ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ

*

ತೊಂಟಾದಾರ್ಯ ಮಠ ಗದಗ

ತೋಂಟದಾರ್ಯ ಸಂಸ್ಥಾನ ಮಠವು ೧೫ನೇಯ ಶತಮಾನದಲ್ಲಿ ಬದುಕಿ ಬಾಳಿದ ಶಿವಯೋಗಿ ಸೂರ್ಯ ಶ್ರೀ ಯಡೆಯೂರು ತೋಂಟದ ಶ್ರೀ ಸಿದ್ದಲಿಂಗ ಯತಿಗಳ ನೇರ ವಾರಸುದಾರಿಕೆಯ ಮಠ. ಈ ಮಠದ ೧೯ ನೇಯ ಪೀಠಾಧಿಕಾರಿಗಳಾಗಿರುವವರು ಜಗದ್ಗುರು ಡಾ|| ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು. ದಿನಾಂಕ ೨೦ ಆಕ್ಟೊಬರ ೨೦೧೮ ರಂದು (ವಯಸ್ಸು: 76) ಲಿಂಗೈಕ್ಯರಾದ ನಂತರ ಮಠಕ್ಕೆ ನೂತನ ಪೀಠಾಧಿಪತಿಯಾಗಿ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಮಹಾಸ್ವಾಮಿ ಅವರನ್ನು ನೇಮಿಸಲಾಗಿದೆ. ಸಿದ್ದರಾಮ ಮಹಾಸ್ವಾಮಿ ತೋಂಟದಾರ್ಯ ಮಠದ 20ನೇ ಪೀಠಾಧಿಪತಿಯಾಗಿದ್ದಾರೆ.

ಡಾ.ಸಿದ್ದರಾಮ ಸ್ವಾಮಿಜಿ :

Siddharama Swamiji , Gadag, ಪೂಜ್ಯ ಶ್ರೀ ಜಗದ್ಗುರು ಸಿದ್ದರಾಮ ಮಹಾಸ್ವಾಮಿಗಳು

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಡಿಸೆಂಬರ್ 12, 1958ರಲ್ಲಿ ಜಂಗಮ ಸಮಾಜದ ತಂದೆ ರುದ್ರಯ್ಯ, ತಾಯಿ ಶಾಂತಮ್ಮಳ ಉದರದಲ್ಲಿ ಜನಿಸಿದ ಬಾಲಕ ಗುರುಪಾದಯ್ಯ. ಗಂಗಮ್ಮನ ಮನೆಯಲ್ಲಿ ಬೆಳೆದ ಪುಟ್ಟ ಬಾಲಕ ಮುಂದೆ ಬಿಳಗಿಯ ಕಲ್ಮಠದ ಶಾಖಾ ಮಠಕ್ಕೆ ಪೀಠಾಧಿಪತಿಯಾಗಿ ನೇಮಕಗೊಂಡರು. ಅದಾದ ಬಳಿಕ ಬನಾರಸ್ ವಿವಿಯಲ್ಲಿ ಎಂ.ಎ. ಹಿಂದಿ, ಸಂಸ್ಕೃತ ಹಾಗೂ ತತ್ವಶಾಸ್ತ್ರ ಉನ್ನತ ವ್ಯಾಸಾಂಗ ಪಡೆದುಕೊಂಡರು. ಅದಾದ ನಂತರ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ 1994ರಲ್ಲಿ 9ನೇ ಪೀಠಾದಿಪತಿಯಾಗಿ ನೇಮಕಗೊಂಡರು. ಈಗ ತೋಂಟದಾರ್ಯ ಮಠಕ್ಕೆ 20ನೇ ಪೀಠಾಧಿಪತಿಯಾಗಿದ್ದಾರೆ.

