Previous ವಿಶ್ವಾರಾಧ್ಯ ಶಿವನು ವೀರಶೈವ ಧರ್ಮವನ್ನು ಸ್ಥಾಪಿಸಿದನೆ? Next

ಪಂಚಾಚಾರ್ಯರು ಪ್ರತಿಯೊಂದು ಯುಗದಲ್ಲಿ ಹುಟ್ಟಿದವರೆ?

*

✍ ಡಾ. ಎಸ್‌. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)

ಪಂಚಾಚಾರ್ಯರು ಪ್ರತಿಯೊಂದು ಯುಗದಲ್ಲಿ ಹುಟ್ಟಿದವರೆ?

ವೀರಶೈವ ಧರ್ಮವನ್ನು ಬೋಧಿಸಲು, ಪಂಚಾಚಾರ್ಯರು ಪ್ರತಿಯೊಂದು ಯುಗದಲ್ಲೂ ಬೇರೆ ಬೇರೆ ಹೆಸರುಗಳಲ್ಲಿ ಹುಟ್ಟಿದ್ದಾರೆಂದು ಮತ್ತೆ ಮತ್ತೆ ಹೇಳಲಾಗುತ್ತಲೇ ಇದೆ. ಅವರು ಮತ್ತು ಅವರ ಧರ್ಮಕ್ಕೆ ಯುಗ ಯುಗಗಳಷ್ಟೇ, ಭೂಮಿಯಷ್ಟೇ ವಯಸ್ಸಾಗಿದೆ ಎಂದು ಹೇಳುತ್ತಾರೆ ಚಂದ್ರಶೇಖರ ಸ್ವಾಮೀಜಿ, ೧೯೮೮; ಸವದತ್ತಿಮಠ; ೨೦೦೪; ಸಾ.ಶಿ. ಮರುಳಯ್ಯ (೨೦೦೬).

ಬೇರೆ ಬೇರೆ ಯುಗಗಳಲ್ಲಿ ಪಂಚಾಚಾರ್ಯರಾಗಿದ್ದವರ ಹೆಸರುಗಳು ಕೆಳಗಿನಂತಿವೆ:

ಕೃತಯುಗ: ಏಕಾಕ್ಷರ, ದ್ವಿಯಕ್ಷರ, ತ್ರಯಕ್ಷರ, ಚತುರಕ್ಷರ ಮತ್ತು ಪಂಚಾಕ್ಷರ
ತ್ರೇತಾಯುಗ: ಏಕವಕ್ರ, ದ್ವಿವಕ್ರ, ತ್ರಿವಕ್ರ ಚತುರ್ವಕ ಮತ್ತು ಪಂಚವಕ್ರ
ದ್ವಾಪರಯುಗ: ದಾರುಕ, ರೇಣುಕ, ಧೇನುಕ, ಶಂಕುಕರ್ಣ ಮತ್ತು ವಿಶ್ವಕರ್ಣ
ಕಲಿಯುಗ: ರೇವಣಸಿದ್ಧ, ಮರುಳಸಿದ್ದ, ಏಕೋರಾಮ, ಪಂಡಿತಾರಾಧ್ಯ ಮತ್ತು ವಿಶ್ವಾರಾಧ್ಯ

ಈ ಹೆಸರುಗಳ ರೂಪಗಳೇ ತಿಳಿಸುವಂತೆ ಇವೆಲ್ಲ ಶುದ್ದ ಕಲ್ಪಿತ ಎನ್ನುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಆದರೆ ಅವುಗಳ ಹೆಸರುಗಳನ್ನೇ ತೆಗೆದುಕೊಂಡು ಅವನ್ನು ನಂಬುವುದು ಎಷ್ಟು ಅರ್ಥಹೀನ ಎಂಬುದನ್ನು ವಿಚಾರಮಾಡೋಣ.

