Previous ಲಿಂಗಾಯತ ಧರ್ಮದ ಸಾರ ಲಿಂಗಾಯತ Next

ಲಿಂಗಾಯತ ಅಂತ್ಯ ಸಂಸ್ಕಾರ

ಅಂತ್ಯ ಸಂಸ್ಕಾರ

ವೈದಿಕರಲ್ಲಿ ತ್ರಿವರ್ಣಿಕರ ಶವಗಳನ್ನು ಸುಡುವ ಪದ್ಧತಿಯಿದೆ. ಶೂದ್ರರೂ ಅಂತ್ಯಜರೂ ತಮ್ಮ ಶವಗಳನ್ನು ಹೂಳುತ್ತಾರೆ. ಆದರೆ ಶರಣಧರ್ಮದ ಪ್ರಕಾರ, ಎಲ್ಲ ಶಿವಭಕ್ತರೂ ಸಮಾನರು, ಯಾರ ಶವವನ್ನೂ ಸುಡಬಾರದು. ಶರಣರು ಎಲ್ಲರ ಶವಗಳನ್ನೂ ಹೂಳುತ್ತಾರೆಂದರೂ ಅವರ ಶವಸಂಸ್ಕಾರಕ್ಕೂ ಶೂದ್ರರ ಶವಸಂಸ್ಕಾರಕ್ಕೂ ವ್ಯತ್ಯಾಸವಿದೆ.

ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು,
ಸಾವೆಂಬುದು ಸಯವಲ್ಲ.
ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ
ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ.
ಕೂಡಲಸಂಗಮದೇವರ ಶರಣ ಸೊಡ್ಡಳ ಬಾಚರಸರು
ನಿಜಲಿಂಗದ ಒಡಲೊಳಗೆ ಬಗಿದು ಹೊಕ್ಕಡೆ,
ಉಪಮಿಸಬಲ್ಲವರ ಕಾಣೆನು. (೧: ೧೧೦೩)

ಗುರುವಿನಿಂದ ಉಪದೇಶವ ಹಡೆದ ಶಿಷ್ಯಂಗೆ
ಭಾವವಾವುದಯ್ಯಯೆಂದಡೆ:
ಸದ್ಗುರು ಸಂದರೆ ಲಿಂಗದಲ್ಲಿ ಐಕ್ಯವಾದೆಂದು ಭಾವಿಸುವುದಯ್ಯ
ಲೋಕದವರಂತೆ ಸತ್ತರು ಕೆಟ್ಟರುಯೆಂದು
ಬರಿಯ ದುರ್ನುಡಿಯ ನುಡಿದರೆ,
ಅಘೋರ ನರಕ ತಪ್ಪದು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. (೧೧: ೧೬೯)

ಅಯ್ಯಾ, ಪರಮಾರಾಧ್ಯ ಸಚ್ಚಿದಾನಂದಮೂರ್ತಿ ಶ್ರೀ ಗುರುದೇವನೇ ಸಕಲ ಪ್ರಮಥಾರಾಧ್ಯ ಗಣಸಮೂಹವೆಲ್ಲ ಸರ್ವಾಚಾರ ಸಂಪತ್ತಿನಾಚರಣೆಯನ್ನು ಆಚರಿಸಿ ಮುಗಿದ ಮೇಲೆ ಸಮಾಧಿಸ್ಥರಾದ ನಿಲುಕಡೆಯ ಕರುಣಿಸಬೇಕಯ್ಯ ಸ್ವಾಮಿ, ಕೇಳಯ್ಯ ಅನಾದಿ ಶರಣನೇ, ಎಂದು ಕಲ್ಯಾಣಪಟ್ಟಣದ ಅನುಭಾವ ಮಂಟಪದಲ್ಲಿ ಬಸವ ಮೊದಲಾದ ಸಕಲ ಪ್ರಮಥಗಣಂಗಳು ಪರಶಿವಮೂರ್ತಿ ಪ್ರಭುಸ್ವಾಮಿಗಳ ಬೆಸಗೊಳ್ಳಲು, ಆಗ ಮಹಾಪ್ರಭುಸ್ವಾಮಿಗಳು ನಿರ್ಲಜ್ಜಶಾಂತಲಿಂಗ ದೇಶಿಕೋತ್ತಮನ ಮುಖವಚನದಲ್ಲಿ ಸಕಲ ಪ್ರಮಥರ್ಗೆ ನಿರೂಪಮಂ ಕೊಡುತಿರ್ದರು ನೋಡಾ, ಆ ನಿಲುಕಡೆಯ ವಿಚಾರವೆಂತೆಂದೊಡೆಃ

ಪ್ರಥಮದಲ್ಲಿ ಘಟ್ಟಿವಾಳ ನೂರೊಂದು ವಿರಕ್ತ ಅಜಗಣ್ಣ ತಂದೆಗಳು ಅಕ್ಕನಾಗಲೆ ಮಹಾದೇವಿ ನೀಲಲೋಚನೆ ಮುಕ್ತಾಂಗನೆ ಮೊದಲಾದ ಶರಣರ್ಗೆ ನಿರವಯಸ್ಥಲಕ್ಕೆ ಕಾರಣವಾದ ಶೂನ್ಯಲಿಂಗಾನುಭಾವವ ಬೋಧಿಸಿ ೨೧೬ ಸಕೀಲು ಮೊದಲಾದ ಸಮಸ್ತ ಸಕೀಲನರುಪಿ, ಅಪಸ್ಮಾರ ಕುಂಡಲಿ ಶೂನ್ಯಲಿಂಗೋದ್ಧರಣೆ ಚಿದಂಬರ ಮೊದಲಾದ ಚತುರ್ವಿಧ ಉದ್ಧರಣೆಯ ಕರುಣಿಸಿ ನಿರ್ವಾಣಸಮಾಧಿಯ ಪಥವ ತೋರಿದರು ನೋಡಾ.

ದ್ವಿತೀಯದಲ್ಲಿ ಬಸವ ಚನ್ನಬಸವ ಸಿದ್ಧರಾಮ ಮೊದಲಾದ ಶರಣರ್ಗೆ ನಿರಾಲಂಬಸ್ಥಲಕ್ಕೆ ಕಾರಣವಾದ ನಿಃಕಲಲಿಂಗಾನುಭಾವವ ಬೋಧಿಸಿ ೨೧೬ ಸಕೀಲು ಮೊದಲಾದ ಸಮಸ್ತ ಸಕೀಲವನರುಪಿ ಅಷ್ಟಾವರಣ ಜ್ಞಾನಚಕ್ರ ನೂರೆಂಟುಪ್ರಣವ ಅನಾದಿಜಂಗಮ ಮೊದಲಾದ ಚತುರ್ವಿಧ ಉದ್ಧರಣೆಯ ಕರುಣಿಸಿ ನಿರವಯಸಮಾಧಿಯ ಪಥವ ತೋರಿದರು ನೋಡಾ.

ತೃತೀಯದಲ್ಲಿ ಮರುಳುಶಂಕರ ನಿಜಗುಣ ಚನ್ನಮಲ್ಲದೇವರು ಮೊದಲಾದ ಶರಣರ್ಗೆ ನಿಜೈಕ್ಯಸ್ಥಲಕ್ಕೆ ಕಾರಣ ವಾದ ಮಹಾಲಿಂಗಾನುಭಾವವ ಬೋಧಿಸಿ ಸಮಸ್ತ ಮಿಶ್ರಸಕೀಲವನರುಪಿ ಅನಾದಿಭಕ್ತ ಗೋಮುಖ ಶಾಂಭವಿಮಹಾ ಲಿಂಗೋದ್ಧರಣೆ ಮೊದಲಾದ ಚತುರ್ವಿಧ ಉದ್ದರಣೆಯ ಕರುಣಿಸಿ ನಿಜಶಿವಸಮಾಧಿಯ ಪಥವ ತೋರಿದರು ನೋಡಾ.

ಚತುರ್ಥದಲ್ಲಿ ಸಮಸ್ತ ಜಂಗಮಾಕೃತಿಯ ಧರಿಸಿದ ಶರಣರ್ಗೆ ನಿಜಶರಣಸ್ಥಲಕ್ಕೆ ಕಾರಣವಾದ ಪ್ರಸಾದಲಿಂಗಾನುಭಾವವ ಬೋಧಿಸಿ ಸಗುಣ ನಿರ್ಗುಣ ಮೊದಲಾದ ಸಮಸ್ತ ಸಕೀಲವನರುಪಿ ಷಡ್‌ಬ್ರಹ್ಮ ವೃಷಭ ಮಕುಟಮೂರ್ತಿ ಉದ್ದರಣೆ ಮೊದಲಾದ ಚತುರ್ವಿಧ ಉದ್ದರಣೆಯ ಕರುಣಿಸಿ ನಿಜಶಿವಸಮಾಧಿಯ ಪಥವ ತೋರಿದರು ನೋಡಾ.

