Previous ಹುರುಳಿಲ್ಲದ ವಿಷಯ ಕಲ್ಯಾಣ ಅಂದು ಹೇಗೆ ಇತ್ತು? Next

ಶ್ರೀ ಬೃಹನಮಠ ಚಿತ್ರದುರ್ಗ

*

ಮುರುಘಾ ಮಠ ಇತಿಹಾಸ

ಚಿತ್ರದುರ್ಗವನ್ನಾಳಿದ ಪ್ರಸಿದ್ದ ಪಾಳೆಯಗಾರರಲ್ಲಿ “ಬಿಚ್ಚುಗತ್ತಿ ಭರಮಣ್ಣನಾಯಕ”ನೂ ಒಬ್ಬ. ಕ್ರಿ.ಶ.1689 ರಿಂದ 1721 ರವರೆಗೆ ಆಳ್ವಿಕೆ “ಮುಂದೇ ನೀನು ಚಿತ್ರದುರ್ಗದ ರಾಜನಾಗುತ್ತಿಯೆಂದು”. ಚಿತ್ರದುರ್ಗದ ಬೃಹನ್ಮಠದ ಪರಂಪರೆಯಲ್ಲಿನ ಎಂಟನೇ ಪಟ್ಟಾಧಿಕಾರಿಗಳಾಗಿದ್ದ ಮುರಿಘೇಂದ್ರ ರಾಜೇಂದ್ರರು (ಕ್ರಿ.ಶ.1640-1710) ಆರ್ಶೀವಾದ ಮಾಡಿದರಂತೆ. ನಂತರದಲ್ಲಿ ಪ್ರವಾಸದಿಂದ ಮರಳಿ ಬರುವ ವೇಳೆಗೆ, ಭರಮಣ್ಣನಾಯಕನ ಚಿತ್ರದುರ್ಗದ ರಾಜನಾಗಿದ್ದ. ಪ್ರವಾಸದಿಂದ ಹಿಂದಿರುಗಿದ ತಮ್ಮ ಗುರುಗಳನ್ನು ಕಂಡು ಹರ್ಷಿತಗೊಂಡ ಅವನು ತುಂಬುಮನಸ್ಸಿನಿಂದ ಗುರುಗಳನ್ನು ಸ್ವಾಗತಿಸಿದ. ತನ್ನ ಭಕ್ತಿಯ ಕಾಣಿಕೆಯೆಂಬಂತೆ ಬೆಟ್ಟದ ಮೇಲಿರುವ ಸಂಪಿಗೆ ಸಿದ್ದೇಶ್ವರ ದೇವಸ್ಥಾನದ ಪಕ್ಕದಲ್ಲಿ 360 ಅಂಕಣಗಳ ವಿಸ್ತಾರವಾದ ದೊಡ್ಡಮಠವೊಂದನ್ನು ಕಟ್ಟಿಸಿಕೊಟ್ಟ. ಅನಂತರ ಬೆಟ್ಟದಿಂದ ದೂರದಲ್ಲಿರುವ ಸ್ಥಳದಲ್ಲಿ ಇನ್ನೊಂದು ಮಠವನ್ನು ನಿರ್ಮಿಸಿದ. ಮಠಕ್ಕೆ ಅವನು ಅರ್ಪಿಸಿದ ವಸ್ತುಗಳಲ್ಲಿ ಗಂಟೆಯೂ ಒಂದು. ಅದರಲ್ಲಿ ಅವರ ಹೆಸರಿದೆ. ಹೀಗಾಗಿ ಶ್ರೀ ಮುರಿಗೇಂದ್ರ ರಾಜೇಂದ್ರರೇ ಈ ಪೀಠದ ಮೂಲ ಸ್ಥಾಪಕರಾಗಿದ್ದಾರೆ. ಈಗ ಬೆಟ್ಟದ ಮೇಲಿರುವ ಮಠ ಬಳಕೆಯಲ್ಲಿದೇ ಕೇವಲ ಒಂದು ಸ್ಮಾರಕವಾಗಿದೆ.

ಈಗಿರುವ ಮುರುಘಾಮಠವು ಚಿತ್ರದುರ್ಗ-ದಾವಣಗೆರೆ ಹೆದ್ದಾರಿಯಲ್ಲಿ ಚಿತ್ರದುರ್ಗದಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಈ ಮಠ ಕ್ರಿ.ಶ. 1703ರ ಸುಮಾರಿನಲ್ಲಿ ನಿರ್ಮಾಣವಾಗಿರಬಹುದೆಂದು ಭಾವಿಸಲಾಗಿದೆ. ವಿಶಾಲವಾದ ಸ್ಥಳದಲ್ಲಿ ಭವ್ಯವಾದ ಅರಮನೆಯನ್ನು ಹೋಲುವಂತಹ ಕಟ್ಟಡವನ್ನು ಹೊಂದಿರುವ ಈ ಬೃಹನ್ಮಠ ಸ್ಥಾಪನೆಯಾದಗಿನಿಂದ ಪಾಳೆಯಗಾರರಿಂದ ಇನ್ನಿತರ ಸಂಸ್ಥಾನಗಳವರಿಂದ ಎಲ್ಲಕ್ಕಿಂತ ಹೆಚ್ಚಾಗಿ ಜನಸಾಮಾನ್ಯರಿಂದ ಗೌರವಾದರಗಳು ಸಲ್ಲುತ್ತಲೇ ಬಂದಿವೆ. ಈಗಿನ ಪಟ್ಟಾಧಿಕಾರಿಗಳಾದ ಶ್ರೀ ಶಿವಮೂರ್ತಿ ಸ್ವಾಮಿಗಳವರ ಆಶ್ರಯದಲ್ಲಿ ಅನೇಕ ವಿದ್ಯಾಸಂಸ್ಥೆಗಳು ನಡೆಯುತ್ತಿವೆ.

ಸಾಮಾಜಿಕ ಕ್ಷೇತ್ರದಲ್ಲಿ ಮುರುಘಾ ಮಠ:

· ಜನರ ಸಂಕಷ್ಟಗಳಿಗೆ ಬೃಹನ್ಮಠವು ಸದಾ ಮಿಡಿಯುತ್ತ ಬಂದಿದೆ. ಭೀಕರ ಬರಗಾಲ ಬಿದ್ದಾಗ ಗಂಜಿಕೇಂದ್ರಗಳನ್ನು ಸ್ಥಾಪಿಸಿ ಅನೇಕರ ಪ್ರಾಣ ಉಳಿಸಿದೆ.
· ಬಡವಿದ್ಯಾರ್ಥಿಗಳಿಗಾಗಿ ಹಲವೆಡೆ ಉಚಿತ ಪ್ರಸಾದ ನಿಲಯಗಳನ್ನು ತೆರೆದಿದೆ.
· ಕೋಮು ಗಲಭೆಯಲ್ಲಿ ನೊಂದವರಿಗೆ ಸಾಂತ್ವನ ನೀಡಿದೆ.
· ಆಶ್ರಯವಿಲ್ಲದ ಬಡವರಿಗೆ, ಹಿಂದುಳಿದವರಿಗೆ ಹಾಗೂ ದಲಿತರಿಗೆ ಮಠವು ನಿವೇಶನಗಳನ್ನಾಗಿ ಮಾಡಿ, ಉಚಿತವಾಗಿ ಹಂಚಿದೆ.
· ಹಲವು ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹಗಳು ಮತ್ತು ಶ್ರೀಮಠಕ್ಕೆ ಪರಸ್ಥಳಗಳಿಂದ ಬಂದು ಹೋಗುವ ಜನರಿಗೆ ನಿತ್ಯದಾಸೋಹ.
ಹೀಗೆ ಹತ್ತು ಕೆಲವು ಜನಪರ ಕಾರ್ಯಗಳೊಂದಿಗೆ ಈ ಬೃಹನ್ಮಠವು ಆಧ್ಯಾತ್ಮಿಕದೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿದೆ.

ಶಿಕ್ಷಣ ಕ್ಷೇತ್ರದಲ್ಲಿ ಮುರುಘಾ ಮಠ:

“ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ” ಎಂಬ ಬಸವಣ್ಣನವರ ವಾಣಿಯಂತೆ ಶಿಕ್ಷಣ ಪ್ರಸಾರವೇ ಸಮಾಜದ ಏಳಿಗೆಗೆ ಕಾರಣವೆಂಬುದನ್ನು ಬೃಹನ್ಮಠ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದೆ.

ಕರ್ನಾಟಕದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಶಾಲಾ ಕಾಲೇಜುಗಳು, ಪ್ರಸಾದ ನಿಲಯಗಳು ಇವನ್ನು ನಡೆಸುತ್ತಿರುವ ಕೆಲವೇ ಧಾರ್ಮಿಕ ಸಂಸ್ಥೆಗಳಲ್ಲಿ ಬೃಹನ್ಮಠವೂ ಒಂದಾಗಿದೆ. ಇದರ ಒಂದು ಅಂಗಸಂಸ್ಥೆಯಾದ ‘ಎಸ್.ಜೆ.ಎಂ. ವಿದ್ಯಾಪೀಠ’ವು ಶಿಶುವಿಹಾರಗಳು, ಪ್ರಾಥಮಿಕ-ಮಾಧ್ಯಮಿಕ-ಪ್ರೌಢಶಾಲೆಗಳು ಪದವಿಪೂರ್ವ ಮತ್ತು ಕಲಾ, ವಿಜ್ಞಾನ, ವಾಣಿಜ್ಯ, ಕಾನೂನು, ಲಲಿತಕಲಾ ಪದವಿ ಕಾಲೇಜುಗಳು; ಚಿತ್ರಕಲಾ, ಶುಶ್ರೂಷೆ ಮತ್ತಿತರ ವೃತ್ತಿ ಶಿಕ್ಷಣದ ವಿವಿಧ ವಿದ್ಯಾಲಯಗಳು; ತಂತ್ರಜ್ಞಾನ, ದಂತವೈದ್ಯಕೀಯ, ಔಷಧಿ ವಿಜ್ಞಾನ ಮಹಾವಿದ್ಯಾಲಯಗಳು; ಅಂಗವಿಕಲ ಮಕ್ಕಳ ವಸತಿಯುತ ಶಾಲೆಗಳು, ಈ ಮುಂತಾದುವುಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಈ ವಿದ್ಯಾಪೀಠದ ವಿವಿಧ ವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಸುಮಾರು ಮುಕ್ಕಾಲು ಪಾಲು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಎಂಬುದು ಗಮನಾರ್ಹ ಸಂಗತಿ. ಬೃಹನ್ಮಠವು ಹೀಗೆ ಕೇವಲ ಧಾರ್ಮಿಕ ಸಂಸ್ಥೆಯಾಗಷ್ಟೆ ಉಳಿಯದೇ, ಶಿಕ್ಷಣ ಕ್ಷೇತ್ರದಲ್ಲೂ ವಿಶಿಷ್ಟ ಸೇವೆಯನ್ನು ಸಲ್ಲಿಸಿದೆ ಮತ್ತು ಈಗಲೂ ಸಲ್ಲಿಸುತ್ತದೆ.

ಶ್ರೀ ಮಠದ ಪರಂಪರೆ ಮತ್ತು ಚಿತ್ರದುರ್ಗದ ಪರಿಸರ

ಚಿತ್ರದುರ್ಗ ಜಿಲ್ಲೆ ಕರ್ನಾಟಕದಲ್ಲಿಯೇ ಅತ್ಯಂತ ಮಹತ್ವವನ್ನು ಪಡೆದ ಸ್ಥಳ. ಇಲ್ಲಿಯ ಇತಿಹಾಸ ಅಧ್ಯಯನ ಯೋಗ್ಯವಾದುದು. ಆದರೆ ಇಲ್ಲಿಯ ಚರಿತ್ರೆಯು ಕೇವಲ ಇಂದು ನಿನ್ನೆಯದಲ್ಲ. ಕಾಲದಿಂದ ಕಾಲಕ್ಕೆ ತನ್ನದೇ ಆದ ಮಹತ್ವದ ಮೈಲುಗಲ್ಲಿನಂತೆ ಗುರುತಿಸಲ್ಪಟ್ಟ ಪ್ರದೇಶ. ಹಿಂದಿನ ಪ್ರಾಗೈತಿಹಾಸಿಕ ಕಾಲದಿಂದ ಇಂದಿನ ಪ್ರಸ್ತುತದವರೆಗೂ, ತನ್ನ ಕಾಲಗರ್ಭದಲ್ಲಿ ಹುದುಗಿಸಿಕೊಂಡಿದ್ದ ಘಟನಾವಳಿಯನ್ನು ಬಿಚ್ಚಿ ಹರಡಿಕೊಳ್ಳುತ್ತ, ಕೆದಕಿದಷ್ಟೂ ಆಳಕ್ಕಿಳಿಯುತ್ತ ಹುಡುಕಿದಷ್ಟೂ ಎತ್ತರಕ್ಕೇರುತ್ತ ಪ್ರತಿ ಹೆಜ್ಜೆ ಹೆಜ್ಜೆಗೂ ಕುತೂಹಲ ಕೆರಳಿಸುತ್ತ ಹುಡುಕಾಟಕ್ಕೆ ಹಚ್ಚುತ್ತದೆ. ಹುಡುಕುತ್ತಾ ಹೊರಟಾಗ, ಇಲ್ಲಿಯ ಭೌಗೋಳಿಕ ಹಿನ್ನಲೆ, ಇತಿಹಾಸ, ಈ ನೆಲದಲ್ಲಿ ಆಳಿ-ಬಾಳಿದವರ ಬದುಕಿನ ರುದ್ರ ರಮಣೀಯತೆಯತ್ತ ಕೊಂಡೊಯ್ಯುತ್ತದೆ.

