Previous ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಲಿಂಗಾಯತರಲ್ಲಿ ಮತಾಂತರ Next

|| ಓಂ ಶ್ರೀ ಗುರು ಬಸವಲಿಂಗಾಯ ನಮಃ ||

6. ಲಿಂಗಾಯತ ಎಂಬ ಹೊಸ ಧರ್ಮ

- ಪೂಜ್ಯ ಶ್ರೀ ಮಹಾ ಜಗದ್ಗುರು ಮಾತೆ ಮಹಾದೇವಿ

ಗುರು ಬಸವಣ್ಣನವರು ಲಿಂಗಾಯತ ಎಂಬ ಹೊಸ ಧರ್ಮವನ್ನು ಕೊಟ್ಟರು

ಗುರು ಬಸವಣ್ಣನವರು ಲಿಂಗಾಯತ ಎಂಬ ಹೊಸ ಧರ್ಮವನ್ನು ಕೊಟ್ಟಾಗ ಅಸ್ತಿತ್ವದಲ್ಲಿದ್ದ ಹಲವಾರು ಮತ, ಪಂಥ, ಜಾತಿಗಳವರು, ಬುಡಕಟ್ಟುಗಳವರು ಈ ಧರ್ಮವನ್ನು ಸ್ವೀಕರಿಸಿದರು. ಸಂಗಮೇಶ್ವರದ ಅಪ್ಪಣ್ಣ ಎನ್ನುವ ಶರಣನ ಈ ವಚನ ಅದನ್ನು ಪುಷ್ಟಿಕರಿಸುತ್ತದೆ.

ಅಯ್ಯಾ, ವೈಷ್ಣವರಾದವರು ತಮ್ಮ ವಿಷ್ಣುವಂ ಬಿಟ್ಟು
ಕಳೆದು ಲಿಂಗಭಕ್ತರಾದರು ಕೆಲವರು
ಅಯ್ಯಾ, ಜೈನರಾದವರು ತಮ್ಮ ಜೈನ ಧರ್ಮವಂ ಬಿಟ್ಟು
ಲಿಂಗಭಕ್ತರಾದರು ಅನೇಕರು
ಅಯ್ಯಾ, ದ್ವಿಜರಾದವರು ತಮ್ಮ ಕರ್ಮಂಗಳ ಬಿಟ್ಟು ಕಳೆದು
ಶಿವಭಕ್ತರಾದರನೇಕರು......


ಹೀಗೆ ಬಂದ ಸಮೂಹದಲ್ಲಿ ವೀರಶೈವರೂ ಅಂಥದೊಂದು ಪಂಗಡ, ಹಿಂದು ಸಮಾಜ ಎಂಬ ಪೂರ್ವಾಶ್ರಯದ ಪ್ರಭಾವದಂತೆ, ದೀಕ್ಷಾನಂತರದಲ್ಲಿಯೂ ತಮ್ಮ ಹಳೆಯ ಜಾತಿಯನ್ನು ಮರೆಯದೆ ಲಿಂಗಾಯತರಲ್ಲಿಯೂ ಬಣಜಿಗ ಲಿಂಗಾಯತ, ಸಾದು ಲಿಂಗಾಯತ, ಗೌಡ ಲಿಂಗಾಯತ, ನೊಳುಬ, ಗಾಣಿಗ, ರೆಡ್ಡಿ, ಮಡಿವಾಳ, ಕುಂಬಾರ ಎಂದೆಲ್ಲ ಸಂಬೋಧಿಸುವಾಗ ವೀರಶೈವರು ತಾವು ವೀರಶೈವ ಲಿಂಗಾಯತರು ಎಂದುಕೊಂಡಿದ್ದಷ್ಟೇ ಅಲ್ಲ ತಾವು ಇತರ ಲಿಂಗಾಯತರಿಗಿಂತಲೂ ಶ್ರೇಷ್ಠ ಎಂಬ ಮೇಲರಿಮೆಯಿಂದ ಬೀಗಿದ್ದಕ್ಕಾಗಿ ಶರಣರಿಂದ ಟೀಕಿಸಲ್ಪಟ್ಟುದನ್ನು ಕಾಣುತ್ತೇವೆ. ವೀರಶೈವ ವಂಶದಲ್ಲಿ ಹುಟ್ಟಿದ ಮಾತ್ರಕ್ಕೆ ಶ್ರೇಷ್ಠತ್ವ ಬರುವುದಿಲ್ಲ ಎಂದು ಸಿದ್ಧರಾಮೇಶ್ವರರು ತಮ್ಮೊಂದು ವಚನದಲ್ಲಿ ಟೀಕಿಸಿದ್ದಾರೆ.

ಶ್ರೀಗುರು ಬಸವಣ್ಣನವರ ಮುತ್ತಾತಂದಿರು ಆಂಧ್ರ ಮೂಲದ ಕಮ್ಮೆ ಬ್ರಾಹ್ಮಣರು. ಅವರು ಲಿಂಗೀ ಬ್ರಾಹ್ಮಣರು, ಸಂಚರಿಸುತ್ತ ಬಂದು ಬಾಗೇವಾಡಿ ಪ್ರದೇಶದಲ್ಲಿ ನೆಲೆಸಿದರು. ಆಂಧ್ರದಲ್ಲಿ ಪ್ರಚಲಿತವಿದ್ದಈ ಸಂಪ್ರದಾಯದವರು ಚರಲಿಂಗ ಪೂಜಕರು. ಬ್ರಾಹ್ಮಣ ಚರಲಿಂಗಧಾರಿ ಗೃಹಸ್ಥರನ್ನು ಮಾಹೇಶ್ವರರೆಂದು, ಬ್ರಾಹ್ಮಣ ಸನ್ಯಾಸಿಗಳನ್ನು ಜಂಗಮರೆಂದೂ ಗೌರವಿಸಲಾಗುತ್ತಿತ್ತು. ಅವರು ಜನಿವಾರ ಮತ್ತು ಚರಲಿಂಗ (ಸ್ಥಾವರಲಿಂಗದ ಚಿಕ್ಕ ರೂಪ) ಗಳೆರಡನ್ನೂ ಧರಿಸುತ್ತಿದ್ದರು. ಗುರು ಬಸವಣ್ಣನವರು ಕ್ರಾಂತಿ ಪುರುಷರಾಗಿ ಲಿಂಗೀ ಬ್ರಾಹ್ಮಣರಿಗೆ ಸೀಮಿತವಾಗಿದ್ದ ಪೂಜೆಯ ಹಕ್ಕನ್ನು ಎಲ್ಲ ಮಾನವರಿಗೆ, ಜಾತಿ ಮತ ಮತ್ತು ಸ್ತ್ರೀ -ಪುರುಷರೆಂಬ ಭೇದವಿದಲ್ಲದೆ ನೀಡಬೇಕೆಂಬ ಕಳಕಳಿಯುಂಟಾಯಿತು. ಆದರೆ ಅದಕ್ಕೆ ವೈದಿಕ ಶಾಸ್ತ್ರಗಳ ಪ್ರಕಾರ ಸಾಧ್ಯವಿರಲಿಲ್ಲ. ಶೈವ ಶಾಸ್ತ್ರಗಳು ಸಹ ವೈದಿಕ ಶಾಸ್ತ್ರಗಳ ಪ್ರಭಾವದಲ್ಲೇ ಕಾರ್ಯ ಮಾಡುತ್ತಿದ್ದವು.
ಈ ಹಿನ್ನೆಲೆಯಲ್ಲೇ ಗುರು ಬಸವಣ್ಣನವರು ವೈದಿಕ -ಶೈವ ಎರಡೂ ಮಾರ್ಗಗಳನ್ನು ತಿರಸ್ಕರಿಸಿ, ಹೊರಬಂದು ಹೊಸಧರ್ಮ - ಲಿಂಗಾಯತವನ್ನು ಕೊಟ್ಟರು. ಅದನ್ನು ಶರಣ ಮೋಳಿಗೆ ಮಾರಯ್ಯನವರು ಸ್ಪಷ್ಟವಾಗಿ ಹೇಳುತ್ತಾರೆ.

ಶುದ್ಧ ಶೈವವ ಹೊದ್ದದೆ, ಪೂರ್ವ ಶೈವವನಾಚರಿಸದೆ
ಮಾರ್ಗ ಶೈವವ ಮನ್ನಣೆಯ ಮಾಡದೆ, ವೀರಶೈವವನಾರಾಧಿಸದೆ
ಆದಿ ಶೈವವನನುಕರಿಸದೆ, ಭೇದಿಸಬಾರದ ಲಿಂಗ ಕರದಲ್ಲಿದ್ದು
ಕಂಗಳಿನಲ್ಲಿ ನಿಂದು, ಮನದಲ್ಲಿ ಸಿಂಹಾಸನಂಗೆಯ್ದು


ಇಷ್ಟಲಿಂಗಯೋಗ ಉಳಿದೆಲ್ಲ ಮಾರ್ಗಗಳಿಗಿಂತಲೂ ಭಿನ್ನವಾಗಿ ಇರುವಂಥದು ಎಂಬುದು ಇದರಿಂದ ಸಿದ್ಧವಾಗುವುದು.

ಶ್ರೀ ಹಾನಗಲ್ ಕುಮಾರ ಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದ ನಂತರ ಮೊಟ್ಟಮೊದಲ ಅಧಿವೇಶನವು 1903ರಲ್ಲಿ ಧಾರವಾಡದಲ್ಲಿ ಜರುಗಿತು. ಆಗ ಒಂದು ನಿರ್ಣಯವನ್ನು ಕೈಗೊಳ್ಳಲಾಯಿತು. ಅಂದಿನ ಲಿಂಗಾಯತ ಸಮಾಜದ ಮುಖಂಡರ ಗುರಿ ಹಿಂದು ಸಮಾಜ ವ್ಯವಸ್ಥೆಯಲ್ಲಿ ತಾವೂ ಬ್ರಾಹ್ಮಣರ ಸಮಾನರು ಎಂದು ಸಾಧಿಸುವುದಾಗಿತ್ತು.

“ವೀರಶೈವ ಮತವು ನಿಗಮಾಗಮೋಪನಿದ್ದಾಪ್ಯ ಪ್ರತಿಪಾದಿತ ತತ್ವದಿಂದ ಅನಾದಿ ಸಂಸಿದ್ದವೆಂತಲೂ ಶ್ರೀ ಬಸವೇಶ್ವರ ದೇವರು ಈ ಮತವನ್ನು ಪ್ರಚಾರ ಪಡಿಸಿದವರೇ ಹೊರತು ಸ್ಥಾಪಕರಲ್ಲ ವೆಂಬುದು ಶಿಲಾ ಲೇಖಾದಿ ಪ್ರಮಾಣಗಳಿಂದ ಸಿದ್ಧವಾಗುತ್ತದೆಂತಲೂ ಈ ಮಹಾಸಭೆಯವರು ಖಂಡಿತ ಹೇಳುತ್ತಾರೆ.
ಈ ನಿರ್ಣಯಕ್ಕೆ ಕಾರಣಗಳೇನಿರಬಹುದು ?

1. ವಚನ ವಾಜ್ಯವೆಂಬ ಶ್ರೇಷ್ಠ ಸಾಹಿತ್ಯವು ಲಭ್ಯವಾಗಿರದೆ ಇದ್ದುದು
2. ಬೆಳಕಿಲ್ಲದ ಗಾಢಾಂಧಕಾರದಲ್ಲಿ ಕೈಗೆ ಸಿಕ್ಕಿದ್ದನ್ನು ಹಿಡಿದುಕೊಳ್ಳುವಂತೆ, ಪ್ರವಾಹದಲ್ಲಿ ಕೊಚ್ಚಿ ಹೋಗುವವ ಹುಲ್ಲುಕಡ್ಡಿಯನ್ನೂ ಆಸರೆಯಾಗಿ ಹಿಡಿದುಕೊಳ್ಳುವಂತೆ, ಶೂದ್ರತ್ವದ ಪ್ರವಾಹದಲ್ಲಿ ಕೊಚ್ಚಿ ಹೋಗಲು ಬಯಸದೆ ನಿಗಮಾಗಮಗಳ ಆಸರೆಯನ್ನು ಪಡೆಯುವ ಪ್ರಯತ್ನ.

