Previous ಬಸವೋತ್ತರ ಯುಗ ಜಗದ್ಗುರು ಪದ - ಒಂದು ಅವಲೋಕನ Next

ಪಂಚಾಚಾರ‍್ಯರು ಜಗದ್ಗುರುಗಳಲ್ಲ, ಜಗದಾಚಾರರು

*

ಪಂಚಾಚಾರ‍್ಯರು ಜಗದ್ಗುರುಗಳಲ್ಲ, ಜಗದಾಚಾರರು

✍ ಡಾ. ಎಂ. ಎಂ. ಕಲಬುರ್ಗಿ.
ಧಾರವಾಡ

'ಸಮಾಜ ಪರಿವರ್ತನೆಗಾಗಿ ಸಂಶೋಧನೆ'- ಈ ಧ್ಯೇಯದಿಂದ ಕೈಕೊಂಡ ಸಂಶೋಧನೆಗೆ ಶೈಕ್ಷಣಿಕ ಮಹತ್ವದೊಂದಿಗೆ ಸಾಮಾಜಿಕ ಮನ್ನಣೆಯೂ ಪ್ರಾಪ್ತವಾಗುತ್ತದೆ. ಸಾಮಾಜಿಕ ನ್ಯಾಯಕ್ಕಾಗಿ ಹುಟ್ಟಿದುದೂ, ಆ ಕಾರಣಕ್ಕಾಗಿಯೇ ಸಾಮಾಜಿಕ ಅನ್ಯಾಯಕ್ಕೆ ಹೆಚ್ಚು ಗುರಿಯಾಗುತ್ತ ಬಂದುದೂ ಆಗಿರುವ ಲಿಂಗಾಯತ ಸಮಾಜದಲ್ಲಿ ಸಾಮಾಜಿಕ ಪರಿವರ್ತನೆಗಾಗಿ ಸಂಶೋಧನೆ'' ಕೈಕೊಳ್ಳಲು ವಿಪುಲ ಅವಕಾಶಗಳಿವೆ. ಈ ದೃಷ್ಟಿಯಿಂದ ಒರೆಗೆ ಹಚ್ಚಬೇಕಾದವುಗಳಲ್ಲಿ ಜಗದ್ಗುರು' ಶಬ್ದವೂ ಒಂದು.

ಲಿಂಗಾಯತ ಸಮಾಜದಲ್ಲಿ ಮೊದಲಿನಿಂದಲೂ ಬೆಳೆದುಬಂದ ಗುರು-ವಿರಕ್ತಸಮಸ್ಯೆ ಈಗ ಮತ್ತೆ ಉದ್ಭವಿಸಿದೆ. ಇದಕ್ಕೆ ಕಾರಣ, ಸತ್ಯವನ್ನು ಹತ್ತಿಕ್ಕಿ ಆಸತ್ಯವನ್ನು ಸ್ಥಾಪಿಸಲು ಮಾಡುತ್ತಲಿರುವ ಪ್ರಯತ್ನ ಮತ್ತು ಆ ಮೂಲಕ ಬೆಳೆಯುತ್ತಲಿರುವ ಸಾಮಾಜಿಕ ಶೋಷಣೆ, ಈ ಬಿಕ್ಕಟ್ಟುಗಳಿಂದ ಸಮಾಜವನ್ನು ಮುಕ್ತಗೊಳಿಸುವುದಕ್ಕಾಗಿ ಗುರು-ವಿರಕ್ತ ಸಮಸ್ಯೆ ಬಿಡಿಸುವ ಹಲವು ಪ್ರಯತ್ನಗಳು ನಮ್ಮಲ್ಲಿ ನಡೆದಿವೆ. ಆದರೆ ಇವೆಲ್ಲ ತೋರಿಕೆಯ ಪ್ರಯತ್ನ ಅಥವಾ ತಾತ್ಕಾಲಿಕ ಪರಿಹಾರಗಳಾಗಿದ್ದು ನಿಜವಾದ ಇತಿಹಾಸವನ್ನು ಹುಡುಕಿ ಹೇಳುವುದು, ಅದನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುವುದು, ಇದಕ್ಕೆ ಅಂತಿಮ ಪರಿಹಾರವಾಗಿದೆ. ಇಂಥ ಪರಿಹಾರದ ಭಾಗವಾಗಿದೆ, ಇವರಿಬ್ಬರಿಗೂ ಬಳಸುತ್ತಲಿರುವ 'ಜಗದ್ಗುರು'ವೆಂಬ ಪಾರಿಭಾಷಿಕ ಪದವನ್ನು ಯಾರಿಗೆ ಬಳಸುವುದು ಸೂಕ್ತ? ಎಂಬುದು.

