ಈ ತಾಣ ಆರಂಭಿಸಲು ಕಾರಣ ಮತ್ತು ನನ್ನ ಕಿರು ಪರಿಚಯ | ಲಿಂಗಾಯತರ ನೈತಿಕತೆ |
ಲಿಂಗಾಯತ ಧರ್ಮ ಗುರು |
ಬಸವಣ್ಣ ಮಾಡಲಿಕ್ಕೆ ಲಿಂಗವಾಯಿತ್ತು
ಬಸವಣ್ಣ ಮಾಡಲಿಕ್ಕೆ ಜಂಗಮವಾಯಿತ್ತು
ಬಸವಣ್ಣ ಮಾಡಲಿಕ್ಕೆ ಪ್ರಸಾದವಾಯಿತ್ತು
ಇರೇಳು ಲೋಕವಾಯಿತ್ತು ಬಸವಣ್ಣನಿಂದ ಕಲಿದೇವಯ್ಯಾ. - ಮಡಿವಾಳ ಮಾಚಿದೇವ ಸವಸ ೮/೬೮೨ ವ. ಸಂ. ೨೪೫
ಮಡಿವಾಳ ಮಾಚಿದೇವ ಶರಣರು ಈ ವಚನದಲ್ಲಿ ಗುರು, ಲಿಂಗ, ಜಂಗಮ, ಪ್ರಸಾದ ಬಸವಣ್ಣನವರಿಂದಲೆ ಅಯುತು ಅಂತ ಸ್ಪಷ್ಟವಾಗಿ ತಿಳಿಸಿದ್ದಾರೆ. ಒಂದು ವೇಳೆ ಬೇರೆ ಯಾರಾದರು ಕೊಟ್ಟಿದ್ದರೆ ಅವರ ಹೆಸರನ್ನು ಉಲ್ಲೇಖಿಸುತ್ತಿದ್ದರು. ಬೇರೆ ಎಲ್ಲಾ ಶರಣರು ಇದ್ದರೂ ಸಹ ಬಸವಣ್ಣ ಮಾಡಲಿಕ್ಕೆ ಗುರು, ಲಿಂಗ, ಜಂಗಮ, ಪ್ರಸಾದ ಆಯಿತ್ತು ಅಂತ ಹೇಳಿ ಬೇರೆ ಯಾರಿಂದಲೋ ಲಿಂಗ ಅಯಿತ್ತು ಅನ್ನುವದನ್ನು ಅಲ್ಲಗಳೆದಂತಾಯುತು.
ಗುರುವಾದಡೂ ಬಸವಣ್ಣನಿಲ್ಲದೇ ಗುರುವಿಲ್ಲ
ಲಿಂಗವಾದಡೂ ಬಸವಣ್ಣನಿಲ್ಲದೇ ಲಿಂಗವಿಲ್ಲ
ಜಂಗಮವಾದಡೂ ಬಸವಣ್ಣನಿಲ್ಲದೇ ಜಂಗಮವಿಲ್ಲ
ಪ್ರಸಾದವಾದಡೂ ಬಸವಣ್ಣನಿಲ್ಲದೇ ಪ್ರಸಾದವಿಲ್ಲ
ಅನುಭವವಾದಡೂ ಬಸವಣ್ಣನಿಲ್ಲದೇ ನುಡಿಯಲಾಗದು
ಇಂತು ಸಂಗಿಸುವಲ್ಲಿ, ನಿಜ ಸಂಗಿಸುವಲ್ಲಿ
ಸುಸಂಗಿಸುವಲ್ಲಿ, ಮಹಾಸಂಗಿಸುವಲ್ಲಿ
ಪ್ರಸಾದ ಸಂಗಿಸುವಲ್ಲಿ ಕಲಿದೇವಾ
ನಿಮ್ಮ ಶರಣ ಬಸವಣ್ಣನ ನಿಲುವು. -ಮಡಿವಾಳ ಮಾಚಿದೇವರು.
ಗುರುಲಿಂಗಜಂಗಮಕ್ಕೆ ಆಧಾರ ಬಸವಣ್ಣ,
ಪಾದೋದಕ ಪ್ರಸಾದಕ್ಕೆ ಆಧಾರ ಬಸವಣ್ಣ,
ಸರ್ವಾಪತ್ತಿಗಾಧಾರ ಬಸವಣ್ಣ,
(ಸ್ವರ್ಗ) ಮರ್ತ್ಯ ಪಾತಾಳಕ್ಕೆ ಬಸವಣ್ಣನ ಚೈತನ್ಯವಲ್ಲದಿಲ್ಲ.
ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ
ಎನುತಿರ್ದಾತನಂಬಿಗ ಚೌಡಯ್ಯ. -
ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ,
ಎತ್ತಿ ನೋಡಿದಡೆ ಲಿಂಗ ವೆಂಬ ಗೊಂಚಲು,
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ,
ಆಯತವು ಬಸವಣ್ಣನಿಂದ, ಸ್ವಾಯತವು ಬಸವಣ್ಣನಿಂದ ಸನ್ನಿಹಿತವು ಬಸವಣ್ಣನಿಂದ,
ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ, ಜಂಗಮ ಬಸವಣ್ಣನಿಂದ,
ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ
ಅತ್ತ ಬಲ್ಲಡೆ ನೀವು ಕೇಳಿರೇ, ಇತ್ತ ಬಲ್ಲಡೆ ನೀವು ಕೇಳಿರೇ,
ಬಸವ ಬಸವ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ ಶೂನ್ಯ ಕಾಣಾ ಕಲಿದೇವರದೇವಾ. - ಮಡಿವಾಳ ಮಾಚಿದೇವ ಸವಸ ೮/೫೨೬
ಆದಿ ಬಸವಣ್ಣ ಅನಾದಿ ಲಿಂಗವೆಂಬರು, ಹುಸಿ ಹುಸಿ ಈ ನುಡಿಯ ಕೇಳಲಾಗದು,
ಆದಿ ಲಿಂಗ, ಅನಾದಿ ಬಸವಣ್ಣನು! ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಪ್ರಸಾದವು ಬಸವಣ್ಣನನುಕರಿಸಲಾಯಿತ್ತು,
ಇಂತೀ ತ್ರಿವಿಧಕ್ಕೆ ಬಸವಣ್ಣನೇ ಕಾರಣನೆಂದರಿದೆನಯ್ಯಾ ಕೂಡಲಚೆನ್ನ ಸಂಗಮದೇವಾ. - ಚೆನ್ನ ಬಸವಣ್ಣ ಸವಸ ೩/೫
ಗುರು-ಲಿಂಗ-ಜಂಗಮ-ಪ್ರಸಾದ ಎಂಬ ತತ್ವಗಳನ್ನು ಕೊಟ್ಟ ಮಹಾಗುರು ಬಸವಣ್ಣನವರು.
'ಬ' ಎಂಬಲ್ಲಿ ಎನ್ನ ಭವವು ಹರಿಯತ್ತು
'ಸ' ಎಂಬಲ್ಲಿ ಸರ್ವಜ್ಞಾನಿಯಾದೆನು
'ವ' ಎಂದು ವಚಿಸುವರೆ ವಸ್ತು ಚೈತನ್ಯಾತ್ಮಕನಾದೆನು
ಇಂತೀ ಬಸವಾಕ್ಷರತ್ರಯವೆನ್ನ ಸರ್ವಾಂಗದಲ್ಲಿ
ತೊಳಗಿ ಬೆಳುಗುವುದ ಕಂಡು
ಆನು ನೀನು ಬಸವಾ ಬಸವಾ ಬಸವಾ
ಎನುತಿರ್ದೆವಯ್ಯಾ ಗುಹೇಶ್ವರ.
- ಶೂನ್ಯ ಪೀಠಾಧೀಶ ಅಲ್ಲಮ ಪ್ರಭುದೇವರು
ಗುರು ಬಸವಣ್ಣನವರ ಶುಭನಾಮವು ಮಂತ್ರವಾಯಿತು. 'ಬ' ಎಂದಾಗ ನನ್ನ ಭವ ಹರಿಯಿತು; 'ಸ' ಎನ್ನುತ್ತಿದ್ದಂತೆಯೇ ಸರ್ವಜ್ಞಾನಿಯಾದೆ. 'ವ' ಎಂದು ಹೇಳುತ್ತಿದ್ದಂತೆಯೇ ಚೈತನ್ಯಾತ್ಮಕನಾದೆ. 'ಬಸವ' ಎಂಬ ಮೂರು ಅಕ್ಷರಗಳು ನನ್ನ ಸರ್ವಾಂಗದಲ್ಲೂ ಬೆಳಗುತ್ತಿವೆ. ದೇವನೇ, ನಾನೂ ನೀನೂ ಇಬ್ಬರು ಬಸವಾ ಬಸವಾ ಎನ್ನುತ್ತಲಿದ್ದೇವೆ.
