Previous ಲಿಂಗಾಯತ ವಚನ ಸಾಹಿತ್ಯ ಸಂಗೀತ ಶೈಲಿ ಸಂಗೀತಜ್ಞ ವಚನಕಾರರ ಪರಂಪರೆ: Next

ಲಿಂಗಾಯತ: ಸ್ವರವಚನ ಪ್ರಾಕಾರ

*

ಕನ್ನಡ ಭಾಷೆಯ ಗೇಯರಚನಾ ಪರಂಪರೆಯ ಮೂಲ.

ವಚನಗಳನ್ನು ಅತ್ಯಂತ ನೇರವಾದ ಗದ್ಯದಲ್ಲಿ ರಚನೆ ಮಾಡಿದಂತೆ ತೋರುತ್ತದೆಯಾದರೂ, ಇವುಗಳ ಪೈಕಿ ಸ್ವರವಚನಗಳು ಎಂಬ ಪ್ರಾಕಾರವೂ ಸಹ ಇತ್ತೀಚೆಗೆ ಕಂಡುಬಂದಿವೆ. ಇವು ದಾಸರ ಕೀರ್ತನೆಗಳ ಹಾಗೆ ಸಂಗೀತದ ಬಂಧಕ್ಕಾಗಿಯೇ ರಚಿತವಾದ, ಛಂದೋಬದ್ಧ ರಚನೆಗಳು.

ಸ್ವರವಚನಗಳನ್ನು ಒಂದು ನಿರ್ದಿಷ್ಟ ರಾಗದ ಹಾಗೂ ತಾಳದ ಬಂಧಕ್ಕೆ ಒಳಪಡಿಸಿ ರಚಿಸಲಾಗುತ್ತದೆ.

ಸ್ವರವಚನಗಳು ಕನ್ನಡ ಭಾಷೆಯ ಗೇಯರಚನಾ ಪರಂಪರೆಯ ಮೂಲ ಎನ್ನಬಹುದು. ಗೇಯರಚನಾ ಕ್ಷೇತ್ರದಲ್ಲಿ ಸ್ವರವಚನಗಳು ಬಹುಮುಖ್ಯ ಪಾತ್ರವಹಿಸುತ್ತವೆ. ರಚನೆಯೊಂದಕ್ಕೆ ರಾಗ-ತಾಳಗಳನ್ನು ಸೂಚಿಸಿ, ಕರ್ತೃವಿನ ಅಂಕಿತವನ್ನು ಹಾಗೂ ಪಲ್ಲವಿನುಡಿಗಳಂತಹ ಭಾಗಗಳನ್ನು ಗೇಯ ರಚನಗೆ ಹೊಂದಿಸುವ ಪರಂಪರೆಯು ಶರಣರ ಸ್ವರವಚನಗಳಿಂದ ಮೊಟ್ಟಮೊದಲ ಬಾರಿಗೆ ಆಗಿದೆಯೆನ್ನಬಹುದು. ನವುರಾದ ಪದಗಳನ್ನು ಒಳಗೊಂಡ ಸಾಹಿತ್ಯ, ಲಯ, ಪ್ರಾಸ, ವಸ್ತು, ಮತ್ತು ಪ್ರತಿಪಾದನೆ ಮಾಡಬೇಕಾದ ಲಿಂಗಾಯತ ಸಿದ್ಧಾಂತ ಮುಂತಾದವುಗಳನ್ನು ತನ್ನಲ್ಲಿ ಮೈಗೂಡಿಸಿಕೊಂಡು, ಸಂಗೀತವನ್ನು ಬಲ್ಲ ವಾಗ್ಗೇಯಕಾರ ಶರಣರು ಗೇಯರಚನೆಗಳ ನಿರ್ದಿಷ್ಟ ರೂಪುಗಳನ್ನು ಮೊಟ್ಟಮೊದಲ ಬಾರಿಗೆ ಜಾರಿಗೆ ತಂದರೆನ್ನಬಹುದು. ಹರಿದಾಸರ ಕೀರ್ತನೆಗಳು, ತತ್ವಪದಗಳು ಮುಂತಾದ ಆಧ್ಯಾತ್ಮ ಸಂಗೀತದ ಮೂಲ ಪದ್ಧತಿಗೆ ಸ್ವರವಚನಗಳೇ ಮೂಲವೆಂದು ತೋರುತ್ತದೆ. ಇದು ಎಲ್ಲರೂ ಪೂರ್ವಾಗ್ರಹವನ್ನು ಬಿಟ್ಟು ಮರುಸಂಶೋಧಿಸಿ ಅರಿಯಬೇಕಾದ ಸಂಗತಿ.

