Previous ಲಿಂಗಾಯತ ಪುನರುಜ್ಜಿವನದ ಪಂಚಸೂತ್ರಗಳು ಲಿಂಗಾಯತರು ಹಿಂದುಗಳಲ್ಲ Next

ಲಿಂಗಾಯತ ಪ್ರಗತಿಪರ ಧರ್ಮ

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

*

ಲಿಂಗಾಯತ ಒಂದು ಪ್ರಗತಿಪರ(progressive) ಧರ್ಮ

ದಿವ್ಯಾನುಭಾವ- ಅನುಭೂತಿಯಂತಹ ಸಂಪೂರ್ಣ ದಾರ್ಶನಿಕ ತತ್ತ್ವವನ್ನು ಪ್ರತಿಪಾದಿಸಿ ತಕ್ಷಣವೇ ಪ್ರಗತಿಪರ ಧರ್ಮದಂತಹ ವೈಚಾರಿಕ (rational) ತತ್ತ್ವವನ್ನು ಕೈಗೆತ್ತಿಕೊಳ್ಳುವುದು. ಹೊರನೋಟಕ್ಕೆ ಅತ್ಯಾಶ್ಚರ್ಯಕರವಾಗಿ ತೋರಬಹುದು-ಸಾಮಾನ್ಯ ಧಾರ್ಮಿಕರಿಗೆ, ಏಕೆಂದರೆ ಧರ್ಮವಂತಿಕೆಯಿಂದ ತಕ್ಷಣ ಅವೈಜ್ಞಾನಿಕ, ಮೂಢನಂಬಿಕೆಗಳ ಕಲ್ಪನೆ ಹುಟ್ಟಿಬರುವುದು, ವೈಚಾರಿಕತೆ ಎಂದ ತಕ್ಷಣ ನಾಸ್ತಿಕತೆಯ ಕಲ್ಪನೆ ಮೂಡಿಬರುವುದು ಭಾರತೀಯ (ಹಿಂದು) ರಲ್ಲಿ ತೀರಾ ಸ್ವಾಭಾವಿಕವಾಗಿದೆ. ಈ ಕಲ್ಪನೆಯನ್ನೇ ಅಲ್ಲಗಳೆಯುವಂತೆ ವಿಶ್ವಗುರು ಬಸವಣ್ಣನವರು ಪ್ರಗತಿಪರ ಧರ್ಮವನ್ನು ಪ್ರತಿಪಾದಿಸಿದರು. ಇದು ಶುದ್ಧದಾರ್ಶನಿಕತೆಯನ್ನು ಗರ್ಭೀಕರಿಸಿಕೊಂಡಿರುವುದೇ ಇದರ ವಿಶೇಷತೆ.

ಅನುಭವ ಮಂಟಪವು ಅಂದರೆ ಲಿಂಗಾಯತ ಧರ್ಮವು ಅಂದರೆ ಕ್ರಾಂತಿಯೋಗಿ ಬಸವಣ್ಣನವರು ಪ್ರತಿಪಾದಿಸಿದ್ದು ಪ್ರಗತಿಪರ ಧರ್ಮವನ್ನು. ಈ ರೀತಿ ನಾನು ಏಕೆ ಒತ್ತಿ ಒತ್ತಿ ಹೇಳಿದ್ದೇನೆಂದರೆ, ಯಾವುದಾದರೊಂದು ವಿಷಯವನ್ನು ಅನುಭವ ಮಂಟಪವು ಪ್ರತಿಪಾದಿಸಿತು. ಎಂದರೆ, ಲಿಂಗಾಯತ ಧರ್ಮವು ಬೋಧಿಸಿತು ಎಂದರೆ ಆಗ ಅರ್ಥ ಮಾಡಿಕೊಳ್ಳಬೇಕಾದುದು ಏನೆಂದರೆ, ಇವುಗಳ ಕರ್ತೃ, ರೂಹಾರಿಯಾದ ಬಸವಣ್ಣನವರು ಪ್ರತಿಪಾದಿಸಿದ್ದು ಎಂದು ಅರ್ಥೈಸಬೇಕು, ಏಕೆಂದರೆ ಅನುಭವ ಮಂಟಪದ ಕಟ್ಟಡ ಯಾವುದೇ ಸಿದ್ಧಾಂತವನ್ನು ಪ್ರತಿಪಾದಿಸುವುದಿಲ್ಲ. ಅನುಭವ ಮಂಟಪದಲ್ಲಿ ನೂರಾರು ಶರಣರು ಅನೇಕ ವಿಚಾರಗಳನ್ನು ಪ್ರತಿಪಾದಿಸಿದರೂ ವಿಚಾರಗಳ ಮೂಲಪ್ರತಿ (mothertape) ಬಸವಣ್ಣನವರು. ಚಲನಚಿತ್ರದ ಹಾಡುಗಳನ್ನು ಧ್ವನಿಮುದ್ರಿಸುವಾಗ, ಅಥವಾ ಧ್ವನಿ ಸುರುಳಿ ಧ್ವನಿ ಮುದ್ರಿಸುವಾಗ ನಾವೊಬ್ಬ ನಿರ್ದೇಶಕನನ್ನು ಆಯ್ಕೆ ಮಾಡುತ್ತೇವೆ. ಆತನು ನಾವು ಕೊಟ್ಟ ಹಾಡುಗಳಿಗೆ ರಾಗ ಹಾಕುತ್ತಾನೆ. ಸ್ವರಗಳನ್ನು ಹೊಂದಿಸುತ್ತಾನೆ. ಈ ಸ್ವರ ವಿವರಣೆಯ ಪ್ರತಿಗಳನ್ನು ಎಲ್ಲ ವಾದ್ಯಗಾರರಿಗೆ, ಗಾಯಕರಿಗೆ ವಿತರಿಸುತ್ತಾನೆ. ನಿರ್ದೆಶಕನ ಸೂಚನೆಯಂತೆ ಎಲ್ಲರೂ ಒಟ್ಟಾಗಿ ನುಡಿಸಿ, ಹಾಡಿ ಒಂದು ಹಾಡನ್ನು ಧ್ವನಿಮುದ್ರಿಸುತ್ತಾರೆ.

ಅದೇ ರೀತಿ ಸೃಷ್ಟಿಕರ್ತ ನಿರ್ಮಾಪಕನ (producer)ಇಚ್ಛೆ-ಸಂಕಲ್ಪದಂತೆ ವಿಶ್ವಗುರು ಬಸವಣ್ಣನವರು ನಿರ್ದೇಶಕರು ಅನುಭವ ಮಂಟಪವೆಂಬ ಧ್ವನಿಮುದ್ರಣ ಆಲಯದಲ್ಲಿ ಬಸವ ಧರ್ಮ ಎಂಬುದನ್ನು ವಚನ ಸಾಹಿತ್ಯ ಎಂಬ ಟೇಪಿನ ಮೇಲೆ ಧ್ವನಿ ಮುದ್ರಿಸಿದರು. ಈ ವಾದ್ಯವೃಂದದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದರು ಇನ್ನಿತರ ಅಸಂಖ್ಯಾತ ಶರಣರು, ಹೀಗಾಗಿಯೇ ನಿರ್ದೇಶಕರಾದ ಬಸವಣ್ಣನವರಿಗೆ ಕೇಂದ್ರ ಸ್ಥಾನ, ಅತ್ಯುನ್ನತ ಮನ್ನಣೆ, ಪಾತ್ರವಾಗಿದೆ. ಅದರ ವಿಚಾರಧಾರೆಯನ್ನು ಇನ್ನಿತರರು ಅರಗಿಸಿಕೊಂಡು ತಮ್ಮ ತಮ್ಮ ಮಾತುಗಳಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ.

ಲಿಂಗಾಯತ ಧರ್ಮವು ಪ್ರಗತಿಪರ ಧರ್ಮ (progressive). ಧರ್ಮಗಳಲ್ಲಿ ಎರಡು ಪ್ರಕಾರ, ಪೌರಾಣಿಕ ಮತ್ತು ಪ್ರಗತಿಪರ ಎಂಬುದಾಗಿ, ವ್ಯತ್ಯಾಸಗಳೇನೆಂಬುದನ್ನು ನೋಡೋಣ.