ಭಾಷೆಯಲ್ಲಿ ವ್ಯಾವಹಾರಿಕ ಮತ್ತು ಪಾರಿಭಾಷಿಕ ಎಂಬ ಎರಡು ಬಗೆಯ ಶಬ್ದಗಳಿರುತ್ತವೆ. ಇವುಗಳಲ್ಲಿ ನಿರ್ದಿಷ್ಟ ತತ್ವಗಳನ್ನು ಪ್ರತಿನಿಧಿಸುವ ಪಾರಿಭಾಷಿಕ ಶಬ್ದಗಳ ವಿಷಯವಾಗಿ ತುಂಬ ಎಚ್ಚರವಹಿಸಬೇಕಾಗುತ್ತದೆ. ಆದರೆ ಅರ್ಥಸಾಮ್ಯದ ಪ್ರಸಂಗದಲ್ಲಿ ಕೆಲವು ಪಾರಿಭಾಷಿಕ ಪದಗಳನ್ನು ಸದುದ್ದೇಶದಿಂದಲೋ, ದುರುದ್ದೇಶದಿಂದಲೋ ಸ್ಥಾನಪಲ್ಲಟ ಮಾಡಿ ಬಳಸಲಾಗುತ್ತದೆ. ಇದರಿಂದ ಮೂಲತತ್ವ ಮರೆಯಾಗಿ, ಸಾಮಾಜಿಕ ಸಂದರ್ಭದಲ್ಲಿ ಇದು ಗೊಂದಲಕ್ಕೆ ಇಲ್ಲವೆ ಶೋಷಣೆಗೆ ದಾರಿ ಮಾಡಿಕೊಡುವುದು ಸಹಜ. ಇಂದು ಇಂಥ ಶೋಷಣೆಗೆ ದಾರಿ ಮಾಡಿಕೊಟ್ಟಿದೆ, ಪಂಚಾಚಾರ್ಯರಿಗೂ 'ಜಗದ್ಗುರು' ಪಾರಿಭಾಷಿಕ ಪದ ಬಳಸುವುದು.

ಲಿಂಗಾಯತರಲ್ಲಿ ಗುರು ಲಿಂಗ ಜಂಗಮ-ಇವು ನಿರ್ದಿಷ್ಟ ಅರ್ಥದ ಸ್ವತಂತ್ರ ತತ್ವಗಳಾಗಿವೆ. ಆದರೆ ಇವುಗಳಲ್ಲಿ ಗುರು=ಜಂಗಮವೆಂದು ಎರಡನ್ನೂ ಇಂದು ಏಕಾರ್ಥದಲ್ಲಿ ಬಳಸುವ ಮೂಲಕ ಗೊಂದಲ ಸೃಷ್ಟಿಸಿಕೊಂಡಿದ್ದೇವೆ. ಹೆಚ್ಚಿನದಾಗಿ ಗುರುವೆಂದರೆ ಪಂಚಾಚಾರ‍್ಯರು, ಜಂಗಮವೆಂದರೆ ವಿರಕ್ತರು ಎಂಬ ಇನ್ನೊಂದು ಗೊಂದಲವೂ ಹುಟ್ಟಿಕೊಂಡಿದೆ. ನಿಜ ಹೇಳುವುದಾದರೆ, ಗುರು ಜಂಗಮಗಳು ವಿರಕ್ತರ ಪರಿಭಾಷೆಗಳಾಗಿದ್ದು, ಇವುಗಳಲ್ಲಿ ಗುರುವೆಂಬುದರ ಸಾಧಿತ ರೂಪವಾಗಿರುವ 'ಜಗದ್ಗುರು' ಪರಿಭಾಷೆಯನ್ನು ಕುರಿತು ಈಗ ಚರ್ಚಿಸಬಹುದಾಗಿದೆ.

ಸಿದ್ದಾಂತಗಳಲ್ಲಿ ಗುರು(=ಅನುಭಾವ)ಪ್ರಮಾಣ ಮತ್ತು ಶಬ್ದ(=ಗ್ರಂಥ) ಪ್ರಮಾಣವೆಂದು ಎರಡು ಮುಖ್ಯ ಬಗೆಗಳಿವೆ. ಬಸವಣ್ಣನವರು

ನಾಲಗೆ ತಾಗಿದ ರುಚಿಗೆ ಮನವೆ ಸಾಕ್ಷಿ,
ಸಾಲದೆ ಅಯಾ ?
ಮಾಲೆಗಾರ ಕೇಳಿ ನನೆ ಅರಳುವುದೆ ?
ಆಗಮವನಿದಿರಿಗೆ ತೋರುವುದು ಆಚಾರವೆ ಅಯ್ಯಾ ?


