Previous ವಚನಸಾಹಿತ್ಯ : ವೈದಿಕ ವಿರೋಧ ಮತ್ತು ಜಾತಿನಿರಸನ ವೀರಶೈವ : ಮತವಲ್ಲ, ವ್ರತ Next

ಲಿಂಗಾಯತ: ವಲಸೆ ಧರ್ಮವಲ್ಲ, ಕನ್ನಡಿಗರು ಸೃಷ್ಟಿಸಿದ ಮೊದಲ ಸ್ಥಳೀಯ ಧರ್ಮ

*

✍ ಡಾ. ಎಂ. ಎಂ. ಕಲಬುರ್ಗಿ.

ಲಿಂಗಾಯತ : ಮತನಿರಸನ (ಜಾತಿ ನಿರಸನ)ಸಿದ್ಧಾಂತವಾಗಿದೆ


“ವಚನ ಚಳುವಳಿಯ ಗುರಿ: ಪರ್ಯಾಯ ಸಂಸ್ಕೃತಿ ನಿರ್ಮಾಣ” ಈ ವಿಚಾರ ಸಂಕಿರಣದಲ್ಲಿ ನಾನು ಹೇಳಿದ್ದೇ ಬೇರೆ, ಡಾ. ಹಂಪನಾ ಪ್ರಜಾವಾಣಿಯ (೨೫ ಎಪ್ರಿಲ್)ಮೂಲಕ ನನಗೆ ಉತ್ತರಿಸಿದ್ದೇ ಬೇರೆ. ಇದು ವಿಷಯಾಂತರವಷ್ಟೇ ಅಲ್ಲ; ಓದುಗರನ್ನು ದಾರಿ ತಪ್ಪಿಸುವ ಜಾಣ ಬರವಣಿಗೆಯಂತೆ, ಅವರ ಭಾವನೆಯನ್ನು ಪ್ರಚೋದಿಸುವ ಅತಿರಂಜಿತ ಲೇಖನವೂ ಆಗಿದೆ.

ಅಶೋಕಪೂರ್ವದ ಕರ್ನಾಟಕದಲ್ಲಿ ಬೇಟೆವೃತ್ತಿಯ ಬೇಡ, ಕುರಿಕಾಯುವ ಕುರುಬ, ದೋಣಿ ನಡೆಸುವ ಅಂಬಿಗ ಇತ್ಯಾದಿ ವೃತ್ತಿಮೂಲ ಜಾತಿಗಳಿದ್ದವು. ಈ ಸಂದರ್ಭದಲ್ಲಿ ಮತ್ತು ಆಮೇಲೆ ಉತ್ತರ ಭಾರತದಿಂದ ಬೌದ್ಧ, ಜೈನ, ವೈದಿಕ, (ಕಾಶ್ಮೀರ) ಶೈವಧರ್ಮಗಳು ಇಲ್ಲಿಗೆ ವಲಸೆ ಬಂದವು ಈ ನಾಲ್ಕು ವಲಸೆ ಧರ್ಮಗಳು ಇಲ್ಲಿ ತಮ್ಮ ಅಸ್ತಿತ್ವ ಸ್ಥಾಪಿಸಲು ನಡೆಸಿದ ಪರಸ್ಪರ ಹೋರಾಟದಲ್ಲಿ ಮೊದಲು ನಾಶವಾದುದು ಬೌದ್ಧಧರ್ಮ, ಬಳಿಕ ಮಿಕ್ಕ ಮೂರರಲ್ಲಿ ವೈದಿಕ, ಶೈವಗಳು ಕ್ರಮೇಣ ಜೈನವನ್ನು ನಿಯಂತ್ರಿಸಿದವು. ಅಂದರೆ ವೈದಿಕವು ಬಸದಿಗಳನ್ನು ಬ್ರಹ್ಮಜಿನಾಲಯವಾಗಿಸುವ, ಶೈವವು ಬಸದಿಗಳನ್ನು ಎಕ್ಕೋಟಿ (ಕಾಳಾಮುಖ) ಜಿನಾಲಯವಾಗಿಸುವ-ಇವೇ ಮೊದಲಾದ ರೀತಿಯ ಆಕ್ರಮಣಕಾರ್ಯದಲ್ಲಿ ನಿರತವಾದವು.

