Previous ತೊಂಟಾದಾರ್ಯ ಮಠ ಗದಗ ಲಿಂಗಾಯತ/ಲಿಂಗವಂತ ವೆಂದು ಸ್ಪಷ್ಟವಾಗಿ ಬರೆಯಿರಿ Next

ಲಿಂಗಾಯತರು ಹಿಂದುಗಳಲ್ಲ

*

- ಶ್ರೀ ಪಿ. ಎಲ್. ಪಾಟೀಲ

"ಲಿಂಗಾಯತ", "ಲಿಂಗವಂತ" ಲಿಂಗಧಾರಿಗಳ ಧರ್ಮವು, ಅಹಿಂದು ಧರ್ಮವು, ಇಂದು ಪ್ರತಿಪಾದಿತವಾಗುತ್ತಿರುವ ಹಿಂದು ವ್ಯಾಖ್ಯೆಯ ಹಿಂದು ಧರ್ಮವು ವೈದಿಕ ಧರ್ಮವು ವೈದಿಕ ಧರ್ಮ, ವೇದಾಂತ ಧರ್ಮ, ವೇದಗಳನ್ನು ಅಪೌರುಷೇಯವೆಂದು ನಂಬಿ ವರ್ಣಾಶ್ರಮ ವ್ಯವಸ್ಥೆಯನ್ನು ತುರುಕಿ, ಅಸ್ಪಶ್ಯತೆಯನ್ನು ಕೊಟ್ಟದ್ದು. ಎಲ್ಲ ದೃಷ್ಟಿಯಿಂದಲೂ ಇದಕ್ಕೆ ವಿರುದ್ಧವಾದ ವಿಚಾರಗಳನ್ನು ಪ್ರತಿಪಾದಿಸುವ ಲಿಂಗಾಯತವು ಹಿಂದೂ ಧರ್ಮದ ಕಕ್ಷೆಯೊಳಗೆ ಬರದು. ವಿವರವಾಗಿ. ಕಾರಣಗಳನ್ನು ಕೊಡುವೆ.