ಪಂಚಮದಲ್ಲಿ ರೇವಣಸಿದ್ಧ ಮರುಳಸಿದ್ಧ ಏಕೋರಾಮ ಪಂಡಿತಾರಾಧ್ಯ ಮೊದಲಾದ ಶರಣರ್ಗೆ ನಿಜಪ್ರಾಣಲಿಂಗಸ್ಥಲಕ್ಕೆ ಕಾರಣವಾದ ಜಂಗಮಲಿಂಗಾನುಭವ ಬೋಧಿಸಿ ನೂರೆಂಟು ಸಕೀಲ ಮೊದಲಾದ ಸಮಸ್ತ ಸಕೀಲವನರುಪಿ ತತ್ವಪಂಚೀಕರಣ, ಲಿಂಗಪಂಚೀಕರಣ, ಮಂತ್ರ ಪಂಚೀಕರಣ ಬಸವೋದ್ಧರಣೆ ಮೊದಲಾದ ಚತುರ್ವಿಧ ಉದ್ಧರಣೆಯ ಕರುಣಿಸಿ ಬಯಲ ಸಮಾಧಿಯ ಪಥವ ತೋರಿದರು ನೋಡಾ.

ಷಷ್ಠಮದಲ್ಲಿ ನಮಃಶಿವಾಯದೇವರು, ಷಡಕ್ಷರಾಂಕ ಗಣದಾಸಿ ವೀರಣ್ಣಗಳು, ಹಳ್ಳಪ್ಪ ಮೊದಲಾದ ಶರಣರ್ಗೆ ನಿಜಪ್ರಸಾದಿ ಸ್ಥಲಕ್ಕೆ ಕಾರಣವಾದ ಶಿವಲಿಂಗಾನುಭಾವವ ಬೋಧಿಸಿ ೯೬ ಸಕೀಲ ಮೊದಲಾದ ಸಮಸ್ತ ಕೀಲವನರುಪಿ ನವಚಕ್ರ ಅಂಗಷಡಕ್ಷರ, ಲಿಂಗಷಡಕ್ಷರ, ಪಂಚಮೂರ್ತಿ ಮೊದಲಾದ ಚತುರ್ವಿಧ ಉದ್ದರಣೆಯ ಕರುಣಿಸಿ ಗೋಳಕ ಸಮಾಧಿಯ ಪಥವ ತೋರಿದರು ನೋಡಾ.

ಸಪ್ತಮದಲ್ಲಿ ಪಂಚಾಕ್ಷರ ಕಲಿಗಣನಾಥೊಡೆಯರು, ಚಿಲುಮೆ ಅಗ್ಗಣಿಯ ಭಕ್ತರು, ಮೇಲುಪಾವಡದ ಭಕ್ತರು ಸಮೇತವಾದ ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ ಮೊದಲಾದ ಶರಣರ್ಗೆ ಸದ್ವೀರಮಾಹೇಶ್ವರ ಸ್ಥಲಕ್ಕೆ ಕಾರಣವಾದ ಗುರುಲಿಂಗಾನುಭಾವವ ಬೋಧಿಸಿ ೬೬ ಸಕೀಲು ಮೊದಲಾದ ೧೦೮ ಕಡೆಯಾಗಿ ಸಮಸ್ತ ಸಕೀಲವನರುಪಿ, ಮೂಲ ಷಡಕ್ಷರಿ, ಕಾಯಾರ್ಪಣ ೧೮ ತರದರ್ಪಣ ಮೊದಲಾದ ಚತುರ್ವಿಧ ಉದ್ದರಣೆಯ ಕರುಣಿಸಿ ಗೋಮುಖಸಮಾಧಿಯ ಪಥವ ತೋರಿದರು ನೋಡಾ.

ಅಷ್ಟಮದಲ್ಲಿ ಒರತೆ ಸೋಮಣ್ಣಯ್ಯ, ಚಿಕ್ಕಮಾದಯ್ಯಗಳು, ಕದಿರೆ ರೇಮಯ್ಯನು ರಾಘವಾಂಕ ಮೊದಲಾದ ಶರಣರ್ಗೆ ಸದ್ಭಕ್ತಿಸ್ಥಲಕ್ಕೆ ಕಾರಣವಾದ ಆಚಾರಲಿಂಗಾನುಭಾವವ ಬೋಧಿಸಿ, ಷಡ್ವಿಧಸಕೀಲು ಮೊದಲಾದ ಸಕೀಲವನರುಪಿ ೪೮ ತೆರದರ್ಪಣ, ೬೬ ತೆರದರ್ಪಣ, ೧೦೮ ತೆರದರ್ಪಣ ಮೊದಲಾಗಿ ಚತುರ್ವಿಧ ಉದ್ದರಣೆಯ ಕರುಣಿಸಿ ಸಹಜಕ್ರಿಯಾಸಮಾಧಿಯ ಪಥವ ತೋರಿದರು ನೋಡಾ.

ಇಂತೀ ಅಷ್ಟವಿಧಸ್ಥಲಸಂಬಂಧದಿಂದ ಆಯಾಯ ಲಿಂಗಾನುಭಾವವ ಬೋಧಿಸಿ ಅಷ್ಟವಿಧಸಮಾಧಿಯ ಬೋಧಿಸಿದರು ನೋಡಾ. ಅದರ ವಿಚಾರವೆಂತೆಂದೊಡೆ:

೩೦೮ ಪಾದ ಮೃತ್ತಿಕೆಯ ತೆಗೆದಂಥಾದ್ದೇ ಸಹಜಕ್ರಿಯಾಸಮಾಧಿ ಎನಿಸುವುದು. ೨೯೬ ಪಾದ ಮೃತ್ತಿಕೆ ತೆಗೆದಂಥಾದ್ದೇ ಗೋಮುಖಸಮಾಧಿ ಎನಿಸುವುದು. ೨೯೦ ಪಾದ ಮೃತ್ತಿಕೆಯ ತೆಗೆದಂಥಾದ್ದೇ ಗೋಳಕ ಸಮಾಧಿ ಎನಿಸುವುದು. ಹರಗುರು ವಚನೋಕ್ತಿ ಪ್ರಮಾಣದಿಂದ ತಮ್ಮ ತಾವೇ ಅವಸಾನದ ವೇಳೆಯನರಿದು ನಿರಾಶಕತ್ವದಿಂದ ಸರ್ವಸಂಗಪರಿತ್ಯಾಗರಾಗಿ ದಿಗಂಬರ ಲೀಲೆಯ ಧರಿಸಿ ಪರಿಣಾಮತರವಾದ ಏಕಾಂತವಾಸಕ್ಕೆ ಹೋಗಿ, ತೆಗ್ಗು ತೆವರು ಇಲ್ಲದಂಥಾ ಭೂಮಿಯಾದರೂ ಸರಿಯೇ, ಸಮತಳವಾದ ಭಂಡಿಯಾದರೂ ಸರಿಯೇ, ಕಲ್ಲು ಹಿಟ್ಟಿನಿಂದಾದರೂ ಸ್ವಗೋಚರವಾದ ಮಳಲಾದರು ಬಳಹದಿಂದಾರೂ ಸರಿಯೆ, ಗೋಳಕಸಮಾಧಿಯಾಕಾರವ ರಚಿಸಿ ಅಯಾಯ ಸ್ಥಾನದಲ್ಲಿ ಪ್ರಣವವ ಸ್ಥಾಪಿಸಿ, ಅನಾದಿ ಪರಶಿವ ಲಿಂಗವ ಉಭಯತರ ಮಧ್ಯದಲ್ಲಿ ಬಾಸಣಿಸಿ ಅನಾದಿಮೂಲಪ್ರಣವಧ್ಯಾನದಿಂದ ಪ್ರಥಮಸೋಪಾನವಿಡಿದು ಹೋಗಿ, ತ್ರಿಕೋಣೆಯ ಮಧ್ಯದಲ್ಲಿ ಪದ್ಮಾಸನವ ಬಲಿದು ಮೂರ್ತವ ಮಾಡಿ, ಅಂತರಂಗದಲ್ಲಿ ಬೆಳಗುವ ಜ್ಯೋತಿರ್ಲಿಂಗವ ಅನಿಮಿಷ ಸ್ಥಾನಕ್ಕೆ ತಂದು ಮೂರ್ತವ ಮಾಡಿಸಿ, ಕ್ಷೀರ ಕ್ಷೀರ ಬೆರೆದಂತೆ ಚಿಪ್ಪನ ಸ್ವರೂಪವಾದ ಇಷ್ಟಲಿಂಗವು ನಿರಂಜನಜಂಗಮಸ್ವರೂಪವಾದ ಪ್ರಾಣಲಿಂಗದಲ್ಲಿ ಶಿಖಿಕರ್ಪೂರದ ಹಾಗೆ ಬಯಲಪ್ಪುದು, ಬಯಲಸಮಾಧಿ ಎನಿಸುವುದು. ಇವು ನಾಲ್ಕು ಕ್ರಿಯಾಸ್ವರೂಪವಾದ ಸಮಾಧಿಗಳೆನಿಸುವವು ನೋಡಾ. ಅಷ್ಟತನುವಿನಲ್ಲಿ ೬೪ ತೆರದ ವರ್ಣವನರಿದಂಗವಮಾಡಿಕೊಂಡು ದ್ವಾದಶೇಂದ್ರಿಯಂಗಳಲ್ಲಿ ೧೪೪ ತೆರದ ಸರ್ವಾಚಾರಸಂಪತ್ತಿನ ಆಚಾರಂಗಳನ್ನು ಅರಿದು ಪ್ರಾಣ ಮಾಡಿಕೊಂಡು, ೧೮ ಕರಣಚಕ್ರಂಗಳಲ್ಲಿ ೧೨೪ ಚಕ್ರಂಗಳ ಸ್ವಸ್ವರೂಪ ನಿಲುಕಡೆಯ ತಿಳಿದು, ಸ್ವಾನುಭಾವಸೂತ್ರದ ವಿಚಾರವನರಿದು, ಮೇಲಾದ ಜ್ಯೋತಿರ್ಮಂಡಲವ ಕಂಡು, ಆ ಮಂಡಲದಲ್ಲಿ ಮೂರ್ತಿಗೊಂಡಿರುವ ನಿರಂಜನಜಂಗಮ ವಿರಾರ್ತಿಯ ಇರವ ತಿಳಿದು, ಆ ಮೂರ್ತಿಯೊಳಗೆ ಉರಿ ಉಂಡ ಕರ್ಪೂರದಂತೆ ಅಂಗ ಪ್ರಾಣ ಭಾವ ಆತ್ಮಂಗಳೇನೂ ತೋರದೆ ಗುರುಲಿಂಗಜಂಗಮಭಕ್ತನೆಂಬ ನವಪ್ರಣಮಂಗಳೇ ಪಾದೋದಕ, ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ಶರಣನೆಂಬ ಹದಿನೆಂಟು ಪ್ರಣಮಂಗಳೊಳಗೆ ಕೂಡಿ, ವಾಚಾತೀತ ಮನೋತೀತ ಭಾವಾತೀತ ವರ್ಣಾತೀತರಾದಂಥಾದ್ದೇ ನಿರ್ವಾಣ ಮೊದಲಾದ ನಿರವಯವಂತ್ಯವಾದ ಚತುರ್ವಿಧಸಮಾಧಿ ಎನಿಸುವುದು ನೋಡಾ, ಗುಹೇಶ್ವರಲಿಂಗಕ್ಕೆ ಕಾಣಿರಣ್ಣಾ ಶಾಂತ ಗಣಂಗಳೇ ಎಂದು ಪ್ರಭುಸ್ವಾಮಿಗಳು ಕಲ್ಯಾಣ ಪಟ್ಟಣದ ಅನುಭಾವ ಮಂಟಪದೊಳಗೆ ನಿರ್ಲಜ್ಜ ಶಾಂತಲಿಂಗೇಶ್ವರನ ಮುಖವಚನದಲ್ಲಿ ಸಕಲ ಪ್ರಮಥರ್ಗೆ ಬೋಧಿಸುತಿರ್ದರು ನೋಡಾ. ಅದೇ ಪ್ರಸಾದ ಬಳಿವಿಡಿದು ಗುಮ್ಮಳಾಪುರದಲ್ಲಿ ಪರಮಾರಾಧ್ಯರು ಆಚರಿಸಿ ಶೂನ್ಯವಾದರು ನೋಡಾ ಸಂಗನಬಸವೇಶ್ವರಾ.