ಕೆಲವರಿಗೆ ತಮ್ಮ ಧರ್ಮವು ಬಹಳ ಪುರಾತನ ಎಂಬ ಸಂತೋಷವೂ ಪ್ರಾಪ್ತಿಯಾಗಿರಲು ಸಾಧ್ಯ. ವಚನ ಸಾಹಿತ್ಯವು ಬೆಳಕಿಗೆ ಬರಲಾರಂಭಿಸಿತು. ಆಗ ಮರುಚಿಂತನೆ ಪ್ರಾರಂಭವಾಯಿತು. 1940ರಲ್ಲಿ ದಾವಣಗೆರೆಯಲ್ಲಿ ನಡೆದ ಮಹಾಸಭೆಯ ಸಮಾವೇಶದಲ್ಲಿ ಇನ್ನೊಂದು ಗೊತ್ತುವಳಿ ಸ್ವೀಕರಿಸಲಾಯಿತು. “ಲಿಂಗಾಯತ ಮತ್ತು ಹಿಂದೂ, ಲಿಂಗಾಯತರು ತಾವು ಹಿಂದುಗಳೆಂದು ಹೇಳಿಕೊಳ್ಳಬಾರ ದೆಂಬುದನ್ನು ಲಕ್ಷದಲ್ಲಿಟ್ಟು ಕೊಳ್ಳುವುದು ಅಗತ್ಯವಾಗಿದೆ. ಲಿಂಗಾಯತರು ಹಿಂದುಗಳಲ್ಲವೆಂದೇ ಬಹುಜನ ಮುಖಂಡರ ಅಭಿಪ್ರಾಯವಾಗಿದೆ. ಹಿಂದು ಧರ್ಮವೆಂದರೆ ಚತುರ್ವರ್ಣದ, ಚತುರಾಶ್ರಮಗಳುಳ್ಳ ಧರ್ಮವು. ಜೈನ ಶೀಖ ಧರ್ಮಗಳಂತೆ ಲಿಂಗಾಯತ ಧರ್ಮವೂ ಸ್ವತಂತ್ರ ಧರ್ಮವಾಗಿದೆಯೆಂದೇ ಸ್ಪಷ್ಟವಾಗಿದೆ.

1904ರಿಂದ 1940ರ ಮಧ್ಯದ ಕಾಲಾವಧಿಯಲ್ಲಿ ಬಹುದೊಡ್ಡ ವೈಚಾರಿಕ ಬದಲಾವಣೆಯಾಯಿತಲ್ಲ, ಈ ಬದಲಾವಣೆಗೆ ಕಾರಣಗಳನ್ನು ಹೀಗೆ ಊಹಿಸಬಹುದು.

19ನೆಯ ಶತಮಾನದಲ್ಲಿ ಬಹುದೊಡ್ಡ ಸಾಮಾಜಿಕ ಪರಿವರ್ತನೆ ದೇಶದಾದ್ಯಂತ ಆಗ ತೊಡಗಿತು. ಹಿಂದು ಸಮಾಜದ ಬಹುದೇವತೋಪಾಸನೆ, ಮೂಢ ನಂಬಿಕೆಯ ವಿರುದ ಏಕದೇವೋಪಾಸನೆಯ ಪ್ರಚಾರ ಆರ್ಯ ಸಮಾಜ, ಬ್ರಹ್ಮಸಮಾಜ, ಪ್ರಾರ್ಥನಾ ಸಮಾಜ, ಇವುಗಳಿಂದ ನಡೆಯಿತು. ಸತಿ ಸಹಗಮನದ ವಿರುದ್ಧ ಚಳುವಳಿ, ವಿಧವಾ ವಿವಾಹಕ್ಕೆ ಅವಕಾಶ, ಅಸ್ಪೃಶ್ಯತೆಯ ವಿರುದ್ಧ ಹೋರಾಟ ಇತ್ಯಾದಿ ನಡೆದಾಗ ವೈದಿಕ ಧರ್ಮದ ದೋಷ ದೌರ್ಬಲ್ಯ ಲಿಂಗಾಯತ ಮುಖಂಡರಿಗೆ ತಿಳಿದವಲ್ಲದೆ ತಮ್ಮ ಸಮಾಜದಲ್ಲಿ ಅನೇಕ ಪ್ರಗತಿಪರ ವಿಚಾರಗಳು (ಬ್ರಿಟಿಷ್ ಶಿಕ್ಷಣದ ಫಲವಾಗಿ ಅಲ್ಲದೆ) ಸಹಜವಾಗಿ ಅಂತರ್ಗತವಾಗಿರುವುದು ಅಚ್ಚರಿ ಹುಟ್ಟಿಸಿರಲೂಬಹುದು. ಸಿ.ಪಿ. ಬ್ರೌನ್ ಎನ್ನುವ ಬ್ರಿಟಿಷ್ ವಿದ್ವಾಂಸರೋರ್ವರು 175 ವರ್ಷಗಳ ಹಿಂದೆಯೇ ಲಿಂಗಾಯತ ಸಮಾಜದ ಪ್ರಗತಿಪರ ಆಚರಣೆ ಕುರಿತು ಲೇಖನವನ್ನು ಬರೆದಿದ್ದಾರೆ.

ಅಂತೂ ಲಿಂಗಾಯತ ಸಮಾಜದಲ್ಲಿ ಎಚ್ಚರವು ಮೂಡ ತೊಡಗಿತು. ಪ್ರೊ. ಎಂ.ಆರ್. ಸಾಖರೆಯವರು ಈ ಬಗ್ಗೆ ಲಿಂಗಧಾರಣ ಚಂದ್ರಿಕೆ ಎಂಬ ಒಂದು ಗ್ರಂಥಕ್ಕೆ ಪ್ರೌಢ ಮುನ್ನುಡಿಯನ್ನು ಬರೆದು ಲಿಂಗಾಯತ ಧರ್ಮದ ವಿಶೇಷತೆ ಕುರಿತು ವಿವರಿಸಿದ್ದಾರೆ. ಪುರೋಹಿತ ಶಾಹಿಯ ಕೈವಾಡ ಎಷ್ಟು ಸ್ವಾರ್ಥಪರವಾಗಿರುತ್ತದೆ ಎಂದರೆ ಲಿಂಗಾಯತ ಎಂಬ ಶ್ರೇಷ್ಠ ಹಾಗೂ ಸ್ವತಂತ್ರ ಧರ್ಮಕ್ಕೆ ವೀರಶೈವ ಎಂಬ ಚಿಕ್ಕ ಶೈವ ಪ್ರಭೇದದ ಹಣೆಪಟ್ಟಿ ಅಂಟಿಸಿ, ಸಮಾಜವನ್ನು ದಿಕ್ಕು ತಪ್ಪಿಸಿದ್ದೇ ಜ್ವಲಂತ ಉದಾಹರಣೆ.

ಕರ್ನಾಟಕದ ಅತ್ಯಂತ ಪ್ರತಿಭಾನಿತ್ವ ವ್ಯಕ್ತಿ ಶ್ರೇಷ್ಠರಲ್ಲಿ ಡಾ|| ಡಿ.ಸಿ. ಪಾವಟೆ ಅವರೊಬ್ಬರು. ಶಿಕ್ಷಣ ತಜ್ಞ, ಸಮರ್ಥ ಆಡಳಿತಗಾರರಾಗಿ ಕರ್ನಾಟಕ ವಿಶ್ವವಿದ್ಯಾನಿಲಯ ಸ್ಥಾಪನೆಯ ಸಮಯದಲ್ಲಿ ಅದರ ಉಪಕುಲಪತಿಯಾಗಿ, ವಿಶ್ವ ವಿದ್ಯಾನಿಲಯಕ್ಕೆ ಅಂತರರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟ ಧೀಮಂತ ವ್ಯಕ್ತಿ ಅವರು. ಪಂಜಾಬ ರಾಜ್ಯದ ರಾಜ್ಯಪಾಲರಾಗಿ ರಾಜಕೀಯ ಅನಿಶ್ಚಿತತೆಯನ್ನು ಸಮರ್ಥವಾಗಿ ನಿಭಾಯಿಸಿ ಪಂಜಾಬ ರಾಜ್ಯದ ಅಭಿವೃದ್ಧಿಗೆ ನಾಂದಿ ಹಾಡಿದವರು ಡಾ|| ಪಾವಟೆಯವರು ದಿ. 23-12-1973ರಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಇವರ ಒಂದು ಲೇಖನ, History of Lingayat Religion ಪ್ರಕಟವಾಯಿತು. ಅದರ ಸಾರಾಂಶ ಹೀಗಿದೆ.

“ನಾನು ಹಿಂದೆ 9 ವರ್ಷ ವೀರಶೈವ ಮಹಾಸಭಾ ಅಧ್ಯಕ್ಷನಾಗಿದ್ದೆ. ಆ ಕಾಲದಲ್ಲಿ ಲಿಂಗಾಯತ ಧರ್ಮದ ಇತಿಹಾಸ ತಿಳಿದುಕೊಳ್ಳಲು ಹಲವಾರು ಗ್ರಂಥಗಳನ್ನೋದುವ ಅವಕಾಶ ನನಗೆ ಲಭ್ಯವಾಯಿತು. ಈ ಗ್ರಂಥಗಳಲ್ಲೂ ಬಸವೇಶ್ವರರೇ ಲಿಂಗಾಯತ (ವೀರಶೈವ) ಧರ್ಮದ ಸ್ಥಾಪಕರೆಂದು ಪ್ರಸ್ತಾಪಿತವಾಗಿದೆ. ಮದ್ರಾಸ್ ವಿಶ್ವವಿದ್ಯಾನಿಲಯದ ಇತಿಹಾಸ ಹಾಗೂ ಪುರಾತತ್ವ ದಕ್ಷಿಣ ಭಾರತದ ಇತಿಹಾಸ" ಎನ್ನುವ ಗ್ರಂಥ ನನ್ನ ದೃಷ್ಟಿಯಲ್ಲಿ ವಿಶ್ವಾಸಾರ್ಹವಾದುದು. ಅವರು ಅದರಲ್ಲಿ ಹೀಗೆ ಹೇಳುತ್ತಾರೆ:

ಕಲ್ಯಾಣ ರಾಜ್ಯವಾಳುತ್ತಿದ್ದ ಕಲಚೂರಿ ಎಂಶದ ಅರಸು ಬಿಜ್ಜಳನ ಪ್ರಧಾನ ಮಂತ್ರಿ ಬಸವಣ್ಣ ಈ (ಲಿಂಗಾಯತ ) ಧರ್ಮದ ಸ್ಥಾಪಕರೆಂದು ಸಾಮಾನ್ಯವಾಗಿ ಗಣಿಸಲಾಗುತ್ತಿದೆ. ಆದರೆ ಲಿಂಗಾಯತರಲ್ಲಿ ಸಂಪ್ರದಾಯಸ್ಥರು ಇದನ್ನು ವಿರೋಧಿಸುತ್ತಾರಲ್ಲದೆ ಈ ಧರ್ಮವು ಬಹಳ ಪ್ರಾಚೀನವಾದದ್ದೆಂದು ಶಿವನ ಐದು ಮುಖಗಳಿಂದ ಉದ್ಭವಿಸಿದ ಏಕೋರಾಮ, ಪಂಡಿತಾರಾಧ್ಯ, ರೇವಣ, ಮರುಳ, ವಿಶ್ವಾರಾಧ್ಯ ಎಂಬ ಪಂಚ ಆಚಾರರು ಈ ಧರ್ಮವನ್ನು ಸ್ಥಾಪಿಸಿರುವರೆಂದೂ ಬಸವನು ಈ ಧರ್ಮವನ್ನು ಪುನರುಜೀವನ ಗೊಳಿಸಿದನೆಂದೂ ಹೇಳುತ್ತಾರೆ. ಆದರೆ ಮೇಲೆ ಹೆಸರಿಸಿದ ಐದು ಆಚಾರರೆಲ್ಲರೂ ಬಸವಣ್ಣನ ಸಮಕಾಲೀನರು. ಅವರಲ್ಲಿ ಕೆಲವರು ಹಿರಿಯರು ಇನ್ನು ಕೆಲವರು ಕಿರಿಯರು ಎನ್ನುವ ವಸ್ತುಸ್ಥಿತಿ ನಮಗೆ ಮನವರಿಕೆಯಾಗುತ್ತದೆ.

