Previous ಕಲ್ಯಾಣ ಅಂದು ಹೇಗೆ ಇತ್ತು? ಲಿಂಗಾಯತತತ್ವ ವಿರುದ್ಧ ಆಚರಣೆಗಳು. Next

ಲಿಂಗಾಯತರು ವೀರಶೈವರಲ್ಲ ಸ್ಪಷ್ಟಿಕರಣ ಮತ್ತು ಸ್ಪಷ್ಟ ವಿವರಣೆ

*

|| ಓಂ ಶ್ರೀ ಗುರು ಬಸವಲಿಂಗಾಯ ನಮಃ ||

- ಪೂಜ್ಯ ಶ್ರೀ ಮಹಾ ಜಗದ್ಗುರು ಮಾತೆ ಮಹಾದೇವಿ

ಲಿಂಗಾಯತ ಮತ್ತು ವೀರಶೈವ ಸಮಾನಾರ್ಥದ ಪದಗಳಲ್ಲ

ಲಿಂಗಾಯತ ಮತ್ತು ವೀರಶೈವ ಸಮಾನಾರ್ಥದ ಪದಗಳಲ್ಲ ಅವು ಸ್ಪಷ್ಟವಾಗಿ ಬೇರೆ ಬೇರೆ , ಅಂಗದ ಮೇಲೆ ಗೋಳಾಕಾರದ ಇಷ್ಟಲಿಂಗವನ್ನು ಧರಿಸುವವರು ಲಿಂಗಾಯತರೇ ವಿನಾ ವೀರಶೈವರಲ್ಲ ಇಂದು ಸಾಮಾಜಿಕವಾಗಿ ಲಿಂಗಾಯತರು ವೀರಶೈವರು ಎಂದು ಕರೆದು ಕೊಳ್ಳುತ್ತಿದ್ದರೂ ಕರ್ನಾಟಕ ಮತ್ತು ಗಡಿನಾಡುಗಳಲ್ಲಿರುವ ಇಷ್ಟಲಿಂಗಧಾರಿಗಳು ವೀರಶೈವರು ಅಲ್ಲ”. ಹೀಗೆ ಸಂಶೋಧನೆ ಮತ್ತು ಆಳವಾದ ಅಧ್ಯಯನದ ತಳಹದಿಯ ಮೇಲೆ ನಾವು ಪ್ರಸ್ತಾಪಿಸುತ್ತಲೇ ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದ್ಗುರುಗಳು ಮತ್ತು ಮುಂಡರಗಿಯ ಜಗದ್ಗುರುಗಳು ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಒಂದು ರಹಸ್ಯ ಸಭೆ ಕರೆದು ತಾವು ತಾವ ಏನೇನೋ ನಿರ್ಣಯಕ್ಕೆ ಬಂದು ಪತ್ರಿಕೆಗಳ ಮೂಲಕ ನಮ್ಮ ಮೇಲೆ (ವಾಕ್) ಯುದ್ಧ ಸಾರಿದರು. ನಾವು ಪ್ರವಚನ, ಬರಹಗಳ ಮೂಲಕ ನಿಧಾನವಾಗಿ ಜನರನ್ನು ಈ ದಿಶೆಯಲ್ಲಿ ಜಾಗೃತಗೊಳಿಸುತ್ತಿದ್ದವು. ಮೂಜಗಂ ಮತ್ತು ಮುಂಡರಗಿ ಶ್ರೀಗಳು ಬಹಿರಂಗವಾಗಿ ನಮ್ಮ ಬಗ್ಗೆ ಆಡಿದ್ದರಿಂದ ನಾವೂ ಈಗ ಸ್ಪಷ್ಟ ಉತ್ತರವನ್ನು ಬಹಿರಂಗವಾಗಿಯೇ ಕೊಡಲು ಸಾಧ್ಯವಾಯಿತು. ಲಿಂಗಾಯತ- ವೀರಶೈವ ಬೇರೆ ಬೇರೆ ಎಂದು ಹೇಳಿ ನಾವು ಸಮಾಜವನ್ನು ಒಡೆಯುತ್ತಿದ್ದೇವೆ'' ಎಂದು ಉಭಯ ಶ್ರೀಗಳ ಆರೋಪ, ಪ್ರಾಂಜಲ ಮನಸ್ಸಿನಿಂದ ವೀಕ್ಷಿಸಿದರೆ ನಾವು ಲಿಂಗಾಯತ ಸಮಾಜವನ್ನು ಒಡೆಯುತ್ತಿಲ್ಲ. ಒಂದುಗೂಡಿಸುತ್ತಿದ್ದೇವೆ. ಅದು ಹೇಗೆ ಎಂಬುದನ್ನು ನಂತರ ವಿವರಿಸುವೆ.

1. ಅಂಗದ ಮೇಲೆ ಗೋಳಾಕಾರದ ಇಷ್ಟಲಿಂಗವನ್ನು ಧರಿಸಿದವರು ಲಿಂಗಾಯತರು, ಇವರನ್ನು ಲಿಂಗವಂತರು ಎಂದೂ ಕರೆಯುತ್ತಾರೆ. ಹಣವಿದ್ದವ ಹಣವಂತ, ಗುಣವಿದ್ದವ ಗುಣವಂತ, ವಿದ್ಯೆ ಇದ್ದವ ವಿದ್ಯಾವಂತ, ಲಿಂಗವಿದ್ದವ ಲಿಂಗವಂತ. ಇಲ್ಲಿ ’ವಂತ’ ಎಂದರೆ ಹೊಂದಿದವನು ಎಂದರ್ಥ. 'ವಂತ' ಪದಕ್ಕೆ ಇಲ್ಲಿ ಮಹತ್ವವಿದೆ. ಲಿಂಗಾಯತದಲ್ಲಿ "ಆಯತ" ಪದಕ್ಕೆ ಹೆಚ್ಚಿನ ಒತ್ತು ಇದೆ. ಇಷ್ಟಲಿಂಗವನ್ನು ಬರೀ ಹೊಂದಿದ್ದರೆ ಸಾಲದು; ಗುರುವಿನ ಮೂಲಕ ಆಯತವನ್ನು ಮಾಡಿಕೊಂಡಿರಬೇಕು. ಆಯತ' ಮಾಡಿಕೊಳ್ಳುವ ಭೌತಿಕ ಕ್ರಿಯೆಯ ನಂತರ ನಿಜ ಲಿಂಗಾಯತನು ಸ್ವಾಯತ ಮತ್ತು ಸನ್ನಿಹಿತ ಎರಡೂ ಮಾಡಿಕೊಳ್ಳಬೇಕು. ಹೀಗೆ ಲಿಂಗ ದೇವರನ್ನು ಸ್ಥೂಲ ಶರೀರಕ್ಕೆ ಆಯತ ಮಾಡಿಕೊಂಡು, ಮನದಲ್ಲಿ ಸ್ವಾಯತ ಮಾಡಿಕೊಂಡು, ಭಾವದಲ್ಲಿ ಸದಾ ಸನ್ನಿಹಿತನಾಗಿ ಐಹಿಕ ಬಾಳನ್ನು ಬಾಳಬೇಕು. ಹೀಗೆ ’ಲಿಂಗಾಯತ' ಪದವು ಸರ್ವಾಂಗ ಪರಿಪೂರ್ಣ, ಅರ್ಥಪೂರ್ಣ,

2. ವೀರಶೈವ ಪದವನ್ನು ಉಚ್ಚಾರ ಮಾಡುತ್ತಲೇ ಉಂಟಾಗುವ ಕಲ್ಪನೆ ಎಂದರೆ, "ಶಿವನಲ್ಲಿ ವೀರತಮವಾದ ಭಕ್ತಿ (ನಿಷ್ಠೆ)ಯುಳ್ಳವನೇ ವೀರಶೈವ'. ಈ ಪದವು ಲಿಂಗಾಯತರಿಗೆ ಮತ್ತು ಲಿಂಗಾಯತ ಧರ್ಮಕ್ಕೆ ಅನ್ವಯವಾಗುವುದಿಲ್ಲ ಎಂದು ನಾವು ಸಾರಿ ಸಾರಿ ಹೇಳುವುದೇಕೆ ಎಂದರೆ ವೀರಶೈವನು ಶಿವನ ಪೂಜಕನಾದರೆ, ಲಿಂಗಾಯತನು ದೇವ ಪೂಜಕ, ಶಿವನು ಗಂಗೆ-ಗೌರಿ ವಲ್ಲಭ, ಜಟಾಮುಕುಟಧಾರಿ ಸರ್ಪಭೂಷಣ. ಲಿಂಗಾಯತ ಧರ್ಮದ ಆದ್ಯ ಬಸವಣ್ಣನವರು ಪೂಜಿಸಲು ಹೇಳುವುದು ಸರ್ಪಭೂಷಣ ಶಿವನನ್ನಲ್ಲ, ನಿರಾಕಾರನು ನಿರ್ಗುಣನೂ ಆದ ದೇವನನ್ನು (ದೇವಪೂಜೆಯ ಮಾಟ ದುರಿತ ಬಂಧನದೋಟ, ಬ.ಷ.ವ. 177); ಸ್ಥಾವರಲಿಂಗವು ಶಿವನ ಪ್ರತೀಕ, ಇಷ್ಟಲಿಂಗವು ದೇವನ ಪ್ರತೀಕ.

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮುಕುಟ !
ಅಪ್ರಮಾಣ, ಅಗಮ್ಯ, ಅಗೋಚರ, ಅಪ್ರತಿಮ ಲಿಂಗವೆ
ಕೂಡಲಸಂಗಮದೇವಯ್ಯಾ, ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ


ವೀರಶೈವರು ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನ ಪೂಜಕರಾದರೆ ಲಿಂಗಾಯತರು ಸೃಷ್ಟಿಗೊಡೆಯನಾದ ದೇವನ ಆರಾಧಕರು. ''ಶಿವ-ಜೀವೈಕ್ಯ ವಿದ್ಯೆಯಲ್ಲಿ ರಮಿಸುವವನು ಯಾರೋ ಅವನು ವೀರಶೈವ" ಎಂಬ ವ್ಯಾಖ್ಯಾನವನ್ನು ವೀರಶೈವವಾದಿಗಳು ಮಾಡುವರು. ಹಿಂದುಗಳಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಮತ್ತು ಐದನೆಯದಾದ ಪಂಚಮವರ್ಣ ಎಂಬುವಿವೆ. ಈ ಎಲ್ಲರಲ್ಲೂ ಶಿವಭಕ್ತರಿದ್ದಾರೆ. ಬ್ರಾಹ್ಮಣರಲ್ಲಿ ಶಿವ-ಜೀವೈಕ್ಯ ವಿದ್ಯೆಯಲ್ಲಿ ರಮಿಸುವವರಿದ್ದಾರೆ. ಅದೇ ರೀತಿ ಕ್ಷತ್ರಿಯ, ವೈಶ್ಯ, ಶೂದ್ರರಲ್ಲಿ ಸಹ ಶೂದ್ರರಂತೂ ಅಪ್ಪಟ ಶಿವಭಕ್ತರು. ಹರಿಜನರು ನಿಜವಾಗಿಯೂ ಹರಜನರು, ವಿಭೂತಿಧಾರಕರು. ಶೂದ್ರರು ಮತ್ತು ಅಸ್ಪೃಶ್ಯರು ಶಿವಭಕ್ತರಿದ್ದುದರಿಂದಲೇ ಅವರು ಆದ್ಯರಿಂದ ಅನಾರ್ಯರು, ದಸ್ತುಗಳು ಎನ್ನಿಸಿಕೊಂಡರು. ಹೀಗಿರುವಾಗ, ಈ ಎಲ್ಲ ಜನ ಸಮುದಾಯಗಳಲ್ಲಿ ಇರುವ ಶಿವಭಕ್ತರೊಡನೆ ಲಿಂಗಾಯತರು ಹೆಣ್ಣು - ಗಂಡು ಕೊಡುವ -ಪಡೆಯುವ ವ್ಯವಹಾರ ಮಾಡುವರೆ ? ಲಿಂಗಾಯತರು ಧರ್ಮಬಂಧುಗಳಾಗುವುದು ಯಾವಾಗ ? ಇಷ್ಟಲಿಂಗವೆಂಬ ಗಣಲಾಂಛನ ಧಾರಣೆಯಾದಾಗ ತಾನೇ ? ಯಾವುದೇ ಜಾತಿ ಜನಾಂಗದವರು ದೀಕ್ಷೆಯ ಮೂಲಕ ಅರ್ಥಾತ್ ಲಿಂಗಧಾರಣೆಯ ಮೂಲಕ ಲಿಂಗಾಯತ ಧರ್ಮಮಂದಿರವನ್ನು ಪ್ರವೇಶಿಸುವರಷ್ಟೆ.

ವೀರಶೈವ ಪದ ಅಸ್ಪಷ್ಟವೂ ಸಂದಿಗ್ಧವೂ ಆಗಿದೆ ; ಲಿಂಗಾಯತವು ಅತ್ಯಂತ ಸ್ಪಷ್ಟ ಪದಗಳಲ್ಲಿ ತನ್ನ ಅನುಯಾಯಿಯನ್ನು ವಿವರಿಸುತ್ತದೆ.

ಬಸವ ಪೂರ್ವದ ವೀರಶೈವ ಜನಾಂಗ

ಇಷ್ಟಲಿಂಗಧಾರಿಗಳಾದ ಲಿಂಗಾಯತ ಸಮಾಜದಿಂದ ಪೂರ್ತಿ ಬೇರೆಯೇ ಆದ ಆಚಾರ-ವಿಚಾರ-ಸಂಸ್ಕೃತಿ-ನಂಬಿಕೆ ಈ ಎಲ್ಲವುಗಳಲ್ಲಿ ಭಿನ್ನತೆ ಪ್ರದರ್ಶಿಸುವ 'ವೀರಶೈವ' ಗುಂಪುಗಳು ಇಂದಿಗೂ ಇವೆ. ತಮಿಳುನಾಡಿನ ಮೈಲಾಮ್, ಚಿದಂಬರಂ, ಪಾಂಡಿಚೆರಿ ಮುಂತಾದಲ್ಲಿ ವೀರಶೈವ ಮಠಗಳಿವೆ. ಅವರು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರಿಗೆ ವೀರಶೈವ ದೀಕ್ಷೆ ಕೊಡುತ್ತಾರೆ. ಅಂತ್ಯಜರಿಗೆ ದೀಕ್ಷೆ ನಿಷಿದ್ಧ, ದೀಕ್ಷಾ ನಂತರ ವಿವಿಧ ವರ್ಣಗಳಿಂದ ದೀಕ್ಷಿತರಾಗಿ ಬಂದವರ ಮಧ್ಯೆ ಯಾವುದೇ ಉಟೋಪಚಾರ, ಸಹಪಂಕ್ತಿ ಭೋಜನ, ವೈವಾಹಿಕ ಸಂಬಂಧ ಇರದು ಮಾತ್ರವಲ್ಲ ದೀಕ್ಷೆ ನೀಡಿದ ಗುರುವು ಶಿಷ್ಯನ ಮನೆಗೆ ಹೋಗಿ ಊಟ ಮಾಡದೆ ಅಕ್ಕಿಬೇಳೆ ಬೆಲ್ಲ ಮುಂತಾದ ಪದಾರ್ಥಗಳನ್ನು ಪಡೆದುಕೊಳ್ಳುವನು. ತಮಿಳು ನಾಡು, ಕೇರಳ, ಆಂಧ್ರಗಳಲ್ಲಿರುವ ಆ ವೀರಶೈವರಲ್ಲಿ ಶೂದ್ರ-ವೀರಶೈವರು ಮಾಂಸಾಹಾರಿಗಳು,

2. ಬಸವ ಪೂರ್ವದ ವೀರಶೈವ

ಗುರುಬಸವಣ್ಣನವರಿಗೂ ಪೂರ್ವದಲ್ಲಿ ಕನ್ನಡನಾಡಿನಲ್ಲಿ ಅಸ್ತಿತ್ವದಲ್ಲಿ ಇಲ್ಲದಿದ್ದರೂ ಆಂಧ್ರ, ತಮಿಳುನಾಡು, ಕೇರಳಗಳಲ್ಲಿದ್ದ ವೀರಶೈವ ಪಂಥದ ಸ್ವರೂಪ ಕುರಿತು ಒಂದು ಮಹತ್ವಪೂರ್ಣ ಲೇಖನವು ಮೂರು ಸಾವಿರ ಮಠದ ಶ್ರೀ ಜಗದ್ಗುರು ಗಂಗಾಧರ ಧರ್ಮ ಪ್ರಚಾರಕ ಮಂಡಳ, ಹುಬ್ಬಳ್ಳಿ ಇವರು ಪ್ರಕಟಿಸಿದ "ಪಾಲಕುರಕಿ ಸೋಮನಾಥ ಕವಿ" ಎಂಬ ಸಾಹಿತ್ಯ ಶಿರೋಮಣಿ ಎಸ್.ಆರ್. ಸೋಮಶೇಖರ ಶರ್ಮಾ ಅವರು ಬರೆದ ಗ್ರಂಥಮಾಲೆಯ 241ನೆಯ ಪ್ರಕಟಣೆಯಲ್ಲಿದೆ. ಪುಟ 25ರಿಂದ 36ರವರೆಗೆ ಇರುವ ಪುಟಗಳನ್ನು ಇಲ್ಲಿ ಆಯ್ದು ಯಥಾವತ್ತಾಗಿ ಕೊಡಲಾಗಿದೆ.

ಸೋಮನಾಥನ ಕಾಲದಲ್ಲಿದ್ದ ಆಂಧ್ರ ದೇಶದಲ್ಲಿಯ ವೀರಶೈವ ಮತ ವ್ಯವಸ್ಥೆ

ಪಾಲ್ಕುರಿಕೆ ಸೋಮನಾಥ ಕವಿಯ ಕಾಲವು ಕ್ರಿ.ಶ. 1160-1240 ಎಂದು ನಿರ್ಧರಿಸಲಾಗಿದೆ. ಕಾಲ ನಿರ್ಣಯದ ಬಗ್ಗೆ ಪಂಡಿತರ ವಿಚಾರಗಳನ್ನು ಮುಂದೆ ಸಂಪೂರ್ಣವಾಗಿ ಚರ್ಚಿಸುತ್ತೇನೆ. ಈ ಕಾಲದ ಬಗ್ಗೆ ಚರ್ಚಿಸುವುದಕ್ಕಿಂತ ಮುಂಚೆ ಸೋಮನಾಥನ ಕಾಲದಲ್ಲಿಯ ಆಂಧ್ರ ದೇಶದಲ್ಲಿದ್ದ ವೀರಶೈವ ಮತ ಸ್ವರೂಪ ಮತ್ತು ಅದರ ವ್ಯವಸ್ಥೆಯನ್ನು ಕುರಿತು ಸಂಕ್ಷಿಪ್ತವಾಗಿ ಅರಿತುಕೊಳ್ಳುವುದು ತಂಬಾ ಅವಶ್ಯಕ.

ಅತಿ ಪ್ರಾಚೀನ ಕಾಲದಲ್ಲಿ ಈ ಭಾರತ ದೇಶವು, 1) ಆರ್ಯಾವರ್ತ ಮತ್ತು 2) ದ್ರಾವಿಡ ದೇಶವೆಂಬ ಎರಡು ಪ್ರಧಾನ ಪ್ರದೇಶಗಳಲ್ಲಿ ವಿಭಜಿಸಲಾಗಿದ್ದಿತು. ಇವೆರಡು ಭೌಗೋಳಿಕ (Geographical) ವಿಭಾಗಗಳು, ವಿಂಧ್ಯ ಪರ್ವತದ ಆಚೆಗೆ ಇರುವ ಉತ್ತರ ಭಾರತ ಪ್ರದೇಶವು ಆರ್ಯಾವರ್ತವೆಂತಲೂ ಮತ್ತು ವಿಂಧ್ಯಾ ಪರ್ವತದ ಈಚೆಗೆ ಇರುವ ದಕ್ಷಿಣ ಭಾರತ ಪ್ರದೇಶಗಳು ದ್ರಾವಿಡ ದೇಶವೆಂದೂ ಪ್ರಾಚೀನ ಸಂಸ್ಕೃತ - ಸಾಹಿತ್ಯದಲ್ಲಿ ಹೇಳಲಾಗಿದೆ. ಅದಕ್ಕಾಗಿ 'ಆರ್ಯ' ಮತ್ತು 'ದ್ರಾವಿಡ' ಎಂಬ ಶಬ್ದಗಳು ಅಥವಾ ಪದಗಳು ಜಾತಿವಾಚಕಗಳಾಗಿರದೇ, ಅವು ಕೇವಲ 'ಪ್ರದೇಶ ವಾಚಕಗಳಾಗಿವೆ.

ಆದರೆ ಇಂಗ್ಲೀಷ್ ಜನರು ಈ ಭಾರತ ದೇಶವನ್ನು ಆಕ್ರಮಿಸಿ, ತಮ್ಮ ರಾಜ್ಯಪಾಲನೆಯನ್ನು ಈ ದೇಶದಲ್ಲಿ ಸ್ಥಾಪಿಸಿದಾಗ ತಮ್ಮ ರಾಜ್ಯಪಾಲನೆಯ ಸುಸ್ಥಿರತೆಗಾಗಿ ಕೆಲವು ಚರಿತ್ರೆಗಳನ್ನು ಸೃಷ್ಟಿಸಿದರು. ಈ ಭಾರತ ಭೂಮಿಯು ಯಾರೊಬ್ಬರ ಸ್ವಂತ ಆಸ್ತಿಯಲ್ಲವೆಂತಲೂ, ಅತಿ ಪ್ರಾಚೀನ ಕಾಲದಿಂದ ಒಂದೊಂದು ಜಾತಿಯವರೇ, ಒಬ್ಬರ ತರುವಾಯ ಇನ್ನೊಬ್ಬರು, ಈ ದೇಶವನ್ನು ಆಕ್ರಮಿಸಿದರೆಂತಲೂ, ಈ ವಿದೇಶೀ ಜಾತಿಯವರ ಆಕ್ರಮಣ ಪರಂಪರೆಯಲ್ಲಿಯೇ 'ದ್ರಾವಿಡ ಜಾತಿಯವರು ಬಂದರೆಂತಲೂ, ಅವರ ನಂತರ 'ಆರ್ಯ ಜಾತಿ'ಯವರು ಬಂದರೆಂತಲೂ ಮತ್ತು ಕೊನೆಗೆ ಇಂಗ್ಲೀಷ್ ಜಾತಿಯವರು ಬಂದರೆಂತಲೂ - ಇತ್ಯಾದಿ ಭಾರತದ ಜನರಿಗೆ ಬೋಧಿಸಲಿಕ್ಕಾಗಿ ಇಂಗ್ಲಿಷ್ ಜನರು ಭಾರತ ದೇಶದ ಚರಿತ್ರೆಯನ್ನು ಸೃಷ್ಟಿಸಿದರು. ಇದನ್ನು “Divide and Rule” ಎಂಬ ಇಂಗ್ಲೀಷು ರಾಜಕಾರಣಿಗಳ ಸಿದ್ಧಾಂತವೆನ್ನುತ್ತಾರೆ. ಈ ಚರಿತ್ರೆಯನ್ನೇ ನಮ್ಮ ದೇಶದ ವಿಶ್ವವಿದ್ಯಾಲಯಗಳಲ್ಲಿ, ಕಾಲೇಜುಗಳಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಈಗಲೂ ಕಲಿಸಲಾಗುತ್ತಿದೆ. ಈ ಚರಿತ್ರೆಯನ್ನೇ ನಮ್ಮ ದೇಶದ ಮಂದಮತಿ ಜನರು ನಂಬಿ ತಮ್ಮ ಸ್ವಂತ ವಿವೇಕ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಇದರ ಪರಿಣಾಮವಾಗಿ ನಮ್ಮ ದೇಶದಲ್ಲಿಯ ಅನೇಕ ಇಂಗ್ಲೀಷ್ ವಿದ್ಯಾವಂತರು ಕೂಡ ಪೂರ್ವ ಕಾಲದಲ್ಲಿ ಆರ್ಯ ಸಂಸ್ಕೃತಿ' ಮತ್ತು 'ದ್ರಾವಿಡ ಸಂಸ್ಕೃತಿ' ಎಂಬುದಾಗಿ ಇದ್ದವೆಂತಲೂ, ಇತ್ಯಾದಿ ವಿಚಿತ್ರವಾದುದನ್ನು ಅನುಸರಿಸಿ ಅನೇಕ ನಿರುಪಯೋಗ ಗ್ರಂಥಗಳನ್ನು ಪ್ರಿಂಟು ಮಾಡಿಸಿದ್ದಾರೆ. ಇಂಥ ರಾಜಕೀಯ ಕಲ್ಪಿತ ಚರಿತ್ರೆಗಳು ನಮ್ಮ ದೇಶದಲ್ಲಿರುವವರೆಗೆ ನಮ್ಮ ದೇಶದ ಧಾರ್ಮಿಕ ಚರಿತ್ರೆಯ ಪುನರುದ್ಧಾರವು ಅಸಾಧ್ಯವೇ ಸರಿ.

ಭಾರತ ದೇಶದಲ್ಲಿ ವೇದಗಳ ರಚನೆಯ ಪ್ರಪ್ರಥಮ ಧಾರ್ಮಿಕ ಸಾಹಿತ್ಯವೆಂದು ಸ್ವೀಕರಿಸಲಾಗಿದೆ. ಈ ವೇದಗಳಲ್ಲಿ ಪ್ರತಿಪಾದಿತ ಮತವನ್ನು ಅಥವಾ ಧರ್ಮವನ್ನು ಪ್ರಾಚೀನ ಮತ ಅಥವಾ ಧರ್ಮವೆಂದು ಸ್ವೀಕರಿಸಲಾಗಿದೆ. ಭಾರತ ದೇಶದಲ್ಲಿ ಆರು ಆಸ್ತಿಕ ಮತಗಳು ಇವೆ. ಈ ಆರು ಮತಗಳು ಒಂದೇ ಹೆಸರಿನಿಂದ ಕರೆಯಲ್ಪಟ್ಟವೆಂದು ಹೇಳಲಿಕ್ಕೆ ಬರುವುದಿಲ್ಲ. ಆದರೆ ವೇದಗಳನ್ನು ಸ್ಮೃತಿಗಳನ್ನು ಆಗಮಗಳನ್ನು ಅನುಸರಿಸುವವರನ್ನು "ವೈದಿಕರು 'ಆಸ್ತಿಕರು” “ಸನಾತನ ಧರ್ಮದವರು' ಎಂದು ಕರೆಯಲಾಗುತ್ತದೆ. ಅರ್ಥಾತ್ ಈ ವೇದ ಪ್ರತಿಪಾದಿತ ಮತವೇ ಈ ದೇಶದ ಪ್ರಾಚೀನ ಪ್ರಜರ ಮತವಾಗಿತ್ತು. ಈ ಪ್ರಜರು ಆರ್ಯಾವರ್ತ ಪ್ರದೇಶ ನಿವಾಸಿಗಳಾಗಲೀ ಅಥವಾ ದ್ರಾವಿಡ ಪ್ರದೇಶ ನಿವಾಸಿಗಳಾಗಲೀ, ಸರ್ವರ ಮತವು “ವೈದಿಕ ಮತ್ತ'ವೇ ಆಗಿತ್ತು !

ಈ ವೈದಿಕ ಮತವನ್ನು ಅನುಸರಿಸುವ ಜನರನ್ನೇ ಸುಮಾರು ಒಂದು ಸಾವಿರ ವರ್ಷಗಳ ಹಿಂದೆ 'ಹಿಂದೂ' ಎಂದು ಕರೆಯಲು ಆರಂಭವಾಯಿತು. ನಿಜವಾಗಿ ಯೋಚಿಸಿದರೆ, 'ಹಿಂದೂ' ಪದವು ಪ್ರಾಚೀನ ಸಂಸ್ಕೃತ ಗ್ರಂಥಗಳಾದ ವೇದಗಳಲ್ಲಿ ಉಪನಿಷತ್ತುಗಳಲ್ಲಿ, ಸ್ಮೃತಿ ಗ್ರಂಥಗಳಲ್ಲಿ ಆಗಮಗಳಲ್ಲಿ - ಎಲ್ಲಿಯೂ ಉಪಯೋಗವಾಗಿಲ್ಲ. ಆದರೆ ಮೇರು ತಂತ್ರ" ಮತ್ತು 'ಭವಿಷ್ಯತ್ ಪುರಾಣ' ಇವೆರಡರಲ್ಲಿ ಈ ಹಿಂದೂ ಶಬ್ದವು ಕಂಡುಬರುತ್ತದೆ. ಈ ಗ್ರಂಥಗಳಲ್ಲಿ ನಂತರ ಈ ಶಬ್ದವು ಪ್ರಕ್ಷಿಪ್ತವಾಗಿದೆ ಎಂದು ವಿದ್ವಾಂಸರ ಅಭಿಪ್ರಾಯ. ಅದಕ್ಕಾಗಿ ಪ್ರಾಚೀನ ಕಾಲದಲ್ಲಿ ಆಸ್ತಿಕ ಮತ' ಅಥವಾ 'ವೈದಿಕ ಮತ'ವನ್ನು ಹೇಳಲು 'ಹಿಂದೂ' ಪದವನ್ನು ಉಪಯೋಗಿಸಿಲ್ಲ, ಮಹಮ್ಮದೀಯರು ಮತ್ತು ಫಾರ್ಸಿ ಜನರು ಭರತ ದೇಶದ ಜನರನ್ನು ಕರೆಯಲಿಕ್ಕಾಗಿ ಈ 'ಹಿಂದೂ' ಶಬ್ದವನ್ನು ಸೃಷ್ಟಿಸಿದರೆಂದು ಹೇಳಲಾಗುತ್ತಿದೆ. ಕಾಲಪ್ರಮೇಣ ಈ 'ಹಿಂದೂ' ಪದವು ಸಮಸ್ತ ವೈದಿಕ ಅಥವಾ ಆಸ್ತಿಕ ಮತದವರಿಗೆ ಅನ್ವಯಿಸಿ ಉಪಯೋಗಿಸಲಾಗಿದೆ. ಇದನ್ನು ಈ ದೇಶದ ಸರ್ವ ವೈದಿಕ ಮತಸ್ಥರೂ, ಆಸ್ತಿಕ ಮತಸ್ಥರೂ, ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಸದ್ಯ ವೈದಿಕ - ಮತವೆಂದರೆ 'ಹಿಂದೂ' ಮತವೆಂದೇ ಅರ್ಥ ಅಸ್ತು.

ವೈದಿಕ -ಮತವೇ ಈ ದೇಶದ ಪ್ರಾಚೀನ ಮತವೆಂದು ಮೇಲೆ ಹೇಳಿದ್ದೇನೆ. “ಬ್ರಹ್ಮ'ನನ್ನು ಅರಿತುಕೊಳ್ಳುವುದೇ ಧರ್ಮವು. ಇದೇ ಪ್ರತಿ ಮತಕ್ಕೂ ಮೂಲವು, ಈ ಧರ್ಮವೇ ಎಲ್ಲ ವೇದಗಳಲ್ಲಿಯ ವಿಷಯವು. ಈ ವೇದವು ದೇವಭಾಷೆಯಾದ ಸಂಸ್ಕೃತದಲ್ಲಿದ್ದು ಅಕ್ಷಾರುಕ್ಷೇಯ''- ಎಂದರೆ ಒಬ್ಬ ವ್ಯಕ್ತಿ ರಚಿಸಿದ್ದಲ್ಲವೆಂದು ಹೇಳಲಾಗಿದೆ. ಈ ವೇದ ಜ್ಞಾನವು ಮತ್ತು ಸಾಹಿತ್ಯವು ಗುರುವಿನಿಂದ ಶಿಷ್ಯನಿಗೆ - ಇಂಥ ಗುರು-ಶಿಷ್ಯ ಪರಂಪರೆಯಲ್ಲಿ ಹೇಳಲ್ಪಟ್ಟು ರಕ್ಷಿತವಾಗಿದೆ. ವೇದಗಳು ಮತ್ತು ವೇದಗಳಲ್ಲಿಯ ಜ್ಞಾನವು ಹೇಗೆ ರಕ್ಷಿಸಲ್ಪಟ್ಟಿದೆ ಎನ್ನುವುದಕ್ಕೆ ಈ ರೀತಿ ಹೇಳಲಾಗಿದೆ.

“ಅಂತಿಮ ಕಲ್ಪದ ಕೊನೆಯಲ್ಲಿ ಮಹಾಪ್ರಳಯ ಉಂಟಾಗುತ್ತದೆ. ಸರ್ವವೂ ನಾಶವಾಗುತ್ತದೆ. ಆಗ ಸರ್ವ ದೇವಾಧಿಪತಿಯಾದ 'ರುದ್ರ'ನು ತನ್ನ ಧರ್ಮವನ್ನು ಆಚರಿಸಲು, ಒಬ್ಬ ಬ್ರಹ್ಮನನ್ನು ಈಗಿನ ಶ್ವೇತವರಾಹಕಲ್ಪಕ್ಕಾಗಿ ಸೃಷ್ಟಿಸುತ್ತಾನೆ. ಹಿಂದಿನ ಕಾಲದಲ್ಲಿ ಬ್ರಹ್ಮನು ತಪಸ್ಸನ್ನು ಆಚರಿಸಿದ್ದರಿಂದ ಈ ತಪಃ ಪುಣ್ಯದಿಂದಾಗಿ ಬ್ರಹ್ಮನಿಗೆ ಈ ಅವಕಾಶ ಸಿಕ್ಕುತ್ತದೆ. 'ರುದ್ರ'ನು ಬ್ರಹ್ಮನಿಗೆ ಜಗತ್ತನ್ನು ಪುನಃ ಸೃಷ್ಟಿಸಲು ಆಜ್ಞಾಪಿಸಿ ಅಂತರ್ಧಾನನಾಗುತ್ತಾನೆ.

ಅದರಂತೆ ಬ್ರಹ್ಮನು ಸೃಷ್ಟಿಕಾರ್ಯವನ್ನು ಮಾಡಲು ಉದ್ಯುಕ್ತನಾಗುತ್ತಾನೆ. ಆದರೆ ಬಹುಕಾಲವು ಗತಿಸಿದ್ದರಿಂದ, ಬ್ರಹ್ಮನಿಗೆ ಸೃಷ್ಟಿಯ ಕ್ರಮವು ಜ್ಞಾಪಕಕ್ಕೆ ಬರುವುದಿಲ್ಲ, ಅದಕ್ಕಾಗಿ ಬ್ರಹ್ಮನು ಘೋರ ತಪಸ್ಸನ್ನು ಆಚರಿಸುತ್ತಾನೆ. ಆಗ 'ರುದ್ರ'ನು ಆತನ ಮುಂದೆ ಪ್ರತ್ಯಕ್ಷವಾಗಿ ಆತನಿಗೆ, ಅಂದರೆ ಪ್ರಜಾಪತಿ ಬ್ರಹ್ಮನಿಗೆ ಸೃಷ್ಟಿಕಾರ್ಯ ಪದ್ಧತಿ ಮತ್ತು ಕ್ರಮವನ್ನು ಪುನಃ ಉಪದೇಶಿಸುತ್ತಾನೆ.

ರುದ್ರನ ಆದೇಶದಂತೆ ಪ್ರಜಾಪತಿ ಬ್ರಹನು ಧ್ಯಾನಮಗ್ನನಾಗುತ್ತಾನೆ. ಆಗ ಈಶ್ವರನು ಆತನ ಮುಂದೆ ಓಂಕಾರ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. ಬ್ರಹ್ಮನು 'ಜ್ಞಾನ'ವನ್ನು ಪ್ರಾರ್ಥಿಸುತ್ತಾನೆ. ಆಗ ವೇದಗಳು ಅವನ ಸುತ್ತಲೂ ಅವಿರ್ಭವಿಸಿ ಕೋಟಿ ಸೂರ್ಯನಂತೆ ಪ್ರಕಾಶಿಸುತ್ತವೆ. ಈ ಪ್ರಕಾಶಕಿರಣಗಳನ್ನು ನೋಡಲು ಅಸಮರ್ಥನಾದ ಬ್ರಹ್ಮನು ಪುನಃ ಈಶ್ವರನನ್ನು ಪ್ರಾರ್ಥಿಸುತ್ತಾನೆ. ಆಗ ಈಶ್ವರನು ಪುನಃ ಪ್ರತ್ಯಕ್ಷನಾಗಿ ಅವುಗಳಲ್ಲಿ ನಾಲ್ಕು ವೇದಗಳನ್ನು ಆರಿಸಿಕೊಂಡು, ಅವುಗಳನ್ನು ಬ್ರಹ್ಮನಿಗೆ ಕಲಿಸುತ್ತಾನೆ. ಬ್ರಹ್ಮನು ಆಗ ಈ ಜಗತ್ತನ್ನು ಸೃಷ್ಟಿಸಲು ಆರಂಭಿಸುತ್ತಾನೆ. ಹೀಗಾಗಿ ಸೃಷ್ಟಿಗೆ ಮೂಲ ಪ್ರಜಾಪತಿ ಬ್ರಹ್ಮನಾದರೂ, ಆತನ ಸೃಷ್ಟಿಗೆ ವೇದಗಳೆಂತಲೂ ಮತ್ತು ಈ ಬ್ರಹ್ಮ ಮತ್ತು ಈ ವೇದಗಳ ಸೃಷ್ಟಿಗೆ 'ರುದ್ರ' (ಈಶ್ವರ)ನು ಮೂಲವೆಂದು ಸ್ಪಷ್ಟವಾಗುತ್ತದೆ.

ವೇದಗಳಲ್ಲಿ ಅನೇಕ ದೇವತಾ-ದೇವರ ಉಪಾಸನಾ ಪ್ರಾಸಕ್ತಿ ಬಂದಿದ್ದರೂ, ಕಾಲ ಕ್ರಮೇಣ ಇಬ್ಬರು ದೇವರೇ ಸರ್ವಶ್ರೇಷ್ಠ ದೇವರಾಗಿ ಸ್ವೀಕೃತರಾದ್ದರಿಂದ ಈ ಉಭಯ ದೇವರ ಉಪಾಸನೆಗಾಗಿ ಅನೇಕ ಧಾರ್ಮಿಕ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿ ರಚಿಸಲ್ಪಟ್ಟವು. 1) ಶಿವ ಮತ್ತು 2) ವಿಷ್ಣು ಇವರೇ ಉಭಯದೇವರು. ಇದರಿಂದಾಗಿ ಎರಡು ಪ್ರಸಿದ್ದ ಪ್ರಾಚೀನ ವೈದಿಕ ಮತಗಳು : 1) ಶೈವ ಮತ್ತು 2) ವೈಷ್ಣವ ಮತಗಳೆಂದು ವಿಭಾಗವಾಗಿ ವೃದ್ಧಿಗೊಂಡವು.

ಈ ವೈದಿಕ ಮತಾನುಯಾಯಿಗಳಲ್ಲಿ ಎರಡು ಮಾರ್ಗಗಳು ಏರ್ಪಟ್ಟವು : ಏನೆಂದರೆ 1) ಲೌಕಿಕ ಮತ್ತು 2) ಪಾರಮಾರ್ಥಿಕ ಲೌಕಿಕ ಮಾರ್ಗವೆಂದರೆ, ಯಜ್ಞ ಯಾಗದಿಂದ ಸುಖ, ಸಂಪತ್ತು (ಭೋಗ ಭಾಗ್ಯ) ಮತ್ತು ಸ್ವರ್ಗ ಸುಖವನ್ನು ಪಡೆಯಲು ಪ್ರಯತ್ನಿಸುವುದು. ಪಾರಮಾರ್ಥಿಕ ಮಾರ್ಗವೆಂದರೆ, ತಪಸ್ಸನ್ನು ಆಚರಿಸಿ ಬ್ರಹ್ಮನನ್ನು ಅರಿತುಕೊಳ್ಳಲು ಪ್ರಯತ್ನಿಸುವುದು.