ಹೀಗೆ ಜೈನರನ್ನು ಹತ್ತಿಕ್ಕಿದ ಎರಡೂ ಧರ್ಮಗಳಲ್ಲಿ ವೇದಪರವಾದ ವೈದಿಕ ಬ್ರಾಹ್ಮಣವು ಆಗಮಪರವಾದ ಆಗಮಿಕ ಶೈವದ ಮೇಲೆ ತನ್ನ ಪ್ರಭಾವ ಬೀರಿ, ಅದನ್ನು ಆಗಮಿಕ ಶೈವಬ್ರಾಹ್ಮಣವನ್ನಾಗಿಸಿತು. ಇದರ ಪರಿಣಾಮದಿಂದ ಇವರ ಆಗಮಗಳು ವೇದಪರ, ವೇದವಿರೋಧಿ ಪಠ್ಯಗಳಾಗಿ ಬೆಳೆದವು. ಈ ಎರಡು ಬ್ರಾಹ್ಮಣಗಳಲ್ಲಿ ವೈದಿಕ ಬ್ರಾಹ್ಮಣವು ನಮ್ಮ ಮಧ್ಯ ಈಗಲೂ ಜೀವಂತವಿದೆ. ಆದರೆ ಆಗಮಿಕ ಶೈವಬ್ರಾಹ್ಮಣ ಮಾತ್ರ ಶಿವದ್ವಿಜ ಲಿಂಗಿಬ್ರಾಹ್ಮಣ ಹೆಸರುಗಳೊಂದಿಗೆ ಬೆಳೆದು, ಕಡ್ಡಾಯವಾಗಿದ್ದ ಜನಿವಾರ ತ್ಯಜಿಸಿ, ಐಚ್ಛಿಕವಾಗಿದ್ದ ಸ್ಥಾವರಲಿಂಗ ಅರ್ಥದ ಲಿಂಗಧಾರಣೆಯನ್ನು ಕಡ್ಡಾಯಗೊಳಿಸಿಕೊಂಡು, ಇಂದಿನ ವೀರಶೈವ ಜಂಗಮಸಮಾಜವಾಗಿ ಪರಿವರ್ತನೆಗೊಂಡಿತು. ಜೊತೆಗೆ ಪಂಚಾಚಾರ‍್ಯರೆಂಬ ಕೃತಕ ಪೀಠಗಳನ್ನು ಕಲ್ಪಿಸಿಕೊಂಡಿತು.

ಮೇಲೆ ಹೇಳಿದ ಈ ಮೂರೂ ವಲಸೆ ಧರ್ಮಗಳು (ವೈದಿಕ, ಶೈವ, ಜೈನ) ನಮ್ಮ ನೆಲದ ಮೇಲೆ ತಮ್ಮ ತಮ್ಮ ದೇವತೆಗಳ ತೀರ್ಥಂಕರರ ಸ್ಥಾಪಿಸಿ, ದೇವಾಲಯ- ಬಸದಿ ನಿರ್ಮಿಸಿ, ಅವುಗಳ ಒಳಹೊರಗೆ ತಮ್ಮ ಭಾರತ-ರಾಮಾಯಣ- ಜೈನಪುರಾಣ ಶೈವಪುರಾಣೋಕ್ತ ಘಟನೆಗಳ ಶಿಲ್ಪವನ್ನು ಕಂಡರಿಸಿದವು. ಈ ಧರ್ಮಗಳ ಶ್ರೇಷ್ಠತೆಯ ವ್ಯಸನಕ್ಕೊಳಗಾದ ಸ್ಥಳೀಯ ಕನ್ನಡಿಗರು ಅವುಗಳ ದೇವಾಲಯ-ಬಸದಿಗಳ ನಿರ್ಮಾಣ, ನಿರ್ವಹಣೆಗಳಿಗಾಗಿ ಉದ್ದಕ್ಕೂ ದುಡಿದರು. ತಮ್ಮನ್ನು ಮುಟ್ಟಿಸಿಕೊಳ್ಳದಿದ್ದರೂ ಅವರ ಅರ್ಚಕರಿಗೆ ದಾನ, ಆಚಾರರಿಗೆ ದಕ್ಷಿಣೆ ನೀಡಿ ಹುಸಿ ಧನ್ಯತಾಭಾವ ತಾಳಿದರು.

