Previous ಲಿಂಗಾಯತ, ವೀರಶೈವ ಸಿದ್ಧಾಂತ ಶಿಖಾಮಣಿ ಕೃತಕ ಗ್ರಂಥ Next

ಲಿಂಗಾಯತ-ವೀರಶೈವ ಒಂದೇ ಅಲ್ಲ

*

✍ ಡಾ. ಎಂ. ಎಂ. ಕಲಬುರ್ಗಿ.

ನಿರಂತರ ಸಂಶೋಧನೆಯೆಂದರೆ ಹಾಡಿದ್ದನ್ನೇ ಹಾಡುವುದಲ್ಲ

ಹಾಲಭಾವಿ ವೀರಭದ್ರಪ್ಪ, ಎಸ್. ಎಸ್. ಬಸವನಾಳ, ಎಂ. ಆರ್. ಸಾಖರೆ ಮೊದಲಾದವರು ಕಳೆದ ಶತಮಾನದಲ್ಲಿ ಎತ್ತಿದ್ದ, 'ಲಿಂಗಾಯತ-ವೀರಶೈವ ಒಂದೇ ಅಲ್ಲ' ಎಂಬ ವಾದ ಧಾರವಾಡದ ಹಿರೇಮಲ್ಲೂರ ಈಶ್ವರನ್, ಬೆಂಗಳೂರಿನ ಗುಬ್ಬಿ ಹುಚ್ಚಪ್ಪ ಮೊದಲಾದವರ ಮೂಲಕ ಇತ್ತೀಚೆಗೆ ಮತ್ತೆ ಚಿಗುರಿತು. ಇಂದಿನ ಸಾಮಾಜಿಕ ಜಾಗೃತಿ-ಹೊಸ ಶೋಧಗಳ ಬೆಳಕಿನಲ್ಲಿ ಡಾ. ಎನ್. ಜಿ. ಮಹಾದೇವಪ್ಪ ತತ್ತ್ವಶಾಸ್ತ್ರದ ನಿಲವಿನಿಂದ, ನಾನು ಚರಿತ್ರೆಯ ನಿಲವಿನಿಂದ ಹಿರಿಯರ ಈ ವಾದವನ್ನು ಗಟ್ಟಿಗೊಳಿಸುತ್ತ ಬಂದಿದ್ದೇವೆ. ಆದರೆ, ಕೆಲವು ಸಾಂಪ್ರದಾಯಿಕ ಸಂಶೋಧಕರು ಈ ಮೊದಲು ತಾವು ಹಾಡಿದುದನ್ನೆ (ಬಸವಣ್ಣ ಆನ್ವಯಿಕ ವಿಜ್ಞಾನಿ, ವಚನಗಳಲ್ಲಿ ವೀರಶೈವ ಶಬ್ದ ಬಳಕೆಯಾಗಿದೆ) ಮತ್ತೆ ಮತ್ತೆ ಹಾಡುತ್ತಲಿದ್ದಾರೆ. ವೀರಶೈವ ವಿದ್ವಾಂಸರು ನೌಕರಿಯಲ್ಲಿರುವಾಗ ಬಸವಣ್ಣನ ಪರವಾಗಿ, ನಿವೃತ್ತರಾಗುತ್ತಲೇ ಪಂಚಾಚಾರ್ಯರ ಪರವಾಗಿ ಬರೆಯುತ್ತಾರೆ' ಎಂಬ ದಲಿತ ವಿದ್ವಾಂಸರೊಬ್ಬರ ಮಾತು ಇಲ್ಲಿ ನೆನಪಾಗುತ್ತದೆ.