ಜಿಲ್ಲೆಯ ಉದ್ದಗಲಕ್ಕೂ ಹರಡಿ ಹಬ್ಬಿರುವ ಗುಡ್ಡಬೆಟ್ಟಗಳ ಸಾಲು ಕಣಿವೆ-ಕೊಳ್ಳಗಳು, ಇಲ್ಲಿಯ ಕೋಟೆ ಕೊತ್ತಲೆಗಳು, ಸಾವಿರಾರು ಗುಡಿ-ಗುಂಡಾರಗಳು, ಮಠಮಾನ್ಯಗಳು, ವಾಸ್ತುಶಿಲ್ಪಕತೆ, ಇಲ್ಲಿಯ ಶಾಸನ ಸಂಪತ್ತು, ದಾಖಲಾತಿಗಳು, ಸ್ಮಾರಕಗಳು, ಪ್ರಾಚೀನ ಅರ್ವಾಚೀನ ಸಂಸ್ಕೃತಿಗಳ ಭವ್ಯ ಇತಿಹಾಸವನ್ನು ತೆರೆದಿಡುತ್ತ ಸಾಮಾನ್ಯನಿಂದ ಮೊದಲಾಗಿ ಸಂಶೋಧಕನವರೆಗೂ ಮೂಕವಿಸ್ಮಿತರನ್ನಾಗಿ ಮಾಡುತ್ತದೆ.

ಚಿಕ್ಕಮಂಗಳೂರು ಜಿಲ್ಲೆಯಿಂದ ಹರಿದು ಬರುವ 'ವೇದಾವತಿ' ನದಿಯು ೨೦೭ ಕಿ.ಮೀ. ಬಯಲು ನಾಡುಗಳಾದ ಹೊಸದುರ್ಗ, ಹಿರಿಯೂರು ಮತ್ತು ಚಳ್ಳಕೆರೆ ತಾಲೂಕುಗಳಲ್ಲಿ ಹರಿದು ಆಂಧ್ರಪ್ರದೇಶವನ್ನು ಪ್ರವೇಶಿಸುತ್ತದೆ. ಈ ಜಿಲ್ಲೆಯಲ್ಲಿ ಹರಿಯುವ ಇನ್ನೊಂದು ನದಿಯಾದ ಚನ್ನಹಗರಿ ನದಿಯು ಬಳ್ಳಾರಿ ಜಿಲ್ಲೆಯಿಂದ ಹರಿದು ಬಂದು ಚಳ್ಳಕೆರೆ ಮತ್ತು ಮೊಲಕಾಲ್ಮೂರು ತಾಲೂಕುಗಳಲ್ಲಿ ಹರಿದು ಆಂಧ್ರಪ್ರದೇಶವನ್ನು ಪ್ರವೇಶಿಸಿ ಈ ಚಿತ್ರದುರ್ಗ ಜಿಲ್ಲೆಯನ್ನು
ಪ್ರಾಕೃತಿಕವಾಗಿ ಶ್ರೀಮಂತಗೊಳಿಸಿವೆ. ಈ ನದಿಯ ನೀರನ್ನು ಬಳಸಿಕೊಂಡ ಜಿಲ್ಲೆಯ ಜನತೆ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಶ್ರೀಮಂತ ಇತಿಹಾಸದ ಜೊತೆ-ಜೊತೆಗೆ ಹತ್ತಾರು ಜಾನಪದ ಕಲೆಗಳು ಜನರ ನಡುವೆ ಹಾಸುಹೊಕ್ಕಾಗಿ ಇಂದಿಗೂ ಜೀವಂತವಾಗಿವೆ. ಹುಣಸೇ, ಮಾವು, ಸೀತಾಫಲ ಹಣ್ಣಿನ
ಮರಗಳನ್ನು ಬೆಳೆಯುವುದರ ಜೊತೆಗೆ ಹತ್ತಿ, ಜೋಳ, ತೊಗರಿ, ಗೋಧಿ, ನೆಲಗಡಲೆ, ಸೂರ‍್ಯಕಾಂತಿ, ಭತ್ತ, ನವಣೆಯನ್ನು ಬೆಳೆಯುವ ಬೆಳೆಗಳಾಗಿವೆ. ಈ ಕೃಷಿ ವಲಯಕ್ಕೆ ಬೇಕಾಗುವಷ್ಟು ಮಳೆ ಸಿಗದಿದ್ದರೂ "ವಾರ್ಷಿಕ ಸರಾಸರಿ ಮಳೆ ೫೫೫ ಮೀಲಿಮೀಟರಗಳು ಮಾತ್ರ. ಚಿತ್ರದುರ್ಗ ಸಮುದ್ರ ಮಟ್ಟದಿಂದ
ಸುಮಾರು ೨೦೦೦ ಅಡಿ ಎತ್ತರದಲ್ಲಿದೆ". [೧] ಸಾಂಪ್ರದಾಯಿಕ ಕೃಷಿಯನ್ನೇ ಹೆಚ್ಚಾಗಿ ನೆಚ್ಚಿಕೊಂಡ ಇಲ್ಲಿಯ ರೈತರು ಈಗೀಗ ಹೊಸತನಕ್ಕೆ ತಮ್ಮನ್ನು ತೊಡಗಿಸಿಕೊಂಡು ವಾಣಿಜ್ಯ ಬೆಳೆಗಳತ್ತ ಮನಸ್ಸು ಮಾಡುತ್ತಿದ್ದಾರೆ.

’ಬಯಲು ಸಂಗ್ರಹಾಲಯ’ ಏಳು ಸುತ್ತಿನ ಕೋಟೆ, ಚಿತ್ರದುರ್ಗದ ಪ್ರಮುಖ ಆಕರ್ಷಣೆ. ಹೆಜ್ಜೆ ಹೆಜ್ಜೆಗೂ ಕಥೆ ಹೇಳುವ ಕೋಟೆ ಕೊತ್ತಲಗಳ ಈ ತಾಣ ಸುರಂಗಮಾರ್ಗ, ಗುಪ್ತಮಾರ್ಗಗಳಿಗೂ ಹೆಸರು. ಇಂತಹ ಗುಪ್ತಮಾರ್ಗದಲ್ಲಿ ನುಸುಳುತ್ತಿದ್ದ ವೈರಿ ಪಡೆಯ ಸೈನಿಕರನ್ನು ಒಣಕೆಯಿಂದಲೇ ಕೊಂದು ಓಬವ್ವ ವಿಖ್ಯಾತಳಾಗಿದ್ದಾಳೆ. ಕೋಟೆ, ಬಾಗಿಲು, ಹೊಂಡ ಹೀಗೆ ಅನೇಕ ಕಟ್ಟಡಗಳು ದುರ್ಗದ ಕಥೆ ಹೇಳುತ್ತವೆ. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ, ಹೊಳಲ್ಕೆರೆ ತಾಲ್ಲೂಕಿನ ರಾಮನಗಿರಿಯ ಕರಿಸಿದ್ದೇಶ್ವರಬೆಟ್ಟ, ಹೊಸದುರ್ಗ ತಾಲೂಕಿನ ಶ್ರೀರಾಂಪುರ ಮತ್ತು ವಜ್ರಕ್ಷೇತ್ರಗಳು ಈ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಾಗಿ ಪ್ರಸಿದ್ಧವಾಗಿವೆ. ಈ ಜಿಲ್ಲೆಯಲ್ಲಿ ಸಂಖ್ಯಾ ದೃಷ್ಟಿಯಿಂದ ಲಿಂಗಾಯತ ಮಠಗಳ ಪ್ರಾಬಲ್ಯತೆಯನ್ನು ಸಾಧಿಸದಿದ್ದರೂ ಅಸ್ತಿತ್ವದಲ್ಲಿರುವ ಚಿತ್ರದುರ್ಗದ ಮುರುಘ ರಾಜೇಂದ್ರ ಬೃಹನ್ಮಠ ಮಠವು ರಾಷ್ಟ್ರೀಯ- ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಗೊಂಡು ಚಿತ್ರದುರ್ಗವನ್ನು ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ಚಿತ್ರದುರ್ಗವನ್ನು ಐತಿಹಾಸಿಕ ಹಿನ್ನಲೆಯಲ್ಲಿ ನೋಡಿದಾಗ ಇದು "ಮೌರ್ಯ ಸಾಮ್ರಾಜ್ಯಕ್ಕೆ ಒಳಪಟ್ಟಿತ್ತೆಂದು ಅಶೋಕನ ಶಿಲಾಶಾಸನಗಳಿಂದ ತಿಳಿಯುತ್ತದೆ. [ಬ್ರಹ್ಮಗಿರಿ, ಸಿದ್ಧಾಪುರ, ಜಟ್ಟಂಗಿ ರಾಮೇಶ್ವರ] ೧೮೦೦ ವರ್ಷಗಳ ಹಿಂದೆ ಶಾತವಾಹನರು ಇಲ್ಲಿ ಆಳುತ್ತಿದ್ದರೆಂದು ನಂತರ ಬನವಾಸಿಯ ಕದಂಬರಿಗೆ ಸೇರಿ ೩-೪ನೇ ಶತಮಾನದಲ್ಲಿ ಜಿಲ್ಲೆಯ ಬಹುಭಾಗ ಕದಂಬರಿಗೆ ಸೇರಿತ್ತು. ನಂತರ ಬಾದಾಮಿಯ ಚಾಲುಕ್ಯರಿಗೂ, ರಾಷ್ಟ್ರಕೂಟರಿಗೂ ಸೇರಿತ್ತು. ನಂತರ ನೊಳಂಬರ ಆಳ್ವಿಕೆ ಪ್ರಾರಂಭವಾಗಿ, ನೊಳಂಬವಾಡಿ ೩೨,೦೦೦ ರಾಜ್ಯವೆಂದಾಯಿತು. ೧೦ನೇ ಶತಮಾನದಲ್ಲಿ ಮತ್ತೆ ಚಾಲುಕ್ಯರಿಗೂ, ನಂತರ ಹೊಯ್ಸಳರಿಗೂ ಸೇರಿತ್ತು. ೧೧ನೇ ಶತಮಾನದಿಂದ ಈ ನೊಳಂಬವಾಡಿಯನ್ನು ಉಚ್ಚಂಗಿ ಪಾಂಡ್ಯರು ಚಾಲುಕ್ಯರ ಅಧೀನರಾಗಿ ಆಳಿದರು. ನಂತರ ೧೪-೧೫ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಒಳಪಟ್ಟಿತ್ತು. ೧೫-೧೬ನೇ ಶತಮಾನದಲ್ಲಿ ಕೆಲವು ಪಾಳೆಯಗಾರರು ಅಲ್ಲಲ್ಲೇ ಆಳತೊಡಗಿದರು."[೨] ಇವರಲ್ಲಿ ಮುಖ್ಯರಾದವರು ಚಿತ್ರದುರ್ಗ, ನಿಡಗಲ್ಲು, ಹಟ್ಟಿ ಪಾಳೆಯಗಾರರು.