ಎಲ್ಲರಿಗೂ ತಿಳಿದಿರುವಂತೆ ಹಿಂದೂ ಪುರಾಣಗಳು ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ ಎಂಬ ನಾಲ್ಕು ಯುಗಗಳನ್ನು ಹೇಳುತ್ತವೆ. ಈ ಯುಗಗಳು ಅದೇ ಅನುಕ್ರಮದಲ್ಲಿ ಒಂದಾದ ಮೇಲೊಂದರಂತೆ ಬಂದು ನಾಲ್ಕರ ಪರಿಚಕ್ರದ ನಂತರ ಮತ್ತೆ ಪುನರಾವರ್ತನೆಗೊಳ್ಳುತ್ತವೆ. ಪ್ರತಿಯೊಂದು ಪರಿಚಕ್ರದ ಒಂದು ಸುತ್ತಿಗೆ ಮಹಾಯುಗವೆಂದು ಕರೆಯಲಾಗುತ್ತದೆ. ಅಂತಹ ಮಹಾಯುಗಗಳಾದರೆ (ಕೆಲವರು ೧೦೦ ಎನ್ನುತ್ತಾರೆ) ಒಂದು ಕಲ್ಪನೆ ಎನಿಸುತ್ತದೆ. ಯುಗ ಮತ್ತು ಮಹಾಯುಗಗಳು ಹಗಲು ಮತ್ತು ರಾತ್ರಿ ಇದ್ದಂತೆ; ಪ್ರಕೃತಿಯ ಹಂಗಾಮಿನ ಕ್ರಮಾನುಗತ ಪರಿಚಕ್ರವಿದ್ದಂತೆ.

ರಾಮಾಯಣ ನಡೆದದ್ದು ತ್ರೇತಾಯುಗವಾದರೆ, ಮಹಾಭಾರತ ನಡೆದದ್ದು ದ್ವಾಪರಯುಗದಲ್ಲಿ. ಯುಧಿಷ್ಠಿರನು ಅವಸರದಿಂದ ಸ್ವರ್ಗವನ್ನು ತಲುಪಿದ ದಿನದಿಂದಲೇ (೫೧೨೨ ವರ್ಷಗಳ ಹಿಂದೆ) ಕಲಿಯುಗವು ಆರಂಭವಾಗಿದೆ. ಪ್ರತಿಯೊಂದು ಯುಗದ ಅವಧಿಯನ್ನು ಭಾಗವತ ಪುರಾಣ ಕೆಳಗೆಕಂಡಂತೆ ತಿಳಿಸುತ್ತದೆ: ಕೃತಯುಗದ ಕಾಲಾವಧಿ ೧೭,೨೮೦೦೦ ವರ್ಷಗಳಾದರೆ, ತ್ರೇತಾಯುಗದ ಅವಧಿ ೧೨,೯೬,೦೦೦ ವರ್ಷಗಳು, ದ್ವಾಪರಯುಗದ ಅವಧಿ ೮,೬೪,೦೦೦ ವರ್ಷಗಳಾದರೆ, ಕಲಿಯುಗದ ಅವಧಿ ೪,೩೨,೦೦೦ ವರ್ಷಗಳಂತೆ! ಈ ನಾಲ್ಕೂ ಯುಗಗಳ ಒಟ್ಟು ಕಾಲಾವಧಿ ೪೩,೨೦,೦೦೦ ವರ್ಷಗಳಾಗುತ್ತವೆ. ಈಗ ನಾವಿರುವ ಕಲಿಯುಗ ಆರಂಭವಾಗಿ ೫೧೨೨ ವರ್ಷಗಳಾಗಿವೆ. ಒಟ್ಟಾರೆ ಮೊದಲ ಯುಗ ಆರಂಭವಾಗಿ ಈವರೆಗೆ ೩೮,೯೩,೦೦೦ ವರ್ಷಗಳು ಕಳೆದಿವೆ.