ಉದಾಹರಣೆಗೆ:
ಕೆಳಗೆ ನೀಡಲಾದ ಬಸವಣ್ಣನವರ ಆಡನೇ ರುದ್ರನಾಡನೇ ಮತ್ತು ಮುದ್ದು ಸುಮನಗಂಧಿ ಎಂಬೆರಡು ವಚನಗಳನ್ನು ಸಂಪೂರ್ಣ ಓದಿದಲ್ಲಿ ಅವು ಸಂಗೀತದ ಚಮತ್ಕಾರಕ್ಕಾಗಿಯೇ ಬರೆದ ಪದ್ಯಗಳಾಗಿವೆ ಎಂಬುದನ್ನು ನೀವು ಗಮನಿಸಬಹುದು.

ರಾಗ : ಪಾಡಿ

ಆಡನೇ ರುದ್ರನಾಡನೇ
ಆಡಿಪಾಡಿ ಭಕ್ತರೆಲ್ಲ ನೂರೊಂದು ತಾಳವನೊತ್ತುತ |ಪ|

ರುಂಡಮಾಲೆ, ಡಮರುಗ, ಹಸ್ತ, ಮಂಡೆಜಡೆ,
ಕುಂಡಲಾಹಿ ಮಂಡೆಪಾದ, ಚಂಡಕೀರ್ತಿಗಳು ಪೊಗಳುತಿರೆ
ದಂಡಿಗೆವಿಡಿದು ನಿಂದು ತುಂಬುರರು ಪಾಡುತಿರೆ
ಲಂಡದೈತ್ಯರ ಗಂಡ ಉದ್ದಂಡ ಪ್ರಚಂಡ |1|

ಏಕತಾಳ ಮಟ್ಟೆಯ ಜಂಪೆ ರೂಪುಗತಿಯ ತಾಳದಲ್ಲಿ
ಜೋಕೆಯಿಂದ ಕಟ್ಟಳೆಯ ಕ್ರಮವನರಿದು
ತಾಕುನೂಕಬೇಕೆಂದೆಂಬ ತಾಳಜಂಗಿನ ನಾದ
ದಾಕಾರವಿಡಿದು ಮುಂದೆ ಬೇಕಾದ ಲೀಲೆಯಿಂದ |2|

ಕಿಣಿಕಿಣಿ ಕಿಣಿಕಿಣಿ ಕಿಣಿರೆಂದೆಂಬವೀ ರಣವಾದ್ಯದ ಮಂಜುಳಗತಿಗೆ
ಢಣಢಣ ಢಣಢಣ ಢಣರೆಂದೆಂಬ ಮದ್ದಳೆಗತಿಗೆ
ಝಣಝಣ ಝಣಝಣ ಝಣರೆಂದಂಬವೀ ಅಂದುಗೆ ಪಾದವನೆತ್ತಿ
ಕುಣಿಕುಣಿ ಕುಣಿಕುಣಿ ಕುಣಿದ ನಮ್ಮ ಕೂಡಲಸಂಗಮದೇವ |3|