`ಬಸವ' ಎಂಬ ಮೂರಕ್ಷರ ಹೃದಯಕಮಲದಲ್ಲಿ ನೆಲೆಗೊಂಡಡೆ,
ಅಭೇದ್ಯ ಭೇದ್ಯವಾಯಿತ್ತು, ಅಸಾಧ್ಯ ಸಾಧ್ಯವಾಯಿತ್ತು.
ಇಂತು ಬಸವಣ್ಣನಿಂದ ಲೋಕಲಾಕಿಕದ ಕುಭಾಷೆಯ ಕಳೆದು,
ಲೋಕಾಚರಣೆಯನತಿಗಳೆದು ಭಕ್ತಿಭರವಪ್ಪುದು,
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನ ಕಾರುಣ್ಯದಿಂದ
ಗುರುವಾಗಿ ಬಂದೆನಗೆ ದೀಕ್ಷೆಯ ಮಾಡಿದಿರಿ,
ಲಿಂಗವಾಗಿ ಬಂದೆನ್ನ ಮನದ ಮಲಿನವ ಕಳೆದಿರಿ,
ಜಂಗಮವಾಗಿ ಬಂದೆನ್ನ ಪ್ರಪಂಚಕತನವ ಕಳೆದು ಪರಮ ಸೀಮೆಯ ಮಾಡಿದಿರಿ.
ಇಂತಿವೆಲ್ಲವೂ ಬಸವಣ್ಣನಾಗಿ ಎನಗೆ
ಪ್ರಸಾದವ ನೀಡಿಸಲಹಿದ ಕಪಿಲಸಿದ್ದಮಲ್ಲಿಕಾರ್ಜುನ
ಇನ್ನೆನಗತಿಶಯವೇನೂ ಇಲ್ಲ.
ಬಸವಣ್ಣನೇ ತಾಯಿ, ಬಸವಣ್ಣನೇ ತಂದೆ
ಬಸವಣ್ಣನೇ ಪರಮ ಬಂಧುವೆನಗೆ
ವಸುಧೀಶ ಕಪಿಲಸಿದ್ಧ ಮಲ್ಲಿಕಾರ್ಜುನ
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯ. - ಬಸವಯೋಗಿ ಸಿದ್ಧರಾಮೇಶ್ವರ
ವಿಶ್ವಗುರು ಬಸವಣ್ಣನೇ ನನ್ನ ತಾಯಿ, ತಂದೆ ಪರಮ ಬಂಧುವು, ಪರಮಾತ್ಮಾ ನಿಮಗೆ ಹೆಸರಿಟ್ಟ ಗುರು ಬಸವಣ್ಣನೆ.
ಶಿವ ಗುರುವೆಂದು ಬಲ್ಲಾತನೆ ಗುರು.
ಶಿವ ಲಿಂಗವೆಂದು ಬಲ್ಲಾತನೆ ಗುರು.
ಶಿವ ಜಂಗಮವೆಂದು ಬಲ್ಲಾತನೆ ಗುರು.
ಶಿವ ಪ್ರಸಾದವೆಂದು ಬಲ್ಲಾತನೆ ಗುರು.
ಶಿವ ಆಚಾರವೆಂದು ಬಲ್ಲಾತನೆ ಗುರು.
ಇಂತೀ ಪಂಚವಿಧವೆ ಪಂಚಬ್ರಹ್ಮವೆಂದರಿದ ಮಹಾಮಹಿಮ ಸಂಗನ ಬಸವಣ್ಣನು,
ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರ
-- ಶೂನ್ಯ ಪೀಠಾಧೀಶ ಅಲ್ಲಮ ಪ್ರಭುದೇವರು
ಆಯತದಲ್ಲಿ ಪೂರ್ವಾಚಾರಿಯ ಕಂಡೆ.
ಸ್ವಾಯತದಲ್ಲಿ ಪೂರ್ವಾಚಾರಿಯ ಕಂಡೆ.
ಸನ್ನಹಿತದಲ್ಲಿ ಪೂರ್ವಾಚಾರಿಯ ಕಂಡೆ.