  • 1. ಹಿಂದೂ ಧರ್ಮವು ವೇದಗಳಿಗೆ ಗಂಟನ್ನು ಬಲವಾಗಿ ಹಾಕಿಕೊಂಡು ವೇದ ವಿರೋಧಿಗಳನ್ನೆಲ್ಲ ಚಾರ್ವಾಕರು, ನಾಸ್ತಿಕರು ಮ್ಲೇಚ್ಛರು ಎಂದು ಕರೆಯಿತು.
  • 2. ಈ ನೆಲದ ಮೂಲನಿವಾಸಿಗಳನ್ನೆಲ್ಲ ದಸ್ಯುಗಳು, ರಾಕ್ಷಸರು ಅಸುರರು ಎಂದು ಶಾಸ್ತ್ರಗಳನ್ನು ರಚಿಸಿ ಅವರನ್ನೆಲ್ಲ ಅಂದರೆ ದ್ರವಿಡ ಜನರನ್ನು ಆರ್ಯರಿಂದ (ಅರ್ಥಾತ್ ದೇವತೆಗಳಿಂದ) ಕೊಲ್ಲಿಸುವ ಹಂಚಿಕೆ, ಹಾಕಿ, ಪುರಾಣ ಕಾವ್ಯಗಳನ್ನು ಬರೆಸಿತು. ಸಾಮಾನ್ಯವಾಗಿ ಅಸುರರೆಂದು ಆರ್ಯರು ಕರೆದ ಮಿಹಿಷಾಸುರ ಮುಂತಾದವರೆಲ್ಲ ವಿಭೂತಿ ಧಾರಣ ಮಾಡುವುದು ಕಾಣಬರುತ್ತದೆ. ಹೀಗೆ ಶಿವಭಕ್ತರನ್ನು ಹೀನಾಯವಾಗಿ ಕಂಡ ಹಿಂದೂ ಧರ್ಮದೊಳಗೆ ಇರುವುದು ಅಪಮಾನಕಕರ. ಮಹಿಷಾಸುರ, ರಕ್ತ ಬೀಜಾಸುರ- ಮುಂತಾದವರನ್ನು ನೇರವಾಗಿ ಕೊಂದರೆ, ಬಲಿ ಮುಂತಾದವರನ್ನು ಕುತಂತ್ರದಿಂದ ಕೊಲ್ಲಲಾಯಿತು. ಹಿರಣ್ಯಾಕ್ಷ, ಹಿರಣ್ಯ ಕಶ್ಯಪ, ವಾಲಿ ಮುಂತಾದ ಶೂದ್ರ, ದ್ರವಿಡ ರಾಜರನ್ನು ತಂತ್ರ ಭೇದನದಿಂದ ಕೊಲ್ಲಲಾಯಿತು. ದಾನವಿತ್ತ ದಾನಿಗಳನ್ನು ನಾಶಪಡಿಸುವ ಕೃತಘ್ನತೆಯಿಂದ ಕೂಡಿರುವವರೆಲ್ಲ ಹಿಂದೂ ಧರ್ಮದ ಮಹಾಪುರುಷರು!
  • 3. ಹೋಮ-ಹವನ, ಯಜ್ಞಗಳನ್ನು ಪ್ರೋತ್ಸಾಹಿಸಿ ಜೀವ ವಧೆಯನ್ನು ಮಾಡುತ್ತದೆ.
  • 4. ಇನ್ನು ಹಿಂದೂ ಧರ್ಮದ ದೇವತೆಗಳ ಕಥೆಯೋ! ಅವರು ಹೆಣ್ಣು ಮಣ್ಣುಗಳಿಗಾಗಿ ಕಾದಾಡಿದಷ್ಟು ನಮ್ಮಂತಹ ಗೃಹಸ್ಥರು ಸಹ ಕಾದಾಡಲಿಕ್ಕಿಲ್ಲ, ವೈಷ್ಣವ ಸಂಸ್ಕೃತಿಯಿಂದಲೇ ತುಂಬಿ ತುಳುಕುವ ಆಕಾಶವಾಣಿ, ಟೆಲಿವಿಷನ್ ಮೂಲಕ ಕೃಷ್ಣನ ಲೀಲೆಗಳನ್ನು ಕೇಳುವಾಗ, ನೋಡುವಾಗ ಇದೇ ಹಿಂದೂ ಸಂಸ್ಕೃತಿಯವರು ನಾವು ಎಂದು ಅಂದುಕೊಳ್ಳಲಿಕ್ಕೆ ಸಂಕೋಚವೆನಿಸುತ್ತದೆ.