ಡಾ. ಎಸ್. ವಿದ್ಯಾಶಂಕರ ಅವರು ವಿಜಯ ಕರ್ನಾಟಕ (೨೦ ಅಗಸ್ಟ್)ದಲ್ಲಿ ಟಿ. ಆರ್. ಚಂದ್ರಶೇಖರ ಮತ್ತು ನನ್ನ ಲೇಖನಗಳಿಗೆ ಉತ್ತರ(?) ಬರೆದಿದ್ದು, ಅವೆಲ್ಲ ಹಳೆಯ ಮಾತುಗಳಾಗಿವೆ. ಇವುಗಳಿಗೆ ನಾನು ಎಂದೋ ಉತ್ತರಿಸಿದ್ದೇನೆ. ಹೀಗಿದ್ದೂ ನನ್ನ ಮಾತುಗಳನ್ನು ಮುಚ್ಚಿಟ್ಟು, ಸಾಮಾನ್ಯರನ್ನು ದಾರಿತಪ್ಪಿಸುವ ರೀತಿಯಲ್ಲಿ ಇವರು ಬರೆದುದನ್ನೇ ಬರೆಯುವುದು ಸಂಶೋಧನೆಯಲ್ಲ, ನಾವು ಲಿಂಗಾಯತ-ವೀರಶೈವ ಭಿನ್ನವೆಂದು ವಾದಿಸಿ, ಸಮಾಜ ಒಡೆಯುತ್ತಿದ್ದೇವೆ ಎಂಬ ಮಾತನ್ನು ಇವರಿಬ್ಬರೂ ಹಿಂತೆಗೆದುಕೊಳ್ಳಬೇಕು. ಏಕೆಂದರೆ ಸಮಾಜಕ್ಕಾಗಿ ಯಾರು ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ನಿಜ ಸಂಗತಿ ಎಂದರೆ ಲಿಂಗಾಯತ-ವೀರಶೈವ ಎಂಬ ಸಾಮರಸ್ಯದ ಸೋಗಿನಲ್ಲಿ ಸಮಾಜ ಶೋಷಣೆಯು ಮೊದಲಿನಂತೆ ಈಗಲೂ ಮುಂದುವರಿಯಲೆಂಬುದು ಇವರಿಬ್ಬರ ಅಪೇಕ್ಷೆಯಾಗಿರುವಂತಿದೆ. ಆದರೆ ಎರಡೂ ಭಿನ್ನ' ಎಂದು ಹೇಳುವ ಮೂಲಕ ಈಗಲಾದರೂ ಸಮಾಜವು ವೀರಶೈವ ಲಿಂಗೀಬ್ರಾಹ್ಮಣರ ಕಪಿಮುಷ್ಠಿಯಿಂದ ಬಿಡುಗಡೆ ಪಡೆಯಲಿ ಎಂಬುದು ನಮ್ಮ ವಾದವಾಗಿದೆ. ನನ್ನ ಪ್ರಧಾನ ಸಂಪಾದಕತ್ವದಲ್ಲಿ ಕರ್ನಾಟಕ ಸರಕಾರ ಪ್ರಕಟಿಸಿದ ವಚನ ಸಂಪುಟಗಳಲ್ಲಿ 'ವೀರಶೈವ' ಪದ ಬಳಕೆಯಾಗಿದೆ ಎಂದು ಇವರು ಹಳೆಯ ರಾಗ ಹಾಡಿದ್ದಾರೆ.

(೧) ವೀರಶೈವ ಶಬ್ದ ಇಲ್ಲಿಯ ಹೆಚ್ಚಿನ ವಚನಗಳಲ್ಲಿದೆ, ಷಟ್‌ಸ್ಥಲ ವಚನ ಕಟ್ಟುಗಳಲ್ಲಿ ಇಲ್ಲವೇಕೆ? ಎಂಬ ನನ್ನ ಪ್ರಶ್ನೆಗೆ ಇವರು ಏಕೆ ಉತ್ತರಿಸುವುದಿಲ್ಲ?

(೨) ಈ ಹೆಚ್ಚಿನ ವಚನಗಳಲ್ಲಿ ಕಂಡುಬರುವ 'ವೀರಶೈವ' ಶಬ್ದಕ್ಕೆ ಕೆಲವೊಮ್ಮೆ ಕಂಡುಬರುವ ಭಿನ್ನಪಾಠಗಳು ವೀರಶೈವ ಶಬ್ದಕ್ಕೆ ಪ್ರಾಚೀನತೆ ಕಲ್ಪಿಸಲು ಧೂರ್ತರು ಮಾಡಿದ ಹುನ್ನಾರವೆನಿಸುವುದಿಲ್ಲವೇ?

(೩) ಒಂದು ವೇಳೆ ೧೨ನೆಯ ಶತಮಾನದ ವಚನಗಳಲ್ಲಿ 'ವೀರಶೈವ' ಪದ ಬಳಕೆಯಾಗಿದೆ ಎಂದು ಇಟ್ಟುಕೊಂಡರೂ, ೧೩ನೆಯ ಶತಮಾನದ ಪ್ರಸಿದ್ಧ ಕವಿಗಳಾದ ಹರಿಹರಾದಿಗಳ ಸಾಹಿತ್ಯದಲ್ಲಿ 'ಲಿಂಗವಂತ' ಶಬ್ದವಿದೆಯೇ ಹೊರತು, ವೀರಶೈವ ಶಬ್ದ ಏಕೆ ಇಲ್ಲ?