ಅಯ್ಯಾ, ಇನ್ನು ವಿಭೂತಿ ವೀಳೆಯುವ, ಸಮಾಧಿ ವಿಸ್ತಾರದ ನಿರ್ಣಯವ ಪೇಳುತಿರ್ದೆವು ನೋಡಾ. ಆ ವಿಚಾರವೆಂತೆಂದೊಡೆ, ಹಿಂದೆ ಹೇಳಿದ ವಸ್ತು ನಿರವಯ ನಿಲುಕಡೆಯ ತನ್ನ ಸ್ವಾನುಭಾವದಿಂದರಿವ ಶರಣನು ತನ್ನವಸಾನಕಾಲದ ಎಚ್ಚರಿಕೆಯನರಿದು, ತನ್ನಾಚಾರ ನಡೆನುಡಿಗೆ ಸನ್ಮತವಹ ಗುರುವಚನಕ್ಕೆ ಒಪ್ಪಿಗೆಯಾದ ಆಪ್ತ ಪ್ರಮಥ ಗಣಾರಾಧ್ಯ ಭಕ್ತಮಾಹೇಶ್ವರರೊಡಗೂಡಿ ಅಭಿವಂದಿಸಿ ಶರಣುವೊಕ್ಕು ಕರುಣ ಕೃಪೆಯ ಬೆಸಗೊಂಡು, ಆ ಗಣಸಮೂಹ ಮೂರ್ತಿಗಳು ದಯಾಂತಃಕರಣ ಹುಟ್ಟಿ ಗೋವು ಮಲಗುವಷ್ಟು ಧರಣಿಯ ನವಪಾದ ಉದ್ದ, ಪಂಚಪಾದ ಅಗಲ, ಗೋಮಯ ಗೋಮೂತ್ರ ಗೋಕ್ಷೀರ ಗೋದಧಿ ಗೋಧೃತ ಗೋರೋಜನವೆಂಬ ಷಡ್‌ದ್ರವ್ಯವ ಸದ್ಗುರುಲಿಂಗಜಂಗಮದ ವೃತ್ತ ಸ್ಥಾನ ತಾರಕಾಕೃತಿಯಿಂದ ಮಾಡಿದ ಧೂಳಪಾದೋದಕದೊಳಗೆ ಸಮ್ಮಿಶ್ರವ ಮಾಡಿ ಸಮಾರ್ಜನೆಗೈದು, ಧವಳಕರ್ಣ ಮೊದಲಾದ ಪಂಚವರ್ಣದ ಪಾಷಾಣದೊಳಗೆ ರಜತ ಹೇಮ ಮೌಕ್ತಿಕ ಹವಳ ಪಂಚಲೋಹಂಗಳ ಕೂಡಿಸಿ ಒಟ್ಟುಮಾಡಿ ನೂರೆಂಟು ಮನೆಯುಕ್ತವಾದ ಅಂಗದಲ್ಲಿಟ್ಟು ರಚಿಸಿ, ಅದರೊಳಗೆ ನೂರೆಂಟು ದಳಾಕ್ಷರಂಗಳನೆ ತುಂಬಿ, ಗುರುಪಾದೋದಕ ಮಿಶ್ರವಾದ ಭಸ್ಮಂ ತಳೆದು, ಪುಷ್ಪಪತ್ರಿಗಳ ರಚಿಸಿ ರೋಮಶಾಟಿಯಾಗಲಿ ನಾರು ಮಡಿಯಾಗಲಿ ಪಟ್ಟೆ ಪಟ್ಟಾವಳಿಯಾಗಲಿ ಆಸನವ ರಚಿಸಿ ಆ ಲಿಂಗೈಕ್ಯಂಗೆ ಘನಮಾರ್ಗ ಎಚ್ಚರವ ಹುಟ್ಟಿಸುವುದೇ ಆತ್ಮರಕ್ಷಣ ನೋಡಾ. ಆ ಶರಣನು ಗಣವಾಕ್ಯ ಲಾಲಿಸಿ ಎಚ್ಚರದಳೆದು ಪಾದೋದಕ ಪ್ರಸಾದವ ಮುಗಿದು ನಿಜ ನೈಷ್ಠೆಯಿಂದ ಮಂತ್ರಮೂರ್ತಿ ಶಿವಗಣಂಗಳಿಗೆ ಸಾಷ್ಟಾಂಗ ಪ್ರಣತನಾಗಿ ಆ ಸಿಂಹಾಸನದ ಮೇಲೆ ಭಾವಲಿಂಗಲೀಲೆ ತಾಳಿ ಸುಯಿಧಾನದಿಂದ ತ್ರ್ಯಕ್ಷರ ಪಂಚಾಕ್ಷರ ಷಡಕ್ಷರ ಮತ್ತಾರು ಪ್ರಣವ ಸ್ಮರಣೆಯಿಂದ ತನ್ನ ಕರದಲ್ಲಿ ಚಿಪ್ಪನ ಇಷ್ಟಮಹಾಲಿಂಗವ ಮೂರ್ತಮಾಡಿಸಿಕೊಂಡು, ಇರುವಂತಿಗೆ ಶಾವಂತಿಗೆ ಮೊಲ್ಲೆ ಮಲ್ಲಿಗೆ ಜಾಜಿ ಕರವೀರ ಸುರಹೊನ್ನೆ ಸಂಪಿಗೆ ಪುಷ್ಪ ಮರುಗ ಪಚ್ಚೆ ದವನ ಬಿಲ್ವಪತ್ರೆ ಮೊದಲಾದ ಸಮಸ್ತ ಪತ್ರೆ ಪುಷ್ಪಂಗಳಂ ಧರಿಸುತ್ತ ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಸಾಕಾರ ನಿರಾಕಾರ ರಚನೆಗಳ ಮಾಡುತ್ತಾ ಆ ಚಿದ್ಘನ ಇಷ್ಟ ಮಹಾಲಿಂಗವನ್ನು ಮನ ಒಲಿದು ಕಂಗಳು ತುಂಬಿ ನೋಡುತ್ತ ಭಕ್ತ ಮಾಹೇಶ್ವರ ಶರಣ ಗಣಾರಾಧ್ಯರು ಬಂದರೆ ಶರಣಾರ್ಥಿ ಸ್ವಾಮಿ ಎಂದು ಮಜ್ಜನವ ಮಾಡಿ ಸ್ನಾನ ಧೂಳನ ಧಾರಣಂಗಳಿಂದ ಅಷ್ಟವಿಧಾರ್ಚನ ಷೋಡಶೋಪಚಾರವ ಕೈಕೊಳ್ಳಿ ಎಂದು ಅಭಿವಂದಿಸಿದಲ್ಲಿ ಆ ಗಣಾರಾಧ್ಯರು ಅರ್ಪಿತಾವಧಾನಂಗಳ ಮಾಡುತ್ತ ಸದ್ಗಂಧಂಗಳಂ ಧರಿಸುತ್ತ ಮಹಾಚಿದ್ಘನ ಶಿವಶರಣ ಗಣಾರಾಧ್ಯ ಭಕ್ತ ಮಾಹೇಶ್ವರರು ಗುರುವಾಕ್ಯ ಪ್ರಮಾಣವಾಗಿ ನಡೆದು ನುಡಿದು ಆಚರಿಸಿ ಬಯಲಾದ ಮಹಿಮರ ಕಥಾಪ್ರಸಂಗಮಂ ಓದಿ ಅನುಭಾವವ ಮಾಡುತ್ತ ರೋಧನಂಗಳ ಮಾಡದೆ ಮಂಗಳ ಮಹೋತ್ಸವ ಶುಭ ಶೋಭನಂಗಳಿಂದ ತಳಿರು ತೋರಣದ ಪೂಜೆಗಳಿಂದ ಶೋಭಿಸುತ್ತಿರಲು, ಆ ಮೇಲೆ ಆಪ್ತರಾದ ಭಕ್ತಗಣಂಗಳು ಕೂಡಿ ಒಂದೊಡಲಾಗಿ ಭಕ್ತನಾದಡೆ ಜಂಗಮಪಾದದಳತೆಯಿಂದ ಸಮಾಧಿಯ ಮಾಡುವುದು. ಸ್ವಯಚರ ಪರ ಜಂಗಮ ಮೂರ್ತಿಗಳಾದಡೆ ಆ ಸಮಯವರಿತು ಸಾಕಾರ ಲೀಲೆಯುಳ್ಳಲ್ಲಿ ಆ ನಿಜೈಕ್ಯದ ಪಾದದಳತೆಯಿಂದಲೇ ಸಮಾಧಿಯ ಮಾಡುವುದು. ಆ ಸಮಾಧಿಯ ಮಾಡುವ ವಿಚಾರವೆಂತೆಂದೊಡೆ:

ಊರ ಮಧ್ಯದಲ್ಲಿ ಲಿಂಗಮುದ್ರಾಂಕಿತವಾದ ಮಠ ಮನೆಗಳಾದರೂ ಸರಿಯೆ ಆ ಭಕ್ತ ಮಾಹೇಶ್ವರರು ರಚಿಸಿದ ಪುಷ್ಪಪತ್ರಿಗಳಲ್ಲಾದರೂ ಸರಿಯೆ, ಶಿವಾಧೀನನಾದ ಅರಣ್ಯಪರ್ವತಾಶ್ರಯ ನದೀ ತೀರದಲ್ಲಾದರೂ ಸರಿಯೆ ಲೋಕದ ಉಪಾಧಿಸ್ಥಲವಾದರೆ ಕ್ರಯವಿಕ್ರಯದಿಂದ ಒದಗಿದರೂ ಸರಿಯೆ, ಭಕ್ತಿಮುಖದಿಂದ ಬಂದರೂ ಸರಿಯೆ, ಆ ಸ್ಥಲಕ್ಕೆ ಲಿಂಗಮುದ್ರಾಂಕಿತವ ಮಾಡಿ ಸಮಾಧಿಯ ರಚಿಸುವುದೇ ಆಚರಣೆ ನೋಡಾ.

ಶಿವಾಧೀನವಾದ ಅರಣ್ಯಸ್ವರೂಪ ನಿರುಪಾಧಿಸ್ಥಲವಾದಡೆ ಭಕ್ತ ಮಾಹೇಶ್ವರರು ಕೂಡಿ ಒಂದಾಗಿ ಆ ಸ್ವಲವ ವಿಚಾರಿಸಿ ಶರಣುವೊಕ್ಕು ಶೋಧಕತ್ವದಿಂದ ಪ್ರಮಾಣಿಸಿದಂಥ ಸ್ಥಲದಲ್ಲಿ ಸ್ವಯ ಚರ ರೂಪ ಜಂಗಮಮೂರ್ತಿಗಳ ಪಾದಾರ್ಚನೆಯಿಂದರ್ಚಿಸಿ ಶರಣುವೊಕ್ಕು ಸಮಾಧಿಗೃಹವ ರಚಿಸುವುದಕ್ಕೆ ನಿರೂಪವಂ ಬೆಸಗೊಂಡು ಗುದ್ದಲಿಯ ಹಾಕುವುದು.

ಆ ಮೇಲೆ ಸಮಾಧಿಯ ರಚಿಸಿ ಸಾರಣೆಯ ಮಾಡಿ ಧೂಳೋದಕ ಮೊದಲಾದ ಮಾರ್ಗಕ್ರಿಯಾ ಸಮಾರ್ಜನೆಗಳ ಮಾಡಿ ಪಂಚವರ್ಣದ ಹಿಟ್ಟಿನಿಂದ ರಂಗವಲ್ಲಿಯಂ ಶೃಂಗರಿಸಿ ಆಯಾಯ ಸ್ಥಾನದಲ್ಲಿ ಲಿಂಗ ಮುದ್ರಾಂಕಿತವ ಮಾಡುವುದೇ ಸಂಬಂಧ ನೋಡಾ.

