ವೀರಶೈವದ ಪ್ರಾಚೀನತೆ ಇತರ ಕೆಲವು ವಾದಗಳು | ರೇಣುಕಾಚಾರ್ಯ / ರೇವಣಸಿದ್ದ |
ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ |
✍ ಡಾ. ಎಸ್. ಎಂ. ಜಾಮದಾರ (ನಿವೃತ್ತ ಐಎಎಸ್ ಅಧಿಕಾರಿಗಳು)
ದಕ್ಷಿಣ ಭಾರತದ ಲಿಂಗಾಯತ ಸಮುದಾಯದಲ್ಲಿ ಸಾಮರಸ್ಯವಿಲ್ಲದ ಎರಡು ವರ್ಗದ ಮಠಗಳಿವೆ. ಒಂದು, ೧೨ನೆಯ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ತತ್ವ ಸಿದ್ದಾಂತಗಳನ್ನು ನಂಬಿರುವ ವಿರಕ್ತ ಮಠಗಳ ವರ್ಗ; ಇನ್ನೊಂದು, ಹಿಂದೂ ಧರ್ಮದ ಶೈವ ಸಿದ್ದಾಂತವನ್ನು ನಂಬಿರುವ ಪಂಚಪೀಠಗಳ ವರ್ಗ, ಇಷ್ಟಲಿಂಗ, ಷಟ್‌ಸ್ಥಲ ಮತ್ತು ಅಷ್ಟಾವರಣ ಸಿದ್ದಾಂತಗಳ ಹೊರತಾಗಿ ಈ ಎರಡೂ ವರ್ಗದ ಮಠಗಳು ಪರಸ್ಪರ ದೋಷಾರೋಪಣೆಯಲ್ಲಿ ನಿರತವಾಗಿವೆ.
ವಿರಕ್ತ ಮಠಗಳ ಇತಿಹಾಸ ಮತ್ತು ತತ್ತ್ವಸಿದ್ಧಾಂತಗಳು ಬಸವಣ್ಣನವರಿಂದ ಆರಂಭವಾಗಿದ್ದು, ಆ ಮಠಗಳು ಬಸವಣ್ಣನವರ ಪರಿವೇಷದಲ್ಲೇ ಇವೆ. ಆದರೆ ಪಂಚಪೀಠಗಳ ಇತಿಹಾಸವಾಗಲೀ, ತತ್ವ ಸಿದ್ದಾಂತಗಳಾಗಲೀ ಸ್ಪಷ್ಟವಾಗಿಲ್ಲ ಮತ್ತು ತಾರ್ಕಿಕ ದೃಷ್ಟಿಯಿಂದ ಸ್ಥಿರವಾಗಿಲ್ಲ. ಈ ಎರಡು ವರ್ಗಗಳ ಮಧ್ಯೆ ಇರುವ ವಿವಾದಗಳು ಕುತೂಹಲಕಾರಿಯಾಗಿವೆ ಅಷ್ಟೇ ಅಲ್ಲ, ಸುಮಾರು ಕಳೆದ ಎರಡು ನೂರು ವರ್ಷಗಳಿಂದ ಉದ್ವೇಗದ ಚರ್ಚಾವಸ್ತುಗಳಾಗಿವೆ.
ಪಂಚಪೀಠಗಳು ವೀರಶೈವ ಧರ್ಮದ ಮೂಲವಾದ ಶೈವ ಸಿದ್ದಾಂತದ ಪ್ರತಿಪಾದಕ ವ್ಯವಸ್ಥೆಗಳು, ಅವು ಒಂದು ಕಡೆ ಹಿಂದೂ ಧರ್ಮ, ಇನ್ನೊಂದು ಕಡೆ ಲಿಂಗಾಯತ ಧರ್ಮ ಇವುಗಳ ಮಧ್ಯೆ ಡೋಲಾಯಮಾನ ಅವಸ್ಥೆಯಲ್ಲಿವೆ. ಎರಡು ವಿಭಿನ್ನ ಧರ್ಮಗಳನ್ನು ಪಾಲಿಸುತ್ತಿರುವ ಎರಡು ವರ್ಗದ ಜನರು ಅವುಗಳ ಮಧ್ಯೆ ಹೊಯ್ದಾಡುವಂತಾಗಿರುವುದು ದೊಡ್ಡ ಗೊಂದಲವುಂಟುಮಾಡಿದೆ. ಈ ಗೊಂದಲ ನಿವಾರಣೆಯ ಒಂದು ವಸ್ತುನಿಷ್ಠ ಪ್ರಯತ್ನವೇ ಈ ಲೇಖನ.