ಪೌರಾಣಿಕ ಧರ್ಮಪ್ರಗತಿಪರ ಧರ್ಮ
1 ಶಬ್ದ ಪ್ರಮಾಣದ ಮೇಲೆ ಅನುಭಾವ ಪ್ರಮಾಣದ ಮೇಲೆ
2 ಪುರಾಣದ ಆಧಾರ ತರ್ಕ ಮತ್ತು ತತ್ತ್ವದ ಆಧಾರ
3 ಮತೀಯ ದೃಷ್ಟಿ ಮತಿಯ ದೃಷ್ಟಿ
4 ಮತಾಂಧತೆ ಬೌದ್ಧಿಕ ಪ್ರಾಮಾಣಿಕತೆ
5 ಕೂಪಮಂಡೂಕ ವೃತ್ತಿ (ಸಂಪ್ರದಾಯದಾಸ್ಯ) ವಿಶಾಲ ದೃಷ್ಟಿ
6 ಕರ್ಮ ಪ್ರಧಾನ ಜ್ಞಾನ ಪ್ರಧಾನ
7 ವಿಧಿವಾದ ಪ್ರಯತ್ನವಾದ
8 ಭೀತಿಯ ಮೇಲೆ ಆತ್ಮವಿಶ್ವಾಸದ ಮೇಲೆ
9 ನಂಬಿಕೆಯೇ ತಳಹದಿ ವಿಚಾರ ವಿಮರ್ಶೆಯ ತಳಹದಿ
10 ಅರ್ಥವಿಲ್ಲದ ಆಚರಣೆ ಅರ್ಥಸಹಿತ ಆಚಾರ
11 ಹೊರಗಿನ ವಿಧಿಗಳಿಗೆ ಒತ್ತು ಆತ್ಮವಿಶ್ವಾಸದ ಕಡೆಗೆ ಗಮನ
12 ತಾತ್ಕಾಲಿಕ ಸಾರ್ವಕಾಲಿಕ
13 ಸಂಪ್ರದಾಯ ಪಾಲನೆ ಮಾನವ ಕಲ್ಯಾಣವೇ ಗುರಿ


ಧರ್ಮವು ಶ್ರದ್ಧೆ (belief) ಮತ್ತು ನಂಬಿಕೆ (Faith) ಗಳ ಮೇಲೆ ನಿಂತುದು. ಎಲ್ಲ ಧರ್ಮಗಳಲ್ಲಿಯೂ ನಂಬಿಕೆ ಎನ್ನುವುದು ಇದ್ದೇ ಇರುತ್ತದೆ. ಆದರೆ ನಂಬಿಕೆ ಮತ್ತು ವೈಚಾರಿಕತೆಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ನಾವು ಯಾವುದನ್ನೇ ಆಗಲಿ ವರ್ಗಿಕರಿಸಬೇಕಾಗುವುದು. ಈ ದೃಷ್ಟಿಯಿಂದ ನೋಡಿ ಯಾವುದಾದರೊಂದನ್ನು ಉದಾಹರಣೆಯಾಗಿ ಇಟ್ಟುಕೊಂಡೇ ಮುಂದುವರಿಯಬೇಕಾಗುವುದು. ಪೌರಾಣಿಕ ಧರ್ಮಕ್ಕೆ ಉದಾಹರಣೆಯಾಗಿ ವೈದಿಕ ಧರ್ಮವನ್ನು, ಪ್ರಗತಿಪರ ಧರ್ಮಕ್ಕೆ ಉದಾಹರಣೆಯಾಗಿ ಬಸವ ಧರ್ಮವನ್ನು ಇಟ್ಟುಕೊಂಡು ವಿಚಾರದ ಪ್ರತಿಪಾದನೆಗೆ ತೊಡಗುವೆ.

ಕ್ರೈಸ್ತ-ಇಸ್ಲಾಂ ಧರ್ಮಗಳಲ್ಲಿ ಮೂಢನಂಬಿಕೆಗಳಿಲ್ಲವೋ ಎಂದು ಯಾರಾದರೂ ಪ್ರಶ್ನಿಸಬಹುದು. ಖಂಡಿತವಾಗಿಯೂ ಇವೆ. ಕನ್ನೆ ಮೇರಿಯಲ್ಲಿ ದೇವದೂತನಿಂದ ಏಸುವು ಹುಟ್ಟಿದ. ಶಿಲುಬೆಗೇರಿದ ನಂತರ ದೇಹಧಾರಿಯಾಗಿ ಸ್ವರ್ಗಾರೋಹಣ- (resurrection) ಅಂಥ ನಂಬಿಕೆಗಳು, ಕ್ರೈಸ್ತ-ಇಸ್ಲಾಂದ ಸೃಷ್ಟಿಯ ಕಲ್ಪನೆ ಸಹ ವಿಜ್ಞಾನವು ಒಪ್ಪದ ಸಿದ್ಧಾಂತ. ನಂಬಿಕೆಗಳ ಪ್ರಮಾಣವನ್ನು ಗಮನಿಸಿದರೆ ಅತಿ ಹೆಚ್ಚಿನ ಮೌಡ್ಯತೆ ಬರುವುದು ವೈದಿಕ ಧರ್ಮದಲ್ಲಿ, ನನಗೆ ಇಲ್ಲಿ ಸಹ ಒಂದು ವ್ಯತ್ಯಾಸ ಗುರುತಿಸಬೇಕು ಎನ್ನಿಸುತ್ತಿದೆ.

ಅದೆಂದರೆ ವೇದೋಕ್ತ ವೈದಿಕ ಧರ್ಮ ಮತ್ತು ಬ್ರಾಹ್ಮಣ ಧರ್ಮ ಎಂಬ ಪದಗಳನ್ನು ತಾತ್ವಿಕವಾಗಿ ಗುರುತಿಸುವ ಮೂಲಕ. ಇಂದು ಲಿಂಗಾಯತ ಸಮಾಜದಲ್ಲಿರುವ ಆಚರಣೆಗಳನ್ನು ನೋಡಿದರೆ ಯಾರೂ ಕೂಡ ಇದೊಂದು ಪ್ರಗತಿಪರ, ಸಮಾತಾವಾದಿ ಧರ್ಮ ಎಂದು ಹೇಳಲಾರರು. ಅಷ್ಟು ಸೈದ್ಧಾಂತಿಕ ವಿರೂಪ (ಕುರೂಪ) ತಾಳಿದೆ. ಅದೇ ರೀತಿ ಕೆಲವು ಜನ ಚಿಂತನ ಶೀಲರು ಪ್ರತಿಪಾದಿಸುವುದೇನೆಂದರೆ- ಉದಾ: ದಯಾನಂದ ಸರಸ್ವತಿಯವರು, ವೇದೋಪನೀಷತ್ತುಗಳು ಅತ್ಯಂತ ಪ್ರಗತಿಪರ, ಸಮತಾವಾದಿ ಧರ್ಮವನ್ನೇ ಪ್ರತಿಪಾದಿಸಿದವು ; ನಂತರ ಸಮಯ ಸಾಧಕರು ಆ ತತ್ತ್ವಗಳನ್ನು ರೂಪಗೆಡಿಸಿದರು ಎಂಬುದಾಗಿ, ಈ ವಾದ ಸರಿಯಿದ್ದರೂ ಇರಬಹುದು ಎನ್ನಿಸುತ್ತದೆ ಬಸವಣ್ಣನವರ ಈ ಮಾತು ಕೇಳಿದಾಗ, “ವೇದವೆಂಬುದು ನಿಮಗೆ ತಿಳಿಯದು''. ತಮ್ಮ ಹಿತವನ್ನು ಸಾಧಿಸಿಕೊಳ್ಳಬೇಕೆನ್ನುವ ಒಂದು ವರ್ಗ- ಪುರೋಹಿತ ವರ್ಗ-ಮೂಲ ತತ್ತ್ವಗಳನ್ನು ರೂಪಗೆಡಿಸಿರುವ ಸಾಧ್ಯತೆಯುಂಟು. ಆದ್ದರಿಂದ ವೈದಿಕಧರ್ಮ ಎಂದು ಬಳಸದೆ ಬ್ರಾಹ್ಮಣ ಧರ್ಮ ಎಂದು ಬಳಸಿ ಪೌರಾಣಿಕ ಮತ್ತು ಪ್ರಗತಿಪರ ಧರ್ಮಗಳ ವ್ಯತ್ಯಾಸವನ್ನು ಪ್ರತಿಪಾದಿಸುವೆ.