ಇಂತೀ ಸಮಾಧಿಯ ಮಾಡುವಷ್ಟರೊಳಗೆ ಆ ಭಕ್ತ ಮಾಹೇಶ್ವರರೊಪ್ಪಿಗೆ ಯಿಂದ ವಿಭೂತಿವೀಳೆಯವಾದ ಶಿವಶರಣನು ನವವಿಧಲಿಂಗಂಗಳ ತನ್ನೊಳಗು ಮಾಡಿಕೊಂಡು ನಿರಂಜನಂಗಮವ ಬೆರೆಸುವ ವಿಚಾರವೆಂತೆಂದೊಡೆ:

ಪ್ರಥಮದಲ್ಲಿ ವರಚೌಕ ಮಧ್ಯದ ಮಹಾನಾದ ವಿಭ್ರಮಣೆಯಾದುದೇ ನಿರಂಜನಲಿಂಗ ಬಯಲು ನೋಡಾ. ದ್ವಿತೀಯದಲ್ಲಿ ಮಂತ್ರಧ್ಯಾನದ ಉಲುಹಡಗುವುದೇ ಶೂನ್ಯಲಿಂಗದ ಬಯಲು ನೋಡಾ. ತೃತೀಯದಲ್ಲಿ ಬ್ರಹ್ಮರಂಧ್ರ ಬಾರಿಸುವ ತಾಳ ನಿಲ್ಲುವುದೇ ನಿಷ್ಕಳಲಿಂಗ ಬಯಲು ನೋಡಾ. ಚತುರ್ಥದಲ್ಲಿ ನೇತ್ರದ ಪ್ರತಿಬಿಂಬವಡಗುವದೇ ಮಹಾಲಿಂಗ ಬಯಲು ನೋಡಾ. ಪಂಚಮದಲ್ಲಿ ಪಾದೋದಕ ಪ್ರಸಾದದಲ್ಲಿ ಸಂತೃಪ್ತಿಯಾದುದೇ ಪ್ರಸಾದಲಿಂಗ ಬಯಲು ನೋಡಾ. ಷಷ್ಟಮದಲ್ಲಿ ಹೃದಯಕಮಲದಲ್ಲಿ ಚರಿಸುವ ಮೂಲ ಮಾರುತನ ಉಲುಹಡಗುವುದೇ ಜಂಗಮಲಿಂಗದ ಬಯಲು ನೋಡಾ. ಸಪ್ತಮದಲ್ಲಿ ಪಂಚಾಗ್ನಿಗಳ ಉಲುಹು ಅಡಗಿ ತಣ್ಣಗಾಗಿರುವುದು ಶಿವಲಿಂಗದ ಬಯಲು ನೋಡಾ.

ಅಷ್ಟಮದಲ್ಲಿ ದಶನಾಡಿಗಳು ಒಬ್ಬುಳಿಯಾಗಿ ಸುಮ್ಮನಾಗುವುದೇ ಗುರುಲಿಂಗದ ಬಯಲು ನೋಡಾ. ಇಂತು ಶರಣನು ಸಾಕಾರವಾದ ಅಷ್ಟವಿಧ ಲಿಂಗಂಗಳ ತನ್ನೊಳಗುಮಾಡಿಕೊಂಡು ತಾನು ಇಷ್ಟ ಮಹಾಲಿಂಗದ ಹೃತ್ಕಮಲದಲ್ಲಿ ಗೋಪ್ಯದಿಂದ ಮೂರ್ತಿಗೊಂಡಿರ್ಪುದು.

ಆ ಸಮಯದಲ್ಲಿ ಸಾಕಾರವಾದ ಭಕ್ತ ಮಾಹೇಶ್ವರ ಶರಣಗಣಂಗಳೆಲ್ಲ ಈ ಶರಣನು ಲಿಂಗದಲ್ಲಿ ಬಯಲಾದನು ಎಂದು ಆ ಲಿಂಗ ಶರಣನ ಬಳಸಿನಲ್ಲಿ ಆಚ್ಛಾದಿಸಿಕೊಂಡಿರುವ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದ ಕಂಥೆಯನು ಗುರುಲಿಂಗ ಜಂಗಮ ಪಾದೋದಕ ಮೊದಲಾಗಿ ಪಂಚಾಭಿಷೇಕಂಗಳಿಂದ ಸ್ನಾನವ ಮಾಡಿಸಿ ಕ್ರಿಯಾ ಚಿದ್‌ಭಸಿತವ ಸ್ನಾನ ಧೂಳನ ಧಾರಣವ ಮಾಡಿಸಿ ಮಂಟಪವ ರಚಿಸಿ ಒಂದಾಸನದಲ್ಲಿ ಆಶ್ರಯದಿಂದ ಮೂರ್ತಮಾಡಿಸಿ ಶಿವಲಾಂಛನ ಧವಳ ಪಟ್ಟಪಟ್ಟಾವಳಿ ರುದ್ರಾಕ್ಷಿ ಮೌಕ್ತಿಕ ಪುಷ್ಪಹಾರ ಹೀರಾವಳಿ ಪರಿಮಳಂಗಳಿಂದ ಅಲಂಕರಿಸಿ ತಳಿರು ತೋರಣಗಳ ಧೂಪ ದೀಪಾರತಿ ನಾದ ಪೂಜೆ ಸ್ತೋತ್ರಗಳಿಂದ ಜಂಗಮಮೂರ್ತಿ ಮುಂದುಗೊಂಡು ಪುಷ್ಪಾಂಜಲಿಗಳಂ ಮಾಡಿ ಶರಣಗಣ ಭಕ್ತ ಮಾಹೇಶ್ವರರು ವೈಭವದಿಂದ ಆ ಸಮಾಧಿಯ ಸಮೀಪಕ್ಕೆ ತಂದು ಲಿಂಗೈಕ್ಯನಾದ ಶರಣನ ನಡೆ ನುಡಿಯಾಚರಣೆಯ ವೃತ್ತಾಂತಮಂ ಉಗ್ಘಡಿಸುವುದು.

ಮುಂದೆ ಪುಷ್ಪಾಂಜಲಿಯಂ ಮಾಡಿ ಅತಿ ಸಂತೋಷದಿಂದ ಸಮಾಧಿಗೆ ಪಾದೋದಕವ ಹಾಕಿ ಭಸ್ಮವ ತಳೆದು ಪುಷ್ಪ ಪತ್ರೆಗಳ ರಚಿಸಿ, ಲಿಂಗೈಕ್ಯನಾದ ಶರಣನ ಸಮಾಧಿಯ ಮಧ್ಯಮಂಟಪದಲ್ಲಿ ಮೂರ್ತವ ಮಾಡಿಸಿ ಚೀಲವ ತೊಡಿಸಿ ಸರ್ವಾಂಗಕ್ಕೆ ಪ್ರಣವಸಂಬಂಧವಾದ ತಗಡು ಸಂಬಂಧಿಸಿ, ಪೂರ್ವದಂತೆ ಪುಷ್ಪಾಂಜಲಿಯಂ ಮಾಡಿ ಸುಯಿಧಾನದಿಂದ ಗರ್ಭಗೃಹ ತ್ರಿಕೋಣೆಯಲ್ಲಿ ಪದ್ಮಾಸನದಿಂದ ಮೂರ್ತವ ಮಾಡಿಸಿ, ಕಂಠಸ್ಥಾನ ಪರಿಯಂತರ ವಿಭೂತಿ ಪತ್ರ ಪುಷ್ಪಗಳ ಪವಿತ್ರತೆಯಿಂ ತುಂಬಿ ಮುಖಕಮಲವ ತೆರೆದು ಜಂಗಮಮೂರ್ತಿಗಳ ಪಾದವಿಡಿಸಿ, ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಅರ್ಚಿಸಿ, ಮಹಾ ಹರ್ಷದಿಂದ ನಿರವಯ ಶಾಂಭವಪುರಕ್ಕೆ ದಯಮಾಡಯ್ಯ ಎಂದು ಪುಷ್ಪಾಂಜಲಿಯಂ ಮಾಡಿ ಮುಖಕಮಲವ ಬಾಸಣಿಸಿ ಕವಾಟಬಂಧನವ ಮಾಡಿ, ಮುಂದಣ ಸಮಾಧಿಗೆ ಮೃತ್ತಿಕೆಯ ಶೋಧಿಸಿ ತುಂಬುವದು. ಆ ಮೇಲೆ ಜಂಗಮದ ಪಾದವಿಡಿಸಿ ಪೂಜಿಸಿ ಉಘೇ ಉಘೇ ಎಂದು ಉಗ್ಘಡಿಸಿ ಸಮಾಪ್ತಿಯ ಮಾಡಿ, ವಸ್ತ್ರ ಪಾವುಡಗಳ ಗಣಸಮೂಹಕ್ಕೆ ಸಮರ್ಪಿಸಿ, ಆ ಸ್ಥಲವ ಸಾಕಾರಕ್ಕೆ ತಂದು ಗರ್ದುಗೆಯ ಮಾಡಿ, ಭಸ್ಮಘಟಿಕೆ ಹಾವುಗೆ ದಂಡಾಗ್ರವನಿಟ್ಟು ಪೂಜಿಸಲಾಗದು. ಅಥವಾ ಗುರುವಾಕ್ಯವ ಮೀರಿ ಪೂಜಿಸಿದವರಲ್ಲಿ ಗುರುತ್ವವಿಲ್ಲ. ಅವರ ಜಂಗಮವೆಂದು ತೀರ್ಥಪ್ರಸಾದವ ಕೊಳ್ಳಲಾಗದು ಕಾಣಾ, ಗುಹೇಶ್ವರಲಿಂಗಕ್ಕೆ ಸಲ್ಲದ ಗೊತ್ತು ನೋಡಾ, ಶಾಂತಲಿಂಗ ಗಣಂಗಳೇ ಎಂದು ಪ್ರಭುಸ್ವಾಮಿಗಳು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮನ ಮುಖವಚನದಿಂದ ಸಕಲ ಪ್ರಮಥರ್ಗೆ ನಿರೂಪಮಂ ಕೊಡುತಿರ್ದರು ನೋಡಾ ಸಂಗನಬಸವೇಶ್ವರಾ.