ಈ ಪಾಳೆಯಗಾರರ ಆಳ್ವಿಕೆಯು ಚಿತ್ರದುರ್ಗದ ಪ್ರಸಿದ್ಧಿಗೆ ಕಾರಣವಾಯಿತು. ಸುಮಾರು ೨೧೧ ವರ್ಷಗಳ ಕಾಲ ಆಳ್ವಿಕೆ ಮಾಡಿದ ಪಾಳೆಯಗಾರರ ಕಾಲದಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕನ ಕಾಲ ಅತ್ಯಂತ ಪ್ರಮುಖವಾಗಿತ್ತು. "ಕ್ರಿ.ಶ. ೧೬೮೯ ರಲ್ಲಿ ಪಟ್ಟಕ್ಕೆ ಬಂದ ಭರಮಣ್ಣ ನಾಯಕನು ಎಲ್ಲ ಶತ್ರುಗಳನ್ನು ಸೆದೆಬಡೆದು ಅತ್ಯಂತ ಧೈರ್ಯ ದಕ್ಷತೆಯಿಂದ ರಾಜ್ಯವಾಳಿದನು. ಇವನು ಶ್ರೀಮುರಿಗಿ ಶಾಂತವೀರ ಸ್ವಾಮಿಗಳ ಆಶೀರ್ವಾದಕ್ಕೆ ಪಾತ್ರನಾದವನಾಗಿದ್ದರಿಂದ ಶ್ರೀ ಮುರುಗಿ ಶಾಂತವೀರ ಸ್ವಾಮಿಗಳಿಗೆ ಬೆಟ್ಟದ ಮೇಲೆ ೩೬೦ ಅಂಕಣದ 'ಕಲ್ಮಠ' ಹಾಗೂ ಬೆಟ್ಟದ ತುದಿಗೊಂದು ಮಠ ಕಟ್ಟಿಸಿಕೊಟ್ಟನು." [೩]. ಇವನ ಕಾಲದಿಂದಲೇ ಶ್ರೀಮಠದ ಪರಂಪರೆಯು ಬೆಳೆಯಿತು ಮತ್ತು ಮುಂದಿನ ಪಾಳೆಯಗಾರರು ಈ ಮಠಕ್ಕೆ ಆಶ್ರಯದಾತರಾಗಿದ್ದರು ಎಂದು ತಿಳಿದುಬರುತ್ತದೆ.

ಚಿತ್ರದುರ್ಗದ ಇತಿಹಾಸವನ್ನು ನಾವು ಕೆದಕಿ ನೋಡಿದಾಗಲ್ಲೆಲ್ಲಾ ಹೊಸ ಹೊಸ ಅಂಶಗಳು ಹೇಗೆ ತಿಳಿಯುತ್ತಾ ಹೋಗುತ್ತವೆಯೋ ಅದರಂತೆ 'ಚಿತ್ರದುರ್ಗ' ಎಂಬ ಹೆಸರು ಹೇಗೆ ಬಂದಿದೆ ಎಂಬುದನ್ನು ನಾವು ನೋಡಿದಾಗ ಸ್ಥಳ ಪುರಾಣವೆ ದೊರೆಯುತ್ತದೆ.

ಚಿತ್ರದುರ್ಗದ ಅರಸರ ವಂಶಾವಳಿಯನ್ನು ಉಲ್ಲೇಖಿಸುವ ಒಂದು ವಂಶಾವಳಿಯಲ್ಲಿ 'ಚಿಂಚನಕಲ್ಲು’ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ ಚಿತ್ರದುರ್ಗದ ರಾಜಕೀಯ ಇತಿಹಾಸದ ಪ್ರಕಾರ “ಪಾಳೆಯಗಾರರ ಮೂಲಪುರುಷ ಚಿತ್ರನಾಯಕನ ಹೆಸರಿನಲ್ಲಿ 'ಚಿತ್ರದುರ್ಗ'ವೆಂದು ಹೆಸರಾಗಿದೆ ಎಂದು ಅಭಿಪ್ರಾಯವಿದೆ. ಅಷ್ಟೇ ಅಲ್ಲದೆ ೧೬೪ನೇ ಶಾಸನದಲ್ಲಿ ಬೆ(ಚಿ)ಮ್ಮತ್ತನೂರದುರ್ಗ, 'ಚಿತ್ರಕಲುದುರ್ಗ' ಎಂದೂ, ಕ್ರಿ.ಶ.೧೭೦೦ ರಲ್ಲಿ ಚಿತ್ರದುರ್ಗದ ೩೭ನೇ ಶಾಸನ-ಮದಕೆರೆಪುರದಲ್ಲಿ ಚಿಂನನಗಿರಿದುರ್ಗ ಎಂದೂ ಕ್ರಿ.ಶ. ೧೭೩೦ರ ೫೪ನೇ ಶಾಸನದಲ್ಲಿ 'ಚಿಂತಲಕಲದುರ್ಗ', ನಂತರ 'ಚಿಂತಲಕಲ್ಲುದುರ್ಗ' ಎಂದು ಕರೆಯಲಾಗಿದೆ. ಕ್ರಿ.ಶ. ೧೮೭೦ರಲ್ಲಿ ಬುಕನನ್ನನ ಪ್ರಕಾರ 'ಛತ್ರಕಲ್‌ದುರ್ಗ'ವೆಂದು ಕರೆಯಲ್ಪಟ್ಟರೆ ಕೃಷ್ಣರಾಯನ ದಿನಚರಿಯಲ್ಲಿ 'ಚಿಮಟದುರ್ಗ' ಎಂದು ಹಾಗೂ ಚಿತ್ರದುರ್ಗದ ಆಯಗಾರರ ವಿವರದಲ್ಲಿ “ಚೀನ್ಮೂಲಗಿರಿದುರ್ಗ'."[೪] ಎಂದು ಕರೆಯಲಾಗಿದೆ. ಅಷ್ಟೇ ಅಲ್ಲದೆ ಪೌರಾಣಿಕ ಹಿನ್ನೆಲೆಯಲ್ಲಿ 'ಹಿಡಿಂಬ ಪಟ್ಟಣ'ವೆಂದು, ನಂತರ ಸೂಳ್ಳಲ್ಲು ಎಂದೂ, ಚಿನ್ಮತ್ತನೂರುಪಟ್ಟಣ, ಪೆರುಮಾಳೆಪುರ, ಬ್ರಹ್ಮಪರಿ ಎಂದೆಲ್ಲ ಕರೆಯಲ್ಪಟ್ಟಿದೆ.

ಪೌರಾಣಿಕ ಕಾಲಕ್ಕಿಂತ ಮೊದಲು ಈ ನಗರವನ್ನು ಚಿನ್ಮೂಲಾದ್ರಿಪುರವೆಂದು, ಆಂಧ್ರದ ಧೃತರ ಕಾಲದಲ್ಲಿ 'ಚಂದವಳ್ಳಿ' ಎಂದು ಟೀಪ್ಪುಸುಲ್ತಾನನ ಕಾಲದಲ್ಲಿ 'ಫರಕಾಬಾದ್' ಎಂದು ಇಂಗ್ಲೀಷರ ಕಾಲದಲ್ಲಿ 'ಚಿಟಲುಡ್ರುಗ್' ಎಂದು ಕರೆಯಲಾಗಿದೆ. ಈ ಎಲ್ಲ ನಾಮಗಳು ಕಾಲ ಕಾಲದಲ್ಲಿ ಬದಲಾವಣೆ ಹೊಂದಿರಬಹುದಾಗಿ ತಿಳಿದರೂ ಪ್ರಸ್ತುತ ಕಾಲಕ್ಕಾಗಲೇ ಇದು 'ಚಿತ್ರದುರ್ಗ' ಎಂದು ಶಾಶ್ವತವಾಗಿ ಉಳಿದುಬಂದಿದೆ.

ಶ್ರೀ ಮಠದ ಹಿನ್ನಲೆ

ಶ್ರೀ ಮುರುಘರಾಜೇಂದ್ರ ಬ್ರಹನ್ಮಠವು ಶೂನ್ಯಪೀಠದ ಬಸವಾದಿ ಅಲ್ಲಮರಿಂದ ಪ್ರಾರಂಭವಾಗಿದೆ ಎಂದು ತಿಳಿದರೂ ಸಹ ಚಿತ್ರದುರ್ಗದಲ್ಲಿ ಮುರಿಗೆ ಮಠದ ಸ್ಥಾಪನೆಗೆ ಕಾರಣರಾದವರು ಮುರಿಗೆ ಶಾಂತವೀರ ದೇಶಿಕರು. ಇವರೇ ೧ನೆಯ ಮುರಿಗೆ ಸ್ವಾಮಿಗಳು. ಕ್ರಿ.ಶ. ೧೭ನೇ ಶತಮಾನದ ಅಂತ್ಯದಲ್ಲಿ ಈ ಮಠ ಸ್ಥಾಪನೆಯಾಗಿದೆ. ಈ ಮುರಿಗೆ ಮಠದ ಸ್ಥಾಪನೆಗೆ ಮೂಲಕಾರಣ ಎಂದರೆ ಚಿತ್ರದುರ್ಗ ಪ್ರಾಂತದ ಬಿಳಿಚೋಡು ಎಂಬ ಗ್ರಾಮದಲ್ಲಿ ದನಕಾಯುವ ಹುಡುಗನು ಒಮ್ಮೆ ಅಡವಿಯಲ್ಲಿ ದನ ಮೇಯಲು ಬಿಟ್ಟು ಮರದ ಕೆಳಗೆ ಮಲಗಿದ್ದಾಗ, ನಾಗರಹಾವೊಂದು ಬಂದು ಅವನ ತಲೆಯ ಮೇಲೆ ಹೆಡೆಯನ್ನು ಎತ್ತಿ ನೆರಳು ಮಾಡಿದ್ದ ದೃಶ್ಯ ಮುರಿಗೆ ಶಾಂತವೀರ ಸ್ವಾಮಿಗಳಿಗೆ ಕಂಡಿತು. ಸ್ವಾಮಿಗಳು ಅವನ ಹತ್ತಿರ ಬರುತ್ತಿದ್ದಂತೆಯೇ ಹಾವು ಅಲ್ಲಿಂದ ಹೊರಟುಹೋಯಿತು. ಸ್ವಾಮಿಗಳು ಆ ಹುಡುಗನಿಗೆ "ನಿನ್ನ ಮೇಲೆ ಶಿವನ ಕೃಪೆಯಾಗಿದೆ. ನೀನು ದುರ್ಗದ ದೊರೆಯಾಗುವೆ"'."[೫] ಎಂದು ಆಶೀರ್ವದಿಸಿ ಮುಂದೆ ನಡೆದರು. ಸ್ವಾಮಿಗಳು ನುಡಿದಂತೆ ಆ ಹುಡುಗ ದುರ್ಗದ ದೊರೆಯಾಗಿ 'ಬಿಚ್ಚುಗತ್ತಿ ಭರಮಣ್ಣನಾಯಕ' ಎಂದು ಖ್ಯಾತನಾದನು.

೧೬೮೯ ರಲ್ಲಿ ಪಟ್ಟಕ್ಕೆ ಬಂದ ಭರಮಣ್ಣನಾಯಕನು ಮೇಲುದುರ್ಗದಲ್ಲಿ ಮುರಿಗೆ ಸ್ವಾಮಿಗಳಿಗಾಗಿ ಮಠವೊಂದನ್ನು ಕಟ್ಟಿಸಿದನು. ಭರಮಣ್ಣ ನಾಯಕನ ಭಕ್ತಿಗೌರವಗಳಿಗೆ ಕಟ್ಟುಬಿದ್ದಂತೆ ಸ್ವಾಮಿಗಳು ಬಂದು ಇಲ್ಲಿಯೇ ನೆಲೆಸಿದರು. ಬೆಟ್ಟದ ಮೇಲಿನ ಬೃಹನ್ಮಠದಲ್ಲಿ ಸ್ವಲ್ಪಕಾಲ ತಂಗಿದ್ದ ಸ್ವಾಮೀಜಿಯವರಿಗೆ ಏಕೋ ಅಲ್ಲಿರುವುದು ಇಷ್ಟವಾಗಲಿಲ್ಲವಾಗಿ ಭರಮಣ್ಣ ನಾಯಕನು ಬೆಟ್ಟದ ಕೆಳಗೆ (ಈಗಿನ ಮಠದ ಸ್ಥಳ) ಇನ್ನೊಂದು ಮಠವನ್ನು ಕಟ್ಟಿಸಿಕೊಟ್ಟನು. ಇಲ್ಲಿ ತಂಗಿದ್ದ ಸ್ವಾಮಿಗಳು ೧೭೦೩ ಜುಲೈ ೦೫ ರಂದು ಅಲ್ಲಿಯೇ ಲಿಂಗೈಕ್ಯರಾದರು. ಅವರಿಗೆ ರಚಿಸಲಾದ ಗದ್ದುಗೆಯೇ ಈಗ 'ಕರ್ತೃಗದ್ದುಗೆ' ಎಂದು ಕರೆಯಲಾಗುತ್ತದೆ. ಸ್ವಾಮಿಗಳು ಇಲ್ಲಿಯೇ ನೆಲೆ ನಿಂತಿದ್ದರಿಂದ ಅಲ್ಲಿಯವರೆಗೆ 'ಚರಪೀಠ' ಎನಿಸಿದ್ದ 'ಶೂನ್ಯಪೀಠ'ವು ಸ್ಥಿರಪೀಠವೆನಿಸಿತು.