ವಿದ್ಯಾರ್ಥಿ ಜೀವನದಿಂದಲೇ ಹಲವು ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕೃತ ಯುಗಿ ವಿನೋಬ, ಇಷ್ಟಲಿಂಗ ಪೂಜಾ ವಿಧಾನ, ಧರ್ಮ ಜ್ಯೋತಿ, ಚಿಂತನ, ವಚನಾರ್ಥ ಚಿಂತನ, ಇಸ್ಲಾಂ ಧರ್ಮ ಸಂದೇಶ ಸೇರಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಇನ್ನು ಇವರು ನಾಗನೂರು ರುದ್ರಾಕ್ಷಿ ಮಠದ 9ನೇ ಪೀಠಾಧಿಪತಿಯಾಗಿ ನೇಮಕಗೊಂಡ ನಂತರ 7 ದಶಕಗಳ ದಾಸೋಹ ಚಟುವಟಿಕೆಯನ್ನು ಮುಂದುವರೆಸಿಕೊಂಡು ಹೊರಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಶ್ರೀಮಠವನ್ನು ಬೆಳೆಸುವುದರ ಜತೆಗೆ ಪ್ರಾಥಮಿಕ ಶಿಕ್ಷಣದಿಂದ ಇಂಜಿನಿಯರಿಂಗ್ ಕಾಲೇಜು ವರೆಗೆ ವ್ಯಾಸಾಂಗ ಸೌಲಭ್ಯ ಕಲ್ಪಿಸಿದ್ದಾರೆ. 1990ರಲ್ಲಿ ಲಿಂಗಾಯತ್ ಅಧ್ಯಯನ ಅಕಾಡೆಮಿ ಸ್ಥಾಪಿಸಿ 85 ಕ್ಕೂ ಅಧಿಕ ಗ್ರಂಥ ಪ್ರಕಟಿಸಿದ್ದಾರೆ. 1995ರಲ್ಲಿ ಮಠದಲ್ಲಿಯೇ ಸಂಶೋಧನಾ ಕೇಂದ್ರ ಗ್ರಂಥಾಲಯ ಸ್ಥಾಪಿಸಿ ಧರ್ಮ, ಸಾಹಿತ್ಯ, ಸಂಸ್ಕೃತಿ ಸಂಬಂಧಿಸಿದ 16ಕ್ಕೂ ಅಧಿಕ ಗ್ರಂಥಗಳನ್ನು ಹೊರ ತಂದಿದ್ದಾರೆ. 1 ಸಾವಿರ ಕ್ಕೂ ಹೆಚ್ಚು ಹಸ್ತ ಪ್ರತಿಗಳನ್ನು ಸಂಗ್ರಹಿಸಿದ್ದಾರೆ.

ಶ್ರೀ ತೊಂಟದಾರ್ಯ ಮಠ ಇಲ್ಲಿನ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಲಿದೆ. ಲಿಂಗಾಯತ ಅಧ್ಯಯನ ಸಂಸ್ಥೆಯಿಂದ ಉತ್ಕೃಷ್ಟ ಪುಸ್ತಕಗಳ ಪ್ರಕಟಣೆಗೆ ಚಾಲನೆ ನೀಡಲಾಗಿದೆ. ಲಿಂಗಾಯತ ಪುಣ್ಯಪುರುಷ ಮಾಲೆಯ ಕೃತಿಗಳು ಆಧುನಿಕ ಗಣಂಗಳ ಹಾಗೂ ಪುರಾತನರ ಚರಿತ್ರೆಗಳು ಈ ಅಧ್ಯಯನ ಸಂಸ್ಥೆಯ ಪ್ರಮುಖ ಪ್ರಕಟಣೆಗಳು.

ತೋಂಟದಾರ್ಯ ಮಠವು ಜನಪರ ಹಾಗೂ ಜ್ಞಾನಪರವಾದ ಜಾತ್ರೋತ್ಸವ ಮೂಲಕ ಅರಿವು-ವೈಚಾರಿಕತೆಯ ಪ್ರಸಾರಕ್ಕೆ ತನ್ನದೆ ಆದ ಕೊಡುಗೆ ನೀಡುತ್ತಿದೆ. ಗದುಗಿನ ಮಠದ ಜಾತ್ರೆ ಉಳಿದ ಜಾತ್ರೆಗಳಿಗಿಂತ ವಿಭಿನ್ನವಾಗಿದೆ. ತೋಂಟದ ಶ್ರೀಗಳು ಉತ್ಕೃಷ್ಟ ಸಾಹಿತ್ಯ ಕೃತಿಗಳ ಬಿಡುಗಡೆ ಹಾಗೂ ವೈಚಾರಿಕ ಚಿಂತನ ಕಾರ್ಯಕ್ರಮಗಳ ಮೂಲಕ ಮುಖ್ಯವಾಗಿ ವಿಚಾರ ಸಂಕಿರಣಗಳ ಮೂಲಕ ಜಾತ್ರೆಯನ್ನು ಜನಪರ ಕಾಳಜಿಯ ಜನೋತ್ಸವವನ್ನಾಗಿ ಆಚರಿಸಲಾಗುತ್ತದೆ.

Previousಶ್ರೀ ಸಿದ್ಧಗಂಗಾ ಮಠ ತುಮಕೂರುಲಿಂಗಾಯತರು ಹಿಂದುಗಳಲ್ಲ - ಶ್ರೀ ಪಿ. ಎಲ್. ಪಾಟೀಲNext
*