ಗುಹೇಶ್ವರಲಿಂಗದಲ್ಲಿ ಪೂರ್ವಾಚಾರಿ ಸಂಗನಬಸವಣ್ಣನ,
ಶ್ರೀಪಾದಕ್ಕೆ ನಮೋ ನಮೋ ಎಂಬೆನು. - ಅಲ್ಲಮಪ್ರಭು ಸವಸ-೯೦೪
ಅಂಗದ ಮೇಲೆ ಧರಿಸುವ ಇಷ್ಟಲಿಂಗದ ಆಯತ, ಪ್ರಾಣದಲ್ಲಿ ಅಳವಡಿಸಿಕೊಳ್ಳುವ ಅತ್ಮಲಿಂಗದ ಸ್ವಾಯತ, ಭಾವದಲ್ಲಿ ಅನುಭವಿಸುವ ಭಾವಲಿಂಗ ಸನ್ನಿಹಿತ, ಈ ತತ್ವ-ಅನುಭವಗಳಿಗೆ ಗುರು ಬಸವಣ್ಣನೇ ಪ್ರಥಮಗುರು. ಇಂತಹ ಪೂರ್ವಾಚಾರಿ ಸಂಗನ ಬಸವಣ್ಣನ ಶ್ರೀ ಪಾದಕ್ಕೆ ನಮಿಸುತ್ತೇನೆ.
ಬಸವಣ್ಣಾ ಓಂಕಾರದಿಂದತ್ತತ್ತ ನೀನೆ;
ಬಸವಣ್ಣಾ ನಾದಬಿಂದುಕಳೆಗಳಿಂದತ್ತತ್ತ ನೀನೆ,
ಬಸವಣ್ಣಾ ಪ್ರಥಮಾಚಾರ್ಯ ನೀನೆ,
ಬಸವಣ್ಣಾ ಲಿಂಗಾಚಾರ್ಯ ನೀನೆ,
ಬಸವಣ್ಣಾ ಜಂಗಮಾಚಾರ್ಯ ನೀನೆ,
ಬಸವಣ್ಣಾ ಪ್ರಸಾದಾಚಾರ್ಯ ನೀನೆ,
ಬಸವಣ್ಣಾ ಎನಗೆ ಸರ್ವಾಚಾರ್ಯ ನೀನೆ,
ನೀನೇ ಗತಿಮತಿಯಾಗಿ ಎನ್ನನುಳುಹಿದ ಕಾರಣ
ಕೂಡಲಚೆನ್ನಸಂಗಮದೇವಾ
ಆವ ವರ್ಣವಿಲ್ಲದಂದು 'ಓಂ ನಮಃ ಶಿವಾಯ' ಎನುತಿರ್ದೆನು. - ಚೆನ್ನಬಸವಣ್ಣ 3/14
ಕರುಣಿಸು ಬಸವಾ ಕಾಲಹರ ಬಸವಾ ಕರ್ಮಹರ ಬಸವಾ
ನಿರ್ಮಳ ಬಸವಾ, ಶಿವಜ಼ಾನಿ ಬಸವಾ
ನಿಮ್ಮ ಧರ್ಮವಯ್ಯಾ, ಈ ಭಕ್ತಿಯ ಪಥವು
ಕರುಣಿಸಿ ಕಪಿಲಸಿದ್ದಮಲ್ಲಿನಥಯ್ಯಾ
ನಿಮಗು ಎನಗು ಬಸವಣ್ಣನ ಧರ್ಮವಯ್ಯಾ ---ಶಿವಯೋಗಿ ಸಿದ್ದರಾಮೇಶ್ವರರು
ಭಕ್ತರ ಭಾವದಲ್ಲಿ ಸುಳಿವ ಸುಳುಹು,
ವಿರಕ್ತರ ಜ್ಞಾನದಲ್ಲಿ ಹೊಳೆವ ಕಳೆಯು, ನೀನೆಯಯ್ಯಾ !
ಸೂರ್ಯನ ಬೆಳಗಿನೊಳಗೆ ಸಚರಾಚರಪ್ರಾಣಿಗಳು ಸುಳಿವಂತೆ,
ನಮ್ಮ ಕಟ್ಟಿನ ನೇಮದ ನಿಷ್ಠೆ ನೀನೆಯಯ್ಯಾ.
