Previous ಲಿಂಗಾಯತ : ಒಂದು ಸ್ವತಂತ್ರ ಧರ್ಮ ವಚನಸಾಹಿತ್ಯ : ವೈದಿಕ ವಿರೋಧ ಮತ್ತು ಜಾತಿನಿರಸನ Next

ಲಿಂಗಾಯತ ಎಲ್ಲ ಸಮುದಾಯದ ಕನ್ನಡಿಗರು ಸೃಷ್ಟಿಸಿದ ಕರ್ನಾಟಕದ ಮೊದಲ ಧರ್ಮ

*

✍ ಡಾ. ಎಂ. ಎಂ. ಕಲಬುರ್ಗಿ.

ಲಿಂಗಾಯತ : ಕನ್ನಡಿಗರು ಸೃಷ್ಟಿಸಿದ ಕರ್ನಾಟಕದ ಮೊದಲ ಧರ್ಮ

ಕೆಲವು ದಿನಗಳ ಹಿಂದೆ ಪಟ್ಟಣ ಅವರು ನನ್ನನ್ನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಂತ ಕೇಳಿಕೊಂಡಿದ್ದರು. ಆದರೆ ಯಾವ ಯಾವದೋ ಕಾರಣಕ್ಕಾಗಿ ನನಗೆ ಬರಲಿಕ್ಕೆ ಆಗಲಿಲ್ಲ. ಅದಕ್ಕಿಂತ ಮುಖ್ಯವಾಗಿ ನಾನು ಒಬ್ಬ ಪ್ರಾಧ್ಯಾಪಕ. ಸಂಶೋಧಕ, ಬರಹಗಾರ. ಆದುದರಿಂದ ನನ್ನನ್ನು ಕೇವಲ ಬರಹಲೋಕಕ್ಕೆ ಬಿಟ್ಟುಬಿಡಿರಿ. ಸಾರ್ವಜನಿಕ ಲೋಕಕ್ಕೆ ಎಳೆದುಕೊಂಡು ಬರಬೇಡಿರಿ ಎಂದು ಅವರಿಗೆ ಹೇಳ್ತಾ ಇದ್ದೆ ನಾನು, ಯಾಕೆಂದರೆ ಸಾರ್ವಜನಿಕರೊಳಗೆ ಬಹಳ ಮಿಶ್ರ ಮನೋಧರ್ಮದ ವ್ಯಕ್ತಿಗಳಿರುತ್ತಾರೆ. ನಾವೇನಾದರೂ ಸತ್ಯವನ್ನು ಮಾತನಾಡಿದರೆ ಜನರ ಭಾವನೆಗಳಿಗೆ ಧಕ್ಕೆ ಮಾಡಿದರು ಅಂತ ನನ್ನ ವಿರುದ್ಧ ಕೂಗು ಕೇಳಿ ಬರತಾಯಿದೆ. ಒಂದ ಮಾತ ಹೇಳ್ತಾ ಇದ್ದೀನಿ ನಿಜವಾದ ಸಂಶೋಧಕ ಜನರ ಭಾವನೆಗಳಿಗೆ ಧಕ್ಕೆ ಮಾಡುವುದಿಲ್ಲ; ಜನರ ಭ್ರಾಂತಿಗಳಿಗೆ ಧಕ್ಕೆ ಮಾಡುತ್ತಾನೆ. ನಿಮ್ಮ ತಲಿಯೊಳಗ ಭ್ರಾಂತಿ ತುಂಬಿದೆ. ಆ ಭ್ರಾಂತಿಗೆ ನಾವು ಧಕ್ಕೆ ಮಾಡಿದಾಗ ನೀವು ಏನ ಹೇಳತೀರಂದರೆ ಭಾವನೆಗಳಿಗೆ ಧಕ್ಕೆ ಮಾಡಿದರು ಅಂತ ಅಪಪ್ರಚಾರ ಮಾಡತೀರಿ. ಹೀಗೆ ಅಪಪ್ರಚಾರ ಮಾಡಿದಾಗ ಸತ್ಯವನ್ನು ಮಾತನಾಡಿದವ ಏಕಾಕಿ ಆಗುತ್ತಾನೆ. ಎಲ್ಲರೂ ಮನೆಯೊಳಗೆ ಹೊಚಗೊಂಡು ಮಲಕೊಂಡ ಬಿಡುತ್ತೀರಿ. ಆದುದರಿಂದ ನಾನು ಪಟ್ಟಣ ಅವರಿಗೆ ನಮ್ಮನ್ನ ನಮ್ಮ ಲೋಕಕ್ಕೆ ಬಿಟ್ಟು ಬಿಡಿರಿ. ಸಾಹಿತ್ಯ ಮಾಧ್ಯಮದ ಮೂಲಕ ಬಸವಣ್ಣನವರ ಸೇವಾ ನಾವು ಮಾಡತೇವಿ ಅಂತ ನಾನು ಅವರಿಗೆ ಹೇಳಿದೆ. ಆದರೆ ಈ ಸಲ ಅವರು ಬಿಡಲಿಲ್ಲ. ತುಂಬಾ ಸಂತೋಷದಿಂದ ನಾನು ಈ ಸಭೆಗೆ ಭಾಗವಹಿಸಿದ್ದೇನೆ. ಒಂದು ವಿಶೇಷ ಸಂತೋಷವೆಂದರೆ ಈ ಕಾರ್ಯಕ್ರಮಕ್ಕೆ ಜಾಮದಾರರು ಮತ್ತು ಮಹಾದೇವ ಪ್ರಕಾಶ ಅವರು ಬಂದದ್ದು. ಜಾಮದಾರ ಅವರ ಬಗ್ಗೆ ನಿಮಗೆಲ್ಲ ಗೊತ್ತಿದೆ. ಮಹಾದೇವ ಪ್ರಕಾಶ ದಕ್ಷಿಣ ಕರ್ನಾಟಕದಲ್ಲಿ ಸಮಕಾಲೀನ ವಿದ್ಯಮಾನಗಳ ಬಗ್ಗೆ ತರ್ಕಬದ್ಧವಾಗಿ ವಿಶ್ಲೇಷಿಸುವ ಮತ್ತು ಪ್ರಭಾವಶಾಲಿಯಾಗಿ ಬರೆಯುವ ಮತ್ತು ಮಾತನಾಡುವ ಒಬ್ಬ ನಾಯಕ ವ್ಯಕ್ತಿ ಅಂತ ನಾನು ಮನಸಾ ಮೊದಲಿನಿಂದಲೂ ನಂಬಿಕೊಂಡು ಬಂದವನು. ಅವರು ಮತ್ತು ಜಾಮದಾರರು ಬಂದಿದ್ದು ವಿಶೇಷ ಸಂತೋಷವನ್ನುಂಟುಮಾಡಿದೆ. ಇಲ್ಲಿ ಮಾತನಾಡುವ ಜನ ಭಾಳ ಇದ್ದಾರೆ. ಹೀಗಾಗಿ ನನ್ನ ಮಾತನ್ನು ನಾನು ಹೆಚ್ಚು ಬೆಳೆಸುವುದಿಲ್ಲ.

ಶರಣ ಸಂಸ್ಕೃತಿಯ ಬಗ್ಗೆ ಮಾತನಾಡುವದಿದ್ದರೆ ಹೇಗೆ ಶುರುಮಾಡಬೇಕು, ಏನ ಶುರುಮಾಡಬೇಕು ಅಂತ ಗೊತ್ತಾಗುದಿಲ್ಲ. ಅಷ್ಟರಮಟ್ಟಿಗೆ ಅದು ಬಹುಮುಖಿಯಾದಂತ ಸಂಸ್ಕೃತಿಯಾಗಿದೆ. ಬಹುಮುಖಿಯಾದಂತ ಹೋರಾಟವಾಗಿದೆ. ಬಹುಮುಖಿಯಾದಂಥ ಸಾಧನೆಗಳು ಅಲ್ಲಿ ಅದಾವೆ. ಮತ್ತು ಆದುದರಿಂದ ನಾನು ಆ ಎಲ್ಲಾ ವಿಷಯಗಳ ಬಗ್ಗೆ ಮಾತನಾಡದೆ ಒಂದಿಷ್ಟು ಇತಿಹಾಸ, ಒಂದಿಷ್ಟು ಸಿದ್ಧಾಂತ, ಒಂದಿಷ್ಟು ಸಮಕಾಲೀನ ಲಿಂಗಾಯತ ಸಮಾಜ ಈ ಮೂರು ಅಂಶಗಳ ಬಗ್ಗೆ ಕೆಲವು ಮಾತುಗಳನ್ನು ನಿಮ್ಮ ಮುಂದೆ ಮಂಡಿಸ್ತಾ ಇದ್ದೇನೆ.