ಎಂದು ಹೇಳುವ ಮೂಲಕ ಕೇವಲ ಗ್ರಂಥ(ಆಗಮ) ಪ್ರಮಾಣವನ್ನು ನಿರಾಕರಿಸಿದ್ದಾರೆ. ಕುವೆಂಪು ಅವರೂ

ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು ?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?
ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ?
ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !
ಹಿಂದಿನಾ ಋಷಿಗಳೂ ಮಾನವರೆ ನಮ್ಮಂತೆ
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ

ಎಂದು ಹೇಳುತ್ತ ಗ್ರಂಥ ಪ್ರಮಾಣವನ್ನು ಬದಿಗೆ ಸರಿಸಿ, ಗುರು (ಅನುಭಾವ) ಪ್ರಮಾಣವನ್ನೇ ಎತ್ತಿ ಹಿಡಿದಿದ್ದಾರೆ. 'ಗ್ರಂಥ'ದ ಹಾಗೆ 'ಗುರು' ಯಾವುದೋ ಕಾಲದ ಸ್ಥಗಿತವಾಗಿರಬಹುದಾದ ಮೌಲ್ಯಗಳ ಪ್ರತಿನಿಧಿಯಲ್ಲ ಚಲನಶೀಲ ಮೌಲ್ಯಗಳ ಪ್ರತಿನಿಧಿ. ಈ 'ಗುರುಮಾರ್ಗ'ವೆನ್ನುವುದು ಪ್ರಸ್ಥಾನತ್ರಯ ಇತ್ಯಾದಿ ನಿರ್ದಿಷ್ಟ ಧಾರ್ಮಿಕ ಪಠ್ಯಗಳಿಲ್ಲದ ನಾಥ, ಲಿಂಗಾಯತ ಮೊದಲಾದ ಅವೈದಿಕ ಧರ್ಮಗಳಿಗೆ ಸಂಬಂಧಿಸಿದೆ. 'ಶಿವಪಥನರಿವೊಡೆ ಗುರುಪಥ ಮೊದಲು' ಇತ್ಯಾದಿ ವಚನ ವಾಕ್ಯಗಳು ಶರಣ ಸಂಸ್ಕೃತಿಯಲ್ಲಿ 'ಗುರುಮಾರ್ಗ'ಕ್ಕಿರುವ ಮಹತ್ವವನ್ನು ತಿಳಿಸುತ್ತವೆ. ಒಟ್ಟಾರೆ, ಗುರು ಮತ್ತು ಇದರ ಸಾಧಿತರೂಪಗಳಾದ ಸದ್ಗುರು, ಪರಮಗುರು, ಜಗದ್ಗುರು ಇತ್ಯಾದಿಗಳೆಲ್ಲ ಅವೈದಿಕ ಶರಣ ಸಂಪ್ರದಾಯದ ಪಾರಿಭಾಷಿಕ ಪದಗಳಾಗಿವೆ. ಸಿದ್ದರಾಮ ಚರಿತೆಯಲ್ಲಿ, ಶಾಸನಗಳಲ್ಲಿ ನಾಥಮೂಲದ ಸಿದ್ದರಾಮನಿಗೆ 'ಜಗದಗುರು' ಪದವನ್ನು ಮತ್ತೆ ಮತ್ತೆ ಬಳಸಿದುದನ್ನು ಇಲ್ಲಿ ನೆನೆಯಬಹುದು. ಹಾಗಿದ್ದರೆ ಇಂದು ಲಿಂಗಾಯತರಲ್ಲಿ ಸೇರಿಕೊಂಡಿರುವ 'ಪಂಚಾಚಾರ್ಯ'ವೆಂಬ ಇನ್ನೊಂದು ಶಾಖೆಯವರಿಗೆ ಬಳಸಬಹುದಾದ ಇಂಥ ಬೇರೊಂದು ಪಾರಿಭಾಷಿಕ ಪದ ಯಾವುದು? ಎಂಬ ಪ್ರಶ್ನೆ ಎದುರಾಗುತ್ತದೆ.