ಈ ನೂತನ ಧರ್ಮವು ದಕ್ಷಿಣದ ಹಲವಾರು ಭಾಗಗಳಲ್ಲಿ ತನ್ನ ಅಧಿಕಾರದಿಂದ ಬೇರು ಬಿಡಬೇಕೆನ್ನುವ ತೊಘಲಕನ ಪ್ರಯತ್ನ ಅಯಶಸ್ವಿಯಾಗುವಂತೆ ಮುಸಲ್ಮಾನ ಧರ್ಮಕ್ಕೆ ಯೋಗ್ಯ ಪ್ರತಿಸ್ಪರ್ಧಿಯಾಗಿ ರಾಜಕೀಯ ಚಾಲನ ಶಕ್ತಿ ನೀಡಿದ್ದು ಸಣ್ಣ ಮಾತೇನಲ್ಲ, ಪ್ರಥಮತಃ ವಿಜಯನಗರ ಸಾಮ್ರಾಜ್ಯವು ಸಂಗಮ ವಂಶದ ರಾಜರುಗಳಿಂದ 1336 ರಿಂದ 1485ರವರೆಗೆ ಆಳಲ್ಪಟ್ಟು ಇತ್ತೀಚೆಗೆ ಈ ರಾಜ ವಂಶದ ಬಗ್ಗೆ ಪುಸ್ತಕವೊಂದನ್ನು ಬರೆದ ಇತಿಹಾಸದ ಪ್ರಾಧ್ಯಾಪಕರೊಬ್ಬರು ವಿಜಯನಗರದ ರಾಜ್ಯವನ್ನಾಳಿದ ರಾಜರೆಲ್ಲರೂ ಲಿಂಗಾಯತರಾಗಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಆರಂಭದಿಂದ 1920ನೇ ಇಸವಿಯವರೆಗೂ ಪಂಚಾಚಾರ್ಯರು ಬಸವೇಶ್ವರನ ಅನುಯಾಯಿಗಳೊಂದಿಗಿರುವ ವ್ಯತ್ಯಾಸವನ್ನು ಮರೆತು ಸೌಹಾರ್ದಯುತವಾಗಿಯೇ ಬಾಳುತ್ತಿದ್ದರು. ಲಿಂಗಾಯತರಾರು ವೇದಾಧ್ಯಯನದ ಬಗೆಗೆ ತಲೆ ಕೆಡಿಸಿಕೊಂಡಿರಲಿಲ್ಲ. 1920ರಿಂದೀಚೆಗೆ ನಮ್ಮ ರಾಷ್ಟ್ರೀಯ ನೀತಿಯಾಗಿ ಅಂಗೀಕೃತವಾದ ಬಸವಾನುಯಾಯಿಗಳ ಜನ ಸಮೂಹದಿಂದ ಅದೇಕೆ ಪ್ರತ್ಯೇಕವಾಗುತ್ತಿದ್ದಾರೋ, ಅವರಿಗದ್ಯಾವ ಪಿಶಾಚಿ ಬಡಿದಿದೆಯೋ ನನಗಂತೂ ಅರ್ಥವಾಗುತ್ತಿಲ್ಲ. ಲಿಂಗಾಯತರೊಳಗೇ ತಾವು ಬ್ರಾಹ್ಮಣರಾಗಿರುವುದಾಗಿ ಅವರೇನಾದರೂ ತಿಳಿದುಕೊಂಡಿದ್ದರೆ ಅದರಂಥ ದುಃಖಕರ ಸಂಗತಿ ಮತ್ತೊಂದಿಲ್ಲ.

ಲಿಂಗಾಯತರು ಒಂದು ವೇಳೆ ತಾವು ಹಿಂದುಗಳೆಂದು ಪರಿಭಾವಿಸಿದರೆ ಇಂದಿನ ಕಾನೂನಿನ ದೃಷ್ಟಿಯಲ್ಲಿ ಅವರು ಶೂದ್ರ ವರ್ಗದಲ್ಲಿ ಪರಿಗಣಿತವಾಗುತ್ತಾರೆ. ವಾಸ್ತವಿಕವಾಗಿ, ಲಿಂಗಾಯತರು ಜೈನ, ಸಿಖ್ ಹಾಗೂ ಬೌದ್ಧ ಧರ್ಮಗಳ ಸಮಾಜದಂತೆ ತಮ್ಮನ್ನು ಕೂಡ ಹಿಂದುಗಳಿಂದ ಪ್ರತ್ಯೇಕ ಧರ್ಮಿಯರೆಂದು ಪರಿಗಣಿಸಬೇಕೆಂದು ಈ ಶತಮಾನದ ಇಪ್ಪತ್ತರ ದಶಕದ ಮೊದಲ ಭಾಗದಲ್ಲಿ ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾದ ಸಂಬಂಧವಾಗಿ ಇನ್ನೂ ಸರಕಾರದ ಯಾವುದೇ ಆಜ್ಞೆ ಹೊರಟಿಲ್ಲವಾದರೂ ಕೆಲವು ವರ್ಷಗಳಿಂದೀಚೆ ಸರ್ಕಾರವು ಲಿಂಗಾಯತರನ್ನು ಹಿಂದುವೆಂದು ಪರಿಗಣಿಸುತ್ತಲಿಲ್ಲ. ಇತ್ತೀಚೆಗೆ ಭಾರತೀಯ ಸಂಸತ್ತು ಹಿಂದೂ ವಿವಾಹ ಕಾಯ್ದೆ, ಹಿಂದೂ ಅಲ್ಪವಯಿ ಸಂರಕ್ಷಣಾಧಾರ ಕಾಯ್ದೆಗಳನ್ನು ರಚಿಸುವಾಗ ಲಿಂಗಾಯತ, ಬೌದ್ದ ಜೈನ, ಬ್ರಹ್ಮ ಸಮಾಜ ಧರ್ಮೀಯರನ್ನು, ಆ ಧರ್ಮಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಅವುಗಳಿಗಾಗಿಯೇ ಬೇರೆ ಕಾನೂನುಗಳನ್ನು ಮಾಡಿದೆ.

ಡಾ|| ಡಿ.ಸಿ. ಪಾವಟೆಯವರ ಈ ಲೇಖನ ಬಹಳ ಮಹತ್ವಪೂರ್ಣ ಎಂಬುದು ಓದುಗರಿಗೆ ಖಂಡಿತಾ ಮನವರಿಕೆಯಗುವುದು. ಪಂಚಾಚಾರ್ಯರ ಕಾಲ್ಪನಿಕ ಸೃಷ್ಟಿ 1920ರ ನಂತರದ್ದು ಎಂಬುದು ಖಚಿತವಾಗುತ್ತದೆ. ಲಿಂಗಾಯತರು ಹಿಂದುಗಳಲ್ಲ ಎಂಬ ಅಭಿಪ್ರಾಯ ಆಗಲೇ ಮೂಡಿತ್ತೆಂಬುದುದಲ್ಲದೆ, ಲಿಂಗಾಯತವು ಪ್ರತ್ಯೇಕ ಧರ್ಮ ಎಂದು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಕೊಡಲಾಗಿತ್ತೆಂಬುದು ತಿಳಿದು ಬರುತ್ತದೆ. (ಒಗ್ಗಟ್ಟಿನಿಂದ ಹೋರಾಡದೆ ಇರುವುದು, ವೀರಶೈವ ಪದವನ್ನು ಜೊತೆಗೆ ತಗುಲಿಸಿ ಕೊಂಡು ಲಿಂಗಾಯತರು ಸ್ವತಂತ್ರ ಧರ್ಮದ ಮಾನ್ಯತೆಗೆ ಪ್ರಯತ್ನಿಸುತ್ತಿರುವುದು, ತಮ್ಮ ತಮ್ಮಲ್ಲೇ ಒಳಪಂಗಡಗಳನ್ನು ಒಡೆಯುವುದು ಇತ್ಯಾದಿ ಕಾರಣಗಳಿಂದ ಸುಮಾರು 90 ವರ್ಷ ಪ್ರಯತ್ನಿಸಿದರೂ ಇನ್ನೂ ಯಶಸ್ಸು ಸಾಧಿಸದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ - ಮಾತಾಜಿ)

Hindú Law, N.R. Raghavachariar's Revised by Prof. S. Venkataraman, Publisher Madras Law Journal office, Mylapore, Madras-04, Page 32-33 Hindu Law now not a Law of all Hindus alone: A concept of Hindu Law as administered by the courts over the years show that it is not coincidental with religious beliefs. Apropos this aspect the Andhra Pradesh High Court observes "Hindu Law governed not only Hindus but also Sikhs, Jains and Buddists. It governed Lingayats a body of dissenters who deny the validity of caste distinctions."

ಈ ಉಲ್ಲೇಖವು ಬಹಳ ಮಹತ್ವಪೂರ್ಣ. ಲಿಂಗಾಯತರು ಸಿಖ್, ಜೈನ್, ಬೌದ್ದರಂತೆ ಸಾಂಪ್ರದಾಯಿಕ ಹಿಂದೂ ಧರ್ಮದಿಂದ ಬೇರೆಯೇ ಇರುವವರು; ಜಾತಿ ಪದ್ಧತಿಯನ್ನು ಮನ್ನಿಸುವವರಲ್ಲ ಎಂಬ ಮಾತು ಗಮನಾರ್ಹ. ಯಾವ ವಿಷಯದಲ್ಲಿ ಸಹ ಮತವಿದೆಯೋ ಅಲ್ಲಿ ಮಾತ್ರ ಹಿಂದು ಕಾನೂನು ಲಿಂಗಾಯತರಿಗೂ ಅನ್ವಯವಾಗುತ್ತದೆ.

Principles of IIindu Law ಎಂಬ ಕಾನೂನು ಗ್ರಂಥದಲ್ಲಿ ಕೆಲವು ಸಂಗತಿಗಳು ದಾಖಲಾಗಿವೆ. ಪುಟ. 697, Shudras ಎಂಬ ಶೀರ್ಷಿಕೆಯಡಿಯಲ್ಲಿ ಕ್ರಮ ಸಂಖ್ಯೆ 627

Lingayats:- The Lingayats who are originally Hindus are a body of dissenters and the founder of their religion was one Basava who was born about A.D.1100. They acknowledge only one God, Shiva, and reject the other two of the Hindu Triad. They revere the Vedas, but disregard the later commentaries on which the Brahmans rely. Their faith propose to be the primitive Hindu faith. Cleared of all priestly mysticisms.they deny the supremacy of Brahmans, and pretend to be free from caste distinctions, though at the present day caste is in fact observed amongst them. They declare that there is no need for sacri- fices, penances, pilgrimages and fasts. The cardinal principles of the faith is an unquestioning belief in the efficacy of the Lingam. The image which was always been regarded as symbolical of the God Shiva is worn on body. Mysore, the southern Mahratta country, and the Bellary District contain most of these Lingayats. Though the sa- cred thread is not worn by the Lingayats, a ceremony called Deeksha ought to be performed about their eighth year but as in the case of Upanayanam it is often performed much later. The sacred mantra is whispered in the ear by their Guru and this ceremony corresponds to Upanayanam among the Brahmans. Lingayats, whose only God is Shiva and who unacknowledge the authority of the Vedas, are bound by Hindu law except in so far as it is modified by custom (60).

In the Madras case cited above the Lingayats of Madras were apparently not regarded as shudras. In Bombay state they are shudras, and not vaishyas [ Gopal vs Hanmant (1879) 3 Bom. 273 Fakir gouda V Gangi (1898) 22, Bom, 277]

As to Lingayats in Mysore, see the under mentioned cas (pl) | Sanganna gouda VS Kalkangouda a (60)

The Hindu Marriage Act ಬಗ್ಗೆ ಮಾತನಾಡುತ್ತ ಹೀಗೆ ಹೇಳಲಾಗಿದೆ. P. 724 2 (1) This Act applies -
A) to any person who is a Hindu by religion in any of its forms or developments, including a Virashaiva, a Lingayat or a follower of the Brahmo, Prathana or Arya Samaj
B) to any person who is a Buddist, Jaina, or Sikh by religion ಈ ವಿವರಣೆ ಬಹಳ ಮಹತ್ವ ಪೂರ್ಣ.
1. ಲಿಂಗಾಯತರು ಹಿಂದುಗಳೇ ಆಗಿದ್ದಿದ್ದರೆ ಅವರನ್ನು ಪ್ರತ್ಯೇಕವಾಗಿ ಹೆಸರಿಸುವ ಅಗತ್ಯವಿರುತ್ತಿರಲಿಲ್ಲ. ಇವರು ಬೌದ್ಧರು, ಜೈನರು, ಸಿಬ್ಬರಂತೆ ಬೇರೆಯೇ ಆದ ಕಾರಣ ವಿಶೇಷವಾಗಿ ಗುರುತಿಸಲಾಗಿದೆ.
2. A Virashaiva, a Lingayat owed wedan Betoon. Virashaiva or Lingayat Son, Virashaiva Lingayat one wooe Hindu Marriage Billದಲ್ಲಿ ಹೀಗೆ ಹೇಳಲಾಗಿದೆ.

At present, Hindu Law applies
(i) to Hindus by birth, and Hindus by religion, that is to say, to converts and re-converts to Hinduism.
(ii) to illegitimate children where both parents are Hindus,
(iii) to illegitimate children where mother is a Hindu and children are brought up as Hindus.
(iv) Brahmos, Arya Samajists, Lingayats and to persons who may be regarded as Hindu unless they can show some valid local, tribal or family custom to the contrary and (v) to Jains, Sikhs and Buddhists.

ಹಿಂದು ವಿವಾಹ ಕಾಯ್ದೆಯಲ್ಲಿ ಪುನಃ ಪುನಃ ಲಿಂಗಾಯತ ಹೆಸರು ಜೈನ್, ಸಿಖ್, ಬೌದ್ದರ ಆಚರಣೆಯ ಜೊತೆಗೆ ಉಲ್ಲೇಖವಾಗುವುದನ್ನು ನೋಡಿದಾಗ ಲಿಂಗಾಯತವು ಹಿಂದು ಆಚಾರ ಸಂಹಿತೆಯಿಂದ ಬೇರೆಯೆ ಆಗಿದೆ ಎಂಬುದು ಸ್ಪಷ್ಟವಾಗುತ್ತದೆಯಲ್ಲವೆ ?