ಮೊದಲನೆಯದಾಗಿ ನಾನು ಇತ್ತೀಚೆಗೆ ಹೇಳಿದಂತಹ ಒಂದು ಮಾತು “ಲಿಂಗಾಯತ ಎನ್ನುವದು ಕನ್ನಡಿಗರು ಸೃಷ್ಟಿಸಿದ ಕರ್ನಾಟಕದ ಮೊದಲ ಧರ್ಮ.” ದಯವಿಟ್ಟು ಈ ಮಾತನ್ನು ಪದೇ ಪದೇ ಎಲ್ಲರೂ ಮಾತನಾಡಬೇಕು. ಲಿಂಗಾಯತ ಕನ್ನಡಿಗರು ಸೃಷ್ಟಿಸಿದ ಕರ್ನಾಟಕದ ಮೊದಲನೇ ಧರ್ಮ. ಇದು ಕನ್ನಡಿಗರಿಗೆ, ಕರ್ನಾಟಕಕ್ಕೆ ಲಿಂಗಾಯತರು ಏನು ಕಾಣಿಕೆ ಕೊಟ್ಟಿದ್ದಾರೆ ಅನ್ನುವದಕ್ಕೆ ಇಂಥಾ ಮಾತನ್ನು ನಾವು ಆಗಾಗ ಆಡುವುದು ಬಹಳ ಅವಶ್ಯವಿದೆ. ಯಾಕ ಈ ಮಾತು ಹೇಳ್ತಿನಿ ಅಂತಂದರೆ, ೧೨ನೆಯ ಶತಮಾನದ ಹಿಂದೆ ಕರ್ನಾಟಕದಲ್ಲಿದ್ದಂತಹ ಧರ್ಮಗಳೆಂದರೆ ನಾಲ್ಕು. ದಯವಿಟ್ಟು ಇತಿಹಾಸ ತಿಳಕೊಳ್ಳಿರಿ. ಇತಿಹಾಸ ತಿಳಕೊಳ್ಳಲಾರದೆ ಏನ ಮಾತನಾಡಿದರೂ ಅದರ ಅರ್ಥ ಇಲ್ಲ. ೧೨ನೆಯ ಶತಮಾನಕ್ಕಿಂತ ಪೂರ್ವದೊಳಗ ಕರ್ನಾಟಕದಲ್ಲಿ ಇದ್ದಂತಹ ಧರ್ಮಗಳು ನಾಲ್ಕು ಒಂದು ಬೌದ್ಧ, ಒಂದು ಜೈನ, ಒಂದು ವೈದಿಕ, ಒಂದು ಶೈವ. ಇವು ನಾಲ್ಕೂ ವಲಸೆ ಧರ್ಮಗಳು, ನಮ್ದು ಅಲ್ಲವು. ಉತ್ತರ ಭಾರತದಿಂದ ಬಂದಂಥ ಧರ್ಮಗಳಿವು. ೧೨ನೆಯ ಶತಮಾನದ ಹೊತ್ತಿಗೆ ಬೌದ್ಧ ಧರ್ಮ ನಾಶವಾಗಿತ್ತು. ಜೈನ ಧರ್ಮ ದುರ್ಬಲವಾಗಿತ್ತು. ಕೇವಲ ವೈದಿಕ ಮತ್ತು ಶೈವ ಧರ್ಮಗಳ ಮೇಲಾಟ ನಡೆದಿತ್ತು. ಆದರೆ ದುರ್ದೈವದ ಸಂಗತಿಯೆಂದರೆ ಈ ಶೈವ ಧರ್ಮವೂ ವೈದಿಕಮಯವಾಗಿತ್ತು ಆ ಕಾಲಕ್ಕೆ. ಆದುದರಿಂದ ೧೨ನೆಯ ಶತಮಾನದ ಹೊತ್ತಿಗೆ ಭಾಳ ಒಂದು ವಿಜೃಂಭಣೆಯಿಂದ ಮೆರೆಯುವಂಥ ಅಥವಾ ಕನ್ನಡಿಗರ ಮೇಲೆ ಒಂದು ದಬ್ಬಾಳಿಕೆ ನಡೆಸಿದಂಥ ಒಂದು ಧರ್ಮ ಅಂದರೆ ವೈದಿಕಧರ್ಮ. ಶೈವವು ಅದರೊಳಗೆ ಮುಳುಗಿ ಹೋಗಿಬಿಟ್ಟಿತ್ತು. ಈ ನಮ್ಮ ಪಂಚಾಚಾರ್ಯರದಾರಲ್ಲ ಅವರು ಶೈವ ಪರಂಪರೆಯವರು. ಇವರು ಹೋಮ ಹವನ ಶುರು ಮಾಡಿದರು. ೧೨ನೆಯ ಶತಮಾನದ ಒಂದು ವಾತಾವರಣ ಅಂದರೆ ವೈದಿಕ ಧರ್ಮದ ದಬ್ಬಾಳಿಕೆಯ ವಾತಾವರಣ. ಆಗ ಬಸವಣ್ಣ ಏನ ಮಾಡಿದ, ಈ ಒಂದು ದಬ್ಬಾಳಿಕೆಯನ್ನು ವಿರೋಧ ಮಾಡಿದ. ಬರಿ ಕನ್ನಡಿಗರೆಲ್ಲರೂ ಜಾಗೃತರಾಗಿ ಹೊರಗಿನಿಂದ ಬಂದಂಥ ವಲಸೆ ಧರ್ಮಗಳು ನಮ್ಮ ಮೇಲೆ ಒತ್ತಡ ತರತಾಯಿವೆ. ನಮ್ಮನ್ನ ಶೋಷಣೆ ಮಾಡತಾಯಿವೆ. ಆದುದರಿಂದ ಇವುಗಳನ್ನು ತಮ್ಮ ತಮ್ಮ ಮೂಲಿಗೆ ಸರಿಬೇಕೆನ್ನುವಂಥಾ ವಿಚಾರ ಮಾಡಿ ಕನ್ನಡಿಗರನ್ನೇ ಆತ ಹುರಿದುಂಬಿಸಿಬಿಟ್ಟ. ಅದರೊಳಗ ದಲಿತರು ಮತ್ತು ಕಾರ್ಮಿಕರು ಇವರನ್ನೆಲ್ಲ ಹುರಿದುಂಬಿಸಿ ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯ, ಮಡಿವಾಳ ಮಾಚಯ್ಯ, ಹಡಪದ ಅಪ್ಪಣ್ಣ ಇವರೆಲ್ಲ ಮೊದಲಾದವರನ್ನ, ಆಮೇಲೆ ಅಕ್ಕಮಹಾದೇವಿ, ಸೂಳೆ ಸಂಕವ್ವ ಮೊದಲಾದ ಈ ಜನಸಮುದಾಯದ ಎಲ್ಲ, ಸಾಮಾನ್ಯತಾ ಅನ್ನುವ ಒಂದು ಪ್ರಜ್ಞೆ ಅದ ಅಲ್ಲ ಅದನ್ನು ಜಾಗೃತಗೊಳಿಸಿದ ಬಸವಣ್ಣ. ಸ್ಥಳೀಯ ಪ್ರಜ್ಞೆ ಜಾಗೃತಗೊಳಿಸಿದ ಬಸವಣ್ಣ. ಹೀಗಾಗಿ ೧೨ನೆಯ ಶತಮಾನದ ಒಂದು ಹೋರಾಟ ಅಂದರೆ ವಲಸೆ ಧರ್ಮಗಳ ವಿರುದ್ಧ ಸ್ಥಳೀಯರು ಎತ್ತಿದಂತಹ ಒಂದು ಧ್ವನಿ. ನಾವು ಕನ್ನಡಿಗರು ಎತ್ತಿದಂತಹ ಧ್ವನಿ. ಇದು ಕೇವಲ ಲಿಂಗಾಯತ ಅಂತ ಅಂದಾಗ ಇವತ್ತಿನ ಲಿಂಗಾಯತ ಅಂತ ತಿಳಕೋಬೇಡಿ. ಆಗಿನ ಕಾಲದ ಎಲ್ಲಾ ದಲಿತರು, ಕಾರ್ಮಿಕರು ಒಷ್ಟೂ ಜನ ಎಲ್ಲಾ ಬಸವಣ್ಣನ ಕೂಡ ಕೂಡಿದರು. ಹೀಗಾಗಿ ೧೨ನೆಯ ಶತಮಾನದಲ್ಲಿ ಸೃಷ್ಟಿಯಾದಂಥ ಬಸವಣ್ಣನ ಧರ್ಮ ಅದ ಅಲ್ಲ, ಲಿಂಗಾಯತ ಧರ್ಮ ಅದ ಅಲ್ಲ, ೧೨ನೆಯ ಶತಮಾನದ ಸೃಷ್ಟಿ ಅದು. ಈ ಧರ್ಮದೊಳಗ ಅಂಬಿಗರು ಅದಾರ, ಮಾದರದಾರ, ಡೋಹರದಾರ, ಸಮಗಾರರದಾರ ಇಲ್ಲಿ ಎಲ್ಲಾ ಜಾತಿಯ ಜನ ಇದ್ದಾರೆ. ಹೀಗಾಗಿ ಇದು ಲಿಂಗಾಯತ ಧರ್ಮ ಎಂದರೆ ಸಮಗ್ರ ಕನ್ನಡಿಗರು, ಎಲ್ಲಾ ಸಮುದಾಯದ ಕನ್ನಡಿಗರು ಕಟ್ಟಿದಂತಹ ಕರ್ನಾಟಕದ ಮೊಟ್ಟ ಮೊದಲನೆಯ ಧರ್ಮ ಇದು. ಇದಕ್ಕಿಂತ ಮೊದಲನೆಯ ಧರ್ಮಗಳೆಲ್ಲ ವಲಸೆ ಧರ್ಮಗಳು. ಇದನ್ನ ಸ್ಪಷ್ಟ ತಿಳಕೋಬೇಕು. ಅದಕ್ಕಾಗಿ ಲಿಂಗಾಯತ ಎನ್ನುವದನ್ನು ನಾವು ಇನ್ನೇಲೆ ಇದು ಕನ್ನಡಿಗರು ಕಟ್ಟಿದ ಧರ್ಮ. ಬಸವಣ್ಣನವರ ನೇತೃತ್ವದೊಳಗ ಎಲ್ಲಾ ಸಮಾಜದ ಜನರು ಕೂಡಿ ಕಟ್ಟಿದಂತಹ ಧರ್ಮ. ಕನ್ನಡಿಗರು ಕಟ್ಟಿದಂತಹ ಧರ್ಮ. ಕನ್ನಡದ ಧರ್ಮ ಅನ್ನುವ ಒಂದು ವಿಚಾರ ಅದ ಅಲ್ಲ ಇದನ್ನ ನಾವು ಹೆಚ್ಚು ಪ್ರಚಾರ ಮಾಡಿದ್ದೇ ಆದರೆ ಪ್ರತಿಯೊಬ್ಬರಿಗೂ ಏನ ಅನಸ್ತದೆ. ಹೌದು ಇದರಾಗ ನಮ್ಮದೂ ಪಾಲದ ಅಂತ, ಅಂಬಿಗರೂ ಬರ್ತಾರ, ಹೌದು ಇದರಾಗ ನಮ್ಮದೂ ಪಾಲ ಐತಿ, ಬಸವಣ್ಣನವರಿಗೆ ನಾವೂ ಸಹಕಾರ ಮಾಡಿದ್ದೇವೆ ಅಂತ. ಆಮೇಲೆ ಡೋಹರ ಬರ್ತಾರೆ. ಮಾದರ ಬರ್ತಾರೆ ನಮ್ಮದೂ ಪಾಲಿದೆ ಈ ಧರ್ಮ ಕಟ್ಟುವಲ್ಲಿ. ಇದು ಕನ್ನಡಿಗರ ಧರ್ಮ, ಕರ್ನಾಟಕದ ಧರ್ಮ ಎಂಬ ಒಂದು ಅಭಿಪ್ರಾಯವನ್ನ ಪದೇ ಪದೇ ನಾವು ನೆನಪ ಮಾಡಿಕೊಳ್ಳಬೇಕು ಮತ್ತು ಸಮಾಜಕ್ಕೆ ನೆನಪ ಮಾಡಿಕೊಡಬೇಕು. ಹೀಗಾಗಿ ಆ ಕಾಲದೊಳಗ ಅವರು ಏನ ಮಾಡಿದರು ಅಂತಂದರೆ, ಏನು ವೈದಿಕರ ಒಂದು ದಬ್ಬಾಳಿಕೆ, ಭಾಷಾ ದಬ್ಬಾಳಿಕೆ ಸಂಸ್ಕೃತದ ಮೂಲಕ ಅದನ್ನು ಸರಿಸಿಬಿಟ್ಟರು.