ಈ ಎರಡು ಮಾರ್ಗಗಳನ್ನು ಕುರಿತು ಮುಂಡಕೋಪನಿಷತ್ತಿನಲ್ಲಿ ಈ ರೀತಿ
ಹೇಳಲಾಗಿದೆ.

1) ಲೌಕಿಕ ಮಾರ್ಗ

“ಇಷ್ಟಾಪೂರ್ತ೦ ಮನ್ಯ ಮಾನಾವರಿಷ್ಯಂ
ನಾನೈಚ್ಚೆಯೋ ವೇದಯಂತೇ ಪ್ರಮೂಢಾ:
ನಾಕಸ್ಯ ಪ್ರಪೈತೇ ಸುಕೃತೇನು ಭೂತ್ವಾ
ಇಮಂ ಲೋಕಂ ಹೀನರಂ ವಾ ವಿತಂತೆ - 1-2-10

''ಇಷ್ಟವೆಂದರೆ ಯಾಗಾದಿ ಶೌತ -ಕರ್ಮ, ಪೂರ್ತವೆಂದರೆ ಭಾವಿ ಕೆರೆ ಮೊದಲಾಗಿ ಕಟ್ಟಿಸುವ ಸ್ವಾರ್ತ ಕರ್ಮಗಳೆಂದು ತಿಳಿಯುತ್ತ, ಇದಕ್ಕಿಂತಲೂ ಶ್ರೇಷ್ಠಮಾರ್ಗವು ಅಂದರೆ ಆತ್ಮ ಜ್ಞಾನ' ಅಥವಾ 'ಬ್ರಹ್ಮ ಜ್ಞಾನ' ಎಂಬುದು ಇದೆ ಎಂದು ಅರಿಯದ ಮೂರ್ಖರು ಸ್ವರ್ಗ ಲೋಕದಲ್ಲಿ ಯಾಗಾದಿ ಪುಣ್ಯ ಫಲವನ್ನು ಅನುಭವಿಸಿದ ನಂತರ ಈ ಮರ್ತ್ಯ ಲೋಕಕ್ಕೋ, ಇದಕ್ಕೂ ಹೀನತರ ಲೋಕಕ್ಕೋ ಹೋಗುತ್ತಾರೆ.''

2) ಇನ್ನು ಪಾರಮಾರ್ಥಿಕ ಮಾರ್ಗದ ಬಗ್ಗೆ

ತಪಃ ಶ್ರದ್ದೆಯೇ ಹ್ಯುಪ ವಸಂತ್ಕರಣ್ಯೆ
ಶಾಂತಾ ವಿದ್ವಾಂಸೋ ಭಕ್ಷ - ಚರ್ಯಾಂ ಚರಂತ:
ಸೂರ್ಯಾದ್ವಾರೇಣ ತೇ ವಿರಜಾಃ ಪ್ರಯಂತಿ
ಯತ್ರಾ ಮೃತಃ ಸಪುರುಷೋ ಹವ್ಯಯಾತ್ಮಾ - 1-2-11

ಶಾಂತರಾದ ವಿದ್ವಾಂಸರು ಅರಣ್ಯದಲ್ಲಿ
ತಪಃ ಶ್ರದ್ಧೆಗಳನ್ನು ಆಚರಿಸುತ್ತಾ
ಭಿಕ್ಷೆಯಿಂದ ಜೀವಿಸುತ್ತಾ,
ಉತ್ತರಾಯಣ ಮಾರ್ಗದಿಂದ ಪವಿತ್ರ ದೇಹಿಗಳಾಗಿ
ಅವಿನಾಶಿಯೂ - ವ್ಯಯರಹಿತನೂ
ಆದ ಪರಮಾತ್ಮನನ್ನು ಸೇರುತ್ತಾರೆ.

ಲೌಕಿಕ ಮಾರ್ಗವಾದ ಯಜ್ಞಯಾಗಾದಿಗಳಿಗೆ ಪ್ರಧಾನವಾದ ಮತಕ್ಕೆ 'ವಿಷ್ಣು'ವನ್ನು ಅಧಿದೇವತೆಯಾಗಿ ಸ್ವೀಕರಿಸಲಾಗುತ್ತದೆ. ಪಾರಮಾರ್ಥಿಕ ಮಾರ್ಗವಾದ ತಪಸ್ಸು ಶ್ರದ್ಧೆ ಪ್ರಧಾನವಾದ ಮತಕ್ಕೆ 'ಶಿವ'ನು ಅಧಿದೇವತೆಯಾಗಿ ಸ್ವೀಕರಿಸಲಾಗುತ್ತದೆ.

'ಶಿವ'ನ ಪೂಜೆಯು 'ಲಿಂಗ' ರೂಪದಲ್ಲಿಯೂ, ವಿಷ್ಣುವಿನ ಪೂಜೆಯು 'ಮನುಷ್ಯ' ರೂಪದಲ್ಲಿಯೂ, ಸಾಕಾರ ಪೂಜೆಯು ಆರಂಭವಾಯಿತು. ಇದರಿಂದಾಗಿ ಈ ಪೂಜಾ ವಿಧಾನ ಭೇದದಿಂದ ಈ ಎರಡು ಪ್ರಧಾನ ಮತಗಳಲ್ಲಿ - ಶೈವಮತ ಮತ್ತು ವೈಷ್ಣವ ಮತಗಳಲ್ಲಿ ಆನೇಕ ವಿಭೇದಗಳುಂಟಾದವು. ಕಾಲಕ್ರಮೇಣ, ಶೈವ ಮತದಲ್ಲಿ ಸ್ಥಾವರ ಲಿಂಗಪೂಜೆ'' ಮತ್ತು 'ಇಷ್ಟಲಿಂಗಪೂಜೆ' ಎಂಬ ಎರಡು ಪ್ರಧಾನ ಪೂಜಾ ವಿಧಾನ ವಿಭಾಗಗಳು ಏರ್ಪಟ್ಟು ಇದು ಮುಂದೆ 'ಶೈವರು' ಮತ್ತು 'ವೀರಶೈವರು' ಎಂಬ ವಿಭಾಗಕ್ಕೆ
ಕಾರಣವಾಯಿತು.

'ಇಷ್ಟಲಿಂಗ’ ಪೂಜೆಯು ಯಾವ ಕಾಲದಲ್ಲಿ ಆರಂಭವಾಯಿತು ? ಯಾರಿಂದ ಆರಂಭಿಸಲಾಯಿತು? ಎಂದು ಅನೇಕರು ಆಗಾಗ್ಗೆ ಕೇಳುವುದುಂಟು. ಆದರೆ ಇಂಥ ಪ್ರಶ್ನೆಗಳಿಗೆ ಅರ್ಥವಿಲ್ಲವೆಂದು ನನ್ನ ಅಭಿಪ್ರಾಯ. ಏಕೆಂದರೆ 'ರುದ್ರಾಕ್ಷ ಧಾರಣೆ ಯಾವ ಕಾಲದಲ್ಲಿ ಆರಂಭವಾಯಿತು? ಯಾರಿಂದ ಆರಂಭವಾಯಿತು? ಅದರಂತೆ 'ವಿಭೂತಿ ಧಾರಣೆ ಯಾವ ಕಾಲದಲ್ಲಿ ಆರಂಭವಾಯಿತು? ಯಾರಿಂದ ಆರಂಭಿಸಲ್ಪಟ್ಟಿತು? ಎಂಬ ಪ್ರಶ್ನೆಗಳನ್ನು ಕೇಳಿದರೆ ಯಾವ ಉತ್ತರ ಬಂದಿತು?

ವೈದಿಕ ಮತದಲ್ಲಿ ತಪಸ್ಸನ್ನು ಆಚರಿಸುವುದೇ ಯಜ್ಞ ಯಾಗಾದಿ ಕರ್ಮಕ್ಕಿಂತಲೂ ಶ್ರೇಷ್ಠ ಧರ್ಮಮಾರ್ಗವೆಂದು ನಿರ್ಧರಿಸಿ ತಪಸ್ಸಿಗೆ ಪ್ರಾಧಾನ್ಯತೆ ಕೊಟ್ಟಾಗೆ ಈ ತಪಸ್ಸಾಧನೆ ಸರ್ವ ಋಷಿ ಜನಕ್ಕೆ ಮಾನ್ಯವಾದ ಧರ್ಮವಾದಾಗ, ಶಿವನನ್ನು ಕುರಿತು ತಪಸ್ಸನ್ನು ಆಚರಿಸುವಾಗ ಈ 'ಇಷ್ಟಲಿಂಗ'ದ ಅವಶ್ಯಕತೆ ಬಂದಿರಬಹುದು. ಏಕೆಂದರೆ ತಪಸ್ಸನ್ನು ಆಚರಿಸುವ ಜ್ಞಾನಮಾರ್ಗವೇ ವೀರಶೈವ ಧರ್ಮದ ಮೂಲವಾಗಿದ್ದು ಇಷ್ಟಲಿಂಗ ಧಾರಣೆ'' ಮತ್ತು 'ಪೂಜೆ' - ಇವೆಲ್ಲ ಈ ತಪಸ್ಸಾಧನೆಯನ್ನು ಸುಲಭ ಮಾಡಲಿಕ್ಕಾಗಿಯೇ ವಿಹಿತವಾಗಿವೆ.

ಮೇಲೆ ಹೇಳಿದ ಮತಗಳು - ಶೈವ ಮತವೇ ಆಗಿರಲಿ ವೀರಶೈವ ಮತವೇ ಆಗಲಿ ವೈಷ್ಣವ ಮತವೇ ಆಗಲಿ ಬ್ರಾಹ್ಮಣ್ಯ ಪ್ರಧಾನ ಮತಗಳೇ ಆಗಿದ್ದವು. ಲಿಂಗಧಾರಿ ಬ್ರಾಹ್ಮಣರನ್ನು “ಮಾಹೇಶ್ವರ ರೆಂತಲೂ, ''ಶಿವ- ಬ್ರಾಹ್ಮಣ''ರೆಂತಲೂ ಆಗಿನ ಕಾಲದಲ್ಲಿ ವ್ಯವಹರಿಸಲಾಗುತ್ತಿತ್ತು.

ಸನಾತನ ವೈದಿಕ-ವೀರಶೈವ ಮತದ ಪ್ರವರ್ತಕರೆಂದು ಪ್ರಸಿದ್ಧರಾದ ಪಂಚಾಚಾರ್ಯರಲ್ಲಿ ಶ್ರೀ ಮರುಳಾರಾಧ್ಯ ಮತ್ತು ಶ್ರೀ ವಿಶ್ವಾರಾಧ್ಯರೆಂಬ ಉಭಯ ಆಚಾರ್ಯರು ಭಾರತ ದೇಶದ ಆರ್ಯಾವರ್ತ ಪ್ರದೇಶ ನಿವಾಸಿಗಳಾಗಿದ್ದರು. ಉಳಿದ ಮೂರು ಜನ ಆಚಾರ್ಯರು ಶ್ರೀರೇವಣಾರಾಧ್ಯ, ಶ್ರೀಏಕೋ ರಾಮಾರಾಧ್ಯ ಮತ್ತು ಶ್ರೀಪಂಡಿತಾರಾಧ್ಯರು ಭಾರತ ದೇಶದ ದ್ರಾವಿಡ ದೇಶಸ್ಥರಾಗಿದ್ದರು. ಅರ್ಥಾತ್ ಈಗಿನ ಆಂಧ್ರಪ್ರದೇಶ ನಿವಾಸಿಗಳಾಗಿದ್ದರು. ಅವರ ಜನ್ಮಸ್ಥಳಗಳು, ಕೊಲ್ಲಿಪಾಕಿ, ದ್ರಾಕ್ಷಾರಾಮ ಮತ್ತು ಶ್ರೀಶೈಲ ಕ್ರಮಶಃ ಆಗಿದ್ದವು. ಪೂರ್ವ ಕಾಲದಲ್ಲಿ ಒಬ್ಬ ಮತಾಚಾರ್ಯನು ಇತಿಹಾಸದ ಕಾಲಗರ್ಭದಲ್ಲಿ ಉಳಿಯಬೇಕಾದರೆ, ಆತನು ಏನಾದರೊಂದು ಸ್ವತಂತ್ರ ಮತ-ಗ್ರಂಥವನ್ನೋ ಅಥವಾ ವೈದಿಕ-ವಾಜ್ಞಯಕ್ಕೆ ಸ್ವತಂತ್ರ ಭಾಷ್ಯವೊಂದನ್ನೂ ಸಂಸ್ಕೃತ ಭಾಷೆಯಲ್ಲಿ ರಚಿಸಿ ಪ್ರಸಿದ್ದಿ ಪಡೆದರೇನೇ ಸಾಧ್ಯವಾಗುತ್ತಿತ್ತು. ಆದರೆ ಈ ವೀರಶೈವ ಮತಾಚಾರ್ಯರು ರಚಿಸಿದ ಇಂಥ ಯಾವ ಮತಗ್ರಂಥಗಳು ಲಭ್ಯವಾಗದಿದ್ದರಿಂದ ಇವರು ಶ್ರೀ ಆದಿಶಂಕರ, ಶ್ರೀರಾಮಾನುಜರಂತೆ ಪ್ರಸಿದ್ಧಿಯನ್ನು ಸಂಪಾದಿಸಿಕೊಳ್ಳಲಿಲ್ಲ. ಕ್ರಿ.ಶ. ನಾಲ್ಕನೇ ಶತಮಾನದಲ್ಲಿ ಶ್ರೀ ಶಿವಯೋಗಿ ಶಿವಾಚಾರ್ಯರಿಂದ ರಚಿತವಾದ ಸಿದ್ಧಾಂತ ಶಿಖಾಮಣಿ ಎಂಬ ಸಂಸ್ಕೃತ ಗ್ರಂಥದಲ್ಲಿ ಈ ರೇವಣಾರಾಧ್ಯರು ಮತ್ತು ಶ್ರೀ ಆದಿಶಂಕರರು ಸಮಕಾಲೀನ ಆಚಾರ್ಯರಾಗಿದ್ದರೆಂದೂ, ಇಷ್ಟಲಿಂಗ ಪೂಜಾ ವಿಧಾನವಾದ ಸನಾತನ ವೀರಶೈವ ಧರ್ಮ ಸಿದ್ಧಾಂತಗಳ ಬಗ್ಗೆ ಯಾವ ಮತ -ಭೇದವೂ ಈ ಉಭಯ ಆಚಾರ್ಯರ ಮಧ್ಯ ಇದ್ದಿಲ್ಲವೆಂದೂ, ಶ್ರೀ ಆದಿಶಂಕರರು ಮತ್ತು ಅವರ ಶಿಷ್ಯ ಪ್ರಶಿಷ್ಯರಾದ ಶ್ರೀ ವಿದ್ಯಾರಣ್ಯ ಮುಂತಾದ ಆಚಾರ್ಯರೂ ಇಷ್ಟಲಿಂಗ ಪೂಜಕರಾಗಿದ್ದರೆಂದೂ -ಇತ್ಯಾದಿ ಸತ್ಯ ಸಂಗತಿಯನ್ನು ಜ್ಞಾಪಕದಲ್ಲಿರಿಸಿಕೊಂಡರೆ ಉತ್ತಮ. ಏಕೆಂದರೆ ಶ್ರೀ ಆದಿಶಂಕರಾಚಾರ್ಯರ ಕಾಲದಲ್ಲಿ ವೀರಶೈವ ಮತವು ಅಸ್ತಿತ್ವದಲ್ಲಿ ಇದ್ದಿಲ್ಲವೆಂತಲೂ, ಹಾಗೆ ಇದ್ದುದಾದರೆ ಶ್ರೀ ಆದಿಶಂಕರರು ಈ ಮತ ಸಿದ್ಧಾಂತಗಳನ್ನು ಖಂಡಿಸದೇ ಇರುತ್ತಿದ್ದಿಲ್ಲವೆಂದು ಕೆಲವರು ಹೇಳುತ್ತಿದ್ದಾರೆ. ಇಂತಹ ಲೇಖಕರಿಗೆ ಧರ್ಮದ ಇಂಗಿತ ಜ್ಞಾನವೇ ಇಲ್ಲವೆಂದು ಹೇಳಬಹುದು. ಏಕೆಂದರೆ ಶ್ರೀ ಆದಿಶಂಕರರು ಚಾರ್ವಾಕ, ಜೈನ, ಬೌದ್ಧ ಮುಂತಾದ ನಾಸ್ತಿಕ ಮತ್ತು ಅವೈದಿಕ ಮತಗಳನ್ನು ಖಂಡಿಸುತ್ತಾರೆಯೇ ಹೊರತು, ಆಸ್ತಿಕ ಮತ್ತು ವೈದಿಕ ಮತವಾದ ವೀರಶೈವ ಮತವನ್ನು ಖಂಡಿಸುವ ಪ್ರಸಕ್ತಿಯೇ ಇಲ್ಲ: ವೀರಶೈವರಿಗೆ ಆರಾಧ್ಯದೇವರು 'ಶಿವನು', ಈತನೇ ವೇದಪ್ರತಿಪಾದಿತ 'ಬ್ರಹ್ಮ’ನು ಈ ಬ್ರಹ್ಮನೇ "ಇಷ್ಟಲಿಂಗವು”. ಈ ಆರಾಧ್ಯ ಶಿವನ ಅಥವಾ ಶಂಕರನ ಅವತಾರವೇ ಶ್ರೀ ಆದಿಶಂಕರಾಚಾರ್ಯರೆಂದು ಮತ ಗ್ರಂಥಗಳಲ್ಲಿ ಹೇಳಲಾಗಿದೆ. ಅದಕ್ಕಾಗಿ 'ಇಷ್ಟಲಿಂಗ' ಪೂಜಾವಿಧಾನವಾದ ವೀರಶೈವ ಮತ ಸಿದ್ಧಾಂತವನ್ನು ಖಂಡಿಸುವ ಪ್ರಸಕ್ತಿ ಶ್ರೀ ಆದಿಶಂಕರರಿಗೆ ಬರುವುದಿಲ್ಲವೆಂದರಿತುಕೊಂಡರೆ ಉತ್ತಮ.

ಇನ್ನು ದೀರ್ಘವಾಗಿ ಆಲೋಚಿಸಿದರೆ ವೈದಿಕ ಧರ್ಮದ ಆರಂಭದ ಕಾಲದಿಂದ ಶ್ರೀ ಆದಿಶಂಕರಾಚಾರ್ಯರ ಕಾಲದವರೆಗೆ ಸಮಸ್ತ ವೈದಿಕ ಬ್ರಾಹ್ಮಣ ವರ್ಗದವರಿಗೆ ಶಿವನೇ ಏಕಮೇವ ಪೂಜನೀಯ ದೇವರಾಗಿದ್ದನ್ನು, ಏಕೆಂದರೆ ವೈದಿಕ ಬ್ರಾಹ್ಮಣರಿಗೆ ಬೇಕಾದದ್ದು “ಬ್ರಹ್ಮಜ್ಞಾನ' ಮತ್ತು 'ಮೋಕ್ಷ'ವಲ್ಲದೆ ಲೌಕಿಕ ಸುಖಸಂಪತ್ತುಗಳಾಗಲೀ - ಭೋಗಭಾಗ್ಯಗಳಾಗಲೀ ಬೇಕಾಗಿರಲಿಲ್ಲ. ಇಂಥ ಲೌಕಿಕ ಫಲವನ್ನು ಪ್ರಸಾದಿಸುವವನು ವಿಷ್ಣುವೇ ಹೊರತು ಈ 'ವಿಷ್ಣು'ವನ್ನು ಪೂಜಿಸುತ್ತಿದ್ದಿಲ್ಲ. ಕ್ರಿ.ಶ. 1072ದಲ್ಲಿದ್ದ ಶ್ರೀಪತಿ ಪಂಡಿತರು ತನ್ನ ಶ್ರೀಕರ ಭಾಷ್ಯದಲ್ಲಿ ಬ್ರಾಹ್ಮಣಾನಾಂ ಶಿವೋ ದೇವಃ'' (1-1-1) ಎಂದು ಸ್ಪಷ್ಟವಾಗಿಯೇ ಪಾರಾಶರ್ಯಾ ಪುರಾಣಾದಿ ಪ್ರಾಚೀನ ಮತಗ್ರಂಥಗಳ ಆಧಾರದ ಮೇಲೆ ಬರೆದಿದ್ದಾರೆ. ಬ್ರಾಹ್ಮಣರಿಗೆ ಶಿವನೇ ದೇವರು'' ಎಂದು ಶ್ರೀಪತಿ ಪಂಡಿತನು ಹೇಳಿ, ಅಂತಹ ಬ್ರಾಹ್ಮಣ – ಲಕ್ಷಣವನ್ನು ಹೇಳಿದ್ದಾನೆ.

'ಮುಖೇ ಮಂತ್ರೋ ಹೃದಿಧ್ಯಾನಂ ಮಸ್ತಕೇ ಲಿಂಗಧಾರಣಂ |
ಶಿಖಾ, ಸೂತ್ರಂ, ತಥಾ ಭಸ್ಮ ಚೈತನ್ ಬ್ರಾಹ್ಮಣ ಲಕ್ಷಣಂ'||

ನಂತರ ಕಾಲಕ್ರಮೇಣ ಲೌಕಿಕ ಮಾರ್ಗದಿಂದ - ಯಜ್ಞ ಯಾಗಾದಿ ಕರ್ಮದಿಂದ ಲಭ್ಯವಾಗುವ ಸುಖ-ಸಂಪತ್ತು, ಭೋಗ ಭಾಗ್ಯಗಳಲ್ಲಿ - ಸ್ವರ್ಗಲೋಕ- ಸುಖದಲ್ಲಿ ಈ ಬ್ರಾಹ್ಮಣರಿಗೂ ಆಸಕ್ತಿ ಉಂಟಾಗಿ, ಅದರ ಪ್ರಭಾವದಿಂದ ಶಿವಪೂಜೆಯನ್ನು ಬಿಟ್ಟು ಎಷ್ಟು ಪೂಜೆಯನ್ನು ಆರಂಭಿಸಿದರು ಮತ್ತು ಯಜ್ಞ ಯಾಗಾದಿ ಕರ್ಮಗಳನ್ನು ಯಥೇಚ್ಛ ಮಾಡಲು ಆರಂಭಿಸಿದರು. ಪಾರಮಾರ್ಥಿಕ ಮಾರ್ಗವಾದ ತಪಸ್ಸಾಚರಣೆ" ಕಡಿಮೆಯಾಗಿ ಶಿವಪೂಜೆಯನ್ನು ಆಚರಿಸುವ ಋಷಿಗಳ ಸಂಖ್ಯೆ ಕಡಿಮೆಯಾಗಹತ್ತಿತು.

ಮೇಲೆ ಹೇಳಿದ ವೀರಶೈವ ಮತ ಪ್ರವರ್ತಕ ಆಚಾರ್ಯರಾದ ಶ್ರೀ ರೇವಣ, ಶ್ರೀ ಏಕೋರಾಮ ಮತ್ತು ಶ್ರೀ ಪಂಡಿತಾರಾಧ್ಯರೆಂಬ ಮೂರು ಜನ ಆಚಾರ್ಯರ ನಂತರ ಕ್ರಿ.ಶ. 5ನೇ ಶತಮಾನದಲ್ಲಿ ಆಂಧ್ರಪ್ರದೇಶದಲ್ಲಿ ಶ್ರೀಕಂಠಾಚಾರ್ಯನೆಂಬ ಇನ್ನೊಬ್ಬ ವೀರಶೈವ ಆಚಾರ್ಯನು ಹುಟ್ಟಿದನು. ಶ್ರೀ ಅಯ್ಯಪ್ಪ ದೀಕ್ಷಿತರು ರಚಿಸಿದ 'ಶಿವಾರ್ಕಮಣಿದೀಪಿಕಾ' ಎಂಬ ಸಂಸ್ಕೃತ ಗ್ರಂಥದಲ್ಲಿ ಶ್ರೀಕಂಠಾಚಾರ್ಯರ ಬಗ್ಗೆ ಈ ರೀತಿ ಹೇಳಲಾಗಿದೆ.

“ಮಹಾ ಪಾಶುಪತ ಜ್ಞಾನ ಸಂಪ್ರದಾಯ ಪ್ರವರ್ತಕಾನ್ |
ಅಂಶಾವತಾರ ನೀಶಸ್ಯ ಯೋಗಾಚಾರ್ಯ ಮುಪಾಸ್ಮಯೇ” ||

ಮಹಾಪಶುಪತಿ ಜ್ಞಾನ ಸಂಪ್ರದಾಯ ಪ್ರವರ್ತಕರೂ, ಈಶ್ವರನ ಅಂಶದಿಂದ ಅವತರಿಸಿದವರೂ ಯೋಗಾಚಾರ್ಯರೂ ಆದ ಶ್ರೀಕಂಠರನ್ನು ಪೂಜಿಸುತ್ತೇನೆಂದು ಶ್ರೀ ಅಯ್ಯಪ್ಪ ದೀಕ್ಷಿತರು ಹೇಳಿದ್ದಾರೆ! ಮಹಾ ಪಾಶುಪತ ಸಂಪ್ರದಾಯವೆಂದರೇನು ?
ಇದನ್ನು ನಾವು ತಿಳಿದುಕೊಳ್ಳಬೇಕು. ಶ್ರೀಪತಿ ಪಂಡಿತನು ತನ್ನ ಶ್ರೀಕರ ಭಾಷ್ಯದಲ್ಲಿ

“ಪರಬ್ರಹ್ಮವಿದಂ ಲಿಂಗಂ ಪಶುಪಾಶ ವಿಮೋಚಕಂ।
ಯೇ ಧಾರಯಂತಿ ಸದಾ ಭಕ್ತ್ಯಾಸ ಪಾಶುಪತ ಉಚ್ಯತಾ'' ||

ಎಂದು ಹೇಳಿದ್ದಾರೆ. "ಪಶು ಪಾಶ' (ಸಂಸಾರಬಂಧನ) ವಿಮೋಚನೆಗಾಗಿ ಪರಬ್ರಹ್ಮವೆಂದು ಹೇಳಲ್ಪಡುವ ಲಿಂಗವನ್ನು ನಿತ್ಯ ಭಕ್ತಿಯಿಂದ ಯಾರೂ ಧರಿಸುತ್ತಾರೋ ಅವರು "ಪಾಶುಪಾತ'ರೆಂದು ಹೇಳಲ್ಪಡುತ್ತಾರೆ. ಇಂಥ ಶ್ರೇಷ್ಠವಾದ ಪಾಶುಪತ (ಲಿಂಗಧಾರಣ) ಜ್ಞಾನಸಂಪ್ರದಾಯದ ಪ್ರವರ್ತಕರು ಶ್ರೀಕಂಠ ಶಿವಾಚಾರ್ಯರೆಂದೂ ಶ್ರೀ ಅಯ್ಯಪ್ಪ ದೀಕ್ಷಿತರು ಹೇಳಿದ್ದಾರೆ. ಬ್ರಹ್ಮ ಸೂತ್ರದ ಮೇಲೆ ಶ್ರೀಕಂಠರು ಬರೆದ ಶೈವ ಭಾಷ್ಯವು ಅವರ ಅಗಾಧ ಪಾಂಡಿತ್ಯಕ್ಕೆ ನಿದರ್ಶನವು. ಈ ಭಾಷ್ಯವು 'ಶಿವಾದ್ವೈತ' ಅಥವಾ 'ಶಕ್ತಿ ವಿಶಿಷ್ಟಾದ್ವೈತ' ಸಿದ್ಧಾಂತವನ್ನು ಸ್ಥಾಪಿಸುತ್ತದೆ.

ಶಿವನೇ (ಲಿಂಗವೇ) ಪರಬ್ರಹ್ಮವು ; ಶಿವ ಉಪಾಸನೆ ಇಂದಲೇ (ಲಿಂಗಪೂಜೆಯಿಂದಲೇ) ಮುಕ್ತಿ ಸಾಧ್ಯ. ಇದು ಅವರ ಸಿದ್ಧಾಂತದ ಮೂಲ ಸೂತ್ರ, ಕ್ರಿ.ಶ. 11ನೇ ಶತಮಾನದಲ್ಲಿ ಇದ್ದ ಶ್ರೀ ರಾಮಾನುಜಾಚಾರ್ಯರು ಶ್ರೀಕಂಠರ ಭಾಷ್ಯವನ್ನು ಕಾಪಿಮಾಡಿ 'ವಿಷ್ಣು' ಪರಮಾಭಾಷ್ಯವನ್ನು ರಚಿಸಿದ್ದಾರೆಂದು ಹೇಳಲಾಗುತ್ತಿದೆ.

ಶ್ರೀಕಂಠಾಚಾರ್ಯರ ಪ್ರಕಾರ 'ಲಿಂಗಧಾರಣೆ' ಇವು ವೇದಾಧ್ಯಯನಾಧಿಕಾರವಿದ್ದ ದ್ವಿಜರಿಗೆ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ವಿಹಿತವಾಗಿದ್ದು ಶೂದ್ರರಿಗೆ 'ಲಿಂಗಾಧಾರಣೆಯ’ ಅಧಿಕಾರವಿರುವುದಿಲ್ಲ . ಈ ಆಚಾರ್ಯರ ವಿಚಾರದಲ್ಲಿ ''ಸ್ಥಾವರಲಿಂಗಪೂಜೆ''ಯೇ ಶೂದ್ರವರ್ಣದವರಿಗೆ ಮುಕ್ತಿಗೆ ಸಾಧನ. ಇದರಿಂದಾಗಿ ಈ ಶ್ರೀಕಂಠಾಚಾರ್ಯನ ಬಗ್ಗೆ ಕರ್ನಾಟಕದಲ್ಲಿನ ಕೆಲವು ವೀರಶೈವ ಲೇಖಕರಲ್ಲಿ ತಪ್ಪು ಕಲ್ಪನೆ ಬಂದಿದೆ.

ಶ್ರೀಕಂಠಾಚಾರ್ಯನು ಹದಿನಾರಾಣೆಯ ಬ್ರಾಹ್ಮಣನಂತಲೂ ಈತನು ವೀರಶೈವನಲ್ಲನೆಂತಲೂ" ಕೆಲವು ಜನ ಲೇಖಕರು ಬರೆದಿದ್ದಾರೆ. ಈ ತಪ್ಪು ಕಲ್ಪನೆಗೆ ಕಾರಣವೂ ಇದೆ. ಏಕೆಂದರೆ ಈ ಲೇಖಕರ ಅಭಿಪ್ರಾಯದಲ್ಲಿ ವೀರಶೈವ ಮತವು ಅಬ್ರಾಹ್ಮಣ ಮತವೆಂತಲೂ ಅಥವಾ ಶೂದ್ರರ ಮತವೆಂತಲೂ ಗಾಢವಾಗಿ ಕುಳಿತಿದೆ. ಇಂತಹ ತಿಳಿಗೇಡಿತನದ ವಿಚಾರದವರೂ ವೀರಶೈವರಲ್ಲಿ ಕರ್ನಾಟಕದಲ್ಲಿ ಅನೇಕರಿದ್ದಾರೆ.

ಶೂದ್ರವರ್ಣದವರಿಗೆ ಲಿಂಗಧಾರಣೆ ಕರ್ನಾಟಕದಲ್ಲಿ ಬಸವಣ್ಣನವರ ಕಾಲದಲ್ಲಿ ಆರಂಭವಾದರೂ, ಆಂಧ್ರಪ್ರದೇಶದಲ್ಲಿ ಕ್ರಿ.ಶ. 14ನೇ ಶತಮಾನದವರೆಗೆ ಶೂದ್ರರಿಗೆ ಲಿಂಗಧಾರಣೆಯನ್ನು ಯಾವ ಆಚಾರ್ಯನೂ ಒಪ್ಪಿರಲಿಲ್ಲ. ಹೀಗಾಗಿ ಈ ದೇಶದಲ್ಲಿ ಲಿಂಗಧಾರಣೆ ಕೇವಲ ದ್ವಿಜರಿಗೇನೆ (ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ವರ್ಗದವರಿಗೆ) ಸೀಮಿತವಾಗಿದ್ದಿತು.

ಆಂಧ್ರಪ್ರದೇಶದಲ್ಲಿ ಶ್ರೀಕಂಠಶಿವಾಚಾರ್ಯನ ನಂತರ, ಕ್ರಿ.ಶ. 1072ರಲ್ಲಿ ಇದ್ದ ಶ್ರೀಪತಿ ಪಂಡಿತಾರಾಧ್ಯನು ಇನ್ನೊಬ್ಬ ಮತಾಚಾರ್ಯನು. ಈತನು ಬ್ರಹ್ಮಸೂತ್ರದ ಮೇಲೆ "ಭಾಷ್ಯ"ವನ್ನು ರಚಿಸಿದ್ದು ಸರ್ವಪ್ರಸಿದ್ದಿಯಾಗಿದೆ.

ಸ್ಮೃತಿ ಗ್ರಂಥಗಳ ಪ್ರಕಾರ ವೈದಿಕ ಮತಾನುಯಾಯಿಗಳಲ್ಲಿ ನಾಲ್ಕು ವರ್ಗಗಳಲ್ಲಿ (ಜಾತಿಗಳು ಇವೆ. ಅವು 1) ಬ್ರಾಹ್ಮಣ 2) ಕತ್ರಿಯ 3) ವೈಶ್ಯ 4) ಶೂದ್ರವೆಂದು ಸರ್ವರಿಗೂ ಗೊತ್ತಿದೆ. ಈ ವರ್ಗಗಳನ್ನು ಹುಟ್ಟುವಿಕೆಯ ಆಧಾರದ ಮೇಲೆ ನಿರ್ಣಯಿಸಲಾಗುತ್ತಿದೆ. ಮೊದಲಿನ ಮೂರು ವರ್ಣದವರಿಗೆ ''ದ್ವಿಜ'ರೆನ್ನುತ್ತಾರೆ. ಏಕೆಂದರೆ ಮೊದಲಿನ ಮೂರು ವರ್ಣದ ಪುರುಷರಿಗೇನೆ “ವೇದಾಧ್ಯಯನ ಅಧಿಕಾರವಿದ್ದುದಕ್ಕಾಗಿ ಇವರಿಗೇನೆ ಅವರ ೪ನೇ ವರ್ಷದಲ್ಲಿ ಉಪನಯನ ಸಂಸ್ಕಾರ ಕೊಟ್ಟು "ಯಜ್ಞಪವೀತ' ಕೊಡಲಾಗುತ್ತದೆ. ಅದಕ್ಕಾಗಿ ಇವರು "ದ್ವಿಜರು. ಈ ಮೂರು ವರ್ಗದ ಸ್ತ್ರೀಯರಿಗೆ ಮತ್ತು ಶೂದ್ರ ವರ್ಣದ ಸ್ತ್ರೀಪುರುಷರಿಗೆ ವೇದಾಧ್ಯಯನ'' ಅಧಿಕಾರವಿಲ್ಲದ್ದಕ್ಕಾಗಿ ಇವರೆಲ್ಲರಿಗೆ ಅವರ ೪ನೇ ವರ್ಷದಲ್ಲಿ ಉಪನಯನ ಸಂಸ್ಕಾರವು ಮಾಡಲ್ಪಡುವುದಿಲ್ಲ. ಅದಕ್ಕಾಗಿ ಇವರಿಗೆಲ್ಲ “ಯಜೋಪವೀತ” ಕೊಡಲಾಗುವುದಿಲ್ಲ.

ಪ್ರಾಚೀನ ಕಾಲದಲ್ಲಿ ವೈದಿಕ ಶೈವ ಮತದಿಂದ ವೀರಶೈವ ಮತವು ಅವಿರ್ಭವಿಸಿದಾಗ ಈ ಮತವು ಕೇವಲ ದ್ವಿಜರವರಿಗೆ ಸೀಮಿತವಾಗಿತ್ತು. ಆರ್ಥಾತ್, ಪ್ರಾಚೀನ ಕಾಲದಲ್ಲಿ “ಉಪನಯನ ಸಂಸ್ಕಾರವಿದ್ದವರಿಗೇನೇ ''ಇಷ್ಟಲಿಂಗಧಾರಣೆ ಮಾಡಲಾಗುತ್ತಿತ್ತು. ಉಳಿದವರಿಗೆ "ಸ್ಥಾವರಲಿಂಗ' ಪೂಜೆಯೇ ವಿಹಿತವಾಗಿತ್ತು.

ಈ ನಾಲ್ಕು ವರ್ಣಗಳ ವ್ಯವಸ್ಥೆಯ ಜೊತೆಗೆ ನಾಲ್ಕು ಆಶ್ರಮ ವ್ಯವಸ್ಥೆಯೂ ನಿರ್ಮಿಸಲಾಗಿತ್ತು. 1) ಬ್ರಹ್ಮಚರ್ಯ 2) ಗೃಹಸ್ಥ 3) ವಾನಪ್ರಸ್ಥ ಮತ್ತು 4) ಸನ್ಯಾಸ ಇವು ನಾಲ್ಕು ಆಶ್ರಮಗಳ ಪ್ರಾಚೀನ (ಸನಾತನ) ವೈದಿಕ - ಧರ್ಮದ ಪ್ರಕಾರ ಈ ಆಶ್ರಮ ವ್ಯವಸ್ಥೆಯು ಖ ಹೀಗೆ ಇದ್ದಿತು.

1) ಬ್ರಾಹ್ಮಣ ವರ್ಗದ ಪುರುಷರಿಗೆ ನಾಲ್ಕು ಆಶ್ರಮಗಳು

2) ಕ್ಷತ್ರಿಯ ವರ್ಗದ ಪುರುಷರಿಗೆ ಕೇವಲ ಮೂರು ಆಶ್ರಮಗಳು
1. ಬ್ರಹ್ಮಚರ್ಯ 2. ಗೃಹಸ್ಥ 3, ವಾನಪ್ರಸ್ಥ

3) ವೈಶ್ಯ ವರ್ಣದ ಪುರುಷರಿಗೆ ಕೇವಲ ಎರಡು ಆಶ್ರಮಗಳು
1. ಬ್ರಹ್ಮಚರ್ಯ 2. ಗೃಹಸ್ಥ

4) ಶೂದ್ರ ವರ್ಣದ ಪುರುಷರಿಗೆ ಮತ್ತು ಶೂದ್ರ ವರ್ಣದ ಸ್ತ್ರೀಯರಿಗೆ ಕೇವಲ
ಒಂದೇ ಒಂದು ಆಶ್ರಮ ಅದು ಗೃಹಸ್ಥ

ಪ್ರಾಚೀನ ಕಾಲದಲ್ಲಿ ಸನ್ಯಾಸ ಆಶ್ರಮವನ್ನು ಸ್ವೀಕರಿಸುವ ಅಧಿಕಾರವು ಕೇವಲ ಬ್ರಾಹ್ಮಣ ಪುರುಷರಿಗೇನೇ ಇದ್ದಿತ್ತೆಂಬ ವಿಷಯವನ್ನು ನಾವು ಜ್ಞಾಪಕದಲ್ಲಿಟ್ಟುಕೊಳ್ಳಬೇಕು.