(೪) ಇದೇ ಕಾಲದ ಕೆರೆಯ ಪದ್ಮರಸನ 'ದೀಕ್ಷಾಬೋಧೆ' ಎಂಬ ಮಹತ್ವದ ಶಾಸ್ತ್ರ ಕೃತಿಯಲ್ಲಿ ಲಿಂಗಾಯತ ಶಬ್ದವಿದೆಯೇ ಹೊರತು, ವೀರಶೈವ ಶಬ್ದವೇಕಿಲ್ಲ?

(೫) ಇವರ ತರುವಾಯದ ತೆಲುಗು ಬಸವಪುರಾಣದಲ್ಲಿ ಮಾಹೇಶ್ವರ, ವೀರಮಾಹೇಶ್ವರ, ಲಿಂಗವಂತ ಶಬ್ದಗಳಿವೆಯೇ ಹೊರತು ವೀರಶೈವ ಶಬ್ದವೇಕಿಲ್ಲ?

ಒಟ್ಟಿನಲ್ಲಿ, ಶರಣ ಚಳವಳಿ ತರುವಾಯದ ೧೫೦ ವರ್ಷಗಳ ಈ ಅವಧಿಯಲ್ಲಿ ಒಮ್ಮೆಯೂ ಕಾಣಸಿಗದ ವೀರಶೈವ ಪದ, ಈ ಪೂರ್ವದ ವಚನಗಳಲ್ಲಿ ಕಾಣುವುದೆಂದರೆ, ಅಲ್ಲಿ ಆಮೇಲೆ ಸೇರಿಸಿರುವರೆಂದೇ ಅರ್ಥ. ೧೦ ವರ್ಷಗಳ ಹಿಂದೆ ಎತ್ತಿದ ನನ್ನ ಈ ಪ್ರಶ್ನೆಗಳನ್ನು ಮುಚ್ಚಿಟ್ಟು ಸರಕಾರದ ವಚನ ಆವೃತ್ತಿಯಲ್ಲಿ ವೀರಶೈವ ಪದ ಬಳಕೆಯಾಗಿದೆ ಎಂದು ಹಳೆಯ ಹಾಡನ್ನೇ ಹಾಡುವುದು ನಿಜವಾದ ಸಂಶೋಧನೆಯ ಲಕ್ಷಣವಲ್ಲ.

ಸರಕಾರದ ವಚನ ಸಂಪುಟಗಳ ಸಂಪಾದಕರ ಸಭೆಯಲ್ಲಿ ಇದು ಜನಪ್ರಿಯ ಆವೃತ್ತಿಯಾಗಿರುವುದಿರಂದ ಸಾಚಾ-ಖೋಟಾ ಪ್ರಶ್ನೆಗೆ ಇಲ್ಲಿ ಅಷ್ಟಾಗಿ ಮಹತ್ವ ಕೊಡಬಾರದು ಎಂದು ಸದಸ್ಯರಾದ ಚಿ.ಮೂ. ಅವರು ವಾದ ಮಾಡಿದುದನ್ನು ಈಗ ಮರೆತಂತೆ ಕಾಣುತ್ತದೆ. ಇದಲ್ಲದೆ ಈ ಸಂಪುಟಗಳಲ್ಲಿ ಷಟ್‌ಸ್ಥಲ ವಚನಗಳನ್ನು ಮೊದಲನೆಯ ಕಾಂಡದಲ್ಲಿ ಸೇರಿಸಬೇಕೆಂದೂ, ಒಂದಿಷ್ಟು ಖೋಟಾ ವಚನಗಳನ್ನೊಳಗೊಂಡಿರಬಹುದಾದ ಹೆಚ್ಚಿನ ವಚನಗಳನ್ನು ಎರಡನೆಯ ಕಾಂಡದಲ್ಲಿ ಸೇರಿಸಬೇಕೆಂದೂ ಈ ಸಭೆ ತೀರ್ಮಾನಿಸಿದೆ. ಈ ಕಾರಣದಿಂದಾಗಿಯೇ ಷಟ್‌ ಸ್ಥಲ ವಚನ ಎಂಬ ಶೀರ್ಷಿಕೆಯಿದ್ದರೂ ಸಿದ್ದರಾಮನ ಷಟ್‌ಸ್ಥಲ ವಚನಗಳನ್ನು ಎರಡನೆಯ ಕಾಂಡದಲ್ಲಿ ಜೋಡಿಸಲಾಗಿದೆ. ವಿದ್ಯಾಶಂಕರ ಹೇಳುವ ವೀರಶೈವ ಶಬ್ದಗಳನ್ನೊಳಗೊಂಡ ವಚನಗಳು ಈ ಎರಡನೆಯ ಕಾಂಡದಲ್ಲಿವೆ. ಇದೆಲ್ಲ ಗೊತ್ತಿದ್ದೂ ಸಭೆ ಸದಸ್ಯರಾದ ಇವರು ಈ ರೀತಿ ಹೆಚ್ಚಿನ ವಚನಗಳ ಪಕ್ಷ ವಹಿಸಿ ಜನಸಾಮಾನ್ಯರ ಮುಂದೆ ವಾದ ಮಂಡಿಸುವುದು ಪ್ರಾಮಾಣಿಕತನವೆ? ಹೀಗೆ ಸಭೆಯಲ್ಲಿ ಒಂದು ರೀತಿ, ಸಾರ್ವಜನಿಕರಲ್ಲಿ ಇನ್ನೊಂದು ರೀತಿ ನಡೆದುಕೊಳ್ಳುವವ ರೊಂದಿಗೆ ಎಷ್ಟು ಸಲ ವಾದ ಮಾಡುವುದು?