ಶ್ರೀಮುರಿಗೆ ಶಾಂತವೀರ ದೇಶಿಕರ ತರುವಾಯ ಮುಂದೆ ಅವರ ಮಠವನ್ನು 'ಮುರಿಗೆ ಮಠ'ವೆಂದೂ ಈ ಮಠದ ಪರಂಪರೆಯಲ್ಲಿ ಬಂದ ಎಲ್ಲ ಪೀಠಾಧೀಶರನ್ನು “ಮುರಿಗೆ ಸ್ವಾಮಿಗಳೆಂದೂ ಕರೆಯುವ ರೂಢಿಗೆ ಬಂದಿತು.

“ಮುರಿಗೆ" ಎಂಬುದು ಹೇಗೆ ಬಂದಿತು ಎಂಬುದನ್ನು ನಾವು ತಿಳಿಯುವುದಾದರೆ 'ಮುರಿಗೆ' ಎಂದರೆ ನುರಿ ನುರಿ (ಮುರಿ ಮುರಿ)ಯಾಗಿರುವುದು ಎಂದರ್ಥ. ಸ್ವಾಮಿಗಳು ಹಿಡಿದಿದ್ದ ಬೆತ್ತ, ಧರಿಸಿದ್ದ ರುಮಾಲು ಮತ್ತು ಶಾಲು ಇವೆಲ್ಲವು ಮುರಿ ಮುರಿಯಾಗಿದ್ದರಿಂದ ಅವರಿಗೆ ಮುರಿಗೆ ಸ್ವಾಮಿಗಳೆಂದು ಹೆಸರು ಬಂದಿತೆಂದು ಒಂದು ಹೇಳಿಕೆ. ತಮಿಳಿನಲ್ಲಿ ಮುರುಗನ್ ಎಂದರೆ ಷಣ್ಮುಖ ಎಂದರ್ಥ. ಅದರಿಂದ ಮುರಿಗೆ ಶಬ್ದ ಬಂದಿರಬೇಕು”[೬] ಎಂಬುದು ಇನ್ನೊಂದು ಹೇಳಿಕೆ. ಈ ಮಠದ ಕೆಲವು ಸ್ವಾಮಿಗಳ ಹೆಸರುಗಳ ಹಿಂದೆ ಅವರ ಸ್ಥಳದ ಹೆಸರು ಹೇಳಲ್ಪಟ್ಟಿರುವುದರಿಂದ ಮುರಿಗೆ ಎಂಬುದು ಕೂಡ ಒಂದು ಸ್ಥಳ ಇರಬೇಕು ಎಂದು ಹೇಳಬಹುದು. "ಸ್ವಾಮಿಗಳು ತಮ್ಮ ಮಂತ್ರ ಶಕ್ತಿಯಿಂದ ನಾಗರಹಾವನ್ನು 'ನಾಗಮುರಿಗೆ ಬೆತ್ತ' ಮಾಡಿಕೊಂಡು ಅದನ್ನು ಯಾವಾಗಲೂ ಹಿಡಿದಿರುತ್ತಿದ್ದುದರಿಂದ ಅವರಿಗೆ ಆ ಹೆಸರು ಬಂದಿತ್ತೆಂದು ಮತ್ತೊಂದು"[೭] ಹೇಳಿಕೆಯಾಗಿದೆ. ತಿರುಚಿದ ನಾಗರಹಾವಿನಂತಿದ್ದ ವಿಲಕ್ಷಣವಾದ ಅಪರೂಪದ ಒಂದು ನಾಗಮುರಿಗೆಯ ಬೆತ್ತವನ್ನು ಯಾವಾಗಲೂ ಹಿಡಿದಿರುವುದನ್ನು ಕಂಡು ಮತ್ತು ಅವರನ್ನು ಗುರುತಿಸುವ ಅಂಶವಾಗಿ ಮುರಿಗೆ ಸ್ವಾಮಿಗಳು ಎಂಬ ಹೆಸರು ಶಾಂತವೀರ ಸ್ವಾಮಿಗಳಿಗೆ ಬಂದಿರಬೇಕೆಂದು ತಿಳಿಯುತ್ತದೆ. ಹೀಗೆ ಬಿಚ್ಚುಗತ್ತಿಭರಮಣ್ಣ ನಾಯಕನ ಕಾಲದಲ್ಲಿ ಶಾಂತವೀರ ದೇಶಿಕರಿಂದ ಸ್ಥಿರಪೀಠ ಪ್ರಾರಂಭವಾಗಿ ಅದು ಮುರಿಗೆಮಠ, ಮುರಿಗಾಮಠ, ಮುರುಗಿಮಠ, ಮುರುಘಾಮಠ, ಮುರುಘರಾಜೇಂದ್ರಮಠ, ವಿಶಾಲಮಠ, ಮಹಾಮಠ, ಬೃಹನ್ಮಠ ಹೀಗೆ ಅನೇಕ ಹೆಸರುಗಳಿಂದ ಪ್ರಸಿದ್ಧವಾಗಿ ಖ್ಯಾತಿಯನ್ನು ಪಡೆದುಕೊಂಡಿದೆ.

ಶ್ರೀ ಮಠದ ಗುರುಪರಂಪರೆ

ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು ಎದ್ದು ಕಾಣುವ ಒಂದು ಹಿರಿಯಮಠ. ಈ ಮಠವು ಚಿತ್ರದುರ್ಗ ನಗರದ ಪಶ್ಚಿಮ ಭಾಗದ ಸುಂದರ ಹಾಗೂ ಪ್ರಶಾಂತ ವಾತಾವರಣದಲ್ಲಿದೆ. ಮೂರು ಶತಮಾನಗಳಿಗೂ ಮಿಕ್ಕ ಭವ್ಯ ಪರಂಪರೆಯುಳ್ಳ ಈ ಮಠವು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಅನುಪಮ ಸೇವೆ ಸಲ್ಲಿಸುತ್ತಿದೆ. ಹಾಗಾಗಿ ನಾಡಿನ ಒಂದು ದೊಡ್ಡ ಆಸ್ತಿಯಾಗಿರುವುದಲ್ಲದೆ ಈ ಮಠವು ಧಾರ್ಮಿಕ ಕ್ಷೇತ್ರದಲ್ಲಿ ಒಂದು ಮಹತ್ತರವಾದ ಸ್ಥಾನವನ್ನು ಪಡೆದುಕೊಂಡಿದೆ. ಜೊತೆಗೆ ತನ್ನದೇ ಆದ ಗುರುಪರಂಪರೆಯನ್ನು ಹೊಂದಿದೆ.

ಮುರಿಗಿಮಠ, ಮುರುಘಾಮಠ, ಮುರುಘಮಠ, ಮುರಿಗೆಮಠ, ಮುರುಗಾಮಠ, ವಿಶಾಲಮಠ, ಮಹಾಮಠ, ಬೃಹನ್ಮಠ ಹಾಗೂ ಮುರುಘರಾಜೇಂದ್ರ ಬೃಹನ್ಮಠವಾಗಿ ಅನೇಕ ಹೆಸರುಗಳಿಂದ ಕರೆಯಲ್ಪಟ್ಟು ಈ ಬೃಹನ್ಮಠವು ಹದಿನೇಳನೆಯ ಶತಮಾನದಲ್ಲಿ ಸ್ಥಾಪಿತವಾಗಿದ್ದರೂ ಇದು ಹನ್ನೆರಡನೆಯ ಶತಮಾನದ ಬಸವಾದಿ ಶರಣರ ತತ್ವಾದರ್ಶಗಳ ಅಡಿಗಲ್ಲಿನ ಮೇಲೆ ತನ್ನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದೆ. ಮಹಾ ಶರಣರಾದ ಅಲ್ಲಮ ಪ್ರಭುವಿನಿಂದ ಮೊದಲ್ಗೊಂಡು ಚನ್ನಬಸವಣ್ಣನವರಿಂದ ಮುಂದುವರೆದು ಮತ್ತೆ ಅನೇಕರಿಂದ ಬೆಳೆದು ಬಂದ 'ಶೂನ್ಯಪೀಠ' ಎಂದು ಹೆಸರಾಗಿದೆ. ಶರಣರು ಪ್ರತಿಪಾದಿಸಿದ ಶೂನ್ಯತತ್ತ್ವದ ಮಾರ್ಗದಲ್ಲಿ ಮುಂದುವರೆದು ಬಂದದ್ದೆನ್ನುವ ಅರ್ಥದಲ್ಲಿ ಆ ಹೆಸರು ಇದಕ್ಕೆ ಸಲ್ಲುತ್ತದೆ.

ಒಂದು ಪ್ರಕಾರದಂತೆ ಈ ಮುರುಘಾ ಪೀಠದ ಪರಂಪರೆಯು "ಚನ್ನಬಸವಣ್ಣನವರಿಂದ ಮುಂದೆ ತೋಟದ ಸಿದ್ಧಲಿಂಗಯತಿಯಿಂದ ಮತ್ತು ಅವರ ಶಿಷ್ಯ ಪರಂಪರೆಯ ಬೋಳ ಬಸವೇಶ್ವರರು, ಗುಮ್ಮಳಾಪುರದ ಸಿದ್ಧಲಿಂಗದೇವರು, ಗೂಳೂರು ಸಿದ್ಧವೀರಣ್ಣೊಡೆಯರು, ಗಗನದಯ್ಯಗಳು, ಕಟ್ಟಿಗೆಹಳ್ಳಿ ಸಿದ್ಧಲಿಂಗದೇವರು, ಮುರಿಗೆ ಶಾಂತವೀರ ದೇಶಿಕರು"[೮] ಇವರಿಂದ ಮುಂದುವರೆದುಕೊಂಡು ಪ್ರಸ್ತುತದವರೆಗೆ ಬೆಳೆದು ಬಂದಿದೆ ಎಂದು ಒಂದು ಪ್ರಕಾರವಾದರೆ, ಮತ್ತೊಂದು ಪ್ರಕಾರದಂತೆ ಈ ಪೀಠದ ಪರಂಪರೆಯು ಅಲ್ಲಮಪ್ರಭು, ಚನ್ನಬಸವಣ್ಣ, ಇವರ ನಂತರವಾಗಿ ಸಿದ್ಧರಾಮೇಶ್ವರ, ಅನಾದಿ ಗಣನಾಥ, ಅದಿಗಣೇಶ್ವರ, ನಿರ್ಮಾಯಗಣೇಶ್ವರ, ನಿರಂಜನಸ್ವಾಮಿಗಳು, ಜ್ಞಾನಾನಂದಸ್ವಾಮಿಗಳು, ಆತ್ಮಗಣವರ ಅಧ್ಯಾತ್ಮ ಗಣನಾಥ, ರುದ್ರಮುನಿಸ್ವಾಮಿಗಳು, ಬಸವಪ್ರಭುಸ್ವಾಮಿಗಳು, ಆದಿಲಿಂಗಸ್ವಾಮಿಗಳು, ಚನ್ನವೀರಸ್ವಾಮಿಗಳು, ಗೋಸಲ ಸಿದ್ಧೇಶ್ವರಸ್ವಾಮಿಗಳು, ಚೆನ್ನಬಸವ ರಾಜೇಂದ್ರರು, ತೋಂಟದ ಸಿದ್ಧಲಿಂಗ, ನಿರಕ್ಷರ ಬೋಳ ಬಸವೇಶ್ವರ, ಸಿದ್ಧವೀರೇಶ, ಗುರುಸಿದ್ಧ ದೇಶಿಕೇಂದ್ರಸ್ವಾಮಿಗಳು, ಗಗನದಾರ್ಯ ಸಿದ್ಧವೀರಸ್ವಾಮಿಗಳು, ನೊಡಸಿದ್ಧಲಿಂಗ ದೇಶಿಕೇಂದ್ರರು, ಮುರುಘರಾಜೇಂದ್ರ ಸ್ವಾಮಿಗಳು ಇವರುಗಳಿಂದ ಸಾಗಿ ಬಂದಂತೆ ನಿರೂಪಿತವಾಗಿದೆ. ಆ ಕುರಿತು ಐತಿಹಾಸಿಕ ಅಂಶ ಏನೇ ಇದ್ದರೂ ಚಿತ್ರದುರ್ಗದಲ್ಲಿ ಮುರಿಗೆ ಮಠದ ಸ್ಥಾಪನೆಗೆ ಕಾರಣರಾದವರು ಮುರಿಗೆ ಶಾಂತವೀರ ದೇಶಿಕರು ಎಂದು ತಿಳಿಯುತ್ತದೆ. ಇವರು ಒಂದನೆಯ ಮುರಿಗೆ ಸ್ವಾಮಿಗಳೆಂದೂ ಪ್ರಸಿದ್ಧರಾಗಿದ್ದಾರೆ. ಶಾಂತವೀರ ದೇಶಿಕರ ನಂತರದ ಪರಂಪರೆಯನ್ನು ಈ ಕೆಳಗಿನಂತೆ ನೋಡಬಹುದಾಗಿದೆ.