ಅದೇನು ಶರಣರು ಬರುವುದಕ್ಕಿಂತ ಮೊದಲ ಎಂಥಾ ಸಂಸ್ಕೃತದ ಕನ್ನಡ ಬಳಸ್ತಾ ಇದ್ದರಂದರೆ ಅದೇನು ಆಸ್ಥಾನ ಪಂಡಿತರಿಗೇ ಕನ್ನಡ ತಿಳಿಯದಾಗಿತ್ತು. ಹೊಯ್ತ ಆ ಭಾಷೆ, ಈಗ ನನಗೇ ಆಶ್ಚರ್ಯ ಅನ್ನಸ್ತಾಯಿದೆ. ಪಂಪ, ರನ್ನ, ದೊಡ್ಡ ದೊಡ್ಡ ಕವಿಗಳೆಲ್ಲ ನಮ್ಮ ಮಾದರ ಚೆನ್ನಯ್ಯಗ ಅಂಜಿದರು. ಅದೇನು 'ಚತುಳಿತ ಚಕ್ರನೇಮಿ ಪರಿವ್ರತನಘಟ್ಟನ ಘಾತ ನಿರ್ಭರ ಸ್ಪುಟಿತ ತರಾತರ ವಿಜಯಂ.......ಇದು ಕನ್ನಡ? ಎಲ್ಲಿದೋ ಇದು ಕನ್ನಡ ಅಂದ್ರು, ಇವರೆಲ್ಲ ಲಿಂಗಾಯತರು ಎದ್ದರು. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ...... ಇದು ಕನ್ನಡ ಅಂದರು. ಹೀಗಾಗಿ ಭಾಷೆಯ ಮೂಲಕ ಏನು ದಬ್ಬಾಳಿಕೆ ನಡೆದಿತ್ತಲ್ಲ ಅದನ್ನ ಮೂಲೆಗುಂಪು ಮಾಡಿದ್ದು, ಮತ್ತು ಸಾಹಿತ್ಯದ ಮೂಲಕ ಏನು ದಬ್ಬಾಳಿಕೆ ನಡೆದಿತ್ತಲ್ಲ ರಾಮಾಯಣ, ಮಹಾಭಾರತ, ೧೨ನೆಯ ಶತಮಾನದ ಹಿಂದ ಹುಟ್ಟಿದಂತಹ ಸಾಹಿತ್ಯವೆಂದರೆ ಅದೆಲ್ಲ ಉತ್ತರಭಾರತದ ಸಾಹಿತ್ಯದ ಮತ್ತು ಅನುವಾದವೇ ಒಂದು ಅರ್ಥದೊಳಗ ಪಂಪ ಬರೆದಂಥ ಭಾರತ ಅದು ವೈದಿಕರದು. ಪಂಪ ಬರೆದಂಥ ಆದಿಪುರಾಣ ಉತ್ತರ ಭಾರತದ ಜೈನರದು. ಆಮೇಲೆ ಪಂಚತಂತ್ರ ಯಾವುದೇ ಕೃತಿಯನ್ನು ತೆಗೆದುಕೊಂಡರೂ ಸಹ ೧೨ನೆಯ ಶತಮಾನದ ಹಿಂದ ಹುಟ್ಟಿದಂತಹ ಸಾಹಿತ್ಯ ಅದ ಅಲ್ಲ, ಅದು ಕನ್ನಡದ ಮೂಲ ಅಲ್ಲವೇ ಅಲ್ಲ. ಅದು ಉತ್ತರಭಾರತದ ಸಾಹಿತ್ಯದ ಒಂದು ಅನುವಾದವೋ ಅಥವಾ ಅನುಕರಣೆಯೊ ಆಗಿ ಬಂದದ್ದು. ಆದರೆ ನಮ್ಮ ಒಂದು ಸ್ಥಳೀಯವಾದಂತಹ ಪ್ರಕ್ರಿಯೆಯನ್ನಿಟ್ಟುಕೊಂಡು ಬರೆದಂಥ ಮೊಟ್ಟ ಮೊದಲನೆಯ ಕನ್ನಡಿಗರ ಸಾಹಿತ್ಯ ಅಂದರ ವಚನ ಸಾಹಿತ್ಯ, ಈಗೇನಾಯ್ತು ಇದಕ್ಕಿಂತ ಮೊದಲ ಸಾಹಿತ್ಯದ ಸಿಂಹಾಸನದ ಮೇಲೆ ರಾಮ ಕೃಷ್ಣ ಕುಳಿತಿದ್ದರು. ಕನ್ನಡಿಗರಂದರು ಯಾರ ಇವರು ಇಲ್ಲಿ ಬಂದ ಕೂಡಲಾಕ? ನೀವು ಎಲ್ಲಿಯವರು? ಮಥುರೆಯ ಕೃಷ್ಣ. ಅಯೋಧ್ಯೆಯ ರಾಮ ನೀವ್ಯಾರ ನೀವು ಇಲ್ಲಿ ಬಂದ ಕೂಡಲಾಕ, ನಮ್ಮ ಸಾಹಿತ್ಯದ ಮ್ಯಾಲ ಬಂದ ಕೂಡಲಾಕ? ಪ್ರಶ್ನೆ ಮಾಡಿದರು. ಪ್ರಶ್ನೆ ಮಾಡಿ ಏನ ಮಾಡಿದರು ಅಂದ್ರ ಮೊದಲ ಇಳಿರಿ ಅಂದರು ನಮ್ಮ ಸಿಂಹಾಸನದ ಮ್ಯಾಲಿಂದ. ಯಾರನ್ನು ಕೂಡಿಸಿದರು. ಮಾದರ ಚೆನ್ನಯ್ಯನನ್ನು ಕೂಡಿಸಿದರು. ಸಾಹಿತ್ಯದ ಕಥಾನಾಯಕನನ್ನಾಗಿ ಮಾಡಿದರು. ನೋಡಿ ಕೃಷ್ಣ ಕುಂತ ಸಾಹಿತ್ಯದ ಸಿಂಹಾಸನದ ಮೇಲೆ ಮಾದರ ಚೆನ್ನಯ್ಯನನ್ನು ಕೂಡಿಸಿದ್ದು ಸಾಮಾನ್ಯ ಕೆಲಸವಲ್ಲ. ಸಾಹಿತ್ಯದೊಳಗ ಮಾಡಿದಂತಹ ಈ ಒಂದು ಕ್ರಾಂತಿ ಅದ ಅಲ್ಲ ಇದು ಬಹಳ ದೊಡ್ಡ ಕ್ರಾಂತಿ. ಅಕ್ಕಮಹಾದೇವಿಗೆ ಕೂಡಿಸಿದರು. ಅಕ್ಕಮಹಾದೇವಿ ಕಥಾನಾಯಕಿ ಆದಳು. ನಮ್ಮ ಓಣಿ ಒಳಗ ತಿರುಗಾಡುವಂಥ ಒಬ್ಬ ಮಹಿಳೆ ಆಕೆ ಒಂದು ಅರ್ಥದೊಳಗ, ಅದರ ಬದಲಿ ಏನು ಸೀತೆ ದ್ರೌಪದಿಗಳಿದ್ದರಲ್ಲ ಅವರೆಲ್ಲ ತಮ್ಮ ತಮ್ಮ ರೀತಿಯಲ್ಲಿ ಹೋಗಿಬಿಟ್ಟರು. ಹೋಗಿ ನಮ್ಮ ಪರಿಸರದ ಎಲ್ಲಾ ಸಾಮಾನ್ಯರದಾರಲ್ಲಾ ಅವರೆಲ್ಲ ಕಥಾನಾಯಕರಾಗಿ ಬೆಳೆದದ್ದು ಅದ ಅಲ್ಲಾ ಇದು ಶರಣರು ಸಾಹಿತ್ಯದ ಮೂಲಕ ಮಾಡಿದಂತಹ ಬಹಳ ದೊಡ್ಡ ಕ್ರಾಂತಿ ಅಂತ ನಮಗ ಅನ್ನಸ್ತಾಯಿದೆ. ಹೀಗೆ ಭಾಷೆಯ ಮೂಲಕ, ಸಾಹಿತ್ಯದ ಮೂಲಕ ಆಮೇಲೆ ಧರ್ಮದ ಮೂಲಕ ದೊಡ್ಡ ಕ್ರಾಂತಿಯನ್ನು ಮಾಡಿದರು.

