಬಹುದು, ಯಾವ ಲಿಂಗಾಯತ ಬೇಕಾದರೂ ಜಂಗಮ ಅಥವಾ ಸ್ವಾಮಿ ಅಥವಾ ಮಠಾಧಿಪತಿಯಾಗಬಹುದು. ಹನ್ನೆರಡನೆಯ ಶತಮಾನದಲ್ಲಿ ಲಿಂಗಾಯತಕ್ಕೆ ಸೇರಿದ ಬೇರೆ ಬೇರೆ ಜಾತಿಯವರು ಈ ಜಾತ್ಯತೀತ ಚಳುವಳಿಯನ್ನು ಹುಟ್ಟು ಹಾಕಿದರು. ಅಂದು ಶೂದ್ರ ಮತ್ತು ಬ್ರಾಹ್ಮಣರ ಮದುವೆಯನ್ನು ನೆರವೆರಿಸುವವರೆಗೂ ಮುಂದುವರಿದರು. ಹೀಗೆ ಅನ್ಯ ಜಾತಿಯವರನ್ನು ಒಳಗೆ ಕರೆದುಕೊಳ್ಳುವ ಕ್ರಿಯೆ ಈ ಧರ್ಮದಲ್ಲಿ ಕಾಲ ಕಾಲಕ್ಕೆ ಜರುಗಿದುದಕ್ಕೆ ಅನೇಕ ನಿದರ್ಶನಗಳಿವೆ. ಈಗಲೂ ಈ ಕ್ರಿಯೆ ಅಸ್ತಿತ್ವದಲ್ಲಿದೆ. (ಮುಂದುವರಿಯುವುದು)
ಗ್ರಂಥ ಋಣ: ಮಾರ್ಗ-೭, ಸಪ್ನಬುಕ್ ಹೌಸ್, ಬೆಂಗಳೂರು
ಲಿಂಗಾಯತವು ಪೂರ್ಣಧರ್ಮ | ಕನ್ನಡಿಗರು ಸೃಷ್ಟಿಸಿದ ಧರ್ಮ |