ಸಾಮಾನ್ಯವಾಗಿ ಇಂದು ಪಂಚಾಚಾರ್ಯರದು 'ಗುರುವರ್ಗ'ವೆಂದೂ, ಶರಣರದು ’ವಿರಕ್ತವರ್ಗ'ವೆಂದೂ ಕರೆಯಲಾಗುತ್ತದೆ. ಆದರೆ ಮೇಲೆ ಹೇಳಿದಂತೆ ಶರಣ ಪರಂಪರೆಗೆ ಸಂಬಂಧಿಸಿದ ಈ 'ಗುರು' ಪರಿಭಾಷೆಯನ್ನು ಮುಂದಿನ ದಿನಗಳಲ್ಲಿ ಪಂಚಾಚಾರ್ಯರೂ ಬಳಸುತ್ತ ಬರಲಾಗಿ, ಶರಣ ಪರಂಪರೆಯವರಿಗೆ 'ವಿರಕ್ತವೆಂಬ ಬೇರೊಂದು ಪರಿಭಾಷೆಯನ್ನು ಹುಟ್ಟಿಸಲಾಯಿತೆಂದು ತೋರುತ್ತದೆ. ಹಾಗಿದ್ದರೆ ಇಂದು 'ಜಗದ್ಗುರು ಪಂಚಾಚಾರ್ಯರು' ಎಂದು ಬಳಸುವುದು ತಪ್ಪೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ತಾತ್ವಿಕವಾಗಿ ಮತ್ತು ಐತಿಹಾಸಿಕವಾಗಿ ಹೇಳುವುದಾದರೆ, ಹೀಗೆ ಬಳಸುವುದು ತಪ್ಪು. ಏಕೆಂದರೆ ಇಲ್ಲಿಯ ಜಗದ್ಗುರು ಪಂಚಾಚಾರ್ಯ' ಎಂಬ ನುಡಿಗಟ್ಟಿನಲ್ಲಿರುವ ಗುರು ಮತ್ತು ಆಚಾರ್ಯ ಪದಗಳು ದ್ವಿರುಕ್ತಿಯೆನಿಸುತ್ತವೆ. ಇಷ್ಟೇ ಏಕೆ? ಗುರುತತ್ವ, ಆಚಾರ್ಯತತ್ವಗಳೆಂಬ ಎರಡು ಭಿನ್ನ ತತ್ವಗಳನ್ನು ಜೊತೆಗೆ ನಿಲ್ಲಿಸಿದ ದೋಷ ಇಲ್ಲಿ ಕಾಣಿಸುತ್ತದೆ.