ಬ್ರಹ್ಮಚರ್ಯೆ ಆಶ್ರಮವೆಂದರೆ ವಿದ್ಯಾಭ್ಯಾಸ ಮಾಡುವ ಕಾಲವೆಂದು ಅರ್ಥ. ವಿದ್ಯಾಭ್ಯಾಸವೆಂದರೆ ಪ್ರಾಚೀನ ಕಾಲದಲ್ಲಿ ವೇದಾಧ್ಯಯನವೇ ಬಾಲಕನ 8ನೇ ವರ್ಷದಿಂದ 25 ವರ್ಷದವರೆಗೆ ವಿದ್ಯಾಭ್ಯಾಸದ ಕಾಲ. ಇದೇ ಬ್ರಹ್ಮಚರ್ಯ ಆಶ್ರಮದ ಕಾಲ, ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ವರ್ಗದ ಪುರುಷರಿಗೆ ಬ್ರಹ್ಮಚರ್ಯ ಆಶ್ರಮದ ಅಧಿಕಾರವಿದ್ದುದರಿಂದ, ಅವರು ತಮ್ಮ ಬಾಲಕರನ್ನು ಎಂಟನೇ ವರ್ಷ ವಯಸ್ಸಿನಲ್ಲಿ ಈ ಆಶ್ರಮದಲ್ಲಿ ಸೇರಿಸುತ್ತಿದ್ದರು. ಬಾಲಕನಿಗೆ ಎಂಟನೇ ವರ್ಷ ಬಂದಕೂಡಲೆ ಅವನ ಜನಕನು (ತಂದೆ) ಆ ಬಾಲಕನನ್ನು ಒಂದು ಋಷಿ ಗುರುಕುಲಕ್ಕೆ ತೆಗೆದುಕೊಂಡು ಹೋಗಿ ಆ ಋಷಿಯನ್ನು ಪ್ರಾರ್ಥಿಸುತ್ತಿದ್ದನು. ಸ್ವಾಮೀ, ನನ್ನ ಗೋತ್ರ ಇದು. ಈ ಬಾಲಕನು ನನ್ನ ಪುತ್ರನು, ಇವನಿಗೆ ಈಗ ಎಂಟನೇ ವರ್ಷ. ಇವನನ್ನು ತಮ್ಮ ಗುರುಕುಲದಲ್ಲಿ ಸೇರಿಸಿಕೊಂಡು ವಿದ್ಯಾಭ್ಯಾಸ ಮಾಡಿಸಬೇಕು.' ಆಗ ಆ ಋಷಿಯು ಆ ಬಾಲಕನಿಗೆ ಉಪನಯನ ಸಂಸ್ಕಾರ ಮಾಡಿ, ತಮ್ಮ ಗುರುಕುಲದಲ್ಲಿ ವಟುವನ್ನಾಗಿ ಸೇರಿಸಿಕೊಳ್ಳುತ್ತಿದ್ದರು. ಉಪನಯನ' ಎಂದರೇ ಗುರುವಿನ ಹತ್ತಿರ ಬಾಲಕನನ್ನು ತೆಗೆದುಕೊಂಡು ಹೋಗುವುದು ಎಂದರ್ಥ, ಆ ಗುರುವು ಬಾಲಕನಿಗೆ ಉಪನಯನ ಸಂಸ್ಕಾರ ಮಾಡಿ, ಅವನಿಗೆ ’ಯಜ್ಞೋಪವೀತ'ವನ್ನು ಹಾಕುತ್ತಿದ್ದನು ಅಥವಾ ಕೊಡುತ್ತಿದ್ದನು. ಅಂದರೆ ; ಆ ಬಾಲಕನು ಬ್ರಹ್ಮಚರ್ಯ ಆಶ್ರಮದಲ್ಲಿ ಸೇರಿದನೆಂತಲೂ ಅವನಿಗೆ ವೇದಾಭ್ಯಾಸ ಅಧಿಕಾರವು ಬಂದಿತೆಂತಲೂ ಆ ಗುರುವು ಕೊಡುವ ಯೋಗ್ಯತಾ ಪತ್ರ (Certificate)ವೇ ಈ ಯಜ್ಞೋಪವೀತ, ಅರ್ಥಾತ್ ಈ ಯಜ್ಞೋಪವೀತ ಧಾರಣೆಯಿಂದ ಆ ಬಾಲಕನಿಗೆ ಯೋಗ್ಯತಾ ಪತ್ರವು (Certificate) ವೇದಾಧ್ಯಯನಕ್ಕೆ ದೊರೆತು, ಆ ಬಾಲಕನು ಬೇರೆ ಯಾವುದಾದರೂ ಋಷಿ ಗುರುಕುಲದಲ್ಲಿ ವೇದಾಧ್ಯಯನಕ್ಕೆ ಸೇರಲು ಮತ್ತು ದ್ವಿಜ ವರ್ಗದ ಗೃಹಸ್ಥರ ಮನೆಗಳಲ್ಲಿ ಭಿಕ್ಷೆ ಕೇಳಲು ಅರ್ಹತೆ ಪಡೆಯುತ್ತಿದ್ದನು. ಇದು ಯಜ್ಞೋಪವೀತ ಧಾರಣೆಯ ಕಥೆ.

ಆದರೆ ಕಾಲಕ್ರಮೇಣ ಈ ಯಜ್ಞೋಪವೀತವು ಒಂದು ಜಾತಿಯ ಚಿನ್ಹವಾಗಿ ಉಪಯೋಗವಾಗಹತ್ತಿತು. ವೇದಾಧ್ಯಯನ ಮಾಡಲಿ ಮಾಡದಿರಲಿ, ಇದನ್ನು ಹಾಕಿಕೊಂಡರೆ ಸಾಕು ಅದರಿಂದ ನಮ್ಮ ಜಾತಿ ಸಿದ್ಧವಾಗುತ್ತದೆ. ಎಂದು ಸಮಾಜದಲ್ಲಿ ಭಾವನೆ ಬೆಳೆದುಬಂದಿತು. ಇದು ಕೇವಲ ತಪ್ಪು ಭಾವನೆ ಎಂದು ನಾನು ಪುನಃ ಹೇಳಬೇಕಾಗಿಲ್ಲ ಈ ತಪ್ಪು ಭಾವನೆ ವಿದ್ವಾಂಸರೆಂದು ಹೇಳಿಕೊಳ್ಳುವವರಲ್ಲಿಯೂ ಇಂದಿಗೂ ಇದೆ. ತತ್ವತಃ ಯಜ್ಞೋಪವೀತ ಧಾರಣೆಯು ಕೇವಲ ಬ್ರಹ್ಮಚರ್ಯ ಆಶ್ರಮ ಸ್ವೀಕಾರ ಚಿಹ್ನೆಯೇ ಹೊರತು ಅವನ ಜಾತಿಯ ಭೇದವಲ್ಲ ಕಾರಣ,

1) ಇದು ಹುಟ್ಟಿದ ಕೂಡಲೇ ಕೊಡಲ್ಪಡದ ಎಂಟನೇ ವರ್ಷದಲ್ಲಿ ಕೊಡಲ್ಪಡುತ್ತದೆ.
2) ಮೂರು ವರ್ಣದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಬಾಲಕರಿಗೆ ಒಂದೇ ವಿಧದ ಯಜ್ಞೋಪವೀತ ಕೊಡಲಾಗುತ್ತದೆ.
3) ದ್ವಿಜ ವರ್ಗದ ಸ್ತ್ರೀಯರಿಗೆ ಇದು ಕೊಡಲ್ಪಡುವುದಿಲ್ಲ. ಹೀಗಾಗಿ ಇವರು ಜಾತಿ
ರಹಿತರಾಗಿರುತ್ತಾರೆಯೆ ?

ಅದಕ್ಕಾಗಿ ಒಬ್ಬ ಬ್ರಾಹ್ಮಣ ಬಾಲಕನಿಗೆ ಉಪನಯನ ಸಂಸ್ಕಾರವಾಗದಿದ್ದರೆ ಅವನಿಗೆ "ಯಜ್ಞೋಪವೀತ' ಇಲ್ಲವಾದರೆ ಅಂಥವನಿಗೆ ವೇದಾಧ್ಯಯನ ಅಧಿಕಾರವು ಬರುವುದಿಲ್ಲವೇ ಹೊರತಾಗಿ, ಜನ್ಮತಃ ಬಂದ ಅವನ ಬ್ರಾಹ್ಮಣ್ಯವು ಇದರಿಂದ ನಾಶವಾಗುವುದಿಲ್ಲ. ಇದೇ ಮಾತು ಕ್ಷತ್ರಿಯ ಮತ್ತು ವೈಶ್ಯ ಬಾಲಕರ ವಿಷಯದಲ್ಲಿ ಕೂಡ ; ಇದೇ ಮಾತು ದ್ವಿಜರ ಸ್ತ್ರೀಯರ ವಿಷಯದಲ್ಲಿ ಕೂಡ, ಬ್ರಾಹ್ಮಣ ವರ್ಣದಲ್ಲಿ ಹುಟ್ಟಿಯೂ ವೇದಾಧ್ಯಯನ ಮಾಡದಿದ್ದರೆ ಅಂತವನು ಶೂದ್ರವರ್ಣದವನಿಗೆ ಸಮಾನರೆಂದು ಸ್ಮೃತಿಕಾರರು ಹೇಳಿದ್ದಾರೆ. ಅದಕ್ಕಾಗಿ ಹುಟ್ಟಿದ ಜಾತಿಗೂ, ಯಜ್ಞೋಪವೀತ ಧಾರಣೆಗೂ ಯಾವ ಸಂಬಂಧವಿಲ್ಲ ಉದಾಹರಣೆಗಾಗಿ ಬ್ರಾಹ್ಮಣ ಬಾಲಕನು ಯಜ್ಞೋಪವೀತ ಇಲ್ಲದಿದ್ದರೂ ಬ್ರಾಹ್ಮಣನೇ ಅವನ ಬ್ರಾಹ್ಮಣ್ಯ ನಾಶಹೊಂದುವುದಿಲ್ಲ.

ಪ್ರಾಚೀನ ಕಾಲದಲ್ಲಿ ಸನ್ಯಾಸ ಆಶ್ರಮವು ಕೇವಲ ಬ್ರಾಹ್ಮಣ ಪುರುಷನಿಗೆ ವಿಹಿತವಾಗಿತ್ತೆಂದು ಮೇಲೆ ಹೇಳಿದ್ದೇನೆ. ಬ್ರಾಹ್ಮಣ ಬಾಲಕನು ಮುಂದೆ ಸನ್ಯಾಸ ಆಶ್ರಮ ಸ್ವೀಕರಿಸಿದಾಗ ತನ್ನ ಯಜ್ಞೋಪವೀತವನ್ನು ಬಿಟ್ಟುಬಿಡುತ್ತಾನೆ. ಆದರೆ ಲಿಂಗಧಾರಣೆ ಆದ ಬಾಲಕ ಬ್ರಾಹ್ಮಣನು ಮುಂದೆ ಸನ್ಯಾಸ ಆಶ್ರಮ ಸ್ವೀಕರಿಸಿದಾಗ ತನ್ನ ಯಜ್ಞೋಪವೀತವನ್ನು ಬಿಟ್ಟುಕೊಟ್ಟರೂ ತನ್ನ ಇಷ್ಟಲಿಂಗಧಾರಣೆಯನ್ನು ಬಿಟ್ಟುಕೊಡುವುದಿಲ್ಲ. ಇದೇ ಬ್ರಾಹ್ಮಣ ಸನ್ಯಾಸಿಗೂ ಮತ್ತು ಲಿಂಗಧಾರಿ ಬ್ರಾಹ್ಮಣ ಸನ್ಯಾಸಿಗೂ ಇರುವ ವ್ಯತ್ಯಾಸ. ಇಂತಹ ಲಿಂಗಧಾರಿ ಬ್ರಾಹ್ಮಣ ಸನ್ಯಾಸಿಯನ್ನು "ಅತ್ಯಾಶ್ರಮಿ"ಯೆಂತಲೂ 'ಜಂಗಮ'ಯೆಂತಲೂ ಹೇಳಲಾಗಿದೆ. 'ಜಂಗಮ' ಪರಮಶ್ರೇಷ್ಠ ತಪಸ್ವಿಯಂತಲೂ ಪರಶಿವನ ಸ್ವರೂಪವೆಂತಲೂ ಹೇಳಲಾಗಿದೆ. ಇದು ಸನಾತನ ವೈದಿಕ ವೀರಶೈವ ಧರ್ಮದ ವ್ಯವಸ್ಥೆ

ಪ್ರಾಚೀನ ಕಾಲದಲ್ಲಿ ಲಿಂಗಧಾರಿ ಬ್ರಾಹ್ಮಣನನ್ನು "ಮಹೇಶ್ವರ'ನೆಂದೂ, ಲಿಂಗಧಾರಿ ಬ್ರಾಹ್ಮಣ ಸನ್ಯಾಸಿಯನ್ನು 'ಜಂಗಮ'ನೆಂದು ಹೇಳಲಾಗಿದೆಯೆಂದು ಮೇಲೆ ಬರೆದಿದ್ದೇನೆ. ಅದಕ್ಕಾಗಿ ಸೋಮನಾಥ ಕವಿಯು ತನ್ನನ್ನು ಮಹೇಶ್ವರ'ನೆಂದೇ ಹೇಳಿಕೊಂಡಿದ್ದಾನೆ. ಜಂಗಮನೆಂದು ಹೇಳಿಕೊಂಡಿಲ್ಲ ಕಾರಣ ಆತನು ಸನ್ಯಾಸ ಆಶ್ರಮವನ್ನು ಸ್ವೀಕರಿಸಿದ್ದಿಲ್ಲ.
ಆದರೆ ಪ್ರಸ್ತುತ ಸಮಾಜದಲ್ಲಿ ಮಹೇಶ್ವರ ಮತ್ತು ಜಂಗಮ' ಪದಗಳನ್ನು ಒಂದೇ ಆರ್ಥದಲ್ಲಿ ಉಪಯೋಗಿಸಲಾಗುತ್ತಿದೆ. ಅದರಲ್ಲಿ 'ಜಂಗಮ' ಪದವು ತುಂಬಾ ವಿಕೃತವಾಗಿ ರೂಢಿಯಲ್ಲಿ ಬಂದಿದೆ.

ಈ ವೈದಿಕ ಮತಗಳಾದ ಶೈವ ಮತ್ತು ವೈಷ್ಣವ, ಮತ್ತು ಶೈವರಲ್ಲಿ ವೀರಶೈವ ಇವೆಲ್ಲ
ಮತಗಳು ಬ್ರಾಹ್ಮಣ ವರ್ಗ ಪ್ರಧಾನ ಮತಗಳಾಗಿದ್ದವೆಂದು ಹೇಳಿದ್ದೇನೆ. ಈ ವೈದಿಕಗಳ
ವಿರುದ್ದ ಕಾಲಕ್ರಮೇಣ ಎರಡು ಶಕ್ತಿಶಾಲೀ ಅವೈದಿಕ-ಮತಗಳು ಹುಟ್ಟಿದವು. ಅವೇ 1) ಜೈನ ಮತ ಮತ್ತು 2) ಬೌದ್ಧಮತ, ವೈದಿಕ ದೇವರ ಅರ್ಥಾತ್ 'ಶಿವ' ಮತ್ತು 'ವಿಷ್ಣು' ಮುಂತಾದ ವೈದಿಕ ದೇವರ ಉಪಾಸನೆಯನ್ನು ನಿಷೇಧಿಸುವುದು, ವರ್ಣಾಶ್ರಮ ವ್ಯವಸ್ಥೆಯನ್ನು ನಿರಾಕರಿಸುವುದು, ಸರ್ವ ವರ್ಗದ ಸ್ತ್ರೀ ಪುರುಷರಿಗೆ ಸನ್ಯಾಸ ಆಶ್ರಮವನ್ನು ಕೊಡುವುದೂ ನಿರಾಕಾರ (ಶೂನ್ಯ) ಪೂಜೆಯನ್ನು ಬೋಧಿಸುವುದು - ಇವೇ ಪ್ರಧಾನ ಧರ್ಮ ಸಿದ್ಧಾಂತಗಳಾಗಿದ್ದು ಈ ಎರಡು ಅವೈದಿಕ - ಸಂಸ್ಕಾರಗಳನ್ನು ನಿರಾಕರಿಸಿದ್ದರಿಂದ ಕ್ಷತ್ರಿಯ ಕುಲದವರನ್ನು ಮತ್ತು ಶೂದ್ರ ವರ್ಣದ ಜನರನ್ನು ಆಕರ್ಷಿಸಿದವು. ಅಸಂಖ್ಯ ಕ್ಷತ್ರಿಯ ಮತ್ತು ಶೂದ್ರ ವರ್ಣದವರೂ ಸೇರಿ ಸನ್ಯಾಸಿಗಳಾದರು. ಈ ಕಥೆ ಬೇರೆ. ಈ ಎರಡು ಅವೈದಿಕ ಮತಗಳಿಂದ ಸನಾತನ ವೈದಿಕ ಮತಗಳಿಗೆ ದೊಡ್ಡ ಆಘಾತ ಉಂಟಾಯಿತು. ವೈದಿಕ-ಸಮಾಜದ ಶ್ರೇಷ್ಠ ಸ್ಥಾನದಲ್ಲಿದ್ದ ಆಗ್ರವರ್ಣದವರು ಅವರು ಲಿಂಗಧಾರಿಗಳೇ ಇರಲಿ, ಅಲಿಂಗಧಾರಿಗಳೇ ಇರಲಿ, ಬಹು ಚಿಂತಾಕ್ರಾಂತರಾಗಬೇಕಾಯಿತು.

ಚಾರ‍್ವಾಕ ಮತವೂ ನಾಸ್ತಿಕ ಮತವೇ. ಇದು ಪ್ರಾಚೀನ ಕಾಲದಿಂದ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದರೂ, ಇದು ಸಮಾಜದ ಒಂದು ಮೂಲೆಯಲ್ಲಿದ್ದು ವೈದಿಕ ಮತಕ್ಕೆ ಅಷ್ಟೇನು ನಷ್ಟವನ್ನು ಒದಗಿಸಲಿಲ್ಲ. ಆದರೆ ಜೈನ ಮತ್ತು ಬೌದ್ದ ಮತಗಳ ವಿಷಯ ಬೇರೆ. ಇವು ತಮ್ಮ ಕಾರ್ಯಕ್ರಮದಿಂದ ವೈದಿಕ ಮತವೆಂಬ ಗೃಹಕ್ಕೆ ಬೆಂಕಿ ಹಚ್ಚುವಂತೆ ಪರಿಸ್ಥಿತಿಯನ್ನು ಸೃಷ್ಟಿಸಿದವು. ಬ್ರಾಹ್ಮಣ್ಯ ಪ್ರಧಾನವಾದ ವೈದಿಕ ಮತವು ಈ ನಾಸ್ತಿಕ ಮತಗಳನ್ನು ಎದುರಿಸಲಿಕ್ಕಾಗಿ ಅನೇಕ ಸುಧಾರಣೆಗಳನ್ನು (Amendments) ಸ್ವೀಕರಿಸಬೇಕಾಯಿತು :-

1) ಯಜ್ಞ ಯಾಗಾದಿಗಳಲ್ಲಿ ಪಶು ಬಲಿಯನ್ನು ನಿಷೇಧಿಸುವುದು.
2) ಪ್ರಕೃತ (ಅವೈದಿಕ) ಬ್ರಾಹ್ಮಣರು ಮಾಡುತ್ತಿದ್ದ ಮಾಂಸಭಕ್ಷಣೆಯನ್ನು ನಿಷೇಧಿಸುವುದು.
3) ಚಾತುರ್ವಣ್ರವು ಜನ್ಮತಃ ಎಂದು ಶಾಸ್ತ್ರದಲ್ಲಿದ್ದರೂ, ಗುಣ -ಕರ್ಮವೆಂದು ಸುಧಾರಣೆ ಸ್ವೀಕರಿಸುವುದು,
4) ಅನೇಕ ಕ್ಷತ್ರಿಯರನ್ನು ಬ್ರಾಹ್ಮಣ ವರ್ಣದಲ್ಲಿ ಸೇರಿಸಿಕೊಳ್ಳುವುದು
5) ಕ್ಷತ್ರಿಯ ವರ್ಣದಲ್ಲಿ ಹುಟ್ಟಿದ (ಶ್ರೀರಾಮ ಮತ್ತು ಶ್ರೀಕೃಷ್ಣ)ವರನ್ನು ಪೂಜಾರ್ಹ ದೇವರೆಂದು ಸ್ವೀಕರಿಸುವುದು ಇತ್ಯಾದಿ ಮುಖ್ಯ ಸುಧಾರಣೆಗಳನ್ನಬಹುದು. ಇಂಥ ಕಷ್ಟ ಪರಿಸ್ಥಿತಿಯಲ್ಲಿಯೇ ಶ್ರೀ ಆದಿ ಶಂಕರರು ಹುಟ್ಟಿದರು.

ಜೈನ ಮತ್ತು ಬೌದ್ಧ ಮತ ಪ್ರಚಾರವನ್ನು ನಿರ್ಮೂಲಿಸಿ, ಶೈವ ಮತ್ತು ವೈಷ್ಣವಾದಿ ವೈದಿಕ ಮತಗಳನ್ನು ಉದ್ದರಿಸಲು ಅವರು ಮಾಡಿದ ಪ್ರಯತ್ನವು ಸರ್ವವಿದಿತವಿದೆ. ಅವರು 'ಅದ್ವೈತ ಸಿದ್ಧಾಂತವನ್ನು ಸ್ಥಾಪಿಸಿ ಪುನಃ ಬ್ರಾಹ್ಮಣ ಶ್ರೇಷ್ಠತೆಯನ್ನು ಸಮಾಜದಲ್ಲಿ ಕಲ್ಪಿಸಿದರೂ, ಶೂದ್ರ ವರ್ಣದ ಸ್ತ್ರೀ ಪುರುಷರನ್ನು ಜೈನ ಮತ್ತು ಬೌದ್ಧಮತಗಳ ಪ್ರಭಾವದಿಂದ ರಕ್ಷಿಸಲು ಯಾವ ಸುರಕ್ಷಿತ ಮಾರ್ಗವನ್ನೂ ಅವರು ತೋರಿಸಲಿಲ್ಲ. ಶ್ರೀ ಶಂಕರಾಚಾರ್ಯರ ನಂತರ ಈ ಜೈನ ಮತ್ತು ಬೌದ್ಧಮತಗಳು ಪುನಃ ತಲೆ ಎತ್ತಿ ವಿಜೃಂಭಿಸಿದವು. ಆಂಧ್ರ, ಕರ್ನಾಟಕ ಮತ್ತು ತಮಿಳುನಾಡು ಈ ದೇಶದಲ್ಲಿ ಈ ಮತಗಳ ಪ್ರಾಬಲ್ಯ ಹೆಚ್ಚಿತು. ಕ್ರಿ.ಶ. 9 ಮತ್ತು 10ನೇ ಶತಮಾನಗಳ ಕಾಲಕ್ಕೆ ಬೌದ್ಧ ಮತ ಪ್ರಚಾರವು ಈ ದೇಶಗಳಲ್ಲಿ ಸಾಕಷ್ಟು ಕಡಿಮೆಯಾದರೂ, ಜೈನ ಮತವು ಮಾತ್ರ ರಾಜಾಶ್ರಯ ಪಡೆದುಕೊಂಡು ಈ ದೇಶಗಳಲ್ಲಿ ಪ್ರಬಲವಾಗಿತ್ತು. ಶ್ರೀ ಶಂಕರಾಚಾರ್ಯರ ನಂತರ ದಕ್ಷಿಣ ದೇಶದಲ್ಲಿ ಈ ಜೈನ ಮತ ಪ್ರಭಾವನ್ನು ತಗ್ಗಿಸಲಿಕ್ಕಾಗಿ ವೀರಶೈವ ಮತದ ಆಚಾರ್ಯರೇ ಹೆಚ್ಚಾಗಿ ಶ್ರಮಪಡಬೇಕಾಯಿತು. ಉದಾಹರಣೆಗಾಗಿ : ಜ್ಞಾನಸಂಬಂಧಿ ಪಿಳ್ಳ ನಾಯನಾರು ಎಂಬ ಆಚಾರ್ಯನು ಜೈನರನ್ನು ಬೌದ್ಧರನ್ನು ವಾದದಲ್ಲಿ ಸೋಲಿಸಿ ಶೈವ ಮತ್ತು ವೀರಶೈವ ಮತವನ್ನು ನಿರೂಪಿಸಿದ್ದು, ದೇವರ ದಾಸಿಮಯ್ಯ ಎಂಬ ಆಚಾರ್ಯನು ಜೈನರನ್ನು ವಾದದಲ್ಲಿ ಸೋಲಿಸಿ ವೀರಶೈವ ಮತವನ್ನು ಪ್ರತಿಷ್ಠಿಸಿದ್ದು, ಅದರಂತೆ ಏಕಾಂತದ ರಾಮಯ್ಯನು ಜೈನರನ್ನು ಸೋಲಿಸಿದ್ದು ನಾವು ಇಲ್ಲಿ ಸ್ಮರಿಸಬಹುದು. ಇವೆಲ್ಲ ಕಾರ್ಯಗಳು ಬಸವಣ್ಣನವರು ಕರ್ನಾಟಕದಲ್ಲಿ ಹುಟ್ಟುವುದಕ್ಕಿಂತ ನೂರಾರು ವರ್ಷಗಳ ಪೂರ್ವದಲ್ಲಿ ಜರುಗಿದವು. ಆಂಧ್ರ ದೇಶದಲ್ಲಿ ಶ್ರೀಪತಿ ಪಂಡಿತಾರಾಧ್ಯ, ನಂತರ ಹುಟ್ಟಿದ ಇನ್ನೊಬ್ಬ ವೀರಶೈವ ಆಚಾರ್ಯನಾದ ಶ್ರೀಮಲ್ಲಿಕಾರ್ಜುನ ಪಂಡಿತಾರಾಧ್ಯನೂ, ಬಸವಣ್ಣನವರ ಸಮಕಾಲೀನ ಪುರುಷರಾದರೂ, ಆಂಧ್ರದೇಶದಲ್ಲಿ ಬೌದ್ಧಮತದವರನ್ನು ಸೋಲಿಸಿ ವೀರಶೈವ ಮತದ ಶ್ರೇಷ್ಠತೆಯನ್ನು ಸ್ಥಾಪಿಸಿದನು.

ಬಸವಣ್ಣನವರು ಹುಟ್ಟುವುದಕ್ಕಿಂತ ಮುಂಚೆ ಒಂದೆರಡು ಶತಮಾನಗಳ ಪೂರ್ವದಲ್ಲಿ ದ್ವಿಜ ವರ್ಣದ ಸ್ತ್ರೀಯರಿಗೂ ಲಿಂಗಧಾರಣೆ ದೀಕ್ಷೆಯನ್ನು ಕೊಡಲು ವೀರಶೈವ ಮತಾಚಾರ್ಯರು ಸ್ವೀಕರಿಸಿದ್ದರು. ಶೂದ್ರವರ್ಣದ ಜನರಿಗೆ ಲಿಂಗಧಾರಣೆಯನ್ನು ಇನ್ನೂ ಮಾನ್ಯ ಮಾಡಿದ್ದಿಲ್ಲ. ಈ ಜನರಿಗೆ ಕೇವಲ ಸ್ಥಾವರ ಲಿಂಗಪೂಜೆಯೇ ಎಂದು ವಿಧಿಸಿದ್ದರು. ಇಂಥ ಪರಿಸ್ಥಿತಿಯಲ್ಲಿ ಬಸವಣ್ಣನವರು ಕರ್ನಾಟಕದಲ್ಲಿ ಹುಟ್ಟಿದರು. ಇವರ ತಂದೆ ಮತ್ತು ತಾಯಿಗಳು ಬಂಧುಗಳು ಲಿಂಗಧಾರೀ ಬ್ರಾಹ್ಮಣರು - ಶ್ರೀಮಂತರು, ಸಂಪನ್ನರೂ ಮತ್ತು ರಾಜ್ಯಾಧಿಕಾರಿಗಳು, ಬಸವಣ್ಣ ಹುಟ್ಟಿದ ಕೂಡಲೇ ಸಂಪ್ರದಾಯದಂತೆ "ಲಿಂಗಧಾರಣೆ ಆಗುತ್ತದೆ. ಅದರಂತೆ ಆತನಿಗೆ ಎಂಟನೇ ವರ್ಷದಲ್ಲಿ ಉಪನಯನ ಸಂಸ್ಕಾರವಾಗಿ ಯಜ್ಞೋಪವೀತ ಕೊಡಲ್ಪಡುತ್ತದೆ. ಅದರಂತೆ ಆತನು ಗುರುಕುಲದಲ್ಲಿ ಸೇರಿ ವೇದಾಭ್ಯಾಸವನ್ನು ಮಾಡುತ್ತಾನೆ. ಆತನು 16-20 ವರ್ಷ ಪ್ರಾಯಕ್ಕೆ ಬಂದಾಗ್ಗೆ ಆತನಲ್ಲಿ ಧರ್ಮ ಸಂಘರ್ಷಣೆ ಆರಂಭವಾಗುತ್ತದೆ. ಆತನು ಮೊದಲು ಆಲೋಚಿಸಿದ ವಿಷಯ :- ಶೂದ್ರ ಜನರಿಗೆ ಲಿಂಗಧಾರಣೆ ಏಕೆ ಮಾಡಬಾರದೆಂಬುದು, ಅವರಿಗೆ ವೇದಾಭ್ಯಾಸದ ಅಧಿಕಾರವೇಕೆ ಕೊಡಬಾರದೆ೦ಬುವುದು? ಅವರಿಗೆ ವೇದಾಭ್ಯಾಸ ಅಧಿಕಾರ ಕೊಡಬೇಕಾದರೆ, ಅವರಿಗೆ '' ಉಪನಯನ ಸಂಸ್ಕಾರವನ್ನು ಮಾಡಿ, ಅವರಿಗೂ ಯಜ್ಞೋಪವೀತವನ್ನು ಕೊಟ್ಟರೇನೆ ಸಾಧ್ಯ, ದೀರ್ಘವಾಗಿ ಆಲೋಚಿಸಿದ ನಂತರ ಆಗಿನ ಕಾಲದಲ್ಲಿ ಆಗಿನ ಪರಿಸ್ಥಿತಿಯಲ್ಲಿ ಅವರಿಗೆಲ್ಲ ಯಜ್ಞೋಪವೀತವನ್ನು ಕೊಡುವುದು ಸಾಧ್ಯವಿರಲಿಲ್ಲ. ಅದಕ್ಕಾಗಿ ತಾನು ಯಜ್ಞೋಪವೀತವನ್ನು ತೆಗೆದು ಹಾಕುವುದೇ ಸುಲಭ ಮಾರ್ಗವೆಂದು ಆತನು ನಿರ್ಧರಿಸುತ್ತಾನೆ. ಅದರಂತೆ ತಾನು ತನ್ನ ಯಜ್ಞೋಪವೀತವನ್ನು ಮೊದಲು ತೆಗೆದುಹಾಕುತ್ತಾನೆ.

ಆದರೆ ಪಾಲಕುರಿಕಿ ಸೋಮನಾಥನು ತನ್ನ ಎಂಟನೇ ವರ್ಷದಲ್ಲಿ ಉಪನಯನವನ್ನು ತಿರಸ್ಕರಿಸಿ ತಂದೆಯೊಡನೆ ವಾದಿಸುತ್ತಾನೆಂದು ಬರೆದಿದ್ದಾನೆ. ಆದರೆ ಕನ್ನಡ ಕವಿಯಾದ ಹರಿಹರದೇವನು ಬಸವಣ್ಣನಿಗೆ ಉಪನಯನ ಸಂಸ್ಕಾರವಾಗಿತ್ತೆಂದೂ, ಆತನು ತನ್ನ ಹದಿನಾರನೇ ವರ್ಷದಲ್ಲಿ ಬಹು ವಿಚಾರ ಮಥನದ ನಂತರ ಯಜ್ಞೋಪವೀತವನ್ನು ತೆಗೆದು ಹಾಕುತ್ತಾನೆ' ಎಂದು ಬರೆದಿದ್ದಾನೆ. ಅದಕ್ಕಾಗಿ ನನ್ನ ಅಭಿಪ್ರಾಯದಲ್ಲಿ ಹರಿಹರನು ಬರೆದದ್ದೇ ಸರಿಯಾಗಿ ತೋರುತ್ತದೆ.

ಶೂದ್ರ ವರ್ಣದವರಿಗೆ ಉಪನಯನ ಸಂಸ್ಕಾರ ಕೊಟ್ಟು ಅವರನ್ನು ದ್ವಿಜ ವರ್ಣದಲ್ಲಿ ಸೇರಿಸುವುದು ಅಸಾದ್ಯ ಮಾತಾದ್ದರಿಂದ ಕನಿಷ್ಠ ಅವರಿಗೆ ಲಿಂಗಧಾರಣೆ ಮಾಡಿ ಅವರಿಗೆ ಸಮಾಜದಲ್ಲಿ ಒಂದು ಸ್ಥಾನವನ್ನು ಕಲ್ಪಿಸಿದರೆ, ಅವರು ಜೈನ ಮತದಲ್ಲಿ ಸೇರಲು ಆಲೋಚಿಸಲಾರರೆಂದೂ ಅವರ ನಂಬಿಕೆಯನ್ನು (Confidence) ಸಂಪಾದಿಸಬೇಕಾದರೆ ತನ್ನ ಯಜ್ಞೋಪವೀತವನ್ನು ಬಿಡುವುದೇ ಉತ್ತಮ ಎಂದು ಬಸವಣ್ಣನು ನಿರ್ಧರಿಸುತ್ತಾನೆ. ಮತ್ತು ದ್ವಿಜ ವರ್ಣದ ವೀರಶೈವರಿಗೂ ಯಜ್ಞೋಪವೀತವನ್ನು ಬಿಡಲು ಕೇಳಿಕೊಳ್ಳುತ್ತಾನೆ. ಇದರಿಂದಾಗಿ ಆಗಿನ ಕಾಲದಲ್ಲಿ ವೈದಿಕ ವೀರಶೈವ ಮತದವರಲ್ಲಿ ಸಂಕೋಚ ಉಂಟಾಗುತ್ತದೆ. ಎರಡು ಪಾರ್ಟಿಗಳು ಆಗುತ್ತವೆ. ಬಸವಣ್ಣನ ತಂದೆಯೇ ಬಸವಣ್ಣನ ಸುಧಾರಣೆಯನ್ನು ವಿರೋಧಿಸುತ್ತಾನೆ. ಆದರೆ ಸೋದರಮಾವ ಬಸವಣ್ಣನನ್ನು ಸಮರ್ಥಿಸುತ್ತಾನೆ. ಇದರ ಪರಿಣಾಮವಾಗಿ ಬಸವಣ್ಣ ಬಂದು, ಮಿತ್ರ, ಸ್ವಜನರಲ್ಲಿ ಎರಡು ಪಾರ್ಟಿಗಳಾಗಿ ಕಲಹ ಉಂಟಾಗುತ್ತದೆ. ಬಸವಣ್ಣನ ಅನುಯಾಯಿಗಳು ಯಜ್ಞೋಪವೀತವನ್ನು ಬಿಟ್ಟು ಲಿಂಗವನ್ನು ಇರಿಸಿಕೊಂಡರೆ, ಬಸವಣ್ಣನ ವಿರೋಧಿಗಳು ಲಿಂಗವನ್ನು ಬಿಟ್ಟು ಯಜ್ಞೋಪವೀತವನ್ನು ಇರಿಸಿಕೊಂಡರು. ಹೀಗಾಗಿ ಆಗಿನ ಕಾಲದಲ್ಲಿ ಕರ್ನಾಟಕದಲ್ಲಿ ಅಸಂಖ್ಯ ಲಿಂಗಧಾರಿ ಬ್ರಾಹ್ಮಣರು ಬಸವಣ್ಣನ ಮೇಲಿನ ಕೋಪದಿಂದ ಲಿಂಗವನ್ನು ಬಿಡಬೇಕಾದ ಪರಿಸ್ಥಿತಿ ಬಂದಿತು. ಅದರಂತೆ ಲಿಂಗವನ್ನು ಬಿಟ್ಟ ಈ ಜನರಿಂದಲೇ ಬಸವಣ್ಣನಿಗೆ ವಿರೋಧವು ಹೆಚ್ಚಿಗೆ ಬಂದಿತು.

ಇನ್ನು ಆಂಧ್ರ ಪ್ರದೇಶದಲ್ಲಿ ಬಸವಣ್ಣನ ಸಮಕಾಲೀನ ಆಚಾರ್ಯನಾದ ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯನು ಬಸವಣ್ಣನ ವಿಚಾರವನ್ನು ಸಮರ್ಥಿಸುವುದಿಲ್ಲ. ದ್ವಿಜ ವರ್ಣದ ವೀರಶೈವರು ಯಜ್ಞೋಪವೀತವನ್ನು ಬಿಡುವುದನ್ನು ಮತ್ತು ಶೂದ್ರ ವರ್ಣದವರಿಗೆ ಲಿಂಗಧಾರಣೆಯನ್ನು ಒಪ್ಪುವುದಿಲ್ಲ. ಇವು ಬಹು ಪ್ರಮಾದಕರ ಕೆಲಸಗಳೆಂದೂ ಈ ಆಚಾರ್ಯನ ವಿಚಾರ, ಸನ್ಯಾಸಿಯಾದವನೆ ಹೇಗಿದ್ದರೂ ನಡೆಯುತ್ತದೆ ; ಆದರೆ ಗೃಹಸ್ಥರಿಗೆ ಸಮಾಜದಲ್ಲಿ ಸ್ಥಾನಮಾನಗಳು ಮುಖ್ಯ. ಶೂದ್ರ ವರ್ಣದವರನ್ನು ಉದ್ಧರಿಸಲಿಕ್ಕಾಗಿ ಇವರು ಸಮಾಜದಲ್ಲಿಯ ತಮ್ಮ ಸ್ಥಾನವನ್ನು ಕಳೆದುಕೊಳ್ಳಬೇಕಾಗಿಲ್ಲ. “ಬಸವಣ್ಣನ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ನಾನು ನನ್ನ ಬ್ರಾಹ್ಮಣ್ಯವನ್ನು ಬಿಡಲಾರೆ' ಎನ್ನುತ್ತಾನೆ. ಶ್ರೀಮಲ್ಲಿಕಾರ್ಜುನ ಪಂಡಿತಾರಾಧ್ಯನು. ಹೀಗಾಗಿ ಈತನ ಕಾಲದಲ್ಲಿ ಶೂದ್ರ ವರ್ಣದವರಿಗೆ ಲಿಂಗಧಾರಣೆ ಮಾಡುವುದು ಸಾಧ್ಯವಾಗಲಿಲ್ಲ. ಇದರಿಂದಾಗಿ ಕರ್ನಾಟಕದಲ್ಲಿಯಂತೆ ಆಂಧ್ರಪ್ರದೇಶದಲ್ಲಿ ಲಿಂಗಧಾರಿಗಳ ಸಂಖ್ಯೆ ಬೆಳೆಯಲು ಸಾಧ್ಯವಾಗಲಿಲ್ಲ.

ಶ್ರೀ ಪಂಡಿತಾರಾಧ್ಯರ ಬಗ್ಗೆಯೂ ಮತ್ತು ಬಸವಣ್ಣನ ಬಗ್ಗೆಯೂ ಪಾಲಕುರಿಕಿ ಸೋಮನಾಥ ಕವಿಗೆ ಸಮಾನವಾದ ಭಕ್ತಿಗೌರವವಿದ್ದಿತು. ಅವರನ್ನು ಕುರಿತು “ಪಂಡಿತಾರಾಧ್ಯ ಚರಿತೆ'' ಮತ್ತು 'ಬಸವ ಪುರಾಣಮು ಗ್ರಂಥಗಳನ್ನು ತೆಲುಗು ಭಾಷೆಯಲ್ಲಿ ರಚಿಸಿ ಅವರ ಕೀರ್ತಿಯನ್ನು ಅಮರವಾಗಿ ಮಾಡಿದ್ದಾನೆ.

3. ಲೇಖನದ ವಿಮರ್ಶೆ

ಧರ್ಮಪಿತ ಬಸವಣ್ಣನವರಿಗೂ ಪೂರ್ವದಲ್ಲಿದ್ದ ವೀರಶೈವದ ಸ್ವರೂಪವನ್ನು ಬಹಳ ಮಾರ್ಮಿಕವಾಗಿ ಮಾಡಿಕೊಡುವ ಈ ಲೇಖನವು ಬಹು ಮಹತ್ವ ಪೂರ್ಣವಾದುದು. ಏಕೆಂದರೆ ವೀರಶೈವವು ಶೈವದ ಶಾಖೆಗಳಲ್ಲಿ ಒಂದು, ಅದು ಕೇವಲ ಒಂದು ಪಂಥ ಮಾತ್ರ ಲಿಂಗಾಯತವು ಒಂದು ಸ್ವತಂತ್ರ ಧರ್ಮ, ವೀರಶೈವವು ಬಸವಪೂರ್ವದ್ದು ; ಅದಕ್ಕೂ ಸ್ವತಂತ್ರ ಧರ್ಮವಾದ, ಬಸವಣ್ಣನವರಿಂದ ಕೊಡಲ್ಪಟ್ಟ ಲಿಂಗಾಯತಕ್ಕೂ ಸಂಬಂಧವಿಲ್ಲ ಎಂಬ ನನ್ನ ವಿಚಾರಧಾರೆಯನ್ನು ಶರ್ಮಾರ ಈ ಲೇಖನ ಸ್ಪಷ್ಟಪಡಿಸುತ್ತದೆ.