ಇದಕ್ಕಿಂತ ಮಿಗಿಲಾಗಿ, ಈ ಮೂರೂ ವಲಸೆ ಧರ್ಮಗಳು ನಿರ್ಮಿಸಿದ್ದ ವರ್ಣವ್ಯವಸ್ಥೆಯಿಂದಾಗಿ (೯ನೆಯ ಶತಮಾನದ ಜೈನ ಪೂರ್ವಪುರಾಣದಲ್ಲಿ ವರ್ಣವ್ಯವಸ್ಥೆಯ ದಾಖಲೆಯಿದೆ.) ಸ್ಥಳೀಯ ಕಾಯಕಜೀವಿಗಳು-ಶೂದ್ರವರ್ಗಗಳು ಶೋಷಣೆಗೆ ಗುರಿಯಾಗಿದ್ದವು. ಮಹಿಳೆಯು ಧಾರ್ಮಿಕ ವಿಧಿವಿಧಾನಗಳಿಂದ, ಮೋಕ್ಷದಿಂದ ವಂಚಿತಳಾಗಿದ್ದಳು. ಈ ಪ್ರತಿಷ್ಠಿತ ಧರ್ಮಗಳ ಬೆನ್ನಿಗೆ ನಿಂತ ಪ್ರಭುವರ್ಗವು ಸೊಕ್ಕಿ-ಪ್ರಜಾವರ್ಗ ಸೊರಗಿದ್ದಿತು.

ಈ ಬಗೆಯ ತಮ್ಮ ಸಂಸ್ಕೃತಿಯ ಪ್ರಸಾರಕ್ಕಾಗಿ ಇವರು ನಮ್ಮ ಭಾಷೆಯನ್ನು ಬಳಸಿಕೊಂಡು, ಉತ್ತರ ಭಾರತದ ಕೃತಿಗಳನ್ನು (ರಾಮಾಯಣ, ಮಹಾಭಾರತ, ಜೈನಪುರಾಣ, ಕರ್ಣಾಟಕ ಕಾದಂಬರಿ, ಕರ್ಣಾಟಕ ಪಂಚತಂತ್ರ ಸೃಜನಶೀಲವಾಗಿ ಅನುವಾದಿಸಿದರು. ಅವರ ಇವೇ ಮೊದಲಾದ ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಹಿತ್ಯಕ ಚಟುವಟಿಕೆಗಳಿಂದ ದೇವರೆಂದರೆ ಉತ್ತರಭಾರತದವು, ಪುರಾಣ ಪುರುಷರೆಂದರೆ ಉತ್ತರಭಾರತದವರು, ಸಾಮಾಜಿಕ ನೀತಿ ಎಂದರೆ ಉತ್ತರಭಾರತೀಯರದು, ಸಾಹಿತ್ಯವೆಂದರೆ ಉತ್ತರ ಭಾರತದ್ದು ಎಂಬ ಭ್ರಮೆ ಕನ್ನಡಿಗರಲ್ಲಿ ಬೆಳೆಯುವಂತೆ ಮಾಡಿದರು. ಈ ಧರ್ಮಗಳಿಂದಾಗಿ ನಮ್ಮ ಅರಿವು ವಿಸ್ತಾರವಾಗಿರಬಹುದಾದರೂ ಅಸ್ಮಿತೆ ನಾಶಮಾಡಿ ಬರುವ ಅರಿವು ಎಷ್ಟೂ ದೊಡ್ಡದಿದ್ದರೂ ಅದು ಸ್ವೀಕಾರಯೋಗ್ಯವಲ್ಲವೆಂದೇ ಹೇಳಬೇಕು. ಅಸ್ಮಿತೆ
ನಾಶವಾಗುವುದೆಂದರೆ ಅಸ್ಮಿತೆನಾಶದ ನಾಣಿಯೆಂದೇ ಹೇಳಬೇಕು. ಈ ಸತ್ಯ ಗೊತ್ತಾಗದ ಕಾರಣ, ಕನ್ನಡಿಗರು ದಿನೇ ದಿನೇ ಬದುಕಿನ ಎಲ್ಲ ಕ್ಷೇತ್ರಗಳಲ್ಲಿಯೂ ಭೌತಿಕವಾಗಿ-ಮಾನಸಿಕವಾಗಿ ಉತ್ತರಭಾರತದ ಗುಲಾಮರಾಗುತ್ತ ಬಂದರು(ಇದು ಈಗಲೂ ಮುಂದುವರಿದಿದೆ). ಇಂಥ ಅನ್ಯಾಯಗಳ ಅತಿರೇಕ ಸಂದರ್ಭದಲ್ಲಿ ಸ್ಥಳೀಯ ದುಡಿಯುವ ವರ್ಗಗಳಾದ ಕುರುಬ-ಅಂಬಿಗ-ಸಮಗಾರ-ಮಾದಿಗ- ಡೋಹರ-ಪಾಂಚಾಳ-ಅಗಸ-ಒಕ್ಕಲಿಗ ಮೊದಲಾದ ಸಮುದಾಯದ ಗಂಡು- ಹೆಣ್ಣುಗಳಲ್ಲಿ ಅಸ್ಮಿತೆಯನ್ನು ಜಾಗೃತಗೊಳಿಸಿ, ಉತ್ತರಭಾರತದ ಧಾರ್ಮಿಕ ಯಜಮಾನ ಸಂಸ್ಕೃತಿಯ ವಿರುದ್ಧ (ಮುಖ್ಯವಾಗಿ ವೈದಿಕ, ಶೈವಗಳ ವಿರುದ್ಧ ಗುರು ಬಸವಣ್ಣ 'ಶರಣ ಚಳುವಳಿ” ಹೂಡಿದರು.)