ಅಮರೇಶ್ವರಲಿಂಗದ ಒಡಲು ಸಂಗನಬಸವಣ್ಣನೆಂಬುದನು
ಮಡಿವಾಳ ಮಾಚಿ ತಂದೆಗಳು ಬಲ್ಲರು ಕಾಣಾ ಸಂಗನಬಸವಣ್ಣ. - ಆಯ್ದಕ್ಕಿ ಮಾರಯ್ಯ ಸವಸ ೧೧೮೪
ಸದ್ಭಕ್ತರ ಭಾವದಲ್ಲಿ ವಿರಕ್ತರ ಜ್ಞಾನದಲ್ಲಿ ಹೊಳೆಯುವ ಪ್ರಭಾಮಯ ಮೂರ್ತಿ ನೀನೆ. ಯಾವ ರೀತಿ ಸೂರ್ಯನ ನಿಯಂತ್ರಣದಲ್ಲಿ ಸಚರಾಚರ ಪ್ರಾಣಿಗಳು ಸಂಚರಿಸುತ್ತವೋ ಹಾಗೆ ನೀನು ಹಾಕಿಕೊಟ್ಟ ನಿಯಮ, ಕಟ್ಟುಗಳಲ್ಲಿ ನಾವು ನಡೆಯುತ್ತೇವೆ. ನಿರಾಕಾರ ಪರಮಾತ್ಮನ ಸಾಕಾರ ಶರೀರದಂತೆ ನೀನಿರುವೆ.
ಬಸವ ಮಾಡಿದಡಾಯ್ತು ಭುವಿಗೆ ಭಕ್ತಿಯ ಬೆಳಕು.
ಬಸವ ಮಾಡಿದಡಾಯ್ತು ಗುರುಲಿಂಗಜಂಗಮ ಪೂಜೆ.
ಬಸವ ಮಾಡಿದಡಾಯ್ತು ಲಿಂಗಾಂಗ ಸಾಮರಸ್ಯದ ಸುಧೆಯು.
ಬಸವ ಮಾಡಿದಡಾಯ್ತು ಭಕ್ತ ಭಕ್ತರಲಿ ಸಮಭಾವ.
ಎನ್ನ ಕಂಗಳೊಳಗಿಂಬಾದ ಬಸವ,
ಎನ್ನ ಮನ ಭಾವಂಗಳೊಳಗಾದ ಬಸವ,
ಎನ್ನಂತರಂಗ ತುಂಬಿ ನಿಂದಾತ ಬಸವ.
ಹೊರಗೆ ಗುರುಬಸವನ ಕೀರುತಿ.
ಬಸವನ ಮಣಿಹವೇ ಎನ್ನ ಪ್ರಾಣವಿಂದಿಂಗೆ.
ಬಸವಣ್ಣಪ್ರಿಯ ಚೆನ್ನಸಂಗಯ್ಯನ ಸಾಕ್ಷಿಯಾಗಿ
ಬಸವಾ ಬಸವಾ ಜಯತು
ಗುರು ಸಂಗನಬಸವಾ ಜಯತು - ನಾಗಲಾಂಬಿಕೆ 797
ಬಸವ ಬಿಲ್ಲಾಳಾಗಿ, ಹೊಸಭಕ್ತಿ ಅಂಬಾಗಿ, ಎಸೆದನಯ್ಯಾ ಆ ಲಿಂಗವನು ಗುರಿಮಾಡಿ.
ಶಿಶುವ ಬಾಣ ಕೊಂಡು, ಬಸುರಮಧ್ಯವ ತಾಗೆ, ಹೊಸದೆಸೆಗಳೆಲ್ಲಾ ಕಾಣಬಂದವಯ್ಯಾ !
ಭಸ್ಮದೆಣ್ಣೆಯ ಹೂಸಿ ಕೂಡಲಚೆನ್ನಸಂಗನಲ್ಲಿ ಬಸವಪೂಯದ ಬಂದು ಆರೈದ ಲಿಂಗವನು - ಚೆನ್ನಬಸವಣ್ಣ 3/655
ಬಸವಣ್ಣನೆ ಗುರುವೆಂದರಿಯರಲ್ಲ, ಬಸವಣ್ಣನೆ ಲಿಂಗವೆಂದರಿಯರಲ್ಲ,
ಬಸವಣ್ಣನೆ ಕಾರಣವೆಂದರಿಯರಲ್ಲ, ಬಸವಣ್ಣನೆ ಪ್ರಸಾದವೆಂದರಿಯರಲ್ಲ.