ಪಂಚಾಚಾರ್ಯರು, ತಾವು ಮತ್ತು ತಮ್ಮ ಧರ್ಮಕ್ಕೆ ೩೮.೯೩ ಲಕ್ಷ ವರ್ಷಗಳಾಗಿವೆ ಎಂದು ಹೇಳುವುದನ್ನು ನಂಬಿದರೆ, ಈಗ ತಿಳಿದಿರುವ ನಮ್ಮ ಭಾರತದ ಇತಿಹಾಸವೇ ಅತ್ಯಂತ ಹೆಚ್ಚೆಂದರೆ ಹತ್ತು ಸಾವಿರ ವರ್ಷಗಳ ಹಿಂದಕ್ಕೆ ಹೋಗುವುದಿಲ್ಲ. ಆದರೆ ಈ ಪಂಚಾಚಾರ್ಯರು ತಮ್ಮ ಕಾಲಾವಧಿಯ ಬಗೆಗೆ ಹೇಳುವುದು ಕೇವಲ ವಿಕಲ್ಪವಾಗುತ್ತದೆಯಲ್ಲದೆ ಬೇರೆಯಲ್ಲ!

ಅವರ ಹೇಳಿಕೆಯ ಪ್ರಕಾರ

* ಏಕಾಕ್ಷರ, ದ್ವಿಯಕ್ಷರ, ತ್ರಯಕ್ಷರ, ಚತುರಕ್ಷರ ಮತ್ತು ಪಂಚಾಕ್ಷರರು ಕೃತಯುಗದ ೧೭,೨೮,೦೦೦ ವರ್ಷಗಳ ಕಾಲ ಬದುಕಿದ್ದರು;
* ಏಕವಕ್ತ್ರಕ್ತ್ರ, ದ್ವಿವಕ್ತ್ರ, ತ್ರಿವಕ್ತ್ರ, ಚತುವಕ್ತ್ರ ಮತ್ತು ಪಂಚವಕ್ತ್ರರು ತ್ರೇತಾಯುಗದ ೧೨,೯೬,೦೦೦ ವರ್ಷಗಳ ಕಾಲ ಜೀವಿಸಿದ್ದರು.
* ರೇಣುಕ, ದಾರುಕ, ಧೇನುಕ, ಶಂಕುವರ್ಣ ಮತ್ತು ವಿಶ್ವಕರ್ಣರು ದ್ವಾಪರ ಯುಗದ ೮,೬೪,೦೦೦ ವರ್ಷಗಳ ಕಾಲ ಜೀವಂತವಿದ್ದರು; ಮತ್ತು
* ಕ್ರಿ.ಪೂ. ೩೧೦೨ರಿಂದ ಆರಂಭವಾಗಿರುವ ಕಲಿಯುಗವು ೪,೩೨,೦೦೦ ವರ್ಷಗಳ ಕಾಲವಿರುತ್ತದೆ. ಕ್ರಿ. ಶಕೆಯಲ್ಲಿ ಈಗ ೨೦೨೦ ವರ್ಷಗಳು ಕಳೆದಿವೆ ಎಂದರೆ ಕಲಿಯುಗದಲ್ಲಿ ಇದುವರೆಗೆ ೫೧೩೨ ವರ್ಷಗಳು ಆದಂತಾಗಿದೆ. ಅಲ್ಲಿಂದಲಂತೂ ಈಗಿರುವ ರೇವಣಸಿದ್ಧ, ಮರುಳಸಿದ್ದ, ಏಕೋರಾಮ, ಪಂಡಿತಾರಾಧ್ಯ ಮತ್ತು ವಿಶ್ವಾರಾಧ್ಯರು ಪೀಠಾಧಿಕಾರದಲ್ಲಿದ್ದಾರೆಂದಾಯಿತು! ಆದರೆ, ೫೧೨೨ ವರ್ಷಗಳ ಹಿಂದೆ ಕಲಿಯುಗದ ಆರಂಭದೊಂದಿಗೆ ಉದ್ಭವಿಸಿದ ರೇಣುಕ / ರೇವಣಸಿದ್ಧ ಯಾರು? ಇಂದಿನ ವೀರಸೋಮೇಶ್ವರ ಪ್ರಸನ್ನರೇಣುಕಾಚಾರ್ಯ ಸ್ವಾಮಿಗಳಿಗೆ ಕೇವಲ ೬೦ ವರ್ಷಗಳಿರಬಹುದು. ಈ ಕಾಲಗಣತಿ ತುಂಬ ಸ್ವಾರಸ್ಯವಾಗಿದೆಯಲ್ಲವೆ?