ಲಿಂಗಾಯತ ಅನ್ನುವುದು ಅವೈದಿಕ ಧರ್ಮ. ಇದು ಹಿಂದೂ ಧರ್ಮ ಅಲ್ಲ. ಹಿಂದೂ ಅನ್ನುವುದು ಒಂದು ಧರ್ಮನೇ ಅಲ್ಲ. ಒಂದು ಮೋಸ ಆ ಶಬ್ದ. ನಾನು ಒಂದು ತಿಂಗಳ ಹಿಂದೆ ಸಿದ್ಧರಾಮಯ್ಯನವರಿಗೆ ಪತ್ರ ಬರೆದಿದ್ದೆ. ಬೆಂಗಳೂರು ಒಳಗ ಒಬ್ಬರು ಜಾತಿ ಜನಗಣತಿಯ ಪ್ರಶ್ನಾವಳಿ ಕೊಟ್ಟರು ನೋಡಿದೆ ನಾನು. ನೀವೇನು ಜಾತಿ ಜನಗಣತಿ ಒಳಗ ಜಾತಿ ಕೇಳಿ, ಯಾವ ಜಾತಿಯವರು ಎಷ್ಟ ಪ್ರಮಾಣದಾಗ ಅದಾರ ಅನ್ನುವ ದಾಖಲೆ ತೆಗೆದುಕೊಳ್ಳಿ, ಜಾತಿ, ಉಪಜಾತಿ ಇಷ್ಟ ಕೇಳಿ, ಧರ್ಮ ಯ್ಯಾಕ ಕೇಳೀರಿ? ಆಮೇಲೆ ಧರ್ಮ ಕೇಳುವಾಗ ಯಾವ ಧರ್ಮ ಅದಾವ? ಬೌದ್ಧ ಧರ್ಮ ಅದ, ಜೈನ ಧರ್ಮ ಅದ. ವೈದಿಕ ಧರ್ಮ ಅದ. ಆಮೇಲೆ ಇಸ್ಲಾಮ್ ಅದ. ಕ್ರಿಶ್ಚಿಯನ್ ಅದ. ನೀವು ಹಿಂದೂ ಯಾಕ ಹಾಕೀರಿ ಇದರೊಳಗ? ಹಿಂದೂ ಧರ್ಮ ಅಲ್ಲ. ಆ ಶಬ್ದ ಒಂದು ಮೋಸ ಅದು. ಹಿಂದೂ ಧರ್ಮ ಅನ್ನುವುದಾದರೆ ಕ್ರಿಶ್ಚಿಯನ್ನರು ಮುಸ್ಲಿಮರನ್ನು ಹೊರತುಪಡಿಸಿ ಉಳಿದವರೆಲ್ಲರನ್ನೂ ಸೂಚಿಸುವಂತಹ ಒಂದು ಜನವಾಚಿ ಶಬ್ದ ಅದು. ಅದೊಂದು ಜನ ಸಮುದಾಯವಾಚಿ ಶಬ್ದ. ಅದು ಧರ್ಮದ ಒಂದು ಸಂಕೇತ ಅಲ್ಲ ಅಂತ ಅವರಿಗೆ ನಾನು ಪತ್ರ ಬರೆದು ವಿನಂತಿ ಮಾಡಿಕೊಂಡೆ . ಅದರ ಅದಕ್ಕೆ ಅವರೇನೂ ರಿಸ್ಪಾನ್ಸ್ ತೋರಿಸಲಿಲ್ಲ. ಆ ಮಾತು ಬೇರೆ. ಹೀಗೆ ೧೨ನೆಯ ಶತಮಾನದೊಳಗ ವಿದ್ಯೆಯೆಂದರೆ ರಾಮಾಯಣ ಮಹಾಭಾರತವಲ್ಲ. ಇಂತಹ ಮಾತುಗಳನ್ನು ಆಡುವದರ ಮೂಲಕ ಒಂದು ಹೊಸ ಧರ್ಮವನ್ನ ಬಸವಣ್ಣ ೧೨ನೆಯ ಶತಮಾನದಲ್ಲಿ ಕಟ್ಟಿದ್ದು ಬಹಳ ಮುಖ್ಯವಾದ ಸಂಗತಿಯಾಗಿದೆ. ಕೇವಲ ಧಾರ್ಮಿಕವಲ್ಲ ರಾಜಕೀಯಕ್ಕಾಗಿ ಎಂತಹ ಮಾತು ಆಡ್ತಾನೆಂದರೆ ಅನೀ ಬಿಜ್ಜಳಂಗಂಜುವೆನೇನಯ್ಯಾ?, ಭವಿ ಬಿಜ್ಜಳ ಅಂತ ಬಸವಣ್ಣ ಬಳಸ್ತಾರೆ...... ಇವತ್ತು ನಾವು ಯಾರೂ ಚೀಫ್ ಮಿನಿಸ್ಟರ್ ಪ್ರೈಮ್ ಮಿನಿಸ್ಟರಗೆ ಇಂತಹ ಶಬ್ದ ಬಳಸುವುದಿಲ್ಲ. ಆದರೆ ಬಸವಣ್ಣ ಭವಿ ಬಿಜ್ಜಳ ಎನ್ನುವಂತಹ ಶಬ್ದ ಬಳಸ್ತಾನೆ. ಹೀಗೆ ಬಳಸುವ ಮೂಲಕ ಯಾರು ಸಮಾಜವಾದಿಯಾಗಿರುವುದಿಲ್ಲ ಅವರ ವಿರುದ್ಧ ಒಂದು ಕೂಗನ್ನು ಎತ್ತಿದ್ದು ಇಲ್ಲಿ ನಮಗ ಗೊತ್ತಾಗುತ್ತದೆ. ಅಂದರೆ ಒಟ್ಟಾಗಿ ಹೇಳೇಕಾಗಿದ್ದು ೧೨ನೆಯ ಶತಮಾನದ ಹೊತ್ತಿಗೆ ನಮ್ಮ ಅಸ್ಮಿತೆ ವಿಸ್ಕೃತಿಯಾಗಿತ್ತು. ಅಸ್ಮಿತೆ ಅಂದ್ರ ನನ್ನತನಾ, ನನ್ನತನಾ ವಿಸ್ಮತಿಯಾಗಿತ್ತು. ಉತ್ತರಭಾರತ ಭಾಷೆ, ಉತ್ತರಭಾರತ ಸಾಹಿತ್ಯ, ಉತ್ತರಭಾರತದ ರಾಮ, ಉತ್ತರಭಾರತದ ಕೃಷ್ಣ, ಬರೀ ಇವೇ ತುಂಬಿ ಬಿಟ್ಟಿತ್ತು ಆವಾಗ. ಹೀಗಾಗಿ ನಮ್ಮ ಅಸ್ಮಿತೆ ನಾಶವಾಗಿತ್ತು; ಅಸ್ಮಿತೆ ವಿಸ್ಕೃತಿಯಾಗಿತ್ತು. ನಮ್ಮ ಶರಣರು ಅಸ್ಮಿತೆಯನ್ನು ಜಾಗೃತ ಮಾಡಿದರು. ಅದಕ್ಕ ಅಸ್ಮಿತೆಯ ವಿಸ್ಕೃತಿಯ ಬದಲಾಗಿ ಅಸ್ಮಿತೆಯ ಜಾಗೃತಿಯನ್ನುಂಟು ಮಾಡಿ ಹೊಸ ಒಂದು ವಾತಾವರಣವನ್ನೇ ೧೨ನೆಯ ಶತಮಾನದಲ್ಲಿ ಅವರು ಸೃಷ್ಟಿ ಮಾಡಿದ್ರು, ಅದು ನಮಗ ಬಹಳ ಮುಖ್ಯವಾದಂತಹ ಒಂದು ಘಟನೆ ಅಂತ ಅನಸ್ತಾಯಿದೆ.

ಒಂದ ವಿಷಯ ಈ ಧರ್ಮದ ಹೆಸರೇನು? ಲಿಂಗಾಯತವೋ ವೀರಶೈವವೋ? ವೀರಶೈವ ಅಲ್ಲಾ ಅಲ್ಲಾ ಅಲ್ಲಾ. ಇದರ ಹೆಸರ ಲಿಂಗಾಯತ, ವೀರಶೈವ ಅನ್ನುವ ಶಬ್ದ ಮೊದಲ ಬಂದಿದ್ದೇ ೧೩೬೮ ರ ಭೀಮಕವಿಯ ಬಸವಪುರಾಣದೊಳಗ ಇದನ್ನ ನಾ ಎಷ್ಟ ವರ್ಷದಿಂದ ಹೇಳ್ತಾಯಿದ್ದೀನಿ. ಇದನ್ನ ನಾ ಹೇಳೋದು, ಚಿದಾನಂದ ಮೂರ್ತಿಯವರು ಅದನ್ನ ಸರಸಿ ತನ್ನದೊಂದ ಅದೇ ಹಳೀ ಪುರಾಣ ಓದುದು. ಹೀಗಾಗಿ ನನಗೆ ಒಂದರೀತಿ ಬ್ಯಾಸರ ಆಗ್ಯಾದ. ಏನ್ಬರಿಬೇಕು. ಎಷ್ಟೋ ಜನ ನನಗ ಫೋನ್ ಮಾಡ್ತಾರಾ-ಸರ್ ಅವಂಗ ಉತ್ತರಕೊಡ್ರಿ ಅಂತ. ಮಾರಾಯರ, ನನಗೆ ಬ್ಯಾಸರ ಆಗ್ಯಾದಪಾ ಹಾಡಿದ್ದು ಹಾಡೋವು ಹಾಡ್ತಾರ ನನಗೆ ಅದು ಆಗುದಿಲ್ಲ. ಅದಕ್ಕೆ ೧೩೬೮ಕ್ಕ ವೀರಶೈವ ಪದ ಬಂತು. ಆಮೇಲೆ ಅದಕ್ಕೆ ಮತ್ತು ಪ್ರಾಚೀನತೆಯನ್ನು ಕಟ್ಟಿಸುವ ಉದ್ದೇಶದಿಂದ ಕೆಲವು ಖೋಟಾ ವಚನಗಳನ್ನು ಸೃಷ್ಟಿ ಮಾಡಿ ವೀರಶೈವ ಶಬ್ದ ಸೇರಿಸಿ ವಚನಗಳನ್ನು ಸೃಷ್ಟಿ ಮಾಡಿದ್ರು. ಅಂತಹ ಖೋಟಾ ವಚನಗಳನ್ನು ಮುಂದಿಟ್ಟಗೊಂಡು ವೀರಶೈವ ವಚನದೊಳಗ ಬಂದದ ಅಂತ ಅವರು ಹೇಳಿದರ, ಕೆಲವು ಜನ ಭಕ್ತ ವರ್ಗದವರು ಅದನ್ನು ಬೆಂಬಲಿಸ್ತೀರಿ. ನೀವು ಮತ್ತು ಪುರೋಹಿತ ವರ್ಗದವರು ವೀರಶೈವವೇ ಪ್ರಾಚೀನ ಅಂತ ಹೇಳಿದ್ರೆ
ಅದಲ್ಲ ಅಂತ ನಾವು ನಾಲ್ಕಾರು ಜನ ನಾನಾಗಲಿ ಮಹಾದೇವಪ್ಪ ಆಗಲಿ, ರಾಜೂರ ಆಗ್ಲಿ ನಾವೆಲ್ಲ ವಿರೋಧ ಮಾಡಿ ಪತ್ರಿಕೆಯೊಳಗ ಬರದ್ರ ಪುಸ್ತಕ ಬರದ್ರ, ಅದನ್ನು ಬೆಂಬಲಿಸೋದು ಬಿಟ್ಟು ಅಂತಹ ವಿಚಾರಗಳನ್ನೆ ತಪ್ಪು ವಿಚಾರಗಳನ್ನೇ ನೀವು ಬೆಂಬಲಿಸ್ತಾ ಇದ್ದೀರಿ. ಇದು ಎಲ್ಲವರಿಗೂ ನಿಲ್ಲುವುದಿಲ್ಲ ಅಲ್ಲಿಯವರಿಗೂ ನಿಜವಾದ ಲಿಂಗಾಯತ ಅದು ಆವಿಷ್ಕಾರಗೊಳ್ಳುವುದಿಲ್ಲ. ಅದು ಪ್ರಕಟ ಆಗುವುದಿಲ್ಲ. ಆ ರೀತಿಯಿಂದ ನಾವು ಇನ್ನೇಲಾದರೂ ಸಹ ಹಿಂದೂ ಎನ್ನುವುದು ಧರ್ಮವಲ್ಲ; ನಾವು ಹಿಂದೂಗಳಲ್ಲ. ಆಮೇಲೆ ವೀರಶೈವ ಎನ್ನುವದು ಲಿಂಗಾಯತಕ್ಕೆ ಪರ್ಯಾಯವಾದ ಪದ ಅಲ್ಲ.

