Previous ಬಸವಣ್ಣ ಮತ್ತು ಸಿದ್ಧಾಂತ_ಶಿಖಾಮಣಿ ಲಿಂಗಾಯತ ಧರ್ಮ ಸರ್ವಸ್ವತಂತ್ರ ಧರ್ಮ Next

ಮಹಾಯೋಗಿ ಶ್ರೀ ವೇಮನ

*

ಮಹಾಯೋಗಿ ಶ್ರೀ ವೇಮನ

ಮಹಾಯೋಗಿ ವೇಮನ 15ನೇ ಶತಮಾನದ ತೆಲಗು ಕವಿಗಳಲ್ಲಿ ಪ್ರಮುಖ ಹೆಸರು. ಕನ್ನಡದ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನ ಮಹಾಕವಿ, ಮಹಾಯೋಗಿಯಾಗಿದ್ದಾರೆ.

ಮಹಾಯೋಗಿ ವೇಮನ ಅವರು ಲಿಂಗಾಯತದ ಧರ್ಮಕ್ಕೆ ಸಮುದಾಯಕ್ಕೆ ಸೇರಿದವರಾಗಿದ್ದು, ಕೆಲ ಸಂಶೋಧಕರು ವೇಮನರು ಮೂಲತಃ ರೈತರೆಂದು ಹೇಳಿದರೆ, ಕೆಲವರು ಇವರು ಕೊಂಗವೀಡು ಸಂಸ್ಥಾನದ ರಾಜ ಗದ್ದಮ್ ವೇಮ ಅವರ ಕಿರಿಯ ಪುತ್ರನೆಂದು ಹೇಳುತ್ತಾರೆ. ಆಂಧ್ರದ ಅನಂತಪುರ ಜಿಲ್ಲೆಯ ಕದಿರಿ ಪಲ್ಲಿಯಲ್ಲಿ ಯೋಗಿ ವೇಮನ ಅವರ ಸಮಾಧಿ ಇದೆ.

ಕಲ್ಲು ಕಲ್ಲೇ;
ಒಂದು ವೃಕ್ಷ ವೃಕ್ಷವೇ;
ಒಂದು ಪ್ರಾಣಿ ಪ್ರಾಣಿಯೇ;
ಒಬ್ಬ ಮಾನವನು ಮಾನವನೇ;
ಶಿವನು ಮಾತ್ರವೇ ಶಿವನು.. ನಮ್ಮಲ್ಲಿರುವ ಶಿವನನ್ನು ನಾವು ಏಕೆ ಗುರುತಿಸಲಾಗುತ್ತಿಲ್ಲ.?
ಎಂದು ನೊಂದುಕೊಳ್ಳುತ್ತಾರೆ ಯೋಗಿ ವೇಮನರು..

Mahayogi Vemana ಮಹಾಯೋಗಿ ಶ್ರೀ ವೇಮನ

ದೊರೆತಿರುವ ದಾಖಲೆಗಳ ಪ್ರಕಾರ ವೇಮನರು ಸಿದ್ಧಾಪುರ ಸಮೀಪದ ಕುಮಾರಗಿರಿಯ ವೇಮರೆಡ್ಡಿಯ ಮಗ. ವೇಮನ ಹೆತ್ತವರಿಂದ, ಒಡಹುಟ್ಟಿದವರಿಂದ, ಸಂಬಂಧಿಕರಿಂದ ಅನಾದರಕ್ಕೆ ಗುರಿಯಾಗಿ ದುಶ್ಚಟಗಳ ದಾಸನಾಗುತ್ತಾನೆ. ಪರಸ್ತ್ರೀ ಸಂಗದಲ್ಲಿ ವಿಷಯಾಸಕ್ತನಾದ ವೇಮನ ವೇಶ್ಯಾಸ್ತ್ರೀಯೊಬ್ಬಳ ಸಹವಾಸ ಮಾಡಿ, ಮನೆಯ ಸಂಪತ್ತು ಹಾಳುಗೆಡವುತ್ತಾನೆ. ವೇಮನನಿಗೆ ಅತ್ತಿಗೆಯಾಗಿ ಬಂದ "ಹೇಮರೆಡ್ಡಿ ಮಲ್ಲಮ್ಮ" ಮೈದುನನ ಮನ ತಿದ್ದುವಲ್ಲಿ ಪ್ರಯತ್ನಿಸಿ ಸಫಲಳಾಗುತ್ತಾರೆ.