ಇದರ ಪರಿಣಾಮವಾಗಿ, ದೇವತೆಗಳಿಲ್ಲ, ದೇವರಿದ್ದಾನೆ, ಜಾತಿಗಳಿಲ್ಲ ವೃತ್ತಿ(ಕಾಯಕ)ಗಳಿವೆ. ಜಾತಿ ಪುರುಷಜಾತಿಗಳಿಲ್ಲ ಮನುಷ್ಯಜಾತಿ ಇದೆ, ವ್ಯಕ್ತಿವಾದಿ ಸೋಹಂ ಪೂರ್ಣಧರ್ಮವಲ್ಲ, ಸಮಾಜವಾದಿ ದಾಸೋಹಂ ಪೂರ್ಣಧರ್ಮ, ಇವೇ ಮೊದಲಾದ ಪರ್ಯಾಯ ಸಿದ್ಧಾಂತಗಳು ಸಮಾಜದಲ್ಲಿ ಸೃಷ್ಟಿಯಾದವು. ಇದರ ಫಲವಾಗಿ 'ಲಿಂಗಾಯತ'ವೆಂಬ ಹೊಸ ಧರ್ಮ ಈ ನಾಡಿನಲ್ಲಿ ಆಕಾರ ಪಡೆಯಿತು. ಹೀಗಾಗಿ ಲಿಂಗಾಯತವೆನ್ನುವುದು ಉತ್ತರಭಾರತದ ವಲಸೆ ಧರ್ಮಗಳ ವಿರುದ್ಧ ಎಲ್ಲ ಪಂಗಡಗಳ ಕನ್ನಡಿಗರು ಸೇರಿ ಕರ್ನಾಟಕದಲ್ಲಿ ಸೃಷ್ಟಿಸಿದ 'ಮೊದಲ ಸ್ಥಳೀಯ ಧರ್ಮ'ವೆನಿಸಿತು. ಜಗತ್ತಿಗೆ ಕನ್ನಡಿಗರು ನೀಡಿದ ಕೊಡುಗೆ ಎನಿಸಿತು. ಒಟ್ಟಾರೆ, ಬಸವಪೂರ್ವಯುಗ ಕನ್ನಡಿಗರ ಅಸ್ಮಿತೆಯ ವಿಸ್ಮೃತಿ ಯುಗವೆನಿಸಿದರೆ ಬಸವಯುಗವು ಕನ್ನಡಿಗರ ಅಸ್ಮಿತೆಯ ಜಾಗ್ರತಿಯುಗವೆನಿಸಿತು.