ಇಂತಹ ಕೆಲವು ಮೂಲಭೂತ ಪರಿಕಲ್ಪನೆಗಳನ್ನು ಗಟ್ಟಿಯಾಗಿ ನಂಬಿಕೊಂಡು ಅವುಗಳನ್ನ ಪ್ರಚಾರ ಮಾಡಬೇಕಂತ ನಾನು ಕೇಳ್ಕೊಳ್ತಾ ಇದ್ದೀನಿ. ಸ್ವಲ್ಪ ಇದು ಇತಿಹಾಸ ಆಯ್ತು.

ಇನ್ನು ಸ್ವಲ್ಪ ಸಿದ್ಧಾಂತದ ಬಗ್ಗೆ ಹೇಳಬೇಕಾದರೆ. ಇದನ್ನ ಭಕ್ತಿ ಚಳುವಳಿ, ಭಕ್ತಿ ಚಳುವಳಿ ಅಂತ ಕರೀತಾ ಇದ್ದೀವಿ. ನಾವು ಇದನ್ನ ಭಕ್ತಿ ಚಳುವಳಿ ಅಂತ ಕರೀತಾ ಹೋಗ್ಬಿಟ್ರೆ ಏನಾಗುತ್ತೆ ಅಂದ್ರೆ ಇದೊಂದು ಭಜನಾ ಮಾಡೂ ಚಳುವಳಿ ಅಂತರ್ಥ. ಕೆಲವು ವರ್ಷಗಳ ಹಿಂದೆ ದಿಲ್ಲಿ ಒಳಗ ಇದೇ ಕನ್ನಡಿಗರೇ ಒಂದು ಭಾರತದಲ್ಲಿ ಭಕ್ತಿ ಚಳುವಳಿ'ಯನ್ನುವಂಥ ಒಂದು ದೊಡ್ಡ ಸಮ್ಮೇಳನ ಮಾಡಿದರು. ಅದೇ ಕನ್ನಡಿಗರೇ ಅದೇ ಲಿಂಗಾಯಿತರೇ ಮಾಡಿದರು. ಆ ಭಕ್ತಿ ಚಳುವಳಿ ಅಂತನುವಾಗ ಏನೇನ ನಮ್ಮ ಈ ಉತ್ತರ ಭಾರತದವರದಾರಲ್ಲ ಕಬೀರದಾಸ, ರಾಮದಾಸ ಇವರೆಲ್ಲ ಅದಾರಲ್ಲ, ಆಮೇಲೆ ಮೀರಾಬಾಯಿ ಇವರೆಲ್ಲರ ಜೊತೆ ಶರಣರನ್ನೂ ಒಂದು ಭಕ್ತಿ ಅಂತ ಹಾಕಿ ತಗೊಂಡಬಿಟ್ರು. ಅವರಿಗೆ ಏನ ಅನಿಸ್ಬಿಟ್ಟಂದ್ರ ಇದೂ ಒಂದು ಭಜನಾ ಮಾಡುವಂಥ ಧರ್ಮ ಅಂತ ಒಂದು ಭಾವನೆ ಬಂದ್ದಿತ್ತು. ಇದೂ ಭಕ್ತಿ ಮೂಲ ಅಂದ್ರ ಅದನ್ನ ಒಪ್ಪಕೊಳ್ಳಿ, ಭಕ್ತಿ ಇದರ ಬುನಾದಿ. ಇದರ ಮ್ಯಾಲೆ ಬೆಳೆದದ್ದ ಧರ್ಮ. ಆದರೆ ಇದು ಭಕ್ತಿಗೆ ಮಾತ್ರ ನಿಲ್ಲುವುದಿಲ್ಲ. ಚೆನ್ನಬಸವಣ್ಣನವರ ಒಂದು ವಚನ ಇದೆ. ಲಕ್ಷಕ್ಕೊಬ್ಬ ಭಕ್ತ ಕೋಟಿಗೊಬ್ಬ ಶರಣ. ಭಕ್ತರಿಗಿಂತ ಶರಣ ದೊಡ್ಡವ. ಎಷ್ಟೇ ಆದರೂ ಇದು ಬರೀ ಭಕ್ತಿ ಚಳುವಳಿ ಇತ್ತು. ಅದನ್ನ ಶರಣ ಚಳುವಳಿಯಾಗಿ ಮಾರ್ಪಡಿಸಿದವರು ಕಲ್ಯಾಣದ ಶರಣರು ಬಸವಣ್ಣನವರು. ಲಕ್ಷಕ್ಕೊಬ್ಬ ಭಕ್ತ ಕೋಟಿಗೊಬ್ಬ ಶರಣ ಅಂದ್ರ ಭಕ್ತಿಗಿಂತ ಶರಣ ದೊಡ್ಡಾವ ಹಾಗಾದರೆ ನೀವು ಭಕ್ತರೋ? ಶರಣರೋ? ಶರಣರು ಅಂತ ಹೇಳ್ಬೇಕು ಇನ್ನೇಲೆ.

ಹೌದು ಭಕ್ತಿ ಇರ್ತದ ಅದಕ್ಕೆ ಬುನಾದಿಯಾಗಿ ಭಕ್ತಿ ಇರ್ತದ. ಆದ್ರೆ ನಾವು ಶರಣರು, ಭಕ್ತಿ-ವ್ಯಕ್ತಿವಾದಿ. ಆತ್ಮೋದ್ಧಾರಕ ವಿಚಾರ ಮಾಡುವವ. ಶರಣ ಆತ್ಮೋದ್ಧಾರದ ಕೂಡ ಸಮಾಜೋದ್ಧಾರ ಮಾಡುವವನು. ಇದು ಬಸವಣ್ಣನವರು ಹೇಳಿದ್ದು.

ಅದಕ್ಕೆ ಬಸವಣ್ಣನವರು ಹೇಳ್ತಾರೆ. 'ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ' ಸೋಹಂ ಅದು ಆತ್ಮವಾದಿ ಆತ್ಮೋದ್ಧಾರ ಅಷ್ಟೆ. ಶಂಕರಾಚಾರ್ಯರದು ಸೋಹಂ ಅದ ಅಲ್ಲ ಇದು ಸ್ವ ಅಹಂ ಅಂದ್ರ ನಾನು ದೇವ್ರಾಗೋದು. ತಗೊಂಡು ಏನ ಮಾಡ್ತೀರಿ? ನಿಮ್ಮ ಮನೀಗಿ ನೀವು ದೇವ್ರ ಆಗಿ ಕೂತ್ರಿ, ಆಮೇಲೆ ಅವ ದೇವ್ರಾಗಿ ಕುಂತ, ಅದರಿಂದ ಆಗೂದಾದ್ರೂ ಏನು? ಸಮಾಜ ಅದ. ಸಮಾಜದಾಗ ಬದುಕಬೇಕಾಗೈತಿ ನಾವು. ಅದಕ್ಕೆ ಬಸವಣ್ಣ 'ಸೋಹಂ' ಸಂಸ್ಕೃತಿಗೆ ಬಂದು ನಿಂತ ಭಾರತೀಯ ಧಾರ್ಮಿಕ ಇತಿಹಾಸ ಇತ್ತಲ್ಲ, ಅದನ್ನ 'ದಾಸೋಹಂ' ಸಂಸ್ಕೃತಿಯಾಗಿ ಬೆಳೆಸಿದ ಅನ್ನುವದನ್ನ ನಾವಿಲ್ಲಿ ಗಮನಿಸಬೇಕಾಗ್ತದೆ.

ಅದಕ್ಕಾಗಿ ಪ್ರಭುದೇವರು ಒಂದು ಮಾತು ಹೇಳ್ತಾರೆ. 'ಕವಿತ್ವ ಸಾಧಕರೆಲ್ಲ ಕಳವಳಿಸಿ ಹೋದರು. ವಿದ್ಯಾ ಸಾಧಕರೆಲ್ಲ ಬುದ್ಧಿಗೆಟ್ಟರು. ತತ್ವ ಸಾಧಕರೆಲ್ಲ ಏನೋ ಆಗಿ ಹೋದರು. ಲಿಂಗ ಸಾಧಕರೆಲ್ಲ ಭೂಭಾರಕರಾದರು. ಆತ್ಮವಾದಿ ಇದ್ದೀರಲ್ಲ. ನೀವು ಸೋಹಂ ಅಂತೀರಲ್ಲ ನೀವು ಭೂಮಿಗೆ ಭಾರವಾದವರು ಅಂತ. ನಿಮ್ಮ ಮನ್ಯಾಗ ಕುಂತು ಪೂಜಾ ಮಾಡಿ ಅಥವಾ ಗವ್ಯಾಗ ಕುಂತ ಪೂಜಾ ಮಾಡಕೊಂತ ಕುಂತ್ರ ಭೂಮಿಗೆ ಭಾರವಾದಿರಿ ಅಂತ ನೀವು. 'ಲಿಂಗ ಸಾಧಕರೆಲ್ಲ ಭೂಭಾರಕರಾದರು. ನಮ್ಮ ಗುಹೇಶ್ವರ ಲಿಂಗದಲ್ಲಿ ಜಂಗಮ ಸಾಧಕನಾದಾತ ಬಸವಣ್ಣ ಒಬ್ಬನೇ ಎಂಥಾ ಎಂಥಾ ಎಂಥಾ ಮಾತು. ನಾವೆಲ್ಲ ನಾವು ಭಕ್ತರರೀ, ನಾವೆಲ್ಲ ಲಿಂಗ ಪೂಜಕರರೀ, ಹೌದು ಇರಬೇಕದು. ಹಂಗ್ಯಾಂಗ ಇರಬಾರದೆಂದ ಬಸವಣ್ಣ ನಮ್ಮದು 'ಸೋಹಂ ಸಂಸ್ಕೃತಿ ಅಲ್ಲ.' 'ದಾಸೋಹಂ ಸಂಸ್ಕೃತಿ' ನಮ್ಮದು ಭಕ್ತ ಸಂಸ್ಕೃತಿ ಅಲ್ಲ. ಶರಣ ಸಂಸ್ಕೃತಿ ನಮ್ಮದು ಅಂದ.