ರಾಗ: ಪಾಡಿ

ಮುದ್ದು ಸುಮನಗಂಧಿ ಬಾ
ಕೋಮಲವದನೆ ಶೃಂಗಾರಿ ಬಾಹೋ |ಪ|

ಅಪ್ಪುರಪ್ಪು ರಣರಂಗ ಕಪ್ಪಿನ ಕಪೋತ
ದಿಕ್ಕಿಟ ದಿಕ್ಕಿಟ ದಿಕ್ಕಿಟ ತೆತ್ತೆ ತೆತ್ತೆ ತೇರಣ ತೇರಣ |1|

ಪವನ ಸರಂಗಿ ಅಂಜುರ ಮಾಣಿಕ
ತತ್ತ ತೋಂಗಿಣ ದಿಕ್ಕಣಿಕ್ಕ ಕುಚಕಿ ತಟಕಿಣಾ ತೋಂ |2|

ಗಜಗಣ ವೇದಿ ಸಮೀರನ ತತ್ತೋಂಗೆನಲು
ಇಹಿತ ರಹಿತ ಪದನತಹತ ಎನೆ ಕುಜನದೈವ
ಕುರಾರ ಕೂಡಲಸಂಗಮದೇವ |3|

ಹೀಗೆ ಸಂಗೀತದ ಛಂದೋಬಂಧಕ್ಕೆ ಅನುಗುಣವಾಗಿ ರಚಿಸಲ್ಪಟ್ಟ ಹಲವಾರು ವಚನಕಾರರ ಗೀತಗಳನ್ನು ವಿದ್ವಾಂಸರು ಗುರುತಿಸಿದ್ದು, ಅವುಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಹಾಡುವ ಕಾರ್ಯವಿನ್ನೂ ಉದ್ಯುಕ್ತವಾಗಬೇಕಿದೆಯಷ್ಟೇ.

ಸ್ವರವಚನಗಳಲ್ಲಿ ಬಳಸಿದ ಪ್ರಾಚೀನ ರಾಗಗಳು:

ಧನ್ಯಾಸಿ, ಶಾಂತಮಲಹರಿ,ಮಧುಮಾಧವಿ, ಮಲಹರಿ, ದೇಶಿ, ಭೂಪಾಲಿ, ಭೈರವಿ, ವರಾಳಿ, ಗುಜ್ಜರಿ, ನಾಟಿ, ಲಲಿತೆ, ದೇಶಾಕ್ಷಿ, ನಾದನಾಮಕ್ರೀ, ಶೋಕವರಾಳಿ, ಧವಳಾರ, ರೇವಗುಪ್ತಿ, ಆರಾಭಿ, ಶ್ರೀ, ಕನ್ನಡ ಗೌಳ, ಸೌರಾಷ್ಟ್ರ, ಸಿಂಧುರಾಮಕ್ರೀ, ಶಂಕರಾಭರಣ, ಆಹರಿ, ಶುದ್ಧಕಾಂಭೋಜಿ, ಕಾಂಭೋಜಿ, ವಡ್ಡೀಯ ಕಾಂಭೋಜಿ, ತೆಲುಗು ಕಾಂಭೋಜಿ, ಪತ್ತುವರಾಳಿ, ನಾರಾಯಣಗೌಳ, ಸಾರಂಗ, ಪಾಡಿ ಮುಂತಾದವು.

ಇವುಗಳಲ್ಲಿ ಹಲವಾರು ರಾಗಗಳು ಇಂದಿಗೂ ಸಹ ಕರ್ನಾಟಕ ಮತ್ತು ಹಿಂದೂಸ್ತಾನಿ ಪದ್ಧತಿಗಳಲ್ಲಿ ಪ್ರಚಲಿತವಿರುವುದನ್ನು ಕಾಣಬಹುದು.

ಇವಲ್ಲದೆ ಕರ್ನಾಟಕ ಪದ್ಧತಿಯಲ್ಲಿ ಬಳಕೆಯಲ್ಲಿರುವ ಸಪ್ತ ತಾಳಗಳಾದ ರೂಪಕ, ಝಂಪೆ, ಆಟ ತಾಳಗಳ ಜೊತೆಗೆ ಇಂದು ಅಜ್ಞಾತವಾಗಿರುವ ರಚ್ಚಿ ಎಂಬ ತಾಳದ ಉಲ್ಲೇಖವನ್ನು ಸಹ ಸ್ವರವಚನಗಳ ನಿರ್ದೇಶಿಕೆಯಲ್ಲಿ ಕಾಣಬಹುದು. ಗಜೇಶ ಮಸಣಯ್ಯನಂತೂ ದೇಶಾಕ್ಷಿ ರಾಗದ ಮಹತ್ವದ ಮೇಲೆಯೇ ಒಂದು ವಚನವನ್ನು ಬರೆದಿದ್ದಾನೆ!

ಆಕರ : ಸಂಶೋಧನಾ ಪ್ರಬಂಧ: ವಚನಗಾಯನ ಪರಂಪರೆ; ಒಂದು ಸಂಗೀತಾತ್ಮಕ ಅಧ್ಯಯನ - ಡಾ. ಜಯದೇವಿ ಜಂಗಮಶೆಟ್ಟಿ (2013), ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಲಿಂಗಾಯತ ವಚನ ಸಾಹಿತ್ಯ ಸಂಗೀತ ಶೈಲಿ ಸಂಗೀತಜ್ಞ ವಚನಕಾರರ ಪರಂಪರೆ: Next