1. ಶೈವ ಮತ್ತು ವೈಷ್ಣವ ಉಭಯ ಮತಗಳೂ ವೈದಿಕ ಮತಗಳು. ಇವುಗಳ ಆರಾಧ್ಯ ದೇವತೆಗಳು ಶಿವ ಮತ್ತು ವಿಷ್ಣು ಬಸವ ಸಂಸ್ಥಾಪಿತ ಲಿಂಗಾಯತ ಧರ್ಮವು ಅವೈದಿಕವಾದುದು, ಇದು ಬ್ರಹ್ಮ-ವಿಷ್ಣು-ಶಿವ ಮುಂತಾದ ಯಾವುದೇ ದೇವತೆಯನ್ನು ಪೂಜಿಸಲು ಹೇಳದೆ ಸೃಷ್ಟಿಕರ್ತನಾದ ಲಿಂಗದೇವನನ್ನು ಇಷ್ಟಲಿಂಗರೂಪದಲ್ಲಿ ಪೂಜಿಸಲು ಹೇಳುವುದು. ಇಷ್ಟಲಿಂಗದ ಪರಿಕಲ್ಪನೆ ಬೇರೆಯೇ ಇದ್ದು ಇದು ಲಿಂಗಾಯತ ಧರ್ಮದ ವೈಶಿಷ್ಟ್ಯವಾಗಿದೆ; ಇದು ಶಿವನ ಪೂಜೆಯಾಗಿರದ ದೇವಪೂಜೆಯಾಗಿರುವುದು.

2. ಶೈವ ಮತ್ತು ಅದರ ಅಂತರ್ಗತ ಶಾಖೆಯಾದ ವೀರಶೈವವು ಸಾಮಾಜಿಕ ಸಮಾನತೆಯನ್ನು ಬೋಧಿಸದು. ಸ್ಥಾವರ ಲಿಂಗದ ಪ್ರತಿರೂಪವಾದ ಚರಲಿಂಗವು ದ್ವಿಜವರ್ಣದವರಿಗೆ ಮಾತ್ರ ಕೊಡಲ್ಪಡುತ್ತಿದ್ದು ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ ಲಭ್ಯವಿರುತ್ತಿತ್ತು. ಶೂದ್ರರಿಗೆ ಮತ್ತು ಮೂರು ವರ್ಣದ ಸ್ತ್ರೀಯರು ಶೂದ್ರರಾದ ಕಾರಣ ಅವರಿಗೆ ಕೊಡಲ್ಪಡುತ್ತಿರಲಿಲ್ಲ. ಇನ್ನು ಅಂತ್ಯಜರ ಮಾತಂತೂ ದೂರವೇ ಉಳಿಯಿತು. ಶೂದ್ರನು ಧರಿಸದಿದ್ದರೂ ಪೂಜೆಯನ್ನಾದರೂ ಮಾಡಬಲ್ಲವನಾಗಿದ್ದ, ಅಂತ್ಯಜನಿಗೆ ಅದಕ್ಕೂ ಅವಕಾಶವಿರಲಿಲ್ಲ.

ತಮಿಳು ನಾಡಿನ ವೀರಶೈವರಲ್ಲಿ ಬ್ರಾಹ್ಮಣನು ಶಿಲಾಲಿಂಗವನ್ನು ಕ್ಷತ್ರಿಯನ್ನು ಸುವರ್ಣ ಲಿಂಗವನ್ನು ವೈಶ್ಯನು ರತ್ನಲಿಂಗವನ್ನು ಧರಿಸಿ ಪೂಜಿಸುವಂತಿದ್ದರೆ, ಶೂದ್ರನು ಧರಿಸಿ, ಪೂಜಿಸದೆ ಮಣ್ಣಿನ ಲಿಂಗವನ್ನು ಮಾಡಿ, ಪೂಜಿಸಿ ನದಿಯಲ್ಲಿ ಸಮುದ್ರದಲ್ಲಿ ವಿಸರ್ಜಿಸಬೇಕಾಗಿತ್ತು.

ಇಷ್ಟಲಿಂಗ ಪೂಜೆ ಯಾವ ಕಾಲದಲ್ಲಿ ಆರಂಭವಾಯಿತು ? ಯಾರಿಂದ ಆರಂಭವಾಯಿತು ಎಂದು ಕೆಲವರು ಕೇಳುವುದಾಗಿ ಹೇಳಿ ಲೇಖಕ ಸೋಮಶೇಖರ ಶರ್ಮಾರು ಹಾರಿಕೆಯ ಉತ್ತರವನ್ನು ನೀಡಿದ್ದಾರೆ. ಯಾವುದೇ ಆಧಾರವಿಲ್ಲದೆ ಚರಲಿಂಗವನ್ನೇ ಇಷ್ಟಲಿಂಗವೆಂದೂ ಕರೆದುಬಿಟ್ಟಿದ್ದಾರೆ. (ಪುಟ 27)

3. ಮೇಲೆ ಹೇಳಿದ ಮತಗಳು - ''ಶೈವ ಮತವೇ ಆಗಿರಲಿ, ವೀರಶೈವ ಮತವೇ ಆಗಿರಲಿ, ವೈಷ್ಣವ ಮತವೇ ಆಗಿರಲಿ ಇವು ಬ್ರಾಹ್ಮಣ್ಯ ಪ್ರಧಾನ ಮತಗಳೇ ಆಗಿದ್ದವು.' ಶರ್ಮಾ (ಪುಟ 27)

ಲಿಂಗಾಯತ ಧರ್ಮ ಮತ್ತು ಸಮಾಜಗಳು ಬ್ರಾಹ್ಮಣ್ಯ ಪ್ರಧಾನವಲ್ಲ ಎಂಬುದು ಸುಪ್ರಸಿದ್ಧವಾದ ಸಂಗತಿ. ಧರ್ಮಗುರು ಬಸವಣ್ಣನವರು ಹುಟ್ಟು ಬ್ರಾಹ್ಮಣರಾದರೂ, ಬ್ರಾಹ್ಮಣಿಕೆಯ ಹಮ್ಮು ತೊರೆದು ಎಲ್ಲರನ್ನೂ ಇಂಬಿಟ್ಟುಕೊಂಡರು ಮತ್ತು ಸಮಾನವಾಗಿ ಕಂಡರು.

ಶೆಟ್ಟಿ ಎಂಬೆನೆ ಶಿರಿಯಾಳನ ?
ಮಾದಾರನೆಂಬೆನೆ ಚೆನ್ನಯ್ಯನ ?
ಡೋಹರನೆಂಬೆನೆ ಕಕ್ಕಯ್ಯನ ?
ಆನು ಹಾರುವನೆಂದರೆ ಕೂಸಲಸಂಗಮದೇವ ನಗುವನಯ್ಯ !


ಎಂದು ಬ್ರಾಹ್ಮಣೇತರರನ್ನು ಕೊಂಡಾಡಿದರು.

ವೀರಶೈವ ದೀಕ್ಷೆಯನ್ನು ಪಡೆದುಕೊಂಡಾಗ ಪೂರ್ವದ ವರ್ಣಾಶ್ರಮ ವ್ಯವಸ್ಥೆಯಲ್ಲಿದ್ದಂತೆ ಬ್ರಾಹ್ಮಣನ ಸ್ಥಾನ ಹೆಚ್ಚಿನದಾಗಿ, ಶೂದ್ರನ ಸ್ಥಾನ ಕಿರಿದಾಗಿ ಇರುತ್ತಿತ್ತು. ಇನ್ನು ಅಂತ್ಯಜನಿಗಂತೂ ಪ್ರವೇಶವೇ ಇರಲಿಲ್ಲ, ಬಸವ - ಸಿದ್ಧಾಂತದಲ್ಲಿ ಸಮಾಜದ ಚೌಕಟ್ಟಿನಿಂದ ಹೊರಗಿಡಲ್ಪಟ್ಟ ಅಂತ್ಯಜನು ಸಹ ಒಳಗೆ ಇಡಲ್ಪಟ್ಟನು. ಇದಕ್ಕೆ ಕೆಳಗಿನ ಎರಡು ವಚನಗಳು ಸಾಕ್ಷಿ

ದೇವ, ದೇವಾ ಬಿನ್ನಪ, ಅವಧಾರು
ವಿಪ್ರ ಮೊದಲು ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲರನೊಂದೆ ಎಂಬೆ
ಹಾರುವ ಮೊದಲು ಶ್ವಪಚ ಕಡೆಯಾಗಿ
ಭವಿಯಾದವರನೆಲ್ಲರನೊಂದೆ ಎಂಬೆ.
ಈ ಹೀ೦ಗೆಂದು ನಂಬುವುದುದೆನ್ನ ಮನವು
ಈ ನುಡಿದ ನುಡಿಯೊಳಗೆ ಎಳ್ಳು ಮೊನೆಯಷ್ಟು ಸಂದೇಹವುಳ್ಳಡೆ
ಹಲುದೋರಿ ಮೂಗಹೊಯಿ, ಕೂಡಲಸಂಗಮದೇವಾ


ಮಾನವ ಸಮಾಜವನ್ನು ವೈದಿಕ ಧರ್ಮ ಐದು ವರ್ಣಗಳಲ್ಲಿ ವಿಂಗಡಿಸಿತ್ತು. ಈ ಏಣಿಯ ಮೇಲಿನ ಕಾಲು ಬ್ರಾಹ್ಮಣನಾದರೆ ಕೆಳಗಿನ ಕಾಲು ಅಂತ್ಯಜ, ಧರ್ಮಪಿತ ಬಸವಣ್ಣನವರಿಗೆ ಈ ವರ್ಗಿಕರಣ ಸರಿ ಬರಲಿಲ್ಲ. ಎಲ್ಲರೂ ಒಂದೆ ! ಈ ಮಾನವರಲ್ಲಿ ಸಂಸ್ಕಾರ ಸಹಿತರಾದವರು ಭಕ್ತರು, ಸಂಸ್ಕಾರ ರಹಿತರು ಭವಿಗಳು. ಭವಿಗೆ ಧರ್ಮ ಮಂದಿರ ಮುಚ್ಚಿದ ಮನೆಯಲ್ಲ ಈ ಬಗೆಯ ನಿಲುವಿಗೆ ಶಾಸ್ತ್ರದ ಅಥವಾ ಸಂಪ್ರದಾಯದ ಅನುಮತಿ ಇರಲಿಲ್ಲ. ಅದಕ್ಕಾಗಿಯೇ ಧರ್ಮಪಿತರು “ಹೀಂಗೆಂದು ನಂಬುವುದು ಎನ್ನ ಮನವು'' ಎಂದು ಈ ಸಮತಾವಾದ ತಮ್ಮ ಅಂತರ್ವಾಣಿಯ ಪ್ರತಿಪಾದನೆ ಎಂದು ಹೇಳುತ್ತಾರೆ.

ಉಂಬ ಬಟ್ಟಲು ಬೇರೆ ಕಂಚಲ್ಲ
ಕಾಂಬ ದರ್ಪಣ ಬೇರೆ ಕಂಚಲ್ಲ
ಭಾಂಡ ಒಂದೆ ಭಾಜನ ಬೇರೆ
ಬೆಳಗೇ ಕನ್ನಡಿ ಎನಿಸಿಹುದಯ್ಯಾ
ಆರಿದೊಡೆ ಶರಣ ಮರೆದೊಡೆ ಮಾನವ
ಮರೆಯದ ಪೂಜಿಸು ಕೂಡಲಸಂಗಮದೇವನ.

ಮನುಷ್ಯ ಸಮಾಜದಲ್ಲಿ ಎರಡೇ ವರ್ಗಗಳು ಮಾನವ ಮತ್ತು ಶರಣ ಎಂಬುದಾಗಿ ಮತ್ತು ಮರೆವಿನ ಸೃಷ್ಟಿಯಲ್ಲಿ ಹುಟ್ಟಿದ ಮಾನವನು ಅರಿವಿನ ಸೃಷ್ಟಿಯ ಶರಣನಾಗಲಿಕ್ಕೆ ಲಿಂಗಾಯತ ಧರ್ಮವು ಸಂಪೂರ್ಣ ಅವಕಾಶ ನೀಡುತ್ತದೆ.

4. ಲಿಂಗಿ ಬ್ರಾಹ್ಮಣರಲ್ಲಿ ದೀಕ್ಷಾ ಸಂಸ್ಕಾರದ ನಂತರ ಗೃಹಸ್ಥರನ್ನು ಮಾಹೇಶ್ವರರೆಂದು, ಸನ್ಯಾಸಿಗಳನ್ನು ಜಂಗಮರೆಂದೂ ಕರೆಯಲಾಗುತ್ತಿತ್ತು. (ಪುಟ 33) ಅಂದರೆ ವೀರಶೈವದ ಪ್ರಕಾರ ಎಲ್ಲ ಬ್ರಾಹ್ಮಣರೂ ಭಕ್ತರು ; ಲಿಂಗಧಾರಣೆಯಾದ ಬ್ರಾಹ್ಮಣ ಮಾಹೇಶ್ವರ, ಸನ್ಯಾಸಿಯಾದ ಲಿಂಗಿ ಬ್ರಾಹ್ಮಣನೇ 'ಜಂಗಮ'.

ಇದು ಬಹಳ ಮಹತ್ವಪೂರ್ಣವಾದ ಒಂದು ಮಾಹಿತಿಯನ್ನು ಒದಗಿಸುತ್ತದೆ. ಹರಿಹರನು ಬಸವರಾಜ ದೇವರ ರಗಳೆಯಲ್ಲಿ 'ಕಂಬಳಿ ನಾಗಿದೇವ ಮುಂತಾದ ಅಂತ್ಯಜ ಮೂಲದಿಂದ ಅಂದು ನಿಜ ಶರಣರಾದವರನ್ನು ಹಿರಿಯ ಮಾಹೇಶ್ವರರೆಂದು ಬಸವಣ್ಣನವರು ಬಣ್ಣಿಸುವುದನ್ನು ಕಾಣುತ್ತೇವೆ. ನಟುವರ ಜಾತಿಯಲ್ಲಿ ಹುಟ್ಟಿದ ಅಲ್ಲಮ ಪ್ರಭುವನ್ನು ಶೂನ್ಯ ಪೀಠಾರೋಹಣ ಮಾಡಿಸಿದಾಗ, ಗೌರವಿಸಿದಾಗ ಮಹಾಮನೆಯನ್ನು ಆಶ್ರಯಿಸಿಕೊಂಡಿದ್ದ ಕೆಲವು ಜಂಗಮರು ವಿರೋಧಿಸಿರುವುದನ್ನು ಕಾಣುತ್ತೇವೆ. ಇವರುಗಳು ಸನ್ಯಾಸದ ಬಳಕವೂ ಜಾತಿ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತಿದ್ದ ಲಿಂಗಿಬ್ರಾಹ್ಮಣ ಮೂಲದವರು ಎಂದು ಈ ಹಿನ್ನೆಲೆಯಲ್ಲಿ ಗುರುತಿಸಬಹುದು.

5. ಶ್ರೀ ಸೋಮೇಶ್ವರ ಶರ್ಮಾ ಅವರು ಪಂಚಾಚಾರ್ಯರ ಬಗ್ಗೆ ಸ್ವಲ್ಪ ಪ್ರಸ್ತಾಪಿಸಿದ್ದಾರೆ. ಅವರನ್ನು ಸನಾತನ ವೈದಿಕ -ವೀರಶೈವ ಮತ ಪ್ರವರ್ತಕರೆಂದು (ಪುಟ 27) ಕರೆದಿದ್ದಾರೆ. ವೇದಕ್ಕೆ ಒರೆಯನಿಕ್ಕಿ, ಶಾಸ್ತ್ರಕ್ಕೆ ನಿಗಳನಿಕ್ಕಿ, ಆಗಮದ ಮೂಗ ಕೊಯ್ಯಲೆಳಸಿದ ಬಸವಣ್ಣನವರ ಲಿಂಗಾಯತ ಧರ್ಮ ಸನಾತನ ವೈದಿಕ -ವೀರಶೈವವಂತೂ ಅಲ್ಲವೇ ಅಲ್ಲ.

ಬಸವಪೂರ್ವದ ಪಂಚಾಚಾರ್ಯರು ಕೇವಲ ಕಾಲನಿಕ ವ್ಯಕ್ತಿಗಳು, ಐತಿಹಾಸಿಕ ಅಸ್ತಿತ್ವ ಹೊಂದದವರು. ಅಕಸ್ಮಾತ್ ಐತಿಹಾಸಿಕ ವ್ಯಕ್ತಿಗಳು ಮತ್ತು ಬಸವಪೂರ್ವದವರು ಎಂದು ತಮಾಷೆಗಾಗಿ ನಂಬಿದರೂ ಅವರು ಸನಾತನ ವೈದಿಕ -ವೀರಶೈವರು ಎಂದು ಶರ್ಮಾಜಿ ಹೇಳಿದ ಬಳಿಕ ಅವರಿಗೂ ಲಿಂಗಾಯತ ಸಮಾಜಕ್ಕೂ ಸಂಬಂಧವೇ ಇಲ್ಲವಾಗುತ್ತದಷ್ಟೆ. ಮತಾಚಾರ್ಯರೆಂದು ಕಲ್ಪಿಸಿಕೊಳ್ಳಲಾದ ಈ ಐವರಲ್ಲಿ ಯಾರೊಬ್ಬರೂ ಸ್ವತಂತ್ರವಾದ ಮತ ಗ್ರಂಥವನ್ನಾಗಲೀ ಅಥವಾ ವೈದಿಕ ವಾಙ್ಞಯಕ್ಕೆ ಒಂದು ಭಾಷ್ಯವನ್ನಾಗಲೀ ಸಂಸ್ಕೃತದಲ್ಲಿ ರಚಿಸಿಲ್ಲ (ಪುಟ 28) ಎಂಬುದನ್ನು ಸೋಮಶೇಖರ ಶರ್ಮಾ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಆದರೆ ನಂತರ ಕಷ್ಟಪಟ್ಟು ಜೋತಾಡಲಿಕ್ಕೆ ಇರುವ ಒಂದೇ ಒಂದು ಬಸವೋತ್ತರ ಕಾಲದ ಸಂಸ್ಕೃತ ಗ್ರಂಥ ಸಿದ್ಧಾಂತ ಶಿಖಾಮಣಿಯನ್ನು ಶಿವಯೋಗಿ ಶಿವಾಚಾರ್ಯನು 4ನೆಯ ಶತಮಾನದಲ್ಲಿ ರಚಿಸಿದನೆಂದು ಬರೆಯುತ್ತಾರೆ. ಇವರುಗಳಿಗೆ ಶತಮಾನಗಳ ಅವಧಿ ಏನೇನೂ ಗಣನೆ ಇಲ್ಲದ್ದು, ರೇಣುಕಾಚಾರ್ಯ ಮುಂತಾದವರು ಹಿಂದೆ ಇದ್ದರು ಎನ್ನುತ್ತಾರೆ. ರೇವಣಾರಾಧ್ಯರು ಶ್ರೀ ಶಂಕರಾಚಾರ್ಯರ ಸಮಕಾಲೀನರು ಎನ್ನುತ್ತಾರೆ. ರೇವಣಾರಾಧ್ಯರ ಹೆಸರು ಸಿದ್ಧಾಂತ ಶಿಖಾಮಣಿಯಲ್ಲಿ ಪ್ರಸ್ತಾಪವಾಗಿದೆ ಎನ್ನುತ್ತಾರೆ. ಶ್ರೀ ಶಂಕರಾಚಾರ್ಯರು ಇದ್ದುದು 8ನೆಯ ಶತಮಾನ, ಅಂದಾಗ 4ನೆಯ ಶತಮಾನದಲ್ಲಿ ಶಿವಯೋಗಿ ಶಿವಾಚಾರ್ಯ ರೇವಣಾರಾಧ್ಯರ ಹೆಸರನ್ನು ಹೇಗೆ ಪ್ರಸ್ತಾಪಿಸಬಲ್ಲ ? ಐತಿಹಾಸಿಕ ವ್ಯಕ್ತಿಗಳಾದ ಶ್ರೀ ರೇವಣಸಿದ್ದರು ಧರ್ಮಗುರು ಬಸವಣ್ಣನವರ ಸಮಕಾಲೀನರು. ಅವರ ಮಗ ರುದ್ರಮುನಿಯು ಮಹಾಮನೆಯಲ್ಲಿ ಇದ್ದ ಚನ್ನಬಸವಣ್ಣನವರ ಸಮವಯಸ್ಕ ಸನ್ಯಾಸಿ ವಚನ ಸಾಹಿತ್ಯ ಸಂರಕ್ಷಣೆಗಾಗಿ ವೀರಮಾತೆ ಅಕ್ಕ ನಾಗಲಾಂಬಿಕೆಯ ನೇತೃತ್ವದಲ್ಲಿ ಶರಣರ ತಂಡ ಕಲ್ಯಾಣದಿಂದ ಹೊರಟಾಗ ರುದ್ರಮುನಿಯು ನಾಗಲಾಂಬಿಕೆ ಮತ್ತು ಚನ್ನಬಸವಣ್ಣನವರ ಜೊತೆಗೆ ಇರುವುದು ದೃಢೀಕರಣಗೊಂಡಿದೆ. ಚನ್ನಬಸವಣ್ಣನವರು ಲಿಂಗೈಕ್ಯರಾದ ಮೇಲೆ ಸಹ ರುದ್ರಮುನಿಯು ಅಕ್ಕನಾಗಲಾಂಬಿಕೆಯ ಸಂಗಡ ಸಂಚಾರ ಮಾಡಿದುದನ್ನು ಕಾಲಜ್ಞಾನ ವಚನಗಳು ಹೇಳುತ್ತವೆ. ಹೀಗೆ ಪಂಚಾಚಾರ್ಯರ ಬಗ್ಗೆ ಕಾಲ್ಪನಿಕ ಕಥೆ ಹೆಣೆಯುವಾಗ ಕಾಲವನ್ನು ಈ ಶಾಸ್ತ್ರಿ - ಪಂಡಿತರು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಈ ಒಂದು ವಿಷಯದಲ್ಲಿ ಡಾ|| ಚಿದಾನಂದ ಮೂರ್ತಿಯವರು ಪ್ರಾಮಾಣಿಕರಾಗಿ ಮಾತನಾಡಿದ್ದರೆ, ಬ್ರೇಕ್ ಇಲ್ಲದ ಗಾಡಿ ಓಡಿಸುವ ಪುರೋಹಿತ ಶಾಸ್ತ್ರಿ- ಪಂಡಿತರಿಗಿಂತಲೂ ಗಮನಾರ್ಹರಾಗಿದ್ದಾರೆ. ''ರೇಣುಕ ಮತ್ತು ರೇವಣಸಿದ್ದ ಅಭಿನ್ನರು. ರೇವಣಸಿದ್ದರು ಬಸವಣ್ಣನವರ ಸಮಕಾಲೀನರು, ಗುರುಪೀಠಗಳು ಒತ್ತುಕೊಡುವ ಪಂಚಾಚಾರ್ಯರಲ್ಲಿ ಮೊದಲ ನಾಲ್ವರೂ ರೇವಣಾರಾಧ್ಯ ಏಕೋರಾಮರಾಧ್ಯ, ಪಂಡಿತಾರಾಧ್ಯ, ಮರುಳಾರಾಧ್ಯ ಬಸವಾದಿ ಪ್ರಮಥರ ಸಮಕಾಲೀನರು, ಐದನೆಯವರಾದ ವಿಶ್ವಾರಾಧ್ಯರು ಆ ಪಟ್ಟಿಗೆ ಸೇರಿದ್ದು 15ನೆಯ ಶತಮಾನದ ಬಳಿಕ.” (ಚಿಕ್ಕಮಗಳೂರಿನಲ್ಲಿ ನಡೆದ ನಾಲ್ಕನೆಯ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಮುದ್ರಿತ ಆಶಯ ಭಾಷಣದಿಂದ ಆಯ್ದ ವಾಕ್ಯಗಳು), ಪಂಚಾಚಾರ್ಯರೆಂಬುವವರು ಯುಗಯುಗಗಳಲ್ಲಿದ್ದರು ಎಂಬ ಕಾಗಕ್ಕ ಗುಬ್ಬಕ್ಕನ ಕಥೆಯಂತೂ 20ನೆಯ ಶತಮಾನದ ಆದಿಭಾಗದಲ್ಲಿ ಮೈಸೂರಿನ ಕಾಶೀನಾಥ ಶಾಸ್ತ್ರಿಗಳ ಕಲ್ಪನೆಯ ಲೀಲೆಯಲ್ಲಿ ಹುಟ್ಟಿದ ಕೂಸು. ಈ ಬಗ್ಗೆ ಡಾ|| ಚಿದಾನಂದ ಮೂರ್ತಿಯವರು ಸ್ಪಷ್ಟ ಅಭಿಪ್ರಾಯ ಸೂಚಿಸಿರುವುದು ಅಭಿನಂದನಾರ್ಹ.

“ಇದನ್ನು ಇಷ್ಟು ವಿಸ್ತಾರವಾಗಿ ಪ್ರಸ್ತಾಪಿಸಲು ಕಾರಣವಿದೆ. 'ರೇಣುಕ'ರ ಬಗ್ಗೆ ಇರುವ ಲಿಂಗೋದ್ಭವರೆಂಬ ದಂತಕಥೆಯನ್ನು ಇತಿಹಾಸವೆಂಬಂತೆ ಭಾವಿಸಿ, ಅವರು ಎಷ್ಟೋ ಸಾವಿರ ವರ್ಷಗಳ ಹಿಂದೆ ಇದ್ದರೆಂದು ಕಲ್ಪಿಸಿ, ಅವರ ಯುಗ ಮಾನೋತ್ಸವವನ್ನು ಆಚರಿಸಿ ಅವರಿಗೆ ನಾವು ಅನ್ಯಾಯವನ್ನು ಮಾಡಿದ್ದೇವೆ. (ಪುಟ 13)

ಶ್ರೀ ಆದಿಶಂಕರರು ಮತ್ತು ಅವರ ಶಿಷ್ಯ - ಪ್ರಶಿಷ್ಯರಾದ ಶ್ರೀ ವಿದ್ಯಾರಣ್ಯ ಮುಂತಾದ ಆಚಾರ್ಯರೂ ಇಷ್ಟಲಿಂಗಪೂಜಕರಾಗಿ ಇದ್ದರು.' ಎಂದು (ಪುಟ 28) ಸೋಮಶೇಖರ ಶರ್ಮ ಬರೆಯುತ್ತಾರೆ. ಈ ಬಗ್ಗೆಯ ಶಾಸ್ತ್ರಿಗಳು - ಪಂಡಿತರು ಪುರೋಹಿತ ಶಾಹಿಯ ಪ್ರತಿನಿಧಿಗಳಾಗಿ ಎಂತಹ ಒಳ್ಳೆಯ ತತ್ತ್ವಗಳನ್ನೂ ಕೆಡಿಸುತ್ತಾರೆ ಎಂದು ಹೇಳದೆ ಗತ್ಯಂತರವಿಲ್ಲ
.
ಇಷ್ಟಲಿಂಗವು ದೇವಪೂಜೆಯನ್ನು ಮಾಡಲು ಅವಕಾಶ ಕೊಡುವ ಕುರುಹು ಮತ್ತು ಇದು ಸಮಾನತೆಯ ಕುರುಹು ಧರಿಸಿದವನು ವರ್ಣಾಶ್ರಮ ವ್ಯವಸ್ಥೆಯ ಹೊರಗೆ ಹೋಗುತ್ತಾನೆ. ಶಂಕರಾಚಾರ್ಯರು ಸ್ಥಾವರ ಲಿಂಗಪೂಜೆಯನ್ನು ಮಾಡಿದರು, ಆದರೆ ವರ್ಣಾಶ್ರಮದ ಪರಿಪಾಲಕರಾಗಿದ್ದರು. ಅವರು ಪೂಜಿಸಿದುದು ಸ್ಥಾವರಲಿಂಗ, ಅವರು ಇಷ್ಟಲಿಂಗವನ್ನು ಎಂದೂ ಧರಿಸಲೇ ಇಲ್ಲ. ಸ್ಥಾವರಲಿಂಗ, ಚರಲಿಂಗ ಎರಡೂ ಶಿವನ ಕುರುಹಾದರೆ ಇಷ್ಟಲಿಂಗವು ದೇವರ ಕುರುಹು. ಆಂಧ್ರದ ವೀರಶೈವ ಪಂಡಿತರಲ್ಲಿ ಒಬ್ಬರಾದ ಶ್ರೀಪತಿ ಪಂಡಿತರು ಲಿಂಗಿ ಬ್ರಾಹ್ಮಣನ ಲಕ್ಷಣಗಳನ್ನು ಹೀಗೆ ವಿವರಿಸುತ್ತಾರೆ.

ಮುಖದಲ್ಲಿ ಮಂತ್ರ, ಹೃದಯದಲ್ಲಿ ಧ್ಯಾನ ತಲೆಯ ಮೇಲೆ ಲಿಂಗಧಾರಣೆ, ಜುಟ್ಟು ಜನಿವಾರ, ಭಸ್ಮ - ಇವು ಲಿಂಗಿ ಬ್ರಾಹ್ಮಣನ ಲಾಂಭನಗಳು (ಪುಟ 29)

ಲಿಂಗಾಯತರು ಅಥವಾ ಅವರಲ್ಲಿ ಬರುವ ಜಾತಿ ಜಂಗಮರು (ಅಯ್ಯನವರು) ಜುಟ್ಟು ಬಿಡುವುದು, ಜನಿವಾರ ಹಾಕುವುದನ್ನು ಮಾಡುವುದಿಲ್ಲವಷ್ಟೆ, ನಾವು 1972ರಲ್ಲಿ ಬೆಂಗಳೂರಿನಲ್ಲಿ ಪ್ರವಚನ ಆರಂಭಿಸಿದಾಗ ಕೆಲವರು ಆರಾಧ್ಯರು ಮತ್ತು ನಗರ್ತರು ಲಿಂಗದೊಡನೆ ಜನಿವಾರವನ್ನೂ ಧರಿಸುತ್ತಿದ್ದು ಅವರು ಬ್ರಾಹ್ಮಣ, ವೈಶ್ಯ ಮೂಲದಿಂದ ಬಂದು ಲಿಂಗಧಾರಣೆ ಮಾಡಿಕೊಂಡಿದ್ದರೆಂಬುದನ್ನು ಸ್ಪಷ್ಟಪಡಿಸುತ್ತಿದ್ದರು. ಈಗೀಗ ವಚನ ಸಾಹಿತ್ಯ ಅಧ್ಯಯನ, ಬಸವ ತತ್ತ್ವದ ಪ್ರಚಾರ ಅಧಿಕವಾದಾಗ ಇಷ್ಟಲಿಂಗ ಇಟ್ಟುಕೊಂಡು ಜನಿವಾರವನ್ನು ಕ್ರಮೇಣ ಬಿಡುತ್ತಿದ್ದಾರೆ.

ಆಂಧ್ರದ ವೀರಶೈವಾಚಾರ್ಯರುಗಳಲ್ಲಿ ಶ್ರೀಕಂಠ ಶಿವಾಚಾರ್ಯರೆಂಬುವವರು ದೊಡ್ಡ ವೈದಿಕ ವಿದ್ವಾಂಸರು, ಅವರು ಸ್ಪಷ್ಟವಾಗಿ ಹೀಗೆ ಹೇಳಿರುವುದನ್ನು ಶರ್ಮಾ ಅವರು ಉಲ್ಲೇಖಿಸಿದ್ದಾರೆ. “ಲಿಂಗಧಾರಣೆಯು ವೇದಾಧ್ಯಯನ ಅಧಿಕಾರವಿದ್ದ ದ್ವಿಜರಿಗೆ ಅಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ. ಶೂದ್ರರಿಗೆ ಲಿಂಗಧಾರಣೆಯ ಆಧಿಕಾರವಿರುವುದಿಲ್ಲ,'' (ಪುಟ 30)

ಇದೇ ವೀರಶೈವದ ಲಕ್ಷಣ ಎಂದು ಅರಿಯುವುದು ಬಿಟ್ಟು ಕರ್ನಾಟಕದ ವಚನ ಸಾಹಿತ್ಯಾಧ್ಯಯನದ ಪಾಂಡಿತ್ಯವಿರುವ ಕೆಲವರು ಶ್ರೀಕಂಠ ಶಿವಾಚಾರ್ಯರನ್ನೂ ಖಂಡಿಸ ಹೋಗುತ್ತಾರೆ. ನಮಗೆ ಸಂಬಂಧಿಸಿರದ ವೀರಶೈವದ ಗೊಡವೆ ನಮಗೇಕೆ ? ಅವರಲ್ಲಿರುವ ಆಚರಣೆ ಅವರಿಗೇ ಸರಿ, ವಿನಾಕಾರಣ 'ವೀರಶೈವ' ಎಂಬ ಅಂಟು ಪತ್ರ (Sticker)ವನ್ನು ಲಿಂಗಾಯತ ಧರ್ಮ, ಸಾಹಿತ್ಯ, ಸಮಾಜಗಳಿಗೆ ಅಂಟಿಸಲು ಯತ್ನಿಸುವುದು ಮೂರ್ಖತನವಲ್ಲವೇ? ಇಂತಹ ಜನರನ್ನು ಶರ್ಮಾ ಅವರು ತಿಳಿಗೇಡಿಗಳು ಎಂದಿರುವುದನ್ನು ನಾನೂ ಅನುಮೋದಿಸುತ್ತೇನೆ. “ವೀರಶೈವಮತವು ಅಬ್ರಾಹ್ಮಣ ಮತವೆಂತಲೂ, ಶೂದ್ರರ ಮತವೆಂತಲೂ ಗಾಢವಾಗಿ ಕರ್ನಾಟಕದ ವೀರಶೈವರಲ್ಲಿ ಕೆಲವರಲ್ಲಿದೆ. ಇದು ತಿಳಿಗೇಡಿತನದ ವಿಚಾರ,” ಎಂದು ಶರ್ಮಾ ಅವರು ಬರೆದುದು ಸರಿ. (ಪುಟ 30) "ವೀರಶೈವವು ಒಂದು ಮತ ಮಾತ್ರ, ಅದು ಬ್ರಾಹ್ಮಣ್ಯಾಧಾರಿತ ಮತ, ಲಿಂಗಾಯತವು ಒಂದು ಸ್ವತಂತ್ರ ಧರ್ಮ, ಅತಿ ವರ್ಣಾಶ್ರಮ ಸಮಾಜ ವ್ಯವಸ್ಥೆಯ ಧರ್ಮ' ಎಂಬುದನ್ನು ನಾವು ಸ್ಪಷ್ಟವಾಗಿ ತಿಳಿಯಬೇಕು.

ಸೋಮಶೇಖರ ಶರ್ಮಾರ ಮತ್ತೊಂದು ಮಾತು ನಮಗೆ ಒಳ್ಳೆಯ ದಾಖಲೆ.

'ಶೂದ್ರ ವರ್ಣದವರಿಗೆ ಲಿಂಗಧಾರಣೆ ಕರ್ನಾಟಕದಲ್ಲಿ ಬಸವಣ್ಣನ ಕಾಲದಲ್ಲಿ ಆರಂಭವಾದರೂ, ಆಂಧ್ರದೇಶದಲ್ಲಿ ಕ್ರಿ.ಶ. 14ನೆಯ ಶತಮಾನದವರೆಗೆ ಶೂದ್ರರಿಗೆ ಲಿಂಗಧಾರಣೆಯನ್ನು ಯಾವ ಆಚಾರ್ಯನೂ ಒಪ್ಪಿರಲಿಲ್ಲ."

ಪಕ್ಕಾ ಬ್ರಾಹ್ಮಣವಾದಿಯಾದ ಸೋಮಶೇಖರ ಶರ್ಮಾರ ಮಾತಿನಲ್ಲಿ ಒಂದು ಸತ್ಯ ಅಭಿವ್ಯಕ್ತವಾಗಿದೆ. ಅವರೇನೂ ನಮಗೆ ಉಪಕಾರ ಮಾಡಬೇಕೆಂದಾಗಲೀ ಸಮಾತಾವಾದಿ ಬಸವಣ್ಣನವರ ಹಿರಿಮೆಯನ್ನು ಕೊಂಡಾಡಬೇಕೆಂದಾಗಲೀ ಈ ಮಾತು ಬರೆದಿಲ್ಲ. ದ್ವಿಜಾಧಿಕ್ಯವನ್ನು ಹೇಳಲು ಉಲ್ಲೇಖಿಸಿರುವರಾದರೂ ನಮಗೆ ಇದು ಒಂದು ವರ ! ಅದಕ್ಕಾಗಿ ಅವರಿಗೆ ಧನ್ಯವಾದ.

1. ಶೂದ್ರರು, ಚತುರ್ವರ್ಣ ವ್ಯವಸ್ಥೆಯಲ್ಲಿ ಶೂದ್ರರಿಗಿಂತಲೂ ಕೆಳಗಿದ್ದ ಅಸ್ಪೃಶ್ಯರಿಗೆ
ಲಿಂಗಧಾರಣೆಗೆ ಅವಕಾಶ ಕೊಟ್ಟವರು ಬಸವಣ್ಣನವರು.