ತಂದೆ ಹಿಂದು, ತಾಯಿ ಕ್ರಿಶ್ಚಿಯನ್ ಇದ್ದು ಇಬ್ಬರೂ ವಿಶೇಷ ವಿವಾಹ ಕಾಯ್ದೆ 1945ರ ಪ್ರಕಾರ ವಿವಾಹವಾಗಿರುತ್ತಾರೆ. ಅವರ ಮಗನಿಗೆ ಅವಿಭಕ್ತ ಕುಟುಂಬದ ಆಸ್ತಿಯ ಹಕ್ಕು ಇದೆಯೇ? ಎಂಬ ಪ್ರಶ್ನೆ ಎದುರಾದಾಗ ಸುಪ್ರೀಮ್ ಕೋರ್ಟ್ ಹೀಗೆ ತೀರ್ಪಿತ್ತಿದೆ.

ಸಹ ಭಾಗಿತ್ವ ಕುರಿತು ಹಿಂದು ಕಾನೂನು ಹೀಗೆ ಹೇಳುತ್ತದೆ. ತಂದೆಯೇ ಕುಟುಂಬದ ಒಡೆಯ. ಮಕ್ಕಳು ಹುಟ್ಟಿನಿಂದಲೇ ಉತ್ತರಾಧಿಕಾರದ ಹಕ್ಕು ಪಡೆಯುತ್ತಾರೆ. ಆದರೆ ಈ ನಿಯಮವು,
(iv) ಜೈನ‌, ಬೌದ್ಧರು, ಸಿಖ್ಖರು, ನಂಬೂದರಿ ಬ್ರಾಹ್ಮಣರು ಮತ್ತು ಲಿಂಗಾಯತರಿಗೆ ಇದು ಅನ್ವಯವಾಗುವುದಿಲ್ಲ.
(V) ಹಾಗೆಯೇ ಹುಟ್ಟಿನಿಂದ ಹಿಂದು ಇದ್ದರೂ ಅದನ್ನು ತ್ಯಜಿಸಿದವರಿಗೆ, ತ್ಯಜಿಸಿದ ಬಳಿಕ ಪುನಃ ವಿಧ್ಯುಕ್ತವಾಗಿ ವಾಪಸ್ಸು ಬರದವರಿಗೆ ಅನ್ವಯವಾಗುವುದಿಲ್ಲ
iv) ಈ ತೀರ್ಪು ತಿರುಕನಗೌಡ V/S ಶಿವಪ್ಪ (1943) ಬಾಂಬೆ, 706, 45 Bom L.R. 992,

ಹಿಂದು ಕಾನೂನು ಪುನಃ ಪುನಃ ಲಿಂಗಾಯತ ಸಮಾಜವನ್ನು ಉಲ್ಲೇಖಿಸುವುದನ್ನು ನೋಡಿದಾಗ ಸಾಂಪ್ರದಾಯಕವಾಗಿ ಲಿಂಗಾಯತ ಧರ್ಮದ ವಿಚಾರ-ಆಚಾರ ಸಂಹಿತೆ ಬೇರೆಯೇ ಇದೆ; ಕೆಲವು ಅಂಶಗಳು ಮಾತ್ರ ವಿವಾಹ ಕಾಯ್ದೆ, ಆಸ್ತಿ ಹಕ್ಕು ಮುಂತಾದ ವಿಷಯಗಳಲ್ಲಿ ಸಮಾನ ಅಂಶಗಳಿಂದ ಕೂಡಿದೆ ಎಂಬುದು ಸಿದ್ಧವಾಗುತ್ತದೆ.

ಹಿಂದು ಕಾನೂನು ಕೆಲವು ವಿಷಯಗಳಲ್ಲಿ ಅನ್ವಯವಾಗುತ್ತದೆ ಎಂದ ಮಾತ್ರಕ್ಕೆ ಲಿಂಗಾಯತವು ಡಾ|| ಚಿದಾನಂದ ಮೂರ್ತಿ ಪ್ರತಿಪಾದಿಸುವಂತೆ ಹಿಂದು ಧರ್ಮ ಅಂಗವಾಗದು. ಉದಾ: ಆಗಮಗಳಲ್ಲಿರುವ 36 ತತ್ವಗಳನ್ನು ವಚನ ವಾಙ್ಮಯ ಸೃಷ್ಟಿಯ ಕ್ರಮ ಹೇಳುವಲ್ಲಿ ಒಪ್ಪುತ್ತೆ ಎಂದ ಮಾತ್ರ ಇಡೀ ಆಗಮಗಳ ವಿಚಾರಧಾರೆಯನ್ನು ಒಪ್ಪುವುದು ಎಂದಲ್ಲ, ಇಸ್ಲಾಂ ಹೇಳಿದಂತೆ ದೇವರು ಒಬ್ಬ ಅವನು ಸರ್ವಶಕ್ತ ಎಂದ ಮಾತ್ರಕ್ಕೆ ಇಸ್ಲಾಮಿನ ಎಲ್ಲ ತತ್ವ, ಆಚರಣೆಗಳನ್ನು ಲಿಂಗಾಯತ ಧರ್ಮ ಒಪ್ಪುತ್ತೆ ಎಂದಲ್ಲ ಯಾರಾದರೊಬ್ಬ ವ್ಯಕ್ತಿಯ ಮೂಗು ಇನ್ನೊಬ್ಬನ ಮೂಗಿನೊಡನೆ ಹೋಲಿಕೆ ಹೊಂದಿದ್ದರೆ ಇಬ್ಬರೂ ಒಬ್ಬನೇ ವ್ಯಕ್ತಿ ಆಗುವುದಿಲ್ಲವಷ್ಟೇ. ಹಾಗೆ ಹಿಂದೂ -ಲಿಂಗಾಯತ ಬೇರೆ ಬೇರೆ, ಲಿಂಗಾಯತ ವೀರಶೈವ ಸಹ ಬೇರೆ ಬೇರೆಯೇ ಸರಿ, ಈ ಗ್ರಂಥ ರಚನೆಯಾಗಿರುವುದು ಇನ್ನೂ ವಚನ ಸಾಹಿತ್ಯ ಲಭ್ಯವಿಲ್ಲದಾಗ. ದೊರೆತಿದ್ದ ಸಾಹಿತ್ಯವೆಂದರೆ ಭೀಮಕವಿಯ ಬಸವ ಪುರಾಣ, ವಿರುಪಾಕ್ಷ ಪಂಡಿತನ ಚನ್ನಬಸವ ಪುರಾಣ ಮಾತ್ರ. ಒಂದು ಮಹತ್ವ ಪೂರ್ಣ ಮಾತನ್ನು ಲೇಖಕರು ಹೇಳುತ್ತಾರೆ,

Much of the good effected by the founder has thus been counteracted, and the Lingayat is gradually becoming more and more like his orthodox Hindu brother. In proof of this tendency it may be noted that, at the time of the census of 1891, there was numerous representations from Lingayats claiming the right to be described as Virashaiva Brahmans. Further, on the occasion of the census of 1901, a complete scheme was supplied to the census authorities professing to show all Lingayat sub divisions in four groups. Viz., Brahman, Kshatriya, Vaishya, and Sudra.It is noted, in the Mysore census Report 1891, that the Lingayats interviewed the Maharaja, and begged that their registration as Virashaiva Brahmans might be directed. The crisis was moved by his highness the Maharaj's Govt. Passing orders the effect that the Lingayats should not be classed
as shudras but should be separately designated by their own name, and that which they were at liberty to call themselves Virshaiva Brahmans.” (p 252-253).

The Lingayat faith appears to have spread very rapidly after Basava's death; within 60 years of founder's death it was embraced from Ulavi near Goa to Sholapur, and from Balehalli to Sivaganga."

ಕೆಲವು ಲಿಂಗಾಯತ ಪ್ರಮುಖರು 1891ನೇ ಇಸವಿಯ ಜನಗಣತಿಯಲ್ಲಿ ಲಿಂಗಾಯತರನ್ನು ವೀರಶೈವ ಬ್ರಾಹ್ಮಣರೆಂದು ವರ್ಗಿಕರಿಸಬೇಕೆಂದು, 1901ರ ಜನಗಣತಿಯಲ್ಲಿ ಲಿಂಗಾಯತರನ್ನು ಚತುರ್ವರ್ಣಗಳಲ್ಲಿ ವರ್ಗಿಕರಿಸಲು ಬೇಡಿಕೆ ಸಲ್ಲಿಸಿದ್ದು ಎಂತಹ ದೊಡ್ಡ ಅಪರಾಧ ಹೀಗಾಗಿ ಬೌದ್ಧರು, ಜೈನರು ಮತ್ತು ಸಿಬ್ಬರು ಸುಲಭವಾಗಿ ಪಡೆದುಕೊಂಡ ಸ್ವತಂತ್ರ ಧರ್ಮದ ಮಾನ್ಯತೆಯನ್ನು (ಅವರು ಪಡೆದುಕೊಂಡ ಧಾರ್ಮಿಕ ಅಲ್ಪ ಸಂಖ್ಯಾತರ ಸವಲತ್ತನ್ನು) ಸಮಾಜಕ್ಕೆ ಇಲ್ಲದಂತೆ ಮಾಡಿ ಅನ್ಯಾಯ ಮಾಡಿದ್ದಾರೆ. ವೀರಶೈವ ವಾದಿಗಳು ತಾವು ಬ್ರಾಹ್ಮಣರಾಗುವ ಸ್ವಾರ್ಥಕ್ಕೆ ಬಲಿಯಾಗಿ ಇಡೀ ಸಮಾಜಕ್ಕೆ ದ್ರೋಹವೆಸಗಿದ್ದಾರೆ ಎಂದರೆ ತಪ್ಪಾಗದು. ಏಕೆಂದರೆ ಆಗಮೋಕ್ತ ವೀರಶೈವ ಮತಕ್ಕೂ ಮತ್ತು ವಚನೋಕ್ತ ಲಿಂಗಾಯತ ಧರ್ಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಈ ಕೃತಕ ಬ್ರಾಹ್ಮಣತ್ವ ಹೊಂದಲು ಲಿಂಗಾಯತರು (ವೀರಶೈವವಾದಿಗಳು) ಮಾಡಿದ ಸಾಹಸ ಅಷ್ಟಿಷ್ಟಲ್ಲ.

1. ತಮ್ಮ ಧರ್ಮ ಬಸವಣ್ಣನವರಿಂದ ಬಂದುದಲ್ಲ ಮೊದಲೇ ಇತ್ತು, ನಿಗಮಾಗಮಗಳಿಂದ ಬಂದುದು ಎಂದು ವಾದಿಸಿದರು.

2. ಇದು ವೇದ ವಿರೋಧಿ, ಬ್ರಾಹ್ಮಣ ವಿರೋಧಿಯಲ್ಲ. ಕೇವಲ ಪ್ರಾಣಿ ವಧೆ ಮಾಡುವ ಯಜ್ಞ -ಯಾಗಾದಿ, ಕರ್ಮಕಾಂಡವನ್ನು ವಿರೋಧಿಸುವುದೇ ವಿನಾ ಜ್ಞಾನಕಾಂಡವನ್ನಲ್ಲ, ಮಧ್ವರು, ರಾಮಾನುಜರು ಮಾಡಿದಂತೆ ಕೆಲವನ್ನು ಒಪ್ಪಿಕೊಂಡಿದೆ, ಕೆಲವನ್ನು ನಿರಾಕರಿಸುವುದು ಎಂದು ಪ್ರತಿಪಾದಿಸಿದರು.

3. ಲಿಂಗಾಯತ ಧರ್ಮ -ಸಮಾಜಗಳಲ್ಲೂ ಜಾತಿಗಳು ಉಂಟು. ಇದನ್ನೆಲ್ಲ ಸಾಧಿಸಲು ಅನೇಕ ಸಂಸ್ಕೃತ ಶ್ಲೋಕಗಳನ್ನು ಅವರು ಉಲ್ಲೇಖಿಸ ತೊಡಗಿದರು. (ಪುಟ -260) ಈ ಬಗ್ಗೆ ಥರ್ಸ್ಟನ್

It is unnecessary to weary the reader with the texts and their translations. The object in referring to these latter day accounts of the origin of the Lingayats is to show the modern tendency of tradition to bring Lingayatism into line with Brahmanistic Hinduism. The works referred to by the learned authors appear to be Sanskrit writings of not more than 500 years ago, and cannot be taken as proof that the Lingayat religion is of greater antiquity than the 12th Century, or that it has always been observant of caste distinctions. The persistence with which these points are advanced at the present day is, however, worthy of careful notice. If Lingayatism was an island thrown up within the boundless sea of Hinduism," it would appear that the waters of the ocean are doing their utmost to undermine its solid foundations." (p- 260)

ಗ್ರಂಥ ಕರ್ತರು ಉಲ್ಲೇಖಿಸಿರುವ ಕೆಲವು ಮಾತುಗಳು ಈಗ ಜಾತಿ ಭೇದ ಮಾಡುವ ಲಿಂಗಾಯತರ ಕಣ್ಣೆರೆಸುತ್ತವೆ. ಪುಟ - 267 “ಲಿಂಗಾಯತ ಧರ್ಮವು ತೀರಾ ಇತ್ತೀಚೆಗೆ ಸಹ ಇತರ ಜಾತಿಯಿಂದ ಜನರನ್ನು ಸ್ವೀಕರಿಸಿದೆ. 19ನೆಯ ಶತಮಾನದ ಕೊನೆಯಲ್ಲಿ ಧಾರವಾಡ ಜಿಲ್ಲೆಯ ತುಮ್ಮಿನಕಟ್ಟೆ ಎಂಬಲ್ಲಿ ಬಹಳಷ್ಟು ನೇಕಾರ ಜಾತಿಯವರು ಲಿಂಗಾಯತ ಧರ್ಮವನ್ನು ಸ್ವೀಕರಿಸಿದರು. ಉಜ್ಜಿನಿಯಿಂದ ಬಂದ ಓರ್ವ ಜಂಗಮರು ದೀಕ್ಷೆ ನೀಡಿದರು. ಅವರನ್ನು ಕುರುಹಿನವರು ಎಂದು ಕರೆಯಲಾಗುತ್ತಿದೆ. ಅವರು ತಮ್ಮ ಪೂರ್ವದ ಜಾತಿಯಿಂದ ಎಲ್ಲ ಸಾಮಾಜಿಕ ಸಂಬಂಧಗಳನ್ನು ಕಡಿದುಕೊಂಡಿದ್ದಾರೆ.