ಭಾರತೀಯ ಪರಂಪರೆಯಲ್ಲಿ 'ಗುರು' ಎಂಬುದನ್ನು ಭಕ್ತಿಮಾರ್ಗದವರಿಗೆ, “ಆಚಾರ್ಯ' ಎಂಬುದನ್ನು ಕರ್ಮಮಾರ್ಗದರಿಗೆ ಬಳಸಲಾಗುತ್ತದೆ. ಇಲ್ಲಿ ದೀಕ್ಷೆಗೆ ಸಂಬಂಧಿಸಿದಂತೆ ಗುರುವಿನದು ’ಕಾರುಣ್ಯ', ಆಚಾರ್ಯನದು 'ಆಚರಣೆ'. ಈ ಕಾರಣಕ್ಕಾಗಿಯೇ ಶೂನ್ಯಸಂಪಾದನೆಯು 'ಸಿದ್ದರಾಮನ ಗುರುಕಾರಣ್ಯ' ವೆಂಬ ಪದ ಬಳಸಿದೆಯೇ ಹೊರತು, 'ಸಿದ್ಧರಾಮನ ಲಿಂಗದೀಕ್ಷೆ'ಯೆಂಬ ಪದ ಬಳಸಿಲ್ಲ. ಏಕೆಂದರೆ ಬಾಹ್ಯ ಆಚರಣೆಯ ದೀಕ್ಷೆಗಿಂತ ಕಾರುಣ್ಯದೀಕ್ಷೆ ಶೂನ್ಯಸಂಪಾದನಕಾರನ ಮುಖ್ಯ ಅಶಯವಾಗಿದೆ. ಈ ಆಶಯಕ್ಕೆ ಅನುಗುಣವಾಗಿಯೇ ಸಿದ್ದರಾಮನು ಗುರು ಕಾರುಣ್ಯ ಪಡೆದುದನ್ನು ಶಿವಗಣ ಪ್ರಸಾದಿ ಮಹಾದೇವಯ್ಯ ತನ್ನ ಕೃತಿಯಲ್ಲಿ ದಾಖಲಿಸಿದ್ದನು. ಆದರೆ ಅದಕ್ಕೆ ಪೂರಕವಾದ ಪಂಚಶುದ್ದಿ ಮಂಟಪ ಕಟ್ಟುವುದು, ಕಳಶ ಹೂಡುವುದು ಮೊದಲಾದ ಆಚರಣೆಗಳನ್ನು ಹೇಳಿರಲಿಲ್ಲ. ಈ ಕೊರತೆಯನ್ನು ತುಂಬುವುದಕ್ಕಾಗಿಯೇ ಮಹಾದೇವಯ್ಯನ ಶೂನ್ಯಸಂಪಾದನೆಗೆ ಕರ್ಮಾಚರಣೆಗಳನ್ನು ವಿವರಿಸುವ ವಚನಗಳನ್ನು ಹೊಸದಾಗಿ ಜೋಡಿಸಿ (ಸೃಷ್ಟಿಸಿ?), ಕೆಂಚವೀರಣ್ಣೋಡೆಯ ತನ್ನ ಶೂನ್ಯಸಂಪಾದನೆಯನ್ನು (ಅನುಪಲಬ್ದ) ರೂಪಿಸಿದನೆಂದು ತೋರುತ್ತದೆ. ಈ ವಿಷಯ, ಗುಮ್ಮಳಾಪುರ ಸಿದ್ದಲಿಂಗನ ಶೂನ್ಯಸಂಪಾದನೆಯಲ್ಲಿ ಬರುವ 'ಶಿವಗಣ ಪ್ರಸಾದಿ ಮಹಾದೇವಯ್ಯಗಳು ಶೂನ್ಯ ಸಂಪಾದನೆಯ ರಚಿಸಲು, ಅಲ್ಲಿ ಸಿದ್ದರಾಮಯ್ಯದೇವರಿಗೆ 'ದೀಕ್ಷಾಕ್ರಮ'ವಿಲ್ಲದಿರಲು ಇದಕ್ಕೆ ಕೆಂಚವೀರಣ್ಣೋಡೆಯರು ಪುರಾತನರ ವಚನವಿಡಿದು ಸಾವಿರದ ಏಳುನೂರು ವಚನಗಳಿಂದ ಸಿದ್ದರಾಮೇಶ್ವರ ದೇವರಿಗೆ ದೀಕ್ಷಾಕ್ರಮದ ಭೇದವನು ಪ್ರತಿಷ್ಠಿಸಲು' ಎಂಬ ಭಾಗದಿಂದ ಸ್ಪಷ್ಟವಾಗುತ್ತದೆ. ಕೆಂಚವೀರಣ್ಣೋಡೆಯ ಎಂಬ ಹೆಸರಿನ 'ಒಡೆಯ' ಶಬ್ದವು ಬಹುಶಃ ಈತನ ಆಚಾರ್ಯ ಪರಂಪರೆಯನ್ನು ಸೂಚಿಸುತ್ತಿದ್ದು, ಇವನು ಸ್ವಾಭಾವಿಕವಾಗಿಯೇ ಶೂನ್ಯಸಂಪಾದನೆಯನ್ನು ಕರ್ಮಮಾರ್ಗದತ್ತ ಎಳೆದುದು, ಶರಣ ಪರಂಪರೆಯ ಗುಮ್ಮಳಾಪುರ ಸಿದ್ದಲಿಂಗನ ಮನಸ್ಸಿಗೆ ಬರಲಿಲ್ಲವೆಂದು ತೋರುತ್ತದೆ. ಅದಕ್ಕಾಗಿಯೇ ಅವನು 'ಕರ್ಮಕಾಂಡ, ಯೋಗಕಾಂಡ, ಜ್ಞಾನಕಾಂಡಮಂ ಖಂಡಿಸಿ, ಈ ಮೂರಕ್ಕತೀತವಾದ ಭಕ್ತಿಕಾಂಡವನೆ ತೆಗೆದು, ಸಿದ್ದರಾಮಯ್ಯ ದೇವರಿಗೆ ದೀಕ್ಷಾ ಕ್ರಮವನ್ನು ಬಸವಾದಿ ಪ್ರಮಥರ ವಚನ ಪ್ರಸಿದ್ದವಾಗಿ ಅತಿಸೂಕ್ಷ್ಮ ವಾಗಿ ಸೇರಿಸಿ'ರುವುದಾಗಿ ತಿಳಿಸಿದ್ದಾನೆ. ಇದರಿಂದ ಶೂನ್ಯಸಂಪಾದನೆ ಮತ್ತೆ ಮತ್ತೆ ಪರಿಷ್ಕರಣಗೊಂಡುದಕ್ಕೆ ಅದರಲ್ಲಿ ತಮ್ಮ ತಮ್ಮ ಸಿದ್ದಾಂತ ಸ್ಥಾಪಿಸುವುದೂ ಮುಖ್ಯಕಾರಣ (ಬೇರೆ ಕಾರಣಗಳೂ ಇವೆ)ವಾಗಿರಬಹುದೆನಿಸುತ್ತದೆ.