  • 5. ಹಿಂದೂ ಧರ್ಮದ ಎಲ್ಲ ಶಾಸ್ತ್ರ, ಪುರಾಣ, ಕಾವ್ಯಗಳು ಜಾತಿ ಪದ್ಧತಿಯನ್ನು ಎತ್ತಿ ಹಿಡಿಯುತ್ತಲಿವೆ. ಶೂದ್ರ ಅಸ್ಪೃಶ್ಯರನ್ನು ತುಳಿಯುತ್ತಲೇ ಬಂದಿವೆ. ಮಾತ್ರವಲ್ಲ; ತಮ್ಮನ್ನು ಕೀಳೆಂದು ಪಾಪಯೋನಿಜರೆಂದು ಕರೆಸಿಕೊಂಡು ತುಳಿತಕ್ಕೊಳಗಾದ ವೈಶ್ಯರು, ಶೂದ್ರರು ಸ್ತ್ರೀಯರು ಸಹ ಭಗವದ್ಗೀತೆಯನ್ನು ತಲೆಯ ಮೇಲೆ ಹೊತ್ತು ಕುಣಿಯುವಂತಹ ಮಂಕುತನಕ್ಕೆ ಒಳಗು ಮಾಡಿವೆ. ಸಮ್ಮೋಹನಗೊಳಿಸಿವೆ.
  • 6. ಇನ್ನು ಮೂಢನಂಬಿಕೆಗಳಂತೂ ಹೇರಳ ಸರಿಯಾದ ಧರ್ಮ ದೇವರುಗಳ ಕಲ್ಪನೆಯನ್ನು ಕೊಟ್ಟು, ಧರ್ಮ ಸಂಸ್ಕಾರ ಕೊಡದೆ, ವೈದಿಕ ಹಿಂದೂ ಧರ್ಮ ಮನುಷ್ಯ ಸಮಾಜವನ್ನು ವಂಚಿಸಿದೆ. ಪಂಚಭೂತಗಳ ಪೂಜೆ, ಸೂರ್ಯ-ಆಕಳುಗಳ ಪೂಜೆ ಒಂದೇ ಎರಡೇ! ಇಂಥ ಮೂರ್ಖತನವನ್ನು ಸಮರ್ಥಿಸುತ್ತದೆ. ದಶಾವತಾರದ ಕಲ್ಪನೆಗಳಂತೂ ಅಸಂಬದ್ಧತೆಯ ಸಂತೆ.
  • 7. ಜಡ ತೀರ್ಥಕ್ಷೇತ್ರಗಳನ್ನು, ನದಿ-ಕುಂಡಗಳನ್ನು ಪವಿತ್ರವೆಂದು ಕರೆದು ಅಲ್ಲಿ ಸ್ನಾನ ಮಾಡಿದರೆ ಪವಿತ್ರರಾಗುವರೆಂದು ಭೋಧಿಸಿ; ಕಳ್ಳ ಸಂತೆಯ ಖದೀಮರಿಗೆ ರಕ್ಷಣೆ ನೀಡುತ್ತದೆ. ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ ಹಣ ಎಸೆದು ಪಾಪ ಪರಿಹಾರ ಮಾಡಿಕೊಳ್ಳುವ ಸುಲಭ ಮಾರ್ಗ ಬೋಧಿಸುತ್ತದೆ.