ವೀರಶೈವರ ನಂಬಿಕೆಯ ಪಂಚಪೀಠಗಳು ದೇಶದ ಬೇರೆ ಬೇರೆ ಕಡೆ ಚದರಿಕೊಂಡಿದ್ದರೆ, ಸಾವಿರ ಸಾವಿರ ಸಂಖ್ಯೆಯ ವಿರಕ್ತ ಮಠಗಳು ಒಂದು ಗೊಂಚಲಿನಂತೆ ದಕ್ಷಿಣ ಭಾರತದಾದ್ಯಂತ ಬಸವಣ್ಣನವರ ಬೋಧನೆಗಳನ್ನು ಪ್ರಸಾರ ಮಾಡುತ್ತಿವೆ. ಪಂಚಪೀಠಗಳೆಂದು ಕರೆಯಲಾಗುವ ಐದು ಮಠಗಳ ಮುಖ್ಯಸ್ಥರನ್ನು ಪಂಚಾಚಾರ್ಯರು ಎನ್ನಲಾಗಿದೆ.
ಈ ಐದು ಪೀಠಗಳಲ್ಲಿ ಎರಡು ಪೀಠಗಳು ಮಾತ್ರ ಕರ್ನಾಟಕದಲ್ಲಿವೆ. ರಂಭಾಪುರಿ ರೇಣುಕಾರಾಧ್ಯ ಪೀಠವು ಚಿಕ್ಕಮಗಳೂರು ಜಿಲ್ಲೆಯಲ್ಲೂ, ಉಜ್ಜಿನಿ ಮರುಳಾರಾಧ್ಯ ಪೀಠವು ಬಳ್ಳಾರಿ ಜಿಲ್ಲೆಯಲ್ಲೂ ನೆಲೆಗೊಂಡಿವೆ. ಉಳಿದ ಮೂರರಲ್ಲಿ ಏಕೋರಾಮಾರಾಧ್ಯ ಪೀಠವು ಉತ್ತರಕಾಂಡದ ಕೇದಾರದಲ್ಲೂ, ವಿಶ್ವಾರಾಧ್ಯ ಪೀಠವು ಉತ್ತರ ಪ್ರದೇಶದ ವಾರಣಾಸಿ(ಕಾಶಿ)ಯಲ್ಲೂ, ಮೂರನೆಯ ಪಂಡಿತಾರಾಧ್ಯ ಪೀಠವು ಆಂಧ್ರಪ್ರದೇಶದ ಶ್ರೀಶೈಲದಲ್ಲೂ ಇದೆ.
ಪ್ರಾಚೀನ ಕಾಲದಿಂದ ಕಾಶಿ, ಕೇದಾರ, ಉಜ್ಜಯಿನಿ ಮತ್ತು ಶ್ರೀಶೈಲಗಳು ಪ್ರಸಿದ್ಧ ಯಾತ್ರಾ ಸ್ಥಳಗಳಾಗಿವೆ. ಸ್ವಯಂ ಉದ್ಭವವಾದವೆಂದು ಹೇಳಲಾಗಿರುವ ೧೨ ಜ್ಯೋತಿರ್ಲಿಂಗಗಳಲ್ಲಿ ೪ ಲಿಂಗಗಳು ಈ ಯಾತ್ರಾ ಸ್ಥಳಗಳಲ್ಲಿವೆ. ಹಿಂದೂಗಳು ಈ ಸ್ಥಾವರಲಿಂಗಗಳನ್ನು ಭಕ್ತಿಯಿಂದ ಪೂಜಿಸುತ್ತಾರೆ. ಈ ಸ್ಥಳಗಳಿಗೆ ಯಾತ್ರೆ ಹೋಗುವುದು ಒಂದು ಧರ್ಮಕಾರ್ಯವೆಂದೂ, ಅದರಿಂದ ಮರಣಾನಂತರ ಸ್ವರ್ಗಕ್ಕೆ ಹೋಗಲು ಅರ್ಹತೆ ಪಡೆಯುತ್ತಾರೆಂದೂ ಹಿಂದೂಗಳು ನಂಬುತ್ತಾರೆ.