ಪೀಠಾಧೀಶರು ಗದ್ದುಗೆಯಾದ ಸ್ಥಳ ಕಾಲಾವಧಿ
೧. ಶ್ರೀಮುರಿಗೆ ಶಾಂತವೀರ ದೇಶಿಕರು (೧ನೇ ಮುರುಗೆ ಸ್ವಾಮಿ) ಚಿತ್ರದುರ್ಗ ೧೬೪೦-೧೭೦೩
೨. ಶ್ರೀಗುರುಸಿದ್ಧ ಸ್ವಾಮಿಗಳು [ಇಮ್ಮಡಿ ಮುರಿಗೆ ಸ್ವಾಮಿಗಳು] ಆನಂತಮರ ೧೭೦೩-೧೭೨೯
೩. ಸ್ವಾದಿ ಶ್ರೀಚೆನ್ನಬಸವಸ್ವಾಮಿಗಳು ಹಿರೇಮಾಗಡಿ ೧೭೨೯-೧೯೩೦
೪. ಶಿರಹಟ್ಟಿ ಶ್ರೀಸಿದ್ದಲಿಂಗಸ್ವಾಮಿಗಳು ಚಂಗಡಹಳ್ಳಿ ೧೭೩೦-೧೭೫೭
೫. ನಾಯಕನಹಟ್ಟಿ (ದೊಡ್ಡ) ಶ್ರೀಗುರುಪಾದಸ್ವಾಮಿಗಳು ಗುರುಮಠಕಲ್ಲು ೧೭೫೭-೧೭೬೦
೬ ಮೂರುಸಾವಿರದ (ಸಣ್ಣ) ಶ್ರೀಗುರುಪಾದ ಸ್ವಾಮಿಗಳು ಚಿತ್ರದುರ್ಗ ೧೭೬೦-೧೭೭೯
೭ ಮೂರುಸಾವಿರ ಶ್ರೀಸಿದ್ಧಲಿಂಗ ಸ್ವಾಮಿಗಳು ಹಿರೇಮಾಗಡಿ ೧೭೭೯-೧೭೯೦
೮. ಒಪ್ಪತ್ತಿನ ಶ್ರೀಚೆನ್ನವೀರ ಸ್ವಾಮಿಗಳು ತಿಳವಳ್ಳಿ ೧೭೯೦
೯. ವ್ಯಾಕರಣದ ಶ್ರೀಸಿದ್ದಲಿಂಗ ಸ್ವಾಮಿಗಳು ಹಿರೇಮಾಗಡಿ ೧೭೯೦-೧೮೦೦
೧೦. ನೈಘಂಟಿನ ಶ್ರೀಸಿದ್ದಬಸವ ಸ್ವಾಮಿಗಳು ಹಾವೇರಿ ೧೮೦೦-೧೮೨೦
೧೧. ಸಣ್ಣಬರಹದ ಶ್ರೀರಾಚವಟ್ಟಿ ಸ್ವಾಮಿಗಳು ಚಿತ್ರದುರ್ಗ ೧೮೨೦-೧೮೩೦
೧೨. ಸಾವಳಿಗೆ ಶ್ರೀಗುರುಶಾಂತ ಸ್ವಾಮಿಗಳು ಚಿತ್ರದುರ್ಗ ೧೮೩೫-೧೮೪೦
೧೩. ಸಣ್ಣಪಾದದ ಶ್ರೀಚೆನ್ನವೀರ ಸ್ವಾಮಿಗಳು ಚಿತ್ರದುರ್ಗ ೧೮೪೦–೧೮೫೪
೧೪. ಶಿರಸಂಗಿ ಶ್ರೀಮಹಾಲಿಂಗ ಸ್ವಾಮಿಗಳು ಶಿರಸಂಗಿ ೧೮೫೪-೧೮೭/td>
೧೫. ಹೆಬ್ಬಾಳು ಶ್ರೀರುದ್ರಸ್ವಾಮಿಗಳು ಚಿತ್ರದುರ್ಗ ೧೮೭೦-೧೮೮೧
೧೬ ಬ್ಯಾಡಗಿ ಶ್ರೀಮುಪ್ಪಿನ ಸ್ವಾಮಿಗಳು ಬ್ಯಾಡಗಿ ೧೮೮೧-೧೯೦೩
೧೭. ಶ್ರೀಜಯದೇವ ಸ್ವಾಮಿಗಳು ದಾವಣಗೆರೆ ೧೯೦೩-೧೯೫೬
೧೮. ಶ್ರೀಜಯವಿಭವ ಸ್ವಾಮಿಗಳು ಚಿತ್ರದುರ್ಗ ೧೯೫೬-೧೯೬೪
೧೯. ಶ್ರೀಮಲ್ಲಿಕಾರ್ಜುನ ಸ್ವಾಮಿಗಳು ಹೊಳಲ್ಕೆರೆ ೧೯೬೪-೧೯೯೪
೨೦. ಶ್ರೀಶಿವಮೂರ್ತಿ ಮುರುಘಾ ಶರಣರು - ೧೯೯೧/೯೪


ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಗುರು ಪರಂಪರೆಯಲ್ಲಿ ಬರುವ ಎಲ್ಲ ಪೂಜ್ಯರೂ ಪಟ್ಟಾಧಿಕಾರದ ಆರಂಭದಿಂದ ಹಿಡಿದು ಅಂತ್ಯದವರೆಗೆ ಶರಣ ತತ್ವಗಳ ಆಚರಣೆ ಮತ್ತು ಪ್ರಚಾರಕ್ಕೆ ತಮ್ಮನ್ನೇ ಮುಡುಪಾಗಿಸಿಕೊಂಡಿದ್ದರು. ಇವರ ಕೆಲವು ಸಂಕ್ಷಿಪ್ತ ಮಾಹಿತಿ ನೋಡಬಹುದಾಗಿದೆ.

ಶ್ರೀ ಮುರಿಗೆ ಶಾಂತವೀರ ದೇಶಿಕರು [೧ನೇ ಮುರಿಗೆ ಸ್ವಾಮಿ] ೧೬೪೦-೧೭೦೩

ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಶೂನ್ಯಪೀಠ ಪರಂಪರೆಯ ಪ್ರವರ್ತಕರಾದ ಮುರಿಗೆ ಶಾಂತವೀರ ಸ್ವಾಮಿಗಳು ಶ್ರೀಮಠದ ಇತಿಹಾಸ ನಿರ್ಮಾಣದಲ್ಲಿ ಪ್ರಮುಖ ಸ್ಥಾನವಹಿಸಿದ್ದಾರೆ. ತಮ್ಮ ಜೀವಿತ ಕಾಲವನ್ನೆಲ್ಲ ಧರ್ಮ ಸಂಚಾರದಲ್ಲೇ ಕಳೆದ ಸ್ವಾಮಿಗಳು 'ಮೈಸೂರಿನ ದೊಡ್ಡ ದೇವರಾಜ ಮತ್ತು ಚಿಕ್ಕದೇವರಾಜ, ಭಾಗಾನಗರದ ಕುತುಬ್ ಶಾಹ, ಮಹಾರಾಷ್ಟ್ರದ ಛತ್ರಪತಿ ಶಿವಾಜಿ, ಗದುಗಿನ ಡಾಕಿನ ದೇಸಾಯಿ, ಹರಪನಹಳ್ಳಿಯ ಬಸವಂತನಾಯಕ, ಸೋದೆಯ ಸದಾಶಿವ ನಾಯಕ' ಇಂಥ ಅನೇಕ ದೊರೆಗಳಿಂದ ಮತ್ತು ಅನೇಕ ಗ್ರಾಮಪಟ್ಟಣಗಳ ಅಸಂಖ್ಯಾತ ಪ್ರಜೆಗಳಿಂದ ಸೇವಿತರಾಗಿದ್ದರು. ಇವರು ಹಮ್ಮಿರಕಾವ್ಯ ಅಥವಾ ರಾಜೇಂದ್ರ ವಿಜಯ ಎನ್ನುವ ಒಂದು ಚಂಪೂಕಾವ್ಯ, ಮನುರಾಜೇಂದ್ರ ತಾರಾವಳಿ, ಕಟ್ಟಿಗೆ ತಾರಾವಳಿ ಪ್ರಭುಲಿಂಗದ ಕಂದ, ವೈರಾಗ್ಯ ಷಟ್ಟದಿ, ಶಬ್ದರತ್ನಾಕರ ಮುಂತಾದ ಹಲವಾರು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಸಂಗೀತ ಶಾಸ್ತ್ರಗಳಲ್ಲೂ ಪರಿಣತರಾಗಿದ್ದ ಇವರು ಧರ್ಮ ಕಾರುಣ್ಯಗಳ ಮೂರ್ತಿಯೂ ಆಗಿದ್ದರು.

ಶ್ರೀ ಗುರುಸಿದ್ಧ ಸ್ವಾಮಿಗಳು [ಇಮ್ಮಡಿ ಮುರಿಗೆ ಸ್ವಾಮಿಗಳು] ೧೭೦೩-೧೭೨೯

ಶ್ರೀಮುರಿಗೆ ಶಾಂತವೀರ ಸ್ವಾಮಿಗಳ ಉತ್ತರಾಧಿಕಾರಿಗಳಾಗಿ ಬಂದ ಇಮ್ಮಡಿ ಮುರಿಗೆ ಸ್ವಾಮಿಗಳು ಅತ್ಯಂತ ಪ್ರಮುಖರು. ಇವರು ದುರ್ಗದ ದೊರೆಗಳಾಗಿದ್ದ ಭರಮಣ್ಣನಾಯಕ ಮತ್ತು ಹಿರೇಮದಕರಿ ನಾಯಕರ ಕಾಲದಲ್ಲಿ ರಾಜಗುರುಗಳಾಗಿ ಸೇವಿತರಾಗಿದ್ದರು. ಇವರು ಒಂದು ಕಡೆ ಆಧ್ಯಾತ್ಮಿಕ ಸಿದ್ಧಿಯಲ್ಲಿ ಉನ್ನತ ಶಿಖರವನ್ನೇರಿ ಶಿವಯೋಗಿಗಳಾಗಿ, ಧಾರ್ಮಿಕ ಕ್ಷೇತ್ರದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ, ನಡೆಸುತ್ತಿದ್ದ ಅನ್ಯಾಯ, ಅಧರ್ಮ, ಅತ್ಯಾಚಾರಗಳನ್ನು ನಿರ್ದಾಕ್ಷಿಣ್ಯವಾಗಿ ನಾಶ ಮಾಡುತ್ತಾ ಶಿವಾಚಾರ, ಸದಾಚಾರಗಳನ್ನು ನೆಲೆಯಾಗಿ ನಿಲ್ಲಿಸುತ್ತ, ಇನ್ನೊಂದು ಕಡೆ ತಾವು ಪಡೆದಿದ್ದ ಅನುಭವ, ವಿದ್ವತ್ತೆಗಳನ್ನು
ಕಾವ್ಯಧಾರೆಯ ಮೂಲಕ ಜನಮನಕ್ಕೆ ಮುಟ್ಟಿಸುತ್ತಾ ಅವರ ಮನಸ್ಸನ್ನು ಸದಾಚಾರದ ಕಡೆಗೆ ತಿರುಗಿಸುತ್ತಾ, ಸಮಾಜ ಪರಿಷ್ಕರಣೆಯನ್ನು ಮಾಡುತ್ತಾ, ಆಧ್ಯಾತ್ಮ ಚರಿತ್ರೆ ಹಾಗೂ ಸಾಹಿತ್ಯ ಚರಿತ್ರೆಯಲ್ಲಿ ಪ್ರಾತಃಸ್ಮರಣಿಯರಾಗಿ ಪ್ರಖ್ಯಾತಿ ಹೊಂದಿದರು.