ಸಮಾಧಿಕ್ರಿಯದ ವಾಚ್ಯ: ಪಾಲ್ಕುರಿಕೆ ಸೋಮೇಶ್ವರನು ಮೊಗ್ಗೆ ಮಾಯಿದೇವಯ್ಯಗಳು, ಚಿಕ್ಕಮಾದನು, ಕದಿರರೇವಣ್ಣನು, ಸಮಾಧಿ ಸೋಮಯ್ಯಗಳು, ಅಜಗಣ್ಣನು, ನಂಬಿಯಕ್ಕನು, ರಾಘವಾಂಕನು, ನಮಃಶಿವಾಯನ ಶಿಷ್ಯ ಹಿಮಗಿರೀಶ್ವರನು ಹಳ್ಳಪ್ಪಯ್ಯಗಳು ಇವರು ಮೊದಲಾದ ಶಿವಶರಣರು ಶಿವನು ಕರೆದೊಡಲ್ಲದೆ ಸಮಾಧಿ ಕ್ರಿಯೆಯಧಿಕ ಎಂದು ಮೆರೆದರು ಧಾರುಣಿಯೊಳು, ಇನ್ನು ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರಾದಿಗಳೆಂಬ ನಾಲ್ಕು ಜಾತಿಗಳೊಳು ಗುರುಕಾರುಣ್ಯವ ಪಡೆದು ಲಿಂಗಾಂಗಸಂಬಂಧಿಗಳಾದ ಶರಣರು ಲಿಂಗಾವಸಾನಕಾಲದೊಳು ಭಕ್ತ ಮಾಹೇಶ್ವರರ ಸಮೂಹಕ್ಕೆ ಬಂದು ತೊಡೆಮಟ್ಟು ನಮಸ್ಕರಿಸಿ, ದೇವಾ ನಿಮ್ಮ ಪಾದದೊಳು ಏಕಾರ್ಥವ ಮಾಡಿಕೊಳ್ಳಿ ಎಂದು ಭಿನ್ನಿಸಲು ಆ ಭಕ್ತನ ಬಿನ್ನಹವ ಲಾಲಿಸಿ ಕೇಳಿ ಅಲ್ಲಿ ಎಲ್ಲ ಭಕ್ತಮಾಹೇಶ್ವರರು ಅವರ ಸ್ಥಿತಿಗತಿಯ ಕೇಳಿ ಒಪ್ಪಿ ಒಡಂಬಟ್ಟು ಮೂರ್ತವ ಮಾಡಿಸಿಕೊಂಡು, ಇನ್ನು ಅತ್ಯಂತ ಸಂಭ್ರಮದಿಂದ ಮಂಟಪವ ಶೃಂಗರಿಸಿ, ಅಲ್ಲಿ ಭೂಮಿಯ ಷಟ್ಸಮ್ಯಾರ್ಜನೆಯ ಮಾಡಿ ರಂಗವಲ್ಲಿಯನಿಕ್ಕಿ ಷಡಕ್ಷರ ಮಂತ್ರವ ಬರೆದು, ಸಿತ ದುವಟ್ಟವ ಪಾಸಿ ಅದರ ಮೇಲೆ ಮರಣ ಸನ್ನರ್ಧನಂ ಮಲಗಿಸಿ, ಭಕ್ತ ವನಿತೆಯರು ಕಳಶ ಕನ್ನಡಿವಿಡಿದು ಶೋಭನವ ಪಾಡುತ ಕೆಲರು ಗದ್ಯ ಪದ್ಯವನೋದುತ, ಕೆಲರು ಶಿವಶರಣಚಾರಿತ್ರಗಳನೋದುತ್ತ, ಕೆಲರು ಪಂಚಾಕ್ಷರ ಪಾಠಗಳನೋದುತ, ಕೆಲರು ಉಘೇ ಎನುತ, ಕೆಲರು ಶಿವಭಕ್ತಮಾಹೇಶ್ವರರು ಚನ್ನಾಗಿ ಮರಣ ಸನ್ನರ್ದನೊಡನೆ ನುಡಿವುದು, “ಎಚ್ಚರವಟ್ಟು ಶಿವನ ಪಾದದೊತ್ತಿಗೆ ಹೋಗುವದಕ್ಕೆ ಸಮೀಪವಾದುದು ಪಂಚಾಕ್ಷರಿಯ ನೀ ಬಾಳುತ ಉಚ್ಚರಿಸು, ಮರಣ ಕಾಲದೊಳು ಅನ್ಯ ಚಿತ್ರ ನೆನೆಯಲಾಗದು, ನುಡಿದು ಮಡಿದು ಹೋಗುವ ಮಾನವನಂತೆ ಕೆಡುವದೇನು? ಶಿವಧ್ಯಾನದಲ್ಲಿರು ನೀನು ಕೇಳು” ಎಂದು ಕಿವಿಯೊಳು ಎರಡರಲ್ಲಿ ಪಂಚಾಕ್ಷರಿಯನ್ನುಚ್ಚರಿಸಬೇಕು. ಆಪ್ತರು ಆಪ್ತರಾದವರು ಆತಂಗೆ ಮೆಲ್ಲಗೆ ಪೇಳುವರು. ಅಳದೆ ಪಂಚಾಕ್ಷರಿಯನುಚ್ಚರಿಸುವದು. ಮಾಹೇಶ್ವರರ್ಗೆ ಸತ್ಕಾರವ ಮಾಡುವದು ಆತನ ಕೈಯಿಂದ ಪಂಚಾಕ್ಷರಿಯ ಮಂತ್ರ ಘೋಷ ಸಹಿತ ಪ್ರಾಣವ ಬಿಡುವುದು.

ಪ್ರಾಣ ಬಿಟ್ಟ ಬಳಿಕ ಉಳಿದ ಮಾನವನಂತೆ ಸತ್ತವನಲ್ಲ. ಪ್ರಾಣ ಬಿಟ್ಟಬಳಿಕ ಆ ತನುವ ಜಂಗಮದ ಪಾದೋದಕದಿಂದ ತೊಳೆದು ವಿಭೂತಿ ರುದ್ರಾಕ್ಷಿ ವಸ್ತ್ರಾಭರಣವನು ಜಂಗಮದ ಪಾದಕ್ಕರ್ಪಿಸಿ ಧರಿಸಿ ಶೃಂಗರಿಸುತ ಈ ಭೂಮಿಯೊಳು ಲಿಂಗತನುವನು ಲಿಂಗವೆಂದು ಪೂಜಿಸಿ ಭಜಿಸಬೇಕು ಆಪ್ತರುಗಳು.