ತಮ್ಮ ಅನುಯಾಯಿಗಳು ತಮ್ಮ ದಿವ್ಯ ಮೂಲಸ್ಥಾನಗಳಲ್ಲಿ ನಂಬಿಕೆ ಇಟ್ಟುಕೊಳ್ಳುವಂತೆ ಮಾಡಲು ಈ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ವೀರಶೈವ ಮಠಗಳನ್ನು ಸ್ಥಾಪಿಸಿದರೇ ವಿನಃ, ಆಯಾ ರಾಜ್ಯ ಸರ್ಕಾರಗಳಿಂದ ನಿರ್ವಹಿಸಲ್ಪಡುತ್ತಿರುವ ಅಲ್ಲಿನ ಜ್ಯೋತಿರ್ಲಿಂಗ ದೇವಾಲಯಗಳಿಗೂ ಈ ವೀರಶೈವ ಪೀಠಗಳಿಗೂ ಯಾವುದೇ ಸಂಬಂಧವಿಲ್ಲ.
ಕಾಶಿಗೆ ಸಂಬಂಧಿಸಿದಂತೆ, ಗಂಗಾ ನದಿಯಲ್ಲಿ ಮುಳುಗಿ ಸ್ನಾನಮಾಡಿದರೆ, ತಮ್ಮ ಪಾಪಗಳೆಲ್ಲ ಪರಿಹಾರವಾಗುತ್ತವೆ ಮತ್ತು ಕಾಶಿಯಲ್ಲಿ ಸತ್ತರೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತೇವೆ ಎಂದು ಹಿಂದೂಗಳು ನಂಬಿದ್ದಾರೆ. ಆ ಕಾರಣದಿಂದಲೇ ಕಾಶಿಯು ಹಿಂದೂ ಯಾತ್ರಿಕಭಕ್ತರಿಂದ ಸದಾ ತುಂಬಿ ತುಳುಕುತ್ತಿರುವುದು. ಬಹುತೇಕ ಹಿಂದೂ ಜಾತಿ, ಸಮುದಾಯಗಳು ಹೆಚ್ಚಾಗಿ ಅಲ್ಲಿಗೆ ಹೋಗುವ ತಮ್ಮ ಜನರಿಗೆ ಅತಿಥಿಗೃಹಗಳಾಗುವಂತೆ ತಮ್ಮ ತಮ್ಮ ಮಠಗಳನ್ನು ಕಟ್ಟಿಕೊಂಡಿವೆ. ಒಂದು ಸಮೀಕ್ಷೆಯ ಪ್ರಕಾರ, ಕಾಶಿಯಲ್ಲಿ ಅಂತಹ ೩೦೦ ಮಠಗಳೂ, ೧೫೩೩ ದೇವಾಲಯಗಳೂ ಇವೆ. ಅವುಗಳಲ್ಲಿ ವೀರಶೈವ ಮಠವೂ (ಜಂಗಮವಾಡಿ) ಒಂದು.