ಆಚಾರ್ಯರು ಮೂಲತಃ ನಾಲ್ಕು ಜನ. ದೀಕ್ಷಾ ಸಂದರ್ಭದಲ್ಲಿ ಐದು ಕಳಸಗಳನ್ನು ಹೂಡಲಾಗುತ್ತಿದ್ದು, ಮೂಲೆಯ ನಾಲ್ಕು ಕಳಸಗಳು ಈ ನಾಲ್ಕು ಜನ ಆಚಾರ್ಯರನ್ನು ಪ್ರತಿನಿಧಿಸಿದರೆ, ಮಧ್ಯದ ಕಳಸ ಗುರುವನ್ನು ಪ್ರತಿನಿಧಿಸುವುದೆಂದು ಹೇಳಲಾಗುತ್ತಿದೆ. ವೀರಶೈವಾಮೃತ ಮಹಾಪುರಾಣವು 'ಪರಶಿವಮೂರ್ತಿ ತಾನೆ ಗುರು ಕಳಸದೆಡೆಯೊಳು ಪ್ರಾಣ್ಮುಖದ ಸಿಂಹಪೀಠದೊಳು ಮೂರ್ತಿಗೊಂಬಂ' (7-6-56) ಎಂದು ಹೇಳುವ ಮೂಲಕ ಈ 5ನೆಯ ಗುರು ಕಳಸವು ಶಿವನನ್ನು ಪ್ರತಿನಿಧಿಸುವುದೆಂದು ತಿಳಿಸುತ್ತದೆ. ಹೀಗಿದ್ದೂ ಲೌಕಿಕ ಜಗತ್ತಿನಲ್ಲಿ ಭೌತಿಕಕರ್ಮಗಳೇ ಹೆಚ್ಚು ಆಕರ್ಷಕವೆನಿಸಿ, ಇವುಗಳನ್ನು ಪೂರೈಸುವ ಆಚಾರರಿಗೆ ಪ್ರತಿಷ್ಠೆ ಪ್ರಾಪ್ತವಾಗಿರಲು ಸಾಕು. ಆಗ ವಿರಕ್ತಗುರುಗಳು ಜಗದ್ಗುರು' (ಜಗತ್+ಗುರುವೆಂದು ಕರೆದುಕೊಳ್ಳುವಂತೆ, ಈ ಆಚಾರ್ಯರು ತಮ್ಮನ್ನೂ “ಜಗದಾರಾಧ್ಯ' (ಜತ್+ಆರಾಧ್ಯ), 'ಜಗದಾಚಾರ' (ಜಗತ್+ಆಚಾರ್ಯ) ರೆಂದು ಕರೆದುಕೊಳ್ಳ ತೊಡಗಿದರೆನಿಸುತ್ತದೆ. ಇತಿಹಾಸದಲ್ಲಿ ಇದಕ್ಕೆ ಕೆಳಗಿನಂತೆ ಸಮರ್ಥನೆ ಸಿಗುತ್ತದೆ :

13ನೆಯ ಶತಮಾನದ ಕೆರೆಯ ಪದ್ಮರಸನು ತ್ರಿಭುವನ ತಾತನೊಂದಿಗೆ ವಾದಕ್ಕೆ ನಿಂತ ಸಂದರ್ಭದಲ್ಲಿ ಅವನಿಗೆ ನೆರವಾಗಲು ಹುಲಿಗೆರೆಯ ಮಾಯಿದೇವ ಪುರಾಣಭಟ್ಟ, ಹಂಪೆಯ ರಾಘವಾಂಕನ ಜೊತೆಗೆ ಜಗದಾರಾಧ್ಯ ನಾಗಿದೇವನೂ ಹೋಗಿದ್ದನೆಂದು ಸಾನಂದಚರಿತೆ, ಪದ್ಮರಾಜಪುರಾಣಗಳು ತಿಳಿಸುತ್ತವೆ. ಶಿವಜ್ಞಾನ ಸಮುಚ್ಛಯದ ಕರ್ತೃವಾದ ಈ ನಾಗಿದೇವನನ್ನು ನಾಗನಾಥಾಚಾರ್ಯನ ವೀರಮಾಹೇಶ್ವರಾಚಾರ ಸಂಗ್ರಹದಲ್ಲಿ