ಇದು ನನ್ನ ವಾದ. ಇದಕ್ಕೆ ಸರಿಯಾಗಿ ಉತ್ತರಿಸುವುದನ್ನು ಬಿಟ್ಟು, ಲಿಂಗಾಯತರು ಜೈನರನ್ನು ಹಿಂಸಿಸಿದರೆಂದು ಓದುಗರಲ್ಲಿ ಜೈನರ ಬಗ್ಗೆ ಕನಿಕರ ಹುಟ್ಟುವಂತೆ ಹಂಪನಾ ಬರೆದಿದ್ದಾರೆ. ಜೈನರು ನಾಶವಾದದ್ದು ನಿಜ. ಆದರೆ ಈ ನಾಶಕಾರ್ಯ ಮಾಡಿದವರು ಲಿಂಗಾಯತರಲ್ಲ, (ವೀರ)ಶೈವರು. ೧೨ನೆಯ ಶತಮಾನದ ಬಳಿಕ ಲಿಂಗಾಯತದಲ್ಲಿ ಈ (ವೀರಶೈವ ಸೇರಿಕೊಂಡುದನ್ನು ಗಮನಿಸದೆ, ಬಸವಾದಿ ಲಿಂಗಾಯತರೇ ಉದ್ದಕ್ಕೂ ಜೈನರನ್ನು ಹಿಂಸಿಸಿದರೆಂದು ಡಂಗುರ ಭಾಷೆ ಬಳಸಿ ಬರೆಯುವುದು 'ದಯವೇ ಧರ್ಮದ ಮೂಲ'ವೆಂಬ ಸಿದ್ಧಾಂತದ ಶರಣಧರ್ಮಕ್ಕೆ ಮಾಡಿದ ಅನ್ಯಾಯವಾಗಿದೆ.

ಶರಣರದು ದೇವಾಲಯ(ಬಸದಿ)ವನ್ನು ನಿರ್ಮಾಣಮಾಡುವ ಇಲ್ಲವೆ ನಾಶಮಾಡುವ ಧರ್ಮವಲ್ಲ. ದೇವಾಲಯತತ್ವವನ್ನು ನಿರಾಕರಿಸಿ, ದೇಹದೇವಾಲಯ ತತ್ವವನ್ನು ಎತ್ತಿ ಹಿಡಿಯುವ ಧರ್ಮವಾಗಿದೆ. ಮೇಲಾಗಿ ಬಲಿಷ್ಠ ರಾಜವರ್ಗ- ಪುರೋಹಿತ ವರ್ಗಗಳಿಂದ ಪೋಷಿತವಾಗಿದ್ದ, ಬಹುಜನ ಮುಗ್ಧರ ಭಕ್ತಿಕೋಟೆಯೊಳಗೆ ಸುರಕ್ಷಿತವಾಗಿದ್ದ ದೇವಾಲಯಗಳನ್ನು ಮಾದರ ಚೆನ್ನಯ್ಯ, ಕುರುಬ ಗೊಲ್ಲಾಳ, ಒಕ್ಕಲಿಗ ಮುದ್ದಯ್ಯ ಮೊದಲಾದ ತಳವರ್ಗದ ಸಾತ್ವಿಕ ಶರಣರು ಹಾರಿ-ಗುದ್ದಲಿ, ಖಡ್ಗ-ಕಠಾರಿ ಹಿಡಿದು ನಾಶಪಡಿಸಲು ಸಾಧ್ಯವೇ? ಇವರು ಕೈಯಾರೆ ನಾಶಪಡಿಸಿದರೆಂಬುದಕ್ಕೆ ಒಂದಾದರೂ ಆಧಾರವಿದೆಯೇ? ಆದುದರಿಂದ (ವೀರ)ಶೈವಧರ್ಮಿಯರು ಮಾಡಿದ ಈ ಆಕ್ರಮಣವನ್ನು ಲಿಂಗಾಯತಧರ್ಮಿಯರ ತಲೆಗೆ ಕಟ್ಟುತ್ತ ಬಂದ, ಈ ವರೆಗಿನ ಸುಳ್ಳು ಇತಿಹಾಸವನ್ನು ಇನ್ನು ಮೇಲಾದರೂ ಆಧುನಿಕ ವಿದ್ವಾಂಸರು ಕೈಬಿಡುವರೆಂದು ಆಶಿಸುತ್ತೇನೆ.