'ಹಿಂದು ಧರ್ಮ' ಎಂದು ಎಂದೂ ನಾನು ಬಳಸುವುದಿಲ್ಲ; ನಮ್ಮ ಪ್ರತಿಪಾದನೆಯಂತೆ ಹಿಂದು ಒಂದು ಧರ್ಮವಲ್ಲ; ಅದೊಂದು ಸಾಂಸ್ಕತಿಕ ಕಕ್ಷೆ ಮಾತ್ರ. ಈ ಸದ್ಯದಲ್ಲಿ ಪ್ರತಿಪಾದಿಸುವಂತೆ ಲಿಂಗಾಯತ ಧರ್ಮವೂ ಹಿಂದೂ ಕಕ್ಷೆಯಲ್ಲಿ ಬರುವಂಥದೆ.

೧. ಪೌರಾಣಿಕ ಧರ್ಮ ಶಾಸ್ತ್ರಾಧಾರಿತವಾಗಿದ್ದು ಅದು ಎಲ್ಲಕ್ಕೂ ಶಾಸ್ತ್ರವನ್ನೇ ಆಧಾರವಾಗಿ ಇಟ್ಟುಕೊಳ್ಳುತ್ತದೆ. ಶಾಸ್ತ್ರವು ಅನುಭವಕ್ಕೆ ವಿರುದ್ಧವಾಗಿ ಪ್ರತಿಪಾದಿಸುತ್ತಿದ್ದರೂ ಶಾಸ್ತ್ರ ವಾಕ್ಯವನ್ನೇ ಅದು ಮಾನ್ಯ ಮಾಡುತ್ತದೆ.

ಪ್ರಗತಿಪರ ಧರ್ಮವು ಅನುಭವ ಆಧಾರಿತವಾಗಿದ್ದು, ಅನುಭವದ ಒರೆಗಲ್ಲಿಗೆ ನಿಲುಕದ್ದು ಮತ್ತು ಅನುಭವ ಪ್ರಮಾಣಕ್ಕೆ ವಿರುದ್ಧವಾದುದನ್ನು ತಿರಸ್ಕರಿಸುತ್ತದೆ.

ಈಗ ಉದಾಹರಣೆಯೊಂದನ್ನು ನೋಡೋಣ, ಕೇತಕಿ ಹೂವನ್ನು ಶಿವನಿಗೆ ಅರ್ಪಿಸಬಾರದು. ಏಕೆಂದರೆ ಅದು ಶಾಪಗ್ರಸ್ತ ಹೂವು' ಎಂದು ಪೌರಾಣಿಕ ಧರ್ಮವು ಪ್ರತಿಪಾದಿಸಿದರೆ, 'ಯಾವ ವಸ್ತುವೂ ತ್ಯಾಜ್ಯವಲ್ಲ ; ಭಕ್ತರು ಹೃದಯ ತುಂಬಿ ಕೊಟ್ಟುದನ್ನು ದೇವರು ಮನಃಪೂರ್ವಕವಾಗಿ ಸ್ವೀಕರಿಸುವನು' ಎನ್ನುತ್ತದೆ ಲಿಂಗವಂತ ಧರ್ಮ, ಇದನ್ನು ಸಮರ್ಥಿಸಲು ಬಸವಣ್ಣನವರು ಒಂದು ಪವಾಡವನ್ನೇ ಮಾಡಿ ತೋರಿಸಿದ್ದಾರೆ.

ವರ್ಣಾಶ್ರಮ ವ್ಯವಸ್ಥೆಯಲ್ಲಿ ಅಂತ್ಯಜನು ಧರ್ಮಸಂಸ್ಕಾರ ವಂಚಿತನು. ಆದರೆ ಸಂಸ್ಕಾರದಿಂದ ಯಾರೂ ಗೌರವಾರ್ಹರು ಆಗಬಲ್ಲರು ಎಂದು ಕಂಬಳಿ ನಾಗಿದೇವನ ಮೂಲಕ ಬಸವಣ್ಣನವರು ಪ್ರತಿಪಾದಿಸಿದ್ದಾರೆ. ಜಾತಿ-ವೃತ್ತಿಗಳಿಗೂ ಅರ್ಹತೆಗೂ ಸಂಬಂಧವಿಲ್ಲ ಎಂದು ಈ ವಚನದಲ್ಲಿ ಪ್ರತಿಪಾದಿಸಿದ್ದಾರೆ.

ನಾಲಿಗೆ ತಾಗಿದ ರುಚಿಗೆ ಮನವೇ ಸಾಕ್ಷಿ ಸಾಲದೆ ಅಯ್ಯಾ ?
ಮಾಲೆಗಾರನ ಕೇಳಿ ನನೆ ಅರಳುವುದೆ ?
ಆಗಮವನಿದಿರಿಂಗೆ ತೋರುವುದು ಆಚಾರವೆ ಅಯ್ಯಾ?
ನಮ್ಮ ಕೂಡಲಸಂಗಮದೇವನ ಕೂಡಿದ ಕೂಟದ ಕರುಳ ಕಲೆಯನು
ಇದಿರಿಂಗೆ ತೋರುವುದು ಆಚಾರವೇ ಅಯ್ಯಾ? ಬ.ವ.


ಜೀವನವನ್ನು ಸಾಮಾಜಿಕ ಮೌಲ್ಯಗಳನ್ನು ಅನುಭವದ ಆಧಾರದ ಮೇಲೆ ನಿರ್ಧರಿಸಬೇಕೇ ವಿನಾ ಶಾಸ್ತ್ರ ವಾಕ್ಯಗಳ ಆಧಾರದ ಮೇಲಲ್ಲ ಎಂಬುದಕ್ಕೆ ಈ ವಚನ ಅತ್ಯಂತ ಸೂಕ್ತ ಉದಾಹರಣೆ.

ಒಬ್ಬ ವ್ಯಕ್ತಿ ಸಿಹಿಯನ್ನೂ ಕಹಿಯನ್ನೂ ತಿಂದಿರುತ್ತಾನೆ. ಅವನ ನಾಲಿಗೆ ಏನು ಸವಿದಿದೆ ಎಂಬುದಕ್ಕೆ ಅನುಭವಿಸಿದ ಅವನ ಮನಸ್ಸು ಸಾಕ್ಷಿ, ಬೇರೆಯವರು, 'ಇಲ್ಲ ನೀನು ತಿಂದುದು ಬೆಲ್ಲವಲ್ಲ, ಬೇವು.' ಎಂಬುದು ಎಷ್ಟು ಹಾಸ್ಯಾಸ್ಪದ ! ಶಾಸ್ತ್ರಗಳು ವರ್ಣ-ವರ್ಗ- ಜಾತಿಗಳ ವಿಂಗಡಣೆ ಮಾಡಿ ಬ್ರಾಹ್ಮಣನಷ್ಟೆ ಬ್ರಹ್ಮಜ್ಞಾನಿಯಾಗಬಲ್ಲ, ಇನ್ನಿತರರು ಆಗಲಾರರು ಎಂದು ಹೇಳಿದರೆ ಈ ಮಾತನ್ನು ನಂಬಬಹುದೆ ? ಮಾಲೆಗಾರನು ತನ್ನನ್ನು ಮಾಲೆಮಾಡಿಕೊಳ್ಳಲಿ ಎಂದು ಹೂವು ಅರಳುವುದಿಲ್ಲ, ಅಥವಾ ಅರಳಲೆ ? ಮಾಲೆ ಕಟ್ಟುವಿಯಾ ? ಎಂದು ಒಪ್ಪಿಗೆ ಕೇಳುವುದೂ ಇಲ್ಲ. ಅರಳುವುದು ಅದರ ಸಹಜ ಧರ್ಮ. ಹಾಗೆಯೇ ಅನುಭಾವಿಗಳೂ ಎಲ್ಲ ಜಾತಿ ಮತ ಪಂಥದವರಲ್ಲೂ ರೂಪುಗೊಳ್ಳುವರು. ಹಿಂದಿನ ಶಾಸ್ತ್ರಗಳಲ್ಲಿ ಉಲ್ಲೇಖವಿರಲಿಕ್ಕಿಲ್ಲ; ಈಗ ಆಗಿದ್ದಾರಲ್ಲಾ ? ಅವರ ಹೆಸರನ್ನು ತತ್ತ್ವವೇತ್ತರ ಸಾಲಿನಲ್ಲಿ ಸೇರಿಸಿಕೊಳ್ಳಿರಿ. ಹಿಂದಿನ ವೇದಾಗಮಗಳನ್ನು ತೋರಿಸಿ, ಇಂದಿನವರ ಸಾಧನೆಯನ್ನು ಅಲ್ಲಗಳೆಯಬೇಡಿ. ಪ್ರತ್ಯಕ್ಷವಾಗಿ ಇವರು ಪ್ರಮಾಣವಾಗಿ (Proof) ನಿಂತಿರುವಾಗ ಇನ್ನಾವ ಶಾಸ್ತ್ರವು ಸಾಕ್ಷಿ ಹೇಳಬೇಕು ? ಹೀಗೆ ಶಾಸ್ತ್ರಕ್ಕಿಂತಲೂ ಅನುಭವವನ್ನೇ ಪ್ರಗತಿಪರ ಧರ್ಮವು ಆಧಾರವಾಗಿ ಇಟ್ಟುಕೊಳ್ಳುವುದು. ಇದಕ್ಕೆ ಇನ್ನೊಂದು ಮಹತ್ವದ ವಚನ ಉದಾಹರಿಸಬಹುದು.

ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ.
ತರ್ಕದ ಬೆನ್ನ ಬಾರನೆತ್ತುವೆ ಆಗಮದ ಮೂಗ ಕೊಯ್ವೆ
ನೋಡಯ್ಯ ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚನ್ನಯ್ಯನ ಮನೆಯ ಮಗ ನಾನಯ್ಯ,
- ಬ.ವ.

೨. ಬ್ರಾಹ್ಮಣ ಧರ್ಮವು ಪೌರಾಣಿಕ ಧರ್ಮವಾಗಿ ಪುರಾಣಗಳ ಆಧಾರದ ಮೇಲೆ ತಾತ್ವಿಕ ನಂಬಿಕೆಗಳನ್ನು ರೂಪಿಸಿದರೆ, ಪ್ರಗತಿಪರ ಧರ್ಮವಾದ ಲಿಂಗಾಯತ ಧರ್ಮವು ಅನುಭವ, ತರ್ಕ ಮತ್ತು ತತ್ತ್ವಗಳ ಆಧಾರದ ಮೇಲೆ ನಂಬಿಕೆಗಳನ್ನು ಪರಿಷ್ಕರಿಸುತ್ತದೆ.

ಆದಿ ಪುರಾಣ ಅಸುರರಿಗೆ ಮಾರಿ
ವೇದಪುರಾಣ ಹೋತಿಂಗೆ ಮಾರಿ
ರಾಮಪುರಾಣ ರಕ್ಕಸರಿಗೆ ಮಾರಿ
ಭಾರತ ಪುರಾಣ ಗೋತ್ರಕ್ಕೆ ಮಾರಿ
ಎಲ್ಲ ಪುರಾಣ ಕರ್ಮಕ್ಕೆ ಮೊದಲು
ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ
ಕೂಡಲಸಂಗಮದೇವಾ.
- ಬ.ವ.

ವೇದ ಪುರಾಣಗಳು ಯಜ್ಞ ಯಾಗಗಳ ರೂಪದಲ್ಲಿ ಹೋತ, ಅಶ್ವ ಮುಂತಾದ ಪ್ರಾಣಿಗಳನ್ನು ಬಲಿಗೊಟ್ಟರೆ ಅಷ್ಟು ಪುಣ್ಯ-ಇಷ್ಟು ಪುಣ್ಯ ಎಂದು ಫಲಪ್ರಾಪ್ತಿ ಬಗ್ಗೆ ಬಣ್ಣಿಸುವುದನ್ನು ಬಸವಣ್ಣನವರು ಪ್ರಶ್ನಿಸುತ್ತಾರೆ. ಜೀವ ಹಿಂಸೆ ಮಾಡಿದರೆ ಪುಣ್ಯ ಬರುವುದೇ ? ಎಂದು ಚಕಿತರಾಗಿ ಪ್ರಶ್ನಿಸುತ್ತಾರೆ. ಅಶ್ವದಂತಹ ಉಪಯುಕ್ತ, ನಿರಾಯುಧವಾದ, ಮನುಷ್ಯನ ನಿಷ್ಠಾವಂತ ಸೇವಕನಾದ ಪ್ರಾಣಿಯನ್ನು ಕೊಲ್ಲಬಹುದೆ ?” ಎಂದರೆ "ಶಾಸ್ತ್ರಗಳು ಹೇಳಿವೆಯಲ್ಲ; ಆದ್ದರಿಂದ ಶಾಸ್ತ್ರ ವಾಕ್ಯದಂತೆ ನಡೆಯುವ ಕಾರಣ ನಮಗೆ ಪಾಪ ಬರದು'' ಎನ್ನುವವರನ್ನು ಕಂಡು ಕನಲಿ ಕೇಳುತ್ತಾರೆ. “ನಾನು ಕೊಲ್ಲಲಿಲ್ಲ; ನಾನು ಹಾಕಿದ ಹಗ್ಗದ ಕುಣಿಕೆ ಕೊ೦ದಿತು ಎಂಬಷ್ಟೇ ಹಾಸ್ಯಾಸ್ಪದವಲ್ಲವೇ ?'' ಎಂದು. ಆದ್ದರಿಂದ ತತ್ತ್ವಜ್ಞಾನದ ಹಿನ್ನೆಲೆಯಲ್ಲಿ ತರ್ಕದ ಆಧಾರದ ಮೇಲೆ ಸತ್ಯಾರ್ಥ ನಿರ್ಣಯ ಮಾಡಬೇಕೇ ವಿನಾ ಶಾಸ್ತ್ರ-ಪುರಾಣಗಳ ಆಧಾರದ ಮೇಲೆ ಅಲ್ಲ ಎಂಬುದು ಪ್ರಗತಿಪರ ಧರ್ಮದ ನಿಲುವು. ಪುರಾಣಗಳು ವ್ಯಕ್ತಿಯ ವಿಚಾರಶಕ್ತಿಯನ್ನೇ ಮಂಕುಗೊಳಿಸುತ್ತವೆ. ಅವನ ಬೌದ್ಧಿಕ ಅಭಿರುಚಿ (Intellectual taste) ಯನ್ನೇ ಕೆಡಿಸುತ್ತವೆ. ಅಕರಾಳ ವಿಕರಾಳ ದೇವತೆಗಳನ್ನು ಸೃಷ್ಟಿಮಾಡಿ, ಅವುಗಳನ್ನು ವೈಭವೀಕರಿಸಿ, ಅವುಗಳನ್ನೇ ದೇವರೆಂದು ಪೂಜಿಸಲು ಕಲಿಸಿ, ನಿಜ ದೇವರ ಮಹತ್ವವನ್ನೇ ಕಳೆಯುತ್ತವೆ. ಅದಕ್ಕಾಗಿಯೇ ಶರಣರು ಪುರಾಣವೆಂಬುದು ಪುಂಡರ ಗೋಷ್ಠಿ'' ಎಂಬುದಾಗಿ ಕರೆದು ಪುರಾಣ ಶ್ರವಣವನ್ನೇ ನಿಷೇಧಿಸಿದರು.

೩. ಪೌರಾಣಿಕ ಧರ್ಮವು ಶಾಸ್ತ್ರ ದಾಸ್ಯದೊಡನೆ ಮತೀಯ ದೃಷ್ಟಿಯನ್ನು ಬೆಳೆಸಿ ಮತಾ೦ಧತೆಯನ್ನು ಪ್ರೋತ್ಸಾಹಿಸದೆ, ಪ್ರಗತಿಪರ ಧರ್ಮವು ಮತಿಯ (Intellectual) ದೃಷ್ಟಿಯನ್ನು ಬೆಳೆಸುತ್ತದೆ. ಹಿಂದೂ ದೇಶದ ಇತಿಹಾಸದಲ್ಲಿ ಶೈವ-ವೈಷ್ಣವ- ಜೈನ ಮತಗಳವರ ನಡುವೆ ನಡೆದ ತಿಕ್ಕಾಟ ಘರ್ಷಣೆ ನೋಡಿದರೆ ಆಶ್ಚರ್ಯವೆನಿಸುತ್ತದೆ. ಜಿನಾಲಯಗಳನ್ನು ಶೈವ-ವೈಷ್ಣವ ಮಂದಿರಗಳಾಗಿ ಪರಿವರ್ತಿಸುವುದನ್ನು, ಶಿವಾಲಯಗಳನ್ನು ಜಿನಾಲಯಗಳನ್ನಾಗಿ ಮಾಡುವುದನ್ನು ಕಾಣಬಹುದಾಗಿದೆ.