ಇನ್ನು, ಮೇಲೆ ಪ್ರಸ್ತಾಪಿಸಿದಂತೆ ಈ ಪಂಚಪೀಠಗಳಲ್ಲಿ ಇದುವರೆಗೆ ಆಗಿಹೋಗಿರುವ ಸ್ವಾಮಿಗಳ ಸಂಖ್ಯೆಯೂ ಅಷ್ಟೇ ಕುತೂಹಲಕಾರಿಯಾಗಿದೆ. ಕಲಿಯುಗದ ಆರಂಭದಿಂದ ಇರುವ ಈ ಐದು ಪೀಠಗಳಿಗೂ ೫೧೨೨ ವರ್ಷಗಳಾಗಿವೆ. ಆದರೆ ಪ್ರತಿಯೊಬ್ಬ ಪೀಠಾಧಿಪತಿಯೂ ತಲಾ ಸರಾಸರಿ ೫೦ ವರ್ಷಗಳಷ್ಟು ಕಾಲ ಆ ಸ್ಥಾನದಲ್ಲಿದ್ದರೂ, ಪೀಠಗಳ ವಯಸ್ಸುಗಳಲ್ಲಿ ಎಷ್ಟೊಂದು ವ್ಯತ್ಯಾಸವಾಗುತ್ತದೆ ಎಂಬುದನ್ನು ಸ್ವಲ್ಪ ಗಮನಿಸೋಣ:

ಆಗಿಹೋಗಿರುವ ಗುರುಗಳು ಮೇಲಿನ ಲೆಕ್ಕದಲ್ಲಿ ಆಗುವ ವಯಸ್ಸು

* ರಂಭಾಪುರಿ ಪೀಠ -೧೨೧ ಜನ , ೬೦೫೦ ವರ್ಷಗಳು
* ಉಜ್ಜಿನಿಪೀಠ -೧೧೦ ಜನ, ೫೫೦೦ ವರ್ಷಗಳು
* ಕೇದಾರಪೀಠ -೩೨೩ ಜನ, ೧೬೧೫೦ ವರ್ಷಗಳು
* ಶ್ರೀಶೈಲಪೀಠ -೨೮ ಜನ, ೧೪೦೦ ವರ್ಷಗಳು
* ಕಾಶಿಪೀಠ -೮೬ ಜನ, ೪೩೦೦ ವರ್ಷಗಳು

ಇಂತಹ ವಿಚಿತ್ರ ಅಂಕಿ-ಅಂಶಗಳನ್ನು ನಂಬುವುದಾದರೂ ಹೇಗೆ? ಅವರೇ ಕೊಡುವ ಈ ಅಂಕಿ-ಅಂಶಗಳು ಯಾವುದೇ ತಾಂತ್ರಿಕ ದಾಖಲೆಗಳನ್ನು ಆಧರಿಸಿಲ್ಲ. (ಇದನ್ನು ಪ್ರತ್ಯೇಕವಾಗಿ ಚರ್ಚಿಸಲಾಗಿದೆ)ಒಂದು ವೇಳೆ ಅವರು ಹೇಳುವುದನ್ನು ನಂಬಬಹುದು ಮತ್ತು ಸತ್ಯ ಎಂದು ಭಾವಿಸಬಹುದೆಂದರೆ, ಒಂದೇ ಕಾಲದಲ್ಲಿ ಹುಟ್ಟಿದ ಪೀಠಗಳ ಮುಖ್ಯಸ್ಥರ ಸಂಖ್ಯೆಯಲ್ಲಿ ಅಷ್ಟೊಂದು ವ್ಯತ್ಯಾಸಗಳೇಕೆ ಎಂಬುದೇ ತಿಳಿಯುತ್ತಿಲ್ಲ. ಉದಾಹರಣೆಗೆ- ಶ್ರೀಶೈಲ ಪೀಠದಲ್ಲಿ ೨೮ ಜನ ಮಾತ್ರ ಸ್ವಾಮಿಗಳಾಗಿ ಹೋಗಿದ್ದಾರೆ. ಅದೇ ಅವಧಿಯ ಕೇದಾರ ಪೀಠದಲ್ಲಿ ೩೨೪ ಜನ ಸ್ವಾಮಿಗಳು ಸಂದು ಹೋಗಿದ್ದಾರೆ. ಈ ಎರಡೂ ಪೀಠಗಳ ಮುಖ್ಯಸ್ಥರ ಸಂಖ್ಯೆಯ ಅಲೆಗಳ ನಡುವೆ ಉಳಿದ ಮೂರು ಪೀಠಗಳ ಸಂಖ್ಯೆಯಲ್ಲೂ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳು ಸ್ಪಷ್ಟವಾಗಿ ನಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತವೆ?