ಕೊನೆಯದಾಗಿ, ಜೈನರ ಮೇಲೆ ಮಾಡಿದ (ವೀರ)ಶೈವ ಆಕ್ರಮಣವನ್ನು ಕುರಿತು ಶಾಸನ-ಕಾವ್ಯಗಳ ಆಧಾರವನ್ನು ಬಳಸಿ ಡಾ. ಹಂಪನಾ ಸುದೀರ್ಘವಾಗಿ ಬರೆದಿದ್ದಾರೆ. ಇದರಲ್ಲಿ ಹೊಸದೇನೂ ಇಲ್ಲ. ಈ ಮೊದಲು ನಾನೂ ಒಳಗೊಂಡಂತೆ ಅನೇಕ ವಿದ್ವಾಂಸರು ಬರೆದ ವಿಷಯವಿದು (ನೋಡಿ: 'ಪ್ರಾಚೀನ ಕರ್ನಾಟಕದಲ್ಲಿ ದೇವಾಲಯಗಳ ನಾಶ' ಶೀರ್ಷಿಕೆಯ ನನ್ನ ಲೇಖನ, ಮಾರ್ಗ-೩) ಅದೇನೇ ಇಲಿ, ಬೌದ್ಧರು, ಜೈನರು ಅನ್ಯಮತದ ಮೇಲೆ ದಾಳಿ ದಬ್ಬಾಳಿಕೆ ಮಾಡಲಿಲ್ಲ....” ಎಂದು ಮುಂತಾಗಿ ಬರೆದು ಹಂಪನಾ ಅವರು ಬೌದ್ಧರನ್ನು ತಮ್ಮ ಪಕ್ಷಕ್ಕೆ ಬಳಸಿಕೊಳ್ಳುವ ಜಾಣತನ ತೋರಿದ್ದಾರೆ. ಆದರೆ, ಇದಕ್ಕೆ ವಿರುದ್ಧವೆನ್ನುವಂತೆ ಜೈನರೇ ಮುಂದಾಗಿ ಅನ್ಯಮತಗಳ ಮೇಲೆ ಭೌತಿಕ, ಬೌದ್ಧಿಕ ದಾಳಿಮಾಡಿದ ವಿವರಗಳು ಇತಿಹಾಸದಲ್ಲಿ ಸಿಗುತ್ತವೆ. ಪ್ರಾಚಿನ ಜೈನರು ಮಾಡಿದ ಈ ಹಿಂಸೆಯ ವಿವರಗಳನ್ನು ಹಂಪನಾ ಅವರಂತೆ ಚಿತ್ರಿಸಿ, ವರ್ತಮಾನದ ಓದುಗರನ್ನು ಉದ್ರೇಕಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ.

ಹಂಪನಾ ಅವರನ್ನು ಬೆಂಬಲಿಸಿ ಡಾ.ಸಿ.ಪಿ.ಕೆ ಒಂದೆರಡು ವಾಕ್ಯ ಬರೆದಿದ್ದಾರೆ (ಪ್ರವಾ ೩೦ ಎಪ್ರಿಲ್). ಈ ವಿಮರ್ಶಕರ ಮಾತನ್ನು ಸಂಶೋಧಕನಾದ ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ.”

ಗ್ರಂಥ ಋಣ: ಮಾರ್ಗ-೭, ಸಪ್ನಬುಕ್ ಹೌಸ್, ಬೆಂಗಳೂರು

*
ಪರಿವಿಡಿ (index)
Previous ವಚನಸಾಹಿತ್ಯ : ವೈದಿಕ ವಿರೋಧ ಮತ್ತು ಜಾತಿನಿರಸನ ವೀರಶೈವ : ಮತವಲ್ಲ, ವ್ರತ Next