ದುಶ್ಚಟಗಳ ದಾಸನಾದ ವೇಮನ ವೇಶ್ಯಾಸ್ತ್ರೀಯೊಬ್ಬಳ ಮನದಾಸೆ ಈಡೇರಿಸಲು, ಅತ್ತಿಗೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಬೇಕೆಂದು ಕೇಳುತ್ತಾನೆ. ಹೇಮರೆಡ್ಡಿ ಮಲ್ಲಮ್ಮ ಮೈದುನನಾದ ವೇಮನನಿಗೆ ಮೂಗುತಿ ಕೊಡಲು ಒಪ್ಪಿ ಕರಾರೊಂದನ್ನು ವಿಧಿಸುತ್ತಾಳೆ.

“ವೇಮನ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಆ ವೇಶ್ಯಾಸ್ತ್ರೀಗೆ ಕೊಡುವಾಗ, ಆಕೆ ನಗ್ನಳಾಗಿ ಬಂದು ವೇಮನ ಕುಳಿತದ್ದ ಮಂಚವನ್ನು ಮೂರು ಸುತ್ತು ಸುತ್ತಬೇಕು. ಮೂರು ಸುತ್ತು ಹಾಕಿದ ನಂತರ ಹಿಂಬದಿಗೆ ಬಾಗಿ, ಎರಡು ಕಾಲುಗಳ ನಡುವೆ ಬಗ್ಗಿ ಕೈ ಚಾಚಿ ವೇಮನನಿಂದ ಮೂಗುತಿಯನ್ನು ಪಡೆಯಬೇಕು. ಅವಳು ಆ ಮೂಗುತಿಯನ್ನು ಪಡೆಯುವವರೆಗೂ ವೇಮನ ಆಕೆಯ ನಗ್ನದೇಹವನ್ನು ತದೇಕ ಚಿತ್ತನಾಗಿ ನೋಡಬೇಕು”. ವೇಮನ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನ ಮಾತನ್ನು ಚಾಚು ತಪ್ಪದೆ ಪಾಲಿಸುತ್ತಾನೆ.

ವೇಮನ ತನ್ನ ಪ್ರೇಯಸಿಯ ನಗ್ನ ಶರೀರವನ್ನು ಕಂಡೊಡನೆ ಅವನೊಳಗೆ ಭಯಂಕರವಾದ ಜಿಗುಪ್ಸೆ, ಅಸಹ್ಯಭಾವನೆ ಆವರಿಸಿ ಒಡನೆಯೇ ಗಾಭರಿಗೊಂಡು ಕಣ್ಮುಚ್ಚಿ –

ತಾಯಿಯ ಗರ್ಭದಿಂದ ತಾಂ ಬರುವ ಸಮಯದಿ
ಮೊದಲು ವಸ್ತ್ರಮಿಲ್ಲ, ತುದಿಗುಮಿಲ್ಲ
ನಡುವೆ ಬಟ್ಟೆಯುಡುವುದೇಕೆಂದು ತಿಳಿಯಿರಿ
ವಿಶ್ವತೋಭಿರಾಮ ಕೇಳುವೆ ಮಾ||

ಎಂದು ತತ್ವ್ತಜ್ಞಾನ ಹೇಳುತ್ತಾ, ತಾನು ನಗ್ನನಾಗಿ ವೈರಾಗಿಯಂತೆ ಕಾಲ್ತೆಗೆದು ಹೊರ ಹೊರಟವನು, ಮುಂದೆ ತನ್ನ ಸಾಧನೆಯಿಂದ ಮಹಾಯೋಗಿಯಾದನು.