೧. ಈ ಎಲ್ಲ ಪೀಠಗಳೂ ಏಕಕಾಲದಲ್ಲಿ ಸ್ಥಾಪಿತವಾಗಿಲ್ಲ. ಒಂದೊಂದರ ಸ್ಥಾಪನೆಯ ಕಾಲದಲ್ಲಿ ಪರಸ್ಪರ ಸಾವಿರ ವರ್ಷಗಳಷ್ಟು ಭಾರಿ ಅಂತರವಿದೆ. ಆದುದರಿಂದ ಸುಪ್ರಭೇದಾಗಮ ಮತ್ತು ಸ್ವಯಂಭು ಆಗಮಗಳು ಹೇಳುವುದು ಸತ್ಯವಾಗಿರಲು ಸಾಧ್ಯವಿಲ್ಲ.

೨. ಇದುವರೆಗಿನ ನಂಬಿಕೆ ಮತ್ತು ಪರಂಪರೆಯ ಪ್ರಕಾರ ರಂಭಾಪುರಿ ರೇಣುಕ ಪೀಠವು ಅತ್ಯಂತ ಹಿರಿಯರು ಮತ್ತು ಐದು ಪೀಠಗಳಲ್ಲಿ ಅದು ಪ್ರಥಮ. ಆದರೆ ಈ ಪೀಠ ಮತ್ತು ಕೇದಾರ ಪೀಠಗಳ ಮುಖ್ಯಸ್ಥರ ಸಂಖ್ಯೆಯನ್ನು ಗಮನಿಸಿದರೆ ಕೇದಾರ ಪೀಠವೇ ಹಿರಿಯದಾಗುತ್ತದೆ. ಷಿಪ್ಟನ್ ಹೇಳಿರುವಂತೆ ಕೇದಾರ ಮಠದ ಚರಿತ್ರೆಯು ಎರಡು ಅಥವಾ ಮೂರು ನೂರು ವರ್ಷಗಳನ್ನು ಮೀರಲಾರದು.

೩. ವಿಕಾಸ ಸಿದ್ದಾಂತದ ಪ್ರಕಾರ, ಮಾನವನು ಇಂದಿನ ರೂಪ ತಳೆದದ್ದೇ ನಲವತ್ತು ಸಾವಿರ ವರ್ಷಗಳಿಂದ ಈಚೆಗೆ (ಹರಾರಿ ೨೦೧೫). ಪೂರ್ಣವಾಗಿ ವಿಕಾಸವಾಗದ, ಮಾನವರೇ ಭೂಮಿಯ ಮೇಲೆ ಇಲ್ಲದಿದ್ದಾಗ ರೇಣುಕರು ಯಾರಿಗೆ ವೀರಶೈವ ಧರ್ಮವನ್ನು ಬೋಧಿಸಿದರು?