ಸ್ವಾದಿಯ ಶ್ರೀಚೆನ್ನಬಸವ ಸ್ವಾಮಿಗಳು [೧೨೯-೧೯೩೦]

ಶ್ರೀ ಗುರುಸಿದ್ದ ಸ್ವಾಮಿಗಳ ತರುವಾಯ ಬಂದ ಇವರು ಅನೇಕ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳನ್ನು ರೂಪಿಸಿಕೊಂಡು ಸಮಾಜದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದರು. ಸಾರ್ವಜನಿಕ ಚಟುವಟಿಕೆಗಳಿಗೆ ಸಾರ್ವಜನಿಕರ ಹಣದಿಂದಲೇ ನಡೆಯಬೇಕೆಂದು ನಿರ್ಣಯಿಸಿದವರು, ಜನರು ಇವರನ್ನು 'ಕಲ್ಯಾಣದ ಶಿವಶರಣರಿಗೆ ಸರಿಸಮ'ವೆಂದು ಕೊಂಡಾಡುತ್ತಿದ್ದರು.

ಶಿರಹಟ್ಟಿ ಶ್ರೀಸಿದ್ಧಲಿಂಗ ಸ್ವಾಮಿಗಳು [೧೭೩೦-೧೭೫೭]

ಗುರುಪೀಠವನ್ನು ಮುಂದುವರೆಸಿಕೊಂಡು ಬಂದ ಶ್ರೀ ಸಿದ್ಧಲಿಂಗಸ್ವಾಮಿಗಳು ಅಪಾರ ಜ್ಞಾನಿಗಳಾಗಿದ್ದರು. ಇವರು ಸಮಾಜದ ಸ್ವಾಸ್ಥ್ಯಕ್ಕಾಗಿ
ಸ್ವಾಸ್ಥ್ಯಕ್ಕಾಗಿ ವೈದ್ಯ ಸೇವೆ ಮಾಡುತ್ತಾ ಜಂಗಮ ಜಗದೋದ್ಧಾರಕನಾಗಿರಬೇಕು ಎಂಬ ಶರಣರ ವಾಣಿಯನ್ನು ಮನಗಂಡು ಅದರಂತೆಯೇ ನಡೆದವರು.

ನಾಯಕನಹಟ್ಟಿ (ದೊಡ್ಡ) ಶ್ರೀ ಗುರುಪಾದ ಸ್ವಾಮಿಗಳು [೧೭೫೭-೧೭೬೦]

ಮುಂದುವರೆದು ಶೂನ್ಯಪೀಠವನ್ನು ಅಲಂಕರಿಸಿದ ದೊಡ್ಡ ಗುರುಪಾದ ಸ್ವಾಮಿಗಳು ಸಕಲಶಾಸ್ತ್ರ ಪಂಡಿತರಾಗಿದ್ದರು. ಧರ್ಮ ಸಂರಕ್ಷಣೆಗಾಗಿ ತಮಗೆ ಸರಿತೋರಿದ ನಿಷ್ಠುರ ಧೋರಣೆಯನ್ನು ಕೈಬಿಡುವವರಲ್ಲ. ಅಧಿಕಾರ ಅಂತಸ್ತು ಹೋದರೂ ಸರಿಯೇ ತಮ್ಮ ಆತ್ಮತೇಜವನ್ನು ಉಳಿಸಿಕೊಳ್ಳಬೇಕೆಂಬುದೇ ಅವರ ಜೀವನದ ಸಂದೇಶವಾಗಿತ್ತು.

ಮೂರುಸಾವಿರದ (ಸಣ್ಣ) ಶ್ರೀ ಗುರುಪಾದ ಸ್ವಾಮಿಗಳು [೧೭೬೦-೧೭೭೯]

ಪೀಠಾಧಿಕಾರಿಯಾಗಿ ಮುಂದುವರೆದ ಇವರು ಪಟ್ಟಕ್ಕೆ ಬಂದ ಮೇಲೆ ಸದ್ಭಕ್ತಿಪಥದಲ್ಲಿ ನಡೆಯದೆ ಕಿರುಕುಳ ಕುಲಾಚಾರವೆಂಬ ಕೀಳುದಾರಿಯಲ್ಲಿ ನಡೆಯುತ್ತಿದ್ದ ಮೂಢಾತ್ಮರಿಗೆ ಮೂರ್ಖರಿಗೆ ಸದಾಚಾರ ಮಾರ್ಗವನ್ನು ಬೋಧಿಸುತ್ತಾ ಅವರಲ್ಲಿದ್ದ ದುರಾಚಾರಗಳನ್ನು ದೂರೀಕರಿಸುತ್ತಾ ಶೂನ್ಯಪೀಠದಲ್ಲಿ ಶೋಭಿಸುತ್ತಿದ್ದರು.

ಮೂರು ಸಾವಿರದ ಶ್ರೀ ಸಿದ್ಧಲಿಂಗ ಸ್ವಾಮಿಗಳು [೧೭೭೯-೧೭೯೦]

ಇವರು ಸಣ್ಣ ಶ್ರೀಗುರುಪಾದ ಸ್ವಾಮಿಗಳ ನಂತರ ಪಟ್ಟಕ್ಕೆ ಬಂದ ಸ್ವಾಮಿಗಳು “ಅಪಾರ ಕರುಣಾರಸನ್, ಅನಂತಗಣ ಸಮ್ಮತನ್, ಧೀರಜನ್, ಸನ್ನುತನ್, ವೀತಸಂಸಾರ ಸಂಗರತರಂಗು"[೯] ಎಂದು ಅನೇಕ ಹೆಸರಿನಿಂದ ಪ್ರಖ್ಯಾತರಾಗಿದ್ದರು. ಜ್ಞಾನ-ಕ್ರಿಯಾ-ಸಮನ್ವಯವೇ ಸಿದ್ಧಲಿಂಗ ಸ್ವಾಮಿಗಳ ಪ್ರೀಯವಾದ ಮೌಲ್ಯವಾಗಿತ್ತು. ಬುದ್ಧಿಜೀವಿಗಳು ಮತ್ತು ಶ್ರಮಜೀವಿಗಳು ಸಮಾಜದ ಎರಡು ಕೊಡುಗೆಗಳೆಂದು ಭಾವಿಸಿದ್ದರು.

ಒಪ್ಪತ್ತಿನ ಶ್ರೀ ಚನ್ನವೀರ ಸ್ವಾಮಿಗಳು [೧೭೯೦]

ಚನ್ನವೀರ ಸ್ವಾಮಿಗಳು ಪಟ್ಟವೇರಿದ ಕೆಲವು ದಿನಗಳಲ್ಲೇ ಮಠದ ಚಟುವಟಿಕೆಗಳು ಸ್ವಾಮಿಗಳಾದವರು ಪಾಲ್ಗೊಳ್ಳಬೇಕಾದ ವೈಭವದ ಮೆರವಣಿಗೆ ಇತ್ಯಾದಿಗಳು ತಮ್ಮ ಆಧ್ಯಾತ್ಮಿಕ ಸಾಧನೆಗೆ ಸಾಧಕವಾಗುವುದಿಲ್ಲ ಎಂದು ಅವರಿಗೆ ಅನಿಸಿತು. ಅಂಥ ತೀವ್ರ ಅನಿಸಿಕೆಯಲ್ಲೇ ಸ್ವಾಮಿಜಿಗಳ ಶಿವಯೋಗದ ಮೂಲಕ ಲಿಂಗೈಕ್ಯರಾದರು.

ವ್ಯಾಕರಣದ ಶ್ರೀ ಸಿದ್ಧಲಿಂಗ ಸ್ವಾಮಿಗಳು [೧೭೯೦-೧೯೦೦]

ಹೆಸರೆ ಸೂಚಿಸುವಂತೆ ವ್ಯಾಕರಣದಲ್ಲಿ ಪ್ರಬುದ್ಧ ಪಾಂಡಿತ್ಯವನ್ನು ಗಳಿಸಿಕೊಂಡಿದ್ದುದರಿಂದ ಇವರಿಗೆ ವ್ಯಾಕರಣದ ಸಿದ್ಧಲಿಂಗ ಸ್ವಾಮಿಗಳೆಂಬ ಅನ್ವರ್ಥನಾಮ ಬಂದಿತು. ಕನ್ನಡ, ಸಂಸ್ಕೃತ, ಪ್ರಾಕೃತ ಮುಂತಾದ ಭಾಷೆಗಳ ವ್ಯಾಕರಣದಲ್ಲಿ ಆಳವಾದ ಜ್ಞಾನವನ್ನು ಪಡೆದಿದ್ದರು. ಕಾಶಿಯಲ್ಲಿ ಪಾಣಿನಿಯ ವ್ಯಾಕರಣ, ಕಾತಂತ್ರ್ಯ, ಜೈನೇಂದ್ರ ಮುಂತಾದವರ ವ್ಯಾಕರಣಗಳನ್ನು ಲೌಕಿಕವಾಗಿ ಅಧ್ಯಯನ ಮಾಡಿ ತೂಗಿ ನೋಡಿದರು. ಸನ್ಯಾಸ ಜೀವನದಲ್ಲಿ ಹೊಸ ಮೌಲ್ಯಗಳನ್ನು ಮೇಲೈಸಿಕೊಂಡ ಸಿದ್ಧಲಿಂಗ ಸ್ವಾಮಿಗಳು ಶಾಸ್ತ್ರಸಿದ್ಧಾಂತಗಳನ್ನು ಸ್ವತಃ ಅರಗಿಸಿಕೊಂಡು ಸರಳ ಶೈಲಿಯಲ್ಲಿ ಭಕ್ತರಿಗೆ ಬೋಧಿಸುತ್ತಾ ಸದಾಚಾರ-ಶಿವಾಚಾರಗಳನ್ನು ಭೂಮಿಯಲ್ಲಿ ನೆಲೆಗೊಳಿಸುತ್ತಾ ಹಿರೇಮಾಗಡಿಗೆ ಬಂದು ಕೆಲಕಾಲದಲ್ಲಿಯೇ ಬಯಲಾದರು.

ನೈಘಂಟಿನ ಶ್ರೀ ಸಿದ್ದಬಸವ ಸ್ವಾಮಿಗಳು [೧೮೦೦-೧೮೨೦]

ವ್ಯಾಕರಣದ ಶ್ರೀ ಸಿದ್ಧಲಿಂಗ ಸ್ವಾಮಿಗಳ ನಂತರ ಶೂನ್ಯ ಪೀಠವನ್ನು ಆರೋಹಣ ಮಾಡಿದ ಸಿದ್ಧಬಸವಸ್ವಾಮಿಗಳು ಅಪಾರವಾದ ಜ್ಞಾನ ಸಂಪನ್ನರಾಗಿದ್ದರು. ಈ ಜಗತ್ತಿನಲ್ಲಿ ಚಿಂತೆಯಿಲ್ಲದ ಜನಗಳೇ ಇಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಚಿಂತೆ. ಸಿದ್ದಬಸವಸ್ವಾಮಿಗಳ ಚಿಂತೆಯೆಂದರೆ 'ಶಿವಚಿಂತನ ಮತ್ತು ಷಟ್‌ಸ್ಥಳ ವಿಚಾರಮಂಥನ', ಈ ಉದ್ಯೋಗದಲ್ಲಿ ವಿಷ ಬಂದರೆ ತಾವೇ ಉಂಡು ಅಮೃತ ಬಂದರೆ ಭಕ್ತರ ಪಂಕ್ತಿಗೆ ಹಂಚುವ ವಿಶಾಲ ಮನೋಭಾವ ಅವರದಾಗಿತ್ತು. ಇವರು ಸದಾಚಾರವನ್ನು ಬೆಳೆಸುತ್ತಾ ದುರಾಚಾರವನ್ನು ತೊಲಗಿಸುತ್ತಾ ಹಾವೇರಿಗೆ ಬಂದು ಭಕ್ತರಿಂದ ಪೂಜೆಯನ್ನು ಕೈಕೊಳ್ಳುತ್ತ ಅಲ್ಲಿಯೇ ಬಯಲಾದರು.