ಇದರರ್ಥ, ನಾವು ಕೈಗೆ ಸಿಕ್ಕ ವಚನಗಳನ್ನು ಕಣ್ಣು ಮುಚ್ಚಿ ಸಂಗ್ರಹಿಸಿರುವೆವು ಎಂದಲ್ಲ; ಪ್ರಕ್ಷಿಪ್ತವಾಗಿರಬಹುದಾದ ೧೧೦ ಜನ ವಚನಕಾರರ ವಚನಗಳನ್ನು ಕೈ ಬಿಟ್ಟಿರುವುದಾಗಿ ನಾನು ಸಂಪಾದಕೀಯದಲ್ಲಿ ಹೇಳಿದ್ದೇನೆ. ಈ ಯೋಜನೆಯ ಪ್ರತಿಯೊಂದು ಸಂಪುಟದ ಆರಂಭದಲ್ಲಿ ಮುದ್ರಿಸಿರುವಂತೆ ಇವು ಸಮಗ್ರ ವಚನ ಸಾಹಿತ್ಯದ ಜನಪ್ರಿಯ ಆವೃತ್ತಿಗಳಾಗಿವೆ. ಮುಂದೆ ವಿದ್ವತ್ ಆವೃತ್ತಿ ಯೋಜನೆ ಕೈಗೆತ್ತಿಕೊಂಡರೆ, ಎರಡನೆಯ ಕಾಂಡದಲ್ಲಿರುವ ವೀರಶೈವ ಪದವನ್ನೊಳಗೊಂಡ ವಚನಗಳನ್ನು ಮೊದಲು ಕೈ ಬಿಡಬೇಕಾಗುತ್ತದೆ.

ಇನ್ನೂ ಒಂದು ವಿಷಯ : ಸಾಮಾನ್ಯವಾಗಿ ಈವರೆಗೆ ಎಲ್ಲ ವಿದ್ವಾಂಸರು ಎಲ್ಲ ವಚನಕಾರರನ್ನು ೧೨ ನೆಯ ಶತಮಾನದವರೆಂದು ಪರಿಗಣಿಸಿದ್ದಾರೆ. ಬಹುಶಃ ಇವರಲ್ಲಿ ಕೆಲವರಾದರು ತರುವಾಯ (೧೪ ಶತಮಾನ)ದವರಿದ್ದು, ಅವರ ವಚನಗಳಲ್ಲಿ ವೀರಶೈವ ಪದ ಬಂದಿದ್ದರೆ, ಅದು ಸಹಜವೇ ಆಗಿದೆ. ಇವೇ ಮೊದಲಾದ ಮಾತುಗಳ ಮೂಲಕ ವೀರಶೈವ ಶಬ್ದವು ೧೨ನೆಯ ಶತಮಾನ ತರುವಾಯದ ಸೃಷ್ಟಿಯೆಂದೂ, ಅದು ಶೈವರಲ್ಲಿ ಕೆಲವರು ಕೈಕೊಳ್ಳುತ್ತಿದ್ದ ಒಂದು ಉಗ್ರವ್ರತದ ಹೆಸರೇ ಹೊರತು, ಮತದ ಹೆಸರಲ್ಲವೆಂದೂ ಇನ್ನೊಮ್ಮೆ ಹೇಳಬಯಸುತ್ತೇನೆ.”

ಗ್ರಂಥ ಋಣ: ವಿಜಯ ಕರ್ನಾಟಕ(ದಿನಪತ್ರಿಕೆ) ೩೦-೮-೨೦೧೧

*
ಪರಿವಿಡಿ (index)
Previous ಲಿಂಗಾಯತ, ವೀರಶೈವ ಸಿದ್ಧಾಂತ ಶಿಖಾಮಣಿ ಕೃತಕ ಗ್ರಂಥ Next