೪. ಈ ಪೀಠಗಳು ತಮಗೆ ಅಧಿಕೃತ ಮತ್ತು ವಿಶ್ವಾಸಾರ್ಹವಾದ ಚರಿತ್ರೆಯಿಲ್ಲದ ಕಾರಣ, ತಮ್ಮ ಕಣ್ಣಿಗೆ ಕಾಣುವ ಒಂದು ಹುಲ್ಲುಕಡ್ಡಿಯನ್ನೇ ತಮ್ಮ ಧರ್ಮದ ಪ್ರಾಚೀನತೆಗೆ ಸಾಕ್ಷಾಧಾರವಾಗಿ ಇಟ್ಟುಕೊಂಡು ಅದಕ್ಕೆ ಅಂಟಿಕೊಂಡಿವೆ. ಉದಾ: ಹರಪ್ಪಾ ಶೋಧನೆಯ ಪಶುಪತಿಯನ್ನು ತಮ್ಮವನೆಂದು ಹೇಳಿಕೊಳ್ಳುವುದು ಮತ್ತು ಪ್ರಶ್ನಾರ್ಹವಾದ ಅಲ್ಲೊಂದು ಇಲ್ಲೊಂದು ಚೂರುಪಾರು ಆಯ್ದುಕೊಂಡು ಒಂದು ಅಲಿಖಿತ ಚರಿತ್ರೆಯನ್ನು ಬರೆಯಲು ಪ್ರಯತ್ನಿಸುತ್ತಿರುವುದು. ಬ್ರಾಹ್ಮಣ ಪುರಾಣಗಳನ್ನು ಅನುಕರಿಸಿ ಪ್ರಶ್ನಾರ್ಹವಾದ ಕಾಲಕ್ರಮಗಳನ್ನು ಕಲ್ಪಿಸಿರುವುದು ಕಂಡುಬರುತ್ತದೆ.

ಇಷ್ಟೇ ಅಲ್ಲ. ಪಂಚಾಚಾರ್ಯರು ಭೂಲೋಕವನ್ನು ಸ್ವಚ್ಛಗೊಳಿಸಲು ಪ್ರತಿಯುಗಕ್ಕೊಮ್ಮೆ (ನಾಲ್ಕು ಸಲ) ಅವತರಿಸುತ್ತಾರೆ. ಭೂಲೋಕ ಎಂದರೆ ಈ ಭೂಮಿ. ಇದರಲ್ಲಿ ೧೯೫ ದೇಶಗಳಿವೆ. ಮೇಲಿನ ಕೈಲಾಸದಿಂದ ಕೆಳಗಿನ ಭೂಲೋಕಕ್ಕೆ ಇಳಿಯುವಾಗ ಅವರಿಗೆ ಭಾರತ ಮಾತ್ರ ಕಾಣಿಸಿದಂತಿದೆ. ಹಾಗಾಗಿ ಅವರು ಭಾರತಕ್ಕೆ ಬಂದಿಳಿಯುತ್ತಾರೆ. ಅವರ ದೃಷ್ಟಿಯಲ್ಲಿ ಭೂಲೋಕವೆಂದರೆ ಭಾರತವೊಂದೇ! ಅದರಲ್ಲೂ ಇಡೀ ಭಾರತವಲ್ಲ; ಭಾರತ ಪ್ರಸ್ಥಭೂಮಿಯ ಆರು ರಾಜ್ಯಗಳು ಮಾತ್ರ.

ಪಂಚಾಚಾರ್ಯರು ಭಾರತವನ್ನು ಶುದ್ಧಗೊಳಿಸಿದ ನಂತರವೂ ಅದು ಪ್ರತಿಯೊಂದು ಯುಗಾಂತ್ಯದಲ್ಲೂ ಕಲುಷಿತಗೊಳ್ಳುತ್ತದೆ. ಹಾಗಾಗಿ ಅವರು ಮತ್ತೆ ಮತ್ತೆ ಅದರ ಕೊಳಕನ್ನು ತೊಳೆಯಲು ಬರುತ್ತಿರಲೇಬೇಕಾಗುತ್ತದೆ. ಬಹುಶಃ ಪಂಚಾಚಾರ್ಯರು ಭಗವದ್ಗೀತೆಯಲ್ಲಿ ಇರುವ ಕೃಷ್ಣನ ಭರವಸೆಯನ್ನೇ ಅನುಕರಿಸಿರುವುದು ಸ್ಪಷ್ಟವಿದೆ. ಕೃಷ್ಣವಾಕ್ಯ ಹೀಗಿದೆ: “ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಸಂಭವಾಮಿ ಯುಗೇ ಯುಗೇ” (ಯಾವ ಯಾವಾಗ ಭಾರತದಲ್ಲಿ ಧರ್ಮಕ್ಕೆ ಗ್ಲಾನಿಯುಂಟಾಗುವುದೋ ಆವಾಗಾವಾಗ ಯುಗ ಯುಗಗಳಲ್ಲಿ ನಾನು ಅವತರಿಸಿ ಅಧರ್ಮವನ್ನು ತೊಲಗಿಸುತ್ತೇನೆ).