ಬಸವಣ್ಣನೆ ಗುರುವೆಂದು ಅನುಮಿಷನರಿದ.
ಬಸವಣ್ಣನೆ ಲಿಂಗವೆಂದು ಚೆನ್ನಬಸವಣ್ಣನರಿದ.
ಬಸವಣ್ಣನೆ ಜಂಗಮವೆಂದು ಪ್ರಭುದೇವರರಿದರು.
ಬಸವಣ್ಣನೆ ಪ್ರಸಾದವೆಂದು, ಮರುಳಶಂಕರದೇವರು ಅರಿದು ಆಚರಿಸಿದರು.
ಇದು ಕಾರಣ, ಬಸವಣ್ಣನೆ ಗುರು, ಬಸವಣ್ಣನೆ ಲಿಂಗ,
ಬಸವಣ್ಣನೆ ಜಂಗಮ, ಬಸವಣ್ಣನೆ ಪ್ರಸಾದವೆಂದರಿಯದ
ಅನಾಚಾರಿಗಳ ಎನಗೆ ತೋರದಿರಯ್ಯ,
ಗುಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ
ಬಸವಪ್ರಿಯ ಕೂಡಲಸಂಗಮದೇವಾ. - ಗುಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ ಬಸವಪ್ರಿಯ ಕೂಡಲಸಂಗಮದೇವ/1236
ಗುರುವಿನ ಪ್ರಾಣ ಲಿಂಗದಲ್ಲಿ ಲೀಯವಾದ ಬಳಿಕ
ಆ ಲಿಂಗವೆನ್ನ ಕರಸ್ಥಲಕ್ಕೆ ಬಂದಿತ್ತು ನೋಡಾ.
ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಕರಸ್ಥಲದಲ್ಲಿ.
ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಜ್ಞಾನದೊಳಗೆ.
ಇದ್ದಾನೆ ನೋಡಾ ಎನ್ನ ಗುರುವಿನ ಗುರು ಪರಮಗುರು ಬಸವಣ್ಣ ಎನ್ನ ಕಂಗಳ ಮುಂದೆ !
ಗುಹೇಶ್ವರ ಸಾಕ್ಷಿಯಾಗಿ,
ಎನ್ನ ಮೇಲೆ ದ್ರೋಹವಿಲ್ಲ ಕಾಣಾ ಚನ್ನಬಸವಣ್ಣಾ !
ಪ್ರಸಾದಿಗಳು ಪ್ರಸಾದಿಗಳು ಎಂದೆಂಬಿರಿ
ಅಂದು ಇಂದು ಎಂದೂ, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಆದಿ ಅನಾದಿ ಇಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ವೇದಶಾಸ್ತ್ರಂಗಳಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಅಜಾಂಡ ಬ್ರಹ್ಮಾಂಡಕೋಟಿಗಳುದಯವಾಗದಂದು ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ತ್ರೈಮೂರ್ತಿಗಳಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಉಮೆಯ ಕಲ್ಯಾಣವಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಗಂಗೆವಾಳುಕರಿಲ್ಲದಂದು, ಚೆನ್ನಬಸವಣ್ಣನೊಬ್ಬನೇ ಪ್ರಸಾದಿ.
ಲಿಂಗವೆಂಬ ನಾಮ ಜಂಗಮವೆಂಬ ಹೆಸರಿಲ್ಲದಂದು ಚೆನ್ನಬಸವಣ್ಣನೊಬ್ಬನೆ ಪ್ರಸಾದಿ.
ಗುಹೇಶ್ವರಾ ನೀನೆ ಲಿಂಗ, ಬಸವಣ್ಣನೆ ಗುರು
ಚೆನ್ನಬಸವಣ್ಣನೊಬ್ಬನೆ ಪ್ರಸಾದಿ ಮತ್ತಾರನು ಕಾಣೆನಯ್ಯಾ. /1367
ಈ ತಾಣ ಆರಂಭಿಸಲು ಕಾರಣ ಮತ್ತು ನನ್ನ ಕಿರು ಪರಿಚಯ | ಲಿಂಗಾಯತರ ನೈತಿಕತೆ |