ವ್ಯಾಕರೋದ್ಯ: ಶಿವಜ್ಞಾನ ಸಮುಚ್ಚಯಮಕಲ್ಮಷಮ್
ಜಗದಾರಾಧ್ಯ ನಾಗೇಶಗುರು ತಂ ಸತತಂ ಭಜೇ || 1-19

ಎಂದು ಹೊಗಳಲಾಗಿದೆ. ಈ ಮೂರೂ ಕೃತಿಗಳು (ಸಾನಂದಚರಿತೆ, ಪದ್ಮರಾಜಪುರಾಣ, ವೀರಮಾಹೇಶ್ವರಸಾರಸಂಗ್ರಹ)ನಾಗಿದೇವನಿಗೆ ತಪ್ಪದೇ ಜಗದಾರಾಧ್ಯವಿಶೇಷಣ ಬಳಸಿದುದು ಗಮನಾರ್ಹ ಅಂಶವೆನಿಸಿದೆ. ಬಹುಶಃ ಈ ಮತ್ತು ಮುಂದಿನ ಕಾಲದಲ್ಲಿ ಆಚಾರ್ಯ ಸಂಪ್ರದಾಯದ ಗಣ್ಯರಿಗೆ 'ಜಗದಾರಾಧ್ಯ' ವಿಶೇಷಣ ವ್ಯಾಪಕವಾಗಿ ಬಳಸುತ್ತಿರಬಹುದು. 16ನೆಯ ಶತಮಾನದ ಪಾಲ್ಕುರಿಕೆ ಸೋಮೇಶ್ವರ ಪುರಾಣದಲ್ಲಿಯ “ಜಗದಾರಾಧ್ಯ ಪಾಲ್ಕುರಿಕೆ ಸೋಮೇಶ್ವರ' (15-4) ಎಂಬ ಉಲ್ಲೇಖವನ್ನು, ಮೈಸೂರಿನ 'ಅಖಿಲ ಭಾರತ ಆರಾಧ್ಯ ಬ್ರಾಹ್ಮಣ ಮಹಾಸಭೆ'ಯು ಸ್ಥಾಪಿಸಿದ ಪುಸ್ತಕ ಭಂಡಾರಕ್ಕೆ ಶ್ರೀ ಜಗದಾರಾಧ್ಯ ಚೈತನ್ಯ ವಿಲಾಸ ಲೈಬ್ರರಿ'' ಎಂದು ಹೆಸರಿಟ್ಟುದನ್ನು ನೋಡಿದರೆ, ಜಗದಾರಾಧ್ಯ ಪದಪ್ರಯೋಗ 19-20ನೆಯ ಶತಮಾನಗಳ ಮಧ್ಯದ ವರೆಗೂ ಮುಂದುವರಿದಿತ್ತೆನಿಸುತ್ತದೆ. ಕಾಲಗತಿಸಿದಂತೆ ಈ ಜಗದಾರಾಧ್ಯಕ್ಕೆ ಬದಲು ಜಗದಾಚಾರ್ಯ ಪದ ರೂಢಗೊಂಡಂತಿದೆ. ೨೦ನೇಯ ಶತಮಾನದಲ್ಲಿ ಪ್ರಕಟವಾದ 'ಜಂಗಮಾಧಿಕ್ಯ' ಪುಸ್ತಕದ ಪೀಠಿಕೆಯಲ್ಲಿ “ಈಗಿನ ಶ್ರೀ ಜಗದಾಚಾರ್ಯ ರಂಭಾಪುರೀ ವೀರಸಿಂಹಾಸನದ ಪೀಠಾಚಾರ್ಯರವರು...' ಎಂಬ ವಾಕ್ಯ, 'ಪಂ.ಕಾಶೀನಾಥ ಶಾಸ್ತ್ರಿಗಳ ನಿಜಜೀವನ ಚರಿತ್ರೆ' (ಲೇ: ಎನ್. ಗುಂಡಶಾಸ್ತ್ರಿ ಪು.30)ಯಲ್ಲಿ ಪ್ರಕಟವಾದ ಪತ್ರವೊಂದರಲ್ಲಿ ''ಜಗದಾಚಾರ್ಯರೇ ಅವರಿಗೆ ಸರಿಯಾದ ಶಿಕ್ಷೆ ನೀಡುತ್ತಾರೆ'' ಎಂಬ ವಾಕ್ಯಗಳಿದ್ದು, ಅಂದು ಪಂಚಾಚಾರ‍್ಯರಿಗೆ ಜಗದಾಚಾರವೆಂಬುದು ಬಳಕೆಯಿಲ್ಲಿದ್ದುದನ್ನು ಸ್ಪಷ್ಟಪಡಿಸುತ್ತವೆ. ಇದಲ್ಲದೆ 'ಶ್ರೀಮಜ್ಜಗದಾಚಾರ್ಯ ವೇದತೀರ್ಥ ಸ್ವಾಮಿ ವಿರೂಪಾಕ್ಷ ಒಡೆಯರು ನಿಜಸಿಂಹಾಸನ ಚೌಡದಾನಪುರ ಸಂಸ್ಥಾನಮಠ', 'ಶ್ರೀ ಪೂವಲ್ಲಿ ಪಂಚವಣ್ಣಿಗಿ ಬೃಹನ್ಮಠ ಚರಪಟ್ಟಾಧ್ಯಕ್ಷ ಶ್ರೀ ಜಗದಾಚಾರ್ಯ ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳವರು ಅಪ್ಪಣೆ ಕೊಡಿಸಿದ ತುರುಕಾರಿ ಪಂಚಮರ ಇತಿಹಾಸವು' ಎಂಬ ಅವತರಣಿಕೆಗಳಲ್ಲಿ ಚೌಡದಾನಪುರ ಮತ್ತು ಹೂಲಿ ಪಟ್ಟಾಧ್ಯಕ್ಷರಿಗೆ ಬಳಸಲಾಗಿರುವ 'ಜಗದಾಚಾರ್ಯ' ವೆಂಬ ಪ್ರತಿಷ್ಠಿತ ವಿಶೇಷಣವು ಬಾಳೆಹಳ್ಳಿ ಮೊದಲಾದ 4(5) ಪೀಠಗಳಿಗೂ ಮೂಲತಃ ಅನ್ವಯವಾಗುತ್ತಿರಬಹುದೆನಿಸುತ್ತದೆ.