ತಿರುಪತಿಗೆ ಹೋಗುವವನೇ ದೇವನು. ಕಾಶಿಗೆ ಹೋಗುವವನೇ ದೇವನು. ಮಕ್ಕಾಗೆ ಹೋಗುವವನೇ ದೇವನು. ಯಾರು ದೇವನು ? ಎಲ್ಲಿದ್ದಾರೆ ದೇವರು ? ಎಂದು ಹುಡುಕುವವನೇ ದೇವನು. ’ಮುಕ್ತಿ’ ಎಂಬುವುದು ಹತ್ತು ಲಕ್ಷಗಳ ಗಾವುದ ದೂರದಲ್ಲಿಲ್ಲ. ತ್ರಿಕರಣಶುದ್ಧಿ ಎಂಬುವುದು ಮೊದಲನೆಯ ಮೆಟ್ಟಿಲು. ಧ್ಯಾನ ಎಂಬುವುದು ಎರಡನೆಯ ಮೆಟ್ಟಲು. ನಿಜವಾಗಲೂ ನಾವು ಮುಕ್ತಿಯನ್ನು ಕೋರುವವರಾದರೇ ನಿಜವಾಗಲೂ ಧ್ಯಾನ ಮಾಡುತ್ತೇವೆ.

“ಏತಕ್ಕಯ್ಯಾ ಮಾನವ ಜನ್ಮ ?”

ಮನಸ್ಸನ್ನು ಮರೆಸುವುದೇ ಧ್ಯಾನ. ಮನಸ್ಸನ್ನು ಮರೆಸಿದಾಗಲೇ ಆತ್ಮ ಪ್ರತ್ಯಕ್ಷವಾಗುತ್ತದೆ. ಒಂದು ಕಡೆ ಸಂಗೀತ ಇರುತ್ತದೆ, ಮತ್ತೊಂದು ಕಡೆ ಧ್ಯಾನ ಇರುತ್ತದೆ. ಇದರ ಹೆಸರೇ ಸಂಗೀತ ಧ್ಯಾನ ಯಜ್ಞ. ಎಲ್ಲಿ ’ನಿನ್ನದು’, ’ನನ್ನದು’ ಎಂಬುವ ಭಾವನೆ ಇಲ್ಲದೆ ಎಲ್ಲ ಮರೆತು ಹೋಗುತ್ತೇವೊ ಅಲ್ಲಿ ಆತ್ಮ ಪ್ರತ್ಯಕ್ಷವಾಗುತ್ತದೆ, ವಿರಾಜಿಸುತ್ತದೆ. ’ಆಧ್ಯಾತ್ಮಿಕತೆ’ ಎಂದರೆ ’ನಾನು’, ’ನನ್ನದು’ ಎಂಬುವುದನ್ನು ಬಿಡುವುದು. ಭಗವದ್ಗೀತೆಯಲ್ಲಿ ಹೇಳಿದರೂ ಸರಿ ಸಿನಿಮಾ ಹಾಡಿನಲ್ಲಿ ಹೇಳಿದರೂ ಸರಿ, ಸತ್ಯ ಒಂದೇ.

ಎರಡು ಕಣ್ಣಿರುವವನು, ಮೂರು ಕಣ್ಣಿನವನಾಗಬೇಕು, ’ಮುಕ್ಕಣ್ಣ’ ನಾಗಬೇಕು. ಯಾವಾಗ ಮನಸ್ಸು ಶೂನ್ಯವಾಗುತ್ತದೆಯೋ ವಿಶೇಷವಾಗಿ ಪ್ರಾಣಶಕ್ತಿ ನಮ್ಮಲ್ಲಿ ಪ್ರವಹಿಸುತ್ತದೆ. ಅದೇ ನಮಗೆ ಬೇಕಾಗಿರುವುದು. ನಾವೇ ದೇವರುಗಳು. ಜೀವನೇ ದೇವನು, ದೇಹವೇ ದೇವಾಲಯ, ಆತ್ಮವೇ ಪರಬ್ರಹ್ಮ, ಇದೇ ಸತ್ಯ. ಯೋಗಿ ವೇಮನ ನಮಗೆ ಎಷ್ಟು ಧ್ಯಾನ ಸಾರವನ್ನು, ಆತ್ಮಜ್ಞಾನ ಸಾರವನ್ನು ನೀಡಿದರೋ ಹೇಳಲಾಗುವುದೇ ಇಲ್ಲ.

*
ಪರಿವಿಡಿ (index)
Previous ಬಸವಣ್ಣ ಮತ್ತು ಸಿದ್ಧಾಂತ_ಶಿಖಾಮಣಿ ಲಿಂಗಾಯತ ಧರ್ಮ ಸರ್ವಸ್ವತಂತ್ರ ಧರ್ಮ Next