ಧರ್ಮಗುರು ಬಸವಣ್ಣನವರು ಈ ಆಲಯಗಳ ತಂಟೆಗೇ ಹೋಗದೆ ವೈಯಕ್ತಿಕ ಸಾಧನೆಯಿಂದ ದೇಹವನ್ನು ದೇವಾಲಯ ಮಾಡುವ, ಸಮಾಜ ಸಂಘಟನೆಗೆ-ಸಂಸ್ಕಾರಕ್ಕೆ ಅನುಭವ ಮಂಟಪ ಕಟ್ಟುವ ಶ್ರೇಷ್ಟವಿಧಾನ ಅನುಸರಿಸಿದರು. ಹೀಗಾಗಿ ಪೌರಾಣಿಕ ಧರ್ಮದಿಂದ ಉಂಟಾಗುವ ಮತಾಂಧತೆಯನ್ನು ನಿವಾರಿಸಿದರು.
ಇಲ್ಲಿ ಒಂದು ಸಂದೇಹವನ್ನು ಪ್ರಾಜ್ಞರು ಎತ್ತಬಹುದು. ಕೆಲವು ವಚನಗಳಲ್ಲಿ, ಚನ್ನಬಸವಣ್ಣನವರು ಹೀಗೆ ಹೇಳಿದ್ದಾಗಿ ಉಲ್ಲೇಖವಾಗಿದೆ.

ಷಟಸ್ಥಲದವರ ಧಿಕ್ಕರಿಸುವ ಜನರ
ಸೀಳುವೆನೆಂಬುವ ವ್ರತವೆ ಎಂಟನೆಯ ಆಚಾರ.
ಲಿಂಗದ್ರೋಹವ ಮಾಡಿದವನ ಪ್ರಾಣವ ಛೇದಿಸುವುದೆ ನಾಲವತ್ತೈದನೆಯ ಆಚಾರ.
ಜಂಗಮ ದ್ರೋಹವ ಮಾಡಿದವನ ಶಿರವ ನೀಡಾಡುವುದೆ ನಾಲವತ್ತಾರನೆಯ ಆಚಾರ

ಭಿನ್ನ ವಿಚಾರದವರ ಪ್ರಾಣವನ್ನೇ ತೆಗೆಯಬೇಕು ಎಂಬ ಮತಾಂಧತೆಯ ಮಾತುಗಳು ಇಲ್ಲಿ ಕಾಣಬಹುದು; ಈ ವಚನವಾಕ್ಯ ಮತಾಂಧ ಅನುಯಾಯಿಗಳಿಂದ ಸೇರಿಸಲ್ಪಟ್ಟುದೇ ವಿನಾ ಆದಿ ಶರಣರದಲ್ಲ ಎಂದು ನನಗೆ ಅನ್ನಿಸುತ್ತದೆ. ಧರ್ಮವು ಜೀವಂತಿಕೆಯನ್ನು ಕಳೆದುಕೊಂಡಾಗ ಅದು ಮಡುಗಟ್ಟಿ, ಜಡಗಟ್ಟಿ ಅನುಯಾಯಿಗಳನ್ನು ಮತ್ತು ಪರಮತೀಯರನ್ನು ಆಕರ್ಷಿಸಲು ಅಸಮರ್ಥವಾದಾಗ ಮತಾಂಧತೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬಯಸುತ್ತದೆ. ಆದಿ ಶರಣರ ಕಾಲದಲ್ಲಿ ಅದೇ ಆಗ ಅರಳಿ, ಪೂರ್ಣ ಜೀವಂತಿಕೆಯಿಂದ ಮುಮುಕ್ಷುಗಳನ್ನು ಆಕರ್ಷಿಸುತ್ತಿದ್ದ ಬಸವ ಧರ್ಮ ಭಿನ್ನ ಮತೀಯರನ್ನು ಕೊಲ್ಲುವ ಮಟ್ಟಕ್ಕೆ ಇಳಿದಿರಲಿಲ್ಲ. ಇಂದಿನವರೆಗೂ ಎಂದೂ ಇಳಿಯಲಿಲ್ಲ. ಅಂತ ತಿಳಿದೇ ಸತ್ಯದ ಸಾಧಕರು, ಶೋಧಕರು ಆಕರ್ಷಿತರಾಗಿ ಬಂದರು. ಚನ್ನಬಸವಣ್ಣನ ವಚನಗಳಲ್ಲಿ (ಸೇರಿಸಲ್ಪಟ್ಟು) ಕಾಣಬರುವ ಮತಾಂಧತೆ ಆಗ ಇದ್ದಿದ್ದರೆ ಅಲ್ಲಮ ಪ್ರಭುವಿನಂತಹ ಮಹಾವಿಚಾರವಾದಿ, ಸಿದ್ಧರಾಮೇಶ್ವರರಂತಹ (ಹೆಣ್ಣು ಹೃದಯದ) ಮಹಾಸಿದ್ಧಪುರುಷ ಈ ಧರ್ಮವನ್ನು ಸ್ವೀಕರಿಸಲು ಸಾಧ್ಯವಿರಲಿಲ್ಲ. ಶರಣರದು ಮನವರಿಕೆ ಮಾಡಿಕೊಟ್ಟು ಪರಿವರ್ತಿಸುವ ವಿಧಾನವೇ ವಿನಾ ಭಿನ್ನಮತೀಯರನ್ನು ಸಂಹರಿಸುವ ವಿಧಾನವಲ್ಲ.

೪. ಲಿಂಗಾಯತ ಧರ್ಮವು ಬೌದ್ಧಿಕ ಪ್ರಾಮಾಣಿಕತೆಗೆ ಒತ್ತುಕೊಡುವ ಧರ್ಮ, ಸಂಪ್ರದಾಯ ಶ್ರದ್ಧೆಯಿಂದ ಮತಾಂಧತೆಯನ್ನು ಪೋಷಿಸುವ ಧರ್ಮವಲ್ಲ. ಸತ್ಯವನ್ನು ತಿಳಿದ ಬಳಿಕ ಅದು ಎಷ್ಟೇ ಕಹಿಯಾಗಿ ಇದ್ದರೂ ಅದನ್ನು ಸ್ವೀಕರಿಸಬೇಕೆಂದು ಹೇಳುತ್ತದೆ. ತಾನು ನಂಬಿದುದನ್ನು ಸಂಪ್ರದಾಯದಲ್ಲಿ ರೂಢಿಯಲ್ಲಿರುವುದನ್ನು ಸತ್ಯವೆಂದು ಸಾಧಿಸುವ ಹಟಮಾಡದೆ, ಸತ್ಯವನ್ನು ಸ್ವೀಕರಿಸುವ ಬೌದ್ಧಿಕ ಪ್ರಾಮಾಣಿಕತೆ ಹೊಂದಿದೆ.

ಅದೇ ರೀತಿ, ಸತ್ಯವನ್ನು ಪ್ರತಿಪಾದಿಸುವಾಗ ಅದು ಎಷ್ಟೇ ಕಟುವಾಗಿದ್ದರೂ ಸತ್ಯವನ್ನೇ ಪ್ರತಿಪಾದಿಸಬೇಕೆಂದು, ಇನ್ನೊಬ್ಬರ ಮನಸ್ಸನ್ನು ರಂಜಿಸುತ್ತದೆ ಎಂದು ಸುಳ್ಳನ್ನು ಹೇಳಬಾರದು ಎಂದು ಬಸವ ಧರ್ಮವು ಪ್ರತಿಪಾದಿಸುತ್ತದೆ. ''ಕೂಡಲ ಸಂಗನ ಶರಣರ ವಚನ ಬೇವ ಸವಿದಂತೆ' ಅದು ಕಹಿಯಿದ್ದರೂ ಹಿತವಾಗಿರುತ್ತದೆ ಎಂದೇ ಹೇಳುತ್ತದೆ.