ವೀರಶೈವರ ಈ ಐದು ಗುರುಗಳು ಯಾರು? ಈ ಐದು ಮಠಗಳು ಸ್ಥಾಪನೆಯಾದದ್ದು ಯಾವಾಗ? ಅವನ್ನು ಸ್ಥಾಪಿಸಿದವರು ಯಾರು? ಅವರು ವೀರಶೈವ ಧರ್ಮಸ್ಥಾಪಕರೆ? ತಾವು ವೀರಶೈವ ಧರ್ಮಸ್ಥಾಪಕರು ಎಂದು ಲೆಕ್ಕವಿಲ್ಲದಷ್ಟು ಹಕ್ಕು ಸಾಧಿಸುತ್ತಿರುವ ಪಂಚಾಚಾರ್ಯರ ಹೇಳಿಕೆಗಳು, ಈಚಿನ ಸಂಶೋಧಕರು ಬಯಲು ಮಾಡಿರುವ ಸಂಗತಿಗಳ ಬೆಳಕಿನಲ್ಲಿ ಎಷ್ಟರಮಟ್ಟಿಗೆ ಸಮರ್ಥನೀಯ? ಈ ಗೊಂದಲದ ಪ್ರಶ್ನೆಗಳಿಗೆ ಉತ್ತರವನ್ನು ತಿಳಿದುಕೊಳ್ಳಲು ಜನ ಸಹಜವಾಗಿಯೇ ಕುತೂಹಲಿಗಳಾಗಿದ್ದಾರೆ.
ವೀರಶೈವ ಪಂಚಪೀಠಗಳನ್ನು ಕುರಿತ ಗ್ರಂಥಗಳ ವ್ಯಾಪ್ತಿಯಲ್ಲಿ ಹಂಚಿಹೋಗಿರುವ ಸಂಗತಿಗಳನ್ನು ತಿಳಿಸಲು ಈ ಲೇಖನ ಪ್ರಯತ್ನಿಸಿದೆ. ಆ ಮಾಹಿತಿ ಬಹಳ ದೊಡ್ಡ ಪ್ರಮಾಣದಲ್ಲಿರುವ ಕಾರಣ, ಮೇಲಿನ ಪ್ರಶ್ನೆಗಳಿಗೆ ಸಂಬಂಧಿಸಿಯಷ್ಟೆ ಸಂಕ್ಷಿಪ್ತ ಸಾರವನ್ನು ಇಲ್ಲಿ ಕೊಡಲಾಗಿದೆ. ಓದುಗರ ಅನುಕೂಲ ಮತ್ತು ಸ್ಪಷ್ಟ ನಿರೂಪಣೆಯ ದೃಷ್ಟಿಯಿಂದ ಪ್ರತಿಯೊಂದು ಪ್ರಶ್ನೆಯನ್ನೂ ಉತ್ತರಿಸಲು ಬೇರೆ ಬೇರೆ ಅಧ್ಯಾಯಗಳಲ್ಲಿ ಚರ್ಚೆಯನ್ನು ವಿಂಗಡಿಸಲಾಗಿದೆ.
ಪಂಚಾಚಾರ್ಯ ಯಾರು?
“ಪಂಚಾಚಾರ್ಯ' ಶಬ್ದದಲ್ಲಿ ಅಕ್ಷರಶಃ ಎರಡು ಪದಗಳಿವೆ: 'ಪಂಚ' ಮತ್ತು 'ಆಚಾರ್ಯ', ಪಂಚ ಎಂದರೆ ಐದು; ಆಚಾರ್ಯ ಎಂದರೆ ಗುರು, ಬೋಧಕ ಅಥವಾ ಶಿಕ್ಷಕ. ಈ ಎರಡೂ ಒಟ್ಟಾಗಿ 'ಪಂಚಾಚಾರ್ಯರು', ಎಂದರೆ ಐದು ಜನ ಗುರುಗಳು ಎಂದಾಗಿದೆ.