ಸಣ್ಣ ಬರಹದ ಶ್ರೀ ರಾಚವಟ್ಟಿ ಸ್ವಾಮಿಗಳು [೧೮೨೦-೧೮೩೦]

ಷಟ್‌ಸ್ಥಲ ಪರಬ್ರಹ್ಮ ಸಾಕಾರಮೂರ್ತಿಗಳಾದ ಇವರು ಪಟ್ಟಾಧ್ಯಕ್ಷರಾದ ಮೇಲೆ ನಿತ್ಯದಾಸೋಹ, ನಿತ್ಯ ದೀಪಾರಾಧನೆಗಳ ವ್ಯವಸ್ಥೆ ಮಾಡಿದರು. ಇದಕ್ಕಾಗಿ ಕಾಶಿಯಿಂದ ರಾಮೇಶ್ವರದವರಿಗೂ ಸಂಚರಿಸಿ ಭಕ್ತವೃಂದರಿಂದ ಪಾದಕಾಣಿಕೆಯನ್ನು ಸ್ವೀಕರಿಸುತ್ತಾ ಪ್ರತಿವರ್ಷವೂ ಕಾಣಿಕೆ, ದ್ರವ್ಯ-ಧಾನ್ಯ ರೂಪದಲ್ಲಿ ಸ್ಥಿರವಾಗಿ ಬರುವಂತೆ ವ್ಯವಸ್ಥೆ ಮಾಡಿದರು. ಇದರಿಂದ ಮಠಕ್ಕೆ ಬಂದು ಹೋಗುವ ಭಕ್ತರಿಗೆ ಪ್ರಸಾದ ವ್ಯವಸ್ಥೆಯಾಯಿತು ಮತ್ತು ನಿತ್ಯವೂ ಜಂಗಮ ಪೂಜೆ ದೀಪಾರಾಧನೆ, ದಾಸೋಹ ಕಾರ್ಯಗಳು ತಪ್ಪದೇ ನಡೆಯುವಂತಾಯಿತು.

ಸಾವಳಿಗೆ ಶ್ರೀ ಗುರುಶಾಂತ ಸ್ವಾಮಿಗಳು [೧೮೩೫-೧೮೪೦]

ಸಣ್ಣಬರಹದ ರಾಚವಟ್ಟಿ ಸ್ವಾಮಿಗಳ ತರುವಾಯ ಕಾರಣಾಂತರದಿಂದ ಕೆಲಕಾಲ ಶೂನ್ಯಪೀಠದ ಪೀಠಾಧಿಪತಿಗಳ ಆಯ್ಕೆ ಸ್ಥಗಿತಗೊಂಡಿತ್ತು. ಬಂದಾಗಿತ್ತು. ಆ ನಂತರದಲ್ಲಿ ಸಾವಳಿಗೆ ಗುರುಶಾಂತ ಸ್ವಾಮಿಗಳು ಪಟ್ಟಾಭಿಷಿಕ್ತರಾದರು. ಇವರ ಕಾಲದಲ್ಲಿಯೇ ಶ್ರೀ ಮಠದ ಹಿಂಭಾಗದಲ್ಲಿ ಚಿದ್ವಿಲಾಸ ಭವನವನ್ನು ಕಟ್ಟಿಸಿ ಚಿದಾರಣ್ಯವನ್ನು ಮಾಡಿಸಿದರು. ಧವಲ ಶಿಲೆಗಳಿಂದ ನಿರ್ಮಿತವಾದ ಈ ಮಂಟಪ ಘನವಾದ ತಪ-ಜಪ ಅನುಷ್ಠಾನ ಮತ್ತು ಶಿವಲಿಂಗ ಪೂಜೆಗಳಿಂದ ಕೂಡಿಕೊಂಡಿದೆ.

ಸಣ್ಣಪಾದದ ಶ್ರೀ ಚನ್ನವೀರ ಸ್ವಾಮಿಗಳು [೧೮೪೦–೧೮೫೪]

ಇವರು ಜಂಗಮ, ದಾಸೋಹ, ಷಟ್‌ಸ್ಥಲ ಬೋಧೆಯನ್ನು ಮಾಡುತ್ತ ಸಮಾಜ ವಿರೋಧಿ ಚಟುವಟಿಕೆಗಳನ್ನು ಮೊಳಕೆಯಲ್ಲಿಯೇ ಚಿವುಟಿಹಾಕುತ್ತ ಬೃಹನ್ಮಠದ ಘನತೆ, ಗಾಂಭೀರ್ಯಗಳನ್ನು ಕಾಪಾಡಿಕೊಂಡು ಬಂದವರಾಗಿದ್ದರು. ಯಾರಿಗೂ ಅನ್ಯಾಯ ಮಾಡದೇ ಯಾರನ್ನು ಮೇಲು ಕೀಳೆಂದು ಭಾವಿಸದೆ ಸಮತೂಕದಲ್ಲಿದ್ದು ಸರ್ವಸಮಾನತೆಗಳನ್ನು ಸ್ಥಾಪಿಸಿದರು.

ಶಿರಸಂಗಿ ಶ್ರೀ ಮಹಾಲಿಂಗ ಸ್ವಾಮಿಗಳು [೧೮೫೪-೧೮೭೦]

ಮಹಾಲಿಂಗ ಸ್ವಾಮಿಗಳು ತ್ರಿಕಾಲ ಪೂಜಾ ನಿಷ್ಠರು. ಅನೇಕ ಪವಾಡಗಳನ್ನು ಮೆರೆದ ಮಹಿಮಾ ಪುರುಷರು. ಮಠದಲ್ಲಿ ನಿತ್ಯ ಶಿವಾನುಭವ ಗೋಷ್ಠಿ ಮುಂತಾದವುಗಳನ್ನು ನಡೆಸುತ್ತ ೧೨ನೇ ಶತಮಾನವನ್ನು ಮತ್ತೆ ಮರುಕಳಿಸುವಂತೆ ಮಾಡಿದರು. ಲಿಂಗಾಯತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ 'ಮುರುಗಾ ಜಗದ್ಗುರು ಮಹಾಲಿಂಗ ಪಾಠಶಾಲೆ'ಯನ್ನು ಬೆಳಗಾವಿಯಲ್ಲಿ ಶಿಕ್ಷಣ ತಜ್ಞರಾದ ಚನ್ನಬಸಪ್ಪನವರ ಅಭಿಪ್ರಾಯದ ಮೇರೆಗೆ ತೆರೆಯಲಾಯಿತು. ಇದು ಕರ್ನಾಟಕದ ಪ್ರಪ್ರಥಮ ಶಾಲೆಯೊಂದನ್ನು ತೆರೆದ ಮಠಾಧೀಶರು ಎಂದು ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇಲ್ಲಿಂದ ಮುಂದೆ ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ಮುರುಘಾಮಠ ವತಿಯಿಂದ ವಿದ್ಯಾಸಂಸ್ಥೆಗಳು, ವಿದ್ಯಾರ್ಥಿನಿಲಯಗಳು ಪ್ರಾರಂಭವಾದವು.

ಹೆಬ್ಬಾಳು ಶ್ರೀ ರುದ್ರ ಸ್ವಾಮಿಗಳು [೧೮೭೦-೧೮೮೧]

ಜಗದ್ಗುರುಗಳ ಕಾಲದಲ್ಲಿ ಭಾರತದಲ್ಲಿ ಘೋರ ಕ್ಷಾಮವೂ ತಲೆದೋರಿತ್ತು. ಆಗ ಸ್ವಾಮಿಗಳು ಮಠದಲ್ಲಿದ್ದ ಧವಸ-ಧಾನ್ಯವನ್ನೆಲ್ಲ ಬಳಸಿ ಸುತ್ತ-ಮುತ್ತ ಗಂಜಿ ಕೇಂದ್ರಗಳನ್ನು ಸ್ಥಾಪಿಸಿ ಪ್ರಸಾದದ ವ್ಯವಸ್ಥೆ ಮಾಡಿದರು. ವೈಭವದ ಚಿನ್ನೆಗಳನ್ನೆಲ್ಲ ತ್ಯಾಗ ಮಾಡಿದರು. ಇವರು ನಿಜವಾದ ಮಾನವತಾರಾಧನೆಯ ಮೂರ್ತಿಗಳೆನಿಸಿದರು.

ಬ್ಯಾಡಗಿ ಶ್ರೀ ಮುಪ್ಪಿನ ಸ್ವಾಮಿಗಳು [೧೮೮೧-೧೯೦೩]

ಶ್ರೀ ಮುಪ್ಪಿನ ಸ್ವಾಮಿಗಳು ಚಿತ್ರದುರ್ಗದ ಮುರಿಗೆ ಮಠಕ್ಕೆ ಜಗದ್ಗುರುಗಳಾದಾಗ ಒಂದು ಪರ್ವಕಾಲವಾಗಿತ್ತು. ಇದೇ ವರ್ಷ ಮೈಸೂರು ಚಾಮರಾಜ ಒಡೆಯರು ಬ್ರಿಟಿಷ್ ರೆಸಿಡೆಂಟ್‌ರಿಂದ ಅಧಿಕಾರ ವಹಿಸಿಕೊಂಡು ಮೈಸೂರ ದೊರೆಗಳಾಗಿ ಪಟ್ಟಾಭಿಷೇಕ ಮಾಡಿಸಿಕೊಂಡಿದ್ದರು. “ಗುರುಮನೆ ಅರಮನೆಗಳಲ್ಲಿ ಏಕಕಾಲದಲ್ಲಿ ಪಟ್ಟಾಭಿಷೇಕ ನಡೆದಿದ್ದು ದೈವಾನುಗ್ರಹವೆಂದುಕೊಂಡರು ಜನ.”[೧೦] ಇವರ ಕಾಲ ಅಪೂರ್ವ ಘಟನಾವಳಿಗಳ ಕಾಲವಾಗಿತ್ತು. ಇವರ ಕಾಲದಲ್ಲಿ ರಾಮಕೃಷ್ಣ ಪರಮಹಂಸ, ವಿವೇಕಾನಂದರು ಪ್ರವರ್ಧಮಾನವರಾಗಿದ್ದರು.

ಶ್ರೀ ಜಯದೇವ ಸ್ವಾಮಿಗಳು [೧೯೦೩-೧೯೫೯]