ಆದುದರಿಂದ ಇನ್ಮೇಲೆ ನಾವು ನಿಜವಾದ ಒಂದು ತತ್ವ ಏನು ಅನ್ನೋದನ್ನ ತಿಳಿದುಕೊಂಡು ಮುಂದುವರಿಯುವುದು ಅವಶ್ಯ ಅದ.

ಅಂದ್ರ ಎರಡು ಕೆಲಸ ಆಗಬೇಕಾಗೈತಿ. ಇವೆಲ್ಲ ಭಾಷಣ ಸ್ವಾಮಿಗೋಳು. ಭಕ್ತರು ನಾವಿದ್ದೀವಲ್ಲ. ನಾವು ಬಸವ ದ್ರೋಹಿಗಳಿದ್ದೀವಿ. ಕಣ್ಣು ಮುಚ್ಕೋಂಡು ಹಾಲು ಕುಡದ್ರ ಯಾರಿಗೂ ಕಾಣೋದಿಲ್ಲ ಅಂತ ತಿಳ್ಕೊಬ್ಯಾಡ್ರಿ, ನಾವೆಲ್ಲ ಬಸವ ದ್ರೋಹಿಗಳಿದ್ದೀವಿ. ಈಗ ಮೊದಲು ಎರಡು ಕೆಲಸ ಆಗಬೇಕು.

೧. ಲಿಂಗಾಯತ ಇತಿಹಾಸ ಗ್ರಂಥ
೨. ಲಿಂಗಾಯತ ಸಿದ್ದಾಂತ ಗ್ರಂಥ

ನಿಜವಾದ ಲಿಂಗಾಯತ ಸಿದ್ಧಾಂತ ಏನದ ನಿಜವಾದ ಲಿಂಗಾಯತ ಇತಿಹಾಸ ಏನದ ಇವೆರಡೂ ಗ್ರಂಥ ಮಾಡಲಾರದ ನಾವೇನು ಸಭೆ ಸಮಾರಂಭ ಮಾಡಿದ್ರೂ ಅದು ಏನೂ ಆಗೂದಿಲ್ಲ.

ಆದ್ದರಿಂದ ಈ ಎರಡು ಪುಸ್ತಕಗಳೂ ಒಂದು ಶುದ್ಧ ಇತಿಹಾಸ ಮತ್ತು ಇನ್ನೊಂದು ಶುದ್ಧ ಸಿದ್ಧಾಂತ ಗ್ರಂಥ. ಇವು ನಾವು ಕನ್ನಡದಲ್ಲಿ ಮಾಡಬೇಕಾದ ಎರಡು ಕೆಲಸಗಳು. ಇನ್ನೊಂದು ವಿಚಾರ ಅಂತಂದರ ನೋಡಿ ಕೆಲವು ದಿವಸದ ಹಿಂದೆ ಒಬ್ಬ ಸ್ವಾಮಿಗೋಳು ಒಂದು ದೊಡ್ಡ ಪುಸ್ತಕ ಮಾಡಿದ್ದರು. ಏಳು ಸಾವಿರ ಪಾರಿಭಾಷಿಕ ಪದಗಳು ಅಂತ. ಏಳು ಸಾವಿರ ಲಿಂಗಾಯತ ಪದಗಳು ಅದಾವ ಅಂತ. ನನಗನ್ನಸ್ತು ಪಾಪ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಏಳು ಸಾವಿರ ಪದಗಳನ್ನು ಇಟ್ಟುಕೊಂಡು ಬದುಕ ಮಾಡಿದ್ರ? ಸಾಮಾನ್ಯರು ಅವರು, ದುಡಿಯೋರು ಏನೋ ಶರಣರ ಕೆಲಸ ಮಾಡಿ ಬಂದದ್ದನ್ನ ದಾಸೋಹ ಮಾಡಿ ಶಿವ ಶಿವಾಂತ ಮಲ್ಗೊಂಡು ಏಳುವಂತಹ ಜನ, ಏಳು ಸಾವಿರ ಶಬ್ದ ಪುಸ್ತಕೊಂದನ್ನ ಮಾಡ್ತಾರ? ಅದನ್ನ ಬಿಡುಗಡೆ ಮಾಡಾಕ ಬಾ ಅಂದ್ರೆ ನಾ ಬರೂದಿಲ್ಲ ಅಂದೆ. ಯಾಕಂದ್ರ ಆ ಏಳು ಸಾವಿರ ಶಬ್ದ ನಮ್ಮೂ ಅಲ್ಲ ಅಂತ ಹೇಳೆ. ಅವರ ಶೈವರ ಶಬ್ದಗಳನ್ನು ಸೇರಿಸಿ ಬಿಟ್ಟಿರಿ. ಅವು ನಮ್ಮವಲ್ಲ. ನನಗೆ ತಿಳಿದ ಮಟ್ಟಿಗೆ ನಮ್ಮ ಶಬ್ದ ಐದು. ನಮ್ಮ ಶಬ್ದಗಳು ಐದ. ಯಾಕಂದ್ರ ಯಾವುದು ದೊಡ್ಡ ಧರ್ಮ ಅಂದರ, ಯಾವುದು ಕಡಿಮಿ ಶಬ್ದ ಒಳಗೊಂಡಿರ್ತದ ಅದು ದೊಡ್ಡ ಧರ್ಮ. ಯಾವುದು ಸರಳ ಇರ್ತದ ಅದು ದೊಡ್ಡ ಧರ್ಮ. ಸುಮ್ಮನೆ ಮೂರೇಳು ದೀಕ್ಷೆ. ಇಪ್ಪತ್ತೊಂದು ದೀಕ್ಷೆ. ಆ ದೀಕ್ಷೆ ಈ ದೀಕ್ಷೆ ಇವ್ಯಾವೂ ನಮ್ಮವು ಅಲ್ಲ. ಇವೆಲ್ಲ ಶೈವರವು. ಶೈವರೆಂದರೆ ಯಾರು? ವೀರಶೈವರು. ವೀರಶೈವರೆಂದರೆ ಯಾರು? ಆರಾಧ್ಯರು. ಆಂಧ್ರದ ಆರಾಧ್ಯರು ಕರ್ನಾಟಕದ ಲಿಂಗಾಯತರ ಮೇಲೆ ಸವಾರಿ ಮಾಡಿದ್ದಾರೆ. ಇವತ್ತ ನಾವು ಅವರನ್ನ ಹೊತ್ತುಕೊಂಡು ತಿರಗಾಡತೀವಿ.

ನಮ್ಮವು ಐದೇ ಶಬ್ದಗಳು, ಐದು ಶಬ್ದ ತಿಳ್ಕೊಂಡಬಿಡ್ರಿ ಸಾಕು. ಒಂದು ಗುರು, ಒಂದು ಲಿಂಗ, ಒಂದು ಜಂಗಮ, ಒಂದು ಕಾಯಕ, ಒಂದು ದಾಸೋಹ ಸಾಕು ಮುಗೀತು. ಇವು ಐದರೊಳಗ ಅದ ನಮ್ಮ ತತ್ವ ಇವು ಐದನ್ನ ಹೊರತುಪಡಿಸಿ ಇವು ಷಟಷ್ಥಲ, ಅಷ್ಟಾವರಣ ಎಲ್ಲಾ ಇದರಾಗ ಬರತಾವ. ಅದಕ್ಕಾಗಿ ನಿಜವಾದ ಒಂದು ಸಿದ್ಧಾಂತ ಗ್ರಂಥವನ್ನು ಮಾಡಬೇಕು ಮತ್ತು ಇವತ್ತು ಲಿಂಗಾಯತರು ಏನು ಮಾಡಬೇಕು? ನಿದ್ದಿ ಮಾಡಬೇಕು ನಿದ್ದೆ. ನಾನು ಒಂದು ಕಡೆ ಮಾತಾಡಿದ್ದೆ. ಅದೇ ಮಾತನ್ನ ಇಲ್ಲಿ ಹೇಳತೀನಿ : ಇಂದು ಲಿಂಗಾಯತರು ಏನು ಮಾಡಬೇಕು

ನಂಬರ್ ಒನ್, ಲಿಂಗಾಯತದ ಶುದ್ದೀಕರಣ. ಏನೇನೋ ಸೇರ್ಕೋಂಡ ಬಿಟ್ಟಾವ ನಮ್ಮೊಳಗ.

ಮೊದಲನೆಯದು ಲಿಂಗಾಯತದ ಶುದ್ದೀಕರಣ
ಎರಡನೆಯದು ಲಿಂಗಾಯತದ ನವೀಕರಣ
ಮೂರನೆಯದು ಲಿಂಗಾಯತದ ಏಕೀಕರಣ
ನಾಲ್ಕನೆಯದು ಲಿಂಗಾಯತದ ಜಾಗತೀಕರಣ
ಐದನೆಯದು ಲಿಂಗಾಯತದ ಸಬಲೀಕರಣ.