೫. ಪ್ರಗತಿಪರ ಧರ್ಮವು ವಿಶಾಲ ದೃಷ್ಟಿಯನ್ನು ಬೆಳೆಸಿದರೆ ಪೌರಾಣಿಕ ಧರ್ಮವು ಕೂಪ ಮಂಡೂಕ ವೃತ್ತಿಯನ್ನು ಬೆಳೆಸುತ್ತದೆ. ಹಳತಾದುದು, ಸಂಪ್ರದಾಯದಲ್ಲಿರುವುದೇ ಪರಮ ಸತ್ಯವೆಂಬ ಕೂಪ ಮಂಡೂಕ ವೃತ್ತಿ ಮೂಢ ಅನುಯಾಯಿಗಳಲ್ಲಿ ಬೆಳೆದರೆ ಪ್ರಗತಿಪರ ಧರ್ಮವು ಹೊಸ ಅನ್ವೇಷಣೆಗಳನ್ನು ಸ್ವಾಗತಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಧಾರ್ಮಿಕ ಶಾಸ್ತ್ರಗಳಿಗೆ ಜೋತು ಬೀಳದೆ ತತ್ತ್ವಜ್ಞಾನ-ತರ್ಕ-ಅನುಭವಗಳ ಮೇಲೆ ಸತ್ಯವನ್ನು ನಿರ್ಧರಿಸಲು ಪ್ರಯತ್ನಿಸುವುದು.

ಶಾಸ್ತ್ರ ದಾಸ್ಯವು ಬದಲಾದ ಪರಿಸರದಲ್ಲಿ ಅನುಯಾಯಿಗಳಿಗೆ ಬಹಳ ಬಾಧೆಯನ್ನು ಉಂಟು ಮಾಡುವುದನ್ನು ಕಾಣಬಹುದು. ಪ್ರಗತಿಪರ ಧರ್ಮವು ವಿಚಾರ ಆಚಾರ ಸ್ವಾತಂತ್ರ್ಯಗಳಿಗೆ ಅವಕಾಶ ನೀಡುತ್ತದೆ.

೬. ಪ್ರಗತಿಪರ ಧರ್ಮವು ಜ್ಞಾನ ಪ್ರಧಾನವಾಗಿದ್ದರೆ, ಪೌರಾಣಿಕ ಧರ್ಮವು ಕರ್ಮ ಪ್ರಧಾನವಾಗಿರುತ್ತದೆ. ನಾವು ಮಾಡುವ ಪ್ರತಿಯೊಂದು ಆಚರಣೆಗಳನ್ನು ತರ್ಕದ ಒರೆಗೆ ಹಚ್ಚಿ ಆಚರಣೆಯಲ್ಲಿರುವ ಅರ್ಥವನ್ನು ಅರಿತು ಅಳವಡಿಸಿಕೊಳ್ಳಬೇಕೆಂದು ಹೇಳುವುದು.

ಒಲೆಯ ಬೂದಿ ಬಿಲಿಯಲು ಬೇಡ
ಒಲಿದಂತೆ ಪೂಸಿಕೊಂಡಿಪ್ಪುದು
ಪೂಸಿ ಏನುಫಲ, ಮನದಲ್ಲಿ ಲೇಸಿಲ್ಲದನ್ನಕ್ಕ ?
ಒಂದನಾಡ ಹೋಗಿ ಒಂಭತ್ತನಾಡುವ
ಡಂಭಕರ ಮೆಚ್ಚ ನಮ್ಮ ಕೂಡಲಸಂಗಮದೇವ
-೧೪೪

ವೈದಿಕ ಧರ್ಮವು ಅಧ್ಯಾತ್ಮಿಕ ಆಚರಣೆಗಳಿಗಿಂತಲೂ ಹೋಮ- ಹವನ, ಯಜ್ಞ-ಯಾಗ, ನವಗ್ರಹ ಪೂಜೆ ಮುಂತಾದ ಕರ್ಮಗಳಿಗೇ ಹೆಚ್ಚು ಒತ್ತು ಕೊಡುವುದನ್ನು ಕಾಣಬಹುದು.

ಆಚರಣೆಗಳು ವಿಧಿ-ವಿಧಾನಗಳು ಎಲ್ಲ ಧರ್ಮಗಳಲ್ಲಿಯೂ ಇರುತ್ತದೆ. ಆಚರಣೆ ಇಲ್ಲದುದು ಧರ್ಮವೇ ಅಲ್ಲ. ಆದರೆ ಆಚರಣೆಗಳು ಅಧ್ಯಾತ್ಮಿಕವಾಗಿ, ಅರ್ಥಪೂರಿತವಾಗಿ ಇರಬೇಕು. ಹಿಂದುಗಳ ಹಬ್ಬಗಳನ್ನು ಗಮನಿಸಿದರೆ ಬರೀ ನೀರು ಎರೆದುಕೊಳ್ಳುವುದು, ಮನೆಯಲ್ಲಿ ಹತ್ತಾರು ದೇವತೆಗಳ ಪೂಜೆ ಮಾಡುವುದು, ಆ ಮೇಲೆ ಬಗೆಬಗೆಯ ಅಡಿಗೆ ಮಾಡಿಕೊಂಡು ಮನೆಮಂದಿ ಉಣ್ಣುವುದನ್ನು ಕಾಣುತ್ತೇವೆ. ಗುಡಿಗಳಿಗೆ ಹೋದರೂ ಮನಸ್ಸು ಬಂದಾಗ ಹೋಗಿ ಗಂಟೆಬಾರಿಸಿ, ಕಾಯಿ ಒಡೆದು ಗದ್ದಲ ಹಾಕಿ ಬಂದುಬಿಡುವರು. ಇವರ ಹಬ್ಬಗಳು ಸಾಮಾಜಿಕ ಸಂಘಟನೆಗೆ ಯಾವುದೇ ರೀತಿ ಸಹಕಾರಿಯಾಗವು.

ಮುಸ್ಲಿಮರ ಹಬ್ಬಗಳಂದು ಅವರು ಮನೆಯಲ್ಲಿ ಏನು ಉಣ್ಣುವರೋ ಬಿಡುವರೋ ಒಂದೇ ಸಮಯದಲ್ಲಿ ಎಲ್ಲರೂ ಒಂದು ಸ್ಥಳದಲ್ಲಿ ಸೇರಿ ಶಿಸ್ತಿನಿಂದ ಪ್ರಾರ್ಥಿಸಿ ಭ್ರಾತೃಭಾವನೆ ಪ್ರದರ್ಶಿಸುವುದನ್ನು ನೋಡಿದರೆ ಆಶ್ಚರ್ಯವೆನಿಸುತ್ತದೆ, ಯಾವುದೇ ಆಚರಣೆ ವೈಯಕ್ತಿಕ ಆತ್ಮವಿಕಾಸಕ್ಕೆ, ಸಾಮೂಹಿಕ ಶಿಸ್ತಿಗೆ, ಸಮಾಜ ಸಂಘಟನೆಗೆ ಸಹಕಾರಿಯಾದರೆ ಒಳ್ಳೆಯದು. ಇಲ್ಲವಾದರೆ ಆಚರಣೆಗಳು ವ್ಯಕ್ತಿಗೆ ಹೊರೆಯಾಗುವುವು.

ವಿಧಿವಿಧಾನಗಳು ಶರೀರದ ಕಸರತ್ತುಗಳಾಗದೆ ಮಾನಸಿಕ ಉಲ್ಲಾಸಕ್ಕೆ ಕಾರಣವಾಗಬೇಕು. ಪ್ರಗತಿಪರ ಧರ್ಮವು ಅಂಥ ಆತ್ಮವಿಕಾಸದ ಆಚರಣೆಗಳನ್ನು ಬೋಧಿಸುತ್ತದೆ. ಅಂತರಂಗದ ವಿಕಾಸಕ್ಕೆ ಕಾರಣವಾಗುವ ಆಚರಣೆಗಳನ್ನು ಪ್ರೋತ್ಸಾಹಿಸುವುದೇ ವಿನಾ ಬಹಿರಂಗದ ಪರಿಶ್ರಮವನ್ನಲ್ಲ. ಪೂಜೆ-ಪ್ರಾರ್ಥನೆ-ಧ್ಯಾನ ಮುಂತಾದುವು ಈ ವಿಕಾಸಕ್ಕೆ ಕಾರಣವಾಗುತ್ತವೆ. ಗಿಡಗಳನ್ನು ಆಶ್ರಯಿಸಿಕೊಂಡು ಕೆಲವು ಬಳ್ಳಿಗಳು ಬೆಳೆಯುತ್ತವೆ ಸುಂದರವಾದ ಹೂವು ಅರಳಿಸಿದಾಗ ಆ ಗಿಡದ ಕಾಂಡವು ಸುಂದರವಾಗಿ ಕಾಣುತ್ತವೆ. ಮತ್ತೆ ಕೆಲವು ಬಳ್ಳಿಗಳು ಗಿಡವನ್ನು ಬರೀ ಆಶ್ರಯಿಸಿಕೊಳ್ಳುವುದಿಲ್ಲ. ಗಿಡಗಳ ಕಾಂಡವನ್ನೇ ಕೊರೆಯತೊಡಗುತ್ತವೆ. ಪೂಜೆ-ಪ್ರಾರ್ಥನೆ- ಧ್ಯಾನದಂತಹವು
ಧರ್ಮದ ವೃಕ್ಷವನ್ನು ಅಲಂಕರಿಸುವ ಸುಂದರ ಬಳ್ಳಿಗಳಾದರೆ ಕರ್ಮಠ ಆಚರಣೆಗಳು ಧರ್ಮದ ಕಾಂಡವನ್ನೇ ಕೊರೆಯುತ್ತವೆ. ಅದರಲ್ಲೂ ಡಾಂಭಿಕತೆಯಂತೂ ಧರ್ಮದ ಪರಮ ಶತ್ರು. ಧರ್ಮಗುರು ಬಸವಣ್ಣನವರು ಹೇಳುತ್ತಾರೆ.