2. ಈ ಲಿಂಗವು ಶೈವ-ವೀರಶೈವರು ತಲೆಯಲ್ಲಿ ಧರಿಸುತ್ತಿದ್ದ ಅಥವಾ ಬುಟ್ಟಿಯಲ್ಲಿಟ್ಟುಕೊಂಡು ಒಯ್ಯುತ್ತಿದ್ದ ಲಿಂಗಗಳಂತೆ ಸ್ಥಾವರಲಿಂಗದ ಸಣ್ಣರೂಪ, ಶಿವನ ಪ್ರತೀಕವಲ್ಲ. ಬಸವಣ್ಣನವರು ಕೊಟ್ಟ ಇಷ್ಟಲಿಂಗಗಳು ವಿಶ್ವದ ಗೋಲಾಕಾರದಲ್ಲಿದ್ದು ದೇವರ ಪ್ರತೀಕ, ಆಂಧ್ರಕ್ಕೆ ಈ ಲಿಂಗಾಯತ ಧರ್ಮವು ಚದುರಿಹೋದ ಶರಣರಿಂದ ಪ್ರಚಾರವಾದಾಗ ಅಲ್ಲಿ ಶೂದ್ರರಿಗೂ ಲಿಂಗಧಾರಣೆ ಆರಂಭವಾಗಿದೆ. ಇದೇನು ಆಂಧ್ರ - ವೀರಶೈವ ಮಾಡಿಕೊಂಡ ಸುಧಾರಣೆ (Reformation)ಯಲ್ಲ ಕರ್ನಾಟಕದ ಲಿಂಗಾಯತ ಧರ್ಮವು ಹೋಗಿ ತಂದ ಸುಧಾರಣೆ, ಸೋಮಶೇಖರ ಶರ್ಮಾರೇ ಹೇಳುವಂತೆ “ಬಸವಣ್ಣನ ಸಮಕಾಲೀನ ಆಚಾರ್ಯನಾದ ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯನು ಬಸವಣ್ಣನ ವಿಚಾರವನ್ನು ಸಮರ್ಥಿಸುವುದಿಲ್ಲ. ದ್ವಿಜ ವರ್ಣದ ವೀರಶೈವರು ಯಜ್ಞೋಪವೀತವನ್ನು ಬಿಡುವುದನ್ನಾಗಲೀ ಮತ್ತು ಶೂದ್ರ ವರ್ಣದವರಿಗೆ ಲಿಂಗಧಾರಣೆಯನ್ನು ಮಾಡುವುದನ್ನಾಗಲೀ ಒಪ್ಪುವುದಿಲ್ಲ.....' (ಪುಟ 36) ಮುಂದುವರಿದು ಹೇಳುತ್ತಾರೆ : ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯರ ಅಭಿಪ್ರಾಯ ಹೀಗಿದೆ. “ಬಸವಣ್ಣನ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ನಾನು ನನ್ನ ಬ್ರಾಹ್ಮಣ್ಯವನ್ನು ಬಿಡಲಾರೆ'' ಈ ಮಾತುಗಳಿಂದ ಧರ್ಮಕರ್ತ ಬಸವಣ್ಣನವರ ಬಗ್ಗೆ ನಮ್ಮ ಅಭಿಮಾನ ಪುಟಿದು ಬೀಳುತ್ತದೆ. ಶ್ರೇಷ್ಠ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿ ಅನಾಯಾಸವಾಗಿ ದೊರೆತ ಕುಲ-ಸೌಲಭ್ಯಗಳನ್ನೂ ತೊರೆದು ಇನ್ನಿತರರ ಉದ್ಧಾರಕ್ಕಾಗಿ ಬ್ರಾಹ್ಮಣ್ಯದ ಅಭಿಮಾನ, ಜಂಜಡ ಬಿಟ್ಟು ಶ್ರೀಸಾಮಾನ್ಯನ ಬಳಿಗೆ ಬಂದ ಮಾತೃ ಹೃದಯಿ ಬಸವಣ್ಣನವರು. (ಇಂಥ ಮಹಾಪುರುಷನ ಬಗ್ಗೆ ಲಿಂಗಾಯತ ಸಮಾಜದೊಳಗಿನ ಕೆಲವು ಪುರೋಹಿತ ಶಾಹಿಗಳಿಂದ ಇಂದಿಗೂ ನಿರಂತರವಾಗಿ ನಿಂದೆಯಾಗುತ್ತಿದೆ. ಇದಕ್ಕೆ ಕಾರಣ ಭಕ್ತವರ್ಗ ಎನ್ನಿಸಿಕೊಂಡವರಲ್ಲಿರುವ ಅಜ್ಞಾನ!) ಪಂಚಾಚಾರ್ಯರೆಂಬ ಐವರ ಒಂದು ಗುಂಪಿನಲ್ಲಿ ಬರುವ ಮಲ್ಲಿಕಾರ್ಜುನ ಪಂಡಿತಾರಾಧ್ಯರೆಂಬ ಶ್ರೀಶೈಲ ಪೀಠವನ್ನು ಆರಂಭಿಸಿದವರೆಂದು ಹೇಳಲಾದ ಈ ವ್ಯಕ್ತಿಯ ದೃಷ್ಟಿಕೋನ ತಿಳಿದಾಗ ಅವರು ಲಿಂಗಾಯತ ಧರ್ಮಾನುಯಾಯಿಗಳಲ್ಲ ವೈದಿಕ-ವೀರಶೈವ ಮತಾನುಯಾಯಿಗಳು ಎಂದು ಖಚಿತವಾಗುವುದಷ್ಟೆ.

ಸ್ವಾಮಿ, ಸ್ವಾಮಿ, ಭವಿಯ ಭಕ್ತನ ಮಾಳ್ಪುದು
ಯೋಗ್ಯವೋ ಆಯೋಗ್ಯವೋ ?
ಆಗಮವಿಚಾರದಿಂದ ಆಗಬಹುದೆಂಬ ಸಿದ್ಧಾಂತ
ಇಲ್ಲಿ (ಯೋ) ಪರಮಗುರು ಸಂಗನ ಬಸವಯ್ಯ
ಸರ್ವಜಾತಿಯ ಲಿಂಗದ ರಾಶಿಯ ಮಾಡಿದ ಸಿದ್ಧಾಂತ
ಕಪಿಲ ಸಿದ್ದಮಲ್ಲಿಕಾರ್ಜುನಾ

ಜೈನ ಬೌದ್ಧ ಇವೆರಡು ಅವೈದಿಕ ಮತಗಳೆಂದು ಹೇಳಿದ ಸೋಮಶೇಖರ ಶರ್ಮಾ
ಅವರು ಅವೈದಿಕ ಮತದ ಲಕ್ಷಣಗಳನ್ನು ಹೀಗೆ ಹೇಳುವರು. (ಪುಟ 34)

1. 'ಶಿವ' ಮತ್ತು 'ವಿಷ್ಣು ಮುಂತಾದ ವೈದಿಕ ದೇವರ ಉಪಾಸನೆಯನ್ನು ನಿಷೇಧಿಸುವುದು.
2. ವರ್ಣಾಶ್ರಮ ವ್ಯವಸ್ಥೆಯನ್ನು ನಿರಾಕರಿಸುವುದು.
3. ಸರ್ವವರ್ಗದ ಸ್ತ್ರೀ ಪುರುಷರಿಗೆ ಸನ್ಯಾಸಾಶ್ರಮವನ್ನು ಕೊಡುವುದು.
4. ನಿರಾಕಾರ ಪೂಜೆಯನ್ನು ಬೋಧಿಸುವುದು ಇತ್ಯಾದಿ.

ಈ ಸೂತ್ರಗಳನ್ನು ಅನ್ವಯಿಸಿದಾಗ ವೀರಶೈವವು ವೈದಿಕ ಮತದ ಸೀಮೆಯಲ್ಲಿ ಬಂದರೆ, ಧರ್ಮಪಿತ ಬಸವಣ್ಣನವರ ಚಿಂತನೆಯ ಫಲವಾಗಿ ಮೂಡಿಬಂದ ಲಿಂಗಾಯತವು ಅವೈದಿಕ ಧರ್ಮವಾಗುತ್ತದೆ.

ವರ್ಣಾಶ್ರಮ ಸಾಮಾಜಿಕ ವ್ಯವಸ್ಥೆಯಲ್ಲಿ ಇರುವ ಮತ್ತೊಂದು ಮಹತ್ವದ ವಿವರ ಎಂದರೆ ಸನ್ಯಾಸವನ್ನು ಬ್ರಾಹ್ಮಣ ವರ್ಣದವರಿಗೆ ಮಾತ್ರ ಕೊಟ್ಟು ಉಳಿದವರಿಗೆ ನಿರಾಕರಿಸುವುದು.

1. ಬ್ರಾಹ್ಮಣರಿಗೆ ನಾಲ್ಕೂ ಆಶ್ರಮ ಲಭ್ಯ, ಸನ್ಯಾಸಕ್ಕೆ ಅವಕಾಶವಿದೆ.
2. ಕ್ಷತ್ರಿಯರಿಗೆ 3 ಆಶ್ರಮ ಮಾತ್ರ ಲಭ್ಯ, ಸನ್ಯಾಸಕ್ಕೆ ಅವಕಾಶವಿಲ್ಲ.
3. ವೈಶ್ಯರಿಗೆ 2 ಆಶ್ರಮ ಲಭ್ಯ, ವಾನಪ್ರಸ್ಥವಿಲ್ಲ.
4. ಶೂದ್ರರಿಗೆ 1 ಆಶ್ರಮ - ಗೃಹಸ್ಯ ಮಾತ್ರ ಲಭ್ಯ. ಉಳಿದ ಮೂರು ಇಲ್ಲ

ಬಹುಶಃ ಇದನ್ನು ಅನುಷ್ಠಾನ ಮಾಡಲೆಂದೇ ಏನೋ ಅಯ್ಯನವರನ್ನು ಲಿಂಗಿ ಬ್ರಾಹ್ಮಣರೆಂದು ಗುರುವರ್ಗದವರು ಕರೆದರೆ ಹುಟ್ಟು ಜಂಗಮರಿಗೆ ಮಾತ್ರ ಸನ್ಯಾಸ (ಜಂಗಮ) ದೀಕ್ಷೆ ಮಠ ಪೀಠಾಧಿತ್ವ ಎಂದು ಶಿವಯೋಗ ಮಂದಿರದ ಮೂಲಕ ಹಾನಗಲ್‌ ಶ್ರೀಕುಮಾರ ಸ್ವಾಮಿಗಳು ಕಾಯ್ದೆ ತಂದರು. ಇವೆಲ್ಲವೂ ಬಸವ ತತ್ತ್ವಕ್ಕೆ ವಿರುದ್ಧವಾದವು ಎಂಬುದನ್ನು ಅರಿಯುವುದು ಅಗತ್ಯವಿದೆ.

ಬಸವಣ್ಣನವರು ಆರಾಧ್ಯ ಬ್ರಾಹ್ಮಣರಲ್ಲ

ಆಂಧ್ರ, ತಮಿಳು ನಾಡುಗಳಲ್ಲಿ ಲಿಂಗಧಾರಿ ಬ್ರಾಹ್ಮಣರು, ಆರಾಧ್ಯ ಬ್ರಾಹ್ಮಣರೆಂಬ ಹೆಸರಿನಲ್ಲಿ ಕಾಣಸಿಗುತ್ತಾರೆ. ಉಪನಯನದ ದಿನವೇ ಲಿಂಗಧಾರಣೆಯೂ ಆಗುತ್ತದೆ. ಈ ಲಿಂಗದ ಆಕಾರವು ಬೇರೆಯೇ ಇರುತ್ತದೆ. ಒಂದು ಬಟ್ಟೆಯಲ್ಲಿ ಸ್ಥಾವರಲಿಂಗಾಕೃತಿಯ ಚಿಕ್ಕಲಿಂಗ ಇಟ್ಟು ಅದನ್ನು ಜನಿವಾರದ ತುದಿಗೆ ಕಟ್ಟಿಕೊಳ್ಳುತ್ತಾರೆ. ಆದರೆ ಬಸವಣ್ಣನವರು ಆರಾಧ್ಯ ಬ್ರಾಹ್ಮಣರಲ್ಲ, ಶೈವ (ಸ್ಮಾರ್ತ) ಬ್ರಾಹ್ಮಣರು, ಅವರ ಮುತ್ತಾತಂದಿರು ಆಂಧ್ರದಿಂದ ವಲಸೆ ಬಂದ ಕಮ್ಮೆ ಕುಲದವರು (ಕಮ್ಮಾ ಅಲ್ಲ). ಇಂದಿಗೂ ಈ ಕಮ್ಮೆ ಬ್ರಾಹ್ಮಣರು ಆಂಧ್ರದಲ್ಲಿದ್ದಾರೆ. ಬಸವ ಪೂರ್ವದಲ್ಲಿ ಈ ಆರಾಧ್ಯ ಬ್ರಾಹ್ಮಣರು ಕರ್ನಾಟಕದಲ್ಲಿ ಇರಲಿಲ್ಲ. ಹುಟ್ಟಿದ ಮಗುವಿಗೆ ಲಿಂಗಧಾರಣೆ ಮಾಡುವ ಪದ್ಧತಿ ಆರಾಧ್ಯರಲ್ಲೂ ಇಲ್ಲ. ಇತರ ಬ್ರಾಹ್ಮಣರಲ್ಲೂ ಇಲ್ಲ. ಧರ್ಮಪಿತ ಬಸವಣ್ಣನವರಿಂದಲೇ ಗರ್ಭಲಿಂಗ ಸಂಸ್ಕಾರ ಮತ್ತು ಕೂಸಿಗೆ ಲಿಂಗಧಾರಣೆ ಮಾಡುವುದು ಆರಂಭವಾಯಿತು. ಹಾಗೆ ಕೊಟ್ಟ ಮೊದಲು ಗುರು ಧರ್ಮಕರ್ತ ಬಸವಣ್ಣನವರು ; ಪಡೆದ ಮೊದಲ ವ್ಯಕ್ತಿ ತಾಯಿಯ ಹೊಟ್ಟೆಯಲ್ಲಿದ್ದ ಚಿನ್ಮಯ ಜ್ಞಾನಿ ಚೆನ್ನಬಸವಣ್ಣ!

ಈ ಎಲ್ಲ ಆಧಾರಗಳಿಂದ ನಿರ್ಧರಿಸಬೇಕಾದುದೇನೆಂದರೆ -

1. ಲಿಂಗಾಯತ ಧರ್ಮ ವೀರಶೈವ ಪಂಥದಿಂದ ಬೇರೆ.
2. ವೀರಶೈವವು ಸನಾತನ ವೈದಿಕ ಮತದಲ್ಲಿ ಇದ್ದು ಜಾತಿ ಪದ್ಧತಿಯನ್ನು ಮಾನ್ಯ ಮಾಡಿತ್ತು.
3. ವೀರಶೈವವು ಬಸವ ಪೂರ್ವ ಒಂದು ಪಂಥ. ಅದಕ್ಕೂ ಇಷ್ಟಲಿಂಗಧಾರಿಗಳಾದ ನಮಗೂ ಯಾವುದೇ ಹೊಂದಾಣಿಕೆ ಇಲ್ಲ, ಸಂಬಂಧವೂ ಇಲ್ಲ.
4. ಶ್ರೀ ವಿ.ವ್ಹಿ. ಸಂಗಮದ ಮುಂತಾದ ಕೆಲವರು ಬಸವಣ್ಣನವರೇ ವೀರಶೈವ ಮತಸ್ಥಾಪಕ ಎನ್ನುವುದು ತಪ್ಪು. ಇವರು ಕಷ್ಟಪಟ್ಟು ಸಾಧಿಸಲೆತ್ನಿಸಿದರೂ, ಒಂದಲ್ಲ ಒಂದು ರೀತಿಯಲ್ಲಿ ಸಿದ್ದಪಡಿಸಲಾರದೆ ಹೋಗುವರು. ಇಂದಿಗೂ ಆಂಧ್ರದಲ್ಲಿ ತೆಲುಗು, ತಮಿಳುನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲೆಯಾಳಿ ಮಾತನಾಡುವ ವೀರಶೈವರೆಂಬುವ ಜನರು ಇದ್ದಾರೆ. ಅವರಿಗೆ ಅಷ್ಟಾವರಣ, ಪಂಚಾಚಾರ, ಷಟಸ್ಥಲಗಳ ಕಲ್ಪನೆ ಇಲ್ಲ. ಅದೇ ರೀತಿ ಸಮಾನಾಂತರವಾಗಿ ಲಿಂಗಾಯತ ಧರ್ಮಿಯರೂ, ಮಠಗಳೂ ಇವೆ. ತಮಿಳುನಾಡಿನ ವೀರಶೈವರು ತಿರುವಾಚಕಮ್ ಅನ್ನು ತಮ್ಮ ಧರ್ಮಶಾಸ್ತ್ರವೆಂದು, ಮಾಣಿಕ್ಯ ವಾಚಕರ್ ಅನ್ನು ತಮ್ಮ ಗುರು ಎಂದರೆ, ಲಿಂಗಾಯತ ಮಠದವರು ಬಸವಣ್ಣನವರನ್ನು ತಮ್ಮ ಗುರುವೆಂದು, ಬಸವ ಪುರಾಣಮು ಮತ್ತು ಪ್ರಭುಲಿಂಗ ಲೀಲೆ ಅನ್ನು ಧರ್ಮಶಾಸ್ತ್ರ ಎನ್ನುತ್ತಾರೆ. ಪ್ರಾಂತೀಯ ಭಾಷೆ ತಮಿಳು ಕಲಿತುದರಿಂದ ಕನ್ನಡ ಸರಿಯಾಗಿ ಬರದೆ ಇದ್ದರೂ, ಲಿಂಗಾಯತರಿಗೆ ಅಷ್ಟಿಷ್ಟು ಕನ್ನಡ ಬರುತ್ತದೆ. ಪಾಂಡಿಚೆರಿಯಲ್ಲಿ ಒಂದು ವೀರಶೈವ ಮಠವಿದೆ, ಚಿದಂಬರದಲ್ಲಿದೆ. ಮೈಲಾಮ್ ಎಂಬಲ್ಲಿ ಬಸವ ಪೂರ್ವದ ವೀರಶೈವ ಮಠ, ಬಸವ ಸಂಸ್ಥಾಪಿತ ಲಿಂಗಾಯತ ಧರ್ಮದ ಮತ ಎರಡೂ ಇವೆ.

ಬಸವಣ್ಣನವರು ವೀರಶೈವ ಮತ ಸ್ವೀಕರಿಸಿದ್ದರೆ ?

ಖಂಡಿತವಾಗಿಯೂ ಇಲ್ಲ, ಏಕೆಂದರೆ ಏಕದೇವತಾ (ಶಿವ) ನಿಷ್ಠೆ ಬಿಟ್ಟರೆ ವೈದಿಕ ಸಮಾಜಕ್ಕಿಂತ ವೀರಶೈವರ ಸಮಾಜಶಾಸ್ತ್ರ ವರ್ಣಾಶ್ರಮಾಧಾರಿತವಾಗಿದ್ದ ಕಾರಣ ಯಾವುದರಲ್ಲೂ ಬೇರೆ ಬೇರೆ ಇರಲಿಲ್ಲ, ಮಾತ್ರವಲ್ಲ ವೀರಶೈವ ಪಂಥ ಕರ್ನಾಟಕದಲ್ಲಿರಲಿಲ್ಲ. ಧರ್ಮಗುರು ಬಸವಣ್ಣನವರು ಕಮ್ಮೆ ಕುಲದ ಶೈವ ಬ್ರಾಹ್ಮಣರಲ್ಲಿ ಹುಟ್ಟಿದರು. ಅಸಮಾನತೆ ಕಂಡು, ನೊಂದು ಮನೆ ಬಿಟ್ಟರು. ಪಾಶುಪತ ಸಂಪ್ರದಾಯದ ಕೂಡಲ ಸಂಗಮದ ಶೈವ ಗುರುಕುಲವನ್ನು ಸೇರಿದರು. ಸಂಗಮನಾಥನ ಅರ್ಚಕರಾಗಿದ್ದುಕೊಂಡೇ ಸಾಧನೆ ಮಾಡಿದರು. ಯಾವುದೇ ಗುರುಕುಲದ ನೇಮದಂತೆ ಪಾಶುಪತ ಸಂಪ್ರದಾಯದ ದೀಕ್ಷೆಯನ್ನು ಅಧ್ಯಾತ್ಮಿಕವಾಗಿ ಪಡೆದಿರಬಹುದು. ಅಧ್ಯಯನದೊಡನೆ ಸಾಧನೆಯನ್ನು ಮುಂದುವರಿಸಿದರು. ಒಂದು ದಿವಸ ಅವರಿಗೆ ಇಷ್ಟಲಿಂಗದ ಪರಿಕಲ್ಪನೆ ಮೂಡಿತು. ಸೃಷ್ಟಿಕರ್ತನ ಕೃಪೆ ಅವತೀರ್ಣಗೊಂಡು ಮಂಗಳವಾಡಕ್ಕೆ ಹೋಗು ಎಂದು ನಿರ್ದೇಶಿಸಿತು. ತಾವು ಕಂಡು ಹಿಡಿದ ಇಷ್ಟಲಿಂಗವನ್ನೇ ಗಣಲಾಂಛನವನ್ನಾಗಿ ಮಾಡಿ ಅದರ ಸೂತ್ರದಿಂದ ಶರಣ ಸಮಾಜ ಕಟ್ಟತೊಡಗಿದರು. ವಿದ್ಯಾರ್ಜನೆಯ ಕಾಲದಲ್ಲಿ ತಮ್ಮ ಚಿತ್ರದಲ್ಲಿ ಮೂಡಿದ ಹೊಸ ಧರ್ಮದ ನೀಲನಕ್ಷೆಯ ಪ್ರಕಾರ ಮಂಗಳವೇಡೆ, ಕಲ್ಯಾಣಗಳಿಗೆ ಹೋದ ಮೇಲೆ ನವ ಸಮಾಜ ನಿರ್ಮಾಣದಲ್ಲಿ ತೊಡಗಿದರು. ಯಾವುದೇ ವ್ಯಕ್ತಿ ಗುರುವಿನಿಂದ ಧರ್ಮಕರ್ತ ಬಸವಣ್ಣನವರು ದೀಕ್ಷೆ ಪಡೆದಿಲ್ಲ. ಸೃಷ್ಟಿಕರ್ತನೇ ಅವರ ಗುರು (ಈ ಬಗ್ಗೆ ವಚನಗಳ ಉಲ್ಲೇಖದೊಡನೆ ಅಧಿಕೃತ ಪುಸ್ತಕವೊಂದನ್ನು 'ಸ್ವಯಂಕೃತ ಬಸವಣ್ಣ' ಎಂಬ ಶೀರ್ಷಿಕೆಯಡಿಯಲ್ಲಿ ಬರೆದಿದ್ದೇನೆ. ಪ್ರಸ್ತುತ ಬರಹವನ್ನು ವಿಸ್ತಾರಗೊಳಿಸಲು ಇಚ್ಚಿಸದೆ, ಆ ಪುಸ್ತಕವನ್ನೇ ವಿವರಗಳಿಗಾಗಿ ನೋಡಬೇಕೆಂದು ಕೋರುತ್ತೇನೆ.)

ಕಾರಣಿಕರಾದ ಬಸವಣ್ಣನವರು ಶೈವ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದರು, ಅದನ್ನು ಬಿಟ್ಟು ಬಂದರು. ಹೊಸಧರ್ಮ ಕೊಟ್ಟರು. ಅದೇ ಲಿಂಗಾಯತ ಧರ್ಮ, ಒಂದು ವೇಳೆ ಮಧ್ಯಂತರದಲ್ಲಿ ವೀರಶೈವ ದೀಕ್ಷೆ ಪಡೆದು, ಅದನ್ನು ಬಿಟ್ಟು ಹೊಸದಾದ ಲಿಂಗಾಯತ ಧರ್ಮ ಕೊಟ್ಟರು ಎಂದರೂ ಲಿಂಗಾಯತ ಧರ್ಮದ ಸ್ಥಾಪಕರು ಅವರೇ ಆಗುವರು. ಆದರೆ ಆಗತ್ಯವಿಲ್ಲದ ಅನವಶ್ಯಕ ಸುಳ್ಳೊಂದನ್ನು ಹೇಳಿ ನಾವು ಏನು ಸಾಧಿಸಬೇಕಾಗಿದೆ ? ಆದ್ದರಿಂದ ಬಸವಣ್ಣನವರು ವೀರಶೈವ ದೀಕ್ಷೆ ಪಡೆಯಲೇ ಇಲ್ಲ ಎಂದು ಖಚಿತವಾಗಿ ನಾವು ಸತ್ಯವನ್ನು ನುಡಿಯಬೇಕಾಗಿದೆ. ಹಾಗಾದರೆ ಮಗ್ಗೆಯ ಮಾಯಿದೇವರು ಬಸವಣ್ಣನವರನ್ನು “ವೀರಶೈವ ನಿರ್ಣಯ ಪರಮಾವತಾರ' ಎಂದುದೇಕೆ ? ವೀರವೀರಾಗಿಣಿ ಅಕ್ಕಮಹಾದೇವಿ "ವಿರಶೈವ ಮಾರ್ಗವನರುಪುವುದಕ್ಕೆ ಜಗದ್ದಿತಾರ್ಥವಾಗಿ ಮರ್ತ್ಯಕ್ಕವತರಿಸಿ ಬಂದ ಬಸವಣ್ಣ' ಎಂದುದೇಕೆ ? ಮರಿ ತೋಂಟದಾರ್ಯರು, "ವರ ವೀರಶೈವವ ನೆಲೆಗೊಳಿಸಿದ ಬಸವಣ್ಣ ಎಂದುದೇಕೆ ?

ಯಾವುದಾದರೊಂದು ಸಿದ್ಧಾಂತಕ್ಕೆ ಒಂದು ಸಮಾಜ ಬೇಕು, ಸಮಾಜ ಶಾಸ್ತ್ರಬೇಕು. ಇಲ್ಲದಿದ್ದರೆ ಅವು ಪ್ಲಾಸ್ಟಿಕ್ ಕವರ್‌ನಲ್ಲಿ ಬೆಳೆಸಿದ ಸಸಿಗಳಂತೆ, ಅಲ್ಲೆ ಇದ್ದರೆ ಹೇಗೆ ಬೆಳೆಯಲು ಸಾಧ್ಯ ? ವೀರಶೈವ ಮಠಗಳು ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ವೀರಶೈವ ದೀಕ್ಷೆ ಕೊಡುತ್ತಿದ್ದವು. ಆದರೆ ಅವರ ಜಾತಿಗಳು ಅಳಿಯುತ್ತಿರಲಿಲ್ಲ. ಪೂರ್ವದ ಜಾತಿಮತಗಳಲ್ಲೇ ಇರುತ್ತಿದ್ದರು. ಗುರುವು ಯಾವುದೇ ರೀತಿ ಸಮಾನತೆ ನೀಡುತ್ತಿರಲಿಲ್ಲ; ಕೇವಲ ಒಂದು ಅಧ್ಯಾತ್ಮಿಕ ದೀಕ್ಷೆ ಹೊಂದುತ್ತಿದ್ದರು. (ಸದ್ಯದಲ್ಲಿ ಕೇರಳದಲ್ಲಿ ಅಂಥ ಶೂದ್ರ ವೀರಶೈವರು 10 ಲಕ್ಷ ಜನರಿದ್ದು. ಯಾವುದೇ ಧಾರ್ಮಿಕ ನೆಲೆ ಇಲ್ಲದೆ ತೊಳಲಾಡುತ್ತಿದ್ದಾರೆಂದು ಅಲ್ಲಿಯ ಓರ್ವ ವೈದ್ಯರು ಹೇಳುತ್ತಿರುತ್ತಾರೆ.) ಗೃಹಸ್ಥರಿಗಂತೂ ಮಕ್ಕಳ ಮದುವೆ, ಮುಂತಾಗಿ ತೊಂದರೆಯಾಗುತ್ತಿತ್ತು. ಮತ್ತು ವೀರಶೈವವು ಭವಿಗಳನ್ನು ತೀರಾ ನಿಕೃಷ್ಟವಾಗಿ ಕಾಣುತ್ತಿತ್ತು. ಹೀಗಾಗಿ ಅಂಥ ವೀರಶೈವರು ತಂಡೋಪತಂಡವಾಗಿ ಧಾವಿಸಿ ಬಸವ ಪ್ರಣೀತ ಸಮಾಜ ಶಾಸ್ತ್ರ ಒಪ್ಪಿ ಲಿಂಗಾಯತ ಸಮಾಜದಲ್ಲಿ ತಮ್ಮನ್ನು ತಾವು ಲೀನಗೊಳಿಸಿಕೊಂಡರು. ಹೀಗಾಗಿ ಕರ್ನಾಟಕದ ಹೊರಗಿನ ತಮಿಳುನಾಡು, ಆಂಧ್ರಗಳಲ್ಲಿದ್ದ ವೀರಶೈವರು ಅಧಿಕ ಸಂಖ್ಯೆಯಲ್ಲಿ ಬಂದು ಲಿಂಗಾಯತ ಸಮಾಜದಲ್ಲಿ ಸೇರಿಕೊಂಡರು. ಹೀಗೆ ಅಂತರದಲ್ಲಿ ತೇಲಾಡುತ್ತಿದ್ದ ವೀರಶೈವಕ್ಕೆ ನೆಲೆಗೊಳ್ಳಲು ಒಂದು ಆಶ್ರಯ ಸಿಕ್ಕಿತು ಮತ್ತು ಬಸವ ಪೂರ್ವದ ವೀರಶೈವರಿಗೆ ಗುರುವಾಗಲಿ, ತರಬೇತಿಯಾಗಲಿ ಇರಲಿಲ್ಲ. ಲಿಂಗಾಯತ ಧರ್ಮವನ್ನು ಸ್ವೀಕರಿಸಿದ್ದರಿಂದ ಒಂದು ಪರಿಪೂರ್ಣ ಧರ್ಮದ ಆಶ್ರಯ, ಆಚಾರ-ವಿಚಾರ ಸಂಹಿತೆ, ಸಾಮಾಜಿಕ ಭದ್ರತೆ ಪ್ರಾಪ್ತವಾದವು. ಹೀಗಾಗಿ ಬಂದು ಸೇರಿಕೊಂಡ ವೀರಶೈವರು, ಡೋಹರ ಕಕ್ಕಯ್ಯನವರು "ಕಷ್ಟಕುಲದಲ್ಲಿ ಹುಟ್ಟಿದ ಎನ್ನ ಮುಟ್ಟಿ ಪಾವನವ ಮಾಡಿದನಯ್ಯಾ ಬಸವಣ್ಣನು.” ಎಂದಂತೆ ತಮಗೊಂದು ನೆಲೆ ಸಿಕ್ಕಿದ್ದಕ್ಕೆ, ಧರ್ಮಕ್ಕೆ ಅಗತ್ಯವಾದ ಎಲ್ಲ ಅಂಶಗಳೂ ಪ್ರಾಪ್ತಿಯಾದುದಕ್ಕೆ “ವೀರಶೈವ ನಿರ್ಣಯ ಪರಮಾವತಾರ,' 'ಶರಣಾಗತ ರಕ್ಷಕ' ಮುಂತಾಗಿ ಬಸವಣ್ಣನವರನ್ನು ಕೊಂಡಾಡಿದ್ದು ಸಹಜವೇ ಆಗಿದೆ.

ವೀರಶೈವ ಪದವು ಬಂದು ಸೇರಿದ್ದು ಹೇಗೆ ? ಧರ್ಮಗುರು ಬಸವಣ್ಣನವರು ತಾವು ರೂಪಿಸಿಕೊಟ್ಟ ವಚನ ಸಾಹಿತ್ಯದ ಮೂಲಕ ಪ್ರತಿಪಾದಿಸಿದ ಸಮಗ್ರ ಧರ್ಮಕ್ಕೆ 'ಲಿಂಗಾಯತ', 'ಲಿಂಗವಂತ' ಎಂದು ಹೆಸರನ್ನಿಟ್ಟರು. ಲಿಂಗಧಾರಿ, ಲಿಂಗ ಲಾಂಛನಧಾರಿ, ಲಿಂಗವತಿ, ಲಿಂಗಾಂಗಿ, ಲಿಂಗನೇಮಿ ಹೀಗೆ 'ಲಿಂಗ' ಪದವನ್ನೇ ಮುಖ್ಯವಾಗಿ ಇಟ್ಟುಕೊಂಡು ಬಳಸಿದ್ದಾರೆ. ತಮ್ಮ ಧರ್ಮಕ್ಕೆ ವೀರಶೈವ ಎಂದು ಎಲ್ಲಿಯೂ ಕರೆದಿಲ್ಲ, ಲಭ್ಯವಿರುವ ವಚನ 1393ರಲ್ಲಿ ಹೆಚ್ಚಾಗಿ ವೀರಶೈವ ಪದ ಬಂದಿಲ್ಲ. ಹೆಚ್ಚಿನ ವಚನಗಳಲ್ಲಿ ಒಂದೇ ಒಂದ (ಬ.ಷ.ಹೆ.ವ 1174) ರಲ್ಲಿ ಬಂದಿದೆ, ಅದೂ ಖಂಡನಾತ್ಮಕವಾಗಿ, ಕರ್ನಾಟಕ ಸರ್ಕಾರದವರು ಮುದ್ರಿಸಿರುವ ವಚನ ಸಂಪುಟಗಳಲ್ಲಿ ಮೊದಲನೆಯದು ಧರ್ಮಕರ್ತ ಬಸವಣ್ಣನವರದು. ಇದರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆಗಿಂತ ಕೆಲವು ಹೆಚ್ಚು ಸೇರಿವೆ. ಆದರೆ ಅವುಗಳ ಸಡಿಲತೆ, ಅಸಂಬದ್ಧತೆ ನೋಡಿದರೆ ಬಸವಣ್ಣನವರ ವಚನಗಳು ಅಲ್ಲವೆಂದು ಸಾಮಾನ್ಯ ಓದುಗರಿಗೂ ತಿಳಿದು ಬರುತ್ತದೆ. ಹೀಗಾಗಿ ರೇಷನ್ ಅಕ್ಕಿ ಎಂದರೆ ಕೆಲವು ಜನ ಮೂಗೆಳೆಯುವಂತೆ ಸರ್ಕಾರಿ ಪ್ರಕಟಣೆ ಬಗ್ಗೆ ಸಹ ಮೂಗೆಳೆಯುವಂತೆ ಆಗಿದೆ. ಪಾಪ! ತಪ್ಪು ಸರ್ಕಾರದಲ್ಲ, ಸಂಪಾದನೆ ಮಾಡಿರುವ ವಿದ್ವಾಂಸರದು. ಪ್ರಭುದೇವರು ತಮ್ಮ 1409 ವಚನಗಳಲ್ಲಿ ವೀರಶೈವ ಪದವನ್ನು ಎಲ್ಲಿಯೂ ಬಳಸಿಲ್ಲ. ಸಿದ್ದರಾಮೇಶ್ವರರ ವಚನಗಳಲ್ಲಿ ಮೂರು ಬಾರಿ, ಚೆನ್ನಬಸವಣ್ಣನ ವಚನಗಳಲ್ಲಿ ಬಹಳ ಸಲ ಬಂದಿದೆ. ಸದ್ಯ ಬಹಳಷ್ಟು ಅಶುದ್ಧಗೊಳಿಸಲ್ಪಟ್ಟ ವಚನಗಳೆಂದರೆ ಚನ್ನಬಸವಣ್ಣನವೇ ಆಗಿವೆ. ಇದಕ್ಕೆ ಕಾರಣ ಎರಡು ಇರಬಹುದು.

1. ಧರ್ಮಪಿತರು, ಪ್ರಭುದೇವರು, ಸಿದ್ಧರಾಮದೇವರು, ಮುಂತಾದವರು ಸೈದ್ಧಾಂತಿಕ ವಿಷಯಗಳನ್ನು ಹೆಚ್ಚು ಪ್ರತಿಪಾದಿಸಿದ್ದಾರೆ. ಮತ -ಆಚರಣೆಗೆ ಸಂಬಂಧಿಸಿದ ವಚನಗಳು ಬರುವುದು ಹೆಚ್ಚಾಗಿ ಚನ್ನಬಸವಣ್ಣನವರಲ್ಲಿ ಆ ವೀರಶೈವರು ಹೆಚ್ಚು ಕರ್ಮಾಚಾರಗಳಲ್ಲಿ ಆಸಕ್ತರು. ಹೀಗಾಗಿ ಚನ್ನಬಸವಣ್ಣನವರ ಬಾಯಿಯಲ್ಲಿ ತಮ್ಮ ಅನೇಕ ವಿಚಾರಗಳು ಹೊರಬೀಳಬೇಕೆಂಬ ದುರಾಲೋಚನೆಯಿಂದ ಆ ವಚನಗಳ ಮೇಲೆಯೇ ಜಾಸ್ತಿ ಕೈಯಾಡಿಸಿದ್ದಾರೆ.

2. ಮೇಲೆ ಸೂಚಿಸಿದ ಮೂವರು ಶರಣರ ವಚನಗಳು ಬಹಳ ಬಿಗಿಯಿಂದ ಕೂಡಿವೆ. ಚನ್ನಬಸವಣ್ಣನವರವು ಸಡಿಲವಾಗಿ ಗದ್ಯರೂಪದಲ್ಲಿ ಹರಿಯುತ್ತವೆ. ಹೀಗಾಗಿ ಇವರ ಹೆಸರಿನಲ್ಲಿ ವಚನಗಳನ್ನು ಬರೆದು ಸೇರಿಸುವುದು ಸುಲಭವಾಗಿ ಕೃತ್ರಿಮ ಬರಹಗಾರರಿಗೆ ಸಾಧ್ಯವಾಗಿದೆ.

3. ಷಟ್‌ಸ್ಥಲ ಜ್ಞಾನಿ ಚೆನ್ನಬಸವಣ್ಣನವರೇ ವಚನ ಶಾಸ್ತ್ರವನ್ನು ಪರಿಶೀಲಿಸಿ ಅಂತಿಮ ಮುದ್ರೆ ಒತ್ತುತ್ತಿದ್ದರು. ಹೀಗಾಗಿ ಅವರ ಮಾತು ಅಧಿಕೃತವಾದ ಕಾರಣ ವೀರಶೈವವಾದಿಗಳು ತಮಗೆ ಬೇಕಾದಂತೆ ವಚನಗಳನ್ನು ಹೆಣೆದು ತೋರಿಸಿದ್ದಾರೆ. ಇಲ್ಲಿಯವರೆಗೆ ನಾನು ವಿವರಿಸಿರುವ ವೀರಶೈವದ ಹಿನ್ನೆಲೆಯಲ್ಲಿ ಎರಡು ವಚನಗಳನ್ನು ಉದಾಹರಿಸುವೆ.

ಶ್ರೀಗುರುವಾದಾತನು ಸಕಲಾಗಮಂಗಳ ಹೃದಯವನರಿದು
ತನ್ನ ತಾನರಿದು ಸರ್ವಾಚಾರ ತನ್ನಲ್ಲಿ ನೆಲೆಗೊಂಡು
ಉಪದೇಶ ಮಾಡುವ ಕ್ರಮವೆಂತೆಂದಡೆ
ಬ್ರಾಹ್ಮಣನ ಮೂರು ವರ್ಷ ನೋಡಬೇಕು
ಕೃತಿಯನ ಆರು ವರ್ಷ ನೋಡಬೇಕು
ವೈಶ್ಯನ ಒಂಭತ್ತು ವರ್ಷ ನೋಡಬೇಕು
ಶೂದ್ರನ ಹನ್ನೆರಡು ವರ್ಷ ನೋಡಬೇಕು
ನೋಡಿದಲ್ಲದೆ ದೀಕ್ಷೆಯ ಕೊಡಲಾಗದು ವೀರಾಗಮೇ
ಬ್ರಾಹ್ಮಣ: ಸ್ತ್ರೀಣಿ ವರ್ಷಾಣಿ ಷಡಬು ಕ್ಷತ್ರಿಯಂ ತಥಾ
ವೈಶ್ಯಂ ನವಾಬ್ದಮಾಖ್ಯಾತಂ ಶೂದ್ರಂ ದ್ವಾದಶವರ್ಷಕಂ ||
ಈ ಕ್ರಮವನರಿಯದ ಉಪಾಧಿವಿಡಿದು ಉಪದೇಶವ ಮಾಡುವಾತ ಗುರುವಲ್ಲ ಉಪಾಧಿವಿಡಿದು ಉಪದೇಶವ ಮಾಡಿಸಿಕೊಂಬಾತ ಶಿಷ್ಯನಲ್ಲ
ಇವರಿಬ್ಬರ ನಿಲುವು ಒಂದೇ, ಠಕ್ಕನೆ ಮನೆಗೆ ಠಕ್ಕ ಬಿದ್ದಿನ ಬಂದಂತೆ
ಕೂಡಲ ಚೆನ್ನಸಂಗಮದೇವ (633)

ಈ ವಚನ ಓದಿದಾಗ ಬಸವಾದಿ ಪ್ರಮಥರ ವಿಚಾರಧಾರೆಗೆ ಇದು ಪೂರ್ಣವಾಗಿ ವಿರುದ್ಧವಿದೆ ಎನ್ನಿಸದಿರದು. ಬ್ರಾಹ್ಮಣನನ್ನು 3 ವರ್ಷಕಾಲ ಕ್ಷತ್ರಿಯನನ್ನು 6 ವರ್ಷಕಾಲ, ವೈಶ್ಯನನ್ನು 9 ವರ್ಷಕಾಲ, ಶೂದ್ರನನ್ನು 12 ವರ್ಷಕಾಲ ಪರೀಕ್ಷಿಸಿ ದೀಕ್ಷೆ ಕೊಡುವವನೇ ನಿಜ ಗುರುವು ಎಂಬ ಆಲೋಚನೆ ಸರಿಯೆ ? ಇದನ್ನು ಸಾಮಾನ್ಯ ದೀಕ್ಷೆ ಎನ್ನುವುದಾದರೆ, ಧರ್ಮದ ಕರ್ತವ್ಯ ಎಲ್ಲ ಮಾನವರಿಗೂ ದೀಕ್ಷೆ ಕೊಡಲೇಬೇಕು. ಓರ್ವ ವಿದ್ಯಾರ್ಥಿ ದಡ್ಡನೋ ಜಾಣನೋ ಎಂದು ಪರೀಕ್ಷಿಸಿ ಶಾಲೆಗೆ ಪ್ರವೇಶ ಕೊಡುವಂತಿಲ್ಲ. ಎಲ್ಲರಿಗೂ ಪ್ರವೇಶ ಕೊಡಲೇಬೇಕು. ಇನ್ನು ಮೇಲೆ ಹೇಳಿದ ದೀಕ್ಷೆ ಸನ್ಯಾಸ ದೀಕ್ಷೆ ಎನ್ನುವುದಾದರೆ ಜಾತಿ-ವರ್ಣ ಹಿಡಿದು ಏಕೆ ದೀಕ್ಷೆ ಕೊಡಬೇಕು? ಬ್ರಾಹ್ಮಣರಲ್ಲಿ ರಾಜಸಿಕ, ತಾಮಸಿಕ ವ್ಯಕ್ತಿ ಇರಬಹುದು. ಶೂದ್ರರಲ್ಲಿ ಸಾತ್ವಿಕ ವ್ಯಕ್ತಿ ಇರಬಹುದು. ಐದನೆಯ ವರ್ಣದವನಾದ ಅಂತ್ಯಜನ ಬಗ್ಗೆ ಇಲ್ಲಿ ಪ್ರಸ್ತಾಪವೇ ಇಲ್ಲ. ಧರ್ಮಗುರು ಬಸವಣ್ಣನವರು ಎಲ್ಲರಿಗೂ ದೀಕ್ಷೆ ನೀಡಿ ಹುಲುಸಾದ ಶರಣಬೆಳೆ ತೆಗೆದರು. ಅವರನ್ನೆಲ್ಲ 3,6,9,12 ವರ್ಷ ಪರೀಕ್ಷಿಸುತ್ತ ಕುಳಿತಿದ್ದರೆ ಅಂಥ ಬೃಹತ್ ಸಮೂಹವನ್ನು ಬೆಳೆಸಲು ಸಾಧ್ಯವಿತ್ತೆ? ಧರ್ಮಗುರು ಬಸವಣ್ಣ ಹಾಕಿ ಕೊಟ್ಟ ಪಥದಲ್ಲಿ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಡೆದ ಚನ್ನಬಸವಣ್ಣ ಈ ವಚನದ ಮೂಲಕ ಲಿಂಗಾಯತ ಧರ್ಮದ ಮೂಲ ಸಿದ್ಧಾಂತವನ್ನು ವಿರೋಧಿಸಲು ಸಾಧ್ಯವೆ ?