ಈ ಐದೂ ಪೀಠಗಳಿಗೂ ಪ್ರತ್ಯೇಕವಾದ ಸ್ಥಾಯಿ ಕಾರ್ಯಕೇಂದ್ರಗಳಿವೆ. ಆ ಕೇಂದ್ರಗಳು ಪರಸ್ಪರ ನೂರಾರು ಮೈಲಿಗಳ ಅಂತರದಲ್ಲಿವೆ. ತಮ್ಮ ಅನನ್ಯತೆಯ ಗುರುತಿಗಾಗಿ ಪ್ರತ್ಯೇಕ ಹೆಸರುಗಳಲ್ಲಿವೆ. ಪ್ರತಿಯೊಂದು ಪೀಠದ ಗುರುವೂ ಭಿನ್ನ ಭಿನ್ನ ಬಣ್ಣದ ಧ್ವಜವನ್ನು ಹೊಂದಿರುತ್ತಾರೆ. ಬೇರೆ ಬೇರೆ ಮರದಿಂದ ಮಾಡಿದ ಒಂದೊಂದು ಕೈಗೋಲು ಇರುತ್ತದೆ. ಪ್ರತಿಯೊಂದು ಮಠವೂ ಸ್ವತಂತ್ರವಾಗಿದ್ದು, ಒಂದು ಇನ್ನೊಂದರ ಶಾಖೆಯಲ್ಲ. ಆದರೆ ಒಂದೊಂದು ಮಠ ಮತ್ತು ಪೀಠಕ್ಕೂ ತಮ್ಮ ತಮ್ಮದೇ ಆದ ಶಾಖೆಗಳಿವೆ. ಪಂಚಾಚಾರ್ಯರು ಜನರು ಹೊರುವ ಅಡ್ಡಪಲ್ಲಕ್ಕಿಗಳಲ್ಲಿ ಕುಳಿತು ನಗರ-ಪಟ್ಟಣಗಳ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಹೋಗಲು ಇಚ್ಚಿಸುತ್ತಾರೆ. ಈ ಪೀಠಗಳ ಮುಖ್ಯಸ್ಥರು ಕರ್ನಾಟಕ ಅಥವಾ ಮಹಾರಾಷ್ಟ್ರದ ಜಂಗಮ ಜಾತಿಗೆ ಸೇರಿದವರು, ಎಂದರೆ ಜಾತಿ ಜಂಗಮರು. - ಶರಣ ಧರ್ಮದಲ್ಲಿ 'ಜ೦ಗಮ 'ವೆಂದರೆ ಜಾತ್ಯಾತೀತರು; ಮಹಾಸತ್ಯಾನ್ವೇಷಕರು. ತಮ್ಮ ಧರ್ಮವನ್ನು ಪಾಲಿಸುತ್ತಾ, ಪ್ರಸಾರಮಾಡುತ್ತಾ ಸ್ಥಳದಿಂದ ಸ್ಥಳಕ್ಕೆ ಸಂಚರಿಸುವವರು. ಹನ್ನೆರಡನೆಯ ಶತಮಾನದ ಶರಣರ ಕಲ್ಪನೆಯ 'ಜಂಗಮ'ವು ಜಾತಿಜಂಗಮವಾಗಿ ಅಶುದ್ದಗೊಂಡದ್ದು ವೀರಶೈವರಿಂದ. ಪ್ರಸ್ತಾಪಿತ ಐದೂ ಆಚಾರ್ಯರಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬರ ಬಗೆಗೂ ಸಂಕ್ಷಿಪ್ತ ವಿವರಣೆಯನ್ನು ಮುಂದಿನ ಅಧ್ಯಾಯಗಳಲ್ಲಿ ಕೊಡಲಾಗಿದೆ.
ಗ್ರಂಥ ಋಣ:
1) ವೀರಶೈವ ಪಂಚಾಚಾರ್ಯ ಮಿಥ್ಯ ಮತ್ತು ಸತ್ಯ; ಲೇಖಕರು: ಡಾ. ಎಸ್. ಎಂ. ಜಾಮದಾರ, ಅನುವಾದಕರು: ಡಾ. ಗೊ. ರು. ಚನ್ನಬಸಪ್ಪ. ೨೦೨೦. Published by: Jagathika Lingayat Mahasabha, No 53 2nd Main Road, 3rd cross, Chakravarrthi Layout, Palace road, Bangalore-560020.
ವೀರಶೈವದ ಪ್ರಾಚೀನತೆ ಇತರ ಕೆಲವು ವಾದಗಳು | ರೇಣುಕಾಚಾರ್ಯ / ರೇವಣಸಿದ್ದ |