ಆದರೆ ಗೀತೆಯ ರಚನೆಯಾದದ್ದು ದ್ವಾಪರಯುಗದ ಅಂತ್ಯದಲ್ಲಿ. ಪಂಚಾಚಾರ್ಯರು ದ್ವಾಪರಯುಗಕ್ಕಿಂತ ಎರಡು ಯುಗಗಳ ಮುಂಚೆ ಕೃತಯುಗದಿಂದಲೇ ಇದ್ದವರು. ಹಾಗಾಗಿ ಕೃಷ್ಣನೂ ಪಂಚಾಚಾರ್ಯರಿಗಿಂತ ತುಂಬಾ ಕಿರಿಯನಾಗುತ್ತೇನೆ. ಈ ಪಂಚಾಚಾರ್ಯರು ಮೊದಲಿನವರಾಗಿರುವ ಕಾರಣ ಕೃಷ್ಣನೇ ದ್ವಾಪರಯುಗದಲ್ಲಿ ಅವರನ್ನು ಅನುಕರಿಸಿರಬೇಕು!

ಪಂಚಾಚಾರ್ಯರು, “ನಾವು ಪ್ರತಿಯೊಂದು ಯುಗದಲ್ಲೂ ಹುಟ್ಟುತ್ತೇವೆ” ಎಂದು ಏಕೆ ಹೇಳುತ್ತಿದ್ದಾರೆ? ಮುಂಚೆಯೇ ಹೇಳಿರುವಂತೆ, ಪ್ರೊ ಸಾಕ್ರೆ ಅವರು ಸೂಕ್ತ ಕಾರಣ ಕೊಡುತ್ತಾರೆ: “ಪಂಚಾಚಾರ್ಯರು ತಮ್ಮ ಧರ್ಮವು ಅತ್ಯಂತ ಪ್ರಾಚೀನ ಎಂದು ಸಾಧಿಸಬಯಸುತ್ತಾರೆ. ಧರ್ಮವು ಹೆಚ್ಚು ಪ್ರಾಚೀನವೆನಿಸಿದಷ್ಟೂ ಅದಕ್ಕೆ ಹೆಚ್ಚು ಮಹತ್ವ ಬರುತ್ತದೆ ಎಂದು ಅವರು ತಿಳಿದಿದ್ದಾರೆ. ಹಾಗೆಯೇ, ತಾವು ಬಸವಣ್ಣನವರಿಗಿಂತಲೂ ಅನೇಕ ಲಕ್ಷ ವರ್ಷಗಳ ಪೂರ್ವದವರು ಎಂದು ಜನರನ್ನು ನಂಬಿಸಬಯಸುತ್ತಾರೆ. ಅದಕ್ಕಾಗಿ ಅವರು ಈ ಎಲ್ಲ (ನಂಬಲಾಗದ) ಕಟ್ಟು ಕಥೆಗಳನ್ನು ಸೃಷ್ಟಿಸುತ್ತಾರೆ”.

ಗ್ರಂಥ ಋಣ:
1) ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ; ಲೇಖಕರು: ಡಾ. ಎಸ್‌. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.

ಪರಿವಿಡಿ (index)
Previous ವಿಶ್ವಾರಾಧ್ಯ ಶಿವನು ವೀರಶೈವ ಧರ್ಮವನ್ನು ಸ್ಥಾಪಿಸಿದನೆ? Next