ಇವು ಐದು ಕೆಲಸಗಳು ನಮ್ಮಲ್ಲಿ ಆಗಬೇಕಾಗ್ಯಾವ. ಶುದ್ದೀಕರಣ ನಮ್ಮ ಮನಿ ಒಳಗ ಆಗಬೇಕು. ನಮ್ಮ ಮಠದೊಳಗ ಆಗಬೇಕು. ಮೊದಲು ಮಠದೊಳಗಾಗಬೇಕು. ಯಾಕಂದರ ನಮಗ ಆದರ್ಶ ಅವರು. ನಾನೆಲ್ಲೋ ಕೆಲವು ದಿವಸದ ಹಿಂದೆ ಹೇಳಿದ್ದ ಮಾತು ಇದು. ಮಠಗಳಲ್ಲಿ ಬಸವಣ್ಣನಿಲ್ಲ. ಸ್ವಾಮಿಗಳಿದ್ದಾರೆ. ಈಗ ಇರುವ ಸ್ವಾಮಿ ತನ್ನ ದೊಡ್ಡ ಫೋಟೋ ಹಾಕಿರತಾನ. ತನ್ನ ಹಿಂದಿನ ಸ್ವಾಮಿ ಫೋಟೋ ಹಾಕಿರತಾನ. ಆ ಹಿಂದಿನ ಸ್ವಾಮಿ ಪುರಾಣ ಬರಿಸಿರುತ್ತಾರೆ. ಸುಳ್ಳ ಸುಳ್ಳ ಪುರಾಣ ಬರಿಸಿರತಾರ. ಬರಿಸಿ. ಪ್ರತಿವರ್ಷ ಪುರಾಣ ಹೇಳಿ ಅವನ ಜೀವಂತವಾಗಿ ಇಡತಾರ. ಎಲ್ಲಿಯವರೆಗೆ ನಮ್ಮ ಮಠಗಳೊಳಗ ಬಸವಣ್ಣ ಪ್ರವೇಶ ಆಗುದಿಲ್ಲಾ ಅಲ್ಲಿವರೆಗೂ ನಮ್ಮ ಮಠಗಳು ಮಠಗಳೇ ಅಲ್ಲ. ಈಗ ಏನ ಆಗದ ಅಂದರೆ ನಮ್ಮ ಮಠಗಳು ಈಗ ಶಿಕ್ಷಣ ಸಂಸ್ಥೆ ಆಗ್ಯಾವ. ಒಂದ ರೀತಿ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಕಾವಿ ಹಾಕಿದರ ಹ್ಯಾಂಗ ಕಾಣತ್ತದ ಹಾಂಗ ಅದ. ಸ್ವಲ್ಪ ತಡೀರಿ. ಸ್ವಲ್ಪ ತಡೀರಿ. ನಮ್ಮ ಸ್ವಾಮಿಗಳದ್ದು ಶಿಕ್ಷಣ ಸಂಸ್ಥೆ ಬಂದಾವ, ಮಠದೊಳಗ ಧರ್ಮ ಇಲ್ಲ. ಈಗ ಬರೀ ಶಿಕ್ಷಣ, ನಾವು ಒಂದ ಮಠಕ್ಕೆ ಹೋಗಿದ್ದೆವು. ಜಗದ್ಗುರು ಮಠಕ್ಕೆ, ಒಂದು ನೂರು ಜನ ಕುಂತಿದ್ದರು ಹಾರ ಹಿಡಕೊಂಡು. ಒಂದ ಇಪ್ಪತ್ತ ಇಪ್ಪತ್ತೈದು ಜನ ಹಿಂದ ಹಾರ, ಶಾಲ, ಅದ ಏನರ ನೋಡಿದರ ನಾನ ಎಷ್ಟ ಭಕ್ತಿ ಐತ್ಯಪಾ ಈ ಸ್ವಾಮಿ ಮ್ಯಾಲ ಎಷ್ಟ ಭಕ್ತಿ ಐತರೀ ಎಂದೆ. ಐವತ್ತ ಅರವತ್ತು ಮಂದಿ ಕ್ಯೂ ಹಚ್ಚಿ ಕುಳಿತ್ತಿದ್ದರು. ಎಂಥಾ ಹಾರ ಎಂಥಾ ಶಾಲ ಎಂಥಾ ಹಣ್ಣು ಏನ ಭಕ್ತಿ ಇವರದು ಸ್ವಾಮಿ ಮ್ಯಾಲ ಅಂದಾಗ ಇಲ್ಲಾರೀ ಇವರು ಸೀಟ ಕೇಳಲಿಕ್ಕೆ ಬಂದಾರ ಅಂತ ಹೇಳಿದರು. ಮೆಡಿಕಲ್ ಸೀಟ ಕೇಳಾಕ ಬಂದಾರ ಇವರು. ಇನ್ನ ಏನ ಇಲ್ಲ ಇನ್ನ ಹತ್ತಿ ವರ್ಷ ಬಿಟ್ಟರ ನಮ್ಮ ಸ್ವಾಮಿಗಳು ಎಂ.ಎಲ್.ಎ. ಆಗತ್ತಾರ. ರಾಜಕಾರಣಿಗಳು ಎಂ.ಪಿ. ಆಗತ್ತಾರ. ನಾಚಿಗೆ ಬರಬೇಕು. ನೀವ ಏನು, ಯಾವುದಕ್ಕಾಗಿ ನೀವು ಬದ್ಧರಾಗಿದ್ದೀರಿ? ಕೊಟ್ಟ ಕುದುರೆಯನ್ನು ಎರಲರಿಯದೇ ಮತ್ತೊಂದು ಕುದುರೆಯನು ಬಯಸುವಾತ ವೀರನೂ ಅಲ್ಲ. ಧೀರನೂ ಅಲ್ಲ, ಇನ್ನೇನು ಭಾಳ ದಿವಸ ಉಳಿದಿಲ್ಲ. ಸ್ವಾಮಿಗಳು ಎಂ.ಎಲ್.ಎ, ಎಂ.ಪಿ. ಆಗೋದು. ಆ ಮನೋಧರ್ಮ ನಮ್ಮ ಸ್ವಾಮಿಗಳಿಗೆ ಬಂದಿದೆ.

ಒಮ್ಮೆ ನಮ್ಮ ಮನೀ ಒಳಗ ಮಠದ ಬಗ್ಗೆ ಪ್ರಶ್ನೆ ಆಯಿತು. ಇನ್ನೊಂದು ಹೇಳ್ತಿನಿ ಮಠದ ಬಗ್ಗೆ ಎಲ್ಲಿವರೆಗೆ ಮಠಕ್ಕೆ ಅಧಿಕಾರಿ ಒಂದೇ ಜಾತಿಯವರು ಇರತಾರೆ. ಅಲ್ಲಿವರೆಗೆ ಮಠ ಉದ್ಧಾರ ಆಗುವುದಿಲ್ಲ. ಒಬ್ಬ ಸ್ವಾಮಿ ಬಂದ ಕೂಡಲೇ ಮುಂದಿನ ಸ್ವಾಮಿ ಮತ್ತೊಂದು ಜಾತಿಯವ ಇರಬೇಕು. ಅದೇ ಜಾತಿಯವ ಇರಬಾರದು. ಇದು ನಿರ್ಣಯ ಮಾಡಬೇಕು.... ಎಲ್ಲಿವರೆಗೆ ಇದು ಮಾಡುದಿಲ್ಲ. ಅದು ವಂಶ ಪಾರಂಪರೆಯಾಗಿ ಬೆಳೆಯುವಂಥ ದೊಡ್ಡ ಗೃಹಸ್ಥರ ಮನೆಗಳಾಗ್ತಾ ಇವೆ. ಹೀಗೆ ನಮ್ಮ ಮಠಗಳಿಗೆ ಉತ್ತರಾಧಿಕಾರಿಯಾಗಿ ಬರುವವರು ಅಂವ ಸ್ವಾಮಿ ಹೇಳಬೇಕು. ನಾನು ಜಂಗಮನಿದ್ದೀನಿ. ಮುಂದಿನ ಸ್ವಾಮಿಗಳು ಭಕ್ತರಾಗಬೇಕು. ಭಕ್ತರೊಳಗ ಈ ಸಲ ಗಾಣಿಗೇರದವ ಇದಾನ. ಮುಂದಿನ ಸಲ ಪಂಚಮಶಾಲಿ ಯವರು ಬರಬೇಕು. ಅದರ ಮುಂದಿನ ಸಲಾ ರೆಡ್ಡಿರವ ಬರಬೇಕು. ಅದರ ಮುಂದಿನ ಸಲ ಬಣಜಿಗ ಬರಬೇಕು. ಅದರ ಮುಂದಿನ ಸಲಾ ಕ್ಷೌರಿಕ ಬರಬೇಕು. ಅದರ ಮುಂದಿನ ಸಲ ಅಗಸರವ ಬರಬೇಕು. ಇದು ಎಲ್ಲಿಯವರೆಗೆ ನಾವು ಮಾಡೋದಿಲ್ಲ.........ಮೊದಲ ಇದನ ಸುರು ಮಾಡಿರಿ ಜಾತಿ ತಾವೇ ಹೋಗತಾವ..........ಇನ್ನೂ ನನ್ನ ಲಿಸ್ಟ ಮುಗಿದಿಲ್ಲ. ಹೀಂಗ ನಾವು ಎಲ್ಲಿಯವರೆಗೆ ಪರಿವರ್ತನೆ ಮಾಡೂದಿಲ್ಲ ಅಲ್ಲಿಯವರೆಗೆ ಸುಧಾರಣೆ ಆಗೊದಿಲ್ಲ.

ನಮ್ಮ ಮನೆ ಮತ್ತು ಮಠ ಮತ್ತೆ ನಮ್ಮ ಮನಿವಳಗ, ಏನ ಜಗಲಿ ಮ್ಯಾಲ ದೇವರು, ಏನ ಸುದ್ದಿ, ಅದನ್ನ ನೋಡಿದರ, ನಾವು ವಚನ ಹೇಳತೀವಿ ದೇವನೊಬ್ಬ ನಾಮ ಹಲವು ಪರಮ ಪತಿವ್ರತೆಗೆ ಗಂಡನೊಬ್ಬ, ನಮ್ಮ ಮನ್ಯಾಗ ಹೋದರ ಎಷ್ಟ ಜನ ಗಂಡಂದಿರದಾರ ನಮ್ಮ ಜಗಲಿ ಮ್ಯಾಲ ಎಷ್ಟು ಫೋಟೋ ಎಷ್ಟು ಗಂಡಂದಿರು ಕೂತಾರ. ಇದನ್ನ ನಾವು ವಿಚಾರ ಮಾಡಬೇಕು. ನಮ್ಮ ಮನಿಯನ್ನ ಶುದ್ದೀಕರಣ ಮಾಡಬೇಕು. ನಮ್ಮ ಮನಸನ್ನ ನವೀಕರಣ ಮಾಡಬೇಕು. ನವೀಕರಣ ಅಂದರ ಏನೋ ನಮ್ಮ ಮನಿವಳಗ ಯಾರರ ತೀರಕೊಂಡಾಗ ಲಿಂಗಾಯತರು ಎಷ್ಟ ಅಸಹ್ಯ. ಅದು ಎರಡ ದಿವಸ ಶವ ಇಡತಾರ. ಆದರ ಶವ ಶವಾನೇ ಅದು. ಇಂಥವುಗಳನ್ನು ನಾವು ನವೀಕರಣ ಮಾಡೋದು ಅವಶ್ಯ ಅದ. ಇಂಥ ಕೆಲವು ವಿಷಯಗಳನ್ನ ನಿಮ್ಮ ಮುಂದೆ ಹೇಳಿದ್ದೀನಿ.