ಬಸವಣ್ಣನವರ ಬೋಧೆಯ ಪ್ರಕಾರ ಅತ್ಯಂತ ಕೆಳಗಿನ ಜಾತಿಯವರು ಸಹ ಈ ಸಮುದಾಯ -ವನ್ನು ಸೇರಬಹುದು. ಮತ್ತು ಇತರ ಲಿಂಗಾಯತರೊಡನೆ ಸಮಾನ ಸ್ಥಾನ ಪಡೆಯಬಹುದು. ಅಬ್ಬೆ ಡ್ಯುಬಾಯಿಸ್ ಬರೆಯುತ್ತಾರೆ. “ಅತ್ಯಂತ ಕೆಳ ಶ್ರೇಣಿಯ ಅಸ್ಪೃಶ್ಯನು ಸಹ ಲಿಂಗಾಯತ ಧರ್ಮವನ್ನು ಸ್ವೀಕರಿಸಿದ್ದರೆ ಅವನು ಯಾವ ಬ್ರಾಹ್ಮಣನಿಗೂ ಕಡಿಮೆ ಇಲ್ಲ ಎಂದು ಭಾವಿಸಲಾಗುವುದು. ಎಲ್ಲಿ ಇಷ್ಟಲಿಂಗ ಇರುತ್ತದೋ ಆ ಶರೀರವು ಲಿಂಗದೇವಾಲಯವಾಗುವ ಕಾರಣ ಅಲ್ಲಿ ಜಾತಿ ಭೇದ, ಅಂತಸ್ತು ಭೇದ, ವರ್ಗಭೇದ ಮಾಡುವುದಿಲ್ಲ, ಲಿಂಗಭಕ್ತನಾದ ಅಸ್ಪೃಶ್ಯನ ಗುಡಿಸಲು ಇಷ್ಟಲಿಂಗವಿಲ್ಲದ ಅರಸನ ಅರಮನೆಗಿಂತಲೂ ಶ್ರೇಷ್ಠ ಎಂದು ಭಾವಿಸಲಾಗುವುದು. ಇದು ಧರ್ಮಸ್ಥಾಪಕ ಬಸವಣ್ಣನವರ ಆಶಯ.” -ಥರ್ಸ್ಟನ್ ಹೇಳುತ್ತಾರೆ :

“ಆದರೆ ಉಜ್ಜಿನಿ ಮಠದ ಜಂಗಮರು ಹೇಳುತ್ತಾರೆ ಮಾದರ ಮುಂತಾದ ಅಸ್ಪೃಶ್ಯರು ಲಿಂಗವಂತರಾಗಲು ಸಾಧ್ಯವಿಲ್ಲಎಂದು.' (ಪುಟ -267) (ಉಜ್ಜಿನಿ ಮಠ ಪೀಠವನ್ನು ಸ್ಥಾಪಿಸಿದ ಶರಣ ಮರುಳಸಿದ್ದರೇ ಮಾದರು ಎಂಬ ಸತ್ಯವನ್ನು ಈ ಮಠದವರು ಮರೆತಿರುವುದು ಸುಸ್ಪಷ್ಟ )

ಹೀಗೆ ವೀರಶೈವವಾದಿಗಳಿಂದಲೇ ಲಿಂಗಾಯತ ಧರ್ಮ ತನ್ನ ಚಲನಶೀಲತೆಯನ್ನು ಕಳೆದುಕೊಂಡಿರುವುದು ಇದರಿಂದ ಮನದಟ್ಟಾಗುತ್ತದೆ. ಗುರು ಬಸವಣ್ಣನವರು ಹಾರುವನಿಂದ ಹೊಲೆಯನವರೆಗೆ, ಬ್ರಾಹ್ಮಣನಿಂದ ಭಂಗಿಯವರೆಗೆ ಎಲ್ಲರಿಗೂ ಧರ್ಮ ಸಂಸ್ಕಾರ ನೀಡಿದರು ಎಂಬುದು ಸೂರ್ಯಪ್ರಕಾಶದಷ್ಟು ಸ್ಪಷ್ಟವಿರುವ ವಚನ ಸಾಹಿತ್ಯದಿಂದ ತಿಳಿಯುವುದಲ್ಲವೆ ?

ಈ ಹಿನ್ನೆಲೆಯಲ್ಲಿ ಆದಷ್ಟು ಬೇಗನೆ ಲಿಂಗಾಯತವು ವೀರಶೈವದ ಸಂಪರ್ಕವನ್ನು ಕಡಿದುಕೊಳ್ಳದಿದ್ದರೆ ತನ್ನ ಅವನತಿಯನ್ನು ತಾನೇ ತಂದುಕೊಳ್ಳುವುದು. ಸಿದ್ಧಾಂತ ಶಿಖಾಮಣಿ ಗ್ರಂಥದ ಮೂಲ ಶ್ಲೋಕ ಮತ್ತು ವ್ಯಾಖ್ಯಾನವಿರುವ ಪುಟ 108, ಪರಿಚ್ಛೇದ 9ರ ಶ್ಲೋಕಗಳ ಪಟ್ಟಿಯನ್ನು ಕೊಡಲಾಗಿದೆ. ಶ್ಲೋಕ 28, 29, 30 ನೋಡಿರಿ, ವೀರಶೈವ ಬ್ರಾಹ್ಮಣ, ವೀರಶೈವ ಕ್ಷತ್ರಿಯ ಮತ್ತು ವೀರಶೈವ ವೈಶ್ಯರು ತಮ್ಮ ತಮ್ಮ ಜಾತಿಯ ಜನರ ಮನೆಗಳಲ್ಲಿಯೇ ಭೋಜನವನ್ನು ಮಾಡಬೇಕಲ್ಲದೆ ಇತರರ ಮನೆಗಳಲ್ಲಿ ಭೋಜನ ಮಾಡಬಾರದು. ವೀರಶೈವ ಕ್ಷತ್ರಿಯ, ವೀರಶೈವ ವೈಶ್ಯರು ವೀರಶೈವ ಬ್ರಾಹ್ಮಣರಲ್ಲಿ ಭೋಜನ ಮಾಡಬೇಕಲ್ಲದೆ, ಬ್ರಾಹ್ಮಣರು ಕ್ಷತ್ರಿಯ ವೈಶ್ಯರಲ್ಲಿ ಭೋಜನ ಮಾಡಬಾರದು.

ಲಿಂಗಾಯತರು ತೀರಾ ಮಂದಮತಿಗಳಾಗದೆ ಈ ಶ್ಲೋಕ - ವ್ಯಾಖ್ಯಾನದ ಬಗ್ಗೆ ಆಲೋಚಿಸಬೇಕು. ಈ ಪುಸ್ತಕ ದಿ|| ಕಾಶೀನಾಥ ಶಾಸ್ತ್ರಿ ಸಂಪಾದಿತ ಸಿದ್ಧಾಂತ ಶಿಖಾಮಣಿ, ಮೈಸೂರಿನ ಪಂಚಾಚಾರ್ಯ ಎಲೆಕ್ಟಿಕಲ್ ಪ್ರೆಸ್‌ನಲ್ಲಿ ಮುದ್ರಿತವಾಗಿರುವುದು. ಒಂದೋ, ಈ ವೀರಶೈವ ಆಂಧ್ರ, ತಮಿಳು ನಾಡು, ಕೇರಳ ವೀರಶೈವಗಳಿಗೆ ಸಂಬಂಧ ಪಟ್ಟುದು ಎಂದು ಭಾವಿಸಬೇಕು. ಇಲ್ಲವೇ ವೀರಶೈವ ಪದವನ್ನು ಹೇರಿ ಲಿಂಗಾಯತ ಧರ್ಮ -ಸಮಾಜಗಳನ್ನು ಒಡೆಯುವ ಪಂಚಪೀಠಾಧೀಶರ ಸಂಚು ಎಂದು ಭಾವಿಸಬೇಕು. ಲಿಂಗಾಯತ ಸಮಾಜದಲ್ಲಿ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯ, ಶೂದ್ರ ಎಂದು ವಿಂಗಡಿಸಲು ಸಾಧ್ಯವೆ? ಒಂದು ವೇಳೆ ಪಂಚಪೀಠಾಧೀಶರು ವೀರಶೈವ ಬ್ರಾಹ್ಮಣರಾದರೆ ಅವರು ಇನ್ನಿತರ ಲಿಂಗಾಯತರುಗಳಾದ ವೀರಶೈವ ಕ್ಷತ್ರಿಯ (?) ಮತ್ತು ವೀರಶೈವ ವೈಶ್ಯ (?)ರ ಮನೆಯಲ್ಲಿ ಬಿನ್ನಹ ತೀರಿಸಿ ಕುಲಗೆಟ್ಟಿರುವರಲ್ಲವೆ ? ಒಂದು ವೇಳೆ ಹಿಂದು ಸಮಾಜದ ವರ್ಣಾಶ್ರಮ ವ್ಯವಸ್ಥೆಯ ಕೆಸರಿನಲ್ಲಿ ಸಿಕ್ಕಿರುವ ಜನಾಂಗಗಳು ಅದರಿಂದ ತಪ್ಪಿಸಿಕೊಳ್ಳಲು ಲಿಂಗಾಯತರಾದ ಬಳಿಕವೂ ಹಳೆಯ ಕೆಸರು ಇಲ್ಲೂ ಮುಂದುವರಿದರೆ ಪ್ರಯೋಜನವೇನು? ಇಂಥದೊಂದು ಪುಸ್ತಕ ಹೊರ ಬಿದ್ದು ಲಿಂಗಾಯತರಲ್ಲೇ ವರ್ಗಿಕರಣವನ್ನು ಬಾಳೇಹಳ್ಳಿ ಮಠದವರು ಮಾಡತೊಡಗಿದಾಗ ತಾವು ಪ್ರತಿಭಟಿಸಿದ್ದಾಗಿ ಭದ್ರಾವತಿಯ ಲಿಂ ಶರಣ. ಮುರಿಗೆಪ್ಪನವರು ಹೇಳಿದ್ದು ನಮಗೆ ಇನ್ನೂ ನೆನಪಿದೆ.

ಇಂಥ ಕುತ್ಸಿತ ವಿಚಾರದ ಪುಸ್ತಕ ಹೊರಬಂದಾಗ ಭದ್ರಾವತಿಯಿಂದ ಒಂದು ಬಸ್ಸು ಜನ ಬಾಳೆ ಹೊನ್ನೂರಿಗೆ ಹೋದರಂತೆ. “ಬುದ್ದಿ, ಬ್ರಾಹ್ಮಣನು ವೈಶ್ಯ, ಶೂದ್ರರ ಮನೆಯಲ್ಲಿ ಊಟ ಮಾಡುವನೇ?? ಇಲ್ಲ” ಮಾಡಿದರೆ ಏನಾಗುತ್ತದೆ? ಅವನು ಕುಲಗೆಡುವನು. ಅವನನ್ನು ಶುದ್ದೀಕರಿಸಬೇಕಾಗುತ್ತದೆ. ಸ್ವಾಮಿಗಳು ನುಡಿದರು.