ಶ್ರೀಮಠದ ಇತಿಹಾಸದಲ್ಲಿ ಜಯದೇವಸ್ವಾಮಿಗಳ ಕಾಲಾವಧಿ ಅತ್ಯಂತ ಉಲ್ಲೇಖನೀಯವಾದದ್ದು. ಬಹು ಕರ್ತೃತ್ವಶಾಲಿಗಳಾಗಿದ್ದ ಇವರನ್ನು ಅನೇಕರು ಈಗಲೂ ಪೂಜ್ಯಭಾವದಿಂದ ನೆನೆಯುತ್ತಾರೆ. ಇವರ ಕಾಲದಲ್ಲಿ ಆದ ವಿದ್ಯಾಪ್ರಸಾರ ಮತ್ತು ಧರ್ಮಕಾರ್ಯಗಳು ಅಪಾರ ಪ್ರಮಾಣದವು. ಆಗಿನ ಮೈಸೂರು ಪ್ರಾಂತವಷ್ಟೇ ಅಲ್ಲದೆ ಮುಂಬಯಿ ಪ್ರಾಂತದಲ್ಲೂ ಕೂಡ ಇವರು ಅನೇಕ ವಿದ್ಯಾಸಂಸ್ಥೆಗಳು, ಪ್ರಸಾದನಿಲಯಗಳು, ವಾಚನಾಲಯ, ಗ್ರಂಥಾಲಯಗಳು, ಮಹಿಳಾಸಮಾಜ, ಕ್ರೀಡಾಂಗಣ ಮುಂತಾದ ಹತ್ತು ಹಲವು ಸಮಾಜೋಪಯೋಗಿ ಕಾರ್ಯಗಳಿಗೆ ಉದಾರವಾಗಿ ಧನಸಹಾಯ ನೀಡಿದರು. ಯಾವುದೇ ಭೇದವಿಲ್ಲದೆ ಎಲ್ಲ ಜಾತಿಯ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾದರು. ಅನೇಕ ಸಂಘ-ಸಂಸ್ಥೆಗಳಿಗೆ, ದಲಿತರ ಏಳಿಗೆಗೆ ಉದಾರ ನೆರವು ನೀಡಿದರು. “೧೯೩೪ ರಲ್ಲಿ ಹಾವೇರಿಯಲ್ಲಿ ಗಾಂಧೀಜಿಯವರು ಸ್ವಾಮಿಜಿಗಳನ್ನು ಭೇಟಿ ಮಾಡಿ ರಾಷ್ಟ್ರದ ಸ್ವತಂತ್ರ್ಯ, ಅಭಿವೃದ್ಧಿ, ಅಸ್ಪೃಶ್ಯತೆ ನಿವಾರಣೆ" [೧೧] ಇತ್ಯಾದಿಗಳ ಬಗ್ಗೆ ಚರ್ಚಿಸಿದರೆನ್ನುವುದು ಒಂದು ಗಮನಾರ್ಹವಾದ ಘಟನೆ. “೧೯೩೭ ರಲ್ಲಿ ಮೈಸೂರಿನ ದೊರೆಗಳಾದ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ದಿವಾನ್ ಮಿರ್ಜಾ ಇಸ್ಮಾಯಿಲ್ ಇವರು ಶ್ರೀಗಳ ದರ್ಶನಕ್ಕೆ ಚಿತ್ರದುರ್ಗಕ್ಕೆ ಬಂದಾಗ ಮೈಸೂರಿನ ಆಸ್ಪತ್ರೆ ನಿರ್ಮಾಣಕ್ಕಾಗಿ ಧನಸಹಾಯ ನೀಡಲು ಕೋರಿದಾಗ ಸ್ವಾಮಿಗಳು ಆ ಕ್ಷಣದಲ್ಲೇ ೪೦ ಸಾವಿರ ರೂಪಾಯಿಗಳನ್ನು ತಮ್ಮ ಕಾಣಿಕೆಯಾಗಿ ನೀಡಿದರು."[೧೨] ಹೀಗೆ ಬಹುವಿಧದಲ್ಲಿ ಸಮಾಜದ ಏಳಿಗೆಗೆ ಸ್ಪಂದಿಸಿ ಸಹಾಯ ಮಾಡಿದ ಸ್ವಾಮಿಜಿಗಳು ಜನಸಾಮಾನ್ಯರಿಂದ ಮಾತ್ರವಲ್ಲದೆ ಗಣ್ಯರಿಂದಲು ಪ್ರಶಂಸೆಯನ್ನು ಗಳಿಸಿದ್ದರು. ಇವರು ೧೯೫೭ರಲ್ಲಿ ಲಿಂಗೈಕ್ಯರಾದರು.

ಶ್ರೀ ಜಯವಿಭವ ಸ್ವಾಮಿಗಳು [೧೯೫೬-೧೯೬೪]

ಇವರು ತಮ್ಮ ಹಿಂದಿನ ಗುರುಗಳ ಪರಂಪರೆಯನ್ನು ಮುಂದುವರೆಸಿಕೊಂಡು ಬಂದು ಸಮಾಜದ ಹಿತ ಮತ್ತು ಆಧ್ಯಾತ್ಮ ಸಾಧನೆಯಲ್ಲಿ ತತ್ಪರರಾಗಿದ್ದರು. ಇವರ ಕಾಲದಲ್ಲಿ ಒಂದು ಉಲ್ಲೇಖನೀಯ ಸಂಗತಿ ಎಂದರೆ “೧೯೬೨ ರಲ್ಲಿ ಚೀನಾ ದೇಶದ ಸೈನ್ಯ ಭಾರತದ ಮೇಲೆ ಆಕ್ರಮಣ ಮಾಡಿದ ಕಾಲಕ್ಕೆ ಭಾರತವು ಸಂಕಷ್ಟದಲ್ಲಿದ್ದಾಗ ಮಠದ ಚಿನ್ನದ ಕಿರೀಟ, ಉಂಗುರುಗಳು ಹಾಗೂ ಸಾವಿರಾರು ರೂಪಾಯಿ ಬೆಲೆಬಾಳುವ ಆಭರಣಗಳು ಹಾಗೂ ನಗದು ಹಣವನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ಅರ್ಪಿಸಿದರು."[೧೩] ಗುರುಗಳು ಅಧಿಕಾರಕ್ಕೆ ಬಂದ ಮೇಲೆ ಮಠವನ್ನು ಆರ್ಥಿಕವಾಗಿ
ಸದೃಢಗೊಳಿಸಿದರು.

ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು [೧೯೬೪-೧೯೯೪]

ಪಟ್ಟವನ್ನೇರಿದ ಶ್ರೀಗಳು ಕನ್ನಡವಲ್ಲದೆ ಕಾಶಿಯಲ್ಲಿ ಸಂಸ್ಕೃತವನ್ನು ಅಭ್ಯಾಸ ಮಾಡಿ ತತ್ತ್ವ, ತರ್ಕ, ಕಾವ್ಯ ಮೊದಲಾದವುಗಳಲ್ಲಿ ವಿಶೇಷ ಪಾಂಡಿತ್ಯವನ್ನು ಗಳಿಸಿ 'ವ್ಯಾಕರಣಾಚಾರ್ಯ' ಎಂಬ ಪದವಿಯನ್ನು ಕೂಡಾ ಪಡೆದುಕೊಂಡಿದ್ದರು. ಇವರು ಅನೇಕ ಶಾಲಾ-ಕಾಲೇಜುಗಳನ್ನು ವೃತ್ತಿಶಿಕ್ಷಣ ಸಂಸ್ಥೆಗಳನ್ನು ತಾಂತ್ರಿಕ ಹಾಗೂ ದಂತ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಿದ್ದಲ್ಲದೆ 'ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠ, ಶ್ರೀ ಜಗದ್ಗುರು ಮುರುಘರಾಜೇಂದ್ರ ಗ್ರಂಥಮಾಲೆ' ಎಂಬ ಪ್ರಕಾಶನವನ್ನು ಪ್ರಾರಂಭಿಸಿದರು. ಇವರು ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳ ಪ್ರಕಟಣೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೂ ಸಹ ಒಂದು ಲಕ್ಷ ರೂಪಾಯಿ ದತ್ತಿನಿಧಿಯಾಗಿ ನೀಡುತ್ತಿದ್ದರು. ಅನೇಕ ಜನಪರ ಕಾರ್ಯಕ್ರಮಗಳನ್ನು ನೆರವೇರಿಸಿ ಜನರ ಮನದಲ್ಲಿ ಜೀವಂತವಾಗಿ ನೆಲೆಸಿದರು. ಇವರು ಪ್ರಸ್ತುತ ಶ್ರೀ ಶಿವಮೂರ್ತಿ ಮುರುಘಾ ಶರಣರಿಗೆ ಉತ್ತರಾಧಿಕಾರದ ಪಟ್ಟಕಟ್ಟಿ ೧೯೯೪ರಲ್ಲಿ ಲಿಂಗೈಕ್ಯರಾದರು.

ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು [೧೯೯೧/೯೪]

ಶ್ರೀಮಲ್ಲಿಕಾರ್ಜುನ ಸ್ವಾಮಿಗಳ ತರುವಾಯ ಮುರುಘರಾಜೇಂದ್ರ ಬೃಹನ್ಮಠಕ್ಕೆ ಉತ್ತರಾಧಿಕಾರಿಯಾಗಿ ೧೯೯೧ ರಲ್ಲಿ ನೇಮಕಗೊಂಡು ೧೯೯೪ ರಲ್ಲಿ ಸಂಪೂರ್ಣವಾಗಿ ಜವಾಬ್ದಾರಿಯನ್ನು ಹೊತ್ತುಕೊಂಡರು.

ಈ ರೀತಿ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಗುರುಪರಂಪರೆ ಬೆಳೆದು ಬಂದಿದ್ದು ಪರಂಪರೆಯ ಎಲ್ಲ ಗುರುಗಳು ಒಂದೊಂದು ರೀತಿಯಲ್ಲಿ ವಿವಿಧ ಸಾಧನೆಗಳ ಮೂಲಕ ಅತ್ಯುನ್ನತ ಶಿಖರವನ್ನು ಮುಟ್ಟಿ ಮಠವನ್ನು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಬುದ್ಧಗೊಳಿಸಿದ್ದಾರೆ. ಶರಣ ಸಾಹಿತ್ಯದ ತತ್ತ್ವಗಳನ್ನು ಪ್ರಚಾರ ಪಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

[೧] 'ಜಿಲ್ಲಾ ದರ್ಶನ', ಚಿತ್ರದುರ್ಗ (ಜನಪದ ಡಿಸೆಂಬರ ೨೦೧೧), ಪೃಥ್ವಿ ವಿ.ಜೆ., ಪು.ಸಂ. ೨೬,
[೨] 'ಚಿತ್ರದುರ್ಗ ಜಿಲ್ಲಾದರ್ಶಿನಿ' - ಟಿ. ಗಿರಿಜ, ದಾವಣಗೇರಿ, ಪು.ಸಂ. O೬
[೩] ಚಿತ್ರದುರ್ಗ ಜಿಲ್ಲಾದರ್ಶಿನಿ' – ಟಿ. ಗಿರಿಜ, ದಾವಣಗೇರಿ, ಪು.ಸಂ. ೧೪.
[೪] ಚಿತ್ರದುರ್ಗ ಜಿಲ್ಲಾದರ್ಶಿನಿ' – ಟಿ. ಗಿರಿಜ, ದಾವಣಗೇರಿ, ಪು.ಸಂ. ೧೦.
[೫] ಡಾ. ಬಿ. ರಾಜಶೇಖರಪ್ಪ – 'ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠ, ಪು.ಸಂ. ೩.
[೬] ಡಾ. ಬಿ. ರಾಜಶೇಖರಪ್ಪ - 'ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠ', ಪು.ಸಂ. ೪.
[೭] ಡಾ. ಬಿ. ರಾಜಶೇಖರಪ್ಪ - 'ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠ', ಪು.ಸಂ ೧೪.
[೮] 'ಕಲ್ಯಾಣ ಸಂಗಮ', 'ಸ್ಮರಣ ಸಂಚಿಕೆ ಸಂ ಡಾ. ಗುರುಲಿಂಗ ಕಾಪಸೆ, ಪು.ಸಂ. ೨೧೩.
[೯] ಬಿ.ನಂ. ಚಂದ್ರಯ್ಯ : ಶೂನ್ಯ ಪೀಠ ಪರಂಪರೆ : ಜಂಗಮಜ್ಯೋತಿ (ಸ್ಮರಣ ಸಂಚಿಕೆ), ಸಂ. ಪ್ರೊ.ಜಿ.ಎಸ್‌. ಸಿದ್ಧಲಿಂಗಯ್ಯ, ಪು.ಸಂ. ೭೦.
[೧೦] ಓ. ಗಿರಿಜ ದಾವಣಗೇರಿ - 'ಚಿತ್ರದುರ್ಗ ಜಿಲ್ಲಾ ದರ್ಶಿನಿ', ಪು.ಸಂ. ೬೫.
[೧೧] ಚಿತ್ರದುರ್ಗ ಕಲ್ಯಾಣ ಸಂಗಮ ಸ್ಮರಣ ಸಂಚಿಕೆ, ಸಂ. ಗುರುಲಿಂಗ ಕಾಪಸೆ, ಪು.ಸಂ. ೨೧೫.
[೧೨] ಚಿತ್ರದುರ್ಗ ಕಲ್ಯಾಣ ಸಂಗಮ ಸ್ಮರಣ ಸಂಚಿಕೆ, ಸಂ. ಗುರುಲಿಂಗ ಕಾಪಸೆ, ಪು.ಸಂ. ೨೧೫.
[೧೩] ಚಂದ್ರಶೇಖರ ನಾರಾಣಾಪೂರ : 'ಕರ್ನಾಟಕ ವೀರಶೈವ ಮಠಗಳು', ಪು.ಸಂ. ೩೯೨.

ಪರಿವಿಡಿ (index)
*
Previous ಹುರುಳಿಲ್ಲದ ವಿಷಯ ಕಲ್ಯಾಣ ಅಂದು ಹೇಗೆ ಇತ್ತು? Next