ಅಂಥ ಇನ್ನೊಂದು ವಚನ ನೋಡಿ :

ತೆಂಗಿನೊಳಗಣ ತಿರುಳು ಸೇವಿಸಬರ್ಪುದಲ್ಲದೆ
ಹೊರಗಣ ಪರಟೆ ಸೇವಿಸಲು ಬಾರದು
ಚಾಂಡಾಲಂಗೆ ಜ್ಞಾನವಂಕುರಿಸಿದಡೆ
ಆತನ ಅಂತರಂಗದ ವೃತ್ತಿಗೆ ಪೂಜ್ಯತೆಯಲ್ಲದೆ
ಬಹಿರಂಗದ ವೃತ್ತಿಗೆ ಪೂಜ್ಯತೆಯಿಲ್ಲ
ಬಹಿರಂಗದ ತನುವಿಗೆ ಪೂಜ್ಯತೆಯಾಗದು
ಒಳಹೊರಗೆಂಬ ಭೇದವಿಲ್ಲದೆ ಸೇವಿಸಲುಚಿತವಂತೆ
ಶಿವಕುಲ ಪ್ರಸೂತರಿಗೆ ಶಿವಜ್ಞಾನವಾಗಲು
ಆತನ ತನು ವೃತ್ತಿಗಳೆರಡೂ ಸೇವ್ಯವಾಗಿರ್ಪವು
ಇಂತಿದು ಸಾಧಕರ ಸ್ಥಿತಿಯಯ್ಯ ಕೂಡಲ ಚೆನ್ನಸಂಗಮದೇವಾ.

ಈ ವಚನ ಬಹಳ ಆಪಾಯಕಾರಿ, ಶರಣರಿಗೆ ಅನೇಕ ಅಪವಾದಗಳನ್ನು ಹೇರುವುದು. ದಾಸಿ ಪುತ್ರನಾಗಲೀ, ವೇಶ್ಯಾಪುತ್ರನಾಗಲೀ ಜ್ಞಾನಿಯಾದಾಗ ಅವನನ್ನು ಗೌರವಿಸಬೇಕು. ಅಗೌರವ ತೋರಬಾರದು ಎಂಬ ಶರಣ ಸಿದ್ಧಾಂತಕ್ಕೆ ವಿರುದ್ಧವಾಗಿ ಈ ವಚನವಿದೆ. ಮನುಷ್ಯನ ಹುಟ್ಟಿನಲ್ಲೇ ಪವಿತ್ರತೆ - ಅಪವಿತ್ರತೆ ಹುಡುಕುವುದು ಶರಣರಿಗೆ ಸರಿಬರದ ವಿಚಾರ. ವ್ಯಕ್ತಿಯ ಹುಟ್ಟು ಹೇಗೇ ಇರಲಿ, ಅವನು ಮಾನವ ಜೀವಿ; ಸಂಸ್ಕಾರದಿಂದ ಶರಣನಾಗುವನು. ಅದನ್ನು ಚನ್ನಬಸವಣ್ಣನವರು ಹೀಗೆ ಹೇಳಿದ್ದಾರೆ.

ಗುರುಹಸ್ತದೊಳು ಪುನರ್ಜಾತನಾದ ಭಕ್ತನಲ್ಲಿ
ಆವ ಜನ್ಮ ಜಾತಿಯ ಬೆದಕಲಪ್ಪುದು ?
ಅವೆಲ್ಲ ಪ್ರಾಕೃತರಿಗಲ್ಲದೆ ಅಪ್ರಾಕೃತರಿಗುಂಟೆ ಹೇಳಾ ?
ನಿಮ್ಮ ಶರಣರಲ್ಲಿ ಜಾತಿಯ ಹುಡುಕುವ
ಕಡು ಪಾತಕಿಗಳ ಎನ್ನತ್ತ ತೋರದಿರಯ್ಯಾ
ಕೂಡಲ ಚನ್ನಸಂಗಮದೇವಾ (194)

ಈ ವಚನ ಶರಣರ ವಿಚಾರಧಾರೆಗೆ ಬದ್ಧವಾಗಿದ್ದರೆ, ಮೇಲಿನ ವಚನ ಶರಣರ ವಿಚಾರಧಾರೆಗೆ ವಿರುದ್ಧವಾಗಿದೆ. ಆದ್ದರಿಂದ ವಚನಗಳನ್ನು ಪರಿಶೀಲಿಸುವಾಗ ಸೈದ್ಧಾಂತಿಕ ಜಾಗೃತಿ ಅತ್ಯಗತ್ಯ.

ವಚನಗಳಲ್ಲಿ ವೀರಶೈವ ಪದ ಬಂದ ಮಾತ್ರಕ್ಕೆ ಲಿಂಗಾಯತ ಧರ್ಮವು ವೀರಶೈವವಾಗದು. ವೀರಶೈವ ಮೂಲದಿಂದ ಬಂದಂತಹ ಕೆಲವರು ತಮ್ಮ ಮೊದಲಿನ ಹೆಸರು ಉಳಿಸಿಕೊಳ್ಳಲು ಯತ್ನಿಸಿದ್ದರಿಂದ ಮಡಿವಾಳ ಲಿಂಗಾಯತರು, ರೆಡ್ಡಿ ಲಿಂಗಾಯತರು, ಬಣಜಿಗ ಲಿಂಗಾಯತರು ಎಂಬಂತೆ ವೀರಶೈವ - ಲಿಂಗಾಯತರು ಎಂಬ ಪ್ರಯೋಗ ಬಳಕೆಯಲ್ಲಿ ಬಂದಿತು. ಹಾಗೆ ಬಂದು ಸೇರಿದ ವೀರಶೈವರು ತಮ್ಮ ವಂಶದ ಬಗ್ಗೆ ಮೇಲ್ಮನದ ಬಗ್ಗೆ ಹಮ್ಮು ತೋರಿಸತೊಡಗಿದಾಗ ಚನ್ನಬಸವಣ್ಣ, ಸಿದ್ಧರಾಮೇಶ್ವರರು ಕಟುವಾಗಿ ಟೀಕೆ ಮಾಡಿರುವುದನ್ನು ಕಾಣುತ್ತೇವೆ.

ಹುಟ್ಟು - ವಂಶಗಳಿಂದಲೇ ಶ್ರೇಷ್ಠರೆಂದು ಬೀಗುವ ವೀರಶೈವರಿಗೆ ಈ ಬುದ್ದಿವಾದವಿದೆ.

ವೀರಶೈವನಾದಡೆ ಪರಧನವ ಪರಸತಿಯರ ಮುಟ್ಟದಿರಬೇಕು
ಎಂತೂ ಪರಹಿಂಸೆಯನರಗದಿರಬೇಕು
ಒಡಲದಡೆಯೂ ಹಿಡಿದಾಚಾರವ ಬಿಡದಿರಬೇಕು
ಇಂತೀ ವೀರಾಚಾರವು ನೆಲೆಗೊಳ್ಳದೆ
ವೀರ ವಂತದಲ್ಲಿ ಹುಟ್ಟಿದ ಮಾತ್ರಕ್ಕೆ ವೀರಶೈವನೆಂತಪ್ಪರಯ್ಯಾ
ಕೂಡಲ ಚನ್ನಸಂಗಮದೇವಾ ? (228)

ವಂಶದ ಶ್ರೇಷ್ಠತೆಯನ್ನು ಪ್ರತಿಪಾದಿಸುವ ವೀರಶೈವರಿಗೆ ಬುದ್ದಿ ಹೇಳಿರುವ ಚೆನ್ನಬಸವಣ್ಣನವರು ವೀರಶೈವರು ತಮ್ಮ ಹಳೆಯ ಕೊಳೆಯನ್ನು ಹೊಸ ಧರ್ಮದೊಳಗೆ ತೂರಿಸುತ್ತಿರುವುದನ್ನು ಕಂಡು ಆಕ್ರೋಶಗೊಳ್ಳದೆ ಇರರೆ ? ಆದರೆ ವೀರಶೈವರು ಚಾಣಾಕ್ಷಮತಿಗಳು, ಚೆನ್ನಬಸವಣ್ಣನ ಹೆಸರಲ್ಲೇ ಅಂಥದೊಂದು ವಚನ ಸೃಷ್ಟಿಸಲು ಹಿಂಜರಿಯಲಿಲ್ಲ.

ಪುಣ್ಯತೀರ್ಥ ಕ್ಷೇತ್ರಂಗಳಲ್ಲಿ ತಂದ ಶಿಲೆಯ
ಪರೀಕ್ಷಿಸಿ ಸಂಸ್ಕಾರಂಗೈಯಲು
ಅದು ಲಿಂಗವಾಗಿಪ್ಪುದಯ್ಯಾ
ಸದ್ವಂಶೀಯರಾದ ವಟುಗಳ ಪರೀಕ್ಷಿಸಿ ಸಂಸ್ಕಾರಂಗೈಯಲು ಗುರುಜಗಮವಾಗಿರ್ಪರಯ್ಯಾ
ಇಂತಹುದನಾರೈಯದೆ, ಸಂಸ್ಕಾರ ವಿರಹಿತ
ಗುರುಲಿಂಗ ಜಂಗಮವ ಪೂಜಿಸುವ
ಅರೆಮರುಳರನೆನಗೊಮ್ಮೆ ತೋರದಿರಯ್ಯಾ
ಕೂಡಲ ಚೆನ್ನಸಂಗಮದೇವಾ ? (418)

ಈ ವಚನ ಪೂರ್ತಿ ದೋಷಪೂರ್ಣ, ಮೇಲಿನ ವಚನಕ್ಕೆ ತದ್ವಿರುದ್ಧ ಯಾವುದನ್ನೂ ಶರಣರು ಪುಣ್ಯತೀರ್ಥ, ಪುಣ್ಯ ಕ್ಷೇತ್ರ ಎನ್ನರು ; ಅಲ್ಲಿಂದ ತರುವ ಶಿಲೆಯನ್ನು ವಿಶೇಷವೆನ್ನರು ಯಾವುದೇ ಕಲ್ಲು ಇರಲಿ ಅದನ್ನು ಕಡೆದು ಸಂಸ್ಕಾರ ಕೊಟ್ಟರೆ ಸಾಕು ಎನ್ನುತ್ತಾರೆ. ಯಾವುದೇ ವಂಶ ಸದ್ವಂಶ ಎನ್ನರು, ಸಾಧನೆಯು ವೈಯಕ್ತಿಕ. ಗುರು, ಜಂಗಮತ್ವ ಜಾತಿಗಳಾಗಿ ವಿಕೃತಗೊಂಡಾಗ ಯಾರೋ ಬರೆದು ಸೇರಿಸಿರುವ ವಚನವಿದು. ವೀರಶೈವ ಗುರುಗಳು ಯಾರಿಗೇ ಆಗಲಿ ದೀಕ್ಷೆ ಕೊಟ್ಟರೂ, ಅವರೊಡನೆ ಸಮಾನತೆಯಿಂದ ನಡೆದುಕೊಳ್ಳದೆ ಇರುವುದನ್ನು ಹೀಗೆ ಚನ್ನಬಸವಣ್ಣನವರು ಖಂಡಿಸುತ್ತಾರೆ.

ಕುಲಹೀನ ಶಿಷ್ಯಂಗೆ ಅನುಗ್ರಹವ ಕೊಟ್ಟು
ತನ್ನ ಪ್ರಾಣಲಿಂಗವ ನಿಕ್ಷೇಪಿಸಿ, ಕರ್ಣದಲ್ಲಿ ಮಂತ್ರವ ಹೇಳಿ
ಆ ಶ್ರೀ ಗುರು ಬಂದು ಆ ಶಿಷ್ಯನ ಮನೆಯ ಹೊಗಲೊಲ್ಲದೆ
ಅಕ್ಕಿತುಪ್ಪವನೀಸಿಕೊಂಬುವನ ಕೇಡಿಂಗ ಇನ್ನೇವೆನಯ್ಯಾ ?
ಅವನ ಧನಕ್ಕೆ ತಂದೆಯಾದನಲ್ಲದೆ ಅವನಿಗೆ ತಂದೆಯಾದುದಿಲ್ಲ
ಇದು ಕಾರಣ, ಕೂಡಲ ಚೆನ್ನಸಂಗಯ್ಯಾ
ಈ ಲಿಂಗವ ಮಾರಿಕೊಂಡುಂಬುವ ಭಂಗಗಾರರು
ಕೆಟ್ಟಕೇಡನೇನೆಂಬೆನಯ್ಯಾ !

ವೀರಶೈವರಲ್ಲಿದ್ದ ಒಂದು ಆಚರಣೆ ಕುಲಹೀನ ಶಿಷ್ಯನಿಗೆ ಅನುಗ್ರಹ ಕೊಟ್ಟು ಅವನ ಮನೆಗೆ ಹೋಗದೆ ಅಕ್ಕಿ, ಬೇಳೆ, ಬೆಲ್ಲ, ತುಪ್ಪ ಮುಂತಾದ ಪದಾರ್ಥಗಳನ್ನು ಪಡೆದು ಉಣ್ಣುವುದನ್ನು ಚನ್ನಬಸವಣ್ಣನವರು ಖಂಡಿಸುತ್ತಾರೆ.

ಕುಲದಲ್ಲಿ ಶೂದ್ರನಾದಡೇನು ?
ಮನದಲ್ಲಿ ಮಹಾದೇವ ನೆಲೆಗೊಂಡವನೇ ವೀರಶೈವ ನೋಡಾ

ಎಂದು ಸಿದ್ದರಾಮೇಶ್ವರರು (517) ಹೇಳುತ್ತಾರೆ. ಇದೂ ಸಹ ವೀರಶೈವರು ಶೂದ್ರರಿಗೆ ಲಿಂಗಧಾರಣೆ ಮಾಡಿದರೂ ಸಹ ಕಡೆಗಣ್ಣಿನಿಂದ ನೋಡುತ್ತಿದ್ದುದಕ್ಕೆ ಟೀಕೆಯಾಗಿದೆ.

ಧರ್ಮಪಿತ ಬಸವಣ್ಣನವರ ಹೆಚ್ಚಿನ ವಚನಗಳ ವಿಭಾಗದಲ್ಲಿ ಒಂದೇ ಒಂದು ವಚನ (1124)ದಲ್ಲಿ ವೀರಶೈವ ಪದ ಉಲ್ಲೇಖವಾಗಿದೆ. (ಸರ್ಕಾರವು ಮುದ್ರಿಸಿರುವ ವಚನ ಸಂಪುಟಗಳಲ್ಲಿ ಮೊದಲನೆಯ ವಚನ ಸಂಪುಟ ಬಸವಣ್ಣನವರದಾಗಿದ್ದು, ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆಗಿಂತ ಹೆಚ್ಚಿನ ವಚನಗಳಿದ್ದರೂ, ತುಂಬಾ ಅಶುದ್ಧವಾಗಿರುವುದಲ್ಲದೆ ಬೇರೆಯವರ ವಚನಗಳು ಬಂದು ತೂರಿವೆ. ಈ ಕೃತಿಯಲ್ಲಿ ಕಾಣಬರುವ 3-4 ವಚನಗಳಲ್ಲಿ 'ವೀರಶೈವ' ಉಲ್ಲೇಖವಿದ್ದರೂ ವಚನಗಳನ್ನು ಓದುತ್ತಲೇ ಇವು ಬಸವಣ್ಣನವರದು ಅಲ್ಲವೇ ಅಲ್ಲ ಎನ್ನಿಸುತ್ತದೆ.

ಅಂಗಲಿಂಗ ಸಂಗಸುಖಸಾರಾಯದನುಭಾವ
ಲಿಂಗವಂತಂಗಲ್ಲದ ಸಾಧ್ಯವಾಗದು ನೋಡಾ !
ಏಕಲಿಂಗಪರಿಗ್ರಾಹಕನಾದ ಬಳಿಕ
ಆ ಲಿಂಗನಿಷ್ಠೆ ಗಟ್ಟಿಗೊಂಡು
ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ,
ವೀರಶೈವಸಂಪನ್ನನೆನಿಸಿ ಲಿಂಗವಂತನಾದ ಬಳಿಕ
ತನ್ನ ಲಿಂಗಸಂಬಂಧಕ್ಕನ್ಯವಾದ ಜಡ ಭೌತಿಕ ಪ್ರತಿಷ್ಠೆಯುಳ್ಳ
ಭವಿಶೈವೈವಕ್ಷೇತ್ರ ತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ
ಮನದಲ್ಲಿ ನೆನೆಯಲಿಲ್ಲ ಮಾಡಲೆಂತೂ ಬಾರದು !
ಇಷ್ಟೂ ಗುಣವಳವಟ್ಟಿತ್ತಾದಡೆ
ಆತನೀಗ ಏಕಲಿಂಗನಿಷ್ಠಾಚಾರಯುಕ್ತನಾದ ವೀರಮಾಹೇಶ್ವರನು
ಇವರೊಳಗೆ ಅನುಸರಿಸಿಕೊಂಡು ನಡೆದನಾದಡೆ
ಗುರುಲಿಂಗ ಜಂಗಮಪಾದೋದಕ ಪ್ರಸಾದ ಸದ್ಬಕ್ತಿಯುಕ್ತವಾದ
ಷಡುಸ್ಥಲಕ್ಕೆ ಹೊರತಾಗಿ ನರಕಕ್ಕಿಳಿವನ್ನು ಕಾಣಾ
ಕೂಡಲ ಸಂಗಮದೇವಾ.

ಈ ವಚನವನ್ನು ವಿಶ್ಲೇಷಿಸೋಣ. ಅಂಗಲಿಂಗವೆಂದರೆ ಇಷ್ಟಲಿಂಗ. ಇದರ ದಿವ್ಯ ಸುಖ, ಅನುಭಾವ ಲಿಂಗವಂತರಿಗೆ ಮಾತ್ರ ಸಾಧ್ಯವಾಗುವಂತಹುದು. ಲಿಂಗಾಯತ ಧರ್ಮವನ್ನು ಸ್ವೀಕರಿಸುವುದೆಂದರೆ ಏಕಲಿಂಗ ಪರಿಗ್ರಾಹಕನಾಗಬೇಕು, ಅದರಲ್ಲಿ ನಿಷ್ಠೆ ಕರಿಗೊಳ್ಳಬೇಕು, ಕೇವಲ ತನ್ನ ಇಷ್ಟಲಿಂಗಕ್ಕೆ ಉಪಚಾರ ಮಾಡಬೇಕು. ಅರ್ಪಿಸಿ ಪ್ರಸಾದ ಸ್ವೀಕರಿಸಬೇಕು. ತಾವು ವೀರಶೈವ ಸಂಪನ್ನರು, ಶ್ರೇಷ್ಠರು ಎಂದು ಬೀಗುವ ದೀಕ್ಷಿತರು ಲಿಂಗವಂತರಾದ ಬಳಿಕ, ತನ್ನ ಅಂಗಲಿಂಗ ಹೊರತಾಗಿ ಅನ್ಯ ಜಡ ಭೌತಿಕ ಪ್ರತಿಷ್ಠೆಯನ್ನುಳ್ಳ ಭವಿಶೈವ ದೈವ, ಭವಿಶೈವ ಕ್ಷೇತ್ರ ಭವಿಶೈವ ತೀರ್ಥಂಗಳಿಗೆ ಹೋಗಬಾರದು. ವಿವಿಧ ಕ್ಷೇತ್ರಗಳಲ್ಲಿರುವ ಶಿವಲಿಂಗಗಳೆಲ್ಲವೂ ಶಿವನ ಪ್ರತೀಕವೇ ಎಂದು ಭಾವಿಸಬಾರದು. ಏಕೆಂದರೆ ಸ್ಥಾವರಲಿಂಗ ಶಿವನ ಪ್ರತೀಕವಾದರೆ ಅಂಗಲಿಂಗವು ದೇವರ ಕುರುಹು, ಹಲವು ಲಿಂಗಗಳ ಅರ್ಚನೆ, ನೆನೆಯುವಿಕೆ ಮಾಡಬಾರದು. ಪುನಃ ಅವುಗಳಿಗೆ ಹೊಂದಿಕೊಂಡು ನಡೆದರೆ ಗುರು - ಲಿಂಗ - ಜಂಗಮ -ಪಾದೋದಕ - ಪ್ರಸಾದಗಳೆಂಬ ಷಡಂಗಗಳಿಂದ ಕೂಡಿದ ಷಟ್‌ ಸ್ಥಲಕ್ಕೆ ಹೊರಗಾಗುವನು. ವೀರಶೈವರು ಏಕದೇವತಾ (ಶಿವ) ಉಪಾಸಕರು, ಲಿಂಗಾಯತರು ಏಕದೇವ ಉಪಾಸಕರು.

ವಚನಗಳಲ್ಲಿ 'ವೀರಶೈವ' ಪ್ರಯೋಗವಿದೆ ಎಂದು ಹಿಗ್ಗಿ ಹಿಗ್ಗಿ ಹೇಳುವವರು ಅದನ್ನು ಖಂಡನಾತ್ಮಕವಾಗಿ ಬರೆಯಲಾಗಿದೆ ಎಂಬುದನ್ನು ಗಮನಿಸಬೇಕು. ಶರಣರ ಹೊಗಳಿಕೆಯೋ ತೆಗಳಿಕೆಯೋ ಎಂಬುದನ್ನು ಅರ್ಥಮಾಡಿಕೊಳ್ಳದಿದ್ದರೆ ಹೇಗೆ ? ಮತ್ತೆ ಕೆಲವಂತೂ ಕೃತ್ರಿಮ ಬರಹಗಳು.

ಹಿಂದೂ - ವೀರಶೈವ

ಚಿಕ್ಕಮಗಳೂರಿನಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಅಧ್ಯಕ್ಷೀಯ ಆಶಯ ಭಾಷಣದಲ್ಲಿ ಡಾ|| ಚಿದಾನಂದ ಮೂರ್ತಿಯವರು ಲಿಂಗಾಯತರಿಗೆ 'ಹಿಂದೂ ವೀರಶೈವ'' ಎಂದು ಜನಗಣತಿಯಲ್ಲಿ ಬರೆಸಲು ಕರೆ ನೀಡಿದರು. (ಪುಟ 5)

ಮೊದಲು ಹಿಂದುತ್ವದ ವ್ಯಾಖ್ಯಾನ ಅವರು ಮಾಡಬೇಕು. ಹಿಂದು ಒಂದು ಧರ್ಮವಾಗಿ ವೀರಶೈವ ಅದರೊಳಗಣ ಪಂಥ (ಅಥವಾ ಜಾತಿಮತ)ವೆ ? ವೀರಶೈವವು ವೈದಿಕ ಮತವಾದ್ದರಿಂದ ಅವರ ಹೇಳಿಕೆ ಸರಿ. ಆದರೆ ಇಂಥ ವಿಚಾರವನ್ನು ಬಸವ ಭಕ್ತರು ಖಂಡಿತಾ ಒಪ್ಪುವುದಿಲ್ಲ. ವೀರಶೈವ ಮತ್ತು ಲಿಂಗಾಯತರನ್ನು ಸಮೀಕರಿಸಬಾರದು, ಸಮಾನಾರ್ಥಕ ಪದಗಳನ್ನಾಗಿ ಬಳಸಲೇ ಕೂಡದು. ಲಿಂಗಾಯತರು ಸಾಂಸ್ಕೃತಿಕವಾಗಿ ಹಿಂದುಗಳೇ ವಿನಾ ಧಾರ್ಮಿಕವಾಗಿ ಅಲ್ಲ ಬಟ್ಟೆ ತೊಡುವಿಕೆ, ಮಾಂಗಲ್ಯ-ಬಳ-ಕಾಲುಂಗುರ, ಸನ್ಯಾಸಿಗಳು ತೊಡುವ ಕಾವಿ, ನಮಸ್ಕರಿಸುವ ಪದ್ಧತಿ ಮುಂತಾದವು ಹಿಂದು ಸಂಸ್ಕೃತಿಗೆ ಒಳಪಟ್ಟವು. ಆದರೆ ಹಿಂದೂ ಸಮಾಜ ಶಾಸ್ತ್ರವು ವರ್ಣಾಶ್ರಮ ಪದ್ಧತಿಯನ್ನು ಮನ್ನಿಸುತ್ತದೆ ಅಂದಾಗ ಇಷ್ಟಲಿಂಗಧಾರಿ ಲಿಂಗಾಯತರು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಮತ್ತು ಪಂಚಮ ವರ್ಣವಾದ ಅಂತ್ಯಜರೆಂಬ ವರ್ಗಿಕರಣದಲ್ಲಿ ಸೇರಬೇಕಾಗುವ ಅನಿವಾರ್ಯತೆ ಒದಗುತ್ತದೆ. ಡಾ|| ಚಿದಾನಂದ ಮೂರ್ತಿಯವರು ಸಮಾಜ ಘಾತುಕತನದ ಕೆಲಸ ಮಾಡಿದ್ದಾರೆ ಎನ್ನದೆ ಗತ್ಯಂತರವಿಲ್ಲ.

ಲಿಂಗಾಯತವು ಸ್ವತಂತ್ರ ಧರ್ಮ

ಹಿಂದುವು ಒಂದು ಸ್ವತಂತ್ರ ಧರ್ಮವಲ್ಲ ಅದು ಹಲವಾರು ಧರ್ಮಗಳ ಒಕ್ಕೂಟ ಎಂದು ವ್ಯಾಖ್ಯಾನಿಸಿದರೆ ಮಾತ್ರ ಜೈನ – ಬೌದ್ಧ ಲಿಂಗಾಯತ್ -ಸಿಖ್ ಧರ್ಮಗಳು ಹಿಂದು ಕಕ್ಷೆಯಲ್ಲಿ ಉಳಿಯುತ್ತವೆ ! ವಿಶ್ವಹಿಂದೂ ಪರಿಷತ್, ಹಿಂದೂ ಮಹಾಸಭಾ ಹೀಗೆಯೇ ವ್ಯಾಖ್ಯಾನಿಸುತ್ತವೆ. ಲಿಂಗಾಯತ ಧರ್ಮವು ತನ್ನದೇ ಆದ ತತ್ತ್ವಸಮೂಹವನ್ನು ಹೊಂದಿ ಸ್ವತಂತ್ರವಾಗಿದೆ
.
1. ಧರ್ಮಗುರು - ಮಂತ್ರಪುರುಷ ಬಸವಣ್ಣನವರು
2. ಧರ್ಮ ಸಂಹಿತೆ - ವಚನ ಸಾಹಿತ್ಯ
3. ಸಿದ್ಧಾಂತ - ಶೂನ್ಯ ಸಿದ್ಧಾಂತ
4, ಸಾಧನೆ - ಲಿಂಗಾಂಗಯೋಗ
5. ದರ್ಶನ - ಷಟಸ್ಥಲ
6. ಸಂಸ್ಕಾರ - ಇಷ್ಟಲಿಂಗದೀಕ್ಷೆ
7. ಸಮಾಜಶಾಸ್ತ್ರ - ಅತಿ ವರ್ಣಾಶ್ರಮ
8. ನೀತಿ ಶಾಸ್ತ್ರ - ಮಾನವೀಯತೆಯ ಸಮಾನತೆ.
9. ಅರ್ಥಶಾಸ್ತ್ರ - ಕಾಯಕ ದಾಸೋಹ
10. ಸಂಸ್ಕೃತಿ - ಅವೈದಿಕ ಸಂಸ್ಕೃತಿ
11. ಪರಂಪರೆ - ಬಸವಣ್ಣನವರೇ ಆದಿ ಪ್ರಮಥರಾಗಿ ಹರಿದು ಬಂದ ಶರಣ ಪರಂಪರೆ

ಲಿಂಗಾಯತವು ಈ 11 ಲಕ್ಷಣಗಳಿಂದ ಕೂಡಿದ ಸ್ವತಂತ್ರ ಧರ್ಮವಾಗಿದೆ. ವೀರಶೈವವು ಈ ಧರ್ಮಕ್ಕೆ ಹೊಂದದ ಪದ. ಅದು ಈ ಧರ್ಮ -ಸಮಾಜಗಳ ಸ್ಥಾನವನ್ನು ಕೆಳಗಿಳಿಸುತ್ತದೆ. ಹಿಂದು ಒಂದು ಬೃಹತ್‌ ವೃಕ್ಷ ಅದರಲ್ಲಿ ಶೈವ-ವೈಷ್ಣವ ಎರಡು ಕೊಂಬೆಗಳು, ಶೈವದಲ್ಲಿ ಏಳು ಟಿಸಿಲುಗಳು. ಅದರಲ್ಲಿ ವೀರಶೈವ ಒಂದು ಟಿಸಿಲು, ಲಿಂಗಾಯತ ಪದವು ಈ ಧರ್ಮಕ್ಕೆ ಸ್ವತಂತ್ರ ವೃಕ್ಷದ ಸ್ಥಾನವನ್ನು ಕೊಡುತ್ತದೆ. ಆದ್ದರಿಂದ ಇಷ್ಟಲಿಂಗಧಾರಿಗಳಾದ ಲಿಂಗಾಯತರು ಧೂರ್ತ ಜನರ ತಂತ್ರಗಳಿಗೆ ಬಲಿಯಾಗದೆ ಲಿಂಗಾಯತ ಎಂಬ ಪದವನ್ನೇ ಪ್ರಯೋಗಿಸಬೇಕು. ಉತ್ತರ ಕರ್ನಾಟಕವಿರಲಿ, ಹಳೆಯ ಮೈಸೂರು ಇರಲಿ ಕೇಳಿದಾಗ ಈ ಜನ 'ನಾವು ಲಿಂಗಾಯತರು' ಎಂದೇ ಹೇಳುತ್ತಿದ್ದರು. ಇಂದು ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ಸಹ ಹಾಗೆಯೇ ಹೇಳುತ್ತಾರೆ. ವೀರಶೈವ ಎಂಬುದು ಕೃತಕವಾಗಿ ಕಲಿಸಲ್ಪಟ್ಟ ಶಬ್ದ ಸಾಹಿತಿಗಳಿಂದ ಹೆಚ್ಚಿಗೆ ಪ್ರಚಾರವಾಯಿತು. ಕರ್ನಾಟಕ ಲಿಂಗಾಯತ ಎಜುಕೇಷನ್ ಸೊಸೈಟಿ, (ಕೆ.ಎಲ್.ಇ. ಸೊಸೈಟಿ) ಧಾರವಾಡದ ಎಲ್.ಇ. ಅಸೋಸಿಯೇಷನ್, ಬೆಂಗಳೂರಿನ ಲಿಂಗಾಯತ ವಿದ್ಯಾಭಿವೃದ್ಧಿ ನಿಧಿ ಸಂಸ್ಥೆ (ಈಗ ಅದು ವೀರಶೈವ ವಿದ್ಯಾಭಿವೃದ್ಧಿ ನಿಧಿ ಸಂಸ್ಥೆ ಎಂದು ಬದಲಾಯಿಸಲ್ಪಟ್ಟಿದೆ. ಇವೆಲ್ಲ ನಮ್ಮ ವಾದಕ್ಕೆ ಪುಷ್ಟಿ ನೀಡುತ್ತವೆ.

ಸೋಮಶೇಖರ ಶರ್ಮಾರವರ ಲೇಖನದಲ್ಲಿ ಸ್ಪಷ್ಟವಾಗಿ ತಿಳಿಸಿದಂತೆ ವೀರಶೈವವು ಸನಾತನ ವೈದಿಕದ ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ಕಾರಣ ವೀರಶೈವ ಪದ ಬಳಸಿದರೆ ಲಿಂಗಾಯತ ಸಮಾಜದಲ್ಲಿಯೂ ಬ್ರಾಹ್ಮಣರಿಂದ ಅಂತ್ಯಜರವರೆಗೆ ಜಾತಿಗಳನ್ನು ಹುಡುಕಲು ಹೋಗಬೇಕಾಗುತ್ತದೆ. ಅಂಥ ಒಂದು ಪುಸ್ತಕವನ್ನು ಸಹ ರಂಭಾಪುರಿ ಮಠದವರು ಬರೆಸಿದ್ದು, ಹಳೆಯ ಪುಸ್ತಕಗಳ ಕಡತದಲ್ಲಿ ಅದು ಸೇರಿರುವುದರಿಂದ ಈ ತಕ್ಷಣ ನೆನಪು ಮಾಡಿಕೊಳ್ಳಲಾರೆ, ಈ ಪುಸ್ತಕದ ಪ್ರಕಾರ ಇಂದಿನ ಜಾತಿ ಜಂಗಮರು (ಅಯ್ಯನವರು) ಬ್ರಾಹ್ಮಣ ವೀರಶೈವರು. ಬಹು ಸಂಖ್ಯಾತರಾದ ಪಂಚಮ ಸಾಲೆಯವರು, ಗಾಣಿಗರು, ಸಾದರು. ರೆಡ್ಡಿ ಲಿಂಗಾಯತರು ಮುಂತಾದವರೆಲ್ಲರೂ ಶೂದ್ರ ವೀರಶೈವರು. ಅದರ ಪ್ರಕಾರ ಡಾ|| ಚಿದಾನಂದಮೂರ್ತಿಯವರು ಲಿಂಗೀ ಬ್ರಾಹ್ಮಣರು ಅಥವಾ ವೀರಶೈವರು, ಸಮ್ಮೇಳನ ವ್ಯವಸ್ಥಾಪಕರಾದ ಸುತ್ತೂರು ಜಗದ್ಗುರುಗಳು ಗೌಡ ಲಿಂಗಾಯತರಾದ ಕಾರಣ ಶೂದ್ರ-ವೀರಶೈವರು. ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಗೊ.ರು.ಚನ್ನಬಸಪ್ಪ ರೆಡ್ಡಿ ಲಿಂಗಾಯತರಾದ ಕಾರಣ ಅವರೂ ಶೂದ್ರ ವೀರಶೈವರು. ಹೀಗಿರುವಾಗ ವೀರಶೈವ ಪದದ ಹಣೆಪಟ್ಟಿ ಕಟ್ಟಿಕೊಂಡು ಶ್ರೇಣಿಕೃತ ವ್ಯವಸ್ಥೆಯ ವ್ಯೂಹದಲ್ಲಿ ಸಿಕ್ಕಿಬೀಳುವುದಾದರೂ ಏಕೆ ? ವೀರಶೈವದ ಸ್ವರೂಪವೇ ಹಾಗಿರುವಾಗ ಅದನ್ನು ತಿದ್ದುಪಡಿ ಮಾಡಲು ಯಾರಿಗೆ ಹಕ್ಕಿದೆ ? ಲಿಂಗಾಯತ ಪದವು ವಿಶಾಲ ವ್ಯಾಪ್ತಿ ಹೊಂದಿ ಎಲ್ಲರನ್ನು ಸಮಾನವಾಗಿ ಕಾಣುವಾಗ ಅದರ ಬಗ್ಗೆ ಪೂರ್ವಾಗ್ರಹ ಪೀಡಿತ ಈರ್ಷೆ ಏಕೆ ? ಗೌಡರ ಲಿಂಗಾಯತರಾದ ಸುತ್ತೂರು ಪರಂಪರೆಯವರು, ಸಿದ್ಧಗಂಗಾದವರು, ಸಾಧು ಲಿಂಗಾಯತರಾದ ಸಿರಿಗೆರೆಯವರು, ನೊಳಂಬರು ಮುಂತಾದವರೆಲ್ಲ ಇಂದು ಮಠ, ಪೀಠಾಧೀಶರಾಗುತ್ತಿದ್ದರೆ ಅದು ವಚನ ಸಾಹಿತ್ಯ ಸಂವಿಧಾನದ ಬಲದ ಮೇಲೆ, ಅಂತ್ಯಜರಾಗಿ ಹುಟ್ಟಿದ (ಸಿರಿಗೆರೆ ಮಠದವರೇ ಹೇಳಿಕೊಳ್ಳುವಂತೆ) ವಿಶ್ವಬಂಧು ಮರುಳಸಿದ್ದ ಓರ್ವ ಆಚಾರ್ಯರಾಗಿ, ಮಠವನ್ನು ಸ್ಥಾಪಿಸಲು ಸಾಧ್ಯವಾದರೆ ಅದು ಬಸವ ಪರಂಪರೆ, ವಚನ ಸಾಹಿತ್ಯ ಸಂವಿಧಾನದ ತಳಹದಿಯ ಮೇಲೆ ಎಂಬುದನ್ನು ಮರೆಯಬಾರದು. ಇಲಿಗೆ ಹೊಡೆಯಲು ಹೋಗಿ ಗಣಪತಿಗೆ ಪೆಟ್ಟು ಬಿತ್ತು'' ಎಂಬ ಗಾದೆಯಂತೆ, ಬಸವಣ್ಣನವರನ್ನು ಆದಿ ಪ್ರಮಥರೆಂದು ಧರ್ಮಗುರುವೆಂದು ಒಪ್ಪಿಕೊಳ್ಳಲಾರದ ಸಣ್ಣತನದ ಬುದ್ದಿಯಿಂದ ವೀರಶೈವದ ಅವಲಂಬನೆಗೆ ಹೋಗಿ, ವಿಪತ್ತುಗಳನ್ನು ಆಹ್ವಾನಿಸುವುದು ಬುದ್ದಿವಂತರ ಲಕ್ಷಣವಲ್ಲ.