ಇನ್ನೊಂದು ಮಾತು ಹೇಳಬೇಕಾಗತೈತಿ, ದಕ್ಷಿಣ ಭಾರತದ ಭಾಳ ದೊಡ್ಡ ಜನ ಸಮುದಾಯ ಅಂದರೆ ಲಿಂಗಾಯತ ಸಮುದಾಯ. ಇಡೀ ದಕ್ಷಿಣ ಭಾರತದೊಳಗ ಎಲ್ಲಾ ಸಮುದಾಯ ಎಣಿಕೆ ಮಾಡಿದ್ರ ಕರ್ನಾಟಕದೊಳಗ ದೊಡ್ಡ ಸಮುದಾಯ. ಆಂಧ್ರಪ್ರದೇಶದೊಳಗ ದೊಡ್ಡ ಸಮುದಾಯ ಮಹಾರಾಷ್ಟ್ರದೊಳಗ ದೊಡ್ಡ ಸಮುದಾಯ ಕೇರಳದೊಳಗ ಅದ; ತಮಿಳನಾಡದೊಳಗ ಅದ. ಗೋವಾದೊಳಗ ಬಹಳಷ್ಟು ಜನ ಲಿಂಗಾಯತರೇ ಇದ್ದಾರ. ಇದನ್ನ ನೋಡಿದ್ರ ದಕ್ಷಿಣ ಭಾರತದೊಳಗ ಅತೀ ದೊಡ್ಡ ಸಮುದಾಯ ಅಂದ್ರ ಲಿಂಗಾಯತ ಸಮುದಾಯ. ಇದನ್ನ ಉತ್ತರ ಭಾರತದ ರಾಜಕಾರಣಿಗಳಿಗೆ ತಿಳಿಸಿ ಕೊಡಬೇಕು. ನಾವು ಇಷ್ಟ ದೊಡ್ಡ ಸಮಾಜ ಇದ್ದೀವಿ. ನಮ್ಮ ಜನಸಂಖ್ಯೆ ಇಷ್ಟು ದೊಡ್ಡದದ, ಬೇರೆ ಬೇರೆ ಪ್ರಾಂತದೊಳಗ ಹಂಚಿ ಹೋಗೀವಿ. ನಾವು, ನಮ್ಮನ್ನ ನೀವು ಬೆಳೆಸದಿದ್ದರೆ ಹುಷಾರ್‌ (Iam Lingayata) ಆಯ್ ಆಮ್ ಲಿಂಗಾಯತ. ಹುಷಾ‌ರ್ 'ಮೈ ಲಿಂಗಾಯತ ಹೂ' ಅಂತಾ ಹೇಳಬೇಕು.

ಈಗ ಒಂದು ಏನು ಕೆಲಸ ಆಗಬೇಕಂದ್ರ, ಒಂದು ಲಿಂಗಾಯತ ರಾಷ್ಟ್ರೀಯ ಅಧಿವೇಶನ ಆಗಬೇಕು. ಎಲ್ಲಿ ಪೂನಾದಲ್ಲಿ ಮಾಡ್ತಿರೋ ಸೋಲಾಪುರದಲ್ಲಿ ಮಾಡ್ತೀರೋ ಎಲ್ಲಾದರೂ ಮಾಡಿ ಎಲ್ಲಾ ಲಿಂಗಾಯತರು ಕೂಡಿದರೆ ಉತ್ತರಭಾರತದ ರಾಜಕಾರಣಿಗಳು ಅಥವಾ ನಮ್ಮನ್ನು ಆಳುವ ಯಾರೇ ಇರಲಿ ಅವರಿಗೆ ಅಯ್ಯೋ ಎಷ್ಟು ದೊಡ್ಡ ಸಮುದಾಯ ಅದ ಇದು. ಇಲ್ಲಿಯವರೆಗೂ ಹಂಚಿ ಹೋಗಿದ್ದು ನಮಗೆ ಗೊತ್ತೇ ಇರಲಿಲ್ಲ. ಇದು ಸುಮ್ಮನೆ ಮೈನಾರಿಟಿ ಸಮುದಾಯ ಅಂತ ತಿಳಕೊಂಡಿದ್ವಿ ಅನ್ನೋಬೇಕು. ನಾವು ಲಿಂಗಾಯತರು ದಕ್ಷಿಣ ಭಾರತದಲ್ಲಿ ನಮ್ಮದೇ ಮೆಜಾರಿಟಿ. ನೀವು ಬೇಕಾದ್ದು ಹೇಳಿರಿ ಗೌಡರು ದಕ್ಷಿಣ ಕರ್ನಾಟಕದಲ್ಲಿ ಸ್ವಲ್ಪ ಅದಾರು. ಉಳಿದ ಯಾರಾದ್ರೂ ಸಹಾ ಸ್ವಲ್ಪ ಸ್ವಲ್ಪ ಅದಾರು. ಕುರುಬ ಸಮಾಜ ದೊಡ್ಡದಿದ್ದರೂ ನಮಕಿಂತ ಸಣ್ಣದಿದೆ. ಆದರೆ ಲಿಂಗಾಯತ ಇಡೀ ಕರ್ನಾಟಕದೊಳಗ ಇಡೀ ದಕ್ಷಿಣಭಾರತದೊಳಗ ಭಾಳ ದೊಡ್ಡ ಸಮುದಾಯ ಇದೆ. ಆದ್ದರಿಂದ ಯಾರಾದರೂ ಒಂದು ಲೀಡರ್ ಶಿಪ್ ತೆಗೆದುಕೊಳ್ಳಬೇಕು. ಒಂದು ದೊಡ್ಡ ಸಮಾವೇಶ ಮಾಡಬೇಕು. ಲಿಂಗಾಯತ ರಾಷ್ಟ್ರೀಯ ಅಧಿವೇಶನ ಮಾಡುವ ಮೂಲಕ ಎಲ್ಲಾ ಲಿಂಗಾಯತರಿಗೆ ನೀವೂ ಲಿಂಗಾಯತರು ಬರಿ, ನೀವೂ ಲಿಂಗಾಯತರು ಬರಿ, ತಮಿಳನಾಡನವರಿಗೆ ಹೇಳಬೇಕು. ಆಂಧ್ರದವರಿಗೆ ಹೇಳಬೇಕು. ಮಹಾರಾಷ್ಟ್ರದವರಿಗೆ ಹೇಳಬೇಕು. ಕೇರಳದವರಿಗೆ ಹೇಳಬೇಕು. ಗೋವಾದವರಿಗೆ ಹೇಳಬೇಕು. ಇವನಾರವ ಇವನಾರವ ಇವನಾರವ ಎಂದೆನಿಸದೆ ಇವ ನಮ್ಮವ ಇವ ನಮ್ಮವ ತಿಳಕೊಂಡರ ಅವರಿಗೂ ಸಂತೋಷ ಆಗತದ. ನಮ್ಮ ಬಳಗ ಇಷ್ಟು ದೊಡ್ಡದಾಗತದ ಅಂತ ಅನಿಸತದ. ಆ ಒಂದು ಶಕ್ತಿ ಸಾಮರ್ಥ್ಯವನ್ನು ನಾವು ತೋರಿಸಲಿಕ್ಕೆ ಸಾಧ್ಯ ಆಗತ್ತದ. ಅದಕ್ಕಾಗಿ ನೀವು ಇಂಥ ಒಂದು ಕೆಲಸಕ್ಕೆ ಈ ಒಂದು ಸಮಯ, ಈ ಒಂದು ಕಾರ್ಯಕ್ರಮವು ಪ್ರೋತ್ಸಾಹ ನೀಡಲಿ; ಬೆಂಬಲವಾಗಲಿ ಅಂತ ಹಾರೈಸಿ ನನಗೆ ಮಾತನಾಡಲಿಕ್ಕೆ ಅವಕಾಶ ಕೊಟ್ಟಿದ್ದಕ್ಕಾಗಿ ನಿಮಗೂ ಮತ್ತು ಸಂಘಟನೆಯರಿಗೂ ವಂದಿಸಿ ನನ್ನ ಮಾತು ಮುಗಿಸುತ್ತಿದ್ದೇನೆ.

(ಪುಣೆಯ ಬಸವ ಇಂಟರ್‌ನ್ಯಾಶನಲ್‌ ಅಂಡರ್‌ ಸ್ಟ್ಯಾಂಡಿಂಗ ಆ್ಯಂಡ್ ರಿಸರ್ಚ ಸೆಂಟರ್ ನ ಹುಬ್ಬಳ್ಳಿ ಘಟಕದ ವತಿಯಿಂದ ಬಸವ ಜಯಂತಿ ಆಚರಣೆ. ಬಸವ ತತ್ವ ಚಿಂತನೆ, ಲಿಂಗಾಯತ ಧರ್ಮ ಸಂವಿಧಾನಾತ್ಮಕ ಮಾನ್ಯತೆ ಕುರಿತು ಕಲ್ಯಾಣ ನಗರ ರಂಗಮಂದಿರದಲ್ಲಿ ಮೇ. ೧೦. ೨೦೧೫ ರಂದು ಆಯೋಜಿಸಿದ ಕಾರ್ಯಾಗಾರವನ್ನುದ್ದೇಶಿಸಿ ಮಾಡಿದ ಎಂ. ಎಂ. ಕಲಬುರ್ಗಿ ಅವರ ಕೊನೆಯ ಭಾಷಣ.)

*
ಪರಿವಿಡಿ (index)
Previous ಲಿಂಗಾಯತ : ಒಂದು ಸ್ವತಂತ್ರ ಧರ್ಮ ವಚನಸಾಹಿತ್ಯ : ವೈದಿಕ ವಿರೋಧ ಮತ್ತು ಜಾತಿನಿರಸನ Next