“ನೀವು ಲಿಂಗಾಯತರನ್ನು ಚತುರ್ವರ್ಣಗಳಲ್ಲಿ ವಿಂಗಡಿಸಿ ನಮ್ಮನ್ನು ಶೂದ್ರರನ್ನಾಗಿ ಮಾಡಿದ್ದೀರಿ. ಎಷ್ಟೋ ಈ ಬಾರಿ ನಮ್ಮ ಮನೆಗಳಲ್ಲಿ ಬಿನ್ನಹ ತೀರಿಸಿದ್ದೀರಿ. ಹೀಗಾಗಿ ಕುಲಗೆಟ್ಟಿದ್ದೀರಿ ! ಈಗ ನಿಮ್ಮನ್ನು ಶುದ್ದೀಕರಿಸುವುದು ಅನಿವಾರ್ಯವಾಗಿದೆ.” ಎಂದಾಗ ಸ್ವಾಮಿಗಳು ಬೆಪ್ಪಾದರಂತೆ ! ತಾವೇ ಕೊಟ್ಟ ಹಗ್ಗ ತಮ್ಮ ಕೈಕಟ್ಟಬಹುದೆಂಬ ಕಲ್ಪನೆ ಮೊದಲು ಇದ್ದಿರಲಿಕ್ಕಿಲ್ಲವಷ್ಟೇ !!

ಪೂಜ್ಯನಾಚ್ಛಿವಭಕಸ್ಯ ಪುಣ್ಯಾ ಗತಿರವಾಪ್ಯತೇ ।
ಅವಮಾನಾನ್ಮಹಾಘೋರೋ ನರಕೋ ನಾತ್ರ ಸಂಶಯಃ || 26 ||

ಶಿವಭಕ್ತೋ ಮಹಾತೇಜಾಃ ಶಿವಭಕ್ತಿಪರಾಙ್ಮುಖಾನ್ |
ನ ಸ್ಪೃಶೇಶೀವ ವೀಕ್ಷೇತ ನ ತೈಃ ಸಹ ವಸೇತ್ ಕ್ವಚಿತ್ || 27 ||

ಯದಾ ದೀಕ್ಷಾ ಪ್ರವೇಶಃ ಸ್ಯಾಲ್ಲಿಂಗಧಾರಣ ಪೂರ್ವಕಂ।
ತದಾಪ್ರಭೃತಿ ಭಕ್ತೋ ಸೌ ಪೂಜಯೇತ್ ಸ್ವಾಗತಸ್ಥಿತಾನ್ ॥28||

ಸ್ವಮಾರ್ಗಾಚಾರನಿರತಾಃ ಸಜಾತೀಯಾ ದ್ವಿಜಾಸ್ತು ಯೇ।
ತೇಷಾಂ ಗೃಹೇಷು ಭುಂಜೀತ ನೇತರೇಷಾಂ ಕದಾಚನ || 29 ||

ಸಮಾರ್ಗಾಚಾರವಿಮುಖೈರ್ಭವಿಭಿಃ ಪ್ರಾಕೃತಾತ್ಮಭಿ :
ಪ್ರೇಷಿತಂ ಸಕಲಂ ದ್ರವ್ಯ ಮಾತ್ಮಲೀನಮಪಿ ತ್ಯಜೇತ್ || 30 ||

ಮಹಾತೇಜಸ್ವಿಯಾದ ಶಿವಭಕ್ತನು ಶಿವಭಕ್ತಿ ವಿಮುಖರಾದ ಜನರನ್ನು ಮುಟ್ಟಬಾರದು; ಅವರೊಡನೆ ಸ್ವಲ್ಪವಾದರೂ ವಾಸಮಾಡಬಾರದು. || 27 || ಲಿಂಗಧಾರಣ ಪೂರ್ವಕವಾದ ದೀಕ್ಷೆಯು ಎಂದು ಆಗುವುದೋ, ಅಂದಿನಿಂದ ಪ್ರತಿದಿವಸವೂ ಭಕ್ತನು ವೀರಶೈವಾಗಮ ಪ್ರಕಾರವಾಗಿ ಆಚರಿಸುವ ಪೂಜ್ಯ ಗುರುಸ್ಥಲ ಮಾಹೇಶ್ವರರನ್ನು ಪೂಜಿಸಬೇಕು. || 28 || ತಮ್ಮತಮ್ಮ ಜಾತಿ ಧರ್ಮಾನುಸಾರವಾಗಿ ಆಚಾರದಲ್ಲಿ ನಿಷ್ಠರಾದ ವೀರಶೈವ ದ್ವಿಜರು ಅಂದರೆ ವೀರಶೈವ ಬ್ರಾಹ್ಮಣರು - ವೀರಶೈವ ಕ್ಷತ್ರಿಯ ವೀರಶೈವ ವೈಶ್ಯರು ತಮ್ಮ ತಮ್ಮ ಜಾತಿಯ ಜನರ ಮನೆಗಳಲ್ಲಿಯೇ ಭೋಜನವನ್ನು ಮಾಡಬೇಕಲ್ಲದೆ ಬ್ರಾಹ್ಮಣರು ಕ್ಷತ್ರಿಯ ವೈಶ್ಯರಲ್ಲಿ ಭೋಜನ ಮಾಡಬಾರದು. ಶಿವೋಕಾಂ ಜಾತಿಮರ್ಯಾದಾಂ ಯೋಽತೀತ್ಯ ಭುವಿವರ್ತತೇ | ಸ ಚಂಡಾಲ ಇತಿ ಜೇಯಃ ಸರ್ಮಕರ್ಮ ಬಹಿಷ್ಕೃತತಃ || ಶಿವನಿಂದ ಹೇಳಲ್ಪಟ್ಟ ಜಾತಿಮರ್ಯಾದೆಯನ್ನು ಯಾವನು ಮಾರಿ ನಡೆಯುವನೋ ಅವನು ಚಂಡಾಲನೂ ಸರ್ವಕರ್ಮ ಬಹಿಷ್ಕೃತನೂ ಆಗುವನು; ಎಂದು ಶಿವಾಗಮಗಳು ಸಾರುತ್ತಿರುವುದರಿಂದ ವೀರಶೈವ ಮತೀಯರು ತಮ್ಮ ತಮ್ಮ ಜಾತಿ ಧರ್ಮದಂತೆ ವರ್ತಿಸಬೇಕಲ್ಲದೆ ಅದಕ್ಕೆ ವಿರುದ್ಧವಾಗಿ ವರ್ತಿಸಿ ನರಕಭಾಗಿಗಳಾಗ ಬಾರದು II29 || ವೀರಶೈವಾಚಾರ ವಿಮುಖರಾದ ಪ್ರಾಕೃತಭವಿಗಳು ಕಳುಹಿಸಿದ ಸಕಲ ಪದಾರ್ಥಗಳು ತನ್ನ ಸ್ವಾಧಿ ನದಲ್ಲಿದ್ದರೂ ಅವುಗಳನ್ನು ಮುಟ್ಟಬಾರದು. || 30||

ಜನಗಣತಿಯ ವಿವರಗಳು

1901 ರ ಜನಗಣತಿ Census of India, Vol.IX-B Bombay Part III ಇದರಲ್ಲಿ ಪ್ರಾದೇಶಿಕ ವರ್ಗಿಕರಣ ಮಾಹಿತಿ ಇದೆ. R. E. Enthoven ಇದರ ಸಂಪಾದಕರು. ಮುಂಬೈ ಪ್ರಾಂತ್ಯದಲ್ಲಿಲಿಂಗಾಯತ ಎನ್ನುವುದರ ಅಡಿಯಲ್ಲಿ ಬರುವ ಉಪಜಾತಿಗಳು ಪುಟ 222,

1. ಅಗಸರ 16. ತಿರಾಲಿ 31. ಈಳಿಗೇರ ಅಥವಾ ಕಲಾಲ
2. ಅಯ್ಯ(ಜಂಗಮ) 17. ತುರುಕಾರ 32. ಲಾಲಗೊಂಡ
3. ಬಡಿಗರು 18. ಚಲ್ಲರ 33. ಪಂಚಾಚಾರದವರು
4. ಬಣಗಾರ ಅಥವಾ ನಾಗಲಿಕ 19. ಗವಳಿ 34. ಪದ್ಮಸಾಲಿ
5. ಬಣಜಿಗ 20. ಗವುಂಡಿ( ಉಪ್ಪಾರ) 35. ಪಡಸಾಲಿ
6. ದೇವಾಂಗ 21. ಹಂಡೆಯವರು 36. ಸಾದರು
7. ಗಾಣಿಗರು 22. ಹಂಡೇರಜೀರ 37. ಪತ್ತಾರ
8. ಹೂಗಾರ ಅಥವಾ ಮಾಲೆಗಾರ 23. ಜೀರ 38. ಮಾಳವಾರು
9. ಕಮ್ಮಾರ 24. ಕುರುಬ 39. ಮುಸುಕಿನ ಮಲ್ಲವ
10.ಕುಡು ಒಕ್ಕಲಿಗ 25. ಕುರುಸಾಲಿ 40. ವಾಣಿ
11. ಕುಂಬಾರ 26. ಪಟ್ಟ ಸಾಲಿ 41. ಮಾಳಿ
12.ಕುರುಹಿನ ಶೆಟ್ಟಿ 27. ಶಿವ ಸಿಂಪಿಗೇರ 42. ತೇಲಿ
13.ನಾಡಿಗ ಅಥವಾ ನಾವಿ 28. ಬಳಿಗಾರ 43. ಗುರವ
14. ಪಂಚಮಸಾಲಿ 29. ಹಡಪದ
15. ರೆಡ್ಡಿ 30. ನೊಳಂಬ

ಇವೆಲ್ಲವೂ ಮುಂಬೈ ಪ್ರಾಂತ್ಯದಲ್ಲಿ 1901 ರಲ್ಲಿ ದಾಖಲಾದ ಲಿಂಗಾಯತರೊಳಗಿನ ಜಾತಿಗಳು. ಸೇರ್ಪಡೆಯಾದ ಜಿಲ್ಲೆಗಳು-ಬೆಳಗಾಂ, ಬಿಜಾಪುರ, ಧಾರವಾಡ, ಕೆನರಾ(ಕರಾವಳಿ), ಕೊಲಾವಾ, ರತ್ನಗಿರಿ. ಗಮನಿಸತಕ್ಕ ಅಂಶವೆಂದರೆ ಇಡೀ ಚಾರ್ಟಿನಲ್ಲಿ ವೀರಶೈವ ಎಂಬುದು ಲಿಂಗಾಯತದ ಸಮಾನಾರ್ಥದಲ್ಲಿ ಅಲ್ಪ ಒಂದು ಉಪ ಪಂಗಡವಾಗಿ ಸಹ ಎಲ್ಲೆಲ್ಲೂ ದಾಖಲಾಗಿಲ್ಲ. ಇದರರ್ಥ ಈ ಪದ ಮುಂಬೈ ಪ್ರಾಂತ್ಯಕ್ಕೆ ಪ್ರವೇಶ ಸಹ ಮಾಡಿರಲಿಲ್ಲ ಎಂಬುದು.

Extract of Census of India -1891
Volume xxv - Mysore

Part II Imperial Census India index of castes. V.N. Narasiman Iyengar Provincial Superintendent of Census operation in Mysore. Printed at the Government Central printing press - 1893, Book No: 315 - 487 - IN D 1891 Vol. 2 Caste No 56 page No 309 ಮೈಸೂರು ಪ್ರಾಂತ್ಯದಲ್ಲಿ ಲಿಂಗಾಯತ ಸಮಾಜದಲ್ಲಿ ಪ್ರಚಲಿತವಿದ್ದ ಒಳ ಜಾತಿಗಳು.

1 ಲಿಂಗಾಯತ - ಆರಾಧ್ಯ 20 ಲಿಂಗಾಯತ - ಕೋರಿ ಶೆಟ್ಟಿ
2 ಲಿಂಗಾಯತ - ಅಯ್ಯ 21 ಲಿಂಗಾಯತ - ಲಿಂಗಾಯತ
3 ಲಿಂಗಾಯತ - ಬಡಗಲವ 22 ಲಿಂಗಾಯತ - ಮಾಳವ
4 ಲಿಂಗಾಯತ - ಬಣಜಿಗ 23 ಲಿಂಗಾಯತ - ಮೇಲಪಾವಡಿ
5 ಲಿಂಗಾಯತ - ಬಣ್ಣದವ 24 ಲಿಂಗಾಯತ - ನೊಣಬ
6 ಲಿಂಗಾಯತ - ಬಸಳೆ 25 ಲಿಂಗಾಯತ - ನೀರ ಮೇಲಿನವ
7 ಲಿಂಗಾಯತ - ಬಣವೆ 26 ಲಿಂಗಾಯತ - ಪೇಟೆಮನೆ
8 ಲಿಂಗಾಯತ - ಗದ್ದಿಗೆಯವ 27 ಲಿಂಗಾಯತ - ಪಂಚಾಚಾರ ಗೌಡ
9 ಲಿಂಗಾಯತ - ಗೌಡ ಲಿಂಗಾಯತ 28 ಲಿಂಗಾಯತ - ಸಾದರು
10 ಲಿಂಗಾಯತ - ಗಣಾಧೀಶ್ವರ 29 ಲಿಂಗಾಯತ - ಸಜ್ಜನರು
11 ಲಿಂಗಾಯತ - ಗೌಡಮನೆ 30 ಲಿಂಗಾಯತ - ಷಟ್‌ ಸ್ಥಲ
12 ಲಿಂಗಾಯತ - ಗೌಳಿಗ 31 ಲಿಂಗಾಯತ - ಶೀಲವಂತ
13 ಲಿಂಗಾಯತ - ಗುರುಶೀಲ 32 ಲಿಂಗಾಯತ - ಶೈಲದವ
14 ಲಿಂಗಾಯತ - ಹಿರಿಶುಭೆ 33 ಲಿಂಗಾಯತ - ತಮಿಳು ಜಂಗಮ
15 ಲಿಂಗಾಯತ - ಜಂಗಮ 34 ಲಿಂಗಾಯತ - ತಮ್ಮಡಿ
16 ಲಿಂಗಾಯತ - ಜ್ಯೋತಿ ಬಣಜಿಗ 35 ಲಿಂಗಾಯತ - ತೊಗಶೆಟ್ಟಿ
17 ಲಿಂಗಾಯತ - ಕಮಾಡಿ ಗೌಡ 36 ಲಿಂಗಾಯತ - ಒಡೇರು
18 ಲಿಂಗಾಯತ - ಕಾಂತಪಾವಡಿ 37 ಲಿಂಗಾಯತ - ತುರುಕಾನೆ ಬಣಜಿಗ
19 ಲಿಂಗಾಯತ - ಕಾಯ ಕೋಳ 38 ಲಿಂಗಾಯತ - ವೀರಶೈವ