ಲಿಂಗಾಯತ ಧರ್ಮ, ಸಮಾಜ, ಸಂಸ್ಕೃತಿಗಳಿಗೆ ಹೊಂದದ, ಆಗುಂತುಕವಾಗಿ ಹೇರಲ್ಪಟ್ಟ ಹೆಸರು ವೀರಶೈವ, ಕರ್ನಾಟಕವನ್ನೇ ಅದರಲ್ಲೂ ಉತ್ತರ ಕರ್ನಾಟಕವನ್ನೇ ಕೇಂದ್ರವಾಗಿ, ನ್ಯೂಕ್ಲಿಯಸ್ ಆಗಿ ಹೊಂದಿದ ಇಷ್ಟಲಿಂಗಧಾರಿಗಳ ಲಿಂಗಾಯತ ಧರ್ಮವು ಇದರ ಸುತ್ತಲೂ ಹಬ್ಬುತ್ತಾ ಹೋಯಿತು. ಮತ್ತು ಕಲ್ಯಾಣ ಕ್ರಾಂತಿಯ ನಂತರ ಶರಣರು ಕಲ್ಯಾಣದಿಂದ ದಿಕ್ಕಾಪಾಲಾಗಿ ಚದುರಿ ಹೋದುದರಿಂದಲೂ ಅವರು ನೆಲೆಸಿದ ಕಡೆಗಳಲ್ಲೆಲ್ಲ ಈ ಬಸವ ಸಂಸ್ಥಾಪಿತ ಲಿಂಗಾಯತ ಧರ್ಮ ಹಬ್ಬಿತು. ಇದಕ್ಕೆ ಅದು ಹೇಗೋ 'ವೀರಶೈವ' ಎಂಬ ಅಂಟುಪತ್ರ (Sticker) ಬಂದು ಮೆತ್ತಿಕೊಂಡಿತು. ಜೇನುತುಪ್ಪವಿರುವ ಒಂದು ಬಾಟಲಿಯ ಮೇಲೆ ಜೇನು ತುಪ್ಪ ಎಂದೇ ಬಸವಾದಿ ಪ್ರಮಥರು ಬರೆದಿಟ್ಟು ಹೋಗಿದ್ದರು. ಕಾಲಾನಂತರದಲ್ಲಿ (ಶ್ರೀ ತೋಂಟದ ಸಿದ್ದಲಿಂಗೇಶ್ವರರ ಕಾಲ ಹದಿನಾರನೇ ಶತಮಾನದ ಮಧ್ಯ ಭಾಗ) ಹರಳೆಣ್ಣೆ ಎಂಬ ಒಂದು ಅಂಟು ಚೀಟಿಯನ್ನು ಆ ಬಾಟಲಿಗೆ ಅಂಟಿಸಿದಂತೆ ಅನುಭವ ಮಂಟಪವೆಂಬ ಜೇಂಗೊಡದಲ್ಲಿ ಸಿದ್ಧವಾದ ಪ್ರಗತಿಪರ ಲಿಂಗಾಯತ ಧರ್ಮವೆಂಬ ಬಾಟಲಿ ಮೇಲೆ 'ವೀರಶೈವ' ಎಂಬ ಹರಳೆಣ್ಣೆ ಚೀಟಿ ಮೆತ್ತಿಕೊಂಡಿದೆ. ತಪ್ಪಾಗಿ ಅಂಟಿಸಲ್ಪಟ್ಟ ಒಂದು ಸ್ಪಿಕ್ಟರ್ ಕಿತ್ತ ಮಾತ್ರಕ್ಕೆ ಬಾಟಲಿ ಹೇಗೆ ಒಡೆಯದೋ, ಜೇನು ತುಪ್ಪವು ಹೇಗೆ ಕೆಡದೋ ಹಾಗೆ 'ವೀರಶೈವ' ಎಂಬ ಅಂಟು ಚೀಟಿ ಕಿತ್ತೊಗೆದ ಮಾತ್ರಕ್ಕೆ ಲಿಂಗಾಯತ ಸಮಾಜ ಒಡೆಯದು, ಧರ್ಮ ಕೆಡದು, ಮಾತ್ರವಲ್ಲ ಧರ್ಮದ ನಿಜ ಸ್ವರೂಪ ಹೆಸರಿನಿಂದಲೇ - ತಿಳಿಯುವುದು.

'ವೀರಶೈವ' ಪದದ ವ್ಯಾಮೋಹ ಹೊಂದಿ ಅದನ್ನು ಉಳಿಸಿಕೊಳ್ಳಬೇಕು ಎಂಬುದನ್ನು ಅಧ್ಯಯನ ಮಾಡಿದಾಗ ಆ ಹಠದ ಹಿಂದೆ ಕೆಲವೊಂದು ಆಲೋಚನೆಗಳನ್ನು ಗ್ರಹಿಸಬಹುದು.

1. ಅವರಿಗೆ ಧರ್ಮಪಿತ ಬಸವಣ್ಣನವರನ್ನು ಗೌರವಿಸುವ ಇಷ್ಟವಿರದು. ಧರ್ಮಗುರುವಿನ ಸ್ಥಾನ ಕೊಡುವ ಅಪೇಕ್ಷೆ ಇರದೆ ಆ ಮಹಾಗುರುವಿನ ಬಗ್ಗೆ ಒಂದು ಬಗೆಯ ಅಸಹನೆ ಈರ್ಷೆ ಇರುತ್ತದೆ.

2. ತಮ್ಮ ಗದ್ದುಗೆಯ ಕರ್ತೃಗಳನ್ನು ವೈಭವೀಕರಿಸಿ, ಆರಾಧ್ಯರನ್ನಾಗಿ, ಪವಾಡ ಪುರುಷರನ್ನಾಗಿ ಮಾಡಿ ತಮ್ಮ ಸ್ಥಾನಿಕ ಗದ್ದುಗೆ, ಅದರ ಸುತ್ತಲೂ ಒಂದು ಪಂಥವನ್ನು ಬೆಳೆಸುವ ಸಂಚಿರುತ್ತದೆ ; ಕರ್ತೃ ಗದ್ದುಗೆಯನ್ನೇ ಆದಾಯ ಮೂಲವನ್ನಾಗಿ ಮಾಡಿಕೊಳ್ಳುವ ಪ್ರಯತ್ನವಿರುತ್ತದೆ. ಕ್ರೈಸ್ತರಲ್ಲಿ ಸೇಂಟ್ ಮಾರ್ಕ, ಜಾನ್, ಆಗಸ್ಸೇನ್ ಮುಂತಾದವರನ್ನು ವೈಭವೀಕರಿಸಿ, ಎತ್ತಿ ಕಟ್ಟುವ ಹವ್ಯಾಸವಿರದೆ ಏಸುವು ಒಬ್ಬರನ್ನೇ ದೃಢಪಡಿಸುವ, ಆರಾಧಿಸುವ ಧೋರಣೆ ಇರುತ್ತದೆ. ಈ ಏಕಗುರು ನಿಷ್ಠೆಯೇ ಮುಸ್ಲಿಂ, ಕ್ರೈಸ್ತ ಸಮಾಜಗಳ ಸಂಘಟನೆಯ ಸೂತ್ರ ಎಂಬುದನ್ನು ಪ್ರಾಜ್ಞರು ಗುರುತಿಸಬೇಕು.

3. ಧರ್ಮಗುರು ಬಸವಣ್ಣನವರು, ಅವರ ಸಮಕಾಲೀನ ಶರಣರು ಕೊಟ್ಟ ವಚನ ಸಾಹಿತ್ಯವು ಅತಿವರ್ಣಾಶ್ರಮ ಸಮಾಜ ವ್ಯವಸ್ಥೆಯನ್ನು ಪ್ರತಿಪಾದಿಸಿತು. ಶ್ರೇಣಿಕೃತ (Ladder type of Society) ವ್ಯವಸ್ಥೆಯನ್ನು ವಿರೋಧಿಸಿ ಸಮಪಾತಳಿಯ (Horizontal type) ಸಮಾನತೆಯ ವ್ಯವಸ್ಥೆಯನ್ನು ಘೋಷಿಸಿತು. ಇದು ಸಹ್ಯವಾಗದೆ ಪುನಃ ಜಾತಿ ವಿಭಜನೆಯನ್ನು ತೂರಿಸಲು ಇಚ್ಚಿಸಿದ ಕೆಲವು ದುರ್ಮತಿಗಳು ವೀರಶೈವ ಪದದ ಮೂಲಕ ಸಮಾಜವನ್ನು ಒಡೆಯುವ ಸಂಚನ್ನು ಮಾಡಿದರು. ವೀರಶೈವರಲ್ಲಿಯೂ ಬ್ರಾಹ್ಮಣ ವೀರಶೈವ, ಕ್ಷತ್ರಿಯ ವೀರಶೈವ, ವೈಶ್ಯ ವೀರಶೈವ, ಶೂದ್ರ ವೀರಶೈವ ಎಂದುಂಟು ಎಂದು ಲಿಂಗಾಯತ ಸಮಾಜದಲ್ಲಿದ್ದ ಉಪಪಂಗಡಗಳವರನ್ನು ಈ ನಾಲ್ಕು ಗುಂಪುಗಳಾಗಿ ವರ್ಗಿಕರಿಸುವ ಕೆಲಸ ಸಹ ಮಾಡಲೆಳಸಿದರು. ಪಂಚ ಪೀಠಾಧೀಶರು ಮೂರು ದಶಕಗಳ ಹಿಂದೆ ಈ ಕೆಲಸ ಮಾಡಲೆಳಸಿದರೆ ವಿರಕ್ತರಿಗೆ ಅಷ್ಟು ಎದೆಗಾರಿಕೆ ಬರದೆ ಅವರಲ್ಲಿ ಕೆಲವರು ಭಕ್ತರು -ಮಹೇಶ್ವರರು ಎಂದಷ್ಟೇ ವಿಭಜಿಸಿ, ಮಾಹೇಶ್ವರ (ಜಂಗಮರು ಜನ್ಮದಿಂದ ಶ್ರೇಷ್ಠರು, ಭಕ್ತರು ಜಂಗಮರಿಗಿಂತ ಒಂದು ದರ್ಜೆ ಕೆಳಗೆ ಎಂದು ವಿಭಜಿಸಿದರು.

ಪರಳಿ ವೈಜನಾಥ, ಶ್ರೀಶೈಲ ಮಲ್ಲಿಕಾರ್ಜುನ ಮುಂತಾದ ಶಿವಲಿಂಗಗಳನ್ನು ಲಿಂಗವಂತ ಪೂಜಾರಿಗಳು ಪೂಜಿಸುತ್ತಿದ್ದರು. ಇವರ ಕೊರಳಿನಲ್ಲಿ ಜನಿವಾರವಿಲ್ಲ ಇವರು ಶೂದ್ರರು, ಪೂಜಿಸಲು ಅನರ್ಹರು' ಎಂದು ಬ್ರಾಹ್ಮಣ ಪೂಜಾರಿಗಳು ನ್ಯಾಯಾಲಯದ ಕಟ್ಟೆ ಏರಿದಾಗ ಇವರುಗಳು (ಮತ್ತು ಕಾಶಿಗೆ ಹೋಗಿ ವೇದಾಗಮಗಳನ್ನು ಅಭ್ಯಸಿಸಬೇಕೆಂಬ ಮಠಾಧಿ ಕಾರಿಗಳು) ಎದೆಯ ಮೇಲೆ ಧರಿಸುತ್ತಿದ್ದ ಲಿಂಗದ ಶಿವದಾರಗಳನ್ನು ಮಗ್ಗುಲಿಗೆ ಅಡ್ಡಡ್ಡಲಾಗಿ ಜನಿವಾರದಂತೆ ಹಾಕಿ, ಅದರ ತುದಿಗೆ ಕರಡಿಗೆ ಕಟ್ಟಿ ಆ ಕರಡಿಗೆಗಳನ್ನು ಧೋತ್ರದ ಒಳಗೆ ಸಿಕ್ಕಿಸಿಕೊಂಡು, ತಾವೂ ಜನಿವಾರ ಧರಿಸಿದ ಲಿಂಗೀ ಬ್ರಾಹ್ಮಣರೆಂದು ಪ್ರತಿಪಾದಿಸತೊಡಗಿದರು. ಇಷ್ಟೆಲ್ಲ ವಂಚನೆ ಮಾಡಲು ಯತ್ನಿಸಿದ್ದಾದರೂ ಏತಕ್ಕೆ ? ಧರ್ಮಗುರು ಬಸವಣ್ಣನವರ ಆದೇಶಕ್ಕೆ ವಿರುದ್ಧವಾಗಿ ಸ್ಥಾವರಲಿಂಗಾರ್ಚನೆ ಮಾಡಲು ! ಬಹುದೇವತೋಪಾಸನೆಗೆ ರಹದಾರಿ ಪಡೆಯಲು ! ಈ ಪುರೋಹಿತ ವರ್ಗದವರು ಧರ್ಮಗುರು ಬಸವಣ್ಣನವರನ್ನೇ ನಿಂದಿಸುತ್ತ, ಅವರ ಸ್ಥಾನವನ್ನು ಕೆಳಗಿಳಿಸತೊಡಗಿದರೆಂಬುದು ಗಮನಾರ್ಹ.

ಏನೋ ಸ್ವಲ್ಪ ಕಾಲ ಅಜ್ಞಾನಯುಕ್ತ ಒಂದು ಮಂಕು ಲಿಂಗಾಯತ ಸಮಾಜವನ್ನು ಕವಿದಿತ್ತು. ಜಂಗಮತ್ವ ಒಂದು ಜಾತಿ ಎಂಬ ಭ್ರಾಂತಿಗೆ ಜನರು ಒಳಗಾಗಿದ್ದರು. ಕ್ರಾಂತಿಯೋಗಿ ಬಸವಣ್ಣನವರನ್ನು ನಾಲ್ಕು ಕಾಲು, ಎರಡು ಕೋಡು, ಒಂದು ಬಾಲದ ಎತ್ತನ್ನಾಗಿ ಮಾಡಲಾಗಿತ್ತು. ವಚನ ಸಾಹಿತ್ಯವೂ ಬೆಳಕಿಗೆ ಬಂದಿರಲಿಲ್ಲ. ಅಂಥ ಮಂಕು ಕವಿದಿರುವಾಗಲೇ ಶಿವಯೋಗ ಮಂದಿರ ಸ್ಥಾಪನೆಯಾಯಿತು. ಹಾನಗಲ್ ಕುಮಾರ ಸ್ವಾಮಿಗಳಂತಹ ಪುಣ್ಯಪುರುಷರು (?) (ಮೂರು ಸಾವಿರ ಜಗದ್ಗುರುಗಳ ದೃಷ್ಟಿಯಲ್ಲಿ ಯುಗ ಪುರುಷರು!) ಸ್ಪಷ್ಟವಾಗಿ ಜಂಗಮ - ಭಕ್ತ ಎಂದು ಸಮಾಜವನ್ನು ವಿಂಗಡಿಸಿ, ಅತ್ಯಂತ ಶ್ರೇಷ್ಠ ಮತ್ತು ಕ್ರಾಂತಿಕಾರಿ ಪರಿಕಲ್ಪನೆಯ ಜಂಗಮವನ್ನು ಜಾತಿ ವ್ಯವಸ್ಥೆಯನ್ನಾಗಿ ವಿಕೃತಗೊಳಿಸಿ, ಹುಟ್ಟಿನಿಂದ ಜಂಗಮರಿರುವವರಿಗೆ ಮಾತ್ರ ಶಿವಯೋಗ ಮಂದಿರದಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಿದರು. ಆರಂಭದಲ್ಲಿ ಭಾಲ್ಕಿಯ ಹಿರೇಮಠದ ಪೂಜ್ಯ ಚನ್ನಬಸವ ಪಟ್ಟದೇವರು, ಸಿಂದಗಿಯ ಸಾರಂಗ ಮಠದವರು ಮತ್ತು ನವಲಗುಂದದ ಗವಿಮಠದ ಶ್ರೀ ಬಸವಲಿಂಗ ಸ್ವಾಮಿಗಳಿಗೆ ಅವರುಗಳು ಆಗಲೇ ಆಯ್ಕೆಯಾಗಿದ್ದುದರಿಂದ ಅವಕಾಶ ನೀಡಲಾಯಿತಂತೆ. ಅವರು ಮೂವರ ನಂತರ ಉಳಿದ ಭಕ್ತವರ್ಗದವರಿಗೆ ಶಿವಯೋಗ ಮಂದಿರದಲ್ಲಿ ಪ್ರವೇಶಾವಕಾಶ ಸಿಗಲಿಲ್ಲವಂತೆ. ಹೀಗಾಗಿ ಮಠ, ಪೀಠಾಧಿಪತ್ಯಗಳ ಹಕ್ಕು ಕೆಲವರದಾಯಿತು. ಬಹು ಸಂಖ್ಯಾತರಾದ ಭಕ್ತ ವರ್ಗದ ಸಾಧಕರಿಗೆ ಸಿಗದಾಯಿತು. ಅವರು ಸ್ವಯಂ ಪ್ರೇರಿತವಾಗಿ ವೈರಾಗ್ಯ ಜೀವನ ಸ್ವೀಕರಿಸಿ ಎಲ್ಲೆಲ್ಲೋ ಹೋದರು.

ಯಾವ್ಯಾವ ಪಂಥಗಳನ್ನೋ ಸೇರಿದರು. ಅವನ್ನೇ ಕಟ್ಟಿ ಬೆಳೆಸಿದರು. ಈ ಅಜ್ಞಾನಿ ಲಿಂಗಾಯತ ಸಮಾಜ ತನಗೆ ಎಂಥಾ ಪೆಟ್ಟು ತಗಲುತ್ತಿದೆ ಎಂಬ ಅರಿವೂ ಇಲ್ಲದ ಪೆಡಂಭೂತ(ಡೈನೋಸಾರ್) ದಂತೆ ಕಾಲಕಳೆಯಿತು. ಪಂಚಮಶಾಲೆ ಪಂಗಡದಲ್ಲಿ ಹುಟ್ಟಿದ ಮನಗೂಳಿಯ ಸಂಗಮೇಶ ಕಪ್ಪರದ ಸ್ವಯಂ ಪ್ರೇರಣೆಯಿಂದ ಜಂಗಮ (ಸನ್ಯಾಸ) ದೀಕ್ಷೆ ಹೊಂದಲು ಬಯಸಿದಾಗ, ಶಿವಯೋಗ ಮಂದಿರದಲ್ಲಿ ತರಬೇತಿ ಪಡೆದು ಹಬ್ಬಿದ್ದ ಜಾತಿ ಜಂಗಮ ಮಠಾಧೀಶರು ಸುತರಾಂ ಒಪ್ಪಲಿಲ್ಲ. ಆಗ ಸಂಗಮೇಶ್ವರರು ಎದೆಗೆಡಲಿಲ್ಲ. ಹೊಳೆನೀರಿಗೆ ದೊಣ್ಣೆನಾಯಕನ ಒಪ್ಪಿಗೆ ಏಕೆ ? ಎಂದು ಸ್ವಯಂಸ್ಪೂರ್ತಿಯಿಂದ ಜ್ಞಾನ ಸನ್ಯಾಸ ಸ್ವೀಕರಿಸಿದರು, ಸ್ವಾಮಿ ಲಿಂಗಾನಂದರಾದರು. ಉಳಿದ ಅನೇಕರಂತೆ ಸಂಪ್ರದಾಯವಾದಿ ಮಠಾಧಿಕಾರಿಗಳಿಂದ ಬೇಸತ್ತು ಅನ್ಯ ಪಂಥಗಳನ್ನು ಸೇರಹೋಗದೆ, ಹೊಸ ಪಂಥ ಹುಟ್ಟು ಹಾಕಲು ಹೋಗದೆ, ಸಂಪ್ರದಾಯದ ವಿರುದ್ಧ ಹೋರಾಟಕ್ಕೆ ನಿಂತರು. ಮಲೆತು ಮಡುಗಟ್ಟಿದ ಸಮಾಜವನ್ನು ಶುದ್ದೀಕರಿಸಲು ಯತ್ನಿಸಿದರು. 1956ರಲ್ಲಿ ಕೈಗೊಂಡ ಈ ಶುದ್ದೀಕರಣ ಕಾರ್ಯ 1996ರ ವೇಳೆಗೆ ಗಮನಾರ್ಹ ಹಂತಕ್ಕೆ ಬಂದಿದೆ ಎಂಬುದು ಎಲ್ಲರಿಗೂ ಗೋಚರವಾಗುತ್ತಲಿದೆ.

ಆದರೆ, ಜಾತಿ ಜಂಗಮತ್ವದ ಶ್ರೇಷ್ಠತೆ ಪ್ರತಿಪಾದಿಸುವವರು ಬಹಳ ಕಷ್ಟಪಟ್ಟಾದರೂ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಂಥವರ ಸಂಖ್ಯೆ ಸಾಕಷ್ಟು ಕುಗ್ಗುತ್ತ ಅನಿವಾರ್ಯವಾಗಿ ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಒಂದು ದೃಷ್ಟಿಯಿಂದ ಶುಭಸೂಚಕ.

4. ಧರ್ಮಕರ್ತ ಬಸವಣ್ಣನವರನ್ನು ಧರ್ಮಗುರುವೆಂದೊಪ್ಪದೆ ಬಸವ ಪೂರ್ವದಲ್ಲೇ ಈ ಧರ್ಮ (?) ಇತ್ತೆಂದು ವಾದಿಸುವವರು ಇನ್ನೊಂದು ಮಾನಸಿಕ ದೌರ್ಬಲ್ಯಕ್ಕೆ ತುತ್ತಾಗಿರುವವರಾಗಿರುತ್ತಾರೆ. ಅದೇ ಬಹುದೇವತಾರಾಧನೆ, ಅತ್ಯಂತ ದುರ್ಬಲ ಮನಸ್ಸಿನವರ ಆಚರಣೆಯಾದ ಬಹುದೇವತಾರಾಧನೆಯನ್ನು ಮೈಗೂಡಿಸಿಕೊಂಡಿರುವ ಭಕ್ತರು ಮತ್ತು ಭಕ್ತರಿಗಿಂತಲೂ ಸ್ವಾಮಿಗಳು, ಮಠಾಧಿಕಾರಿಗಳು ಸೃಷ್ಟಿಕರ್ತ ಪರಮಾತ್ಮನನ್ನು ಏಕನಿಷ್ಠೆಯಿಂದ ಇಷ್ಟಲಿಂಗರೂಪದಲ್ಲಿ ಆರಾಧಿಸದೆ ಗಣಪತಿ, ಲಕ್ಷ್ಮಿ, ನವಗ್ರಹ, ವೆಂಕಟೇಶ್ವರ ಮುಂತಾದುವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಭಕ್ತರಿಗೂ ಅದನ್ನೇ ಕಲಿಸುತ್ತಾರೆ. ಇಂಥ ಕೆಲವರಿಗೆ ಧರ್ಮಕರ್ತ ಬಸವಣ್ಣನವರ ಬಗ್ಗೆ ಅಪಾರ ಭಕ್ತಿ
ಭಕ್ತಿ ಗೌರವವಿದ್ದು ಪ್ರತಿಭಾಷಣದಲ್ಲೂ ಹಾಡಿಹೊಗಳುತ್ತಾರಾದರೂ ಏಕದೇವೋಪಾಸನೆಯ ವಿಷಯಕ್ಕೆ ಬರುತ್ತಲೇ ಭಯ ಪಡುತ್ತಾರೆ. ಬಸವಣ್ಣನವರನ್ನು ಧರ್ಮಗುರುವಲ್ಲ ಎಂದು ಹೇಳುವುದಕ್ಕೂ ಧೈರ್ಯ ಹೊಂದಿರರು. ಯಾರು ಏನೇ ಪ್ರಶ್ನೆ ಕೇಳಿದರೂ ಇವರ ಉತ್ತರ ಮೌನವಾಗಿ ನೋಡಿ ನಂತರ ಅವರ ಮೇಲೆ ಕಣ್ಣಿಡುವುದು.

ಇನ್ನು ಕೆಲವರು ಯಾವ ಬಗ್ಗೆಯೂ ಆಲೋಚಿಸರು. ಸಮತಾವಾದಿ ಬಸವಣ್ಣನವರನ್ನು ಧರ್ಮಗುರುವೆಂದು ವಚನ ಸಾಹಿತ್ಯವನ್ನು ಧರ್ಮಸಂಹಿತೆ ಎಂದು ದೃಢವಾಗಿ ಒಪ್ಪುವವರಲ್ಲಿ ಸಮತಾವಾದ, ಮಾನವತಾವಾದ, ಪ್ರಗತಿಪರ ಚಿಂತನೆ, ಅಖಂಡ ಶರಣ ಸಮಾಜ ರಚನೆ, ಸಮೃದ್ಧ - ಸಂತೃಪ್ತ ರಾಷ್ಟ್ರದ ಕಲ್ಪನೆ ಇದ್ದರೆ, ಒಪ್ಪದೆ ಇರುವವರಲ್ಲಿ ಜಾತಿ ವ್ಯವಸ್ಥೆಯಲ್ಲಿ ನಂಬಿಕೆ, ಪ್ರಗತಿ ವಿರೋಧಿ ಚಿಂತನೆ, ಮೂಢ ನಂಬಿಕೆ, ಅಸಮಾನತೆಯ ಪ್ರತಿಪಾದನೆ ಗುರುತಿಸಬಹುದು. ಇನ್ನು ಕಡೆಯದಾಗಿ ಹೇಳಿರುವ ವರ್ಗ ಯಾವುದರಲ್ಲಿಯೂ ಆಸಕ್ತಿಹೊಂದಿರದ, ಉಣ್ಣುವ - ಉಡುವ ಇಡುವ ತೊಡುವ ಲೀಲೆಯಲ್ಲೇ ಸಂತೋಷ ಕಂಡುಕೊಳ್ಳುವ ಸ್ವಕೇಂದ್ರೀಕೃತರು (Self-centered).

ಮುಂದೇನು ?

ಸಮಾಜದ ವ್ಯವಸ್ಥೆ ಹೀಗಿರುವಾಗ ಪ್ರಾಜ್ಞರು, ಎಚ್ಚೆತ್ತವರು ಮಾಡಬೇಕಾದುದೇನು ? ಮಠಾಧಿಪತಿಗಳ ನೆರವನ್ನು ಮಾರ್ಗದರ್ಶನವನ್ನು ನಿರೀಕ್ಷಿಸುತ್ತಾ ಕುಳಿತರೆ ಅದು ಸಿಗದು. ಏಕೆಂದರೆ ಅವರುಗಳು ತಮ್ಮ ತಮ್ಮ ಕರ್ತೃ ಗದ್ದುಗೆಗಳನ್ನು ಬೆಳಸಿ, ಅವನ್ನೇ ಶ್ರದ್ಧಾಕೇಂದ್ರಗಳನ್ನಾಗಿ ಮಾಡುವ ಪ್ರಯತ್ನದಲ್ಲಿದ್ದಾರೆ ? ಗದ್ದುಗೆ ಕಟ್ಟಲು ನಾವು ಬೇಡವೆನ್ನುವುದಿಲ್ಲ. ಲಿಂಗೈಕ್ಯರಾದವರನ್ನು ಸಮಾಧಿಗೊಳಿಸುವುದು ಲಿಂಗಾಯತ ಧರ್ಮದ ಒಂದು ಪವಿತ್ರ ಕ್ರಿಯೆ. ಆದರೆ ಧರ್ಮಗುರು ಬಸವಣ್ಣನವರನ್ನೇ ಮರೆಸಿ ಕರ್ತೃ ಗದ್ದುಗೆಗಳನ್ನೇ ಬೆಳೆಸುವುದೆಂದರೆ, ಗಿಡದ ಬುಡಕ್ಕೆ ನೀರೆರೆಯದ ಟೊಂಗೆಗಳ ಮೇಲೆ ನೀರು ಚಿಮುಕಿಸಿದಂತೆ, ಹೋಗಲಿ, ಆ ಕರ್ತೃಗಳು ಏನು ಸಂದೇಶ ಕೊಟ್ಟಿದ್ದಾರೆ ? ಅವರು ಕೊಟ್ಟ ಸಾಹಿತ್ಯ - ಸಂದೇಶಗಳನ್ನು ಅವಲಂಬಿಸಿ ಒಂದು ಜನಾಂಗವು ಬದುಕಲು ಬರುವುದೇ ?

ಕ್ರೈಸ್ತರಲ್ಲಿ ಹಲವಾರು ಸಂತರ ಹೆಸರಿನಲ್ಲಿ ಚರ್ಚ್‌ಗಳಿವೆ. ಫಿಲೋಮಿನಾ ಚರ್ಚ್, ಪಾಲ್ಸ್ ಕೆಥೆಡ್ರೆಲ್, ಸಂತ ಕ್ಷೇವಿಯರ್ ಚರ್ಚ್, ಆಗಸ್ತಿನ ಚರ್ಚ್ ಮುಂತಾಗಿ, ಆಯಾ ಮಹಾತ್ಮರ ಸ್ಮರಣಾರ್ಥ ಸ್ಮಾರಕ ಚರ್ಚ್ (Memorial Church) ಕಟ್ಟಿದರೂ ಒಳಗೆ ನಡೆಯುವುದು ದೇವರ ಮತ್ತು ಏಸುವಿನ ಪ್ರಾರ್ಥನೆ, ಆರಾಧನೆ. ಅದೇ ರೀತಿ ಅನೇಕ ದರ್ಗಾಗಳು ಮುಸ್ಲಿಮರ ಶ್ರದ್ದಾ ಕೇಂದ್ರಗಳಾಗಿದ್ದರೂ ಮಸೀದಿಯಲ್ಲಿ ಮಾಡುವ ನಮಾಜ್ ಅಲ್ಲಾಹ ಮತ್ತು ರಸೂಲ್ ಮೊಹಮ್ಮದರನ್ನು ಕುರಿತೇ ಇರುತ್ತದೆ. ಲಿಂಗಾಯತ ಮಠಾಧಿಪತಿಗಳ ಧೂರ್ತ ತಂತ್ರವನ್ನು ಗಮನಿಸಿರಿ. ಮೂಲಧರ್ಮವನ್ನು ಕೊಟ್ಟ ವಿಶ್ವಗುರು ಬಸವಣ್ಣನವರನ್ನು ಬಿಟ್ಟು ಉಳಿದೆಲ್ಲ ಶಿವಯೋಗಿಗಳನ್ನು ಶಿವಭಕ್ತರನ್ನು ಮೂರ್ತಿ ಮಾಡಿಸಿ ಗೋಪುರ, ಪೌಳಿಗಳ ಮೇಲೆ ಇಡುತ್ತಾರೆ. ಯಾವುದೇ ರೀತಿ (ಅವರು ಮಹಾತ್ಮರು ಎಂದು ಎಲ್ಲರನ್ನು ಗೌರವಿಸೋಣ) ಧಾರ್ಮಿಕ ಸಂಬಂಧವಿರದ 63 ಮಂದಿ ಪುರಾತನ (ತಮಿಳುನಾಡಿನ ಶಿವಭಕ್ತರು)ರ ಮೂರ್ತಿಗಳನ್ನು ಮಾಡಿಸುತ್ತಾರೆ. ಸ್ವಧರ್ಮಕ್ಕೆ ಸಂಬಂಧಿಸಿದ ಶರಣರು ಶಿವಯೋಗಿಗಳನ್ನು ಕಡೆಗಣಿಸುತ್ತಾರೆ. ಇಂಥ ಮೂರ್ಖತನ ಬೇರೆ ಯಾವ ಧರ್ಮದಲ್ಲಿಯೂ ನಡೆಯದು.

ಆದ್ದರಿಂದ ಇಂದು ಏಕಗುರುನಿಷ್ಠೆ ಅತ್ಯಗತ್ಯ. ಅಂದರೆ ಮಾತ್ರ ಸಮಾಜವು ತಾತ್ವಿಕವಾಗಿ, ಸಂಘಟನಾತ್ಮಕವಾಗಿ ಸುಭದ್ರವಾಗುವುದು. ಈ ದಿಶೆಯಲ್ಲಿ ಬಹುಪಾಲು ಮಠಾಧೀಶರು ತಮ್ಮ ಅಲ್ಪಾಕಾಂಕ್ಷೆ ಮತ್ತು ಸ್ವಾರ್ಥಗಳನ್ನು ತ್ಯಾಗ ಮಾಡಲಾರರು. ಈ ವಿಪತ್ತಿನ ಜೊತೆಗೆ ಇನ್ನೊಂದು ಎಪತ್ತು ಎಂದರೆ ಲಿಂಗಾಯತರಲ್ಲಿ ಉಪಜಾತಿ, ಉಪಪಂಗಡಗಳ ಪ್ರಜ್ಞೆ ಹುಟ್ಟಿಸಿ, ಜಾತಿಗೆ ಒಂದು ಮಠ ಕಟ್ಟಿ ಅದರ ಸುತ್ತಲೂ ಒಂದು ಜಾತಿ ವಲಯವನ್ನು ನಿರ್ಮಿಸುವುದು. ಒಂದು ಚರ್ಚು ದೀಕ್ಷೆ ಕೊಟ್ಟಾ ನಂತರ ಪೂರ್ವದ ಜಾತಿಮತಕುಲ ಸಂಪ್ರದಾಯಗಳನ್ನು ನಿವಾರಿಸುತ್ತದೆ. ಅವರ ಸಮಾಜವನ್ನು ಬೆಸೆಯುತ್ತದೆ. ಸಿಖ್‌ ಗುರುದ್ವಾರಗಳು ಸಹ ಎಲ್ಲರಿಗೆ ದೀಕ್ಷೆ ನೀಡಿ ಅವರ ಭೇಟಿ ನಿವಾರಿಸಿ ಅಖಂಡ ಸಮಾಜವನ್ನು ನಿರ್ಮಿಸುತ್ತವೆ, ಮುಸ್ಲಿಮರ ಮಸೀದಿಗಳು ನಮಾಜ್ ಮೂಲಕ ಹಳೆಯ ಜಾತಿ ಮತ ಭೇದಗಳನ್ನು ನಿವಾರಿಸುತ್ತವೆ. ಅದೇ ಕೆಲವು ಲಿಂಗಾಯತ ಮಠಗಳು ಜಾತಿ ಗುಂಪನ್ನು ಪ್ರತ್ಯೇಕಿಸಿ, ಬಲಪಡಿಸಿ, ಇನ್ನಿತರರೊಡನೆ ವೈಷಮ್ಯ ಬೆಳೆಸುತ್ತವೆ. 12ನೆಯ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಜನರನ್ನು ಎಲ್ಲ ಜಾತಿ ಮತ ಪಂಥಗಳಿಂದ ಆಕರ್ಷಿಸಿ, ಅವರಿಗೆ ಸಂಸ್ಕಾರ ನೀಡಿ ಒಂದು ಅಖಂಡ ಶರಣ ಸಮಾಜವನ್ನು ನಿರ್ಮಿಸಿದರು. ವಿವಿಧ ಜಾತಿ ಗುಂಪುಗಳಿಂದ ಹೊರಹೊಮ್ಮಿದ ಶರಣರನ್ನೇ ಎಳೆಗಳನ್ನಾಗಿ ಮಾಡಿ ಶರಣ ಸಮಾಜದ ಹಗ್ಗ ಹೆಣೆದರು. ಈಗ ಅದಕ್ಕೆ ತದ್ವಿರುದ್ಧವಾಗಿ ಅಂದಿನ ಶರಣರೆಂಬ ಎಳೆಗಳನ್ನು ಹಿರಿಯುತ್ತ, ಲಿಂಗಾಯತ ಸಮಾಜದ ಹಗ್ಗವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಅನೇಕ ಮಠಾಧೀಶರು ಮಾಡುತ್ತಿದ್ದಾರೆ. ಯಾರ ಹೆಸರನ್ನೂ ಪ್ರತ್ಯೇಕವಾಗಿ ಕಾಣಿಸುವುದು ಬೇಡ. ಜನರು ಈಗಾಗಲೇ ಪ್ರಾಜ್ಞರಾಗಿರುವುದರಿಂದ ಬೇಗನೆ ತಿಳಿದುಕೊಳ್ಳಬಲ್ಲರು. ಮಠಾಧೀಶರ ಜೊತೆಗೆ ಇದೇ ವಿಘಟನಾ ಕಾರ್ಯವನ್ನು ಮಾಡುತ್ತಿರುವ ಜನರೆಂದರೆ ರಾಜಕಾರಣಿಗಳು, ಇವರು ಜಾತ್ಯತೀತತೆ (ಸೆಕ್ಯುಲಾರಿಸಮ್)ಯ ಮಂತ್ರ ಜಪಿಸುತ್ತಲೇ ಸಮಾಜವನ್ನು ಒಡೆಯುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಲಿದ್ದಾರೆ.

ಶರಣ ಬಂಧುಗಳೇ, ಈ ಧ್ರುವೀಕರಣ ಮತ್ತು ಶುದ್ದೀಕರಣ ಕ್ರಿಯೆಗೆ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತಲೇ ಪ್ರತಿರೋಧವು ಕೆಲವು ಮಠಾಧೀಶರಿಂದ, ಅವರ ಬೆಂಬಲಿಗೆ ಪುರೋಹಿತಶಾಹಿ ಮತ್ತು ಅಂಧಾನುಕರಣೆಯ ಭಕ್ತರಿಂದ ಬರುವುದು ಅತ್ಯಂತ ಸ್ವಾಭಾವಿಕ. ಓರ್ವ ಮಹಿಳೆಗೆ ಹೆರಿಗೆಯಾಗುತ್ತಿದೆ ಎಂದು ತಿಳಿದುಕೊಳ್ಳಿರಿ. ಸುಖ ಪ್ರಸವವಾಗಿ ತಾಯಿ-ಮಗು ಉಭಯತರೂ ಬದುಕಿದರೆ ಬಹಳ ಸಂತೋಷ, ವೈದ್ಯರು, ಪರಿಸ್ಥಿತಿ ಗಂಭೀರವಿದೆ, ಇಬ್ಬರಲ್ಲಿ ಒಬ್ಬರನ್ನು ಉಳಿಸಲು ಸಾಧ್ಯ' ಎಂದರೆ ಆಗ ನೀವು ತಾಯಿಯನ್ನು ಉಳಿಸಿಕೊಳ್ಳಲೆತ್ನಿಸುವಿರಿ. ಆ ತಾಯಿ ಬದುಕಿದರೆ ಪುನಃ ಮಕ್ಕಳನ್ನು ಕೊಡಬಲ್ಲಳು. ಹಾಗೆಯೇ ಧರ್ಮಕರ್ತ ಬಸವಣ್ಣ ತಾಯಿಯಂತೆ, ನಿಮ್ಮ ಊರಿನ ಮಠಾಧೀಶ ಮಗುವಿನಂತೆ. ಲಿಂಗಾಯತ ಧರ್ಮವು ತಾಯಿಯಂತೆ, ನಿಮ್ಮೂರಿನ ಮಠವು ಮಗುವಿನಂತೆ, ಧರ್ಮಪಿತ ಬಸವಣ್ಣ - ಮಠಾಧೀಶ ಇಬ್ಬರೂ ಉಳಿಯುತ್ತಿದ್ದರೆ ಸಂತೋಷ, ಮಠಾಧೀಶರೇ ಧರ್ಮಪಿತರಿಗೆ ವಿರೋಧವಾಗಿ ನಿಂತಾಗ ಆತನನ್ನು ನಿರ್ಲಕ್ಷಿಸಿ ಧರ್ಮಪಿತರ ಗೌರವವನ್ನು ಕಾಯಬೇಕಾಗುತ್ತದೆ. ಲಿಂಗಾಯತ ಧರ್ಮದ ಸಂವಿಧಾನಕ್ಕೆ ತಕ್ಕಂತೆ ನಡೆವ ಮಠಾಧೀಶರಾದರೆ ಗೌರವಿಸಿರಿ. ಅದಕ್ಕೆ ವಿರುದ್ಧವಾಗಿ ನಡೆಯತೊಡಗಿದರೆ ಧರ್ಮವನ್ನು ಗೌರವಿಸಿರಿ, ವ್ಯಕ್ತಿಯನ್ನು ನಿರ್ಲಕ್ಷಿಸಿರಿ. ಆದ್ದರಿಂದ ವಾರದ ಸಾಮೂಹಿಕ ಪ್ರಾರ್ಥನೆ - ಶರಣ ಸಂಗಮ, ವಿಶೇಷ ಗಣ ಸಮ್ಮೇಳನ - ಶರಣ ಸಮಾಗಮ, ಶಿವರಾತ್ರಿಯ ಗಣಮೇಳ, ಪ್ರತಿವರ್ಷವೂ ಕೂಡಲ ಸಂಗಮದಲ್ಲಿ ನಡೆಯುವ ಶರಣಮೇಳ - ಎಲ್ಲ ಭೇದಭಾವಗಳನ್ನು ಮರೆಸಿ ಬಸವ ಭಕ್ತರನ್ನು ಬೆಸೆಯುವ ಕಾರ್ಯಕ್ರಮಗಳು ಎಂಬುದನ್ನು ಪ್ರಾಜ್ಞರು ಇಂದು ಅರಿಯಬೇಕು.