ಪಸಾರಕ್ಕೆ ಅನುವಿಲ್ಲ. ಬಂದ ತತ್ಕಾಲಕ್ಕುಂಟು
ಹರಸಿ ಮಾಡುವುದು ಹರಕೆಯ ದಂಡ
ನೆರಹಿ ಮಾಡುವುದು ಡಂಭಿನ ಭಕ್ತಿ


ಕೆಲವು ಮಹಾಧರ್ಮವಂತರೆಂದು ಹೊಗಳಿಸಿಕೊಳ್ಳಲು ಪೂಜೆಗಳನ್ನು ದಾಸೋಹ ಸಮಾರಾಧನೆ ಮಾಡುವರು. ಬೇರೆ ಸಮಯದಲ್ಲಿ ಹಸಿದು ಬಂದವರಿಗೆ ಒಂದು ತುತ್ತು ಉಣಲಿಕ್ಕುವುದಿಲ್ಲ. ಶರಣರು ಪ್ರದರ್ಶಿಸಿಕೊಳ್ಳಲು ಮಾಡದೆ, ಅಗತ್ಯವನ್ನು ಅನುಸರಿಸಿ ಮಾಡುವರು. ಇದಕ್ಕೆ ಸಮಯಾಚಾರ ಎನ್ನುವರು.

ಡಾಂಭಿಕತೆ ಮತ್ತು ಮತಾಂಧತೆಗಳು ಧರ್ಮವನ್ನು ಉಳಿಸಿ, ಬೆಳೆಸುವುದಕ್ಕಿಂತಲೂ ಅದರ ನಾಶಕ್ಕೆ ಕಾರಣವಾಗುತ್ತವೆ. ಅದನ್ನು ಹೀಗೆ ಹೇಳಬಹುದು. ಸಂಗೀತವು ನಾದಯೋಗಿಯಲ್ಲಿ ಹುಟ್ಟಿ, ಗಾಯಕರಿಂದ ವಿದ್ವಾಂಸರಿಂದ ಬೆಳೆದು, ಕೊರವರಲ್ಲಿ ಸಾಯುವುದು. (ಇಲ್ಲಿ ಕೊರವರು ಎಂದರೆ ಜಾತಿವಾಚಕವಲ್ಲ. ಮನಸ್ಸಿಗೆ ಬಂದಂತೆ ಕಿರುಚುತ್ತ ತಿರುಗುವವರು ಎಂದರ್ಥ.) ನೃತ್ಯವಿದ್ಯೆಯು ನಾಟ್ಯಾಚಾರ (ಶಿವ) ನಿಂದ ಹುಟ್ಟಿ ನರ್ತಕರಲ್ಲಿ ಬೆಳೆದು ಕ್ಯಾಬರೆ ಕುಣಿತದವರಲ್ಲಿ ಸಾಯುವುದು. ಅದೇ ರೀತಿ ಧರ್ಮವು ಸಹ ಪ್ರವಾದಿಗಳಿಂದ ಹುಟ್ಟಿ, ಪಂಡಿತರು- ದಾರ್ಶನಿಕರಲ್ಲಿ ಬೆಳೆದು, ಡಾಂಭಿಕರು ಮತಾಂಧರಿಂದ ಸಾಯುವುದು. ಸಾಮಾನ್ಯವಾಗಿ ಡಾಂಭಿಕರು ಕತ್ತೆಯು ಸಕ್ಕರೆ ಮೂಟೆ ಹೊತ್ತಂತೆ ಧರ್ಮಲಾಂಛನಗಳನ್ನು ಹೊರು(ಧರಿಸು)ವರು, ಸಕ್ಕರೆಯ ಸವಿಯನ್ನು ಕತ್ತೆಯು ಸವಿಯಲಾರದೆಂತೋ ಹಾಗೆ ಇವರು ಸಹ ಅನುಭಾವದ ಸೊಗಸನ್ನು ಸವಿಯರು.

ಪ್ರಗತಿಪರ ಧರ್ಮವು ವ್ಯಕ್ತಿಯಲ್ಲಿ ಪ್ರಯತ್ನಶೀಲತೆಯನ್ನು ಬೆಳೆಸುವುದು. ಪೌರಾಣಿಕ ಧರ್ಮವು ವ್ಯಕ್ತಿಯನ್ನು ವಿಧಿವಾದ (ಅದೃಷ್ಟವಾದಿ) ಯನ್ನಾಗಿ ಮಾಡುವುದು. ಪ್ರಯತ್ನಶೀಲತೆಯನ್ನು ಕುಂಠಿತಗೊಳಿಸುವುದು, ಗ್ರಹಬಲ, ತಾರಾಬಲ, ಅವುಗಳ ಮುಂದೆ ಮನುಷ್ಯನು ನಿಸ್ಸಹಾಯಕ ; ಜೀವನವು ಪೂರ್ವ ನಿರ್ಧಾರಿತ, ಹಣೆ ಬರಹದಲ್ಲಿ ಇದ್ದಂತೆ ಆಗುತ್ತದೆ. ಈ ಬಗೆಯ ನಿರುತ್ಸಾಹವನ್ನು ಪೌರಾಣಿಕ ಧರ್ಮವು ಬೋಧಿಸಿದರೆ ಪ್ರಗತಿಪರ ಧರ್ಮವು ವ್ಯಕ್ತಿಯು ತನ್ನ ಮುಂಬಾಳನ್ನು ರೂಪಿಸಿಕೊಳ್ಳಲು ಸಾಕಷ್ಟು ಅವಕಾಶವಿದೆ “ಹಿಂದಣ ಜನನವೇನಾದೊಡಾಗಲೀ ಮುಂದೆ ನೀ ಕರುಣಿಸಾ", "ಕೂಡಲ ಸಂಗಮ ದೇವರ ಪೂಜಿಸಿದ ಫಲ ಅಂಗೈಯ ಮೇಲೆ" ಪ್ರಯತ್ನಕ್ಕೆ ಫಲವು ಇದ್ದೇ ಇರುತ್ತದೆ ಎಂಬುದನ್ನು ಪ್ರತಿಪಾದಿಸುತ್ತದೆ. ಪರಮಾತ್ಮನ ಕೃಪೆಯಾದರೆ ಹಿಂದಿನ ಜನ್ಮ ನಿವೃತ್ತಿಯಾಗುತ್ತದೆ. ಎಂದು ಬೋಧಿಸುತ್ತದೆ. ಹೀಗೆ ವ್ಯಕ್ತಿಯನ್ನು ಪ್ರಯತ್ನಶೀಲನನ್ನಾಗಿ ಮಾಡುತ್ತದೆ.