ಹೀಗೆ ಹೇಳುತ್ತಾ ಹೋದರೆ, ತನ್ನ ಜನಾಂಗಕ್ಕೆ ದ್ರೋಹ ಬಗೆದು ಕಡೆಗೆ ಆರ್ಯರಿಂದ ಬಾಲವೊಂದನ್ನು ಕೊಡುಗೆಯಾಗಿ ಪಡೆದ, ಹನುಮಂತನ ಬಾಲದಂತೆ ಬೆಳೆಯುತ್ತದೆ ಆದ್ದರಿಂದ ಇಲ್ಲಿಗೆ ಮುಗಿಸಿ ಲಿಂಗಾಯತರು ಹಿಂದೂಗಳಲ್ಲ ಎಂಬ ನನ್ನ ಕೆಲವು ವಾದಕ್ಕೆ ವಿಚಾರಗಳನ್ನು ಮಂಡಿಸುತ್ತೇನೆ.

  • 1. ಬಸವ ಪ್ರಣೀತ ಲಿಂಗಾಯತ ಧರ್ಮವು ವೇದಗಳ ಪ್ರಾಮಾಣ್ಯ ಒಪ್ಪದು.
  • 2. ಆರ್ಯ-ದ್ರವಿಡ ಸಂಘರ್ಷವನ್ನು ಬೋಧಿಸುವ ರಾಮಾಯಣ ಮಹಾಭಾರತಗಳು ನಮೆ ಮಾನ್ಯವಲ್ಲ
  • 3. ಯಜ್ಞ ಯಾಗಾದಿಗಳ ಮೂಲಕ ಸುಸಂಸ್ಕೃತ ರೀತಿಯಲ್ಲಿ ಪ್ರಾಣಿವಧೆ ಮಾಡುವ ಹಿಂದೂ ಧರ್ಮೀಯರು ನಾವಲ್ಲ.
  • 4. ಹೆಣ್ಣು-ಹೊನ್ನು-ಮಣ್ಣಿಗಾಗಿ ಕಾದಾಡಿದ ಹಿಂದೂ ದೇವತೆಗಳು, ತ್ರಿಮೂರ್ತಿಗಳ ಕಲ್ಪನೆ, ರಾಮ-ಕೃಷ್ಣರ ವೈಭವೀಕರಣ ಏಕದೇವೋಪಾಸಕರಾದ ಲಿಂಗಾಯತರಿಗೆ ಮಾನ್ಯವಲ್ಲ.
  • 5. ವಚನ ಸಾಹಿತ್ಯವು ಅತಿ ವರ್ಣಾಶ್ರಮ ಪದ್ಧತಿಯನ್ನು ಪ್ರತಿಪಾದಿಸುತ್ತದೆ ಮತ್ತು ಅಸ್ಪೃಶ್ಯತೆಯನ್ನು ನಿರಾಕರಿಸುತ್ತದೆ. ಜನನ ಸೂತಕ, ಮರಣ ಸೂತಕ, ಜಾತಿ ಸೂತಕ, ಉಚ್ಛಿಷ್ಟ ಸೂತಕ, ರಜೋಸೂತಕಗಳನ್ನು ಖಂಡಿತ ಒಪ್ಪುವುದಿಲ್ಲ. ಹೀಗಾಗಿ ಧಾರ್ಮಿಕ ಸ್ವಾತಂತ್ರ್ಯ ಸಾರುತ್ತದೆ. ಜಾತ್ಯತೀತತೆಯನ್ನು ಘೋಷಿಸುತ್ತದೆ.
  • 6. ದೇವರು ಒಬ್ಬ ಎಂದೊಪ್ಪಿ, ನಿರವಯವನಾದ ದೇವನನ್ನು ಗೋಳಾಕಾರದ ಇಷ್ಟಲಿಂಗ ರೂಪದಲ್ಲಿ ಅರ್ಚಿಸಲು ಹೇಳುತ್ತದೆ. ಪ್ರಾಣಿ ಪೂಜೆ, ದೇವತಾ ಪೂಜೆ, ಪಂಚಭೂತ ಪೂಜೆ ಮುಂತಾದುವನ್ನು ಮನ್ನಿಸುವುದಿಲ್ಲ.
  • 7. ತೀರ್ಥ ಕ್ಷೇತ್ರಗಳನ್ನು ಮನ್ನಿಸುವುದಿಲ್ಲ. ಗಂಗೆ, ತುಂಗೆ, ಕೃಷ್ಣೆ ಮುಂತಾದ ನದಿಗಳು ಪವಿತ್ರವೆಂದು, ಅಲ್ಲಿ ಮಿಂದರೆ ಪಾಪ ಪರಿಹಾರವಾಗುವದೆಂದು ಒಪ್ಪುವುದಿಲ್ಲ.

ಹೀಗೆ ವೈದಿಕ-ಹಿಂದೂ ಧರ್ಮದೊಡನೆ ಮೂಲಭೂತ ವ್ಯತ್ಯಾಸವಿರುವ ಲಿಂಗಾಯತ ಧರ್ಮವು ಹಿಂದೂ ಧರ್ಮವಾಗದು. ಜೈನ, ಬೌದ್ಧ, ಸಿಖ್ ಧರ್ಮಗಳಂತೆ ಇದೂ ಅಹಿಂದೂ ಧರ್ಮವೆಂಬುದು ನನ್ನ ಖಚಿನ ಅಭಿಪ್ರಾಯ. ಲಿಂಗಾಯತರು ಹಿಂದುಗಳೆಂದು ಕರೆದುಕೊಂಡರೆ ಈ ಶಬ್ದದಿಂದ 'ದಿಶಾಭೂಲ್' ಆಗುವ ಮುಗ್ಧ ಜನ ಪುನ: ಎಲ್ಲ ಬಗೆಯ ಮೂಢ ನಂಬಿಕೆ ಮತ್ತು ಸಾಂಪ್ರದಾಯಿಕ ವಿಚಾರಗಳಿಗೆ ಬಲಿಯಾಗಿ ತಮ್ಮ ನಿಜ ಧರ್ಮವನ್ನು ಮರೆತ್ತಿದ್ದಾರೆ./ಮರೆಯುತ್ತಿದ್ದಾರೆ.

ಗ್ರಂಥ ಋಣ: ಕಲ್ಯಾಣ ಕಿರಣ 1985ರ ಅಕ್ಟೋಬರ ವೀಶೆಷ ಸಂಚಿಕೆ "ಬಸವ ಕಿರಣ"ದಲ್ಲಿ ಪ್ರಕಟವಾದ ಲೇಖನ.

ಪರಿವಿಡಿ (index)
*
Previous ತೊಂಟಾದಾರ್ಯ ಮಠ ಗದಗ ಲಿಂಗಾಯತ/ಲಿಂಗವಂತ ವೆಂದು ಸ್ಪಷ್ಟವಾಗಿ ಬರೆಯಿರಿ Next