ಇನ್ನು ಸಮಾಧಿಯ ತೆಗೆಯುವ ಸ್ಥಾನಂಗಳು ಆವು ಯಾವೆಂದಡೆ: ವೀರಾಗಮದೊಳು ಪೇಳ್ವೆನದೆಂತೆಂದೊಡೆ: ತನ್ನ ಮನೆಯಲ್ಲಿ ಗೋವಿನ ಸಾಲಿನಲ್ಲಿ ಕೆರೆಯ ಸಮೀಪದಲ್ಲಿ ನದಿಯ ತಟಾಕದಲ್ಲಿ ಗ್ರಾಮಮಧ್ಯದಲ್ಲಿ ಅರಣ್ಯದಲ್ಲಿ ಬೆಟ್ಟದ ತಪ್ಪಲಲ್ಲಿ ತಟಾಕಪ್ರಾಂತದೊಳು ಪುಷ್ಟವಾಟೆಯೊಳು ಶಿವಾಲಯ ಸಮೀಪದಲ್ಲಿ ಇಂತಪ್ಪ ಸ್ಥಾನಂಗಳಲ್ಲಿ ಸಮಾಧಿ ಕ್ರಿಯೆಗಳ ಮಾಡುವುದು.

ಇನ್ನು ಐಕ್ಯವಾದ ಶಿವಮೂರ್ತಿಯ ಪಾದವನಲ್ಲದೆ ಮತ್ತೊಬ್ಬರ ಪಾದದಳತೆಯ ಮಾಡಲಾಗದು. ಅದೆಂತೆಂದೊಡೆ: ಒಂದು ಕಡ್ಡಿಯ ತೆಗೆದುಕೊಂಡು ಹಿಮ್ಮಡಕ್ಕೆ ಉಂಗುಷ್ಠಕ್ಕೆ ಹೆಚ್ಚು ಕಡಿಮೆಯಾಗದ ಹಾಗೆ ಅಳೆದುಕೊಂಡು ೫ ಪಾದದುದ್ದ ಒಂದು ಕಡ್ಡಿಯಂ ತೆಗೆದುಕೊಂಡು ನಾಲ್ಕು ದಿಕ್ಕಿನಲ್ಲಿ ಅಳೆದು ಚೌಕವ ಮಾಡುವುದು. ಆ ಚೌಕದ ನಾಲ್ಕು ಮೂಲಿಯನ್ನು ನೂಲಸೂತ್ರದಿಂದ ಆಗ್ನೆಯ ಮೂಲಿಯಿಂದ ವಾಯವ್ಯ ಮೂಲಿಗೆ ಹಿಡಿದು ಎಂಟು ದಿಕ್ಕು ಪ್ರಮಾಣಿಸಿಕೊಂಡು ಎಂಟು ಪಾದ ಘಾತ ಒಂದು ಪಾದ ವೇದಿಕೆಗೆ ನಿಲಿಸಿದಲ್ಲಿ ಒಂಬತ್ತು ಪಾದ ಘಾತವಂ ನಿಲಿಸಿದಲ್ಲಿ ಕಡಿಮೆಯಾಗದ ಹಾಗೆ ಬೆಲ್ಲದಚ್ಚಿನೋಪಾದಿಯಂತೆ ಒಳಗೆ ಆಗುವದು.

ಇನ್ನು ಮುಂದೆ ಸೋಪಾನದ ಲಕ್ಷಣಮಂ ಪೇಳ್ವೆನದು ಹೇಗೆಂದೊಡೆ: ಬಡಗು ದಿಕ್ಕಿನ ಚೌಕದ ನಡುವೆ ಮಧ್ಯದಿಂದ ೫ ಪಾದ ಉತ್ತರ ದಕ್ಷಿಣವಾಗಿ ಅಳೆದು ಗುರುತವ ಮಾಡಿ ಮೂಡಲು ಪಡುವಲು ಎರಡು ಪಾದವ ಬಿಟ್ಟು ನಡುವೆ ಮೂರು ಪಾದವ ಅಳೆದು ಗುರುತವ ಮಾಡಿದಲ್ಲಿ ಸೋಪಾನದಾಕಾರವಹುದು. ಆ ಸೋಪಾನದ ನಾಲ್ಕು ಮೂಲಿಯನು ನೂಲ ಸೂತ್ರದಿಂದ ಪ್ರಮಾಣಿಸಿಕೊಂಡು ಕಡೆಯ ಸೋಪಾನ ಒಂದು ಪಾದ ಉದ್ದ ಘಾತವಿಡಿದು ಒಂದು ಪಾದ ನಡುವಣ ಸೋಪಾನ, ಎರಡು ಪಾದ ಘಾತ, ಎರಡು ಪಾದ ಉದ್ದ, ಮೂರನೆಯ ಸೋಪಾನ ಮೂರು ಪಾದ ಘಾತ, ಮೂರು ಪಾದ ಉದ್ದ, ನೀಳ ಉಳಿದುದು ಮೂರು ಪಾದ ಮೂರು ಸೋಪಾನಕ್ಕೆ ಮೂರು ತತ್ವಂಗಳ ಸಂಬಂಧಿಸಿ ಅಂತು ಸೋಪಾನದ ಗಣನೆ ನವಘಾತವು.

ಇನ್ನು ಸೋಪಾನದ ಮುಂದೆ ವೇದಿಕೆಯ ರಚಿಸುವುದು. ಅದೆಂತೆಂದೊಡೆ: ಆ ಚೌಕದ ಮಧ್ಯದಲ್ಲಿ ಉತ್ತರ ದಕ್ಷಿಣ ಮೂರು ಪಾದವ ಅಳೆದು ಮೂಡಲು ಪಡುವಲು ಮೂರು ಪಾದವ ಅಳೆದು, ಆ ಆಳದಲ್ಲಿ ಚೌಕವಹುದು. ಆ ಚೌಕದ ಮೂಲಿಯೇ ಆಗ್ನೆಯ ನೈಋತ್ಯ ವಾಯುವ್ಯ ಈಶಾನ್ಯ ಮೂಲಿಗೆಹಿಡಿವುದು. ಹಿಡಿದು, ಅಳೆದ ಬಳಿಕ ದಕ್ಷಿಣ ದಿಕ್ಕಿನ ನಿಲುವಿನಲ್ಲಿ ಒಂದು ಪಾದ ಘಾತ, ಒಂದು ಪಾದವಿಡಿದು ಪಡುವಣ ದಿಕ್ಕಿನಲ್ಲಿ ನಿಲವು ಒಂದು ಪಾದ, ಘಾತ ಒಂದು ಪಾದ, ಅಡ್ಡ ನೀಳ ಉತ್ತರ ದಿಕ್ಕಿನಲ್ಲಿ ನಿಲವು ಒಂದು ಪಾದ, ಘಾತ ಒಂದು ಪಾದ, ಅಡ್ಡ ಪಾದವಿಡಿದು ಮೂಡಲ ದಿಕ್ಕಿನ ನಿಲವಿನಲ್ಲಿ ಒಂದು ಪಾದ, ಘಾತ ಒಂದು ಪಾದ, ಅಡ್ಡವಿಡಿದು ಇಂತು ನಾಲ್ಕು ದಿಕ್ಕಿನಲ್ಲಿ ಡೋಣಿಯಾಕಾರದಲ್ಲಿ ಅದಾದರೆ ನಾಲ್ಕು ಮೂಲಿ ಹುಟ್ಟಿ ಜಗಲಿ ಆಕಾರವಹುದು. ಅದು ವೇದಿಕೆಎನಿಸುವುದು.

ಇನ್ನು ವೇದಿಕೆಯ ಮುಂದೆ ತ್ರಿಕೋಣೆಯ ರಚಿಸುವುದು. ಅದೆಂತೆಂದೊಡೆ: ಮೂಡಲ ದಿಕ್ಕು ಒಂದು ಪಾದವ ಬಿಟ್ಟು, ಪಡವಲ ದಿಕ್ಕು ಒಂದು ಪಾದವ ಬಿಟ್ಟು, ನಡುವೆ ಮೂಡಲ ಪಡುವಲಾಗಿ ಮೂರು ಪಾದವ ಅಳೆದು ಗುರುತನ ಮಾಡಿ, ಮೂರು ಪಾದವ ಘಾತವ ನಿಲಿಸಿ, ಅದರ ಮೇಲೆ XXX ಆಕಾರವ ಬರೆದು, ಒಳಗೆ ಮೂರು ಪಾದವ ಉತ್ತರ ದಕ್ಷಿಣವಾಗಿ ಚೌಕವಾಗುವ ಹಾಗೆ ಅಗಿದು, ಆ ಚೌಕದ ನಾಲ್ಕು ಮೂಲಿಯ ನೂಲಸೂತ್ರದಿಂದ ಅಳೆದು ಪ್ರಮಾಣಿಸಿದಲ್ಲಿ ಅದು ತ್ರಿಕೋಣೆ ಎನಿಸುವದು.