ಪೌರಾಣಿಕ ಧರ್ಮವು ಭೀತಿಯ ತಳಹದಿಯ ಮೇಲೆ ನಂಬಿಕೆಯನ್ನು ಬೆಳೆಸಿದರೆ ಪೌರಾಣಿಕ ಧರ್ಮವು ಆತ್ಮವಿಶ್ವಾಸದ ತಳಹದಿಯ ಮೇಲೆ ನಂಬಿಕೆಯನ್ನು ಬೆಳೆಸುತ್ತದೆ. ನಾಗಪೂಜೆ, ನವಗ್ರಹ ಪೂಜೆ, ಗಣಪತಿ-ಸರಸ್ವತಿ- ಲಕ್ಷ್ಮಿ ಮುಂತಾದ ದೇವತೆಗಳ ಪೂಜೆಗಳಲ್ಲಿ ಭಯವೇ ಜಾಸ್ತಿಯಾಗಿರುತ್ತದೆ. ಇವುಗಳನ್ನು ಪೂಜಿಸದಿದ್ದರೆ ಏನು ಕೆಡುಕಾಗುವುದೋ ಎಂಬ ಭೀತಿಯೇ ಪೂಜೆಗೆ ಪ್ರೇರಣೆ, ಪ್ರಗತಿಪರ ಧರ್ಮವು ಈ ರೀತಿ ಭಯವನ್ನು ಬೋಧಿಸದೆ “ದೇವರು ಸೃಷ್ಟಿಕರ್ತ, ಮಹಾದಾನಿ, ಕರುಣಾಶಾಲಿ, ಪ್ರೇಮ ಸ್ವರೂಪ, ಸೃಷ್ಟಿಯನ್ನು ಮತ್ತು ನಮ್ಮನ್ನು ಸೃಷ್ಟಿಸಿದ್ದಕ್ಕೆ ಕೃತಜ್ಞತೆಯಿಂದ ಅವನನ್ನು ಸ್ಮರಿಸಬೇಕು. ನಾವು ಅವನಿಗೆ ಕೊಡುವುದಕ್ಕಿಂತಲೂ ಹೆಚ್ಚು ದೇವನು ನಮಗೆ ಕೊಡುವನು. ಅವನನ್ನು ಪೂಜಿಸುವುದು ನಮ್ಮ ಕರ್ತವ್ಯ' ಈ ರೀತಿಯಾಗಿ ಬೋಧಿಸುತ್ತದೆ. ಹೀಗಾಗಿ, ಆತ್ಮವಿಶ್ವಾಸ ಮೊಳೆಯುತ್ತದೆ ; ಭೀತಿಯಳಿದು ಶಾಂತಿ ಸಂತೃಪ್ತಿ ಅಳವಡುತ್ತದೆ. ಮೂಢ ಭಕ್ತಿ ಭಯದಿಂದ ತೊಳಲುವವನು ಅಜ್ಞಾನಿಯಾದರೆ ಅರಿತು ಪೂಜಿಸುವವನು ಸುಜ್ಞಾನಿಯಾಗುತ್ತಾನೆ. ಮೂಢನ ಶ್ರದ್ಧೆ ಒಂದು ದೇವತೆಯಿಂದ ಇನ್ನೊಂದು ದೇವತೆಗೆ ಬದಲಾಗುತ್ತಿದ್ದರೆ, ಜ್ಞಾನಿಯು ಭಕ್ತಿ ಕರ್ತನಲ್ಲಿ ಅಚಲವಾಗಿ ನಿಲ್ಲುತ್ತದೆ.

ಪೌರಾಣಿಕ ಧರ್ಮವು ವ್ಯಕ್ತಿಗಳಲ್ಲಿರುವ ವಿಚಾರ ಭಿನ್ನತೆಯನ್ನು ಗೌರವಿಸುತ್ತೇನೆ, ಅದೇ ಸಮನ್ವಯ ಎಂದು ಪ್ರತಿಪಾದಿಸಿ ಜನರನ್ನು ಅವರವರ ಅಜ್ಞಾನದಲ್ಲಿಯೇ ಇಡುತ್ತದೆ. ''ಯಾರ ಮನಸ್ಸಿಗೂ ನೋವುಂಟು ಮಾಡಬಾರದು; ಅವರವರ ನಂಬಿಕೆ ಅವರದು.'' ಎಂದು ಅಜ್ಞಾನಿಗಳನ್ನು, ಮೂಢರನ್ನು ಅವರ ಮೌಡ್ಯತೆಯ ಕೆಸರಿನಲ್ಲಿ ಅವರು ಸಿಕ್ಕಿ ನಾಶವಾಗುವಂತೆ ಮಾಡುತ್ತದೆ. ಪ್ರಗತಿಪರ ಧರ್ಮವು ಕಟುವಾದ ಮಾತುಗಳನ್ನಾಡಿಯೂ, ವೈದ್ಯನು ರೋಗಿಗೆ ಶಸ್ತ್ರಚಿಕಿತ್ಸೆ ಮಾಡುವಂತೆ ಅತ್ಯಂತ ಕಳಕಳಿಯಿಂದ ಮೂಢನ ಮೌಡ್ಯತೆಯನ್ನು ಕಳೆದು ಅವನನ್ನು ವೈಚಾರಿಕ ಮಟ್ಟಕ್ಕೆ ಏರಿಸಲು ಪ್ರಯತ್ನಿಸುತ್ತದೆ. ತನ್ನ ಧರ್ಮದ ಅನುಯಾಯಿಗಳೆಲ್ಲ ಏಕರೂಪದ ವೈಚಾರಿಕ ಆಚಾರ-ವಿಚಾರಗಳಿಂದ ಪೌಢಭಕ್ತರಾಗಬೇಕೆಂಬ ಕಳಕಳಿ ಪ್ರಗತಿಪರ ಧರ್ಮದ್ದು.

ಗೊಂದಲಗಳು ಪ್ರಗತಿಪರ ಧರ್ಮವಾದ ಲಿಂಗಾಯತ ಧರ್ಮದಲ್ಲಿ ಇಲ್ಲ. ಶಿವನ ಬಗ್ಗೆ ಗೌರವವು ವ್ಯಕ್ತವಾದರೂ ಅವನನ್ನು ದೇವರು ಎನ್ನದೆ ಸೃಷ್ಟಿಕರ್ತನನ್ನು ಮಾತ್ರ ದೇವರು ಎನ್ನುತ್ತದೆ ವಚನಶಾಸ್ತ್ರ ಅವನಿಗೆ ಪರಮೋಚ್ಛ ಸ್ಥಾನವನ್ನು ನೀಡುತ್ತದೆ. ಅದೇ ನಿಜವಾದ ವೇದ ಸಂದೇಶ ಎಂದು ಕೂಡ ಪ್ರತಿಪಾದಿಸುತ್ತಾರೆ ವಿಶ್ವಗುರು ಬಸವಣ್ಣನವರು ಮತ್ತು ದಯಾನಂದ ಸರಸ್ವತಿಯವರು.

ಕೌಪ ಕಾಷಾಯಂಬರವ ಕಟ್ಟಿ,
ಮಂಡೆ ಬೋಳಾದಡೇನಯ್ಯಾ,
ಎನ್ನಲ್ಲಿ ನಿಜವಿಲ್ಲದನ್ನಕ್ಕೆ ?
ಹೊನು ಹೆಣ್ಣು ಮಣ್ಣು ತ್ರಿವಿಧವ ತೊರೆದಡೇನಯ್ಯಾ
ಮನದಲ್ಲಿ ವ್ರತಿಯಾಗದನ್ನಕ್ಕ ?
ಹಸಿವು ತೃಷೆ ವ್ಯಸನಾದಿಗಳ ಬಿಟ್ಟಡೇನಯ್ಯಾ
ಅರ್ಥದಿಚ್ಛೆ ಹಿಂಗದನ್ನಕ್ಕ ?
ಆನು ಜಂಗಮವೆ ?
ಆನು ಹಿರಿಯನಾದನಲ್ಲದೇ ಆನು ಜಂಗಮವೆ
ಒಡಲಿಲ್ಲದಾತ ಬಸವಣ್ಣ, ಪ್ರಾಣವಿಲ್ಲದಾತ ಬಸವಣ್ಣ
ಎನ್ನ ಬಸವಣ್ಣನಾಗಿ ಹುಟ್ಟಿಸದೆ
ಪ್ರಭುವಾಗಿ ಏಕೆ ಹುಟ್ಟಿಸಿದೆ ಗುಹೇಶ್ವರಾ ? - ಅಲ್ಲಮ ಪ್ರಭುದೇವರು

#: 'ಶರಣರ ಅನುಭವ ಅನುಭಾವ ಅನುಭೂತಿ'' ಡಾ|| ಆರ್.ಆರ್.ದಿವಾಕರ ೧೯೭೬, ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಪುಟ ೩.

ಗ್ರಂಥ ಋಣ:
೧) ಪೂಜ್ಯ ಮಾತಾಜಿ ಬರೆದ "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ. ಪ್ರಕಟಣೆ: ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಲಿಂಗಾಯತ ಪುನರುಜ್ಜಿವನದ ಪಂಚಸೂತ್ರಗಳು ಲಿಂಗಾಯತರು ಹಿಂದುಗಳಲ್ಲ Next