1891 ರಲ್ಲಿ ದಾಖಲೆಯಾಗಿರುವ ಪಟ್ಟಿ ನೋಡಿರಿ. ಲಿಂಗಾಯತ ಸಮಾಜದೊಳಗೆ 38 ಒಳಜಾತಿಗಳನ್ನು ಗುರುತಿಸಲಾಗಿದ್ದು ಇದರಲ್ಲಿ ವೀರಶೈವ ಒಂದು ಉಪ ಪಂಗಡ ಮಾತ್ರ; ಕೇರಳದ 1881 ರ ಜನಗಣತಿಯಲ್ಲಿ ಎಸ್.ನಂ. 445 ರಿಂದ 449 ರವರೆಗೆ ಪುಟ 347 ರಲ್ಲಿ ಕೇವಲ ಲಿಂಗಾಯತ ಎಂಬ ಹೆಸರು ಮಾತ್ರ ದಾಖಲಾಗಿದೆ. Imperial Census of India 1881 - Operation and results in the presidency of Madras (Book No. 315-482 IND 1881, Volume - 4)

ಆಂಧ್ರ ಮತ್ತು ತಮಿಳು ನಾಡಿನ ಒಂದು ಮೂಲೆಯಲ್ಲಿ ನಗಣ್ಯವಾಗಿ ಅಸ್ತಿತ್ವದಲ್ಲಿದ್ದ ವೀರಶೈವ ಎಂಬ ಸಣ್ಣ ಒಂದು ಪಂಥವು ವರ್ಣಾಶ್ರಮ ಆಧಾರಿತವಾಗಿ ಇದ್ದುದನ್ನು ಗಮನಿಸಿ ಹಾನುಗಲ್ ಕುಮಾರ ಸ್ವಾಮಿಗಳು ಮತ್ತು ಕಾಶೀನಾಥ ಶಾಸ್ತ್ರಿಯವರ ನೇತೃತ್ವದಲ್ಲಿ ರಂಭಾಪುರಿ ಮಠದವರು ಸಂಚು ಮಾಡಿ ತಂದು ನಂತರದ ದಿನಗಳಲ್ಲಿಲಿಂಗಾಯತ ಧರ್ಮದ ಮೇಲೆ ಹೇರಿ ಅದು ಬಳಲುವಂತೆ ಮಾಡಿರುವುದನ್ನು ಐತಿಹಾಸಿಕವಾಗಿ ಗಮನಿಸಬಹುದು. ಇಡೀ ಭಾರತದ ಜನಗಣತಿಯಲ್ಲಿ 1901 ರಲ್ಲಿ ಬಂದ ಲಿಂಗಾಯತರ ಜನಸಂಖ್ಯೆ 25,37,745(ಇಪ್ಪತ್ತೈದು ಲಕ್ಷದ ಮೂವತ್ತೇಳು ಸಾವಿರದ ಏಳು ನೂರಾ ನಲವತ್ತೈದು) ಪುಟ 570. ಇವರಿರುವ ಪ್ರಾಂತ್ಯಗಳೆಂದರೆ ಅಂಡಮಾನ್, ಬಾಂಬೆ, ಕೊಡಗು, ಮದ್ರಾಸ್, ಹೈದ್ರಾಬಾದ್, ಮೈಸೂರು ಮತ್ತು ಟ್ರಾವಂಕೂರು ಪ್ರಾಂತ್ಯಗಳು ಕಾಣಿಸಿರುವ ಒಳಜಾತಿಗಳು ಲಿಂಗಾಯತ ಬನಿಯ, ದೋಭಿ, ಗವಳಿ, ನಾಯಿಡು, ಶೀಲವಂತ, ಸೋನಾರ್, ಸುತಾರ್, ತೇಲಿ, ಒಕ್ಕಲಿಗರು, ಮಾಳಿ, ವಾಣಿ, ತೆಲುಗು ಪ್ರಾಂತ್ಯದಲ್ಲಿ ವೀರಶೈವರು 4371 ಜನರಿದ್ದಾರೆಂದು, ವೀರಶೈವ ಲಿಂಗಾಯತರು 1553 ಜನರಿದ್ದಾರೆಂದು ದಾಖಲಾಗಿದೆ.

ಇದು ಅತಿ ಮಹತ್ವದ ಮಾಹಿತಿ. ಇದರ ಪ್ರಕಾರ ಲಿಂಗಾಯತರಲ್ಲದ ವೀರಶೈವರು ಆಂಧ್ರದಲ್ಲಿ 1901 ರಲ್ಲಿ 4371 ಜನ ಇದ್ದರೆ, ಲಿಂಗಾಯತ ಧರ್ಮ ಸ್ವೀಕರಿಸಿದ ವೀರಶೈವರು 1553 ಜನ ಇದ್ದರು. ಇದರಿಂದ ತಿಳಿಯುವುದೇನೆಂದರೆ ಲಿಂಗಾಯತ ಧರ್ಮವನ್ನು ಸ್ವೀಕರಿಸಿದ 40-50 ಜಾತಿಗಳವರಲ್ಲಿ ವೀರಶೈವದಿಂದ ಬಂದವರು ಅಂಥದೊಂದು ಪಂಗಡ. ಲಿಂಗಾಯತ'' ಎಂಬ ಶೀರ್ಷಿಕೆಯಡಿಯಲ್ಲಿ ಉಳಿದ ಜಾತಿಗಳು ಪಟ್ಟಿ ಮಾಡಲ್ಪಟ್ಟಿವೆ.

1911 ನೆಯ ಜನಗಣತಿಯಲ್ಲಿಲಿಂಗಾಯತರ ಜನಸಂಖ್ಯೆ 29,76,293(ಇಪ್ಪತ್ತೊಂಬತ್ತು ಲಕ್ಷದ ಎಪ್ಪತ್ತಾರು ಸಾವಿರದ ಎರಡು ನೂರಾ ತೊಂಬತ್ತಮೂರು) 10 ವರ್ಷಗಳ ಅವಧಿಯಲಿ ವೃದ್ಧಿಯಾದ ಸಂಖ್ಯೆ 4,38,548 (ನಾಲ್ಕು ಲಕ್ಷದ ಮೂವತ್ತೆಂಟು ಸಾವಿರದ ಐದು ನೂರಾ ನಲವತ್ತೆಂಟು). 1901 ಮತ್ತು 1911ರ ಜನಗಣತಿಯಲ್ಲಿ ಲಿಂಗಾಯತ ಜನಸಂಖ್ಯೆ ನಿಖರವಾಗಿ ಸಿಗುತ್ತದೆ. ಪ್ರಾಂತ್ಯವಾರು ಜನಗಣತಿಯಲ್ಲಿ ಸಹ ಲಿಂಗಾಯತರ ಜನಸಂಖ್ಯೆ ನಿಖರವಾಗಿ ಸಿಗುತ್ತದೆ. ಪ್ರಾಂತ್ಯವಾರು ಸಹ ಕೊಡಲಾಗಿದೆ.

Lingayat Census report


ಈ ಎಲ್ಲ ವೈಜ್ಞಾನಿಕ ಅಧ್ಯಯನದಲ್ಲಿ ತಿಳಿದು ಬರುವುದೇನೆಂದರೆ ಎಲ್ಲೆಡೆಯಲ್ಲಿ ಲಿಂಗಾಯತ ಎಂಬ ಪದವೇ ಪ್ರಧಾನವಾಗಿದೆ. ಜೊತೆಗೆ ಒಳಗಿನ ಜಾತಿಗಳನ್ನು ಕೊಡಲಾಗಿದೆ. ಹೈದರಾಬಾದ್ ಪ್ರಾಂತ್ಯ ಬಿಟ್ಟರೆ ವೀರಶೈವದ ಉಲ್ಲೇಖ ಬೇರೆ ರಾಜ್ಯಗಳಲ್ಲಿ ಇಲ್ಲ. ತಮಿಳುನಾಡು (ಮದ್ರಾಸ್ ಪ್ರಾಂತ್ಯ) ಮತ್ತು ಕೇರಳ (ಕೊಚ್ಚಿನ್ ಮತ್ತು ಟ್ರಾವಂಕೂರ್) ಗಳಲ್ಲಿ ಸಹ ವೀರಶೈವದ ಪ್ರಸ್ತಾಪವಿಲ್ಲ, ತಮಿಳು ನಾಡಿನಲ್ಲಿ ಲಿಂಗಧಾರಿ ಲಿಂಗಾಯತರನ್ನು ಜಂಗಮರೆಂದು ಕರೆಯಲಾಗುತ್ತದೆ. ಅವರ ಸಂಖ್ಯೆಯನ್ನು ಜಂಗಮ ಶೀರ್ಷಿಕೆಯ ಅಡಿಯಲ್ಲಿ ಕೊಡಲಾಗಿದೆ.