ಮೇಲೆ ಹೇಳಿದ ಮೇರೆಗೆ ಆಚಾರ‍್ಯರನ್ನು ಪ್ರತಿನಿಧಿಸುವ 4 ಆಚಾರ‍್ಯ ಕಳಸ, ಶಿವನನ್ನು ಪ್ರತಿನಿಧಿಸುವ 1 ಗುರುಕಳಸ ಪರಂಪರೆ ಬೆಳೆದು ಬರುತ್ತಿದ್ದಂತೆ, ಕೆಳದಿ ಅರಸರ ಕಾಲದಲ್ಲಿ ಕಾಶೀಪೀಠವನ್ನು ಜೋಡಿಸಿಕೊಳ್ಳುತ್ತಲೇ, ಸಹಜವಾಗಿ ಆ ಪೀಠಕ್ಕೆ ಮಧ್ಯದ ಗುರುಕಳಸ ಸ್ಥಾನ ಪ್ರಾಪ್ತವಾಗಿರಬಹುದು. 'ಗುರು ಕಳಸದಾಚಾರ್ಯ ವಿಶ್ವೇಶಂ'' ಎಂಬ ಗುರುರಾಜ ಚಾರಿತ್ರದ (ಸಂಧಿ 3, ಸೂಚನಾ ಪದ್ಯ), “ಗುರು ಚತುರ್ವಿಧ ಮಧ್ಯದೊಳ್ ನಿಂದ ವರಗುರುವೆ....... ವಿಶ್ವಾರಾಧ್ಯ' ಎಂಬ ಚತುರಾಚಾರ್ ಚಾರಿತ್ರದ (1-54) ಉಲ್ಲೇಖಗಳು ನಮ್ಮ ಅಭಿಪ್ರಾಯವನ್ನು ಬೆಂಬಲಿಸುತ್ತವೆ. ಈ ಕಾರಣಕ್ಕಾಗಿಯೇ ಕಾಶೀಪೀಠವನ್ನು ಜ್ಞಾನ(=ಗುರು) ಪೀಠವೆಂದು ಕರೆಯುವರೆಂದು ತೋರುತ್ತದೆ. ಹೀಗೆ ಮಧ್ಯದ ಗುರುಕಳಶ ಸ್ಥಾನದಲ್ಲಿ ಕಾಶಿಪೀಠವನ್ನು ಪರಿಭಾವಿಸಿಕೊಳ್ಳುವಲ್ಲಿ, ಅದಕ್ಕೆ ಮಾತ್ರ ಪ್ರಾಪ್ತವಾಗಿರ ಬಹುದಾದ 'ಜಗದ್ಗುರು' ವಿಶೇಷಣ, ಕ್ರಮೇಣ ಮಿಕ್ಕ ನಾಲ್ಕೂ ಪೀಠಗಳಿಗೆ ವಿಸ್ತರಣೆಗೊಂಡಿರಲು ಸಾಧ್ಯ.

ಒಟ್ಟಾರೆ, ಇಂದಿನ ಪರಿಸ್ಥಿತಿಯಲ್ಲಿ ಪಂಚಾಚಾರ‍್ಯರ 5 ಪೀಠಗಳಿಗೆ ಜಗದಾಚಾರ‍್ಯ ರೆಂದೂ, ಮಿಕ್ಕ ಸುತ್ತೂರು, ತರಳಬಾಳು, ಚಿತ್ರದುರ್ಗ, ಗದಗ, ಹುಬ್ಬಳ್ಳಿ ಮೊದಲಾದ ಪೀಠಗಳಿಗೆ 'ಜಗದ್ಗುರು' ಎಂದೂ ಕರೆಯುವುದು ತಾತ್ವಿಕವಾಗಿ ಸರಿಯೆನಿಸುತ್ತದೆ. ಇತಿಹಾಸದಲ್ಲಿಯೂ ಇದಕ್ಕೆ ಒಂದಿಷ್ಟು ಆಧಾರಗಳಿವೆಯೆಂದು ಮೇಲಿನ ವಿವರಣೆಯಿಂದ ತಿಳಿದುಬರುತ್ತದೆ.

*
ಪರಿವಿಡಿ (index)
Previous ಬಸವೋತ್ತರ ಯುಗ ಜಗದ್ಗುರು ಪದ - ಒಂದು ಅವಲೋಕನ Next