ಇನ್ನು ವೇದಿಕೆಯ ಮೇಲೆ ಸಮಾರ್ಜನೆಯ ಮಾಡಿ ಪಂಚವಣ್ಣಿಗೆಯ ಹಿಟ್ಟಿನಲ್ಲಿ ಚೆನ್ನಾಗಿ ಎಲ್ಲರು ಅರಿವಂತ ಪಂಚಮುದ್ರೆಯಲ್ಲಿ ಲಿಖಿಸಿ, ಆ ಪಂಚಮುದ್ರೆಯ ಕೋಣೆಗಳಲ್ಲಿ ಪಂಚಾಕ್ಷರವ ಬರೆದು ಮಧ್ಯದಲ್ಲಿ ಓಂಕಾರವ ಅಂಕಿಸಿ, ಎಡಬಲದೊಳು ಪಂಚಬ್ರಹ್ಮಮಂತ್ರವ ಬರೆದು, ಇನ್ನು ಮುಂದೆ ತ್ರಿಕೋಣೆಯಲ್ಲಿ ಪಂಚಲೋಹವನು ಪಂಚರತ್ನವನು ಸುವರ್ಣಮಯವಾದ ಚೂರ್ಣಂಗಳನಿಟ್ಟು ವಿಭೂತಿಯ ಪ್ರಸ್ತವೆರಡನು ಹರವುವುದು, ತಗಡಿನೊಳು ಲಿಂಗಮುದ್ರೆಗಳ ಬರೆದು ನಾಲ್ಕು ಮೂಲಿಗಳಲ್ಲಿ ಹತ್ತಿಸುವುದು. ನಿರ್ಮಲತರದ ಏಕವರ್ಣವನಿಕ್ಕಿ ಇನ್ನು ಆ ಸಮಾಧಿಯ ಮೆಲೆ ಮೇಲುಕಟ್ಟುಗಳ ಕಟ್ಟಿ ತರತರದೊಳು ನವೀನವಾದ ಮುಡಿವಾಳ ಹೊಂಬಾಳೆ ಹಣ್ಣು ಕಾಯಿಗಳು ಹೂವಿನ ಮಾಲೆಗಳು ಮೌಕ್ತಿಕದ ಗುಚ್ಛಗಳು ಪವಳದ ಗುಡಿಗಳು ಬೆಳ್ಳಿಯ ಜಲ್ಲಿಗಳನು ಪ್ರೀತಿಯಿಂದಲ್ಲಿಗಲ್ಲಿಗೆ ಕಟ್ಟಿ, ಬಾಳೆಯ ಕಂಭಗಳ ಗೊನೆವೆರಿಸಿ ತಂದು ನಾಲ್ಕು ದಿಕ್ಕಿನಲ್ಲಿ ನಿಲಿಸಿ, ಕಬ್ಬಿನ ಕೋಲುಗಳ ನಾಲ್ಕು ಮೂಲೆಯಲ್ಲಿ ಕಟ್ಟಿ, ತೆಂಗಿನ ನೀರಗಳ ನಾಲ್ಕು ಮೂಲಿಗೆ ಎಸೆವಂತೆ ಕಟ್ಟಿ ಸಮಾಧಿಯ ಶೃಂಗರಿಸಿವದು.

ಆ ಸಮಾಧಿಯ ಶೃಂಗಾರವ ಕೇಳಿದ ಬಳಿಕ ವಿಭೂತಿ ವೀಳೆಯವ ಮಾಡಿಸಿ, ಸುವರ್ಣ ವಸ್ತ್ರಂಗಳ ಸಮರ್ಪಿಸಿ, ಭಕ್ತಮಾಹೇಶ್ವರರು ಕೂಡಿ ಆ ಮಂಟಪದೊಳಗಣ ವಿಭೂತಿ ಹಸೆಯೊಳಗಣ ಶೃಂಗಾರವಾಗಿಪ್ಪ ಶಿವಮೂರ್ತಿಯ ಬಿಜಯಂಗೈಸಿ ತಂದು ಪುಷ್ಪಕದೊಳಗಿರಿಸಿ, ಭಕ್ತ ಮಹೇಶ್ವರರು ಜಯ ಜಯ ಉಘೇ ಎಂಬ ರವದಿಂದ ವಾದ್ಯಘೋಷ ಸಂಭ್ರಮದಿಂದ ಶಿವಭಕ್ತರೆತ್ತಿ ತೋರುವುದು. ಆ ಪುಷ್ಪಕ ಸಮಾಧಿಯತ್ತಭಿಮುಖವಾಗಿ ನಡೆದು, ಹೊಡೆವ ವಾದ್ಯಂಗಳಿಂದ ಛತ್ರ ಚಾಮರಗಳಿಂದ ಉಗ್ರಡಣದ ಪುಷ್ಪಾಂಜಲಿಗಳಿಂದ ಮಡದಿಯರ ಸಂಭ್ರಮದಿಂದ ಆ ಸಮಾಧಿಯ ಸ್ಥಾನದೆಡೆಗೆ ಬಂದು ಪುಷ್ಪಕವನಿಳುಹುವದು.

ಆಗ ಗಣಂಗಳು ಅತಿ ಸಂಭ್ರಮದೊಳು ಭಕ್ತರೆಲ್ಲರು ಉಲ್ಲಾಸದಿಂದ ಇಳುಹುತ ಆ ಪುಷ್ಪಕದೊಳಗಿದ್ದವರ ತೆಗೆದುಕೊಂಡು ಸೋಪಾನಂಗಳನಿಳಿದು ವೇದಿಕೆಯ ಮೇಲೆ ಹರುಷದಿಂದ ಮೂರ್ತಗೊಳಿಸಿ ಜಂಗಮದ ಪಾದೋದಕದಿಂದ ಮುಖದೊಳೆದು ವಿಭೂತಿಯ ಧರಿಸಿ, ಶುಭ್ರ ವಸ್ತ್ರಾಭರಣ ಗಂಧಾಕ್ಷತೆ ಪುಷ್ಪ ಪರಿಮಳಂಗಳನ್ನು ಮಾಹೇಶ್ವರರು ಪಾದಕ್ಕರ್ಪಿಸಿ, ಪೂಜೆಯ ಮಾಡಿ, ಧೂಪವನೆಬ್ಬಿಸಿ ಆರತಿಯ ಬೆಳಗಿ ಆ ಶಿವಮೂರ್ತಿಯ ಆ ಜಗಲಿಯಿಂದ ಮೆಲ್ಲನೆ ತ್ರಿಕೋಣೆಯ ಸ್ಥಾನಕ್ಕೆ ತೆಗೆದು ಮೂರ್ತಿಗೊಳಿಸಿ, ಜಂಗಮಪಾದತೀರ್ಥದಿಂದ ಮುಖದೊಳೆದ ಬಳಿಕ ವಿಭೂತಿ ಬಿಲ್ವಪತ್ರೆಯ ತುಂಬಿ ಪಂಚಾಕ್ಷರಿಯ ಮಂತ್ರವನುಚ್ಚರಿಸಿ ಆ ಸಮಾಧಿಯ ಬಾಗಿಲಕ್ಕೆ ಕದವನಿಕ್ಕಿ ನೆಲಸರಿಸಮ ಮಾಡಿ ಆ ಸಮಾಧಿಯ ಶಿವಾಲಯದ ತ್ರಿಕೋಣೆ ವಾಸವೇ ಗರ್ಭಗೃಹ ಅಲ್ಲಿ ಸ್ಥಾಪಿಸಿದ ಶಿವಶರಣನ ದೇಹವೇ ಲಿಂಗವೆಂದು ಕಲ್ಪಿಸಿ ಸಂಭ್ರಮದೊಳಗಣ ಪರ್ವಮಾಡಿ ಸುಖದಲ್ಲಿಪ್ಪುದು ಭಕ್ತಮಾಹೇಶ್ವರರು.

ಪರಿವಿಡಿ (index)
Previous ಲಿಂಗಾಯತ ಧರ್ಮದ ಸಾರ ಲಿಂಗಾಯತ Next