ಈ ಬಗ್ಗೆ ಇನ್ನೂ ಅಷ್ಟು ವಿವರಗಳನ್ನು ಕೊಡಬಹುದು. 1881 ರಿಂದ 1901ರ ವರೆಗೆ ನಡೆದ ಇಂಪೀರಿಯಲ್ ಸೆನ್ಸಸ್ ಅಡಿಯಲ್ಲಿ ತಮಿಳು ದೇಶದ ಜಾತಿವಾರು ಕ್ರ.ಸಂ. 3029-3096(64 ಜಾತಿಗಲೂ) ಲಿಂಗಾಯತದ ಉಪ ಜಾತಿಗಳು ಎಂದು ಗುರುತಿಸಲ್ಪಟ್ಟು ಕ್ರ.ಸಂ.3073 ಹಾಗೂ 3094ರಲ್ಲಿ ಕೇವಲ ಎರಡು ಜಾತಿಗಳನ್ನು ಲಿಂಗಾಯತ ವೀರಶೈವವೆಂದು ಗುರುತಿಸಿದ್ದಾರೆ. ಅದೇ ರೀತಿ ತೆಲುಗು ದೇಶದ ಜಾತಿಗಳಲ್ಲಿ ಕ್ರ.ಸಂ 4040-4056 ರವರೆಗೆ ಕ್ರ.ಸಂ 4956,4061 ರ ಜಾತಿಗಳನ್ನು ಲಿಂಗಾಯತ-ಜಂಗಮ ಎಂದು ಗುರುತಿಸಿದ್ದಾರೆ. ಒಟ್ಟು 27 ತೆಲುಗು ಲಿಂಗಾಯತ ಜಾತಿಗಳಲ್ಲಿ ಕೇವಲ ಎರಡು ಜಾತಿಗಳನ್ನು ಲಿಂಗಾಯತ-ಜಂಗಮವೆಂದು ಗುರುತಿಸಿದ್ದಾರೆ. ಅದೇ ರೀತಿ ಕನ್ನಡ ದೇಶದ ಲಿಂಗಾಯತ ಜಾತಿಗಳಲ್ಲಿ 38 ಜಾತಿಗಳನ್ನು ಗುರುತಿಸಿ ಅದರಲ್ಲಿ 38 ನೇ ಜಾತಿಯನ್ನು ವೀರಶೈವ ಎಂದು ಗುರುತಿಸಿದ್ದಾರೆ. ಅಂದರೆ ತಮಿಳು 64 ಜಾತಿಗಳು, ತೆಲುಗು 27 ಜಾತಿಗಳ ಪೈಕಿ ಕೇವಲ ಮೂರು ಜಾತಿಗಳಿಗೆ ಲಿಂಗಾಯತ-ವೀರಶೈವವೆಂದೂ ಎರಡಕ್ಕೆ ಲಿಂಗಾಯತ-ಜಂಗಮವೆಂದು ಗುರುತಿಸಿದ್ದಾರೆ. ಅಂದರೆ 134 ಜಾತಿಗಳಿಗೆ ಲಿಂಗಾಯತದ ಉಪಜಾತಿಗಳೆಂದು ಗುರುತಿಸಿ ಅವುಗಳಲ್ಲಿ ಮೂರು ಜಾತಿಗಳನ್ನು ಮಾತ್ರ ಲಿಂಗಾಯತ-ವೀರಶೈವ ಎಂದು 2ನ್ನು ಲಿಂಗಾಯತ-ಜಂಗಮವೆಂದು ಗುರುತಿಸಿದ್ದಾರೆ. ಅಂದರೆ ಮುಖ್ಯ ಧರ್ಮ ಲಿಂಗಾಯತ ಎಂದು ಕರೆದು ಅದರಲ್ಲಿ ವೀರಶೈವರು ಹಾಗೂ ಜಂಗಮರನ್ನು ಒಂದು ಜಾತಿಯಾಗಿ ಗುರುತಿಸಿದ್ದಾರೆಯೇ ಹೊರತು ವೀರಶೈವರಲ್ಲಿ ಲಿಂಗಾಯತರನ್ನು ಸೇರಿಸಿಲ್ಲ. ಅಂದರೆ ಲಿಂಗಾಯತ ಎನ್ನುವ ಒಂದು ದೊಡ್ಡ ಸರ್ವೆ ನಂಬರ್ ತೆಗೆದುಕೊಂಡರೆ ಅದರಲ್ಲಿ ವೀರಶೈವ, ಜಂಗಮ ಎನ್ನುವ ಎರಡು ಹಿಸ್ಸ ನಂಬರುಗಳು ಬರುತ್ತವೆ. ಆದರೆ ಬಹಳ ಜನರು ತಪ್ಪಾಗಿ ಭಾವಿಸಿದಂತೆ ವೀರಶೈವ ದಲ್ಲಿ ಲಿಂಗಾಯತ ಇಲ್ಲ! ಲಿಂಗಾಯತ ಎನ್ನುವ(134 ಜಾತಿಗಳು) 134 ಎಕರೆಯ ಹೊಲ ತೆಗೆದು ಕೊಂಡರೆ ವೀರಶೈವವು ಕೇವಲ ಮೂರು ಹಿಸ್ಸಾನಂಬರ್‌ಗೆ ಸೀಮಿತವಾಗುತ್ತದೆ, ಜಂಗಮವು ಸಹಾ 2 ಹಿಸ್ಸಾ ನಂಬರ್‌ಗೆ ಸೀಮಿತವಾಗುತ್ತದೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ ಲಿಂಗಾಯತ ಎನ್ನುವ ತಂದೆಗೆ 134 ಮಕ್ಕಳಿದ್ದು ಅದರಲ್ಲಿ 3 ಜನ ವೀರಶೈವರು 2 ಜನ ಜಂಗಮರು ಇದ್ದಾರೆಂದು ಉಳಿದ 129 ಮಕ್ಕಳೂ ಬೇರೆ-ಬೇರೆ ಇದ್ದಾರೆಂದು ಹೇಳಬಹುದು. ಇದಕ್ಕೆಲ್ಲ ದಾಖಲೆಗಳು ಎಂದರೆ Mythic Societyಯ ಪುಸ್ತಕ ಸಂಖ್ಯೆ 315-487ನ್ನ IND 1891-V2 ಹಾಗೂ p-309,315-487 IND-190/- V2PEA; 315-482-IND-1881-V4. ಬಿಟ್ಟು ವೀರಶೈವ ಹಾಗೂ ಲಿಂಗಾಯತವು ಸಮವೆಂದು ವಾದಿಸುವವರು ದಯವಿಟ್ಟು ತಿಳಿದುಕೊಳ್ಳಿ ಲಿಂಗಾಯತ ಧರ್ಮದ 134 ಮಕ್ಕಳ ತಂದೆಗೆ ವೀರಶೈವ ಹಾಗೂ ಜಂಗಮವೆಂಬುವವು ಇಬ್ಬರು ಮಕ್ಕಳು ಮಾತ್ರ. ಅಂದರೆ ತಂದೆಯಾದ ಲಿಂಗಾಯತಕ್ಕೆ ಈ ಮಕ್ಕಳು ಇಬ್ಬರು ಮಾತ್ರ. ತಂದೆಗೆ ಮಕ್ಕಳು ಜನಿಸುತ್ತಾರೆಯೇ ಹೊರತು ಮಕ್ಕಳಿಗೆ ತಂದೆ ಜನಿಸುವುದಿಲ್ಲ. ಆದ್ದರಿಂದ ಪ್ರಾಜ್ಞರು ಇದನ್ನು ಅರಿಯುವುದೊಳಿತು. ಒಂದು ಬೃಹತ್ ಸಮಾಜದೊಳಗೆ ಸೇರ್ಪಡೆಯಾದ ಒಂದು ಪಂಗಡದ ಹೆಸರನ್ನು ಇಡೀ ಧರ್ಮಕ್ಕೆ ಅನ್ವಯಿಸುವುದು ಅನ್ಯಾಯ ಮತ್ತು ಅಪಚಾರ.

ಹಿಂದಿನ ವರ್ಷಗಳ ಜನಗಣತಿಯ ವಿವರಗಳನ್ನು ಕೊಟ್ಟವರು ಬಳ್ಳಾರಿಯ ಶರಣ ಎಂ.ಆರ್. ಪಂಪನ ಗೌಡರು ಮತ್ತು ಬೆಂಗಳೂರಿನ ಕೊಡಿಗೇಹಳ್ಳಿಯ ಶರಣ ಚನ್ನಬಸವಯ್ಯನವರು. ಅದಕ್ಕಾಗಿ ಅವರಿಗೆ ಧನ್ಯವಾದಗಳು.

ಸಮಾರೋಪ ಮತ್ತು ಸಂಕಲ್ಪ

1901 ರವರೆಗೆ ಲಿಂಗಾಯತ ಎಂಬ ಸ್ವತಂತ್ರ ತಲೆಬರಹ ಹೊಂದಿದ್ದ ಈ ಧರ್ಮಕ್ಕೆ ವೀರಶೈವ ಎಂಬ ಒಂದು ಅತ್ಯಂತ ಸಣ್ಣಶೈವ ಪಂಥದ ಹೆಸರನ್ನು ತಗುಲಿಸಿ, ಲಿಂಗಾಯತದ ನಿಜ ಸ್ವರೂಪ ಕಳೆದವರು ಈ ಸಮಾಜದೊಳಗಣ ಸಂಪ್ರದಾಯವಾದಿ, ಧೂರ್ತರಾದ ಜಾತಿವಾದಿಗಳು. ಈ ಸಂಚಿಗೆ ಶರಣ ಫ.ಗು. ಹಳಕಟ್ಟಿ ಯಂಥವರೂ ಬಲಿಯಾದರು. ಲಿಂಗಾಯತರಲ್ಲಿಯೂ ಜಾತಿ ವರ್ಗಿಕರಣ ಇಲ್ಲವೆ? ಎಂದು ವರ್ಣ ವ್ಯವಸ್ಥೆಗೆ ಹೋಲಿಸುವವರು ಉಂಟು. ಲಿಂಗಾಯತ ಸಮಾಜದಲ್ಲಿ ಜಾತಿಪದ್ಧತಿ ಆಗಂತುಕವೇ ವಿನಾ ಸ್ವಭಾವ ಜನ್ಯವಲ್ಲ, ಅಬ್ಬೆಡ್ಯು ಬಾಯಿಸ್ ಹೇಳುವಂತೆ, ಒಳ ಪಂಗಡಗಳ ಭೇದವಿಲ್ಲ, ಜಾತಿ ಭೇದ ತಮ್ಮ ಧರ್ಮದ ಪ್ರಕಾರ ಮಾಡುವುದು ತಪ್ಪು ಎಂಬ ಅರಿವೂ ಬಹುಪಾಲು ಲಿಂಗಾಯತರಿಗಿದೆ.

ಜನಗಣತಿಯಲ್ಲಿ 55,19622 ಮಾತ್ರ ಲಭ್ಯವಾಗಲು ಕಾರಣವೆಂದರೆ, ಅನೇಕರಿಗೆ And others ( ಮತ್ತು ಇತರರು) ಎಂಬ ಅಂಕಣದಲ್ಲಿ ಲಿಂಗಾಯತ ಎಂಬುದನ್ನು ಬರೆಸಲು ಗೊತ್ತಿಲ್ಲದಿರುವುದು. ಗಣತಿದಾರರು ಮೇಲಿನವರ ಆದೇಶವಿಲ್ಲದ ಕಾರಣ ಕೇವಲ ಹಿಂದು ಅಂಕಣದಲ್ಲಿ ಬರೆದುಕೊಂಡು ಹೋಗುವುದು. ಇನ್ನೂ ಕೆಲವು ಗಣತಿದಾರರು ಜನರು ಸರಿಯಾಗಿ ಹೇಳಿದರೂ ಬೇಕಂತಲೇ ಹಿಂದು ಅಂಕಣದಲ್ಲಿ ಬರೆದು ಕೊಂಡಾಗ ಅದನ್ನು ಪರೀಕ್ಷಿಸಬೇಕೆಂಬ ತಿಳುವಳಿಕೆ ಬಹಳ ಜನರಿಗೆ ಇಲ್ಲದಿರುವುದು.

ಈ ಸಮಸ್ಯೆಗೆ ಪರಿಹಾರವೆಂದರೆ ಕೇಂದ್ರ ಸರ್ಕಾರವು ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕ ಮನ್ನಣೆ ನೀಡಿ, ಜನಗಣತಿ ಇಲಾಖೆಗೆ ಹಿಂದು, ಬೌದ್ಧ ಜೈನ, ಸಿಖ್, ಮುಸ್ಲಿಂ, ಕ್ರೈಸ್ತರಿಗೆ ಕ್ರಮವಾಗಿ H.B.J.S.M.C ಎಂಬ ಸಂಕೇತಾಕ್ಷರ ಅಥವಾ ಕ್ರಮ ಸಂಖ್ಯೆ ಜನಗಣತಿ ಪರಿಪತ್ರದಲ್ಲಿ ಕೊಡುವಂತೆ ಲಿಂಗಾಯತಕ್ಕೂ L ಎಂಬ ಸಂಕೇತಾಕ್ಷರವನ್ನು ಅಥವಾ ಕ್ರಮಸಂಖ್ಯೆ 7ನ್ನು ಕೊಟ್ಟು ಗಣತಿದಾರರಿಗೆ ಅಧಿ ಕೃತವಾಗಿ, ಸ್ಪಷ್ಟವಾಗಿ ತರಬೇತಿಯಲ್ಲಿ ತಿಳಿಸಬೇಕು. 2011ರ ಜನಗಣತಿಯ ಹೊತ್ತಿಗಾದರೂ ಇದನ್ನು ಪಡೆದು ಕೊಳ್ಳಬೇಕು. ಕೇಂದ್ರ ಸರ್ಕಾರದ ಗಮನ ಸೆಳೆಯುವಷ್ಟು ಪ್ರಬಲವಾದ ಮತ್ತು ಸಂಘಟಿತವಾದ ಹೋರಾಟ ಸಾಗಬೇಕು. ಎಲ್ಲ ಸಂಘ - ಸಂಸ್ಥೆ, ಸಂಘಟನೆಗಳು ತಮ್ಮ ತಮ್ಮ ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಚಳುವಳಿ ಮಾಡಬೇಕು. ಈ ದಿಶೆಯಲ್ಲಿ ಎಲ್ಲರೂ ಚಿಂತನೆ ಮಾಡಬೇಕೆಂದು ನಮ್ಮ ಆಶಯ.

ವಿಶೇಷ ಸೂಚನೆ : ಈ ವಿಷಯದ ಬಗ್ಗೆ ಪೂರಕವಾಗಿರುವ ಮತ್ತೆ ಯಾವುದೇ ವಿವರಗಳು ದೊರೆತಲ್ಲಿ ಅದನ್ನು ನಮ್ಮ ಗಮನಕ್ಕೆ ತಂದರೆ ಪುನ‌ ಮುದ್ರಣದಲ್ಲಿ ಆ ವಿವರಗಳನ್ನು ಸೇರಿಸಲಾಗುವುದು.
ಆಕರ ಗ್ರಂಥಗಳು : ಜನಗಣತಿಯ ಪ್ರಕಟಣೆಗಳು, ಲಿಂಗಾಯತರು ಹಿಂದುಗಳಲ್ಲ : ಡಾ|| ಎನ್.ಜಿ.ಮಹಾದೇವಪ್ಪ ಪ್ರ: ಲಿಂಗಾಯತ ಅಕಾಡೆಮಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ.

ಗ್ರಂಥ ಋಣ:
1) ಲಿಂಗಾಯತರು ಹಿಂದುಗಳಲ್ಲ - A book written by Her Holiness Maha Jagadguru Mata Mahadevi, Published by: Vishwakalyana Mission 2035, II Block, chord Road, Rajajinagar, Bangalore-560010.

*
ಪರಿವಿಡಿ (index)
Previous ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಲಿಂಗಾಯತರಲ್ಲಿ ಮತಾಂತರ Next