ಇಂದು ಧರ್ಮ, ಸಂಸ್ಕಾರ, ಸಂಘಟನೆ ಅಗತ್ಯವಾಗಿರುವುದು ಮಠಾಧಿ ಪತಿಗಳಿಗಿಂತಲೂ ಅನುಯಾಯಿಗಳಿಗೆ ಅವರೇ ಇಂದು ಗಂಭೀರವಾಗಿ ಆಲೋಚಿಸುತ್ತಿದ್ದಾರೆ. ಆದ್ದರಿಂದ ಈಗ ಅತ್ಯಂತ ತ್ವರಿತ ಗತಿಯಲ್ಲಿ ಸಮಾಜದ ಜನರು ಜಾಗೃತರಾಗಿ, ಸಂಘಟನಾ ಕಾರ್ಯ ಆರಂಭಿಸಬೇಕಾಗಿದೆ.

1. ವಾರದ ಪ್ರಾರ್ಥನ - ಶರಣ ಸಂಗಮಗಳನ್ನು ಎಲ್ಲೆಡೆ ಏರ್ಪಡಿಸುವುದು.
2. ಬಸವ ಮಂಟಪ ನಿರ್ಮಾಣ ; ಚರ್ಚ್, ಮಸೀದಿ, ಗುರುದ್ವಾರ, ಬುದ್ಧ ವಿಹಾರಗಳಂತೆ ಬಸವ ಮಂಟಪ ಎಂಬ ಸಮುದಾಯ ಭವನ ನಿರ್ಮಿಸಿ ಸಮುದಾಯ ಪ್ರಾರ್ಥನೆ, ವಚನ ಚಿಂತನೆ ನಡೆಸುವುದು. ಈ ಎಲ್ಲ ಸಂಘಟನೆಗೆ ಮೂಲ ಸೂತ್ರಗಳೆಂದರೆ ಧರ್ಮಕರ್ತ ಬಸವಣ್ಣನವರನ್ನು ಧರ್ಮಗುರು, ಆದಿ ಪ್ರಮಥ, ಧರ್ಮ ಸಂಸ್ಥಾಪಕರೆಂದು ನಂಬುವುದು. ಅನವಶ್ಯಕ ಚರ್ಚೆ, ವಾದ - ವಿವಾದ ಬೆಳೆಸದೆ ಬಸವಣ್ಣನವರನ್ನು ಮೇಟಿಗೂಟವನ್ನಾಗಿ ಮಾಡಿಕೊಂಡು ಸಮಾಜವನ್ನು ಕಟ್ಟಬೇಕು.

ಮತ್ತೊಂದು ಮಹತ್ವದ ಸೂತ್ರವೆಂದರೆ ಬಸವಾದಿ ಪ್ರಮಥರು ಮತ್ತು ಅವರ ಸಮಕಾಲೀನ ಶರಣರು ಕೊಟ್ಟ ವಚನ ಸಾಹಿತ್ಯವನ್ನೇ ಧರ್ಮ ಸಂಹಿತೆ (Religious Constitution) ಎಂದು ಮನ್ನಿಸಿ ಅದರಂತೆ ಶರಣ -ಪಥದಲ್ಲಿ ನಡೆಯಬೇಕು. ವಚನ ಸಾಹಿತ್ಯವನ್ನು ತೊರೆದು ಲಿಂಗಾಯತ ಮಠ-ಪೀಠಾಧಿಕಾರಿಗಳು ವೈದಿಕ -ಶೈವ ಮಾರ್ಗಗಳನ್ನು ಅವಲಂಬಿಸಿದ್ದರ ಫಲವಾಗಿಯೇ ಸಂಪೂರ್ಣವಾಗಿ ವಿಕೃತಗೊಂಡ ಸಮಾಜವನ್ನು ಇಂದು ಕಾಣುತ್ತಿದ್ದೇವೆ. ಆನೇಕ ವಿಚಾರವಾದಿಗಳು ಹೀಗೆ ಟೀಕಿಸುವುದುಂಟು. "ಬಸವಾದಿ ಪ್ರಮಥರ ವಚನ ಸಾಹಿತ್ಯ ಬಹು ಶ್ರೇಷ್ಟವೂ - ಉದಾತ್ತವೂ ಆಗಿರುವುದು ಸತ್ಯ. ಆದರೆ ಅವರ ಅನುಯಾಯಿಗಳಲ್ಲೇ ಜಾತೀಯತೆ, ಮೂಢನಂಬಿಕೆ ಮುಂತಾದವು ತುಂಬಿದೆಯಲ್ಲಾ'' ಎಂದು ವ್ಯಂಗ್ಯವಾಡುತ್ತಾರೆ. ಲಿಂಗಾಯತರ ತಪ್ಪು ಆಚರಣೆಗಳಿಂದ ಅದನ್ನು ಕೊಟ್ಟ ಕ್ರಾಂತಿಪುರುಷ ಬಸವಣ್ಣನವರನ್ನೇ ಇತರರು ದೂಷಿಸುವಂತಾಗುತ್ತಿದೆ. ಅತ್ಯಂತ ಪ್ರಗತಿಪರವಾಗಿರುವ ಬಸವ ಗುರುವಿನ ತತ್ವ - ಆದೇಶಗಳನ್ನು ತಿಳಿದು ಪಾಲಿಸುವಷ್ಟು ಲಿಂಗಾಯತ ಸಮಾಜ ಇನ್ನೂ ಪ್ರೌಢವು, ಪಕ್ವವೂ, ಧೈರ್ಯಶಾಲಿಯೂ ಆಗಿರಲಿಕ್ಕಿಲ್ಲ. ಆದರೂ ಪ್ರಯತ್ನವನ್ನು ನಿಷ್ಠೆಯಿಂದ ಮಾಡಬೇಕು. ಧರ್ಮಗುರುವೆಂದು ಬಸವಣ್ಣನವರನ್ನು ದೃಢವಾಗಿ ನಂಬಿ, ವಚನ ಸಾಹಿತ್ಯವನ್ನೇ ಧರ್ಮ ಸಂಹಿತೆ ಎಂದು ಅಧ್ಯಯನ, ಪಾರಾಯಣ, ಪಠಣ, ಅನುಷ್ಠಾನ ಮಾಡುತ್ತ ಹೋದರೆ ಈ ಸಮಾಜದಲ್ಲಿ ಜೀವಂತಿಕೆ ಬರಲು ಸಾಧ್ಯ ! ನಾನು ಒಂದು ಮಾತನ್ನು ಹೇಳುತ್ತಿರುತ್ತೇನೆ, ಕಲ್ಯಾಣ ಕ್ರಾಂತಿಯ ನಂತರ ಅನೇಕ ಆಘಾತಗಳನ್ನು ಎದುರಿಸಿದ ಲಿಂಗಾಯತ ಧರ್ಮದ ಅನುಯಾಯಿಗಳ ಸಮಾಜ ಸತ್ತಿಲ್ಲ ಕೋಮಾ(ಪ್ರಜ್ಞಾಶೂನ್ಯ) ಸ್ಥಿತಿಯಲ್ಲಿದೆ. ಇದೀಗ ಇದರೊಳಕ್ಕೆ ವಚನ ಸಾಹಿತ್ಯದ ಔಷಧಿ
ತೂರಿಸಬೇಕಾಗಿದೆ. ಆಗ ಅದು ಚೇತರಿಸಿಕೊಂಡು ಜೀವಂತವಾಗಿ ಎದ್ದು ಕಾರ್ಯೋನ್ಮುಖವಾಗುತ್ತದೆ.''

ಆದ್ದರಿಂದ ಶರಣ ಬಂಧುಗಳೇ, ತಾವೀಗ ಈ ನಂಬಿಕೆ ಬಲಪಡಿಸಿಕೊಳ್ಳಿರಿ, ದೃಢವಾಗಿ
ಹೇಳಿರಿ

1. ನೀವು ಯಾವ ಧರ್ಮಾನುಯಾಯಿಗಳು ?
ನಾವು ಲಿಂಗಾಯತರು.

2. ಲಿಂಗಾಯತ ಎಂದರೇನು ? ಒಂದು ಜಾತಿಯೇ ? ಮತವೇ ? ಪಂಥವೆ ?
ಲಿಂಗಾಯತವು ಒಂದು ಜಾತಿಯಲ್ಲಿ ಮತವಲ್ಲ ಪಂಥವಲ್ಲ ಒಂದು ಸ್ವತಂತ್ರವಾದ ಮತ್ತು ಸ್ವಾವಲಂಬಿಯಾದ, ಪ್ರಗತಿಪರ ಪರಿಪೂರ್ಣ ಧರ್ಮ.

3. ಅದರ ಸ್ಥಾಪಕರು ಯಾರು ?
12ನೆಯ ಶತಮಾನದಲ್ಲಿ ಆಗಿಹೋಗಿರುವ ಸಮತಾವಾದಿ ಬಸವಣ್ಣನವರು ಇದರ ಸ್ಥಾಪಕರು.

4. ಇದರ ಧಾರ್ಮಿಕ ಸಾಹಿತ್ಯ ಯಾವುದು ?
ಬಸವಣ್ಣನವರೇ ಆದಿ ಪ್ರಮಥರಾಗಿ ಅವರ ಸಮಕಾಲೀನ ಶರಣರು ಮತ್ತು ಬಸವ ಪರಂಪರೆಯ ಶರಣರು ಕೊಟ್ಟ ವಚನ ಸಾಹಿತ್ಯ.

5. ನಿಮ್ಮ ಧರ್ಮಭಾಷೆ ಯಾವುದು ?
ಕನ್ನಡ, ವಚನ ಸಾಹಿತ್ಯವನ್ನು ಹೊಂದಿರುವ ಕರ್ನಾಟಕದ ಪ್ರಾಂತೀಯ ಭಾಷೆ

6. ನಿಮ್ಮ ಧರ್ಮ ಲಾಂಛನ ಯಾವುದು ?
ವಿಶ್ವಗುರು ಬಸವಣ್ಣನವರು ರೂಪಿಸಿಕೊಟ್ಟ ವಿಶ್ವದಾಕಾರದಲ್ಲಿರುವ ಸೃಷ್ಟಿಕರ್ತ ಲಿಂಗದೇವನ ಕುರುಹಾದ ಇಷ್ಟಲಿಂಗ.

7. ನಿಮ್ಮ ಧರ್ಮ ಕ್ಷೇತ್ರಗಳು ಯಾವುದು ?
ಧರ್ಮಕರ್ತ ಬಸವಣ್ಣನವರ ಐಕ್ಯ ಕ್ಷೇತ್ರ ಕೂಡಲಸಂಗಮ ಮತ್ತು ಶರಣ ಭೂಮಿ ಬಸವ ಕಲ್ಯಾಣ

8. ಕ್ರೈಸ್ತರಿಗೆ ಕ್ರಾಸ್, ಮುಸ್ಲಿಮರಿಗೆ ಅರ್ಧಚಂದ್ರ ನಕ್ಷತ್ರ, ಸಿಬ್ಬರಿಗೆ ಎರಡು ಕತ್ತಿ ಮಧ್ಯ ಡಾಲು ಮುಂತಾಗಿ ಇರುವಂತೆ ನಿಮ್ಮ ಗಣ ಲಾಂಛನ (Community Symbol) ಯಾವುದು ?
ವೃತ್ತ, ಅದರೊಳಗಿರುವ ಷಟ್ಕೋನ, ಮಧ್ಯದಲ್ಲಿ ಇಷ್ಟಲಿಂಗಾಕೃತಿ, ಕೋನಗಳಲ್ಲಿ ಶ್ರೀಗುರು ಬಸವ ಎಂಬ ಆರಕ್ಷರ. ಇದೇ ಗಣ ಲಾಂಛನವನ್ನೇ ಧ್ವಜದಲ್ಲಿ ಬಳಸಲಾಗುವುದು. ಗಣ ಧ್ವಜವನ್ನು ಬಸವ ಧ್ವಜ ಎಂದು ಕರೆಯಬೇಕು.

9. ನಿಮ್ಮ ಧರ್ಮದ ಧೈಯವೇನು ?
ಜಾತಿ, ವರ್ಣ, ವರ್ಗ, ಭೇದಗಳು ಮಾನವನ ಕಲ್ಪನೆ ಎಂದರಿತು ಜಾತಿವರ್ಣ ವರ್ಗರಹಿತ ಧರ್ಮಸಹಿತ ಶರಣ ಸಮಾಜ, ಕಲ್ಯಾಣ (ದೈವೀ) ರಾಜ್ಯ ಕಟ್ಟುವುದು.

10. ಲಿಂಗಾಯತವು ವೈದಿಕ ಮತವೆ ?
ಲಿಂಗಾಯತವು ಅವೈದಿಕ ಧರ್ಮ. ಇದು ಜಾತಿ ಪದ್ಧತಿಯನ್ನು ಒಪ್ಪುವುದಿಲ್ಲ. ವೇದಾಗಮ, ಶೃತಿ ಸ್ಮೃತಿ ಪುರಾಣಗಳನ್ನು ತನ್ನ ಧಾರ್ಮಿಕ ಸಂವಿಧಾನ ಎಂದು ಒಪ್ಪುವುದಿಲ್ಲ. ಚತುರ್‌ವರ್ಣ, ಚತುರಾಶ್ರಮ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿಲ್ಲ. ಯಜ್ಞ - ಯಾಗಾದಿಗಳನ್ನು ಮತ್ತು ಬಹುದೇವತೋಪಾಸನೆಯನ್ನು ನಿಷೇಧಿಸಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಅಂತ್ಯಜ, ಸ್ತ್ರೀ ಎಂಬ ಭೇದವೆಣಿಸದೆ ಎಲ್ಲ ಮಾನವರಿಗೆ ಧರ್ಮ ಸಂಸ್ಕಾರವನ್ನು, ಗುರುತ್ವ - ಜಂಗಮತ್ವ ಮಠ-ಪೀಠಾಧಿಕಾರವನ್ನು ಕೊಡುತ್ತದೆ.

ಸಮಾರೋಪದ ಮಡಿಗಳು - ಮನವಿ

ಶರಣ ಬಂಧುಗಳೇ,

1. ಮನಸ್ಸಿನಲ್ಲಿ ಏನೋ ಒಂದು ದುರಾಲೋಚನೆಯನ್ನು ಇಟ್ಟುಕೊಂಡು ಸಾಹಿತ್ಯ ಬರೆಯುವ ಸಾಹಿತಿಗಳು ಮತ್ತು ಬರೆಸುವ ಮಠಾಧಿಪತಿಗಳ ಸಂಖ್ಯೆ ಬೆಳೆಯುತ್ತಿದೆ. ಈ ಬೆರಳೆಣಿಕೆಯ ಜನರ ಹಿತಾಸಕ್ತಿಯನ್ನು ಮನದಲ್ಲಿಟ್ಟುಕೊಂಡು ಸಮಾಜದ ಬೃಹತ್ ಭಾಗಕ್ಕೆ ಅನ್ಯಾಯ ಮಾಡಬೇಡಿರಿ, ಏನೊಂದೂ ಕಾರಣವಿಲ್ಲದ ಧರ್ಮಗುರು ಬಸವಣ್ಣನವರನ್ನು ದ್ವೇಷಿಸುವ ಅವರನ್ನು ಧರ್ಮಗುರು, ಆದಿ ಪ್ರಮಥ ಎಂದೊಪ್ಪದ ಧೂರ್ತರ ತಂತ್ರಗಳನ್ನು ಬೇಗನೇ ಅರಿಯಿರಿ.

2. ವಿಶ್ವಗುರು ಬಸವಣ್ಣನವರು ಓರ್ವ ಶ್ರೇಷ್ಠ ಪ್ರವಾದಿ. ಅವರು ಕೊಟ್ಟ ಲಿಂಗಾಯತ ಧರ್ಮ ಮೂಲೆ ಗುಂಪಾಗದಂತೆ ಅದನ್ನೆಂದು ರಕ್ಷಿಸಿ, ಭಾರತ ದೇಶಕ್ಕೆ, ಲೋಕಕ್ಕೆ ಪರಿಚಯಿಸಬೇಕಾಗಿದೆ. ಭಾರತದಲ್ಲಿ ಸಂವಿಧಾನಾತ್ಮಕ ಮನ್ನಣೆ ಪಡೆಯಬೇಕಾಗಿದೆ. ಜಾಗತಿಕ ಧರ್ಮಗಳ (World-religions) ಸಾಲಿನಲ್ಲಿ ಲಿಂಗಾಯತ ಧರ್ಮವನ್ನು ಸೇರಿಸಬೇಕಾಗಿದೆ. ಬಸವಾಗಿ ಪ್ರಮಥರ ಮಹಾನ್‌ ಕೊಡುಗೆ ವ್ಯರ್ಥವಾಗದೆ ಕೀರ್ತಿಶಾಲಿಯಾಗಬೇಕಾಗಿದೆ, ಲೋಕಮನ್ನಣೆ ಹೊಂದಬೇಕಾಗಿದೆ. ನೀವು ತಪ್ಪುತಪ್ಪಾಗಿ “ವೀರಶೈವ ಧರ್ಮ' ಮತ್ತು 'ವೀರಶೈವ ಸಮಾಜ' ಎಂದು ಕರೆದರೆ ಲಿಂಗಾಯತ ಧರ್ಮದ ಸ್ವಾತಂತ್ರ್ಯ ಸಾರ್ವಭೌಮತ್ವಕ್ಕೆ ಕುಂದುತರುವಿರಿ, ಕರ್ನಾಟಕದಲ್ಲಿರುವ ಇಷ್ಟಲಿಂಗಧಾರಿಗಳಾದ ನೀವಾರೂ ವೀರಶೈವರಲ್ಲ, ನೀವು ಲಿಂಗಾಯತರು. ಆ ವೀರಶೈವರು ಬೇರೆಯೇ ಇದ್ದಾರೆ.

ಜನಗಣತಿಯಲ್ಲಿ ಅಥವಾ ಯಾವುದೇ ಅರ್ಜಿ ಪತ್ರಗಳಲ್ಲಿ ಲಿಂಗಾಯತ, ಲಿಂಗಾಯತ ಧರ್ಮ ಎಂದೇ ಕಾಣಿಸಿರಿ. ವೀರಶೈವ ಪದದ ದೋಷ ಅರಿತು, ಮರೆತು ಸಹ ಬಳಸಬೇಡಿರಿ. ಸಂವಿಧಾನಾತ್ಮಕ ಮನ್ನಣೆಗಾಗಿ ಪ್ರಯತ್ನಿಸುವಾಗ ಅಥವಾ ಜನಗಣತಿಗಾಗಿ ಪ್ರಯತ್ನಿಸುವಾಗ ಕೇಂದ್ರ ಸರ್ಕಾರವು ಒಂದು ಆಯೋಗ-ಸಮಿತಿ ರಚಿಸಿ, ಅಭಿಪ್ರಾಯ ಸಂಗ್ರಹಣೆ ಮಾಡಲು ಹೊರಟರೆ ತಮಿಳು ನಾಡು, ಆಂಧ್ರ, ಕೇರಳಗಳಲ್ಲಿರುವ ಪ್ರತ್ಯೇಕ ಗುಂಪಾಗಿ ಇಂದೂ ಇರುವ (ಬಸವ ಪೂರ್ವದ) ವೀರಶೈವರಿಂದಾಗಿ, ಅವರು ಅದನ್ನು ಸನಾತನ ವೈದಿಕ ಮತವೆಂದೇ ಹೇಳುವ ಕಾರಣ, ಲಿಂಗಾಯತ ಧರ್ಮ-ಸಮಾಜಗಳಿಗೆ ಹಾನಿಯಾಗುತ್ತದೆ. ನಮಗೆ ಸಂಬಂಧವಿಲ್ಲದ ಒಂದು ಹಣೆಪಟ್ಟಿ ಕಟ್ಟಿಕೊಂಡು ಹಾನಿ ಮಾಡಿಕೊಳ್ಳುವ ಮೂರ್ಖತನ ಬೇಡ. ಈ ಬಗ್ಗೆ ಈಗಿನಿಂದಲೇ ಜಾಗೃತರಾಗಿ ಜನರಿಗೆ ತಿಳುವಳಿಕೆ ಕೊಡಿರಿ.

ಧೃವೀಕರಣ

ಇಂದು ಧೃವೀಕರಣ (Polarisation) ಅಗತ್ಯವಿದೆ. ಜೀವ ವಿಜ್ಞಾನದಲ್ಲಿ ಫಿಶನ್ (Fission) ಒಡೆಯುವಿಕೆ ಮತ್ತು ಪ್ಯೂಶನ್ ಕೊಡುವಿಕೆ ಎಂಬ ಕ್ರಿಯೆಗಳು ಬರುತ್ತವೆ. ಭಿನ್ನ ಭಿನ್ನ ವಿಚಾರಧಾರೆಯವರು ಸೇರಿಕೊಂಡು ಎಲ್ಲ ಕಡೆಯಲ್ಲೂ ಬರೀ ಗೊಂದಲ ಎಬ್ಬಿಸಿ ಜನರ ಮನಶಾಂತಿ ಕೆಡಿಸಿ, ಸಂದೇಹಗಳನ್ನು ಬಿತ್ತುವರು. ಡಾ|| ಚಿದಾನಂದ ಮೂರ್ತಿಯವರು ತಮ್ಮ ಆಶಯ ಭಾಷಣದಲ್ಲಿ ಬಸವ ಪ್ರಣೀತ ಲಿಂಗಾಯತ ಧರ್ಮವನ್ನು ಎಷ್ಟು ಮಲಿನಗೊಳಿಸಬೇಕೋ, ಎಕೃತಗೊಳಿಸಬೇಕೋ ಅಷ್ಟು ಮಾಡಿದ್ದಾರೆ. ಬಹುದೇವತೋಪಾಸನೆ ಪುರಸ್ಕರಿಸಿದ್ದಾರೆ, ಅಡ್ಡಪಲ್ಲಕ್ಕಿ ಮುಂತಾದ ಅಸಮಾನತೆಯ ಆಚರಣೆಗಳನ್ನು ನಾಜೂಕಾಗಿ ಸಮರ್ಥಿಸಿದ್ದಾರೆ. ಜಾತಿ ಪದ್ಧತಿ, ಪುತ್ರ ಸಂತಾನ ಪಟ್ಟಾಧಿಕಾರಗಳಿಗೆ ಒಳ್ಳೆ ನಯವಾಗಿ ಬೆಂಬಲ ನೀಡಿದ್ದಾರೆ. ಅವರಿಗೆ ಬಹಿರಂಗವಾಗಿ ಪಂಥಾಹ್ವಾನ (Challenge)ನೀಡಬೇಕಾಗಿದೆ. ವಿಕೃತಗೊಂಡ ವ್ಯವಸ್ಥೆಗೆ ಶಾಸಕೀಯ ಮುದ್ರೆ ಒತ್ತುವಂತೆ, ಭ್ರಷ್ಟಾಚಾರವನ್ನೇ ಶಿಷ್ಟಾಚಾರವನ್ನಾಗಿ ಮಾಡುವ ಪ್ರಯತ್ನ ನಡೆಸಿ, ವಿಕೃತಗೊಂಡ ವ್ಯವಸ್ಥೆಯ ಸುಧಾರಣೆ, ಪರಿವರ್ತನೆಗೆ ಯತ್ನಿಸದೆ ಸಂಪ್ರದಾಯದ ಪೋಷಣೆಗೆ ನಿಂತಿದ್ದಾರೆ.

ವೀರಶೈವರಿಗೆ ಕಿವಿಮಾತು

1. ಲಿಂಗಾಯತ ಧರ್ಮ ಬಸವಣ್ಣನವರ ಕೊಡುಗೆ, ಗತಿಶೀಲವಾಗಿರುವ ಇದಕ್ಕೂ ಗಂಟುಬಿದ್ದು, ವಿಕೃತಗೊಳಿಸಬೇಡಿರಿ.

2. ನೀವು ವೀರಶೈವರೆಂದು ಕರೆದುಕೊಳ್ಳಿರಿ, ಬಿಡಿರಿ. ಬಸವ ಪೂರ್ವದ್ದು ನಿಮ್ಮ ಮತ ಪಂಥವಿದ್ದರೆ ನೀವು ಬಸವ ಪೂರ್ವದ ಸಾಹಿತ್ಯವೇನಿದೆಯೋ ಅದನ್ನಿಟ್ಟುಕೊಂಡು ನಿಮ್ಮ ಸಿದ್ಧಾಂತ, ಸಾಧನೆ, ದರ್ಶನ ಶಾಸ್ತ್ರ ಸಮಾಜ ಶಾಸ್ತ್ರ ಇತ್ಯಾದಿ ಪ್ರತಿಪಾದಿಸಿ, ವಚನ ಸಾಹಿತ್ಯವನ್ನು ಬಳಸಿ ವೀರಶೈವವನ್ನು ಪ್ರತಿಪಾದಿಸುವ ವಂಚಕತನ ಬಿಡಿರಿ. ನಮ್ಮ ಅಪ್ಪ (ಧರ್ಮಗುರು) ಬಸವಣ್ಣನವರನ್ನು ಅಪ್ಪ (ಧರ್ಮಗುರು) ಎನ್ನದ ಮೇಲೆ ಅವರು ಕೊಟ್ಟ ಆಸ್ತಿ ವಚನ ಸಾಹಿತ್ಯ ಬಳಸಿಕೊಳ್ಳಲು ನಿಮಗೆ ಯಾವ ನೈತಿಕ ಹಕ್ಕಿದೆ? ಯಾವ ಪಾದ್ರಿಯೂ ಕ್ರೈಸ್ತಧರ್ಮ ಪ್ರತಿಪಾದಿಸಲು ಖುರಾನ್‌ನ ಅಥವಾ ವೇದಗಳ ಆಧಾರ ಪಡೆಯುವುದಿಲ್ಲ. ಯಾವ ಮುಸ್ಲಿಮನು ತನ್ನ ಧರ್ಮವನ್ನು ಪ್ರತಿಪಾದಿಸಲು ಬೈಬಲನ್ನು ಬಳಸುವುದಿಲ್ಲ, ಹಾಗೆಯೇ ಈ ವೀರಶೈವವಾದಿಗಳು ತಮ್ಮ ಪ್ರಾಚೀನ ಮತವನ್ನು ಪ್ರತಿಪಾದಿಸಲು ವಚನ ವಾಹ್ಮಯದ ಆಧಾರ, ಅವಲಂಬನೆ ಪಡೆಯದೆ ತಮ್ಮ ಸ್ವತಂತ್ರ ಆಧಾರ ಶಾಸವೇನಿದೆಯೋ ಅದನ್ನು ಪ್ರತಿಪಾದಿಸಲಿ.

ಜಗಳ, ಭಿನ್ನಾಭಿಪ್ರಾಯ, ವಾದ-ವಿವಾದ ಚರ್ಚೆ, ಅಸ್ಪಷ್ಟತೆ ಬೇಡ, ವಿಶ್ವಗುರು ಬಸವಣ್ಣನವರನ್ನು ಆದಿ ಪ್ರಮಥರು, ಧರ್ಮ ಸ್ಥಾಪಕರು ಎಂದೊಪ್ಪಿ ಅವರು ಅವರ ಸಮಕಾಲೀನರು, ಅವರ ಪರಂಪರೆಯ ಕೆಲವು ತರಣರು ಶಿವಯೋಗಿಗಳು ಕೊಟ್ಟ ವಚನ ಸಾಹಿತ್ಯವನ್ನು ಧಾರ್ಮಿಕ ಸಂವಿಧಾನ (Religious Constitution) ಎಂದು ಒಪ್ಪುವವರೆಲ್ಲ ಲಿಂಗಾಯತ ಧರ್ಮಾನುಯಾಯಿಗಳು. ನಮ್ಮ ಅಪ್ಪ ಬಸವಣ್ಣ - ತಾಯಿ ವಚನ ಸಾಹಿತ್ಯ ; ಬಸವ ಸಂತಾನವಾದ ನಾವು ಶರಣ ಪರಂಪರೆಯವರು. ಇದನ್ನೊಪ್ಪದ ಮೂರು ಸಾವಿರ ಮಠದ ಜಗದ್ಗುರುಗಳು, ಮುಂಡರಗಿ ಶ್ರೀಗಳು, ಡಾ|| ಚಿದಾನಂದ ಮೂರ್ತಿ ಇತ್ಯಾದಿ ಇತ್ಯಾದಿಯವರು ತಮ್ಮ ಅಪ್ಪ ಯಾರೆಂದಾದರೂ ಹೇಳಿಕೊಳ್ಳಲಿ ಅವರ ಗೊಡವೆ ನಮಗೇಕೆ ? ಅವರು ನೆರೆ ಮನೆಯವರಾಗಿರಲಿ ! ನಮ್ಮ ಬಸವಣ್ಣನ ಮಹಾಮನೆ (ಲಿಂಗಾಯತ ಧರ್ಮ ಸಮಾಜ)ಯಲ್ಲಿ ಸೇರಿಕೊಂಡು ನಿತ್ಯ ಕಿರುಕುಳ ಕೊಡುವುದು ಬೇಡ. ನಮ್ಮ ಅಪ್ಪ - ಅವ್ವರನ್ನು ಗೌರವಿಸುವ ನಮ್ಮ ನಿಷ್ಠೆಗೆ ಭಂಗ ತರುವುದು ಬೇಡ.

1. ನಮ್ಮ ಅಪ್ಪ ಯಾರೋ ಗೊತ್ತಿಲ್ಲ ಅಂದರೆ ಓರ್ವ ಧರ್ಮಗುರುವಿಲ್ಲ
2. ನಮ್ಮ ಅಪ್ಪಂದಿರು ಐವರು - ಕಾಲ್ಪನಿಕ ಪಂಚಾಚಾರ್ಯರು
3. ನಾವು ದೇವರಿಂದ ಬಂದವರು ಅಂದರೆ ಪರಶಿವನೇ ಸ್ಥಾಪಕ

ಇಂತಹ ಎಲ್ಲ ಅಸಂಗತ ವಿಚಾರ ನಮಗೆ ಬೇಡ. ನಮ್ಮ ಅಪ್ಪ ಸಮತಾವಾದಿ ಬಸವಣ್ಣ ಎಂದು ವಚನ ವಾಜ್ಞಯ ಅನ್ನುವ ತಾಯಿ ನಮಗೆ ಪುನಃ ಪುನಃ ಹೇಳಿ ದೃಢಪಡಿಸಿದೆ. ಇದನ್ನು ಅಲ್ಲಗಳೆಯಲು ವೀರಶೈವ - ಪ್ರಾಚೀನವಾದಿಗಳಿಗೆ ಯಾವ ಹಕ್ಕೂ ಇಲ್ಲ. ತಮಗೆ ಅಪ್ಪನಿಲ್ಲ (ಅಂದರೆ ಧರ್ಮಗುರುವಿಲ್ಲ ಎಂದು ಹೇಳಿಕೊಳ್ಳಲಿ, ನಮಗೆ ಇಲ್ಲ ಎಂದು ಹೇಳಲು ಅವರಾರು?

ಶರಣ ಬಂಧುಗಳೇ, ಧರ್ಮದ ಗುರಿ ಸಂಸ್ಕಾರ, ಸಂಘಟನೆ, ಸಮಾನತೆ ಮತ್ತು ಸೋದರತ್ವ, ಅಪ್ಪ ಬಸವಣ್ಣ ತಾಯಿ ವಚನ ವಾಜ್ಞಯಿ ನಮ್ಮ ನಿಮ್ಮೆಲ್ಲರನ್ನೂ ಸೂತ್ರೀಕರಿಸಿದ್ದಾರೆ. ನಾವು-ನೀವೆಲ್ಲ ಈ ಎರಡು ಸೂತ್ರ ಒಪ್ಪಿದರೆ ಸೋದರ-ಸೋದರಿಯರು. ನಮ್ಮ ಮೇಲೆ ಇಂದು ಬಹುದೊಡ್ಡ ಹೊಣೆಗಾರಿಕೆ ಇದೆ. ಕಾಡುಮೇಡನ್ನದು ಗುಡ್ಡಗವಾರಗಳಲ್ಲಿದ್ದು ಜನ ಬದುಕಲೆಂದು, ಜಗ ಬದುಕಲೆಂದು ವಚನ ಸಾಹಿತ್ಯವನ್ನು ರಕ್ಷಿಸಿಕೊಟ್ಟ ಶರಣರ ಋಣ ತೀರಿಸಬೇಕಾಗಿದೆ. ಆ ವಚನ ವಾಜ್ಞಯದಲ್ಲಿರುವ ಲಿಂಗಾಯತ - ಜಾತ್ಯತೀತ, ಪ್ರಗತಿಪರ ವಿಶ್ವಧರ್ಮವನ್ನು ಬೆಳೆಸಬೇಕಾಗಿದೆ. ಅಂದು ವೈದಿಕರ ಹಿಡಿತದಿಂದ ಧರ್ಮಕರ್ತ ಬಸವಣ್ಣನವರು ಧರ್ಮಗಂಗೆಯನ್ನು ಬಿಡುಗಡೆ ಮಾಡಿ, ಶ್ರೀ ಸಾಮಾನ್ಯನಿಗೆ, ಎಲ್ಲರಿಗೆ ಹಂಚಿದಂತೆ, ಇಂದು ವೀರಶೈವವಾದಿಗಳ ಕೈಯಿಂದ ಲಿಂಗಾಯತ ಧರ್ಮವನ್ನು ಬಿಡುಗಡೆ ಮಾಡಿ, ಜನಮನದಲ್ಲಿ ಪ್ರತಿಷ್ಠಾಪಿಸಬೇಕಾಗಿದೆ, ಭಾರತಕ್ಕೆ ಎತ್ತಿ ತೋರಬೇಕಾಗಿದೆ, ವಿಶ್ವಕ್ಕೆ ಪರಿಚಯಿಸಬೇಕಾಗಿದೆ. ಏಕೆ ? ಜನ ಬದುಕಬೇಕಾಗಿದೆ, ರಾಷ್ಟ್ರ ಕಟ್ಟಬೇಕಾಗಿದೆ.

ಲಿಂಗಾಯತವು ಹೆಚ್ಚು ಪ್ರಗತಿಪರವಾಗಿದ್ದು, ಇದು ಅವೈದಿಕ (ವೈದಿಕವಲ್ಲ) ಮತ್ತು ಆಹಿಂದು (ಹಿಂದೂ ಧರ್ಮವಲ್ಲ) ಧರ್ಮವಾಗಿದ್ದು, ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಕೆಳಗಿನ ತನ್ನದೇ ಆದ ವಿಶೇಷ ಗುಣಗಳಿಂದ ಕೂಡಿ ಸ್ವತಂತ್ರ, ಸ್ವಾವಲಂಬಿ ಮತ್ತು ಪರಿಪೂರ್ಣ ಗಣ ಧರ್ಮವಾಗಿ ರಾರಾಜಿಸುತ್ತಿದೆ.

1. ಧರ್ಮ ಸಂಸ್ಥಾಪಕ ಪ್ರವಾದಿ : ವಿಶ್ವಗುರು ಬಸವಣ್ಣನವರು (1134-1196)
2. ಧರ್ಮ ಸಂಹಿತೆ : ವಚನ ಸಾಹಿತ್ಯ
3. ಧರ್ಮ ಭಾಷೆ : ಕನ್ನಡ
4. ಧರ್ಮದ ದೇವರ ಹೆಸರು : ಲಿಂಗದವ
5. ಧರ್ಮದ ಲಾಂಛನ : ವಿಶ್ವದಾಕಾರದಲ್ಲಿರುವ ಸೃಷ್ಟಿಕರ್ತ ಲಿಂಗದೇವನ ಕುರುಹಾದ ಇಷ್ಟಲಿಂಗ. (ಸದಾ ಎದೆಯ ಮೇಲೆ ಧರಿಸಬೇಕು)

6, ಧರ್ಮ ಕ್ಷೇತ್ರ : ಶ್ರೀ ಗುರುಬಸವಣ್ಣನವರ ಲಿಂಗೈಕ್ಯ ಕ್ಷೇತ್ರ ಕೂಡಲ
ಸಂಗಮ. ಇದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿದೆ. ಶರಣ ಭೂಮಿ
ಬಸವ ಕಲ್ಯಾಣವು ಬೀದರ ಜಿಲ್ಲೆಯಲ್ಲಿದೆ.
7. ಧಾರ್ಮಿಕ ವಾರ್ಷಿಕ ಸಮಾವೇಶ : ಬೃಹತ್‌ ಜಾಗತಿಕ ಸಮಾವೇಶ ಶರಣ ಮೇಳವು ಕೂಡಲ ಸಂಗಮದಲ್ಲಿ ಪ್ರತಿ ವರ್ಷ ಜನವರಿ 11ರಿಂದ 15ರವರೆಗೆ ನಡೆಯುತ್ತದೆ.

8. ಧಾರ್ಮಿಕ ವ್ರತ : ಶರಣ ವ್ರತ
9, ಧಾರ್ಮಿಕ ದೀಕ್ಷೆ :- ಇಷ್ಟಲಿಂಗ ದೀಕ್ಷೆ
10. ಧಾರ್ಮಿಕ ಸ್ಥಳ : ಬಸವ (ಅನುಭಾವ) ಮಂಟಪ

11. ಪೂಜಾವಿಧಿ : ಶ್ರೀಗುರುಬಸವಣ್ಣ ಗೋಲಾಕಾರದ ಕುರುಹು ಇಷ್ಟಲಿಂಗ ಮತ್ತು ಪವಿತ್ರಾತ್ಮರಾದ ಜಂಗಮರ ಪೂಜೆ.

12. ವಾರದ ಧಾರ್ಮಿಕ ಸಮಾವೇಶ : ಸಾಮೂಹಿಕ ಪ್ರಾರ್ಥನೆ - 'ಶರಣ ಸಂಗಮ'
13. ಪವಿತ್ರ ಮಾಸ : ಶ್ರಾವಣ - ವಚನ ಪಠಣ, ಶ್ರವಣ ಮುಖ್ಯ

14. ಧ್ವಜ : ಷಟ್ಯೂನ, ಇಷ್ಟಲಿಂಗ ಸಹಿತ ಶ್ರೀಗುರು ಬಸವಧ್ವಜ

15. ಪರಂಪರೆ : ಗುರು ಬಸವಣ್ಣನವರಿಂದ ಮೊದಲ್ಗೊಂಡು ಆ ಪರಂಪರೆಯಲ್ಲಿ ಸಾಗಿ ಬಂದ ಶರಣ ಪರಂಪರೆ.

16. ಧಾರ್ಮಿಕ ಸಹೋದರತ್ವ : ಯಾವುದೇ ಜಾತಿ, ಮತ, ವರ್ಗ, ಲಿಂಗ ಭೇದ ಇರದ ಸಮಾನತೆ

17. ಧರ್ಮದ ಧೈಯ : ಜಾತಿ, ವರ್ಣ, ವರ್ಗರಹಿತ ಧರ್ಮ ಸಹಿತ್ಯ ಶರಣ ಸಮಾಜ ನಿರ್ಮಾಣ, ಕಲ್ಯಾಣ ರಾಜ್ಯ ನಿರ್ಮಾಣ

Source: Lingayataru Veerasaivaralla A book written by Pujya Sri Jagadguru Mata Mahadevi, Published by: Viswakalyana Mission, Basava Mantapa, 2035, 20the Main, II Block, Rajajinagar, Baganalore - 560 010

ಪರಿವಿಡಿ (index)
*
Previous ಕಲ್ಯಾಣ ಅಂದು ಹೇಗೆ ಇತ್ತು? ಲಿಂಗಾಯತತತ್ವ ವಿರುದ್ಧ ಆಚರಣೆಗಳು. Next